– ಪುಲ್ವಾಮಾ ದಾಳಿಯಂತೆ ಮತ್ತೊಂದು ಕೃತ್ಯ
– ಕಾರಿನ ಹಿಂಭಾಗದಲ್ಲಿತ್ತು 40 ಕೆಜಿ ಸ್ಫೋಟಕ
ಶ್ರೀನಗರ: ಕಳೆದ ವರ್ಷ ದಾಳಿ ನಡೆಸಿದ ಮಾದರಿಯಲ್ಲಿ ಈ ಬಾರಿ 400 ಮಂದಿ ಯೋಧರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.
ಹೌದು, ಇಂದು ಗುರುವಾರ ಬೆಳಗ್ಗೆ 7 ಗಂಟೆಯ ವೇಳೆಗೆ ಶ್ರೀನಗರದ ಭಕ್ಷಿ ಕ್ರೀಡಾಂಗಣದಿಂದ ಸಿಆರ್‌ಪಿಎಫ್ ಯೋಧರು ಜಮ್ಮುವಿಗೆ ತೆರಳಬೇಕಿತ್ತು. ಒಟ್ಟು 20 ವಾಹನದಲ್ಲಿ ಯೋಧರು ಪ್ರಯಾಣಿಸಲಿದ್ದಾರೆ ಎಂಬ ವಿಚಾರವನ್ನು ತಿಳಿದು ಉಗ್ರರು ಮತ್ತೊಮ್ಮೆ ಭಾರೀ ಪ್ರಮಾಣದಲ್ಲಿ ಪುಲ್ವಾಮಾದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು.

ಈ ಬಗ್ಗೆ ಮಾಧ್ಯಮಕ್ಕೆ ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಒಟ್ಟು 20 ವಾಹನದಲ್ಲಿ 400 ಮಂದಿ ಜಮ್ಮುವಿಗೆ ಪ್ರಯಾಣಿಸಬೇಕಿತ್ತು. ಎಲ್ಲ ಶ್ರೇಣಿಯ ಅಧಿಕಾರಿಗಳು ಈ ವಾಹನದಲ್ಲಿ ಪುಲ್ವಾಮಾ ರಸ್ತೆಯ ಮೂಲಕವೇ ಸಾಗಬೇಕಿತ್ತು. ಈ ಕಾರಣಕ್ಕೆ ಯೋಧರ ಮೇಲೆ ದಾಳಿ ನಡೆಸಲು ಉಗ್ರರು ಸ್ಯಾಂಟ್ರೋ ಕಾರಿನಲ್ಲಿ ಸುಧಾರಿತ ಸ್ಫೋಟಕಗಳನ್ನು ಇಟ್ಟಿರಬಹುದು ಎಂದು ಶಂಕಿಸಿದ್ದಾರೆ.
ಇಂದು ಬೆಳಗ್ಗೆ 6 ಗಂಟೆಯಿಂದ ಆರಂಭವಾಗಿ 7:30ರ ಒಳಗಡೆ ಈ ಕಾರಿನಲ್ಲಿದ್ದ ಸ್ಫೋಟಕಗಳನ್ನು ಸಿಡಿಸಲಾಗಿದೆ. ಎಲ್ಲ ಸುರಕ್ಷಾ ಕ್ರಮಗಳನ್ನು ಅನುಸರಿಸಿ ಈ ಕಾರನ್ನು ಸ್ಫೋಟಿಸಲಾಗಿದೆ ಎಂದು ಅವರು ವಿವರಿಸಿದರು.

ಕಾಶ್ಮೀರದ ಇನ್ಸ್ ಪೆಕ್ಟರ್ ಜನರಲ್ ವಿಜಯ್ ಕುಮಾರ್ ಸುದ್ದಿಗೋಷ್ಠಿ ನಡೆಸಿ, ಗುಪ್ತಚರ ಇಲಾಖೆ ಮೇ 28 ರಂದು ಉಗ್ರರು ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ಮಾಹಿತಿಯನ್ನು ಖಚಿತ ಮೂಲಗಳನ್ನು ಆಧಾರಿಸಿ ಕಳೆದ ವಾರವೇ ನೀಡಿತ್ತು. ಬುಧವಾರ ಬೆಳಗ್ಗೆಯಿಂದ ಕಾರನ್ನು ನಾವು ಹುಡುಕಾಡುತ್ತಿದ್ದೆವು. ಹಿಜ್ಬುಲ್ ಅಥವಾ ಜೈಷ್ ಸಂಘಟನೆಗಳು ಈ ಕೃತ್ಯದ ಹಿಂದಿರಬಹುದು ಎಂದು ಅವರು ಶಂಕಿಸಿದ್ದಾರೆ.
ನಡೆದಿದ್ದು ಏನು?
ಬುಧವಾರ ರಾತ್ರಿ ಪುಲ್ವಾಮಾ ಜಿಲ್ಲೆಯ ರಾಜ್‍ಪೋರ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಬಿಳಿ ಬಣ್ಣದ ಸ್ಯಾಂಟ್ರೋ ಕಾರೊಂದು ಬಂದಿದೆ. ಈ ಕಾರು ನಿಲ್ಲಿಸದೇ ಬ್ಯಾರಿಕೇಡ್ ಅನ್ನು ತಳ್ಳಿಕೊಂಡು ಮುಂದೆ ಸಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ಕಾರನ್ನು ಹಿಂಬಾಲಿಸಿದ್ದಾರೆ. ಡ್ರೈವರ್ ಸ್ವಲ್ಪ ದೂರದವರೆಗೆ ಚಲಾಯಿಸಿ ಕಾರಿನಿಂದ ಜಿಗಿದಿದ್ದಾನೆ. ಈ ವೇಳೆ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದರೂ ರಾತ್ರಿಯಾಗಿದ್ದ ಕಾರಣ ಉಗ್ರ ಪರಾರಿಯಾಗಿದ್ದಾನೆ.

ನಕಲಿ ನೋಂದಣಿ ಸಂಖ್ಯೆಯಲ್ಲಿದ್ದ ಕಾರಿನ ಹಿಂಭಾಗದಲ್ಲಿ 40 ಕೆಜಿ ಸುಧಾರಿತ ಸ್ಫೋಟಕ ಸಾಮಾಗ್ರಿಗಳನ್ನು(ಐಇಡಿ) ತುಂಬಲಾಗಿತ್ತು. ಕಾರಿನಲ್ಲಿರುವ ಸ್ಫೋಟಕವನ್ನು ಬಾಂಬ್ ನಿಷ್ಕ್ರಿಯ ದಳದ ಸದಸ್ಯರು ಆಗಮಿಸಿ ನಿಷ್ಕ್ರಿಯಗೊಳಿಸಿದ್ದಾರೆ.
ಕಳೆದ ರಾತ್ರಿಯಿಂದ ಈ ಕಾರಿನ ಮೇಲೆ ನಿಗಾ ಇಡಲಾಗಿತ್ತು. ಇಂದು ಸ್ಫೋಟಗೊಳ್ಳುವ ಮೊದಲು ಹತ್ತಿರದಲ್ಲಿದ್ದ ನಿವಾಸಿಗಳನ್ನು ತೆರವುಗೊಳಿಸಲಾಗಿತ್ತು. ಭಾರತೀಯ ಸೇನೆ, ಪೊಲೀಸ್, ಪ್ಯಾರಾಮಿಲಿಟರಿ ಪಡೆಯಿಂದ ಜಂಟಿಯಾಗಿ ಈ ಕಾರ್ಯಾಚರಣೆ ನಡೆದಿದೆ. ಸ್ಫೋಟದ ತೀವ್ರತೆಗೆ ಕಾರು ಮುದ್ದೆಯಾಗಿ ಹೋಗಿದೆ.

ಕಳೆದ 2 ತಿಂಗಳಿನಲ್ಲಿ 38 ಮಂದಿ ಉಗ್ರರನ್ನು ಭದ್ರತಾ ಪಡೆ ಹತ್ಯೆ ಮಾಡಿದೆ. ಅದರಲ್ಲೂ ಮುಖ್ಯವಾಗಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ರಿಯಾಜ್ ನಾಯ್ಕೂನನ್ನು ಅವನ ಮನೆಗೆ ಹೋಗಿ ಎನ್‍ಕೌಂಟರ್ ಮಾಡಿತ್ತು.
ಭದ್ರತಾ ಪಡೆಗಳು ನಮ್ಮ ಸದಸ್ಯರನ್ನು ನಿರ್ನಾಮ ಮಾಡುತ್ತಿರುವ ಹಿನ್ನೆಲೆಯಲ್ಲಿ ಉಗ್ರರು ಮುಂದಿನ ದಿನಗಳಲ್ಲಿ ದಾಳಿ ನಡೆಸುವ ಸಾಧ್ಯತೆಯಿದೆ. ಹೀಗಾಗಿ ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ಇಲಾಖೆ ಸೂಚಿಸಿತ್ತು.
2019ರಲ್ಲಿ ಏನಾಗಿತ್ತು?
ಕಳೆದ ವರ್ಷದ ಫೆ. 14 ರಂದು ರಾಷ್ಟ್ರೀಯ ಹೆದ್ದಾರಿ 44 ರಲ್ಲಿ 78 ವಾಹನಗಳಲ್ಲಿ ಸುಮಾರು 2,500 ಯೋಧರು ಶ್ರೀನಗರದಿಂದ ಜಮ್ಮುವಿಗೆ ತೆರಳುತ್ತಿದ್ದರು. ಈ ವೇಳೆ ಪುಲ್ವಾಮಾ ಜಿಲ್ಲೆಯ ಲೆಥ್‍ಪೂರದಲ್ಲಿ ಸಿಆರ್‌ಪಿಎಫ್ ಯೋಧರಿದ್ದ ಬಸ್ಸಿನ ಮೇಲೆ ಜೈಷ್ ಉಗ್ರ ಆದಿಲ್ ಅಹ್ಮದ್ ದಾರ್ ಇಕೋ ಕಾರನ್ನು ಗುದ್ದಿಸಿದ್ದ. ಪರಿಣಾಮ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಭಾರತದ ವಾಯುಸೇನೆ ಮೊದಲ ಬಾರಿಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು.