Tag: jammu kashmir

  • ಬಾಯಿಗೆ ಬಂದಂತೆ ಪೋಸ್ಟ್ ಹಾಕಬೇಡಿ – ಪಾಕಿಸ್ತಾನ ಅಧ್ಯಕ್ಷರಿಗೆ ಟ್ವಿಟ್ಟರ್ ನೋಟಿಸ್

    ಬಾಯಿಗೆ ಬಂದಂತೆ ಪೋಸ್ಟ್ ಹಾಕಬೇಡಿ – ಪಾಕಿಸ್ತಾನ ಅಧ್ಯಕ್ಷರಿಗೆ ಟ್ವಿಟ್ಟರ್ ನೋಟಿಸ್

    ಇಸ್ಲಾಮಾಬಾದ್: ಬಾಯಿಗೆ ಬಂದಂತೆ ಪೋಸ್ಟ್ ಹಾಕಬೇಡಿ, ಯೋಚಿಸಿ ಪೋಸ್ಟ್ ಹಾಕಿ ಎಂದು ಜಮ್ಮು ಕಾಶ್ಮೀರದ ಕುರಿತು ಪೋಸ್ಟ್ ಮಾಡಿದ್ದ ಪಾಕಿಸ್ತಾನದ ಅಧ್ಯಕ್ಷ ಆರೀಫ್ ಆಲ್ವಿ ಅವರಿಗೆ ಟ್ವಿಟ್ಟರ್ ಕಂಪನಿ ನೋಟಿಸ್ ನೀಡಿದೆ.

    ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವೆ ಶಿರೀನ್ ಮಜಾರಿ, ಪಾಕಿಸ್ತಾನದ ಅಧ್ಯಕ್ಷ ಅಲ್ವಿ ಅವರಿಗೆ ಬಂದ ನೋಟಿಸಿನ ಈಮೇಲ್ ಸ್ಕ್ರೀನ್ ಶಾಟ್‍ನ್ನು ಪೋಸ್ಟ್ ಮಾಡಿದ್ದು, ಇದಕ್ಕೆ ಖಂಡನೆ ವ್ಯಕ್ತಪಡಿಸಿ, ಟ್ವಿಟ್ಟರ್ ಮೋದಿ ಸರ್ಕಾರದ ಮುಖವಾಣಿಯಾಗಲು ಹೊರಟಿದ್ದು, ನಮ್ಮ ಅಧ್ಯಕ್ಷರಿಗೆ ನೋಟಿಸ್ ಕಳುಹಿಸಿದೆ. ಇದು ಕೆಟ್ಟ ಅಭಿರುಚಿಯಾಗಿದೆ, ಅಲ್ಲದೆ, ಹಾಸ್ಯಾಸ್ಪದವಾಗಿದೆ ಎಂದು ಟ್ವಿಟ್ಟರ್ ನ ನೀಡಿದ ನೋಟಿಸ್ ಕುರಿತು ಟೀಕಿಸಿದ್ದಾರೆ.

    ಸೋಮವಾರ ಪಾಕಿಸ್ತಾನದ ಅಧ್ಯಕ್ಷ ಅಲ್ವಿ ಕಾಶ್ಮೀರದ ವಿಚಾರದ ಕುರಿತು ನಡೆಸಿದ ಪ್ರತಿಭಟನಾ ರ್ಯಾಲಿಯ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ನೋಟಿಸ್ ಜಾರಿ ಮಾಡಿದೆ.

    ಭಾನುವಾರ ಪಾಕಿಸ್ತಾನದ ಸಂವಹನ ಸಚಿವ ಮುರಾದ್ ಸಯೀದ್ ಸಹ, ಟ್ವಿಟ್ಟರ್‍ನ ನಿಮ್ಮ ಒಂದು ಪೋಸ್ಟ್ ಭಾರತದ ಕಾನೂನನ್ನು ಉಲ್ಲಂಘಿಸಿದೆ ಎಂದು ಮೈಕ್ರೋ ಬ್ಲಾಗಿಂಗ್‍ನಿಂದ ನನಗೂ ನೋಟಿಸ್ ಬಂದಿದೆ ಎಂದು ತಿಳಿಸಿದ್ದಾರೆ. ಈ ನೋಟೀಸ್‍ನಲ್ಲಿ ಪಾರದರ್ಶಕತೆಯ ದೃಷ್ಟಿಯಿಂದ ನಿಮಗೆ ನಾವು ಸೂಚಿಸಲು ಬಯಸುತ್ತೇವೆ. ನಿಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಷಯವು ಭಾರತದ ಕಾನೂನಿಗೆ ಉಲ್ಲಂಘಿಸಿರುವ ಕುರಿತು ಭಾರತ ಟ್ವಿಟ್ಟರ್‍ಗೆ ತಿಳಿಸಿದೆ. ಇದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇವೆ ಎಂದು ಟ್ವಿಟ್ಟರ್ ಸಚಿವರಿಗೆ ಕಳುಹಿಸಿದ ನೋಟಿಸ್‍ನಲ್ಲಿ ಉಲ್ಲೇಖಿಸಲಾಗಿದೆ.

    ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಅಮಾನುತುಗೊಳಿಸಿವೆ ಎಂದು ಕಳೆದ ವಾರ ಡೈರೆಕ್ಟರ್ ಜನರಲ್(ಡಿಜಿ) ಇಂಟರ್ ಸರ್ವಿಸ್ ಪಬ್ಲಿಕ್ ರಿಲೇಶನ್ಸ್(ಐಎಸ್‍ಪಿಆರ್) ಮೇಜರ್ ಜನರಲ್ ಆಸಿಫ್ ಗಫೂರ್ ತಿಳಿಸಿದ್ದರು. ಕಾಶ್ಮೀರವನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಕ್ಕಾಗಿ ಪಾಕಿಸ್ತಾನದ ಖಾತೆಗಳನ್ನು ಅಮಾನತುಗೊಳಿಸಿರುವುದರ ವಿರುದ್ಧ ಪಾಕಿಸ್ತಾನದ ಅಧಿಕಾರಿಗಳು ಟ್ವಿಟ್ಟರ್ ಹಾಗೂ ಫೇಸ್‍ಬುಕ್ ವಿರುದ್ಧ ಕಿಡಿ ಕಾರಿದ್ದಾರೆ. ಪ್ರಾದೇಶಿಕ ಪ್ರಧಾನ ಕಚೇರಿಯಲ್ಲಿರುವ ಭಾರತೀಯ ಸಿಬ್ಬಂದಿಯೇ ಇದಕ್ಕೆ ಕಾರಣ ಎಂದು ಟ್ವೀಟ್ ಮಾಡಿ ಗಫೂರ್ ಆರೋಪಿಸಿದ್ದಾರೆ.

    ಕೇಂದ್ರ ಸರ್ಕಾರ ಆಗಸ್ಟ್ 5ರಂದು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ, ಎರಡು ಕೇಂದ್ರಾಡಳಿತವನ್ನಾಗಿ ಘೋಷಿಸಿದೆ. ಇದಕ್ಕೆ ಪಾಕಿಸ್ತಾನದಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ಬಲವಾದ ಪ್ರತಿಕ್ರಿಯೆ ನೀಡುತ್ತಿದೆ. ಜಮ್ಮು ಕಾಶ್ಮೀರದ ವಿಚಾರವು ಆಂತರಿಕ ಸಮಸ್ಯೆಯಾಗಿದೆ ಎಂದು ಭಾರತ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪಷ್ಟವಾಗಿ ತಿಳಿಸಿದೆ.

  • ಕಾಶ್ಮೀರಕ್ಕಾಗಿ ಏನು ಬೇಕಾದ್ರೂ ಮಾಡಲು ಸಿದ್ಧ – ಬಾಲ ಬಿಚ್ಚಿದ ಪಾಕ್

    ಕಾಶ್ಮೀರಕ್ಕಾಗಿ ಏನು ಬೇಕಾದ್ರೂ ಮಾಡಲು ಸಿದ್ಧ – ಬಾಲ ಬಿಚ್ಚಿದ ಪಾಕ್

    ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನ ಮಂತ್ರಿ ಇಂದು ತಮ್ಮ ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, ಕಾಶ್ಮೀರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಿದೆ ಎಂದು ತಮ್ಮ ಮೊಂಡುತನವನ್ನ ಪ್ರದರ್ಶಿಸಿದ್ದಾರೆ.

    ಆರ್‍ಎಸ್‍ಎಸ್ ವಿಚಾರಧಾರೆಗಳಿಂದಾಗಿ ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ಭಾರತ ಹಿಂದೇಟು ಹಾಕುತ್ತಿದೆ. ಭಾರತವನ್ನು ಹಿಂದೂಗಳ ರಾಷ್ಟ್ರವನ್ನಾಗಿ ಮಾಡಲು ಆರ್‍ಎಸ್‍ಎಸ್ ಪ್ರಯತ್ನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಒಂದು ತಪ್ಪಿನಿಂದ ಕಾಶ್ಮೀರಿಗರಿಗೆ ಸ್ವಾತಂತ್ರ್ಯದ ದೊಡ್ಡ ಅವಕಾಶ ಲಭಿಸಿದೆ. ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ನಿರ್ಧಾರದಿಂದ ಈ ವಿಚಾರ ಅಂತರಾಷ್ಟ್ರೀಯ ವಿಷಯವಾಗಿ ಬದಲಾಗಿದೆ. ಪ್ರಪಂಚದ ಎಲ್ಲ ಮುಸ್ಲಿಂ ರಾಷ್ಟ್ರಗಳು ಬೆಳವಣಿಗೆಗಳನ್ನು ಗಮನಿಸುತ್ತೇವೆ ಎಂದರು.

    ಕಾಶ್ಮೀರ ವಿಷಯ ಯುದ್ಧವಾಗಿ ಬದಲಾದರೆ, ಎರಡೂ ರಾಷ್ಟ್ರಗಳು ಪರಮಾಣು ಶಕ್ತಿಯನ್ನು ಹೊಂದಿವೆ. ಕಾಶ್ಮೀರಕ್ಕಾಗಿ ನಾವು ಯಾವ ಹಂತ ತಲುಪಲು ಸಿದ್ಧವಿದೆ. ಈ ಶುಕ್ರವಾರದಂದು ಪಾಕಿಸ್ತಾನದಾದ್ಯಂತ ಮಧ್ಯಾಹ್ನ 12ರಿಂದ 12.30ರವರೆಗೆ ಕಾಶ್ಮೀರದ ವಿಚಾರವನ್ನು ಜನರಿಗೆ ತಿಳಿಸುತ್ತೇವೆ ಎಂದು ಹೇಳಿದರು.

    ಕಾಶ್ಮೀರಿಗರು ತೊಂದರೆಯಲ್ಲಿದ್ದು, ಅವರಿಗೆ ಬೆಂಬಲವಾಗಿ ನಾವು ನಿಲ್ಲಬೇಕಿದೆ. ನಾನು ಸ್ವತಃ ಕಾಶ್ಮೀರದ ರಾಜಧೂತನಾಗಿ ಜಗತ್ತಿನಾದ್ಯಂತ ಸಂಚರಿಸಿ ಈ ವಿಷಯದ ಬಗ್ಗೆ ಮಾತನಾಡುತ್ತೇನೆ. ಸೆಪ್ಟೆಂಬರ್ 27ರಂದು ಸಂಯುಕ್ತ ರಾಷ್ಟ್ರಗಳೊಂದಿಗೆ ಈ ವಿಷಯದ ಕುರಿತಾಗಿ ಚರ್ಚೆ ನಡೆಸುತ್ತೇನೆ. ಕಾಶ್ಮೀರದ ವಿಷಯ ಕುರಿತಾಗಿ ನಾವು ಮಾತನಾಡಲಿ ಸಿದ್ಧವಿದ್ದು, ಭಾರತ ಒಪ್ಪುತ್ತಿಲ್ಲ. ಪದೇ ಪದೇ ನಮ್ಮ ಮೇಲೆ ಆರೋಪಗಳನ್ನು ಮಾಡುತ್ತಾ ಬಂದಿದ್ದು, ನಮ್ಮನ್ನು ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

    ಟ್ರಂಪ್‍ಗೆ ಸಂದೇಶ ರವಾನಿಸಿದ ಮೋದಿ:
    ಫ್ರಾನ್ಸ್ ದೇಶದ ಬಿಯರಿಟ್ಜ್‍ನ ನಗರದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮೋದಿ ಜಮ್ಮು ಕಾಶ್ಮೀರದ ಸಮಸ್ಯೆ ದ್ವಿಪಕ್ಷೀಯವಾದದ್ದು, ಇದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ನಮಗಾಗಿ ಇತರೆ ರಾಷ್ಟ್ರಗಳು ತೊಂದರೆ ಅನುಭವಿಸುವ ಅಗತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.

    ಭಾರತ ಹಾಗೂ ಪಾಕಿಸ್ತಾನ 1947ಕ್ಕೂ ಮೊದಲು ಒಂದಾಗಿತ್ತು. ಹೀಗಾಗಿ ನಮ್ಮ ಸ್ವಂತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಾವು ಸಮರ್ಥರಾಗಿದ್ದೇವೆ. ಜಮ್ಮು ಕಾಶ್ಮೀರದ ವಿಚಾರವು ದ್ವಿಪಕ್ಷೀಯ ವಿಷಯವಾಗಿದೆ ಎಂದು ಒತ್ತಿ ಹೇಳುವ ಮೂಲಕ ಈ ಹಿಂದೆ ಎರಡು ಬಾರಿ ಜಮ್ಮು ಕಾಶ್ಮೀರದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವ ಕುರಿತು ಹೇಳಿಕೆ ನೀಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

  • 370ನೇ ವಿಧಿ ರದ್ದು : ಇದು ಯಾವ ರೀತಿಯ ಅರ್ಜಿ – ಅರ್ಜಿದಾರರಿಗೆ ಸುಪ್ರೀಂ ತರಾಟೆ

    370ನೇ ವಿಧಿ ರದ್ದು : ಇದು ಯಾವ ರೀತಿಯ ಅರ್ಜಿ – ಅರ್ಜಿದಾರರಿಗೆ ಸುಪ್ರೀಂ ತರಾಟೆ

    ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನದವನ್ನು ರದ್ದುಗೊಳಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಇದು ಯಾವ ರೀತಿಯ ಅರ್ಜಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಅರ್ಜಿದಾರ ಎಂ.ಎಲ್.ಶರ್ಮಾ ಅವರಿಗೆ ಇದು ಯಾವ ರೀತಿಯ ಅರ್ಜಿ? ನೀವು ಏನನ್ನು ಪ್ರಶ್ನೆ ಮಾಡುತ್ತಿದ್ದೀರಿ? ನಿಮ್ಮ ಮನವಿ ಏನು ಎಂದು ಖಾರವಾಗಿ ಪ್ರಶ್ನಿಸಿದರು. ನಿಮ್ಮ ಅರ್ಜಿಯನ್ನು ನಾನು ಅರ್ಧಗಂಟೆ ಓದಿದ್ದೇನೆ. ನನಗೆ ಅರ್ಥ ಆಗಲಿಲ್ಲ ಎಂದು ರಂಜನ್ ಗೊಗೋಯ್ ಹೇಳಿದರು.

    ನ್ಯಾಯಮೂರ್ತಿಗಳಾದ ರಂಜನ್ ಗೊಗೋಯ್, ಎಸ್‍ಎ ಬೊಬ್ಡೆ, ಎಸ್‍ಎ ನಾಜೀರ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ಇಂದು ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ 6 ಮಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು.

    ಕಾಶ್ಮೀರ ಟೈಮ್ಸ್ ಸಂಪಾದಕರು ಮಾಧ್ಯಮಗಳಿಗೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದರು. ಈ ವೇಳೆ ಮುಖ್ಯ ನ್ಯಾಯಮೂರ್ತಿಗಳು ಮಾಧ್ಯಮಗಳ ಮೇಲಿನ ನಿರ್ಬಂಧವನ್ನು ತೆಗೆದುಹಾಕುವ ವಿಚಾರದಲ್ಲಿ ನಾವು ಸ್ವಲ್ಪ ಸಮಯವನ್ನು ನೀಡಲು ಬಯಸುತ್ತೇವೆ ಎಂದು ಹೇಳಿದರು. ಈ ವೇಳೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಕಾಶ್ಮೀರ ಟೈಮ್ಸ್ ಜಮ್ಮುವಿನಿಂದ ಪ್ರಕಟವಾಗುತ್ತದೆ ಹೊರತು ಶ್ರೀನಗರದಿಂದಲ್ಲ. ಯಾಕೆ ಶ್ರೀನಗರಿಂದ ಮುದ್ರಣ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

    ಲ್ಯಾಡ್‍ಲೈನ್ ಮತ್ತು ಬ್ರಾಡ್‍ಲೈನ್ ಸಂಪರ್ಕ ಮರುಸ್ಥಾಪಿಸಲಾಗುತ್ತದೆ. ಇವತ್ತು ಸಂಜೆಯ ಒಳಗಡೆ ಇವುಗಳು ಮತ್ತೆ ಕಾರ್ಯನಿರ್ವಹಿಸುತ್ತದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಇಂದು ಜಮ್ಮು ಕಾಶ್ಮೀರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಿಂದ ಕರೆ ಬಂದಿದೆ ಎಂದು ಅರ್ಜಿದಾರರ ಗಮನಕ್ಕೆ ತಂದರು.

    ಈ ವೇಳೆ ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಣೆಯಾಗುತ್ತದೆ. ಭದ್ರತಾ ಸಂಸ್ಥೆಯ ಮೇಲೆ ನ್ಯಾಯಾಲಯ ನಂಬಿಕೆ ಇಡಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮನವಿ ಮಾಡಿದರು. ನ್ಯಾಯಾಲಯ ಮುಂದಿನ ವಿಚಾರಣೆಗಾಗಿ ಯಾವುದೇ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಿಲ್ಲ.

  • 6 ದಿನಗಳಿಂದ ಯಾವುದೇ ಗುಂಡಿನ ದಾಳಿ ನಡೆದಿಲ್ಲ – ಜಮ್ಮು ಕಾಶ್ಮೀರ ಪೊಲೀಸ್ ಸ್ಪಷ್ಟನೆ

    6 ದಿನಗಳಿಂದ ಯಾವುದೇ ಗುಂಡಿನ ದಾಳಿ ನಡೆದಿಲ್ಲ – ಜಮ್ಮು ಕಾಶ್ಮೀರ ಪೊಲೀಸ್ ಸ್ಪಷ್ಟನೆ

    ಶ್ರೀನಗರ: ಕಳೆದ 6 ದಿನಗಳಿಂದ ಕಾಶ್ಮೀರದಲ್ಲಿ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

    ಜಮ್ಮು ಕಾಶ್ಮೀರ ಜನತೆ ಯಾವುದೇ ತಿರುಚಲಾದ ಸುದ್ದಿಯನ್ನು ನಂಬಬಾರದು. ಕಣಿವೆಯಲ್ಲಿ ಜನರ ಮೇಲೆ ಗುಂಡಿನ ದಾಳಿ ನಡೆದಿದೆ ಎನ್ನುವುದು ಸುಳ್ಳಿನ ಸುದ್ದಿ. ಕಳೆದ 6 ದಿನಗಳಿಂದ ಒಂದೇ ಒಂದು ಬುಲೆಟ್ ಯಾರ ಮೇಲೂ ಪ್ರಯೋಗ ಮಾಡಿಲ್ಲ. ಪರಿಸ್ಥಿತಿ ಈಗ ಸುಧಾರಣೆ ಆಗುತ್ತಿದ್ದು ಜನ ಸಹಕಾರ ನೀಡುತ್ತಿದ್ದಾರೆ. ಹಲವು ಪ್ರದೇಶಗಳಲ್ಲಿ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ. ಶ್ರೀನಗರ ಮತ್ತು ಹಲವು ನಗರದಲ್ಲಿ ಜನ ಈದ್ ಹಬ್ಬಕ್ಕೆ ವಸ್ತುಗಳನ್ನು ಖರೀದಿಸುತ್ತಿದ್ದಾರೆ ಎಂದು ಜಮ್ಮು ಕಾಶ್ಮೀರ ಪೊಲೀಸ್ ಟ್ವೀಟ್ ಮಾಡಿ ತಿಳಿಸಿದೆ.

    ಜಮ್ಮು ಕಾಶ್ಮೀರ ಪೊಲೀಸ್ ಅಧಿಕಾರಿ ಇಮ್ತಿಯಾಜ್ ಅವರು ಶ್ರೀನಗರದಲ್ಲಿ ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ಡ್ರೋನ್ ವಿಡಿಯೋವನ್ನು ಪ್ರಕಟಿಸಿದ್ದಾರೆ. ಈ ಮೂಲಕ ವಿದೇಶ ಮಾಧ್ಯಮಗಳಿಗೆ ತಿರುಗೇಟು ನೀಡಿದ್ದಾರೆ.

    ವಿದೇಶಿ ಮಾಧ್ಯಮಗಳು ಜಮ್ಮು ಕಾಶ್ಮೀರದಲ್ಲಿ ಪ್ರತಿಭಟನೆ ಜೋರಾಗಿವೆ. ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿ ಮಾಡಿತ್ತು.

  • ವಿಶ್ವಸಂಸ್ಥೆಯ ಮೊರೆ ಹೋಗಿದ್ದ ಪಾಕಿಗೆ ಭಾರೀ ಮುಖಭಂಗ

    ವಿಶ್ವಸಂಸ್ಥೆಯ ಮೊರೆ ಹೋಗಿದ್ದ ಪಾಕಿಗೆ ಭಾರೀ ಮುಖಭಂಗ

    ನ್ಯೂಯಾರ್ಕ್: ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕೆಂದು ವಿಶ್ವಸಂಸ್ಥೆಯ ಮೊರೆ ಹೋಗಿದ್ದ  ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ.

    ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದು ಮಾಡಿದ ವಿಚಾರ ಸಂಬಂಧ ಪಾಕಿಸ್ತಾನ  ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪತ್ರ ಬರೆದು ವಿಶ್ವಸಂಸ್ಥೆಯ ನಿರ್ಧಾರವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ದೂರು ನೀಡಿತ್ತು. ಅಷ್ಟೇ ಅಲ್ಲದೇ ಎರಡು ದೇಶಗಳ ಮಧ್ಯೆ ಸಂಧಾನ ಮಾಡುವಂತೆ ಮನವಿ ಮಾಡಿತ್ತು. ಈ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷೆ  ಜೊವಾನ್ನಾ ವ್ರೊನೆಕ್ಕಾ ಹೇಳಿದ್ದಾರೆ.

    ಪಾಕ್ ಬರೆದ ಪತ್ರಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ನಲ್ಲಿ ಮಾಧ್ಯಮಗಳು ಪ್ರತಿಕ್ರಿಯೆ ಕೇಳಲು ಬಂದಾಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದಾದ ಬಳಿಕ ವಿಶ್ವಂಸಂಸ್ಥೆಯ ಅಧ್ಯಕ್ಷ ಆಂಟೋನಿಯೋ ಗುಟೆರಸ್ ಅವರ ವಕ್ತಾರರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಶಿಮ್ಲಾ ಒಪ್ಪಂದದ ಪ್ರಕಾರ ದ್ವಿಪಕ್ಷೀಯ ಮಾತುಕತೆಯ ಮೂಲಕ ಈ ರಾಷ್ಟ್ರಗಳು ಕಾಶ್ಮೀರ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು. ಹೀಗಾಗಿ ನಾವು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

    ಪದೇ ಪದೇ ಜಾಗತಿಕ ಮಟ್ಟದಲ್ಲಿ ಮುಖಭಂಗ ಎದುರಿಸುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ ವಿಶ್ವಸಂಸ್ಥೆಗೆ ದೂರು ನೀಡಿತ್ತು. ಅಷ್ಟೇ ಅಲ್ಲದೇ ವಿಶ್ವದ ವಿವಿಧ ರಾಷ್ಟ್ರಗಳು ಸಹ ತನ್ನ ಪರವಾಗಿ ನಿಲ್ಲಬೇಕೆಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮನವಿ ಮಾಡಿದ್ದರು. ಪಾಕ್ ಮಿತ್ರ ಚೀನಾ ಹೊರತುಪಡಿಸಿ ವಿಶ್ವದ ಯಾವುದೇ ಬಲಾಢ್ಯ ರಾಷ್ಟ್ರಗಳು ಭಾರತ ಕೈಗೊಂಡ ಐತಿಹಾಸಿಕಾ ನಿರ್ಧಾರದ ಬಗ್ಗೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಜಮ್ಮು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಿದ ಬಳಿಕ ಪಾಕಿಸ್ತಾನ ಭಾರತದ ಭಾರತೀಯ ಚಲನ ಚಿತ್ರ, ಸಂಜೋತಾ ರೈಲು ಸ್ಥಗಿತ, ದ್ವಿಪಕ್ಷೀಯ ವ್ಯಾಪಾರ ಸ್ಥಗಿತ, ರಾಯಭಾರಿಯನ್ನು ಉಚ್ಚಾಟನೆ ಮಾಡಿತ್ತು.

  • ವಿಶ್ವವೇ ಬೆರಗಾಗುವಂತೆ ಜಮ್ಮು ಕಾಶ್ಮೀರದ ಅಭಿವೃದ್ಧಿ- ನರೇಂದ್ರ ಮೋದಿ

    ವಿಶ್ವವೇ ಬೆರಗಾಗುವಂತೆ ಜಮ್ಮು ಕಾಶ್ಮೀರದ ಅಭಿವೃದ್ಧಿ- ನರೇಂದ್ರ ಮೋದಿ

    – ಜಮ್ಮು-ಕಾಶ್ಮೀರದಲ್ಲಿ ಏಮ್ಸ್, ಐಐಟಿ ಸ್ಥಾಪನೆ
    – ರೈಲ್ವೇ ಸಂಪರ್ಕ, ವಿಮಾನ ನಿಲ್ದಾಣ ಅಭಿವೃದ್ಧಿ

    ನವದೆಹಲಿ: ಕಾಶ್ಮೀರವನ್ನು ವಿಶ್ವವೇ ನೋಡುವಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ವಿಚಾರದಲ್ಲಿ ಮೋದಿಯವರು ಸಂಸತ್ ಕಲಾಪದಲ್ಲಿ ಹಾಜರಾಗಿದ್ದರೂ ಯಾವುದೇ ಮಾತನಾಡಿರಲಿಲ್ಲ. ಆದರೆ ಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ್ದು ಯಾಕೆ? ಯಾವ ರೀತಿ ಅಭಿವೃದ್ಧಿ ಪಡಿಸುತ್ತೇವೆ ಎನ್ನುವುದನ್ನು ತಿಳಿಸುವ ಮೂಲಕ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

    ಮೋದಿ ಹೇಳಿದ್ದು ಏನು?
    ನಾವು ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದ್ದೇವೆ. ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಜನತೆ ಅನೇಕ ಅಧಿಕಾರಗಳಿಂದ ವಂಚಿತರಾಗಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ.ಬಿ.ಆರ್.ಅಂಬೇಡ್ಕರ್, ಶ್ಯಾಮ್ ಪ್ರಸಾದ್ ಮುಖರ್ಜಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸೇರಿದಂತೆ ಕೋಟ್ಯಂತರ ಜನರು ಭಾರತದ ಏಕೀಕರಣದ ಕನಸನ್ನು ಕಂಡಿದ್ದರು. ಆ ಕನಸು ಈಗ ಪೂರ್ಣಗೊಂಡಿದೆ.

    ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಜನತೆಗೆ ಹೃದಯಪೂರ್ವಕ ಧನ್ಯವಾದ ತಿಳಿಸುತ್ತೇನೆ. 370 ಹಾಗೂ 35 (ಎ) ವಿಧಿ ರದ್ದಗೊಳಿಸಿದ್ದರಿಂದ ಜಮ್ಮು-ಕಾಶ್ಮೀರ ಹಾಗೂ ಲಡಾಖ್‍ದಲ್ಲಿ ಹೊಸ ಯುಗ ಆರಂಭವಾಗಿದೆ. ಇನ್ನುಮುಂದೆ ದೇಶದ ಎಲ್ಲಾ ಜನರಿಗೂ ಸಮಾನ ಹಕ್ಕು, ಕಾನೂನು ಅನ್ವಯವಾಗಲಿದೆ. ಜಮ್ಮು-ಕಾಶ್ಮೀರದ ಜನ ಜನತೆ ಇನ್ನುಮುಂದೆ ಯಾವುದೇ ಆತಂಕ, ಭಯೋತ್ಪಾದನೆ, ಭ್ರಷ್ಟಾಚಾರಕ್ಕೆ ಹೆದರುವ ಅವಶ್ಯಕತೆ ಇರುವುದಿಲ್ಲ.

    370 ಹಾಗೂ 35 (ಎ) ವಿಧಿಯಿಂದ 42 ಸಾವಿರ ಮಂದಿ ಅಮಾಯಕರು ಜೀವ ಕಳೆದುಕೊಂಡಿದ್ದರು. ಅಷ್ಟೇ ಅಲ್ಲದೆ ಪಾಕಿಸ್ತಾನವು ಈ ವಿಧಿಗಳನ್ನು ಅಸ್ತ್ರವಾಗಿ ಬಳಕೆ ಮಾಡಿಕೊಂಡಿತ್ತು. ಈ ವಿಧಿಗಳನ್ನು ಯಾವುದೇ ಮಹಾಮೈತ್ರಿ ಸರ್ಕಾರ ಬಂದರೂ ರದ್ದುಗೊಳಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಮೊದಲು ಇದ್ದ ಸರ್ಕಾರ ಕಾನೂನು ಮಾಡಲು ಭಾರೀ ಕಷ್ಟಪಡುತಿತ್ತು. ಭಾರತದ ಪ್ರತಿಯೊಂದು ರಾಜ್ಯದ ಮಗುವು ಶಿಕ್ಷಣ ಪಡೆಯಬೇಕು ಎಂದು ಅನೇಕ ಯೋಜನೆ ರೂಪಿಸಿದ್ದೇವೆ. ಆದರೆ ಜಮ್ಮು-ಕಾಶ್ಮೀರದ ಮಕ್ಕಳು ಇಂತಹ ಯೋಜನೆಯಿಂದ ವಂಚಿತವಾಗುತ್ತಿದ್ದರು. ಅಷ್ಟೇ ಅಲ್ಲದೆ ದೇಶದ ಹೆಣ್ಣು ಮಕ್ಕಳಿಗೆ ಸಿಗುವ ಹಕ್ಕು, ಸವಲತ್ತುಗಳು ಜಮ್ಮು-ಕಾಶ್ಮೀತರ ಹೆಣ್ಣು ಮಕ್ಕಳಿಗೆ ಸಿಗುತ್ತಿರಲಿಲ್ಲ. ಅತ್ಯಾಚಾರಿಗಳಿಗೆ ಸೂಕ್ತ ಶಿಕ್ಷೆ ಆಗುತ್ತಿರಲಿಲ್ಲ. 370 ವಿಧಿ ಇದ್ದ ಕಾರಣ ಚುನಾವಣೆಯಲ್ಲಿ ದಲಿತರಿಗೆ, ಎಸ್‍ಟಿ, ಎಸ್‍ಸಿ ಸಮುದಾಯದವರಿಗೆ ಮೀಸಲಾತಿ ಸಿಗುತ್ತಿರಲಿಲ್ಲ.

    ಜಮ್ಮು ಕಾಶ್ಮೀರವನ್ನು ಮೂರು ಕುಟುಂಬಗಳು ಮಾತ್ರ ಆಡಳಿತ ನಡೆಸುತಿತ್ತು. ಆದರೆ ನಾವು ಜನ ಆಡಳಿತ ನಡೆಸುವಂತೆ ಮಾಡುತ್ತೇವೆ. ಕೇಂದ್ರಾಡಳಿತವನ್ನಾಗಿ ಘೋಷಿಸಿದ್ದು ತಾತ್ಕಾಲಿಕ ಅಷ್ಟೇ. ಎಲ್ಲವೂ ಸರಿಯಾದರೆ ಮತ್ತೆ ರಾಜ್ಯವನ್ನಾಗಿಸುತ್ತೇವೆ. ಆದರೆ ಲಡಾಖ್ ಜನರ ಆಸೆಯಂತೆ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಇರಿಸುತ್ತೇವೆ ಎಂದು ತಿಳಿಸಿದರು.

    ಜಮ್ಮು-ಕಾಶ್ಮೀರದ ಜನತೆ, ಪೊಲೀಸರು, ಅಧಿಕಾರಿಗಳು ಹಾಗೂ ಕಾರ್ಮಿಕರಿಗೆ ಕೇಂದ್ರ ಸರ್ಕಾರದ ಅನೇಕ ಯೋಜನೆಗಳು ಸಿಗಲಿವೆ. ಜೊತೆಗೆ ಕೇಂದ್ರ ಸರ್ಕಾರವು ಜನರ ಜೀವನಮಟ್ಟ ಸುಧಾರಿಸಲು ಕೈಗಾರಿಕೆ, ಉದ್ಯೋಗ ಸೃಷ್ಟಿಗೆ ಶ್ರಮಿಸಲಿದೆ. ಸೈನಿಕರಾಗಲು ಮುಂದಾಗುವ ಯುವಜನತೆ ಉದ್ಯೋಗ ನೀಡಿ ಸೇನೆಯನ್ನು ಭರ್ತಿ ಮಾಡುತ್ತೇವೆ. ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನವನ್ನು ಕೂಡ ನೀಡಲಾಗುತ್ತದೆ.

    ಜಮ್ಮು-ಕಾಶ್ಮೀರದಲ್ಲಿ ಕೆಲವು ಯೋಜನೆಗಳು ಕಾಗದಲ್ಲಿ ಮಾತ್ರ ಇದ್ದವು. ಇನ್ನು ಮುಂದೆ ಕೇಂದ್ರ ಸರ್ಕಾರ ಇವುಗಳನ್ನು ಅನುಷ್ಠಾನಕ್ಕೆ ತರಲಿದೆ. ಐಐಟಿ, ಏಮ್ಸ್, ರೈಲ್ವೇ ಸಂಪರ್ಕ, ಭ್ರಷ್ಟಾಚಾರ ನಿಗ್ರಹ ದಳ, ವಿಮಾನ ನಿಲ್ದಾಣ ಅಭಿವೃದ್ಧಿ ಹಂತ ಹಂತವಾಗಿ ಕಾರ್ಯಗತಗೊಳ್ಳಲಿದೆ. ನಿಮ್ಮ ಜನಪ್ರತಿನಿಧಿಯನ್ನು ನೀವೇ ಆಯ್ಕೆ ಮಾಡಬೇಕು. ನಿಮ್ಮಿಂದಲೇ ಅವರು ಅಧಿಕಾರಕ್ಕೆ ಬರಬೇಕು. ನಾವು ನೀವು ಸೇರಿ ಭಯೋತ್ಪಾದನೆ ಹಾಗೂ ಉಗ್ರವಾದವನ್ನು ಹಿಮ್ಮೆಟ್ಟಬೇಕಿದೆ. ಈ ಮೂಲಕ ದೇಶದ ಅಭಿವೃದ್ಧಿಗೆ ಮುಂದಾಗೋಣ

    ಕಾಶ್ಮೀರದ ಸೊಬಗನ್ನು ಜನತ್ತಿಗೆ ತೋರಿಸಲು ಪ್ರತಿಯೊಬ್ಬರು ಮುಂದಾಗಬೇಕಿದೆ. ಪ್ರತ್ಯೇಕವಾದಿಗಳು ಹಾಗೂ ಉಗ್ರವಾದಿಗಳಿಗೆ ಕಾಶ್ಮೀರಿಗಳೇ ತಕ್ಕ ಶಾಸ್ತಿ ಮಾಡಲಿದ್ದಾರೆ. ಹಿಂದೆ ಕಾಶ್ಮೀರದಲ್ಲಿ ಸಿನಿಮಾ ಶೂಟಿಂಗ್ ನಡೆಯುತಿತ್ತು. ಆದರೆ ಈಗ ಶೂಟಿಂಗ್ ನಡೆಯುತ್ತಿಲ್ಲ. ಇನ್ನು ಮುಂದೆ ಪ್ರವಾಸೋದ್ಯಮ ಅಭಿವೃದ್ಧಿ ಮಾಡುತ್ತೇವೆ. ಈ ಮೂಲಕ ಉದ್ಯೋಗ ಸೃಷ್ಟಿಯಾಗಲಿದೆ. ಜಮ್ಮು ಕಾಶ್ಮೀರ ಯುವಜನತೆಯಲ್ಲಿ ಎಲ್ಲ ಶಕ್ತಿ ಇದೆ. ಕಾಶ್ಮೀರದಲ್ಲಿ ಉತ್ತಮ ಕ್ರೀಡಾಪಟುಗಳು ತಯಾರಾಗಬೇಕು. ಇದಕ್ಕಾಗಿ ಉತ್ತಮ ಕ್ರೀಡಾಂಗಣವನ್ನು ತಯಾರು ಮಾಡುತ್ತೇವೆ.

  • ಪಾಕ್ ಬಿಟ್ಟು ಇಂಗ್ಲೆಂಡಿನಲ್ಲಿ ನೆಲೆಸಿದ್ದು ಯಾಕೆ – ಮಲಾಲಾಗೆ ಭಾರತೀಯರ ಕ್ಲಾಸ್

    ಪಾಕ್ ಬಿಟ್ಟು ಇಂಗ್ಲೆಂಡಿನಲ್ಲಿ ನೆಲೆಸಿದ್ದು ಯಾಕೆ – ಮಲಾಲಾಗೆ ಭಾರತೀಯರ ಕ್ಲಾಸ್

    ಇಸ್ಲಾಮಾಬಾದ್: ಭಾರತ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ರದ್ದು ಮಾಡಿರುವ ಹಿನ್ನೆಲೆ ಟ್ವೀಟ್ ಮಾಡಿದ ನೊಬೆಲ್ ಪುರಸ್ಕೃತೆ ಮಲಾಲಾ ಯುಸೂಫಾಜಿ ವಿರುದ್ಧ ಭಾರತೀಯರು ಸಿಡಿದೆದ್ದಿದ್ದಾರೆ.

    ನಾನು ಬಾಲ್ಯದಲ್ಲಿದ್ದಾಗಿಂದಲೂ, ನನ್ನ ತಂದೆ-ತಾಯಿ, ನನ್ನ ಅಜ್ಜ-ಅಜ್ಜಿಯರ ಕಾಲದಿಂದಲೂ ಕಾಶ್ಮೀರದ ಜನತೆ ಸಂಘರ್ಷದಲ್ಲಿಯೇ ಬದುಕು ನಡೆಸಿಕೊಂಡು ಬಂದಿದ್ದಾರೆ. ಹೀಗಾಗಿ ನನಗೆ ಕಾಶ್ಮೀರದ ಮಹಿಳೆ ಮತ್ತು ಮಕ್ಕಳ ಬಗ್ಗೆ ಚಿಂತೆಯಾಗುತ್ತಿದೆ. ಅಲ್ಲಿ ಮತ್ತಷ್ಟು ಹಿಂಸಾಚಾರ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ಹೆಚ್ಚು ನಷ್ಟವನ್ನು ಅನುಭವಿಸಬೇಕಾಗುತ್ತೆ ಎಂದು ಟ್ವೀಟ್‍ನಲ್ಲಿ ಮಲಾಲಾ ಬರೆದುಕೊಂಡಿದ್ದಾರೆ.

    ಈ ಟ್ವೀಟ್‍ಗೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಭಾರತೀಯರು ಮಲಾಲಾ ಟ್ವೀಟ್‍ಗೆ ರೀ-ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಹುಟ್ಟುವ ಮೊದಲು ಕಾಶ್ಮೀರಕ್ಕೆ ಪಾಕಿಸ್ತಾನ ಏನೆಲ್ಲಾ ಮಾಡಿದೆ ಅಂತ ಗೊತ್ತಾ ಎಂದು ಪ್ರಶ್ನಿಸಿ, ಪಾಕ್ ದಾಳಿಗಳ ಬಗ್ಗೆ ಒಬ್ಬರು ಕಮೆಂಟ್ ಮಾಡಿದರೆ, ಇನ್ನೊಬ್ಬರು ನೀವು ಮೂಲತಃ ಪಾಕಿಸ್ತಾನದವರು. ಆದರೆ ಈಗ ಪಾಕಿಸ್ತಾನ ಬಿಟ್ಟು ಇಂಗ್ಲೆಂಡಿನಲ್ಲಿ ನೆಲೆಸಿದ್ದು ಯಾಕೆ? ಪಾಕ್‍ನಲ್ಲಿ ಉಗ್ರರು ರಕ್ತದೋಕುಳಿ ಹರಿಸುತ್ತಿರುವುದನ್ನು ನೋಡಿದರೆ ನಿಮಗೆ ಸತ್ಯ ಅರಿವಾಗುತ್ತೆ. ಪಾಕಿಸ್ತಾನ ಉಗ್ರರ ಸ್ವರ್ಗ ಎನ್ನುವು ವಿಚಾರ ಇಡೀ ಜಗತ್ತಿಗೆ ತಿಳಿದಿದಿದೆ. ಈ ಬಗ್ಗೆ ನಿಮಗೆ ಗೊತ್ತಿಲ್ಲವೇ ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.

    ನಿಮಗೆ ಕಾಶ್ಮೀರ ಮಾತ್ರ ಕಾಣುತ್ತೆ. ಬಲುಚಿಸ್ತಾನದಲ್ಲಿ ಆಗುತ್ತಿರುವ ಹಿಂಸಾಚಾರದ ಬಗ್ಗೆ ತಿಳಿದಿಲ್ಲವಾ? ಭಾರತ ಬಗ್ಗೆ ಮಾತನಾಡೋರು ಬಲುಚಿಸ್ತಾನ ಬಗ್ಗೆ ಯಾಕೆ ಧ್ವನಿ ಎತ್ತಿಲ್ಲ ಎಂದು ಪ್ರಶ್ನಿಸಿ ನೆಟ್ಟಿಗರು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಇಸ್ಲಾಮಾಬಾದ್‍ನಲ್ಲಿರುವ ಭಾರತೀಯ ರಾಯಭಾರಿಯನ್ನು ಪಾಕಿಸ್ತಾನವು ಹೊರಹಾಕಿ, ಭಾರತದ ಜೊತೆಗಿನ ದ್ವಿಪಕ್ಷೀಯ ವ್ಯಪಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದನ್ನು ಸೇರಿಸಿ ಐದು ಅಂಶಗಳ ಯೋಜನೆಯನ್ನು ಘೋಷಿಸಿದೆ. ಅಲ್ಲದೆ ಜಮ್ಮು-ಕಾಶ್ಮೀರದ ಕುರಿತು ಭಾರತ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಮನವಿ ಮಾಡುತ್ತೇವೆ ಎಂದು ಪಾಕ್ ಹೇಳಿದೆ.

    370 ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಭಾರತ ಸರ್ಕಾರ ವಿಭಜನೆ ಮಾಡಿದೆ. ಅಲ್ಲದೆ ಸರ್ಕಾರ ಈ ದೊಡ್ಡ ಕ್ರಮ ತೆಗೆದುಕೊಳ್ಳುವ ಮುಂಚಿತವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ 40 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಕಳುಹಿಸಿದೆ.

    ಈ ಭಾಗದಲ್ಲಿ ಯಾವುದೇ ಹಿಂಸಾಚಾರ ನಡೆಯಬಾರದೆಂದು ಫೋನ್ ಸೇವೆಗಳು ಮತ್ತು ಇಂಟರ್‍ನೆಟ್ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿದೆ. ಉನ್ನತ ಅಧಿಕಾರಿಗಳು ಸಂಪರ್ಕಕ್ಕಾಗಿ ಸ್ಯಾಟಲೈಟ್ ಫೋನ್‍ಗಳನ್ನು ಬಳಸುತ್ತಿದ್ದಾರೆ. ಕಲ್ಲು ತೂರಾಟದಂತಹ ಘಟನೆಗಳನ್ನು ಹೊರತುಪಡಿಸಿ, ಇಲ್ಲಿನ ಪರಿಸ್ಥಿತಿ ಶಾಂತವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

  • ಕಾಶ್ಮೀರಿ ವಲಸೆ ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಬಕ್ರೀದ್ ಗಿಫ್ಟ್

    ಕಾಶ್ಮೀರಿ ವಲಸೆ ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಬಕ್ರೀದ್ ಗಿಫ್ಟ್

    ಶ್ರೀನಗರ: ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ವಲಸೆ ಕಾಶ್ಮೀರದ ವಿದ್ಯಾರ್ಥಿಗಳಿಗೆ ಬಕ್ರೀದ್ ಹಬ್ಬಕ್ಕೆ ಉಡುಗೊರೆ ನೀಡಿದ್ದು, ಭದ್ರತೆಯ ಮಧ್ಯೆ ಬಕ್ರೀದ್ ಆಚರಿಸಲು ಮನೆಗೆ ಬರಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಹಬ್ಬ ಆಯೋಜಿಸಲು ತಲಾ 1 ಲಕ್ಷ ರೂ.ಗಳನ್ನು ಕಾಣಿಕೆ ರೂಪದಲ್ಲಿ ನೀಡಿದ್ದಾರೆ.

    ಶ್ರೀನಗರದ ರಾಜಭವನದಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಶುಕ್ರವಾರ ಪ್ರಾರ್ಥನೆ ಸಲ್ಲಿಸಲು ಮತ್ತು ಬಕ್ರೀದ್ ಆಚರಣೆ ಮಾಡಲು ಜನರಿಗೆ ಬೇಕಾದ ಅಗತ್ಯ ಮೂಲಭೂತ ಸೇವೆ ಹಾಗೂ ಅಗತ್ಯ ಸರಕುಗಳನ್ನು ನೀಡಲು ಬೇಕಾದ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಾಣಿಕೆ ನೀಡುವ ಮಾಹಿತಿ ನೀಡಿ, ಅಧಿಕಾರಿಗಳನ್ನು ಸಂಪರ್ಕ ಮಾಡಲು ಸೂಚನೆ ನೀಡಿದರು.

    ಬಕ್ರೀದ್ ಸಂದರ್ಭದಲ್ಲಿ ಜನರು ಪ್ರಾಣಿಗಳನ್ನು ಖರೀದಿಸಲು ಅನುಕೂಲವಾಗುವಂತೆ ಕಣಿವೆಯ ವಿವಿಧ ಸ್ಥಳಗಳಲ್ಲಿ ಪಡಿತರ ಅಂಗಡಿಗಳು ಮುಕ್ತವಾಗಿರಲು ಅವಶ್ಯಕ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿರುವ ವರದಿಗಳಾಗಿಲ್ಲ ಎಂದು ಸ್ಪಷ್ಟಪಡಿಸಿದರು.

  • ದೇಶ ಮೊದಲು, 370 ಕಲಂ ರದ್ದತಿಯನ್ನು ಸ್ವಾಗತಿಸುತ್ತೇನೆ: ಅಂಜಲಿ ನಿಂಬಾಳ್ಕರ್

    ದೇಶ ಮೊದಲು, 370 ಕಲಂ ರದ್ದತಿಯನ್ನು ಸ್ವಾಗತಿಸುತ್ತೇನೆ: ಅಂಜಲಿ ನಿಂಬಾಳ್ಕರ್

    ಬೆಂಗಳೂರು: ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಮಧ್ಯೆಯೇ ಒಡಕು ಮೂಡಿದೆ. ನನಗೆ ದೇಶ ಮೊದಲು ಜಮ್ಮು- ಕಾಶ್ಮೀರ ವಿಶೇಷಾಧಿಕಾರ ರದ್ದು ಮಾಡಿರುವುದನ್ನು ಸ್ವಾಗತಿಸುತ್ತೇನೆ ಎಂದು ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಟ್ವೀಟ್ ಮಾಡಿದ್ದಾರೆ.

    ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿ ಮತ್ತು 35 (ಎ)ನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ರದ್ದು ಮಾಡಿದೆ. ಈ ವಿಚಾರಕ್ಕೆ ಕಾಂಗ್ರೆಸ್ ನಾಯಕರು ಇದು ಸಂವಿಧಾನ ವಿರೋಧಿ ನೀತಿ ಎಂದು ಅಸಮಾಧಾನ ಹೊರಹಾಕುತ್ತಿರುವ ಸಮಯದಲ್ಲಿ ಬೆಳಗಾವಿಯ ಖಾನಪುರದ ಶಾಸಕಿ ಅಂಜಲಿ ನಿಂಬಾಳ್ಕರ್ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಅಂಜಲಿ ನಿಂಬಾಳ್ಕರ್, ನಮಗೆ ದೇಶ ಮೊದಲು, ನವ ಭಾರತ ನಿಮ್ಮೊಂದಿಗೆ ಇದೆ ಜಮ್ಮು- ಕಾಶ್ಮೀರ ವಿಶೇಷಾಧಿಕಾರ ರದ್ದು ಮಾಡಿದ್ದನ್ನು ಸ್ವಾಗತಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

    ಈ ವಿಚಾರವನ್ನು ಬೆಂಬಲಿಸಿದ್ದ ಕಾಂಗ್ರೆಸ್‍ನ ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಪ್ರದೇಶವನ್ನು ಭಾರತದ ಒಕ್ಕೂಟಕ್ಕೆ ಸೇರಿಸುವುದಕ್ಕೆ ಬೆಂಬಲ ನೀಡುತ್ತೇನೆ. ಈ ಮೂಲಕ ಭಾರತವು ಸಂಪೂರ್ಣ ಏಕೀಕರಣವಾಗಲಿದೆ. ಆದರೆ ಸಾಂವಿಧಾನಿಕ ಪ್ರಕ್ರಿಯೆಯನ್ನು ಅನುಸರಿಸಿದ್ದರೆ ಚೆನ್ನಾಗಿರುತ್ತಿತ್ತು. ಆಗ ಯಾವುದೇ ಪ್ರಶ್ನೆಗಳನ್ನು ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಅದೇನೇ ಇದ್ದರೂ, ಇದು ನಮ್ಮ ದೇಶದ ಹಿತಾಸಕ್ತಿ ಮತ್ತು ನಾನು ಇದನ್ನು ಬೆಂಬಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಇದನ್ನು ಓದಿ: ಸಿದ್ಧಾಂತಗಳಿಂದಲೇ ಕಾಂಗ್ರೆಸ್ ಆತ್ಮಹತ್ಯೆ – ಪಕ್ಷವನ್ನೇ ತ್ಯಜಿಸಿದ ಕೈ ನಾಯಕ

    https://twitter.com/JM_Scindia/status/1158729410507182080

    ಈ 370 ಕಲಂ ರದ್ದು ಮಾಡಿದ ನಂತರ ಈ ವಿಚಾರವಾಗಿ ಕಾಂಗ್ರೆಸ್ ನಾಯಕರ ಸಭೆ ಕರೆದಿದ್ದ ಸೋನಿಯಾ ಗಾಂಧಿ ಅವರು, ಕೇಂದ್ರ ಸರ್ಕಾರದ ನಡೆಯನ್ನು ನಾವು ವಿರೋಧಿಸುತ್ತೇವೆ. ಆದರೆ, ನಮ್ಮ ವಿರೋಧವು ಜಮ್ಮು ಮತ್ತು ಕಾಶ್ಮೀರದ ಜನತೆ ಹಾಗೂ ರಾಜ್ಯದ ವಿಧಾನಸಭೆಯನ್ನು ಸಂಪರ್ಕಿಸದಿರುವುದನ್ನು ಆಧರಿಸಿದೆ ಎಂದು ಕಾಂಗ್ರೆಸ್ ಸಂಸದರು ಹಾಗೂ ನಾಯಕರಿಗೆ ಸಭೆಯಲ್ಲಿ ಸ್ಪಷ್ಟಪಡಿಸಲಾಗಿತ್ತು.

    ರಾಹುಲ್ ಗಾಂಧಿ ಟ್ವೀಟ್ ಮಾಡಿ ಏಕಪಕ್ಷೀಯವಾಗಿ ಜಮ್ಮು ಮತ್ತು ಕಾಶ್ಮೀರವನ್ನು ಇಬ್ಭಾಗ ಮಾಡುವ ನಿರ್ಧಾರ ಕೈಗೊಳ್ಳುವುದು, ಜನಪ್ರತಿನಿಧಿಗಳನ್ನು ಬಂಧಿಸುವುದು ಹಾಗೂ ಸಂವಿಧಾನವನ್ನು ಉಲ್ಲಂಘಿಸುವ ಮೂಲಕ ರಾಷ್ಟ್ರದ ಏಕೀಕರಣವನ್ನು ಹೆಚ್ಚಿಸಲು ಸಾಧ್ಯವಿಲ್ಲ. ಜನರಿಂದ ದೇಶ ನಿರ್ಮಾಣವಾಗಿದೆ. ಇದು ಕೇವಲ ತುಂಡು ಭೂಮಿಯಲ್ಲ. ಆಡಳಿತಾತ್ಮಕ ಅಧಿಕಾರದ ದುರುಪಯೋಗ ಮಾಡಿರುವುದು ರಾಷ್ಟ್ರೀಯ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಿದ್ದರು.

  • ಜಮ್ಮು ಕಾಶ್ಮೀರದಲ್ಲಿ ಜನ ಜೀವನ ಆರಂಭ – 1 ಸಾವು, 6 ಮಂದಿಯ ಮೇಲೆ ಗುಂಡೇಟು

    ಜಮ್ಮು ಕಾಶ್ಮೀರದಲ್ಲಿ ಜನ ಜೀವನ ಆರಂಭ – 1 ಸಾವು, 6 ಮಂದಿಯ ಮೇಲೆ ಗುಂಡೇಟು

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಜನ ಜೀವನ ಆರಂಭಗೊಂಡಿದ್ದು, ಸಾರ್ವಜನಿಕರು ಎಂದಿನ ಕಾರ್ಯಕ್ಕೆ ತೆರಳುತ್ತಿದ್ದಾರೆ.

    ಈ ವೇಳೆ ನಿಷೇಧಾಜ್ಞೆ ಇದ್ದರೂ ಶ್ರೀನಗರದಲ್ಲಿ ಪ್ರತಿಭಟನೆಗೆ ಇಳಿದ 100 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ಓಡಿ ಹೋಗುತ್ತಿದ್ದ ಓರ್ವ ಪ್ರತಿಭಟನಾಕಾರನನ್ನು ಪೊಲೀಸರು ಬೆನ್ನಟ್ಟಿದ್ದಾರೆ. ಈ ವೇಳೆ ಆತ ಝೆಲಂ ನದಿಗೆ ಕಟ್ಟಲಾಗಿದ್ದ ಸೇತುವೆಯಿಂದ ಹಾರಿ ಮೃತಪಟ್ಟಿದ್ದಾನೆ ಎಂದು ಮಾಧ್ಯಮ ವರದಿ ಮಾಡಿದೆ.

    ಪ್ರತಿಭಟನಾಕಾರರನ್ನು ನಿಯಂತ್ರಿಸಲು ಮುಂದಾದಾಗ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಗೆ 6 ಮಂದಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಕಾಶ್ಮೀರದಲ್ಲಿ ಕೇಬಲ್ ಸೇವೆ ಎಲ್ಲ ಸ್ಥಗಿತಗೊಂಡಿದ್ದು ಡಿಶ್ ಟಿವಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಇಂಟರ್ ನೆಟ್, ಮೊಬೈಲ್, ದೂರವಾಣಿ ಸಂಪರ್ಕ ಎಲ್ಲವೂ ಕಡಿತಗೊಂಡಿದೆ. ಸಂವಹನಕ್ಕಾಗಿ ಅಧಿಕಾರಿಗಳಿಗೆ ಸ್ಯಾಟಲೈಟ್ ಫೋನ್ ನೀಡಲಾಗಿದೆ.