Tag: Jaipal Reddy

  • 40 ವರ್ಷಗಳ ಸ್ನೇಹವನ್ನ ನೆನೆದು ಕಣ್ಣೀರಿಟ್ಟ ವೆಂಕಯ್ಯ ನಾಯ್ಡು

    40 ವರ್ಷಗಳ ಸ್ನೇಹವನ್ನ ನೆನೆದು ಕಣ್ಣೀರಿಟ್ಟ ವೆಂಕಯ್ಯ ನಾಯ್ಡು

    ನವದೆಹಲಿ: ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷರಾಗಿರುವ ವೆಂಕಯ್ಯ ನಾಯ್ಡು ಅವರು ರಾಜ್ಯ ಸಭೆಯಲ್ಲಿ ಅಗಲಿದ ಸ್ನೇಹಿತನನ್ನು ನೆನೆದು ಕಣ್ಣೀರಿಟ್ಟರು. ರಾಜ್ಯಸಭೆಯಲ್ಲಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಂದರ್ಭದಲ್ಲಿ ನಾಯ್ದು ಭಾವನಾತ್ಮಕ ಸೆಲೆಗೆ ಸಿಲುಕಿ ದುಃಖಿತರಾದರು.

    ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಅವರನ್ನು ನೆನೆದು ನಾಯ್ದು ಅವರು ಕಣ್ಣೀರಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜೈಪಾಲ್ ರೆಡ್ಡಿ ಉತ್ತಮ ಸಂಸದೀಯ ಪಟುವಾಗಿದ್ದು, ಅತ್ಯುತ್ತಮ ವಾಗ್ಮಿಯಾಗಿದ್ದರು. 70ರ ದಶಕದಲ್ಲಿ ಆಂಧ್ರ ವಿಧಾನಸಭೆಯಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೆ. ಸದನ 8 ಗಂಟೆಗೆ ಇದ್ದರೆ, 7 ಗಂಟೆಗೆ ಉಪಾಹಾರಕ್ಕೆ ಹಾಜರಾಗುತ್ತಿದ್ದ ನಾವು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೇವು. ಜನರ ಸಮಸ್ಯೆಗಳ ಬಗ್ಗೆ ತಮ್ಮದೇ ರೀತಿಯಲ್ಲಿ ವಾದಿಸುತ್ತಿದ್ದೆವು ಎಂದು ಸ್ಮರಿಸಿಕೊಂಡರು.

    ಜೈಪಾಲ್ ರೆಡ್ಡಿ ನನಗಿಂತ 6 ವರ್ಷ ಚಿಕ್ಕವರಾಗಿದ್ದು, ಅವರು ನನಗೆ ಸ್ನೇಹಿತರಾಗಿ, ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದರು. ಅವರ ನಿಧನ ತೀವ್ರ ದುಃಖ ತಂದಿದೆ. ನನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ವೆಂಕಯ್ಯ ನಾಯ್ಡು ಅವರು ಹೇಳಿದರು.

    ಹೈದರಾಬಾದಿನ ಆಸ್ಪತ್ರೆಯಲ್ಲಿ ಭಾನುವಾರ ಮುಂಜಾನೆ 77 ವರ್ಷದ ಜೈಪಾಲ್ ರೆಡ್ಡಿ ನಿಧನರಾಗಿದ್ದರು. ನ್ಯೂಮೋನಿಯಾದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಜೈಪಾಲ್ ರೆಡ್ಡಿ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. 1984 ರಿಂದ ಐದು ಬಾರಿ ಸಂಸದರಾಗಿ ಆಯ್ಕೆ ಆಗಿದ್ದ ಅವರು 2 ಬಾರಿ ರಾಜ್ಯಸಭೆಗೂ ಆಯ್ಕೆ ಆಗಿದ್ದರು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದಿದ್ದರು. ಅಜಾತಶತ್ರು, ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಜೈಪಾಲ್ ರೆಡ್ಡಿ ಅಂತ್ಯಕ್ರಿಯೆ ಹೈದರಾಬಾದ್‍ನಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ನೆಕ್ಲೆಸ್ ರೋಡ್‍ನ ಪಿವಿ ಘಾಟ್‍ನಲ್ಲಿ ಜೈಪಾಲ್ ರೆಡ್ಡಿ ಅಂತ್ಯಕ್ರಿಯೆಯನ್ನು ಪುತ್ರ ಅರವಿಂದ್ ರೆಡ್ಡಿ ನೆರವೇರಿಸಿದರು. ಇದಕ್ಕೂ ಮುನ್ನ ಜೈಪಾಲ್ ರೆಡ್ಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಗಣ್ಯರ ದಂಡೇ ಹರಿದುಬಂದಿತ್ತು. ಸಿದ್ದರಾಮಯ್ಯ, ರಮೇಶ್ ಕುಮಾರ್, ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್ ಸೇರಿದಂತೆ ಹಲವು ನಾಯಕರು ಜೈಪಾಲ್ ರೆಡ್ಡಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇದನ್ನು ಓದಿ:   ಜೈಪಾಲ್ ರೆಡ್ಡಿಗೆ ಹೆಗಲು ಕೊಟ್ಟ ಸಿದ್ದರಾಮಯ್ಯ, ರಮೇಶ್ ಕುಮಾರ್

  • ಜೈಪಾಲ್ ರೆಡ್ಡಿಯನ್ನ ನೆನೆದು ಕಣ್ಣೀರಿಟ್ಟ ಸ್ಪೀಕರ್

    ಜೈಪಾಲ್ ರೆಡ್ಡಿಯನ್ನ ನೆನೆದು ಕಣ್ಣೀರಿಟ್ಟ ಸ್ಪೀಕರ್

    ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು ತುರ್ತು ಸುದ್ದಿಗೋಷ್ಠಿಯಲ್ಲಿ ಅನಾರೋಗ್ಯ ಕಾರಣದಿಂದ ಮೃತಪಟ್ಟ ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಅವರನ್ನು ನೆನೆದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್, ಅನಿವಾರ್ಯವಾಗಿ ಉಳಿದ ಅನರ್ಹತೆ ಮತ್ತು ರಾಜೀನಾಮೆಗೆ ಸಂಬಂಧಿಸಿದ ಪತ್ರಗಳನ್ನು ವಿಲೇವಾರಿ ಮಾಡಲೇಬೇಕಾಗಿದೆ. ಜೈಪಾಲ್ ರೆಡ್ಡಿಯವರನ್ನ ಕಳೆದುಕೊಂಡಿದ್ದು ಇಂದು ನನಗೆ ಅತ್ಯಂತ ದುಃಖದ ದಿನವಾಗಿದೆ. ನನ್ನ ಸಾರ್ವಜನಿಕ ಬದುಕಿಗೆ ಬಹಳಷ್ಟು ಪರಿಣಾಮಕಾರಿಯಾದ ಸಲಹೆ, ಮಾರ್ಗದರ್ಶನ ಕೊಟ್ಟಿದ್ದರು. ವೈಯಕ್ತಿಕ ಬದುಕಿನಲ್ಲಿ ಸುಮಾರು 35 ವರ್ಷದಿಂದ ನನಗೆ ಹಿರಿಯ ಸಹೋದರನಂತೆ ನನ್ನನ್ನು ಪ್ರೀತಿಸಿದರು. ಅತ್ಯುತ್ತಮ ಸಂಸದೀಯ ಪಟುವಾಗಿದ್ದರು ಎಂದು ಜೈಪಾಲ್ ರೆಡ್ಡಿ ಬಗ್ಗೆ ಮಾತನಾಡಿದರು.

    ಅತ್ಯಂತ ಪ್ರಮಾಣಿಕ ರಾಜಕಾರಣಿಯಾಗಿದ್ದರು. ವಿಶೇಷವಾಗಿ ಪಕ್ಷಾಂತರ ನಿಷೇಧ ಕಾಯ್ದೆ ಪಾರ್ಲಿಮೆಂಟ್‍ನಲ್ಲಿ ಬಂದಾಗ ಇದರಲ್ಲಿ ಭಾಗವಹಿಸಿ ಜೈಪಾಲ್ ರೆಡ್ಡಿ ಅವರು ಮಾತನಾಡಿದ್ದರು. ಜೈಪಾಲ್ ರೆಡ್ಡಿ ಅವರು 1969ರಲ್ಲಿ ಉಪಚುನಾವಣೆ ಮೂಲಕ ಆಂಧ್ರ ಪ್ರದೇಶದ ವಿಧಾನಸಭೆಗೆ ಆಯ್ಕೆಯಾಗಿದ್ದರು. 1984ರ ವರೆಗೂ ವಿಧಾನಸಭೆಯ ಸದಸ್ಯರಾಗಿರುತ್ತಾರೆ. ಕಾಂಗ್ರೆಸ್ ಪಕ್ಷದ ತುರ್ತು ಪರಿಸ್ಥಿತಿಯಿಂದ ವಿರೋಧಿಸಿ ಕಾಂಗ್ರೆಸ್‍ನಿಂದ ಹೊರ ಬೀಳುತ್ತಾರೆ. 1985 ರಿಂದ 5 ಬಾರಿ ಲೋಕಸಭೆಯಲ್ಲಿ ಎರಡು ಸಂದರ್ಭದಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ ಬರುತ್ತಾರೆ. ಕೇಂದ್ರದ ಮಂತ್ರಿಯಾಗಿಗೂ ಕೆಲಸ ಮಾಡಿದ್ದಾರೆ ಎಂದು ಜೈಪಾಲ್ ರೆಡ್ಡಿಯನ್ನ ನೆನೆದು ಸ್ಪೀಕರ್ ರಮೇಶ್ ಕುಮಾರ್ ಕಣ್ಣೀರಿಟ್ಟರು.

    ಅಟಲ್ ವಾಜಪೇಯಿ, ಗೀತಾ ಚಟರ್ಜಿ, ಜಾರ್ಜ್ ಫರ್ನಾಂಡೀಸ್, ಇಂತಹ ಮೇರು ವ್ಯಕ್ತಿಗಳೆಲ್ಲಾ ಸಾರ್ವಜನಿಕ ಜೀವನದಲ್ಲಿದ್ರಾ, ನಮ್ಮ ಪಾರ್ಲೀಮೆಂಟಿನಲ್ಲಿ ಇದ್ದಾರ, ನಾವು ಎಲ್ಲಿದ್ದೇವೆ. ನನ್ನ ನಾಲ್ಕು ದಶಕದ ರಾಜಕೀಯ ಜೀವನದ ಪ್ರಮುಖ ಘಟ್ಟದಲ್ಲಿ ಬಹುಶ: ಕಡೆಯ ಘಟ್ಟ ಆಗುತ್ತೆ ಎಂದು ತಿಳಿದುಕೊಂಡಿದ್ದೇನೆ. ನನ್ನ ಮೇಲೆ ಅತ್ಯಂತ ಜವಾಬ್ದಾರಿ ಇರುವುದರಿಂದ ಇಂತಹ ತೀರ್ಮಾನ ತೆಗೆದುಕೊಂಡಿದ್ದೇನೆ ಎಂದು ಸ್ಪೀಕರ್ ಹೇಳಿದರು.

    ಸೋಮವಾರ ಕಲಾಪದ ಕಾರ್ಯಸೂಚಿಯಲ್ಲಿ ನೂತನ ಸಿಎಂ ಬಹುಮತ ಸಾಬೀತು ಹಾಗೂ ಧನವಿನಿಯೋಗ ಮಸೂದೆ ಮೇಲೆ ಚರ್ಚೆ ಎರಡು ನಡೆಯಲಿದೆ. ಎಲ್ಲ ಶಾಸಕರು ಸೋಮವಾರ 11 ಗಂಟೆಗೆ ವಿಧಾನಸೌಧಕ್ಕೆ ಬರಬೇಕು ಎಂದು ಸಭಾಧ್ಯಕ್ಷನಾಗಿ ನಾನು ಕಾರ್ಯದರ್ಶಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಕಾರ್ಯಸೂಚನೆಯಲ್ಲಿ ಧನವಿನಿಯೋಗ ಮಸೂದೆಯ ಬಗ್ಗೆ ಸೂಚನಾಪತ್ರ ಕಳುಹಿಸಿಕೊಟ್ಟಿದ್ದೇನೆ. ನಮಗೆ ಎರಡೇ ದಿನ ಸಮಯ ಇದ್ದಿದ್ದರಿಂದ ಶನಿವಾರ ಭಾನುವಾರ ಕೆಲಸ ನಡೆದಿದೆ ಎಂದರು.

  • ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಇನ್ನಿಲ್ಲ

    ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಇನ್ನಿಲ್ಲ

    ಹೈದರಾಬಾದ್: ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.

    ಇತ್ತೀಚೆಗೆ ನ್ಯೂಮೋನಿಯಾ ಎಂಬ ರೋಗದಿಂದ ಬಳಲುತ್ತಿದ್ದ ಅವರನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಮುಂಜಾನೆ 1.28ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ತಮ್ಮ 77 ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ.

    ಜೈಪಾಲ್ ರೆಡ್ಡಿ ಅವರು 1984 ರಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಇದರ ಜೊತೆಗೆ ಎರಡು ಬಾರಿ ರಾಜ್ಯಸಭೆಗೂ ಆಯ್ಕೆಯಾಗಿದ್ದರು. ಈ ಮೂಲಕ ಕಾಂಗ್ರೆಸ್ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ಪಡೆದಿದ್ದರು.

    ಜೈಪಾಲ್ ರೆಡ್ಡಿ ಅವರು ಐಕೆ ಗುಜ್ರಾಲ್ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಅವರು ನಗರ ಅಭಿವೃದ್ಧಿ ಮತ್ತು ಸಂಸ್ಕೃತಿಯಂತಹ ಖಾತೆಗಳಲ್ಲಿ ಸೇವೆ ಸಲ್ಲಿಸಿದ್ದರು.