Tag: Janardhana Poojary

  • ಮಸೀದಿ, ಚರ್ಚ್‌ನಲ್ಲಿ ಶವ ಹೂತಿಡಲಿಲ್ವಾ.. ಕೇವಲ ಧರ್ಮಸ್ಥಳದಲ್ಲಿ ಮಾತ್ರಾನಾ: ಜನಾರ್ದನ ಪೂಜಾರಿ ಪ್ರಶ್ನೆ

    ಮಸೀದಿ, ಚರ್ಚ್‌ನಲ್ಲಿ ಶವ ಹೂತಿಡಲಿಲ್ವಾ.. ಕೇವಲ ಧರ್ಮಸ್ಥಳದಲ್ಲಿ ಮಾತ್ರಾನಾ: ಜನಾರ್ದನ ಪೂಜಾರಿ ಪ್ರಶ್ನೆ

    – ಧರ್ಮಸ್ಥಳ ಹೆಸರು ಹಾಳಾಗೋದಕ್ಕೆ ಪೂಜಾರಿ ಬಿಡಲ್ಲ ಎಂದು ಪ್ರತಿಜ್ಞೆ

    ಮಂಗಳೂರು: ಮಸೀದಿ, ಚರ್ಚ್‌ಗಳಲ್ಲಿ ಶವ ಹೂತಿಡಲಿಲ್ವಾ? ಕೇವಲ ಧರ್ಮಸ್ಥಳದಲ್ಲಿ ಮಾತ್ರಾನಾ ಎಂದು ಮಾಜಿ ಸಂಸದ ಜನಾರ್ದನ ಪೂಜಾರಿ (Janardhana Poojary) ಪ್ರಶ್ನಿಸಿದರು.

    ಧರ್ಮಸ್ಥಳ (Dharmasthala) ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣ ಕುರಿತು ಉಳ್ಳಾಲ ಸಮೀಪದ ತೊಕ್ಕೊಟ್ಟು ಮುದ್ದುಕೃಷ್ಣ ಸಮಾರಂಭದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಹೆಸರು ಹಾಳು ಮಾಡಲಾಗುತ್ತಿದೆ ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: ಧರ್ಮಸ್ಥಳದ ಧರ್ಮಾಧಿಕಾರಿಗಳು ಸರ್ಕಾರ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ: ಶಿವಗಂಗಾ ಬಸವರಾಜ್

    ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಜೊತೆ ನಾವಿದ್ದೇವೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಜೊತೆ ಇಡೀ ಜಗತ್ತು ನಿಲ್ಲುತ್ತದೆ. ಇಡಿ ಕುದ್ರೋಳಿ ದೇವಸ್ಥಾನ ನಿಮ್ಮೊಂದಿಗಿದೆ ಹೆದರಬೇಡಿ. ಎಸ್‌ಐಟಿ ಧರ್ಮಸ್ಥಳದಲ್ಲಿ ಎಷ್ಟು ಅಗೆದರೂ ಏನು ಸಿಗೋದಿಲ್ಲ. ಮಸೀದಿಯಲ್ಲಿ, ಚರ್ಚ್‌ನಲ್ಲಿ ಶವ ಹೂತಿಡಲಿಲ್ವಾ? ಕೇವಲ ಧರ್ಮಸ್ಥಳದಲ್ಲಿ ಮಾತ್ರಾನಾ ಎಂದು ಪ್ರಶ್ನೆ ಮಾಡಿದರು.

    ಮನುಷ್ಯ ಸತ್ತ ಕೂಡಲೇ ಅವನನ್ನ ದೇವಸ್ಥಾನದ ವಠಾರದಲ್ಲಿ ಹೂತು ಹಾಕೋದು ಒಂದು ಪದ್ಧತಿ. ಧರ್ಮಸ್ಥಳದಂತಹ ದೇವಸ್ಥಾನವನ್ನ ನಡೆಸೋದು ಎಷ್ಟು ಕಷ್ಟ ಇದೆ ಎಂದು ನನಗೆ ಗೊತ್ತು. ವೀರೇಂದ್ರ ಹೆಗ್ಗಡೆಯವರೇ ನಿಮ್ಮ ಜೊತೆ ನಾನಿದ್ದೇನೆ. ಧರ್ಮಸ್ಥಳದ ವಠಾರವನ್ನ ಎಸ್‌ಐಟಿಯವರು ಅಗೆಯುತ್ತಿದ್ದಾರೆ. ಶವಗಳನ್ನ ಹೂತ್ತಿದ್ದಾರೆ ಎನ್ನುವ ಆರೋಪದಲ್ಲಿ ಶವಗಳನ್ನ ಹುಡುಕುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಧರ್ಮಸ್ಥಳ ಗುಂಪು ಘರ್ಷಣೆ – 6 ಆರೋಪಿಗಳು ಅರೆಸ್ಟ್‌

    ಧರ್ಮಸ್ಥಳ ಕೇವಲ ಜೈನರಿಗೆ ಸೇರಿದ ಸ್ಥಳವಲ್ಲ. ಧರ್ಮಸ್ಥಳವನ್ನ ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಕುದ್ರೋಳಿ ದೇವಸ್ಥಾನದಲ್ಲಿ ಮಾತ್ರ ಭಕ್ತನಲ್ಲ, ನಾನು ಧರ್ಮಸ್ಥಳದ ಭಕ್ತ. ಎಸ್‌ಐಟಿಯವರು ಹುಡುಕಿದ್ರೂ ಏನು ಸಿಗುತ್ತಿಲ್ಲ. ಮುಖ್ಯಮಂತ್ರಿಯವರೇ ಏನು ಮಾಡುತ್ತಿದ್ದೀರಿ ನೀವು. ಧರ್ಮಸ್ಥಳದ ಹೆಸರು ಹಾಳಾಗುತ್ತಿದೆ. ಅದಕ್ಕೆ ಬಿಡೋದಿಲ್ಲ ಎಂದು ತಿಳಿಸಿದರು.

    ಧರ್ಮಸ್ಥಳದ ಹೆಸರು ಹಾಳು ಮಾಡೋದಕ್ಕೆ ಪೂಜಾರಿ ಬಿಡೋದಿಲ್ಲ. ಪ್ರಧಾನಿ ಮೋದಿಯವರು ಇಂದು ಕರ್ನಾಟಕಕ್ಕೆ ಬಂದಿದ್ದಾರೆ. ಮೋದಿಯವರೇ ನಿಮಗೆ ಧೈರ್ಯವಿದ್ದರೆ, ತಾಕತ್ತಿದ್ದರೆ ಧರ್ಮಸ್ಥಳಕ್ಕೆ ಹೋಗಿ ಭಾಷಣ ಮಾಡಿ ಎಂದು ಟಾಂಗ್‌ ಕೊಟ್ಟರು.

  • ಚರ್ಚ್, ದೇವಸ್ಥಾನದಲ್ಲಿ ಗಳಗಳನೆ ಕಣ್ಣೀರಿಟ್ಟ ಜನಾರ್ದನ ಪೂಜಾರಿ

    ಚರ್ಚ್, ದೇವಸ್ಥಾನದಲ್ಲಿ ಗಳಗಳನೆ ಕಣ್ಣೀರಿಟ್ಟ ಜನಾರ್ದನ ಪೂಜಾರಿ

    ಮಂಗಳೂರು: ಕಾಂಗ್ರೆಸ್‍ನ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವರಾದ ಜನಾರ್ದನ ಪೂಜಾರಿ ಇಂದು ದೇವಸ್ಥಾನ ಹಾಗೂ ಚರ್ಚ್ ನಲ್ಲಿ ಗಳಗಳನೆ ಅತ್ತುಬಿಟ್ಟರು.

    ಜನಾರ್ದನ ಪೂಜಾರಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಆರೋಗ್ಯಕ್ಕಾಗಿ ಪ್ರಾರ್ಥಿಸಲು ಚರ್ಚ್ ಗೆ ತೆರಳಿದ್ದರು. ಈ ವೇಳೆ ಅಲ್ಲಿ ಆಸ್ಕರ್ ಅವರನ್ನು ಕಂಡು ಪೂಜಾರಿ ಅವರು ಬೇಸ್ತು ಬಿದ್ದರು.

    ಆಸ್ಕರ್ ಫೆರ್ನಾಂಡಿಸ್ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನುವ ಮಾಹಿತಿ ತಿಳಿದ ಪೂಜಾರಿಯವರು ದಿಢೀರನೆ ದೇವಸ್ಥಾನ, ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆಗೆ ತೆರಳಿದ್ದರು. ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಪ್ರಾರ್ಥನೆ ನೆರವೇರಿಸಿದ ಪೂಜಾರಿ, ಅಲ್ಲಿ ಆಸ್ಕರ್ ನೆನೆದು ಗಳಗಳನೆ ಅತ್ತಿದ್ದೂ ಆಗಿತ್ತು. ಬಳಿಕ ನಗರದ ರೊಸಾರಿಯೋ ಚರ್ಚ್ ಗೆ ಪ್ರಾರ್ಥನೆಗಾಗಿ ತೆರಳಿದ ಸಂದರ್ಭದಲ್ಲಿ ಸ್ವತಃ ಆಸ್ಕರ್ ಫೆರ್ನಾಂಡಿಸ್ ಚರ್ಚ್ ನಲ್ಲಿರುವುದನ್ನು ಕಂಡು ಪೂಜಾರಿ ಒಂದು ಕ್ಷಣ ವಿಚಲಿತರಾದರು.

    ಬಳಿಕ ಆಸ್ಕರ್ ಜೊತೆಗೆ ಚರ್ಚ್ ನಲ್ಲಿ ಪ್ರಾರ್ಥನೆ ನಡೆಸಿದ ಪೂಜಾರಿ ಅವರು ಪರಸ್ಪರ ಆಲಿಂಗಿಸಿಕೊಂಡರು. ಆಸ್ಕರ್ ಅವರಿಗೆ ಹುಷಾರಿಲ್ಲ ಎಂದು ಪೂಜಾರಿಯವರಿಗೆ ಯಾರೋ ಸುಳ್ಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ವತಃ ಅನಾರೋಗ್ಯದಿಂದ ಬಳಲುತ್ತಿರುವ ಪೂಜಾರಿ, ದೇವರಲ್ಲಿ ಪ್ರಾರ್ಥನೆ ನೆರವೇರಿಸಲು ಮಂಗಳೂರಿಗೆ ಆಗಮಿಸಿದ್ದರು. ಎದ್ದು ನಡೆಯಲಾಗದ ಸ್ಥಿತಿಯಲ್ಲಿರುವ ಜನಾರ್ದನ ಪೂಜಾರಿ ಅವರು, ತಮಗಿಂತ ಕಿರಿಯರಾಗಿರುವ ಆಸ್ಕರ್ ಆರೋಗ್ಯಕ್ಕಾಗಿ ಪ್ರಾರ್ಥಿಸಲು ತೆರಳುವಂತೆ ಮಾಡಿದ್ದು ಯಾರೆಂಬ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.

  • ಸೋನಿಯಾ ಹುಟ್ಟುಹಬ್ಬವನ್ನು ಅನಾಥಾಶ್ರಮ, ವೃದ್ಧಾಶ್ರಮದಲ್ಲಿ ಆಚರಿಸಿದ ಜನಾರ್ದನ ಪೂಜಾರಿ

    ಸೋನಿಯಾ ಹುಟ್ಟುಹಬ್ಬವನ್ನು ಅನಾಥಾಶ್ರಮ, ವೃದ್ಧಾಶ್ರಮದಲ್ಲಿ ಆಚರಿಸಿದ ಜನಾರ್ದನ ಪೂಜಾರಿ

    ಮಂಗಳೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ಹುಟ್ಟುಹಬ್ಬಕ್ಕೆ ಕರ್ನಾಟಕ ಕಾಂಗ್ರೆಸ್ ಹೀನಾಯ ಸೋಲಿನ ಉಡುಗೊರೆ ಕೊಟ್ಟರೆ ಕಾಂಗ್ರೆಸ್‍ನ ಹಿರಿಯ ನಾಯಕ ಜನಾರ್ದನ ಪೂಜಾರಿ ಅನಾಥಾಶ್ರಮಗಳಿಗೆ ಫಲವಸ್ತು, ಊಟ ಕೊಡುವುದರ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ.

    ಈ ಬಾರಿ ದೇಶದೆಲ್ಲೆಡೆ ಮಹಿಳೆಯರ ಮೇಲಿನ ದೌರ್ಜನ್ಯದಿಂದ ನೊಂದು ತನ್ನ ಜನ್ಮ ದಿನಾಚರಣೆ ಮಾಡುವುದಿಲ್ಲ ಎಂದು ಸೋನಿಯಾ ಗಾಂಧಿ ಘೋಷಿಸಿದ್ದರು. ಈ ರೀತಿ ಹೆಣ್ಣು ಮಕ್ಕಳ ದೌರ್ಜನ್ಯದಿಂದ ನೊಂದು ಹುಟ್ಟುಹಬ್ಬ ಆಚರಿಸದಿರುವ ಉದಾತ್ತ ಮಹಿಳೆ ಜಗತ್ತಿನಲ್ಲಿಯೇ ಬೇರೆ ಯಾರು ಇರುವುದಿಲ್ಲ ಎಂದು ಕೇಂದ್ರ ಸರ್ಕಾರದ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

    ಹೀಗಾಗಿ ಪ್ರತಿ ವರ್ಷ ಸೋನಿಯಾ ಗಾಂಧಿಯ ಹುಟ್ಟುಹಬ್ಬವನ್ನು ವಿವಿಧ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯ ಮಾಡುವ ಮೂಲಕ ಜನಾರ್ದನ ಪೂಜಾರಿ ಆಚರಿಸುತ್ತಿದ್ದರು. ಅದೇ ರೀತಿ ಈ ವರ್ಷವೂ ನಗರದ ಸಂತ ಅಂತೋನಿಯವರ ಸೈಂಟ್ ಜೋಸೆಫ್ ಪ್ರಶಾಂತ್ ನಿವಾಸದ ವೃದ್ಧಾಶ್ರಮ, ಕೋಣಾಜೆಯ ಅಭಯಾಶ್ರಮಗಳಿಗೆ ಹಣ್ಣು-ಹಂಪಲು ನೀಡಿದ್ದಾರೆ. ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ವಿಶೇಷ ಮಕ್ಕಳ ಶಾಲೆಯಲ್ಲಿ ಊಟ ಹಾಗೂ ಹಣ್ಣುಹಂಪಲು ನೀಡಿ ಹುಟ್ಟುಹಬ್ಬ ಆಚರಿಸಿದರು.

    ಬಳಿಕ ಮಾತನಾಡಿದ ಅವರು, ಬಡವರ ಆಶಯದಂತೆ ಸೋನಿಯಾ ಗಾಂಧಿ ಜನ್ಮ ದಿನವನ್ನು ಈ ಬಾರಿಯೂ ಸರಳವಾಗಿ ಆಚರಿಸುವುದಾಗಿ ತಿಳಿಸಿದ್ದಾರೆ. ಪ್ರತಿ ವರ್ಷ ಆಶ್ರಮದಲ್ಲಿರುವ ಬಡವರ ಸಂತೋಷಕ್ಕಾಗಿ ಸೋನಿಯಾ ಗಾಂಧಿಯವರ ಜನ್ಮ ದಿನವನ್ನು ಅವರೊಂದಿಗೆ ಆಚರಿಸುತ್ತೇನೆ. ಅದಕ್ಕಾಗಿ ಬಡವರು ಸದಾ ಅದರ ನಿರೀಕ್ಷೆಯಲ್ಲಿರುತ್ತಾರೆ. ಆ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರ ಹುಟ್ಟು ಹಬ್ಬದ ಆಚರಣೆ ಬೇಡ ಎಂದರು, ಹಾಗಾಗಿ ಈ ರೀತಿಯಲ್ಲಿ ಆಚರಿಸಲಾಯಿತು ಎಂದರು.

    ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಅಬ್ದುಲ್ ಸಲೀಂ, ಮನಪಾ ಸದಸ್ಯೆ ಜೆಸಿಂತಾ, ಮಾಜಿ ಮನಪಾ ಸದಸ್ಯೆ ಸಬಿತಾ ಮಿಸ್ಕಿತ್, ದೀಪಕ್ ಪೂಜಾರಿ ಮತ್ತು ಟಿ.ಕೆ ಸುಧೀರ್, ಲಕ್ಷ್ಮೀ ನಾರಾಯಣ, ರಮಾನಂದ ಪೂಜಾರಿ, ನೀರಜ್ ಪಾಲ್, ಮೋಹನ್ ಶೆಟ್ಟಿ, ಕರುಣಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

  • ಸಿದ್ದರಾಮಯ್ಯ ಬಂದ್ಮೇಲೆ ಕಾಂಗ್ರೆಸ್ ಬಲಿಷ್ಠವಾಗಿದೆ – ಜನಾರ್ದನ ಪೂಜಾರಿಗೆ ಜಮೀರ್ ತಿರುಗೇಟು

    ಸಿದ್ದರಾಮಯ್ಯ ಬಂದ್ಮೇಲೆ ಕಾಂಗ್ರೆಸ್ ಬಲಿಷ್ಠವಾಗಿದೆ – ಜನಾರ್ದನ ಪೂಜಾರಿಗೆ ಜಮೀರ್ ತಿರುಗೇಟು

    ಹಾವೇರಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್‍ಗೆ ಬಂದ ಮೇಲೆ ಪಕ್ಷ ಬಲಿಷ್ಠವಾಗಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಬೋರ್ಡ್ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

    ಇಂದು ಹಾವೇರಿ ನಗರದಲ್ಲಿ ಏರ್ಪಡಿಸಲಾಗಿದ್ದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಜನಾರ್ದನ ಪೂಜಾರಿ ಹೇಳಿಕೆಗೆ ತಿರುಗೇಟು ನೀಡಿದರು. ಅವರು ಪಕ್ಷದ ಅಧ್ಯಕ್ಷರಾಗಿದ್ದವರು. ಅವರಿದ್ದಾಗ ಪಕ್ಷ ಹೇಗಿತ್ತು ಎನ್ನುವುದು ಗೊತ್ತಿದೆ. ಸಿದ್ದರಾಮಯ್ಯ ಅವರ ಶಕ್ತಿ ಪಕ್ಷ ಕಾರ್ಯಕರ್ತರಿಗೆ ಗೊತ್ತಿದೆ. ಆದರೆ ಪಾಪ ಜನಾರ್ದನ ಪೂಜಾರಿ ಅವರಿಗೆ ಗೊತ್ತಿಲ್ಲ ಎಂದರು.

    ಕಾಂಗ್ರೆಸ್ ಪಕ್ಷವನ್ನು ಯಾರು ಮುಗಿಸಿದ್ದಾರೆ ಎನ್ನುವುದು ಕೂಡ ತಿಳಿದಿದ್ದು, ಸಿದ್ದರಾಮಯ್ಯ ಅವರು ಪಕ್ಷಕ್ಕೆ ಬಂದ ಕಾಲದಿಂದಲೂ ಅದನ್ನೇ ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಅಂದಿನಿಂದಲೂ ಕೂಡ ಪಕ್ಷ ಮತ್ತಷ್ಟು ಬಲಿಷ್ಠ ಆಗುತ್ತಾ ಬರುತ್ತಿದೆ. ಎಲ್ಲವನ್ನ ಪಕ್ಷದ ಕಾರ್ಯಕರ್ತರು ನಿರ್ಧಾರ ಮಾಡುತ್ತಾರೆ ಎಂದು ಹೇಳಿ ಟಾಂಗ್ ನೀಡಿದರು.

    ಮಂಗಳೂರಿನಲ್ಲಿ ಗುರುವಾರ ಮಾತನಾಡಿದ್ದ ಜನಾರ್ದನ ಪೂಜಾರಿ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್ ಮುಗಿಸುವುದಕ್ಕೆ ಪಕ್ಷ ಸೇರಿಕೊಂಡರು. ಸಿದ್ದರಾಮಯ್ಯನವರಿಂದ ಇಂದು ಸಮ್ಮಿಶ್ರ ಸರ್ಕಾರ ರಚನೆಯಾಗಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಸಿಎಂ ಕುಮಾರಸ್ವಾಮಿ ಅವರಿಂದ ಮೈತ್ರಿ ಸರ್ಕಾರ ಉಳಿದುಕೊಂಡಿದೆ. ಸರ್ಕಾರ ಉಳಿಯುವಲ್ಲಿ ದೊಡ್ಡ ಗೌಡರದ್ದು ಮಹತ್ವದ ಪಾತ್ರವಿದೆ. ದೇವೇಗೌಡರನ್ನು ಯಾರು ಲಘುವಾಗಿ ತೆಗೆದುಕೊಳ್ಳಬಾರದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv