Tag: Janapada jatre

  • ಜಾನಪದ ಜಾತ್ರೆಯಲ್ಲಿ ಸಿಎಂ ಜೊತೆ ವೇದಿಕೆ ಹಂಚಿಕೊಳ್ಳದ ಅರ್ಹ ಶಾಸಕರು

    ಜಾನಪದ ಜಾತ್ರೆಯಲ್ಲಿ ಸಿಎಂ ಜೊತೆ ವೇದಿಕೆ ಹಂಚಿಕೊಳ್ಳದ ಅರ್ಹ ಶಾಸಕರು

    – ಸಿಎಂ ಮೇಲೆ ಸುಧಾಕರ್, ಎಸ್.ಟಿ ಸೋಮಶೇಖರ್ ಬೇಸರ
    – ಜಾನಪದ ಜಾತ್ರೆಗೆ ಎತ್ತಿನಗಾಡಿಯಲ್ಲಿ ಆಗಮಿಸಿದ ಬಿಎಸ್‍ವೈ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಡಬಲ್ ಟೆನ್ಷನ್ ಶುರುವಾಗಿದೆ. ಸಚಿವ ಸ್ಥಾನಕ್ಕಾಗಿ ಒಂದು ಕಡೆ ಸ್ವಾಮೀಜಿಗಳ ಒತ್ತಡ, ಮತ್ತೊಂದು ಕಡೆ ಮಿತ್ರಮಂಡಳಿಯ ಅಸಮಾಧಾನದ ಬಿಸಿದ ತಟ್ಟಿದೆ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಜಾನಪದ ಜಾತ್ರೆಗೆ ಅದ್ದೂರಿ ತೆರೆಬಿದ್ದಿದೆ. ಈ ಕಾರ್ಯಕ್ರದಲ್ಲಿ ಸಿಎಂ ಯಡಿಯೂರಪ್ಪ ಅವರ ಮೇಲೆ ಶಾಸಕ ಸುಧಾಕರ್ ಹಾಗೂ ಎಸ್.ಟಿ.ಸೋಮಶೇಖರ್ ಅವರು ಹಂಚಿಕೊಳ್ಳದೆ ಬೇಸರ ವ್ಯಕ್ತಪಡಿಸಿದ್ದಾರೆ. ಶಾಸಕರ ಈ ನಡೆ ಭಾರೀ ಚರ್ಚೆಗೆ ಕಾರಣವಾಗಿದೆ.

    ಎತ್ತಿನ ಗಾಡಿಯಲ್ಲಿ ಜಾನಪದ ಜಾತ್ರೆಗೆ ಆಗಮಿಸಿದ ಸಿಎಂ ಯಡಿಯೂರಪ್ಪ ಅವರನ್ನು ಸಚಿವ ಆರ್.ಅಶೋಕ್ ಬರಮಾಡಿಕೊಂಡರು. ಎರಡು ದಿನಗಳ ಕಾಲ ನಡೆದ ಜಾನಪದ ಜಾತ್ರೆ ಸಮಾರೋಪ ಸಮಾರಂಭದಲ್ಲಿ ಜಾನಪದ ಕಲಾ ತಂಡಗಳ ನೃತ್ಯ ಪ್ರದರ್ಶನವನ್ನ ಸಿಎಂ ಯಡಿಯೂರಪ್ಪ ಕಣ್ಣು ತುಂಬಿಕೊಂಡಿದ್ದಾರೆ.

    ಕಾರ್ಯಕ್ರಮದಲ್ಲಿ ಸಚಿವ ಆರ್.ಅಶೋಕ್, ಪ್ರೀತಂ ಗೌಡ, ಎ.ಕೃಷ್ಣಪ್ಪ, ಶಾಸಕರಾದ ಡಾ.ಕೆ.ಸುಧಾಕರ್ ಮತ್ತು ಎಸ್.ಟಿ ಸೋಮಶೇಖರ್ ಸೇರಿದಂತೆ ಸ್ಥಳೀಯ ಪಾಲಿಕೆ ಸದಸ್ಯರು ಮತ್ತು ಸಾವಿರಾರು ಸಾರ್ವಜನಿಕರು ಭಾಗವಹಿಸಿದ್ದರು. ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ಸಿಎಂ ಯಡಿಯೂರಪ್ಪ ಅವರು ಜಾನಪದ ತಂಡಗಳ ನೃತ್ಯ ಪ್ರದರ್ಶನ ವೀಕ್ಷಿಸಿದರು.

    ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಕರ್ನಾಟಕ ಜಾನಪದ ಕಲೆಗಳ ಪ್ರಪಂಚ. ಕರ್ನಾಟಕದಲ್ಲಿ ಹಲವಾರು ಕಲೆಗಳ ತವರಾರು ಇವೆ. ಅವುಗಳನ್ನು ಉಳಿಸಿ ಬೆಳಸುವಂತ ಕೆಲಸ ಮಾಡುತ್ತಿದ್ದೇವೆ. ಡೊಳ್ಳು ಕುಣಿತ ಕಂಸಾಳೆ, ನಂದಿ ಧ್ವಜ ನೃತ್ಯ, ಕೋಲಾಟ ಎಲ್ಲಾ ರೀತಿಯ ನೃತ್ಯಗಳು ನಡೆದಿದೆ. ಜಾನಪದ ಕಲಾವಿದರ ಬದುಕಿಗೆ ನೆರವು ಮತ್ತು ಜಾನಪದ ಕಲಾವಿದರಿಗೆ ಮಾಸಾಶನ ನೀಡಲಾಗುತ್ತದೆ ಎಂದು ಹೇಳಿದರು.

  • ಜನವರಿ 14, 15ರಂದು ಬೆಂಗಳೂರಿನಲ್ಲಿ ಜಾನಪದ ಜಾತ್ರೆ

    ಜನವರಿ 14, 15ರಂದು ಬೆಂಗಳೂರಿನಲ್ಲಿ ಜಾನಪದ ಜಾತ್ರೆ

    ಬೆಂಗಳೂರು: ಜನವರಿ 14 ಮತ್ತು 15ರಂದು ಬೆಂಗಳೂರಿನ ಪದ್ಮನಾಭನಗರದ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ಜಾನಪದ ಜಾತ್ರೆ ನಡೆಯಲಿದೆ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಾನಪದ ಜಾತ್ರೆ ನಡೆಯುತ್ತಿದ್ದ ಪೂರ್ವ ತಯಾರಿಯನ್ನು ಕಂದಾಯ ಸಚಿವ ಆರ್ ಅಶೋಕ್, ಮೇಯರ್ ಗೌತಮ್ ಕುಮಾರ್ ಮತ್ತು ಸ್ಥಳೀಯ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಹಳ್ಳಿಗಾಡಿನ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂಬ ಉದ್ದೇಶದಿಂದ ಜಾನಪದ ಜಾತ್ರೆ ಪ್ರಾರಂಭಿಸಲಾಗಿದೆ. 2 ದಿನಗಳ ಕಾಲ ಇಲ್ಲಿ ಹಳ್ಳಿಯ ಸೊಗಡಿನ ವಾತಾವರಣವಿರಲಿದೆ. ಸಂಕ್ರಾಂತಿಯು ಬಂದಿರುವುದರಿಂದ ಗೋ ಪೂಜೆ, ಎತ್ತಿನ ಗಾಡಿ ಓಟ, ಕಡಲೆಕಾಯಿ ಪರೀಷೆಯನ್ನೂ ನಡೆಸಲಾಗುತ್ತಿದೆ. ಚಿತ್ರದುರ್ಗ, ಹುಬ್ಬಳ್ಳಿ, ಧಾರವಾಡ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳ 36 ತಂಡಗಳು ಆಗಮಿಸಲಿವೆ. ಸಿದ್ಧಿ ಜನಾಂಗ, ಹಾಲಕ್ಕಿ ಒಕ್ಕಲಿಗ ಸಮಾಜದ ಕಲಾವಿದರೂ ಸಹ ಆಗಮಿಸಲಿದ್ದಾರೆ.

    ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಜಾನಪದ ಜಾತ್ರೆ ಪ್ರಾರಂಭಿಸಲಾಗಿತ್ತು. ಆದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಜಾನಪದ ಜಾತ್ರೆಯನ್ನು ರದ್ದುಗೊಳಿಸಿದ್ದರು. ಇದೀಗ ಪುನಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಾರಂಭಿಸಲಾಗಿದೆ. ಜ. 14ರಂದು ಬೆಳಗ್ಗೆ ಜಾನಪದ ಜಾತ್ರೆಗೆ ಚಾಲನೆ ಸಿಕ್ಕಿದ್ದರೆ, 15ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.

  • ಗದಗ್‍ನ ಜಾನಪದ ಜಾತ್ರೆಲಿ ಅನಾವರಣಗೊಂಡ ಗ್ರಾಮೀಣ ಸೊಗಡು

    ಗದಗ್‍ನ ಜಾನಪದ ಜಾತ್ರೆಲಿ ಅನಾವರಣಗೊಂಡ ಗ್ರಾಮೀಣ ಸೊಗಡು

    – ಜನಮನ ಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು

    ಗದಗ: ನಗರದಲ್ಲಿ ನಡೆದ ಜಾನಪದ ಜಾತ್ರೆಯಲ್ಲಿ ಗ್ರಾಮೀಣ ಸೊಗಡು ಅನಾವರಣಗೊಂಡಿದೆ. ಗ್ರಾಮೀಣ ಸೊಗಡಿನ ಕಲಾಲೋಕ ನಗರದ ಜನರನ್ನು ವೇದಿಕೆಯತ್ತ ಬರಮಾಡಿಕೊಂಡಿತ್ತು. ನಾಡಿನ ವಿವಿಧ ಮೂಲೆಗಳಿಂದ 400 ಕ್ಕೂ ಹೆಚ್ಚು ಕಲಾವಿದ್ರು, 45 ಕ್ಕೂ ಹೆಚ್ಚು ಕಲಾತಂಡಗಳು ಪಾಲ್ಗೊಳ್ಳುವ ಮೂಲಕ ಜಾತ್ರೆಯ ಮೆರಗು ಹೆಚ್ಚಿಸಿದವು.

    ಗುರ್ಜಿ ನೃತ್ಯ, ಕೋಲಾಟ, ಬುಡಕಟ್ಟು ಜನಾಂಗದ ನೃತ್ಯ, ಡೊಳ್ಳುಪದ, ಲಂಬಾಣಿ ನೃತ್ಯ, ಡಮಾಮಿ ಹೀಗೆ ಹತ್ತು ಹಲವು ಜನಪದ ಕಲೆ ರಸದೌತಣವನ್ನು ಕಲಾರಸಿಕರು ಸವಿದರು. ಜಾನಪದ ಕಲೆಯನ್ನು ಜೀವಂತವಾಗಿರಿಸಲು ಸರ್ಕಾರ ಹಾಗೂ ಕನ್ನಡ ಮತ್ತು ಇಲಾಖೆಯ ಪ್ರಯತ್ನಕ್ಕೆ ನಗರದ ಭೀಷ್ಮಕೆರೆಯ ಒಡಲು ಸಾಕ್ಷಿಯಾಯಿತು. ನಾಡಿನ ಜಾನಪದ ವಿದ್ವಾಂಸರು ಒಂದೆಡೆ ಸೇರಿ ಯೋಜನಾಬದ್ಧವಾಗಿ ಜಾನಪದ ಜಾತ್ರೆಯನ್ನು ಆಯೋಜಿಸಿದ್ದು ವಿಶೇಷವಾಗಿತ್ತು.

    ನಾವುಗಳೆಲ್ಲ ಇಂದು ಮೋಜು, ಮಸ್ತಿಗಾಗಿ ಜಾತ್ರೆಗಳನ್ನು ಮಾಡ್ತಿದ್ದೇವೆ. ಆದ್ರೆ ಇಲ್ಲಿ ನಡೆದ ಜಾತ್ರೆ ಸಮಾಜಕ್ಕೊಂದು ವಿಶೇಷ ಸಂದೇಶ ನೀಡುವುದರ ಮೂಲಕ ನಮ್ಮ ತನದ ಸಂಸ್ಕೃತಿಗೆ ನೀರೆರೆದು ಪೋಷಿಸಲು ಅನುಕೂಲ ಕಲ್ಪಿಸಿತು. ನಗರ ಪ್ರದೇಶ ಜನರಿಗೆ ಗ್ರಾಮೀಣ ಮಹತ್ವ ತಿಳಿಸಲು ಈ ಜಾತ್ರೆ ಮಾಡಲಾಗುತ್ತಿದೆ ಎಂದು ಜಾನಪದ ಜಾತ್ರೆಯ ನಿರ್ದೇಶಕ ಡಾ.ಬಾನಂದೂರು ಕೆಂಪಯ್ಯ ಹೇಳಿದರು.

    ತಾಯಿ ಮೂಲ ಸಂಸ್ಕೃತಿಯಿಂದ ಬೆಳೆದು ಬಂದು ನಮ್ಮ ಅಪರೂಪದ ಕಲೆಗಳು ಇಂದು ಆಧುನಿಕತೆ ಭರಾಟೆಗೆ ಸಿಕ್ಕು ನರಳುತ್ತಿವೆ. ಹೀಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಳಿವಿನಂಚಿನಲ್ಲಿರೋ ಕಲೆಗಳಿಗೆ ಜೀವ ತುಂಬುವ ಮೂಲಕ ಮತ್ತೆ ನೆಲಮೂಲ ಸಂಸ್ಕೃತಿ ಪರಿಚಯವನ್ನು ಯುವಪೀಳಿಗೆಗೆ ತಲುಪಿಸೋ ಕೆಲಸವನ್ನು ಜಾನಪದ ಜಾತ್ರೆ ಮೂಲಕ ಮಾಡ್ತಿರೋದು ವಿಶೇಷವಾಗಿದೆ.

    ರಾಜ್ಯ ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಜಾನಪದ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಜಲಸಂಪನ್ಮೂಲ ಇಲಾಖೆ ಸಂಸದೀಯ ಕಾರ್ಯದರ್ಶಿ ಹಾಗೂ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ ಉಪಾಧ್ಯಕ್ಷೆ ಶ್ರೀಮತಿ ರೂಪಾ ಅಂಗಡಿ, ಗದಗ ತಾ.ಪಂ.ಅಧ್ಯಕ್ಷ ರವಿ ಮನೋಹರ ಇನಾಮತಿ, ಕನ್ನಡ ಮತ್ತಿ ಸಂಸ್ಕೃತಿ ಇಲಾಖೆ ಜಂಟಿ ನಿರ್ಧೇಶಕ ಅಶೋಕ ಚಲವಾದಿ, ಜಾನಪದ ತಜ್ಞ ಹಾಗೂ ಜಾನಪದ ಜಾತ್ರೆ ನಿರ್ದೇಶಕ ಬಾನಂದೂರ ಕೆಂಪಯ್ಯ ಕನ್ನಡ ಮತ್ತು ಸಂಸ್ಕೃತ ಪ್ರಭಾರಿ ಅಧಿಕಾರಿ ಶರಣು ಗೊಗೇರಿ ಹಾಗೂ ಅನೇಕ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು, ಕಲಾವಿದರು, ಕಲಾ ಪ್ರೇಮಿಗಳು ಉಪಸ್ಥಿತರಿದ್ದರು.