Tag: jain monk

  • ಜೈನ ಸನ್ಯಾಸಿನಿಯಾದ 12ರ ಬಾಲಕಿ

    ಜೈನ ಸನ್ಯಾಸಿನಿಯಾದ 12ರ ಬಾಲಕಿ

    -ಮಗಳ ನಿರ್ಧಾರಕ್ಕೆ ಹೆತ್ತವರ ಸಮ್ಮತಿ

    ಸೂರತ್: 12ರ ಬಾಲಕಿಯೊಬ್ಬಳು ಜೈನ ಸನ್ಯಾಸಿನಿಯಾಗಿ ದೀಕ್ಷೆ ಪಡೆಯಲು ಮುಂದಾಗಿದ್ದಾಳೆ. ಮಗಳ ಈ ನಿರ್ಧಾರಕ್ಕೆ ತಂದೆ-ತಾಯಿ ಕೂಡ ಬೆಂಬಲ ನೀಡಿರುವುದು ಸದ್ಯ ಎಲ್ಲರ ಗಮನ ಸೆಳೆದಿದೆ.

    ಸೂರತ್‍ನ 12 ವರ್ಷದ ಖುಷಿ ಶಾ ಜೈನ ಸನ್ಯಾಸಿನಿ ಆಗಲು ನಿರ್ಧರಿಸಿದ್ದಾಳೆ. ಖುಷಿ ಕುಟುಂಬದಲ್ಲಿ ಜೈನ ಸನ್ಯಾಸತ್ವ ಸ್ವೀಕರಿಸುತ್ತಿರುವುದು ಇವರೇ ಮೊದಲೇನಲ್ಲ. ಹೀಗಾಗಿ ಈ ಬಗ್ಗೆ ಬಾಲಕಿ ಮಾತನಾಡಿ, ನಾನು ಚಿಕ್ಕವಳಿದ್ದಾಗ ನಮ್ಮ ಕುಟುಂಬದ ನಾಲ್ವರು ಸನ್ಯಾಸತ್ವದ ಹಾದಿ ಹಿಡಿದಿದ್ದರು. ಸಿಮಂದರ್ ಸ್ವಾಮೀಜಿ ತಮ್ಮ ಎಂಟನೇ ವಯಸ್ಸಿನಲ್ಲಿ ಸನ್ಯಾಸತ್ವ ದೀಕ್ಷೆ ಸ್ವೀಕರಿಸಿದ್ದರು. ನಾನು 12ನೇ ವಯಸ್ಸಿನಲ್ಲಿ ದೀಕ್ಷೆ ಪಡೆಯುತ್ತೇನೆ ಎಂದು ಹೇಳಿದಳು.

    ಸರ್ಕಾರಿ ಉದ್ಯೋಗಿಯಾಗಿರುವ ಖುಷಿ ತಂದೆ ವಿನಿತ್ ಶಾ ಹಾಗೂ ತಾಯಿ ಮಗಳ ಈ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಮಗಳು ತನ್ನ ಆಂತರ್ಯದ ಬಗ್ಗೆ ತಿಳಿದುಕೊಂಡಿದ್ದಾಳೆ. ಇದು ಎಲ್ಲ ಮಕ್ಕಳಲ್ಲಿ ಬರುವುದಿಲ್ಲ. ನಮ್ಮ ಮಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಆಕೆ ಸನ್ಯಾಸಿಯಾಗಿ ಲಕ್ಷಾಂತರ ಜನರ ಬದುಕಿನಲ್ಲಿ ಬೆಳಕು ತರಲಿ ಎಂದು ಮಗಳ ನಿರ್ಧಾರಕ್ಕೆ ತಂದೆ-ತಾಯಿ ಶುಭ ಹಾರೈಸಿದರು.

    ಕಳೆದ ವರ್ಷ ನವೆಂಬರ್‍ನಲ್ಲಿ ಆಕೆ 6ನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಶಾಲೆ ಬಿಟ್ಟಿದ್ದಾಳೆ. 6ನೇ ತರಗತಿ ಪರೀಕ್ಷೆಯಲ್ಲಿ 97 ಅಂಕ ಪಡೆದಿದ್ದಳು. ಈಗಾಗಲೇ ಆಕೆ ಬರಿಗಾಲಲ್ಲಿ ಸಾವಿರಾರು ಕಿ.ಮೀ ಪ್ರವಾಸ ಮಾಡಿದ್ದಾಳೆ. ದೀಕ್ಷೆಯ ನಂತರ ಜೀವನವನ್ನು ಮತ್ತಷ್ಟು ಹತ್ತಿರದಿಂದ ನೋಡಲಿದ್ದಾಳೆ ಎಂದು ತಂದೆ ತಿಳಿಸಿದರು.

    ತಾಯಿ ಮಾತನಾಡಿ, ನಮ್ಮ ಮಗಳು ಡಾಕ್ಟರ್ ಆಗಬೇಕು ಎಂದು ನಾನು ಬಯಸಿದ್ದೆ. ಆದರೆ, ಅವಳ ನಿರ್ಧಾರಕ್ಕೆ ನಾವು ಆಕೆ ದೀಕ್ಷೆ ತೆಗೆದುಕೊಳ್ಳುವುದಕ್ಕೆ ಸಮ್ಮತಿಸಿದ್ದೇವೆ. ಆಕೆಯ ಆಸೆಯನ್ನು ಪೂರೈಸುವುದು ನಮ್ಮ ಕರ್ತವ್ಯ. ಆಕೆಯ ನಿರ್ಧಾರದಿಂದ ನಮಗೆ ಹೆಮ್ಮೆ ಇದೆ ಎಂದು ಮಗಳ ನಡೆಗೆ ಬೆಂಬಲಿಸಿದರು.

    ಜೈನ ಸನ್ಯಾಸತ್ವ ದೀಕ್ಷೆ ಸ್ವೀಕರಿಸುವುದು ಸಾಮಾನ್ಯವಲ್ಲ. ಅದು ಬರೀ ಪ್ರಕ್ರಿಯೆ ಮಾತ್ರವಲ್ಲ, ಕಠಿಣ ವ್ರತಗಳನ್ನು ನಿರ್ವಹಿಸಬೇಕಿರುತ್ತದೆ. ದೀಕ್ಷೆ ನೀಡುವ ಸಮಯದಲ್ಲಿ ದೇಹದ ಮೇಲಿನ ವ್ಯಾಮೋಹ ಕಳೆದುಕೊಳ್ಳಲು ತಲೆ ಕೂದಲನ್ನು ಸಂಪೂರ್ಣವಾಗಿ ತೆಗೆಯಲಾಗುತ್ತದೆ. ಹೊಸ ಸನ್ಯಾಸಿಗಳು ಮಹಾವ್ರತ ಹೆಸರಿನ ಐದು ಪ್ರತಿಜ್ಞೆಗಳನ್ನು ಪಾಲಿಸಬೇಕಾಗಿರುತ್ತದೆ. ಇದರಲ್ಲಿ ಪ್ರತಿದಿನ ಕ್ರಿಯಾದಿಗಳು ಒಳಗೊಂಡಿರುತ್ತವೆ. ಹಾಗೆಯೇ ಎಂಟು ಸಿದ್ಧಾಂತಗಳನ್ನು (ಪ್ರವಚನ ಮಾತ್ರಕ್) ಅಭ್ಯಾಸ ಮಾಡಬೇಕು. ಜೊತೆಗೆ ಆರು ಕಡ್ಡಾಯ ಕ್ರಿಯೆಗಳನ್ನು (ಅವಸ್ಯಾಕ್) ಪಾಲಿಸಲೇಬೇಕು. ಈ ಎಲ್ಲಾ ಕಠಿಣ ವ್ರತ, ಸಿದ್ಧಾಂತ ಹಾಗೂ ಕ್ರಿಯೆಗಳನ್ನು ಪಾಲಿಸಿ ಜೈನ ಸನ್ಯಾಸಿನಿಯಾಗಲು ಖುಷಿ ಮುಂದಾಗಿದ್ದಾಳೆ.