Tag: Jaipur

  • ಆಹಾರ ಸಿಗದೆ ರಸ್ತೆಯಲ್ಲಿ ಸತ್ತುಬಿದ್ದಿದ್ದ ನಾಯಿಯನ್ನೇ ತಿಂದ

    ಆಹಾರ ಸಿಗದೆ ರಸ್ತೆಯಲ್ಲಿ ಸತ್ತುಬಿದ್ದಿದ್ದ ನಾಯಿಯನ್ನೇ ತಿಂದ

    ಜೈಪುರ್: ವ್ಯಕ್ತಿಯೊಬ್ಬ ಆಹಾರ ಸಿಗದೆ ರಸ್ತೆಯಲ್ಲಿ ಸತ್ತುಬಿದ್ದಿದ್ದ ನಾಯಿಯನ್ನೇ ತಿಂದ ಮನಕಲುಕುವ ಘಟನೆ ರಾಜಸ್ಥಾನದ ಜೈಪುರ್‌ನಲ್ಲಿ  ನಡೆದಿದೆ.

    ವ್ಯಕ್ತಿ ನಾಯಿಯನ್ನು ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಎಲ್ಲಿ ಘಟನೆ ನಡೆದಿದೆ ಎನ್ನುವುದು ಸ್ಪಷ್ಟವಾಗದಿದ್ದರೂ ಜೈಪುರ್-ದೆಹಲಿ ಹೆದ್ದಾರಿಯಲ್ಲಿ ನಡೆದಿದೆ ಎನ್ನಲಾಗುತ್ತಿದೆ.

    ತಿನ್ನಲು ಆಹಾರವಿಲ್ಲದೆ ಕಂಗಾಲಾಗಿದ್ದ ವ್ಯಕ್ತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ನಾಯಿಯ ಮಾಂಸವನ್ನು ತಿನ್ನುತ್ತಿದ್ದ. ಈ ವೇಳೆ ಇದೇ ಮಾರ್ಗವಾಗಿ ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರೊಬ್ಬರು ಇದನ್ನು ನೋಡಿ ಕಾರ್ ನಿಲ್ಲಿಸಿ, “ಏಯ್ ಏನ್ ತಿಂದಾ ಇದ್ದೀಯಾ? ಅದು ಸತ್ತು ಹೋಗಿದೆ. ಅದನ್ನು ಬಿಟ್ಟು ಮುಂದೆ ಕಾಣಿಸುತ್ತಲ್ಲಾ ಆ ಅಂಗಡಿ ಕಡೆಗೆ ಬಾ ನಿನಗೆ ಆಹಾರ ಕೊಡಿಸುತ್ತೇನೆ” ಎನ್ನುತ್ತಾರೆ.

    ಸಮೀಪದ ಹೋಟೆಲ್‍ನಲ್ಲಿ ಆಹಾರ ತಂದು ಕೊಟ್ಟಾಗ ವ್ಯಕ್ತಿ ಖುಷಿ ವ್ಯಕ್ತಪಡಿಸಿದ. ಬಳಿಕ ರಸ್ತೆಯಲ್ಲೇ ಕುಳಿತು ಸಿಕ್ಕ ಅನ್ನವನ್ನು ತಿಂದು ಹಸಿವು ನೀಗಿಸಿಕೊಂಡಿದ್ದಾನೆ. ಆಹಾರ ನೀಡಿ ಎಲ್ಲ ದೃಶ್ಯವನ್ನು ಸೆರೆ ಹಿಡಿದ ವ್ಯಕ್ತಿಯು ಇದು ದೆಹಲಿ-ಜೈಪುರ್ ಹೆದ್ದಾರಿಯಾಗಿದ್ದು, ಘಟನೆಯನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ತಿಳಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

    ಈ ವಿಡಿಯೋವನ್ನು ನೋಡಿದ ನೆಟ್ಟಿಗರು, ಕೊರೊನಾ ವೈರಸ್ ಲಾಕ್‍ಡೌನ್ ಮಧ್ಯೆ ಭಾರತದ ಹೆದ್ದಾರಿಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವವರ ಜೀವನ, ಸವಾಲುಗಳಿಗೆ ಈ ದೃಶ್ಯ ಸಾಕ್ಷಿಯಂತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

  • ಕಾಲ್ನಡಿಗೆಯಲ್ಲಿ ತೆರಳ್ತಿದ್ದವರಿಗೆ ಆಹಾರದ ಜೊತೆ ಪಾದರಕ್ಷೆ ನೀಡಿದ ಪೊಲೀಸರು

    ಕಾಲ್ನಡಿಗೆಯಲ್ಲಿ ತೆರಳ್ತಿದ್ದವರಿಗೆ ಆಹಾರದ ಜೊತೆ ಪಾದರಕ್ಷೆ ನೀಡಿದ ಪೊಲೀಸರು

    ಜೈಪುರ: ಕೊರೊನಾ ಲಾಕ್‍ಡೌನ್ ಸಡಿಲಿಕೆ ಮಾಡಿದ ನಂತರ ಅನೇಕ ಪ್ರವಾಸಿ ಕಾರ್ಮಿಕರು ಬೇರೆ ದಾರಿಯಿಲ್ಲದೆ ನಡೆದುಕೊಂಡೇ ತಮ್ಮ ತಮ್ಮ ಗ್ರಾಮಗಳಿಗೆ ತಲುಪುತ್ತಿದ್ದಾರೆ. ಇದೀಗ ಕಾಲ್ನಡಿಗೆಯಲ್ಲಿ ತಮ್ಮ ಮನೆಗಳಿಗೆ ಮರಳುತ್ತಿದ್ದ ಪ್ರವಾಸಿ ಕಾರ್ಮಿಕರಿಗೆ ರಾಜಸ್ಥಾನ ಪೊಲೀಸರು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಕಾಲ್ನಡಿಗೆ ಮೂಲಕ ಹೋಗುವ ಕಾರ್ಮಿಕರಿಗೆ ಅನೇಕರು ಊಟ, ನೀರಿನ ಸಹಾಯ ಮಾಡಿದ್ದಾರೆ. ಇದೀಗ ರಾಜಸ್ಥಾನ ಪೊಲೀಸರ ತಂಡವೊಂದು ಕಾರ್ಮಿಕರಿಗೆ ಬಿಸ್ಕೆಟ್ ಮತ್ತು ನೀರಿನ ಬಾಟಲಿಗಳ ಪ್ಯಾಕೆಟ್‍ಗಳನ್ನು ನೀಡಿದ್ದಾರೆ. ಜೊತೆಗೆ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಚಪ್ಪಲಿಯನ್ನು ಪೂರೈಕೆ ಮಾಡಿದ್ದಾರೆ.

    ಲಾಕ್‍ಡೌನ್‍ನಿಂದ ಉದ್ಯೋಗ ಮತ್ತು ಹಣವಿಲ್ಲದ ಕಾರಣ ಸಾವಿರಾರು ಪ್ರವಾಸಿ ಕಾರ್ಮಿಕರು ಜೈಪುರ-ಆಗ್ರಾ ಹೆದ್ದಾರಿ ಮೂಲಕ ತಮ್ಮ ರಾಜ್ಯಗಳಿಗೆ ಮರಳುತ್ತಿದ್ದರು. ಅದರಲ್ಲೂ ಇಂತಹ ಬಿಸಿಲಿನಲ್ಲಿ ಕಾರ್ಮಿಕರು ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದರು.

    ಈ ವೇಳೆ ಪೊಲೀಸರ ಗುಂಪೊಂದು ಹೆದ್ದಾರಿಯಲ್ಲಿ ನಿಂತು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕರಿಗೆ ಹೊಸ ಚಪ್ಪಲಿಗಳನ್ನು ಒದಗಿಸಿದೆ. ಪೊಲೀಸ್ ತಂಡದ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ದೇವಸ್ಥಾನಕ್ಕೆ ಹೋಗೋ ನೆಪದಲ್ಲಿ ಕರ್ಕೊಂಡು ಹೋಗಿ ಮಗ್ಳ ಕೊಂದ ತಾಯಿ, ಚಿಕ್ಕಪ್ಪ

    ದೇವಸ್ಥಾನಕ್ಕೆ ಹೋಗೋ ನೆಪದಲ್ಲಿ ಕರ್ಕೊಂಡು ಹೋಗಿ ಮಗ್ಳ ಕೊಂದ ತಾಯಿ, ಚಿಕ್ಕಪ್ಪ

    – ಪ್ರೀತಿಸಿದ ಹುಡುಗನ ಜೊತೆ 16ರ ಅಪ್ರಾಪ್ತೆ ಎಸ್ಕೇಪ್
    – ಬಾಲಕಿ ಮನೆಗೆ, ಯುವಕ ಜೈಲಿಗೆ

    ಜೈಪುರ: 16 ವರ್ಷದ ಬಾಲಕಿಯನ್ನು ಆಕೆಯ ತಾಯಿ ಮತ್ತು ಚಿಕ್ಕಪ್ಪ ಸೇರಿ ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

    ರಿಂಕು (16) ಮೃತ ಬಾಲಕಿ. ತಾಯಿ ಸೀತಾದೇವಿ ಮತ್ತು ಚಿಕ್ಕಪ್ಪ ಸವರಂ ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಈ ಘಟನೆ ಮಾರ್ಚ್ 19 ರಂದು ನಡೆದಿದ್ದು, ಒಂದು ತಿಂಗಳ ನಂತರ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯ ಕೊಲೆಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಅಪ್ರಾಪ್ತ ಬಾಲಕಿಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆರೋಪಿಗಳಾದ ತಾಯಿ ಸೀತಾದೇವಿ ಮತ್ತು ಚಿಕ್ಕಪ್ಪ ಸವರಂ ಇಬ್ಬರನ್ನು ಬಂಧಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಸವರಂ ಮತ್ತು ಆತನ ಸಹೋದರ ಶೇಷರಂ ತಮ್ಮ ಕುಟುಂಬದೊಂದಿಗೆ ಪಾಲಿ ಜಿಲ್ಲೆಯ ಸೋನೈ ಮಾಜಿ ಗ್ರಾಮದಿಂದ ಪುಣೆಗೆ ಹೋಗಿದ್ದರು. ಅಲ್ಲಿ ದಿನಸಿ ಅಂಗಡಿಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಮೃತ ರಿಂಕು ಶೇಷರಂ ಅವರ ಮಗಳು. ಈಕೆಗೆ ಪುಣೆಯಲ್ಲಿ ಸ್ಥಳೀಯ ಯುವಕನ ಪರಿಚಯವಾಗಿದೆ. ನಂತರ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಎರಡು ತಿಂಗಳ ಹಿಂದೆ ರಿಂಕು ಆತನ ಜೊತೆ ಮನೆ ಬಿಟ್ಟು ಓಡಿಹೋಗಿದ್ದಾಳೆ.

    ಆಗ ರಿಂಕು ಕುಟುಂಬದವರು ಪೊಲೀಸ್ ಠಾಣೆಗೆ ಹೋಗಿ ಯುವಕನ ವಿರುದ್ಧ ಅಪಹರಣದ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಕುರಿತು ತನಿಖೆ ಶುರು ಮಾಡಿದ್ದಾರೆ. ನಂತರ ಮುಂಬೈ ಪೊಲೀಸರಿಗೆ ದಾದರ್ ರೈಲ್ವೆ ನಿಲ್ದಾಣದಲ್ಲಿ ರಿಂಕು ಮತ್ತು ಯುವಕ ಇಬ್ಬರು ಸಿಕ್ಕಿಬಿದ್ದಿದ್ದಾರೆ. ರಿಂಕು ಅಪ್ರಾಪ್ತೆಯಾಗಿದ್ದರಿಂದ ಆಕೆಯನ್ನು ಕುಟುಂಬದವರ ಜೊತೆ ಮನೆಗೆ ಕಳುಹಿಸಿದ್ದಾರೆ.

    ಯುವಕ ಜೈಲಿಗೆ ಹೋಗಿದ್ದು, ಒಂದು ತಿಂಗಳ ನಂತರ ಯುವಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಈ ಬಗ್ಗೆ ತಿಳಿದು ರಿಂಕು ತನ್ನ ಕುಟುಂಬದವರ ಬಳಿ ತಮ್ಮ ಮದುವೆಗೆ ಒಪ್ಪಿಕೊಳ್ಳುವಂತೆ ಪದೇ ಪದೇ ಮನವಿ ಮಾಡಿಕೊಂಡಿದ್ದಾಳೆ. ಆದರೆ ಕುಟುಂಬದವರ ಮಗಳ ಮದುವೆಗೆ ಒಪ್ಪಲಿಲ್ಲ. ಕೊನೆಗೆ ದೇವಸ್ಥಾನಕ್ಕೆ ಹೋಗುವ ನೆಪದಲ್ಲಿ ಮಾರ್ಚ್ 18 ರಂದು ರಾಜಸ್ಥಾನದ ತಮ್ಮ ಹಳ್ಳಿಗೆ ಕರೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.

    ಮರುದಿನ ತಾಯಿ ಮತ್ತು ಚಿಕ್ಕಪ್ಪ ಇಬ್ಬರು ಸೇರಿ ರಿಂಕುವನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಮೃತದೇಹವನ್ನು ಸುಟ್ಟು ಸಮಾಧಿ ಮಾಡಿ ವಾಪಸ್ ಪುಣೆಗೆ ಹೋಗಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕೊಲೆಯಲ್ಲಿ ಕುಟುಂಬದ ಇತರ ಸದಸ್ಯರು ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

  • ಅಜ್ಜನಿಗಾಗಿ ಸಂಬಂಧಿಗಳಿಲ್ಲದೇ ಮದ್ವೆಯಾದ ಜೋಡಿ

    ಅಜ್ಜನಿಗಾಗಿ ಸಂಬಂಧಿಗಳಿಲ್ಲದೇ ಮದ್ವೆಯಾದ ಜೋಡಿ

    – ಪಿಎಂ ನಿಧಿಗೆ 4, ಸಿಎಂ ಫಂಡ್‍ಗೆ 1 ಲಕ್ಷ ದೇಣಿಗೆ

    ಜೈಪುರ್: ಕೊರೊನಾ ಲಾಕ್‍ಡೌನ್ ಜಾರಿಯಾದಗಿನಿಂದ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೇ ವೇಳೆ ಅನೇಕರು ಸರಳವಾಗಿ ತಮ್ಮ ಸಂಬಂಧಿಗಳ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಇನ್ನೂ ಕೆಲವರು ವಿಡಿಯೋ ಕಾಲ್ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ರಾಜಸ್ಥಾನದ ಜೋಡಿಯೊಂದು ತಮ್ಮ ಸಂಬಂಧಿಗಳು ಇಲ್ಲದೇ ವರ-ವಧು ಇಬ್ಬರೇ ವಿವಾಹವಾಗಿದ್ದಾರೆ.

    ರಾಜಸ್ಥಾನದ ಜೋಧ್‍ಪುರದ ದೇವಾಲಯವೊಂದರಲ್ಲಿ ಈ ವಿಶೇಷ ಮದುವೆ ನಡೆದಿದೆ. ವಧು-ವರರು ಸಂಬಂಧಿಕರಿಲ್ಲದೇ ತುಂಬಾ ಸರಳವಾಗಿ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಆದರೆ ಈ ಜೋಡಿಯ ಮದುವೆಯನ್ನು ಸಂಬಂಧಿಕರು ವಿಡಿಯೋ ಕಾಲ್ ಮೂಲಕ ನೋಡಿದ್ದಾರೆ.

    ವರ ವರುಣ್ ಧಾಧನಿಯಾ ಮಾತನಾಡಿ “ನನ್ನ ಅಜ್ಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನನ್ನ ಮದುವೆಯನ್ನು ಲಾಕ್‍ಡೌನ್ ಆಗುವ ಮೊದಲೇ ನಿಗದಿಪಡಿಸಲಾಗಿತ್ತು. ಆದರೆ ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಆದರೆ ನಮ್ಮ ತಾತಾ ಅವರಿಗೆ ನಿಗದಿಪಡಿಸಿದ ದಿನದಂದು ನಾನು ಮದುವೆಯಾಗಬೇಕೆಂದು ಬಯಸಿದ್ದರು. ಹೀಗಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮದುವೆಯಾಗಿದ್ದೇನೆ” ಎಂದು ಹೇಳಿದರು.

    ನಮ್ಮ ಸಂಬಂಧಿಕರು ವಿಡಿಯೋ ಕಾನ್ಫರೆನ್ಸ್ ಕಾಲ್ ಮೂಲಕ ನಮ್ಮ ಮದುವೆಗೆ ಸಾಕ್ಷಿಯಾದರು. ಈ ವೇಳೆ ಇಡೀ ದೇಶವೇ ಲಾಕ್‍ಡೌನ್‍ನಿಂದ ಆರ್ಥಿಕ ಕಷ್ಟವನ್ನು ಎದುರಿಸುತ್ತಿದೆ. ಹೀಗಾಗಿ ನಾನು ಪಿಎಂ ಪರಿಹಾರ ನಿಧಿಗೆ 4 ಲಕ್ಷ ರೂಪಾಯಿ ಮತ್ತು ರಾಜಸ್ಥಾನ ಸಿಎಂ ಕೋವಿಡ್ ನಿಧಿಗೆ 1.01 ಲಕ್ಷ ರೂಪಾಯಿ ದೇಣಿಗೆ ನೀಡಲು ನಿರ್ಧರಿಸಿದ್ದೇನೆ ಎಂದು ವರ ಹೇಳಿದರು.

  • ಶಾಲೆಯಲ್ಲಿದ್ದ ಮಹಿಳೆಯ ಮೇಲೆ ಮೂವರು ಕಾಮುಕರಿಂದ ಗ್ಯಾಂಗ್‍ರೇಪ್

    ಶಾಲೆಯಲ್ಲಿದ್ದ ಮಹಿಳೆಯ ಮೇಲೆ ಮೂವರು ಕಾಮುಕರಿಂದ ಗ್ಯಾಂಗ್‍ರೇಪ್

    – 1 ತಿಂಗಳ ನಂತ್ರ ತನ್ನ ನಿವಾಸಕ್ಕೆ ಹೊರಟಿದ್ದ ಸಂತ್ರಸ್ತೆ
    – ದಾರಿ ತಪ್ಪಿ ಬೇರೆ ಗ್ರಾಮಕ್ಕೆ ಎಂಟ್ರಿ

    ಜೈಪುರ: ಇಡೀ ದೇಶದ್ಯಾಂತ ಲಾಕ್‍ಡೌನ್ ಜಾರಿಯಲ್ಲಿದೆ. ಆದರೆ ಇದೇ ವೇಳೆ ಮೂವರು ಕಾಮುಕರು ಕ್ವಾರಂಟೈನ್‍ನಲ್ಲಿದ್ದ ಮಹಿಳೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಸವಾಯಿ ಮಾಧೋಪುರ್ ಬಟೋಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮಹಿಳೆ ಪೊಲೀಸರಿಗೆ ಈ ಕುರಿತು ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಇದೀಗ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಕೊರೊನಾ ಲಾಕ್‍ಡೌನ್‍ನಿಂದಾಗಿ ಕಳೆದ ಒಂದು ತಿಂಗಳಿನಿಂದ ಸಂತ್ರಸ್ತೆ ಸವಾಯಿ ಮಾಧೋಪುರ್ ಜಿಲ್ಲೆಯ ಗ್ರಾಮವೊಂದರಲ್ಲಿ ಸಿಲುಕಿಕೊಂಡಿದ್ದರು. ಆದರೆ ಸಂತ್ರಸ್ತೆ ಜೈಪುರದ ತನ್ನ ನಿವಾಸಕ್ಕೆ ವಾಪಸ್ ಹೋಗಲು ನಿರ್ಧರಿಸಿದ್ದರು. ಸಂತ್ರಸ್ತೆ ಜೈಪುರದ ಬಾಡಿಗೆ ವಸತಿ ಸೌಕರ್ಯದಲ್ಲಿ ವಾಸಿಸುತ್ತಿದ್ದು, ಸವಾಯಿ ಮಾಧೋಪುರದಿಂದ ತನ್ನ ನಿವಾಸಕ್ಕೆ ನಡೆದುಕೊಂಡು ಹೊರಟಿದ್ದರು.

    ಮಾರ್ಗ ಮಧ್ಯೆ ಸಂತ್ರಸ್ತೆ ದಾರಿ ತಪ್ಪಿ ಜೈಪುರಕ್ಕೆ ಹೋಗುವ ಬದಲು ಬಟೋಡಾ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಗ್ರಾಮಕ್ಕೆ ಹೋಗಿದ್ದಾರೆ. ಅಲ್ಲಿ ಮಹಿಳೆಯನ್ನು ನೋಡಿದ ಗ್ರಾಮಸ್ಥರು ಈಕೆಗೆ ಕೊರೊನಾ ಸೋಂಕಿರಬಹುದೆಂದು ಅನುಮಾನಗೊಂಡು ಸಂತ್ರಸ್ತೆಯನ್ನು ಸರ್ಕಾರಿ ಶಾಲೆಯೊಳಗೆ ಬಲವಂತವಾಗಿ ಇರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ರಾತ್ರಿ ವೇಳೆ ಮೂವರು ಕಾಮುಕರು ಮಹಿಳೆಯಿದ್ದ ಶಾಲೆಗೆ ನುಗ್ಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ನಂತರ ಮಹಿಳೆ ಅಲ್ಲಿಂದ ತಪ್ಪಿಸಿಕೊಂಡು ಪೊಲೀಸರಿಗೆ ಈ ಕುರಿತು ದೂರು ದಾಖಲಿಸಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಮೂವರು ಕಾಮುಕರನ್ನು ಬಂಧಿಸಿದ್ದಾರೆ. ಜೊತೆಗೆ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

  • ಇರ್ಫಾನ್ ಖಾನ್ ತಾಯಿ ನಿಧನ – ಅಂತಿಮ ದರ್ಶನವೂ ಇಲ್ಲ

    ಇರ್ಫಾನ್ ಖಾನ್ ತಾಯಿ ನಿಧನ – ಅಂತಿಮ ದರ್ಶನವೂ ಇಲ್ಲ

    ಜೈಪುರ್: ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ತಾಯಿ ಸಯೀದಾ ಬೇಗಂ (95) ಶನಿವಾರ ನಿಧನರಾಗಿದ್ದಾರೆ.

    ಇರ್ಫಾನ್ ತಾಯಿ ಸಯೀದಾ ಬೇಗಂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಅವರು ಜೈಪುರದ ಬೆನಿವಾಲ್ ಕಾಂತ ಕೃಷ್ಣ ಕಾಲೋನಿಯಲ್ಲಿ ವಾಸವಾಗಿದ್ದರು.

    ಇರ್ಫಾನ್ ವಿದೇಶದಲ್ಲಿದ್ದಾರೆ. ಆದರೆ ಕೊರೊನಾ ಲಾಕ್‍ಡೌನ್ ಪರಿಣಾಮದಿಂದಾಗಿ ವಿಮಾನಯಾನ ಸಂಪೂರ್ಣವಾಗಿ ಸ್ಥಗಿತವಾಗಿದೆ. ಹೀಗಾಗಿ ಅವರು ಭಾರತಕ್ಕೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಕೊನೆಯ ಬಾರಿಗೆ ತಾಯಿ ಅಂತಿಮ ದರ್ಶನವೂ ಸಿಗಲಿಲ್ಲ. ಆದರೆ ಇರ್ಫಾನ್ ವಿಡಿಯೋ ಕಾಲ್ ಮೂಲಕ ತಾಯಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

    ಇರ್ಫಾನ್ ತಾಯಿ ಸಯೀದಾ ಬೇಗಂ ಅಂತ್ಯಕ್ರಿಯೆ ಶನಿವಾರ ಸಂಜೆ ನಡೆದಿದೆ. ಲಾಕ್‍ಡೌನ್‍ನಿಂದಾಗಿ ಕೆಲವರು ಮಾತ್ರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಇರ್ಫಾನ್ ಖಾನ್ ನ್ಯೂರೋಎಂಡೋಕ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ 2019 ರಲ್ಲಿ ವಿದೇಶಕ್ಕೆ ಪ್ರಯಾಣಿಸಿದ್ದರು.

  • ಭಾವಿ ಪತ್ನಿ ಭೇಟಿಯಾಗಲು ಹೋಗಿ ಮದ್ವೆಯಾದ ಡಾಕ್ಟರ್

    ಭಾವಿ ಪತ್ನಿ ಭೇಟಿಯಾಗಲು ಹೋಗಿ ಮದ್ವೆಯಾದ ಡಾಕ್ಟರ್

    – ಭಾವಿ ಮಾವನ ಮನೆಯಲ್ಲಿ 30 ದಿನ ವಾಸ
    – ನಂತ್ರ ಸರಳವಾಗಿ ವಧುವಿನ ಮನೆಯಲ್ಲಿ ಮದ್ವೆ

    ಜೈಪುರ್: ಕೊರೊನಾ ಲಾಕ್‍ಡೌನ್‍ನಿಂದ ಜನರು ಅನೇಕ ರೀತಿ ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ವೈದ್ಯನೊಬ್ಬ ತಮ್ಮ ಭಾವಿ ಪತ್ನಿಯನ್ನು ಭೇಟಿಯಾಗಲು ಹೋಗಿ ಮದುವೆಯಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ರಾಜಸ್ಥಾನದ ಬಿಕಾನೆರ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಜೋಧ್‍ಪುರ ನಿವಾಸಿಯ ಡಾ.ವಿವೇಕ್ ಮೆಹ್ತಾ ಅವರು ಲಾಕ್‍ಡೌನ್ ಪರಿಣಾಮದಿಂದ ನಿಶ್ಚಯವಾಗಿದ್ದ ವಧುವಿನ ಜೊತೆಯಲ್ಲಿಯೇ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ನಡೆದಿದ್ದೇನು?
    ಡಾ.ವಿವೇಕ್ ಮೆಹ್ತಾ ಅಹಮದಾಬಾದ್‍ನಲ್ಲಿ ಕೆಲಸ ಮಾಡುತ್ತಿದ್ದರು. ಇವರು ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿರುವ ಪೂಜಾ ಚೋಪ್ರಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥವಾದ ಬಳಿಕ ಅಂದರೆ ಮಾರ್ಚ್ 21ರಂದು ವಿವೇಕ್ ಮೆಹ್ತಾ ಭಾವಿ ಪತ್ನಿಯನ್ನು ಭೇಟಿಯಾಗಲು ರಾಜಸ್ಥಾನದ ಬಿಕಾನೆರ್‌ಗೆ ಹೋಗಿದ್ದಾರೆ.

    ಆದರೆ ಕೊರೊನಾದಿಂದ ಮಾರ್ಚ್ 22 ರಿಂದ ರಾಜಸ್ಥಾನ ಸಂಪೂರ್ಣ ಲಾಕ್‍ಡೌನ್‍ಗೆ ಆಗಿದೆ. ಹೀಗಾಗಿ ಯಾವುದೇ ಬಸ್, ರೈಲು ಸೇರಿದಂತೆ ಯಾವುದೇ ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಹೀಗಾಗಿ ಮೆಹ್ತಾ ತಮ್ಮ ಭಾವಿ ಪತ್ನಿಯ ಮನೆಯಿಂದ ಅಹಮದಾಬಾದ್‍ಗೆ ಹಿಂದಿರುಗಲು ಸಾಧ್ಯವಾಗಲಿಲ್ಲ. ಆದ್ದರಿಂದ ಅನಿವಾರ್ಯವಾಗಿ ಭಾವಿ ಮಾವನ ಮನೆಯಲ್ಲಿಯೇ ಉಳಿದುಕೊಂಡಿದ್ದರು.


    ಲಾಕ್‍ಡೌನ್ ಮುಗಿದ ನಂತರ ವಾಪಸ್ ಬರಬಹುದು ಎಂದುಕೊಂಡಿದ್ದರು. ಆದರೆ ಲಾಕ್‍ಡೌನ್ ಮತ್ತೆ ಮೇ 3 ರವರೆಗೆ ವಿಸ್ತರಣೆಯಾಗಿದೆ. ಆಗ ಪೂಜಾ ಅವರ ತಂದೆ ಬಿಕಾನೆರ್ ನ ಜೈನ್ ಮಹಾಸಭಾ ಅಧ್ಯಕ್ಷರಿಗೆ ತಮ್ಮ ಸಮಸ್ಯೆಯನ್ನು ವಿವರಿಸಿದರು. ಈ ವೇಳೆ ಲಾಕ್‍ಡೌನ್ ಕಾರಣ ಮೆಹ್ತಾ ಕುಟುಂಬ ಅಹಮದಾಬಾದ್‍ನಿಂದ ಬರಲು ಸಾಧ್ಯವಿಲ್ಲ. ಹೀಗಾಗಿ ಇಲ್ಲೆ ಮದುವೆ ಮಾಡೋಣ ಎಂದು ತೀರ್ಮಾನಿಸಿದರು.

    ಕೊನೆಗೆ ಮೆಹ್ತಾ 30 ದಿನಗಳ ಕಾಲ ಭಾವಿ ಮಾವನ ಮನೆಯಲ್ಲಿಯೇ ಉಳಿದುಕೊಂಡಿದ್ದರು. ನಂತರ ಲಾಕ್‍ಡೌನ್ ಸಮಯದಲ್ಲಿಯೇ ಇಬ್ಬರಿಗೂ ಮದುವೆ ಮಾಡಲು ಎರಡೂ ಕುಟುಂಬಗಳು ನಿರ್ಧಾರ ಮಾಡಿವೆ. ಅಂದರಂತೆಯೇ ಸರಳವಾಗಿ ಮನೆಯಲ್ಲಿ ಕುಟುಂಬದವರ ಸಮ್ಮುಖದಲ್ಲಿ ಮೆಹ್ತಾ ಮತ್ತು ಪೂಜಾ ಮದುವೆ ನೆರವೇರಿದೆ.

    ಕಾರ್ಯಕ್ರಮದಲ್ಲಿ ವರನ ಕುಟುಂಬ ಮದುವೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಆದರೆ ಮೆಹ್ತಾ ಅವರ ಸ್ನೇಹಿತರು ಮತ್ತು ಕುಟುಂಬದವರು ಮದುವೆಯನ್ನು ವಿಡಿಯೋ ಕಾಲ್ ಮೂಲಕ ನೋಡಿದ್ದಾರೆ. ಲಾಕ್‍ಡೌನ್ ಮುಗಿಯುವರೆಗೂ ದಂಪತಿ ವಧುವಿನ ಪೋಷಕರ ಮನೆಯಲ್ಲಿ ಉಳಿಯುತ್ತಾರೆ.

  • ನಿರ್ಗತಿಕರಿಗೆ ಆಹಾರ ನೀಡುವಾಗ ಸೆಲ್ಫಿ, ಫೋಟೋ ತೆಗೆದರೆ ಎಫ್‍ಐಆರ್

    ನಿರ್ಗತಿಕರಿಗೆ ಆಹಾರ ನೀಡುವಾಗ ಸೆಲ್ಫಿ, ಫೋಟೋ ತೆಗೆದರೆ ಎಫ್‍ಐಆರ್

    ಜೈಪುರ: ನಿರ್ಗತಿಕರಿಗೆ ಆಹಾರ ನೀಡುವಾಗ ಸೆಲ್ಫಿ ತೆಗೆಯುವುದು ವಿಡಿಯೋ ಮಾಡುವುದು ಮಾಡಿದರೆ ಅಂತವರ ಮೇಲೆ ಕಠಿಣ ಕ್ರಮ ಕೈಗೊಂಡು ಎಫ್‍ಐಆರ್ ದಾಖಲಿಸಲಾಗುವುದು ಎಂದು ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಡಿಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಕೊರೊನಾ ವೈರಸ್ ಭೀತಿಗೆ ದೇಶ ಲಾಕ್‍ಡೌನ್ ಆಗಿ 15ಕ್ಕೂ ಹೆಚ್ಚಿನ ದಿನಗಳಾಗಿವೆ. ಈ ನಡುವೆ ಕೆಲವರಿಗೆ ಊಟ ನೀರು ಸಿಗದೆ ಪರಾದಾಡುತ್ತಿದ್ದಾರೆ. ಈ ರೀತಿಯ ನಿರ್ಗತಿಕರಿಗೆ ಕೆಲವರು ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಈ ವೇಳೆ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಬಾರದು ಎಂದು ಅಜ್ಮೀರ್ ಜಿಲ್ಲೆಯ ಡಿಸಿ ವಿಶ್ವ ಮೋಹನ್ ಶರ್ಮಾ ಆದೇಶ ಮಾಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಡಿಸಿ ವಿಶ್ವ ಮೋಹನ್ ಶರ್ಮಾ, ಲಾಕ್‍ಡೌನ್ ಸಮಯದಲ್ಲಿ ನಿರ್ಗತಿಕರಿಗೆ ಬಡವರಿಗೆ ಆಹಾರ ನೀಡುವುದು ಒಳ್ಳೆಯ ಕೆಲಸ. ದೇಶ ಈ ರೀತಿಯ ಸಂಕಷ್ಟಕ್ಕೆ ಸಿಲುಕಿದ ಪರಿಸ್ಥಿತಿಯಲ್ಲಿ ಸಹಾಯ ಮಾಡುವ ಜನರಿಗೆ ನಾವು ಪ್ರೋತ್ಸಾಹ ನೀಡುತ್ತೇವೆ. ಆದರೆ ಇದನ್ನೇ ಮುಂದೆ ಇಟ್ಟುಕೊಂಡು ಬಡವರಿಗೆ ಸಹಾಯ ಮಾಡಿ ಅದರ ಫೋಟೋ ತಗೆದುಕೊಳ್ಳುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

    ಊಟವಿಲ್ಲದವರಿಗೆ ಆಹಾರ ನೀಡಿ ಈ ವೇಳೆ ಅವರ ಜೊತೆ ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬಾರದು. ಇದರಿಂದ ಅವರಿಗೇ ಅವಮಾನ ಮಾಡಿದ ರೀತಿಯಲ್ಲಿ ಆಗುತ್ತದೆ. ಆದ್ದರಿಂದ ಈ ರೀತಿಯ ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ಕಂಡುಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ತೆಗದುಕೊಳ್ಳಲಾಗುವುದು ಜೊತೆಗೆ ಎಫ್‍ಐಆರ್ ಕೂಡ ಹಾಕಲಾಗುವುದು ಎಂದು ಡಿಸಿ ವಾರ್ನಿಂಗ್ ನೀಡಿದ್ದಾರೆ.

    ಕಳೆದ 16 ದಿನಗಳಿಂದ ದೇಶದಲ್ಲಿ ಹಲವಾರು ಜನರು ಸಂಸ್ಥೆಗಳು ಸೆಲೆಬ್ರಿಟಿಗಳು ಹಸಿದವರಿಗೆ ಆಹಾರ ನೀಡುವ ಕೆಲಸ ಮಾಡುತ್ತಿವೆ. ಆದರೆ ಇದರ ಜೊತೆ ಕೆಲ ಜನರು ಮಾಡಿರುವ ಸಹಾಯವನ್ನು ಫೋಟೋದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಇತ್ತೀಚೆಗೆ ಅಜ್ಮೀರ್ ಜಿಲ್ಲೆಯಲ್ಲಿ ಆಹಾರವಿಲ್ಲದವರಿಗೆ ಎರಡು ಬಾಳೆಹಣ್ಣು ನೀಡಿ ಫೋಟೋ ತೆಗದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು. ಈ ಕಾರಣದಿಂದ ಡಿಸಿ ಈ ಆದೇಶ ಹೊರಡಿಸಿದ್ದಾರೆ.

  • ತಂಗಿಯನ್ನು ಕರ್ಕೊಂಡು ಬರಲು 1000ಕಿ.ಮೀ ಬೈಕ್ ಚಲಾಯಿಸಿಕೊಂಡು ಹೋದ ಸಹೋದರ

    ತಂಗಿಯನ್ನು ಕರ್ಕೊಂಡು ಬರಲು 1000ಕಿ.ಮೀ ಬೈಕ್ ಚಲಾಯಿಸಿಕೊಂಡು ಹೋದ ಸಹೋದರ

    – ಪಾಟ್ನಾ ಬದಲು ಜೈಪುರ ಟ್ರೈನ್ ಹತ್ತಿ ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆ
    – ಜೈಪುರದಲ್ಲಿರುವ ಸಂಬಂಧಿಕರಿಗೆ ಕರೆ ಮಾಡಿದಾಗ ಸಹಾಯ ಮಾಡಲು ನಿರಾಕರಣೆ

    ಜೈಪುರ: ಕೊರೊನಾ ವೈರಸ್‍ನಿಂದಾಗಿ ಇಡೀ ದೇಶ ಲಾಕ್‍ಡೌನ್ ಆಗಿದೆ. ಎಲ್ಲರೂ ತಮ್ಮ ಮನೆಯಲ್ಲಿ ಬಂಧಿಯಾಗಿದ್ದಾರೆ. ಈ ನಡುವೆ ಸಹೋದರನೊಬ್ಬ ತನ್ನ ತಂಗಿಯನ್ನು ಕರೆದುಕೊಂಡು ಬರಲು 1000 ಕಿ.ಮೀ ಬೈಕಿನಲ್ಲಿ ಹೋದ ಸುದ್ದಿಯೊಂದು ವೈರಲ್ ಆಗುತ್ತಿದೆ.

    ಅಸ್ಮಿತಾ ತನ್ನ ನಾಲ್ಕು ವರ್ಷದ ಮಗುವಿನ ಜೊತೆ ರೈಲು ಹತ್ತಿದ್ದಳು. ಅಸ್ಮಿತಾ ಪಾಟ್ನಾಗೆ ಹೋಗಬೇಕಿತ್ತು. ಆದರೆ ಆಕೆ ಪಾಟ್ನಾ ರೈಲು ಹತ್ತುವುದರ ಬದಲು ಜೈಪುರ ರೈಲು ಹತ್ತಿದ್ದಾಳೆ. ಜೈಪುರದಲ್ಲಿ ಇಳಿದ ತಕ್ಷಣ ಆಕೆ ಸಹಾಯ ಕೇಳಲು ತನ್ನ ಸಂಬಂಧಿಕರಿಗೆ ಕರೆ ಮಾಡಿದ್ದಾಳೆ. ಆದರೆ ಕೊರೊನಾ ಭಯದಿಂದ ಮಹಿಳೆಗೆ ಸಹಾಯ ಮಾಡಲು ಯಾರು ಮುಂದಾಗಲಿಲ್ಲ. ಈ ವಿಷಯ ಮಹಿಳೆಯ ಅಣ್ಣನಿಗೆ ಗೊತ್ತಾಗುತ್ತಿದ್ದಂತೆ ಅವರು ತನ್ನ ಬೈಕಿನಲ್ಲಿ ತಂಗಿಯನ್ನು ಕರೆದುಕೊಂಡು ಬಂದಿದ್ದಾರೆ.

    ಪಾಟ್ನಾ ನಿವಾಸಿಯಾಗಿರುವ ಅಸ್ಮಿತಾ ಮಾರ್ಚ್ 22ರ ಮೊದಲೇ ತನ್ನ ನಾಲ್ಕು ವರ್ಷದ ಮಗುವಿನ ಜೊತೆ ತವರು ಮನೆಗೆ ಬಂದಿದ್ದಳು. 22ರಂದು ಅಸ್ಮಿತಾ ಪಾಟ್ನಾದಲ್ಲಿರುವ ತನ್ನ ಮನೆಗೆ ಹೊರಟ್ಟಿದ್ದಳು. ಇದಕ್ಕಾಗಿ ಆಕೆಯ ಕುಟುಂಬಸ್ಥರು ಟ್ರೈನ್ ಟಿಕೆಟ್ ಬುಕ್ ಮಾಡಿದ್ದರು. ವರದಿಗಳ ಪ್ರಕಾರ, ಅಸ್ಮಿಕಾ ನಾಗ್ಪುರ ರೈಲ್ವೆ ನಿಲ್ದಾಣದಲ್ಲಿ ‘ಬಾಗ್‍ಮಿತ್ ಎಕ್ಸ್ ಪ್ರೆಸ್’ ಟ್ರೈನಿನಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಆಕೆ ‘ಮೈಸೂರು-ಜೈಪುರ ಎಕ್ಸ್ ಪ್ರೆಸ್’ ರೈಲಿನಲ್ಲಿ ಹತ್ತಿದ್ದಳು.

    ಅಸ್ಮಿತಾ ತಾನು ತಪ್ಪು ರೈಲು ಹತ್ತಿದ್ದೀನಿ ಎಂದು ಅರಿವಾಗುವಷ್ಟರಲ್ಲಿ ಆಕೆ ಜೈಪುರ ಸ್ಟೇಷನ್ ತಲುಪಿದ್ದಳು. ರೈಲ್ವೆ ನಿಲ್ದಾಣದಲ್ಲಿ ಆಕೆ ಇಳಿಯುತ್ತಿದ್ದಂತೆ ಅಲ್ಲಿನ ಸಿಬ್ಬಂದಿಗೆ ನಡೆದ ಘಟನೆ ಬಗ್ಗೆ ವಿವರಿಸಿ ಸಹಾಯ ಕೇಳಿದ್ದಾಳೆ. ಆಗ ಸಿಬ್ಬಂದಿ ಆಕೆಗೆ ಎಲ್ಲಾ ರೀತಿಯ ಸಹಾಯ ಮಾಡಿದ್ದರು. ಅಲ್ಲದೆ ಆಕೆಯನ್ನು ವಿಶ್ರಾಂತಿ ರೂಮಿನಲ್ಲಿ ಕೂರಿಸಿ ಊಟ ನೀಡಿದರು. ಈ ವೇಳೆ ಅಸ್ಮಿತಾ ಜೈಪುರದಲ್ಲಿರುವ ತನ್ನ ಸಂಬಂಧಿಕರಿಗೆ ಸಹಾಯ ಕೇಳಿದ್ದಾಳೆ. ಆದರೆ ಕೊರೊನಾ ಭಯದಿಂದ ಸಂಬಂಧಿಕರು ಸಹಾಯ ಮಾಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

    ಸಂಬಂಧಿಕರು ಸಹಾಯ ಮಾಡಲು ನಿರಾಕರಿಸುತ್ತಿದ್ದಂತೆ ಮಹಿಳೆ ತನ್ನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾಳೆ. ಕೊರೊನಾದಿಂದ ಎಲ್ಲಾ ರೈಲು ಹಾಗೂ ಬಸ್‍ಗಳನ್ನು ರದ್ದುಗೊಳಿಸಲಾಗಿತ್ತು. ಹೀಗಿರುವಾಗ ಸಹೋದರ ತನ್ನ ತಂಗಿಯನ್ನು ಕರೆತರಲು ಬೈಕಿನಲ್ಲೇ ಪ್ರಯಾಣಿಸಿದ್ದಾರೆ. ಸಹೋದರ ನಾಗ್ಪುರದಿಂದ 1000 ಕಿ.ಮೀ ದೂರದಲ್ಲಿರುವ ಜೈಪುರದವರೆಗೂ ಬೈಕಿನಲ್ಲಿ ತೆರಳಿ ತನ್ನ ತಂಗಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ನಾಗ್ಪುರದಿಂದ ಜೈಪುರಕ್ಕೆ 30 ಗಂಟೆ ಪ್ರಯಾಣಿಸಬೇಕಾಗುತ್ತದೆ.

  • ಮಧ್ಯಪ್ರದೇಶದ ಬೆನ್ನಲ್ಲೇ ಗುಜರಾತ್‍ನಲ್ಲಿ ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್

    ಮಧ್ಯಪ್ರದೇಶದ ಬೆನ್ನಲ್ಲೇ ಗುಜರಾತ್‍ನಲ್ಲಿ ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್

    – ರಾಜ್ಯಸಭೆ ಚುನಾವಣೆಗೂ ಮುನ್ನ 5 ಶಾಸಕರು ರಾಜೀನಾಮೆ
    – ಶಾಸಕರನ್ನು ಉಳಿಸಿಕೊಳ್ಳಲು ರೆಸಾರ್ಟ್ ಮೊರೆ

    ಗಾಂಧಿನಗರ: ಮಧ್ಯಪ್ರದೇಶದ ಸಿಎಂ ಕಮಲ್‍ನಾಥ್ ಸರ್ಕಾರವನ್ನು ಅತಂತ್ರಕ್ಕೆ ಸಿಲುಕಿದ ಬೆನ್ನಲ್ಲೇ ಗುಜರಾತ್‍ನಲ್ಲಿ ಕಾಂಗ್ರೆಸ್ ಶಾಸಕರ ಹೈಜಾಕ್‍ಗೆ ‘ಕಮಲ ಪಡೆ’ ಸರ್ವಪ್ರಯತ್ನ ನಡೆಸಿದೆ.

    ರಾಜ್ಯಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಗುಜರಾತ್‍ನ 5 ಜನ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ. ಶಾಸಕರ ನಡೆಯಿಂದ ಕಾಂಗ್ರೆಸ್ ಹೈಕಮಾಂಡ್ ಕಂಗೆಟ್ಟು ಹೋಗಿದ್ದು, ಉಳಿದ ಶಾಸಕರನ್ನು ಪಕ್ಷದಲ್ಲೇ ಇರಿಸಿಕೊಳ್ಳಲು ರೆಸಾರ್ಟ್ ಮೊರೆ ಹೋಗಿದೆ. ಇದನ್ನೂ ಓದಿ:  ನಾಳೆ ಬೆಳಗ್ಗೆಯೇ ಬಹುಮತ ಸಾಬೀತುಪಡಿಸಿ- ಕೈ ಸರ್ಕಾರಕ್ಕೆ ಎಂಪಿ ರಾಜ್ಯಪಾಲ ಆದೇಶ

    ಗುಜರಾತ್‍ನ 4 ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 26ರಂದು ಚುನಾವಣೆ ನಡೆಯಲಿದೆ. ಈ ಮಧ್ಯೆ ಕಾಂಗ್ರೆಸ್ ಶಾಸಕರಾದ ಪ್ರವೀಣ್ ಮಾರು, ಮಂಗಲ್ ಗವಿತ್, ಸೋಮಭಾಯ್ ಪಟೇಲ್, ಜೆ.ವಿ.ಕಾಕಾಡಿಯಾ ಹಾಗೂ ಪ್ರದ್ಯುಮನ್ ಜಡೇಜಾ ಭಾನುವಾರ ರಾಜೀನಾಮೆ ನೀಡಿದ್ದಾರೆ.

    ಇದಕ್ಕೂ ಮೊದಲು ಆಪರೇಷನ್ ಕಮಲದ ಭಯದಿಂದ ಕಾಂಗ್ರೆಸ್ ತನ್ನ 14 ಶಾಸಕರನ್ನು ಜೈಪುರಕ್ಕೆ ಕಳುಹಿಸಿತ್ತು. ಜೊತೆಗೆ 36 ಶಾಸಕರನ್ನು ರಾಜಸ್ಥಾನಕ್ಕೆ ಕಳುಹಿಸಲಾಗಿದೆ. ಈ ಮೂಲಕ ಎಲ್ಲ ಶಾಸಕರನ್ನು ರೆಸಾರ್ಟಿಗೆ ಕರೆದೊಯ್ಯಲಾಗಿದೆ. ಮೊಬೈಲ್ ಬಳಸದಂತೆ ಹಾಗೂ ತಮ್ಮ ಬಳಿ ಇಟ್ಟುಕೊಳ್ಳದಂತೆ ಶಾಸಕರಿಗೆ ಕಾಂಗ್ರೆಸ್ ನಾಯಕರು ಸೂಚನೆ ನೀಡಿದ್ದಾರೆ. ಒಂದು ರೀತಿ ಬಂಧನಕ್ಕೆ ಒಳಗಾಗಿರುವ ಶಾಸಕರು ಕುಟುಂಬ ಅಥವಾ ಪರಿಚಯಸ್ಥರನ್ನು ಭೇಟಿಯಾಗಲು ಸಹ ಸಾಧ್ಯವಾಗುತ್ತಿಲ್ಲ. ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರವು ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಗುಜರಾತ್‍ನ ‘ಕೈ’ ಶಾಸಕರಿಗೆ ರಕ್ಷಣೆ ಒದಗಿಸಿದೆ ಎಂದು ವರದಿಯಾಗಿದೆ.

    14 ಶಾಸಕರನ್ನು ಜೈಪುರಕ್ಕೆ ಕಳುಹಿಸಲಾಗಿದೆ. 36 ಶಾಸಕರನ್ನು ರಾಜಸ್ಥಾನಕ್ಕೆ ಕಳುಹಿಸಲಾಗಿದ್ದು, ಅವರನ್ನು ಉದಯಪುರಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಉಳಿದ 5 ಶಾಸಕರನ್ನು ಗುಜರಾತ್‍ನ ರೆಸಾರ್ಟಿಗೆ ಕರೆದೊಯ್ಯಲು ಕಾಂಗ್ರೆಸ್ ನಿರ್ಧರಿಸಿದೆಯಂತೆ.

    ಅಂಕಿ ಅಂಶ:
    * ಗುಜರಾತ್ ವಿಧಾನಸಭೆಯಲ್ಲಿ ಒಟ್ಟು ಸ್ಥಾನಗಳು- 180
    * ಕಾಂಗ್ರೆಸ್ 5 ಶಾಸಕರ ರಾಜೀನಾಮೆಯಿಂದ 175ಕ್ಕೆ ಕುಸಿತ
    * ಬಿಜೆಪಿಯ ಬಲ 106 (ಬಿಜೆಪಿ ಶಾಸಕರು 103, ಎನ್‍ಸಿಪಿ 1, ಭಾರತೀಯ ಬುಡಕಟ್ಟು ಪಕ್ಷ2 )
    * ಕಾಂಗ್ರೆಸ್‍ನ ಬಲ 69 (ಕಾಂಗ್ರೆಸ್ 68, ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ 1)
    * ಗುಜರಾತ್‍ನಲ್ಲಿ ರಾಜ್ಯಸಭೆಯ ಎಷ್ಟು ಸ್ಥಾನಗಳಲ್ಲಿ ಚುನಾವಣೆ – 4

    ಅಭಯ್ ಭಾರದ್ವಾಜ್, ರಾಮಿವಾ ಬೆನ್ ಬಾರಾ ಮತ್ತು ನರ್ಹಾರಿ ಅಮೀನ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಶಕ್ತಿ ಸಿಂಗ್ ಗೋಹಿಲ್ ಮತ್ತು ಭಾರತ್ ಸಿಂಗ್ ಸೋಲಂಕಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

    ಸದ್ಯದ ಪರಿಸ್ಥಿಯ ಪ್ರಕಾರ ಬಿಜೆಪಿ 2 ಮತ್ತು ಕಾಂಗ್ರೆಸ್ 1 ಸುಲಭವಾಗಿ ಸ್ಥಾನವನ್ನು ಗೆಲ್ಲುತ್ತವೆ. ಆದರೆ ಕಾಂಗ್ರೆಸ್‍ನ ಇಬ್ಬರು ಶಾಸಕರು ಅಡ್ಡ ಮತ ಚಲಾಯಿಸಿದರೆ ಬಿಜೆಪಿ 3 ಸ್ಥಾನಗಳನ್ನು ಗೆಲ್ಲುತ್ತದೆ. ಬಿಜೆಪಿಯಲ್ಲಿ 106 ಶಾಸಕರು ಇದ್ದಾರೆ. ಈ ಮೂಲಕ 3 ರಾಜ್ಯಸಭಾ ಸ್ಥಾನಗಳನ್ನು ಗೆಲ್ಲಲು ಅವರಿಗೆ ಇನ್ನೂ 2 ಮತಗಳು ಬೇಕಾಗುತ್ತವೆ. ಹೀಗಾಗಿ ಕಾಂಗ್ರೆಸ್‍ನ ಇಬ್ಬರು ಶಾಸಕರ ಅಡ್ಡ ಮತದಾನ ಬಿಜೆಪಿಗೆ ಅಗತ್ಯವಿದೆ.

    2017ರಲ್ಲಿ ಗುಜರಾತ್‍ನ 3 ರಾಜ್ಯಸಭಾ ಸ್ಥಾನಗಳ ಚುನಾವಣೆಯ ಸಂದರ್ಭದಲ್ಲಿ ಇದೇ ರೀತಿಯ ಪರಿಸ್ಥಿತಿ ಸೃಷ್ಟಿಯಾಗಿತ್ತು. ಅಹ್ಮದ್ ಪಟೇಲ್ ಅವರ ವಿಜಯವನ್ನು ನಿರ್ಧರಿಸಲು ಕಾಂಗ್ರೆಸ್ ತನ್ನ ಶಾಸಕರನ್ನು ಕರ್ನಾಟಕಕ್ಕೆ ಕಳುಹಿಸಿತ್ತು. ಕೆಲವು ಶಾಸಕರು ಸಹ ಅಡ್ಡ ಮತದಾನ ಮಾಡಿದರು. ಆದರೆ ಅಹ್ಮದ್ ಪಟೇಲ್ ಮೇಲುಗೈ ಸಾಧಿಸಿದ್ದರು.