Tag: Janata Darshan

  • ಸಿಎಂ ಜನತಾ ದರ್ಶನಕ್ಕೆ ಭರ್ಜರಿ ಪ್ರತಿಕ್ರಿಯೆ – ದಿನವಿಡೀ ದೂರು ದುಮ್ಮಾನ ಆಲಿಸಿದ ಸಿದ್ದರಾಮಯ್ಯ

    ಸಿಎಂ ಜನತಾ ದರ್ಶನಕ್ಕೆ ಭರ್ಜರಿ ಪ್ರತಿಕ್ರಿಯೆ – ದಿನವಿಡೀ ದೂರು ದುಮ್ಮಾನ ಆಲಿಸಿದ ಸಿದ್ದರಾಮಯ್ಯ

    – ಆರೋಗ್ಯ ಸಮಸ್ಯೆ ಇದ್ದವರಿಗೆ ಸ್ಥಳದಲ್ಲೇ ಸ್ಪಂದನೆ

    ಬೆಂಗಳೂರು: ಜನ ಸ್ಪಂದನ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ದಿನವಿಡೀ ನಡೆಸಿದ ಜನತಾ ದರ್ಶನಕ್ಕೆ (Janata Darshan) ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಸಿಎಂ ಬಳಿಕ ತಮ್ಮ ದೂರು ದುಮ್ಮಾನ, ಕಷ್ಟ ಕೋಟಲೆಗಳನ್ನು ಹೇಳಿಕೊಳ್ಳಲು ಇಡೀ ದಿನ ಸಿಎಂ ಗೃಹಕಚೇರಿ ಕೃಷ್ಣಾ ಬಳಿ ಸಾವಿರಾರು ಮಂದಿ ಬಂದಿದ್ದರು.

    ಊಟಕ್ಕೂ ಮನೆಯೊಳಗೆ ಹೋಗದ ಸಿಎಂ ಸಿದ್ದರಾಮಯ್ಯ, ಅಲ್ಲೇ ಕುಳಿತು 10 ನಿಮಿಷದಲ್ಲಿ ಊಟ ಮುಗಿಸಿ ಜನರ ಕಷ್ಟಗಳಿಗೆ ದನಿಯಾಗುವ ಕೆಲಸ ಮಾಡಿದರು. ಸಮಸ್ಯೆ ಕೇಳಿದ್ದಕ್ಕೆ ಹಿರಿಯ ವ್ಯಕ್ತಿಯೊಬ್ಬರು ಸಿಎಂ ತಲೆಯನ್ನು ಪ್ರೀತಿಯಿಂದ ನೇವರಿಸಿದರು.

    ಬೆಳಗ್ಗೆ 10:30ರಿಂದ ಸಂಜೆ 5 ಗಂಟೆವರೆಗೂ 3500ಕ್ಕೂ ಹೆಚ್ಚು ಅರ್ಜಿಗಳನ್ನು ಸಿಎಂ ಸ್ವೀಕರಿಸಿದ್ದು, ಗಂಭೀರ ಅನಾರೋಗ್ಯ, ವರ್ಗಾವಣೆಯಂತಹ 65 ಸಮಸ್ಯೆಗಳಿಗೆ ಸಿಎಂ ಸ್ಥಳದಲ್ಲೇ ಪರಿಹಾರ ನೀಡಿದರು. ಕೆಲ ಅರ್ಜಿಗಳ ಪರಿಶೀಲನೆ ವೇಳೆ ಸಂಬಂಧಪಟ್ಟ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡರು.  ಇದನ್ನೂ ಓದಿ: ದೃಷ್ಟಿ ಸಮಸ್ಯೆಯಿದ್ದರೂ ದೇಶಕ್ಕಾಗಿ ಕ್ರಿಕೆಟ್‌ ಆಡುವ ಯುವತಿಗೆ ಬೇಕಿದೆ ಸಹಾಯ

    ಸಾವಿರಕ್ಕೂ ಹೆಚ್ಚು ಅಧಿಕಾರಿಗಳನ್ನು ಅತ್ತಿತ್ತ ಕದಲದಂತೆ, ಜನರ ಸಮಸ್ಯೆಗಳನ್ನು ಇತ್ಯರ್ಥ ಮಾಡುವುದಕ್ಕೆ ಬಿಟ್ಟಿದ್ದರು. ಜನತಾದರ್ಶನಕ್ಕೆ ಚಿತ್ರವಿಚಿತ್ರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಂದಿದ್ದ ಕೆಲವರು ಸಿಎಂ ಗಮನ ಸೆಳೆಯಲು ಯತ್ನಿಸಿದರು.

    ದೂರು ಸ್ವೀಕರಿಸಲು 20 ಕೌಂಟರ್ ತೆರೆಯಲಾಗಿತ್ತು. ಹಿರಿಯ ನಾಗರೀಕರು, ವಿಶೇಷ ಚೇತನರಿಗೆ ಪ್ರತ್ಯೇಕ ಕೌಂಟರ್ ತೆರೆಯಲಾಗಿತ್ತು. ದೂರದೂರುಗಳಿಂದ ಬಂದಿದ್ದವರಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಇದನ್ನೂ ಓದಿ: ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ನಿಧನ

    ಆನ್‌ಲೈನ್ ಮೂಲಕವೂ ಸಿಎಂಗೆ ದೂರು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. 1902ಕ್ಕೆ ಕರೆ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ. ಮೂರು ತಿಂಗಳಿಗೊಮ್ಮೆ ಜನಸ್ಪಂದನ ನಡೆಸುವುದಾಗಿ ಸಿಎಂ ಘೋಷಿಸಿದ್ದಾರೆ.

    ಯಾವೆಲ್ಲ ದೂರು ಬಂದಿತ್ತು?
    ಗೃಹಲಕ್ಷ್ಮಿ ಯೋಜನೆ ತಾಂತ್ರಿಕ ತೊಂದರೆ ಬಗೆಹರಿಸಿ
    ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಅರ್ಜಿ ತೆಗೆದುಕೊಳ್ಳುತ್ತಿಲ್ಲ. ಎಲ್ಲಾ ಕೆವೈಸಿ ಅಪ್ಡೇಟ್ ಮಾಡಿ ದಾಖಲೆ ಸಲ್ಲಿಸಿದರೂ ಅರ್ಜಿ ಸ್ವೀಕಾರದಲ್ಲಿ ತಾಂತ್ರಿಕ ಸಮಸ್ಯೆ ಬಗ್ಗೆ ಹಲವರಿಂದ ದೂರು ನೀಡಿದರು. ಈ ಸಮಸ್ಯೆಯನ್ನು ಬೇಗ ಬಗೆಹರಿಸಿ ಎಂದು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.

    ಸಕಾಲ ಸಿಬ್ಬಂದಿಗೆ ವೇತನ ರಿಲೀಸ್ ಮಾಡಿಸಿ ಮಹಿಳೆ ಕಣ್ಣೀರು
    2011 ರಲ್ಲಿ ನಿಯೋಜನೆಗೊಂಡ ಸಕಾಲ ಸಿಬ್ಬಂದಿಗೆ ಕಳೆದ ಒಂದು ವರ್ಷದಿಂದ ವೇತನ ನೀಡುತ್ತಿಲ್ಲ ಎಂದು ಮಹಿಳೆಯೊಬ್ಬರು ಕಣ್ಣೀರು ಹಾಕಿದರು. ಬೆಂಗಳೂರು ಉತ್ತರ, ದಕ್ಷಿಣ ತಾಲೂಕು ಕಚೇರಿಗಳ ಸಕಾಲ ಸಿಬ್ಬಂದಿಗೆ ಬಾಕಿ ವೇತನ ಬಿಡುಗಡೆಗೆ ಸಿಎಂ ಸೂಚಿಸಿದರು.

    ವಿಕ್ಟೋರಿಯಾ ಅವ್ಯವಸ್ಥೆ ಸರಿ ಮಾಡಿಸಿ
    ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವ್ಯವಸ್ಥೆಯಿಂದ ಕೂಡಿದೆ ಎಂದ ಅಜ್ಜಿಯೊಬ್ಬರು ದೂರು ನೀಡಿದರು. ಚಳಿ ಜ್ವರದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಈ ವೇಳೆ ಅಲ್ಲಿರುವ ಸಿಬ್ಬಂದಿ ನಿರ್ಲಕ್ಷ ತೋರಿದ್ದಾರೆ ಎಂದು ಅಳಲು ತೋಡಿಕೊಂಡರು.

    ಪಹಣಿ ಸಮಸ್ಯೆ.. ವಿಜಯನಗರ ಡಿಸಿಗೆ ಕ್ಲಾಸ್
    ವಿಜಯನಗರ ಡಿಸಿಗೆ ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ ಪಹಣಿ ವಿಚಾರಕ್ಕೆ ನನ್ನ ಬಳಿ ಬರಬೇಕಾ? ಇದನ್ನೆಲ್ಲ ನೀವೇ ಪರಿಹಾರ ಮಾಡಲು ಆಗುದಿಲ್ಲವೇ? ಎಂದು ಪ್ರಶ್ನಿಸಿ ವಿಡಿಯೋ ಕಾನ್ಫರೆನ್ಸ್ ಕ್ಲಾಸ್‌ ತೆಗೆದುಕೊಂಡರು.

    ವಿಜಯೇಂದ್ರ, ಪ್ರೀತಂ ವಿರುದ್ಧ ದೂರು
    ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ಹಾಸನ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧ ಮಹೇಂದ್ರ ಎಂಬವರು ದೂರು ನೀಡಿದರು. ಅನಾಥ ಮಕ್ಕಳಿಗಾಗಿ ಕೊಟ್ಟಿದ್ದ ಭೂಮಿ ಸಮಸ್ಯೆಯಾಗಿದೆ. ಸರ್ಕಾರಿ ಉದ್ಯೋಗಿಯಾದ ತನ್ನ ಪತ್ನಿಗೂ ಪ್ರೀತಂಗೌಡ ಕಿರುಕುಳ ಕೊಡ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ತನಿಖೆ ಮಾಡಿಸುವುದಾಗಿ ಸಿಎಂ ಭರವಸೆ ನೀಡಿದರು.

    ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್‌ಗೆ 22 ಗುಂಟೆ ಜಮೀನು
    ಗದಗದಲ್ಲಿ ಪುತ್ರನ ಹೆಸರಿನ ಟ್ರಸ್ಟ್‌ಗೆ ಸಿಎಂ ನಿವೇಶನ ಮಂಜೂರು ಮಾಡಿಸಿದ್ದರು. ಆದರೆ ಸಚಿವ ಹೆಚ್‌ಕೆ ಪಾಟೀಲ್ ಈ ಜಮೀನನ್ನು ಬೇರೆ ಉದ್ದೇಶಕ್ಕೆ ಹಸ್ತಾಂತರಿಸಲು ಸೂಚಿಸಿದ್ದಾರೆ. ಹೀಗಾಗಿ ಟ್ರಸ್ಟ್ ಮುಖ್ಯಸ್ಥ ರಾಮಕೃಷ್ಣ ರೊಳ್ಳಿ ಸಿಎಂ ಬಳಿ ದೂರಿತ್ತರು. ಕೂಡಲೇ ಗದಗ ಡಿಸಿಗೆ ಕರೆ ಮಾಡಿದ ಸಿಎಂ, ಆ 22 ಗಂಟೆ ನಿವೇಶನವನ್ನು ರಾಕೇಶ್ ಸಿದ್ದರಾಮಯ್ಯ (Rakesh Siddaramaiah) ಟ್ರಸ್ಟ್‌ಗೆ ಕೊಡಬೇಕು ಎಂದು ನಿರ್ದೇಶನ ನೀಡಿದರು.

    ರಾಹುಲ್ ಗಾಂಧಿ ಭೇಟಿ ಮಾಡಿಸಿ
    ಅಥಣಿಯ ಅಶೋಕ್ ಎಂಬವರು ಊರಿನಲ್ಲಿ ಇಂದಿರಾಗಾಂಧಿ ಪ್ರತಿಮೆ ಮಾಡಿದ್ದೇನೆ. ಅದನ್ನು ತೋರಿಸಲು ರಾಹುಲ್ ಗಾಂಧಿ (Rahul Gandhi) ಅವರನ್ನು ಭೇಟಿ ಮಾಡಿಸಿ ಎಂದು ಬೇಡಿಕೆಯಿಟ್ಟರು. ಇದಕ್ಕೆ ಹೌದಾ ಎಂದ ಸಿಎಂ ಅವರಿಗೆ ಹೇಳ್ತೀನಿ ಹೋಗು ಎಂದು ಹೇಳಿ ಕಳುಹಿಸಿಕೊಟ್ಟರು.

  • ಜನತಾ ದರ್ಶನದಲ್ಲಿ ಶಾಸಕ-ಸಂಸದರ ನಡುವೆ ಜಟಾಪಟಿ; ನಾರಾಯಣಸ್ವಾಮಿ, ಮುನಿಸ್ವಾಮಿ ವಿರುದ್ಧ FIR

    ಜನತಾ ದರ್ಶನದಲ್ಲಿ ಶಾಸಕ-ಸಂಸದರ ನಡುವೆ ಜಟಾಪಟಿ; ನಾರಾಯಣಸ್ವಾಮಿ, ಮುನಿಸ್ವಾಮಿ ವಿರುದ್ಧ FIR

    ಕೋಲಾರ: ಇತ್ತೀಚೆಗೆ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಶಾಸಕ ನಾರಾಯಣಸ್ವಾಮಿ (Narayanaswamy) ಹಾಗೂ ಸಂಸದ ಮುನಿಸ್ವಾಮಿ (S Muniswamy) ಮಧ್ಯೆ ನಡೆದ ಜಟಾಪಟಿ ಸಂಬಂಧ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.

    ಕೋಲಾರ (Kolar) ಸಂಸದ ಮುನಿಸ್ವಾಮಿ ವಿರುದ್ಧ ಬಂಗಾರಪೇಟೆ ಶಾಸಕರ ದೂರಿನ ಅನ್ವಯ FIR ದಾಖಲಾಗಿದೆ. ಮತ್ತೊಂದೆಡೆ ಬಿಜೆಪಿ ಯುವ‌ಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ ನೀಡಿದ ದೂರಿನ ಅನ್ವಯ ಶಾಸಕ ನಾರಾಯಣಸ್ವಾಮಿ ವಿರುದ್ಧ ಕೇಸ್‌ ದಾಖಲಾಗಿದೆ.

    ಸೆಪ್ಟೆಂಬರ್‌ 25ರಂದು ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ (Janata Darshan Programme) ಸಂಸದ ಮುನಿಸ್ವಾಮಿ ಸಚಿವ ಭೈರತಿ ಸುರೇಶ್ ಪಕ್ಕದಲ್ಲಿ ಕುಳಿತಿದ್ದರು. ಈ ವೇಳೆ ಬಂಗಾರಪೇಟೆ ಶಾಸಕ ಎಸ್‌.ಎನ್ ನಾರಾಯಣಸ್ವಾಮಿ ಅವರನ್ನ ನೋಡಿಕೊಂಡು ಎಲ್ಲಾ ಭೂಗಳ್ಳರನ್ನು ಅಕ್ಕಪಕ್ಕ ಕೂರಿಸಿಕೊಂಡು ಜನತಾ ದರ್ಶನ ಮಾಡ್ತಾ ಇದ್ದಾರೆ ಎಂದರು. ಈ ವೇಳೆ ಕ್ಷಣಾರ್ಧದಲ್ಲಿ ಆಕ್ರೋಶಗೊಂಡ ನಾರಾಯಣಸ್ವಾಮಿ ಸಂಸದರಿಗೆ ಏಕವಚನದಲ್ಲೇ ಬೈಯಲು ಶುರು ಮಾಡಿಕೊಂಡರು.

    ಕೊನೆಗೆ ಇಬ್ಬರ ನಡುವಿನ ಜಟಾಪಟಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ವೇಳೆ ಸಂಸದ ಮುನಿಸ್ವಾಮಿಯನ್ನು ತಬ್ಬಿಕೊಂಡ ಕೋಲಾರ ಎಸ್ಪಿ ನಾರಾಯಣ ಸಂಸದರನ್ನ ಹಿಡಿದುಕೊಂಡು ವೇದಿಕೆಯಿಂದ ಹೊರಗೆ ಕರೆದುಕೊಂಡು ಹೋದರು. ಈ ಸಂದರ್ಭ ಸಾಕಷ್ಟು ತಳ್ಳಾಟ ನೂಕಾಟದ ಜೊತೆಗೆ ಕಾರ್ಯಕ್ರಮದ ವೇದಿಕೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

    ಘಟನೆ ನಂತರ ಸಂಸದ ಮುನಿಸ್ವಾಮಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಶಾಸಕ ನಾರಾಯಣಸ್ವಾಮಿ ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಅರಣ್ಯ ಇಲಾಖೆ ತೆರವು ಕಾರ್ಯಾಚರಣೆ ವಿಚಾರದಲ್ಲಿ ಮುನಿಸ್ವಾಮಿ ವಿರುದ್ಧ FIR ದಾಖಲಾಗಿತ್ತು. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ A1 ಆರೋಪಿಯಾಗಿ FIR ದಾಖಲಾಗಿತ್ತು. ಇದೀಗ ಮತ್ತೆ ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಂಸದ ಮುನಿಸ್ವಾಮಿ ವಿರುದ್ಧ 2ನೇ FIR ದಾಖಲಾಗಿದೆ. ಈ ನಡುವೆ ಸಂಸದ ಮುನಿಸ್ವಾಮಿ ಸೆಪ್ಟೆಂಬರ್‌ 27 ರಂದು ಎಸ್.ಎನ್ ನಾರಾಯಣಸ್ವಾಮಿ ಹಾಗೂ ಎಸ್ಪಿ ನಾರಾಯಣ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಾದ್ಯಂತ ಏಕಕಾಲಕ್ಕೆ ಜನತಾ ದರ್ಶನ

    ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಾದ್ಯಂತ ಏಕಕಾಲಕ್ಕೆ ಜನತಾ ದರ್ಶನ

    ಬೆಂಗಳೂರು: ರಾಜ್ಯದ ಇತಿಹಾದಲ್ಲೇ ಮೊದಲ ಬಾರಿಗೆ ಇಡಿ ರಾಜ್ಯಾದ್ಯಂತ ಏಕ ಕಾಲಕ್ಕೆ ಜನತಾ ದರ್ಶನಕ್ಕೆ (Janata Darshan) ನಾಡು ಇಂದು ಸಾಕ್ಷಿಯಾಗಲಿದೆ.

    ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ನಡೆಯಲಿರುವ ಈ ಅರ್ಥಪೂರ್ಣ ಕಾರ್ಯಕ್ರಮದ ಹೊಣೆಗಾರಿಕೆ ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯತ್‌ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಮೇಲಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳ ಸಮ್ಮುಖದಲ್ಲೇ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಮತ್ತು ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಕಾಳಜಿ ಈ ಜನತಾ ದರ್ಶನದ ಹಿಂದಿದೆ.

    ಮುಖ್ಯಮಂತ್ರಿಗಳ ಸೂಚನೆ ಏನು?
    ಆಡಳಿತಕ್ಕೆ ಚುರುಕು ಮುಟ್ಟಿಸಿ, ಸರ್ಕಾರಿ ಯಂತ್ರಾಂಗವನ್ನು ಕ್ರಿಯಾಶೀಲಗೊಳಿಸುವ ಪ್ರಯತ್ನವಾಗಿ ನಡೆಸಿದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಪಂಚಾಯತ್‌ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಹತ್ತು ದಿನಗಳ ಹಿಂದೆ ಒಂದು ಸೂಚನೆ ನೀಡಿದ್ದರು. ಜಾತಿ ಪ್ರಮಾಣಪತ್ರ, ಖಾತೆ ಬದಲಾವಣೆ, ಟ್ರಾನ್ಸ್ ಫಾರ್ಮರ್ ರಿಪೇರಿ, ವಿದ್ಯುತ್ ಕಂಬ ಅಳವಡಿಕೆಯಂತಹ ಸಣ್ಣ ಪುಟ್ಟ ಕೆಲಸಗಳಿಗೂ ಜನ ನನ್ನ ಬಳಿಗೆ ಬರುತ್ತಿದ್ದಾರೆ. ನಾನು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಜನರು ಇಷ್ಟು ಸಣ್ಣ ಪುಟ್ಟ ಕೆಲಸಗಳಿಗೂ ನನ್ನನ್ನು ಹುಡುಕಿಕೊಂಡು ಬರುವಂತಾಗಿದೆ ಎಂದರೆ ನೀವುಗಳಿದ್ದೂ ಏನು ಪ್ರಯೋಜನ ಎಂದು ಸಭೆಯಲ್ಲಿ ಪ್ರಶ್ನಿಸಿದ್ದರು. ಬಳಿಕ ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲೂ ಜನತಾ ದರ್ಶನ ನಡೆಸಬೇಕು ಎನ್ನುವ ಸೂಚನೆಯನ್ನೂ ನೀಡಿದ್ದರು.

    ಈ ಸೂಚನೆಯ ಫಲವೇ ಇಂದು ರಾಜ್ಯದಾದ್ಯಂತ ಏಕ ಕಾಲಕ್ಕೆ ನಡೆಯಲಿರುವ ಜನತಾ ದರ್ಶನ ಕಾರ್ಯಕ್ರಮ. ಇದು ನಿಗದಿತವಾಗಿ ನಡೆಯಲಿದೆ.  ಇದನ್ನೂ ಓದಿ: Ind vs Aus: ಬೆಂಕಿ ಬ್ಯಾಟಿಂಗ್‌, ಮಿಂಚಿನ ಬೌಲಿಂಗ್‌; ಆಸೀಸ್‌ ವಿರುದ್ಧ ಭಾರತಕ್ಕೆ ಸರಣಿ ಜಯ

    ಸ್ವರೂಪ ಏನು?
    ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಜನತಾ ದರ್ಶನ ನಡೆಸುತ್ತಾರೆ. ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿರುತ್ತಾರೆ. ಇವರೆಲ್ಲರ ನಡುವೆ ಸಮನ್ವಯ ಸಾಧಿಸಿ ಜನತಾ ದರ್ಶನ ಅರ್ಥಪೂರ್ಣವಾಗಿ ಮತ್ತು ಫಲಪ್ರದವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿ ನೇಮಕಗೊಂಡಿರುವ ಹಿರಿಯ ಐಎಎಸ್ ಅಧಿಕಾರಿಗಳ ಮೇಲೆ ಇರುತ್ತದೆ.

    ಪ್ರತಿ ಜಿಲ್ಲೆಯಲ್ಲೂ ಜನತಾ ದರ್ಶನ ನಡೆಯುವ, ನಡೆಸುವ ಬಗ್ಗೆ ಸಾರ್ವಜನಿಕರಿಗೆ ಈಗಾಗಲೇ ತಿಳಿವಳಿಕೆ ನೀಡಲಾಗಿದೆ. ನಿಗದಿತ ಸ್ಥಳದಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಜನತಾ ದರ್ಶನ ಆರಂಭವಾಗಬೇಕು ಎನ್ನುವ ಸೂಚನೆ ಸರ್ಕಾರದ ಕಡೆಯಿಂದ ಹೋಗಿದೆ. ಇಲ್ಲಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು. ಈ ಅಹವಾಲುಗಳಿಗೆ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಒದಗಿಸುವುದು ಪ್ರಥಮ ಆಧ್ಯತೆಯಾಗಿರುತ್ತದೆ. ತಾಂತ್ರಿಕ ಕಾರಣಗಳಿಂದ ಇದು ಸಾಧ್ಯವಾಗದಿದ್ದರೆ ಸಾರ್ವಜನಿಕರ ಅಹವಾಲುಗಳು ಸ್ಥಳದಲ್ಲೇ ದಾಖಲಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ವರ್ಗಾವಣೆಗೊಳ್ಳುತ್ತವೆ. ಎಲ್ಲದಕ್ಕೂ ಕಾಲ ಮಿತಿಯಲ್ಲಿ ಪರಿಹಾರ ಒದಗಿಸುವ ಮತ್ತು ಸಾರ್ವಜನಿಕರು ನೀಡಿದ ಅಹವಾಲಿನ ಸ್ಥಿತಿಗತಿಯನ್ನು ಅರ್ಜಿದಾರರಿಗೆ ಮನವರಿಕೆ ಮಾಡಿಸುವ ಜವಾಬ್ದಾರಿ ಕೂಡ ಜಿಲ್ಲಾಡಳಿತದ ಮೇಲೆ ಇರುತ್ತದೆ.

     

    ಸಾರ್ವಜನಿಕರ ಅಹವಾಲು ಎಲ್ಲಿ ದಾಖಲಾಗುತ್ತವೆ?
    ಜನತಾ ದರ್ಶನದಲ್ಲಿ ಸಲ್ಲಿಕೆಯಾಗುವ ಸಾರ್ವಜನಿಕರ ಅಹವಾಲುಗಳು ಈಗಾಗಲೇ ಚಾಲ್ತಿಯಲ್ಲಿರುವ “ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (ಐಪಿಜಿಆರ್‌ಎಸ್-ಇಂಟೆಗ್ರೇಟೆಡ್ ಪಬ್ಲಿಕ್ ಗ್ರಿವಿಯೆನ್ಸ್ ರಿಡ್ರೆಸಲ್ ಸಿಸ್ಟಂ) ತಂತ್ರಾಂಶದಲ್ಲಿ ದಾಖಲಾಗುತ್ತದೆ ಮತ್ತು ಇಲ್ಲಿಂದಲೇ ಸಂಬಂಧಪಟ್ಟ ಇಲಾಖೆಯ ಟೇಬಲ್ಲಿಗೆ ಅರ್ಜಿಗಳ ವಿಲೇವಾರಿಯೂ ನಡೆಯುತ್ತದೆ. ಬಳಿಕ ಕಾಳಜಿ ವಹಿಸಿ ಕಾಲಮಿತಿಯಲ್ಲಿ ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎನ್ನುವ ಸೂಚನೆ ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ರವಾನೆಯಾಗಿದೆ.

    ತಾಲ್ಲೂಕು ಮಟ್ಟದ ಜನತಾ ದರ್ಶನ
    ನಾಳೆ ಇಡಿ ರಾಜ್ಯಾದ್ಯಂತ ಜಿಲ್ಲಾ ಮಟ್ಟದ ಜನತಾ ದರ್ಶನ ಸಭೆ ನಡೆದ ಬೆನ್ನಲ್ಲೇ ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ಜಿಲ್ಲಾಧಿಕಾರಿಗಳು ಒಂದು ತಾಲ್ಲೂಕನ್ನು ಆರಿಸಿಕೊಂಡು ತಾಲ್ಲೂಕು ಮಟ್ಟದ ಜನತಾ ದರ್ಶನ ಸಭೆ ನಡೆಸಬೇಕು ಎನ್ನುವ ಆದೇಶವನ್ನೂ ಈಗಾಗಲೇ ಮುಖ್ಯಮಂತ್ರಿಗಳ ಸೂಚನೆಯಂತೆ, ಅಪರ ಮುಖ್ಯ ಕಾರ್ಯದರ್ಶಿ ಆಗಿರುವ ರಜನೀಶ್ ಗೋಯಲ್ ಅವರು ಹೊರಡಿಸಿದ್ದಾರೆ.

    ಪರಿಣಾಮ
    ಸಾರ್ವಜನಿಕರು ಪದೇ ಪದೇ ಸಣ್ಣ ಪುಟ್ಟ ಕೆಲಸಗಳಿಗೂ ಸರ್ಕಾರಿ ಕಚೇರಿಗಳಿಗೆ, ಶಾಸಕರ, ಜಿಲ್ಲಾ ಮಂತ್ರಿಗಳ, ಮುಖ್ಯಮಂತ್ರಿಗಳ ಬಳಿಗೆ ಅಲೆಯುವುದು ತಪ್ಪುತ್ತದೆ. ಅರ್ಜಿದಾರರ ದೂರು ಸತ್ಯವಾಗಿದ್ದು, ಯಾವುದೇ ದುರುದ್ದೇಶದಿಂದ ಕೂಡಿರದಿದ್ದರೆ ಅಂತಹ ಅರ್ಜಿಗಳಿಗೆ ಸೂಕ್ತ ಪರಿಹಾರ ಒದಗಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಯನ್ನು ಇದಕ್ಕೆ ಹೊಣೆಗಾರರನ್ನಾಗಿಸಿ ಸರ್ಕಾರ ಕ್ರಮ ಜರುಗಿಸಲಿದೆ. ಹೀಗೆ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಇಡಿ ರಾಜ್ಯಾದ್ಯಂತ ಏಕ ಕಾಲಕ್ಕೆ ಒಂದೇ ದಿನ ಜನತಾ ದರ್ಶನ ದಾಖಲಾಗುತ್ತಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 12 ವರ್ಷಗಳ ಹಿಂದಿದ್ದ ಶಕ್ತಿ ಈಗಿಲ್ಲ, ವಯಸ್ಸಾಗ್ತಿದೆ ಶಕ್ತಿ ಕುಂದುತ್ತಿದೆ: ಸಿಎಂ

    12 ವರ್ಷಗಳ ಹಿಂದಿದ್ದ ಶಕ್ತಿ ಈಗಿಲ್ಲ, ವಯಸ್ಸಾಗ್ತಿದೆ ಶಕ್ತಿ ಕುಂದುತ್ತಿದೆ: ಸಿಎಂ

    – ನನ್ನ ಕೆಲಸಕ್ಕೆ ತಕ್ಕ ಗೌರವ ಸಿಕ್ತಿಲ್ಲವೆಂಬ ನೋವಿದೆ
    – ಸ್ವಕ್ಷೇತ್ರದಲ್ಲಿ 2 ದಿನಗಳ ಜನತಾದರ್ಶನ ಮುಗಿಸಿದ ಸಿಎಂ

    ರಾಮನಗರ: 12 ವರ್ಷಗಳ ಹಿಂದೆ ಇದ್ದ ಶಕ್ತಿ ಈಗ ನನ್ನ ದೇಹದಲ್ಲಿಲ್ಲ. ವಯಸ್ಸಾಗುತ್ತಿದೆ, ಹೀಗಾಗಿ ಶಕ್ತಿ ಕುಂದುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

    ಚನ್ನಪಟ್ಟಣದಲ್ಲಿ ನಡೆದ ಜನತಾದರ್ಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಕೆಲಸಕ್ಕೆ ತಕ್ಕ ಗೌರವ ಸಿಗುತ್ತಿಲ್ಲ ಎಂಬ ನೋವಿದೆ. ನನಗೆ ಸಮಯಾವಕಾಶ ಕೊಡಿ ನಿಮ್ಮ ಕೆಲಸ ಮಾಡಿಕೊಡುತ್ತೇವೆ ಎಂದು ಸ್ವಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿಕೊಂಡರು.

    ಚನ್ನಪಟ್ಟಣದ ಗ್ರಾಮೀಣ ಅಭಿವೃದ್ಧಿಗೆ ಅಷ್ಟೇ ಅಲ್ಲ ನಗರದ ಅಭಿವೃದ್ಧಿಗೂ ಬದ್ಧನಾಗಿದ್ದೇನೆ. ಬಡ ಕುಟುಂಬದವರು ನಗರದಲ್ಲಿ ಮನೆಗಾಗಿ ಬೇಡಿಕೆ ಇಟ್ಟಿದ್ದೀರಿ. ಈ ನಿಟ್ಟಿನಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ಗುಂಪು ಮನೆಗಳನ್ನು ನಿರ್ಮಿಸಿ ನೀಡಲಾಗುವುದು. ಸ್ಪೋಟ್ರ್ಸ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ 60 ಕೋಟಿ ರೂ. ನೀಡುತ್ತೇನೆ. ಕುಡಿಯುವ ನೀರು ಪೂರೈಕೆಗಾಗಿ ರಾಮನಗರ, ಚನ್ನಪಟ್ಟಣಕ್ಕೆ ಪ್ರತ್ಯೇಕ ಪೈಪ್ ಲೈನ್ ವ್ಯವಸ್ಥೆ ಮಾಡಲಾಗುವುದು. ತಿರುಪತಿ ದೇವಾಲಯ ನಿರ್ಮಾಣಕ್ಕೆ ಜಾಗ ಹುಡುಕಲಾಗುತ್ತಿದೆ ಎಂದು ಜನತೆಗೆ ತಿಳಿಸಿದರು.

    ಕೆರೆಗೆ ನೀರು ತುಂಬಿಸುವ ವಿವರವನ್ನ ತೆಗೆದುಕೊಂಡಿದ್ದೇನೆ. 2015ರಲ್ಲಿ ನಾನು ಕ್ಷೇತ್ರದ ಶಾಸಕನಾದ ಬಳಿಕ 86 ಕೆರೆಗೆ ಸಂಪೂರ್ಣವಾಗಿ ನೀರು ತುಂಬಿಸಿದ್ದೇವೆ. ಯಾಕೆ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತೀರಿ. ಕೆಲವರು ಸರ್ಕಾರ ಉರುಳಿಸಲು ಕಸರತ್ತು ನಡೆಸುತ್ತಿದ್ದಾರೆ. ಸರ್ಕಾರ ಬಹಳ ಬೇಗ ಹೋಗಲ್ಲ, ಇನ್ನೂ ನಾಲ್ಕು ವರ್ಷ ಸರ್ಕಾರವನ್ನು ಹೇಗೆ ನಡೆಸಬೇಕು ಅಂತ ಗೊತ್ತಿದೆ ಎಂದು ಪರೋಕ್ಷವಾಗಿ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಅವರ ವಿರುದ್ಧ ಗುಡುಗಿದರು.

    ಸಿಎಂ ಅವರು ಸ್ವಕ್ಷೇತ್ರದಲ್ಲಿ ಕೈಗೊಂಡ ಎರಡು ದಿನಗಳ ಜನತಾದರ್ಶನವನ್ನು ಭಾನುವಾರ ಮುಗಿಸಿದ್ದಾರೆ. ಮೊದಲ ದಿನ ಅಕ್ಕೂರು, ಕೋಡಂಬಳ್ಳಿ ಹಾಗೂ ಹೊಂಗನೂರು ಜಿಲ್ಲಾ ಪಂಚಾಯ್ತಿಗಳಲ್ಲಿ ಜನತಾದರ್ಶನ ನಡೆಸಿದ್ದ ಸಿಎಂ, ಎರಡನೇ ದಿನಗ ಬೇವೂರು, ಮಳೂರು ಜಿಲ್ಲಾ ಪಂಚಾಯತ್ ಹಾಗೂ ಚನ್ನಪಟ್ಟಣ ಟೌನ್‍ನಲ್ಲಿ ಜನತಾದರ್ಶನ ನಡೆಸಿದರು.

    ಮೊದಲಿಗೆ ಬೇವೂರಿನಲ್ಲಿ ನಡೆದ ಜನತಾದರ್ಶನದಲ್ಲಿ ಕಳೆದ ಮೂರು ತಿಂಗಳ ಹಿಂದೆ ವಿದ್ಯುತ್ ಶಾಕ್‍ನಿಂದ ಮೃತಪಟ್ಟಿದ್ದ ರಾಜು ಎಂಬವರ ಪತ್ನಿಗೆ ಬೆಸ್ಕಾಂ ಇಲಾಖೆಯ ವತಿಯಿಂದ 5 ಲಕ್ಷ ರೂ. ಪರಿಹಾರ ಚೆಕ್ ವಿತರಣೆ ಮಾಡಿದರು.

    ಬೇವೂರು, ಬೈರಾಪಟ್ಟಣ ಹಾಗೂ ಚನ್ನಪಟ್ಟಣ ಟೌನ್‍ನಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ 4 ಸಾವಿರಕ್ಕೂ ಹೆಚ್ಚು ಅಹವಾಲುಗಳ ಅರ್ಜಿಗಳನ್ನು ಸ್ವೀಕರಿಸಲಾಯಿತು. ಪ್ರತಿ ಜನತಾದರ್ಶನದ ಸ್ಥಳಗಳಲ್ಲಿ ಸಾಲಮನ್ನಾ ಪಲಾನುಭವಿಗಳಿಗೆ ಋಣಮುಕ್ತ ಪತ್ರವನ್ನ ನೀಡಲಾಯಿತು. ಮೊದಲ ದಿನದಂತೆಯೇ ಕೆಲವರು ಸಿಎಂ ಎದುರು ಸೆಲ್ಫಿ ತೆಗೆದುಕೊಳ್ಳಲು ಮುಂದಾದರೆ, ಕೆಲವರು ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿ ಸಿಎಂಗೆ ಮನವಿ ಪತ್ರ ನೀಡಿದರು.

    ಮಳೂರು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದ ಜನತಾದರ್ಶನದಲ್ಲಿ ಭೈರಾಪಟ್ಟಣ ಗ್ರಾಮದ ಎಂಬ ಪದ್ಮ ಎಂಬ ಮಹಿಳೆ ತನ್ನ ಒಂದೂವರೆ ವರ್ಷದ ಗಂಡು ಮಗುವಿನ ಜೊತೆ ಬಂದು ಸಿಎಂ ಎದುರು ಕಣ್ಣೀರು ಹಾಕಿದರು. ಮಗು ಮೆದುಳು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದೆ. ಚಿಕಿತ್ಸೆಗೆ 5 ಲಕ್ಷ ರೂ. ತಗಲುತ್ತದೆ ಅಂತ ವೈದ್ಯರು ತಿಳಿಸಿದ್ದಾರೆ ಎಂದು ಕಣ್ಣೀರು ಹಾಕಿದರು.

    ಕೆಲವರಂತೂ ಸಿಎಂ ಕಾಲಿಗೆ ಎರಗಿ ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು. ಈ ಮಧ್ಯೆ ಸಿಎಂ ಭಾಷಣ ಮಾಡುತ್ತಿದ್ದಾಗ ಮಹಿಳೆಯೊಬ್ಬಳು ಕುಸಿದು ಬಿದ್ದರು. ಕಣ್ಣೆದುರೇ ನಡೆದ ಘಟನೆಯನ್ನು ನೋಡಿದ ಸಿಎಂ ಯಾಕಮ್ಮಾ, ಏನಾಯ್ತು, ಯಾರು ನೋಡ್ರಪ್ಪಾ, ಅವರಿಗೆ ನೀರು ಕುಡಿಸಿ, ಪಾಪಾ ಮಗುವನ್ನ ಎತ್ತಿಕೊಂಡಿದ್ದಾರೆ ಎಂದು ಮರುಕ ವ್ಯಕ್ತಪಡಿಸಿದರು.

  • ಸುವರ್ಣ ಸೌಧದಲ್ಲಿ ಸಿಎಂ ಜನತಾ ದರ್ಶನ

    ಸುವರ್ಣ ಸೌಧದಲ್ಲಿ ಸಿಎಂ ಜನತಾ ದರ್ಶನ

    ಬೆಳಗಾವಿ: ನಗರದ ಸುವರ್ಣ ಸೌಧದಲ್ಲಿ ಇಂದು ಸಿಎಂ ಪ್ರಥಮ ಜನತಾ ದರ್ಶನ ನಡೆಸಲಾಗುತ್ತಿದ್ದು, ಜಿಲ್ಲಾಡಳಿತ ಸಿಬ್ಬಂದಿ ಭಾಗವಹಿಸುತ್ತಿದ್ದಾರೆ.

    ಮಾನ್ಯ ಮುಖ್ಯಮಂತ್ರಿಗಳು ಪ್ರಥಮ ಬಾರಿ ಜನತಾ ದರ್ಶನ ಮಾಡಲಿದ್ದಾರೆ. ಅದಕ್ಕಾಗಿ ಮುಖ್ಯಮಂತ್ರಿಗಳ ವಿಶೇಷ ವಾಹನ ತಯಾರಾಗಿದ್ದು, ಜಿಲ್ಲೆಯ ಜಿಲ್ಲಾಡಳಿತ ಸಿಬ್ಬಂದಿಗಳೆಲ್ಲಾ ಜನತಾ ದರ್ಶನಕ್ಕೆ ತೆರಳಲು ಸಿದ್ದರಾಗಿದ್ದಾರೆ. ಅಷ್ಟೇ ಅಲ್ಲದೇ ಜನತಾ ದರ್ಶನವನ್ನು ಯಾವ ರೀತಿ ಮಾಡಬೇಕು ಎಂದು ಈಗಾಗಲೇ ತರಬೇತಿಯನ್ನು ನೀಡಿದ್ದಾರೆ.

    ಜಿಲ್ಲಾಡಳಿತ ಕೂಡ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. 50ಕ್ಕೂ ಹೆಚ್ಚು ಸಿಬ್ಬಂದಿ, ಅಧಿಕಾರಿಗಳು ಜನತಾ ದರ್ಶನ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಶುಕ್ರವಾರ ಜಿಲ್ಲೆಯ ಪುರಸಭೆಯಲ್ಲಿ ಯಾವ ರೀತಿಯಲ್ಲಿ ಸಿಎಂ ಕುಮಾರಸ್ವಾಮಿ ಅವರು ಭೇಟಿ ಮಾಡಲಿದ್ದಾರೆ ಹಾಗೂ ಸಮಸ್ಯೆಗಳನ್ನು ಯಾವ ರೀತಿ ಕೇಳಬೇಕು ಎಂಬುದನ್ನು ಅಧಿಕಾರಿಗಳೊಂದಿಗೆ ಚರ್ಚಿಸುವ ಮೂಲಕ ಎಲ್ಲಾ ಪೂರ್ವಸಿದ್ಧತೆಗಳನ್ನು ಕೈಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡಿದ್ದ `ಕೈ’ ಶಾಸಕರಿಂದ ಜನತಾ ದರ್ಶನ ಆರಂಭ

    ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡಿದ್ದ `ಕೈ’ ಶಾಸಕರಿಂದ ಜನತಾ ದರ್ಶನ ಆರಂಭ

    ಚಿಕ್ಕಬಳ್ಳಾಪುರ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ, ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಇದೀಗ ಸ್ವಕ್ಷೇತ್ರದಲ್ಲಿ ಜನತಾದರ್ಶನ ಕಾರ್ಯಕ್ರಮ ನಡೆಸುವ ಮೂಲಕ ಜನರ ಸಮಸ್ಯೆಗಳನ್ನು ಅಲಿಸಿದ್ದಾರೆ.

    ಇಂದು ಚಿಕ್ಕಬಳ್ಳಾಪುರ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಜನತಾ ದರ್ಶನ ಕಾರ್ಯಕ್ರಮ ನಡೆಸಿದ ಸುಧಾಕರ್ ಸಾರ್ವಜನಿಕರಿಂದ ಸಾಕಷ್ಟು ಅಹವಾಲುಗಳನ್ನ ಸ್ವೀಕರಿಸಿದರು. ಕ್ಷೇತ್ರದಲ್ಲಿ ಪ್ರತಿ ಸೋಮವಾರ ಜನತಾ ದರ್ಶನ ಕಾರ್ಯಕ್ರಮ ನಡೆಸಲು ತೀರ್ಮಾನಿಸಿರುವ ಶಾಸಕ ಸುಧಾಕರ್, ಇಂದು ತಮ್ಮ ಮೊದಲ ಕಾರ್ಯಕ್ರಮ ನಡೆಸಿದರು.

    ಇತ್ತೀಚೆಗೆ ಮತದಾರರಿಗೆ ಕೃತಜ್ಞತಾ ಸಮಾವೇಶ ನಡೆಸಿ ಧನ್ಯವಾದಗಳನ್ನ ಅರ್ಪಿಸಿದ್ದ ಶಾಸಕ ಸುಧಾಕರ್ ಇದೀಗ ಜನತಾ ದರ್ಶನ ಕಾರ್ಯಕ್ರಮ ನಡೆಸಿರುವುದು ಶಾಸಕರ ಅಸಮಾಧಾನ ತಣಿಸಿಕೊಂಡಿರುವ ಲಕ್ಷಣಗಳು ಗೋಚರಿಸುತ್ತಿವೆ. ತಮ್ಮ ಮೊದಲ ದಿನದ ಜನತ ದರ್ಶನದಲ್ಲೇ ಕ್ಷೇತ್ರದ ಜನರು ಕುಡಿಯುವ ನೀರು, ವಿದ್ಯುತ್ ದೀಪ, ರಸ್ತೆ, ಪಿಂಚಣಿ, ವೃದ್ಧಾಪ್ಯವೇತನ, ರೇಷನ್ ಕಾರ್ಡ್ ಸಮಸ್ಯೆ, ಉದ್ಯೋಗ ಸಮಸ್ಯೆ, ಜಮೀನು ಖಾತೆ ಸಮಸ್ಯೆ, ಪಹಣಿ ಸಮಸ್ಯೆ, ಯಾರದೋ ಜಮೀನು ಮತ್ಯಾರಿಗೋ ಖಾತೆ ಸೇರಿದಂತೆ ಹಲವು ಸಮಸ್ಯೆಗಳ ದೂರುಗಳನ್ನು ಶಾಸಕರಿಗೆ ಸಲ್ಲಿಸಿದರು.

    ಜನರ ಸಮಸ್ಯೆಗಳ ಅಹವಾಲು ಸ್ವೀಕರಿಸಿದ ಶಾಸಕರು ಮುಂದಿನ ಜನತಾ ದರ್ಶನದ ಒಳಗೆ ಸಮಸ್ಯೆಗಳ ಇತ್ಯರ್ಥ ಮಾಡುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು. ಇದೇ ವೇಳೆ ಹಲವು ಮಂದಿ ಸಣ್ಣ ಸಮಸ್ಯೆಗಳಿಗೂ ಸಾರ್ವಜನಿಕರು ಶಾಸಕರ ಮೊರೆಗೆ ಆಗಮಿಸಿದ್ದು ತಾಲೂಕು ಆಡಳಿತ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಕೂಡ ಆಗಿತ್ತು.

    ಸದ್ಯ ಶಾಸಕ ಈ ನಡೆ ಸಚಿವ ಸ್ಥಾನದ ಸಿಗದ ಅಸಮಾಧಾನದಿಂದ ಹೊರ ಬಂದಿದ್ದರಾ ಎಂಬ ಚರ್ಚೆಗೆ ಕಾರಣವಾಗಿದೆ. ಚುನಾವಣಾ ಫಲಿತಾಂಶದ ನಂತರ ರಚನೆಯಾದ ಸಮ್ಮಿಶ್ರ ಸರ್ಕಾರ ಸತತ ಸವಾಲು ಎದುರಿಸಿದ ನಡುವೆ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾದ ಶಾಸಕ ಸುಧಾಕರ್ ಅವರಿಗೆ ಸಚಿವ ಸ್ಥಾನ ನೀಡಿರಲಿಲ್ಲ. ಈ ಕುರಿತು ಶಾಸಕರು ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದರು. ನಿರಂತರವಾಗಿ ಪಕ್ಷದ ನಾಯಕರ ನಡೆಯ ವಿರುದ್ಧ ಟೀಕೆ ಮಾಡುತ್ತಲೇ ಇರುವ ಶಾಸಕರು ಕೃತಜ್ಞತಾ ಸಮಾವೇಶದಲ್ಲೂ ವಾಗ್ದಾಳಿ ನಡೆಸಿ ನಾಯಕರಿಗೆ ಬಿಸಿ ಮುಟ್ಟಿಸಿದ್ದರು.

  • ಜನತಾ ದರ್ಶನದಲ್ಲಿ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಸಿಎಂ ಸಹಾಯ

    ಜನತಾ ದರ್ಶನದಲ್ಲಿ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಸಿಎಂ ಸಹಾಯ

    ಬೆಂಗಳೂರು: ಜನತಾ ದರ್ಶನದಲ್ಲಿ ರಾಮನಗರದ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕಾಗಿ 70 ಸಾವಿರ ರೂಪಾಯಿಯ ಚೆಕ್ ಅನ್ನು ಸಿಎಂ ಕುಮಾರಸ್ವಾಮಿಯವರು ವಿತರಿಸಿದ್ದಾರೆ.

    ಕಳೆದ ವಾರದ ಹಿಂದೆ ರಾಮನಗರದ ವಿದ್ಯಾರ್ಥಿ ಕಾಂಚನಾ ಇಂಜಿನಿಯರಿಂಗ್ ಓದಲು ಆರ್ಥಿಕ ಸಮಸ್ಯೆಯನ್ನು ಎದುರಾಗಿದ್ದು ಸಹಾಯ ನೀಡುವಂತೆ ಜನತಾ ದರ್ಶನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಳಿ ಕೇಳಿಕೊಂಡಿದ್ದಳು. ಈ ವೇಳೆ ಮುಖ್ಯಮಂತ್ರಿಯವರು ಯುವತಿಗೆ ಒಂದು ವಾರ ಬಿಟ್ಟು ಬರುವಂತೆ ತಿಳಿಸಿದ್ದರು.

    ಇಂದು ಜೆಪಿ ನಗರದ ನಿವಾಸದಲ್ಲಿ ನಡೆದ ಜನತಾ ದರ್ಶನದಲ್ಲಿ ಕಾಂಚನಾ ಸಮಸ್ಯೆಗೆ ಸ್ಪಂದಿಸಿ ಆಕೆಯ ವಿದ್ಯಾಭ್ಯಾಸಕ್ಕಾಗಿ 70 ಸಾವಿರ ರೂಪಾಯಿಯ ಚೆಕ್ ಅನ್ನು ಮುಖ್ಯಮಂತ್ರಿ ವಿತರಿಸಿದ್ದಾರೆ. ಚೆಕ್ ಪಡೆದ ಯುವತಿಯು ನನ್ನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ ಮುಖ್ಯಮಂತ್ರಿಗಳಿಗೆ ವಂದನೆ ಸಲ್ಲಿಸಿ, ಇಂತಹ ಮುಖ್ಯಮಂತ್ರಿಗಳು ನಮಗೆ ಬೇಕು ಎಂದು ಸಂತಸ ಹಂಚಿಕೊಂಡಿದ್ದಾಳೆ.

    ಡಾ. ರವೀಂದ್ರ ಭೇಟಿ:
    ಕರ್ನಾಟಕ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ.ರವೀಂದ್ರ ಮುಖ್ಯಮಂತ್ರಿ ಕುಮಾರಸ್ವಾಮಿಗಳನ್ನು ಜೆಪಿ ನಗರದ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಕೊಪ್ಪಳ ಮೆಡಿಕಲ್ ಕಾಲೇಜಿಗೆ 150 ಸೀಟುಗಳು ಮಿಸ್ ಆದ ಕಾರಣ ಸಿಎಂ ಜತೆ ಚರ್ಚಿಸಲು ಹಾಗೂ ಯಶಸ್ವಿನಿ ಯೋಜನೆ ಮುಂದುವರಿಸುವ ಕುರಿತು ಮಾತುಕತೆ ನಡೆಸಿದ್ದಾರೆ.

  • ಗೆಲ್ಲಿಸಿದ ಜನರನ್ನು ಮರೆತ್ರಾ ಸಿಎಂ ಸಿದ್ದರಾಮಯ್ಯ?

    ಗೆಲ್ಲಿಸಿದ ಜನರನ್ನು ಮರೆತ್ರಾ ಸಿಎಂ ಸಿದ್ದರಾಮಯ್ಯ?

    ಬೆಂಗಳೂರು: ಗೆಲ್ಲಿಸಿದ ಜನರನ್ನು ಮುಖ್ಯಮಂತ್ರಿ ಸಿದ್ದರಾವಯ್ಯ ಮರೆತ್ರಾ ಎಂಬ ಪ್ರಶ್ನೆಯೊಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಆಧಿಕಾರಕ್ಕೆ ಬಂದ ಕೂಡಲೇ ಪ್ರತಿ ಮಂಗಳವಾರ ಜನತಾ ದರ್ಶನ ನಡೆಸುತ್ತೇನೆ ಅಂತಾ ಹೇಳಿದ್ದ ಸಿಎಂ ತಮ್ಮ ಮಾತನ್ನು ಮರೆತಿರುವ ಹಾಗಿದೆ.

    2015 ಡಿಸೆಂಬರ್ ನಿಂದಲೇ ಸಿಎಂ ಸಿದ್ದರಾಮಯ್ಯ ಪ್ರತಿ ಮಂಗಳವಾರ ನಡೆಸುವ ಜನತಾ ದರ್ಶನಕ್ಕೆ ಬ್ರೇಕ್ ಹಾಕಿದ್ದಾರೆ. ಕೆಲವೊಮ್ಮೆ ಮಾತ್ರ ಜನತಾ ದರ್ಶನದಲ್ಲಿ ಭಾಗಿಯಾಗುತ್ತಿದ್ದರು. ಆದ್ರೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಳೆದ ಮೂರು ತಿಂಗಳಿನಿಂದ ಸಿಎಂ ಜನತಾ ದರ್ಶನಕ್ಕೆ ಪೂರ್ಣ ವಿರಾಮ ಹಾಕಿದ್ದಾರೆ. ತಮ್ಮ ಸಮಸ್ಯೆಗಳನ್ನು ತೆಗೆದುಕೊಂಡು ಬರುವ ಜನರಿಗೆ ಗೃಹ ಕಚೇರಿ ಕೃಷ್ಣ ಮತ್ತು ಸಿಎಂ ನಿವಾಸ ಕಾವೇರಿಯ ಗೇಟ್ ಬಂದ್ ಮಾಡಲಾಗಿದೆ.

    ಸಿಎಂ ನಿವಾಸದತ್ತ ಬರುವ ಜನರ ಸಮಸ್ಯೆಯನ್ನು ಆಲಿಸುವ ಬದಲು ಬಸ್ ಟಿಕೆಟ್‍ಗೆ 100, 200 ರೂಪಾಯಿ ಕೊಟ್ಟು ಸಿಎಂ ಸಿಗೊಲ್ಲ ಅಂತ ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

  • ಅಂಧ ಕಲಾವಿದೆಗೆ ಸ್ಥಳದಲ್ಲೇ ಸಿಎಂ ಧನಸಹಾಯ

    ಅಂಧ ಕಲಾವಿದೆಗೆ ಸ್ಥಳದಲ್ಲೇ ಸಿಎಂ ಧನಸಹಾಯ

    ಮೈಸೂರು: ಇಂದು ನಗರದಲ್ಲಿ ನಡೆದ ಸಿಎಂ ಜನತಾ ದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಧ ಕಲಾವಿದೆಯೊಬ್ಬರಿಗೆ ಸ್ಥಳದಲ್ಲೇ ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಆರ್ಕೆಸ್ಟ್ರಾದಲ್ಲಿ ಗಾಯಕಿಯಗಿರುವ ಶೃಂಗೇರಿಯ ಪೂರ್ಣಿಮಾ ಹಾಗೂ ಅವರ ಪತಿ ಕೃಷ್ಣ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ನಗರಕ್ಕೆ ಆಗಮಿಸಿದ್ದರು. ಈ ವೇಳೆ ಪೂರ್ಣಿಮಾ ಅವರು ಆಕೇಸ್ಟ್ರಾದಲ್ಲಿ ಹಾಡಲು ವಾದ್ಯಗಳ ಕೊಳ್ಳಬೇಕಾಗಿದ್ದು ಆರ್ಥಿಕ ಸಹಾಯ ಬೇಕಾಗಿದೆ ಎಂದು ಸಿಎಂಗೆ ಮನವಿ ಮಾಡಿದ್ರು.

    ಮನವಿ ಪತ್ರ ಸ್ವೀಕರಿಸಿದ ಸಿಎಂ ಅವರಿಗೆ 6 ಸಾವಿರ ರೂ. ನಗದು ನೀಡಿ ವಾದ್ಯಗಳನ್ನ ಕೊಳ್ಳುವಂತೆ ತಿಳಿಸಿದ್ರು. ಸಿಎಂರಿಂದ ಹಣ ಪಡೆದ ಅಂಧ ದಂಪತಿ ಸಿಎಂಗೆ ಕೃತಜ್ಞತೆ ಸಲ್ಲಿಸಿದರು. ನಂತರ ಸಾರ್ವಜನಿಕರಿಂದ ಅಹವಾಲುಗಳನ್ನ ಸ್ವೀಕರಿಸಿದ ಸಿದ್ದರಾಮಯ್ಯ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸಾರ್ವಜನಿಕರ ಕೆಲ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಉಳಿದ ಅಹವಾಲುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.