ಕಲಬುರಗಿ: ಇಂದಿನ ದಿನಗಳಲ್ಲಿ ಹಬ್ಬಗಳನ್ನೂ (Festivals) ಪೊಲೀಸರ ಬಂದೋಬಸ್ತ್‌ನಲ್ಲಿ ಆಚರಿಸಬೇಕಾದ ಸ್ಥಿತಿ ಬಂದಿರುವುದು ದುರ್ದೈವ. ಕಳೆದ 10 ವರ್ಷಗಳಿಂದ ಇಂತಹ ಪರಿಸ್ಥಿತಿ ಬಂದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿಷಾದ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೈ ಶ್ರೀರಾಮ್ (Jai Sri Ram) ಘೋಷಣೆ ಕೂಗಿದ್ದಕ್ಕೆ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ; ನಾಲ್ವರ ಬಂಧನ
ಎಲ್ಲಾ ಧರ್ಮಗಳಲ್ಲೂ ಶಾಂತಿ ಕದಡುವವರು ಕೆಲವರು ಇರ್ತಾರೆ. ಕೆಲವರು ಅವರದ್ದೇ ಧರ್ಮ ಶ್ರೇಷ್ಠ ಅಂತಾ ಭಾವಿಸುತ್ತಾರೆ ಇದು ದುರ್ದೈವ. ನಾನು ಅದಮಾರ ಮಠದ ಶಾಲೆಯಲ್ಲಿ ಓದಿದ್ದೇನೆ. ಆಗ ನಮಗೆ ರಂಜಾನ್, ಗಣೇಶ್ ಹಬ್ಬ, ಕ್ರಿಸ್ಮಸ್, ರಾಮನವಮಿಗೆ ರಜೆ ಸಿಗ್ತಿತ್ತು. ರಂಜಾನ್, ರಾಮನವಮಿ ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದರು ಎಂದು ಸ್ಮರಿಸಿದ್ದಾರೆ.
ಈ ಹಿಂದೆ ರಂಜಾನ್ ಬಂದ್ರೆ ನಾವು ಅವರ ಮನೆಗೆ ಹೋಗಿ ಬಿರಿಯಾನಿ ತಿಂದು ಬರ್ತಿದ್ವಿ, ಕ್ರಿಸ್ಮಸ್‌ಗೆ ಹೋಗಿ ಕೇಕ್ ತಿನ್ನುತ್ತಿದ್ವಿ. ಯುಗಾದಿ ಬಂದಾಗ ಅವರು ನಮ್ಮ ಮನೆಗೆ ಬಂದು ಹೋಳಿಗೆ ಊಟ ಮಾಡ್ತಿದ್ದರು. ಆದ್ರೆ ಈಗ ಎಲ್ಲ ಹಬ್ಬಗಳನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಆಚರಣೆ ಮಾಡಬೇಕಿದೆ. 144 ಸೆಕ್ಷನ್ ವಿಧಿಸಿ ಹಬ್ಬ ಆಚರಣೆ ಮಾಡಬೇಕಾದಂತಹ ಪರಿಸ್ಥಿತಿ ಬಂದಿದೆ. ಇದು ಯಾರಿಂದ ಮತ್ತು ಯಾಕೆ ಆಗಿದೆ ಅನ್ನೋದನ್ನ ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.
ಬೆಂಗಳೂರು: ಬಿಜೆಪಿ ದೇಶ ಒಡೆಯುವ ಕೆಲಸ ಮಾಡ್ತಿದ್ದಾರೆ. ಇವರು ಜೈ ಶ್ರೀರಾಮ್ ಅಂತಾರೆ, ನಾವು ಜೈ ಸೀತಾರಾಂ ಅಂತೀವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದರು.
ವಿಧಾನಸಭೆಯಲ್ಲಿ ಗುರುವಾರ ಬಜೆಟ್ ಕುರಿತ ಚರ್ಚೆಯಲ್ಲಿ ಉತ್ತರಿಸಲು ಸಿದ್ದರಾಮಯ್ಯ ಮುಂದಾದರು. ಇದಕ್ಕೆ ಮೈತ್ರಿ ನಾಯಕರು (ಬಿಜೆಪಿ-ಜೆಡಿಎಸ್) ವಿರೋಧ ವ್ಯಕ್ತಪಡಿಸಿದರು. ದೇಶದ್ರೋಹಿಗಳ ರಕ್ಷಣೆ ಮಾಡ್ತಿದೆ ಸರ್ಕಾರ. ಈ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ವಿಪಕ್ಷಗಳಿಂದ ಆಕ್ರೋಶ ಹೊರಹಾಕಿದವು. ನ್ಯಾಯ ಬೇಕು ಎಂದು ಘೋಷಣೆ ಕೂಗಿದರು. ವಿಪಕ್ಷಗಳ ನಡೆಗೆ ಸಿಎಂ ಗರಂ ಆದರು. ಇವರಿಗೆ ಕಾಳಜಿ ಇಲ್ಲ, ಜವಾಬ್ದಾರಿ ಇಲ್ಲ. ಬಜೆಟ್ ದಿನ ಹೊರ ಹೋಗಿದ್ದು ಇತಿಹಾಸದಲ್ಲೇ ಇರಲಿಲ್ಲ ಎಂದು ವಿಪಕ್ಷಗಳ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.
ಬಜೆಟ್ ಕುರಿತು ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವ್ರು ಬಜೆಟ್ ಬಗ್ಗೆ ಟೀಕೆ ಮಾಡಿದ್ದಾರೆ. ಕೇಂದ್ರದ ಬಜೆಟ್ ಸಮರ್ಥಿಸಿಕೊಂಡಿದ್ದಾರೆ. ಅವರ ಟೀಕೆ, ಸಲಹೆ ಸೂಚನೆಗಳಿಗೆ ಸ್ವಾಗತ. ವಿಪಕ್ಷಗಳ ಸಲಹೆ ಸೂಚನೆಗಳನ್ನು ಪರಿಗಣಿಸಿ ಏನೇನು ಮಾಡಬೇಕೋ ಮಾಡ್ತೀವಿ. ನಾವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಒದಗಿಸಿದ್ದೀವಿ. 1.20 ಲಕ್ಷ ಕೋಟಿ ಹಣ ಅಭಿವೃದ್ಧಿ ಕೆಲಸಗಳಿಗೆ ಕೊಟ್ಟಿದ್ದೀವಿ. ಗ್ಯಾರಂಟಿಗಳಿಗೆ 52,900 ಕೋಟಿ ಇಟ್ಟಿದ್ದೇವೆ. ಇದು ಇನ್ನೂ ಹೆಚ್ಚಾಗಬಹುದು. ಗ್ಯಾರಂಟಿಗಳಿಗೆ 56 ಸಾವಿರ ಕೋಟಿ ಆಗಬಹುದು. ವಿಪಕ್ಷಗಳ ಆರೋಪ ಸುಳ್ಳು. ಗ್ಯಾರಂಟಿಗಳಿಂದ ಅಭಿವೃದ್ಧಿ ಕೆಲಸ ಕುಂಠಿತ ಆಗಿಲ್ಲ. ಅವರ ಆಪಾದನೆ ಸತ್ಯಕ್ಕೆ ದೂರವಾಗಿದೆ ಎಂದು ಸಿಎಂ ತಿಳಿಸಿದರು. ಸಿಎಂ ಉತ್ತರದ ವೇಳೆ, ಕೋಟಿ ಕೋಟಿ.. ಲೂಟಿ ಲೂಟಿ ಎಂದು ವಿಪಕ್ಷಗಳು ಘೋಷಣೆ ಕೂಗಿದವು.
ಸಿಎಂ ಸಿದ್ದರಾಮಯ್ಯ ಮುಂದುವರಿದು, ಜನ ಬಿಜೆಪಿ ತಿರಸ್ಕರಿಸಿ ನಮಗೆ ಆಶೀರ್ವಾದ ಮಾಡಿದ್ರು. ನಮಗೆ 43%, ಇವರಿಗೆ ಕೇವಲ 36% ಮಾತ್ರ ಮತ ಕೊಟ್ರು. ಇವರು ಹಿಂದೆ ಅಧಿಕಾರದಲ್ಲಿ ಇದ್ದವರು. ಜನ ಇವರ ನಡವಳಿಕೆ ನೋಡಿ, ಇವರ ಲೂಟಿ ನೋಡಿ ತಿರಸ್ಕರಿಸಿದರು. 40% ಭ್ರಷ್ಟಾಚಾರ ನೋಡಿ ಜನ ತಿರಸ್ಕರಿಸಿದರು. 2008 ರಲ್ಲಿ ಇವರು ಗೆದ್ದಿದ್ದು 110 ಸ್ಥಾನ. ನಂತರ ಆಪರೇಷನ್ ಮೂಲಕ ಅಧಿಕಾರಕ್ಕೆ ಬಂದ್ರು. ನಾಚಿಕೆ ಆಗಬೇಕು ಇವರಿಗೆ. ಜನ ಇವರಿಗೆ ಯಾವತ್ತೂ ಆಶೀರ್ವಾದ ಮಾಡಿಲ್ಲ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.
2023-24 ರಲ್ಲಿ ರಾಜ್ಯದ ಜಿಡಿಪಿ 27,67,340 ಕೋಟಿ ಇತ್ತು. ಮುಂದಿನ ವರ್ಷಕ್ಕೆ 28,09630 ಕೋಟಿ ಜಿಡಿಪಿ ಹೆಚ್ಚಾಗಲಿದೆ. ಅಭಿವೃದ್ಧಿಯೂ ಬೆಳೆದಿದೆ, ಜಿಡಿಪಿಯೂ ಬೆಳೆದಿದೆ. ಗ್ಯಾರಂಟಿಗಳಿಗೆ ಮೊದಲ ವರ್ಷ 36 ಸಾವಿರ ಕೋಟಿ ಖರ್ಚು ಮಾಡಿದ್ದೀವಿ. ಮುಂದಿನ ವರ್ಷ 52 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಇಟ್ಟಿದ್ದೀವಿ. ರಸ್ತೆ, ಶಾಂತಿ ಸುವ್ಯವಸ್ಥೆ ಕಾಪಾಡಲು, ಶಿಕ್ಷಣ, ನೀರಾವರಿ ಎಲ್ಲಕ್ಕೂ ಹಣ ಇಟ್ಟಿದ್ದೀವಿ. ಇವರ ಕಾಲದಲ್ಲಿ ಅಭಿವೃದ್ಧಿ ಮಾಡಲಿಲ್ಲ. ಬರೀ ಲೂಟಿ ಮಾಡಿದ್ರು. ನಾವು ಗ್ಯಾರಂಟಿಗಳಿಗೂ ಹಣ ಇಟ್ಟು ಅಭಿವೃದ್ಧಿ ಕೆಲಸವನ್ನೂ ಮಾಡಿದ್ದೀವಿ. ಇದು ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದು ವಾಗ್ದಾಳಿ ನಡೆಸಿದರು. ಸಿಎಂ ಉತ್ತರ ವೇಳೆ, ಬುರುಡೆ ಬುರುಡೆ.. ಸುಳ್ಳು ಸುಳ್ಳು ಅಂತ ಧರಣಿ ನಿರತ ವಿಪಕ್ಷಗಳಿಂದ ಘೋಷಣೆ ಕೂಗಿದವು.
ಸಿಎಂ ಮಾತನಾಡಿ, ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಿಸುವ ಮಾತಾಡಿದ್ರು. ಅವರು ಮಂತ್ರಿ ಆಗಿದ್ದಾಗಲೇ ಮಾತಾಡಿದ್ರು. ಬಿಜೆಪಿ ಅವರ ವಿರುದ್ಧ ಕ್ರಮ ತಗೊಳ್ಳಲಿಲ್ಲ. ಅದರರ್ಥ ಅದು ಬಿಜೆಪಿ ನಿಲುವು ಅಂತ. ಇವರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಗೋಡ್ಸೆ ಪೂಜೆ ಮಾಡೋರು ಬಿಜೆಪಿಯವ್ರು. ಗಾಂಧಿ ಕೊಂದವರು ಇವರು. ಸಮಾಜ ಒಡೆಯುವವರು ಎಂದು ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.
ಈ ಜನ ಬಿಜೆಪಿಯವ್ರು ಚುನಾವಣೆಗೆ ಬರಲಿ ಅಂತ ಕಾಯ್ತಿದ್ದಾರೆ. ಸೋಲಿಸಿ ಮನೆಗೆ ಕಳಿಸಲು ಜನ ತಯಾರಾಗಿದ್ದಾರೆ. ಅವರ ಪಕ್ಷದ ಒಬ್ಬರು ಅಡ್ಡ ಮತದಾನ ಮಾಡಿದ್ರು. ಮತ್ತೊಬ್ರು ಬರಲೇ ಇಲ್ಲ. ಅದರಿಂದ ಈ ರೀತಿ ಹುಚ್ಚಾಟ ಮಾಡ್ತಿದ್ದಾರೆ ಎಂದು ಬಿಜೆಪಿಗೆ ಸಿಎಂ ತಿರುಗೇಟು ನೀಡಿದರು. ಈ ವೇಳೆ ಸದನದ ಬಾವಿಯೊಳಗೆ ಬಿಜೆಪಿ-ಜೆಡಿಎಸ್ ಸದಸ್ಯರು ರೌಂಡ್ ಹಾಕಿದರು. ಬಾವಿಯೊಳಗೆ ರೌಂಡ್ ಹಾಕುತ್ತಾ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಏನಿಲ್ಲ ಏನಿಲ್ಲ.. ಬಜೆಟ್‌ನಲ್ಲಿ ಏನಿಲ್ಲ ಎಂದು ಘೋಷಣೆ ಕೂಗುತ್ತಾ ಧರಣಿ ಮಾಡಿದರು.
ಜೆಡಿಎಸ್‌ನವರಿಗೆ ಠಕ್ಕರ್ ಕೊಟ್ಟ ಸಿಎಂ, ನೀವು ಬಿಜೆಪಿಯವರ ಜೊತೆ ಯಾಕೆ ಹೋಗ್ತಿದ್ದೀರಿ. ನೀವು ಬಿಜೆಪಿಯವರ ಜೊತೆ ಹೋಗೋದಾದರೆ ಜೆಡಿಎಸ್‌ನಲ್ಲಿ ‘ಎಸ್’ ತೆಗೆದು ಹಾಕಿ ಹೋಗಿ. ಕೋಮುವಾದಿ ಪಕ್ಷದ ಜತೆ ಹೋದ್ರೆ ಎಸ್ (ಸೆಕ್ಯುಲರ್) ತೆಗೆದು ಹೋಗಿ ಎಂದು ಹೇಳಿದರು.
ಮೋದಿ ಇಲ್ಲ ಅಂದ್ರೆ ಬಿಜೆಪಿಯವರು ರಾಜಕೀಯವಾಗಿ ಅಶಕ್ತರು. ಬಿಜೆಪಿಯವರ ತಲೆ ಖಾಲಿ ಖಾಲಿ. ರಾಮಾಯಣವೂ ಓದಿಲ್ಲ, ಮಹಾಭಾರತವೂ ಓದಿಲ್ಲ ಇವರು. ಸುಮ್ನೆ ಯಾರೋ ಹೇಳಿದ್ರು ಅಂತ ಮಾತಾಡ್ತಾರೆ ಎಂದ ಸಿಎಂ ‘ಜೈ ಸೀತಾರಾಂ’ ಅಂತ ಘೋಷಣೆ ಕೂಗಿದರು. ಬಿಜೆಪಿಯವರ ‘ಜೈ ಶ್ರೀರಾಮ್’ ಘೋಷಣೆಗೆ ‘ಜೈ ಸೀತಾರಾಂ’ ಎಂದು ಕೂಗಿ ಸಿಎಂ ಠಕ್ಕರ್ ಕೊಟ್ಟರು.
ಸ್ಪೀಕರ್ ಪೀಠದತ್ತ ಧರಣಿ ವೇಳೆ ಪೇಪರ್ ಹರಿದೆಸೆದು ಬಿಜೆಪಿ-ಜೆಡಿಎಸ್ ಸದಸ್ಯರು ಆಕ್ರೋಶ ಹೊರಹಾಕಿದರು. ಬಿಜೆಪಿ, ಜೆಡಿಎಸ್ ಸದಸ್ಯರ ನಡೆಗೆ ಸ್ಪೀಕರ್ ಗರಂ ಆದರು. ಇದೇನು ಸದನವೋ ನಿಮ್ಹಾನ್ಸೋ ಗೊತ್ತಾಗ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಈ ವೇಳೆ, ವಿಧಾನಸೌಧ ಉಗ್ರರ ತಾಣ, ಸ್ಲೀಪರ್‌ಗಳ ತಾಣ ಎಂದು ಕೂಗಾಡಿದ ಬಿಜೆಪಿ-ಜೆಡಿಎಸ್ ಸದಸ್ಯರು, ಸಿಎಂ ಉತ್ತರಕ್ಕೆ ಖಂಡನೆ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.
ಕೊಪ್ಪಳ: ಗಂಗಾವತಿ ನಗರದ ಸಿದ್ದಿಕೇರಿ ಸಮೀಪದ ರೈಲ್ವೆ ಬ್ರಿಡ್ಜ್ ಸಮೀಪದಲ್ಲಿ ಮುಸ್ಲಿಂ ವ್ಯಕ್ತಿಗೆ ʼಜೈ ಶ್ರೀರಾಮ್ʼ ಎಂದು ಹೇಳುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಸ್ಥಳಕ್ಕೆ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಭೇಟಿಯನ್ನು ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಲ್ಲೆಗೆ ಒಳಗಾಗಿರುವ ವ್ಯಕ್ತಿಯನ್ನು ಮೈಬೂಬ್ ನಗರದ ಹುಸೇನಸಾಬ್ ಎಂದು ಗುರುತಿಸಲಾಗಿದೆ.
ನವೆಂಬರ 25 ರಂದು ಕೆಲಸದ ನಿಮಿತ್ತ ಹೊಸಪೇಟೆಗೆ ಹೋಗಿ ಮಧ್ಯರಾತ್ರಿಯ ವೇಳೆಯಲ್ಲಿ ಗಂಗಾವತಿಗೆ ಬಂದು ಮನೆಗೆ ಹೋಗಲು ಆಟೋಗಾಗಿ ಕಾಯುತ್ತಿದ್ದೆ. ಆ ವೇಳೆಯಲ್ಲಿ ಬೈಕ್‌ನಲ್ಲಿ ಬಂದ ಯುವಕರು ಬಲವಂತವಾಗಿ ಬೈಕ್ ಮೇಲೆ ಕೂಡಿಸಿಕೊಂಡು ಸಿದ್ದಿಕೇರಿ ಸಮೀಪದ ರೈಲ್ವೆ ಬ್ರಿಡ್ಜ್ ಕೆಳಗಡೆ ಕರೆದುಕೊಂಡು ಹೋದರು. ಜೈ ಶ್ರೀರಾಮ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ನನ್ನ ಬಳಿ ಇದ್ದಂಥ ಹಣವನ್ನು ಸಹ ಕಳ್ಳತನ ಮಾಡಿಕೊಂಡು ನನ್ನನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಬೆಳಗಿನ ಜಾವ ಕುರಿ ಕಾಯುವವರು ನನ್ನನ್ನು ಮನೆಗೆ ಕರೆದುಕೊಂಡು ಬಿಟ್ಟಿದ್ದಾರೆ ಎಂದು ಹುಸೇನಸಾಬ್ ದೂರು ನೀಡಿದ ಹಿನ್ನೆಲೆಯಲ್ಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಸೇನಸಾಬ್ ಎನ್ನುವ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಸ್ಥಳಕ್ಕೆ ಭೇಟಿಯನ್ನು ನೀಡಿ ಎಸ್‌ಪಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ವ್ಯಕ್ತಿಗಳಿಂದ ಮಾಹಿತಿಯನ್ನು ಸಹ ಪಡೆದುಕೊಳ್ಳಲಾಗಿದೆ. ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಆದಷ್ಟು ಬೇಗನೆ ತನಿಖೆಯನ್ನು ಪೂರ್ಣಗೊಳಿಸಿ, ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಎಸ್ಪಿ ಯಶೋಧಾ ವಂಟಗೋಡಿ ಹೇಳಿದರು.
ರಾಂಚಿ: ಕಾಶ್ಮೀರದ ವ್ಯಾಪಾರಿಗಳನ್ನು ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಒತ್ತಾಯಿಸಿ ಹಲ್ಲೆ ಮಾಡಿರುವ ಪ್ರಕರಣ ಜಾರ್ಖಂಡ್ ನಲ್ಲಿ ದಾಖಲಾಗಿದೆ.
ರಾಂಚಿಯಲ್ಲಿ ಕಾಶ್ಮೀರಿ ವ್ಯಾಪಾರಿಗಳಿಗೆ ‘ಜೈ ಶ್ರೀ ರಾಮ್’ ಮತ್ತು ‘ಪಾಕಿಸ್ತಾನ್ ಮುರ್ದಾಬಾದ್’ ಎಂದು ಹೇಳುವಂತೆ ಒತ್ತಾಯಿಸಿದ ಮೂವರನ್ನು ಬಂಧಿಸಿರುವುದಾಗಿ ಜಾರ್ಖಂಡ್ ಪೊಲೀಸರು ಇಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಣಕ್ಕಾಗಿ ಬ್ಲ್ಯಾಕ್‍ಮೇಲ್ – ನಕಲಿ ಎಸಿಬಿ ಅಧಿಕಾರಿ ಅರೆಸ್ಟ್
ನಡೆದಿದ್ದೇನು?
ಚಳಿಗಾಲದ ಬಟ್ಟೆಗಳನ್ನು ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಕಾಶ್ಮೀರಿ ವ್ಯಾಪಾರಿಗಳ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹಲ್ಲೆಗೊಳಗಾದ ವ್ಯಕ್ತಿಯೊಬ್ಬ ಶನಿವಾರ ಪೊಲೀಸರಿಗೆ ದೂರ ನೀಡಿದ್ದಾರೆ. ಈ ದೂರಿನಲ್ಲಿ ರಾಂಚಿಯ ಡೊರಾಂಡಾ ಪ್ರದೇಶದಲ್ಲಿ ನನ್ನ ಮತ್ತು ಇತರ ಕೆಲವು ಕಾಶ್ಮೀರಿ ವ್ಯಾಪರಿಗಳ ಮೇಲೆ 25 ಜನರು ದಾಳಿ ಮಾಡಿದ್ದು, ಜೈ ಶ್ರೀ ರಾಮ್ ಮತ್ತು ಪಾಕಿಸ್ತಾನ ಮುರ್ದಾಬಾದ್ ಎಂದು ಹೇಳುವಂತೆ ಒತ್ತಾಯಿಸಿದರು ಎಂದು ದಾಖಲಿಸಿದ್ದಾರೆ.
कश्मीरी युवकों से ‘जय श्री राम’ के नारे लगवाने को लेकर मारपीट, पीड़ितों ने कहा- दीवाली के बाद पांचवीं बार हमला हुआ.
रांची में शॉल और गर्म कपड़े बेचने वाले कश्मीरियों के साथ मारपीट और गालीगलौज के आरोप में पुलिस ने 3 युवकों को हिरासत में लिया, आरोपियों ने सभी आरोपों से इंकार किया. pic.twitter.com/C8SovBwrMY
ಕಾಶ್ಮೀರಿ ವ್ಯಾಪಾರಿಗಳು ಘಟನೆಯ ಬಗ್ಗೆ ದೂರು ನೀಡಿರುವ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ನಾವು ಕಾಶ್ಮೀರಿಯಾಗಿರುವುದು ಅಪರಾಧವೇ? ನಾವು ಭಾರತೀಯರಲ್ಲವೇ? ಇವರು ನಮ್ಮ ಜೀವನವನ್ನು ನರಕವಾಗಿಸಿದ್ದು, ಯಾವಾಗಲೂ ‘ಜೈ ಶ್ರೀ ರಾಮ್’, ‘ಪಾಕಿಸ್ತಾನ ಮುರ್ದಾಬಾದ್’ ಎಂದು ಹೇಳುವಂತೆ ಒತ್ತಾಯಿಸುತ್ತಿರುತ್ತಾರೆ. ಅವರು ಹೇಳಿದಂತೆ ನಾವು ಕೇಳಲಿಲ್ಲವೆಂದು ನಮ್ಮ ನಾಲ್ವರನ್ನು ಥಳಿಸಿದ್ದಾರೆ. ನಾವು ಭಾರತೀಯರು ಮತ್ತು ಕಾನೂನು ಎಲ್ಲರಿಗೂ ಸಮಾನವಾಗಿದೆ. ಕಾನೂನಿನಲ್ಲಿ ಯಾವುದೇ ತಾರತಮ್ಯ ಇರಬಾರದು ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ಸಿಎಂ ಹೇಮಂತ್ ಸೊರೆನ್ ಅವರು ಆ ವೀಡಿಯೋವನ್ನು ರೀ-ಟ್ವೀಟ್ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆಯನ್ನು ನೀಡಿದರು. ಜಾರ್ಖಂಡ್‍ನಲ್ಲಿ ಧಾರ್ಮಿಕ ದ್ವೇಷ ಮತ್ತು ತಾರತಮ್ಯಕ್ಕೆ ಯಾವುದೇ ಸ್ಥಳವಿಲ್ಲ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀ ಕ್ಷೇತ್ರ ಕೈವಾರದಲ್ಲೊಂದು ಅಪರೂಪದ ಮದುವೆ
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುರೇಂದ್ರ ಕುಮಾರ್ ಝಾ ಈ ಕುರಿತು ಪ್ರತಿಕ್ರಿಯಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲಾಗುತ್ತೆ ಎಂದು ತಿಳಿಸಿದ್ದಾರೆ.