Tag: jammu kashmir

  • ಬಿಜೆಪಿ ನಾಯಕನ ಮನೆ ಮೇಲೆ ಭಯೋತ್ಪಾದಕರ ದಾಳಿ – ಓರ್ವ ಪೊಲೀಸ್ ಹುತಾತ್ಮ

    ಬಿಜೆಪಿ ನಾಯಕನ ಮನೆ ಮೇಲೆ ಭಯೋತ್ಪಾದಕರ ದಾಳಿ – ಓರ್ವ ಪೊಲೀಸ್ ಹುತಾತ್ಮ

    ಶ್ರೀನಗರ: ಬಿಜೆಪಿ ನಾಯಕ ಅನ್ವರ್ ಖಾನ್ ನಿವಾಸದ ಮೇಲೆ ಗುರುವಾರ ಭಯೋತ್ಪಾದಕರು ನಡೆಸಿದ್ದ ದಾಳಿಯಲ್ಲಿ ಓರ್ವ ಪೊಲೀಸ್ ಹುತಾತ್ಮರಾಗಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ.

    ನಗರದ ಹೊರವಲಯದಲ್ಲಿರುವ ನೌಗಮ್‍ನ ಅರಿಗಮ್ ಪ್ರದೇಶದಲ್ಲಿರುವ ಖಾನ್ ನಿವಾಸದ ಗಾರ್ಡ್ ಪೋಸ್ಟ್ ಮೇಲೆ ಭಯೋತ್ಪಾದಕರು ಬೆಳಗ್ಗೆ ಗುಂಡು ಹಾರಿಸಿದ್ದರು.

    ಭಯೋತ್ಪಾದಕರು ಸ್ಥಳದಿಂದ ಎಸ್‍ಎಲ್‍ಆರ್ ರೈಫಲ್ ಕೊಂಡೊಯ್ದಿದ್ದು, ಈ ಕುರಿತಂತೆ ಪೊಲೀಸರು ಯಾವುದೇ ಮಾಹಿತಿಯನ್ನು ದೃಢೀಕರಿಸಿಲ್ಲ. ಘಟನೆ ವೇಳೆ ಗಾಯಗೊಂಡ ಭದ್ರತಾ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ವೇಳೆ ಚಿಕಿತ್ಸೆ ಫಲಾಕಾರಿಯಾಗದೇ ಮೃತಪಟ್ಟಿರುವುದಾಗಿ ಎಸ್‍ಎಂಎಚ್‍ಎಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಜೀರ್ ಚೌಧರಿ ತಿಳಿಸಿದ್ದಾರೆ.

    ಘಟನೆ ಕುರಿತಂತೆ ಬಿಜೆಪಿ ಮಾಧ್ಯಮದ ಉಸ್ತುವಾರಿ ಮಝೂರ್ ಭಟ್ ಕ್ರೂರವಾದ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

    ಇದು ಬಿಜೆಪಿ ನಾಯಕರ ಮೇಲೆ ಮಾಡುತ್ತಿರುವ ಮೊದಲನೇ ದಾಳಿಯಲ್ಲ. ಈ ಮುನ್ನ 2018 ರಲ್ಲಿ ಪುಲ್ವಾಮಾ ಜಿಲ್ಲೆಯಲ್ಲಿರುವ ಅನ್ವರ್ ಖಾನ್‍ರವರ ಮೇಲೆ ಭಯೋತ್ಪಾದಕರು ಬಹಿರಂಗವಾಗಿ ಗುಂಡು ಹಾರಿಸಿದ್ದರು. ಈ ವೇಳೆ ಅವರ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಗಾಯಗೊಂಡಿದ್ದರು. ಆದರೆ ಖಾನ್‍ಗೆ ಯಾವುದೇ ಹಾನಿಯಾಗಲಿಲ್ಲ ಹಾಗೂ ಅಪಾಯದಿಂದ ಪಾರಾಗಿದ್ದರು.

  • ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ – ಭದ್ರತಾ ಪಡೆಗಳ ಗುಂಡಿಗೆ ನಾಲ್ವರು ಬಲಿ

    ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ – ಭದ್ರತಾ ಪಡೆಗಳ ಗುಂಡಿಗೆ ನಾಲ್ವರು ಬಲಿ

    ಶ್ರೀನಗರ: ನಾಲ್ವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿರುವ ಘಟನೆ ಸೋಮವಾರ ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದಿದೆ.

    ಉಗ್ರರ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಭದ್ರತಾ ಪಡೆಗಳು ಮಧ್ಯರಾತ್ರಿ ಜಿಲ್ಲೆಯ ಮಣುಹಾಲ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿತು. ಈ ವೇಳೆ ಭದ್ರತಾ ಪಡೆಯ ಮೇಲೆ ಭಯೋತ್ಪಾದಕರು ಗುಂಡು ಹಾರಿಸಲು ಆರಂಭಿಸಿದರು. ಬಳಿಕ ಒಂದೆರಡು ಗಂಟೆಗಳ ಕಾಲ ಭಯೋತ್ಪಾದಕರು ಹಾಗೂ ಭದ್ರತಾಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ನಂತರ ಭಯೋತ್ಪಾದಕರಿಗೆ ಶರಣಾಗುವಂತೆ ಭದ್ರತಾ ಪಡೆ ಹೇಳಿದಾಗ ಟೆರರಿಸ್ಟ್ ನಿರಾಕರಿಸಿದ್ದಾರೆ. ಹೀಗಾಗಿ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ನಾಲ್ವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

  • ಭಯೋತ್ಪಾದಕ ಸಂಘಟನೆ ಸೇರುತ್ತಿದ್ದ ಇಬ್ಬರು ಯುವಕರ ರಕ್ಷಣೆ

    ಭಯೋತ್ಪಾದಕ ಸಂಘಟನೆ ಸೇರುತ್ತಿದ್ದ ಇಬ್ಬರು ಯುವಕರ ರಕ್ಷಣೆ

    – ಸಾಮಾಜಿಕ ಜಾಲತಾಣದ ಮೂಲಕ ಪಾಕ್ ಉಗ್ರರ ಸಂಪರ್ಕ
    – ಕೌನ್ಸಲಿಂಗ್ ಬಳಿಕ ಪೋಷಕರಿಗೆ ಯುವಕರ ಹಸ್ತಾಂತರ

    ಶ್ರೀನಗರ: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಸೇರುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ರಕ್ಷಣೆ ಮಾಡಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಯುವಕರು ಉಗ್ರರ ಸಂಪರ್ಕ ಬೆಳೆಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

    ಇಬ್ಬರು ಯುವಕರು ಮಾರ್ಚ್ 14ರಿಂದ ಕಾಣೆಯಾಗಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನ ಮೂಲದ ನೇಮಕಾತಿ ಹ್ಯಾಂಡ್ಲರ್‍ಗಳಿಂದ ಪ್ರಚೋದನೆಗೆ ಒಳಗಾಗಿದ್ದು, ಭಯೋತ್ಪಾದಕ ಸಂಘಟನೆ ಸೇರಲು ಮುಂದಾಗಿದ್ದರು. ಆದರೆ ಮಂಗಳವಾರ ಬುಡ್ಗಾಮ್ ಪೊಲೀಸರು ಇದನ್ನು ತಡೆದಿದ್ದು, ಇಬ್ಬರು ಯುವಕರನ್ನು ರಕ್ಷಿಸಿದ್ದಾರೆ.

    ಅವಂತಿಪೋರಾದ ಟ್ರಾಲ್‍ನಲ್ಲಿ ಪೊಲೀಸ್ ತಂಡ ಯುವಕರನ್ನು ರಕ್ಷಿಸಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನ ಮೂಲದ ನೇಮಕಾತಿ ಹ್ಯಾಂಡ್ಲರ್‍ಗಳು ಯುವಕರಿಗೆ ಪ್ರಚೋದನೆ ನೀಡಿ, ಉಗ್ರ ಸಂಘಟನೆಗೆ ಸೇರಿಸಿಕೊಳ್ಳಲು ಯತ್ನಿಸಿದ್ದರು. ಇದೀಗ ಇಬ್ಬರು ಯುವಕರನ್ನು ಪೊಲೀಸರು ರಕ್ಷಿಸಿದ್ದು, ಕೌನ್ಸಲಿಂಗ್ ನಡೆಸಿ ಅವರ ಪೋಷಕರಿಗೆ ಒಪ್ಪಿಸಿದ್ದಾರೆ ಎಂದು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.

    ಜಮ್ಮು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಸೋಮವಾರ ಮಾತನಾಡಿ, ಭಯೋತ್ಪಾದಕ ಸಂಘಟನೆಯ ಉನ್ನತ ಕಮಾಂಡರ್‍ಗಳನ್ನು ಹತ್ಯೆ ಮಾಡಲಾಗಿದ್ದು, ಇದರಿಂದ ಭಯೋತ್ಪಾದಕ ಪೀಡಿತ ಪ್ರದೇಶದ ಜನರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಸೋಮವಾರ ಶೋಪಿಯಾನ್‍ನಲ್ಲಿ ಎನ್‍ಕೌಂಟರ್ ನಡೆದ ಸಂದರ್ಭದಲ್ಲಿ ಜೈಷ್-ಎ-ಮೊಹಮ್ಮದ್ ಕಮಾಂಡರ್ ಸಜ್ಜಾದ್ ಅಫ್ಘಾನಿಯನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದರು.

  • ಜಮ್ಮು ಕಾಶ್ಮೀರದಲ್ಲಿ ಹಿಮಪಾತ – ಸಂಕಷ್ಟದಲ್ಲಿ ಸಿಲುಕಿರುವ ಕನ್ನಡಿಗರು

    ಜಮ್ಮು ಕಾಶ್ಮೀರದಲ್ಲಿ ಹಿಮಪಾತ – ಸಂಕಷ್ಟದಲ್ಲಿ ಸಿಲುಕಿರುವ ಕನ್ನಡಿಗರು

    ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಹಿಮಪಾತ ಹೆಚ್ಚಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಹಾಗೂ ಹೊಸಪೇಟೆ ಮೂಲದ 10 ಮಂದಿ ಪ್ರವಾಸಿಗರು ಹೋಟೆಲ್ ನಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದಾರೆ.

    ಹೊಸಪೇಟೆ ಹಾಗೂ ಹುಬ್ಬಳ್ಳಿ ಎರಡು ಕುಟುಂಬದ ಒಟ್ಟು 10 ಮಂದಿ ಕನ್ನಡಿಗರು ಕಳೆದ 10 ದಿನಗಳ ಹಿಂದೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಕಳೆದ ಮೂರು ದಿನಗಳ ಹಿಂದೆ ಜಮ್ಮುವಿನ ಸೋನಮರ್ಗ್ ನ ಖಾಸಗಿ ಹೋಟೆಲ್ ನಲ್ಲಿ ವಾಸವಾಗಿದ್ದರು. ರಾತ್ರಿ ಹೋಟೆಲ್ ನಲ್ಲಿ ವಾಸವಿದ್ದ ಕನ್ನಡಿಗರ ತಂಡ ಬೆಳಗ್ಗೆ ತಮ್ಮ ಪ್ರಯಾಣ ಆರಂಭ ಮಾಡಬೇಕಿತ್ತು. ಆದರೆ ಬೆಳಗ್ಗೆ ಹೊರಡುವ ಮುನ್ನವೇ ರಾತ್ರೋರಾತ್ರಿ ಅಪಾರ ಪ್ರಮಾಣದ ಹಿಮ ಸುರಿದ ಹಿನ್ನೆಲೆಯಲ್ಲಿ ಹೋಟೆಲ್‍ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

    ಕನ್ನಡಿಗರು ವಾಸವಿದ್ದ ಹೋಟೆಲ್ ಬಳಿ ಭಾರೀ ಹಿಮಪಾತವಾಗುತ್ತಿದ್ದ ಕಾರಣ ಹೋಟೆಲ್ ಸಿಬ್ಬಂದಿ ಹೊರ ಹೋಗದಂತೆ ಎಚ್ಚರಿಸಿದ್ದಾರೆ. ಹೋಟೆಲ್ ಸಿಬ್ಬಂದಿಯ ಮಾಹಿತಿಯಂತೆ ಅಲ್ಲೇ ಉಳಿದುಕೊಂಡಿದ್ದಾರೆ. ಆದರೆ ಇತ್ತ ಹಿಮಪಾತ ಮಾತ್ರ ಕಡಿಮೆ ಆಗಲೇ ಇಲ್ಲ. ಹೀಗಾಗಿ ಕಳೆದ ಮೂರು ದಿನಗಳಿಂದ ಹೋಟೆಲ್ ನಲ್ಲಿಯೇ ಉಳಿದುಕೊಂಡು ಸಂಕಷ್ಟಕ್ಕೊಳಗಾಗಿದ್ದಾರೆ. ಅದಲ್ಲದೇ ತಾವು ಉಳಿದುಕೊಂಡಿರುವ ಹೋಟೆಲ್ ನಲ್ಲಿ ಡೀಸಲ್ ಸಹ ಮುಗಿಯುತ್ತಾ ಬಂದಿದ್ದು, ವಿದ್ಯುತ್ ಸಂಪರ್ಕ ಸಹ ಕಡಿತವಾಗಿದೆ. ಹೀಗಾಗಿ ಕೂಡಲೇ ರಕ್ಷಣೆ ಮಾಡುವಂತೆ ಸ್ಥಳೀಯಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.

  • ಪೊಲೀಸ್ ಪೇದೆಯಿಂದ ಇಲಾಖೆಗೆ 5.43 ಲಕ್ಷ ರೂಪಾಯಿ ಪಂಗನಾಮ

    ಪೊಲೀಸ್ ಪೇದೆಯಿಂದ ಇಲಾಖೆಗೆ 5.43 ಲಕ್ಷ ರೂಪಾಯಿ ಪಂಗನಾಮ

    ಶ್ರೀನಗರ : ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಗಾದೆ ಮಾತಿನಂತೆ, ಪೊಲೀಸ್ ಪೇದೆಯೊರ್ವರು ತನ್ನ ಇಲಾಖೆಯಲ್ಲಿ ಕೆಲಸ ಮಾಡುತ್ತಾ ಇಲಾಖೆಗೆ ನಕಲಿ ದಾಖಲೆ ನೀಡಿ ಸುಮಾರು 5.53 ಲಕ್ಷ ರೂಪಾಯಿ ಪಂಗನಾಮ ಹಾಕಿ ಇದೀಗ ಸಿಕ್ಕಿಬಿದ್ದಿದ್ದಾರೆ.

    ಜಮ್ಮು-ಕಾಶ್ಮೀರದ ಅಪರಾಧ ವಿಭಾಗದ ಪೊಲೀಸರು ಪತ್ತೆಹಚ್ಚಿರುವ ಮಾಹಿತಿ ಪ್ರಕಾರ ಪೊಲೀಸ್ ಇಲಾಖೆಗೆ ಪಂಗನಾಮ ಹಾಕಿದ ಪೊಲೀಸ್ ಪೇದೆಯನ್ನು ರವಿ ಕುಮಾರ್ ಎಂದು ಗುರುತಿಸಲಾಗಿದೆ. ರವಿ ಕುಮಾರ್ ಇಲಾಖೆಗೆ ತನ್ನ ತಂದೆಗೆ ಆರೋಗ್ಯ ಸರಿಯಿಲ್ಲ ಎಂದು ನಕಲಿ ದಾಖಲೆ ನೀಡಿ 5.53 ಕೋಟಿ ರೂಪಾಯಿಯನ್ನು ಪಡೆದುಕೊಂಡಿದ್ದರು. ಆದರೆ ಇವರ ತಂದೆ ಮೃತಪಟ್ಟು ಹಲವು ವರ್ಷಗಲೇ ಕಳೆದಿದೆ ಎಂಬ ಮಾಹಿತಿ ಸಿಕ್ಕಿದೆ.

    ರವಿ ಕುಮಾರ್ ಇಲಾಖೆಗೆ ಮಾಡಿರುವ ಮೋಸದ ಕುರಿತು ಮಾಹಿತಿ ಪಡದು ಈಗಾಗಲೇ ಮೀಸಲು ಶಸ್ತ್ರಾಸ್ರ ಪಡೆ ಕಾನೂನಿನ ಪ್ರಕಾರ ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ ಎಂದು ಅಪರರಾಧ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪೊಲೀಸರು ರವಿ ಕುಮಾರ್‍ನ್ನು ವಿಚಾರಿಸಿದಾಗ ತನ್ನ ತಂದೆ ಪ್ರೇಮ ದಾಸ್ ಅವರ ಆರೋಗ್ಯ ಸರಿಯಿಲ್ಲ ಎಂದು ಮೆಡಿಕಲ್ ಸರ್ಟಿಫಿಕೆಟ್ ನೀಡಿ ಇಲಾಖೆಯಿಂದ ರವಿ ಕುಮಾರ್ ಬ್ಯಾಂಕ್ ಖಾತೆಗೆ 1,92,553 ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ. ಆದರೆ ಪೊಲೀಸರು ತನಿಖೆ ನಡೆಸಿದಾಗ 2016ರಲ್ಲೇ ರವಿ ಕುಮಾರ್ ಅವರ ತಂದೆ ಮೃತಪಟ್ಟಿರುವುದು ದೃಢಪಟ್ಟಿದೆ.

    ತಂದೆ ಮೃತಪಟ್ಟಿದ್ದರೂ ಕುಮಾರ್ ಮಾತ್ರ ನಕಲಿ ದಾಖಲೆಯನ್ನು ಇಲಾಖೆಗೆ ನೀಡಿ ಈವರೆಗೆ 5,53,695 ರೂಪಾಯಿಗಳನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಹಿಸಿಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಪೊಲೀಸ್ ಇಲಾಖೆಯಿಂದ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • 31 ವರ್ಷಗಳ ನಂತರ ಶ್ರೀನಗರದ ದೇವಾಲಯ ಓಪನ್

    31 ವರ್ಷಗಳ ನಂತರ ಶ್ರೀನಗರದ ದೇವಾಲಯ ಓಪನ್

    ಶ್ರೀನಗರ: ಉಗ್ರವಾದದಿಂದಾಗಿ ಮುಚ್ಚಿದ ಶೀತಲ್ ನಾಥ್ ದೇವಾಲಯವಯವನ್ನು 31 ವರ್ಷಗಳ ನಂತರ ತೆರೆಯಲಾಗಿದೆ.

    ಬಸಂತ ಪಂಚಮಿಯ ಶುಭ ಸಂದರ್ಭದಲ್ಲಿ ಶೀತಲ್ ನಾಥ್ ದೇವಾಲಯವನ್ನು ತೆರೆಯಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ದೇವಾಲಯದ ಆಡಳಿತಮಂಡಳಿ ಸದಸ್ಯರು ತಿಳಿಸಿದ್ದಾರೆ.

    ಶ್ರೀನಗರದ ಹಬ್ಬಾ ಕಡಲ್ ಪ್ರದೇಶದಲ್ಲಿ ನೆಲೆಗೊಂಡಿರುವ ಶೀತಲ್ ನಾಥ್ ದೇವಾಲಯವನ್ನು ಉಗ್ರವಾದದ ಹಿನ್ನೆಲೆಯಲ್ಲಿ ಕಳೆದ 31 ವರ್ಷಗಳಿಂದ ಮುಚ್ಚಲಾಗಿತ್ತು. ದೇವಾಲಯವನ್ನು ಮುಚ್ಚಿದ ಬಳಿಕ ಇಲ್ಲಿನ ನೆಲೆಸಿದ್ದ ಹಿಂದೂ ಸಮುದಾಯದವರು ವಲಸೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

    ದೇವಾಲಯವನ್ನು ತೆರೆಯಲು ಸ್ಥಳೀಯ ಮುಸ್ಲಿಂ ಸಮುದಾಯದವರಿಂದ ಬೆಂಬಲ ಹಾಗೂ ಅಗತ್ಯ ಸಹಕಾರ ದೊರೆತಿದೆ. ಮುಂದಿನದಿನಗಳಲ್ಲಿ ನಿತ್ಯ ಪೂಜೆ ಜರುಗಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಸದಸ್ಯರಾದ ಸಂತೋಷ್ ರಾಜಧನ್ ತಿಳಿಸಿದ್ದಾರೆ.

  • ಹೆಣ್ಣು ಮಗುವಿನ ತಂದೆಯಾದ 80ರ ಅಜ್ಜ

    ಹೆಣ್ಣು ಮಗುವಿನ ತಂದೆಯಾದ 80ರ ಅಜ್ಜ

    ಶ್ರೀನಗರ: ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯ 80ರ ಅಜ್ಜ ಹೆಣ್ಣು ಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ. ಸೋಮವಾರ ಅಜ್ಜನ 65 ವರ್ಷದ ಪತ್ನಿ ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಜೊತೆ ಹಿರಿಯ ದಂಪತಿ ಕ್ಲಿಕ್ಕಿಸಿಕೊಂಡಿರುವ ಫೋಟೋ ವೈರಲ್ ಆಗಿದೆ.

    80 ವರ್ಷದ ಹಕೀಮ್ ಧಮ್ ತಂದೆಯಾದ ಅಜ್ಜ. ಪೂಂಛ್ ಜಿಲ್ಲೆಯ ಕೆಸೈಲಾದ ಸುರನ್‍ಕೋಟ್ ನಿವಾಸಿಯಾಗಿರುವ ಹಕೀಮ್ ಸೋಮವಾರ ಪತ್ನಿಯನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

    65ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡುವ ಹಕೀಮ್ ಪತ್ನಿ ಜಮ್ಮು ಕಾಶ್ಮೀರ ಹಿರಿಯ ಅಮ್ಮ ಎನಿಸಿಕೊಂಡಿದ್ದಾರೆ. ದಂಪತಿಗೆ 10 ವರ್ಷದ ಓರ್ವ ಮಗನಿದ್ದು, ಎರಡನೇ ಬಾರಿ ಪೋಷಕರಾದ ಸಂಭ್ರಮದಲ್ಲಿದ್ದಾರೆ. ಸಾಮಾನ್ಯವಾಗಿ 47ನೇ ವಯಸ್ಸಿನವರೆಗೂ ಮಹಿಳೆಯರು ತಾಯಿ ಆಗುತ್ತಾರೆ. ಆದ್ರೆ ಇದೊಂದು ಅಪರೂಪದ ಪ್ರಕರಣ ಎಂದು ವೈದ್ಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

  • ಉಗ್ರರಿಂದ ಗ್ರೆನೇಡ್ ದಾಳಿ- ಮೂವರು ಯೋಧರು ಗಾಯ

    ಉಗ್ರರಿಂದ ಗ್ರೆನೇಡ್ ದಾಳಿ- ಮೂವರು ಯೋಧರು ಗಾಯ

    ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಸೈನಿಕರನ್ನ ಗುರಿಯಾಗಿಸಿಕೊಂಡು ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ.

    ಗಾಂದರ್ಬಲ್ ನಲ್ಲಿರುವ ಸಿಆರ್ ಪಿಎಫ್ 115ನೇ ಬಟಾಲಿಯನ್ ಗುರಿಯಾಗಿಸಿ ಆತಂಕವಾದಿಗಳು ಈ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಮೂವರು ಸೈನಿಕರಿಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ದಾಳಿ ನಡೆದ ವ್ಯಾಪ್ತಿಯಲ್ಲಿ ಸರ್ಚಿಂಗ್ ಆಪರೇಷನ್ ಆರಂಭಿಸಲಾಗಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಎಸ್‍ಎಸ್‍ಪಿ ಖಲೀಲ್ ಪೊಸ್ವಾಲ್ ಹೇಳಿದ್ದಾರೆ.

  • ಡಿಡಿಸಿ ಫಲಿತಾಂಶ – ಗುಪ್ಕಾರ್‌‌ ಕೂಟಕ್ಕೆ ಮೇಲುಗೈ, ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ

    ಡಿಡಿಸಿ ಫಲಿತಾಂಶ – ಗುಪ್ಕಾರ್‌‌ ಕೂಟಕ್ಕೆ ಮೇಲುಗೈ, ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ

    ಶ್ರೀನಗರ: ವಿಶೇಷ ಸ್ಥಾನಮಾನದ ಜೊತೆಗೆ ರಾಜ್ಯ ಸ್ಥಾನಮಾನ ರದ್ದಾದ ಬಳಿಕ ಜಮ್ಮು ಕಾಶ್ಮೀರದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿ(ಡಿಡಿಸಿ) ಚುನಾವಣೆಯಲ್ಲಿ ಫಾರೂಕ್‌ ಅಬ್ದುಲ್ಲಾ ನೇತೃತ್ವದ ಗುಪ್ಕಾರ್‌ ಮೈತ್ರಿ ಕೂಟ ಮೇಲುಗೈ ಸಾಧಿಸಿದೆ. ಆದರೆ ಇದೆ ಮೊದಲ ಬಾರಿಗೆ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

    ಒಟ್ಟು 280 ಜಿಲ್ಲಾ ಅಭಿವೃದ್ಧಿ ಮಂಡಳಿಗಳಿಗೆ ನಡೆದ ಚುನಾವಣೆಯಲ್ಲಿ ರಾತ್ರಿ 9 ಗಂಟೆಗೆ ಪ್ರಕಟವಾದ ಫಲಿತಾಂಶದ ಪ್ರಕಾರ ಗುಪ್ಕಾರ್ ಕೂಟ 114 ಸ್ಥಾನ ಗೆದ್ದಿದೆ. ಬಿಜೆಪಿ 71 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ 24 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಇತರರು 60ಕ್ಕೂ ಹೆಚ್ಚು ಸ್ಥಾನ ಪಡೆದುಕೊಂಡಿದ್ದಾರೆ. ಹೈದರಾಬಾದ್‌ ಪಾಲಿಕೆ ಚುನಾವಣೆ, ರಾಜಸ್ಥಾನ ಮತ್ತು ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಳಿಕ ಕಾಶ್ಮೀರ ಕಣಿವೆಯಲ್ಲೂ ಬಿಜೆಪಿ ಉತ್ತಮ ಸಾಧನೆ ಮಾಡಿದಂತಾಗಿದೆ.

    ಜಮ್ಮು ಭಾಗದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದರೆ ಕಾಶ್ಮೀರದಲ್ಲಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ. ಶ್ರೀನಗರ ಮತ್ತು ಬಂಡಿಪೊರಾ ಜಿಲ್ಲೆಯ ತುಲೈಲ್‌ನಲ್ಲಿ ಬಿಜೆಪಿ ಜಯಗಳಿಸಿದೆ.

    ಹಿಜ್ಬುಲ್‌ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಆರೋಪದ ಅಡಿ ಬಂಧನಕ್ಕೆ ಒಳಗಾದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಆಪ್ತ ವಹೀದ್‌ ಜಯಗಳಿಸಿದ್ದಾರೆ. ವಹೀದ್‌ಗೆ 1322 ಮತಗಳು ಬಿದ್ದರೆ ಬಿಜೆಪಿಯ ರೈನಾಗೆ 314 ಮತಗಳು ಬಿದ್ದಿದೆ.

    ನ್ಯಾಷನಲ್‌ ಕಾನ್ಫರೆನ್ಸ್‌, ಪಿಪಲ್‌ ಡೆಮಾಕ್ರಾಟೆಕ್‌ ಪಾರ್ಟಿ, ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ(ಎಂ) ಸೇರಿದಂತೆ 7 ಪಕ್ಷಗಳು ಗುಪ್ಕಾರ್‌ ಮೈತ್ರಿಕೂಟವನ್ನು ರಚಿಸಿ ಚುನಾವಣೆ ಎದುರಿಸಿತ್ತು. 280 ಸ್ಥಾನಗಳಿಗೆ ಒಟ್ಟು 2,181 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ನವೆಂಬರ್‌ 28 ರಿಂದ ಡಿಸೆಂಬರ್‌ 19ರವರೆಗೆ ಒಟ್ಟು 8 ಹಂತಗಳಲ್ಲಿ ಚುನಾವಣೆ ನಡೆದಿತ್ತು.

  • ನನ್ನ ಕಿಡ್ನಿ ಮಾರಾಟಕ್ಕಿದೆ ಎಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದ ವ್ಯಕ್ತಿ

    ನನ್ನ ಕಿಡ್ನಿ ಮಾರಾಟಕ್ಕಿದೆ ಎಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದ ವ್ಯಕ್ತಿ

    – 91 ಲಕ್ಷ ಸಾಲ ತೀರಿಸಲು ಈ ನಿರ್ಧಾರ

    ಶ್ರೀನಗರ: ತಾನು ಮಾಡಿದ 91 ಲಕ್ಷ ರೂ. ಸಾಲವನ್ನು ತೀರಿಸಲಾಗದೆ ವ್ಯಕ್ತಿ ತನ್ನ ಕಿಡ್ನಿ ಮಾರುವ ಕುರಿತು ನಿರ್ಧಾರ ಕೈಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ವ್ಯಕ್ತಿಯನ್ನು ಜಮ್ಮು ಕಾಶ್ಮೀರದ ಕುಲ್ಗಮ್ ಜಿಲ್ಲೆಯ ಖಾಜಿಗುಂಡ್‍ನ ನುಸ್ಸು ಪ್ರದೇಶದ ಸಬ್ಝರ್ ಅಹ್ಮದ್ ಖಾನ್(28) ಎಂದು ಗುರುತಿಸಲಾಗಿದೆ. ವ್ಯಕ್ತಿ ತನ್ನ ಕಿಡ್ನಿ ಮಾರುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದಾರೆ. ಖಾನ್ ಕಾರ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದು, ಬ್ಯುಸಿನೆಸ್‍ನಲ್ಲಿ ನಷ್ಟವಾಗಿದ್ದಕ್ಕೆ ಕಿಡ್ನಿ ಮಾರಲು ಮುಂದಾಗಿದ್ದಾರೆ.

    ನನ್ನ ಕಿಡ್ನಿಯನ್ನು ಮಾರಾಟ ಮಾಡಬೇಕೆಂದಿದ್ದೇನೆ. ನನಗೆ ಬ್ಯುಸಿನೆಸ್‍ನಲ್ಲಿ ಎಲ್ಲ ರೀತಿಯ ನಷ್ಟ ಉಂಟಾಗಿದ್ದು, ಇನ್ನೂ 91 ಲಕ್ಷ ರೂ. ಸಾಲ ಮರುಪಾವತಿಸಬೇಕಿದೆ. ಹೀಗಾಗಿ ಯಾರಿಗಾದರೂ ಕಿಡ್ನಿ ಅವಶ್ಯಕತೆ ಇದ್ದಲ್ಲಿ ನನ್ನನ್ನು ಸಂಪರ್ಕಿಸಿ ಎಂದು ಜಾಹೀರಾತಿನ ಮೂಲಕ ಮನವಿ ಮಾಡಿದ್ದಾರೆ.

    ಖಾನ್ ಸರ್ಕಾರದಿಂದ ಮಾನ್ಯತೆ ಪಡೆದಿರುವ ಕಾಂಟ್ರ್ಯಾಕ್ಟರ್ ಆಗಿ ಸಹ ಕೆಲಸ ಮಾಡುತ್ತಿದ್ದಾರೆ. ಕಾಶ್ಮೀರದಲ್ಲಿ ಹೇರಲಾಗಿದ್ದ ಎರಡು ಬಾರಿಯ ಲಾಕ್‍ಡೌನ್‍ನಿಂದಾಗಿ ಭಾರೀ ನಷ್ಟ ಉಂಟಾಗಿದ್ದು, ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. 370ನೇ ವಿಧಿ ರದ್ದುಪಡಿಸಿದ ವೇಳೆ ಮೊದಲ ಬಾರಿಗೆ ಲಾಕ್‍ಡೌನ್ ವಿಧಿಸಲಾಗಿತ್ತು. ಬಳಿಕ ಕೊರೊನಾ ಮಹಾಮಾರಿಯಿಂದಾಗಿ ಎರಡನೇ ಬಾರಿ ಲಾಕ್‍ಡೌನ್ ವಿಧಿಸಲಾಗಿದೆ. ಹೀಗಾಗಿ ಖಾನ್‍ಗೆ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ.

    ಎಲ್ಲವನ್ನೂ ಕಳೆದುಕೊಂಡಿದ್ದು, ಸಾಲ ತೀರಿಸಲು ಹಣವಿಲ್ಲದೆ ಕಂಗಾಲಾಗಿದ್ದಾರೆ. ಅವರ ಕುಟುಂಬಕ್ಕೆ ಇವರೇ ಆಧಾರ. ಬ್ಯಾಂಕ್‍ನಲ್ಲಿ 61 ಲಕ್ಷ ಹಾಗೂ ಸ್ನೇಹಿತರ ಬಳಿ 30 ಲಕ್ಷ ರೂ. ಸಾಲ ಮಾಡಿದ್ದಾರೆ. ತನ್ನ ಕಿಡ್ನಿ ಮಾರುವ ನಿರ್ಧಾರದ ಕುರಿತು ಖಾನ್ ತಮ್ಮ ಮನೆಯವರಿಗೂ ತಿಳಿಸಿದ್ದಾರೆ.

    ಖಾನ್ ತಮ್ಮ ಸಹ ಸಾಲ ತೀರಿಸಲು ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. ಜಾಹೀರಾತು ಪೋಸ್ಟ್ ಮಾಡಿದ ಬಳಿಕ ಕೆಲವರು ಕಿಡ್ನಿ ಕೊಳ್ಳಲು ಕರೆ ಮಾಡಿದ್ದಾರೆ. ಒಬ್ಬರು 20 ಲಕ್ಷ ರೂ., ಮತ್ತೊಬ್ಬರು 25 ಲಕ್ಷ ರೂ.ಗೆ ಕೇಳಿದ್ದಾರೆ. ಆದರೆ ನಾನು ಇದಕ್ಕೆ ಒಪ್ಪಿಲ್ಲ. ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿ ಕಾಯುತ್ತಿದ್ದೇನೆ ಎಂದು ಖಾನ್ ತಿಳಿಸಿದ್ದಾರೆ.