ಇಸ್ಲಾಮಾಬಾದ್: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಭಾರತದ ಸರ್ಕಾರದ ಕ್ರಮಕ್ಕೆ ಪಾಕಿಸ್ತಾನದಿಂದ ವಿರೋಧ ವ್ಯಕ್ತವಾಗಿದೆ. ಈ ಕ್ರಮ ಅಕ್ರಮವೆಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕಿಡಿಕಾರಿದ್ದಾರೆ.
ಭಾರತ ಕಾಶ್ಮೀರದ ವಿಚಾರದಲ್ಲಿ ತೆಗೆದುಕೊಂಡಿರುವ ಕ್ರಮ ಅಕ್ರಮ ಮತ್ತು ಏಕಪಕ್ಷೀಯವಾಗಿದೆ. ತನ್ನದಲ್ಲದ ಪ್ರದೇಶದ ಬಗ್ಗೆ ವಿಪರೀತ ಕಾಳಜಿ ತೋರಿಸುತ್ತಿರುವ ಭಾರತದ ವಿರುದ್ಧ ವಿಶ್ವಸಂಸ್ಥೆಗೆ ದೂರು ನೀಡುವುದಾಗಿ ಪಾಕ್ ತಿಳಿಸಿದೆ.

ಅಧಿಕೃತ ಮಾಹಿತಿ ಪ್ರಕಾರ, ಮಲೇಷ್ಯಾದ ಮಹಾತಿರ್ ಮೊಹಮದ್ ಮತ್ತು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಜೊತೆ ಪಾಕ್ ಪ್ರಧಾನಿ ಅವರು ಕಾಶ್ಮೀರದ ಪರಿಸ್ಥಿತಿ ಕುರಿತು ಮಾತನಾಡುತ್ತಿದ್ದಾಗ, ಕಾಶ್ಮೀರದ ಸ್ಥಾನಮಾನವನ್ನು ಬದಲಾಯಿಸುವುದು ಕಾನೂನುಬಾಹಿರ, ಅಕ್ರಮ ಮತ್ತು ವಿಶ್ವಸಂಸ್ಥೆಯ ನಿರ್ಣಯಗಳ ಉಲ್ಲಂಘನೆ. ಭಾರತದ ಈ ನಡೆಯು ಪರಮಾಣು ಸಾಮರ್ಥ್ಯವುಳ್ಳ ನೆರೆ ರಾಷ್ಟ್ರಗಳ ಜೊತೆಗಿರುವ ಸಂಬಂಧವನ್ನು ಮತ್ತಷ್ಟು ಹದಗೆಡಿಸುತ್ತದೆ ಎಂದು ಹೇಳಿದ್ದರು ಎನ್ನಲಾಗಿದೆ. ಇದನ್ನೂ ಓದಿ:ಪಿಓಕೆಯೊಂದಿಗೆ ಅಕ್ಷಯ್ ಚಿನ್ ಭಾರತದ ಅವಿಭಾಜ್ಯ ಅಂಗ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಮ್ಮು-ಕಾಶ್ಮೀರವನ್ನು ವಿವಾದಗ್ರಸ್ತ ಪ್ರದೇಶ ಎಂದು ಗುರುತಿಸಲಾಗಿದೆ. ಆದ್ದರಿಂದ ಈ ವಿಷಯದಲ್ಲಿ ಭಾರತ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಳ್ಳುವುದು ಸರಿಯಲ್ಲ. ಕಣಿವೆ ರಾಜ್ಯ ಹಾಗೂ ಪಾಕಿಸ್ತಾನದ ಜನ ಇದನ್ನು ಒಪ್ಪುವುದಿಲ್ಲ ಎಂದು ಪಾಕ್ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಪಾಕ್ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತದೆ ಎಂದು ಮೊದಲೇ ಅರಿತ್ತಿದ್ದ ಭಾರತವು ರಾಜ್ಯಸಭೆಯಲ್ಲಿ ಘೋಷಣೆಯಾಗುತ್ತಿದ್ದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್, ರಷ್ಯಾ, ಫ್ರಾನ್ಸ್, ಜರ್ಮನಿಯ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಪರಿಚ್ಛೇಧ 370, 35ಎ ರದ್ದು ಮಾಡುವ ಬಗ್ಗೆ ಮಾಹಿತಿ ನೀಡಿತ್ತು.
ಭಾರತ ಜಮ್ಮು-ಕಾಶ್ಮೀರದ ಮೇಲೆ ತೆಗೆದುಕೊಂಡಿರುವ ಕ್ರಮದಿಂದ ಪಾಕಿಸ್ತಾನ ಕೆಂಗೆಟ್ಟಿದ್ದು, ಪಾಕ್ ಅಧ್ಯಕ್ಷ ಆರೀಫ್ ಅಲ್ವಿ ಅವರು ಮಂಗಳವಾರ ದಿಢೀರ್ ಸಂಸತ್ತಿನ ಜಂಟಿ ಅಧಿವೇಶನ ಕರೆದಿದ್ದಾರೆ. ಇದನ್ನೂ ಓದಿ:ಏನಿದು ಆರ್ಟಿಕಲ್ 370, 35 (ಎ) ಇದು ಹೇಗೆ ಜಾರಿಗೆ ಬಂತು?
ಪರಿಚ್ಛೇಧ 370, 35ಎ ಎಂದರೇನು?
35(ಎ) ಪ್ರಕಾರ, 1956ರಲ್ಲಿ ಜಮ್ಮು-ಕಾಶ್ಮೀರಕ್ಕಾಗಿ ಪ್ರತ್ಯೇಕ ಸಂವಿಧಾನವನ್ನು ರಚಿಸಲಾಗಿದ್ದು, ಇದು ರಾಜ್ಯದ ಶಾಶ್ವತ ನಿವಾಸಿಗಳನ್ನು ನಿರ್ಧರಿಸುತ್ತದೆ. ಈ ವಿಧಿಯ ಪ್ರಕಾರ 1954 ಮೇ 14ಕ್ಕೂ ಮುನ್ನ ರಾಜ್ಯದಲ್ಲಿ ನೆಲೆಸಿದವರು ಅಥವಾ ಕಳೆದ 10 ವರ್ಷಗಳಿಂದ ರಾಜ್ಯದಲ್ಲಿ ನೆಲೆಸಿದ್ದು, ಕಾನೂನು ಬದ್ಧವಾಗಿ ಸ್ಥಿರಾಸ್ತಿ ಹೊಂದಿರುವವರಿಗಷ್ಟೇ ರಾಜ್ಯದ ಶಾಶ್ವತ ನಿವಾಸಿ ಹಕ್ಕು ದೊರೆಯುತ್ತದೆ.

ಈ ವಿಧಿಯ ಪ್ರಕಾರ ಹೊರ ರಾಜ್ಯದವರು ಜಮ್ಮು-ಕಾಶ್ಮೀರದಲ್ಲಿ ಆಸ್ತಿ ಖರೀದಿಸಲು ಅಥವಾ ಸರ್ಕಾರಿ ಉದ್ಯೋಗ ಹೊಂದಲು ಅವಕಾಶವಿಲ್ಲ. 35 (ಎ) ವಿಧಿಯ ಮೂಲ ನಿಯಮವು ಮಹಿಳೆಯರ ವಿಚಾರದಲ್ಲಿ ತಾರತಮ್ಯ ಹೊಂದಿದ್ದು, ಅದರ ಪ್ರಕಾರ ಹೊರ ರಾಜ್ಯದ ವ್ಯಕ್ತಿಯನ್ನು ವಿವಾಹವಾಗುವ ಜಮ್ಮು-ಕಾಶ್ಮೀರ ಮಹಿಳೆ ಶಾಶ್ವತ ನಿವಾಸಿ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ಆದರೆ ಪರುಷರು ಬೇರೆ ರಾಜ್ಯದ ಮಹಿಳೆಯನ್ನು ವಿವಾಹವಾದರೆ ಆ ಪುರಷನ ಹಕ್ಕಿಗೆ ಯಾವುದೇ ಧಕ್ಕೆ ಆಗುವುದಿಲ್ಲ. 2002 ರಲ್ಲಿ ಜಮ್ಮು-ಕಾಶ್ಮೀರ ಹೈಕೋರ್ಟ್ ಐತಿಹಾಸಿಕ ತೀರ್ಪಿನಲ್ಲಿ ಇಂತಹ ಹಕ್ಕನ್ನು ಮಹಿಳೆ ಕಳೆದುಕೊಳ್ಳುವುದಿಲ್ಲ. ಆದರೆ ಈ ದಂಪತಿಗೆ ಜನಿಸುವ ಮಕ್ಕಳಿಗೆ ಶಾಶ್ವತ ನಿವಾಸಿ ಹಕ್ಕು ಇರುವುದಿಲ್ಲ ಎಂದು ತೀರ್ಪು ನೀಡಿತ್ತು.
ಕಾಶ್ಮೀರಕ್ಕೆ ವಿಶೇಷ ಅಧಿಕಾರ:
370 ಭಾರತ ಸಂವಿಧಾನದ ಈ ವಿಧಿಯು ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ವಾಯತ್ತತೆಯನ್ನು ಕಲ್ಪಿಸುತ್ತದೆ. ಇದರ ಅಡಿಯಲ್ಲಿ ಜಮ್ಮು- ಕಾಶ್ಮೀರದಲ್ಲಿ ರಕ್ಷಣೆ, ವಿದೇಶಾಂಗ ವ್ಯವಹಾರ ಹಾಗೂ ಸಂವಹನ ಈ ಮೂರು ಕ್ಷೇತ್ರಗಳನ್ನು ಹೊರತು ಪಡಿಸಿ, ಬೇರೆ ಯಾವುದೇ ಕಾನೂನು ಜಾರಿಗೊಳಿಸುವ ಮುನ್ನ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕು.
ಯುದ್ಧ, ಬಾಹ್ಯ ಆಕ್ರಮಣ ಹೊರತಾಗಿ ಬೇರೆ ಯಾವುದೇ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದಲ್ಲಿ ತುರ್ತು ಪರಿಸ್ಥಿತಿ ಹೇರಲು ಕೇಂದ್ರಕ್ಕೆ ಅಧಿಕಾರವಿಲ್ಲ. ಆಂತರಿಕ ಗಲಭೆ, ರಾಜಕೀಯ ಅಸ್ಥಿರತೆ ಮುಂತಾದ ಸಂದರ್ಭಗಳಲ್ಲಿ ರಾಜ್ಯ ಸರ್ಕಾರದ, ರಾಜ್ಯಪಾಲರ ಮನವಿ ಅಥವಾ ಸೂಚನೆ ಮೇರೆಗೆ ಮಾತ್ರ ತುರ್ತು ಪರಿಸ್ಥಿತಿ ಹೇರಬಹುದು.
ಕೇಂದ್ರ ಸರ್ಕಾರ ಸೋಮವಾರದಂದು ಜಮ್ಮು ಕಾಶ್ಮೀರ ಕೇಂದ್ರದ ಅಧೀನಕ್ಕೆ ಒಳಪಡಲಿದೆ ಎಂಬ ಮಹತ್ವದ ನಿರ್ಧಾರ ಕೈಗೊಂಡಿದೆ. ಅಲ್ಲದೆ ಜಮ್ಮು-ಕಾಶ್ಮೀರ ವಿಧಾನಸಭೆಯನ್ನು ಒಳಗೊಂಡಿದ್ದರೂ ಕೇಂದ್ರದ ಅಧೀನದಲ್ಲಿ ಬರಲಿದೆ. ಲಡಾಕ್ ಕೇಂದ್ರಾಡಳಿತ ಪ್ರದೇಶವನ್ನಾಗಿಸಿ, ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ಮತ್ತು ಅಧಿಕಾರವನ್ನು ರದ್ದುಗೊಳಿಸಿದೆ.
ರಾಜ್ಯಸಭೆಯಲ್ಲಿ ಕೇಂದ್ರಗೃಹ ಸಚಿವ ಅಮಿತ್ ಶಾ ಪರಿಚ್ಛೇಧ 370 ಮತ್ತು 35(ಎ) ರದ್ದುಗೊಳಿಸಲಾಗುವುದು ಎಂದು ಹೇಳುತ್ತಿದ್ದಂತೆ ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿ ಗಲಾಟೆ ಆರಂಭಿಸಿದ್ದರು. ಆಧರೆ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ, ಅಧಿಕಾರ ರದ್ದುಗೊಳಿಸಿದ ಆದೇಶಕ್ಕೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ಕೇಂದ್ರ ಸರ್ಕಾರದ ಈ ನಡೆಗೆ ಎಲ್ಲೆಡೆಯಿಂದ ಪರ, ವಿರೋಧಗಳು ವ್ಯಕ್ತವಾಗುತ್ತಿದೆ.