Tag: Jakarta

  • 8 ಅಡಿಯ ಗೋಡೆ ಹಾರಿ ವಿಜ್ಞಾನಿಯನ್ನು ಎಳೆದು ತಿಂದ ಮೊಸಳೆ!

    8 ಅಡಿಯ ಗೋಡೆ ಹಾರಿ ವಿಜ್ಞಾನಿಯನ್ನು ಎಳೆದು ತಿಂದ ಮೊಸಳೆ!

    ಜಕಾರ್ತಾ: ಆಹಾರ ನೀಡುತ್ತಿದ್ದ ಮಹಿಳಾ ವಿಜ್ಞಾನಿಯನ್ನು ಮೊಸಳೆ ಜೀವಂತವಾಗಿ ತಿಂದಿರುವ ಘಟನೆ ಇಂಡೋನೇಷ್ಯಾದ ನಾರ್ಥ್ ಸುಲಾವೆಸಿಯಲ್ಲಿ ನಡೆದಿದೆ.

    44 ವರ್ಷದ ಡೀಸಿ ಟುವೋ ಮೃತಪಟ್ಟ ವಿಜ್ಞಾನಿ. ಟುವೋ ಎಂದಿನಂತೆ ತಾನು ಕೆಲಸ ಮಾಡುತ್ತಿದ್ದ ಲ್ಯಾಬೋರೆಟರಿಯಲ್ಲಿ ಮೊಸಳೆಗೆ ಆಹಾರ ನೀಡುವ ವೇಳೆ ಬಲಿಯಾಗಿದ್ದಾರೆ.

    ಮೊಸಳೆಯನ್ನು 8 ಅಡಿ ಎತ್ತರದ ಟ್ಯಾಂಕ್‍ವೊಂದರಲ್ಲಿ ಇರಿಸಿ ಪೋಷಣೆ ಮಾಡಲಾಗುತ್ತಿದ್ದು, ಆದರೆ ಶುಕ್ರವಾರ ಬೆಳಗ್ಗೆ ಆಹಾರ ನೀಡುವ ವೇಳೆ ಗೋಡೆಯ ಎತ್ತರಕ್ಕೆ ಹಾರಿದ ಮೊಸಳೆ ಟುವೋರನ್ನ ಒಳಗೆ ಎಳೆದುಕೊಂಡು ಜೀವಂತವಾಗಿ ತಿಂದು ಹಾಕಿದೆ. ಲ್ಯಾಬ್ ಸಿಬ್ಬಂದಿ ನೀರಿನಲ್ಲಿ ದೇಹದ ತುಂಡು ಹಾಗೂ ಮೊಸಳೆ ಬಾಯಿಯಲ್ಲಿ ಇತರೇ ಅಂಗಾಂಗಳು ಕಂಡಾಗ ಘಟನೆ ಬೆಳಕಿಗೆ ಬಂದಿದೆ.

    ಪ್ರತಿದಿನ ಮೊಸಳೆಗೆ ಚಿಕನ್, ಮಟನ್ ಆಹಾರವನ್ನು ನೀಡಲಾಗುತ್ತಿತ್ತು. ಅಲ್ಲದೇ ಎಲ್ಲವೂ ಫ್ರೆಶ್ ಇರುವಂತೆ ನೋಡಿಕೊಳ್ಳಲಾಗುತ್ತಿತ್ತು. ಏಕೆಂದರೆ ಮೊಸಳೆ ಫ್ರೀಜ್ ಮಾಡಿದ ಅಥವಾ 2 ಮೂರು ದಿನಗಳ ಹಿಂದೆ ಸತ್ತ ಪ್ರಾಣಿಗಳನ್ನು ಸೇವಿಸುತ್ತಿರಲಿಲ್ಲ. ಪರಿಣಾಮ ಮೊಸಳೆಯ ಪುಲ್ ಅನ್ನು ಸ್ವಚ್ಛವಾಗಿ ನೋಡಿಕೊಳ್ಳಲಾಗುತ್ತಿತ್ತು. ಆದರೆ ದುರ್ಘಟನೆ ಹೇಗೆ ನಡೆದಿದೆ ಎಂದು ತಿಳಿದು ಬಂದಿಲ್ಲ ಎಂದು ಲ್ಯಾಬ್ ಸಿಬ್ಬಂದಿ ತಿಳಿಸಿದ್ದಾರೆ.

    ಮೃತ ಟುವೋ ಪ್ರಾಣಿಗಳನ್ನು ಹೆಚ್ಚು ಪ್ರೀತಿಸುತ್ತಿದ್ದರು. ಅಲ್ಲದೇ ಲ್ಯಾಬ್ ಮುಖ್ಯಸ್ಥರು ಕೂಡ ಅವರೇ ಆಗಿದ್ದು, ಘಟನೆ ಹೇಗೆ ನಡೆದಿದೆ ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಟುವೋ ಜೊತೆ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಡೋನೇಷ್ಯಾ ವಿಮಾನ ದುರಂತ: ಒಟ್ಟು 190 ಪ್ರಯಾಣಿಕರಲ್ಲಿ ಒಬ್ಬ ಬದುಕುಳಿದ!

    ಇಂಡೋನೇಷ್ಯಾ ವಿಮಾನ ದುರಂತ: ಒಟ್ಟು 190 ಪ್ರಯಾಣಿಕರಲ್ಲಿ ಒಬ್ಬ ಬದುಕುಳಿದ!

    ಸಾಂದರ್ಭಿಕ ಚಿತ್ರ

    ಜಕಾರ್ತ: ಇಂಡೋನೇಷ್ಯಾದ ಲಯನ್ ಏರ್‌‌ಲೈನ್ಸ್‌ ಸಂಸ್ಥೆಗೆ ಸೇರಿದ್ದ ವಿಮಾನ ಪತನವಾಗಿ 189 ಮಂದಿ ಜಲಸಮಾಧಿಯಾಗಿದ್ದರೂ, ಓರ್ವ ಪ್ರಯಾಣಿಕ ಮಾತ್ರ ಅದೃಷ್ಟವಶಾತ್ ಬದುಕುಳಿದಿದ್ದಾರೆ.

    ಹೌದು, ಸೋಮವಾರ ಬೆಳಗ್ಗೆ ಸಂಭವಿಸಿದ ದುರಂತದಲ್ಲಿ ಲಯನ್ ಏರ್‌‌ಲೈನ್ಸ್‌ನ ಜಿಟಿ 610 ವಿಮಾನದಲ್ಲಿದ್ದ 189 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರೂ, ಓರ್ವ ಪ್ರಯಾಣಿಕ ಟ್ರಾಫಿಕ್ ಜಾಮ್‍ನಿಂದಾಗಿ ಬದುಕಿದ್ದಾರೆ.

    ಇಂಡೋನೇಷ್ಯಾದ ಹಣಕಾಸು ಸಚಿವಾಲಯದ ಅಧಿಕಾರಿ ಸೋನಿ ಸೆಟ್ಯಾವಾನ್ ಪತನಗೊಂಡ ವಿಮಾನದಲ್ಲಿ ಪಂಗ್‍ಕಲ್ ಪಿನಾಂಗ್ ದ್ವೀಪಕ್ಕೆ ತೆರಳಬೇಕಿತ್ತು. ಆದರೆ ಟ್ರಾಫಿಕ್ ಜಾಮ್ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದೆ. ಇದನ್ನೂ ಓದಿ: ಇಂಡೋನೇಷ್ಯಾ ವಿಮಾನ ದುರಂತ: ಭಾರತೀಯ ಕ್ಯಾಪ್ಟನ್ ಪೈಲಟ್ ಸಾವು

    ಈ ಕುರಿತು ಪ್ರತಿಕ್ರಿಯಿಸಿರುವ ಸೆಟ್ಯಾವಾನ್, ನಾನು ವಾರಕ್ಕೊಮ್ಮೆ ನನ್ನ ಸಹೋದ್ಯೋಗಿಗಳೊಂದಿಗೆ ಪಂಗ್‍ಕಲ್ ಪಿನಾಂಗ್ ದ್ವೀಪಕ್ಕೆ ಹೋಗುತ್ತಲೇ ಇದ್ದೆ. ಎಂದಿನಿಂತೆ ಸೋಮವಾರ ಪ್ರಯಾಣಕ್ಕಾಗಿ ಲಯನ್ ಏರ್‌‌ಲೈನ್ಸ್‌ನ ವಿಮಾನವನ್ನು ಬುಕ್ ಮಾಡಿದ್ದೆ. ಇದಕ್ಕಾಗಿ ಸೋಮವಾರ ಬೆಳಗಿನ ಜಾವ 3ರ ಸುಮಾರಿಗೆ ಜಕಾರ್ತ ವಿಮಾನ ನಿಲ್ದಾಣಕ್ಕೆ ಹೊರಟಿದ್ದೆ. ಆದರೆ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾದ ಕಾರಣ ನಾನು ಬೆಳಗ್ಗೆ 6.20ರ ಸುಮಾರಿಗೆ ಏರ್‌ಪೋರ್ಟ್‌ ತಲುಪಿದೆ.

    ವಿಮಾನ ನಿಲ್ದಾಣದಲ್ಲಿ ನನ್ನ ತಪಾಸಣೆ ಮುಗಿಸುವಷ್ಟರಲ್ಲಿ, ವಿಮಾನ ಟೇಕ್ ಆಫ್ ಆಗಿತ್ತು. ಅದಾದ ನಂತರ ನಾನು ಮತ್ತೊಂದು ವಿಮಾನ ಬಳಸಿ ಪಿನಾಂಗ್ ದ್ವೀಪ ತಲುಪಿದೆ. ನಾನು ಲ್ಯಾಂಡ್ ಆಗುತ್ತಲೇ ಲಯನ್ ವಿಮಾನ ಸಮುದ್ರದಲ್ಲಿ ಪತನವಾಗಿ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವಿಗೀಡಾದ ಶಾಕಿಂಗ್ ಮಾಹಿತಿ ಸಿಕ್ಕಿತ್ತು. ವಿಮಾನದ ಪತನದ ಸುದ್ದಿ ಕೇಳಿ ನನಗೆ ತುಂಬಾ ಆಘಾತವಾಗಿದೆ. ಅಲ್ಲದೇ ಪತನಗೊಂಡ ವಿಮಾನದಲ್ಲಿ ನನ್ನ ಸ್ನೇಹಿತರೂ ಸಹ ಪ್ರಯಾಣಿಸುತ್ತಿದ್ದರು ಎಂದು ನೆನೆದು ಕಣ್ಣೀರು ಹಾಕಿದ್ದಾರೆ.

    ಏನಿದು ವಿಮಾನ ದುರಂತ?
    ಸೋಮವಾರ ಬೆಳಗ್ಗೆ ರಾಜಧಾನಿ ಜಕಾರ್ತದಿಂದ ಪಾಂಗ್‍ಕಲ್ ಪಿನಾಗ್ ದ್ವೀಪಕ್ಕೆ ಲಯನ್ಸ್ ಏರ್‌‌ಲೈನ್ಸ್‌ ಸಂಸ್ಥೆಗೆ ಸೇರಿದ್ದ ಜಿಟಿ 610 ವಿಮಾನ ಎಂದಿನಂತೆ 6.20ರ ಸುಮಾರಿಗೆ ಟೇಕ್ ಆಫ್ ಆಗಿ ಹೊರಟಿತ್ತು. ಸುಮಾರು 7.30ರ ಹೊತ್ತಿಗೆ ಪಾಂಗ್‍ಕಲ್ ಪಿನಾಂಗ್ ತಲುಪಬೇಕಿದ್ದ ವಿಮಾನ, ಟೇಕಾಫ್ ಆದ 13 ನಿಮಿಷಗಳ ಬಳಿಕ ಏಕಾಏಕಿ ರೇಡಾರ್ ಸಂಪರ್ಕದಿಂದ ನಾಪತ್ತೆಯಾಗಿತ್ತು. ಅಲ್ಲದೇ ಕೊನೆಯ ಬಾರಿಗೆ ವಿಮಾನವು ಬೋಯಿಂಗ್ 737 ಮ್ಯಾಕ್ಸ್ 8 ಲಯನ್ ವಿಮಾನದ ಸಂಪರ್ಕಕ್ಕೆ 6.33ರಲ್ಲಿ ಯತ್ನಿಸಿತ್ತು. ಇದಾದ ಬಳಿಕ ಪಾಂಗ್‍ಕಲ್ ದ್ವೀಪದ ಬಳಿ ಸಮುದ್ರದಲ್ಲಿ ವಿಮಾನ ಪತನಗೊಂಡು, ವಿಮಾನದಲ್ಲಿದ್ದ ಎಲ್ಲಾ 188 ಪ್ರಯಾಣಿಕರು ಮೃತಪಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂಡೋನೇಷ್ಯಾ ವಿಮಾನ ದುರಂತ: ಭಾರತೀಯ ಕ್ಯಾಪ್ಟನ್ ಪೈಲಟ್ ಸಾವು

    ಇಂಡೋನೇಷ್ಯಾ ವಿಮಾನ ದುರಂತ: ಭಾರತೀಯ ಕ್ಯಾಪ್ಟನ್ ಪೈಲಟ್ ಸಾವು

    ಜಕಾರ್ತ: ಇಂಡೋನೇಷ್ಯಾದ ಲಯನ್ಸ್ ಏರ್‌‌ಲೈನ್ಸ್‌ ದುರಂತದಲ್ಲಿ ವಿಮಾನದ ಮುಖ್ಯ ಕ್ಯಾಪ್ಟನ್ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾರತದ ಭಾವ್ಯೆ ಸುನೆಜಾ ಮೃತಪಟ್ಟಿದ್ದಾರೆ.

    ದುರಂತ ಸಂಭವಿಸಿದ ಲಯನ್ ಏರ್‌‌ಲೈನ್ಸ್‌ ಸಂಸ್ಥೆಯ ಜಿಟಿ610 ವಿಮಾನದ ಮುಖ್ಯ ಕ್ಯಾಪ್ಟನ್ ಪೈಲಟ್ ಆಗಿದ್ದ ಭಾರತದ ಭಾವ್ಯೆ ಸುನೆಜಾ ಅವರು ಮೃತಪಟ್ಟಿರುವುದಾಗಿ ಜಕಾರ್ತದ ಭಾರತೀಯ ರಾಯಭಾರಿ ಕಚೇರಿ ಅಧಿಕೃತವಾಗಿ ತಿಳಿಸಿದೆ.

    ಮಾಹಿತಿಗಳ ಪ್ರಕಾರ ಸುನೆಜಾ 2011 ರಿಂದ ಲಯನ್ ಏರ್‌‌ಲೈನ್ಸ್‌ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದಕ್ಕೂ ಮುಂಚೆ ಅವರು ಎಮಿರೇಟ್ಸ್ ವಿಮಾನ ಸಂಸ್ಥೆಯಲ್ಲಿ ತರಬೇತಿ ಪೈಲೆಟ್ ಆಗಿಯೂ ಸೇವೆ ಸಲ್ಲಿಸಿದ್ದರು. ಸುನೆಜಾರವರು ದೆಹಲಿ ಮೂಲದವರಾಗಿದ್ದು, ಪೂರ್ವ ದೆಹಲಿಯ ಮಯೂರ್ ವಿಹಾರ್ ದಲ್ಲಿನ ಅಹಲ್ಕಾನ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಣ ಮುಗಿಸಿದ್ದರು.

    ಮುಖ್ಯ ಪೈಲಟ್ ಆಗಿದ್ದ ಸುನೆಜಾ ಅವರಿಗೆ 6 ಸಾವಿರ ಗಂಟೆಯ ವಿಮಾನ ಹಾರಾಟ ನಡೆಸಿದ ಅನುಭವವಿತ್ತು. ಇದಲ್ಲದೇ ಇಂಡೋನೇಷ್ಯಾದ ಹಾರ್ವಿನೋದಲ್ಲಿ ಸಹ ಪೈಲಟರ್ ಆಗಿ 5,000 ಕ್ಕೂ ಅಧಿಕ ಗಂಟೆಯ ಅನುಭವವನ್ನು ಸಹ ಹೊಂದಿದ್ದರು ಎನ್ನುವ ಮಾಹಿತಿಯನ್ನು ಲಯನ್ ಏರ್‌‌ಲೈನ್ಸ್‌ ಸಂಸ್ಥೆ ತಿಳಿಸಿದೆ.

    ಸುನೆಜಾ ಸಾವಿನ ಕುರಿತು ಜಕಾರ್ತ ಭಾರತೀಯ ರಾಯಭಾರಿ ಕಚೇರಿಯು ತನ್ನ ಟ್ವಿಟ್ಟರಿನಲ್ಲಿ, ಜಕಾರ್ತ ಬಳಿ ಲಯನ್ ಏರ್‌‌ಲೈನ್ಸ್‌ ವಿಮಾನ ದುರಂತದಲ್ಲಿ ಮೃತಪಟ್ಟವರ ಬಗ್ಗೆ ತೀವ್ರ ಸಂತಾಪವಿದೆ. ಆದರೆ ಘಟನೆಯಲ್ಲಿ ದುರದಷ್ಟಕರ ವಿಚಾರವೆಂದರೆ, ವಿಮಾನ ಚಲಾಯಿಸುತ್ತಿದ್ದ ಭಾರತೀಯ ಪೈಲಟ್ ಭವ್ಯೆ ಸುನೆಜಾ ಸಹ ದುರಂತದಲ್ಲಿ ಮೃತಪಟ್ಟಿದ್ದಾರೆ. ರಾಯಭಾರ ಕಚೇರಿಯು ರಕ್ಷಣಾ ಕೇಂದ್ರದ ಜೊತೆ ಸಂಪರ್ಕದಲ್ಲಿದ್ದು, ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದೆ ಎಂದು ಬರೆದುಕೊಂಡಿದೆ.

    ಏನಿದು ವಿಮಾನ ದುರಂತ?
    ಇಂದು ಬೆಳಗ್ಗೆ ರಾಜಧಾನಿ ಜಕಾರ್ತದಿಂದ ಪಾಂಗ್‍ಕಲ್ ಪಿನಾಗ್ ದ್ವೀಪಕ್ಕೆ ಲಯನ್ಸ್ ಏರ್‌‌ಲೈನ್ಸ್‌ ಸಂಸ್ಥೆಗೆ ಸೇರಿದ್ದ ಜಿಟಿ 610 ವಿಮಾನ ಎಂದಿನಂತೆ 6.20ರ ಸುಮಾರಿಗೆ ಟೇಕ್ ಆಫ್ ಆಗಿ ಹೊರಟಿತ್ತು. ಸುಮಾರು 7.30ರ ಹೊತ್ತಿಗೆ ಪಾಂಗ್‍ಕಲ್ ಪಿನಾಂಗ್ ತಲುಪಬೇಕಿತ್ತು. ಆದರೆ ಟೇಕಾಫ್ ಆದ 13 ನಿಮಿಷಗಳ ಬಳಿಕ ಏಕಾಏಕಿ ರೇಡಾರ್ ಸಂಪರ್ಕದಿಂದ ವಿಮಾನ ನಾಪತ್ತೆಯಾಗಿತ್ತು. ಅಲ್ಲದೇ ಕೊನೆಯ ಬಾರಿಗೆ ಜಿಟಿ610 ವಿಮಾನವು ಬೋಯಿಂಗ್ 737 ಮ್ಯಾಕ್ಸ್ 8 ಲಯನ್ ವಿಮಾನದ ಸಂಪರ್ಕಕ್ಕೆ 6.33ರಲ್ಲಿ ಯತ್ನಿಸಿತ್ತು. ಇದಾದ ಬಳಿಕ ಪಾಂಗ್‍ಕಲ್ ದ್ವೀಪದ ಬಳಿ ಸಮುದ್ರದಲ್ಲಿ ವಿಮಾನ ಪತನಗೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂಡೋನೇಷ್ಯಾ ವಿಮಾನ ಪತನ: 189 ಮಂದಿ ದಾರುಣ ಸಾವು- ವಿಡಿಯೋ ನೋಡಿ

    ಇಂಡೋನೇಷ್ಯಾ ವಿಮಾನ ಪತನ: 189 ಮಂದಿ ದಾರುಣ ಸಾವು- ವಿಡಿಯೋ ನೋಡಿ

    ಸಾಂದರ್ಭಿಕ ಚಿತ್ರ

    ಜಕಾರ್ತ: ಇಂಡೋನೇಷ್ಯಾದ ಲಯನ್ ಏರ್‌‌ಲೈನ್ಸ್‌ ಸಂಸ್ಥೆಗೆ ಸೇರಿದ್ದ ವಿಮಾನವೊಂದು ಸಮುದ್ರದಲ್ಲಿ ಪತನಗೊಂಡ ಪರಿಣಾಮ 189 ಮಂದಿ ಪ್ರಯಾಣಿಕರು ದಾರುಣವಾಗಿ ಮೃತಪಟ್ಟ ಘಟನೆ ಪಾಂಗ್‍ಕಲ್ ದ್ವೀಪದ ಬಳಿ ಸಂಭವಿಸಿದೆ.

    ಇಂದು ಬೆಳಗ್ಗೆ ರಾಜಧಾನಿ ಜಕಾರ್ತದಿಂದ ಪಾಂಗ್‍ಕಲ್ ಪಿನಾಗ್ ದ್ವೀಪಕ್ಕೆ ಲಯನ್ಸ್ ಏರ್‌‌ಲೈನ್ಸ್‌ ಸಂಸ್ಥೆಗೆ ಸೇರಿದ್ದ ಜಿಟಿ610 ವಿಮಾನ ಎಂದಿನಂತೆ 6.20ರ ಸುಮಾರಿಗೆ ಟೇಕ್ ಆಫ್ ಆಗಿ ಹೊರಟಿತ್ತು. ಸುಮಾರು 7.30ರ ಹೊತ್ತಿಗೆ ಪಾಂಗ್‍ಕಲ್ ಪಿನಾಂಗ್ ತಲುಪಬೇಕಿತ್ತು. ಆದರೆ ಟೇಕಾಫ್ ಆದ 13 ನಿಮಿಷಗಳ ಬಳಿಕ ಏಕಾಏಕಿ ರೇಡಾರ್ ಸಂಪರ್ಕದಿಂದ ವಿಮಾನ ನಾಪತ್ತೆಯಾಗಿತ್ತು. ಅಲ್ಲದೇ ಕೊನೆಯ ಬಾರಿಗೆ ಜಿಟಿ610 ವಿಮಾನವು ಬೋಯಿಂಗ್ 737 ಮ್ಯಾಕ್ಸ್ 8 ಲಯನ್ ವಿಮಾನದ ಸಂಪರ್ಕಕ್ಕೆ 6.33ರಲ್ಲಿ ಯತ್ನಿಸಿತ್ತು. ಇದಾದ ಬಳಿಕ ಪಾಂಗ್‍ಕಲ್ ದ್ವೀಪದ ಬಳಿ ಸಮುದ್ರದಲ್ಲಿ ವಿಮಾನ ಪತನಗೊಂಡಿದೆ.

    ವಿಮಾನ ಬೀಳುತ್ತಿರುವ ದೃಶ್ಯವನ್ನು ಜಕಾರ್ತ ಬಂದರಿನಿಂದ ಹೊರಟಿದ್ದ ಬೋಟ್ ಸಿಬ್ಬಂದಿ ನೋಡಿದ್ದು, ಕೂಡಲೇ ರಕ್ಷಣಾ ತಂಡಗಳಿಗೆ ವಿಷಯವನ್ನು ಮುಟ್ಟಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ರಕ್ಷಣಾ ತಂಡಗಳು ಪ್ರಯಾಣಿಕರಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿವೆ. ಅಲ್ಲದೇ ವಿಮಾನ ಪತನವಾದ ಸ್ಥಳದಲ್ಲಿ ವಿಮಾನದ ಅವಶೇಷಗಳು ಸಹ ಪತ್ತೆಯಾಗಿವೆ.

    ಸಮುದ್ರದಲ್ಲಿ ಪತನವಾದ ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ ಒಟ್ಟು 189 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ವಿಮಾನವು 210 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದ್ದು, ಕೆಲವರು ಬದುಕುಳಿದರಬಹುದೆಂಬ ಶಂಕೆಯನ್ನು ರಕ್ಷಣಾ ಪಡೆಗಳು ವ್ಯಕ್ತಪಡಿಸಿವೆ.

    ಈ ಕುರಿತು ಪ್ರತಿಕ್ರಿಯಿಸಿರುವ ಲಯನ್ ಏರ್‌‌ಲೈನ್ಸ್‌ ನಿರ್ವಾಹಕ ಎಡ್ವರ್ಡ್ ಸಿರೈಟ್, ಸದ್ಯ ನಾವು ಮಾಹಿತಿಯನ್ನು ಕಲೆಹಾಕುತ್ತೀದ್ದೇವೆ. ಈ ಕ್ಷಣದಲ್ಲಿ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ. ಇಂದು ಸಂಜೆ ಪತ್ರಿಕಾಗೋಷ್ಠಿ ನಡೆಸಿ ಘಟನೆ ಸಂಪೂರ್ಣ ವರದಿ ನೀಡುತ್ತೇವೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಬ್ಬಾವಿನ ಜೊತೆ ಪುಟ್ಟ ಬಾಲಕನ ತುಂಟಾಟ- ವಿಡಿಯೋ ವೈರಲ್

    ಹೆಬ್ಬಾವಿನ ಜೊತೆ ಪುಟ್ಟ ಬಾಲಕನ ತುಂಟಾಟ- ವಿಡಿಯೋ ವೈರಲ್

    ಜಕಾರ್ತ: ಪುಟ್ಟ ಬಾಲಕನೊಬ್ಬ ಹೆಬ್ಬಾವಿನ ಜೊತೆ ಆಟವಾಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಸುಮಾರು 10 ಪಟ್ಟು ದೊಡ್ಡದಾಗಿರುವ ಹೆಬ್ಬಾವಿನ ಜೊತೆ ಆಟವಾಡುತ್ತಿದ್ದಾಗ ಅವರ ಪೋಷಕರೇ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಇದೀಗ ಅದು ಸಖತ್ ವೈರಲ್ ಆಗುತ್ತಿದೆ. ಈ ರೋಮಾಂಚನವಾದ ದೃಶ್ಯ ಇಂಡೊನೆಷಿಯಾದ ಇಸ್ಟ್ ಜಾವದಲ್ಲಿ ನಡೆಯಿತು.

    ವಿಡಿಯೋದಲ್ಲಿ ಪುಟ್ಟ ಬಾಲಕನಿಗಿಂತ ಹತ್ತುಪಟ್ಟು ಗಾತ್ರದಲ್ಲಿರುವ ಹೆಬ್ಬಾವಿನ ಜೊತೆ ಬಾಲಕ ತುಂಟಾಟವನ್ನು ಆಡುತ್ತಾನೆ. ಅಷ್ಟೇ ಅಲ್ಲದೇ ಹಾವು ಕೂಡ ಅವನೊಂದಿಗೆ ಆಟವಾಡುತ್ತದೆ. ಹೆಬ್ಬಾವು ಪುಟ್ಟ ಬಾಲಕನಿಂದ ತಪ್ಪಿಸಿಕೊಂಡು ದೂರ ಹೋಗುತ್ತಿದ್ದರೆ, ಬಾಲಕ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಮತ್ತೆ ಹಾವಿನೆಡೆಗೆ ಹೋಗುತ್ತಾನೆ. ಬಳಿಕ ಹೆಬ್ಬಾವಿನ ತಲೆ ಹಿಡಿದು ಎಳೆದು ತರುತ್ತಾನೆ.

    ಇದೇ ಮೊದಲು ಅಲ್ಲ ಈ ಹಿಂದೆಯೂ ಮೇ ತಿಂಗಳಲ್ಲಿ ಇಬ್ಬರು ಬಾಲಕಿಯರು ಹಾವಿನೊಂದಿಗೆ ಆಟವಾಡುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹರಿದಾಡುತ್ತಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=CpIZh4NOuZY

  • ಏಷ್ಯನ್ ಗೇಮ್ಸ್ 2018: ಭಾರತದ 14 ವರ್ಷಗಳ ದಾಖಲೆ ಮುರಿದ ಹಿಮಾ ದಾಸ್!

    ಏಷ್ಯನ್ ಗೇಮ್ಸ್ 2018: ಭಾರತದ 14 ವರ್ಷಗಳ ದಾಖಲೆ ಮುರಿದ ಹಿಮಾ ದಾಸ್!

    ಜಕಾರ್ತ: ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪರ ಮೊದಲ ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದ್ದ ಹಿಮಾ ದಾಸ್ ಏಷ್ಯನ್ ಗೇಮ್ಸ್ ಸ್ಪರ್ಧೆಯಲ್ಲಿ ಭಾರತದ 14 ವರ್ಷಗಳ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

    ಶನಿವಾರ ನಡೆದ ಅರ್ಹತಾ ಸುತ್ತಿನ 400 ಮೀ ಓಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹಿಮಾ ದಾಸ್ ರವರು 51.00 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಈ ಸಾಧನೆಮಾಡಿದ್ದಾರೆ. ಈ ಮೂಲಕ ಭಾರತದ 14 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿ, ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಪದಕ ತಂದುಕೊಟ್ಟ ಹಿಮಾ ದಾಸ್ ಚಿರತೆಯ ಓಟದ ವಿಡಿಯೋ ನೋಡಿ

    ಈ ಮೊದಲು 2004 ರ ಚೆನ್ನೈನಲ್ಲಿ ನಡೆದಿದ್ದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಮಂಜಿತ್ ಕೌರ್ ಈ ದಾಖಲೆಯನ್ನು ಮಾಡಿದ್ದರು. ಅರ್ಹತಾ ಸುತ್ತಿನ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಹಿಮಾ ದಾಸ್ ರವರು ಅಂತಿಮ ಪಂದ್ಯಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ.

    ಅರ್ಹತಾ ಸುತ್ತಿನ ಓಟದಲ್ಲಿ ಬಹರೇನ್‍ನ ಸಲ್ವಾ ನಸರ್ ಜೊತೆ ಹಿಮಾ ದಾಸ್ ಓಡಿದ್ದು, ಸಲ್ವಾ ನಸರ್ ಸಹ ಸ್ಪರ್ಧೆ ಗೆಲ್ಲುವ ಪ್ರಮುಖ ಆಟಗಾರ್ತಿಯಾಗಿದ್ದಾರೆ. ಇದನ್ನೂ ಓದಿ: ಹಿಮಾ ದಾಸ್ ಸಾಧನೆಗಿಂತ, ಜಾತಿಯನ್ನೇ ಹೆಚ್ಚಾಗಿ ಹುಡುಕಿದ ಜಾಲತಾಣಿಗರು!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಮತ್ತೊಂದು ಚಿನ್ನದ ಪದಕ

    ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಮತ್ತೊಂದು ಚಿನ್ನದ ಪದಕ

    ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾ ಕೂಟದಲ್ಲಿ ಭಾರತ ಮತ್ತೊಂದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದು, ಮಹಿಳೆಯರ ಕುಸ್ತಿ ವಿಭಾಗದಲ್ಲಿ ವಿನಿಶ್ ಪೋಗಟ್‍ರವರು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

    ಏಷ್ಯನ್ ಗೇಮ್ಸ್ 2018ರ ಎರಡನೇ ದಿನವಾದ ಇಂದು ಸಹ ಭಾರತೀಯ ಸ್ಪರ್ಧಿಗಳು ಚಿನ್ನದ ಬೇಟೆ ಮುಂದುವರಿಸಿದ್ದು, 50 ಕೆಜಿ ಮಹಿಳೆಯರ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ವಿನೀಶ್ ಪೋಗಟ್‍ರವರು ಚಿನ್ನ ಗೆದ್ದಿದ್ದಾರೆ.

    ಮಂಗಳವಾರ ನಡೆದ 50 ಕೆಜಿ ಮಹಿಳೆಯರ ಫ್ರೀಸ್ಟೈಲ್ ಕುಸ್ತಿಯ ಅಂತಿಮ ಪಂದ್ಯದಲ್ಲಿ ವಿನೀಶ್ ಪೋಗಟ್‍ರವರು ಜಪಾನಿನ ಯೂಕಿ ಇರ್ಕಿ ಅವರನ್ನು 6-2 ಅಂತರಗಳಿಂದ ಸೋಲಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ದೇಶಕ್ಕೆ ಎರಡನೇ ಚಿನ್ನ ತಂದು ಕೊಟ್ಟ ಹಾಗೂ ಏಷ್ಯನ್ ಗೇಮ್ಸ್ ನ ಕುಸ್ತಿ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಪಾತ್ರಕ್ಕೆ ವಿನೀಶ್ ಪೋಗಟ್ ಪಾತ್ರರಾಗಿದ್ದಾರೆ. ಇದರೊಂದಿಗೆ ಭಾರತ ಕುಸ್ತಿ ವಿಭಾಗದಿಂದ 2 ಚಿನ್ನ, ಶೂಟಿಂಗ್ ವಿಭಾಗದಿಂದ 2 ಬೆಳ್ಳಿ ಹಾಗೂ 1 ಕಂಚಿನ ಪದಕದೊಂದಿಗೆ ಒಟ್ಟು 5 ಪದಕಗಳನ್ನು ಪಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏಷ್ಯನ್ ಗೇಮ್ಸ್ 2018: ಏರ್ ರೈಫಲ್ ಶೂಟಿಂಗ್ ನಲ್ಲಿ ಭಾರತಕ್ಕೆ ಬೆಳ್ಳಿ

    ಏಷ್ಯನ್ ಗೇಮ್ಸ್ 2018: ಏರ್ ರೈಫಲ್ ಶೂಟಿಂಗ್ ನಲ್ಲಿ ಭಾರತಕ್ಕೆ ಬೆಳ್ಳಿ

    ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾ ಕೂಟದಲ್ಲಿ ಭಾರತಕ್ಕೆ ಪ್ರಥಮ ಬೆಳ್ಳಿ ಪದಕ ಲಭಿಸಿದ್ದು, 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಸಾಧನೆ ಮಾಡುವ ಮೂಲಕ ದೀಪಕ್ ಕುಮಾರ್ ಬೆಳ್ಳಿಯ ಪದಕಕ್ಕೆ ಕೊರಳ್ಳೊಡಿದ್ದಾರೆ.

    ಇಂದು ನಡೆದ ಪುರುಷರ 10 ಮೀ ಏರ್ ರೈಫಲ್ ವಿಭಾಗದ ಅಂತಿಮ ಹಂತದ ಪಂದ್ಯಾವಳಿಯಲ್ಲಿ ಭಾರತದ ದೀಪಕ್ ಕುಮಾರ್ ರವರು 247.7 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆಯುವಲ್ಲಿ ಸಫಲರಾದರು.

    ಚೀನಾದ ಯಾಂಗ್ ಹಾರಾನ್ 249.1 ಅಂಕಗಳಿಸಿ ಚಿನ್ನದ ಪದಕಗಳಿಸಿದರೆ, ಚೀನಾ ತೈಪಿಯ ಶಾವೊಕುವಾನ್ 226.8 ಅಂಕಗಳಿಸಿ ಕಂಚಿನ ಪದಕಕ್ಕೆ ಭಾಜನರಾದರು. ಅಲ್ಲದೇ ಭಾರತದ ಮತ್ತೊಬ್ಬ ಆಟಗಾರರಾದ ರವಿಕುಮಾರ್ ರವರು 205.2 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

    ಭಾನುವಾರ ಪುರುಷರ ಫ್ರೀ ಸ್ಟೈಲ್ ಕುಸ್ತಿಯ 65 ಕೆಜಿ ವಿಭಾಗದಲ್ಲಿ ಬಜರಂಗ ಪೂನಿಯಾ ಸ್ವರ್ಣದ ಪದಕಕ್ಕೆ ಮುತ್ತಿಟ್ಟಿದ್ದರು. ಜಪಾನ್ ದೇಶದ ಟಕಟಾನಿ ಡೈಚಿ ವಿರುದ್ಧ ನಡೆದ ಅಂತಿಮ ಸುತ್ತಿನಲ್ಲಿ 11-8 ಅಂಕಗಳ ಅಂತರದಿಂದ ಗೆಲ್ಲುವ ಮೂಲಕ ಪೂನಿಯಾ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಮಿಶ್ರ ಶೂಟಿಂಗ್ ವಿಭಾಗದ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾಗವಹಿಸಿದ್ದ ಅಪೂರ್ವಿ ಚಾಂಡೇಲಾ, ರವಿ ಕುಮಾರ್ ಜೋಡಿ ಕಂಚಿನ ಪದಕ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವ್ಯಕ್ತಿಯನ್ನು ತಿಂದಿದ್ದಕ್ಕೆ ಸ್ಥಳೀಯರಿಂದ 292 ಮೊಸಳೆಗಳ ಮಾರಣಹೋಮ!

    ವ್ಯಕ್ತಿಯನ್ನು ತಿಂದಿದ್ದಕ್ಕೆ ಸ್ಥಳೀಯರಿಂದ 292 ಮೊಸಳೆಗಳ ಮಾರಣಹೋಮ!

    ಜಕಾರ್ತ: ವ್ಯಕ್ತಿಯೊಬ್ಬನನ್ನು ದಾರುಣವಾಗಿ ತಿಂದು ಹಾಕಿದ್ದ ಮೊಸಳೆಗಳ ವಿರುದ್ಧ ತಿರುಗಿಬಿದ್ದ ಸ್ಥಳೀಯರು ಸುಮಾರು 292 ಮೊಸಳೆಗಳನ್ನು ಹತ್ಯೆ ಮಾಡಿರುವ ಘಟನೆ ಇಂಡೋನೇಷ್ಯಾದ ಪಶ್ಚಿಮ ಪೌವಾ ಪ್ರಾಂತ್ಯದ ಸೋರಾಂಗ್ ಜಿಲ್ಲೆಯಲ್ಲಿ ನಡೆದಿದೆ.

    ಶನಿವಾರ ಸೋರಾಂಗ್ ಜಿಲ್ಲೆಯಲ್ಲಿರುವ ಮೊಸಳೆ ಸಾಕಾಣಿಕ ಕೇಂದ್ರದಲ್ಲಿ ಮೊಸಳೆಗಳಿಗೆ ಆಹಾರ ಹಾಕುವ ವೇಳೆ ವ್ಯಕ್ತಿಯೊಬ್ಬನನ್ನು ಮೊಸಳೆಗಳು ತಿಂದು ಹಾಕಿದ್ದವು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಮನುಷ್ಯನನ್ನು ತಿಂದುಹಾಕಿದ್ದಕ್ಕೆ ಕುಪಿತಗೊಂಡು ಸಾಕಾಣಿಕಾ ಕೇಂದ್ರದಲ್ಲಿದ್ದ ಸುಮಾರು 292 ಮೊಸಳೆಗಳ ಮಾರಣಹೋಮ ನಡೆಸಿದ್ದಾರೆ.

    ಶನಿವಾರ ಮೊಸಳೆಗಳಿಗೆ ಆಹಾರ ಹಾಕುವಾಗ ವ್ಯಕ್ತಿಯೊಬ್ಬನ ಮೇಲೆ ಮೊಸಳೆಗಳು ದಾಳಿ ಮಾಡಿತ್ತು. ಆತ ಸಹಾಯಕ್ಕಾಗಿ ಕಿರುಚಾಡುತ್ತಿದ್ದ ಶಬ್ಧ ಕೇಳಿಸಿ ಕೂಡಲೇ ಸ್ಥಳಕ್ಕೆ ಹೋದಾಗ ಸಾಕಷ್ಟು ಮೊಸಳೆಗಳು ವ್ಯಕ್ತಿಯ ಮೇಲೆ ಆಕ್ರಮಣ ಮಾಡಿ ತಿಂದು ಹಾಕಿವೆ ಎಂದು ಸಾಕಾಣಿಕಾ ಕೇಂದ್ರದ ಸಿಬ್ಬಂದಿ ತಿಳಿಸಿದ್ದಾರೆ.

    ಈ ಘಟನೆಯ ವಿರುದ್ಧ ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು, ಮುಂದೆಂದೂ ಇಂತಹ ಘಟನೆಗಳು ಮರುಕಳಿಬಾರದೆಂದು ನಿರ್ಧರಿಸಿ ಮೊಸಳೆಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ವೇಳೆ ನಿವಾಸಿಗಳು ಸಣ್ಣದು, ದೊಡ್ಡಲು ಎಂಬುದನ್ನು ನೋಡದೆಯೇ ಆಯುಧಗಳಿಂದ 292 ಮೊಸಳೆಗಳನ್ನು ಕೊಂದು ಹಾಕಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜನರ ಸೇರಿದ್ದರಿಂದಾಗಿ ಮೊಸಳೆಗಳ ಮಾರಣಹೋಮ ತಡೆಗಟ್ಟಲು ಅಲ್ಲಿನ ಸಿಬ್ಬಂದಿಗಳಿಗೂ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

  • ಚಂಡಮಾರುತದ ಹೊಡೆತಕ್ಕೆ ಪ್ರಯಾಣಿಕರ ಹಡಗು ಮುಳುಗಿ 31 ಸಾವು!

    ಚಂಡಮಾರುತದ ಹೊಡೆತಕ್ಕೆ ಪ್ರಯಾಣಿಕರ ಹಡಗು ಮುಳುಗಿ 31 ಸಾವು!

    ಜಕಾರ್ತ: ಚಂಡಮಾರತದ ಸಿಕ್ಕಿ ಪ್ರಯಾಣಿಕ ಹಡಗೊಂದು ಮುಳುಗಿ 31 ಜನ ಮಂದಿ ಸಾವಿಗೀಡಾದ ಧಾರುಣ ಘಟನೆ ಇಂಡೊನೇಷ್ಯಾದ ಸುಲಾವೆಸಿ ದ್ವೀಪದ ಬಳಿ ಸಂಭವಿಸಿದೆ.

    ಮಂಗಳವಾರ ಮಧ್ಯಾಹ್ನ ಪ್ರಯಾಣಿಕ ಹಡಗೊಂದು ಇಂಡೊನೇಷ್ಯಾದ ಬೀರಾ ಬಂದರಿನಿಂದ ಸೆಲಾಯಾರ್ ದ್ವೀಪಕ್ಕೆ ಸಂಚಾರ ಬೆಳೆಸಿತ್ತು. ಈ ವೇಳೆ ಸಮುದ್ರದಲ್ಲಿ ಚಂಡಮಾರುತದ ಹೊಡೆತಕ್ಕೆ ಸಿಲುಕಿ 31 ಪ್ರಯಾಣಿಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ಹಡಗಿನಲ್ಲಿ ಸಿಬ್ಬಂದಿಯೂ ಸೇರಿದಂತೆ ಒಟ್ಟು 164 ಮಂದಿ ಪ್ರಯಾಣ ಬೆಳೆಸುತ್ತಿದ್ದರು. ಅಲ್ಲದೇ ಹಡಗಿನಲ್ಲಿ 48 ವಾಹನಗಳನ್ನು ಸಾಗಿಸಲಾಗುತ್ತಿತ್ತು ಎಂದು ಇಂಡೊನೇಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಪಡೆ ಅಧಿಕಾರಿಯಾದ ಅಮೀರುದ್ದೀನ್ ತಿಳಿಸಿದ್ದಾರೆ.

    ಹಡುಗು ಚಂಡಮಾರುತದ ದಾಳಿಗೆ ಸಿಲುಕುತ್ತಿದ್ದಂತೆ ಎಚ್ಚೆತ್ತುಕೊಂಡ ನಾವಿಕ ಹಡಗನ್ನು ಹತ್ತಿರದಲ್ಲಿದ್ದ ದಿಬ್ಬದ ಕಡೆ ಮುನ್ನಡೆಸಿದ್ದರಿಂದ ರಕ್ಷಣಾ ಕಾರ್ಯಕ್ಕೆ ಅನುಕೂಲವಾಗಿದೆ. ನಾವಿಕನ ಸಮಯಪ್ರಜ್ಞೆಯಿಂದಾಗಿ ಆಗಬಹುದಾಗಿದ್ದ ಅತಿದೊಡ್ಡ ದುರಂತ ತಪ್ಪಿದೆ ಎಂದು ಅವರು ತಿಳಿಸಿದ್ದಾರೆ.

    ಇಂದು ಹಡಗಿನಲ್ಲಿದ್ದ 130 ಮಂದಿಯನ್ನು ರಕ್ಷಿಸಲಾಗಿದ್ದು, ಮೂವರು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವವರು ಹಡಗಿನಲ್ಲೇ ಸಿಲುಕಿದ್ದಾರೆಂದು ತಿಳಿದು ಬಂದಿದೆ. ನಾವಿಕನ ಸಮಯಪ್ರಜ್ಞೆಯಿಂದ ನೂರಾರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕೇಂದ್ರ ಸಮುದ್ರಯಾನ ಸಾರಿಗೆ ಸಚಿವಾಲಯದ ಅಧಿಕಾರಿಯಾದ ಆಗಸ್ ಪುರ್ನೊಮೊ ತಿಳಿಸಿದ್ದಾರೆ.

    ಪ್ರತಿಕೂಲ ಹವಾಮಾನ ನಡುವೆಯೂ ಪ್ರಯಾಣ ಆರಂಭಿಸಿದ್ದಲ್ಲದೇ ನಿಗದಿಗಿಂತ ಹೆಚ್ಚಿನ ಭಾರವನ್ನು ಹಡಗು ಹೊಂದಿದ್ದರಿಂದ ಚಂಡಮಾರುತದ ಹೊಡೆತಕ್ಕೆ ಸಿಕ್ಕಿ ಈ ಅವಘಡ ಸಂಭವಿಸಿದೆ ಎಂದು ರಕ್ಷಣಾ ಪಡೆಗಳು ತಿಳಿಸಿವೆ.