Tag: Janaki

  • ಸೀತೆಯ ಜನ್ಮ ಸ್ಥಳದಿಂದ ಅಯೋಧ್ಯೆಗೆ ಬಸ್: ನೇಪಾಳದಲ್ಲಿ ಮೋದಿ ಚಾಲನೆ

    ಸೀತೆಯ ಜನ್ಮ ಸ್ಥಳದಿಂದ ಅಯೋಧ್ಯೆಗೆ ಬಸ್: ನೇಪಾಳದಲ್ಲಿ ಮೋದಿ ಚಾಲನೆ

    ಕಠ್ಮಂಡು: ಸೀತಾ ದೇವಿಯ ಜನ್ಮ ಸ್ಥಳವಾದ ಜನಕಪುರದಿಂದ ಆಯೋಧ್ಯೆಗೆ ಸಂಪರ್ಕ ಕಲ್ಪಿಸುವ ಬಸ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

    2 ದಿನ ನೇಪಾಳ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಜನಕಪುರದ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ನಂತರ ನೇಪಾಳ ಪ್ರಧಾನಮಂತ್ರಿ ಶರ್ಮಾ ಓಲಿ ಮತ್ತು ನರೇಂದ್ರ ಮೋದಿ ಜನಕಪುರ, ಅಯೋಧ್ಯೆ ನಡುವಿನ ಬಸ್ ಸೇವೆಗೆ ಚಾಲನೆ ನೀಡಿದರು.

    ಈ ವೇಳೆ ಮಾತನಾಡಿದ ಮೋದಿ, ಸೀತಾ ಮಾತೆಯ ಜನ್ಮ ಸ್ಥಳಕ್ಕೆ ಬಂದು ಪುನೀತನಾಗಿದ್ದೇನೆ. ರಾಮಾಯಣದ ಸಕ್ರ್ಯೂಟ್ ಅನ್ನು ಬೆಸೆಯಲು ಎರಡೂ ದೇಶಗಳು ಶ್ರಮಿಸಲಿವೆ ಎಂದು ತಿಳಿಸಿದರು.

    ಏನಿದು ರಾಮಾಯಣ ಸರ್ಕ್ಯೂಟ್?
    ಧಾರ್ಮಿಕ ಪ್ರವಾಸಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಪ್ರವಾಸೋದ್ಯಮ ಇಲಾಖೆ ಧಾರ್ಮಿಕ ಕೇಂದ್ರಗಳ ನಡುವೆ ಸಂಪರ್ಕ ಸಾಧಿಸಲು ವಿಶೇಷ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ. ಇದರಲ್ಲಿ ರಾಮಾಯಣ ಸರ್ಕ್ಯೂಟ್ ಒಂದಾಗಿದ್ದು, ಇದರ ಅಡಿಯಲ್ಲಿ ರಾಮಾಯಣ ಕಥೆಗೆ ಸಂಬಂಧಿಸಿದ 15 ಪ್ರವಾಸಿ ಜಾಗಗಳನ್ನು ಸಂಪರ್ಕಿಸುವ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ.

    ಉತ್ತರಪ್ರದೇಶದ ಅಯೋಧ್ಯೆ, ನಂದಿ ಗ್ರಾಮ್, ಶೃಂಗವೇರ್ ಪುರ ಮತ್ತು ಚಿತ್ರಕೂಟ, ಬಿಹಾರದ ಸೀತಾಮಡಿ, ಬಕ್ಸರ್ ಮತ್ತು ದರ್ಭಂಗಾ, ಮಧ್ಯಪ್ರದೇಶದ ಚಿತ್ರಕೂಟ, ಒಡಿಶಾದ ಮಹೇಂದ್ರ ಗಿರಿ, ಛತ್ತೀಸ್‍ಗಢದ ಜಗದಾಲ್ ಪುರ, ಮಹಾರಾಷ್ಟ್ರದ ನಾಸಿಕ್ ಮತ್ತು ನಾಗ್ಪುರ, ತೆಲಂಗಾಣದ ಭದ್ರಾಚಲಮ್, ಹಾಗೂ ತಮಿಳುನಾಡಿನ ರಾಮೇಶ್ವರಂ, ಕರ್ನಾಟಕದ ಹಂಪಿ ರಾಮಾಯಣ ಸರ್ಕ್ಯೂಟ್ನಲ್ಲಿರಲಿದೆ.

    ಸೀತಾ ಮಾತೆಯ ಮಂದಿರವನ್ನು 1910ರಲ್ಲಿ ನಿರ್ಮಿಸಲಾಗಿದೆ. ಮೂರು ಮಹಡಿಯ ಮಂದಿರವನ್ನು ಕಲ್ಲು ಮತ್ತು ಮಾರ್ಬಲ್ ಗಳಿಂದ ಕಟ್ಟಲಾಗಿದೆ. 50 ಮೀಟರ್ ಎತ್ತರವಿರುವ ಮಂದಿರವು 4860 ಚದುರ ಅಡಿಯಲ್ಲಿ ವ್ಯಾಪಿಸಿದೆ.

     

     

     

  • ಮೈಸೂರಿನಲ್ಲಿ ಗಾಯನ ನಿಲ್ಲಿಸಲಿದ್ದಾರೆ ಗಾನ ಕೋಗಿಲೆ ಎಸ್.ಜಾನಕಿ!

    ಮೈಸೂರಿನಲ್ಲಿ ಗಾಯನ ನಿಲ್ಲಿಸಲಿದ್ದಾರೆ ಗಾನ ಕೋಗಿಲೆ ಎಸ್.ಜಾನಕಿ!

    ಮೈಸೂರು: ಗಾನ ಕೋಗಿಲೆ ಎಂದೆ ಪ್ರಸಿದ್ಧಿ ಪಡೆದಿರುವ ಖ್ಯಾತ ಗಾಯಕಿ ಎಸ್. ಜಾನಕಿ ಅವರು ತಮ್ಮ ಗಾಯನ ಪಯಣದಿಂದ ಹಿಂದೆ ಸರಿಯಲು ನಿರ್ಧಾರ ಮಾಡಿದ್ದಾರೆ.

    ಮೈಸೂರು ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಅಕ್ಟೋಬರ್ 28 ರಂದು ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಜೀವನದ ನಿರಂತರ ಆರು ದಶಕದ ಸಂಗೀತ ಗಾಯನದ ಪಯಣದ ಕೊನೆಯ ಕಾರ್ಯಕ್ರಮ ಎಂದು ತಿಳಿಸಿದ್ದಾರೆ.

    ದಕ್ಷಿಣ ಭಾರತದ ಹೆಮ್ಮೆಯ ಗಾಯಕಿ ಎಂದೆ ಹೆಗ್ಗಳಿಕೆಯನ್ನು ಪಡೆದಿರುವ ಎಸ್.ಜಾನಕಿ ಅವರು, “ನನಗೆ ವಯಸ್ಸಾಗಿದೆ. ಇನ್ನು ಮುಂದೆ ನಾನು ಹಾಡುವುದಿಲ್ಲ. ಆದ್ದರಿಂದ ಗಾಯನದಿಂದ ಹಿಂದೆ ಸರಿಯುತ್ತಿದ್ದೇನೆ. ಈ ವಯಸ್ಸಿನಲ್ಲಿ ಹಾಡುವುದನ್ನು ನಿಲ್ಲಿಸುವುದೇ ಸರಿ ಎನಿಸಿದೆ. ಆದ್ದರಿಂದ ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮವೇ ನನ್ನ ಕೊನೆಯ ಬಹಿರಂಗ ಗಾಯನ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮ ಮುಗಿದ ನಂತರ ನಾನು ಇನ್ನು ಮುಂದೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಹಾಗೂ ಟಿವಿ, ಪತ್ರಿಕೆಗಳಿಗೆ ಸಂದರ್ಶನವನ್ನು ನೀಡುವುದಿಲ್ಲ” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

    ಎಸ್ ಜಾನಕಿ ಅವರಿಗೆ ಈಗ ಸುಮಾರು 80 ವರ್ಷ ವಯಸ್ಸಾಗಿದ್ದು, ಸುಮಾರು 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ನಾಲ್ಕು ಬಾರಿ ತಮ್ಮ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇವರು 1952ರಲ್ಲಿ ಅಂದಿನ ಪ್ರಖ್ಯಾತ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರಿಂದ ಆಯೋಜಿಸಲ್ಪಟ್ಟಿದ್ದ ಸಂಗೀತ ಸಂಜೆಯಲ್ಲಿ ಪಿ. ಬಿ. ಶ್ರೀನಿವಾಸ್ ಜೊತೆಗೆ ಹಾಡಿದ್ದರು. ಹೀಗಾಗಿ ಜಾನಕಿ ಅವರು ತಮ್ಮ ಸಂಗೀತ ಪಯಣವನ್ನು ಪ್ರಥಮ ಬಾರಿಗೆ ಮಹಾನಗರಿಯಲ್ಲಿಯೇ ಆರಂಭಿಸಿದ್ದರು. ಇದೀಗ ಅವರ ಕೊನೆಯ ಗಾಯನ ಕೂಡ ಇಲ್ಲಿಯೇ ನಡೆಯಲಿದೆ.

    ಈ ಕಾರ್ಯಕ್ರಮಕ್ಕೆ ತಮಿಳುನಾಡು, ಆಂಧ್ರ ಮತ್ತು ಕೇರಳದಿಂದಲೂ ಅನೇಕ ಅಭಿಮಾನಿಗಳು ಬರುವ ನಿರೀಕ್ಷೆ ಇದೆ. ಈ ಬಾರಿ ರಾಜಮಾತೆ ಪ್ರಮೋದಾದೇವಿ ಅವರಿಂದ ಸನ್ಮಾನವನ್ನು ಸ್ವೀಕರಿಸಲಿದ್ದಾರೆ ಎಂದು ಅಂದಿನ ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.

     

    https://www.youtube.com/watch?v=u7hM79uZF_U