Tag: Jaipur

  • ಹಾಡಹಗಲೇ ಬಿಜೆಪಿ ಕಾರ್ಯಕರ್ತನ ಕತ್ತು ಸೀಳಿ ಬರ್ಬರ ಹತ್ಯೆ

    ಹಾಡಹಗಲೇ ಬಿಜೆಪಿ ಕಾರ್ಯಕರ್ತನ ಕತ್ತು ಸೀಳಿ ಬರ್ಬರ ಹತ್ಯೆ

    ಜೈಪುರ: ಹಾಡಹಗಲೇ ಬಿಜೆಪಿ ಕಾರ್ಯಕರ್ತನನ್ನು ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಪ್ರತಾಪ್‍ಗಢದಲ್ಲಿ ಶನಿವಾರ ನಡೆದಿದೆ. ಇದರಿಂದ ರಾಜ್ಯಾದ್ಯಂತ ಆತಂಕ ಸೃಷ್ಠಿಯಾಗಿದೆ.

    ಸಾಮ್ರಾತ್ ಕುಮ್ವತ್ ಮೃತ ದುರ್ದೈವಿ. ರಸ್ತೆ ಬದಿಯಲ್ಲಿ ನಿಂತಿದ್ದ ಸಾಮ್ರಾತ್‍ನ್ನನ್ನ ಬೈಕ್‍ನಲ್ಲಿ ಬಂದ ಮೂರ್ನಾಲ್ಕು ದುಷ್ಕರ್ಮಿಗಳು ಮೊದಲು ಗುಂಡಿನ ದಾಳಿ ನಡೆಸಿ ನಂತರ ಕತ್ತಿಯಿಂದ ಆತನ ಕುತ್ತಿಗೆಯನ್ನ ಸೀಳಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ನಂತರ ಸ್ಥಳೀಯರು ಆತನನ್ನು ರಕ್ಷಿಸಲು ಮುಂದಾದರೂ ಕೂಡ ತೀವ್ರ ರಕ್ತ ಸ್ರಾವದಿಂದಾಗಿ ಸಾಮ್ರಾತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆಯನ್ನ ವಿರೋಧಿಸಿ ಸ್ಥಳೀಯರು ಸಾಮ್ರಾತ್‍ನ ಮೃತದೇಹವನ್ನಿಟ್ಟುಕೊಂಡು ಪ್ರತಿಭಟನೆ ಕೈಗೊಂಡಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಬಿಜೆಪಿ ಕಾರ್ಯಕರ್ತನ ರಾಜ್ಯ ಚುನಾವಣೆಯ ಸಂದರ್ಭದಲ್ಲಿ ಹತ್ಯೆ ಮಾಡಿರುವುದಕ್ಕೆ ಬಿಜೆಪಿ ಪಕ್ಷದವರು ತೀವ್ರ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿರುವ ಪೊಲೀಸರು ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಸಾಮ್ರಾತ್ ಕುಂಟುಂಬದವರು ಹೇಳುವ ಪ್ರಕಾರ, ಮೃತ ಸಾಮ್ರಾತ್ ಬಿಜೆಪಿ ಹಿಂದುಳಿದ ವರ್ಗದ ಘಟಕದಲ್ಲಿ ಸಕ್ರೀಯ ಕಾರ್ಯಕರ್ತನಾಗಿದ್ದು, ಯಾರೊಂದಿಗೆ ದ್ವೇಷವಿರಲಿಲ್ಲ. ಈತನ ಹತ್ಯೆಯಿಂದ ಕುಂಟುಂಬ ಸೇರಿದಂತೆ ನೆರೆಹೊರೆಯವರಿಗೂ ಆಘಾತವಾಗಿದೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಈ ಕೃತ್ಯವನ್ನು ಎಸಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಗಂಭೀರ ವಿಷಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರಿ ಕಾಲೇಜಿನಲ್ಲೇ ವಿದ್ಯಾರ್ಥಿನಿಯ ಮೇಲೆ ವಿದ್ಯಾರ್ಥಿಯಿಂದ ಅತ್ಯಾಚಾರ

    ಸರ್ಕಾರಿ ಕಾಲೇಜಿನಲ್ಲೇ ವಿದ್ಯಾರ್ಥಿನಿಯ ಮೇಲೆ ವಿದ್ಯಾರ್ಥಿಯಿಂದ ಅತ್ಯಾಚಾರ

    ಜೈಪುರ: ಸರ್ಕಾರಿ ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ನಾಗಾರ್ ಜಿಲ್ಲೆಯಲ್ಲಿ ಕಳೆದ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಆರೋಪಿಯನ್ನು ಖಾಸಗಿ ಕಾಲೇಜಿನ ವಿದ್ಯಾರ್ಥಿ ಎಂದು ಗುರುತಿಸಲಾಗಿದ್ದು, ಸದ್ಯಕ್ಕೆ ಆತನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಆದರೆ ಆರೋಪಿ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ. ಆತನಿಗೆ ಶೋಧಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಯೂ ವಿದ್ಯಾರ್ಥಿಯಾಗಿದ್ದು, ಸರ್ಕಾರಿ ಕಾಲೇಜಿಗೆ ಬಂದು ತರಗತಿಯ ಕೊಠಡಿಯಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸದ್ಯಕ್ಕೆ ಅತ್ಯಾಚಾರ ನಡೆದಿದೆ ಎನ್ನಲಾಗಿರುವ ಕಾಲೇಜು ಕೊಠಡಿಯನ್ನು ತನಿಖೆಯ ಉದ್ದೇಶಕ್ಕಾಗಿ ಪೊಲೀಸರು ಲಾಕ್ ಮಾಡಿದ್ದಾರೆ.

    ಈ ಘಟನೆ ಸಂಬಂಧಿಸಿದಂತೆ ಕಾಲೇಜಿನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ವಶಪಡಿಸಿಕೊಂಡು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಇತ್ತೀಚೆಗಷ್ಟೇ ರಾಜಸ್ಥಾನದ ಜಲ್ವಾರ್ ಪ್ರದೇಶದಲ್ಲಿ ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು. ಈ ಘಟನೆಯ ಬಳಿಕವೇ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.

    12 ವರ್ಷದ ಒಳಗಡೆ ಇರುವ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಮಸೂದೆಯನ್ನು ರಾಜಸ್ಥಾನದ ವಿಧಾನಸಭೆ ಮಾರ್ಚ್ ತಿಂಗಳಿನಲ್ಲಿ ಅಂಗಿಕರಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೊಮ್ಮಗಳು ಹಠ ಹಿಡಿದಿದ್ದಕ್ಕೆ, ನೀರಿನಲ್ಲಿ ಮುಳುಗಿಸಿ ಕೊಂದ ಅಜ್ಜಿ

    ಮೊಮ್ಮಗಳು ಹಠ ಹಿಡಿದಿದ್ದಕ್ಕೆ, ನೀರಿನಲ್ಲಿ ಮುಳುಗಿಸಿ ಕೊಂದ ಅಜ್ಜಿ

    ಜೈಪುರ: ಮೊಮ್ಮಗಳು ಹಠ ಹಿಡಿದಿದ್ದಕ್ಕೆ ಸಿಟ್ಟಿಗೆದ್ದ ಅಜ್ಜಿಯೊಬ್ಬಳು ತನ್ನ ಮೊಮ್ಮಗಳನ್ನೇ ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ ಘಟನೆ ರಾಜಸ್ಥಾನದ ಹನುಮಗೃಹ ಪಟ್ಟಣದಲ್ಲಿ ನಡೆದಿದೆ.

    ಬುಧವಾರ ಮಗುವೊಂದು ಆಕಸ್ಮಿಕವಾಗಿ ನೀರಿನ ಟ್ಯಾಂಕ್‍ನಲ್ಲಿ ಬಿದ್ದು ಮೃತಪಟ್ಟಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಗು ಸಾವಿನ ಅನುಮಾನದ ಮೇರೆಗೆ ಆಕೆಯ ಅಜ್ಜಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.

    ವಿಚಾರಣೆಗೆ ಒಳಪಡಿಸಿದಾಗ, ಮಗುವಿನ ಅಜ್ಜಿಯು ಸ್ವತಃ ತನ್ನ ಮೊಮ್ಮಗಳನ್ನು ನೀರಿನ ಟ್ಯಾಂಕರ್‍ನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಳೆ. ಅಲ್ಲದೇ 4 ವರ್ಷದ ಮಗು ತುಂಬಾ ಹಠಮಾರಿ ಹಾಗೂ ಮೊಂಡುತನದಿಂದ ವರ್ತಿಸಿತ್ತಿತ್ತು. ಎಷ್ಟೇ ಬಾರಿ ಹೇಳಿದರೂ, ಯಾರ ಮಾತನ್ನು ಕೇಳುತ್ತಿರಲಿಲ್ಲ. ಇದರಿಂದ ಸಿಟ್ಟಿಗೆಂದು ಹತ್ಯೆಗೈದಿದ್ದಾರೆ ಎಂದು ಪೊಲೀಸ್ ಅಧಿಕಾರಿ ವೈಷ್ಣೋಯಿ ತಿಳಿಸಿದರು.

    ಘಟನೆ ಸಂಬಂಧ ಅಜ್ಜಿಯ ಮೇಲೆ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಬಂಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಿನ್ನಲು ಬಂದ ಚಿರತೆಯನ್ನು ಹೆದರಿಸಿ ಓಡಿಸಿದ ನಾಯಿ: ವಿಡಿಯೋ

    ತಿನ್ನಲು ಬಂದ ಚಿರತೆಯನ್ನು ಹೆದರಿಸಿ ಓಡಿಸಿದ ನಾಯಿ: ವಿಡಿಯೋ

    ಜೈಪುರ್: ತನ್ನನ್ನು ತಿನ್ನಲು ಬಂದ ಚಿರತೆಯ ದಾಳಿಯಿಂದ ತಪ್ಪಿಸಿಕೊಳ್ಳಲು ನಾಯಿಯೊಂದು ಅದನ್ನು ಬೆದರಿಸಿ ಓಡಿಸಿದ ವಿಡಿಯೋವೊಂದು ರಾಜಸ್ಥಾನದ ಝಲಾನಾ ಅರಣ್ಯದಲ್ಲಿ ಸಫಾರಿಗೆ ತೆರೆಳಿದ್ದ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

    ಸಫಾರಿಗೆ ಹೋದ ಪ್ರವಾಸಿಗರ ತಂಡಕ್ಕೆ ಈ ಚಿರತೆ ಎದುರಾಗಿದೆ. ಪಾಂಥರ್ ಜೋಪಾ ಮತ್ತು ಕಾಳಿ ಮಾತಾ ದೇವಸ್ಥಾನ ಮಾರ್ಗದಲ್ಲಿ ಟ್ರ್ಯಾಕ್ ನಂಬರ್ 2ರಲ್ಲಿ ಚಿರತೆ ಪೋದೆಯಿಂದ ಹೊರಬಂದು ಪ್ರವಾಸಿಗರ ವಾಹನದ ಮುಂದೆ ಪ್ರತ್ಯಕ್ಷವಾಗಿದೆ. ಚಿರತೆಯನ್ನು ನೋಡುತ್ತಿದ್ದಂತೆ ಚಾಲಕ ತಮ್ಮ ವಾಹನವನ್ನು ನಿಲ್ಲಿಸಿದ್ದರು.

    ಚಿರತೆಯನ್ನು ನೋಡುತ್ತಿದ್ದಂತೆ ನಾನು ವಾಹನವನ್ನು ನಿಲ್ಲಿಸಿದೆ. ಆ ಚಿರತೆಯನ್ನು ನೋಡಿ ಎಲ್ಲರು ಒಂದು ಕ್ಷಣ ಭಯಭೀತರಾಗಿದ್ದರು. ಆದರೆ ಈ ಭಯದ ನಡುವೆಯೂ ನಮಗೆ ಥ್ರಿಲ್ಲಿಂಗ್ ಹಾಗೂ ಅಡ್ವೆಂಚರ್ ದೃಶ್ಯ ನೋಡಲು ಸಿಗುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ. ನಾವು ವಾಹನ ನಿಲ್ಲಿಸಿದ್ದಾಗ ಅಲ್ಲಿ ನಾಯಿ ಇತ್ತು. ಚಿರತೆ ನೋಡಿ ನಾವು ಏನೂ ಶಬ್ಧ ಮಾಡಲಿಲ್ಲ. ಹಾಗಾಗಿ ನಾಯಿಗೆ ಅಲ್ಲಿ ಚಿರತೆ ಇದ್ದ ವಿಷಯ ಗೊತ್ತಾಗಲಿಲ್ಲ ಎಂದು ಟೂರಿಸ್ಟ್ ವಾಹನ ಚಾಲಕ ವೇದ್ ಪ್ರಕಾಶ್ ತಿಳಿಸಿದರು.

    ನಮ್ಮ ವಾಹನದ 10 ಅಡಿ ದೂರದ ಪೊದೆಯಲ್ಲಿ ಚಿರತೆ ಅಡಗಿತ್ತು. ಈ ವೇಳೆ ನಮ್ಮ ವಾಹನದ ಮುಂದೆಯೇ ನಾಯಿ ಮಲಗಿತ್ತು. ಆ ಚಿರತೆ ನಾಯಿಯ ಮೇಲೆ ಎರಗಿತ್ತು. ಆ ಚಿರತೆಯನ್ನು ನೋಡಿ ನಾಯಿ ಕೂಡ ಒಂದು ಕ್ಷಣ ಹೆದರಿತ್ತು. ಆದರೆ ಅದು ಚಿರತೆಯನ್ನು ನೋಡಿ ಜೋರಾಗಿ ಬೊಗಳಲು ಶುರು ಮಾಡಿತ್ತು. ನಾಯಿಯನ್ನು ನೋಡುತ್ತಾ ಚಿರತೆ ಕೆಲ ಹೊತ್ತು ಅಲ್ಲಿಯೇ ನಿಂತಿತ್ತು. ಆದರೆ ನಾಯಿ ಬೊಗಳುವುದು ನಿಲ್ಲಿಸದಿದ್ದಾಗ ಚಿರತೆ ಮತ್ತೆ ಪೊದೆಯೊಳಗೆ ಹೋಯಿತು ಎಂದರು ವೇದ್ ಪ್ರಕಾಶ್ ಹೇಳಿದರು.

    ನಾಯಿ ಆ ಚಿರತೆಯನ್ನು ಓಡಿಸಿದ್ದು ನೋಡಿ ಪ್ರವಾಸಿಗರು ಹಾಗೂ ಚಾಲಕ ಒಂದು ಕ್ಷಣ ದಂಗಾದರು. ಅಲ್ಲದೇ ಆ ನಾಯಿಯನ್ನು ಅಲ್ಲಿಯೇ ಬಿಟ್ಟರೆ ಅಪಾಯ ಎಂದು ತಮ್ಮ ಜೊತೆ ಅರಣ್ಯದಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಆ ನಾಯಿ ಕಾಡಿನಲ್ಲಿರುವ ಕಾಳಿ ಮಂದಿರದಲ್ಲಿ ವಾಸವಿರುತ್ತಿತ್ತು ಎಂದು ಹೇಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತನಗೊಂಡು ಹೊತ್ತಿ ಉರಿದ ವಾಯುಸೇನಾ ವಿಮಾನ -ವಿಡಿಯೋ ನೋಡಿ

    ಪತನಗೊಂಡು ಹೊತ್ತಿ ಉರಿದ ವಾಯುಸೇನಾ ವಿಮಾನ -ವಿಡಿಯೋ ನೋಡಿ

    ಜೈಪುರ್: ಭಾರತೀಯ ವಾಯುಪಡೆಗೆ ಸೇರಿದ ಮಿಗ್ ಫೈಟರ್ ವಿಮಾನವೊಂದು ರಾಜಸ್ಥಾನದ ಜೋಧಪುರದ ಬಾಂದ್ ಸಮೀಪದ ದೆವ್ಲಿಯಾ ಗ್ರಾಮದ ಬಳಿ ಪತನಗೊಂಡಿದೆ.

    ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಈ ಅವಘಡ ಸಂಭವಿಸುತ್ತಿದ್ದಂತೆ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಆದರೆ ಪೈಲಟ್ ವಿಮಾನದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ರಕ್ಷಣಾ ವಕ್ತಾರ ಕರ್ನಲ್ ಸೊಂಬಿತ್ ಘೋಷ್ ಹೇಳಿದ್ದಾರೆ.

    ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುತ್ತಿದ್ದು, ಪೊಲೀಸ್ ಅಧಿಕಾರಿಗಳು ಮತ್ತು ವಾಯುಸೇನೆಯ ಅಧಿಕಾರಿಗಳು ಧಾವಿಸಿದ್ದಾರೆ. ಪೈಲಟ್ ನನ್ನು ಏರ್ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವರದಿಯಾಗಿದೆ.

    ಮೂರು ವಾಯುಸೇನಾ ವಿಮಾನಗಳು ಪ್ರತಿನಿತ್ಯದ ಅಭ್ಯಾಸದಂತೆ ಇಂದು ಅಭ್ಯಾಸ ನಡೆಸುತ್ತಿದ್ದಾಗ ಮಿಗ್ ವಿಮಾನ ಪತನಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪತನಗೊಂಡ ವಿಮಾನ ಜೋಧಪುರ ವಾಯುನೆಲೆಯಿಂದ ಟೇಕ್ ಆಫ್ ಆಗಿತ್ತು.

    ಜೋಧಪುರದ ಡೆಪ್ಯೂಟಿ ಕಮಿಷನರ್ ಅಮಂದೀಪ್ ಸಿಂಗ್ ಪ್ರತಿಕ್ರಿಯಿಸಿ, ಈ ಅಪಘಾತದಿಂದ ಯಾವುದೇ ಪ್ರಾಣಾಹಾನಿ ಆಗಿಲ್ಲ. ಈ ಕುರಿತು ತನಿಖೆ ಆರಂಭಿಸಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publict

    https://twitter.com/Rahulsi16973840/status/1036866113299132417

  • ಬಿಜೆಪಿ ನಾಯಕನ ಮಗನ ಹುಚ್ಚಾಟಕ್ಕೆ ಇಬ್ಬರು ಬಲಿ!

    ಬಿಜೆಪಿ ನಾಯಕನ ಮಗನ ಹುಚ್ಚಾಟಕ್ಕೆ ಇಬ್ಬರು ಬಲಿ!

    ಜೈಪುರ: ಸ್ಥಳೀಯ ಬಿಜೆಪಿ ನಾಯಕನ ಮಗ ಮದ್ಯದ ನಶೆಯಲ್ಲಿ ಕಾರು ಓಡಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಜಸ್ಥಾನದ ಗಾಂಧಿನಗರದ ರೈಲ್ವೇ ನಿಲ್ದಾಣದ ಬಳಿ ನಡೆದಿದೆ.

    ಶುಕ್ರವಾರ ರಾತ್ರಿ ಸ್ಥಳೀಯ ಬಿಜೆಪಿ ನಾಯಕನ ಮಗ ಭರತ್ ಭೂಷಣ್ ಮೀನಾ ಈ ಕೃತ್ಯ ಎಸಗಿದ್ದು, ಪೊಲೀಸರು ಈಗ ಆತನನ್ನು ಬಂಧಿಸಿದ್ದಾರೆ. ಫ್ಲೈ ಓವರ್ ಕೆಳಗಿನ ರಸ್ತೆಯ ಬದಿಯಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಕಾರು ಓಡಿಸಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

    ಭರತ್‍ನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದು, ಆತನ ವಿರುದ್ಧ ವಿವಿಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗಿದೆ. ಗಾಯಗೊಂಡ ವ್ಯಕ್ತಿಗಳನ್ನು ಚಿಕಿತ್ಸೆಗಾಗಿ ಎಸ್‍ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಭಾರತ್ ಭೂಷಣ್ ತಂದೆ ಬದ್ರಿ ನಾರಾಯಣ್ ಬಿಜೆಪಿ ಕಿಸಾನ್ ಮೋರ್ಚಾದ ಮುಖಂಡರಾಗಿದ್ದು ಅವರ ಹೆಸರಲ್ಲಿ ಎಸ್‍ಯುವಿ ಕಾರು ನೊಂದಣಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರತೀಯ ರೈಲ್ವೇಯಿಂದ ದೇವಸ್ಥಾನಗಳಿಗೆ ವಿಶೇಷ ಪ್ಯಾಕೇಜ್! ಟೆಕೆಟ್ ಎಷ್ಟು?

    ಭಾರತೀಯ ರೈಲ್ವೇಯಿಂದ ದೇವಸ್ಥಾನಗಳಿಗೆ ವಿಶೇಷ ಪ್ಯಾಕೇಜ್! ಟೆಕೆಟ್ ಎಷ್ಟು?

    ಬೆಂಗಳೂರು: ಪ್ರಸಿದ್ಧ ದೇವಸ್ಥಾನಗಳಿಗೆ ಭಾರತೀಯ ರೈಲ್ವೇ ಹತ್ತು ದಿನಗಳ ವಿಶೇಷ ಪ್ಯಾಕೇಜ್ ಪ್ರವಾಸ ಪ್ರಾರಂಭಿಸಿದ್ದು, ಕಡಿಮೆ ದರದಲ್ಲಿ ಮೂರು ರಾಜ್ಯಗಳ ವಿವಿಧ ದೇವಸ್ಥಾನ ಹಾಗೂ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡಬಹುದು.

    ಸೆಪ್ಟೆಂಬರ್ 15ರಂದು ಬೆಂಗಳೂರಿನಿಂದ ಪ್ರವಾಸ ಪ್ರಾರಂಭವಾಗಲಿದ್ದು ಒಬ್ಬರಿಗೆ 10,820 ರೂ. ಟಿಕೆಟ್ ದರವನ್ನು ನಿಗದಿಪಡಿಸಿದೆ.

    ಯಾವ ಸ್ಥಳಕ್ಕೆ ಪ್ರವಾಸ?
    ಬೆಂಗಳೂರಿನಿಂದ ಹೊರಟ ರೈಲು ಮಧ್ಯಪ್ರದೇಶದ ಮಹಾಕಾಳೇಶ್ವರ, ಓಂಕಾರೇಶ್ವರ, ರಾಜಸ್ಥಾನದ ಜೈಪುರ, ಪುಷ್ಕರ, ಮಹಾರಾಷ್ಟ್ರದ ತ್ರಿಯಂಬಕೇಶ್ವರ, ಪಂಢರಾಪುರ ಮತ್ತು ಶಿರಿಡಿಗೆ ಕರೆದೊಯ್ಯಲಾಗುವುದು ಎಂದು ಐಆರ್‌ಸಿಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

    ವಿಶೇಷ ಸೂಚನೆ:
    ಪ್ರಯಾಣಿಕರಿಗೆ ತಿಂಡಿಯ ವ್ಯವಸ್ಥೆಯನ್ನು ಕೂಡಾ ಐಆರ್‌ಸಿಟಿಸಿ ನಿರ್ವಹಿಸಲಿದೆ. ಆದರೆ ಕೇವಲ ಸಸ್ಯಾಹಾರ ತಿನಿಸುಗಳನ್ನು ಮಾತ್ರ. ಪ್ರತಿದಿನ ಒಂದು ಲೀಟರ್ ನೀರು ಮತ್ತು ಎರಡು ಬಾರಿ ಕಾಫಿ ಅಥವಾ ಟೀ ಒದಗಿಸಲಾಗುತ್ತದೆ. ನಿಲ್ದಾಣಗಳಿಂದ ದೇವಸ್ಥಾನಗಳಿಗೆ ಹೋಗಲು ರೈಲ್ವೆ ನಿಗಮ ಪ್ರಯಾಣಿಕರಿಗೆ ಟ್ಯಾಕ್ಸಿ ವ್ಯವಸ್ಥೆ ಕೂಡಾ ಇದೆ.

    ಮೈಸೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಬುಕ್ ಆಗಿಲ್ಲ. ಒಂದು ವೇಳೆ ಮುಂದಿನ ಕೆಲವು ದಿನಗಳಲ್ಲಿ ಸಂಖ್ಯೆ ಏರಿಕೆಯಾದರೆ ಮೈಸೂರು ರೈಲು ನಿಲ್ದಾಣದಿಂದಲೇ ಪ್ರಯಾಣ ಪ್ರಾರಂಭಿಸಲಾಗುವುದು. ಇಲ್ಲದಿದ್ದರೆ ಹಾಸನದಿಂದ ಪ್ರಯಾಣ ಪ್ರಾರಂಭವಾಗಲಿದೆ ಎಂದು ಐಆರ್‌ಸಿಟಿಸಿ ಅಧಿಕಾರಿ ಇಮ್ರಾನ್ ಅಹ್ಮದ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಾಲಿಗಿಂತಲೂ ಗೋಮೂತ್ರಕ್ಕೆ ಹೆಚ್ಚಾಯ್ತು ಬೇಡಿಕೆ: 1 ಲೀಟರ್ ಗೆ 30 ರೂ.

    ಹಾಲಿಗಿಂತಲೂ ಗೋಮೂತ್ರಕ್ಕೆ ಹೆಚ್ಚಾಯ್ತು ಬೇಡಿಕೆ: 1 ಲೀಟರ್ ಗೆ 30 ರೂ.

    ಜೈಪುರ: ರಾಜಸ್ಥಾನದಲ್ಲಿ ಈಗ ಗೋಮೂತ್ರದ ಬೇಡಿಕೆ ಹೆಚ್ಚಾಗಿದ್ದು, ರೈತರಿಗೆ ಆದಾಯದ ಮೂಲವಾಗಿ ಪರಿವರ್ತನೆಯಾಗಿದೆ.

    ರಾಜಸ್ಥಾನದ ರೈತರು ಗಿರ್ ಮತ್ತು ತಾಪಾರ್ಕರ್ ಎಂಬ ಪ್ರಮುಖವಾದ ತಳಿಯ ಗೋಮೂತ್ರವನ್ನು ಮಾರುಕಟ್ಟೆಗಳಲ್ಲಿ ಪ್ರತಿ ಲೀಟರ್ ಗೆ 15 ರೂ. ನಿಂದ 30 ರೂ. ನಂತೆ ಮಾರಾಟ ಮಾಡುತ್ತಿದ್ದರೆ, ಹಾಲನ್ನು 22 ರೂ. ನಿಂದ 25 ರೂ ವರೆಗೆ ಮಾರಾಟ ಮಾಡುತ್ತಿದ್ದಾರೆ.

    2 ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿರುವ ಜೈಪುರದ ಕೈಲೇಶ್ ಗುಜ್ಜರ್ ಪ್ರತಿಕ್ರಿಯಿಸಿ, ಗೋಮೂತ್ರ ಮಾರಾಟದಿಂದಾಗಿ ನನ್ನ ಆದಾಯ 30% ಹೆಚ್ಚಾಗಿದೆ. ಮಾರಾಟದಿಂದಾಗಿ ಈಗ ನನಗೆ ಅದೃಷ್ಟ ಬಂದಿದ್ದು, ಗೋಮೂತ್ರ ಸಂಗ್ರಹಿಸಲು ರಾತ್ರಿಯಿಡಿ ಹಸುವಿನ ಕೊಟ್ಟಿಗೆಯಲ್ಲೇ ಎಚ್ಚರವಾಗಿರಬೇಕಾಗುತ್ತದೆ. ದನ ನಮ್ಮ ತಾಯಿ, ಹಾಗಾಗಿ ರಾತ್ರಿಯಿಡಿ ಗೋಮೂತ್ರಕ್ಕಾಗಿ ಕೊಟ್ಟಿಗೆಯಲ್ಲಿ ಕಾಯುವುದು ನನಗೆ ಬೇಸರವಾಗುವುದಿಲ್ಲ ಎಂದು ಹೇಳಿದ್ದಾರೆ.

    ಓಂ ಪ್ರಕಾಶ್ ಮೀನಾ ಪ್ರತಿಕ್ರಿಯಿಸಿ, ಗಿರ್ ತಳಿಯ ಹಸುವಿನ ಮೂತ್ರವನ್ನು ನಾನು ಮಾರಾಟ ಮಾಡುತ್ತಿದ್ದೇನೆ. ಲೀಟರ್ ಒಂದಕ್ಕೆ 30 ರಿಂದ 50 ರೂಪಾಯಿ ಸಿಗುತ್ತಿದೆ ಎಂದು ಹೇಳಿದರು. ಇದನ್ನು ಓದಿ: ಗೋ ಮೂತ್ರದಿಂದ ಕ್ಯಾನ್ಸರ್ ಗುಣಪಡಿಸಬಹುದು!

    ಬೇಡಿಕೆ ಯಾಕೆ?
    ಗೋಮೂತ್ರವನ್ನು ಹೆಚ್ಚಾಗಿ ರೈತರು ತಮ್ಮ ಕೃಷಿಯನ್ನು ಹಾಳು ಮಾಡುವ ಕೀಟಗಳನ್ನು ತಡೆಗಟ್ಟಲು ಬೆಳೆಗಳ ಮೇಲೆ ಸಿಂಪಡಿಸುತ್ತಾರೆ. ಅಷ್ಟೇ ಅಲ್ಲದೇ ಯಜ್ಞ, ಪಂಚಗವ್ಯಗಳಲ್ಲಿ ಮತ್ತು ಧಾರ್ಮಿಕ ಆಚರಣೆ ಕಾರ್ಯಕ್ರಮಗಳಲ್ಲಿ ಬಳಸುವುದರಿಂದ ಬೇಡಿಕೆ ಹೆಚ್ಚಾಗಿದೆ.

    ಉದಯಪುರದ ಸರ್ಕಾರಿ ಮಹಾರಾಣಾ ಪ್ರತಾಪ್ ಕೃಷಿ ವಿಶ್ವವಿದ್ಯಾಲಯ, ಜೈವಿಕ ಕೃಷಿ ಯೋಜನೆಗಾಗಿ ಪ್ರತಿ ತಿಂಗಳಿಗೂ 300 ರಿಂದ 500 ಲೀಟರ್ ನಷ್ಟು ಗೋಮೂತ್ರವನ್ನು ಬಳಸುತ್ತದೆ. ಪ್ರತಿ ತಿಂಗಳು 15,000-20,000 ರೂಪಾಯಿಯ ಮೌಲ್ಯದಷ್ಟು ಗೋಮೂತ್ರವನ್ನು ಖರೀದಿಸುತ್ತದೆ ಎಂದು ಉಪಕುಲಪತಿ ಉಮಾ ಶಂಕರ್ ಹೇಳಿದ್ದಾರೆ.

  • ಮದ್ವೆಯಾಗಿ ಮೂರೇ ವರ್ಷಕ್ಕೆ ಪತಿಯನ್ನು ಕೊಂದು ಮಾವನ ಜೊತೆ ಅಕ್ರಮ ಸಂಬಂಧ!

    ಮದ್ವೆಯಾಗಿ ಮೂರೇ ವರ್ಷಕ್ಕೆ ಪತಿಯನ್ನು ಕೊಂದು ಮಾವನ ಜೊತೆ ಅಕ್ರಮ ಸಂಬಂಧ!

    ಜೈಪುರ: ಮದುವೆಯಾಗಿ ಮೂರೇ ವರ್ಷಕ್ಕೆ ಪತ್ನಿ ತನ್ನ ಪತಿಯನ್ನು ಕೊಂದು ಮಾವನ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ ಪ್ರಕರಣ ರಾಜಸ್ಥಾನದ ಜೈಪುರ್ ನಲ್ಲಿ ಬೆಳಕಿಗೆ ಬಂದಿದೆ.

    ಮುಕೇಶ್ ಸೈನಿ ಕೊಲೆಯಾದ ಪತಿ. ಮೂರು ವರ್ಷಗಳ ಹಿಂದೆ ಪೂಜಾ, ಮುಕೇಶ್ ನನ್ನು ಮದುವೆಯಾಗಿದ್ದಳು. ನಂತರ ತನ್ನ ಪತಿಯ ತಂದೆಯ ತಮ್ಮನಾದ ರಾಕೇಶ್ ಸೇನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಮಾವನ ಜೊತೆ ಅಕ್ರಮ ಸಂಬಂಧ ಹೊಂದಿದ ನಂತರ ಪೂಜಾ ಎರಡೇ ತಿಂಗಳಿಗೆ ತನ್ನ ಪತಿಯನ್ನೇ ಕೊಲೆ ಮಾಡಿದ್ದಾಳೆ.

    ಪೊಲೀಸರ ಪ್ರಕಾರ ಪೂಜಾ ಮೂರು ವರ್ಷಗಳ ಹಿಂದೆ ಮುಕೇಶ್ ಜೊತೆ ಮದುವೆಯಾಗಿದ್ದಳು. ಮದುವೆಯಾಗಿ ಒಂದೂವರೆ ವರ್ಷಕ್ಕೆ ಈ ದಂಪತಿಗೆ ಒಂದು ಹೆಣ್ಣು ಮಗು ಜನನವಾಗಿದೆ. ಮುಕೇಶ್ ಹಾಗೂ ಪೂಜಾ ಖುಷಿಯಾಗಿದ್ದು, ಮುಕೇಶ್ ಆಸ್ತಿ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದನು.

    ಈ ನಡುವೆ ಪೂಜಾ ತನ್ನ ಮಾವನ ಮೇಲೆ ಆಕರ್ಷಿತಳಾಗುತ್ತಿದ್ದಳು. ನಂತರ ಒಂದೇ ತಿಂಗಳಲ್ಲಿ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿದೆ. ಬಳಿಕ ಮಾವ- ಸೊಸೆ ಮನೆಯಿಂದ ಓಡಿ ಹೋಗಲು ನಿರ್ಧರಿಸಿದ್ದರು. ಓಡಿ ಹೋದರೆ ಮನೆಯವರು ಆಸ್ತಿ ನೀಡುವುದಿಲ್ಲ ಎಂದು ಮನೆಯಿಂದ ಓಡಿ ಹೋಗಲು ಭಯಪಡುತ್ತಿದ್ದರು. ಇಬ್ಬರು ಓಡಿ ಹೋದರೆ ಪ್ರಯೋಜನವಾಗಿಲ್ಲ. ರಾಕೇಶ್‍ನನ್ನು ಭೇಟಿ ಮಾಡಲು ಹೋಗುವಾಗ ಮುಕೇಶ್‍ಗೆ ಅನುಮಾನ ಬಂದು ಏನಾದರೂ ಕಾರಣ ಹೇಳಿ ಅಡ್ಡ ಬರುತ್ತಿದ್ದ. ತನ್ನ ಅಕ್ರಮ ಸಂಬಂಧಕ್ಕೆ ಮುಕೇಶ್ ಅಡ್ಡ ಬರುತ್ತಿದ್ದನೆಂದು ಪೂಜಾ ಆತನನ್ನು ಕೊಲೆ ಮಾಡಲು ನಿರ್ಧರಿಸಿದ್ದಳು.

    ಕೊಲೆ ಮಾಡಿದ್ದು ಹೇಗೆ?
    ಪೂಜಾ ತನ್ನ ಪತಿಯನ್ನು ಕೊಲೆ ಮಾಡುವ ಮೊದಲೇ ರಾಕೇಶ್ ನನ್ನು ಕರೆಸಿ ಮುಕೇಶ್‍ನನ್ನು ಕೊಲೆ ಮಾಡಿ ಆತನ ಮೃತದೇಹವನ್ನು ಬಿಸಾಡಲು ಹೇಳಿದ್ದಳು. ಪ್ಲಾನ್ ತರಹನೇ ರಾಕೇಶ್ ತನ್ನ ಜೊತೆ ಅಪ್ರಾಪ್ತ ಹುಡುಗರನ್ನು ಕರೆಸಿ ಮುಕೇಶ್‍ನನ್ನು ಬಿಯರ್ ಬಾಟಲ್‍ನಿಂದ ಹೊಡೆದು ಕೊಂದಿದ್ದಾನೆ. ಪತಿಯನ್ನು ಕೊಲೆ ಮಾಡಿದ ಮರುದಿನವೇ ಪೂಜಾ ಇಲಿ ಪಾಶಾಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಪೂಜಾ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಈ ಘಟನೆ ಅಮೇರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸದ್ಯ ಪೊಲೀಸರು ಪೂಜಾ ಹಾಗೂ ಆಕೆಯ ಮಾವನನ್ನು ಬಂಧಿಸಿದ್ದಾರೆ. ಪೂಜಾಳನ್ನು ಬಂಧಿಸುವ ಮೊದಲೇ ಪೊಲೀಸರು ಮಾವ ರಾಕೇಶ್‍ನನ್ನು ಬಂಧಿಸಿದ್ದರು.

  • ರೊಟ್ಟಿ ಬಿಸಾಕಿದ್ದಕ್ಕೆ ಜಗಳ- ಚಲಿಸುತ್ತಿದ್ದ ರೈಲಿನಿಂದ್ಲೇ ದಂಪತಿಯನ್ನು ತಳ್ಳಿದ ಯುವಕ!

    ರೊಟ್ಟಿ ಬಿಸಾಕಿದ್ದಕ್ಕೆ ಜಗಳ- ಚಲಿಸುತ್ತಿದ್ದ ರೈಲಿನಿಂದ್ಲೇ ದಂಪತಿಯನ್ನು ತಳ್ಳಿದ ಯುವಕ!

    ಜೈಪುರ: ಚಲಿಸುತ್ತಿದ್ದ ರೈಲಿನಿಂದಲೇ ಯುವಕನೊಬ್ಬ ದಂಪತಿಯನ್ನು ತಳ್ಳಿ ಕೊಲೆ ಮಾಡಿರುವ ಅಘಾತಕಾರಿ ಘಟನೆಯೊಂದು ರಾಜಸ್ಥಾನದ ಜೈಪುರದ ಭರತ್ ಪುರ ಬಳಿ ನಡೆದಿದೆ.

    ಜಗ್ಗು ಮತ್ತು ಶಕುಂತಲಾ ದಂಪತಿಯನ್ನು ಗೌರವ್ ಎಂಬಾತ ಚಲಿಸುತ್ತಿದ್ದ ರೈಲಿನಿಂದಲೇ ತಳ್ಳಿ ಹತ್ಯೆ ಮಾಡಿದ್ದಾನೆ. ಈ ಘಟನೆ ಭಾನುವಾರ ನಡೆದಿದೆ.

    ಘಟನೆ ವಿವರ:
    ಅಲ್ವಾರ್ ನಿಂದ ಮಥುರಾ ಕಡೆಗೆ ಹೋಗುತ್ತಿದ್ದ ರೈಲಿನಿಂದ ಗೌರವ್ ಎಂಬಾತ ಈ ಕೊಲೆ ಮಾಡಿರುವುದಾಗಿ ಪ್ರತ್ಯಕ್ಷದರ್ಶಿ ಪ್ರಯಾಣಿಕರೊಬ್ಬರು ರೈಲ್ವೇ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

    ಆರೋಪಿ ಗೌರವ್ ಅಲಿಯಾಸ್ ಸಾತೋ ಬಘೇಲ್, ಉತ್ತರ ಪ್ರದೇಶ ಕಸ್ಗಂಜಿಯ ಲಾವಾದ್ರನಾಗಿದ್ದಾನೆ. ಈತ ವಿಜ್ಞಾನದಲ್ಲಿ ಪದವಿ ಪಡೆದಿದ್ದಾನೆ. ಕೆಲಸ ಹುಡುಕಲು ಮಥುರಾದಿಂದ ಅಲ್ವಾರ್ ಕಡೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದನು. ಇದೇ ರೈಲಿಗೆ ಭರತ್‍ಪುರ ನಿವಾಸಿಗಳಾದ ಜಗ್ಗು ಮತ್ತು ಶಕುಂತಲಾ ದಂಪತಿ ದೀಗ್ ಎಂಬಲ್ಲಿ ರೈಲು ಹತ್ತಿದ್ದಾರೆ. ದಂಪತಿಯಿದ್ದ ರೈಲಿನ ಬೋಗಿಯಲ್ಲಿ ಆರೋಪಿ ಹಾಗೂ ಇನ್ನೋರ್ವ ಸೇರಿ ಒಟ್ಟು ನಾಲ್ವರೇ ಇದ್ದರು.

    ದೀಗ್ ನಿಲ್ದಾಣದಲ್ಲಿ ರೈಲು ಹತ್ತಿದ ದಂಪತಿಗಳು, ಸ್ವಲ್ಪ ಸಮಯದ ನಂತರ ಊಟ ಮಾಡಲು ತಾವು ತಂದಿದ್ದ ಆಹಾರವನ್ನು ತೆರೆದಿಟ್ಟರು. ಈ ವೇಳೆ ಸಹಪ್ರಯಾಣಿಕನಾಗಿದ್ದ ಗೌರವ್ ತನಗೂ ನೀಡುವಂತೆ ಕೇಳಿದ್ದಾನೆ. ಹೀಗಾಗಿ ದಂಪತಿ ಆತನಿಗೆ ಎರಡು ರೊಟ್ಟಿಗಳನ್ನು ನೀಡಿದ್ದಾರೆ.  ಎರಡಲ್ಲಿ ಒಂದು ರೊಟ್ಟಿಯನ್ನು ತಿಂದ ಗೌರವ್ ಇನ್ನೊಂದನ್ನು ಹೊರಗಡೆ ಎಸೆದಿದ್ದಾನೆ.

    ಗೌರವ್ ನ ಈ ವರ್ತನೆ ದಂಪತಿಗೆ ಕೋಪ ತರಿಸಿತ್ತು. ಅಲ್ಲದೇ ಯಾಕೆ ಬಿಸಾಕಿದ್ದಿ, ನಾವು ವಾಪಸ್ ಬರೋವಾಗ ತಿನ್ನುತ್ತಿದ್ದೆವು ಅಲ್ವ ಅಂತ ಹೇಳಿದ್ದಾರೆ. ಈ ವೇಳೆ ದಂಪತಿ ಹಾಗೂ ಗೌರವ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ತಾರಕಕ್ಕೇರಿದ್ದು, ಗೌರವ್ ಪತಿ ಜಗ್ಗುವನ್ನು ಚಲಿಸುತ್ತಿದ್ದ ರೈಲಿನಿಂದಲೇ ಹೊರದಬ್ಬಿದ್ದಾನೆ. ಘಟನೆಯನ್ನರಿತ ಪತ್ನಿ ಕಿರುಚಾಡಿದ್ದಾರೆ. ಇದರಿಂದ ಮತ್ತಷ್ಟು ಸಿಟ್ಟುಗೊಂಡ ಗೌರವ್, ಪತ್ನಿ ಶಕುಂತಲಾ ಅವರನ್ನು ಕೂಡ ರೈಲಿನಿಂದ ನೂಕಿದ್ದಾನೆ.

    ಈ ಎಲ್ಲಾ ಘಟನೆಗಳನ್ನು ಕಣ್ಣಾರೆ ನೋಡಿದ ಮತ್ತೋರ್ವ ಪ್ರಯಾಣಿಕ ಇವರ ಮಧ್ಯೆ ಬಂದು ಜಗಳ ಬಿಡಿಸಲು ಪ್ರಯತ್ನಿಸಿದ್ದಾನೆ. ಆದ್ರೆ ಗೌರವ್ ತನ್ನ ಮೇಲೆಯೂ ಹಲ್ಲೆ ನಡೆಸಬಹುದು ಎಂದು ಭಯಭೀತನಾಗಿ, ಮುಂದಿನ ನಗರ್ ನಿಲ್ದಾಣದಲ್ಲಿ ಇಳಿದು ರೈಲ್ವೆ ಸಿಬ್ಬಂದಿಗೆ ನಡೆದ ಘಟನೆಯನ್ನು ವಿವರಿಸಿದ್ದಾನೆ.

    ಕೂಡಲೇ ಎಚ್ಚೆತ್ತ ರೈಲ್ವೇ ಸಿಬ್ಬಂದಿ ಆರೋಪಿ ಗೌರವ್ ನನ್ನು ಬಂಧಿಸಿದ್ದಾರೆ. ಮೊದಲು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ ಬಳಿಕ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.