Tag: jammu kashmir

  • ಪಾಕ್ ಅಪ್ರಚೋದಿತ ದಾಳಿಗೆ 8ರ ಬಾಲಕಿ, ಯೋಧ ಬಲಿ

    ಪಾಕ್ ಅಪ್ರಚೋದಿತ ದಾಳಿಗೆ 8ರ ಬಾಲಕಿ, ಯೋಧ ಬಲಿ

    ಶ್ರೀನಗರ: ಪಾಕಿಸ್ತಾನದ ಪದೇ ಪದೇ ಭಾರತದ ಮೇಲೆ ಕದನ ವಿರಾಮ ಉಲ್ಲಂಘಿಸುತ್ತಿದ್ದು, ಇಂದು ಬೆಳಗ್ಗೆ ನಡೆಸಿದ ದಾಳಿಯಲ್ಲಿ ಯೋಧ ಹಾಗೂ 8 ವರ್ಷದ ಬಾಲಕಿ ಬಲಿಯಾಗಿದ್ದಾರೆ.

    ಪಾಕಿಸ್ತಾನದ ಈ ಅಪ್ರಚೋದಿತ ಗುಂಡಿನ ದಾಳಿಗೆ ಜಮ್ಮು ಮತ್ತು ಕಾಶ್ಮೀರದ ಟ್ರಾಲ್ ಗೆ ಸೇರಿದ ಸೈನಿಕ ನಾಯಕ್ ಮುದ್ದಾಸರ್ ಅಹ್ಮದ್ ರಜೌರಿಯಲ್ಲಿ ಹುತಾತ್ಮರಾಗಿದ್ದಾರೆ. ಇನ್ನು ಪೂಂಚ್ ಜಿಲ್ಲೆಯಲ್ಲಿ ಬಾಲಕಿ ಸೈದಾ ಪಾಕಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾಳೆ. ಕದನ ವಿರಾಮ ಉಲ್ಲಂಘನೆಯಲ್ಲಿ ಇಬ್ಬರು ನಾಗರೀಕರು ಗಂಭೀರ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

    ಇಬ್ಬರು ಮಕ್ಕಳ ತಂದೆಯಾಗಿರೋ 37 ವರ್ಷದ ರಜೌರಿ, ಒಬ್ಬ ಪ್ರಾಮಾಣಿಕ ಸೈನಿಕರಾಗಿದ್ದು, ತಮ್ಮ ಕೆಲಸವನ್ನು ತುಂಬಾನೇ ಪ್ರೀತಿಸುತ್ತಿದ್ದರು ಅಂತ ಸೇನೆ ತಿಳಿಸಿದೆ.

    ಇದೇ ಸಂದರ್ಭದಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒ ಅಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಭಾರತೀಯ ಸೇನೆಯ ಡಿಜಿಎಂಒ ಎಕೆ ಭಟ್ `ಎಲ್ಲಾ ಅಪ್ರಚೋದಿತ ಗುಂಡಿನ ದಾಳಿಗಳನ್ನು ಪಾಕಿಸ್ತಾನವೇ ನಡೆಸುತ್ತದೆ. ಈ ದಾಳಿಯನ್ನು ಮಟ್ಟ ಹಾಕಲು ಭಾರತಕ್ಕೆ ಹಕ್ಕಿದೆ. ಆ ಮೂಲಕ ಭಾರತ ಪಾಕಿಸ್ತಾನಕ್ಕೆ ತಕ್ಕ ಭಾರತ ಉತ್ತರ ನೀಡುತ್ತದೆ’ ಎಂದು ಪಾಕಿಸ್ತಾನದ ಅಧಿಕಾರಿಗಳಿಗೆ ಹೇಳಿದ್ದಾರೆ.

     

  • ಜಮ್ಮು ಕಾಶ್ಮೀರದ ಟ್ರಾಲ್‍ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

    ಜಮ್ಮು ಕಾಶ್ಮೀರದ ಟ್ರಾಲ್‍ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

    ಶ್ರೀನಗರ: ಜಮ್ಮು ಕಾಶ್ಮೀರದ ಟ್ರಾಲ್‍ನಲ್ಲಿ ಇಂದು ಬೆಳಿಗ್ಗೆ ಯೋಧರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದು, ಕಾರ್ಯಾಚರಣೆ ಮುಂದುವರೆದಿದೆ.

    ಶ್ರೀನಗರದಿಂದ 36 ಕಿ.ಮೀ ದೂರದಲ್ಲಿರುವ ಟ್ರಾಲ್‍ನ ಸಾತೋರಾ ಪ್ರದೇಶದಲ್ಲಿ ಎನ್‍ಕೌಂಟರ್ ನಡೆದಿದೆ. ಇಲ್ಲಿನ ಕಾಡುಪ್ರದೇಶದಲ್ಲಿ ಕನಿಷ್ಠ 4 ರಿಂದ 5 ಉಗ್ರರು ಅಡಗಿದ್ದರು ಎಂದು ವರದಿಯಾಗಿದೆ.

    ಹತ್ಯೆಗೀಡಾದ ಉಗ್ರರ ಮೃತದೇಹಗಳನ್ನು ಇನ್ನೂ ತೆರವು ಮಾಡಿಲ್ಲ, ಆದ್ರೆ ಗುಂಡಿನ ದಾಳಿ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯ ನಡೆಸಲಾಗಿದೆ ಎಂದು ಹೇಳಿದ್ದಾರೆ.

    ಶೋಧ ಕಾರ್ಯಕ್ಕೆ ತೆರಳಿದ್ದ ಭದ್ರತಾ ಪಡೆ ಮೇಲೆ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದರಿಂದ ಅದು ಎನ್‍ಕೌಂಟರ್ ಆಗಿ ಮಾರ್ಪಾಡಾಯಿತು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ಸೇನೆ, ಪೊಲೀಸರು ಹಾಗೂ ಸಿಆರ್‍ಪಿಎಫ್ ಪಡೆ ಒಟ್ಟಾಗಿ ಸೇರಿ ಕಾರ್ಯಾಚರಣೆ ನಡೆಸಿದ್ದಾರೆ.

    ಕಾಶ್ಮೀರ ಕಣಿವೆಯಲ್ಲಿ ಕಳೆದ 7 ತಿಂಗಳಲ್ಲಿ ಒಟ್ಟು 102 ಉಗ್ರರನ್ನು ನಿರ್ನಾಮ ಮಾಡಲಾಗಿದೆ ಎಂದು ಶುಕ್ರವಾರದಂದು ಸುದ್ದಿಸಂಸ್ಥೆ ವರದಿ ಮಾಡಿತ್ತು. ಕಾಶ್ಮೀರದಲ್ಲಿರೋ ಸುಮಾರು 220 ಉಗ್ರರಲ್ಲಿ ಶೇ. 50ರಷ್ಟು ಉಗ್ರರು ಪಾಕಿಸ್ತಾನದವರು ಎಂದು ಗುರುವಾರದಂದು ಗೃಹ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದರು. ಕಳೆದ 5 ತಿಂಗಳಲ್ಲಿ ಉಗ್ರರ ಒಳನುಸುಳುವಿಕೆ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದರು.

  • ಶಿವಭಕ್ತರ ಮೇಲೆ ಉಗ್ರರ ಪೈಶಾಚಿಕ ಕೃತ್ಯ – 7 ಮಂದಿ ಅಮರನಾಥ ಯಾತ್ರಿಕರ ಹತ್ಯೆ

    ಶಿವಭಕ್ತರ ಮೇಲೆ ಉಗ್ರರ ಪೈಶಾಚಿಕ ಕೃತ್ಯ – 7 ಮಂದಿ ಅಮರನಾಥ ಯಾತ್ರಿಕರ ಹತ್ಯೆ

    – ಹೇಡಿಗಳ ಕೃತ್ಯಕ್ಕೆ ಮೋದಿ, ಮೆಹಬೂಬಾ ಮುಫ್ತಿ ಖಂಡನೆ

    ಶ್ರೀನಗರ: ಉಗ್ರರ ನಿರಂತರ ದಾಳಿಯಿಂದ ನಲುಗಿರೋ ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ರಾತ್ರಿ ಉಗ್ರರು ನಡೆಸಿದ ಬೀಭತ್ಸ ಕೃತ್ಯಕ್ಕೆ 7 ಮಂದಿ ಅಮರನಾಥ ಯಾತ್ರಿಗಳು ಬಲಿಯಾಗಿದ್ದಾರೆ.

    ಸೋಮವಾರ ರಾತ್ರಿ 8.30ರ ಸುಮಾರಿಗೆ ಅನಂತನಾಗ್ ಜಿಲ್ಲೆಯ ಖನಬಾಲ್‍ನಲ್ಲಿ ಪೊಲೀಸರನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ 6 ಮಹಿಳೆಯರು ಸೇರಿದಂತೆ ಬಸ್‍ನಲ್ಲಿದ್ದ 7 ಮಂದಿ ಅಮರನಾಥ ಯಾತ್ರಿಕರು ಬಲಿಯಾಗಿದ್ದು, 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಅಮರನಾಥ ಯಾತ್ರೆ ಮುಗಿಸಿ ಮರಳುತ್ತಿರುವಾಗ ಈ ಕೃತ್ಯ ನಡೆದಿದೆ. ಉಗ್ರರ ದಾಳಿಗೆ ತುತ್ತಾದ ಗುಜರಾತ್ ನೋಂದಣಿಯ ಬಸ್ ಅಮರನಾಥ ದೇಗುಲದ ಬೋರ್ಡ್‍ನೊಂದಿಗೆ ರಿಜಿಸ್ಟರ್ ಮಾಡಿಕೊಂಡಿರಲಿಲ್ಲ. ರಾತ್ರಿ 7ರ ನಂತರ ಭದ್ರತೆ ವಾಪಸ್ ಪಡೆದಿದ್ದ ಹಿನ್ನೆಲೆಯಲ್ಲಿ ಪ್ರಯಾಣಕ್ಕೆ ಅವಕಾಶ ಇರಲಿಲ್ಲ. ಆದರೂ ಬಸ್ ಡ್ರೈವರ್ ನಿಯಮ ಮೀರಿ ಬಸ್ ಚಲಾಯಿಸಿದ್ದ.

    ಜಮ್ಮುವಿನಿಂದ ಅಮರನಾಥ ದೇಗುಲ 200 ಕಿಲೋ ಮೀಟರ್ ದೂರದಲ್ಲಿದೆ. ಅಮರನಾಥ ಯಾತ್ರೆಯ ದಾರಿಯಲ್ಲಿ 40 ಸಾವಿರ ಭದ್ರತಾ ಪಡೆಗಳನ್ನ ನಿಯೋಜಿಸಲಾಗಿತ್ತು. ಗುಪ್ತಚರ ಇಲಾಖೆಯ ಮಾಹಿತಿಯಂತೆ ಉಗ್ರರು ಸುಮಾರು 150 ಯಾತ್ರಿಕರು ಹಾಗೂ 200 ಪೊಲೀಸರನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ.

    ಅಮರನಾಥ ಯಾತ್ರಿಕರ ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಸಿಎಂ ಮೆಹಬೂಬಾ ಮುಫ್ತಿ ಅನಂತ್‍ನಾಗ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಇದು ಪ್ರತಿಯೊಬ್ಬ ಕಾಶ್ಮೀರಿ ತಲೆತಗ್ಗಿಸುವಂತ ಕೃತ್ಯ. ಇದು ಕೇವಲ ನಮ್ಮ ಅತಿಥಿಗಳ ಮೇಲೆ ನಡೆದ ಭಯಂಕರ ದಾಳಿಯಲ್ಲ. ಇಡೀ ಕಾಶ್ಮೀರ ಹಾಗೂ ಕಾಶ್ಮೀರಿಯತ್ ಮೇಲೆ ನಡೆದ ಲಜ್ಜೆಗೆಟ್ಟ ದಾಳಿ. ಉಗ್ರರನ್ನ ಶಿಕ್ಷಿಸದೇ ಬಿಡೋದಿಲ್ಲ ಅಂತಾ ಗುಡುಗಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಹೇಡಿಗಳ ಪೈಶಾಚಿಕ ಕೃತ್ಯಕ್ಕೆ ಭಾರತ ತಲೆಬಾಗೋದಿಲ್ಲ ಎಂದು ಗುಡುಗಿದ್ದಾರೆ. ದಾಳಿಯ ಹಿನ್ನೆಲೆಯಲ್ಲಿ ಇವತ್ತು ಉನ್ನತ ಮಟ್ಟದ ತರ್ತು ಸಭೆಯನ್ನು ಕರೆದಿದ್ದಾರೆ. ಇದರಲ್ಲಿ ರಕ್ಷಣಾ ಸಚಿವ ಅರುಣ್ ಜೇಟ್ಲಿ, ಗೃಹ ಸಚಿವ ರಾಜ್‍ನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪಾಲ್ಗೊಳ್ಳಲಿದ್ದಾರೆ.

    ದಾಳಿಯನ್ನು ಖಂಡಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾರೂ ಕೂಡ ಪ್ರಚೋದನೆಗೆ ಒಳಗಾಗಬಾರದು. ಇದು ಭದ್ರತಾ ವೈಫಲ್ಯ. ಪ್ರಧಾನಿ ಮೋದಿ ಇದರ ಹೊಣೆ ಹೊತ್ತು ಮುಂದೆ ಇಂಥ ಘಟನೆ ಮರುಕಳಿಸದಂತೆ ನೋಡಬೇಕೆಂದು ಆಗ್ರಹಿಸಿದ್ದಾರೆ.

  • ಮಾನವ ಗುರಾಣಿ ಕೇಸ್: ಯುವಕನಿಗೆ ಮಾನವ ಹಕ್ಕುಗಳ ಆಯೋಗದಿಂದ 10 ಲಕ್ಷ ರೂ. ಪರಿಹಾರ

    ಮಾನವ ಗುರಾಣಿ ಕೇಸ್: ಯುವಕನಿಗೆ ಮಾನವ ಹಕ್ಕುಗಳ ಆಯೋಗದಿಂದ 10 ಲಕ್ಷ ರೂ. ಪರಿಹಾರ

    ಶ್ರೀನಗರ: ಸೇನೆಯ ಜೀಪಿನಲ್ಲಿ ಮಾನವ ಗುರಾಣಿಯಾಗಿ ಬಳಕೆಯಾಗಿದ್ದ ಯುವಕನಿಗೆ ಜಮ್ಮುಕಾಶ್ಮೀರ ಮಾನವ ಹಕ್ಕುಗಳ ಆಯೋಗ 10 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

    ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಆಯೋಗ ಸಂತ್ರಸ್ತ ಯುವಕ ಫಾರೂಖ್ ಅಹ್ಮದ್ ದಾರ್‍ಗೆ ಮುಂದಿನ 6 ವಾರದ ಒಳಗಡೆ 10 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

    ಈ ಪ್ರಕರಣದ ನಡೆದ ಬಳಿಕ ಭಾರತೀಯ ಸೇನೆ ಮಾನವ ಗುರಾಣಿಯಾಗಿ ಯುವಕನನ್ನು ಬಳಸಿದ್ದಕ್ಕೆ, ಲೀತುಲ್ ಗೊಗೋಯ್ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿತ್ತು. ಈ ಸುದ್ದಿ ಚರ್ಚೆಯಾಗುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾಗರಿಕರ ಜೀವ ರಕ್ಷಿಸಲು ನಾನು ಈ ಕೆಲಸ ಮಾಡಬೇಕಾಯಿತು ಎಂದು ಹೇಳಿದ್ದರು.

    ಏನಿದು ಪ್ರಕರಣ?
    ಬದ್ಗಾಂ ಜಿಲ್ಲೆಯ ಉಟಿಗಾಮ್ ಗ್ರಾಮದಲ್ಲಿ ಏಪ್ರಿಲ್ 19ರಂದು ಶ್ರೀನಗರ ಲೋಕಸಭೆಯ ಉಪಚುನಾವಣೆ ನಡೆಯುತಿತ್ತು. ಈ ಚುನಾವಣೆಯನ್ನು ಕಾಶ್ಮೀರ ಪ್ರತ್ಯೇಕವಾದಿಗಳು ವಿರೋಧಿಸಿದ್ದರು. ಚುನಾವಣೆಗೆ ನಿಯೋಜನೆಗೊಂಡಿದ್ದ ಸೇನಾ ಸಿಬ್ಬಂದಿಯನ್ನು ಪ್ರತಿಭಟನಾಕಾರರು ಸುತ್ತುವರೆದು ದಾಳಿ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಎಲ್ಲರನ್ನು ರಕ್ಷಿಸಲು ಲೀತುಲ್ ಗೊಗೋಯ್ ಅವರು ಫಾರೂಖ್ ಅಹ್ಮದ್ ದಾರ್‍ನನ್ನು ಸೇನಾ ಜೀಪಿಗೆ ಕಟ್ಟಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

    ಈ ಕುರಿತು ಸೇನೆ ತನಿಖೆಗೆ ಆದೇಶಿಸಿತ್ತು. ಯುವಕನನ್ನು ಜೀಪ್ ಗೆ ಕಟ್ಟಿ ಮೆರವಣಿಗೆ ಮಾಡಿದ್ದ ಸೇನಾ ಲೀತುಲ್   ಅವರ ವಿರುದ್ಧ ಪೊಲೀಸರು ಎಫ್‍ಐಆರ್ ಸಹ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸೇನಾ ಕೋರ್ಟ್ ಕ್ಲೀನ್ ಚಿಟ್ ನೀಡಿ ಲೀತುಲ್ ಗೊಗೋಯ್ ಅವರನ್ನು ಶ್ಲಾಘಿಸಿತ್ತು.

    ಕಲ್ಲು ತೂರಾಟಗಾರರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಯತ್ನಿಸುತ್ತಿದ್ದರು. ಆ ಸಂದರ್ಭದಲ್ಲಿ ಅಲ್ಲಿ ಮಕ್ಕಳು, ಮಹಿಳೆಯರೂ ಇದ್ದರು. ನಾನು ಧ್ವನಿವರ್ಧಕದಲ್ಲಿ ಎಚ್ಚರಿಕೆ ಕೊಟ್ಟಿದ್ದರೂ ಪ್ರತಿಭಟನೆಕಾರರು ಮಣಿಯಲಿಲ್ಲ. ಹೀಗಾಗಿ ಅಲ್ಲಿದ್ದ ಚುನಾವಣಾ ಅಧಿಕಾರಿಗಳನ್ನು, ಜನರನ್ನು, ಪೊಲೀಸರನ್ನು ರಕ್ಷಿಸಲು ನಾನು ಆತನನ್ನು ಸೇನಾ ಜೀಪಿಗೆ ಕಟ್ಟಿದ್ದೆ. ಒಂದು ವೇಳೆ ನಾನು ಗೋಲಿಬಾರ್ ನಡೆಸಲು ಆದೇಶಿಸಿದ್ದರೆ 12ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂದು ಲೀತುಲ್ ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.

    https://www.youtube.com/watch?v=IoFRCMH6Z4E

     

  • ಜಮ್ಮು ಕಾಶ್ಮೀರದಲ್ಲಿ ಸಿಆರ್‍ಪಿಎಫ್ ಕ್ಯಾಂಪ್ ಮೇಲೆ ದಾಳಿಗೆತ್ನಿಸಿದ ನಾಲ್ವರು ಉಗ್ರರ ಹತ್ಯೆ

    ಜಮ್ಮು ಕಾಶ್ಮೀರದಲ್ಲಿ ಸಿಆರ್‍ಪಿಎಫ್ ಕ್ಯಾಂಪ್ ಮೇಲೆ ದಾಳಿಗೆತ್ನಿಸಿದ ನಾಲ್ವರು ಉಗ್ರರ ಹತ್ಯೆ

    ನವದೆಹಲಿ: ಜಮ್ಮು ಕಾಶ್ಮೀರದ ಬಂಡಿಪೋರ ಜಿಲ್ಲೆಯ ಸುಬಂಲ್‍ನಲ್ಲಿ ಸಿಆರ್‍ಪಿಎಫ್ ಶಿಬಿರದ ಮೇಲೆ ದಾಳಿ ಮಾಡಲು ಯತ್ನಿಸಿದ ನಾಲ್ವರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.

    ಇಂದು ಮುಂಜಾನೆ 4.10ರ ಸಮಯದಲ್ಲಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಉಗ್ರರು ಸಿಆರ್‍ಪಿಎಫ್ ನ 45ನೇ ಬೆಟಾಲಿಯನ್‍ನ ಶಿಬಿರಕ್ಕೆ ನುಗ್ಗಲು ಯತ್ನಿಸಿದ್ರು. ನಂತರ ಗುಂಡಿನ ದಾಳಿ ಶುರು ಮಾಡಿದ್ರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಂತರ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಎಲ್ಲಾ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

    ದಾಳಿ ನಡೆದ ಸ್ಥಳದಿಂದ ನಾಲ್ಕು ಎಕೆ-47 ರೈಫಲ್‍ಗಳು, ಒಂದು ಯುಬಿಜಿಎಲ್(ಅಂಡರ್‍ಬ್ಯಾರೆಲ್ ಗ್ರೆನೇಡ್ ಲಾಂಚರ್) ಹಾಗೂ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ ಎಂದು ವರದಿಯಾಗಿದೆ.

    ಉಗ್ರರು ಕ್ಯಾಂಪ್ ಮೇಲೆ ಆತ್ಮಾಹುತಿ ದಾಳಿಗೆ ಯತ್ನಿಸಿದ್ದರು. ಆದ್ರೆ ಶಿಬಿರದೊಳಗೆ ಪ್ರವೇಶಿಸುವ ಮುನ್ನವೇ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.

    ಚೇತನ್ ಕುಮಾರ್ ಚೀತಾ ಸಿಆರ್‍ಪಿಎಫ್‍ನ ಸುಂಬಲ್ ಶಿಬಿರದ ನೇತೃತ್ವವನ್ನ ವಹಿಸಿದ್ದರು. ಇವರು ಕಳೆದ ವರ್ಷ ಬಂಡಿಪೋರಾ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಮಾಡುವಾಗ 9 ಗುಂಡುಗಳು ತಗುಲಿದ್ರೂ ಬದುಕುಳಿದಿದ್ದರು.

  • ಅಪ್ಪ ಮಾಜಿ ಸಚಿವ, ಮಗ ಕಾಮುಕ: 300ಕ್ಕೂ ಹೆಚ್ಚು ಹುಡುಗಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದವ ಬೆಂಗಳೂರಿನಲ್ಲಿ ಅರೆಸ್ಟ್

    ಅಪ್ಪ ಮಾಜಿ ಸಚಿವ, ಮಗ ಕಾಮುಕ: 300ಕ್ಕೂ ಹೆಚ್ಚು ಹುಡುಗಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದವ ಬೆಂಗಳೂರಿನಲ್ಲಿ ಅರೆಸ್ಟ್

    ಬೆಂಗಳೂರು: ಅಪ್ಪ ಸಮಾಜದ ಕಲ್ಯಾಣಕ್ಕಾಗಿ ದುಡಿಯುತ್ತಿದ್ದರೆ, ಮಗ ಮಾತ್ರ ಹೆಣ್ಣು ಮಕ್ಕಳ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದ್ದ. ಆದರೆ ಈಗ ಮಂಗಳೂರು ಮೂಲದ ಯುವತಿ ನೀಡಿದ ದೂರಿನಿಂದಾಗಿ ಕಾಮುಕ ಅರೆಸ್ಟ್ ಆಗಿದ್ದಾನೆ.

    ಕೆಲ ದಿನಗಳ ಹಿಂದೆ ಉದ್ಯೋಗಕ್ಕಾಗಿ ಆರಸಿ ಬಂದಿದ್ದ ಯುವತಿಯೊಬ್ಬರು ಎಚ್ ಆರ್ ಮ್ಯಾನೇಜರ್ ವಿರುದ್ಧ ಲೈಂಗಿಕ ದೌರ್ಜನ್ಯ ದೂರನ್ನು ಮೈ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಹಬೀಬ್ ಗಣಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆತ ಜಮ್ಮು ಕಾಶ್ಮೀರದ ಮಾಜಿ ಸಮಾಜ ಕಲ್ಯಾಣ ಸಚಿವ ಅಬ್ದುಲ್ ಗಣಿ ಮಲ್ಲಿಕ್ ಪುತ್ರ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ 300ಕ್ಕೂ ಹೆಚ್ಚು ಯುವತಿಯರಿಗೆ ಆತ ಲೈಂಗಿಕ ಕಿರುಕುಳ ನೀಡಿರುವ ಮಾಹಿತಿಯೂ ಸಿಕ್ಕಿದೆ.

    ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದ:
    ವಾಣಿಜ್ಯ ಪದವೀಧರನಾಗಿರುವ ಹಬೀಬ್ ಗನಿ ಉದ್ಯೋಗವನ್ನು ಅರಸಿ ನಗರಕ್ಕೆ ಬಂದಿದ್ದ. ಕಾಲ್‍ಸೆಂಟರ್‍ನಲ್ಲಿ ಕೆಲಸಕ್ಕೆ ಸೇರಿ ಪುಟ್ಟೇನಹಳ್ಳಿಯಲ್ಲಿ ವಾಸವಿದ್ದ. ಖಾಸಗಿ ಕಂಪೆನಿಗಳ ಸಂದರ್ಶನಕ್ಕೆ ಹೋಗುತ್ತಿದ್ದ ಆರೋಪಿಯು ಸ್ವಾಗತಕಾರರ ಕೊಠಡಿಯಲ್ಲಿರುತ್ತಿದ್ದ ಸಂದರ್ಶಕರ ಪುಸ್ತಕದಲ್ಲಿದ್ದ ವಿವರಗಳನ್ನು ಮೊಬೈಲ್‍ನಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ.

    ಬಳಿಕ ಈ ನಂಬರ್ ಗಳಿಗೆ ತನ್ನ ಮೊಬೈಲ್ ನಿಂದ, ನಾನು ಮಾನವ ಸಂಪನ್ಮೂಲ ಅಧಿಕಾರಿ ಎಂದು ಪರಿಚಯಿಸಿ, ನಿಮಗೆ ಉದ್ಯೋಗ ಸಿಕ್ಕಿದೆ ಎಂದು ಯುವತಿಯರಿಗೆ ಕರೆ ಮಾಡುತ್ತಿದ್ದ. ಇದಾದ ಬಳಿಕ ಸಂದರ್ಶನ ಬರುವಂತೆ ಹೇಳಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಉತ್ತರ ಪ್ರದೇಶದ ವಿಳಾಸ ನೀಡಿ ಹಬೀಬ್ ಸಿಮ್ ಕಾರ್ಡ್ ಖರೀದಿಸಿದ್ದು, ಈ ಸಿಮ್ ಮೂಲಕ ತನ್ನ ಕೃತ್ಯವನ್ನು ಎಸಗುತ್ತಿದ್ದ.

    ಮಂಗಳೂರು ಯುವತಿಗೆ ಏನು ಮಾಡಿದ್ದ?
    ಮಂಗಳೂರು ಮೂಲದ ಯುವತಿಯೊಬ್ಬರು ಬಿಕಾಂ ಮುಗಿಸಿ ಬ್ಯಾಂಕ್ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ಮೇ 15 ರಂದು ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹುದ್ದೆಗಾಗಿ ಖಾಸಗಿ ಬ್ಯಾಂಕ್‍ವೊಂದರಲ್ಲಿ ಸಂದರ್ಶನವನ್ನು ಅಟೆಂಡ್ ಮಾಡಿದ್ದರು. ನಾಲ್ಕು ಸುತ್ತಿನ ಸಂದರ್ಶನದಲ್ಲಿ ಪಾಸ್ ಆಗಿದ್ದ ಯುವತಿ ಐದನೇ ಸುತ್ತು ಮುಗಿದ ಬಳಿಕ ಫಲಿತಾಂಶಕ್ಕಾಗಿ ಕಾಯುತ್ತಿದ್ದರು.

    ಈ ವೇಳೆ ಯುವತಿಗೆ ಅಪರಿಚಿತ ನಂಬರ್‍ನಿಂದ ಕರೆ ಬಂದಿತ್ತು. ನಾನು ಬ್ಯಾಂಕ್‍ನ ಹೆಚ್‍ಆರ್, ನನ್ನ ಹೆಸರು ರೋಹನ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ಏನೋ ಮುಖ್ಯವಾದ ವಿಷಯ ಚರ್ಚಿಸಬೇಕು ಎಂದು ಹೇಳಿ ಯುವತಿಯನ್ನು ಬ್ಯಾಂಕಿನಿಂದ ಹೊರಬರುವಂತೆ ಹೇಳಿದ್ದ. ಯುವತಿ ಹೊರಹೋದ ನಂತರ ಆ ವ್ಯಕ್ತಿ, ಅಂತಿಮ ಸುತ್ತಿನ
    ಸಂದರ್ಶನದಲ್ಲಿ ಫೇಲ್ ಆಗಿರುವುದಾಗಿ ಯುವತಿಗೆ ತಿಳಿಸಿದ್ದ.

    ಫೇಲ್ ಆಗಿದ್ದರೂ ನೀವು ಕೆಲಸಕ್ಕೆ ಸೇರಬಹುದು ಎಂದು ಯುವತಿಗೆ ಅಮಿಷವೊಡ್ಡಿದ್ದ. ಈ ಬಗ್ಗೆ ಚರ್ಚೆ ಮಾಡುವುದಿದೆ ಮನೆಗೆ ಬನ್ನಿ ಎಂದು ಕರೆದಿದ್ದ. ಇದಕ್ಕೆ ಯುವತಿ ನಿರಾಕರಿಸಿದ್ದಕ್ಕೆ ಇಲ್ಲಿ ತುಂಬಾ ಟ್ರಾಫಿಕ್ ಇದೆ. ನಿಮ್ಮ ಧ್ವನಿ ಕೇಳಿಸುತ್ತಿಲ್ಲ. ಕಾರು ಹತ್ತಿ ಎಂದು ಕರೆದಿದ್ದ. ಆದ್ರೆ ಕಾರು ಹತ್ತಲು ಯುವತಿ ನಿರಾಕರಿಸಿದ್ದು, ಈ ವೇಳೆ ಆತ ನಡುರಸ್ತೆಯಲ್ಲೇ ಯವತಿಯನ್ನ ಎಳೆದು ಕಾರಿನಲ್ಲಿ ಕೂರಿಸಲು ಮುಂದಾಗಿದ್ದ. ಆತನಿಂದ ತಪ್ಪಿಸಿಕೊಂಡು ಯುವತಿ ಕಚೇರಿಯೊಳಗೆ ತೆರಳಿದ್ರು. ಕಚೇರಿಯಲ್ಲಿ ವಿಚಾರಿಸಿದಾಗ ಆ ಹೆಸರಿನ ವ್ಯಕ್ತಿ ಕೆಲಸದಲ್ಲಿ ಇಲ್ಲ ಎಂಬುದು ಪತ್ತೆಯಾಗಿತ್ತು. ಈ ಬಗ್ಗೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

  • ಭಾರತೀಯ ಸೇನೆಯಿಂದ 5 ಪಾಕ್ ಸೈನಿಕರ ಹತ್ಯೆ

    ಭಾರತೀಯ ಸೇನೆಯಿಂದ 5 ಪಾಕ್ ಸೈನಿಕರ ಹತ್ಯೆ

    ಶ್ರೀನಗರ: ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿ 5 ಮಂದಿ ಪಾಕ್ ಸೈನಿಕರನ್ನು ಹತ್ಯೆ ಮಾಡಿದೆ.

    ಬಿಂಬಿರ್ ಮತ್ತು ಬಾಟ್ಲರ್ ಸೆಕ್ಟರ್ ನಲ್ಲಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸುತ್ತಿದ್ದ ಪಾಕ್ ಸೈನಿಕರ ಮೇಲೆ ಭಾರತೀಯ ಸೈನಿಕರು ಪ್ರತಿದಾಳಿ ನಡೆಸಿದ್ದು, ಈ ದಾಳಿಯಲ್ಲಿ 5 ಮಂದಿ ಸೈನಿಕರು ಹತ್ಯೆಯಾಗಿದ್ದರೆ, 6 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

    ಶ್ರೀನಗರದಲ್ಲಿ ಇಂದು ಸೇನೆಯ ಜನರಲ್ ಬಿಪಿನ್ ರಾವತ್ ಅವರು 7 ಕಮಾಂಡರ್ ಜೊತೆ ಸಭೆ ನಡೆಸಿದ್ದರು.

  • ಬುರ್ಹಾನ್ ವಾನಿ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿದ ಯೋಧರು

    ಬುರ್ಹಾನ್ ವಾನಿ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿದ ಯೋಧರು

    ಶ್ರೀನಗರ: ಉಗ್ರ ಬುರ್ಹಾನಿ ವಾನಿ ಸಾವಿನ ಬಳಿಕ ಹಿಜ್ಬುಲ್ ಮುಜಾಹಿದ್ದೀನ್ ಉಗ್ರಸಂಘಟನೆಯ ಉತ್ತರಾಧಿಕಾರಿಯಾಗಿದ್ದ ಸಬ್ಜರ್ ಅಹಮದ್ ಭಟ್ ಸೇರಿದಂತೆ ಎರಡು ಪ್ರತ್ಯೇಕ ಘಟನೆಯಲ್ಲಿ 8 ಉಗ್ರರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆ.

    ಭಾರತೀಯ ಸೇನೆ ಶನಿವಾರ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆಸಿದ ಎನ್‍ಕೌಂಟರ್‍ನಲ್ಲಿ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಇದರಲ್ಲಿ ಓರ್ವ ಬುರ್ಹಾನ್ ವಾನಿ ಉತ್ತರಾಧಿಕಾರಿ ಭಟ್ ಎಂದು ಪೊಲೀಸ್ ಮಹಾನಿರ್ದೇಶಕ ಎಸ್‍ಪಿ ವೈದ್ ಸ್ಪಷ್ಟಪಡಿಸಿದ್ದಾರೆ.

    ಸೊಮಿಹ್ ಗ್ರಾಮದ ಟ್ರಾಲ್ ಪ್ರದೇಶದಲ್ಲಿ ಹಿಜ್ಬುಲ್ ಮುಜಾಹಿದ್ದೀನ್‍ನ ಉಗ್ರರು ಇದ್ದಾರೆ ಎಂಬ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಶೋಧ ಕಾರ್ಯ ನಡೆಸಿತ್ತು. ಇಲ್ಲಿನ ಮನೆಯೊಂದರಲ್ಲಿ ಅಡಗಿದ್ದ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಯೋಧರು ಕೂಡ ಪ್ರತಿದಾಳಿ ನಡೆಸಿದ್ದು,  ಇಬ್ಬರು ಉಗ್ರರನ್ನು ಬಲಿಪಡೆದುಕೊಳ್ಳುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ ಅಂತಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆಯ ಬಳಿಕ ಕಾಶ್ಮೀರ ಕಣಿವೆಯ ಸುತ್ತಮುತ್ತ ಪ್ರತಿಭಟನೆ ಹಾಗೂ ಕಲ್ಲು ತೂರಾಟ ನಡೆದಿದೆ.

    2016ರ ಜುಲೈ 8ರಂದು ಉಗ್ರ ಬುರ್ಹಾನ್ ವಾನಿಯನ್ನು ದಕ್ಷಿಣ ಕಾಶ್ಮೀರದಲ್ಲಿ ಸೇನೆ ಕೊಂದು ಹಾಕಿತ್ತು. ಬುರ್ಹಾನ್ ವಾನಿ ಹತ್ಯೆ ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಎಡೆ ಮಾಡಿಕೊಟ್ಟಿತ್ತು.

    ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಜಮ್ಮು ಕಾಶ್ಮೀರದ ಬರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆ ಬಳಿ ಭಾರತೀಯ ಯೋಧರು 6 ಉಗ್ರರನ್ನು ಹತ್ಯೆ ಮಾಡಿದ್ದಾರೆ.

  • ನಾವೂ ಭಾರತದ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ್ದೇವೆ: ಪಾಕ್‍ನಿಂದ ನಕಲಿ ವಿಡಿಯೋ ರಿಲೀಸ್

    ನಾವೂ ಭಾರತದ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ್ದೇವೆ: ಪಾಕ್‍ನಿಂದ ನಕಲಿ ವಿಡಿಯೋ ರಿಲೀಸ್

    ನವದೆಹಲಿ: ಭಾರತದ ದಾಳಿಗೆ ಜಮ್ಮು-ಕಾಶ್ಮೀರದ ನೌಶೇರಾ ಸೆಕ್ಟರ್ ನಲ್ಲಿ ಪ್ರತಿದಾಳಿ ನಡೆಸಿ ಅಲ್ಲಿನ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ್ದೇವೆ ಅಂತಾ ಪಾಕಿಸ್ತಾನ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

    ಸುಮಾರು 87 ಸೆಕೆಂಡ್ ಇರೋ ಈ ವಿಡಿಯೋವನ್ನು ಮೇ 23ರಂದು ಪಾಕಿಸ್ತಾನಿ ವಕ್ತಾರರೊಬ್ಬರು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿ, ಪಾಕಿಸ್ತಾನದ ಮುಗ್ಧ ನಾಗರಿಕರ ಮೇಲೆ ದಾಳಿ ನಡೆಸಿದ ಪ್ರತೀಕಾರವಾಗಿ ನಾವು ಮೇ 13ರಂದು ಭಾರತದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.

    ಪಾಕಿಸ್ತಾನದ ಸೇನಾ ಬಂಕರ್ ಗಳ ಮೇಲೆ ದಾಳಿ ನಡೆಸಿದ ವಿಡಿಯೋವನ್ನು ಭಾರತ ಬಹಿರಂಗಪಡಿಸಿದ ಮರುದಿನವೇ ಪಾಕಿಸ್ತಾನ ಈ ವಿಡಿಯೋವನ್ನು ಬಹಿರಂಗಪಡಿಸಿದೆ. ಆದ್ರೆ ಇದೊಂದು ನಕಲಿ ವಿಡಿಯೋ ಅಂತಾ ಭಾರತದ ಸೇನಾ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಭಾರತೀಯ ಸೇನೆಯಿಂದ ಪಾಕ್ ಸೇನಾ ಪೋಸ್ಟ್ ಗಳ ಧ್ವಂಸ: ವಿಡಿಯೋ ನೋಡಿ

    ಭಾರತದ ಸೇನಾ ನೆಲೆಗಳು ಅತ್ಯಂತ ಧೃಡವಾದ ಗೋಡೆಗಳನ್ನ ಹೊಂದಿದ್ದು, ಗನ್ ಗಳ ದಾಳಿಯನ್ನು ಕೂಡ ತಡೆದುಕೊಳ್ಳುವ ಸಾಮರ್ಥ್ಯ  ಹೊಂದಿದೆ. ಅಲ್ಲದೇ ಇಷ್ಟೊಂದು ಪ್ರಮಾಣದ ದಾಳಿಯಾದರೆ ಅದು ಮೇಲ್ಭಾಗದಲ್ಲೇ ಸ್ಫೋಟವಾಗುತ್ತದೆ. ಈ ವಿಡಿಯೋವನ್ನು ಸರಿಯಾಗಿ ಗಮನಿಸಿದಾಗ ಅದರಲ್ಲಿ ಎಡಿಟ್ ಮಾಡಿರೋ ಮಾರ್ಕ್‍ಗಳು ಕಂಡುಬರುತ್ತದೆ. ಐಇಡಿ ದಾಳಿ ಆದರೆ ಮಾತ್ರ ರೀತಿಯ ಸ್ಫೋಟವಾಗುತ್ತದೆ. ಆರ್ಟಿಲರಿ ಗನ್ ಮೂಲಕ ದಾಳಿ ಎಸಗಿದರೆ ಆ ರೀತಿಯ ಸ್ಫೋಟ ಕಂಡು ಆಗುವುದಿಲ್ಲ ಎಂದು ಸೇನಾ ಮೂಲಗಳನ್ನು ಆಧರಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

     

  • ಜಮ್ಮುವಿನಲ್ಲಿ ಮೈಸೂರು ಯೋಧನಿಗೆ ಗುಂಡು – ಯೋಧನ ನೋಡಲು ಅವಕಾಶ ಕಲ್ಪಿಸುವಂತೆ ಕುಟುಂಬ ಮನವಿ

    ಜಮ್ಮುವಿನಲ್ಲಿ ಮೈಸೂರು ಯೋಧನಿಗೆ ಗುಂಡು – ಯೋಧನ ನೋಡಲು ಅವಕಾಶ ಕಲ್ಪಿಸುವಂತೆ ಕುಟುಂಬ ಮನವಿ

    ಮೈಸೂರು: ಜಮ್ಮು ಕಾಶ್ಮೀರದ ಕುಪ್ವಾರಾದಲ್ಲಿ ಕಳೆದ ಬುಧವಾರ ಉಗ್ರಗಾಮಿಗಳ ಜೊತೆಗಿನ ಕಾದಾಟದಲ್ಲಿ ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಭದ್ರೇಗೌಡನ ಕೊಪ್ಪಲಿನ ಯೋಧ ರಮೇಶ್ ತೀವ್ರವಾಗಿ ಗಾಯಗೊಂಡಿದ್ದಾರೆ.

    ಗಾಯಗೊಂಡಿರುವ ರಮೇಶ್ ಅವರನ್ನು ನೋಡಲು ಅವಕಾಶ ಕಲ್ಪಿಸಿ ಎಂದು ರಮೇಶ್ ಪತ್ನಿ ರೇಖಾ ಮತ್ತು ತಾಯಿ ಪುಟ್ಟಮ್ಮ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಯೋಧ ರಮೇಶ್ ಅವರ ಆರೋಗ್ಯ ಸ್ಥಿತಿ ಬಗ್ಗೆ ನಮಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ, ಖುದ್ದಾಗಿ ಅವರನ್ನು ನೋಡಬೇಕಿದೆ. ಇದರಿಂದ, ನಮ್ಮ ಕುಟುಂಬದ ಒಬ್ಬರನ್ನು ಅಲ್ಲಿಗೆ ಕಳುಹಿಸಲು ಅವಕಾಶ ಕಲ್ಪಿಸಿ ಎಂದು ಅವರು ಮೈಸೂರು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.

    ಜಮ್ಮುವಿನ ಕುಪ್ವಾರಾ ಜಿಲ್ಲೆಯ ಪಂಚಗಾವು ಎಂಬಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಯೋಧರ ಮೇಲೆ ಉಗ್ರರು ಫೈರಿಂಗ್ ನಡೆಸಿದ್ದರು. ಇದರಲ್ಲಿ, ಇಬ್ಬರು ಭಾರತೀಯ ಯೋಧರು ಹುತಾತ್ಮರಾದರೆ ಈ ತಂಡದಲ್ಲಿದ್ದ ಯೋಧ ರಮೇಶ್ ಗಾಯಗೊಂಡು ಶ್ರೀನಗರದ ಮಿಲಿಟರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

    ರಮೇಶ್ ಆಸ್ಪತ್ರೆಗೆ ದಾಖಲಾಗಿರೋ ಬಗ್ಗೆ ಸೇನಾ ಅಧಿಕಾರಿಗಳು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಆದ್ರೆ, ಯೋಧನ ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ಕುಟುಂಬಕ್ಕೆ ಮನವರಿಕೆ ಆಗುತ್ತಿಲ್ಲ. ಹೀಗಾಗಿ ಖುದ್ದಾಗಿ ಹೋಗಿ ನೋಡಲು ಅವಕಾಶ ಕೇಳುತ್ತಿದ್ದಾರೆ.