ಜೈಪುರ: ಭಾರತ ಭೂ ಪ್ರದೇಶವನ್ನು ಪ್ರವೇಶ ಮಾಡಿದ್ದ ಪಾಕಿಸ್ತಾನದ ಡ್ರೋನನ್ನು ಭಾರತೀಯ ವಾಯುಪಡೆ ರಾಜಸ್ಥಾನದ ಬಿಕಾನೇರ್ ಪ್ರದೇಶದಲ್ಲಿ ಹೊಡೆದುರುಳಿಸಿದೆ.
ಮೂಲಗಳ ಪ್ರಕಾರ ಸೋಮವಾರ ಬೆಳಗ್ಗೆ 11.30ರ ಸಮಯದಲ್ಲಿ ಭಾರತ ಗಡಿ ಪ್ರದೇಶವನ್ನು ದಾಟಿ ಪಾಕಿಸ್ತಾನದ ಡ್ರೋನ್ ಆಗಮಿಸಿತ್ತು. ಕೂಡಲೇ ಎಚ್ಚೆತ್ತ ಭಾರತ ವಾಯುಪಡೆ ಡ್ರೋನ್ ಹೊಡೆದುರುಳಿಸಲು ಯಶಸ್ವಿಯಾಗಿದೆ.

ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನೀಡಿರುವ ಮಾಹಿತಿಯಂತೆ 11.30ರ ಸಮಯದಲ್ಲಿ ಪಾಕಿಸ್ತಾನದ ಘರ್ಸನಾ ಗಡಿ ಭಾಗದಲ್ಲಿ 2 ಬಾಂಬ್ ಬ್ಲಾಸ್ಟ್ ಆಗಿರುವುದು ಖಚಿತವಾಗಿದ್ದು, ಡ್ರೋನ್ ಅವಶೇಷಗಳು ಭಾರತದ ಗಡಿ ಭಾಗದಲ್ಲಿ ಬಿದ್ದಿದೆ. ಆದರೆ ಈ ವರದಿಯನ್ನು ಪಾಕಿಸ್ತಾನ ಮಾಧ್ಯಮಗಳು ಅಲ್ಲಗೆಳೆದಿವೆ.
ರಾಷ್ಟ್ರಿಯ ಮಾಧ್ಯಮ ನೀಡಿರುವ ಮಾಹಿತಿಯ ಅನ್ವಯ ಪಾಕಿಸ್ತಾನದ ಡ್ರೋನ್ ಭಾರತ ಗಡಿ ಪ್ರವೇಶ ಮಾಡಿರುವುದನ್ನು ರೆಡಾರ್ ಗಳು ಪತ್ತೆ ಮಾಡಿದ್ದು, ಈ ವೇಳೆ ಸುಖೋಯ್ 30ಎಂಕೆಐ ವಿಮಾನ ಬಳಸಿ ಡ್ರೋನ್ ಹೊಡೆದುರುಳಿಸಲಾಗಿದೆ.
ಇತ್ತ ಪಾಕಿಸ್ತಾನ ಸೇನೆ ತನ್ನ ಉದ್ಧಟತನವನ್ನು ಮುಂದುವರಿಸಿದ್ದು, ಜಮ್ಮು ಕಾಶ್ಮೀರದ ಪೂಂಚ್ ವಲಯದಲ್ಲಿ ಗುಂಡಿನ ದಾಳಿ ನಡೆಸಿದೆ. ಅಲ್ಲದೇ ಕಳೆದ ಒಂದು ವಾರದ ಅವಧಿಯಲ್ಲಿ 57 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv






















