Tag: Janasena

  • ದಿನದ ಲೆಕ್ಕದಲ್ಲಿ ತಮ್ಮ ಸಂಭಾವನೆ ಬಹಿರಂಗ ಪಡಿಸಿದ ನಟ ಪವನ್ ಕಲ್ಯಾಣ್

    ದಿನದ ಲೆಕ್ಕದಲ್ಲಿ ತಮ್ಮ ಸಂಭಾವನೆ ಬಹಿರಂಗ ಪಡಿಸಿದ ನಟ ಪವನ್ ಕಲ್ಯಾಣ್

    ಕ್ಷಿಣ ಸಿನಿಮಾ ರಂಗದಲ್ಲಿ ಅತೀ ಹೆಚ್ಚು ಸಂಭಾವನೆ (Remuneration) ಪಡೆಯುವ ನಟರ ಪಟ್ಟಿಯಲ್ಲಿ ತಮಿಳು ಮತ್ತು ತೆಲುಗು (Telugu) ನಟರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಚಿತ್ರವೊಂದಕ್ಕೆ  ಕನಿಷ್ಠ ಹತ್ತು ಕೋಟಿಯಿಂದ ಗರಿಷ್ಠ ನೂರು ಕೋಟಿ ರೂಪಾಯಿ ಸಂಭಾವನೆ ಪಡೆಯುವ ನಟರು ಅಲ್ಲಿದ್ದಾರೆ. ಹಾಗಾಗಿ ಸಂಭಾವನೆ ವಿಚಾರ ಬಂದರೆ ರಜನಿಕಾಂತ್, ಕಮಲ್ ಹಾಸನ್, ದಳಪತಿ ವಿಜಯ್, ಪವನ್ ಕಲ್ಯಾಣ್ (Pawan Kalyan) , ಚಿರಂಜೀವಿ, ಜ್ಯೂನಿಯರ್ ಎನ್.ಟಿ.ಆರ್ ಹೀಗೆ ಪ್ರಮುಖ ನಟರ ಹೆಸರು ಕೇಳಿ ಬರುತ್ತವೆ. ಇವರ ಸಂಭಾವನೆ ವಿಚಾರ ನಾನಾ ರೀತಿಯಲ್ಲೂ ಚರ್ಚೆ ಆಗಿದ್ದಿದೆ. ಆದರೆ, ಈವರೆಗೂ ಅಧಿಕೃತವಾಗಿ ಯಾರೂ ತಮ್ಮ ಸಂಭಾವನೆ ಬಗ್ಗೆ ಮಾತನಾಡಿರಲಿಲ್ಲ.

    ಇದೇ ಮೊದಲ ಬಾರಿಗೆ ಪವನ್ ಕಲ್ಯಾಣ್ ಅಧಿಕೃತವಾಗಿ ತಮ್ಮ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ತಾವು ಚಿತ್ರವೊಂದಕ್ಕೆ ಎಷ್ಟು ಸಂಭಾವನೆ ಪಡೆಯುತ್ತೇನೆ ಮತ್ತು ಎಷ್ಟು ದಿನ ಕಾಲ್ ಶೀಟ್ ನೀಡುತ್ತೇನೆ ಎನ್ನುವ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಜನಸೇನಾ ಪಕ್ಷದ 10ನೇ ವರ್ಷದ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ತಮ್ಮ ಸಂಭಾವನೆ ಎಷ್ಟು ಮತ್ತು ಹೇಗೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ಇದನ್ನೂ ಓದಿ: ಡಾಲಿ ನಟನೆಯ `ಹೊಯ್ಸಳ’ ಚಿತ್ರದ ಟೈಟಲ್ ಬದಲಾಗಿದ್ದೇಕೆ?

    ಪವನ್ ಕಲ್ಯಾಣ್ ಜನಸೇನಾ (Janasena) ಪಕ್ಷ ಕಟ್ಟಿದಾಗಿನಿಂದ ಅವರ ಸಂಭಾವನೆ ವಿಚಾರವಾಗಿ ವಿರೋಧಿಗಳು ಮಾತನಾಡುತ್ತಲೇ ಇದ್ದರು. ಅಭಿಮಾನಿಗಳನ್ನು ದುರುಪಯೋಗ ಪಡಿಸಿಕೊಂಡು ಪಕ್ಷ ಕಟ್ಟುತ್ತಿದ್ದಾರೆ. ಆ ಪಕ್ಷದ ಹಿಂದೆ ಹಣ ಮಾಡುವ ಉದ್ದೇಶವಿದೆ ಎಂದು ಟೀಕೆ ಮಾಡಿದ್ದೂ ಇದೆ. ಅದೆಲ್ಲದಕ್ಕೂ ಉತ್ತರ ನೀಡಿರುವ ಪವನ್ ಕಲ್ಯಾಣ್, ‘ನನಗೆ ದುಡ್ಡಿನ ಚಿಂತೆ ಇಲ್ಲ. ನಾನು ದುಡ್ಡು ಮಾಡುವುದಕ್ಕೂ ಬಂದಿಲ್ಲ. ಸಿನಿಮಾ ಒಪ್ಪಿಕೊಂಡರೆ ದಿನಕ್ಕೆ 2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತೇನೆ. ಒಂದು ಚಿತ್ರಕ್ಕೆ 22 ದಿನಗಳ ಕಾಲ್ ಶೀಟ್ ಕೊಡುವೆ. 44 ಕೋಟಿ ರೂಪಾಯಿ ಬರುತ್ತದೆ. ಊಟ ಮಾಡುವುದೇ ದಿನಕ್ಕೆ ಒಂದೇ ಸಲ’ ಎಂದು ಭಾವುಕರಾಗಿ ಮಾತನಾಡಿದ್ದಾರೆ.

    ತಮ್ಮ ಭಾಷಣದಲ್ಲಿ ಸಂಭಾವನೆಯ ವಿಚಾರವಷ್ಟೇ ಅಲ್ಲ, ತಾವು ಚಿತ್ರಕ್ಕೆ ಕೊಡುವ ಡೇಟ್ ಬಗ್ಗೆಯೂ ಮಾಹಿತಿಯನ್ನು ಹೊರ ಹಾಕಿದ್ದಾರೆ. ಕೋಟಿ ಕೋಟಿ ಸಂಪಾದನೆಯನ್ನು ಸಿನಿಮಾದಲ್ಲೇ ಮಾಡುತ್ತೇನೆ. ಅದಕ್ಕೆ ರಾಜಕೀಯಕ್ಕೆ ಬರಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಜನಸೇವೆಗೆ ತಾವು ಜನಸೇನಾ ಪಕ್ಷ ಕಟ್ಟಿರುವುದಾಗಿಯೂ ತಿಳಿಸಿದ್ದಾರೆ.

  • ಕಮಲದ ಕೈಹಿಡಿದ ಪವನ್ ಕಲ್ಯಾಣ್- ಆಂಧ್ರ ಮೈತ್ರಿಯ ಸೂತ್ರಧಾರ ಪ್ರಭಾವಿ ಕನ್ನಡಿಗ!

    ಕಮಲದ ಕೈಹಿಡಿದ ಪವನ್ ಕಲ್ಯಾಣ್- ಆಂಧ್ರ ಮೈತ್ರಿಯ ಸೂತ್ರಧಾರ ಪ್ರಭಾವಿ ಕನ್ನಡಿಗ!

    ನವದೆಹಲಿ: ನಟ, ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಆಂಧ್ರಪ್ರದೇಶದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಆಂಧ್ರ ಪ್ರದೇಶದಲ್ಲಿ ಬಿಜೆಪಿಯನ್ನು ಅರಳಿಸಲು ಮುಂದಾಗಿರುವ ನಾಯಕರು ಜನಸೇನಾದೊಂದಿಗೆ ಮೈತ್ರಿಗೆ ಮುಂದಾಗಿದ್ದು, ಈ ಮೈತ್ರಿಯಲ್ಲಿ ಕನ್ನಡಿಗ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಬಿ.ಎಲ್.ಸಂತೋಷ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

    ಪವನ್ ಕಲ್ಯಾಣ್, ಕಮಲ ಮೈತ್ರಿಯ ಪ್ರಮುಖ ಸೂತ್ರಧಾರ ಬಿ.ಎಲ್.ಸಂತೋಷ್ ಎನ್ನಲಾಗಿದ್ದು, ಇಂದು ಪವನ್ ಹಾಗೂ ಸಂತೋಷ್ ಅವರು ಮೈತ್ರಿಯ ಅಂತಿಮ ಮಾತುಕತೆ ನಡೆಸಿ ಅಧಿಕೃತವಾಗಿ ಘೋಷಣೆ ಮಾಡಿದರು. ಬಿಜೆಪಿಗೆ ನೆಲೆ ಇಲ್ಲದ ಆಂಧ್ರದಲ್ಲಿ ಸಂತೋಷ್ ಮಾಸ್ಟರ್ ಪ್ಲ್ಯಾನ್ ವರ್ಕ್ ಆಗುತ್ತಾ ಎಂಬ ಕುತೂಹಲ ಮೂಡಿಸಿದ್ದು, ಆಂಧ್ರದ ಮುಂದಿನ ಸಿಎಂ ಪವನ್ ಕಲ್ಯಾಣ್ ಆಗುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

    ಮೈತ್ರಿ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ಪವನ್ ಕಲ್ಯಾಣ್ ಅವರು, ಆಂಧ್ರ ಪ್ರದೇಶದ ಭವಿಷ್ಯಕ್ಕಾಗಿ ಎರಡು ಪಕ್ಷಗಳು ಯಾವುದೇ ಷರತ್ತುಗಳಿಲ್ಲದೆ ಮೈತ್ರಿ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದೊಂದಿಗೆ ಜನಸೇನಾ ಪಕ್ಷ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಆಂಧ್ರಪ್ರದೇಶ ಸ್ಥಳೀಯ ಹಾಗೂ 2024ರ ವಿಧಾನಸಭೆ ಚುನಾವಣೆಯಲ್ಲಿ ಎರಡು ಪಕ್ಷಗಳು ಮೈತ್ರಿಯೊಂದಿಗೆ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ.

    ನಟ ಪವನ್ ಕಲ್ಯಾಣ್ ಅವರು 2014ರಲ್ಲಿ ಜನಸೇನಾ ಪಕ್ಷವನ್ನು ಸ್ಥಾಪಿಸಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಜನಸೇನಾ ಸ್ಪರ್ಧೆ ನಡೆಸಿರಲಿಲ್ಲ. ಆದರೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಟಿಡಿಪಿ ಮೈತ್ರಿಗೆ ಬೆಂಬಲ ನೀಡಿದ್ದರು. ಪಕ್ಷ ಸ್ಥಾಪನೆಗೂ ಮುನ್ನ ಸಹೋದರ, ನಟ ಚಿರಂಜೀವಿ ಅವರ ಪ್ರಜಾರಾಜ್ಯಂ ಪಕ್ಷದ ಪರ ರಾಜಕೀಯದಲ್ಲಿ ಭಾಗವಹಿಸಿದ್ದರು. ಆದರೆ ಆ ಪಕ್ಷ ಕಾಂಗ್ರೆಸ್‍ನೊಂದಿಗೆ ವಿಲೀನರಾದ ಬಳಿಕ ಜನಸೇನಾ ಪಕ್ಷವನ್ನು ಸ್ಥಾಪಿಸಿದ್ದರು.

    2019ರ ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ ಮತ್ತು ಬಿಜೆಪಿಗೆ ಬೆಂಬಲ ನೀಡಿದ ಜನಸೇನಾ ಪಕ್ಷ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಆದರೆ ಈ ಚುನಾವಣೆಯಲ್ಲಿ ಜನಸೇನಾ ಮೈತ್ರಿಗೆ 1 ಸ್ಥಾನವೂ ಲಭಿಸಿರಲಿಲ್ಲ. ಆದರೆ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿಗೆ ಬೆಂಬಲ ನೀಡದೆ ಸ್ಪರ್ಧೆ ನಡೆಸಿದ್ದ ಜನಸೇನಾ ಪಕ್ಷ ಕೇವಲ 1 ಸ್ಥಾನವನ್ನು ಮಾತ್ರ ಪಡೆದಿತ್ತು. ವಿಶೇಷ ಎಂದರೇ ಸ್ವತಃ ಪವನ್ ಕಲ್ಯಾಣ್ ತಾವು ಸ್ಪರ್ಧಿಸಿದ 2 ಕ್ಷೇತ್ರಗಳಲ್ಲಿ ಸೋತು ಹೋಗಿದ್ದರು.

    ಸದ್ಯ ಆಂಧ್ರ ಪ್ರದೇಶ ರಾಜಕಾರಣದಲ್ಲಿ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಮುಂದಾಗಿರುವ ಪವನ್ ಕಲ್ಯಾಣ್ ಅವರು, ಬಿಜೆಪಿಯೊಂದಿಗೆ ಮತ್ತೊಮ್ಮೆ ಮೈತ್ರಿ ಮಾಡಿಕೊಂಡಿದ್ದಾರೆ. ಇದುವರೆಗೂ ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಬೇರೆ ಯಾವುದೇ ರಾಜ್ಯದಲ್ಲಿ ಆಸ್ಥಿತ್ವದಲ್ಲಿ ಇಲ್ಲದ ಬಿಜೆಪಿ ದಕ್ಷಿಣದ ರಾಜ್ಯಗಳಲ್ಲಿ ಪಕ್ಷವನ್ನು ಬಲಗೊಳಿಸಲು ಮುಂದಾಗಿದೆ.