Tag: Jaipur

  • 16ನೇ ವರ್ಷಕ್ಕೆ ಕೋಟ್ಯಾಧಿಪತಿಯಾದ ಪ್ರಯಾಸ್ – ಆರ್‌ಸಿಬಿ ಖರೀದಿ ಮಾಡಿದ್ದು ಯಾಕೆ?

    16ನೇ ವರ್ಷಕ್ಕೆ ಕೋಟ್ಯಾಧಿಪತಿಯಾದ ಪ್ರಯಾಸ್ – ಆರ್‌ಸಿಬಿ ಖರೀದಿ ಮಾಡಿದ್ದು ಯಾಕೆ?

    ಜೈಪುರ: 2019ರ ಐಪಿಎಲ್ ಆವೃತ್ತಿಯಲ್ಲಿ ಭಾರತದ ಯುವ ಆಟಗಾರರು ಹೆಚ್ಚಿನ ಅವಕಾಶಗಳನ್ನು ಪಡೆದಿದ್ದು, 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ 16 ವರ್ಷದ ಪ್ರಯಾಸ್ ರೇ ಬರ್ಮನ್ ಬರೋಬ್ಬರಿ 1.5 ಕೋಟಿ ರೂ.ಗೆ ಹರಾಜು ಆಗುವ ಮೂಲಕ ದಾಖಲೆ ಬರೆದಿದ್ದಾರೆ.

    ಬೆಂಗಾಲ್ ತಂಡದ ಲೆಗ್ ಸ್ಪಿನ್ನರ್ ಆಗಿರುವ ಪ್ರಯಾಸ್ 16 ವರ್ಷಕ್ಕೆ ಕೋಟಿ ರೂ. ಮೊತ್ತಕ್ಕೆ ಹರಾಜದ ಹೆಗ್ಗಳಿಕೆಯನ್ನು ಪಡೆದಿದ್ದು, ಆರ್‌ಸಿಬಿ ತಂಡ ಪ್ರಯಾಸ್ ಅವರನ್ನು ಖರೀದಿಸಿದೆ. ಕೇವಲ ಪ್ರಯಾಸ್ ಮಾತ್ರವಲ್ಲದೇ ಹಲವು ಯುವ ಭಾರತೀಯ ಆಟಗಾರರಿಗೆ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ಹಲವು ಅಚ್ಚರಿ ಫಲಿತಾಂಶಗಳನ್ನು ನೀಡಿದೆ.

    ಯುವ ಆಟಗಾರ ಕೊಹ್ಲಿ ನಾಯಕತ್ವದ ತಂಡಕ್ಕೆ ಆಗುವ ಮೂಲಕ ತನ್ನ ಸಾಮರ್ಥ್ಯವನ್ನ ಸಾಬೀತು ಪಡಿಸಲು ಉತ್ತಮ ಅವಕಾಶವನ್ನು ಪಡೆದಿದ್ದು, `ಮಿಸ್ಟರಿ’ ಸ್ಪಿನ್ನರ್ ಎಂಬ ಹೆಸರು ಪಡೆದಿರುವ ಪ್ರಯಾಸ್ 20 ರನ್ ನೀಡಿ 4 ವಿಕೆಟ್ ಪಡೆದಿರುವುದು ಇದೂವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ. 2002 ರಲ್ಲಿ ಜನಿಸಿರುವ ಪ್ರಯಾಸ್ ಬೌಲರ್ ಮಾತ್ರವಲ್ಲದೇ ಉತ್ತಮ ಆಲ್‍ರೌಂಡರ್ ಆಗಿದ್ದು, ಬಲಗೈ ಬ್ಯಾಟ್ಸ್ ಮನ್ ಕೂಡ ಆಗಿದ್ದಾರೆ.

    ಇದುವರೆಗೂ ಆಡಿರುವ 9 ಲಿಸ್ಟ್ ಪಂದ್ಯಗಳನ್ನು ಆಡಿರುವ ಪ್ರಯಾಸ್ 6 ಇನ್ನಿಂಗ್ಸ್ ಗಳಲ್ಲಿ ಬ್ಯಾಟಿಂಗ್ ನಡೆಸಿ 47 ರನ್ ಗಳಿಸಿದ್ದರೆ ಹಾಗೂ ಬೌಲಿಂಗ್‍ನಲ್ಲಿ 11 ವಿಕೆಟ್ ಪಡೆದಿದ್ದಾರೆ. ಉಳಿದಂತೆ ವಿಜಯ್ ಹಜಾರೆ ಟೂರ್ನಿಯಲ್ಲಿ ಉತ್ತಮ ಎಕಾನಮಿಯೊಂದಿಗೆ 11 ವಿಕೆಟ್ ಪಡೆದುಕೊಂಡಿದ್ದಾರೆ. ಮೊದಲು ದೆಹಲಿ ತಂಡದ ಪರ ಆಡಿದ್ದ ಪ್ರಯಾಸ್ ಬಳಿಕ ಬೆಂಗಾಲ್ ತಂಡವನ್ನು ಸೇರಿಕೊಂಡಿದ್ದರು.

    ರಾತ್ರೋರಾತ್ರಿ ದೇಶಾದ್ಯಂತ ಸುದ್ದಿಯಾಗಿರುವ ಪ್ರಯಾಸ್ ಕೆಲ ದಿನಗಳ ಹಿಂದೆ ಟೀಂ ಇಂಡಿಯಾ ನಾಯಕ ಕೊಹ್ಲಿ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹವಣಿಸುತ್ತದ್ದರು. ಆದರೆ ಇಂದು ಕೊಹ್ಲಿ ನಾಯಕತ್ವದ ತಂಡದಲ್ಲಿ ಸ್ಥಾನಗಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಯಾಸ್ ಆಯ್ಕೆಯ ಕುರಿತು ಭಾರೀ ಚರ್ಚೆ ಕೂಡ ನಡೆದಿದ್ದು, ಪ್ರಯಾಸ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 20 ಲಕ್ಷ ಮೂಲ ಬೆಲೆ ಹೊಂದಿದ್ದ ಶಿವಂ ದುಬೆಯನ್ನು ಆರ್‌ಸಿಬಿ 5 ಕೋಟಿಗೆ ಖರೀದಿ ಮಾಡಿದ್ದು ಯಾಕೆ?

    20 ಲಕ್ಷ ಮೂಲ ಬೆಲೆ ಹೊಂದಿದ್ದ ಶಿವಂ ದುಬೆಯನ್ನು ಆರ್‌ಸಿಬಿ 5 ಕೋಟಿಗೆ ಖರೀದಿ ಮಾಡಿದ್ದು ಯಾಕೆ?

    ಬೆಂಗಳೂರು: ರಣಜಿ ಟೂರ್ನಿಯಲ್ಲಿ ಬರೋಡಾ ವಿರುದ್ಧದ ಪಂದ್ಯದಲ್ಲಿ ಮುಂಬೈ ಒಂದೇ ಓವರ್ ನಲ್ಲಿ ಸತತ ಐದು ಸಿಕ್ಸರ್ ಸಿಡಿಸಿದ್ದ ಮುಂಬೈ ಆಲ್ ರೌಂಡರ್ ಶಿವಂ ದುಬೆ ಅವರ ಅದೃಷ್ಟವೇ ಬದಲಾಗಿದೆ.

    ಜೈಪುರದಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ದುಬೆ ಅವರನ್ನು 5 ಕೋಟಿ ರೂ. ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ.

    25 ವರ್ಷದ ಎಡಗೈ ಬ್ಯಾಟ್ಸ್ ಮನ್ ಶಿವಂ ದುಬೆ ಅವರು ರಣಜಿ ಟ್ರೋಫಿ ಅಂತಿಮ ದಿನವಾದ ಸೋಮವಾರ ಎಡಗೈ ಸ್ಪಿನ್ನರ್ ಸ್ವಪ್ನಿಲ್ ಸಿಂಗ್ ಓವರ್ ನಲ್ಲಿ ಐದು ಎಸೆತಗಳಲ್ಲಿ ಐದು ಸಿಕ್ಸರ್ ಸಿಡಿಸಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ 37 ರನ್(45 ಎಸೆತ, 5 ಬೌಂಡರಿ, 1 ಸಿಕ್ಸರ್) ಹೊಡೆದಿದ್ದ ದುಬೆ ಎರಡನೇ ಇನ್ನಿಂಗ್ಸ್ ನಲ್ಲಿ 76 ರನ್(60 ಎಸೆತ, 3 ಬೌಂಡರಿ, 7 ಸಿಕ್ಸರ್) ಚಚ್ಚಿದ್ದರು.

    ಹರಾಜು ವೇಳೆ 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಶಿವಂ ದುಬೆ ಅವರ ರಣಜಿಯಲ್ಲಿ ಸ್ಫೋಟಕ ಆಟದಿಂದಾಗಿ ಫ್ರಾಂಚೈಸಿಗಳು ಖರೀದಿಸಲು ಆಸಕ್ತಿ ತೋರಿದ ಪರಿಣಾಮ ಕೊನೆಗೆ ಆರ್‌ಸಿಬಿ ಗೆ ಮಾರಾಟವಾಗಿದ್ದಾರೆ.

    6 ಅಡಿ ಎತ್ತರ ಇರುವ ದುಬೆ ಗಂಟೆಗೆ 130 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಕಳೆದ ವರ್ಷ ರಣಜಿಯಲ್ಲಿ ಒಟ್ಟು 454 ರನ್ ಸಿಡಿಸಿದ್ದ ದುಬೆ 21 ವಿಕೆಟ್ ಪಡೆದಿದ್ದರು. 2 ಶತಕ ಮತ್ತು 2 ಅರ್ಧ ಶತಕ ಸಿಡಿಸಿ ಮುಂಚಿದ್ದರು. ಮುಂಬೈ ಟಿ20 ಟೂರ್ನಿಯಲ್ಲಿ ಪ್ರವೀಣ್ ತಾಂಬೆ ಎಸೆದ ಓವರಿನ 5 ಎಸೆತವನ್ನು ಸಿಕ್ಸರ್ ಗೆ ಅಟ್ಟಿದ್ದರು.

    6 ಪ್ರಥಮ ದರ್ಜೆ ಪಂದ್ಯದಲ್ಲಿ ಶಿವಂ ದುಬೆ 567 ರನ್ ಹೊಡೆದಿದ್ದು ಇದರಲ್ಲಿ 2 ಶತಕ, 22 ವಿಕೆಟ್ ಪಡೆದಿದ್ದಾರೆ. 18 ಲಿಸ್ಟ್ ಎ ಪಂದ್ಯವಾಡಿದ್ದು, 248 ರನ್ ಮತ್ತು 23 ವಿಕೆಟ್ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜಸ್ಥಾನದಲ್ಲಿ ಕಾಂಗ್ರೆಸ್ ಜಯಗಳಿಸಿದ್ದು ಹೇಗೆ?

    ರಾಜಸ್ಥಾನದಲ್ಲಿ ಕಾಂಗ್ರೆಸ್ ಜಯಗಳಿಸಿದ್ದು ಹೇಗೆ?

    ಜೈಪುರ: ಆಡಳಿತಾರೂಢ ಬಿಜೆಪಿಗೆ ಈ ಬಾರಿಯ ವಿಧಾನಸಭಾ ಚುನಾವಣೆ ತೀವ್ರ ಮುಜುಗರಕ್ಕೆ ಉಂಟುಮಾಡುವತ್ತಾ ಫಲಿತಾಂಶ ಸಾಗುತ್ತಿದ್ದು, ಕಾಂಗ್ರೆಸ್ ಮತ್ತೆ ರಾಜಸ್ಥಾನದಲ್ಲಿ ಅಧಿಕಾರಕ್ಕೆ ಏರಿದೆ.

    ಬಿಜೆಪಿಯ ಮಹಾರಾಣಿ ವಸುಂಧರಾ ರಾಜೇ ರಾಜ್ಯವನ್ನು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ ಎನ್ನುವ ಚುನಾವಣೋತ್ತರ ಸಮೀಕ್ಷೆಗಳು ಸರಿ ಎಂದು ಇಂದಿನ ಫಲಿತಾಂಶಗಳು ತೋರಿಸುತ್ತಿವೆ. ಆಡಳಿತಾರೂಢ ಬಿಜೆಪಿ ಸರ್ಕಾರದ ವೈಫಲ್ಯ  ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲುವಾಗಿ ಪರಿವರ್ತನೆಯಾಗುತ್ತಿದೆ.

    ಬಿಜೆಪಿ ಎಡವಿದ್ದೆಲ್ಲಿ?
    – ಮುಖ್ಯಮಂತ್ರಿ ವಸುಂಧರಾ ರಾಜೇ ರವರ ಸರ್ವಾಧಿಕಾರಿ ಮನೋವೃತ್ತಿಯನ್ನು ವಿರೋಧಿಸಿ, ಹಲವಾರು ಬಿಜೆಪಿ ಮುಖಂಡರೇ ಚುನಾವಣೆಗೂ ಮುನ್ನವೇ ಬಂಡಾಯ ಎದ್ದಿದ್ದರು. ಟಿಕೆಟ್ ಸಿಗದ ಕಾರಣ 21 ಶಾಸಕರು ಮುಖ್ಯಮಂತ್ರಿ ವಿರುದ್ಧವೇ ಪ್ರಚಾರ ಕೈಗೊಂಡಿದ್ದರು. ರಾಜ್ಯದಲ್ಲಿ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆಯಿತ್ತು. ಅದನ್ನು ಕಾಂಗ್ರೆಸ್ ಸರಿಯಾಗಿಯೇ ಬಳಸಿಕೊಂಡಿತ್ತು.

    – ಸಚಿನ್ ಪೈಲಟ್ ಕಾಂಗ್ರೆಸ್ ಯುವನಾಯಕರಾಗಿ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ರೈತರ ಸಮಸ್ಯೆಗಳನ್ನು ಪರಿಹರಿಸಲು ವಸುಂಧರಾ ರಾಜೆ ಸರ್ಕಾರ ವಿಫಲವಾಗಿದ್ದು.

    – ವಸುಂಧರಾ ಧೋರಣೆಯಿಂದ ಬೇಸತ್ತ ಬಿಜೆಪಿಯ ರಾಷ್ಟ್ರೀಯ ಮುಖಂಡರು ಕೂಡ ಪ್ರಚಾರಕ್ಕೆ ರಾಜ್ಯದತ್ತ ಹೆಚ್ಚಾಗಿ ಬಂದಿರಲಿಲ್ಲ. ಗುರ್ಜರ ಸಮುದಾಯದ ಸಚಿನ್ ಪೈಲಟ್ ಹಾಗೂ ಮಾಲಿ ಸಮುದಾಯದ ಅಶೋಕ್ ಗೆಹ್ಲೋಟ್ ಒಟ್ಟಾಗಿದ್ದು ಕಾಂಗ್ರೆಸ್ ಗೆಲುವಿಗೆ ಸಹಕಾರಿ ಆಗಿದೆ.

    – ರಾಜಸ್ಥಾನದಲ್ಲಿ ಒಂದು ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಮತ್ತೊಂದು ಬಾರಿ ಬಿಜೆಪಿ ಅಧಿಕಾರಕ್ಕೆ ಏರುತ್ತದೆ. ಹೀಗಾಗಿ ಈ ಬಾರಿಯೂ ಮತದಾರ ಕಾಂಗ್ರೆಸ್ ಬೆಂಬಲಿಸಿದ್ದಾನೆ.

    2013ರಲ್ಲಿ ಏನಾಗಿತ್ತು?
    2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 163 ಸ್ಥಾನಗಳನ್ನು ಪಡೆದುಕೊಂಡಿತ್ತು. ಕಾಂಗ್ರೆಸ್ 21 ಸ್ಥಾನ ಗೆದಿದ್ದರೆ, ಇತರೆ 16 ಸ್ಥಾನಗಳನ್ನು ಗೆದ್ದಿದ್ದರು. ರಾಜಸ್ಥಾನ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 200 ಸ್ಥಾನಗಳಿದ್ದು, ಬಹುಮತಕ್ಕೆ 100 ಸ್ಥಾನಗಳು ಬೇಕಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • `ಕುಂಭರಾಮ್’ ಬದ್ಲು `ಕುಂಭಕರ್ಣ’ ಎಂದ ರಾಹುಲ್ – ಹೆಸರು ಹೇಳಲಾಗದವ್ರು ಅಧಿಕಾರಕ್ಕೆ ಬಂದು ಏನು ಮಾಡ್ತಾರೆ ಮೋದಿ ಟಾಂಗ್

    `ಕುಂಭರಾಮ್’ ಬದ್ಲು `ಕುಂಭಕರ್ಣ’ ಎಂದ ರಾಹುಲ್ – ಹೆಸರು ಹೇಳಲಾಗದವ್ರು ಅಧಿಕಾರಕ್ಕೆ ಬಂದು ಏನು ಮಾಡ್ತಾರೆ ಮೋದಿ ಟಾಂಗ್

    ಜೈಪುರ: ರಾಜಸ್ಥಾನ ಸೇರಿದಂತೆ ತೆಲಂಗಾಣ ರಾಜ್ಯಗಳ ಚುನಾವಣಾ ಪ್ರಚಾರಕ್ಕೆ ಇಂದು ಅಂತಿಮ ದಿನವಾಗಿದ್ದು, ಪ್ರಧಾನಿ ಮೋದಿ ರಾಹುಲ್ ಗಾಂಧಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.

    ರಾಜಸ್ಥಾನದ ಪಾಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯದ ಪ್ರಮುಖ ಮುಖಂಡರ ಹೆಸರು ಹೇಳಲುಬಾರದ ನಾಯಕರು ಅಧಿಕಾರಕ್ಕೆ ಬಂದು ಏನು ಮಾಡುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

    ರಾಜಸ್ಥಾನ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ನಾಯಕ ಹಾಗೂ ಜಾಟ್ ಸಮುದಾಯದ ಪ್ರಮುಖ ನಾಯಕರಾಗಿದ್ದ `ಕುಂಭರಾಮ್’ ಅವರ ಹೆಸರಿನಲ್ಲಿ ನಿರ್ಮಿಸಲಾಗಿದ್ದ ಏತ ನೀರಾವರಿ ಯೋಜನೆ ಬಗ್ಗೆ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದರು. ಆದರೆ ಆ ವೇಳೆ ಕುಂಭರಾಮ್ ಬದಲಾಗಿ ಕುಂಭಕರ್ಣ ಎಂದು ಹೇಳಿ ನಗೆಪಾಟಲಿಗೀಡಾಗಿದ್ದರು. ಈ ವಿಡಿಯೋವನ್ನು ಬಿಜೆಪಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ರಾಹುಲ್‍ರ ತಪ್ಪನ್ನೇ ಪ್ರಮುಖ ಆಸ್ತ್ರವಾಗಿ ಪ್ರಯೋಗಿಸಿದ ಪ್ರಧಾನಿ ಮೋದಿ ಅವರು, ಕಾಂಗ್ರೆಸ್ ನಾಯಕನಿಗೆ ರೈತ ನಾಯಕ ಮತ್ತು ಜಾಟ್ ಸಮುದಾಯದ ಮುಖಂಡರ ಹೆಸರೇ ಗೊತ್ತಿಲ್ಲ. ಹೀಗಿರುವ ಇವರು ಅಧಿಕಾರಕ್ಕೆ ಬಂದು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಕುಂಭಕರ್ಣ ಹೇಗೆ ತಮ್ಮ ದೀರ್ಘ ನಿದ್ದೆಗೆ ಖ್ಯಾತಿ ಪಡೆದಿದ್ದರೋ ಅಂತೆಯೇ 60 ವರ್ಷ ದೇಶದಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಪಕ್ಷ ನಿದ್ದೆಯಲ್ಲಿತ್ತು ಎಂದು ಟೀಕಿಸಿದ್ದಾರೆ.

    ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಹೆಸರು ಪ್ರಸ್ತಾಪ ಮಾಡದೆ ವಾಗ್ದಾಳಿ ನಡೆಸಿದ ಮೋದಿ, ಭ್ರಷ್ಟಾಚಾರದ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಇರುವ ಜನರಿಗೆ ರಾಜಸ್ಥಾನದ ಅಧಿಕಾರ ನೀಡುವುದು ಬೇಡ. ಅದಕ್ಕಾಗಿ ಬಿಜೆಪಿಗೆ ಮತ ನೀಡಿ  ಎಂದು ಜನರಲ್ಲಿ ಮನವಿ ಮಾಡಿದರು.

    ರಾಜಸ್ಥಾನದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಇಚ್ಛಿಸಿರುವ ಬಿಜೆಪಿ ಮುಖಂಡರು ಮತ್ತೆ ಸಿಎಂ ವಸುಂಧರಾ ರಾಜೆ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಡಿಸೆಂಬರ್ 7 ರಂದು ರಾಜಸ್ಥಾನ ಹಾಗೂ ತೆಲಂಗಾಣದಲ್ಲಿ ಚುನಾವಣೆಯ ಮತದಾನ ನಡೆಯಲಿದೆ.

    ಅಂದಹಾಗೇ 1914 ರಲ್ಲಿ ಪಟಿಯಲಾದಲ್ಲಿ ಜನಿಸಿದ ಚೌಧರಿ ಕುಂಭರಾಮ್ ಆರ್ಯ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು. ಅಲ್ಲದೇ ರೈತರ ಪರ ಹೋರಾಟಗಳನ್ನು ನಡೆಸಿ ರೈತ ನಾಯಕರಾಗಿದ್ದರು. ಇವರಿಗೆ ರಾಜಸ್ಥಾನದಲ್ಲಿ ಹೆಚ್ಚಿನ ಅಭಿಮಾನಿಗಳು ಇದ್ದು, ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, 1995 ರಲ್ಲಿ ಮೃತಪಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಧಾನಿ ಮೋದಿ ‘ಭಾರತ್ ಮಾತಾ ಕೀ ಜೈ’ ಹೇಳಬಾರದು: ರಾಹುಲ್ ಗಾಂಧಿ

    ಪ್ರಧಾನಿ ಮೋದಿ ‘ಭಾರತ್ ಮಾತಾ ಕೀ ಜೈ’ ಹೇಳಬಾರದು: ರಾಹುಲ್ ಗಾಂಧಿ

    ಜೈಪುರ: ಪ್ರಧಾನಿ ನರೇಂದ್ರ ಮೋದಿ ಭಾರತ್ ಮಾತಾ ಕೀ ಜೈ ಬದಲು ಅಂಬಾನಿ ಕೀ ಜೈ ಎಂದು ಹೇಳಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    ಚುನಾವಣಾ ನಿಮಿತ್ತ ರಾಜಸ್ಥಾನದ ಆಲ್ವಾರ್‍ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಎಲ್ಲೇ ಹೋಗಲಿ, ತಮ್ಮ ಭಾಷಣಗಳಲ್ಲಿ ಮೊದಲು ‘ಭಾರತ್ ಮಾತಾ ಕೀ ಜೈ’ ಎನ್ನುವ ಘೋಷ ವಾಕ್ಯವನ್ನು ಹೇಳುತ್ತಾರೆ. ಭಾರತ ಮಾತೆ ದೇಶದ ರೈತರು, ಯುವಜನತೆ, ಮಹಿಳೆಯರು ಹಾಗೂ ಕಾರ್ಮಿಕರ ಭಾವನೆಗೆ ಸಂಬಂಧಿಸಿದ್ದಾಗಿದೆ. ಆದರೆ ಮೋದಿ ಅವರು ಉದ್ಯಮಿ ಅಂಬಾನಿಗಾಗಿ ಕೆಲಸ ಮಾಡುತ್ತಾರೆ. ಹೀಗಾಗಿ ಮೋದಿ ‘ಭಾರತ್ ಮಾತಾ ಕೀ ಜೈ’ ಎನ್ನುವ ಬದಲು, ‘ಅನಿಲ್ ಅಂಬಾನಿ ಕೀ ಜೈ’, ‘ನೀರವ್ ಮೋದಿ ಕೀ ಜೈ’ ಎಂದು ಹೇಳಬೇಕೆಂದು ವ್ಯಂಗ್ಯವಾಡಿದ್ದಾರೆ.

    2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಗಳು ಈಡೇರಿಲ್ಲ. ಪ್ರಧಾನಿ ಮೋದಿಯವರ ಭರವಸೆಯಂತೆ ಉದ್ಯೋಗಗಳು ಸೃಷ್ಟಿಯಾಗಿದ್ದರೇ, ಆಲ್ವಾರ್ ನಲ್ಲಿ ಯುವಕರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಭಾರತ ಮಾತೆಯ ಬಗ್ಗೆ ಮಾತನಾಡುತ್ತೀರಿ ಎಂದಾದರೇ, ರೈತರ ಸಾಲಮನ್ನಾವನ್ನು ಏಕೆ ಮಾಡಿಲ್ಲ? ರೈತರನ್ನೇಕೆ ನಿರ್ಲಕ್ಷಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

    ರಫೇಲ್ ಒಪ್ಪಂದದಲ್ಲಿ ಭಾಗಿಯಾಗಿರುವುದರಿಂದಲೇ, ಪ್ರಧಾನಿ ಮೋದಿಯವರು ತಮ್ಮ ಯಾವುದೇ ಭಾಷಣಗಳಲ್ಲಿ ಇದರ ಬಗ್ಗೆ ಒಂದಿಷ್ಟು ಮಾತನಾಡಲ್ಲ. ಒಂದು ಈ ವೇಳೆ ಈ ಒಪ್ಪಂದದ ಬಗ್ಗೆ ಅವರು ಹೇಳಿಕೊಂಡರೇ, ಅವರನ್ನು ಜನ ‘ಚೌಕಿದಾರ್ ಚೋರ್ ಹೈ’ ಎಂದು ಹೇಳಿಕೊಳ್ಳುತ್ತಾರೆಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಿಂದುತ್ವದ ಜ್ಞಾನ ಎಲ್ಲಿಂದ ಬಂತು – ರಾಹುಲ್‍ಗೆ ಮೋದಿ ಪ್ರಶ್ನೆ

    ಹಿಂದುತ್ವದ ಜ್ಞಾನ ಎಲ್ಲಿಂದ ಬಂತು – ರಾಹುಲ್‍ಗೆ ಮೋದಿ ಪ್ರಶ್ನೆ

    ಜೈಪುರ: ಹಿಂದುತ್ವದ ಜ್ಞಾನ ಎಲ್ಲಿಂದ ಬಂತು ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಪ್ರಶ್ನಿಸಿದ್ದಾರೆ.

    ಚುನಾವಣಾ ನಿಮಿತ್ತ ರಾಜಸ್ಥಾನದ ಜೋಧಪುರದಲ್ಲಿನ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನನಗೆ ಹಿಂದೂ ಧರ್ಮಧ ಬಗ್ಗೆ ಎಲ್ಲಾ ಗೊತ್ತಿದೆ ಎಂದು ಸಾಧು-ಸಂತರೇ ಇದುವರೆಗೂ ಹೇಳಿಕೊಂಡಿಲ್ಲ. ಏಕೆಂದರೆ ಹಿಂದೂ ಧರ್ಮವನ್ನು ಯಾರು ಕೂಡ ಅರಗಿಸಿಕೊಳ್ಳಲು ಸಾಧ್ಯವಾಗದಷ್ಟು ಅಗಾಧವಾಗಿದೆ. ಅಲ್ಲದೇ ಹಿಂದುತ್ವದ ಬಗ್ಗೆ ನನಗೂ ಗೊತ್ತಿದೆ ಎಂದು ನಾನು ಹೇಳಿಕೊಂಡಿಲ್ಲ. ಆದರೆ ಇದು ಕೇವಲ ನಾಮಧಾರಿಗಳಿಗೆ ಮಾತ್ರ ಗೊತ್ತಿರುತ್ತದೆ ಎನ್ನುವ ಮೂಲಕ ರಾಹುಲ್ ಗಾಂಧಿಯವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ಕೆಲವರು ಚುನಾವಣಾ ಸಂದರ್ಭದಲ್ಲಿ ಹಿಂದುತ್ವದ ಮೊರೆ ಹೋಗುತ್ತಾರೆ. ಆದರೆ ನೀವು ಅಭಿವೃದ್ಧಿಯನ್ನು ನೋಡಿ ಮತ ಹಾಕುತ್ತೀರೋ ಅಥವಾ ಜಾತಿ-ಧರ್ಮದ ಮೇಲೆ ಮತ ಹಾಕುತ್ತೀರಾ ಎಂದು ಮತದಾರರಿಗೆ ಪ್ರಶ್ನಿಸಿದರು.

    ಕಾಂಗ್ರೆಸ್ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಇನ್ನು ರಾಜಸ್ಥಾನದಲ್ಲಿಯೂ ಕಾಂಗ್ರೆಸ್ಸಿಗೆ ಸ್ಥಾನ ಸಿಗುವುದಿಲ್ಲ. ಮತದಾರರು ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ನೀಡುವ ಪಕ್ಷವನ್ನು ಬೆಂಬಲಿಸಿ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.

    ರಾಹುಲ್ ಗಾಂಧಿ ಹೇಳಿದ್ದೇನೆ?
    ಶನಿವಾರ ರಾಜಸ್ಥಾನದ ಉದಯ್‍ಪುರದಲ್ಲಿ ಪ್ರಚಾರ ಭಾಷಣದಲ್ಲಿ ಮಾತನಾಡಿದ್ದ ಅವರು, ಹಿಂದೂ ಧರ್ಮದ ಬಗ್ಗೆ ಪ್ರಧಾನಿ ಮೋದಿಗೆ ಎಷ್ಟು ಗೊತ್ತಿದೆ? ಅವರು ಯಾವ ರೀತಿಯ ಹಿಂದೂ? ಅವರಿಗೆ ಹಿಂದೂ ಧರ್ಮದ ತಳಹದಿಯೇ ಗೊತ್ತಿಲ್ಲ. ಗೀತೆ ಏನು ಹೇಳುತ್ತದೆ ಎಂದರೆ, ಜ್ಞಾನ ಎಲ್ಲೆಡೆಯೂ ಇದೆ. ನಮ್ಮ ಸುತ್ತಮುತ್ತಲಿರುವ ಎಲ್ಲರಲ್ಲೂ ಜ್ಞಾನವಿರುತ್ತದೆ. ನಮ್ಮ ಪ್ರಧಾನ ಮಂತ್ರಿಗಳು ನಾನು ಹಿಂದೂ ಎಂದು ಹೇಳುತ್ತಾರೆ. ಆದರೆ ಅವರಿಗೆ ಧರ್ಮದ ಆಳವೇ ಗೊತ್ತಿಲ್ಲವೆಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಯೋತ್ಪಾದನೆಯ ವಿರುದ್ಧ ಹೋರಾಡಲು ಸಾಧ್ಯವಾಗದಿದ್ದರೆ, ಭಾರತದ ಸಹಾಯ ಕೇಳಿ: ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್

    ಭಯೋತ್ಪಾದನೆಯ ವಿರುದ್ಧ ಹೋರಾಡಲು ಸಾಧ್ಯವಾಗದಿದ್ದರೆ, ಭಾರತದ ಸಹಾಯ ಕೇಳಿ: ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್

    ಜೈಪುರ: ಭಯೋತ್ಪಾದನೆಯ ವಿರುದ್ಧ ಹೋರಾಡಲು ಸಾಧ್ಯವಾಗದೇ ಇದ್ದರೆ, ಭಾರತದ ಸಹಾಯ ಕೇಳಿ ಎಂದು ಪಾಕಿಸ್ತಾನಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.

    ಚುನಾವಣಾ ನಿಮಿತ್ತ ರಾಜಸ್ಥಾನದ ರಾಜಧಾನಿಯಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಮೂಲಕ ಪಾಕಿಸ್ತಾನ ಪ್ರಧಾನಿ ಇರ್ಮಾನ್ ಖಾನ್ ಅವರಿಗೆ ಹೇಳುವುದೇನೆಂದರೆ, ಅಫ್ಘಾನಿಸ್ತಾನದಲ್ಲಿ ಅಡಗಿರುವ ಉಗ್ರರನ್ನು ಸದೆಬಡಿಯಲು ಅಮೆರಿಕದ ಸಹಾಯವನ್ನು ಪಡೆದು ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ. ಆದರೂ ಭಯೋತ್ಪಾದನೆಯನ್ನು ನಿಗ್ರಹಿಸಲು ಕಷ್ಟವೆನಿಸಿದರೆ, ಭಾರತದ ಸಹಾಯವನ್ನು ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಾಲ್ಕು ವರ್ಷಗಳಲ್ಲಿ ಯಾವುದೇ ಭಯೋತ್ಪಾದನಾ ದಾಳಿಯೇ ನಡೆದಿಲ್ಲವೆಂದು ಹೇಳಲ್ಲ. ಆದರೆ ಭಾರತದಲ್ಲಿ ಯಾವುದೇ ರೀತಿಯ ದೊಡ್ಡ ಭಯೋತ್ಪಾದನಾ ದಾಳಿಗಳು ನಡೆದಿಲ್ಲ. ಪ್ರವಾಸೋದ್ಯಮದಲ್ಲಿ ಸ್ವರ್ಗವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಪರಿಸ್ಥಿತಿ ಸುಧಾರಿಸುತ್ತಿದೆ. ಕೇಂದ್ರ ಸರ್ಕಾರ ಆ ರಾಜ್ಯವನ್ನು ರಾಜಕೀಯ ಪ್ರಕ್ರಿಯೆಗೆ ತರುವಲ್ಲಿ ಯಶಸ್ವಿಯಾಗಿದೆ. ಆದರೆ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಪಾಕಿಸ್ತಾನ ಪ್ರಾಯೋಜಕತ್ವವನ್ನು ನೀಡುತ್ತಿದೆ ಎನ್ನುವ ಸಂಶಯವೇ ಇಲ್ಲವೆಂದು ಕಿಡಿಕಾರಿದ್ದಾರೆ.

    ದೇಶದಲ್ಲಿ ಶೇ.50 ರಿಂದ ಶೇ.60 ರಷ್ಟು ನಕ್ಸಲ್ ದಾಳಿಗಳು ಕಡಿಮೆಯಾಗಿದೆ. 90 ಜಿಲ್ಲೆಗಳಲ್ಲಿ ನಡೆಯುತ್ತಿದ್ದ ನಕ್ಸಲ್ ಚಟುವಟಿಕೆ ಈಗ 8 ರಿಂದ 9 ಜಿಲ್ಲೆಗಳಲ್ಲಿ ಮಾತ್ರ ಉಳಿದಿದೆ. ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ನಕ್ಸಲರ ಸಮಸ್ಯೆಯು ಕೂಡ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚುನಾವಣೆಯಲ್ಲಿ ತಮ್ಮ ಹೆಸರು ಬಳಸಿಕೊಂಡ ರಾಜಕೀಯ ಪಕ್ಷಕ್ಕೆ ತಿರುಗೇಟು ಕೊಟ್ಟ ಸೆಹ್ವಾಗ್

    ಚುನಾವಣೆಯಲ್ಲಿ ತಮ್ಮ ಹೆಸರು ಬಳಸಿಕೊಂಡ ರಾಜಕೀಯ ಪಕ್ಷಕ್ಕೆ ತಿರುಗೇಟು ಕೊಟ್ಟ ಸೆಹ್ವಾಗ್

    ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹೆಸರು ಬಳಕೆ ಮಾಡಿ ಪ್ರಚಾರ ಪಡೆಯುತ್ತಿದ್ದ ಸ್ಥಳೀಯ ರಾಜಕೀಯ ಪಕ್ಷಕ್ಕೆ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ತಿರುಗೇಟು ನೀಡಿದ್ದು, ಇಂತಹ ಸುಳ್ಳು ಪ್ರಚಾರಕ್ಕೆ ಮೋಸ ಹೋಗದಂತೆ ಜನರಲ್ಲಿ ಮನವಿ ಮಾಡಿದ್ದಾರೆ.

    ರಾಜಸ್ಥಾನದ ಪ್ರಾದೇಶಿಕ ಪಕ್ಷವಾದ ರಾಷ್ಟ್ರಿಯ ಲೋಕತಾಂತ್ರಿಕ್ ಪಕ್ಷ ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ತಮ್ಮ ಪ್ರಚಾರ ಸಭೆಯಲ್ಲಿ ಸೆಹ್ವಾಗ್ ಕಾರ್ಯಕರ್ತರನ್ನು ಮಾತನಾಡಲಿದ್ದಾರೆ ಎಂದು ತಿಳಿಸಿತ್ತು. ಅಲ್ಲದೇ ಜಾಹೀರಾತು ಪ್ರತಿಯಲ್ಲಿ ಪಕ್ಷದ ಚಿಹ್ನೆಯಾದ ಬಾಟಲ್ ಹಾಗೂ ನಾಯಕರ ಫೋಟೋವನ್ನು ಪ್ರಕಟಿಸಿತ್ತು.

    ಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತಿನ ಫೋಟೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ನಾನು ದುಬೈನಲ್ಲಿದ್ದೇನೆ. ಯಾವುದೇ ರಾಜಕೀಯ ಪಕ್ಷದೊಂದಿಗೆ ಮಾತುಕತೆ ನಡೆಸಿಲ್ಲ. ಅದರೂ ಯಾವುದೇ ನಾಚಿಕೆ ಇಲ್ಲದೆ ಪ್ರಚಾರಕ್ಕಾಗಿ ಇಂತಹ ಸುಳ್ಳು ಹೇಳುವ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಎಷ್ಟು ಮೋಸ ಮಾಡಬಹುದು. ಅದ್ದರಿಂದ ಮೋಸಗಾರರು ಮತ್ತು ಸುಳ್ಳುಗಾರರಗಿಂತ ಉತ್ತಮರನ್ನು ಆಯ್ಕೆ ಮಾಡಿ ಎಂದು ತಿಳಿಸಿದ್ದಾರೆ.

    ವೀರೇಂದ್ರ ಸೆಹ್ವಾಗ್ ಸದ್ಯ ದುಬೈನಲ್ಲಿ ನಡೆಯುತ್ತಿರುವ ಟಿ10 ಲೀಗ್ ನಲ್ಲಿ ಭಾಗವಹಿಸಿದ್ದು, ಮರಾಠ ಅರೇಬಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಮರಾಠ ಅರೇಬಿಯನ್ಸ್ ತಂಡದ ಪರವೇ ಸೆಹ್ವಾಗ್ ಆಡಿದ್ದರು. ಕಳೆದ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೆಂಟರ್ ಆಗಿದ್ದ ಸೆಹ್ವಾಗ್, 2019ರ ಆವೃತ್ತಿಗೆ ತಂಡದಿಂದ ಹೊರ ನಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಮನ ಭಕ್ತರು ಬಿಜೆಪಿಗೆ, ರಾವಣನ ಭಕ್ತರು ಕಾಂಗ್ರೆಸ್ಸಿಗೆ ಮತ ಹಾಕ್ತಾರೆ: ಯೋಗಿ ಆದಿತ್ಯನಾಥ್

    ರಾಮನ ಭಕ್ತರು ಬಿಜೆಪಿಗೆ, ರಾವಣನ ಭಕ್ತರು ಕಾಂಗ್ರೆಸ್ಸಿಗೆ ಮತ ಹಾಕ್ತಾರೆ: ಯೋಗಿ ಆದಿತ್ಯನಾಥ್

    ಜೈಪುರ: ರಾಮನ ಭಕ್ತರು ಬಿಜೆಪಿಗೆ ಮತ ಹಾಕಿದರೆ, ರಾವಣನ ಭಕ್ತರು ಕಾಂಗ್ರೆಸ್ಸಿಗೆ ಮತ ಹಾಕುತ್ತಾರೆಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

    ಯೋಗಿ ಆದಿತ್ಯನಾಥ್ ಬಿಜೆಪಿಯ ಸ್ಟಾರ್ ಪ್ರಚಾರಕರೆಂದೇ ಗುರುತಿಸಿಕೊಂಡಿದ್ದಾರೆ. ಚುನಾವಣಾ ಪ್ರಚಾರದ ಬರದಲ್ಲಿ ರಾಮಭಕ್ತರು ಖುದ್ದು ಕೇಸರಿ ಪಕ್ಷಕ್ಕೆ ಓಟು ಹಾಕುತ್ತಾರೆ ಎನ್ನುವ ಮೂಲಕ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ರಾಜಸ್ಥಾನದ ಮಲ್ಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ರಾಮನ ಪರಮ ಭಕ್ತ ಹನುಮಂತನೂ ಸಹ ದಲಿತ ಬುಡಕಟ್ಟು ಜನಾಂಗಕ್ಕೆ ಸೇರಿದ್ದನು. ಅಲ್ಲದೇ ಕಾಡಿನ ನಿವಾಸಿಯಾಗಿದ್ದನು. ಭಜರಂಗ ಬಲಿ ಪೂರ್ವದಿಂದ ಪಶ್ಚಿಮಕ್ಕೆ ಹಾಗೂ ಉತ್ತರದಿಂದ ದಕ್ಷಿಣದ ವರೆಗೂ ಭಾರತದಲ್ಲಿರುವ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದ್ದನು. ಇದು ಕೇವಲ ಹನುಮಂತನ ಇಚ್ಛೆಯಾಗಿರಲಿಲ್ಲ. ರಾಮನ ಇಂಗಿತವೂ ಆಗಿತ್ತು. ಹೀಗಾಗಿ ಇವರಿಬ್ಬರ ಮಹತ್ವಾಕಾಂಕ್ಷೆಯನ್ನು ಈಡೇರಿಸುವವರೆಗೂ ವಿಶ್ರಾಂತಿಯನ್ನು ಮಾಡುವುದಿಲ್ಲವೆಂದು ಹೇಳಿದ್ದಾರೆ.

    ಇದೇ ವೇಳೆ ರಾಮನನ್ನು ಪೂಜಿಸುವವರು ಖಂಡಿತವಾಗಿಯೂ ಬಿಜೆಪಿಗೆ ಮತ ಹಾಕುತ್ತಾರೆ. ಆದರೆ ರಾವಣ ಭಕ್ತರು ಕಾಂಗ್ರೆಸ್ಸಿಗೆ ಮತ ಹಾಕುವ ಮೂಲಕ ತಮ್ಮ ನಿಷ್ಠೆಯನ್ನು ತೋರುತ್ತಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂತ್ಯಸಂಸ್ಕಾರಕ್ಕಾಗಿ ಸ್ನಾನ ಮಾಡಿಸುತ್ತಿರುವಾಗ್ಲೇ ಎದ್ದು ಕುಳಿತ 95ರ ವೃದ್ಧ

    ಅಂತ್ಯಸಂಸ್ಕಾರಕ್ಕಾಗಿ ಸ್ನಾನ ಮಾಡಿಸುತ್ತಿರುವಾಗ್ಲೇ ಎದ್ದು ಕುಳಿತ 95ರ ವೃದ್ಧ

    ಜೈಪುರ್: ಮೃತಪಟ್ಟಿದ್ದಾರೆಂದುಕೊಂಡಿದ್ದ 95 ವರ್ಷದ ವೃದ್ಧರೊಬ್ಬರು ಅಂತ್ಯಸಂಸ್ಕಾರದ ವೇಳೆ ಎದ್ದು ಕುಳಿತು ಎಲ್ಲರಿಗೂ ಅಚ್ಚರಿ ಮೂಡಿಸಿದ ಘಟನೆ ರಾಜಸ್ಥಾನದ ಝನ್‍ಝನು ಜಿಲ್ಲೆಯಲ್ಲಿ ನಡೆದಿದೆ.

    ಶನಿವಾರ 95 ವರ್ಷದ ಬುಧ್‍ರಾಮ್ ಗುಜ್ಜರ್ ಮನೆಯಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದರು. ಕೂಡಲೇ ಕುಟುಂಬಸ್ಥರು ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ವೈದ್ಯರು ಗುಜ್ಜರ್ ಮೃತಪಟ್ಟಿದ್ದಾರೆಂದು ದೃಢಪಡಿಸಿದ್ದರು. ಹೀಗಾಗಿ ಕುಟುಂಬಸ್ಥರು ಮೃತದೇಹವನ್ನು ಗ್ರಾಮಕ್ಕೆ ವಾಪಾಸ್ಸು ತಂದು, ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.

    ಅಂತ್ಯಸಂಸ್ಕಾರದ ಸಿದ್ಧತೆ ವೇಳೆ ಎಲ್ಲಾ ಕುಟುಂಬಸ್ಥರು ತಮ್ಮ ತಲೆ ಬೋಳಿಸಿಕೊಂಡು ವಿಧಿ-ವಿಧಾನದ ಪ್ರಕಾರ ಕಾರ್ಯವನ್ನು ನಡೆಸುತ್ತಿದ್ದರು. ಈ ವೇಳೆ ಮೃತದೇಹಕ್ಕೆ ಸ್ನಾನ ಮಾಡಿಸುವ ಶಾಸ್ತ್ರವನ್ನು ನಡೆಸಲು ಸಿದ್ಧರಾಗಿದ್ದರು. ಈ ವೇಳೆ ಗುಜ್ಜರ್ ದೇಹಕ್ಕೆ ನೀರು ಹಾಕುತ್ತಿರುವಾಗ ಏಕಾಏಕಿ ಅವರ ದೇಹ ನಡುಗಲು ಶುರುಮಾಡಿದೆ. ಬಳಿಕ ಜೋರಾಗಿ ಉಸಿರಾಡುತ್ತಾ ಗುಜ್ಜರ್ ಎದ್ದು ಕುಳಿತ್ತಿದ್ದಾರೆ. ಇದನ್ನ ಕಂಡ ಗ್ರಾಮಸ್ಥರು ಹಾಗೂ ಕುಟುಂಬದವರು ಕ್ಷಣಕಾಲ ಬೆಚ್ಚಿಬಿದ್ದಿದ್ದಾರೆ.

    ನಂತರ ಕುಟುಂಬಸ್ಥರು ಗುಜ್ಜರ್ ಅವರನ್ನು ಮಾತನಾಡಿಸಿದಾಗ, ನನಗೆ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ನಿದ್ದೆ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಗುಜ್ಜರ್ ಪವಾಡ ಸದೃಶ ಮತ್ತೊಮ್ಮೆ ಬದುಕಿದ್ದಾರೆಂದು ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಜಿಲ್ಲೆಯಿಡೀ ಮೃತ ಗುಜ್ಜರ್ ದಿಢೀರನೇ ಹೇಗೆ ಎದ್ದು ಕುಳಿತರು ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews