Tag: Jagdish Shetter

  • ಕಿಮ್ಸ್ ಆವರಣದಲ್ಲಿ ಮರಳು ಶಿಲ್ಪದ ಮೂಲಕ ಕೊರೊನಾ ಸೇನಾನಿಗಳಿಗೆ ಗೌರವ

    ಕಿಮ್ಸ್ ಆವರಣದಲ್ಲಿ ಮರಳು ಶಿಲ್ಪದ ಮೂಲಕ ಕೊರೊನಾ ಸೇನಾನಿಗಳಿಗೆ ಗೌರವ

    ಹುಬ್ಬಳ್ಳಿ: ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್, ಪೊಲೀಸರು, ಪೌರಕಾರ್ಮಿಕರು ಹಾಗೂ ಮಾಧ್ಯಮದವರಿಗೆ ಮರಳು ಶಿಲ್ಪದ ಮೂಲಕ ಗೌರವ ಸಲ್ಲಿಸಲಾಗಿದೆ.

    ನಗರದ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ಈ ವಿಶೇಷ ಮರಳು ಶಿಲ್ಪವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಜಗದೀಶ್ ಶೆಟ್ಟರ್ ವೀಕ್ಷಿಸಿದರು.

    ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು ದಿನದ 24 ಗಂಟೆ ಕೆಲಸ ನಿರ್ವಹಿಸುತ್ತಿದ್ದಾರೆ. ಕೊರೊನಾ ಸೊಂಕಿತರು ಹಾಗೂ ಪ್ರಾಥಮಿಕ ಹಂತದಕ್ಕೆ ಸಂಪರ್ಕಕ್ಕೆ ಬಂದವರ ವಿವರವನ್ನು ಕಲೆಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ. ವೈದ್ಯರು ಜೀವದ ಹಂಗು ತೋರದು ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕಿಮ್ಸ್ ವೈದ್ಯರ ಪರಿಶ್ರಮದಿಂದಾಗಿ ಜಿಲ್ಲೆಯ ಇಬ್ಬರು ಕೋವಿಡ್-19 ರೋಗಿಗಳು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಧಾರವಾಡ ಜಿಲ್ಲಾಡಳಿತ, ಪೊಲೀಸರು, ಪಾಲಿಕೆ ಪೌರಕಾರ್ಮಿಕರು ಸಹ ಸಮರ್ಪಣಾ ಭಾವದಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಕಾರ್ಯಕ್ಕೆ ಇತರೆ ಸರ್ಕಾರೇತರ ಸಂಘ ಸಂಸ್ಥೆಗಳು ಕೈ ಜೋಡಿಸಿದ್ದಾರೆ. ಮಾಧ್ಯಮದವರು ಕೊರೊನಾ ವಿರುದ್ದ ಹೋರಾಟದಲ್ಲಿ ಸಕ್ರಿಯವಾಗಿವ ಭಾಗವಹಿಸಿ ಜನರಲ್ಲಿ ತಿಳಿವಳಿಕೆ ಮೂಡಿಸುತ್ತಿದ್ದಾರೆ. ಇವರೆಲ್ಲರಿಗೂ ಗೌರವ ಸಮರ್ಪಿಸುವ ನಿಟ್ಟಿನಲ್ಲಿ ಕಲಾವಿದ ಮಂಜುನಾಥ ಹಿರೇಮಠ ಮರಳು ಶಿಲ್ಪ ರಚನೆ ಮಾಡಿದ್ದಾರೆ. ಕಲಾಕೃತಿ ಸುಂದರವಾಗಿ ಮೂಡಿ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಹಂತ ಹಂತವಾಗಿ ಉದ್ದಿಮೆಗಳನ್ನು ತೆರೆಯಲು ಅವಕಾಶ
    ಕೇಂದ್ರ ಸರ್ಕಾರದ ನಿಯಮಗಳಂತೆ ಮೊದಲ ಹಂತದಲ್ಲಿ ಗ್ರಾಮೀಣ ಭಾಗದ ಹಾಗೂ ಅಗತ್ಯ ವಸ್ತುಗಳು ನಿರ್ಮಿಸುವ ಕೈಗಾರಿಕೆ ತೆರೆಯಲು ಅನುಮತಿ ನೀಡಲಾಗಿದೆ. ಇದರ ಪರಿಣಾಮಗಳನ್ನು ಅವಲೋಕಿಸಿ ಹಂತ ಹಂತವಾಗಿ ಉದ್ದಿಮೆಗಳನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದರು.

    ಹುಬ್ಬಳ್ಳಿ ಕಂಟ್ಯಾಮಿನೇಟೆಡ್ ಜೋನ್ ಹೊರತು ಪಡಿಸಿ ಬೇರೆ ಸ್ಥಳ ಹಾಗೂ ಧಾರವಾಡ ಬೇಲೂರಿನಲ್ಲಿ ಕೈಗಾರಿಕೆಗಳನ್ನು ತೆರೆದು ಆರ್ಥಿಕ ಚಟುವಟಿಕೆಗಳು ಪಾರಂಭವಾಗಲಿ ಎಂಬ ಆಶಯ ಸರ್ಕಾರಕ್ಕೆ ಇದೆ. ಕಂಟ್ಯಾಮಿನೇಟೆಡ್ ಜೋನ್‍ನ ಕೊವೀಡ್-19 ರೋಗಿಯ ವರದಿ ನೆಗೆಟಿವ್ ಬಂದರೆ ಅಲ್ಲಿಯೂ ಉದ್ಯಮೆಗಳನ್ನು ತೆರೆಯಬಹುದು ಎಂಬ ಆಶಯ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಶಾಸಕರಾದ ಅಬ್ಬಯ್ಯ ಪ್ರಸಾದ್, ಶ್ರೀನಿವಾಸ ಮಾನೆ, ಎಸ್.ವಿ ಸಂಕನೂರ, ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಆರ್. ದಿಲೀಪ್, ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ್, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ, ಹುಬ್ಬಳ್ಳಿ ನಗರ ತಹಶೀಲ್ದಾರ್ ಶಶಿಧರ್ ಮಾಡ್ಯಾಳ, ಕಲಾವಿದ ಮಂಜುನಾಥ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.

  • ಇನ್ವೆಸ್ಟ್ ಕರ್ನಾಟಕ – 72 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ!

    ಇನ್ವೆಸ್ಟ್ ಕರ್ನಾಟಕ – 72 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ!

    – 90 ಸಾವಿರ ಉದ್ಯೋಗ ಸೃಷ್ಟಿ

    ಹುಬ್ಬಳ್ಳಿ: ಜಿಲ್ಲೆಯಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಒಟ್ಟು 51 ಕಂಪನಿಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಯಿತು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ಸಮಾವೇಶದ ಬಳಿಕ ಡೆನಿಸ್ಸನ್ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಮಾವೇಶದ ಕುರಿತು ಮಾಹಿತಿ ನೀಡಿದರು. ಇನ್ವೆಸ್ಟ್ ಕರ್ನಾಟಕ ನಿರೀಕ್ಷೆಗೂ ಮೀರಿ ಯಶಸ್ವಿಗೊಂಡಿದೆ. 1500 ಕ್ಕೂ ಹೆಚ್ಚು ಉದ್ಯಮಿಗಳು ಆಗಮಿದ್ದರು. 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಯು ಈ ಸಮಾವೇಶದ ಯಶಸ್ಸಿಗೆ ಸಾಕ್ಷಿಯಾದವು ಎಂದರು.

    ಒಟ್ಟು ಸಮಾವೇಶದಲ್ಲಿ 51 ಕಂಪನಿಗಳೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗಿದ್ದು, 72 ಸಾವಿರ ಕೋಟಿ ಹೂಡಿಕೆ ಹರಿದು ಬರಲಿದೆ. ಇದರಿಂದ 90 ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿದೆ ಎಂದು ಜಗದೀಶ್ ಶೆಟ್ಟರ್ ವಿವರಿಸಿದರು.

    ಇನ್ವೆಸ್ಟ್ ಮಾಡಿದ ಕಂಪನಿಗಳು:
    ರಾಜೇಶ್ ಎಕ್ಸ್ ಪೋಟ್ರ್ಸ್ ಲಿಮಿಟೆಡ್ 50 ಸಾವಿರ ಕೋಟಿ, ಸೊನಾಲಿ ಪವರ್ ಪ್ರೈವೆಟ್ ಲಿಮಿಟೆಡ್ ಕಂಪನಿಯು 4800 ಕೋಟಿ ರೂ., ನ್ಯಾಟ್‍ಕ್ಯಾಪ್ ಪವರ್ ಪ್ರೈವೆಟ್ ಲಿಮಿಟೆಡ್ 3000 ಕೋಟಿ, ಜೆಟ್‍ವಿಂಗ್ಸ್ ಏರೋಸ್ಪೇಸ್ ಆಂಡ್ ಏವಿಯೇಷನ್ 2060 ಕೋಟಿ, ಅಯನಾ ರಿನಿವೆಬಲ್ ಪವರ್ ಪ್ರೈವೆಟ್ ಲಿಮಿಟೆಡ್ 3000 ಕೋಟಿ, ಲುಗ್ಸೋರ್ ಎನರ್ಜಿ ಪ್ರೈವೆಟ್ ಲಿಮಿಟೆಡೆ 1200 ಕೋಟಿ ಸೇರಿದಂತೆ ಭಾಗೀರಥ ಕೆಮಿಕಲ್ಸ್, ಎಚ್‍ಪಿಸಿ, ಐಒಸಿ, ಪವರ್ ರಿನ್ಯೂ, ಗುಜರಾತ್ ಅಂಬುಜಾ, ಕೆಎಲ್‍ಇ ಸೊಸೈಟಿ, ದೋಡ್ಲಾ ಡೈರಿ, ಎಸಿಸಿ ಲಿಮಿಟೆಡ್, ಡೆಪೆಡ್ರೊ ಶುಗರ್, ವುಕ್ಸಿ ಮೆಂಗ್ಯಾಂಗ್ ಮೆಷಿನರಿ ಕಂಪನಿಗಳು ಒಳಗೊಂಡಿವೆ.

  • ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಇನ್ವೆಸ್ಟ್ ಕರ್ನಾಟಕ

    ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಇನ್ವೆಸ್ಟ್ ಕರ್ನಾಟಕ

    ಧಾರವಾಡ/ಹುಬ್ಬಳ್ಳಿ: ಬೆಂಗಳೂರು ಹೊರತುಪಡಿಸಿ ಉತ್ತರ ಕರ್ನಾಟಕ ಭಾಗದಲ್ಲಿ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಫೆಬ್ರವರಿ 14 ರಂದು “ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ-2020” ಆಯೋಜಿಸಲಾಗಿದೆ. ಇನ್‍ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶದ ಪೂರ್ವಭಾವಿ ಸಿದ್ಧತೆಗಳ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಿವರಣೆ ನೀಡಿದ್ರು.

    ಹುಬ್ಬಳ್ಳಿ ನಗರದ ಡೆನಿಸ್ಸನ್ ಹೋಟೆಲ್‍ನಲ್ಲಿ ಆಯೋಜಿಸಿರುವ ಈ ಸಮಾವೇಶಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಚಾಲನೆ ನೀಡಲಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಶಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಡಿ.ವಿ.ಸದಾನಂದಗೌಡ ಹಾಗೂ ರೈಲ್ವೇ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

    ಬಹುತೇಕರಿಗೆ ಕರ್ನಾಟಕವೆಂದರೆ ಬೆಂಗಳೂರು ಮಾತ್ರ ಎಂಬ ಕಲ್ಪನೆ ಇದೆ. ಕೈಗಾರಿಕಾ ಬೆಳವಣಿಗೆ ಕೇವಲ ಬೆಂಗಳೂರಿನಲ್ಲಿ ಆಗುತ್ತಿದ್ದು, 2 ಟಯರ್ ಮತ್ತು 3 ಟಯರ್ ಸಿಟಿಗಳಲ್ಲಿಯೂ ಕೈಗಾರಿಕೊದ್ಯಮದ ಬೆಳವಣಿಗೆ ಆಗಬೇಕೆಂಬ ಉದ್ದೇಶದಿಂದ ಈ ಭಾಗದಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶ ಆಯೋಜಿಸಿದ್ದೇವೆ. ಈ ಸಮಾವೇಶದಿಂದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಹಾವೇರಿ, ವಿಜಯಪುರ, ಕಲುಬುರಗಿ, ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೊದ್ಯಮ ಚಿಗುರೊಡೆಯಲಿದೆ.

    ಈ ಸಮಾವೇಶಕ್ಕೆ 1000ಕ್ಕೂ ಹೆಚ್ಚು ಉದ್ಯಮಿಗಳ ಆಗಮನ ನಿರೀಕ್ಷಿಸಿದ್ದೇವೆ. ಹೈದರಾಬಾದ್, ಮುಂಬೈ ರೋಡ್ ಶೋ ನಡೆಸಿದ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹೂಡಿಕೆಗೆ ಇರುವ ವಿಫುಲ ಅವಕಾಶಗಳ ಬಗ್ಗೆ ಉದ್ಯಮಿಗಳಿಗೆ ತಿಳಿಸಿದಾಗ ಅವರು ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಹಿಂದೂಜಾ ಹಾಗೂ ಟಾಟಾ ಗ್ರೂಪ್‍ನ ಮುಖ್ಯಸ್ಥರು ಈ ಸಮಾವೇಶಕ್ಕೆ ತಮ್ಮ ತಂಡ ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಈ ತಂಡಗಳು ಆಗಮಿಸಿ ಯಾವ ವಲಯದಲ್ಲಿ ಹೂಡಿಕೆ ಮಾಡಬಹುದು ಎಂಬುದರ ಬಗ್ಗೆ ಅಧ್ಯಯನ ನಡೆಸಲಿವೆ. ಜೊತೆಗೆ, ಚೀನಾ ಮೂಲದ ಕಂಪನಿಯ ಬೆಂಗಳೂರು ಪ್ರತಿನಿಧಿಗಳು ಸಹ ಈ ಸಮಾವೇಶಕ್ಕೆ ಆಗಮಿಸಿ, ವಿದ್ಯುತ್ಚಾಲಿತ ವಾಹನ ನಿರ್ಮಾಣದ ಕುರಿತು ಸಾಧಕ ಬಾಧಕದ ಬಗ್ಗೆಯೂ ವಿವರ ಕಲೆಹಾಕಲಿದ್ದಾರೆ ಎಂದರು.

    ಹುಬ್ಬಳ್ಳಿ- ಧಾರವಾಡ ನಗರ ಹೂಡಿಕೆಗೆ ಸೂಕ್ತ ವಾತಾವರಣವನ್ನು ಹೊಂದಿದೆ. ಹುಬ್ಬಳ್ಳಿಯಲ್ಲಿ ಎಫ್‍ಎಂಸಿಜಿ ಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಗುವಾಹಟಿಗೆ ಭೇಟಿ ನೀಡಿ, ಗುವಾಹಟಿ ಮ್ಯಾನೇಜ್‍ಮೆಂಟ್ ಅಸೋಸಿಯೇಷನ್ (ಜಿಎಂಎ) ಮತ್ತು ಗ್ರಾಹಕ ಸರಕುಗಳ ಉತ್ಪಾದನಾ ಉದ್ಯಮಗಳಾದ (ಜ್ಯೋತಿ ಲ್ಯಾಬ್ಸ್, ಗೋದ್ರೇಜ್ ಮತ್ತು ಕ್ರಿಯೇಟಿವ್ ಪಾಲಿಪ್ಯಾಕ್) ಕರ್ನಾಟಕದಲ್ಲಿ ಹೂಡಿಕೆ ಮಾಡಲು ಸೆಳೆದಿದ್ದೇವೆ ಎಂದು ಹೇಳಿದರು.

    ಯಾದಗಿರಿ ಜಿಲ್ಲೆಯ ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ 2500 ಎಕರೆ ಲ್ಯಾಂಡ್ ಬ್ಯಾಂಕ್ ಲಭ್ಯತೆ ಇದೆ. ಆ ಭಾಗದಲ್ಲಿ ಕೈಗಾರಿಕೆ ತೆರೆಯುವ ಆಸಕ್ತಿಯೂ ಕೆಲ ಕಂಪನಿಗಳಿಂದ ವ್ಯಕ್ತವಾಗಿವೆ. ಕೆಐಎಡಿಬಿಯು ಭೂ ಲಭ್ಯತೆ ಹೊಂದಿದ್ದು, ಕೆಲವೆಡೆ ಭೂ ಸ್ವಾಧೀನವನ್ನೂ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಆಸಕ್ತರನ್ನು ಸ್ಥಳ ಪರಿಶೀಲನೆಗೂ ಕರೆದೊಯ್ಯಲಾಗುತ್ತಿದೆ. ಮತ್ತೊಂದೆಡೆ ಮೂಲಸೌಕರ್ಯವಾದ ನೀರು ಹಾಗೂ ರಸ್ತೆ ಅಗಲೀಕರಣದಂತಹ ಕೆಲಸವೂ ಸಾಗಿವೆ ಎಂದು ವಿವರಣೆ ನೀಡಿದರು.

    ಉತ್ತರ ಕರ್ನಾಟಕ ಭಾಗದಲ್ಲಿ ಟೆಕ್ಸ್ ಟೈಲ್ಸ್, ವಾಲ್ಸ್, ಸೋಲಾರ್ ಪವರ್, ಫುಡ್‍ಫಾರ್ಕ್ ಸೇರಿದಂತೆ ಬಹುತೇಕ ವಲಯಗಳಲ್ಲಿ ಆಸಕ್ತಿ ವ್ಯಕ್ತವಾಗಿವೆ. ಇತ್ತೀಚೆಗೆ ಪತಂಜಲಿ ಸಂಸ್ಥಾಪಕ ಬಾಬಾ ರಾಮ್ ದೇವ್ ಅವರೊಂದಿಗೂ ಫುಡ್‍ಪಾರ್ಕ್ ತೆರೆಯುವ ಸಂಬಂಧ ಚರ್ಚಿಸಿದ್ದೇವೆ. ಅವರ ತಂಡ ಹುಬ್ಬಳ್ಳಿಗೆ ಆಗಮಿಸಿ ಇಲ್ಲಿನ ಆಹಾರ ಪದಾರ್ಥಗಳ ಲಭ್ಯತೆ ಆಧಾರದ ಮೇಲೆ ಅಧ್ಯಯನ ನಡೆಸುವುದಾಗಿ ಹೇಳಿದೆ ಎಂದರು.

    ಫೆಬ್ರವರಿ 14ರಂದು ಬೆಳಗ್ಗೆ 10 ರಿಂದ 12ರವರೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಯಾವ ರೀತಿಯ ಹೂಡಿಕೆಗೆ ಅವಕಾಶಗಳು ಇವೆ ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ನಂತರ ಮುಖ್ಯಮಂತ್ರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3 ರಿಂದ ವಿವಿಧ ಉದ್ಯಮಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮವಿರಲಿದೆ ಎಂದು ವಿವರಣೆ ನೀಡಿದರು.

    ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಸಹ ಈ ಸಮಾವೇಶಕ್ಕೆ ಕೈ ಜೋಡಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದಲೂ ಸಾಕಷ್ಟು ಸಹಕಾರ ವ್ಯಕ್ತವಾಗಿದೆ. ಈ ಸಮಾವೇಶ ನೆರವೇರಿಕೆಗೆ ಇಲಾಖೆಯ ಎಲ್ಲಾ ಅಧಿಕಾರಿಗಳು ಸಹ ಒಟ್ಟಿಗೆ ನಿಂತು ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಹುಬ್ಬಳ್ಳಿ – ಧಾರವಾಡ ನಗರ ಪೊಲೀಸ್ ಆಯುಕ್ತ ಆರ್. ದಿಲೀಪ್, ಡಿಸಿ ದೀಪಾ ಚೋಳನ್, ಶಾಸಕ ಅರವಿಂದ ಬೆಲ್ಲದ್ ಉಪಸ್ಥಿತರಿದ್ದರು.

  • ಗಡಿ ವಿಚಾರವಾಗಿ ಉದ್ಧವ್ ಠಾಕ್ರೆ ಕಿಚ್ಚು ಹಚ್ಚುವ ಕೆಲಸ ಮಾಡ್ತಿದ್ದಾರೆ: ಶೆಟ್ಟರ್

    ಗಡಿ ವಿಚಾರವಾಗಿ ಉದ್ಧವ್ ಠಾಕ್ರೆ ಕಿಚ್ಚು ಹಚ್ಚುವ ಕೆಲಸ ಮಾಡ್ತಿದ್ದಾರೆ: ಶೆಟ್ಟರ್

    ಧಾರವಾಡ: ಶಿವಸೇನೆ ನೇತೃತ್ವದ ಸರ್ಕಾರ ಬಂದ ಮೇಲೆ ಉದ್ಧವ್ ಠಾಕ್ರೆ ವಿನಾಕಾರಣ ಗಡಿ ವಿಚಾರವಾಗಿ ಪ್ರಕ್ಷುಬ್ಧ ವಾತಾವಾರಣ ಸೃಷ್ಟಿಸುತ್ತಿದ್ದಾರೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ನಗರದಲ್ಲಿ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್ ಅವರು, ಬೆಳಗಾವಿಯಲ್ಲಿ ಕನ್ನಡ ಮರಾಠಿಗರು ಅನೋನ್ಯವಾಗಿದ್ದಾರೆ. ಬೆಳಗಾವಿ ಕರ್ನಾಟಕ ಭಾಗವಾಗಿ ಹೋಗಿದೆ. ಉದ್ಧವ್ ಠಾಕ್ರೆ ಗಡಿ ತಂಟೆಗೆ ಮತ್ತೆ ಕಿಚ್ಚು ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ವಿಷಯ ಬಿಟ್ಟು ಸರಿಯಾದ ಆಡಳಿತ ಮಾಡಿಕೊಂಡು ಹೋಗವ ಬಗ್ಗೆ ಗಮನವಹಿಸಬೇಕು ಎಂದರು.

    ಶಿವಸೇನೆಗೆ ಸರ್ಕಾರ ಮಾಡಲು ಕಾಂಗ್ರೆಸ್ ಬೆಂಬಲ ಕೊಟ್ಟಿದೆ. ಹೀಗಾಗಿ ಕರ್ನಾಟಕದ ಕಾಂಗ್ರೆಸ್ ಪಕ್ಷದವರು ತಮ್ಮ ನಿಲುವು ಏನೆಂಬುವುದನ್ನು ಸ್ಪಷ್ಟಪಡಿಸಬೇಕು. ಭೀಮಾಶಂಕರ ಪಾಟೀಲ್ ಕನ್ನಡಿಗರ ರಕ್ಷಣೆ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಆದರೆ ಅದನ್ನು ವಿರೋಧಿಸಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದರು.

    ಇದೇ ವೇಳೆ ಮಹದಾಯಿ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸುವ ಪ್ರಯತ್ನ ಮಾಡಬೇಕಿದೆ. ಈ ಕಾರ್ಯವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ಸೌಹಾರ್ದತೆ ಸೃಷ್ಟಿಸಿಕೊಂಡು ಬಗೆ ಹರಿಸಬೇಕಿದೆ. ಕಾಂಗ್ರೆಸ್ ಇಷ್ಟು ದಿನ ಈ ಕಾರ್ಯ ಮಾಡಿಲ್ಲ. ಗೋವಾ ಕಾಂಗ್ರೆಸ್ ಮಹದಾಯಿ ವಿಚಾರದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

    ಇದೇ ವೇಳೆ ಉತ್ತರ ಕರ್ನಾಟಕ ಬಗ್ಗೆ ಡಿಕೆಶಿ ನೀಡಿರುವ ಹೇಳಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಡಿಕೆಶಿ, ಹುಬ್ಬಳ್ಳಿ, ದಾವಣಗೆರೆ ರಾಜಧಾನಿಯಾಗಿದ್ದರೆ ನಮ್ಮಿಂದೇನು ಆಗುತ್ತಿರಲಿಲ್ಲ ಎಂದು ಹೇಳಿರುವುದು ಸರಿಯಲ್ಲ. ಉತ್ತರ ಕರ್ನಾಟಕ ಬಗ್ಗೆ ಅವರು ಯಾವ ರೀತಿಯ ಭಾವನೆ ಹೊಂದಿದ್ದಾರೆ ಎಂಬುವುದು ಇದರಲ್ಲಿ ಸ್ಪಷ್ಟವಾಗಿದೆ. ಸರ್ಕಾರದ ಗೋಮಾಳವನ್ನು ಅವರು ಏಸು ಪ್ರತಿಮೆಗೆ ಕೇಳಿಯೇ ಇಲ್ಲ. ಸರ್ಕಾರವನ್ನು ಕೇಳದೆಯೇ ಅವರು ಜಾಗ ಕೊಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯಾಗುತ್ತೋ, ಪುನರ್ ರಚನೆಯಾಗುತ್ತೋ ಅದೆಲ್ಲವೂ ಸಿಎಂಗೆ ಬಿಟ್ಟ ವಿಚಾರ, ಇದರಲ್ಲಿ ಅವರಿಗೆ ಪರಮಾಧಿಕಾರ ಇದೆ ಎಂದರು.

  • ಸಿಎಂ ವಿಡಿಯೋ ರೆಕಾರ್ಡ್ ಮಾಡಿದ ಬ್ರಹ್ಮ ಯಾರೆಂದು ತಿಳಿಯಬೇಕಿದೆ: ಶೆಟ್ಟರ್

    ಸಿಎಂ ವಿಡಿಯೋ ರೆಕಾರ್ಡ್ ಮಾಡಿದ ಬ್ರಹ್ಮ ಯಾರೆಂದು ತಿಳಿಯಬೇಕಿದೆ: ಶೆಟ್ಟರ್

    ಹುಬ್ಬಳ್ಳಿ: ಆಡಿಯೋ, ವಿಡಿಯೋ ಬಿಡುಗಡೆಯ ಬ್ರಹ್ಮ ಯಾರು, ಅದನ್ನು ರೆಕಾರ್ಡ್ ಮಾಡಿದ್ದು ಯಾರು ಎಂದು ದೃಢಪಟ್ಟಿಲ್ಲ. ರೆಕಾರ್ಡ್ ಮಾಡಿದವರು ಯಾರು ಎಂಬುದು ತಿಳಿಯಬೇಕಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.

    ಅನರ್ಹ ಶಾಸಕರ ಕುರಿತು ಬಿಜೆಪಿ ಕೋರ್ ಕಮೀಟಿ ಸಭೆಯಲ್ಲಿ ಸಿಎಂ ಮಾತನಾಡಿರುವ ವಿಡಿಯೋ ವೈರಲ್ ಆಗಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದರು. ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಗೆ ಬರುತ್ತವೆ. ಮೊದಲು ಈ ವಿಡಿಯೋ ರೆಕಾರ್ಡ್ ಮಾಡಿರುವವರು ಯಾರು ಎಂಬುದನ್ನು ಕಾಂಗ್ರೆಸ್‌ನವರು ಬಹಿರಂಗ ಮಾಡಬೇಕಿದೆ ಆಗ್ರಹಿಸಿದರು.

    ಕಾಂಗ್ರೆಸ್ ಸುಳ್ಳು ಆರೋಪ ಮಾಡಿ ಸುಪ್ರೀಂಕೋರ್ಟ್ ಮೇಟ್ಟಿಲೇರಲು ಮುಂದಾಗಿದೆ. ಕಾಂಗ್ರೆಸ್ ಕಾಲು ಕೆದರಿಕೊಂಡು ಜಗಳ ಮಾಡುತ್ತಿದೆ. ಆಧಾರವಿಲ್ಲದೆ ಕೇವಲ ಆಡಿಯೋ, ವಿಡಿಯೋಗಳನ್ನು ಸಾಕ್ಷಿ ಎಂದು ಸುಪ್ರೀಂ ಕೋರ್ಟ್ ಪರಿಗಣಿಸುವುದಿಲ್ಲ. ಇದು ತಿಳಿದಿದ್ದರೂ ಸಹ ಕಾನೂನು ಪಂಡಿತರಾಗಿರುವ ಸಿದ್ದರಾಮಯ್ಯನವರು ರಾಜ್ಯಪಾಲರಿಗೆ ದೂರು ನೀಡಿ, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸುಪ್ರೀಂ ಕೋರ್ಟಿನಲ್ಲಿ ಆಡಿಯೋ-ವಿಡಿಯೋ ಸಾಕ್ಷಿ ನಡೆಯುವುದಿಲ್ಲ ಎಂದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಯಡಿಯೂರಪ್ಪನವರ ಸರ್ಕಾರ ಬಲಾಢ್ಯವಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಬೇರೆ ಯಾವುದೇ ವಿಷಯಗಳಿಲ್ಲದೆ ಈ ರೀತಿಯ ವಿಷಯಗಳಿಂದ ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತಿದೆ. ಅನರ್ಹರ ಕುರಿತು ಹಸಿ ಸುಳ್ಳನ್ನು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಅವರ ಪಕ್ಷದ ವೈಫಲ್ಯದಿಂದಲೇ ಅನರ್ಹ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಆರೋಪಿಸಿದರು.

    ಅಲ್ಲದೆ ಸದ್ಯಕ್ಕೆ ಸರ್ಕಾರ ಬೀಳಿಸಲು ಪ್ರಯತ್ನಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಅವರು ಬಿಜೆಪಿಗೆ ಬೆಂಬಲ ಕೊಡುವ ಕುರಿತು ಅಧಿಕೃತವಾಗಿ ಎಲ್ಲೂ ಹೇಳಿಲ್ಲ. ಅವರ ಹೇಳಿಕೆಯಿಂದ ಬೆಂಬಲ ನೀಡುತ್ತಾರೆಂದು ತಿಳಿಯಲ್ಲ. ಇಬ್ಬರೂ ಕೈ ಕುಲಕಿದ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯವರೇ ಉತ್ತರ ನೀಡಬೇಕು. ಈ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡ ಅವರಿಂದ ಅಧಿಕೃತವಾಗಿ ಹೇಳಿಕೆ ಬರಲಿ. ಆಗ ಅದಕ್ಕೆ ಗಾಂಭೀರ್ಯತೆ ಇರುತ್ತದೆ. ಕುಮಾರಸ್ವಾಮಿಯವರು ದಿನಕ್ಕೊಂದು ಹೇಳಿಕೆ ನೀಡಿದರೆ ನಾವು ಮೂರ್ಖರಾಗಬೇಕಾ ಎಂದು ಹರಿಹಾಯ್ದರು.

  • ಟಿಪ್ಪು ಸುಲ್ತಾನ್‍ಗೆ ಭಾರತರತ್ನ ಕೊಡಿ ಅಂತಾ ಸಿದ್ದರಾಮಯ್ಯ ಹೇಳ್ತಾರೆ: ಶೆಟ್ಟರ್

    ಟಿಪ್ಪು ಸುಲ್ತಾನ್‍ಗೆ ಭಾರತರತ್ನ ಕೊಡಿ ಅಂತಾ ಸಿದ್ದರಾಮಯ್ಯ ಹೇಳ್ತಾರೆ: ಶೆಟ್ಟರ್

    -ಕಾಂಗ್ರೆಸ್ ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಯಾಕೆ ಕೊಡಲಿಲ್ಲ

    ಕೊಪ್ಪಳ: ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮುಂದೊಂದು ದಿನ ಟಿಪ್ಪು ಸುಲ್ತಾನ್‍ಗೂ ಭಾರತರತ್ನ ಕೊಡಿ ಎಂದು ಶಿಫಾರಸ್ಸು ಮಾಡುವ ವ್ಯಕ್ತಿ. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ವೀರ್ ಸಾರ್ವಕರ್ ಬಗ್ಗೆ ಕೀಳಾಗಿ ಮಾತನಾಡೋದನ್ನು ಬಿಡಬೇಕು ಎಂದು ಸಚಿವ ಜಗದೀಶ್ ಶೆಟ್ಟರ್ ಆಗ್ರಹಿಸಿದರು.

    ಟಿಪ್ಪು ಸುಲ್ತಾನ ಜಯಂತಿ ಆಚರಣೆ ಯಾರಿಗೂ ಇಷ್ಟ ಇರಲಿಲ್ಲ. ವೋಟ್ ಬ್ಯಾಂಕ್ ಗಾಗಿ ಟಿಪ್ಪು ಜಯಂತಿ ಆಚರಣೆ ಪ್ರಾರಂಭಿಸಿದರು. ಸಿದ್ದರಾಮಯ್ಯ ನಾಳೆ ಅವರಿಗೂ ಭಾರತ ರತ್ನ ಕೊಡಿ ಎನ್ನುತ್ತಾರೆ. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ಎಲ್ಲರೂ ಪ್ರಯತ್ನ ಮಾಡೋಣ. ಆದರೆ ಹಿಂದೆ ಯುಪಿಎ ಸರ್ಕಾರ ಇದ್ದಾಗ ಕಾಂಗ್ರೆಸ್ ನವರು ಮಲಗಿದ್ದರಾ, ಏಕೆ ಸ್ವಾಮೀಜಿಗಳಿಗೆ ನೀಡಲಿಲ್ಲ. ಸಾವರ್ಕರ್ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಸ್ವಾತಂತ್ರ್ಯ ಸೇನಾನಿ. ಸಾವರ್ಕರ್ ಬಗ್ಗೆ ಕೀಳಾಗಿ ಮಾತಾನಡಲು ನಿಮಗೆ ಮಾನ, ಮರ್ಯಾದೆ, ನಾಚಿಕೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ಇದೇ ವೇಳೆ ಹುಬ್ಬಳ್ಳಿ ಬಾಂಬ್ ಸ್ಫೋಟಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರಕರಣದ ಕುರಿತು ತಿಳಿದಿದೆ, ನಾನಿನ್ನು ಅಧಿಕಾರಿಗಳೊಂದಿಗೆ ಮಾತನಾಡಿಲ್ಲ. ಪೊಲೀಸರು ತನಿಖೆ ಮಾಡುತ್ತಾರೆ ಎಂದು ತಿಳಿಸಿದರು.

  • ಡಿಕೆಶಿ ನಮ್ಮ ಸಮಾಜದವನು, ಕಾಂಗ್ರೆಸ್ಸಿನಲ್ಲಿ ಬೆಳೆಯುತ್ತಾನೆಂದು ಇಡಿಯಿಂದ ಅರೆಸ್ಟ್ – ರೇವಣ್ಣ

    ಡಿಕೆಶಿ ನಮ್ಮ ಸಮಾಜದವನು, ಕಾಂಗ್ರೆಸ್ಸಿನಲ್ಲಿ ಬೆಳೆಯುತ್ತಾನೆಂದು ಇಡಿಯಿಂದ ಅರೆಸ್ಟ್ – ರೇವಣ್ಣ

    ಹಾಸನ: ಡಿ.ಕೆ.ಶಿವಕುಮಾರ್ ನಮ್ಮ ಸಮಾಜದವನು. ಕಾಂಗ್ರೆಸ್‍ ನಲ್ಲಿ ಬೆಳೆಯುತ್ತಾನೆ ಎಂಬ ಉದ್ದೇಶದಿಂದ ಇಡಿಯಿಂದ ಅರೆಸ್ಟ್ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಎಚ್.ಡಿ.ರೇವಣ್ಣ ಹರಿಹಾಯ್ದಿದ್ದಾರೆ.

    ಬೇಲೂರಿನಲ್ಲಿ ಜೆಡಿಎಸ್ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಗೆ  ಏನು ಮಾಡುತ್ತಿದ್ದಾರೆ. ಅದನ್ನು ನಾನು ಖಂಡಿಸುತ್ತೇನೆ. ಬೇಕಂತಲೇ ಈ ರೀತಿ ಮಾಡುತ್ತಿದ್ದಾರೆ. ಡಿಕೆಶಿ ತಂದೆಗೆ ಎಡೆ ಇಡುತ್ತೇನೆ ಎಂದರೂ ಕರುಣೆ ತೋರಿಸಲಿಲ್ಲ. ನಾನು ಇದನ್ನೆಲ್ಲ ನೋಡುತ್ತಿದ್ದೇನೆ. ಯಡಿಯೂರಪ್ಪ ಅವರ ಮಗ ಡಿಕೆಶಿ ಮನೆಗೆ ಹೋಗಿ ಯೋಜನೆಗಳಿಗೆ ಹಣವನ್ನು ಬಿಡುಗಡೆ ಮಾಡಿಸಿಕೊಂಡಿದ್ದರೂ ದ್ವೇಷದ ರಾಜಕಾರಣ ಬಿಡಲಿಲ್ಲ ಎಂದು ಬಿಎಸ್‍ವೈ ವಿರುದ್ಧ ಕಿಡಿಕಾರಿದರು.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಅಧಿಕಾರ ವಹಿಸಿಕೊಂಡ ನಂತರ ಸಂಜೆಯೇ ಕೆಎಂಎಫ್ ಫೈಲ್ ತೆಗೆದರು. ಬಿ.ಎಸ್.ಯಡಿಯೂರಪ್ಪನವರಿಗೆ ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬಿಜೆಪಿ ಶಾಸಕರಿಗೆ ನೈತಿಕತೆ ಇದ್ದರೆ, ಸಿಎಂ ಯಡಿಯೂರಪ್ಪ ಅವರನ್ನು ಕೇಳಲಿ, ಮುಖ್ಯಮಂತ್ರಿಯಾಗಿ ಎಂಟು ದಿನಕ್ಕೆ ಶಿವಮೊಗಕ್ಕೆ ಎರಡು ಸಾವಿರ ಕೋಟಿ ರೂ. ಹಣ ತೆಗೆದಿದ್ದಾರೆ. ಕುಮಾರಸ್ವಾಮಿಗೆ ಹಾಸನ ಬಜೆಟ್ ಅಂತಿದ್ರಲ್ಲಾ? ಇದು ಶಿಕಾರಿಪುರ ಬಜೆಟ್ಟಾ? ಜಗದೀಶ್ ಶೆಟ್ಟರ್ ನಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದರು. ಈಗ ಸಿಎಂ ಯಡಿಯೂರಪ್ಪನವರನ್ನು ಕೇಳೋಕೆ ಭಯವೇ? ಸಿಕ್ಕ ಮಂತ್ರಿ ಪದವಿ ಹೋಗುತ್ತೆ ಅಂತ ಜಗದೀಶ್ ಶೆಟ್ಟರ್ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಜೆಡಿಎಸ್ ಅಂದರೆ ನಾಯಕರನ್ನು ತಯಾರಿಸುವ ಕಾರ್ಖಾನೆ. ಬೆಳೆದ ಮೇಲೆ ಮೇವು ಎಲ್ಲಿ ಸಿಗುತ್ತೋ ಅಲ್ಲಿಗೆ ಹೋಗುತ್ತವೆ. ನಮ್ಮ ಕೆಲಸ ಯಾರೂ ತಡೆಯೋಕೆ ಆಗಲ್ಲ, ಬೇಕಿದ್ದರೆ ನಿಧಾನ ಮಾಡಬಹುದು. ನಮ್ಮ ಕೆಲಸಗಳನ್ನು ನಾನು ಮಾಡಿಯೇ ತೀರುತ್ತೇನೆ ಎಂದು ಹೇಳಿದರು.