Tag: Jaggeshm Disease

  • ದೇಶಕ್ಕೆ ಹೊಸ ಕಾಯಿಲೆ ಬಂದಿದೆ – ನಟ ಜಗ್ಗೇಶ್ ಆತಂಕ

    ದೇಶಕ್ಕೆ ಹೊಸ ಕಾಯಿಲೆ ಬಂದಿದೆ – ನಟ ಜಗ್ಗೇಶ್ ಆತಂಕ

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಮೊಬೈಲ್‍ನಲ್ಲಿ ತಲ್ಲೀನರಾಗಿರುವುದನ್ನು ನಾವು ಕಾಣಬಹುದು. ಮೊಬೈಲ್ ಹಾಗೂ ಇಂಟರ್‍ನೆಟ್ ಉಪಯೋಗಿಸುವುದರಿಂದ ಜನರು ಕಾಲಕಾಲಕ್ಕೆ ಬದಲಾಗುತ್ತಿದ್ದಾರೆ. ಯುವ ಪೀಳಿಗೆ ಮೊಬೈಲ್‍ನಲ್ಲಿ ಹೆಚ್ಚು ಬ್ಯುಸಿ ಆಗಿರುತ್ತಾರೆ. ಇದು ಎಷ್ಟರಮಟ್ಟಿಗೆ ಜನಸಾಮಾನ್ಯರ ಮೇಲೆ ಪರಿಣಾಮ ಬೀರಿದೆ ಎಂದರೆ ತಮ್ಮ ಅಕ್ಕಪಕ್ಕ ಪರಿಚಯಸ್ಥರೇ ಇದ್ದರೂ ಅವರನ್ನೇ ಮರೆತು ಮೊಬೈಲ್ ಗುಂಗಿನಲ್ಲಿರುತ್ತಾರೆ. ಹೀಗೆ ಜನರು ಮೊಬೈಲಿನಲ್ಲಿ ಬ್ಯುಸಿ ಆಗಿರುವುದನ್ನು ನೋಡಿ ನವರಸನಾಯಕ ಜಗ್ಗೇಶ್ `ಮೊಬೈಲ್ ರೋಗ’ ಎಂದು ಬರೆದುಕೊಂಡಿದ್ದಾರೆ.

    ಹೌದು. ಜಗ್ಗೇಶ್ ತಮ್ಮ ಟ್ವಿಟ್ಟರಿನಲ್ಲಿ ಒಂದಷ್ಟು ಮಹಿಳೆಯರು ಹಾಗೂ ಪುರಷರು ಮೊಬೈಲ್ ಬಳಸುತ್ತಿರುವ ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದು, ಈ ರೋಗಕ್ಕೆ ಬೇಗ ಮದ್ದು ಕಂಡುಹುಡುಕಿ ಇಲ್ಲವೆಂದಲ್ಲಿ ಮನುಷ್ಯ ಏಕಾಂಗಿ ಎಂಬ ರೋಗದಿಂದ ಸಾವನ್ನಪ್ಪುತ್ತಾರೆ ಎಂದು ಹೇಳಿದ್ದಾರೆ. ಇದನ್ನು ಓದಿ: ಎಲ್ಲರೂ ಇದ್ದಾರೆ ಆದ್ರೆ ಮಾತನಾಡೋಕ್ಕೆ ಯಾರು ಇಲ್ಲ- ಕಣ್ಣೀರು ತರಿಸುತ್ತೆ ಆಶಾ ಬೋಸ್ಲೆ ಟ್ವೀಟ್

    ಟ್ವೀಟ್ ನಲ್ಲೇನಿದೆ..?
    “ನಮ್ಮ ದೇಶಕ್ಕೆ ಬಂದ ಹೊಸ ಕಾಯಿಲೆ. ಮೊಬೈಲ್ ರೋಗ. ಬಂಧು-ಬಾಂಧವರು, ಸ್ನೇಹಿತರು ಪಕ್ಕದಲ್ಲೆ ಇದ್ದರೂ ಸತ್ತವರಂತೆ ಭಾವಿಸಿ ಮೊಬೈಲಲ್ಲಿ ತಲ್ಲಿನರಾಗಿದ್ದು, ಇದೊಂದು ಗುಣಪಡಿಸಲಾಗದ ರೋಗವಾಗಿದೆ. ಈ ರೋಗಕ್ಕೆ ಮದ್ದು ಕಂಡು ಹಿಡಿಯದಿದ್ದರೆ, ಮಾನವರು ಏಕಾಂಗಿ ಎಂಬ ರೋಗದಿಂದ ಸಾವನ್ನಪ್ಪುತ್ತಾರೆ. ದಯಮಾಡಿ ಬೇಗ ಈ ರೋಗಕ್ಕೆ ಔಷಧಿ ಕಂಡು ಹಿಡಿದು ಇದರಿಂದ ಜನರನ್ನ ಉಳಿಸಬೇಕು ಎಂದು ದೇವರಲ್ಲಿ ಪ್ರಾರ್ಥನೆ” ಎಂದು ಬರೆದುಕೊಂಡಿದ್ದಾರೆ.

    ಕಳೆದ ತಿಂಗಳು ಬಾಲಿವುಡ್ ಗಾಯಕಿ ಆಶಾ ಬೋಸ್ಲೆ ಅವರು ಒಂದು ಕಾರ್ಯಕ್ರಮಕ್ಕೆ ಕೋಲ್ಕತ್ತಾಗೆ ತೆರೆಳಿದ್ದರು. ಈ ವೇಳೆ ಆಶಾ ಅವರ ಜೊತೆ ಗಾಯಕರಾದ ಸುದೇಶ್ ಬೋಸ್ಲೆ ಹಾಗೂ ಸಿದ್ಧಾಂತ್ ಬೋಸ್ಲೆ ಕೂಡ ತೆರೆಳಿದ್ದು, ಅಲ್ಲಿ ವೇಟಿಂಗ್ ರೂಮಿನಲ್ಲಿ ಎಲ್ಲರೂ ಜೊತೆಯಲ್ಲಿ ಇದ್ದರು. ಈ ವೇಳೆ ಆಶಾ ವೇಟಿಂಗ್ ರೂಮಿನಲ್ಲಿ ಕುಳಿತ ಫೋಟೋವನ್ನು ಹಾಕಿ ಅದಕ್ಕೆ, “ಬಾಗ್ಡೋಗ್ರದಿಂದ ಕೋಲ್ಕತ್ತಾವರೆಗೂ?. ಎಲ್ಲರೂ ಜೊತೆಯಲ್ಲಿಯೇ ಇದ್ದಾರೆ. ಆದರೆ ಮಾತನಾಡುವುದಕ್ಕೆ ಯಾರೂ ಇಲ್ಲ. ಅಲೆಕ್ಸಾಂಡ್ ಗ್ರಹಾಂ ಬೆಲ್ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದರು. ಆಶಾ ಅವರ ಈ ಟ್ವೀಟ್ ಹೆಚ್ಚು ವೈರಲ್ ಕೂಡ ಆಗಿತ್ತು.

    ಒಟ್ಟಿನಲ್ಲಿ ಮನೆಯಲ್ಲಿ ಲ್ಯಾಂಡ್‍ಲೈನ್ ಇದ್ದಾಗ ಮನೆ ಮಂದಿಯಲ್ಲಾ ತಮ್ಮ ಬಂಧುಗಳ ಬಳಿ ಎಲ್ಲರೂ ಆರಾಮಾಗಿ ಮಾತನಾಡುತ್ತಿದ್ದರು. ಆದರೆ ಈಗ ಮೊಬೈಲಿನಲ್ಲೇ ಪ್ರತಿಯೊಬ್ಬರು ಹಬ್ಬದ ಶುಭಾಶಯ, ಮದುವೆಯ ಶುಭಾಶಯಗಳು ತಿಳಿಸುತ್ತಾರೆ. ಇಂದಿನ ಯುವಪೀಳಿಗೆ ಕುಟುಂಬದವರ ಜೊತೆ ಹೆಚ್ಚು ಕಾಲ ಕಳೆಯುವುದರ ಬದಲು ಮೊಬೈಲ್, ಇಂಟರ್‍ನೆಟ್‍ನಲ್ಲಿ ಬ್ಯುಸಿಯಾಗಿರುತ್ತಾರೆ. ಕೆಲವರು ವಾಹನ ಚಲಾಯಿಸುವಾಗ ಕೂಡ ಮೊಬೈಲ್ ಬಳಸಿ ಅಪಘಾತಕ್ಕೆ ಒಳಗಾಗಿರುವಂತಹ ಅನೇಕ ಸುದ್ದಿಗಳನ್ನು ನಾವು ಕೇಳಿದ್ದೇವೆ. ಶಾಲಾ ಮಕ್ಕಳ ಮೇಲೂ ಮೊಬೈಲ್ ಸಾಕಷ್ಟು ಪರಿಣಾಮ ಬೀರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv