Tag: Jaipur

  • ಲವ್ವರ್ ಜೊತೆ ಮದುವೆಯಾಗಲು ಬಯಸಿದ ಯುವತಿಗೆ 3 ಇಂಜೆಕ್ಷನ್ ನೀಡಿ 45ರ ವ್ಯಕ್ತಿಯ ಜೊತೆ ಮದ್ವೆ!

    ಲವ್ವರ್ ಜೊತೆ ಮದುವೆಯಾಗಲು ಬಯಸಿದ ಯುವತಿಗೆ 3 ಇಂಜೆಕ್ಷನ್ ನೀಡಿ 45ರ ವ್ಯಕ್ತಿಯ ಜೊತೆ ಮದ್ವೆ!

    ಜೈಪುರ: ಪ್ರೀತಿಸಿದವನ ಜೊತೆ ಮದುವೆಯಾಗಲು ಬಯಸಿದ ಯುವತಿಯನ್ನು ಬಲವಂತವಾಗಿ ಬೇರೆ ವ್ಯಕ್ತಿ ಜೊತೆ ಮದುವೆ ಮಾಡಿದ ಘಟನೆ ರಾಜಸ್ಥಾನದ ಕೈರುವಾಲಾ ಗ್ರಾಮದಲ್ಲಿ ನಡೆದಿದೆ.

    ಯುವತಿ ರಾಜಸ್ಥಾನದ ತಲವಾಡಾ ನಿವಾಸಿಯಾಗಿದ್ದು, ಯುವತಿ ಪ್ರೀತಿಸಿದವನ ಜೊತೆ ಮದುವೆಯಾಗಲು ಬಯಸಿದ್ದಳು. ಆದರೆ ಆಕೆಯ ಪೋಷಕರು ಈ ಮದುವೆಗೆ ನಿರಾಕರಿಸಿ, ಆಕೆ ಮಲಗಿರುವಾಗ ಆಕೆಯನ್ನು ಬೇರೆ ಗ್ರಾಮಕ್ಕೆ ಕರೆದುಕೊಂಡು ಹೋಗಿ, ಬಲವಂತವಾಗಿ ಮದುವೆ ಮಾಡಿಸಲಾಗಿದೆ ಎಂದು ಸರ್‍ಪಂಚ್ ರೋಶನ್ ಅರೋರಾ ಹೇಳಿದ್ದಾರೆ.

    ಜನರು ಬಲವಂತವಾಗಿ ಯುವತಿಯನ್ನು ಬೈಕಿನಲ್ಲಿ ತಳ್ಳುವಾಗ ಆಕೆ ನೆಲಕ್ಕೆ ಉರುಳಿ ಕಿರುಚಾಡಿದ್ದಾಳೆ. ಈಕೆಯ ಕಿರುಚಾಟದ ಧ್ವನಿಗೆ ಜನ ಗುಂಪು ಸೇರಿದ್ದರು. ಯುವತಿ ಕಿರುಚಾಡದಂತೆ ಮಾಡಲು ಆಕೆಗೆ 3 ಇಂಜೆಕ್ಷನ್ ನೀಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

    ಯುವತಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಸುಮಾರು 40-45 ವರ್ಷವಿರುವ ವ್ಯಕ್ತಿಯ ಜೊತೆ ಮದುವೆ ಮಾಡಿಸಲಾಗಿದೆ. ಜೋರಾಗಿ ಕಿರುಚಿ ಕಣ್ಣೀರಿಡುತ್ತಿದ್ದರೂ ಯಾರೂ ಆಕೆಯ ಸಹಾಯಕ್ಕೆ ಬರಲಿಲ್ಲ. ನಂತರ ಯುವತಿಯನ್ನು ರೂಮಿನಲ್ಲಿ ಕೂಡಿ ಹಾಕಿದ್ದರು. ಆಗ ಯುವತಿ ತನಗೆ ಆದ ಅನ್ಯಾಯದ ಬಗ್ಗೆ ಬರೆದು ಅದನ್ನು ಕಿಟಿಕಿಯಿಂದ ಹೊರಗೆ ಎಸೆಯುತ್ತಿದ್ದಳು. ನಂತರ ಸಂಜೆ 5 ಗಂಟೆ ವೇಳೆಗೆ ಯುವತಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಮತ್ತೆ ಆಕೆಯನ್ನು ಮತ್ತೆ ರೂಮಿನಲ್ಲಿ ಕೂಡಿ ಹಾಕಲಾಯಿತು ಎಂದು ರೋಶನ್ ಅರೋರಾ ಹೇಳಿದ್ದಾರೆ.

    ಈ ಘಟನೆಯ ಬಗ್ಗೆ ತಹಶೀಲ್ದಾರ್ ಮನ್ ಸಿಂಗ್ ಪ್ರಜಾಪಥ್ ಹಾಗೂ ಪೊಲೀಸರಿಗೆ ತಿಳಿಸಲಾಗಿತ್ತು. ಆದರೆ ಪೊಲೀಸರು ಸ್ಥಳಕ್ಕೆ ಬರುವ ಮೊದಲೇ ಯುವತಿಗೆ ಮದುವೆ ಆಗಿ ಬೇರೆ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಈಗ ಯುವತಿಯ ಪೋಷಕರ ಮೇಲೆ ಕೇಸ್ ದಾಖಲಾಗಿದೆ ಎಂದು ನಡೆದ ಘಟನೆ ಬಗ್ಗೆ ರೋಶನ್ ಅರೋರಾ ತಿಳಿಸಿದ್ದಾರೆ.

  • ಶೀಲ ಶಂಕಿಸಿ ಪತ್ನಿಯ ಮುಖಕ್ಕೆ ಆಸಿಡ್ ಎರಚಿದ ಪಾಪಿ ಪತಿ

    ಶೀಲ ಶಂಕಿಸಿ ಪತ್ನಿಯ ಮುಖಕ್ಕೆ ಆಸಿಡ್ ಎರಚಿದ ಪಾಪಿ ಪತಿ

    ಜೈಪುರ್: ಪತ್ನಿಯ ಶೀಲದ ಮೇಲೆ ಸಂಶಯ ಪಟ್ಟು ಆಕೆಯ ಮೇಲೆ ಆಸಿಡ್ ಎರಚಿದ ಘಟನೆ ಶನಿವಾರ ಸಂಜೆ ರಾಜಸ್ಥಾನದ ಜೈಪುರ್ ಜಿಲ್ಲೆಯ ಮಾಲಾಪದದಲ್ಲಿ ನಡೆದಿದೆ.

    ಭಾಗಿರಥಿ ಮಹಾಲಿಕ್ (45) ಪತ್ನಿಗೆ ಆಸಿಡ್ ಹಾಕಿದ ಆರೋಪಿ ಪತಿ. ಆಸಿಡ್ ದಾಳಿಯಿಂದ 40 ವರ್ಷದ ಮಹಿಳೆಯ ಮುಖ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಮಹಿಳೆ ಆಸಿಡ್ ದಾಳಿಯಿಂದ ಬಳಲುತ್ತಿದ್ದಾಗ ಅಕ್ಕಪಕ್ಕದ ಮನೆಯವರು ರಕ್ಷಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ನನ್ನ ತಂದೆ, ತಾಯಿಯ ಶೀಲದ ಮೇಲೆ ಯಾವಾಗಲೂ ಸಂಶಯಪಡುತ್ತಿದ್ದನು. ಮನೆಗೆ ಬಂದ ತಕ್ಷಣ ನನ್ನ ತಾಯಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದನು ಎಂದು 20 ವರ್ಷದ ಮಗಳೇ ತಂದೆಯ ವಿರುದ್ಧ ದೂರು ನೀಡಿದ್ದು, ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

    ಈ ಘಟನೆ ಶನಿವಾರ ನಡೆದಿದ್ದು, ಮನೆಗೆ ಬಂದ ತಕ್ಷಣ ಭಾಗಿರಥಿ ತನ್ನ ಹೆಂಡತಿಯ ಜೊತೆ ಜಗಳವಾಡಿ ಆಕೆಯ ಮೇಲೆ ಆಸಿಡ್ ಎರಚಿದ್ದಾನೆ. ಭಾನುವಾರ ಪೊಲೀಸರು ಭಾಗಿರಥಿಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ಭಾಗಿರಥಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಆತನ ಜಾಮೀನು ಅರ್ಜಿಯನ್ನು ಕೂಡ ತಿರಸ್ಕರಿಸಿದೆ ಎಂದು ಜೈಪುರ್ ನ ಉಪ-ವಿಭಾಗದ ಪೊಲೀಸ್ ಅಧಿಕಾರಿಯಾದ ಪ್ರಶಾಂತ್ ಕುಮಾರ್ ಮಾಲಾ ತಿಳಿಸಿದ್ದಾರೆ.

  • ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ತೊಗಾಡಿಯಾ

    ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ತೊಗಾಡಿಯಾ

    ಜೈಪುರ: ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ವಿಶ್ವಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದು, ತನ್ನನ್ನು ಎನ್ ಕೌಂಟರ್ ಮಾಡವ ಮಾಹಿತಿ ಲಭಿಸಿತ್ತು ಎಂದು ಹೇಳಿದ್ದಾರೆ.

    ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಬಿಜೆಪಿ ನಾಯಕರನ್ನು ಹೆಸರನ್ನು ಉಲ್ಲೇಖಿಸದೇ ರಾಜಸ್ಥಾನ ಹಾಗೂ ಗುಜರಾತ್ ಸರ್ಕಾರ ಸಂಸ್ಥೆಗಳು ತಮ್ಮ ವಿರುದ್ಧ ಕೆಲಸ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು. ಇದೇ ವೇಳೆ ಪೊಲೀಸರಿಗೆ ರಾಜಕೀಯ ಒತ್ತಡದಿಂದ ಕಾರ್ಯನಿರ್ವಹಿಸದಂತೆ ಮನವಿ ಮಾಡಿದರು.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 10 ವರ್ಷದ ಹಿಂದಿನ ಹಳೆಯ ಪ್ರಕರಣವೊಂದರಲ್ಲಿ ಟಾರ್ಗೆಟ್ ಮಾಡಲಾಗಿದ್ದು, ರಾಜಸ್ಥಾನ ಪೊಲೀಸರು ತನ್ನನ್ನು ಬಂಧನ ಮಾಡಲು ಆಗಮಿಸಿದ್ದರು. ಈ ವೇಳೆ ತಮ್ಮನ್ನು ಎನ್‍ಕೌಂಟರ್ ಮಾಡಲು ಪ್ಲಾನ್ ಮಾಡಲಾಗಿತ್ತು ಎನ್ನುವ ಮಾಹಿತಿ ಸಿಕ್ಕಿತ್ತು ಎಂದು ಹೇಳಿದರು.

    ಇದರಿಂದ ನನ್ನನ್ನು ಕೊಲೆ ಮಾಡಬಹುದೆಂಬ ಭೀತಿ ಉಂಟಾಯಿತು. ಸುರಕ್ಷತೆಗಾಗಿ ತಕ್ಷಣ ಕಚೇರಿಗೆ ತೆರಳಲು ನಿರ್ಧರಿಸಿ ಥಟ್ಲೆಜ್‍ನಲ್ಲಿರುವ ಕಾರ್ಯಕರ್ತರೊಬ್ಬರ ಮನೆಗೆ ತೆರಳಿದೆ. ಈ ಮುನ್ನ ನನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದೆ. ನಾನು ರಾಜಸ್ಥಾನ ಮುಖ್ಯಮಂತ್ರಿ ಮತ್ತು ಗೃಹಸಚಿವರನ್ನು ಸಂಪರ್ಕಿಸಿ ಮಾಹಿತಿ ಪಡೆದೆ. ರಾಜಸ್ಥಾನ ಸರ್ಕಾರದ ಆದೇಶವಿದೆ ಎಂದು ಅವರು ತಿಳಿಸಿದರು. ನಂತರ ರಾಜಸ್ಥಾನದಲ್ಲಿರುವ ನನ್ನ ವಕೀಲರ ಜತೆ ವಾರಂಟ್ ವಿಷಯ ತಿಳಿಸಿದೆ. ಬಳಿಕ ಜೈಪುರಕ್ಕೆ ವಿಮಾನದಲ್ಲಿ ತೆರಳಲು ನಿರ್ಧರಿಸಿ ಏರ್‍ಪೋರ್ಟ್ ಕಡೆಗೆ ಹೊರಡುವ ಮಾರ್ಗಮಧ್ಯೆ ಪ್ರಜ್ಞೆತಪ್ಪಿದೆ. ಬಳಿಕ ರಾತ್ರಿ ನಾನು ಆಸ್ಪತ್ರೆಯಲ್ಲಿದ್ದೇನೆ ಎಂಬುದು ಗೊತ್ತಾಯಿತು ಎಂದು ತೊಗಾಡಿಯಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಧ್ವನಿ ಅಡಗಿಸುವ ಯತ್ನ: ಕೆಲವರು ನನ್ನ ಧ್ವನಿಯನ್ನು ಅಡಗಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ರಾಮ ಮಂದಿರ ಗೋ ಹತ್ಯೆ ನಿಷೇಧ ಹಾಗೂ ರೈತರ ಅಭಿವೃದ್ಧಿ ಯೋಜನೆಗಳ ಬಗ್ಗೆ ಹೋರಾಟ ಮಾಡುತ್ತಿದ್ದು, ಈ ಕಾರಣದಿಂದಲೇ ತಮ್ಮನ್ನು ಗುರಿ ಮಾಡಲಾಗುತ್ತಿದೆ ಎಂದು ಹೇಳಿದರು.

    ಯಾರು ನಿಮ್ಮ ಮೇಲೆ ಮೇಲೆ ದಾಳಿ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾಧ್ಯಮವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಈಗ ಯಾರ ಮೇಲೂ ಆರೋಪ ಮಾಡಲು ಸಾಧ್ಯವಿಲ್ಲ. ಆದರೆ ಈ ಕುರಿತ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡುವ ಮೂಲಕ ಮಾತನಾಡಿತ್ತೇನೆ ಎಂದರು.

    ಇದೇ ವೇಳೆ ಪ್ರವೀಣ್ ತೊಗಾಡಿಯಾ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗಿದ್ದು, ಸಂಪೂರ್ಣ ಚೇತರಿಕೆ ಆಗುವವರೆಗೂ ಆಸ್ಪತ್ರಯಲ್ಲೇ ಹೆಚ್ಚಿನ ಚಿಕಿತ್ಸೆಯನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.

    12 ವರ್ಷಗಳ ಹಳೆಯ ಪ್ರಕರಣ: ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ತೊಗಾಡಿಯಾ ಅವರನ್ನು ಬಂಧನ ಮಾಡಲು ಸೋಮವಾರ ಬೆಳಗ್ಗೆ ರಾಜಸ್ಥಾನ ಪೊಲೀಸರು ಆಗಮಿಸದ ವೇಳೆ ಎ-ಝೆಡ್ ಭದ್ರತೆಯನ್ನು ಹೊಂದಿರುವ ಅವರು ಅಹಮದಾಬಾದ್ ನಗರದ ಪಾಲ್ಡಿ ಪ್ರದೇಶದ ತಮ್ಮ ನಿವಾಸದಿಂದ ಕಾಣೆಯಾಗಿದ್ದರು. ನಂತರ ಲೋ ಬಿಪಿ ಯಿಂದಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನ ಆಸ್ಪತ್ರೆಗೆ ಕರೆತರಲಾಗಿತ್ತು.

    ಹಳೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತೊಗಾಡಿಯಾ ವಿರುದ್ಧ ಐಪಿಸಿ ಸೆಕ್ಷನ್ 188 (ಸರ್ಕಾರಿ ಅಧಿಕಾರಿಯ ಆದೇಶ ಉಲ್ಲಂಘನೆ) ಅಡಿಯಲ್ಲಿ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು. ಅದರೆ ಅವರ ಮನೆಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ ವೇಳೆಯಲ್ಲಿ ಅವರು ಕಾಣೆಯಾಗಿದ್ದರು.

    ಪೊಲೀಸರು ತೊಗಾಡಿಯಾ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ವಿಹೆಚ್‍ಪಿ ಕಾರ್ಯಕರ್ತರು ಸೋಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಘೋಷಣೆಗಳನ್ನ ಕೂಗಿ, ಸರ್‍ಖೇಜ್- ಗಾಂಧಿನಗರ ಹೆದ್ದಾರಿಯಲ್ಲಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಕೂಡಲೇ ತೊಗಾಡಿಯ ಅವರು ಇರುವ ಸ್ಥಳವನ್ನು ಪತ್ತೆಹಚ್ಚಬೇಕೆಂದು ಆಗ್ರಹಿಸಿದ್ದರು.

    ಆದ್ರೆ ತೊಗಾಡಿಯಾ ಅವರನ್ನು ನಮ್ಮ ತಂಡ ಬಂಧಿಸಿಲ್ಲ ಎಂದು ರಾಜಸ್ಥಾನ ಪೊಲೀಸ್‍ನ ಹಿರಿಯ ಅಧಿಕಾರಿ ಅಲೋಕ್ ಕುಮಾರ್ ವಸಿಷ್ಠ ಸ್ಪಷ್ಟಪಡಿಸಿದ್ದರು.

    https://www.youtube.com/watch?v=nR9PoIhWD9M

  • ವಿಧವೆ ತಾಯಿಗೆ ವರನನ್ನು ಹುಡುಕಿ ಮದ್ವೆ ಮಾಡಿಸಿದ ಮಗಳು

    ವಿಧವೆ ತಾಯಿಗೆ ವರನನ್ನು ಹುಡುಕಿ ಮದ್ವೆ ಮಾಡಿಸಿದ ಮಗಳು

    ಜೈಪುರ: ಎಲ್ಲಾ ಸಾಮಾಜಿಕ ನಿಯಮಗಳ ವಿರುದ್ಧ ಹೋರಾಡಿ ವಿವಾಹಿತ ತಾಯಿಗೆ ಮರು ಮದುವೆ ಮಾಡಿಸಿದ ರಾಜಸ್ಥಾನದ ಹುಡುಗಿಯ ಕಥೆ ಇದು.

    ಸಂಹಿತಾ ಅಗರ್‍ವಾಲ್ ತನ್ನ ತಾಯಿಗೆ ಮರು ಮದುವೆ ಮಾಡಿಸಿ ಈಗ ಸುದ್ದಿಯಾಗಿದ್ದಾರೆ. ಎರಡು ವರ್ಷಗಳ ಹಿಂದೆ ತನ್ನ 52 ವರ್ಷದ ತಂದೆಯನ್ನು ಸಂಹಿತಾ ಅಗರ್‍ವಾಲ್ ಕಳೆದುಕೊಂಡಿದ್ದರು. ತಂದೆ ಮೃತಪಟ್ಟ ಬಳಿಕ ತಾಯಿ ಬೇಸರಗೊಂಡಿರುವುದನ್ನು ಗಮನಿಸಿ ಅವರ ಏಕಾಂಗಿತನವನ್ನು ದೂರ ಮಾಡಲು ಅವರ ಮನಒಲಿಸಿ ಮತ್ತೊಂದು ಮದುವೆ ಮಾಡಿ ಯಶಸ್ವಿಯಾಗಿದ್ದಾರೆ.

    ತಾಯಿಗೆ ಮದುವೆ ಮಾಡಿದ್ದು ಹೀಗೆ:
    ನನ್ನ ತಂದೆ ಸುಮಾರು 2 ವರ್ಷಗಳ ಹಿಂದೆ ನಿಧನರಾದದರು. ಈ ವಿಚಾರ ತಿಳಿದು ನನಗೆ, ಸಹೋದರಿ, ತಾಯಿಗೆ ಆಘಾತವಾಯಿತು. ಈ ನೋವನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೀವನವೇ ಬೇಡವೆನ್ನಿಸಿತು. ಈ ಮಧ್ಯೆ ಮುಂದೆ ಜೀವನದ ದಿಕ್ಕೆ ತೋಚದಂತೆ ಏನು ಮಾಡುವುದು ಎಂದು ಬೇಸರದಲ್ಲಿದ್ದೆವು. ಈ ವೇಳೆ ದುಃಖವನ್ನು ಮರೆಯಲು ನನ್ನ ಅಕ್ಕ ಕೆಲಸದಲ್ಲಿ ಬ್ಯುಸಿಯಾದರು. ಆದರೆ ನನಗೆ ಮತ್ತು ತಾಯಿಗೆ ಅಪ್ಪನ ಕಳೆದುಕೊಂಡ ನೋವನ್ನು ಮರೆಯಲು ಸಾಧ್ಯವಾಗಲಿಲ್ಲ.

    ಎಂದಿನಂತೆ ನಾನು ಪ್ರತಿದಿನ ಕೆಲಸ ಮುಗಿಸಿ ಕಚೇರಿಯಿಂದ ಹೋಗುತ್ತಿದ್ದೆ. ಆದರೆ ಕೆಲಸ ಮುಗಿಸಿ ಮನೆಗೆ ಬರುವಾಗ ಅಮ್ಮ ಮನೆಯ ಹೊರಗಡೆ ದುಃಖದಲ್ಲಿ ಕುಳಿತಿರುತ್ತಿದ್ದರು. ನನ್ನ ಜೊತೆ ಕೂಡ ಮಾತನಾಡುತ್ತಿರಲಿಲ್ಲ. ಬಳಿಕ ನಾನೇ ಕೆಲವು ದಿನಗಳವರೆಗೆ ಅವರೇ ಪತಿ ಕಳೆದುಕೊಂಡ ನೋವು, ಯೋಚನೆಗಳಿಂದ ಹೊರ ಬಂದು ಮಾತನಾಡಿಸುತ್ತಾರೆ ಎಂದು ಸುಮ್ಮನಾದೆ.

    ತಿಂಗಳುಗಳು ಕಳೆದು ಹೋದರೂ ಅಮ್ಮ ಅವರ ನೋವಿನಿಂದ ಹೊರ ಬರಲೇ ಇಲ್ಲ. ಮೌನವಾಗಿಯೇ ಇದ್ದರು. ಈ ಸಂದರ್ಭದಲ್ಲಿ ನಾನು ಕೆಲಸಕ್ಕಾಗಿ ಅಮ್ಮನನ್ನು ಬಿಟ್ಟು ಮನೆಯಿಂದ ದೂರ ಹೋಗಬೇಕಾದ ಸಂದರ್ಭ ಬಂತು. ಆದರೆ ನನಗೆ ತಾಯಿಯನ್ನು ಬಿಟ್ಟು ಹೋಗುವುದಕ್ಕೆ ಮನಸ್ಸಾಗಲಿಲ್ಲ. ಅದಕ್ಕಾಗಿ ಕಷ್ಟವಾದರೂ ಪರವಾಗಿಲ್ಲ ಎಂದು ನಮ್ಮ ನಗರದಲ್ಲಿ ಕೆಲಸವನ್ನು ಪಡೆಯಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗದೇ ಕೊನೆಗೆ ನಾನು ಅಮ್ಮನ ಬಿಟ್ಟು ಬೇರೆ ಹೋಗಲೇಬೇಕಾಯಿತು. ಅಮ್ಮನನ್ನು ಬಿಟ್ಟು ಹೋಗಿದ್ದಕ್ಕೆ ನನ್ನನ್ನು ನಾನೇ ಶಪಿಸಿಕೊಂಡೆನು. ದೂರ ಹೋದರೂ ಪ್ರತಿ ವಾರ ಎರಡು ದಿನ ಅಮ್ಮನನ್ನು ಭೇಟಿಯಾಗುಲು ಬರುತ್ತಿದ್ದೆ. ಇದರಿಂದ ಅವರಿಗೂ ಸಂತೋಷವಾಗುತ್ತಿತ್ತು. ಆದರೆ ನಾನು ನನ್ನ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಂಡು ಸ್ವಾರ್ಥಿಯಾಗಿದ್ದೇನೆ ಎನ್ನಿಸಿತು. ಆದರೆ ಅಮ್ಮ ಯಾವಾಗಲೂ ನಿನ್ನ ಕೆಲಸವನ್ನು ಕಳೆದುಕೊಳ್ಳಬೇಡ ಎಂದು ಧೈರ್ಯ ಹೇಳುತ್ತಿದ್ದರು.

    ಮೂರು ತಿಂಗಳ ಬಳಿಕ ನಾನು ಯೋಚನೆ ಮಾಡಿ ತಾಯಿಗಾಗಿ ಸಂಗಾತಿಯನ್ನು ಹುಡುಕಲು ನಿರ್ಧಾರ ಮಾಡಿಕೊಂಡೆ. ಅವರ ಸಂತೋಷ ಮತ್ತು ಭರವಸೆ, ನೋವುಗಳನ್ನು ಹಂಚಿಕೊಳ್ಳಲು ಒಬ್ಬ ಜೀವನ ಸಂಗಾತಿಯ ಅವಶ್ಯಕತೆ ಇದೆ ಎಂದು ಈ ನಿರ್ಧಾರ ಮಾಡಿದೆ. ನಂತರ ತಾಯಿ ಹೆಸರಿನಲ್ಲಿ ಮ್ಯಾಟ್ರಿಮೋನಿಯ ವೆಬ್‍ಸೈಟ್‍ನಲ್ಲಿ ಒಂದು ಖಾತೆಯನ್ನು ಸೃಷ್ಟಿಸಿ ಅನೇಕ ವರಗಳನ್ನು ಹುಡುಕಾಡಿದೆ. ಯಾರು ಕೂಡ ನನಗೆ ಒಪ್ಪಿಗೆಯಾಗಿಲ್ಲ. ಅಂತಿಮವಾಗಿ ಒಬ್ಬರು ನನಗೆ ಇಷ್ಟವಾದರು. ಅವರು ಕೂಡ ನನ್ನ ಅಮ್ಮನಂತೆಯೇ ಸರ್ಕಾರಿ ಕೆಲಸವನ್ನು ಹೊಂದಿದ್ದರು. ಜೊತೆಗೆ ಬುದ್ಧಿವಂತ ಮತ್ತು ಪ್ರೌಢರಾಗಿದ್ದರು.

    ಸಂಗಾತಿಯನ್ನು ಹುಡುಕುವ ಕೆಲಸ ಮುಗಿದರೂ ತಾಯಿಯನ್ನು ಒಪ್ಪಿಸುವುದು ತುಂಬಾ ಕಷ್ಟವೆನಿಸಿತು. ಆದರೂ ಬಿಡದೇ ಅಮ್ಮನ ಜೊತೆ ಮಾತನಾಡಿದೆ. ಅಮ್ಮ ಈ ಭೂಮಿಯ ಮೇಲೆ ಇರುವ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಜೀವನವನ್ನು ತಮಗೆ ಇಷ್ಟವಾದ ರೀತಿಯಲ್ಲಿ ಬದುಕುವ ಹಕ್ಕನ್ನು ಹೊಂದಿದ್ದಾರೆ. ಏಕೆಂದರೆ ಈ ಸಮಾಜದಲ್ಲಿ ವಯಸ್ಸಾದ ಮೇಲೆ ನಮ್ಮೊಂದಿಗೆ ಯಾರು ಇರುವುದಿಲ್ಲ. ನಮಗೆ ಅನಾರೋಗ್ಯ ಸಮಸ್ಯೆ ಎದುರಾದಾಗ ನಮ್ಮ ಸಹಾಯಕ್ಕೆ ಸಂಬಂಧಿಕರು ಯಾರು ಬರುವುದಿಲ್ಲ. ಆದ್ದರಿಂದ ನಮ್ಮ ಜೀವನದ ಸಂಗಾತಿ ಮಾತ್ರ ನಮ್ಮ ಜೊತೆ ಕೊನೆತನಕ ಇರುತ್ತಾರೆ. ನಿಮ್ಮ ಜೀವನದಲ್ಲಿ ಇರುವ ಭಾವನೆಗಳನ್ನು ಹಂಚಿಕೊಳ್ಳಲು ಒಬ್ಬ ಸಂಗಾತಿಯ ಅಗತ್ಯವಿದೆ ಯೋಚಿಸಿ ಎಂದು ನಾನು ತಾಯಿಗೆ ತಿಳಿಸಿದೆ.

    ನಾನು ಇಷ್ಟೆಲ್ಲ ವಿವರವಾಗಿ ವಿವರಿಸಿದ ಮೇಲೆ ಅಂತಿಮವಾಗಿ ತಾಯಿ ಮದುವೆಗೆ ಒಪ್ಪಿಗೆ ಸೂಚಿಸಿದರು. ಕೆಲ ದಿನದ ಹಿಂದೆ ತಾಯಿಯ ಮದುವೆ ನಡೆದಿದ್ದು, ಈಗ ನೋವುಗಳನ್ನು ಮರೆತು ಅವರು ತುಂಬಾ ಸಂತೋಷವಾಗಿದ್ದಾರೆ ಎಂದು ಸಂಹಿತಾ ಹೇಳಿದರು.

  • ಸೂಪರ್ ಬೈಕ್ ಚಾಲನೆ ಮಾಡ್ತಿದ್ದಾಗ ಅಪಘಾತ- ಹೆಲ್ಮೆಟ್ ತೆಗೆಯಲಾಗದೆ ವ್ಯಕ್ತಿ ಸಾವು

    ಸೂಪರ್ ಬೈಕ್ ಚಾಲನೆ ಮಾಡ್ತಿದ್ದಾಗ ಅಪಘಾತ- ಹೆಲ್ಮೆಟ್ ತೆಗೆಯಲಾಗದೆ ವ್ಯಕ್ತಿ ಸಾವು

    ಜೈಪುರ: 30 ವರ್ಷದ ವ್ಯಕ್ತಿಯೊಬ್ಬರು ಸೂಪರ್ ಬೈಕ್ ಚಾಲನೆ ಮಾಡುತ್ತಿದ್ದಾಗ ಅಪಘಾತಕ್ಕೀಡಾಗಿ ಸಾವನ್ನಪ್ಪಿರೋ ಘಟನೆ ಬುಧವಾರದಂದು ರಾಜಸ್ಥಾನದ ಜೈಪುರ್‍ನಲ್ಲಿ ನಡೆದಿದೆ.

    ಬೈಕರ್ ರೋಹಿತ್ ಸಿಂಗ್ ಶೆಖಾವತ್ ಬುಧವಾರ ರಾತ್ರಿ ತನ್ನ ಸೂಪರ್ ಬೈಕ್, ಕವಾಸಾಕಿ ನಿಂಜಾ ಝೆಡ್‍ಎಕ್ಸ್ 10ಆರ್ ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ರೋಹಿತ್ ಧರಿಸಿದ್ದ ಹೆಲ್ಮೆಟ್ ತೆಗೆಯಲಾಗದ ಕಾರಣ ಬ್ರೇನ್ ಹ್ಯಾಮೊರೇಜ್ (ಮೆದುಳಿನ ರಕ್ತಸ್ರಾವ)ದಿಂದ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.

    ರೋಹಿತ್ ಆಟೋಮೋಟಿವ್ ಸಂಸ್ಥೆಯೊಂದರಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದರು. ಅವರ ಬೈಕ್ ಸುಮಾರು 22 ಲಕ್ಷ ರೂ ಮೌಲ್ಯದ್ದಾಗಿದ್ದು, ಗಂಟೆಗೆ 300 ಕಿ.ಮೀ ನಷ್ಟು ವೇಗವನ್ನ ತಲುಪುವ ಸಾಮರ್ಥ್ಯ ಹೊಂದಿದೆ. ಕೆಲವು ವರದಿಗಳ ಪ್ರಕಾರ ರೋಹಿತ್ 50 ಸಾವಿರ ರೂ. ಮೌಲ್ಯದ ಇಂಪೋರ್ಟೆಡ್ ಹೆಲ್ಮೆಟ್ ಧರಿಸಿದ್ದರು. ಅತೀ ವೇಗದಲ್ಲಿ ಚಾಲನೆ ಮಾಡುವಾಗಲೂ ಅಲುಗಾಡದಂತೆ ಈ ಹೆಲ್ಮೆಟ್ ವಿನ್ಯಾಸ ಮಾಡಲಾಗಿರುತ್ತದೆ.

    ರೋಹಿತ್ ಅವರು ಇಲ್ಲಿನ ಜೆಎಲ್‍ಎನ್ ಮಾರ್ಗ್‍ನಲ್ಲಿ ಹೋಗುವಾಗ ರಸ್ತೆ ದಾಟುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆಯೋದು ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ಕಳೆದುಕೊಂಡಿದ್ದಾರೆ. ಈ ವೇಳೆ ರಸ್ತೆ ದಾಟುತ್ತಿದ್ದವರಿಗೆ ಗುದ್ದಿದ್ದು, ಬೈಕ್ ಸ್ಕಿಡ್ ಆಗಿ ಸುಮಾರು 50 ಅಡಿಗಳಷ್ಟು ದೂರ ರೋಹಿತ್‍ರನ್ನ ಎಳೆದುಕೊಂಡು ಹೋಗಿದೆ.

    ರಸ್ತೆ ಮೇಲೆ ಬಿದ್ದಿದ್ದ ರೋಹಿತ್‍ಗೆ ತೀವ್ರ ರಕ್ತಸ್ರಾವವಾಗಿದ್ದು, ಸ್ಥಳದಲ್ಲಿದ್ದವರು ರೋಹಿತ್ ಧರಿಸಿದ್ದ ಹೆಲ್ಮೆಟ್ ತೆಗೆಯಲು ಪ್ರಯತ್ನಿಸಿದ್ದಾರೆ. ಆದ್ರೆ ಹೆಲ್ಮೆಟ್ ತೆಗೆಯಲು ಆಗಿರಲಿಲ್ಲ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ವೈದ್ಯರು ಹೆಲ್ಮೆಟ್ ಕಟ್ ಮಾಡಿ ತೆಗೆಯಬೇಕಾಯ್ತು ಎಂದು ವರದಿಯಾಗಿದೆ.

    ಅತ್ತ ರೋಹಿತ್ ಅವರ ಬೈಕ್ ಗುದ್ದಿದ ವ್ಯಕ್ತಿಗೂ ಗಂಭೀರ ಗಾಯಗಳಾಗಿವೆ. ರೋಹಿತ್ ಅವರ ಬೈಕ್ ನಜ್ಜುಗುಜ್ಜಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • “ಪ್ರತಿಕೃತಿಯನ್ನು ದಹಿಸೋದು ಮಾತ್ರವಲ್ಲ, ನೇಣು ಹಾಕ್ತೀವಿ” ಎಂಬ ಬರಹದ ಪಕ್ಕ ವ್ಯಕ್ತಿಯ ಶವ ಪತ್ತೆ

    “ಪ್ರತಿಕೃತಿಯನ್ನು ದಹಿಸೋದು ಮಾತ್ರವಲ್ಲ, ನೇಣು ಹಾಕ್ತೀವಿ” ಎಂಬ ಬರಹದ ಪಕ್ಕ ವ್ಯಕ್ತಿಯ ಶವ ಪತ್ತೆ

    ಜೈಪುರ: ಬಾಲಿವುಡ್‍ನ ಪದ್ಮಾವತಿ ಚಿತ್ರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದ್ಯಾ ಎಂಬ ಅನುಮಾನ ಮೂಡಿಸುವಂತಹ ಘಟನೆಯೊಂದು ನಡೆದಿದೆ.

    ಜೈಪುರದ ನಹಾರ್ ಘರ್ ಕೋಟೆಯ ಬಳಿ ಇಂದು ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಶವದ ಬಳಿ ಇರುವ ಕಲ್ಲುಗಳ ಮೇಲೆ ನಾವು ಪ್ರತಿಕೃತಿಯನ್ನು ದಹಿಸುವುದು ಮಾತ್ರವಲ್ಲ, ನೇಣು ಹಾಕ್ತೀವಿ” ಎಂದು ಬರೆಯಲಾಗಿದೆ. ಮತ್ತೊಂದು ಕಲ್ಲಿನ ಮೇಲೆ “ಪದ್ಮಾವತಿಗೆ ವಿರೋಧ” ಎಂದು ಬರೆದಿರುವುದು ಪತ್ತೆಯಾಗಿದೆ.

    ವರದಿಯ ಪ್ರಕಾರ ಮೃತ ವ್ಯಕ್ತಿಯನ್ನು 40 ವರ್ಷದ ಚೇತನ್ ಕುಮಾರ್ ಸೈನಿ ಎಂದು ಗುರುತಿಸಲಾಗಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ಸದ್ಯಕ್ಕೆ ಸ್ಪಷ್ಟವಾಗಿಲ್ಲ. ರಾಜಸ್ಥಾನ ಪೊಲೀಸರು ಇದನ್ನ ಕೊಲೆ ಎಂದು ಪರಿಗಣಿಸಿದ್ದಾರಾದ್ರೂ, ಪದ್ಮಾವತಿ ಚಿತ್ರಕ್ಕೂ ಇದಕ್ಕೂ ಸಂಬಂಧವಿದ್ಯಾ ಎಂಬ ಬಗ್ಗೆ ಹೇಳಿಲ್ಲ.

    ಪದ್ಮಾವತಿ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿರೋ ಶ್ರೀ ರಜಪೂತ್ ಕಾರ್ಣಿ ಸೇನಾ, ಈ ಘಟನೆಯಲ್ಲಿ ನಾವು ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಇದೇ ತಿಂಗಳ ಆರಂಭದಲ್ಲಿ ಕರ್ಣಿ ಸೇನಾ ಕಾರ್ಯಕರ್ತರು ರಾಜಸ್ಥಾನದ ಕೋಟಾದಲ್ಲಿ ಪದ್ಮಾವತಿ ಚಿತ್ರದ ಟ್ರೇಲರ್ ಪ್ರದರ್ಶಿಸುತ್ತಿದೆ ಎಂಬ ವರದಿಯ ಮೇಲೆ ಚಿತ್ರಮಂದಿರವನ್ನ ಧ್ವಂಸಗೊಳಿಸಿದ್ದರು.

    ಇಂದು ಕೂಡ ದೆಹಲಿಯ ಆಜಾದ್‍ಪುರ್ ಮೆಟ್ರೋ ನಿಲ್ದಾಣದ ಬಳಿ ಜನರ ಗುಂಪು ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಿದೆ. ರಾಷ್ಟ್ರೀಯ ಚೇತನ ಮಂಚ್ ಎಂಬ ಸಂಘಟನೆಯವರು ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿಯ ಪ್ರತಿಕೃತಿ ದಹಿಸಿದ್ದಾರೆ.

    ಡಿಸೆಂಬರ್ 1ಕ್ಕೆ ಪದ್ಮಾವತಿ ಚಿತ್ರ ಬಿಡುಗಡೆಯಾಗಬೇಕಿತ್ತು. ಆದ್ರೆ ಸದ್ಯ ಬಿಡುಗಡೆ ದಿನಾಂಕವನ್ನ ಮುಂದೂಡಲಾಗಿದೆ.

    ಏನಿದು ವಿವಾದ?: ಪದ್ಮಾವತಿ ಸಿನಿಮಾ ಸೆಟ್ಟೇರಿದಾಗಿನಿಂದಲೂ ವಿವಾದವು ಹುಟ್ಟಿಕೊಂಡಿದೆ. ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮಾತ್ರ ಪದ್ಮಾವತಿ ನಡುವೆ ರೊಮ್ಯಾಂಟಿಕ್ ಸೀನ್ ಗಳಿವೆ. ಇನ್ನೂ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ರಾಣಿ ಪದ್ಮಾವತಿ ಕುರಿತಾಗಿ ಸಿನಿಮಾ ಮಾಡಲಿದ್ದೇನೆಂದು ಬನ್ಸಾಲಿ ಹೇಳಿಕೊಂಡಾಗ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಆರಂಭದಲ್ಲಿ ಚಿತ್ರೀಕರಣದ ವೇಳೆ ರಜಪೂತ್ ಕರ್ಣಿ ಸೇನಾದ ಸದಸ್ಯನೋರ್ವ ಬನ್ಸಾಲಿ ಅವರ ಕಪಾಳಕ್ಕೆ ಹೊಡೆದಿದ್ದನು. ಇನ್ನೂ ಮಹಾರಾಷ್ಟ್ರದ ಕೋಲಾಪುರದಲ್ಲಿ ಚಿತ್ರೀಕರಣದ ಸೆಟ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಘಟನೆ ವೇಳೆ ಯಾರಿಗೂ ಯಾವುದೇ ಅಪಾಯವಾಗಿರಲಿಲ್ಲ.

    ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಪದ್ಮಾವತಿ ನಡುವೆ ಯಾವುದೇ ರೊಮ್ಯಾಂಟಿಕ್ ಸೀನ್ ಗಳಿಲ್ಲ ಎಂದು ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾದಲ್ಲಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ. ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಮತ್ತು ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸಿದ್ದಾರೆ.

  • ಕಳ್ಳತನ ಮಾಡಿದ್ದ ಕಾರಿನಲ್ಲೇ ಎಟಿಎಂ ಮೆಷಿನ್ ಹೊತ್ತೊಯ್ದ ಖದೀಮರು

    ಕಳ್ಳತನ ಮಾಡಿದ್ದ ಕಾರಿನಲ್ಲೇ ಎಟಿಎಂ ಮೆಷಿನ್ ಹೊತ್ತೊಯ್ದ ಖದೀಮರು

    ಜೈಪುರ: ಸಾಮಾನ್ಯವಾಗಿ ಕಳ್ಳರು ಎಟಿಎಂಗೆ ಹೋಗಿ ಹಣವನ್ನು ಕದ್ದು ಪರಾರಿಯಾಗುತ್ತಾರೆ. ಆದರೆ ಇಲ್ಲಿ ಕಳ್ಳತನ ಮಾಡಲು ಬಂದು ಎಟಿಎಂ ಮೆಷಿನನ್ನೇ ಕದ್ದಿದ್ದಲ್ಲದೇ ಕಳ್ಳತನ ಮಾಡಿದ್ದ ಕಾರಿನಲ್ಲೇ ಅದನ್ನ ಇಟ್ಟುಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ರಾಜಸ್ಥಾನದ ಜೈಪುರ ಸಮೀಪದ ಬಂಡಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

    ಪೊಲೀಸರ ಪ್ರಕಾರ, ಮಾಸ್ಕ್ ಧರಿಸಿದ್ದ ಐವರು ಯುವಕರು ನೈನ್ವಾ ರಸ್ತೆಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಎಟಿಮ್ ಗೆ ಹೋಗಿದ್ದಾರೆ. ಮೊದಲು ಕರೆಂಟ್ ವೈರ್‍ಗಳನ್ನು ಕಟ್ ಮಾಡಿದ್ದಾರೆ. ನಂತರ ಎಟಿಎಂ ಮಷಿನ್ ಬೇರ್ಪಡಿಸಿ ಹೊರಗಡೆ ನಿಲ್ಲಿಸಿದ್ದ ವಾಹನದಲ್ಲಿ ಇಟ್ಟಿದ್ದಾರೆ. ಈ ವಾಹನವನ್ನ ಕೂಡ ಅದೇ ಪ್ರದೇಶದಲ್ಲಿ ಕಳ್ಳತನ ಮಾಡಿ ತಂದಿದ್ದರು. ನಂತರ ಎಟಿಎಂ ಮೆಷಿನ್ ಇಟ್ಟುಕೊಂಡು ವಾಹನದಲ್ಲಿ ಪರಾರಿಯಾಗಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಕಳ್ಳರು ಮುಖಕ್ಕೆ ಮಾಸ್ಕ್ ಧರಿಸಿ ಬಂದಿದ್ದರಿಂದ ಯಾರೊಬ್ಬರ ಗುರುತು ಕೂಡ ಪತ್ತೆಯಾಗಲಿಲ್ಲ. ನೈನ್ವಾ ರಸ್ತೆಯ ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡ್ ನಿಯೋಜಿಸಿರಲಿಲ್ಲ. ಆದ ಕಾರಣ ಕಳ್ಳರು ಇದೇ ಎಟಿಎಂ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬ್ಯಾಂಕ್ ಉದ್ಯಮಿಯೊಬ್ಬರು ಮುಂಜಾನೆ ವಾಕ್ ಮಾಡಲು ಬಂದಾಗ ಕಳ್ಳತನವಾಗಿರೋದು ಬೆಳಕಿಗೆ ಬಂದಿದೆ. ತಕ್ಷಣ ಅವರು ಬ್ಯಾಂಕ್ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

    ಎಟಿಎಂನಲ್ಲಿ ಸುಮಾರು 5 ಲಕ್ಷ ರೂ. ಹಣವಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

  • ನನ್ನ ಕೆಲಸದ ಸಮಯ ಮುಗೀತು ಎಂದ ಪೈಲಟ್- ಪ್ರಯಾಣಿಕರು ಬಸ್‍ನಲ್ಲಿ ಹೋಗ್ಬೇಕಾಯ್ತು

    ನನ್ನ ಕೆಲಸದ ಸಮಯ ಮುಗೀತು ಎಂದ ಪೈಲಟ್- ಪ್ರಯಾಣಿಕರು ಬಸ್‍ನಲ್ಲಿ ಹೋಗ್ಬೇಕಾಯ್ತು

    ಜೈಪುರ: ನನ್ನ ಕೆಲಸದ ಸಮಯ ಮುಗಿಯಿತು ಎಂದು ಹೇಳಿ ಪೈಲಟ್ ವಿಮಾನ ಹಾರಿಸಲು ನಿರಾಕರಿಸಿದ ಕಾರಣ ಅಲಯನ್ಸ್ ಏರ್ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ 40 ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ.

    ಜೈಪುರದಿಂದ ದೆಹಲಿಗೆ ಹೋಗಬೇಕಿದ್ದ ಪ್ರಯಾಣಿಕರಲ್ಲಿ ಕೆಲವರನ್ನು ಬಸ್ ಮೂಲಕ ದೆಹಲಿಗೆ ಕಳಿಸಲಾಗಿದೆ. ಇನ್ನೂ ಕೆಲವರಿಗೆ ಹೋಟೆಲ್‍ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಯ್ತು, ಉಳಿದವರನ್ನ ಇಂದು ಬೆಳಗ್ಗಿನ ವಿಮಾನದಲ್ಲಿ ಕಳಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

    ಪೈಲಟ್‍ನ ಕೆಲಸದ ಸಮಯ ಮುಗಿದಿತ್ತು. ಹೀಗಾಗಿ ಅವರು ವಿಮಾನ ಹಾರಿಸಲು ಸಾಧ್ಯವಿರಲಿಲ್ಲ ಎಂದು ಜೈಪುರದ ಸಂಗನೇರ್ ವಿಮಾನ ನಿಲ್ದಾಣದ ನಿರ್ದೇಶಕರಾದ ಜೆಎಸ್ ಬಲ್ಹಾರಾ ಹೇಳಿದ್ದಾರೆ.

    ನಾಗರೀಕ ವಿಮಾನಯಾನ ನಿರ್ದೇಶನಾಲಯದ ನಿಯಮಗಳ ಪ್ರಕಾರ ಸುರಕ್ಷತೆಯ ಕಾರಣದಿಂದ ಪೈಲಟ್ ಕೆಲಸದ ಸಮಯವನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

    ಕಳೆದ ರಾತ್ರಿ ದೆಹಲಿಯಿಂದ ಬರಬೇಕಿದ್ದ ವಿಮಾನದ ಪೈಲಟ್ ಹಾಗೂ ಸಿಬ್ಬಂದಿ ಮತ್ತೆ ಜೈಪುರದಿಂದ ದೆಹಲಿಯ ವಿಮಾನದಲ್ಲಿ ಕಾರ್ಯ ನಿರ್ವಹಿಸಬೇಕಿತ್ತು. ಆದ್ರೆ ದೆಹಲಿ ವಿಮಾನ ತಡವಾಗಿದ್ದು, ಮಧ್ಯರಾತ್ರಿ 1.30ಕ್ಕೆ ಜೈಪುರದಲ್ಲಿ ಲ್ಯಾಂಡ್ ಆಯಿತು ಎಂದು ಏರ್ ಇಂಡಿಯಾ ಸ್ಟೇಷನ್ ಕಚೇರಿ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

    ನಾಗರೀಕ ವಿಮಾನಯಾನ ನಿರ್ದೇಶನಾಲಯ ಸೂಚಿಸಿರುವ ನಿಯಮದಿಂದಾಗಿ ಪೈಲಟ್ ಮತ್ತೆ ವಿಮಾನ ಹಾರಿಸಲು ನಿರಾಕರಿಸಿದ್ರು ಎಂದು ತಿಳಿಸಿದ್ದಾರೆ.

  • ಟಿ20ಯಲ್ಲಿ ಒಂದು ರನ್ ನೀಡದೇ ಎಲ್ಲ 10 ವಿಕೆಟ್: ರಾಜಸ್ಥಾನ ಬೌಲರ್ ವಿಶೇಷ ಸಾಧನೆ

    ಟಿ20ಯಲ್ಲಿ ಒಂದು ರನ್ ನೀಡದೇ ಎಲ್ಲ 10 ವಿಕೆಟ್: ರಾಜಸ್ಥಾನ ಬೌಲರ್ ವಿಶೇಷ ಸಾಧನೆ

    ಜೈಪುರ: ರಾಜಸ್ಥಾನ ದೇಶೀಯ ಟಿ20 ಕ್ರಿಕೆಟ್ ಪಂದ್ಯದಲ್ಲಿ ಯುವ ಬೌಲರ್ ಒಬ್ಬ ಒಂದು ರನ್ ನೀಡದೆ ಇನ್ನಿಂಗ್ಸ್ ಎಲ್ಲಾ ಹತ್ತು ವಿಕೆಟ್‍ಗಳನ್ನು ಪಡೆದಿರುವ ಅಪರೂಪದ ಸಾಧನೆಯನ್ನು ಮಾಡಿದ್ದಾರೆ.

    ಜೈಪುರದ ಆಕಾಶ್ ಚೌಧರಿ(15) ಈ ವಿಶೇಷ ಸಾಧನೆಯನ್ನು ನಿರ್ಮಿಸಿದ್ದಾರೆ. ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ತಾತನ ನೆನಪಿಗಾಗಿ ಆಯೋಜಿಸಿದ್ದ ಭಾವೇಶ್ ಸಿಂಗ್ ಸ್ಮಾರಕ ಟೂರ್ನಿಯಲ್ಲಿ ಆಕಾಶ್ ಅಪರೂಪದ ಸಾಧನೆ ಮಾಡಿದ್ದಾರೆ.

    ದೀಕ್ಷಾ ಕ್ರಿಕೆಟ್ ಆಕಾಡೆಮಿ ತಂಡದ ಎಡಗೈ ವೇಗದ ಬೌಲರ್ ಆಗಿರುವ ಆಕಾಶ್ ತಮ್ಮ ಎದುರಾಳಿ ಪರ್ಲ್ ಅಕಾಡೆಮಿ ತಂಡ ಎಲ್ಲಾ ವಿಕೆಟ್‍ಗಳನ್ನು ಉಳಿಸಿದ್ದಾರೆ.

    ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪರ್ಲ್ ಅಕಾಡೆಮಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡು ನಿಗಧಿತ 20 ಓವರ್‍ಗಳಲ್ಲಿ ದೀಕ್ಷಾ ತಂಡವನ್ನು 156 ರನ್‍ಗಳಿಗೆ ಕಟ್ಟಿ ಹಾಕಲು ಸಫಲವಾಯಿತು.

    ದೀಕ್ಷಾ ತಂಡದ ಬೃಹತ್ ಮೊತ್ತವನ್ನು ಬೆನ್ನತ್ತಿದ ಪರ್ಲ್ ಅಕಾಡೆಮಿ ತಂಡ 36 ರನ್ ಗಳಿಸಿದ ಸಂದರ್ಭದಲ್ಲಿ ಆಕಾಶ್ ಚೌಧರಿ ಬೌಲಿಂಗ್‍ನಲ್ಲಿ ಸರ್ವ ಪತನವಾಯಿತು. ಆಕಾಶ್ ಮೊದಲ ಓವರ್‍ನಲ್ಲಿ ಎರಡು ವಿಕೆಟ್ ಉಳಿಸಿದರೆ, ಎರಡು ಮತ್ತು ಮೂರನೇ ಓವರ್‍ನಲ್ಲಿ ತಲಾ ಎರಡು ವಿಕೆಟ್ ಪಡೆದರು. ಕೊನೆಯ ಓವರ್‍ನಲ್ಲಿ ಹ್ಯಾಟ್ರಿಕ್ ಒಳಗೊಂಡಂತೆ ನಾಲ್ಕು ವಿಕೆಟ್ ಕಬಳಿಸಿದರು. ಆಕಾಶ್ ತಮ್ಮ ನಾಲ್ಕು ಓವರ್ ಗಳಲ್ಲಿ ಒಂದು ರನ್ ಅನ್ನು ಎದುರುರಾಳಿ ತಂಡಕ್ಕೆ ಬಿಟ್ಟುಕೊಡದಿರುವುದು ಗಮನರ್ಹ ಸಂಗತಿಯಾಗಿದೆ.

    2002 ರಲ್ಲಿ ಜನಿಸಿರುವ ಆಕಾಶ್ ಚೌಧರಿ ಮೂಲತಃ ರಾಜಸ್ಥಾನ ಹಾಗೂ ಉತ್ತರ ಪ್ರದೇಶ ಗಡಿ ಜಿಲ್ಲೆಯಾದ ಭರತ್‍ಪುರ್ ನಿವಾಸಿಯಾಗಿದ್ದಾರೆ.

  • ಮದುವೆಗೆ ಒಲ್ಲೆ ಎಂದಿದ್ದಕ್ಕೆ ಯುವತಿಗೆ ಬೆಂಕಿ ಹಚ್ಚಿದ್ರು!

    ಮದುವೆಗೆ ಒಲ್ಲೆ ಎಂದಿದ್ದಕ್ಕೆ ಯುವತಿಗೆ ಬೆಂಕಿ ಹಚ್ಚಿದ್ರು!

    ಜೈಪುರ: ಮದುವೆಯಯಾಗಲು ನಿರಾಕರಿಸಿದ್ದಾಳೆ ಎನ್ನುವ ಕ್ಷುಲಕ್ಕ ಕಾರಣಕ್ಕೆ ಯುವತಿಗೆ ಯುವಕ ಮತ್ತು ಆತನ ತಂದೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ರಾಜಸ್ಥಾನದ ಬಾಣಸ್ವಾರ ಜಿಲ್ಲೆಯ ಐಸಲ್ರ್ವಾದಲ್ಲಿ ಘಟನೆ ನಡೆದಿದ್ದು, 18 ವರ್ಷದ ಯುವತಿಯನ್ನು ಸೀಮಾ ಎಂದು ಗುರುತಿಸಲಾಗಿದೆ.

    ತನ್ನನ್ನು ಮದುವೆಯಾಗುವಂತೆ ಆರೋಪಿ ರವಿ ಸೀಮಾ ಬಳಿ ಬೇಡಿಕೆ ಇಟ್ಟಿದ್ದ. ಆದರೆ ತನ್ನ ಆಸೆಯನ್ನು ನಿರಾಕರಿಸಿದಕ್ಕೆ ಸೀಮಾ ಮನೆಗೆ ತೆರಳಿ ರವಿ ಬೆಂಕಿಯನ್ನು ಹಚ್ಚಿದ್ದಾನೆ. ತಕ್ಷಣ ಸೀಮಾಳನ್ನು ಸಮೀಪದ ಎಂಜಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಆದರೆ ಶೇ.75 ರಷ್ಟು ಸುಟ್ಟ ಗಾಯಗಳಾಗಿರುವುದರಿಂದ ಸೀಮಾ ಸ್ಥಿತಿ ಗಂಭೀರವಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.

    ಘಟನೆಯ ಬಗ್ಗೆ ಸೀಮಾಳ ತಂದೆ ಪ್ರತಿಕ್ರಿಯಿಸಿದ್ದು, ರವಿ ಎಂಬಾತ ತನ್ನನ್ನು ಮದುವೆಯಾಗುವಂತೆ ಮಗಳ ಬಲಿ ಬೇಡಿಕೆ ಇಟ್ಟಿದ್ದ. ಆದರೆ ಆಕೆ ನಿರಾಕರಿಸಿದ್ದಕ್ಕೆ ಆತ ತನ್ನ ತಂದೆ ಜೊತೆ ಸೇರಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ದಾರೆ.

    ಈ ಮೊದಲೇ ಯುವತಿ ಹಾಗೂ ಆಕೆಯ ಕುಟುಂಬಕ್ಕೆ ಮದುವೆ ಕುರಿತು ಕಿರುಕುಳವನ್ನು ಆರೋಪಿಗಳು ನೀಡಿದ್ದರು. ಈ ಕುರಿತು ಸೀಮಾಳ ತಂದೆ ಪೊಲೀಸರಿಗೆ ದೂರನ್ನು ಸಹ ನೀಡಿದ್ದರು. ಆದರೆ ಅಧಿಕಾರಿಗಳು ಇವರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.

    ಈ ಘಟನೆಯ ಕುರಿತು ಆಸ್ಪತ್ರೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.