Tag: Jaish-e-Mohammed

  • ಭಯೋತ್ಪಾದಕ ಗುಂಪು ಜೆಇಎಂ ಮಹಿಳಾ ವಿಭಾಗ ಆರಂಭ – ‘ಆಪರೇಷನ್‌ ಸಿಂಧೂರ’ದಲ್ಲಿ ಗಂಡನ ಕಳೆದುಕೊಂಡ ಮಹಿಳೆಗೆ ಚುಕ್ಕಾಣಿ

    ಭಯೋತ್ಪಾದಕ ಗುಂಪು ಜೆಇಎಂ ಮಹಿಳಾ ವಿಭಾಗ ಆರಂಭ – ‘ಆಪರೇಷನ್‌ ಸಿಂಧೂರ’ದಲ್ಲಿ ಗಂಡನ ಕಳೆದುಕೊಂಡ ಮಹಿಳೆಗೆ ಚುಕ್ಕಾಣಿ

    – ಮಹಿಳಾ ವಿಂಗ್‌ ಮುನ್ನಡೆಸಲಿರೋ ಮಸೂದ್‌ ಅಜರ್‌ ಸಹೋದರಿ

    ಇಸ್ಲಾಮಾಬಾದ್: ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (Jaish-e-Mohammed) ತನ್ನ ಮೊದಲ ಮಹಿಳಾ ವಿಭಾಗ ‌’ಜಮಾತ್-ಉಲ್-ಮೊಮಿನಾತ್’ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

    ಜೆಇಎಂ ಮುಖ್ಯಸ್ಥ ಮತ್ತು ಭಯೋತ್ಪಾದಕ ಮೌಲಾನಾ ಮಸೂದ್ ಅಜರ್ (Masood Azhar) ಹೆಸರಿನಲ್ಲಿ ನೀಡಲಾದ ಪತ್ರದ ಮೂಲಕ ಈ ನಡೆಯನ್ನು ಬಹಿರಂಗಪಡಿಸಲಾಗಿದೆ. ಹೊಸ ಘಟಕಕ್ಕೆ ನೇಮಕಾತಿ ಅ.8 ರಂದು ಪಾಕಿಸ್ತಾನದ ಬಹವಾಲ್ಪುರದ ಮರ್ಕಜ್ ಉಸ್ಮಾನ್-ಒ-ಅಲಿಯಲ್ಲಿ ಪ್ರಾರಂಭವಾಗಿದೆ. ಇದನ್ನೂ ಓದಿ: ಕತಾರ್‌ ಏರ್‌ವೇಸ್‌ ವಿಮಾನದಲ್ಲಿ ಸಸ್ಯಾಹಾರಿಗೆ ಮಾಂಸಾಹಾರ ನೀಡಿ ಯಡವಟ್ಟು – ಉಸಿರುಗಟ್ಟಿ ಪ್ರಯಾಣಿಕ ಸಾವು

    ಜೆಇಎಂನ ಪ್ರಚಾರ ಸಂಸ್ಥೆ ಅಲ್-ಕಲಾಮ್ ಮೀಡಿಯಾ ಹಂಚಿಕೊಂಡ ಪತ್ರದ ಪ್ರಕಾರ, ಜಮಾತ್-ಉಲ್-ಮೊಮಿನಾತ್ ಸಂಘಟನೆಯ ಮಹಿಳಾ ಬ್ರಿಗೇಡ್ ಆಗಿ ಕಾರ್ಯನಿರ್ವಹಿಸಲಿದೆ.

    ಮೇ 7 ರಂದು ಭಾರತೀಯ ಪಡೆಗಳು ಜೆಇಎಂನ ಮರ್ಕಜ್ ಸುಭಾನಲ್ಲಾ ನೆಲೆಯನ್ನು ಗುರಿಯಾಗಿಸಿಕೊಂಡು ನಡೆಸಿದ ಕಾರ್ಯಾಚರಣೆಯಲ್ಲಿ ಮಸೂದ್ ಅಜರ್‌ನ ಸಹೋದರಿಯ ಪತಿ ಯೂಸುಫ್‌ ಹಜರ್‌ ಹತ್ಯೆಯಾಗಿದ್ದ. ಹೀಗಾಗಿ, ಮಸೂದ್‌ ಅಜರ್‌ನ ಸಹೋದರಿ ಈ ವಿಭಾಗವನ್ನು ಮುನ್ನಡೆಸಲಿದ್ದಾರೆ. ಇದನ್ನೂ ಓದಿ: ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಘರ್ಷಣೆ; 11 ಪಾಕಿಸ್ತಾನಿ ಸೈನಿಕರು, ಟಿಟಿಪಿಯ 19 ಉಗ್ರರು ಸಾವು

    ಬಹಾವಲ್ಪುರ್, ಕರಾಚಿ, ಮುಜಫರಾಬಾದ್, ಕೋಟ್ಲಿ, ಹರಿಪುರ್ ಮತ್ತು ಮನ್ಸೆಹ್ರಾದಲ್ಲಿರುವ ಜೆಇಎಂ ಕೇಂದ್ರಗಳಲ್ಲಿ ಅಧ್ಯಯನ ಮಾಡುತ್ತಿರುವ ಜೆಇಎಂ ಕಮಾಂಡರ್‌ಗಳ ಪತ್ನಿಯರು ಮತ್ತು ಆರ್ಥಿಕವಾಗಿ ದುರ್ಬಲ ಮಹಿಳೆಯರನ್ನು ನೇಮಕಾತಿಗೆ ಪರಿಗಣಿಸಲಾಗುತ್ತದೆ.

    ಭಾರತೀಯ ಸೇನೆಯು ಆಪರೇಷನ್ ಸಿಂಧೂರ ಸಮಯದಲ್ಲಿ ದಕ್ಷಿಣ ಪಂಜಾಬ್‌ನ ಬಹಾವಲ್ಪುರದಲ್ಲಿರುವ ಜೆಇಎಂ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡಿತ್ತು. ದಾಳಿಯ ನಂತರ, ಜೆಇಎಂ ಕಮಾಂಡರ್ ಇಲ್ಯಾಸ್ ಕಾಶ್ಮೀರಿ ಕಳೆದ ತಿಂಗಳು ಬಿಡುಗಡೆ ಮಾಡಿದ ವೀಡಿಯೊದಲ್ಲಿ ಮಸೂದ್ ಅಜರ್ ಕುಟುಂಬದ ಹಲವಾರು ಸದಸ್ಯರು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದ್ದ.

  • ಆಪರೇಷನ್‌ ಸಿಂಧೂರಕ್ಕೆ ಜೈಶ್‌ ನೆಲೆಗಳು ಉಡೀಸ್‌ – ಪುನರ್‌ ನಿರ್ಮಾಣಕ್ಕೆ ನಿಧಿ ಕೋರಿದ ಉಗ್ರ ಸಂಘಟನೆ

    ಆಪರೇಷನ್‌ ಸಿಂಧೂರಕ್ಕೆ ಜೈಶ್‌ ನೆಲೆಗಳು ಉಡೀಸ್‌ – ಪುನರ್‌ ನಿರ್ಮಾಣಕ್ಕೆ ನಿಧಿ ಕೋರಿದ ಉಗ್ರ ಸಂಘಟನೆ

    ಇಸ್ಲಾಮಾಬಾದ್: ಭಾರತದ ‘ಆಪರೇಷನ್‌ ಸಿಂಧೂರ’ (Operation Sindoor) ಕಾರ್ಯಾಚರಣೆಯ ವೈಮಾನಿಕ ದಾಳಿಗೆ ತುತ್ತಾದ ತಿಂಗಳುಗಳ ನಂತರ ಭಯೋತ್ಪಾದಕ ಸಂಘಟನೆ ಜೈ-ಎ-ಮೊಹಮ್ಮದ್‌ (Jaish-e-Mohammed) ತಮ್ಮ ಪ್ರಧಾನ ಕಚೇರಿ ಪುನರ್‌ ನಿರ್ಮಿಸಲು ನಿಧಿಗೆ ಮನವಿ ಮಾಡಿಕೊಂಡಿದೆ.

    2001 ರ ಸಂಸತ್ತಿನ ಮೇಲೆ ನಡೆದ ದಾಳಿ ಮತ್ತು 2019 ರ ಪುಲ್ವಾಮಾ ಆತ್ಮಾಹುತಿ ಬಾಂಬ್ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಹಲವಾರು ಪ್ರಮುಖ ದಾಳಿಗಳಿಗೆ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಹೊಣೆಗಾರಿಕೆಯಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಸಮಯದಲ್ಲಿ ಪಾಕಿಸ್ತಾನದ ಬಹವಾಲ್ಪುರದಲ್ಲಿರುವ ಜೈಶ್‌ನ ಪ್ರಧಾನ ಕಚೇರಿಯು ವೈಮಾನಿಕ ದಾಳಿಯಿಂದ ನಾಶವಾಗಿದೆ. ಇದನ್ನೂ ಓದಿ: ಭಾರತ ಕೊಟ್ಟ ತಿರುಗೇಟಿಗೆ ಸರಿಯಾಗಿ ಉತ್ತರ ನೀಡದೇ ನುಣುಚಿದ ಟ್ರಂಪ್‌

    ಸುಮಾರು ಮೂರು ತಿಂಗಳ ನಂತರ ಮೌಲಾನಾ ಮಸೂದ್ ಅಜರ್ ನೇತೃತ್ವದ ಸಂಘಟನೆಯು, ನಾಶವಾಗಿರುವ ಸ್ಥಳವನ್ನು ಪುನರ್‌ ನಿರ್ಮಿಸಲು ನಿಧಿಯನ್ನು ಸಂಗ್ರಹಿಸುವ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾನೆ.

    ಪಾಕಿಸ್ತಾನದ ದಕ್ಷಿಣ ಪಂಜಾಬ್ ಪ್ರಾಂತ್ಯದ ಒಳಗೆ ಸುಮಾರು 100 ಕಿ.ಮೀ ದೂರದಲ್ಲಿರುವ ಬಹವಾಲ್ಪುರ್, ಬಹಳ ಹಿಂದಿನಿಂದಲೂ ಭಯೋತ್ಪಾದಕ ಗುಂಪಿನ ಸೈದ್ಧಾಂತಿಕ ಮತ್ತು ಕಾರ್ಯಾಚರಣೆಯ ಕೇಂದ್ರವಾಗಿದೆ. ಇದನ್ನೂ ಓದಿ: ಭಾರತದಂತಹ ಬಲಿಷ್ಠ ಮಿತ್ರ ರಾಷ್ಟ್ರದೊಂದಿಗೆ ಸಂಬಂಧವನ್ನ ಹದಗೆಡಿಸಬೇಡಿ – ಟ್ರಂಪ್‌ಗೆ ತಿವಿದ ನಿಕ್ಕಿ ಹ್ಯಾಲಿ

    ಜೆಇಎಂ ತನ್ನ ಪ್ರಧಾನ ಕಚೇರಿಯಾದ ಜಾಮಿಯಾ ಮಸೀದಿ ಸುಭಾನ್ ಅಲ್ಲಾಹ್‌ನ ಪುನರುಜ್ಜೀವನಕ್ಕಾಗಿ ದೇಣಿಗೆ ಕೋರಿದೆ. ಇದು ಒಂದು ಕಾಲದಲ್ಲಿ ವಿಸ್ತಾರವಾದ ಕಾಂಪ್ಲೆಕ್ಸ್‌ ಆಗಿತ್ತು. ಅಜರ್, ಅವನ ಸಹೋದರ, ಮುಖ್ಯಸ್ಥ ಮುಫ್ತಿ ಅಬ್ದುಲ್ ರೌಫ್ ಅಸ್ಗರ್ ಮತ್ತು ಇತರ ಕುಟುಂಬ ಸದಸ್ಯರಿಗೆ ನೆಲೆಯಾಗಿತ್ತು. ಬುಧವಾರ ಪ್ರಾರಂಭವಾದ ಅಭಿಯಾನದ ಯಶಸ್ಸಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ತಿಳಿಸಿದೆ.

    2015 ರಲ್ಲಿ ಸ್ಥಾಪನೆಯಾದಾಗಿನಿಂದ, ಜಾಮಿಯಾ ಮಸೀದಿ ಸುಭಾನ್ ಅಲ್ಲಾ ಜೆಇಎಂನ ಪ್ರಾಥಮಿಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದರ ಕಾರ್ಯಾಚರಣಾ ಪ್ರಧಾನ ಕಚೇರಿ ಮತ್ತು ಪ್ರಮುಖ ತರಬೇತಿ ಸೌಲಭ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಬಹವಾಲ್ಪುರ್ ಪ್ರಮುಖ ಗುರಿಗಳಲ್ಲಿ ಒಂದಾಗಿತ್ತು. ನಿಖರವಾದ ದಾಳಿಗಳಿಂದ ಕಟ್ಟಡಕ್ಕೆ ವ್ಯಾಪಕ ಹಾನಿಯನ್ನುಂಟಾಗಿತ್ತು.

    ಜೆಇಎಂ ಮುಖ್ಯಸ್ಥ ತನ್ನ ಕುಟುಂಬದ 10 ಸದಸ್ಯರು ಮತ್ತು ತನ್ನ ನಾಲ್ವರು ಸಹಾಯಕರು ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದ್ದಾನೆ. 1994 ರಲ್ಲಿ ಭಾರತದಲ್ಲಿ ಬಂಧಿಸಲ್ಪಟ್ಟು ಏರ್ ಇಂಡಿಯಾ ಐಸಿ 814 ವಿಮಾನ ಅಪಹರಣದ ನಂತರ ಬಿಡುಗಡೆಯಾದ ಅಜರ್ ಹೇಳಿಕೆಯ ಪ್ರಕಾರ, ದಾಳಿಯಲ್ಲಿ ಸಾವನ್ನಪ್ಪಿದವರು ಆತನ ಅಕ್ಕ, ಆಕೆಯ ಪತಿ, ಸೋದರಳಿಯ ಮತ್ತು ಪತ್ನಿ, ಸೊಸೆ ಮತ್ತು ಕುಟುಂಬದ ಐದು ಮಕ್ಕಳು ಎನ್ನಲಾಗಿದೆ.

  • ರಾಷ್ಟ್ರ ರಾಜಧಾನಿಯಲ್ಲಿ ಮತ್ತಿಬ್ಬರು ಜೈಷ್ ಉಗ್ರರ ಬಂಧನ

    ರಾಷ್ಟ್ರ ರಾಜಧಾನಿಯಲ್ಲಿ ಮತ್ತಿಬ್ಬರು ಜೈಷ್ ಉಗ್ರರ ಬಂಧನ

    ನವದೆಹಲಿ: ಇಬ್ಬರು ಶಂಕಿತ ಜೈಷ್-ಎ-ಮೊಹಮ್ಮದ್ ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ರಾತ್ರಿ ನಡೆಯಬೇಕಿದ್ದ ಬೃಹತ್ ದಾಳಿಯನ್ನು ವಿಫಲಗೊಳಿಸಿದ್ದಾರೆ. ದೆಹಲಿ ವಿಶೇಷ ಪೊಲೀಸ್ ಪಡೆ ಇಬ್ಬರು ಉಗ್ರರನ್ನು ಬಂಧಿಸಿದೆ.

    ದೆಹಲಿಯ ಸಾರೈ ಕೇಲ್ ಖಾನ್ ಬಳಿ ಸಿಕ್ಕಿಬಿದ್ದಿರುವ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

    ಈ ಕುರಿತು ದೆಹಲಿ ಪೊಲೀಸರು ಮಾಹಿತಿ ನೀಡಿದ್ದು, ಸಾರೈ ಕೇಲ್ ಖಾನ್‍ನ ಮಿಲೇನಿಯಂ ಪಾರ್ಕ್ ಬಳಿ ಸೋಮವಾರ ರಾತ್ರಿ 10.15ರ ಸುಮಾರಿಗೆ ಬಂಧಿಸಲಾಗಿದೆ. ಇಬ್ಬರು ಉಗ್ರರು ಜಮ್ಮು ಕಾಶ್ಮೀರದ ಮೂಲದವರಾಗಿದ್ದು, ಬಂಧಿತರಿಂದ 2 ಸೆಮಿ-ಆಟೋಮೆಟಿಕ್ ಪಿಸ್ತೂಲು ಹಾಗೂ 10 ಜೀವಂತ ಕಾರ್ಟ್‍ರಿಡ್ಜ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಇಬ್ಬರು ಶಂಕಿತ ಜೈಷ್-ಎ-ಮೊಹಮ್ಮದ್ ಉಗ್ರರು ಜಮ್ಮು ಖಾಶ್ಮೀರದ ನಿವಾಸಿಗಳಾಗಿದ್ದು, ಬರಾಮುಲ್ಲಾದ ಪಾಲ ಮೊಹಲ್ಲಾ ನಿವಾಸಿ ಸನಾವುಲ್ಲಾ ಮಿರ್ ಪುತ್ರ 22 ವರ್ಷದ ಅಬ್ದುಲ್ ಲತಿಫ್, ಕುಪ್ವಾರಾದ ಹಾತ್‍ಮುಲ್ಲಾ ಗ್ರಾಮದ ಬಷೀರ್ ಅಹ್ಮದ್ ಪುತ್ರ ಅಶ್ರಫ್ ಖತನಾ(20) ಎಂದು ಗುರುತಿಸಲಾಗಿದೆ. ಇಬ್ಬರು ಉಗ್ರರು ಈ ಹಿಂದೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ತೆರಳಲು ಯತ್ನಿಸಿದ್ದರು. ಇದನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು. ಹೀಗಾಗಿ ದೆಹಲಿಯಲ್ಲಿ ದಾಳಿ ನಡೆಸಿದ ಬಳಿಕ ನೇಪಾಳ ಮಾರ್ಗವಾಗಿ ಪಿಒಕೆಗೆ ತೆರಳಲು ಸಂಚು ರೂಪಿಸಿದ್ದರು.

    ಈ ನಡುವೆ ಆಗಸ್ಟ್‍ನಲ್ಲಿ ದೆಹಲಿ ಪೊಲೀಸರು ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಬಂಧಿಸುವ ಮೂಲಕ ಇಂತಹದ್ದೇ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದ್ದರು. ಈ ವೇಳೆ ಧೌಲಾ ಕುವಾನ್ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದರು. ಬಂಧನದ ಬಳಿಕ 15 ಕೆ.ಜಿ. ಐಇಡಿಯನ್ನು ವಶಪಡಿಸಿಕೊಂಡಿದ್ದರು.

  • ಪುಲ್ವಾಮಾ ರೀತಿಯಲ್ಲಿ ಮೊತ್ತೊಂದು ದಾಳಿಗೆ ಸಂಚು – 7 ರಾಜ್ಯಗಳಲ್ಲಿ ಹೈಅಲರ್ಟ್

    ಪುಲ್ವಾಮಾ ರೀತಿಯಲ್ಲಿ ಮೊತ್ತೊಂದು ದಾಳಿಗೆ ಸಂಚು – 7 ರಾಜ್ಯಗಳಲ್ಲಿ ಹೈಅಲರ್ಟ್

    ನವದೆಹಲಿ: ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ 370 ನೇ ವಿಧಿಯನ್ನು ರದ್ದು ಮಾಡಿದ ನಂತರ ಪುಲ್ವಾಮಾ ರೀತಿಯಲ್ಲಿ ಮೊತ್ತೊಂದು ದಾಳಿಗೆ ಉಗ್ರರು ಸಂಚು ಮಾಡಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಏಳು ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ (ಜೆಎಂ) ಕಾಶ್ಮೀರ ಕಣಿವೆಯಲ್ಲಿ ಮತ್ತು ಭಾರತದ ಏಳು ರಾಜ್ಯಗಳಲ್ಲಿ ಭಾರಿ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆಯ ತಿಳಿಸಿದೆ.

    ಈ ಮಾಹಿತಿಯ ಪ್ರಕಾರ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‍ಐ) ಭಯೋತ್ಪಾದಕ ಸಂಘಟನೆಗೆ ದಾಳಿ ನಡೆಸಲು ಸಹಾಯ ಮಾಡುತ್ತಿದೆ. 2019 ರ ಫೆಬ್ರವರಿಯ ಪುಲ್ವಾಮಾ ದಾಳಿಯ ಮಾದರಿಯಲ್ಲಿ ಸೇನೆ, ಪೊಲೀಸ್ ಮತ್ತು ಇತರ ಕಾನೂನು ಜಾರಿ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ವರದಿಯಾಗಿದೆ.

    ದೆಹಲಿ, ರಾಜಸ್ಥಾನ, ಪಂಜಾಬ್, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಹೆಚ್ಚಿನ ಎಚ್ಚರಿಕೆ ನೀಡಲಾಗಿದೆ. ಈ ರಾಜ್ಯಗಳಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ತನ್ನ ದುಷ್ಕೃತ್ಯದ ಯೋಜನೆಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

    ಇದ್ದರಿಂದ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ವಹಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಿರುವ ಕೇಂದ್ರ ಸರ್ಕಾರ ಆಗಸ್ಟ್ 15ರ ವರೆಗೆ ದೇಶದಲ್ಲಿ ಇರುವ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸುವಂತೆ ಎಚ್ಚರಿಕೆ ನೀಡಿದೆ. ಆಗಸ್ಟ್ 10 ರಿಂದ 20 ರವರೆಗೆ ಬೋರ್ಡಿಂಗ್ ಪಾಸ್ ಇರುವ ಪ್ರಯಾಣಿಕರನ್ನು ಮಾತ್ರ ನಿಲ್ದಾಣದ ಒಳಗೆ ಬಿಡಲಾಗುತ್ತದೆ. ಪ್ರಯಾಣಿಕರ ಜೊತೆ ಬರುವ ಇತರರ ಪ್ರವೇಶವನ್ನು ನಿರ್ಬಂಧ ಮಾಡಲಾಗುತ್ತದೆ.

    ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ರಾಜ್ಯವನ್ನಾಗಿ ಮಾಡಿದ್ದನ್ನು ಪಾಕಿಸ್ತಾನ ವಿರೋಧಿಸಿದ್ದು, ಭಾರತದ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಮುರಿದುಕೊಂಡಿದೆ ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸಿದೆ.

  • ಕಾಶ್ಮೀರಕ್ಕೆ ನುಸುಳಿದ್ದಾರೆ ಐವರು ಉಗ್ರರು- ಹೈ ಅಲರ್ಟ್ ಘೋಷಣೆ

    ಕಾಶ್ಮೀರಕ್ಕೆ ನುಸುಳಿದ್ದಾರೆ ಐವರು ಉಗ್ರರು- ಹೈ ಅಲರ್ಟ್ ಘೋಷಣೆ

    ಶ್ರೀನಗರ: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್‍ಗೆ ಸೇರಿದ ಐದು ಉಗ್ರರು ಕಾಶ್ಮೀರಕ್ಕೆ ನುಸುಳಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಕಾಶ್ಮೀರದ ಕಣಿವೆ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಭಾರತದ ಕಣಿವೆ ಪ್ರದೇಶಕ್ಕೆ ಐದು ಜನ ಉಗ್ರರು ನುಸುಳಿದ್ದಾರೆ. ಈ ಉಗ್ರರು ಕಣಿವೆಯಲ್ಲಿನ ಭದ್ರತಾ ಪಡೆಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಈ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    ಭಾರತಕ್ಕೆ ನುಸುಳಿರುವ ಭಯೋತ್ಪಾದಕರು ಹೆಚ್ಚು ತರಬೇತಿ ಪಡೆದವರು ಮತ್ತು ಅವರು ಭದ್ರತಾ ಪಡೆಗಳ ಮೇಲೆ ದಾಳಿ ಮಾಡಬಹುದು ಎಂದು ಮೂಲಗಳು ತಿಳಿಸಿರುವ ಕಾರಣ ಕೇಂದ್ರ ಸರ್ಕಾರ ಕಾಶ್ಮೀರ ಕಣಿವೆ ಪ್ರದೇಶಕ್ಕೆ ಹೆಚ್ಚಿನ ಸೈನಿಕರು ಮತ್ತು ವಾಯು ಪಡೆಯನ್ನು ನಿಯೋಜನೆ ಮಾಡಿ ತೀವ್ರ ಎಚ್ಚರಿಕೆ ವಹಿಸಿದೆ.

    ಈ ವಿಷಯ ತಿಳಿಯುತ್ತಿದ್ದಂತೆ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಗುರುವಾರ ಸಂಜೆಯಿಂದ ಸೂಕ್ಷ್ಮ ಪ್ರದೇಶದಲ್ಲಿ ಗಸ್ತು ತಿರುಗುತ್ತಿದೆ. ಹೆಚ್ಚಿನ ಭದ್ರತೆಗೆ ಸೇನೆಯನ್ನು ಸಿದ್ಧಗೊಳಿಸಲಾಗಿದೆ. ಕಾಶ್ಮೀರ ಕಣಿವೆಗಳಲ್ಲಿ ಭದ್ರತಾ ಪಡೆಗಳ 280 ಗುಂಪುಗಳನ್ನು ನಿಯೋಜನೆ ಮಾಡಲಾಗಿದೆ. ಕಾಶ್ಮೀರದ ನಗರ ಭಾಗದ ಕೆಲ ದುರ್ಬಲ ಸ್ಥಳಗಳಲ್ಲಿ ಸಿ.ಆರ್‍.ಪಿ.ಎಫ್ ಸಿಬ್ಬಂದಿಯನ್ನು ನೇಮಕ ಮಾಡಿದ್ದೇವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

    ನಗರದ ಎಲ್ಲಾ ಪ್ರಮುಖ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಕೇಂದ್ರ ಸಶಸ್ತ್ರ ಅರೆಸೈನಿಕ ಪಡೆ (ಸಿಎಪಿಎಫ್) ಮತ್ತು ಸ್ಥಳೀಯ ಪೊಲೀಸರನ್ನು ನೇಮಿಸಲಾಗಿದೆ. ಭಯೋತ್ಪಾದಕರು ದೇವಾಲಯದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿಯಿಂದಾಗಿ ಪ್ರಾರ್ಥನ ಮಂದಿರಕ್ಕೆ ನೀಡಿದ್ದ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದೆ. ರಾಜ್ಯದ ಶಾಲೆಗಳಿಗೆ 10 ದಿನಗಳವರೆಗೆ ರಜೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಘಟನೆಯಿಂದ ಅಮರನಾಥ ಯಾತ್ರೆಯ ಕೆಲವು ಊಟದ ಗೃಹಗಳನ್ನು ಸಹ ಮುಚ್ಚಲಾಗಿದೆ. ಈ ಕಾರ್ಯಾಚರಣೆ ನಡೆಸಲು ಮತ್ತು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಕರ್ತವ್ಯಗಳನ್ನು ಬಲಪಡಿಸುವ ಸಲುವಾಗಿ ಸುಮಾರು 10,000 ಕೇಂದ್ರ ಪಡೆಗಳ ಸಿಬ್ಬಂದಿಯನ್ನು ಕಾಶ್ಮೀರಕ್ಕೆ ನಿಯೋಜಿಸಿತ್ತು. ಈ ನಿರ್ಧಾರದ ಬೆನ್ನಲ್ಲೇ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 25,000 ಅರೆಸೈನಿಕ ಸಿಬ್ಬಂದಿಯನ್ನು ಕಾಶ್ಮೀರಕ್ಕೆ ಕಳುಹಿಸಿದೆ.

  • ಪುಲ್ವಾಮಾ ದಾಳಿಯ ಪ್ರಮುಖ ಉಗ್ರ ಮುದಸ್ಸಿರ್ ಆಪ್ತ ಅರೆಸ್ಟ್

    ಪುಲ್ವಾಮಾ ದಾಳಿಯ ಪ್ರಮುಖ ಉಗ್ರ ಮುದಸ್ಸಿರ್ ಆಪ್ತ ಅರೆಸ್ಟ್

    ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಮುದಾಸಿರ್ ಅಹ್ಮದ್ ಖಾನ್ ಆಪ್ತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಸಜ್ಜದ್ ಖಾನ್ ಬಂಧಿತ ಆರೋಪಿ. ಪೊಲೀಸರು ಸಜ್ಜದ್ ಖಾನ್‍ನನ್ನು ದೆಹಲಿಯ ಕೆಂಪು ಕೋಟೆ ಸಮೀಪದಲ್ಲಿ ಗುರುವಾರ ರಾತ್ರಿ ಬಂಧಿಸಿದ್ದಾರೆ. ಜೊತೆಗೆ ಆತನನ್ನು ರಹಸ್ಯ ಸ್ಥಳದಲ್ಲಿಟ್ಟು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

    ಸಜ್ಜದ್ ಖಾನ್ ದೆಹಲಿಯಲ್ಲಿ ಶಾಲು ಮಾರಾಟ ಮಾಡುತ್ತಿದ್ದ. ಜೊತೆಗೆ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಮುದಾಸಿರ್ ಅಹ್ಮದ್ ಖಾನ್ ಸಂಪರ್ಕದಲ್ಲಿದ್ದ. ಪುಲ್ವಾಮಾ ದಾಳಿಗೂ ಮುನ್ನವೇ ಸಜ್ಜದ್ ಖಾನ್ ದೆಹಲಿಗೆ ಬಂದಿದ್ದ. ಅಷ್ಟೇ ಅಲ್ಲದೆ ದಾಳಿಯ ಬಳಿಕ ಆತನನ್ನು ದೆಹಲಿಯಲ್ಲಿ ಬಚ್ಚಿಡಲಾಗಿತ್ತು.

    ಪುಲ್ವಾಮಾ ದಾಳಿಯ ಬಗ್ಗೆ ಸಜ್ಜದ್ ಖಾನ್‍ಗೆ ಎಲ್ಲ ರೀತಿಯ ಮಾಹಿತಿಯಿದೆ. ಅಷ್ಟೇ ಅಲ್ಲದೆ ಅವನ ಇಬ್ಬರು ಸಹೋದರರು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯಲ್ಲಿದ್ದರು. ಆದರೆ ಅವರನ್ನು ಜಮ್ಮು-ಕಾಶ್ಮೀರದಲ್ಲಿ ಯೋಧರು ಹತ್ಯೆ ಮಾಡಿದ್ದರು. 2018ರ ಅಕ್ಟೋಬರ್ ನಲ್ಲಿ ಭಾರತೀಯ ಯೋಧರು ನಡೆಸಿದ್ದ ದಾಳಿಯಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸಂಬಂಧಿ ಉಸ್ಮಾನ್ ಹಾಗೂ ಸಜ್ಜದ್ ಸಹೋದರ ಬಲಿಯಾಗಿದ್ದರು.

    ಸಜ್ಜದ್ ಖಾನ್ ಬಂಧನದಿಂದಾಗಿ ಪುಲ್ವಾಮಾ ದಾಳಿಯ ತನಿಖೆಗೆ ಹೊಸ ತಿರುವು ಸಿಕ್ಕಂತಾಗಿದೆ. ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • ಜಮ್ಮು-ಕಾಶ್ಮೀರಕ್ಕೆ ನುಸುಳಲು 4 ದಾರಿ ಬಳಸಿದ್ರು ಜೈಶ್ ಉಗ್ರರು

    ಜಮ್ಮು-ಕಾಶ್ಮೀರಕ್ಕೆ ನುಸುಳಲು 4 ದಾರಿ ಬಳಸಿದ್ರು ಜೈಶ್ ಉಗ್ರರು

    ನವದೆಹಲಿ: ಬಾಲಕೋಟ್ ನಲ್ಲಿ ತರಬೇತಿ ಪಡೆಯುತ್ತಿದ್ದ ಉಗ್ರರು ಭಾರತದ ಒಳಗೆ ನುಸುಳಲು ಪಾಕ್ ಆಕ್ರಮಿತ ಕಾಶ್ಮೀರದಿಂದ ನಾಲ್ಕು ಮಾರ್ಗಗಳನ್ನು ಬಳಸುತ್ತಿದ್ದರು ಎಂಬುದನ್ನು ಸೇನೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

    ಬಾಲಕೋಟ್-ಕೆಲ್-ದುಢ್‍ನಿಯಾಲ್, ಬಾಲಕೋಟ್-ಕೆಲ್-ಕೈಂತಾವಾಲಿ, ಬಾಲಕೋಟ್-ಕೆಲ್-ಲೋಲಾಬ್ ಮತ್ತು ಬಾಲಕೋಟ್-ಕೆಲ್-ಕಚಾಮಾ-ಕ್ರಾಲ್‍ಪೋರಾ ಎಂಬ ನಾಲ್ಕು ಮಾರ್ಗಗಳನ್ನು ಭಾರತದೊಳಗೆ ಬರಲು ಉಗ್ರರು ಬಳಸಿಕೊಳ್ಳುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

    ಬಾಲ್‍ಕೋಟ್- ಕೆಲ್ ಪಿಓಕೆಯಲ್ಲಿದ್ದರೆ, ದುಢ್‍ನಿಯಾಲ್ ಕಾಶ್ಮೀರದ ಕುಪ್ವಾರದಲ್ಲಿದೆ. ಕೈಂತಾವಾಲಿ, ಕಚಾಮಾ, ಕ್ರಾಲ್‍ಪೋರಾ ಮತ್ತು ಲೋಲಾಬ್ ಕುಪ್ವಾರದ ಮಗಂ ಅರಣ್ಯದಲ್ಲಿದೆ. ಬಾಲಕೋಟ್ ನಲ್ಲಿ ಮೂರು ತಿಂಗಳು ತರಬೇತಿ ಪಡೆದುಕೊಂಡ ಉಗ್ರರು ಈ ಮಾರ್ಗಗಳ ಮೂಲಕ ಭಾರತ ಪ್ರವೇಶಿಸಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದರು.

    ಗನ್ ಹಿಡಿಯೋದು ಸೇರಿದಂತೆ ಪ್ರಾಥಮಿಕ ತರಬೇತಿ ಪಡೆದ ಉಗ್ರರನ್ನು ಬಾಲಕೋಟ್ ಗೆ ರವಾನಿಸಲಾಗುತ್ತಿತ್ತು ಬಾಲಕೋಟ್ ನಲ್ಲಿ ಉಗ್ರರಿಗೆ ಎಕೆ-47, ಪಿಕಾ, ಎಲ್‍ಎಂಜಿ, ರಾಕೆಟ್ ಉಡಾವಣೆ, ಯುಬಿಜಿಎಲ್ ಮತ್ತು ಗ್ರೆನೆಡ್ ಬಳಕೆಯ ತರಬೇತಿಯನ್ನು ನೀಡಲಾಗುತ್ತಿತ್ತು. ಇದೇ ವೇಳೆ ಸ್ವಿಮಿಂಗ್, ಕುದುರೆ ಸವಾರಿ ಮತ್ತು ಕತ್ತಿ ವರಸೆಯನ್ನು ಕಲಿಸಲಾಗುತ್ತಿತ್ತು. ಈ ಉಗ್ರರ ತರಬೇತಿ ಶಿಬಿರವನ್ನು ‘ಮದ್ರಸಾ ಆಯೇಷಾ ಸಾದಿಕ್’ ಹೆಸರಿನಲ್ಲಿ ನಿರ್ವಹಣೆ ಮಾಡಲಾಗುತ್ತಿತ್ತು.

    ಬಾಲಕೋಟ್ ಶಿಬಿರದಲ್ಲಿ 25ರಿಂದ 27 ಜನರ ಮೇಲ್ವಿಚಾರಣೆಯಲ್ಲಿ ಸುಮಾರು 325 ಉಗ್ರರು ತರಬೇತಿ ಪಡೆದುಕೊಳ್ಳುತ್ತಿದ್ದರು. ಫೆಬ್ರವರಿ 14ರದಂದು ಪುಲ್ವಾಮಾ ದಾಳಿಯ ಪ್ರತಿಕಾರವಾಗಿ ಭಾರತೀಯ ವಾಯುಸೇನೆ ಫೆಬ್ರವರಿ 26ರಂದು ಗಡಿರೇಖೆಯನ್ನು ದಾಟಿ ಮೂರು ಉಗ್ರರ ತರಬೇತಿ ಶಿಬಿರಗಳನ್ನು ಧ್ವಂಸಗೊಳಿಸಿ ಯಶಸ್ವಿಯಾಗಿ ಹಿಂದಿರುಗಿತ್ತು.

    https://www.youtube.com/watch?v=tWx5VyQ388w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಸ್, ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್‌ ಜೊತೆಗೆ ನಮಗೆ ಸಂಪರ್ಕವಿತ್ತು: ಬಂಧಿತ ಕಾಶ್ಮೀರಿ ಉಗ್ರರು

    ಯಸ್, ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್‌ ಜೊತೆಗೆ ನಮಗೆ ಸಂಪರ್ಕವಿತ್ತು: ಬಂಧಿತ ಕಾಶ್ಮೀರಿ ಉಗ್ರರು

    ಲಕ್ನೋ: ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ದಾಳಿ ನಡೆಸಲು ಸ್ಕೆಚ್ ಹಾಕಿದ್ದ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಘನಿ ಜೊತೆ ನಮಗೆ ಸಂಪರ್ಕ ಇತ್ತು ಎನ್ನುವುದನ್ನು ಇಬ್ಬರು ಉಗ್ರರು ಉತ್ತರ ಪ್ರದೇಶದ ಭಯೋತ್ಪದನಾ ನಿಗ್ರಹ ದಳ (ಎಟಿಎಸ್) ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.

    ಪುಲ್ವಾಮಾ ದಾಳಿ ಬಳಿಕ ಪೊಲೀಸರು ಶಂಕೆ ಆಧಾರದ ಹಿನ್ನೆಲೆಯಲ್ಲಿ ಕಾಶ್ಮೀರ ಕುಲ್ಗಾವ್ ಮೂಲದ ಶಹಾನವಾಜ್ ಮತ್ತು ಪುಲ್ವಾಮಾದ ಅಬ್ದುಲ್ ಮಲ್ಲಿಕ್ ರನ್ನು ಬಂಧಿಸಿದ್ದರು. ಬಂಧಿತರ ವಿಚಾರಣೆ ವೇಳೆ ಇಬ್ಬರು ನಿಷೇಧಿತ ಜೈಷ್-ಇ-ಮೊಹಮ್ಮದ್ ಸಂಘಟನೆಯ ಜೊತೆ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ.

    ತನಿಖಾ ಅಧಿಕಾರಿಗಳು ಭಯೋತ್ಪಾದಕರು ಹಾಗೂ ಶಂಕಿತ ನಡುವಿನ ನಡೆದ ಸಂಭಾಷಣೆಯಲ್ಲಿ ದೊಡ್ಡ ದಾಳಿ ನಡೆಸುವ ಹಾಗೂ ದಾಳಿ ನಡೆಸಲು ಬಳಸಬೇಕಾದ ವಸ್ತುಗಳ ಬಗ್ಗೆ ಮಾತನಾಡಿದ್ದೇವೆ ಎಂದು ತಿಳಿಸಿದ್ದು, ಫೋನಿನಲ್ಲಿ ಧ್ವನಿ ಸಂದೇಶ ರವಾನೆ ಮಾಡುವ ಮೂಲಕ ಮಾತುಕತೆ ನಡೆಸಿದ್ದಾರೆ.

    ಉತ್ತರ ಪ್ರದೇಶದ ಡಿಜಿಪಿ ಒಪಿ ಸಿಂಗ್ ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ ವೇಳೆ ಆರೋಪಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಉತ್ತರ ಪ್ರದೇಶ ಪೊಲೀಸರು ಜಮ್ಮು ಕಾಶ್ಮೀರದ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ತನಿಖೆಯ ಮಾಹಿತಿಯನ್ನು ರವಾನಿಸಿದ್ದಾರೆ.

    ಬಹುಮುಖ್ಯ ಶಂಕಿತ ಶಹಾನವಾಜ್ ಕಳೆದ 18 ತಿಂಗಳಿನಿಂದ ಉಗ್ರರೊಂದಿಗೆ ಸಂಪರ್ಕದಲ್ಲಿರುವ ಬಗ್ಗೆ ಹೇಳಿದ್ದು, ಮತ್ತೊಬ್ಬ ಆರೋಪಿ ಅಬ್ದುಲ್ ಮಲ್ಲಿಕ್ ಕಳೆದ 6 ತಿಂಗಳ ಹಿಂದೆಯಷ್ಟೇ ಸಂಪರ್ಕಕ್ಕೆ ಬಂದಿರುವ ಬಗ್ಗೆ ತಿಳಿಸಿದ್ದಾಗಿ ಪೊಲೀಸ್ ಅಧಿಕಾರಿ ಅರುಣ್ ಮಾಹಿತಿ ನೀಡಿದ್ದಾರೆ. ಅಲ್ಲದೇ ಪುಲ್ವಾಮಾ ದಾಳಿಯ ಬಳಿಕ ಭಾರತ ಯೋಧರ ಎನ್‍ಕೌಂಟರ್ ನಲ್ಲಿ ಸಾವನ್ನಪ್ಪಿದ ಘಜಿ ಜೊತೆಗೆ ಸಂಪರ್ಕ ಇದ್ದಿದ್ದಾಗಿ ಶಹಾನವಾಜ್ ಒಪ್ಪಿಕೊಂಡಿದ್ದಾನೆ.

    ಈ ಇಬ್ಬರು ಯುವಕರನ್ನು ಜೈಶ್ ಸಂಘಟನೆ ಟಾಪ್ ಕಮಾಂಡರ್ ಗಳು ಸಂಘಟನೆಗೆ ಸೇರಿಸಿಕೊಳ್ಳಲು ಸಂಪರ್ಕಿಸಿದ್ದರು. ನಿಮ್ಮಿಂದ ಏನು ಮಾಡಲು ಸಾಧ್ಯ ಎಂದು ತಿಳಿಸಿ ಎಂಬ ಸಂದೇಶ ಹಾಗೂ ಕೃತ್ಯ ನಡೆಸಲು ಬೇಕಾದ ಆಯುಧಗಳನ್ನು ಎಲ್ಲಿ ಪಡೆಯಬೇಕು ಎಂಬ ಬಗ್ಗೆಯೂ ಮಾಹಿತಿ ಪಡೆದಿದ್ದರು. ಆದರೆ ಈ ಪ್ಲಾನ್ ಇನ್ನು ಪ್ರಗತಿಯಲ್ಲಿತ್ತು ಎಂದು ಐಜಿ ವಿವರಿಸಿದ್ದಾರೆ.

    ಬಂಧಿತರಿಬ್ಬರು ಧ್ವನಿ ಸಂದೇಶ ಮಾತ್ರವಲ್ಲದೇ ಬಿಬಿಎಂ ಮೇಸೆಂಜರ್ ಬಳಕೆ ಮಾಡಿ ಸಂವಹನ ನಡೆಸಿದ್ದು, ತಮ್ಮ ಗುರುತು ಪತ್ತೆ ಆಗದಿರಲು ಈ ತಂತ್ರ ಬಳಸಿದ್ದಾರೆ. ಸದ್ಯ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಕಾಶ್ಮೀರಕ್ಕೆ ಕರೆದೊಯ್ಯಲಾಗುತ್ತದೆ ಎಂದು ತಿಳಿಸಿದ್ದಾರೆ.

    ಶಹಾನವಾಜ್ ಬಿಎ ಮೊದಲ ವರ್ಷ ಹಾಗೂ ಕಂಪ್ಯೂಟರ್ ಕೋರ್ಸ್ ಪೂರ್ಣಗೊಳಿಸಿದ್ದಾನೆ. ಆತನ ತಂದೆ ಕಾರ್ಪೆಂಟರ್ ಆಗಿದ್ದು, ಸಹೋದರ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಅಬ್ದುಲ್ ಮಲ್ಲಿಕ್ 12ನೇ ತರಗತಿಯನ್ನು ಪಾಸ್ ಮಾಡಿದ್ದು, ಆತನ ತಂದೆ ರೈತರಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಇಬ್ಬರೊಂದಿಗೂ ಓದಿದ ಇತರೆ ವಿದ್ಯಾರ್ಥಿಗಳನ್ನು ಕೂಡ ತನಿಖೆಗೆ ಒಳಪಡಿಸಲು ಎಟಿಎಸ್ ನಿರ್ಧಾರ ಮಾಡಿದೆ.

    ಶಹಾನವಾಜ್ ಅಹ್ಮದ್ ಗ್ರೆನೇಡ್ ಸ್ಫೋಟದಲ್ಲಿ ಪರಿಣತನಾಗಿದ್ದಾನೆ. ಬಂಧಿತ ಶಾನವಾಜ್ ಪುಲ್ವಾಮಾ ದಾಳಿಯ ಹೊಣೆ ಹೊತ್ತಿರುವ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಹೊಸದಾಗಿ ನೇಮಕಗೊಂಡಿದ್ದಾನೆ. ಪುಲ್ವಾಮಾ ದಾಳಿಗೂ ಮುನ್ನ ಹಾಗೂ ನಂತರ ಬಂಧಿತ ಉಗ್ರರು ಉತ್ತರ ಪ್ರದೇಶಕ್ಕೆ ಬಂದಿದ್ದಾರೆ ಎಂದು ಹೇಳುವುದು ಕಷ್ಟ. ಉಗ್ರ ಸಂಘಟನೆಯ ಜೊತೆ ನಂಟು ಹೊಂದಿರುವುದಕ್ಕೆ ನಮಗೆ ಹಲವಾರು ಸಾಕ್ಷ್ಯಗಳು ಸಿಕ್ಕಿವೆ. ಆದರೆ ಅವುಗಳನ್ನು ಈಗ ಬಹಿರಂಗ ಪಡಿಸುವುದಿಲ್ಲ. ಈ ಸಂಬಂಧ ತನಿಖೆ ಆರಂಭವಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥ ಓ.ಪಿ. ಸಿಂಗ್ ಶುಕ್ರವಾರ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv