Tag: Janata Curfew

  • ಮಹಾ ರೂಲ್ಸ್ ಪ್ರಕಟಿಸಿದ ಉದ್ಧವ್ ಸರ್ಕಾರದಿಂದ ‘ಮಹಾ’ ಸಹಾಯ

    ಮಹಾ ರೂಲ್ಸ್ ಪ್ರಕಟಿಸಿದ ಉದ್ಧವ್ ಸರ್ಕಾರದಿಂದ ‘ಮಹಾ’ ಸಹಾಯ

    ಮುಂಬೈ: ಕೊರೊನಾ ಹರಡುವಿಕೆ ನಿಯಂತ್ರಣಕ್ಕಾಗಿ ಮಹಾರಾಷ್ಟ್ರ ಸರ್ಕಾರ 15 ದಿನ ಜನತಾ ಕರ್ಫ್ಯೂ ವಿಧಿಸಿದೆ. ಈ ಕಠಿಣ ನಿಯಮಗಳಿಂದ ಶ್ರೀಸಾಮಾನ್ಯರು, ಬಡವರಿಗೆ ತೊಂದರೆ ಆಗದಿರುಲು ಮಹಾ ನೆರವು ಸಹ ಘೋಷಿಸಿದೆ.

    ಜೀವ ಮತ್ತು ಜೀವನ.. ಮಂತ್ರ ಪಠಿಸಿದ ‘ಮಹಾ’ ಅಘಾಡಿ ಸರ್ಕಾರ ಬೀದಿ ಬದಿ ವ್ಯಾಪಾರಿಗಳು, ಮನೆ ಕೆಲಸದವರ ಖಾತೆಗೆ ನಗದು ಪರಿಹಾರ ನೀಡಲು ಮುಂದಾಗಿದೆ. ಬಡ ಕುಟುಂಬಗಳಿಗೆ ಹೆಚ್ಚುವರಿ ಪಡಿತರದ ಜೊತೆ ‘ಶಿವ’ ಭೋಜನ್ ಆರಂಭಿಸಲು ಮುಂದಾಗಿದೆ. ಇದರ ಜೊತೆಗೆ ಆಟೋ ಚಾಲಕರು, ಕೂಲಿ ಕಾರ್ಮಿಕರ ನರೆವಿಗೂ ಸರ್ಕಾರ ಧಾವಿಸಿದೆ.

    ಮಹಾ ನೆರವು: ಕೂಲಿ ಕಾರ್ಮಿಕರು, ಮನೆ ಕೆಲಸದವರ ಖಾತೆಗೆ 1,500 ರೂ. ಜಮೆ ಆಗಲಿದೆ. ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳ ಖಾತೆಗೆ 1500 ರೂ. ಸಿಗಲಿದೆ. ಪ್ರತಿ ಬಡ ಕುಟುಂಬಕ್ಕೂ 3 ಕೆಜಿ ಗೋಧಿ, 2 ಕೆಜಿ ಅಕ್ಕಿ ಸಿಗಲಿದ್ದು, ಶಿವ ಭೋಜನ್ ಅಡಿಯಲ್ಲಿ ಎಲ್ಲರಿಗೂ ಉಚಿತ ತಿಂಡಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಜಿಎಸ್‍ಟಿ ಪಾವತಿಗೆ 3 ತಿಂಗಳು ಕಾಲವಕಾಶ ನೀಡಲಾಗಿದೆ.

    ನಿಯಮಗಳನ್ನ ಪಾಲಿಸಿ ಸಿಎಂ ಮನವಿ: ಇಂದು ರಾತ್ರಿ 8 ಗಂಟೆಯಿಂದ ಏಪ್ರಿಲ್ 30ರವರೆಗೆ ಜನತಾ ಕಫ್ರ್ಯೂ ಇರಲಿದೆ. ರಾಜ್ಯಾದ್ಯಂತ 144 ಸೆಕ್ಷನ್ ಜಾರಿಯಾಗಲಿದೆ. ಇದು ಲಾಕ್‍ಡೌನ್ ಅಲ್ಲ. ಅಗತ್ಯ ವಸ್ತುಗಳನ್ನು ಖರೀದಿಸಲು ಮಾತ್ರ ಮನೆಯಿಂದ ಹೊರಗಡೆ ಬರಬೇಕು. ಭಾರೀ ಸಂಖ್ಯೆಯಲ್ಲಿ ಜನರು ಸೇರುವುದಕ್ಕೆ ನಿರ್ಬಂಧ ಹೇರಲಾಗಿದ್ದು, 4ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಜನರು ಈ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಸಿಎಂ ಉದ್ಧವ್ ಠಾಕ್ರೆ ಮನವಿ ಮಾಡಿದ್ದಾರೆ

    ತುರ್ತು ಸಂದರ್ಭ ಹೊರತು ಪಡಿಸಿ ಅನಗತ್ಯ ಪ್ರಯಾಣವನ್ನು ಕೈಗೊಳ್ಳುವಂತಿಲ್ಲ. ಅಗತ್ಯ ವಸ್ತುಗಳ ಅಂಗಡಿ, ಮೆಡಿಕಲ್, ಬ್ಯಾಂಕು, ಮಾಧ್ಯಮ ಸೇವೆಗಳಿಗೆ ಅನುಮತಿ ನೀಡಲಾಗಿದೆ. ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಅಗತ್ಯ ಸೇವೆಗಳು ಲಭ್ಯವಿರುತ್ತದೆ. ರಾತ್ರಿ 8ರ ಬಳಿಕ ಅಂಗಡಿಗಳನ್ನು ಮುಚ್ಚಬೇಕು ಎಂದು ತಿಳಿಸಿದ್ದಾರೆ.

    ಸ್ಥಳೀಯ ರೈಲುಗಳು ಮತ್ತು ಬಸ್ ಸೇವೆಗಳು ಅಗತ್ಯ ಸೇವೆಗಳಿಗೆ ಮಾತ್ರ ಲಭ್ಯವಿರುತ್ತದೆ. ನಿರ್ಮಾಣ ಕಾಮಗಾರಿ ಕೆಲಸಗಳಿಗೆ ಅನುಮತಿ ನೀಡಲಾಗುತ್ತದೆ. ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳು ತೆರೆಯುವಂತಿಲ್ಲ. ಹೋಮ್ ಡೆಲಿವರಿಗೆ ಅನುಮತಿ ನೀಡಲಾಗಿದೆ.

  • ಹಳ್ಳಿಗಳಿಗೆ ಹೋಗ್ಬೇಡಿ, ವೈರಸ್ ಹಬ್ಬಿಸ್ಬೇಡಿ ಅಂದ್ರೂ ಕೇಳದ ಜನ – ರಾತ್ರಿಯೆಲ್ಲಾ ಬೆಂಗ್ಳೂರು ಖಾಲಿ

    ಹಳ್ಳಿಗಳಿಗೆ ಹೋಗ್ಬೇಡಿ, ವೈರಸ್ ಹಬ್ಬಿಸ್ಬೇಡಿ ಅಂದ್ರೂ ಕೇಳದ ಜನ – ರಾತ್ರಿಯೆಲ್ಲಾ ಬೆಂಗ್ಳೂರು ಖಾಲಿ

    ಬೆಂಗಳೂರು: ಕೊರೊನಾ ತಡೆ ಸಲುವಾಗಿ ಬೆಂಗಳೂರಲ್ಲಿ ನೆಲೆಸಿರುವ ಮಂದಿ ಊರಿಗೆ ಹೋಗಬೇಡಿ ಅಂತ ಸಿಎಂ ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದರು. ಆದರೆ ಸಿಎಂ ಮನವಿಗೆ ಕ್ಯಾರೆ ಅನ್ನದ ಜನ ಯುಗಾದಿ ಹಬ್ಬಕ್ಕೆ ಅಂತ ತಮ್ಮ ತಮ್ಮ ಸ್ವಂತ ವಾಹನಗಳಲ್ಲಿ, ಖಾಸಗಿ ಬಸ್‍ಗಳಲ್ಲಿ ಊರಿಗೆ ಹೋಗಿದ್ದಾರೆ.

    ಬಸ್, ತೂಫಾನ್ ಗಾಡಿಗಳ ಟಾಪ್‍ನಲ್ಲಿ ಕುಳಿತು ಜನ ಪ್ರಯಾಣಿಸಿದ್ದಾರೆ. ಕೆಲವರು ಬೈಕ್‍ನಲ್ಲೇ ಊರಿನತ್ತ ಸಾಗಿದ್ದಾರೆ. ಇದರಿಂದಾಗಿ ನೆಲಮಂಗಲ ಟೋಲ್‍ನಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸೋಮವಾರ ಒಂದೇ ದಿನ ಲಕ್ಷಾಂತರ ಮಂದಿ ಬೆಂಗಳೂರು ತೊರೆದಿದ್ದಾರೆ.

    ರಾಜ್ಯ ಸರ್ಕಾರದಿಂದ ಮಾರ್ಚ್ 31ರವರೆಗೆ ಕರ್ನಾಟಕ ಲಾಕ್‍ಡೌನ್ ಆದೇಶ ಬಿದ್ದ ಬೆನ್ನಲ್ಲೇ ಅನೇಕರು ಬೆಂಗಳೂರು ತೊರೆದಿದ್ದಾರೆ. ಕೆಎಸ್ಆರ್‌ಟಿಸಿ ಬಸ್ ಇಲ್ಲದೇ ಪ್ರಯಾಣಿಕರು ಪರದಾಡಿದರೆ, ಬೆಂಗಳೂರು-ತುಮಕೂರು ಮಾರ್ಗವಾಗಿ ಕಲಬುರಗಿ, ಧಾರವಾಡ, ಹುಬ್ಬಳ್ಳಿ, ಚಿತ್ರದುರ್ಗ ನಾನಾ ಜಿಲ್ಲೆಗೆ ಪ್ರಯಾಣ ಬೆಳೆಸಿದ ಸಿಕ್ಕ-ಸಿಕ್ಕ ವಾಹನ ಏರಿ ಊರಿಗೆ ತೆರಳಿದರು.

    ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್‍ನಲ್ಲಿ ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್ ಇಲ್ಲದಿದ್ರೂ ಪ್ರಯಾಣಿಕರು ಊರಿನತ್ತ ಮುಖ ಮಾಡಿದ್ದರು. ಖಾಸಗಿ ಬಸ್‍ಗಳಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿದ್ದ ಪ್ರಯಾಣಿಕರಿಗೆ ಅನುಕೂಲವಾದರೆ, ಕರ್ಫ್ಯೂ ನಡುವೆ ಕೆಎಸ್ಆರ್‌ಟಿಸಿ ಬಸ್ ನಂಬಿಕೊಂಡು ಬಂದ ಪ್ರಯಾಣಿಕರು ಊರಿಗೆ ಹೋಗಲು ಪರದಾಡಿದರು.

  • ಜನತಾ ಕರ್ಫ್ಯೂ ಇದ್ರೂ ಪುತ್ರನ ನಿಶ್ಚಿತಾರ್ಥ ನೆರವೇರಿಸಿದ ಹೆಬ್ಬಾಳ್ಕರ್

    ಜನತಾ ಕರ್ಫ್ಯೂ ಇದ್ರೂ ಪುತ್ರನ ನಿಶ್ಚಿತಾರ್ಥ ನೆರವೇರಿಸಿದ ಹೆಬ್ಬಾಳ್ಕರ್

    ಬೆಳಗಾವಿ: ಜನತಾ ಕರ್ಫ್ಯೂ ನಡುವೆಯೇ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಪುತ್ರನ ನಿಶ್ಚಿತಾರ್ಥ ಕಾರ್ಯಕ್ರಮ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜನತಾ ಕರ್ಫ್ಯೂಗೆ ಕರೆಕೊಟ್ಟಿದ್ದರು. ಇದಕ್ಕೆ ಎಲ್ಲರೂ ಬೆಂಬಲ ಸೂಚಿಸಿದ್ದರು. ಆದರೆ ಲಕ್ಷ್ಮಿ ಹೆಬಾಳ್ಕರ್ ಅವರು ಮಾತ್ರ ಪುತ್ರ ಮೃನಾಲ್ ಹೆಬ್ಬಾಳ್ಕರ್ ನಿಶ್ಚಿತಾರ್ಥ ನೆರವೇರಿಸಿದ್ದಾರೆ.

    ಬೆಳಗಾವಿಯ ಕುವೆಂಪು ನಗರದ ನಿವಾಸದ ಮುಂಭಾಗದಲ್ಲಿ ಪೆಂಡಾಲ್ ಹಾಕಿ ಪುತ್ರ ಮೃನಾಲ್ ಹಾಗೂ ಭದ್ರಾವತಿ ಶಾಸಕ ಸಂಗಮೇಶ ಪುತ್ರಿ ಜೊತೆಗೆ ಎಂಗೇಜ್‍ಮೆಂಟ್ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಕುಟುಂಬದ ಸದಸ್ಯರು ಸೇರಿ ಆಪ್ತರಿಗೆ ಆಹ್ವಾನ ನೀಡಿದ್ದರು. ಸಮಾರಂಭದಲ್ಲಿ 300ಕ್ಕೂ ಅಧಿಕ ಜನರು ಭಾಗಿಯಾಗಿದ್ದರು ಎನ್ನಲಾಗಿದೆ.

  • ಜನತಾ ಕರ್ಫ್ಯೂಗೆ ಕೈ ನಾಯಕರು ಫುಲ್ ಸೈಲೆಂಟ್

    ಜನತಾ ಕರ್ಫ್ಯೂಗೆ ಕೈ ನಾಯಕರು ಫುಲ್ ಸೈಲೆಂಟ್

    ಬೆಂಗಳೂರು: ಪ್ರಧಾನಿ ಮೋದಿಯವರ ಹೇಳಿಕೆ, ಘೋಷಣೆಗಳಿಗೆ ಕಾಂಗ್ರೆಸ್ ನಾಯಕರ ಕೌಂಟರ್ ಇದ್ದೆ ಇರುತ್ತಿತ್ತು. ಆದರೆ ಜನತಾ ಕರ್ಫ್ಯೂಗೆ ಮಾತ್ರ ರಾಜ್ಯ ಕೈ ನಾಯಕರು ಯಾವುದೇ ತಕರಾರು ಇಲ್ಲದೆ ಸೈಲೆಂಟಾಗಿ ಕರ್ಫ್ಯೂ ಮೊರೆ ಹೋಗಿದ್ದಾರೆ.

    ಹೆಚ್ಚಿನ ರಾಜಕೀಯ ನಾಯಕರುಗಳು ಇರುವ ಸದಾಶಿವ ನಗರದ ನಾಯಕರುಗಳ ನಿವಾಸ ಸದಾ ಜನಜಂಗುಳಿಯಿಂದ ತುಂಬಿ ತುಳುಕುತಿತ್ತು. ಆದರೆ ಇಡೀ ಸದಾಶಿವ ನಗರ ಫುಲ್ ಸೈಲೆಂಟ್ ಆಗಿತ್ತು. ಸದಾಶಿವನಗರದಲ್ಲಿರೋ ಮಾಜಿ ಡಿಸಿಎಂ ಪರಮೇಶ್ಚರ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ನಿವಾಸವು ಜನರಿಲ್ಲದೆ ಬಿಕೋ ಅನ್ನುತ್ತಿತ್ತು.

    ಇನ್ನು ಕುಮಾರ ಪಾರ್ಕ್ ರಸ್ತೆಯಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸವು ಜನರಿಲ್ಲದೆ ಬಿಕೋ ಅನ್ನುತ್ತಿತ್ತು. ಕಾಂಗ್ರೆಸ್ ನ ಯಾವ ನಾಯಕರುಗಳು ಮನೆಯಿಂದ ಹೊರ ಬರಲಿಲ್ಲ. ಯಾರನ್ನು ಭೇಟಿ ಮಾಡದೇ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

  • ಉಪ್ಪಿನಕಾಯಿ- ಹಪ್ಪಳ ಸಂಡಿಗೆ ಮಾಡಿ ಜನತಾ ಕರ್ಫ್ಯೂ ವಿಧಿಸಿಕೊಂಡ ಉಡುಪಿ ಜನ

    ಉಪ್ಪಿನಕಾಯಿ- ಹಪ್ಪಳ ಸಂಡಿಗೆ ಮಾಡಿ ಜನತಾ ಕರ್ಫ್ಯೂ ವಿಧಿಸಿಕೊಂಡ ಉಡುಪಿ ಜನ

    ಉಡುಪಿ: ಕೊರೊನಾ ವಿರುದ್ಧ ಹೋರಾಡುವ ಉದ್ದೇಶದಿಂದ ಜನರೇ ಭಾರತವನ್ನು ಬಂದ್ ಮಾಡಿದ್ದಾರೆ. ಮನೆಯಿಂದ ಹೊರಗೆ ಬಾರದ ಜನ ಏನು ಮಾಡುತ್ತಿದ್ದಾರೆ ಎನ್ನುವುದು ಕುತೂಹಲ ಎಲ್ಲರಲ್ಲೂ ಇದೆ. ಸದಾ ಓಡಾಡುವ ಪುರುಷರು ಮನೆಯಲ್ಲಿದ್ದೇನೆ ಮಾಡ್ತಾರೆ ಎನ್ನುವ ಒಂದು ಯಕ್ಷ ಪ್ರಶ್ನೆಯೂ ಇದೆ. ಮನೆಯಿಂದ ಹೊರಬಾರದ ಜನ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

    ಉಡುಪಿ ನಗರದ ಲಾಲಾ ಲಜಪತ್ರಾಯ್ ರೆಸಿಡೆನ್ಷಿಯಲ್ ರಸ್ತೆಯ ಅಶ್ವಿನಿ ಕಾಮತ್ ಎಂಬವರ ಮನೆ ಮನೆಯಲ್ಲಿ ಇಡೀ ಕುಟುಂಬವೇ ಇತ್ತು. ಗಂಡ-ಹೆಂಡತಿ ಮತ್ತು ಇಬ್ಬರು ಮಕ್ಕಳು ದಿನಪೂರ್ತಿ ಹೊರಗೆ ಬಾರದೆ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಜನತಾ ಕರ್ಫ್ಯೂ ಎಂದು ಮನೆಯೊಳಗೆ ಇದ್ದ ಕುಟುಂಬ ಉಪ್ಪಿನಕಾಯಿ ಹಾಕುವುದರಲ್ಲಿ ಬಿಸಿಯಾಗಿತ್ತು. ಕಫ್ರ್ಯೂ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಮಾವಿನಕಾಯಿ ನಿಂಬೆಹುಳಿ ಮತ್ತಿತರ ವಸ್ತುಗಳನ್ನು ಜೋಡಿಸಿತ್ತು. ಕುಟುಂಬದ ನಾಲ್ವರು ಸದಸ್ಯರು ಮನೆಯಲ್ಲಿದ್ದುಕೊಂಡು ಉಪ್ಪಿನಕಾಯಿ ಹಾಕಿದ್ದಾರೆ. ಅಶ್ವಿನಿ ಕಾಮತ್ ಅವರ ಮಗ ಬೆಂಗಳೂರಿನಲ್ಲಿ ಎಂಬಿಎ ಪದವಿ ಮಾಡುತ್ತಿದ್ದು, ಸದ್ಯ ರಜೆ ಘೋಷಿಸಿರುವುದರಿಂದ ಉಡುಪಿಗೆ ಬಂದಿದ್ದಾರೆ. ರಜೆ ಮುಗಿಸಿ ಬೆಂಗಳೂರಿಗೆ ಹೋಗುವಾಗ ಮಗನಿಗೆ ಚಟ್ನಿಪುಡಿ ಉಪ್ಪಿನಕಾಯಿ ಗೊಜ್ಜು, ಸಾಂಬಾರು ಹುಡಿ ಸಾರು ಹುಡಿ ತಯಾರು ಮಾಡುವುದರಲ್ಲಿ ತಂಗಿ, ತಂದೆ ಮತ್ತು ತಾಯಿ ತೊಡಗಿಸಿಕೊಂಡಿದ್ದರು. ಜನತಾ ಕರ್ಫ್ಯೂ ನಿಂದ ಕೊರೊನಾ ವಿರುದ್ಧ ಒಂದು ಕಡೆಯಿಂದ ಜನ ಜಾಗೃತಿಯಾದರೆ ಇಡೀ ಕುಟುಂಬ ಮನೆಯಲ್ಲಿ ಇದ್ದು ಒಂದು ದಿನ ಕಳೆಯುವುದಕ್ಕೆ ಈ ಭಾನುವಾರ ಅವಕಾಶ ಆಯಿತು.

    ಪಣಿಯಾಡಿ ನಾಗರತ್ನ ಅವರ ಮನೆಯಲ್ಲಿ ನಾಲ್ಕೈದು ಗೃಹಿಣಿಯರು ಸೇರಿ ಹಪ್ಪಳ ಮತ್ತು ಸಂಡಿಗೆಯನ್ನ ತಯಾರು ಮಾಡುತ್ತಿದ್ದರು. ಸಂಬಂಧಿಕರೇ ಆಗಿರುವ ಮೂರ್ನಾಲ್ಕು ಮಂದಿ ಜೊತೆ ಸೇರಿಕೊಂಡು ಮುಂದಿನ ಮಳೆಗಾಲಕ್ಕೆ ಬೇಕಾದ ಹಪ್ಪಳ ಮತ್ತು ಸಂಡಿಗೆಯನ್ನು ಸಿದ್ಧಪಡಿಸುವ ಪ್ಲಾನ್ ಅನ್ನು ಶನಿವಾರ ಮಾಡಿಕೊಂಡಿದ್ದರು. ಬೆಳಗ್ಗೆದ್ದು ಇದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿದ್ದರು. ಬಿಸಿಲು ಏರುತ್ತಿದ್ದಂತೆ ತಮ್ಮ ಟೆರೇಸ್ ಮೇಲೆ ಹಪ್ಪಳ ಸೆಂಡಿಗೆ ಇಟ್ಟರು. ಮನೆಯ ಮಕ್ಕಳು ಕೂಡ ತಂದೆ ತಾಯಿಗೆ ಸಹಕಾರ ನೀಡಿದರು.

    ಪ್ರಧಾನಿ ಮೋದಿ ಘೋಷಿಸಿರುವ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಜನ ಹೊರಗೆ ಬರಲಿಲ್ಲ. ಹಾಗಂತ ದಿನವನ್ನು ಸಂಪೂರ್ಣ ಸುಖಾಸುಮ್ಮನೆ ಕಳೆಯದೆ, ಕುಟುಂಬದ ಜೊತೆ ದಿನಪೂರ್ತಿ ಬೆರೆಯಲು ಉಪಯೋಗ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟರೆ ಏನೆಲ್ಲ ಕ್ರಮಗಳನ್ನು ಮಾಡಬಹುದು ಎಂಬುದಕ್ಕೆ ಈ ಭಾನುವಾರ ಸಾಕಷ್ಟು ಮಂದಿಗೆ ಪರೋಕ್ಷವಾಗಿ ಪಾಠ ಕಲಿಸಿದೆ. ಎಂತಹ ವಿಷಮ ಸ್ಥಿತಿ ಬಂದರೂ ಹತಾಶರಾಗದೆ ತಮ್ಮ ಕುಟುಂಬವನ್ನು ಸಮಸ್ಯೆಗಳಿಂದ, ಕರೋನಾ ವೈರಸ್ ನಿಂದ ಹೇಗೆ ದೂರ ಇಡಬಹುದು ಎಂಬ ಬಗ್ಗೆಯೂ ಹಲವಷ್ಟು ಕುಟುಂಬ ಸದಸ್ಯರು ಕೂತು ಚರ್ಚೆ ಮಾಡಿದ್ದಾರೆ.

  • ಸಮುದ್ರದಲ್ಲಿ ಅಡುಗೆ ಮಾಡಿ ಜನತಾ ಕರ್ಫ್ಯೂಗೆ ಬೆಂಬಲಿಸಿದ ಮಲ್ಪೆ ಮೀನುಗಾರರು

    ಉಡುಪಿ: ಭೂಮಿಯ ಮೇಲೆ ವಾಸಿಸುವವರು ಜನತಾ ಕರ್ಫ್ಯೂಗೆ ಫುಲ್ ಸಪೋರ್ಟ್ ಮಾಡಿದ್ದಾರೆ. ಸಮುದ್ರವನ್ನೇ ಮನೆ ಮಾಡಿಕೊಂಡವರು ಕೂಡ ತಮ್ಮ ಕಸುಬು ಬಂದ್ ಮಾಡಿ ಕೊರೊನಾ ವಿರುದ್ಧ ಸಮರ ಸಾರಿದ್ದಾರೆ.

    ಉಡುಪಿ ಸಂಪೂರ್ಣ ಬಂದ್ ಆಗಿರುವುದರಿಂದ ಸಾರ್ವಜನಿಕರು ಹೋಟೆಲ್ ಅಂಗಡಿಗಳು ಇಲ್ಲದೆ ಬೆರಳೆಣಿಕೆಯ ಜನ ಸಮಸ್ಯೆಗಳನ್ನು ಎದುರಿಸಿದರು. ಹೇಗೋ ಮಾಡಿ ಬೆಳಗಿನ ತಿಂಡಿ ಮಧ್ಯಾಹ್ನದ ಊಟವನ್ನು ಪೂರೈಸಿದ್ದಾರೆ. ಆದರೆ ಹೋಟೆಲ್ ಅಂಗಡಿಗಳು ಇಲ್ಲದೆ ಸಮುದ್ರದಲ್ಲಿ ಕಸುಬು ಮಾಡುವವರು ಏನು ಮಾಡಬೇಕು. ಮೀನುಗಾರಿಕೆ ಮಾಡುವವರು ಭಾನುವಾರವನ್ನು ಸಂಪೂರ್ಣವಾಗಿ ಸಮುದ್ರದಲ್ಲಿ ದೋಣಿ ಒಳಗೆ ಕಳೆದಿದ್ದಾರೆ.

    ಬೆಳಗ್ಗೆಯಿಂದಲೇ ತಮ್ಮ ತಿಂಡಿ ಊಟ, ನಿದ್ದೆ, ಬಲೆಯನ್ನು ಹೆಣೆಯುವುದೂ ಎಲ್ಲವನ್ನು ದೋಣಿಯಲ್ಲೇ ಪೂರೈಸಿದ್ದಾರೆ. ಅರಬ್ಬಿ ಸಮುದ್ರದ ನೀರಿನಲ್ಲೇ ಭಾನುವರ ಕಳೆದ ಕಡಲ ಮಕ್ಕಳು ಪ್ರಧಾನಿ ಮೋದಿ ಕರೆಗೆ ಬೆಂಬಲ ಕೊಟ್ಟಿದ್ದಾರೆ.

    ದೋಣಿಯೊಳಗೆ ಅಡುಗೆ ಮಾಡುತ್ತಿದ್ದ ದಿವಾಕರ್ ಕಾರ್ವಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದರು. ಇವತ್ತು ಬಂದ್ ಇರುತ್ತದೆ ಎಂದು ನಮಗೆ ಮೊದಲೇ ಮಾಹಿತಿ ಇತ್ತು. ಹಾಗಾಗಿ ನಾವು ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೆವು. ನಾವು ಮೀನುಗಾರಿಕೆಗೆ ಪಶ್ಚಿಮಕ್ಕೆ ಹೋಗುವಾಗ ಹತ್ತು ಹದಿನೈದು ದಿವಸದ ಎಲ್ಲ ತಯಾರಿಗಳನ್ನು ಮಾಡಿಕೊಂಡೆ ಹೋಗುತ್ತೇವೆ. ಸಮುದ್ರದ ನಡುವೆ ಅಡುಗೆ ಮಾಡಿ ಜೊತೆಗೆ ಕಸುವು ಮಾಡುತ್ತೇವೆ. ಆದರೆ ಈ ಭಾನುವಾರ ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ ಬೋಟಿನ ಒಳಗೆ ಅಡುಗೆ ಮಾಡಿ ದಿನವನ್ನು ಕಳೆದೆವು ಎಂದು ಹೇಳಿದರು.

    ಸದಾ ಗಿಜಿಗುಡುತ್ತಿರುವ ನೂರಾರು ಸಂಖ್ಯೆಯಲ್ಲಿ ಜನರು ಓಡಾಡುತ್ತಿರುವ ಮಲ್ಪೆ ಬಂದರು ಇವತ್ತು ಬಿಕೋ ಅನ್ನುತ್ತಿತ್ತು. ಮೀನುಗಳನ್ನು ಹೊರ ತಾಲೂಕು ಹೊರರಾಜ್ಯ ಜಿಲ್ಲೆಗಳಿಗೆ ಸಾಗಿಸುವ ಲಾರಿಗಳು ಬಂದರಿನಲ್ಲೇ ನಿಂತಿದ್ದವು. ಬಂದರಿನ ಒಳಗಿನ ಅಂಗಡಿಗಳು ಮಲ್ಪೆ ವ್ಯಾಪ್ತಿಯ ಎಲ್ಲ ವ್ಯಾಪಾರ ವಹಿವಾಟುಗಳು ಎಂದು ನಡೆಯಲಿಲ್ಲ.

  • ಜನತಾ ಕರ್ಫ್ಯೂ ವಿರೋಧಿಸಿ ಮನೆ ಹೊರಗೆ ಕೂತ ವಾಟಾಳ್ – ಬುದ್ಧಿ ಹೇಳಿದ ದಾರಿ ಹೋಕ

    ಜನತಾ ಕರ್ಫ್ಯೂ ವಿರೋಧಿಸಿ ಮನೆ ಹೊರಗೆ ಕೂತ ವಾಟಾಳ್ – ಬುದ್ಧಿ ಹೇಳಿದ ದಾರಿ ಹೋಕ

    ಬೆಂಗಳೂರು: ಇಡೀ ವಿಶ್ವವೇ ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸಕ್ಕೆ ಆತಂಕಕ್ಕೊಳಗಾಗಿದೆ. ಇತ್ತ ಭಾರತದಲ್ಲೂ ಹರಡುತ್ತಿರುವ ಕೊರೊನಾ ವೈರಸ್ ಸೋಂಕಿಗೆ ಕಡಿವಾಣ ದೇಶಾದ್ಯಂತ ‘ಜತನಾ ಕರ್ಫ್ಯೂ’ ಜಾರಿಯಾಗಿದೆ. ಇದಕ್ಕೇ ರಾಜ್ಯದ ಜನತೆ ಕೂಡ ಸಾಥ್ ಕೊಟ್ಟಿದ್ದಾರೆ. ಆದ್ರೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ.

    ತಮ್ಮ ಮನೆ ಗೇಟ್ ಮುಂದೆ ಖುರ್ಚಿ ಹಾಕಿಕೊಂಡು ಕುಳಿತು, ನಾನು ಮನೆ ಒಳಗೆ ಇರಲ್ಲ ಹೊರಗೆ ಇರ್ತಿನಿ ಎಂದು ಮುಖಕ್ಕೆ ಮಾಸ್ಕ್ ಧರಿಸಿ ವಾಟಾಳ್ ಕುಳಿತ್ತಿದ್ದಾರೆ. ಇದನ್ನು ನೋಡಿದ ದಾರಿ ಹೋಕರೊಬ್ಬರು ಜನತಾ ಕರ್ಫ್ಯೂ ಮಹತ್ವವನ್ನು ತಿಳಿಸಿ ವಾಟಾಳ್ ನಾಗರಾಜ್‍ಗೆ ಬುದ್ದಿ ಹೇಳಿದ್ದಾರೆ. ಈ ವೇಳೆ ತಮಗೆ ಬುದ್ಧಿ ಹೇಳಿದ ವ್ಯಕ್ತಿಗೆ ವಾಟಾಳ್ ನಾಗರಾಜ್ ವಾಪಾಸ್ ಬುದ್ದಿ ಹೇಳಿ ಕಳುಹಿಸಿದ್ದಾರೆ.

    ಜನತಾ ಕರ್ಫ್ಯೂಗೆ ಮನೆ ಹೊರಗಡೆ ಇದ್ದೇ ಸಪೋರ್ಟ್ ಮಾಡುತ್ತೇನೆ. ಮನೆ ಒಳಗೆ ಇರಲ್ಲ, ಹೊರಗೆ ಇರುತ್ತೇನೆ. ಇಗಲೂ ಮನೆ ಹೊರಗಿದ್ದೇನೆ. ಕೆಲವೇ ಕ್ಷಣಗಳಲ್ಲಿ ನಾನು ಬೀದಿಗೆ ಹೋಗುತ್ತೇನೆ. ಈ ಕರ್ಫ್ಯೂ ಬೇಕಿರಲಿಲ್ಲ ಬದಲಿಗೆ ಸ್ವಚ್ಛತಾ ದಿನ ಮಾಡಬೇಕಿತ್ತು. ಹೀಗೆ ಕರ್ಫ್ಯೂ ಘೋಷಿಸಿ ಜನರಲ್ಲಿ ಭಯದ ವಾತಾವರಣ ಮೂಡಿಸಲಾಗ್ತಿದೆ ಎಂದು ವಾಟಾಳ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

  • ಜನತಾ ಕರ್ಫ್ಯೂ ನಡುವೆ 100 ರೂ.ಗೊಂದು ಕೋಳಿ- ಫಾರ್ಮ್‍ಗೆ ನುಗ್ಗಿ ಕೋಳಿ ಖರೀದಿ

    ಜನತಾ ಕರ್ಫ್ಯೂ ನಡುವೆ 100 ರೂ.ಗೊಂದು ಕೋಳಿ- ಫಾರ್ಮ್‍ಗೆ ನುಗ್ಗಿ ಕೋಳಿ ಖರೀದಿ

    -ಪೊಲೀಸರನ್ನು ಕಂಡು ಜನರು ಪರಾರಿ

    ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ಮನವಿಯ ಜನತಾ ಕರ್ಫ್ಯೂವನ್ನೇ ಬಂಡವಾಳ ಮಾಡಿಕೊಂಡ ಕೋಳಿ ಫಾರಂ ಮಾಲೀಕನೊಬ್ಬ ಇತ್ತೀಚೆಗೆ ಕೊರೊನಾದಿಂದ ಬಿಕರಿಯಾಗದೆ ಉಳಿದ ಕೋಳಿಗಳ ಮಾರಾಟಕ್ಕೆ ಮುಂದಾಗಿದ್ದಾನೆ.

    ಒಂದು ಕೋಳಿಗೆ 100 ರೂ.ಯಂತೆ ಮಾರಾಟ ಮಾಡಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ನಕ್ಕಲ ಬಚ್ಚಹಳ್ಳಿ ಬಳಿ ನಡೆಯಿತು. ಕೊರೊನಾದಿಂದಾಗಿ ಇತ್ತೀಚೆಗೆ ಬಾಯಲರ್ ಕೋಳಿಗಳನ್ನು ಯಾರೂ ಕೊಳ್ಳದೇ ನೂರಾರು ಕೋಳಿ ಫಾರ್ಮ್‍ಗಳಲ್ಲೇ ಕೋಳಿಗಳು ನರಳುವಂತಾಗಿತ್ತು. ಇದರಿಂದ ಬೇಸತ್ತ ಕೋಳಿ ಫಾರ್ಮ್ ಮಾಲೀಕರು 100 ರೂ.ಗೊಂದು ಕೋಳಿ ಎಂದು ಘೋಷಣೆ ಮಾಡಿದ್ದಾನೆ.

    ಮಾಲೀಕ ಘೋಷಣೆ ಮಾಡಿದ್ದೇ ತಡ ಜನ ಮರಳೋ ಜಾತ್ರೆ ಮರಳೋ ಎನ್ನುವ ಲೆಕ್ಕದಲ್ಲಿ ಕೋಳಿ ಫಾರ್ಮ್‍ಗೆ ನುಗ್ಗಿದ ಜನ 100ರೂ.ಗೊಂದರಂತೆ ತಮಗೆ ಬೇಕಾದಷ್ಟು ಕೋಳಿಗಳನ್ನ ಬಾಚಿಕೊಂಡು ಹೋದರು. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ 144 ಸೆಕ್ಷೆನ್ ಜಾರಿ ಮಾಡಲಾಗಿದ್ದು ಹಾಗೂ ಜನತಾ ಕರ್ಫ್ಯೂ ನಡುವೆ ಜನ ಜಮಾಯಿಸಿದ್ದರು.

    ಇದನ್ನು ತಿಳಿದ ನಂದಿಗಿರಿಧಾಮದ ಪೊಲೀಸರು ಕೋಳಿ ಫಾರ್ಮ್ ಬಳಿ ಬಂದು ಜಮಾಯಿಸಿದ್ದ ಜನರನ್ನು ಚದರಿಸಿದರು. ಕೋಳಿ ಫಾರ್ಮ್ ಮಾಲೀಕರಿಗೆ ಕೋಳಿ ಮಾರಾಟ ಮಾಡದಂತೆ ಎಚ್ಚರಿಸಿದರು. ಇದರಿಂದ ಪೊಲೀಸರನ್ನು ಕಂಡ ಜನ ಎದ್ನೋಬಿದ್ನೋ ಎಂದು ಬೈಕ್ ಏರಿ ಪರಾರಿಯಾದರು.

  • ಜನತಾ ಕರ್ಫ್ಯೂಗೆ ಚಾಮರಾಜನಗರದಲ್ಲಿ ಬೆಂಬಲ- ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ ಮಾದಪ್ಪನ ಸನ್ನಿಧಿ

    ಜನತಾ ಕರ್ಫ್ಯೂಗೆ ಚಾಮರಾಜನಗರದಲ್ಲಿ ಬೆಂಬಲ- ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ ಮಾದಪ್ಪನ ಸನ್ನಿಧಿ

    ಚಾಮರಾಜನಗರ: ಕೊರೊನಾ ಹರಡುವುದನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಗಡಿನಾಡು ಚಾಮರಾಜನಗರದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಎಲ್ಲ ವರ್ಗದ ಜನತೆ ಬೆಂಬಲ ವ್ಯಕ್ತಪಡಿಸಿದ್ದು ಇಡೀ ಚಾಮರಾನಗರ ಬಹುತೇಕ ಸ್ತಬ್ಧವಾಗಿದೆ. ಅಂಗಡಿಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿವೆ. ಹೋಟೆಲ್ ಗಳು ಮುಚ್ಚಿವೆ. ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದ್ದು ಬಸ್ ಕೆಎಸ್‍ನಿಲ್ದಾಣ ಬಿಕೋ ಎನ್ನುತ್ತಿದೆ.

    ಇನ್ನೊಂದೆಡೆ ಚಾಮರಾಜನಗರದಿಂದ ಹೊರಡುವ ಎಲ್ಲಾ ಆರು ರೈಲುಗಳನ್ನು ರದ್ದುಪಡಿಸಲಾಗಿದ್ದು, ರೈಲು ನಿಲ್ದಾಣವೂ ಬಿಕೋ ಎನ್ನುತ್ತಿದೆ. ಆಟೋಗಳು ಸಹ ರಸ್ತೆಗಿಳಿದಿಲ್ಲ. ಎಪಿಎಂಸಿ ಮಾರುಕಟ್ಟೆಯಲ್ಲಿ ಕೂಡ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಒಟ್ಟಾರೆ ಬಹುತೇಕ ಎಲ್ಲ ವರ್ಗದ ಜನತೆ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಕೊರೊನಾ ಹರಡುವುದನ್ನು ತಡೆಗಟ್ಟುವುದಕ್ಕೆ ಸಹಕಾರ ನೀಡಿದ್ದಾರೆ.

    ಬಿಕೋ ಎನ್ನುತ್ತಿದೆ ಮಾದಪ್ಪನ ಸನ್ನಿಧಿ:
    ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರಬೆಟ್ಟ ಸಂಪೂರ್ಣ ಸ್ತಬ್ಧವಾಗಿದೆ. ಸದಾ ಸಾವಿರಾರು ಭಕ್ತರಿಂದ ತುಂಬಿ ತುಳುಕುತ್ತಿದ್ದ ಮಾದಪ್ಪನ ಸನ್ನಿಧಿ ಇಂದು ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ. ಮಲೆಮಹದೇಶ್ಚರನ ದರ್ಶನಕ್ಕೆ ರಾಜ್ಯದ ನಾನಾ ಮೂಲೆಗಳಿಂದ ಹಾಗೂ ನೆರೆಯ ತಮಿಳುನಾಡಿನಿಂದ ನಿತ್ಯ ಸಾವಿರಾರು ಭಕ್ತರು ಬರುತ್ತಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಕರೆನೀಡಿರುವ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಯಾವುದೇ ಭಕ್ತರು ಮಹದೇಶ್ವರ ಬೆಟ್ಟದತ್ತ ಸುಳಿದಿಲ್ಲ.

    ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹದೇಶ್ವರ ದೇವಾಲಯ ಬಂದ್ ಆಗಿದ್ದು ದೇವಾಲಯದ ಪ್ರಮುಖ ದ್ವಾರಗಳಿಗೆ ಬೀಗ ಹಾಕಲಾಗಿದೆ. ಜನತಾ ಕರ್ಫ್ಯೂಗೆ ಮಹದೇಶ್ವರನ ಬೆಟ್ಟದಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

  • ಹಾಸನದಲ್ಲಿ ನವಜೋಡಿಯಿಂದ ಜನತಾ ಕರ್ಫ್ಯೂಗೆ ಜೈ

    ಹಾಸನದಲ್ಲಿ ನವಜೋಡಿಯಿಂದ ಜನತಾ ಕರ್ಫ್ಯೂಗೆ ಜೈ

    ಹಾಸನ: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಇಂದು ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡುತ್ತಿರುವ ನವ ಜೋಡಿ ಕೂಡ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

    ಹಾಸನದಲ್ಲಿ ನಿಗದಿಯಂತೆ ಮದುವೆಗಳು ನಡೆಯುತ್ತಿದ್ದರು ಕೂಡ ನೂರಕ್ಕಿಂತ ಕಡಿಮೆ ಜನರನ್ನು ಸೇರಿಸಿ ಮದುವೆ ಮಾಡಿಕೊಳ್ಳುತ್ತಿದ್ದಾರೆ.

    ಈ ಬಗ್ಗೆ ಮಾತನಾಡಿರುವ ನವಜೋಡಿ ಭೂಮೇಶ್ ಮತ್ತು ಹರಿಣಾಕ್ಷಿ ಎಂಬವರು, ಮದುವೆ ಮೊದಲೇ ನಿಗದಿಯಾಗಿದ್ದರಿಂದ ಇಂದು ಮದುವೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನಮ್ಮ ಆರೋಗ್ಯದ ದೃಷ್ಟಿಯಿಂದ ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ಅವರಿಗೆ ಬೆಂಬಲ ಸೂಚಿಸಲು ತೀರ ಹತ್ತಿರದ ಸಂಬಂಧಿಕರನ್ನು ಬಿಟ್ಟು ಬೇರೆ ಯಾರನ್ನು ಮದುವೆಗೆ ಬರಬೇಡಿ ಎಂದು ಮನವಿ ಮಾಡಿದ್ದೇವೆ. ಹೀಗಾಗಿ ಸಾವಿರಾರು ಜನ ಸೇರುವ ಕಡೆ ಕೇವಲ ನೂರಕ್ಕೂ ಕಡಿಮೆ ಜನರ ಸಮ್ಮುಖದಲ್ಲಿ ನಮ್ಮ ಮದುವೆಯಾಗುತ್ತಿದೆ ಎಂದು ಹೇಳೀದ್ದಾರೆ.

    ಇನ್ನೂ ಕೆಲವು ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ ಎಂಟು ಗಂಟೆಯೊಳಗೆ ಮದುವೆ ಮುಗಿಸಿ ಮೋದಿಗೆ ಮನವಿಗೆ ಜೈ ಎಂದಿದ್ದಾರೆ.