Tag: jammu kashmir

  • ಮಗಳಿಂದಲೇ ನನಗೆ ಜೀವ ಬೆದರಿಕೆ – ಜೆಎನ್‌ಯು ಮಾಜಿ ನಾಯಕಿಯ ತಂದೆಯಿಂದ ಪತ್ರ

    ಮಗಳಿಂದಲೇ ನನಗೆ ಜೀವ ಬೆದರಿಕೆ – ಜೆಎನ್‌ಯು ಮಾಜಿ ನಾಯಕಿಯ ತಂದೆಯಿಂದ ಪತ್ರ

    ಶ್ರೀನಗರ: ಮಗಳೇ ನನಗೆ ಜೀವ ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಿ ಮಾಜಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮುಖಂಡೆ ಶೆಹ್ಲಾ ರಷೀದ್‌ ತಂದೆ ಅಬ್ದುಲ್‌ ರಷೀದ್‌ ಜಮ್ಮು ಕಾಶ್ಮೀರ ಡಿಜಿಪಿಗೆ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ನಮ್ಮ ಮನೆಯಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಯುತ್ತಿದೆ. ನಾನು ಈ ಚಟುವಟಿಕೆಯನ್ನು ವಿರೋಧಿಸಿದ್ದಕ್ಕೆ ಮಗಳು ಶೆಹ್ಲಾಳ ಭದ್ರತಾ ಸಿಬ್ಬಂದಿ ಶಕೀಬ್‌ ಪಿಸ್ತೂಲ್‌ ಮೂಲಕ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.

    ಜಮ್ಮು ಕಾಶ್ಮೀರ ಪೀಪಲ್ಸ್‌ ಮೂಮೆಂಟ್‌(ಜೆಕೆಪಿಎಂ) ಪರ ಸೇರಲು ಶೈಲಾ 3 ಕೋಟಿ ರೂ. ಹಣವನ್ನು ಪಡೆದಿದ್ದಾಳೆ. ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಲು ಅಕ್ರಮ ಮಾರ್ಗಗಳಿಂದ ಹಣ ಬಂದಿದೆ ಎಂದು ಉಲ್ಲೇಖಿಸಿದ್ದಾರೆ.

    2 ತಿಂಗಳ ಹಿಂದೆ ಈಗಾಗಲೇ ಯುಎಪಿಎ ಅಡಿ ಬಂಧನವಾಗಿರುವ ಜಹೂರ್‌ ವಟಾಲಿ ನನ್ನ ಜೊತೆ ಮಾತನಾಡಿದ್ದ. ಆತ ಶೈಲಾಗೆ ಮೂರು ಕೋಟಿ ರೂ. ನೀಡುತ್ತೇನೆ. ಆಕೆ ಜಮ್ಮು ಕಾಶ್ಮೀರ ರಾಜಕೀಯಕ್ಕೆ ಬರಬೇಕು ಎಂದು ಬೇಡಿಕೆ ಇಟ್ಟಿದ್ದ. ನಾನು ಈ ಹಣವನ್ನು ಪಡೆದುಕೊಳ್ಳಲಿಲ್ಲ. ಅಷ್ಟೇ ಅಲ್ಲದೇ ಮಗಳಿಗೂ ಈ ರೀತಿಯ ವ್ಯವಹಾರದಲ್ಲಿ ಭಾಗಿಯಾಗಬೇಡ ಎಂದು ತಿಳಿಸಿದ್ದೆ ಎಂದು ಹೇಳಿದ್ದಾರೆ.

    ನನ್ನ ವಿರುದ್ಧ ಪತ್ನಿ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆಯ ಅಡಿ ಕೇಸ್‌ ಹಾಕಿದ್ದಾಳೆ. ಪಿತೂರಿ ನಡೆಸಿ ನನ್ನನ್ನು ಮನೆಯಿಂದ ಹೊರ ಹಾಕಿದ್ದಾಳೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶೆಹ್ಲಾ ರಷೀದ್‌, ತಂದೆ ಸುಳ್ಳು ಹೇಳುತ್ತಿದ್ದಾರೆ. ತಂದೆ ತಾಯಿಗೆ ಹಿಂಸೆ ನೀಡುತ್ತಿದ್ದಾರೆ. ತಾಯಿ ಜೊತೆ ನಾನು, ಸಹೋದರಿ ದೂರು ನೀಡಿದ್ದೇವೆ. ಇದು ಕೌಟುಂಬಿಕ ವಿಚಾರವಾಗಿದ್ದು, ಸುಳ್ಳು ಹೇಳುತ್ತಿರುವ ತಂದೆಯನ್ನು ನಂಬಬೇಡಿ ಎಂದು ಟ್ವೀಟ್‌ ಮಾಡಿದ್ದಾರೆ.

    https://twitter.com/Shehla_Rashid/status/1333422083880062978

  • ಉಗ್ರರ ಪೋಷಣೆ ನಿಲ್ಲಿಸಿ – ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ

    ಉಗ್ರರ ಪೋಷಣೆ ನಿಲ್ಲಿಸಿ – ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ

    ನವದೆಹಲಿ: ಭಯೋತ್ಪಾದಕರ ಪೋಷಣೆ ಮತ್ತು ಬೆಂಬಲ ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಭಾರತದ ವಿದೇಶಾಂಗ ಸಚಿವಾಲಯ ಇಂದು ಎಚ್ಚರಿಕೆ ನೀಡಿದೆ.

    ಜಮ್ಮು-ಕಾಶ್ಮೀರ ಸ್ಥಳೀಯ ಚುನಾವಣೆಯಲ್ಲಿ ವಿದ್ವಂಸಕ ಕೃತ್ಯ ಎಸಗಲು ಭಯೋತ್ಪಾದಕರು ಪ್ರಯತ್ನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿರುವ ಪಾಕ್ ಹೈ ಕಮಿಷನ್ ಗೆ ಸಮನ್ಸ್ ಜಾರಿ ಮಾಡಿದ್ದ ವಿದೇಶಾಂಗ ಸಚಿವಾಲಯ ಈ ಎಚ್ಚರಿಕೆ ನೀಡಿದೆ.

    ವಿದೇಶಾಂಗ ಸಚಿವಾಲಯ ಸಮನ್ಸ್ ಹಿನ್ನೆಲೆ ಇಂದು ಪಾಕಿಸ್ತಾನ ಹೈ ಕಮಿಷನರ್ ದೆಹಲಿಯಲ್ಲಿರುವ ವಿದೇಶಾಂಗ ಸಚಿವಾಲಯದ ಮುಂದೆ ಹಾಜರಾಗಿದ್ದರು. ಈ ವೇಳೆ ವಿದೇಶಾಂಗ ಸಚಿವಾಲಯ ಅಧಿಕಾರಿಗಳು ಘಟನೆಯನ್ನು ತೀವ್ರವಾಗಿ ಖಂಡಿಸಿದಲ್ಲದೇ, ಉಗ್ರರಿಗೆ ನೀಡುತ್ತಿರುವ ಬೆಂಬಲ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಭಾರತ ರಾಷ್ಟ್ರೀಯ ಭದ್ರತೆ ರಕ್ಷಿಸಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ಸಂದೇಶ ರವಾನಿಸಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದಲ್ಲಿನ ರಾಜಕೀಯ ಪ್ರಕ್ರಿಯೆಯನ್ನು ಹಾಳುಗೆಡವಲು ಪಾಕಿಸ್ತಾನ ಪ್ರಯತ್ನಿಸುತ್ತಿದ್ದು, ಇದಕ್ಕಾಗಿಯೇ ಕಳೆದ ಕೆಲವು ದಿನಗಳಿಂದ ಭಾರತದೊಳಗೆ ಶಸ್ತ್ರಾಸ್ತ್ರಗಳ ಸಮೇತ ನುಸುಳುವಂತೆ ಉಗ್ರರಿಗೆ ಪ್ರಚೋದನೆ ನೀಡುತ್ತಿದೆ. ಉಗ್ರರು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಒಳ ನುಸುಳುವ ವೇಳೆ ನಾಗ್ರೊಟಾದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಯ ನಾಲ್ವರು ಉಗ್ರರು ಹತ್ಯೆಗೀಡಾಗಿದ್ದರು.

    ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಸೇನೆ ಮತ್ತು ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದರು. ಸಭೆ ಬೆನ್ನಲ್ಲೇ ಪಾಕ್ ಹೈ ಕಮಿಷನ್ ಗೆ ಸಮನ್ಸ್ ಜಾರಿ ಮಾಡಿ ಎಚ್ಚರಿಕೆ ನೀಡಲಾಗಿದೆ.

  • ಮೂವರು ಬಿಜೆಪಿ ಮುಖಂಡರನ್ನು ಗುಂಡಿಕ್ಕಿ ಹತ್ಯೆಗೈದ ಉಗ್ರರು

    ಮೂವರು ಬಿಜೆಪಿ ಮುಖಂಡರನ್ನು ಗುಂಡಿಕ್ಕಿ ಹತ್ಯೆಗೈದ ಉಗ್ರರು

    ಶ್ರೀನಗರ: ಉಗ್ರರ ಗುಂಡಿನ ದಾಳಿಗೆ ಭಾರತೀಯ ಜನತಾ ಪಕ್ಷ(ಬಿಜೆಪಿ)ಯ ಮೂವರು ಮುಖಂಡರು ಬಲಿಯಾದ ಘಟನೆ ಕುಲ್ಗಾಂ ಜಿಲ್ಲೆಯ ಖಾಜಿಗುಂಡ್‍ನ ವೈ ಕೆ ಪೊರಾ ಪ್ರದೇಶದಲ್ಲಿ ನಡೆದಿದೆ.

    ಗುರುವಾರ ಸಂಜೆ ಈ ಘಟನೆಯಲ್ಲಿ ಕುಲ್ಗಾಂ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಫಿದಾ ಹುಸೇನ್, ಉಮರ್ ರಶೀದ್ ಮತ್ತು ಉಮರ್ ರಂಜಾನ್ ಮೃತಪಟ್ಟಿದ್ದಾರೆ.

    ಉಗ್ರರು ವೈ ಕೆ ಪೊರಾದಲ್ಲಿ ಮೂವರ ಮೇಲೆ ಗುಂಡು ಹಾರಿಸಿದ್ದಾರೆ. ಪರಿಣಾಮ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರನ್ನು ಖಾಜಿಗುಂಡ್‍ನ ತುರ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೆ ಸಾವನ್ನಪಿದ್ದಾರೆ.

    ತಮ್ಮ ಕಾರ್ಯಕರ್ತರ ಮೇಲಿನ ದಾಳಿಯನ್ನು ಬಿಜೆಪಿ ಖಂಡಿಸಿದೆ. ಇತ್ತ ದಾಳಿಕೋರರನ್ನು ಬಂಧಿಸಲು ಈ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ನಡೆಸಿದೆ. ಇತ್ತೀಚೆಗೆ ಕಾಶ್ಮೀರದಲ್ಲಿ ಆಡಳಿತ ಪಕ್ಷಕ್ಕೆ ಸಂಬಂಧಿಸಿದ ಹಲವು ನಾಯಕರ ಮೇಲೆ ಹಲ್ಲೆ ನಡೆದಿದೆ.

  • ಜಮ್ಮು ಕಾಶ್ಮೀರದಲ್ಲಿ ಎಸ್‍ಐಯನ್ನು ಗುಂಡಿಕ್ಕಿ ಕೊಂದ ಉಗ್ರರು

    ಜಮ್ಮು ಕಾಶ್ಮೀರದಲ್ಲಿ ಎಸ್‍ಐಯನ್ನು ಗುಂಡಿಕ್ಕಿ ಕೊಂದ ಉಗ್ರರು

    ಶ್ರೀನಗರ: ಪೊಲೀಸ್ ಇನ್ಸ್ ಪೆಕ್ಟರ್ ಓರ್ವರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜಮ್ಮು ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯ ಬಿಜ್‍ಬೆಹರಾ ಪ್ರದೇಶದಲ್ಲಿ ನಡೆದಿದೆ.

    ಮೃತ ಇನ್ಸ್ ಪೆಕ್ಟರ್ ಅನ್ನು ಅನಂತ್‍ನಾಗ್ ಜಿಲ್ಲೆಯ ಪೊಲೀಸ್ ಅಧಿಕಾರಿ ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ. ಅನಂತ್‍ನಾಗ್ ಜಿಲ್ಲೆಯ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗೆ ಮರಳುತ್ತಿದ್ದಾಗ ಮೊಹಮ್ಮದ್ ಅಶ್ರಫ್ ಅವರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ಮಾಡಿದ್ದಾರೆ.

    ಈ ಗುಂಡಿನ ದಾಳಿಯಲ್ಲಿ ಅಶ್ರಫ್ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಬಿಜ್‍ಬೆಹರಾ ಉಪ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ನಡೆದ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ. ಮೊಹಮ್ಮದ್ ಅಶ್ರಫ್ ಅವರು ಪ್ರಸ್ತುತ ಪುಲ್ವಾಮಾ ಜಿಲ್ಲೆಯ ಲೆಥ್‍ಪೊರಾದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

    ಇದರ ಜೊತೆಗೆ ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾರತೀಯ ಸೇನೆ ಎನ್‍ಕೌಂಟರ್ ಮಾಡಿದ್ದು, ಈ ಗುಂಡಿನ ದಾಳಿಯಲ್ಲಿ ಅಪರಿಚಿತ ಭಯೋತ್ಪಾದಕನೊಬ್ಬನನ್ನು ಕೊಲ್ಲಲಾಗಿದೆ. ಶೋಪಿಯಾನ್ ಜಿಲ್ಲೆಯ ಮೆಲ್ಹೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ದಾಳಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಓರ್ವ ಉಗ್ರ ಮೃತಪಟ್ಟಿದ್ದಾನೆ.

  • ಪಾಕ್ ಸೈನಿಕನ ಸಮಾಧಿ ಮರುಸ್ಥಾಪಿಸಿ ಗೌರವ ಸಲ್ಲಿಸಿದ ಭಾರತೀಯ ಸೇನೆ

    ಪಾಕ್ ಸೈನಿಕನ ಸಮಾಧಿ ಮರುಸ್ಥಾಪಿಸಿ ಗೌರವ ಸಲ್ಲಿಸಿದ ಭಾರತೀಯ ಸೇನೆ

    – ಈ ಹಿಂದೆ ಭಾರತೀಯ ಸೈನಿಕನ ತಲೆ ಕಡಿದಿದ್ದ ಪಾಕ್
    – ತಲೆ ತೆಗೆದುಕೊಂಡು ಹೋಗಿ ಎಂದು ವಿಕೃತಿ ಮೆರೆದಿತ್ತು

    ಶ್ರೀನಗರ: ವಿಶ್ವದ ಅತ್ಯಂತ ವೃತ್ತಿಪರ ಹಾಗೂ ನೈತಿಕತೆ ಹೊಂದಿದ ಸೇನೆಗಳಲ್ಲಿ ಭಾರತೀಯ ಸೇನೆ ಒಂದು ಎಂದು ಗುರುತಿಸಿಕೊಂಡಿದೆ. ಇದೀಗ ಇದು ಮತ್ತೊಮ್ಮೆ ಸಾಬೀತಾಗಿದ್ದು, ಹಾನಿಗೊಳಗಾಗಿದ್ದ ಪಾಕಿಸ್ತಾನ ಸೈನಿಕನ ಸಮಾಧಿಯನ್ನು ಪುನಃ ಸ್ಥಾಪಿಸುವ ಮೂಲಕ ಸೈನಿಕನಿಗೆ ಗೌರವ ಸಲ್ಲಿಸಲಾಗಿದೆ.

    ‘ಸೈನಿಕನೇ ಮೊದಲು ಉಳಿದದ್ದೆಲ್ಲ ನಂತರ’ ಎಂಬ ಧ್ಯೇಯ ವಾಕ್ಯದ ಬದ್ಧತೆಯನ್ನು ಭಾರತೀಯ ಸೇನೆ ಪ್ರದರ್ಶಿಸಿದ ಬಳಿಕ ಇದೀಗ ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ. ಜಮ್ಮು-ಕಾಶ್ಮೀರದ ನೌಗಮ್ ಸೆಕ್ಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಕಿಸ್ತಾನಿ ಅಧಿಕಾರಿಯ ಸಮಾಧಿ ಹಾಳಾಗಿದ್ದನ್ನು ಕಂಡು ಭಾರತೀಯ ಸೈನಿಕರು, ಮರು ಸ್ಥಾಪಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.

    ಈ ಸಮಾಧಿ ದಿವಂಗತ ಮೇಜರ್ ಮೊಹಮ್ಮದ್ ಶಬ್ಬಿರ್ ಖಾನ್ ಅವರದ್ದು. 1972ರಲ್ಲಿ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಭಾರತೀಯ ಸೈನಿಕರ ದಾಳಿಗೆ ತುತ್ತಾಗಿ, ಸಾವನ್ನಪ್ಪಿದ್ದರು. ಖಾನ್ ಪಾಕಿಸ್ತಾನದ ಮೂರನೇ ಅತ್ಯುನ್ನತ ಮಿಲಿಟರಿ ಪ್ರಶಸ್ತಿಯಾದ ಸೀತಾರಾ-ಎ-ಜುರಾತ್ ಪಡೆದವರಾಗಿದ್ದಾರೆ.

    ದಿವಂಗತ ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಮಾಧಿಯನ್ನು ಭಾರತೀಯ ಸೈನಿಕರು ಪುನಃ ಸ್ಥಾಪಿಸಿದ್ದು, ಹುತಾತ್ಮ ಸೈನಿಕ ಯಾವುದೇ ದೇಶಕ್ಕೆ ಸೇರಿದ್ದರೂ ಗೌರವಕ್ಕೆ ಅರ್ಹ ಎಂದು ಶ್ರೀನಗರ ಮೂಲದ ಸೈನ್ಯದ ಚಿನಾರ್ ಕಾರ್ಪ್ಸ್ ತಿಳಿಸಿದೆ. ಅಲ್ಲದೆ ಅವರ ಸಮಾಧಿಯನ್ನು ಮರು ಸ್ಥಾಪಿಸಿದೆ.

    ಸಮಾಧಿಯನ್ನು ಮರು ಸ್ಥಾಪಿಸಿದ ಫೋಟೋಗಳನ್ನು ಚಿನಾರ್ ಕಾರ್ಪ್ಸ್ ಟ್ವೀಟ್ ಮಾಡಿದ್ದು, ಮೇಜರ್ ಮೊಹಮ್ಮದ್ ಶಬ್ಬಿರ್ ಖಾನ್ ನೆನಪಿನಾರ್ಥವಾಗಿ ಸಿತಾರ್-ಎ-ಜುರತ್ ಶಾಹಿದ್ 5 ಮೇ, 1972, 1630 ಎಚ್ ಅವರು ಇ ಸಿಖ್ಖರ ಪ್ರತಿ ದಾಳಿ ವೇಳೆ ಸಾವನ್ನಪ್ಪಿದ್ದಾರೆ ಎಂದು ಟ್ವೀಟ್‍ನಲ್ಲಿ ಬರೆಯಲಾಗಿದೆ.

    ಭಾರತೀಯ ಸೇನೆಯ ಸಂಪ್ರದಾಯ ಹಾಗೂ ನೀತಿಯಂತೆ ಚಿನಾರ್ ಕಾರ್ಪ್ಸ್ ಪಾಕಿಸ್ತಾನ ಸೇನೆಯ ಮೇಜರ್ ಮೊಹಮ್ಮದ್ ಶಬ್ಬಿರ್ ಖಾನ್, ಸಿತಾರಾ-ಎ-ಜುರತ್ ಅವರ ಹಾನಿಗೊಂಡಿದ್ದ ಸಮಾಧಿಯನ್ನು ಪುನಃ ಸ್ಥಾಪಿಸಲಾಗಿದೆ. ಅವರು 5 ಮೇ, 1972ರಂದು ನೌಗಮ್ ಸೆಕ್ಟರ್ ನಲ್ಲಿ ಎಲ್‍ಸಿ ಉದ್ದಕ್ಕೂ ಇದ್ದ ಕಿಲ್ಲ್ಡ್ ಇನ್ ಆ್ಯಕ್ಷನ್(ಕೆಐಎ) ವೇಳೆ ಸಾವನ್ನಪ್ಪಿದ್ದಾರೆ ಎಂದು ಟ್ವೀಟ್‍ನಲ್ಲಿ ತಿಳಿಸಲಾಗಿದೆ.

    ಮತ್ತೊಂದು ಟ್ವೀಟ್ ಮಾಡಿರುವ ಚಿನಾರ್ ಕಾರ್ಪ್ಸ್, ಹುತಾತ್ಮರದ ಸೈನಿಕ ಯಾವುದೇ ದೇಶಕ್ಕೆ ಸೇರಿದ್ದರೂ, ಅದನ್ನು ಲೆಕ್ಕಿಸದೆ ಸಾವಿನ ಬಳಿಕ ಅವರು ಗೌರವಕ್ಕೆ ಅರ್ಹರು. ಭಾರತೀಯ ಸೇನೆ ಈ ನಂಬಿಕೆಯೊಂದಿಗೆ ನಿಂತಿದೆ. ಭಾರತೀಯ ಸೇನೆ ಜಗತ್ತಿಗಾಗಿ ಇದೆ ಎಂದು ಟ್ವೀಟ್‍ನಲ್ಲಿ ಸಾಲುಗಳನ್ನು ಬರೆಯಲಾಗಿದೆ.

    ಪಾಕ್ ಕ್ರೂರ ಕೃತ್ಯ:
    ಭಾರತೀಯ ಸೇನೆಯ ಕ್ರಮ ಈ ಹಿಂದೆ ಪಾಕಿಸ್ತಾನ ಸೇನೆ ಅನಾಗರಿಕವಾಗಿ ನಡೆದುಕೊಂಡ ಕ್ರಮಕ್ಕೆ ತದ್ವಿರುದ್ಧವಗಿದೆ. 2020ರ ಜನವರಿಯಲ್ಲಿ ಪಾಕಿಸ್ತಾನಿ ಬಾರ್ಡರ್ ಆಕ್ಷನ್ ಟೀಮ್(ಬಿಎಟಿ) ಭಾರತದ ಪೋರ್ಟರ್ ಶಿರಚ್ಛೇದನ ಮಾಡಿ ತಲೆ ತೆಗೆದುಕೊಂಡು ಹೋಗಿ ಎಂದು ವಿಕೃತವಾಗಿ ವರ್ತಿಸಿತ್ತು. ಪಾಕಿಸ್ತಾನದ ಬಿಎಟಿ ಪಾಕಿಸ್ತಾನ ಸೇನಾ ಸಿಬ್ಬಂದಿ ಹಾಗೂ ಭಯೋತ್ಪಾದಕರನ್ನೂ ಒಳಗೊಂಡಿದೆ.

  • ಶಾಲೆ-ಕಾಲೇಜು ಪುನರಾರಂಭ- ಹಲವು ರಾಜ್ಯಗಳಲ್ಲಿ ಮಹತ್ವದ ಬೆಳವಣಿಗೆ

    ಶಾಲೆ-ಕಾಲೇಜು ಪುನರಾರಂಭ- ಹಲವು ರಾಜ್ಯಗಳಲ್ಲಿ ಮಹತ್ವದ ಬೆಳವಣಿಗೆ

    ನವದೆಹಲಿ: ಲಾಕ್‍ಡೌನ್ ಬಳಿಕ ಶಾಲೆ ಕಾಲೇಜುಗಳು ಪುನಾರಂಭ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಗಳಾಗುತ್ತಿದೆ. ಇಂದಿನಿಂದ ಹರಿಯಾಣ, ಅಸ್ಸಾಂ ಮತ್ತು ಜಮ್ಮು ಕಾಶ್ಮೀರದಲ್ಲಿ ಶಾಲಾ-ಕಾಲೇಜುಗಳು ಪ್ರಾಯೋಗಿಕವಾಗಿ ಪುನಾರಂಭಕ್ಕೆ ರಾಜ್ಯ ಸರ್ಕಾರಗಳು ಗ್ರೀನ್ ಸಿಗ್ನಲ್ ನೀಡಿವೆ.

    ಖಾಸಗಿ ಶಾಲೆಗಳ ಒತ್ತಡ ಹಿನ್ನೆಲೆ ಮತ್ತಷ್ಟು ರಾಜ್ಯಗಳಲ್ಲಿ ಶಾಲೆ ಕಾಲೇಜುಗಳನ್ನು ಪುನಾರಂಭಿಸುವ ನಿಟ್ಟಿನಲ್ಲಿ ತಯಾರಿಗಳು ನಡೆದಿದೆ. ಬಿಹಾರದಲ್ಲಿ ಸೆಪ್ಟೆಂಬರ್ 28 ರಿಂದ ಕಂಟೈನ್ಮೆಂಟ್ ಝೋನ್ ಹೊರತಾದ ಪ್ರದೇಶಗಳಲ್ಲಿ 9 ರಿಂದ 12ನೇ ತರಗತಿ ಮಕ್ಕಳು ಶಾಲೆಗೆ ತೆರಳಿ ಶಿಕ್ಷಕರಿಂದ ಶೈಕ್ಷಣಿಕ ಮಾಹಿತಿ ಪಡೆದುಕೊಳ್ಳಬಹುದು ಎಂದು ಸೂಚಿಸಲಾಗಿದೆ.

    ತ್ರಿಪುರದಲ್ಲಿ ಅಕ್ಟೋಬರ್ 5 ರಿಂದ 9-12ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಬಂದು ಶಿಕ್ಷಕರನ್ನು ಸಂಪರ್ಕಿಸಬಹುದು ಎಂದು ಶಿಕ್ಷಣ ಸಚಿವ ರತನ್ ಲಾಲ್ ನಾಥ್ ಹೇಳಿದ್ದಾರೆ. ಆದರೆ ಶಾಲೆಗೆ ಬರುವ ಮುನ್ನ ಪೊಷಕರ ಅನುಮತಿ ಕಡ್ಡಾಯ ಎಂದು ತಿಳಿಸಿದ್ದಾರೆ.

    ಅಕ್ಟೋಬರ್ 1 ರಿಂದ ತಮಿಳುನಾಡಿನಲ್ಲಿ 10,11,12 ನೇ ತರಗತಿ ವಿದ್ಯಾರ್ಥಿಗಳು ಶಾಲೆ ಕಾಲೇಜಿಗೆ ತೆರಳಬಹುದಾಗಿದ್ದು ಶಿಕ್ಷಕರಿಂದ ಪ್ರಾಥಮಿಕ ಮಾಹಿತಿ ಪಡೆದುಕೊಳ್ಳಬಹುದು, ಶಾಲಾ ಕಾಲೇಕು ತೆರಳುವ ಮುನ್ನ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಹೇಳಿದೆ.

    ಉತ್ತರ ಪ್ರದೇಶದಲ್ಲಿ ಖಾಸಗಿ ಶಾಲೆ ಸಂಘ ಡಿಸಿಎಂ ದಿನೇಶ್ ಶರ್ಮಾ ಭೇಟಿ ಮಾಡಿ ಶಾಲೆಗಳ ಪುನಾರಂಭಕ್ಕೆ ಒತ್ತಾಯಿಸಿದ್ದಾರೆ. ಅರ್ಧ ವಾರ್ಷಿಕ ಪರೀಕ್ಷೆ ದೃಷ್ಟಿಯಲ್ಲಿಟ್ಟುಕೊಂಡು ಅಕ್ಟೋಬರ್ 12 ರಿಂದ 9-12ನೇ ತರಗತಿ ಮಕ್ಕಳಿಗೆ ಶಾಲೆ ತೆರಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಯುಪಿ ಸರ್ಕಾರ ತಯಾರಿ ಆರಂಭಿಸಿದ್ದು ಈವರೆಗೂ ದಿನಾಂಕ ಪ್ರಕಟಿಸಿಲ್ಲ.

    ದುರ್ಗಾ ಪೂಜೆ ಹಿನ್ನಲೆ ಅಕ್ಟೋಬರ್ ಮಧ್ಯ ಭಾಗದಲ್ಲಿ ಪಶ್ಚಿಮ ಬಂಗಾಳದಲ್ಲಿ ಶಾಲೆಗಳ ಆರಂಭ ಅನುಮಾನ ಎನ್ನಲಾಗಿದ್ದು ನವೆಂಬರ್ ಮಧ್ಯಭಾಗದಲ್ಲಿ ಪುನಾರಂಭವಾಗಬಹುದು ಎಂದು ಹೇಳಲಾಗಿದೆ.

    ಇನ್ನು ದೆಹಲಿಯಲ್ಲಿ ಅಕ್ಟೋಬರ್ 5 ರಿಂದ ಶಾಲೆ ಕಾಲೇಜು ಪುನಾರಂಭಿಸಲು ಕೇಜ್ರಿವಾಲ್ ಸರ್ಕಾರ ನಿರ್ಧಾರ ಮಾಡಿದ್ದು ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಿದ್ದತೆ ಮಾಡಿಕೊಳ್ಳುತ್ತಿದೆ.

  • ಡ್ರೋನ್ ಮೂಲಕ ಉಗ್ರರಿಗೆ ಶಸ್ತ್ರಾಸ್ತ್ರ ಕಳುಹಿಸುತ್ತಿದೆ ಪಾಕ್- ಮತ್ತೊಂದು ಡ್ರೋನ್ ಪತ್ತೆ

    ಡ್ರೋನ್ ಮೂಲಕ ಉಗ್ರರಿಗೆ ಶಸ್ತ್ರಾಸ್ತ್ರ ಕಳುಹಿಸುತ್ತಿದೆ ಪಾಕ್- ಮತ್ತೊಂದು ಡ್ರೋನ್ ಪತ್ತೆ

    ಶ್ರೀನಗರ: ಉಗ್ರರಿಗೆ ಶಸ್ತ್ರಾಸ್ತ್ರ ತಲುಪಿಸಲು ಪಾಕಿಸ್ತಾನ ಡ್ರೋನ್ ಬಳಸುತ್ತಿದ್ದು, ಇದೀಗ ಶಸ್ತ್ರಾಸ್ತ್ರ ಸಾಗಿಸುವ ಮತ್ತೊಂದು ಡ್ರೋನ್ ಪತ್ತೆಯಾಗಿದೆ. ಇತ್ತೀಚೆಗಷ್ಟೇ ಇದೇ ರೀತಿಯ ಡ್ರೋನ್ ಸಿಕ್ಕಿತ್ತು.

    ಈ ಕುರಿತು ಜಮ್ಮು ಕಾಶ್ಮಿರ ಪೊಲೀಸರು ಮಾಹಿತಿ ನೀಡಿದ್ದು, ಕಳೆದ ರಾತ್ರಿ ಅಖ್ನೂರ್ ಗ್ರಾಮದ ಬಳಿ ರೈಫಲ್ಸ್ ಹಾಗೂ ಪಿಸ್ತೂಲುಗಳು ಪತ್ತೆಯಾಗಿವೆ. ಪುಲ್ವಾಮಾ ದಾಳಿ ಸೇರಿದಂತೆ ಪ್ರಮುಖ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಜೈಶ್-ಎ-ಮೊಹಮ್ಮದ್ ಸಂಘಟನೆಯ ಪಾತ್ರವಿರುವ ಕುರಿತು ಪುರಾವೆಗಳು ಲಭ್ಯವಾಗಿವೆ ಎಂದು ತಿಳಿಸಿದ್ದಾರೆ.

    ರಾತ್ರಿ ವೇಳೆ ಪಾಕಿಸ್ತಾನಿ ಡ್ರೋನ್ ಶಸ್ತ್ರಾಸ್ತ್ರಗಳನ್ನು ಬಿಟ್ಟಿದೆ ಎಂಬ ಖಚಿತ ಮಾಹಿತಿ ಮೇರೆಗೆ ಜಮ್ಮು ಕಾಶ್ಮಿರ ಪೊಲೀಸರು ಆ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಎರಡು ಎಕೆ ರೈಫಲ್ಸ್, ಒಂದು ಪಿಸ್ತೂಲು, ಮೂರು ಎಕೆ ಮ್ಯಾಗಜಿನ್ ಗಳು ಹಾಗೂ 90 ಸುತ್ತು ಗುಂಡುಗಳನ್ನು ಝದ್ ಸೋಹಲ್ ಗ್ರಾಮದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಗಡಿಯಿಂದ ಸುಮಾರು 12 ಕಿ.ಮೀ.ದೂರದಲ್ಲಿರುವ ಅಖ್ನೂರಿನಲ್ಲಿ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳ ಎರಡು ಸರಕುಗಳು ಪತ್ತೆಯಾಗಿವೆ. ಈ ಶಸ್ತ್ರಾಸ್ತ್ರಗಳನ್ನು ಕಾಶ್ಮೀರ ಕಣಿವೆಯ ಭಯೋತ್ಪಾದಕರಿಗಾಗಿ ಬಿಟ್ಟಿರಬಹುದು. ಇದರ ಹಿಂದೆ ಜೈಶ್-ಎ-ಮೊಹಮ್ಮದ್ ಕೈವಾಡವಿದೆ ಎಂಬುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಜಮ್ಮುವಿನ ಹಿರಿಯ ಪೊಲೀಸ್ ಅಧಿಕಾರಿ ಶ್ರೀಧರ್ ಪಾಟೀಲ್ ತಿಳಿಸಿದ್ದಾರೆ.

    ಕಳೆದ ವರ್ಷ ಅಕ್ಟೋಬರ್ ನಲ್ಲಿ ಸಹ ಪಂಜಾಬ್ ಗಡಿಯಲ್ಲಿ ಪಾಕಿಸ್ತಾನ ಮೂಲದ ಡ್ರೋನ್ ಪತ್ತೆಯಾಗಿತ್ತು. ಇದಾದ ಬಳಿಕ ಸೇನೆ ತೀವ್ರ ಕಟ್ಟೆಚ್ಚರ ವಹಿಸಿದೆ. ಅಲ್ಲಿಯೂ ಸಹ ಎಕೆ-47 ರೈಫಲ್, ಗ್ರೆನೇಡ್‍ಗಳು ಹಾಗೂ ಸ್ಯಾಟಲೈಟ್ ಫೋನ್‍ಗಳನ್ನು ಡ್ರೋನ್ ಮೂಲಕ ಕಳುಹಿಸಲಾಗಿತ್ತು. ಇದನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು.

  • ಗುಂಡಿನ ಚಕಮಕಿ- ಶಾಕೂರ್ ಸೇರಿ ನಾಲ್ವರು ಉಗ್ರರು ಹತ

    ಗುಂಡಿನ ಚಕಮಕಿ- ಶಾಕೂರ್ ಸೇರಿ ನಾಲ್ವರು ಉಗ್ರರು ಹತ

    ಶ್ರೀನಗರ: ಭದ್ರತಾ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಅಲ್ ಬದ್ರ್ ಉಗ್ರ ಸಂಘಟನೆಯ ಸಂಸ್ಥಾಪಕ ಶಾಕೂರ್ ಅಹ್ಮದ್ ಪ್ಯಾರ್ರಿ ಸೇರಿ ನಾಲ್ವರು ಉಗ್ರರನ್ನು ಸೆದೆಬಡಿದಿದ್ದಾರೆ.

    ದಕ್ಷಿಣ ಕಾಶ್ಮೀರದ ಶೋಫಿಯಾನ್ ಜಿಲ್ಲೆಯ ಕಿಲೂರಾದಲ್ಲಿ ಉಗ್ರರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ನಾಲ್ವರು ಉಗ್ರರರನ್ನು ಹತ್ಯೆ ಮಾಡಲಾಗಿದೆ. ಓರ್ವನನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ. ಅಲ್ ಬದ್ರ್ ಸಂಸ್ಥಾಪಕ ಶಾಕೂರ್ ಒಂದು ಕಾಲದಲ್ಲಿ ಜಮ್ಮು ಕಾಶ್ಮೀರ ಪೊಲೀಸರಿಗೆ ಎಸ್‍ಪಿಒ ಹಾಗೂ ಕಾನ್‍ಸ್ಟೇಬಲ್ ಆಗಿದ್ದ. ನಂತರ ಪರಾರಿಯಾಗಿ ಉಗ್ರ ಸಂಘಟನೆ ಸ್ಥಾಪಿಸಿದ್ದ. ಇದೀಗ ಶಾಕೂರ್ ಹಾಗೂ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ.

    ನಾಲ್ವರು ಉಗ್ರರ ಪೈಕಿ ಶಾಕೂರ್ ಅಲ್ ಬದ್ರ್ ಉಗ್ರ ಸಂಘಟನೆ ಸಂಸ್ಥಾಪಕ ಹಾಗೂ ಜಿಲ್ಲಾ ಕಮಾಂಡರ್ ಆಗಿದ್ದ. ಮತ್ತೊಬ್ಬನನ್ನು ಸುಹೈಲ್ ಭಟ್ ಎಂದು ಗುರುತಿಸಲಾಗಿದೆ. ಉಗ್ರರಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಒಬ್ಬ ಉಗ್ರನನ್ನು ಜೀವಂತವಾಗಿ ಸೆರೆಹಿಡಿದಿದ್ದು, ನಾಲ್ವರು ಗುಂಡಿನ ದಾಳಿಗೆ ಸಾವನ್ನಪ್ಪಿದ್ದಾರೆ. ಎರಡು ಎಕೆ ಹಾಗೂ ಮೂರು ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಸೇನೆ ತಿಳಿಸಿದೆ.

    ಈ ಕುರಿತು ಶೋಫಿಯಾನ್ ಪೊಲೀಸರು ಮಾಹಿತಿ ನಿಡಿ, 4-5 ಭಯೋತ್ಪಾದಕರು ಕಿಲೂರಾ ಪ್ರದೇಶದ ತೋಟದಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ಯೋಧರು ಸುತ್ತುವರಿದು ಶೋಧ ಕಾರ್ಯ ಆರಂಭಿಸಿದರು. ಆಗ ಉಗ್ರರು ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದರು. ಇದಕ್ಕೆ ಪ್ರತಿಯಾಗಿ ಸೇನಾ ಸಿಬ್ಬಂದಿ ಸಹ ಗುಂಡು ಹಾರಿಸಿದರು. ಈ ವೇಳೆ ನಾಲ್ವರು ಉಗ್ರರು ಸಾವನ್ನಪ್ಪಿದ್ದು, ಒಬ್ಬನನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಸಿಕ್ಕವನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

    ಸಾವನ್ನಪ್ಪಿದ ನಾಲ್ವರಲ್ಲಿ ಶಾಕೂರ್ ಅಹ್ಮದ್ ಪ್ಯಾರ್ರಿ ಪ್ರಮುಖನಾಗಿದ್ದು, ಈತ ವಿಶೇಷ ಪೊಲೀಸ್ ಅಧಿಕಾರಿ(ಎಸ್‍ಪಿಒ)ಯಾಗಿದ್ದ. ನಂತರ ಕಾನ್‍ಸ್ಟೇಬಲ್ ಮಾಡಲಾಯಿತು. ಆಗ ನಾಲ್ಕು ಎಕೆ-47 ಬಂದೂಕುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದ. ಅಲ್ಲದೆ ಉಗ್ರ ಸಂಘಟನೆ ಸೇರಿದ್ದ. ಬಳಿಕ ತನ್ನದೇ ಗುಂಪು ಕಟ್ಟಿಕೊಂಡಿದ್ದ. ಅಲ್ ಬದ್ರ್ ಎಂಬ ಸಂಘಟನೆ ಕಟ್ಟಿಕೊಂಡು 10 ಯುವಕರನ್ನು ನೇಮಿಸಿಕೊಂಡಿದ್ದ. ಇದರಲ್ಲಿ ಐವರು ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ಕಾಶ್ಮೀರದ ಇನ್‍ಸ್ಪೆಕ್ಟರ್ ಜನರಲ್ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.

    ಘಟನೆಯಲ್ಲಿ ಯಾವುದೇ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿಲ್ಲ. ಜಮ್ಮು ಕಾಶ್ಮೀರದಲ್ಲಿನ ಉಳಿದ ಉಗ್ರರನ್ನು ಸೆದೆಬಡಿಯಲು ನವೆಂಬರ್ ಬಳಿಕ ಕಾರ್ಯಾಚರಣೆ ಚುರುಕುಗೊಳಿಸಿದ್ದೆವು. ಅದರಂತೆ ಹಂತ ಹಂತವಾಗಿ ಉಗ್ರರನ್ನು ಮಟ್ಟಹಾಕಲಾಗುತ್ತಿದೆ ಎಂದು ವಿಜಯ್ ಕುಮಾರ್ ತಿಳಿಸಿದ್ದಾರೆ.

  • ಪುಲ್ವಾಮಾ ದಾಳಿ – ಭಯೋತ್ಪಾದಕಿ ಮಗಳಿಗೆ ಸಾಥ್ ಕೊಟ್ಟಿದ್ದ ತಂದೆ, ಬಯಲಾಯ್ತು ಸ್ಫೋಟಕ ಸತ್ಯ

    ಪುಲ್ವಾಮಾ ದಾಳಿ – ಭಯೋತ್ಪಾದಕಿ ಮಗಳಿಗೆ ಸಾಥ್ ಕೊಟ್ಟಿದ್ದ ತಂದೆ, ಬಯಲಾಯ್ತು ಸ್ಫೋಟಕ ಸತ್ಯ

    – ಮಾಸ್ಟರ್ ಮೈಂಡ್ ಜೊತೆ ನಿರಂತರ ಸಂಪರ್ಕ
    – ಎನ್‍ಐಎ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖ

    ಶ್ರೀನಗರ: ಪುಲ್ವಾಮಾ ಭಯೋತ್ಪಾದನಾ ಪ್ರಕರಣದಲ್ಲಿ ಬಂಧಿತಳಾಗಿದ್ದ ಏಕೈಕ ಮಹಿಳಾ ಭಯೋತ್ಪಾದಕಿ ಕೃತ್ಯದ ಮಾಸ್ಟರ್ ಮೈಂಡ್ ಜೊತೆ ನಿಕಟ ಸಂಪರ್ಕದಲ್ಲಿದ್ದ ವಿಚಾರ ರಾಷ್ಟ್ರೀಯ ತನಿಖಾ ದಳದ(ಎನ್‍ಐಎ) ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖವಾಗಿದೆ.

    ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಪುಲ್ವಾಮಾದಲ್ಲಿ ಎನ್‍ಐಎ 23 ವರ್ಷದ ಇನ್ಶಾ ಜಾನ್ ಮತ್ತು ಆಕೆಯ ತಂದೆಯನ್ನು ಬಂಧಿಸಿತ್ತು. ಈಗ ಈ ಕೃತ್ಯದಲ್ಲಿ ಆಕೆ ಹೇಗೆ ನೆರವಾಗಿದ್ದಳು ಎಂಬುದನ್ನು ವಿವರಿಸಲಾಗಿದೆ.

    ಜೈಶ್-ಎ-ಮೊಹಮ್ಮದ್ ಉಗ್ರಸಂಘಟನೆಗೆ ಸೇರಿದ್ದ ಇನ್ಶಾ ಜಾನ್ ಕಳೆದ ಮಾರ್ಚ್‍ನಲ್ಲಿ ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟ ಪಾಕಿಸ್ತಾನದ ಬಾಂಬ್ ತಯಾರಕ ಮತ್ತು ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಮೊಹಮ್ಮದ್ ಉಮರ್ ಫಾರೂಕ್ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದಳು. ಇನ್ಶಾ ಫೋನ್ ಮತ್ತು ಇತರ ಸಾಮಾಜಿಕ ಮಾಧ್ಯಮದಲ್ಲಿ ಆತನೊಂದಿಗೆ ಸಂಪರ್ಕದಲ್ಲಿದ್ದಳು ಎಂದು ಎನ್‍ಐಎ ತಿಳಿಸಿದೆ.

    ಮಂಗಳವಾರ ಎನ್‍ಐಎ ಅಧಿಕಾರಿಗಳು ಪುಲ್ವಾಮಾ ದಾಳಿಯ ಬಗ್ಗೆ 13,500 ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ. ಇದಾದ ಒಂದು ದಿನದ ನಂತರ ಮಾತನಾಡಿರುವ ಹಿರಿಯ ಎನ್‍ಐಎ ಅಧಿಕಾರಿಯೊಬ್ಬರು, ಇನ್ಶಾ ಜಾನ್ ಮತ್ತು ಮೊಹಮ್ಮದ್ ಉಮರ್ ಫಾರೂಕ್ ನಡೆಸಿರುವ ಸಂಭಾಷಣೆ ಮತ್ತು ಸಂದೇಶಗಳು ನಮಗೆ ಸಿಕ್ಕಿವೆ. ಮಗಳು ಉಗ್ರರ ಜೊತೆ ಸಂಪರ್ಕದಲ್ಲಿದ್ದ ವಿಚಾರ ಇನ್ಶಾ ಜಾನ್‍ಳ ತಂದೆ ತಾರಿಕ್ ಪಿರ್ ಕೂಡ ಗೊತ್ತಿತ್ತು ಎಂದು ಹೇಳಿದ್ದಾರೆ.

    ಪುಲ್ವಾಮಾ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಉಮರ್ ಫಾರೂಕ್ ಮತ್ತು ಅತನ ಇಬ್ಬರು ಸಹಚರರ ಸಂಚಾರ ಮಾಡಲು ತಾರಿಕ್ ಪಿರ್ ಸಹಾಯ ಮಾಡಿದ್ದ. ಜೊತೆಗೆ ತಂದೆ-ಮಗಳು ಜೋಡಿ ಪುಲ್ವಾಮಾ ದಾಳಿಯಲ್ಲಿ ಪ್ರಮುಖ ಉಗ್ರರಾದ ಉಮರ್ ಫಾರೂಕ್, ಸಮೀರ್ ದಾರ್ ಮತ್ತು ಆದಿಲ್ ಅಹ್ಮದ್ ದಾರ್ ಗೆ ಆಹಾರ, ಆಶ್ರಯ ಮತ್ತು ಇತರ ಲಾಜಿಸ್ಟಿಕ್ಸ್ ಅನ್ನು 15ಕ್ಕೂ ಹೆಚ್ಚು ಬಾರಿ ಒದಗಿಸಿದ್ದಾರೆ. 2018 ಮತ್ತು 2019ರ ನಡುವೆ ಹಲವಾರು ಬಾರಿ ಉಗ್ರರಿಗೆ ಅವರ ಮನೆಯಲ್ಲೇ ಆಶ್ರಯ ನೀಡಿದ್ದಾರೆ.

    ಫೆಬ್ರವರಿ 14, 2019ರಂದು ವರ್ಷ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರು ಆತ್ಮಾಹುತಿ ಕಾರ್ ಬಾಂಬ್ ದಾಳಿ ಮಾಡಿದ್ದರು. ಇದರಲ್ಲಿ 40 ಜನ ಭಾರತೀಯ ಯೋಧರು ಹುತಾತ್ಮರಾಗಿದ್ದರು ಈ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಒಟ್ಟು 19 ಉಗ್ರರ ವಿರುದ್ಧ 13,500 ಪುಟಗಳ ಚಾರ್ಜ್‍ಶಿಟ್ ಸಲ್ಲಿಕೆ ಮಾಡಲಾಗಿದೆ.

    ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್, ಪ್ರಕರಣದ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿದ್ದು, ಇವನ ಇಬ್ಬರು ಸಹೋದರರಾದ ರೌಫ್ ಅಝರ್ ಹಾಗೂ ಮೌಲಾನಾ ಮೊಹಮ್ಮದ್ ಅಮ್ಮರ್ ಸಹ ದಾಳಿಯಲ್ಲಿ ಭಾಗಿಯಾಗಿದ್ದರು. ಇದನ್ನು ಓದಿ: ಪುಲ್ವಾಮಾ ಕೇಸ್ – ‘ಕೀ’ ಯಿಂದ ಕೇಸ್ ಓಪನ್ ಆದ ರೋಚಕ ಕಥೆ ಓದಿ

    ಎನ್‍ಐಎ ಎಸ್‍ಪಿ ರಾಕೇಶ್ ಬಲ್ವಾಲ್ ಅವರು ಜಮ್ಮು ಕಾಶ್ಮೀರದ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದು, ಒಟ್ಟು 19 ಆರೋಪಿಗಳ ಪೈಕಿ 7 ಜನ ಎನ್‍ಐಎ ಕಸ್ಟಡಿಯಲ್ಲಿದ್ದಾರೆ. ಉಳಿದ 7 ಜನ ಸಾವನ್ನಪ್ಪಿದ್ದಾರೆ. ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ನಡೆದ ವಿವಿಧ ಗುಂಡಿನ ಚಕಮಕಿ ವೇಳೆ 7 ಉಗ್ರರು ಸಾವನ್ನಪ್ಪಿದ್ದಾರೆ. ಐವರು ಪರಾರಿಯಾಗಿದ್ದಾರೆ. ಇದರಲ್ಲಿ ಮೂವರು ಪಾಕಿಸ್ತಾನದಲ್ಲಿದ್ದಾರೆ. ಇನ್ನಿಬ್ಬರು ಭಾರತದಲ್ಲೇ ತಲೆಮರೆಸಿಕೊಂಡಿದ್ದಾರೆ.

  • ಸಾವನ್ನಪ್ಪಿದ ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

    ಸಾವನ್ನಪ್ಪಿದ ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

    ಶ್ರೀನಗರ: ಜಮ್ಮು ಕಾಶ್ಮೀರದ ಹಂದ್ವಾರ ಹಾಗೂ ಕುಪ್ವಾರದಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಮೂವರು ಉಗ್ರರು ಹತರಾದ ನಂತರ ಇಬ್ಬರ ಬಳಿ ಅಪಾರ ಪ್ರಮಾಣದ ಮದ್ದು, ಗುಂಡು ಹಾಗೂ ಶಸ್ತ್ರಸ್ತ್ರಗಳು ಸಿಕ್ಕಿವೆ.

    ಬುಧವಾರ ಹಂದ್ವಾರ ಹಾಗೂ ಕುಪ್ವಾರದಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ಇಬ್ಬರು ಎಲ್‍ಇಟಿ ಉಗ್ರರು ಹತರಾಗಿದ್ದು, ಇವರಿಂದ ಅಪಾರ ಪ್ರಮಾಣದ ಮದ್ದು, ಗುಂಡು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಾವನ್ನಪ್ಪಿದವರಲ್ಲಿ ಎಲ್‍ಇಟಿ ಕಮಾಂಡರ್ ನಸೀರ್ ಉದ್ದಿನ್ ಲೋನ್ ಒಬ್ಬ. ಈತ ಈ ಹಿಂದೆ ಹಲವು ಸಿಆರ್‍ಪಿಎಫ್ ಯೋಧರ ಹುತಾತ್ಮರಾದ ಪ್ರಕರಣದಲ್ಲಿ ಭಾಗಿಯಾಗಿದ್ದ.

    ಜಮ್ಮು ಕಾಶ್ಮೀರದ ಕುಲ್ಗಮ್ ಹಾಗೂ ಹಂದ್ವಾರದಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಒಟ್ಟು ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ಏರ್ಪಟ್ಟಿದ್ದು, ಈ ವೇಳೆ ಉಗ್ರರನ್ನು ಹತ್ಯೆ ಮಾಡಲಾಗಿದೆ. ಒಬ್ಬ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಉಗ್ರ ಸಾವನ್ನಪ್ಪಿದ್ದು, ಅದೇ ಸ್ಥಳದಲ್ಲಿ ಸಿಕ್ಕಿಬಿದ್ದ ಇನ್ನಿಬ್ಬರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಡೀ ಪ್ರದೇಶವನ್ನು ಸುತ್ತುವರಿಯಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.

    ಮತ್ತೊಂದು ಘಟನೆಯಲ್ಲಿ ಇಬ್ಬರು ಎಲ್‍ಇಟಿ ಉಗ್ರರು ಹತರಾಗಿದ್ದಾರೆ. ಜಮ್ಮು ಕಾಶ್ಮೀರದ ಹಂದ್ವಾರಾದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಸಾವನ್ನಪ್ಪಿದ ಇಬ್ಬರ ಪೈಕಿ ಒಬ್ಬನನ್ನು ಎಲ್‍ಇಟಿ ಕಮಾಂಡರ್ ನಸೀರ್ ಉದ್ದೀನ್ ಲೋನ್ ಎಂದು ಗುರುತಿಸಲಾಗಿದೆ. ಈತ ಸೋಪೂರ್ ಹಾಗೂ ಹಂದ್ವಾರದಲ್ಲಿ ಸೈನಿಕರ ಹುತಾತ್ಮರಾಗಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಹಂದ್ವಾರದಲ್ಲಿ ನಡೆದ ಎನ್‍ಕೌಂಟರ್ ನಲ್ಲಿ ಸಾವನ್ನಪ್ಪಿದ ಎಲ್‍ಇಟಿ ಕಮಾಂಡರ್ ನಸೀರ್ ಉದ್ದಿನ್ ಲೋನ್ ಏಪ್ರಿಲ್ 18ರಂದು ಮೂವರು ಹಾಗೂ ಮೇ 4ರಂದು ಸೊಪೂರದಲ್ಲಿ ಮೂವರು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಜಮ್ಮು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.