Tag: Jaipur

  • ಮೋದಿ, ಶಾ ಸೇರಿಕೊಂಡು ಬಿಜೆಪಿ ಸಂಪ್ರದಾಯ, ಮೌಲ್ಯವನ್ನು ಬದಲಿಸಿದ್ದಾರೆ: ಜಸ್ವಂತ್ ಪುತ್ರ ಕಿಡಿ

    ಮೋದಿ, ಶಾ ಸೇರಿಕೊಂಡು ಬಿಜೆಪಿ ಸಂಪ್ರದಾಯ, ಮೌಲ್ಯವನ್ನು ಬದಲಿಸಿದ್ದಾರೆ: ಜಸ್ವಂತ್ ಪುತ್ರ ಕಿಡಿ

    ಜೈಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿಕೊಂಡು ಬಿಜೆಪಿ ಪಕ್ಷದ ಸಂಪ್ರದಾಯ ಮತ್ತು ಮೌಲ್ಯಗಳನ್ನು ಬದಲಿಸಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರ ಪುತ್ರ ಮನ್ವೇಂದ್ರ ಸಿಂಗ್ ಕಿಡಿಕಾರಿದ್ದಾರೆ.

    ಕಳೆದ ವರ್ಷ ಮನ್ವೇಂದ್ರ ಸಿಂಗ್ ಅವರು ಕಾಂಗ್ರೆಸ್ ಸೇರಿದ್ದು, ಸದ್ಯ ರಾಜಸ್ಥಾನದ ಬರ್ಮರ್ ಲೋಕಸಭೆ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಮಾಧ್ಯಮಕ್ಕೆ ಸಂದರ್ಶನ ನೀಡಿದ ಅವರು ಪುಲ್ವಾಮಾ ಉಗ್ರರ ದಾಳಿ, ಬಾಲಾಕೋಟ್‍ನಲ್ಲಿ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಯನ್ನು ಇಟ್ಟುಕೊಂಡು ಮತ ಕೇಳುತ್ತಿರುವುದು ಬಿಜೆಪಿಯ ತತ್ವಗಳಿಗೆ ವಿರುದ್ಧವಾಗಿದೆ. ಮೋದಿ ಹಾಗೂ ಅಮಿತ್ ಶಾ ಅವರು ತಮ್ಮ ಆಡಳಿತದ ಅವಧಿಯಲ್ಲಿ ಬಿಜೆಪಿ ಪಕ್ಷವನ್ನು ಬದಲಿಸಿದ್ದಾರೆ. ಈಗ ಸಂಸ್ಕೃತಿ, ನಂಬಿಕೆ, ಯೋಚನೆ, ಆಚರಣೆ, ಪ್ರಮುಖವಾಗಿ ಮಾನವ ಸಂಬಂಧಗಳು ಹೀಗೆ ಎಲ್ಲ ವಿಚಾರಗಳಲ್ಲೂ ಬಿಜೆಪಿ ಬದಲಾಗಿದೆ ಎಂದು ಆರೋಪಿಸಿದರು.

    ಜಸ್ವಂತ್ ಸಿಂಗ್ ಸೇರಿದಂತೆ 75 ವರ್ಷ ಮೀರಿರುವ ಕೆಲವು ಹಿರಿಯ ನಾಯಕರಿಗೆ ಬಿಜೆಪಿ ಲೋಕಸಮರಕ್ಕೆ ಟಿಕೆಟ್ ನೀಡಲು ನಿರಾಕರಿಸಿದೆ. ಬಿಜೆಪಿಯ ಮೂಲ ತತ್ವವನ್ನೇ ಈಗಿರುವ ನಾಯಕರು ಬದಲಿಸಿದ್ದಾರೆ. ದ್ವೇಷವನ್ನು ಬಿತ್ತುತ್ತಿರುವವರ ವಿರುದ್ಧ ನಾನು ನಿಲ್ಲುತ್ತೇನೆ, ಹೋರಾಟ ಮಾಡುತ್ತೇನೆ ಎಂದು ಮನ್ವೇಂದ್ರ ಸಿಂಗ್ ಹೇಳಿದರು.

    ಜಾತಿ, ಧರ್ಮದ ಆಧಾರದ ಮೇಲೆ ಚುನಾವಣೆಯಲ್ಲಿ ಗೆಲುವು ಸೋಲು ನಿರ್ಧಾರವಾಗುತ್ತದೆ ಎನ್ನುವುದನ್ನು ನಾನು ನಂಬಲ್ಲ. ರಾಜಕೀಯದಲ್ಲಿ ಪದೇ ಪದೇ ಅಲೆ ಏಳಲ್ಲ. ಹಾಗೆಯೇ ಯಾವಾಗಲೂ ಒಂದೇ ಸೂತ್ರ ಯಶಸ್ಸು ತಂದು ಕೊಡಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ಚೆಂಡು ತಾಗಿದರೂ ಹಾರದ ಬೇಲ್ಸ್- ‘ಬೆಸ್ಟ್ ಫೆವಿಕಾಲ್ ಜಾಹೀರಾತು’ ಎಂದ್ರು ಟ್ವಿಟ್ಟಿಗರು

    ಚೆಂಡು ತಾಗಿದರೂ ಹಾರದ ಬೇಲ್ಸ್- ‘ಬೆಸ್ಟ್ ಫೆವಿಕಾಲ್ ಜಾಹೀರಾತು’ ಎಂದ್ರು ಟ್ವಿಟ್ಟಿಗರು

    ಜೈಪುರ: ಐಪಿಎಲ್ 12ನೇ ಆವೃತ್ತಿಯ ಭಾಗವಾಗಿ ಭಾನುವಾರ ನಡೆದ ರಾಜಸ್ಥಾನ ರಾಯಲ್ಸ್ ಹಾಗೂ ಕೆಕೆಆರ್ ನಡುವಿನ ಪಂದ್ಯದಲ್ಲಿ ಕೋಲ್ಕತ್ತಾ ಗೆಲುವು ಪಡೆದಿದ್ದು ಎಲ್ಲರಿಗೂ ತಿಳಿದ ಸಂಗತಿ. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಕೆಕೆಆರ್ ತಂಡದ ಕ್ರಿಸ್ ಲೀನ್ ಜೀವದಾನ ಪಡೆದಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ನಡೆದಿದ್ದೇನು?
    ರಾಜಸ್ಥಾನ ರಾಯಲ್ಸ್ ತಂಡದ ನೀಡಿದ ಗುರಿ ಬೆನ್ನತ್ತಿದ ಕೆಕೆಆರ್ ಪರ ಕ್ರಿಸ್ ಲೀನ್ ಆರಂಭಿಕರಾಗಿ ಕಣಕ್ಕೆ ಇಳಿದು ಭರ್ಜರಿ ಪ್ರದರ್ಶನ ತೋರಿದ್ದರು. ಆದರೆ ಇನ್ನಿಂಗ್ಸ್ ಆರಂಭದ 4ನೇ ಓವರಿನಲ್ಲಿ 13 ರನ್ ಗಳಿಸಿ ಆಡುತ್ತಿದ್ದ ಕ್ರಿಸ್ ಲೀನ್, ಧವಲ್ ಕುಲಕರ್ಣಿ ಬೌಲಿಂಗ್‍ನಲ್ಲಿ ಔಟಾಗುವ ಸಂದರ್ಭ ಎದುರಿಸಿದ್ದು ಧವಲ್ ಎಸೆತದ ಚೆಂಡು ಲೀನ್ ಬ್ಯಾಟಿಗೆ ತಾಗಿ ನೇರ ವಿಕೆಟ್‍ಗೆ ಅಪ್ಪಳಿಸಿತ್ತು. ಆದರೆ ಬಾಲ್ ತಾಗಿದ ವೇಗಕ್ಕೆ ಬೇಲ್ಸ್ ಸ್ವಲ್ಪ ಮೇಲಕ್ಕೆ ಹಾರಿ ಲೈಟ್ ಮಿನುಗಿದರು ಮತ್ತೆ ವಿಕೆಟ್ ನಡುವೆಯೇ ಬೇಲ್ಸ್ ಬಂದು ಕುಳಿತಿತ್ತು.

    ಇತ್ತ ಬೌಲಿಂಗ್ ಮಾಡುತ್ತಿದ್ದ ಕುಲಕರ್ಣಿ ವಿಕೆಟ್ ಪಡೆದ ಸಂಭ್ರಮ ಕ್ಷಣ ಮಾತ್ರದಲ್ಲಿ ನಿರಾಸೆ ಅನುಭವಿಸುವಂತೆ ಮಾಡಿತು. ರಾಜಸ್ಥಾನ ತಂಡದ ನಾಯಕ ರಹಾನೆ ಕೂಡ ಅಚ್ಚರಿಗೊಂಡು ಕ್ಷಣಕಾಲ ನಿರಾಸೆ ಅನುಭವಿಸಿದರು. ಅದೃಷ್ಟದ ಜೀವದಾನ ಪಡೆದ ಲೀನ್ ಪಂದ್ಯದಲ್ಲಿ 32 ಎಸೆತಗಳಲ್ಲೇ ಅರ್ಧ ಶತಕ ಪೂರೈಸಿ ಮಿಂಚಿದರು.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಈ ಸಂದರ್ಭವನ್ನು ಫೆವಿಕಾಲ್ ಸಂಸ್ಥೆ ಜಾಹೀರಾತು ನೀಡಲು ಉತ್ತಮ ಸಂದರ್ಭ ಎಂದು ತಿಳಿಸಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮತ್ತು ಕೆಲವರು ಕ್ರಿಕೆಟ್ ನಿಯಮಗಳ ಬದಲಾವಣೆಯ ಸಂದರ್ಭದ ಎದುರಾಗಿದೆ ಎಂದಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಇಂತಹದೇ ಘಟನೆಗಳು ಪುನರವರ್ತನೆ ಆಗಿದ್ದು, ಎಂಎಸ್ ಧೋನಿ ಹಾಗೂ ಕೆಎಲ್ ರಾಹುಲ್ ಕೂಡ ಇದೇ ರೀತಿ ಅದೃಷ್ಟದ ಜೀವದಾನ ಪಡೆದಿದ್ದರು.

  • ಐಪಿಎಲ್ ಕಿರಿಯ ಆಟಗಾರ – ಆರ್‌ಸಿಬಿ ಪರ ಪ್ರಯಾಸ್ ಪಾದಾರ್ಪಣೆ

    ಐಪಿಎಲ್ ಕಿರಿಯ ಆಟಗಾರ – ಆರ್‌ಸಿಬಿ ಪರ ಪ್ರಯಾಸ್ ಪಾದಾರ್ಪಣೆ

    ಜೈಪುರ: 2019ರ ಐಪಿಎಲ್ ಆವೃತ್ತಿಯಲ್ಲಿ ಆರ್ ಸಿಬಿ ತಂಡದ ಪ್ರಯಾಸ್ ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ್ದು, ಆ ಮೂಲಕ ಐಪಿಎಲ್ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಪ್ರಯಾಸ್ ಪಾದಾರ್ಪಣೆ ಮಾಡಿದ್ದಾರೆ. 16 ವರ್ಷ 157 ದಿನಗಳ ವಯಸ್ಸಿಗೆ ಪ್ರಯಾಸ್ ಐಪಿಎಲ್ ಆಡುವ ಅವಕಾಶ ಪಡೆದಿದ್ದು, ಇದಕ್ಕೂ ಮುನ್ನ ಅಫ್ಘಾನಿಸ್ತಾನದ ಸ್ಪಿನ್ನರ್ ಮುಜೀಬ್ ರೆಹಮಾನ್ ಯಂಗೆಸ್ಟ್ ಪ್ಲೇಯರ್ ಎಂಬ ಹೆಗ್ಗಳಿಕೆ ಪಡೆದಿದ್ದರು.

    ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಈ ಬಾರಿ ತಂಡದಲ್ಲಿ ಬದಲಾವಣೆ ಮಾಡುವ ಮೂಲಕ ಪ್ರಯಾಸ್‍ಗೆ ಅವಕಾಶ ನೀಡಿ, ಉತ್ತಮ ಆಟಗಾರ ಎಂದು ಹೇಳಿದ್ದಾರೆ. ಅಂದಹಾಗೇ 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಪ್ರಯಾಸ್ ರೇ ಬರ್ಮನ್‍ರನ್ನ ಬರೋಬ್ಬರಿ 1.5 ಕೋಟಿ ರೂ ನೀಡಿ ಆರ್ ಸಿಬಿ ಖರೀದಿ ಮಾಡಿತ್ತು.

    ಬೆಂಗಾಲ್ ತಂಡದ ಲೆಗ್ ಸ್ಪಿನ್ನರ್ ಆಗಿರುವ ಪ್ರಯಾಸ್ 16 ವರ್ಷಕ್ಕೆ ಕೋಟಿ ರೂ. ಮೊತ್ತಕ್ಕೆ ಹರಾಜದ ಹೆಗ್ಗಳಿಕೆಯನ್ನು ಪಡೆದಿದ್ದರು. ‘ಮಿಸ್ಟರಿ’ ಸ್ಪಿನ್ನರ್ ಎಂಬ ಹೆಸರು ಪಡೆದಿರುವ ಪ್ರಯಾಸ್ 20 ರನ್ ನೀಡಿ 4 ವಿಕೆಟ್ ಪಡೆದಿರುವುದು ಇದೂವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ. 2002 ರಲ್ಲಿ ಜನಿಸಿರುವ ಪ್ರಯಾಸ್ ಬೌಲರ್ ಮಾತ್ರವಲ್ಲದೇ ಉತ್ತಮ ಆಲ್‍ರೌಂಡರ್ ಆಗಿದ್ದು, ಬಲಗೈ ಬ್ಯಾಟ್ಸ್ ಮನ್ ಕೂಡ ಆಗಿದ್ದಾರೆ.

    ಇದುವರೆಗೂ 9 ಲಿಸ್ಟ್ ಎ ಪಂದ್ಯಗಳನ್ನು ಆಡಿರುವ ಪ್ರಯಾಸ್ 6 ಇನ್ನಿಂಗ್ಸ್ ಗಳಲ್ಲಿ ಬ್ಯಾಟಿಂಗ್ ನಡೆಸಿ 47 ರನ್ ಗಳಿಸಿದ್ದರೆ ಹಾಗೂ ಬೌಲಿಂಗ್‍ನಲ್ಲಿ 11 ವಿಕೆಟ್ ಪಡೆದಿದ್ದಾರೆ. ಉಳಿದಂತೆ ವಿಜಯ್ ಹಜಾರೆ ಟೂರ್ನಿಯಲ್ಲಿ ಉತ್ತಮ ಎಕಾನಮಿಯೊಂದಿಗೆ 11 ವಿಕೆಟ್ ಪಡೆದುಕೊಂಡಿದ್ದಾರೆ. ಮೊದಲು ದೆಹಲಿ ತಂಡದ ಪರ ಆಡಿದ್ದ ಪ್ರಯಾಸ್ ಬಳಿಕ ಬೆಂಗಾಲ್ ತಂಡವನ್ನು ಸೇರಿಕೊಂಡಿದ್ದರು. ಮೊದಲ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿರುವ ಪ್ರಯಾಸ್ ಯಾವುದೇ ವಿಕೆಟ್ ಪಡೆಯದೆ 56 ರನ್ ನೀಡಿದ್ದರು.

  • ಲವ್ವರ್‌ಗೆ ವಿಡಿಯೋ ಕಾಲ್ ಮಾಡಿ ಮಹಿಳೆ ನೇಣಿಗೆ ಶರಣು

    ಲವ್ವರ್‌ಗೆ ವಿಡಿಯೋ ಕಾಲ್ ಮಾಡಿ ಮಹಿಳೆ ನೇಣಿಗೆ ಶರಣು

    ಜೈಪುರ: ದೆಹಲಿ ಮೂಲದ 28 ವರ್ಷದ ಮಹಿಳೆಯೊಬ್ಬರು ಹೋಟೆಲ್ ರೂಮಿನಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಮಿರ್ಜಾ ಖತೂನ್ ಆತ್ಮಹತ್ಯೆಗೆ ಶರಣಾದ ಮಹಿಳೆ. ಮಿರ್ಜಾ ಗುರುವಾರ ರಾತ್ರಿ ಜೈಪುರಕ್ಕೆ ಬಂದಿದ್ದು, ನಾಲ್ಕು ದಿನಗಳ ಕಾಲ ಮಿರ್ಜಾ ಹೋಟೆಲ್ ಬುಕ್ ಮಾಡಿದ್ದರು. ಆದರೆ ಎರಡು ದಿನದಿಂದ ಆಕೆ ರೂಮಿನಿಂದ ಹೊರಗೆ ಬಂದಿರಲಿಲ್ಲ. ರೂಮಿಗೆ ಊಟ ಮತ್ತು ಟೀ ಯನ್ನು ಆರ್ಡರ್ ಮಾಡಿ ತರಿಸಿಕೊಳ್ಳುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ರೂಮಿನಲ್ಲಿಯೇ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಮಿರ್ಜಾ ಮೂರು ವರ್ಷಗಳಿಂದ ರಣಧೀರ್ ವಿಶ್ವಕರ್ಮ ಎಂಬಾತನ ಜೊತೆ ಲಿವ್‍ಇನ್ ರಿಲೆಷನ್‍ಶಿಪ್‍ನಲ್ಲಿ ಇದ್ದರು. ಇವರಿಗೆ 4 ವರ್ಷದ ಮಗನೂ ಕೂಡ ಇದ್ದಾನೆ. ಆದರೆ ಕೆಲವು ತಿಂಗಳ ಹಿಂದೆ ಇಬ್ಬರ ಸಂಬಂಧವೂ ಮುರಿದು ಬಿದ್ದಿತ್ತು ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

    ಮೃತ ಮಿರ್ಜಾ ರೂಮಿನಿಂದ ಹೊರಬಾರದೇ ಇದ್ದಾಗ ಅನುಮಾನಗೊಂಡು ಹೋಟೆಲ್ ಸಿಬ್ಬಂದಿ ನೋಡಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ರೂಮಿಗೆ ಬಾಗಿಲು ಹೊಡೆದು ಒಳ ಹೋಗಿದ್ದಾರೆ. ಆಗ ಮಿರ್ಜಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು 24 ಗಂಟೆಗಳ ಮುಂಚೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ತೀವ್ರ ಖಿನ್ನತೆಗೆ ಒಳಗಾಗಿದ್ದರಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಡಿಸಿಪಿ ಧರ್ಮೇಂದ್ರ ಸಾಗರ್ ಶಂಕಿಸಿದ್ದಾರೆ.

    ಮಿರ್ಜಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನಾ ತನ್ನ ಲವ್ವರ್ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಇಬ್ಬರು ಫೋನಿನಲ್ಲಿ ಸಂಭಾಷಣೆ ಮಾಡುವಾಗಲೇ ಮಿರ್ಜಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯಕ್ಕೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಕ್ಕೆ ಮೃತದೇಹವನ್ನು ಹಸ್ತಾಂತರಿಸಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

  • ರಾಜಕಾರಣ ಬದಲು ಮೋದಿ ಬಾಲಿವುಡ್ ಸೇರಬೇಕಿತ್ತು: ಗೆಹ್ಲೋಟ್ ವ್ಯಂಗ್ಯ

    ರಾಜಕಾರಣ ಬದಲು ಮೋದಿ ಬಾಲಿವುಡ್ ಸೇರಬೇಕಿತ್ತು: ಗೆಹ್ಲೋಟ್ ವ್ಯಂಗ್ಯ

    ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ನಟನೆಯನ್ನು ಬಹಳ ಚೆನ್ನಾಗಿ ಮಾಡುತ್ತಾರೆ. ಅವರು ರಾಜಕೀಯವಲ್ಲ ಬಾಲಿವುಡ್ ಸೇರಬಹುದಿತ್ತು ಎಂದು ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಟೀಕಿಸಿದ್ದಾರೆ.

    ರಾಜಸ್ಥಾನದ ಬುಂದಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಗೆಹ್ಲೋಟ್, “ಜುಂಬ್ಲೆಬಾಜಿ (ವಾಕ್ಚಾತುರ್ಯ), ಡ್ರಾಮಾಬಾಜಿ (ನಟನೆ) ಮೋದಿ ಅವರ ಸ್ವಭಾವದಲ್ಲಿಯೇ ಇದೆ. ಅವರು ಬಾಲಿವುಡ್ ಸೇರಿ ಒಳ್ಳೆಯ ನಟರಾಗಬಹುದಿತ್ತು” ಎಂದು ಟಾಂಗ್ ಕೊಟ್ಟಿದ್ದಾರೆ.

    ನಟನೆಯಲ್ಲಿ ಸತ್ಯ, ವಾಸ್ತವವಿರುವುದಿಲ್ಲ. ಹಾಗೆಯೇ ಮೋದಿ ಅವರು ಸತ್ಯವನ್ನು ಹೇಳುವುದನ್ನು ಬಿಟ್ಟು, ಸುಳ್ಳಿನ ಆಸರೆಯಲ್ಲಿ ನಟಿಸುತ್ತಾರೆ. ನಟನೆ ದೇಶಕ್ಕೇನೂ ಒಳ್ಳೆಯದನ್ನು ಮಾಡಿಲ್ಲ. ಬರೀ ನಟನೆಯಿಂದ ಅಭಿವೃದ್ಧಿಯೂ ಆಗಲ್ಲ, ಯಾರ ಹಸಿವು ಕೂಡ ನೀಗಲ್ಲ ಎಂದು ಕಿಡಿಕಾರಿದರು.

    ದೇಶ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಇಂದು ಅಪಾಯದಲ್ಲಿದೆ. ನಾವು ಸಂಪೂರ್ಣ ಬಲ ಮತ್ತು ಸಾಮಥ್ರ್ಯದೊಂದಿಗೆ ಚುನಾವಣೆಯನ್ನು ಎದುರಿಸದಿದ್ದರೆ ಬಿಜೆಪಿ ನಮ್ಮ ದೇಶವನ್ನು ನಿರ್ನಾಮ ಮಾಡುತ್ತಾರೆ ಅಂತ ಆತಂಕ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ರಾಜಸ್ಥಾನ ಡಿಸಿಎಂ ಸಚಿನ್ ಪೈಲಟ್ ಬಿಜೆಪಿ ಸರ್ಕಾರ ರಾಜ್ಯದ ಮತ್ತು ದೇಶದ ಆರ್ಥಿಕತೆಯನ್ನು ನಾಶಮಾಡುತ್ತಿದೆ ಎಂದು ಆರೋಪಿಸಿದರು.

    ಅಲ್ಲದೆ 2019 ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವವನ್ನು ಉಳಿಸಲು ಒಂದು ಅವಕಾಶ. ಹಾಗೆಯೇ ಈಗಾಗಲೇ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಸಿಬಿಐ ಅಂತಹ ಸಂಸ್ಥೆಯನ್ನು ದುರ್ಬಲಗೊಳಿಸಿದೆ. ಆದರಿಂದ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಎಲ್ಲಾ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • SSLC ಪರೀಕ್ಷೆ ಬರೆದ ಭಾರತದ ಕೊನೆಯ ಗ್ರಾಮದ ಮೊದಲ ವಿದ್ಯಾರ್ಥಿನಿ..!

    SSLC ಪರೀಕ್ಷೆ ಬರೆದ ಭಾರತದ ಕೊನೆಯ ಗ್ರಾಮದ ಮೊದಲ ವಿದ್ಯಾರ್ಥಿನಿ..!

    ಜೈಪುರ: ಅಂತಾರಾಷ್ಟ್ರೀಯ ಗಡಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಬಾರ್ಮೇರ್ ಸಮೀಪದ ಭಿಲಾನ್ ಕಿ ಧಾನಿ ಎಂಬ ಕುಗ್ರಾಮವನ್ನು ದೇಶದ ಕೊನೆಯ ಗ್ರಾಮ ಎಂದು ಗುರುತಿಸಲಾಗಿದೆ. ಇಲ್ಲಿನ ಬಾಲಕಿಯೊಬ್ಬಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಡೆದು, ಜನರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

    ಕಮಲ (16) ಭಾರತದ ಕೊನೆಯ ಗ್ರಾಮದಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಆಗಮಿಸಿದ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆ ಪಡೆದಿದ್ದಾಳೆ. ಈ ಗ್ರಾಮದಲ್ಲಿ ಸಾಕ್ಷರತೆಯ ಪ್ರಮಾಣ ಶೇ.20ಕ್ಕಿಂತ ಕಡಿಮೆ ಇದೆ. ಅಲ್ಲದೆ ಗಡಿಭಾಗದಲ್ಲಿರುವ ಕಾರಣಕ್ಕೆ ಈ ಗ್ರಾಮದಲ್ಲಿ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಓದಲು ಶಾಲೆಗೆ ಕಳುಹಿಸುವುದಿಲ್ಲ. ಆದರೆ ಕಮಲ ಈ ನಿರ್ಬಂಧಗಳನ್ನು ಮೀರಿ ಶಾಲೆಗೆ ಹೋಗಿ 10ನೇ ತರಗತಿ ಪರೀಕ್ಷೆ ಬರೆದ ಮೊದಲ ವಿದ್ಯಾರ್ಥಿನಿ ಎಂಬ ಕೀರ್ತಿ ಪಡೆದಿದ್ದಾಳೆ.

    ಮರುಭೂಮಿಯ ಮಧ್ಯದಲ್ಲಿರುವ ಈ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಿದೆ. ಆದರೆ ಈಗ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಹೆಚ್ಚಿನ ಶಿಕ್ಷಣಕ್ಕೆ ಇಲ್ಲಿನ ಮಕ್ಕಳು 6-7 ಕಿ.ಮೀ. ದೂರದಲ್ಲಿರುವ ಗದ್ರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರೌಢಶಾಲೆಗೆ ಹೋಗಬೇಕು. ಆದರಿಂದ ಇಷ್ಟು ದೂರ ಹೆಣ್ಣು ಮಕ್ಕಳು ಹೋಗುವುದು ಸುರಕ್ಷಿತವಲ್ಲ. ಅದರಲ್ಲೂ ಈ ಗ್ರಾಮವಿರುವುದು ಗಡಿ ಪ್ರದೇಶದಲ್ಲಿ, ಹೀಗಾಗಿ ಹೆಣ್ಣುಮಕ್ಕಳಿಗೆ ಭದ್ರತೆ ಇರುವುದಿಲ್ಲ ಎಂಬ ಪೋಷಕರ ನಿರ್ಬಂಧದಿಂದ ದಶಕಗಳಿಂದ ಶೇ.90ರಷ್ಟು ಹೆಣ್ಣುಮಕ್ಕಳು ಶಾಲೆಯಿಂದ ದೂರವಿದ್ದಾರೆ.

    ಈ ಗ್ರಾಮದಲ್ಲಿ ಒಟ್ಟು 123 ಮನೆಗಳಿವೆ. ಭದ್ರತೆ ಭೀತಿಯಿಂದ ತಮ್ಮ ಹೆಣ್ಣು ಮಕ್ಕಳನ್ನು ದೂರದ ಶಾಲೆಗೆ ಕಳುಹಿಸದೆ ವಿದ್ಯಾಭ್ಯಾಸಕ್ಕೆ ಹೆತ್ತವರು ನಿಷೇಧ ಹೇರಿದ್ದಾರೆ. ಆದರೆ ಕಮಲಾಳ ಪೋಷಕರು ಮಾತ್ರ ಇದನ್ನೆಲ್ಲ ಮೀರಿ ತಮ್ಮ ಮಗಳನ್ನು ಪ್ರೌಢ ಶಾಲೆಗೆ ಧೈರ್ಯದಿಂದ ಕಳುಹಿಸಿದ್ದಾರೆ. ಆದರಿಂದ ಗ್ರಾಮದಿಂದ ರಾಜ್ಯ ಬೋರ್ಡ್ ಪರೀಕ್ಷೆ ಎದುರಿಸಿದ ಮೊದಲ ವಿದ್ಯಾರ್ಥಿನಿ ಎಂಬ ಮೆಚ್ಚುಗೆಗೆ ಕಮಲ ಪಾತ್ರಳಾಗಿದ್ದಾಳೆ.

    9ನೇ ತರಗತಿಯಲ್ಲಿದ್ದಾಗ ರಾಜಶ್ರೀ ಯೋಜನೆಯಿಂದ ಉಚಿತ ಸೈಕಲ್ ಪಡೆದಿದ್ದೆ. ಆಗಿನಿಂದಲೂ ಸೈಕಲ್‍ನಲ್ಲೇ ಶಾಲೆಗೆ ಹೋಗಿ ಬರುತ್ತಿರುವೆ. ಅಲ್ಲದೆ ಕಳೆದ 6 ವರ್ಷದಿಂದ 7-8 ವಿದ್ಯಾರ್ಥಿನಿಯರು ಮಾತ್ರ ಶಾಲೆಗೆ ಆಗಮಿಸುತ್ತಿದ್ದಾರೆ, ಉಳಿದ ಹೆಣ್ಣುಮಕ್ಕಳಲು ವಿದ್ಯೆಯಿಂದ ದೂರ ಉಳಿದಿದ್ದಾರೆ. ಈ ಗ್ರಾಮದಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ಮೊದಲ ವಿದ್ಯಾರ್ಥಿನಿ ಆಗಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಆದರೆ ಈ ಸಾಧನೆ ಮಾಡಿದ ಕೊನೆಯ ವಿದ್ಯಾರ್ಥಿನಿ ನಾನಾಗಬಾರದು. ನಮ್ಮ ಗ್ರಾಮದ ಎಲ್ಲಾ ಹೆಣ್ಣುಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆಯಬೇಕು ಎಂದು ಕಮಲ ಆಶಿಸಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತಕ್ಕೆ ಪಾಕಿಸ್ತಾನದ ಡ್ರೋನ್ ಎಂಟ್ರಿ – ಶೂಟ್ ಮಾಡುವ ವೇಳೆ ಯೂಟರ್ನ್

    ಭಾರತಕ್ಕೆ ಪಾಕಿಸ್ತಾನದ ಡ್ರೋನ್ ಎಂಟ್ರಿ – ಶೂಟ್ ಮಾಡುವ ವೇಳೆ ಯೂಟರ್ನ್

    ಜೈಪುರ: ಪಾಕಿಸ್ತಾನದ ಡ್ರೋನ್ ಭಾರತದ ರಾಜಸ್ಥಾನದ ಗಡಿಯಲ್ಲಿ ಎಂಟ್ರಿ ಕೊಟ್ಟಿದ್ದು, ಬಿಎಸ್‍ಎಫ್ ಅದನ್ನು ಹೊಡೆದುರುಳಿಸಲು ಯತ್ನಿಸಿದ್ದಾಗ ಅದು ಹಿಂತಿರುಗಿ ಹೋಗಿದೆ.

    ಅಂತರಾಷ್ಟ್ರೀಯ ಗಡಿಯಿಂದ ಬಂದ ಈ ಡ್ರೋನ್ ಇಂದು ಬೆಳಗ್ಗೆ ಸುಮಾರು 5 ಗಂಟೆಗೆ ಶ್ರೀಗಂಗಾನಗರ ಬಳಿಯಿರುವ ಹಿಂದೂಮಲ್ಕೋಟ್ ಗಡಿ ಬಳಿ ಭಾರತಕ್ಕೆ ಪ್ರವೇಶಿಸಲು ಯತ್ನಿಸಿದೆ ಎಂದು ಬಿಎಸ್‍ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

    ನಾವು ಈ ಡ್ರೋನ್‍ನನ್ನು ನೋಡಿದ ತಕ್ಷಣ ಅದನ್ನು ಹೊಡೆದುರುಳಿಸಲು ಯತ್ನಿಸಿದ್ದೇವೆ. ಆದರೆ ಆ ಡ್ರೋನ್ ಸುರಕ್ಷಿತವಾಗಿ ಪಾಕಿಸ್ತಾನದ ಬಾರ್ಡರ್ ಗೆ ತಲುಪಿದೆ. ಪಾಕ್‍ನ ಡ್ರೋನ್ ಹೊಡೆದುರುಳಿಸುವ ವೇಳೆ ಗ್ರಾಮಸ್ಥರು ಫೈರಿಂಗ್ ಶಬ್ಧವನ್ನು ಕೇಳಿದ್ದಾರೆ ಎಂದು ಬಿಎಸ್‍ಎಫ್ ಅಧಿಕಾರಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪುಲ್ವಾಮಾ ದಾಳಿಯಿಂದಾಗಿ ಇಂಡಿಯಾ-ಪಾಕ್ ಮದ್ವೆ ಕ್ಯಾನ್ಸಲ್

    ಪುಲ್ವಾಮಾ ದಾಳಿಯಿಂದಾಗಿ ಇಂಡಿಯಾ-ಪಾಕ್ ಮದ್ವೆ ಕ್ಯಾನ್ಸಲ್

    ಜೈಪುರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ 40 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ವರ ಮತ್ತು ಭಾರತದ ವಧುವಿನ ಮದುವೆ ಕ್ಯಾನ್ಸಲ್ ಆಗಿದೆ.

    ಬಾರ್ಮರ್ ಗಡಿಭಾಗದ ಖೇಜೆದ್ ಕಾ ಪಾರ್ ಗ್ರಾಮದ ವರ ಮಹೇಂದ್ರ ಸಿಂಗ್ ಮತ್ತು ಸಿಂಧ್ ಭಾಗದ ಅಮರ್ ಕೋಟ್ ಜಿಲ್ಲೆಯ ಸಿನೋಯ್ ಗ್ರಾಮದ ಚಗನ್ ಕನ್ವಾರ್ ಮದುವೆ ನಿಶ್ಚಯವಾಗಿತ್ತು.

    ವರ ಮಹೇಂದ್ರ ಸಿಂಗ್ ಶನಿವಾರ ಥಾರ್ ಎಕ್ಸ್ ಪ್ರೆಸ್ ಟಿಕೆಟ್‍ಗಳನ್ನು ಬುಕ್ ಮಾಡಿದ್ದರು. ಆದರೆ ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಅಧಿಕಾರಿಗಳು ರೈಲ್ವೆ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಇವರಿಬ್ಬರ ವಿವಾಹ ಕ್ಯಾನ್ಸಲ್ ಆಗಿದೆ. ಪಾಕಿಸ್ತಾನದ ಲಾಹೋರ್ ನಿಂದ ಭಾರತದ ಅತ್ತರಿಗೆ ರೈಲು ಸಂಚಾರ ನಡೆಯಬೇಕಿತ್ತು. ಈ ರೈಲು ಸೋಮವಾರ ಮತ್ತು ಗುರುವಾರ ಮಾತ್ರ ಸಂಚರಿಸುತ್ತದೆ.

    ನಾವು ವೀಸಾ ಪಡೆಯಲು ತುಂಬಾ ಪ್ರಯತ್ನ ಮಾಡಿದೆವು. ಆದರೆ ಅದು ಸಾಧ್ಯವಾಗಿಲ್ಲ. ನಾವು ಈಗಾಗಲೇ ನಾವು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಸಂಬಂಧಿಕರಿಗೂ ಆಮಂತ್ರಣ ಪತ್ರಿಕೆ ಹಂಚಿದ್ದೆವು. ಪಾಕಿಸ್ತಾನದ ವೀಸಾ ಪಡೆಯಲು ಸಚಿವ ಗಜೇಂದ್ರ ಸಿಂಗ್ ಅವರ ಜೊತೆ ಮಾತನಾಡಿದೆ. ಆದರೆ ಅವರು ಕೇವಲ 5 ಮಂದಿಗೆ ಮಾತ್ರ ವೀಸಾ ಸಿಗುವುದಾಗಿ ಹೇಳಿದರು. ಹೀಗಾಗಿ ಮದುವೆ ನಿಂತು ಹೋಗಿದೆ ಎಂದು ಮಹೇಂದ್ರ ಸಿಂಗ್ ಹೇಳಿದ್ದಾರೆ.

    ಪಾಕಿಸ್ತಾನದ ಜಾಶಿ-ಎ-ಮೊಹಮ್ಮದ್ ಕ್ಯಾಂಪ್, ಪಾಕಿಸ್ತಾನದ ಜೆಟ್ ಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ನಂತರ ಹಾಗೂ ರಜೌರಿ ಸೆಕ್ಟರ್ ನಲ್ಲಿ ಕೆಲವು ಬಾಂಬು ದಾಳಿಯ ನಂತರ ಈ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜಸ್ತಾನದ ಶಾಲಾ ಪಠ್ಯಪುಸ್ತಕಗಳಲ್ಲಿ ವೀರಯೋಧ ಅಭಿನಂದನ್!

    ರಾಜಸ್ತಾನದ ಶಾಲಾ ಪಠ್ಯಪುಸ್ತಕಗಳಲ್ಲಿ ವೀರಯೋಧ ಅಭಿನಂದನ್!

    ಜೈಪುರ: ಪಾಕ್ ಕಪಿಮುಷ್ಟಿಯಿಂದ ಭಾರತಕ್ಕೆ ವಾಪಾಸ್ಸಾಗಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಈ ವೇಳೆ ವೀರಯೋಧನ ಕಥೆಯನ್ನು ಪಾಠವಾಗಿ ಶಾಲಾ ಪಠ್ಯಪುಸ್ತಕಗಳಲ್ಲಿ ಸೇರಿಸಬೇಕು ಎಂದು ರಾಜಸ್ತಾನದ ಶಿಕ್ಷಣ ಮಂತ್ರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

    ಹೌದು, ಭಾರತದ ಹೆಮ್ಮೆಯ ಪುತ್ರ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಗೌರವ ಸಲ್ಲಿಸಲು ರಾಜಸ್ತಾನ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅಭಿನಂದನ್ ಅವರ ಶೌರ್ಯ, ಪರಾಕ್ರಮವನ್ನು ಮಕ್ಕಳು ತಿಳಿಯಬೇಕು ಎಂದು ಜೋಧಪುರದ ಪೈಲಟ್ ಶಿಕ್ಷಣ ಶಾಲೆಯ ಪಠ್ಯಪುಸ್ತಕದಲ್ಲಿ ಅಭಿನಂದನ್ ಅವರ ಬಗ್ಗೆ ಪಾಠವನ್ನು ಸೇರಿಸಲಾಗುತ್ತದೆ. ಈ ಮೂಲಕ ವೀರಯೋಧನಿಗೆ ನಮ್ಮ ಕಡೆಯಿಂದ ಗೌರವ ಸಲ್ಲಿಸುತ್ತಿದ್ದೇವೆ ಎಂದು ರಾಜಸ್ತಾನದ ಶಿಕ್ಷಣ ಮಂತ್ರಿ ಗೋವಿಂದ್ ಸಿಂಗ್ ದೋತಸ್ರಾ ಸೋಮವಾರದಂದು ಟ್ವೀಟ್ ಮಾಡಿದ್ದಾರೆ.

    ಯಾವ ತರಗತಿಯ ಪಠ್ಯದಲ್ಲಿ ಅಭಿನಂದನ್ ಅವರ ಪಾಠವನ್ನು ಸೇರಿಸಲಾಗುತ್ತಿದೆ ಎಂಬುದರ ಕುರಿತು ರಾಜಸ್ತಾನ ಶಿಕ್ಷಣ ಮಂತ್ರಿಗಳು ತಿಳಿಸಿಲ್ಲ. ಈ ಹಿಂದೆ ರಾಜಸ್ತಾನದ ಶಿಕ್ಷಣ ಮಂತ್ರಿಗಳು ಪುಲ್ವಾಮಾ ದಾಳಿಯ ಬಗ್ಗೆ ಪಾಠವನ್ನು ಶಾಲಾ ಪಠ್ಯದಲ್ಲಿ ಸೇರಿಸಬೇಕು ಎಂದು ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದ್ದರು. ಅದನ್ನು ಪಠ್ಯಕ್ರಮ ವಿಮರ್ಶೆ ಸಮಿತಿ ಒಪ್ಪಿಕೊಂಡಿತ್ತು. ಶಾಲಾ ಪಠ್ಯಕ್ರಮಗಳ ಬಗ್ಗೆ ಗಮನ ವಹಿಸಲು ಈಗಾಗಲೇ ಎರಡು ಸಮಿತಿಯನ್ನು ರಾಜಸ್ತಾನ ಸರ್ಕಾರ ನಿಯೋಜಿಸಿದೆ. ಈಗ ಅಭಿನಂದನ್ ಅವರ ಕುರಿತು ಪಾಠವನ್ನು ಶಾಲಾ ಪಠ್ಯದಲ್ಲಿ ಸೇರಿಸಬೇಕು ಎಂದು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

    ಈ ಹಿಂದೆ ಇದ್ದ ಸರ್ಕಾರ ಶಾಲಾ ಪಠ್ಯಕ್ರಮಗಳಲ್ಲಿಯೂ ರಾಜಕಾರಣ ನಡೆಸಿದೆ. ನಮ್ಮ ದೇಶದ ಸಂಸ್ಕೃತಿ, ಕಲೆ, ಇತಿಹಾಸ ಹಾಗೂ ಮಹಾನ್ ವ್ಯಕ್ತಿಗಳ ಕುರಿತು ಪಠ್ಯಕ್ರಮದಲ್ಲಿ ನಿರ್ಲಕ್ಷಿಸಿದ್ದಾರೆ ಎಂದು ಶಿಕ್ಷಣ ಮಂತ್ರಿಗಳು ಆರೋಪಿಸಿದ್ದಾರೆ.

    ಕಳೆದ ಕೆಲವು ದಿನಗಳ ಹಿಂದೆಯಷ್ಟೇ, ಸುಮಾರು 31.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ನೂತನ ಸರ್ಕಾರಿ ಸೇನಾ ಅಕಾಡೆಮಿಯನ್ನು ಸಿಕರ್‍ನಲ್ಲಿ ರಾಜಸ್ತಾನ ಶಿಕ್ಷಣ ಇಲಾಖೆ ಉದ್ಘಾಟನೆ ಮಾಡಿತ್ತು. ಹಾಗೆಯೇ ಈ ಅಕಾಡೆಮಿಗೆ ಮಹಾರಾವ್ ಶೇಖಾಜಿ ಶಶಸ್ತ್ರ ಬಲ್ ಪ್ರಸಿಕ್ಷಣ್ ಅಕಾಡೆಮಿ ಎಂದು ಹೆಸರಿಡಲಾಗಿತ್ತು. ಈ ಅಕಾಡೆಮಿ ಮೂಲಕ ಯುವಕರು ಭಾರತೀಯ ಭೂ ಸೇನೆ, ವಾಯುಪಡೆ ಹಾಗೂ ನೌಕಾಪಡೆಗೆ ಸೇರಲು ಸಹಾಯವಾಗುವ ತರಬೇತಿಯನ್ನು ನೀಡಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv