Tag: jammu kashmir

  • ಜಮ್ಮು- ಕಾಶ್ಮೀರದಲ್ಲಿ ಕರ್ನಾಟಕ ಭವನ?

    ಜಮ್ಮು- ಕಾಶ್ಮೀರದಲ್ಲಿ ಕರ್ನಾಟಕ ಭವನ?

    ನವದೆಹಲಿ: ಕೇಂದ್ರ ಸರ್ಕಾರ ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಕರ್ನಾಟಕ ಭವನ ನಿರ್ಮಿಸಲು ರಾಜ್ಯ ಸರ್ಕಾರ ಉತ್ಸಾಹ ತೋರಿದೆ. ಈ ಸಂಬಂಧ ಜಮ್ಮು-ಕಾಶ್ಮೀರ ಅಧಿಕಾರಿಗಳ ಜೊತೆ ರಾಜ್ಯ ಸರ್ಕಾರದ ಅಧಿಕಾರಿಗಳು ನಿರಂತರ ಮಾತುಕತೆ ನಡೆಯುತ್ತಿದ್ದಾರೆ.

    ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಕೇಂದ್ರವು ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಕೂಡಲೇ ರಾಜ್ಯ ಸರ್ಕಾರವು ಜಮ್ಮು-ಕಾಶ್ಮೀರದಲ್ಲಿ ಐಷಾರಾಮಿ ಹೋಟೆಲ್ ನಿರ್ಮಾಣ ಮಾಡಲು ಪ್ರಸ್ತಾಪಿಸಿತ್ತು. ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಂದಿನ ಜಮ್ಮು-ಕಾಶ್ಮೀರ ಗವರ್ನರ್ ಸತ್ಯಪಾಲ್ ಮಲಿಕ್ ಅವರಿಗೆ ಪತ್ರ ಬರೆದು ರಾಜ್ಯ ಸರ್ಕಾರದ ಆಶಯವನ್ನು ವಿವರಿಸಿದ್ದರು.

    ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಕರ್ನಾಟಕ ಭವನ ನಿರ್ಮಿಸಲು ಚಿಂತಿಸಿದ್ದು 10ರಿಂದ 15 ಎಕರೆ ಭೂಮಿಯನ್ನು ಖರೀದಿಸಲು ಸರ್ಕಾರ ಯೋಚಿಸಿದೆ. ಅಮರನಾಥ ಯಾತ್ರೆಯಂತಹ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಪದೇಪದೇ ತೆರಳುವ ಕರ್ನಾಟಕ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಕರ್ನಾಟಕ ಭವನ ನಿರ್ಮಿಸಲು ಚಿಂತಿಸಲಾಗುತ್ತಿದ್ದು. ವಾಣಿಜ್ಯ ಉದ್ದೇಶಕ್ಕಿಂತ ಹೆಚ್ಚಾಗಿ, ಸಾರ್ವಜನಿಕರ ಸೇವೆ ಉದ್ದೇಶದಿಂದ ಭವನ ನಿರ್ಮಿಸಲಾಗುತ್ತಿದೆ. ಇಲ್ಲಿ ಗಣ್ಯರು ಸೇರಿದಂತೆ ರಾಜ್ಯಪಾಲರಿಗೂ ಕೊಠಡಿ ನಿರ್ಮಿಸುವ ಚಿಂತನೆಯಲ್ಲಿ ಪ್ರವಾಸೋದ್ಯಮ ಇಲಾಖೆ ಚಿಂತಿಸಿದೆ.

    ಜಮ್ಮು-ಕಾಶ್ಮೀರದಲ್ಲಿ ಕೆಲ ತಿಂಗಳ ಕಾಲ ಇಂಟರ್‌ನೆಟ್ ಸ್ಥಗಿತಗೊಳಿಸಿದ ಹಿನ್ನೆಲೆ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ಪಸ್ತಾಪ ನೆನೆಗುದಿಗೆ ಬಿದ್ದಿದ್ದೆ. ಮಾಹಿತಿಗಳ ಪ್ರಕಾರ ರಾಜ್ಯ ಸರ್ಕಾರದ ಪ್ರಸ್ತಾವನೆ ರಾಜ್ಯಪಾಲರ ಕಚೇರಿ ತಲುಪಿದ್ದು, ಆ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಹೀಗಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಗಳ ತಂಡ ಜಮ್ಮು-ಕಾಶ್ಮೀರಕ್ಕೆ ಭೇಟಿ ಮಾಡಲು ಚಿಂತಿಸಿದ್ದು ಕೇಂದ್ರಾಡಳಿತ ಪ್ರದೇಶವಾಗಿ ಬದಲಾದ ಹಿನ್ನೆಲೆ ಹೊಸ ಪತ್ರವನ್ನು ಬರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

  • ಮದ್ವೆಯಾದ 16 ದಿನದಲ್ಲೇ ಬಾಂಬ್ ಬ್ಲಾಸ್ಟ್ – ಯೋಧ ಹುತಾತ್ಮ

    ಮದ್ವೆಯಾದ 16 ದಿನದಲ್ಲೇ ಬಾಂಬ್ ಬ್ಲಾಸ್ಟ್ – ಯೋಧ ಹುತಾತ್ಮ

    ಜೈಪುರ: ಮದುವೆಯಾದ 16 ದಿನದಲ್ಲೇ ರಾಜಸ್ಥಾನ ಮೂಲದ ಯೋಧರೊಬ್ಬರು ಬಾಂಬ್ ಬ್ಲಾಸ್ಟ್ ನಲ್ಲಿ ಹುತಾತ್ಮರಾದ ಘಟನೆ ಜಮ್ಮು ಹಾಗೂ ಕಾಶ್ಮೀರದಲ್ಲಿ ನಡೆದಿದೆ.

    ಸೌರಬ್ ಕಠಾರಾ ಹುತಾತ್ಮರಾದ ಯೋಧ. ಸೌರಬ್ 16 ದಿನದ ಹಿಂದೆ ಅಂದರೆ ಡಿಸೆಂಬರ್ 8ರಂದು ಪೂನಂ ಅವರನ್ನು ಮದುವೆಯಾಗಿದ್ದರು. ಸೌರಬ್ ಹುತಾತ್ಮರಾದ ವಿಷಯ ತಿಳಿದ ಪೂನಂ ಹಾಗೂ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ. ಸೌರಬ್ ಅವರ ಪಾರ್ಥಿವ ಶರೀರ ಇಂದು ಸಂಜೆ ಅವರ ಗ್ರಾಮಕ್ಕೆ ತಲುಪಲಿದೆ.

    ಮಾಹಿತಿಗಳ ಪ್ರಕಾರ ಇಂದು ಸೌರಬ್ ಅವರ ಹುಟ್ಟುಹಬ್ಬ. ಸೌರಬ್ ಹಾಗೂ ಅವರ ಸಹೋದರ ಅಕ್ಕ-ತಂಗಿಯನ್ನು ಡಿಸೆಂಬರ್ 8ರಂದು ಮದುವೆಯಾಗಿದ್ದರು. ಮದುವೆಯಾದ ಬಳಿಕ ಸೌರಬ್ ತನ್ನ 5 ದಿನದ ರಜೆಯನ್ನು ಮುಗಿಸಿ ಕೆಲಸಕ್ಕೆ ಹಾಜರಾಗಲು ಕುಪ್ವಾರಾಕ್ಕೆ ತೆರಳಿದ್ದರು. ಅಲ್ಲಿ ಅವರು ಬಾಂಬ್ ಸ್ಫೋಟಕ್ಕೆ ಹುತಾತ್ಮರಾಗಿದ್ದಾರೆ.

    ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಟ್ವಿಟ್ಟರಿನಲ್ಲಿ, ಭರತಪುರದ ಕೆಚ್ಚೆದೆಯ ಸೈನಿಕರಿಗೆ ನನ್ನ ಸಲಾಂ. ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಸೌರಬ್ ಸರ್ವೋಚ್ಚ ತ್ಯಾಗ ಮಾಡಿದ್ದಾರೆ. ಈ ಸಮಯದಲ್ಲಿ ನಾವು ಸೌರಬ್ ಅವರ ಕುಟುಂಬ ಸದಸ್ಯರೊಂದಿಗೆ ನಿಲ್ಲುತ್ತೇವೆ. ದೇವರು ಅವರಿಗೆ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.

  • ಎಲ್‍ಒಸಿ ಬಳಿ ಪಾಕ್ ದಾಳಿ – ಇಬ್ಬರು ಸಾವು, ಆರು ಮಂದಿಗೆ ಗಾಯ

    ಎಲ್‍ಒಸಿ ಬಳಿ ಪಾಕ್ ದಾಳಿ – ಇಬ್ಬರು ಸಾವು, ಆರು ಮಂದಿಗೆ ಗಾಯ

    ಶ್ರೀನಗರ: ಎಲ್‍ಒಸಿ(ಗಡಿ ನಿಯಂತ್ರಣ ರೇಖೆ) ಬಳಿ ಪಾಕಿಸ್ತಾನ ಸೈನಿಕರು ಮಾಡಿದ ಅಪ್ರಚೋದಿತ ಗುಂಡಿನ ದಾಳಿಗೆ ಇಬ್ಬರು ನಾಗರಿಕರು ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಬಂಡಿ ಚೆಚಿಯನ್ ಪ್ರದೇಶದ ಮೇಲೆ ಪಾಕಿಸ್ತಾನ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಇದಕ್ಕೆ ಭಾರತೀಯ ಸೇನೆ ಸೂಕ್ತವಾದ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

    ಇಂದು ಮಧ್ಯಾಹ್ನ 2:30ರ ಸುಮಾರಿಗೆ ಭಾರತದ ನಾಗರೀಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೈನಿಕರು ಗುಂಡಿನ ದಾಳಿ ಮತ್ತು ಶೆಲ್ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಗುಲ್ನಾಜ್ ಅಖ್ತರ್ (35) ಮತ್ತು ಶೋಹೈಬ್ (16) ಮೃತಪಟ್ಟಿದ್ದಾರೆ ಮತ್ತು ಆರು ಜನ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ ಎಂದು ಸೇನೆ ತಿಳಿಸಿದೆ.

    ಕಳೆದ ಒಂದು ವಾರದಿಂದ ಪಾಕಿಸ್ತಾನ ಎಲ್‍ಒಸಿ ಬಳಿ ತನ್ನ ಪುಂಡಾಟ ಮುಂದುವರಿಸಿದ್ದು, ಭಾರತೀಯ ನಾಗರಿಕ ಪ್ರದೇಶದ ಮೇಲೆ ಅಪ್ರಚೋದಿತ ಶೆಲ್ ದಾಳಿ ಮತ್ತು ಗುಂಡಿನ ದಾಳಿ ನಡೆಸುತ್ತಿದೆ. ಕಳೆದ ಮೂರು ದಿನಗಳಲ್ಲಿ ಇದಕ್ಕೆ ಎರಡನೇ ಬಾರಿ ಪೂಂಚ್ ಜಿಲ್ಲೆಯ ಎಲ್‍ಒಸಿ ಬಳಿ ಪಾಕಿಸ್ತಾನ ಗುಂಡಿನ ದಾಳಿ ಮಾಡುತ್ತಿದೆ. ನವೆಂಬರ್ 25 ರಿಂದ ಸತತವಾಗಿ ಅಖ್ನೂರ್ ವಲಯದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಲೇ ಇದೆ ಎಂದು ಸೇನೆ ಹೇಳಿದೆ.

  • ಉಗ್ರ ಅಡಗುದಾಣಗಳ ಮೇಲೆ ದಾಳಿ- ಅಪಾರ ಪ್ರಮಾಣದ ಮದ್ದು, ಗುಂಡುಗಳು ವಶಕ್ಕೆ

    ಉಗ್ರ ಅಡಗುದಾಣಗಳ ಮೇಲೆ ದಾಳಿ- ಅಪಾರ ಪ್ರಮಾಣದ ಮದ್ದು, ಗುಂಡುಗಳು ವಶಕ್ಕೆ

    ಶ್ರೀನಗರ: ಉಗ್ರರ ಅಡಗುದಾಣಗಳ ಮೇಲೆ ಭದ್ರತಾ ಸಿಬ್ಬಂದಿ ದಾಳಿ ನಡೆಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಮದ್ದು, ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

    ಜಮ್ಮು ಕಾಶ್ಮೀರದ ಬರಮುಲ್ಲಾ ಜಿಲ್ಲೆಯ ಉಗ್ರರ ಅಡಗುದಾಣಗಳ ಮೇಲೆ ಸೈನಿಕರು ಹಾಗೂ ಸಿಆರ್‌ಪಿಎಫ್ ಜಂಟಿ ದಾಳಿ ನಡೆಸಿದ್ದು, ಶಸ್ತ್ರಾಸ್ತ್ರಗಳ ಜೊತೆಗೆ ಸ್ಯಾಟಲೈಟ್ ಫೋನುಗಳು ಹಾಗೂ ಇತರೆ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಉತ್ತರ ಕಾಶ್ಮೀರದ ರಾಡಿಯಾಬಾದ್‍ನ ಸೋಪುರ್ ಭಾಗದಲ್ಲಿ ಈ ಅಡುಗುದಾಣ ಪತ್ತೆಯಾಗಿದೆ.

    ಈ ಕುರಿತು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿ, ಸಂಪೂರ್ಣ ಆಟೋಮೆಟಿಕ್ ಎಕೆ ಬಂದೂಕುಗಳು, 2 ಸಾವಿರ ಸುತ್ತಿನ ಗುಂಡುಗಳು, ಮೂರು ರಾಕೆಟ್ ಪ್ರೊಪೆಲ್ಲರ್ ಗ್ರೆನೇಡ್(ಆರ್‍ಪಿಜಿ)ಗಳು, ಎರಡು ವೈರ್‍ಲೆಸ್ ಸೆಟ್‍ಗಳು ಹಾಗೂ ಸ್ಯಾಟಲೈಟ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯನ್ನು 32 ಆರ್‍ಆರ್(ರಾಷ್ಟ್ರೀಯ ರೈಫಲ್ಸ್), ವಿಶೇಷ ಕಾರ್ಯಾಚರಣೆ ತಂಡ(ಎಸ್‍ಓಜಿ) ಹಾಗೂ 92 ಸಿಆರ್‍ಪಿಎಫ್ ಬೆಟಾಲಿಯನ್‍ಗಳಿಂದ ಜಂಟಿಯಾಗಿ ನಡೆಸಲಾಗಿದೆ ಎಂದು ತಿಳಿಸಿದರು.

    ಈ ಕುರಿತು ಪ್ರಕರಣ ದಾಖಲಾಗಿದ್ದು, ಮದ್ದು, ಗುಂಡುಗಳು ಹಾಗೂ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು ತನಿಖೆ ಪ್ರಗತಿಯಲ್ಲಿದೆ. ಹರಿದ ಬಟ್ಟೆಗಳು ಹಾಗೂ ತುಕ್ಕು ಹಿಡಿದ ಶಸ್ತ್ರಾಸ್ತ್ರಗಳಾಗಿರುವುದರಿಂದ ಇದು ಹಳೆಯ ಅಡುಗುದಾಣವಿರಬಹುದು ಎಂದು ಅಂದಾಜಿಸಲಾಗಿದೆ.

    ಪಾಕಿಸ್ತಾನ ಸತತ ಎರಡನೇ ದಿನವೂ ಕದನ ವಿರಾಮ ಉಲ್ಲಂಘಿಸಿದ ಕೆಲವೇ ಗಂಟೆಗಳ ನಂತರ ಈ ಕಾರ್ಯಾಚರಣೆ ನಡೆದಿದ್ದು, ಗಡಿ ನಿಯಂತ್ರಣ ರೇಖೆ(ಎಲ್‍ಓಸಿ) ಬಳಿಯ ಎರಡು ಪೋಸ್ಟ್‍ಗಳನ್ನು ಪಾಕಿಸ್ತಾನ ಗುರಿಯಾಗಿಸಿಕೊಂಡಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.

  • ಶ್ರೀನಗರದಲ್ಲಿ ಗ್ರೆನೇಡ್ ದಾಳಿ- ಓರ್ವ ಸಾವು, 15 ಮಂದಿಗೆ ಗಾಯ

    ಶ್ರೀನಗರದಲ್ಲಿ ಗ್ರೆನೇಡ್ ದಾಳಿ- ಓರ್ವ ಸಾವು, 15 ಮಂದಿಗೆ ಗಾಯ

    ಜಮ್ಮು-ಕಾಶ್ಮೀರ: ಭಾರತ ಸರ್ಕಾರವು ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಆದರೂ ಅಲ್ಲಿ ಒಂದಲ್ಲ ಒಂದು ರೀತಿಯ ಘಟನೆಗಳು ನಡೆಯುತ್ತಲೇ ಇದೆ.

    ಇಂದು ಮಧ್ಯಾಹ್ನ 1.20ರ ಸುಮಾರಿಗೆ ಶ್ರೀನಗರದಲ್ಲಿರುವ ವೆಜಿಟೆಬಲ್ ಮಾರ್ಕೆಟ್ ಬಳಿ ಗ್ರೆನೇಡ್ ದಾಳಿ ನಡೆದಿದ್ದು, ಘಟನೆಯಲ್ಲಿ ಓರ್ವ ನಾಗರಿಕ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಇದಕ್ಕೂ ಮೊದಲು ಉತ್ತರ ಕಾಶ್ಮೀರದ ಸೊಪುರ್ ನಲ್ಲಿ ಉಗ್ರರು ನಡೆಸಿದ್ದ ಗ್ರೆನೇಡ್ ದಾಳಿಗೆ 15 ಮಂದಿ ನಾಗರಿಕರು ಗಾಯಗೊಂಡಿದ್ದರು. ಈ ಘಟನೆ ನಡೆದು ಒಂದು ವಾರದ ಬಳಿಕ ಇದೀಗ ಮತ್ತೊಂದು ಘಟನೆ ನಡೆದಿದೆ.

    ಇಂದು ಮಧ್ಯಾಹ್ನ ಹರಿಸಿಂಗ್ ಹೈ ಸ್ಟ್ರೀಟ್ ನಲ್ಲಿರುವ ವೆಜಿಟೆಬಲ್ ಮಾರ್ಕೆಟ್ ಜನಜಂಗುಳಿಯಿಂದ ಕೂಡಿತ್ತು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಭದ್ರತಾ ಪಡೆಗಳು ಘಟನೆ ನಡೆದ ಸ್ಥಳದಲ್ಲಿ ಜಮಾಯಿಸಿದ್ದು, ಕೃತ್ಯ ಎಸಗಿದವರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

    ಇದು ಕಳೆದ 10 ದಿನಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆದ ಮೂರನೇ ಘಟನೆಯಾಗಿದೆ. ಕಳೆದ ವಾರ ಸೊಪೊರೆಯಲ್ಲಿ ನಾಗರಿಕರು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದು, ಅದರಲ್ಲಿ 15 ಮಂದಿ ಗಾಯಗೊಂಡಿದ್ದರು. ಇದಕ್ಕೂ ಮೊದಲು ಅಕ್ಟೋಬರ್ 26ರಂದು ಸಿಆರ್‌ಪಿಎಫ್ ತಂಡವು ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಉಗ್ರರು ಗ್ರೆನೇಡ್ ದಾಳಿ ಮಾಡಿದ್ದರು. ಪರಿಣಾಮ 6 ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.

  • ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಆರು ವಲಸೆ ಕಾರ್ಮಿಕರು ಬಲಿ

    ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಆರು ವಲಸೆ ಕಾರ್ಮಿಕರು ಬಲಿ

    ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 6ಕ್ಕೆ ಏರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕುಲ್ಗಾಮ್ ಜಿಲ್ಲೆಯಲ್ಲಿ ಮಂಗಳವಾರ ಪಶ್ಚಿಮ ಬಂಗಾಳದ ಐವರು ವಲಸೆ ಕಾರ್ಮಿಕರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಘಟನೆಯಲ್ಲಿ ಕಾರ್ಮಿಕರೊಬ್ಬರು ತೀವ್ರ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇದೀಗ ಆ ಕಾರ್ಮಿಕ ಸಹ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸಂತ್ರಸ್ತರೆಲ್ಲರೂ ಪಶ್ಚಿಮ ಬಂಗಾಳದ ಮಿರ್ಷಿದಾಬಾದ್ ಜಿಲ್ಲೆಯವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ವಲಸಿಗರ ಮೇಲೆ ದಾಳಿ ನಡೆಸಲು ಈಗ ಉಗ್ರರು ಮುಂದಾಗುತ್ತಿದ್ದು, ಕೆಲ ದಿನದ ಹಿಂದೆ ಲಾರಿ ಚಾಲಕರ ಮೇಲೆ ದಾಳಿ ನಡೆಸಿದ್ದರು.

    ಇಂದು ಬೆಳಗ್ಗೆ ಸಹ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್‍ಪಿಎಫ್ ಯೋಧರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದರು. ಪುಲ್ವಾಮಾದ ಡ್ರಾಬ್‍ಗ್ರಮ್ ಪ್ರದೇಶದಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷೆ ನಡೆಯುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದರು. ಪರೀಕ್ಷೆಗೆ ತೊಂದರೆಯಾಗದಂತೆ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಸಿಆರ್‍ಪಿಎಫ್ ಯೋಧರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು.

    ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಭಾರತೀಯ ಯೋಧರಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂಬ ಮಾಹಿತಿ ಲಭಿಸಿದ್ದು, ಯೋಧರು ಪ್ರತಿದಾಳಿ ನಡೆಸಿದ್ದಾರೆ. ಉಗ್ರರು ಸುಮಾರು 6 ರಿಂದ 7 ಸುತ್ತು ಗುಂಡು ಹಾರಿಸಿದ್ದರು ಎಂಬ ಮಾಹಿತಿ ಲಭಿಸಿದೆ. ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಹೆಚ್ಚಿನ ಸೇನೆಯನ್ನು ಕರೆಯಿಸಿಕೊಂಡಿರುವ ಪೊಲೀಸರು, ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯ ಆರಂಭಗೊಂಡಿದೆ.

    ಯುರೋಪ್‍ನ ಯೂನಿಯನ್ ಸಂಸದರ ತಂಡ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಮಯದಲ್ಲೇ ಉಗ್ರರು ದಾಳಿ ನಡೆಸಿದ್ದಾರೆ. ಸಂವಿಧಾನದ 370ನೇ ವಿಧಿ ರದ್ದು ಬಳಿಕ ಕಣಿವೆಯ ಪ್ರದೇಶದ ಸ್ಥಿತಿಗತಿ ಬಗ್ಗೆ ತಿಳಿಯಲು ಯುರೋಪಿಯನ್ ಯೂನಿಯನ್ ಸಂಸದರು ಭೇಟಿ ನೀಡಿದ್ದಾರೆ. ಜಮ್ಮು ಕಾಶ್ಮೀರದ ಸೊಪೋರ್ ಬಸ್ ನಿಲ್ದಾಣದಲ್ಲಿ ಸೋಮವಾರ ಗ್ರೇನೇಡ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 19ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

  • ಅನಂತ್‍ನಾಗ್‍ನಲ್ಲಿ ಗುಂಡಿನ ಚಕಮಕಿ- ಮೂವರು ಉಗ್ರರು ಹತ

    ಅನಂತ್‍ನಾಗ್‍ನಲ್ಲಿ ಗುಂಡಿನ ಚಕಮಕಿ- ಮೂವರು ಉಗ್ರರು ಹತ

    ಶ್ರೀನಗರ: ಜಮ್ಮು ಕಾಶ್ಮೀರದ ಅನಂತ್‍ನಾಗ್‍ನ ಹೊರವಲಯದಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಮೂವರು ಉಗ್ರರು ಹತರಾಗಿದ್ದಾರೆ.

    ಅನಂತ್‍ನಾಗ್ ಜಿಲ್ಲೆಯ ಹೊರವಲಯದ ಬಿಜ್‍ಬೆಹರಾದಲ್ಲಿ ನಡೆದ ಕಾರ್ಯಾಚರಣೆ ವೇಳೆ ಭಾರತೀಯ ಸೇನೆಯ ಯೋಧನಿಗೆ ಸಣ್ಣ ಪುಟ್ಟ ಕಾಯಗಳಾಗಿದ್ದು, ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಕಮಾಂಡರ್ ನಾಸಿರ್ ಚಂದ್ರು ನೇತೃತ್ವದ ಮೂವರು ಉಗ್ರರ ತಂಡವು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗೆ ಸೇರಿದ್ದಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

    ಉಗ್ರರು ಅಡಗಿರುವ ಸ್ಥಳಕ್ಕೆ ಭದ್ರತಾ ಪಡೆ ಹತ್ತಿರವಾಗುತ್ತಿದ್ದಂತೆ ಭಯೋತ್ಪಾಕರು ಗುಂಡು ಹಾರಿಸಲು ಪ್ರಾರಂಭಿಸಿದರು. ಹೀಗಾಗಿ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ಇನ್ನೂ ನಡೆಯುತ್ತಿದೆ. ಕಾರ್ಯಾಚರಣೆ ಮುಗಿದ ನಂತರ ಸಾವಿನ ಸಂಖ್ಯೆ ಹಾಗೂ ಮೃತದೇಹಗಳನ್ನು ಪತ್ತೆ ಹಚ್ಚಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಪ್ರದೇಶವನ್ನು ಕಾಶ್ಮೀರ ವಲಯ ಪೊಲೀಸರು ಮತ್ತು ಭದ್ರತಾ ಪಡೆಗಳು ಸುತ್ತುವರಿದಿವೆ. ಪ್ರಾಥಮಿಕ ವರದಿಗಳ ಪ್ರಕಾರ ಹಿಜ್ಬುಲ್ ಮುಜಾಹಿದ್ದೀನ್(ಎಚ್‍ಎಂ) ಭಯೋತ್ಪಾದಕರು ವಸತಿ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದಾರೆ. ಉಗ್ರರು ವಸತಿ ಕಟ್ಟಡದೊಳಗೆ ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಎನ್‍ಕೌಂಟರ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

    ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಗುಂಡಿನ ಚಕಮಕಿ ಪ್ರಾರಂಭವಾಗಿದೆ. ಸೇನೆ ಹಾಗೂ ಅರೆಸೇನಾ ಪಡೆಗಳಿಂದ ಜಂಟಿ ಕಾರ್ಯಾಚರಣೆ ನಡೆಯುತ್ತಿದೆ.

    370ನೇ ವಿಧಿ ರದ್ದು ಪಡಿಸಿದ ನಂತರ ಉಗ್ರರು ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸುತ್ತಿದ್ದು, ರಾಜ್ಯದ ಪರಿಸ್ಥಿತಿ ದುರ್ಬಲವಾಗಿರುವ ಸಮಯದಲ್ಲಿ ಈ ದಾಳಿ ನಡೆದಿದೆ. ಸೋಮವಾರದಿಂದ ಕಾಶ್ಮೀರ ಕಣಿವೆಯಲ್ಲಿ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಗಳನ್ನು ಪ್ರಾರಂಭಿಸಲಾಗಿದೆ. ಆದರೆ ಮಂಗಳವಾರ ಮೆಸೇಜಿಂಗ್ ಸೇವೆಯನ್ನು ನಿಲ್ಲಿಸುವ ಕುರಿತು ಅಲ್ಲಿನ ಸರ್ಕಾರ ನಿರ್ಧಾರ ಕೈಗೊಂಡಿದೆ.

  • ಇಂದಿನಿಂದ ಪ್ರವಾಸಿಗರಿಗೆ ಜಮ್ಮು ಕಾಶ್ಮೀರ ಮುಕ್ತ

    ಇಂದಿನಿಂದ ಪ್ರವಾಸಿಗರಿಗೆ ಜಮ್ಮು ಕಾಶ್ಮೀರ ಮುಕ್ತ

    -2 ತಿಂಗಳ ಬಳಿಕ ನಿಷೇಧ ತೆರವು

    ನವದೆಹಲಿ: ಇಂದಿನಿಂದ ಪ್ರವಾಸಿಗರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಬಹುದು. ಎರಡು ತಿಂಗಳ ಬಳಿಕ ಪ್ರವಾಸಿಗರಿಗೆ ಹೇರಿದ್ದ ನಿರ್ಬಂಧವನ್ನು ಗುರುವಾರ ತೆರವುಗೊಳಿಸಲಾಗಿದೆ.

    370ನೇ ವಿಧಿಯನ್ನು ರದ್ದು ಪಡಿಸಿದ ಬಳಿಕ ಭದ್ರತಾ ದೃಷ್ಟಿಯಿಂದ ಕಣಿವೆ ರಾಜ್ಯದಲ್ಲಿದ್ದ ಪ್ರವಾಸಿಗರನ್ನು ಹೊರ ಕಳಿಸಲಾಗಿತ್ತು. ಹೀಗಾಗಿ ಕಳೆದ ಎರಡು ತಿಂಗಳುಗಳಿಂದ ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು. ಆದರೆ ಈ ನಿಷೇಧವನ್ನು ಸರ್ಕಾರ ತೆರವುಗೊಳಿಸಿದ್ದು, ಇಂದಿನಿಂದ ಕಾಶ್ಮೀರ ಪ್ರವಾಸಿಗರಿಗೆ ಮುಕ್ತವಾಗಿದೆ.

     

    ನಿಷೇಧಾಜ್ಞೆಯಿಂದ ಕಳೆದ ಎರಡು ತಿಂಗಳಿನಿಂದ ಕಾಶ್ಮೀರ ಪ್ರವಾಸಿಗರಿಲ್ಲದೆ ಬಿಕೋ ಎನಿಸುತ್ತಿತ್ತು. ಮಂಗಳವಾರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಕಣಿವೆ ರಾಜ್ಯದಲ್ಲಿ ಪ್ರವಾಸಿಗರಿಗೆ ಹೇರಿದ್ದ ನಿಷೇಧವನ್ನು ಹಿಂಪಡೆಯುವುದಾಗಿ ತಿಳಿಸಿದ್ದರು. ಸೋಮವಾರ ಸತ್ಯಪಾಲ್ ಮಲಿಕ್ ಅವರು ಜಮ್ಮು ಕಾಶ್ಮೀರ ರಾಜ್ಯದ ಭದ್ರತಾ ಸಲಹೆಗಾರ ಹಾಗೂ ಮುಖ್ಯ ಕಾರ್ಯದರ್ಶಿಗಳ ಜೊತೆ ಕಣಿವೆ ರಾಜ್ಯದಲ್ಲಿ ಪ್ರವಾಸಿಗರ ರಕ್ಷಣೆ ಕುರಿತು ಚರ್ಚೆ ನಡೆಸಿದ್ದರು.

    2019ರ ಮೊದಲ ಏಳು ತಿಂಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಜುಲೈ ತಿಂಗಳಲ್ಲಿ ಸುಮಾರು 3,40,000 ಯಾತ್ರಿಕರು ಆಗಮಿಸಿದ್ದರು. ಆದರೆ ಆಗಸ್ಟ್ 5ರ ಬಳಿಕ ಕೇವಲ 150 ವಿದೇಶಿ ಪ್ರಯಾಣಿಕರು ಮಾತ್ರ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

    ಅಮರನಾಥ ಯಾತ್ರೆಗೆ ಬರುವ ಯಾತ್ರಿಕರ ಮೇಳೆ ಉಗ್ರರು ದಾಳಿ ಮಾಡಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಹೀಗಾಗಿ ಯಾತ್ರಿಕರ ಭದ್ರತಾ ದೃಷ್ಟಿಯಿಂದ ಕಳೆದ ಆಗಸ್ಟ್ 2ರಂದು ಅಮರನಾಥ ಯಾತ್ರಿಕರು ಮತ್ತು ಪ್ರವಾಸಿಗರು ಕಾಶ್ಮೀರವನ್ನು ಕೂಡಲೇ ತೊರೆದು ಹೋಗಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿ, ಆಗಸ್ಟ್ 5ರಂದು ಜಮ್ಮುಕಾಶ್ಮೀರವನ್ನು ರಾಜ್ಯವನ್ನಾಗಿ ಘೋಷಿಸಿ ಲಡಾಖ್ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು. ಈ ನಿರ್ಧಾರ ಕೈಗೊಳ್ಳುವ ಮೂರು ದಿನಗಳ ಹಿಂದೆಯೇ ಕಣಿವೆ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು.

  • ಪಾಕ್ ಉಗ್ರರು ದಾಳಿ ನಡೆಸುವ ಸಂಭವವಿದೆ ಎಚ್ಚರದಿಂದಿರಿ – ಭಾರತಕ್ಕೆ ಅಮೆರಿಕ ಎಚ್ಚರಿಕೆ

    ಪಾಕ್ ಉಗ್ರರು ದಾಳಿ ನಡೆಸುವ ಸಂಭವವಿದೆ ಎಚ್ಚರದಿಂದಿರಿ – ಭಾರತಕ್ಕೆ ಅಮೆರಿಕ ಎಚ್ಚರಿಕೆ

    ವಾಷಿಂಗ್ಟನ್: ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳು ಭಾರತದ ಮೇಲೆ ದಾಳಿ ನಡೆಸುವ ಸಂಭವವಿದ್ದು, ಈ ಕುರಿತು ಎಚ್ಚರಿಕೆಯಿಂದಿರಿ ಎಂದು ಅಮೆರಿಕ ಸೂಚಿಸಿದೆ.

    ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದಾಗಿನಿಂದ ಭಯೋತ್ಪಾದಕ ಗುಂಪುಗಳು ಚುರುಕಾಗಿವೆ. ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿವೆ ಎಂದು ಅಮೆರಿಕ ತಿಳಿಸಿದೆ.

    ಕಾಶ್ಮೀರದ ಕುರಿತ ಭಾರತದ ನಿರ್ಧಾರದಿಂದ ಭಯೋತ್ಪಾದಕರು ಹಾಗೂ ಪಾಕಿಸ್ತಾನ ಗಡಿಯಾಚಿಗಿನ ಚಟುವಟಿಕೆಗಳನ್ನು ತೀವ್ರಗೊಳಿಸಿವೆ. ಈ ಕುರಿತು ಅನೇಕರಿಗೆ ಆತಂಕವಿದೆ ಎಂದು ನಾನು ಭಾವಿಸಿದ್ದೇನೆ. ಚೀನಾ ಸಹ ಈ ರೀತಿಯ ಸಂಘರ್ಷವನ್ನು ಬಯಸುತ್ತಿದೆ. ಪಾಕಿಸ್ತಾನವನ್ನು ಬೆಂಬಲಿಸುತ್ತಿದೆ ಎಂಬುದರ ಕುರಿತು ನನಗೆ ಅರಿವಿಲ್ಲ. ಆದರೆ ಎಚ್ಚರಿಕೆಯಿಂದಿರುವುದು ಅಗತ್ಯ ಎಂದು ಇಂಡೋ-ಪೆಸಿಫಿಕ್ ಭದ್ರತಾ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ರಾಂಡಾಲ್ ಶ್ರೀವರ್ ವಾಷಿಂಗ್ಟನ್ ಜನತೆಗೆ ತಿಳಿಸಿದರು.

    ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಕಾಶ್ಮೀರದ ವಿಷಯದಲ್ಲಿ ಚೀನಾ ಪಾಕಿಸ್ತಾನಕ್ಕೆ ಬೆಂಬಲ ನೀಡಿರುವ ಕುರಿತ ಪ್ರಶ್ನೆಗೆ ಶ್ರೀವರ್ ಪ್ರತಿಕ್ರಿಯಿಸಿದರು. ಇದು ಹೆಚ್ಚಾಗಿ ರಾಜತಾಂತ್ರಿಕ ಹಾಗೂ ರಾಜಕೀಯ ಬೆಂಬಲವಾಗಿದೆ ಎಂದು ಶ್ರೀವರ್ ಹೇಳಿದರು.

    ಚೀನಾ ಪಾಕಿಸ್ತಾನವನ್ನು ಅಂತರಾಷ್ಟ್ರೀಯ ವೇದಿಕೆಯಲ್ಲೇ ಬೆಂಬಲಿಸಿದೆ. ಕಾಶ್ಮೀರದ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಚರ್ಚಿಸಬೇಕು ಎಂಬ ಬಗ್ಗೆ ಕೆಲವು ಚರ್ಚೆಗಳು ನಡೆಯುತ್ತಿವೆ. ಇದನ್ನು ಚೀನಾ ಬೆಂಬಲಿಸುತ್ತಿದೆ. ಆದರೆ ಈ ವಿಚಾರ ಇದೀಗ ಇನ್ನೂ ಹೆಚ್ಚು ಚುರುಕಾಗಿದೆಯೇ ಎಂಬುದರ ಕುರಿತು ನನಗೆ ತಿಳಿದಿಲ್ಲ ಎಂದು ಪೆಂಟಗನ್‍ನ ಉನ್ನತ ಅಧಿಕಾರಿ ತಿಳಿಸಿದರು.

    ಚೀನಾ ಪಾಕಿಸ್ತಾನದೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದೆ. ಅಲ್ಲದೆ ಅವರು ಭಾರತಕ್ಕೆ ಹೆಚ್ಚು ಸ್ಪರ್ಧೆ ಒಡ್ಡುತ್ತಿದ್ದಾರೆ. ಆದರೆ ಭಾರತವು ಚೀನಾದೊಂದಿಗೆ ಸ್ಥಿರ ಸಂಬಂಧವನ್ನು ಬಯಸುತ್ತದೆ ಎಂದು ಅವರು ತಿಳಿಸಿದರು.

    ಶ್ರೀವನ್ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರ ಇತ್ತೀಚಿನ ಭೇಟಿಯನ್ನು ಉಲ್ಲೇಖಿಸಿದ್ದು, ಈ ಕುರಿತು ಅವರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ನಾವು ಚೀನಾದೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದೇವೆ. ಭಾರತ ಚೀನಾದೊಂದಿಗೆ ಸ್ಥಿರ ಸಂಬಂಧವನ್ನು ಬಯಸುತ್ತದೆ. ಆದರೆ ಇದರೊಂದಿಗೆ ಕಾಳಜಿ ಹಾಗೂ ಸ್ಪರ್ಧೆ ಹೆಚ್ಚುತ್ತಿದೆ ಎಂಬುವುದರಲ್ಲಿ ಸಂದೇಹವಿಲ್ಲ. ಕಾಶ್ಮೀರ ಸೇರಿದಂತೆ ಇಂತಹ ವಿವಿಧ ವಿಷಯಗಳ ಕುರಿತು ಯೋಚಿಸುತ್ತಿದ್ದೇನೆ. ಚೀನಾ ಪಾಕಿಸ್ತಾನದತ್ತ ವಾಲುತ್ತಿದೆ ಎಂದು ಶ್ರೀವರ್ ವಿವರಿಸಿದರು.

  • ಸಂವಿಧಾನ ಪೀಠದಲ್ಲಿ ಕಾಶ್ಮೀರ ಅರ್ಜಿ ವಿಚಾರಣೆ – ಕೇಂದ್ರಕ್ಕೆ ನೋಟಿಸ್

    ಸಂವಿಧಾನ ಪೀಠದಲ್ಲಿ ಕಾಶ್ಮೀರ ಅರ್ಜಿ ವಿಚಾರಣೆ – ಕೇಂದ್ರಕ್ಕೆ ನೋಟಿಸ್

    ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಎಲ್ಲ ಅರ್ಜಿಗಳ ವಿಚಾರಣೆ 5 ಮಂದಿ ನ್ಯಾಯಾಧೀಶರ ಸಂವಿಧಾನಿಕ ಪೀಠದಲ್ಲಿ ನಡೆಯಲಿದೆ.

    ಮುಖ್ಯ ನ್ಯಾ. ರಂಜನ್ ಗೊಗೋಯ್, ನ್ಯಾ. ಎಸ್‍ಎ ಬೊಬ್ಡೆ, ಎಸ್ ಅಬ್ದುಲ್ ನಜೀರ್ ಅವರಿದ್ದ ಪೀಠದಲ್ಲಿ ಇಂದು ಕೇಂದ್ರದ ನಡೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಯಿತು. ವಿಚಾರಣೆಯ ಸಂದರ್ಭದಲ್ಲಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಇದು ಬಹಳ ಸೂಕ್ಷ್ಮ ವಿಚಾರ ಎಂದು ಕೋರ್ಟ್ ಗಮನಕ್ಕೆ ತಂದರು.

    ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಇಂದು ನಾವು ಯಾವುದೇ ಆದೇಶ ಪ್ರಕಟಿಸುವುದಿಲ್ಲ. ಎಲ್ಲ ಅರ್ಜಿಗಳನ್ನು ಐವರು ನ್ಯಾಯಾಧೀಶರ ಸಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗುವುದು. ಅಕ್ಟೋಬರ್ ಮೊದಲ ವಾರದಲ್ಲಿ ಈ ಅರ್ಜಿ ವಿಚಾರಣೆ ನಡೆಯಲಿದೆ ಎಂದು ಹೇಳಿದರು.

    ಕಾಶ್ಮೀರ ಟೈಮ್ಸ್ ಪತ್ರಿಕೆಯ ಸಂಪಾದಕಿ ಅನುರಾಧ ಬಸ್ಸಿನ್ ಕಾಶ್ಮೀರದಲ್ಲಿ ಹೇರಲಾಗಿರುವ ಸಂವಹನ ನಿರ್ಬಂಧವನ್ನು ಕೂಡಲೇ ತೆಗೆದು ಹಾಕಬೇಕು. ನಿರ್ಬಂಧ ಹೇರಿದ್ದರಿಂದ ಮಾಧ್ಯಮಗಳು ಕೆಲಸ ಮಾಡಲು ಕಷ್ಟವಾಗುತ್ತಿದೆ ಎಂದು ಮನವಿ ಮಾಡಿದ್ದ ಅರ್ಜಿಯ ವಿಚಾರಣೆಯೂ ನಡೆಯಿತು. ನಂತರ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ 7 ದಿನಗಳ ಒಳಗಡೆ ಉತ್ತರಿಸಬೇಕು ಎಂದು ಸೂಚಿಸಿತು.

    ಕೇಂದ್ರ ಸರ್ಕಾರ ಭದ್ರತೆಗಾಗಿ  50 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಕಾಶ್ಮೀರಕ್ಕೆ ಕಳುಹಿಸಿದೆ. ಕಾಶ್ಮೀರದ  400ಕ್ಕೂ ಹೆಚ್ಚು ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.  ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಗೃಹ ಬಂಧನದಲ್ಲಿದ್ದಾರೆ.