Tag: Jagdish Shettar

  • ನನ್ನ ಪಕ್ಷಾಂತರದ ಎಫೆಕ್ಟ್ ಪಂಚ ರಾಜ್ಯಗಳ ಚುನಾವಣೆಯ ಮೇಲೂ ಬೀರಿದೆ – BJP ವ್ಯವಸ್ಥೆ ಹದಗೆಟ್ಟಿದೆ: ಜಗದೀಶ್ ಶೆಟ್ಟರ್

    ನನ್ನ ಪಕ್ಷಾಂತರದ ಎಫೆಕ್ಟ್ ಪಂಚ ರಾಜ್ಯಗಳ ಚುನಾವಣೆಯ ಮೇಲೂ ಬೀರಿದೆ – BJP ವ್ಯವಸ್ಥೆ ಹದಗೆಟ್ಟಿದೆ: ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ನನ್ನ ಪಕ್ಷಾಂತರದ ಎಫೆಕ್ಟ್ ಪಂಚ ರಾಜ್ಯಗಳ ಚುನಾವಣೆಯ (Five State Elections) ಮೇಲೂ ಆಗಿದೆ. ಆದ್ದರಿಂದಲೇ ಅಲ್ಲಿ 80 ವರ್ಷ ವಯಸ್ಸು ದಾಟಿದವರಿಗೂ ಟಿಕೆಟ್ ಕೊಟ್ಟಿದ್ದಾರೆ. ಬಿಜೆಪಿ ಹೀನಾಯ ಸ್ಥಿತಿಗೆ ತಲುಪಿ ರಿಪೇರಿ ಮಾಡಲಾರದಷ್ಟೂ ವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagdish Shettar) ಹೇಳಿದ್ದಾರೆ.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ವಿಜಯೇಂದ್ರ ಪದಗ್ರಹಣಕ್ಕೆ ಯಾವೊಬ್ಬ ಕೇಂದ್ರ ನಾಯಕರು, ವೀಕ್ಷಕರು ಸಹ ಬಂದಿರಲಿಲ್ಲ ರಾಜ್ಯ ಬಿಜೆಪಿ ಪರಿಸ್ಥಿತಿಗೆ ಇದೇ ಸಾಕ್ಷಿ. ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿರೋದು ಅವರಿಗೆ ಬಿಟ್ಟ ವಿಚಾರ. ಯಾರೋ ಒಬ್ಬರನ್ನ ಅಧ್ಯಕ್ಷರನ್ನಾಗಿ ಮಾಡಬೇಕಿತ್ತು, ವಿಜಯೇಂದ್ರರನ್ನು (BY Vijayendra) ಮಾಡಿದ್ದಾರೆ. ಆದ್ರೆ ರಾಜ್ಯಾಧ್ಯಕ್ಷ ಸ್ಥಾನಾಕಾಂಕ್ಷಿಗಳು ಯಾರೂ ಪದಗ್ರಹಣಕ್ಕೆ ಹೋಗಲಿಲ್ಲ. ಒಮ್ಮೆ ನೇಮಕವಾದ ಮೇಲೆ ಎಲ್ಲರೂ ಕೂಡಿ ಕೆಲಸ ಮಾಡಬೇಕೆಂಬ ಮನೋಭಾವ ಬರಬೇಕಿತ್ತು. ಹೀಗಾಗಿ ಬಿಜೆಪಿಯ ಒಳ ಜಗಳ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಶಿಯನ್ನು ಸಿಎಂ ಮಾಡ್ತೀವಿ ಅಂತ ಕುಮಾರಸ್ವಾಮಿ ಹೇಳಿದ್ದರೆ ನಾವು ಖಂಡಿತಾ ಬರುತ್ತಿದ್ದೆವು: ಎಸ್‌ಟಿಎಸ್

    ಬಿಜೆಪಿಯಲ್ಲಿ ಹಿರಿಯರನ್ನು ದೂರವಿಡುವ ಕೆಲಸ ಬಹಳ ಹಿಂದಿನಿಂದಲೂ ನಡೆದಿದೆ. ಪಕ್ಷಕ್ಕಾಗಿ ಸಂಘಟನೆ ಮಾಡಿದವರನ್ನು, ದುಡಿದವರನ್ನು ದೂರವಿಡಲಾಗುತ್ತಿದೆ. ಸದಾನಂದ ಗೌಡರನ್ನು ದೆಹಲಿಗೆ ಕರೆಸಿ ಮೂರು ದಿನ ಕಾಯಿಸಿದರು. 5 ನಿಮಿಷ ಮಾತನಾಡುವಷ್ಟು ಸೌಜನ್ಯವನ್ನೂ ತೋರಲಿಲ್ಲ. ಬಿಜೆಪಿ ಹಿರಿಯರನ್ನ ನಡೆಸಿಕೊಳ್ಳುವ ರೀತಿಗೆ ಇದೊಂದು ಉದಾಹರಣೆ. ಎಲ್.ಕೆ ಅಡ್ವಾಣಿ ಮುರುಳಿಮನೋಹರ ಜೋಷಿ ಮೊದಲಾದವರಿಗೆ ರಾಜಕೀಯ ನಿವೃತ್ತಿ ಕೊಟ್ಟುಬಿಟ್ಟರು. ನನಗೆ, ಲಕ್ಷ್ಮಣ್ ಸವದಿ ಮತ್ತು ಈಶ್ವರಪ್ಪಗೆ ಕರ್ನಾಟಕದಲ್ಲಿ ಟಿಕೆಟ್ ಕೊಡಲಿಲ್ಲ. ನನಗೆ ಟಿಕೆಟ್ ತಪ್ಪಿಸಲು ಏನು ಕಾರಣ ಅಂತ ಇದುವರೆಗೂ ಹೇಳಿಲ್ಲ. ಇದರ ಪರಿಣಾಮ ಏನಾಯ್ತು ಅಂತ ಇಡೀ ಜಗತ್ತಿಗೆ ಗೊತ್ತಿದೆ. ಬಿಜೆಪಿ ವರಿಷ್ಠರಿಗೆ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಅನ್ನೋ ಆಸೆಯಿತ್ತು. ಆದರೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತು ಎಂದು ವಾಗ್ದಾಳಿ ನಡೆದಿದ್ದಾರೆ. ಇದನ್ನೂ ಓದಿ: ಮಾಜಿ ಎಂಎಲ್‌ಎ ರಾಜಕೀಯವಾಗಿ ಭಾಗಿಯಾಗೋದು ಅಪರಾಧವಲ್ಲ: ಯತೀಂದ್ರ ಪರ ಚಲುವರಾಯಸ್ವಾಮಿ ಬ್ಯಾಟಿಂಗ್

    ಈಗ ಪಂಚ ರಾಜ್ಯಗಳ ಚುನಾವಣೆಯಲ್ಲಿ ಹಿರಿಯರಿಗೆ ಮಣೆ ಹಾಕಲಾಗಿದೆ. 70-75 ವಯಸ್ಸಿನವರಿಗೂ ಟಿಕೆಟ್ ನೀಡಲಾಗಿದೆ. ಅವರಿಗೆ ಯಾಕೆ ಟಿಕೆಟ್ ಕೊಟ್ಟರು‌? ನಿಯಮ ಎಲ್ಲರಿಗೂ ಒಂದೇ ಅನ್ವಯ ಆಗಬೇಕಲ್ಲವೇ? ಅಧಿಕಾರ ಆಸೆಯಲ್ಲಿ ಎಲ್ಲ ನಿಯಮಗಳನ್ನ ಗಾಳಿಗೆ ತೂರುತ್ತಾರೆ. ವಯಸ್ಸಿನ ನೆಪದಲ್ಲಿ ಅಡ್ವಾಣಿ, ಮುರಳಿ ಮನೋಹರ್ ಜೋಶಿಯವರನ್ನು ಮನೆಗೆ ಕಳಿಸಿದ್ರು. ಈಗ ನೋಡಿದರೆ 80 ವರ್ಷ ಆದವರಿಗೂ ಟಿಕೆಟ್ ಕೊಟ್ಟಿದ್ದಾರೆ. ಜಗದೀಶ್ ಶೆಟ್ಟರ್ ಎಫೆಕ್ಟ್ ಪಂಚ ರಾಜ್ಯಗಳಲ್ಲಿಯೂ ಆಗಿದೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವುದರಿಂದ ಯಾವುದೇ ಬದಲಾವಣೆ ಆಗಲ್ಲ. ಬಿಜೆಪಿ ಕುಸಿತಿರುವ ಸಂದರ್ಭದಲ್ಲಿ ಹೆಚ್ಚಿನ ಶಕ್ತಿ ತೋರಿಸಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದ್ದಾರೆ. ‌ಇದನ್ನೂ ಓದಿ: ತುಮಕೂರಿನಲ್ಲೊಂದು ಕ್ರಿಕೆಟ್ ಪ್ರೇಮಿಗಳ ಮದುವೆ – ಮಂಟಪದಲ್ಲೇ ಇಂಡೋ-ಕಿವೀಸ್ ಸೆಮಿ ಫೈನಲ್ ವೀಕ್ಷಣೆ

  • ಬಿಜೆಪಿ ವಿರುದ್ಧ ವಾಕ್ಸಮರಕ್ಕೆ ಜಗದೀಶ್ ಶೆಟ್ಟರ್‌ ಪುತ್ರ ಎಂಟ್ರಿ – ಬಿಜೆಪಿ ವಿರುದ್ಧ ಕಿಡಿ

    ಬಿಜೆಪಿ ವಿರುದ್ಧ ವಾಕ್ಸಮರಕ್ಕೆ ಜಗದೀಶ್ ಶೆಟ್ಟರ್‌ ಪುತ್ರ ಎಂಟ್ರಿ – ಬಿಜೆಪಿ ವಿರುದ್ಧ ಕಿಡಿ

    ಹುಬ್ಬಳ್ಳಿ: ಸದ್ಯ ಬಿಜೆಪಿ ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್‌ (Jagdish Shettar) ನಡುವಿನ ಟಾಕ್ ಫೈಟ್‌ ಜೋರಾಗಿದೆ. ಶೆಟ್ಟರ್ ಮಾಡುವ ಆರೋಪಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡುತ್ತಿದ್ದಾರೆ. ಈ ನಡುವೆ ಮಾತಿನ ಯುದ್ಧಕ್ಕೆ ಶೆಟ್ಟರ್ ಅವರ ಪುತ್ರ ಎಂಟ್ರಿಕೊಟ್ಟಿದ್ದು, ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

    ಜಗದೀಶ್ ಶೆಟ್ಟರ್‌ ಅವರನ್ನ ಗುರಿಯಾಗಿಸಿಕೊಂಡು ಬಿಜೆಪಿ ನಾಯಕರು ಸಾಕಷ್ಟು ಹೇಳಿಕೆ ನೀಡುತ್ತಿದ್ದು, ಇದರಿಂದಾಗಿ ಅಸಮಾಧಾನಗೊಂಡಿರುವ ಜಗದೀಶ್ ಶೆಟ್ಟರ್‌ ಪುತ್ರ ಸಂಕಲ್ಪ್ ಶೆಟ್ಟರ್ (Sankalp Shettar), ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕರನ್ನ ಕುಟುಕಿದ್ದಾರೆ. ಇದನ್ನೂ ಓದಿ: ಇಲ್ಲಿ ಯಾವ್ದೇ ಮೀನು ತಗೊಂಡ್ರೂ KG 99 ರೂ. ಮಾತ್ರ – ಚಿಕ್ಕಬಳ್ಳಾಪುರದಲ್ಲಿ ಮೀನು ಪ್ರಿಯರಿಗೆ ಬಂಪರ್‌

    ಕರ್ನಾಟಕ ಬಿಜೆಪಿ ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇವರು ಪ್ರಮುಖ ಮಾನದಂಡ, ಜಗದೀಶ್ ಶೆಟ್ಟರ್ ವಿರುದ್ಧ ಯಾರು ಹೆಚ್ಚು ಮಾತನಾಡುತ್ತಾರೆ ಟ್ವಿಟ್ಟರ್‌ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅದನ್ನು ಅದಕ್ಕೆ ಬಿಎಲ್ ಅವರ ಆದೇಶ ಅಂತ ಅಡಿ ಬರಹ ಬರೆದು ಹ್ಯಾಶ್ ಟ್ಯಾಗ್ ಮಾಡಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಹಿಳಾ ಮೀಸಲಾತಿಯನ್ನ ಕಾಂಗ್ರೆಸ್ ಸ್ವಾಗತ ಮಾಡುತ್ತದೆ: ದಿನೇಶ್ ಗುಂಡೂರಾವ್

    ಈ ಹಿಂದೆ ಶಾಸಕ ಮಹೇಶ್ ಟೆಂಗಿನಕಾಯಿ ಟಾಂಗ್ ನೀಡುವ ನಿಟ್ಟಿನಲ್ಲಿ, ಬಕೆಟ್ ಹಿಡಿದು ಟಿಕೆಟ್‌ ತೆಗೆದುಕೊಂಡಿದ್ದಾರೆ ಅಂತ ಮಹೇಶ್ ಟೆಂಗಿನಕಾಯಿ ಮತ್ತು ಬಿ.ಎಲ್ ಸಂತೋಷ್‌ ಅವರನ್ನ ಟೀಕಿಸಿದರು. ಇದರ ಬೆನ್ನಲ್ಲೇ ಈಗ ಮತ್ತೊಂದು ಪೋಸ್ಟ್ ಮಾಡಿರುವ ಸಂಕಲ್ಪ್‌, ರಾಜಕೀಯವಾಗಿಯೂ ತಮ್ಮ ತಂದೆ ಬೆಂಬಲಕ್ಕೆ ನಿಂತಿರುವುದನ್ನ ಸಾಬೀತು ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಂಚರಾಜ್ಯ ಚುನಾವಣೆ ಫಲಿತಾಂಶ ಬಿಜೆಪಿ ಆಡಳಿತಕ್ಕೆ ಸಿಕ್ಕ ಜನಮನ್ನಣೆ: ಜಗದೀಶ್ ಶೆಟ್ಟರ್

    ಪಂಚರಾಜ್ಯ ಚುನಾವಣೆ ಫಲಿತಾಂಶ ಬಿಜೆಪಿ ಆಡಳಿತಕ್ಕೆ ಸಿಕ್ಕ ಜನಮನ್ನಣೆ: ಜಗದೀಶ್ ಶೆಟ್ಟರ್

    ಬೆಂಗಳೂರು: ಪಂಚರಾಜ್ಯ ಚುನಾವಣೆ ಫಲಿತಾಂಶ ಬಿಜೆಪಿ ಆಡಳಿತಕ್ಕೆ ಸಿಕ್ಕ ಜನಮನ್ನಣೆಯಾಗಿದೆ. ಭರ್ಜರಿ ಬಹುಮತದೊಂದಿಗೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಂತೋಷ ವ್ಯಕ್ತಪಡಿಸಿದರು.

    ಪಂಚರಾಜ್ಯ ಚುನಾವಣೆ ಫಲಿತಾಂಶ ಕುರಿತು ಮಾತನಾಡಿದ ಅವರು, ಸಮಾಜವಾದಿ ಪಕ್ಷವನ್ನು ಜನರು ಸಂಪೂರ್ಣವಾಗಿ ನಂಬಿಲ್ಲ. ಮಣಿಪುರ, ಉತ್ತರಾಖಂಡ ಹಾಗೂ ಗೋವಾ ರಾಜ್ಯಗಳಲ್ಲಿ ಕೂಡ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ. ಕಾಂಗ್ರೆಸ್ ಪಕ್ಷ ಅವನತಿಯ ಘಟ್ಟ ತಲುಪಿದೆ. ಐದು ರಾಜ್ಯಗಳಲ್ಲಿಯೂ ಕೈ ಹೀನಾಯ ಸೋಲು ಕಂಡಿದೆ. ಕಾಂಗ್ರೆಸ್ ಬಿಜೆಪಿಗೆ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲೂ ಕೂಡ ಪರ್ಯಾಯ ಪಕ್ಷವಲ್ಲ ಎಂದು ಸಾಬೀತು ಆಗಿದೆ. ಮತದಾರ ಪ್ರಭುಗಳು ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆ, ವಂಶಪಾರಂಪರ್ಯ ರಾಜಕೀಯಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಜನರು ರಾಷ್ಟ್ರೀಯತೆ, ಅಭಿವೃದ್ಧಿ ಮತ್ತು ಉತ್ತಮ ಆಡಳಿತವನ್ನ ಗೆಲ್ಲಿಸಿದ್ದಾರೆ: ಯೋಗಿ 

    ಮಾರ್ಚ್ 10ರ ಬಳಿಕ ದೇಶದ ರಾಜಕೀಯದಲ್ಲಿ ಬದಲಾವಣೆ ಗಾಳಿ ಬೀಸಲಿದೆ ಎಂದು ಬಹಳ ಜನರು ಕನಸು ಕಂಡಿದ್ದರು. ಅವರ ಕನಸು ನುಚ್ಚುನೂರಾಗಿದೆ. ಉತ್ತರ ಪ್ರದೇಶದಲ್ಲಿ ಜನರು ಬಿಜೆಪಿ ಆರ್ಶೀವದಿಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ ಆಡಳಿತ ಮುಂದುವರಿಯುವ ಸ್ಪಷ್ಟ ಸೂಚನೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ರಾಜಕೀಯ ಪಕ್ಷಗಳು ಸೇರಿದಂತೆ ಹಲವು ಜನರು, ಬಿಜೆಪಿಯನ್ನು ದಲಿತರ ಅಲ್ಪಸಂಖ್ಯಾತರ ವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸಿದರು. ಇದನ್ನು ಮತದಾರ ಪ್ರಭುಗಳು ತಿರಸ್ಕರಿಸಿದ್ದಾರೆ. ಯೋಗಿ ಆದಿತ್ಯನಾಥ್ ಆಡಳಿತಕ್ಕೆ ಮನ್ನಣೆ ನೀಡಿದ್ದಾರೆ ಎಂದರು.

    ಕಳೆದ ಬಾರಿಗಿಂತಲೂ ಬಿಜೆಪಿ ಈ ಬಾರಿ ಹೆಚ್ಚಿನ ಸೀಟು ಪಡೆಯಲಿದೆ. ಅಖಿಲೇಶ್ ಯಾಧವ್ ಸಮಾಜವಾದಿ ಪಕ್ಷದ ಸೈಕಲ್ ತುಳಿದು, ತುಳಿದು ಬಸವಳಿದ್ದಾರೆ. ಬಿಜೆಪಿ ವಿರುದ್ಧದ ಸುಳ್ಳು ಆರೋಪ ಹಾಗೂ ಅಪಪ್ರಚಾರ ಸಮಾಜವಾದಿ ಪಕ್ಷದ ಸೈಕಲ್ ಪಂಚರ್ ಮಾಡಿವೆ. ಪ್ರಿಯಾಂಕಾ ಗಾಂಧಿ ರಾಲ್ಯಿಗಳು ನೆಪಮಾತ್ರ. ಜನ ವಂಶಪಾರಂಪರ್ಯ ಆಡಳಿತವನ್ನು ವಿರೋಧಿಸಿ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವಾಗಿ ಉಳಿಯುವ ಸಾಧ್ಯತೆಯು ಇಲ್ಲ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಡಿಕೆಶಿ ವಿಮಾನ ಇಳಿಸಲು ರಾಜ್ಯಗಳೇ ಇಲ್ಲ: ಸುನೀಲ್ ಕುಮಾರ್ 

    ಬಿಜೆಪಿಯ ದಕ್ಷ ಆಡಳಿತ ಹಾಗೂ ಅಭಿವೃದ್ಧಿ ಪರ ಚಿಂತನೆಗೆ ಜನರು ಮತ ಚಲಾಯಿಸಿದ್ದಾರೆ. ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಪಂಜಾಬ್‍ನಲ್ಲಿ ಆಡಳಿತಾರೂಢ ಕಾಂಗ್ರೆಸ್ ಸಂಪೂರ್ಣ ಸೋತು ಸುಣ್ಣವಾಗಿದೆ. ಆಮ್ ಆದ್ಮಿ ಪಕ್ಷ ಅಧಿಕಾರ ಹಿಡಿಯಲಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸಂಪೂರ್ಣ ಆಸ್ತಿತ್ವ ಕಳೆದುಕೊಳ್ಳಲಿದೆ ಎಂದು ಹೇಳಿದರು.

  • 3 ಕೋಟಿ ವೆಚ್ಚದ ರಸ್ತೆ ನಿರ್ಮಾಣ, 1 ಕೋಟಿಯ ಯುಜಿಡಿ ಕಾಮಗಾರಿಗೆ ಶೀಘ್ರ ಚಾಲನೆ: ಜಗದೀಶ್ ಶೆಟ್ಟರ್

    3 ಕೋಟಿ ವೆಚ್ಚದ ರಸ್ತೆ ನಿರ್ಮಾಣ, 1 ಕೋಟಿಯ ಯುಜಿಡಿ ಕಾಮಗಾರಿಗೆ ಶೀಘ್ರ ಚಾಲನೆ: ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ನಗರ ವಿಕಾಸ ಯೋಜನೆಯ 3 ಕೋಟಿ ಅನುದಾನದಲ್ಲಿ ಚನ್ನಪೇಟೆ, ಅರವಿಂದ ನಗರ ಹಾಗೂ ಹಳೆ ಹುಬ್ಬಳ್ಳಿ ಮುಖ್ಯ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ವಾರ್ಡ್ ನಂ.55ರ ವ್ಯಾಪ್ತಿಯಲ್ಲಿ ಯುಜಿಡಿ ಹಾಗೂ ಒಳಚರಂಡಿ ನಿರ್ಮಿಸಲು ಸರ್ಕಾರ 1 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಶೀಘ್ರವೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.

    ಹಳೇ ಹುಬ್ಬಳ್ಳಿ ದಿಡ್ಡಿ ಓಣಿ ಉದ್ಯಾನವನದಲ್ಲಿ ಜರುಗಿದ ಜನಸಂಪರ್ಕ ಸಭೆಯಲ್ಲಿ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದರು. ಇದೇ ವೇಳೆ ಗ್ರಾಮಸ್ಥರಿಗೆ ನೆರವಿನ ಭರವಸೆ ನೀಡಿದ್ದಾರೆ.

    ಒಳಚರಂಡಿ ಕಾಮಗಾರಿಗೂ ಮುನ್ನ ಸರ್ವೇ:
    ದಾಳಿಂಬರಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಗಾಲದಲ್ಲಿ ನಾಲೆಗಳು ತುಂಬಿ, ಚಂರಡಿ ನೀರು ರಸ್ತೆ ಹಾಗೂ ಮನೆಗಳಿಗೆ ಹರಿಯುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಯುಜಿಡಿ ಹಾಗೂ ಒಳಚರಂಡಿ ಕಾಮಗಾರಿ ಆರಂಭವಾಗುವ ಮುನ್ನವೇ ಈ ಭಾಗದಲ್ಲಿನ ಸಮಸ್ಯೆ ಕುರಿತು ಸರ್ವೇ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಶೆಟ್ಟರ್ ಸೂಚಿಸಿದರು. ಇದನ್ನೂ ಓದಿ: ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಸಿಎಂ ಬೊಮ್ಮಾಯಿ

    ಕಳ್ಳರ ಹಾವಳಿಗೆ ಸಿಸಿಟಿವಿ:
    ಸಭೆಯಲ್ಲಿ ಹಳೆ ಹುಬ್ಬಳ್ಳಿ ಭಾಗದಲ್ಲಿ ಕಳ್ಳರ ಹಾವಳಿ ಜಾಸ್ತಿಯಾಗಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸಾರ್ವಜನಿಕರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶೆಟ್ಟರ್, ಕಳ್ಳತನ ಹಾಗೂ ಕಳ್ಳರ ಹಾವಳಿ ಕುರಿತು ಪೆÇಲೀಸ್ ಕಮಿಷನರ್ ಜೊತೆ ಚರ್ಚೆಸುತ್ತೇನೆ. ಕೇಂದ್ರ ಸರ್ಕಾರದ ಹಲವಾರು ಯೋಜನಯಡಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಅವಕಾಶವಿದೆ. ಈ ಕುರಿತು ಕೇಂದ್ರ ಸಚಿವರು ಹಾಗೂ ಸಂಸದರಾದ ಪ್ರಲ್ಹಾದ್ ಜೋಶಿ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.

    ಅಧಿಕಾರಿಗಳ ವಿರುದ್ಧ ಹರಿಹಾಯ್ದ ಶೆಟ್ಟರ್:
    ಸಂಗೀತಾ ಕಾಟವೆ ಎಂಬ ಮೃತರ ಮರಣ ಪ್ರಮಾಣ ಪತ್ರ ನೀಡುವಲ್ಲಿ ಉಂಟಾದ ವಿಳಂಬದ ಬಗ್ಗೆ ಸಂಬಂಧಿಯೊಬ್ಬರು ಸಭೆಯಲ್ಲಿ ಅಳಲು ತೋಡಿಕೊಂಡರು. ಅಳಲು ಆಲಿಸಿದ ಜಗದೀಶ್ ಶೆಟ್ಟರ್, ಸರ್ಕಾರ ಮನೆ ಮನೆಗೆ ತೆರಳಿ ಜನನ ಹಾಗೂ ಮರಣ ಪತ್ರ ವಿತರಿಸಲು ಯೋಚಿಸುತ್ತಿದೆ. ಆದರೆ ಪಾಲಿಕೆ ಅಧಿಕಾರಿಗಳು ಮರಣಿಸಿದ ವ್ಯಕ್ತಿಗಳ ಪಂಚನಾಮೆ ಮಾಡಲು ಅಸಡ್ಡೆ ತೋರುವುದು ಸಲ್ಲದು. ಕೆಲಸ ಮಾಡಲು ಅಧಿಕಾರಿಗಳು ಸಿದ್ದವಿಲ್ಲ ಎಂದರೆ ಹೇಗೆ? ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಹೊಸ ವರ್ಷದ ಸಂಭ್ರಮ ಕಸಿದ ಕೋವಿಡ್ ಹೆಮ್ಮಾರಿ- ಬೆಂಗ್ಳೂರಿನ ಪ್ರಮುಖ ರಸ್ತೆಗಳೆಲ್ಲವೂ ನಿರ್ಜನ

    ಗುರುತಿನ ಚೀಟಿ ಹಾಗೂ ಶ್ರಮ್ ಕಾರ್ಡ್ ವಿತರಣೆ:
    ಮೊಚಿಗಾರ ಸಂಘದಿಂದ ಸಮುದಾಯ ಭವನ ನಿರ್ಮಿಸಲು ಅನುದಾನ ಒದಗಿಸಲು ಸಭೆಯಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ
    ಅಸಂಘಟಿತ ಕಾರ್ಮಿರಿಗೆ ಗುರುತಿನ ಚೀಟಿ ಹಾಗೂ ಈ ಶ್ರಮ್ ಕಾರ್ಡ್ ವಿತರಣೆ ಮಾಡಲಾಯಿತು.

    ಜಿ+2 ಮಾದರಿಯ ಮನೆಗೆ ನಿವಾಸಿಗಳ ಮನವಿ:
    ಆಸಾರ್ ಓಣಿಯ ಸಿಕ್ಕಿಲಿಗರ ತಂಡಾ ಆಸಾರ್ ಓಣಿ ಹೊಂಡದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗೆ ಕೊಳಚೆ ಮಂಡಳಿ ವತಿಯಿಂದ ಜಿ+2 ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡುವಂತೆ ನಿವಾಸಿಗಳು ಮನವಿ ಸಲ್ಲಿಸಿದರು. ಇದನ್ನೂ ಓದಿ: ಕುಮಾರಸ್ವಾಮಿಯವರು ಯಡಿಯೂರಪ್ಪನವರ ಬಳಿ ಹೋಗಿದ್ದರು: ಹೆಚ್.ಸಿ ಬಾಲಕೃಷ್ಣ

    ಸಭೆಯಲ್ಲಿ ಕರ್ನಾಟಕ ಮಾರ್ಜಕ ನಿಯಮಿತದ ನಿರ್ದೇಶಕ ಮಲ್ಲಿಕಾರ್ಜುನ ಸವಕಾರ, ಪಾಲಿಕೆ ಸದಸ್ಯ ಸಂತೋಷ್ ಚವ್ಹಾಣ್, ಮಾಜಿ ಮೇಯರ್‍ಗಳಾದ ಪಾಂಡುರಂಗ ಪಾಟೀಲ ಹಾಗೂ ಡಿ.ಕೆ.ಚವ್ಹಾಣ್ ಸೇರಿದಂತೆ ಪಾಲಿಕೆ ವಲಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ವೈಯಕ್ತಿಕ, ವ್ಯಕ್ತಿಗತವಾಗಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯುತ್ತವೆ: ಜಗದೀಶ್ ಶೆಟ್ಟರ್

    ವೈಯಕ್ತಿಕ, ವ್ಯಕ್ತಿಗತವಾಗಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯುತ್ತವೆ: ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ವೈಯಕ್ತಿಕ ಹಾಗೂ ವ್ಯಕ್ತಿಗತವಾಗಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯುತ್ತವೆ ಎಂದು ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

    ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿರುವ ವಿಚಾರವಾಗಿ ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿಗೂ ಹೆಚ್ಚಿನ ಬೆಂಬಲ ಸಿಕ್ಕಿದೆ. ಅಲ್ಲಿನ ಸ್ಥಳೀಯ ಹಿತಾಸಕ್ತಿಗೆ ಅನುಗುಣವಾಗಿ ಚುನಾವಣೆಗಳು ನಡೆದಿರುತ್ತವೆ. ವೈಯಕ್ತಿಕ ಹಾಗೂ ವ್ಯಕ್ತಿಗತವಾಗಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯುತ್ತವೆ. ಬೇರೆ ಬೇರೆ ನಗರಸಭೆ ಮತ್ತು ಪುರಸಭೆಗಳಲ್ಲಿ ನಮ್ಮ ಸ್ಥಾನಗಳ ಪ್ರಮಾಣ ಹೆಚ್ಚಾಗಿದೆ. ವಿಧಾನ ಪರಿಷತ್ ಚುನಾವಣೆಯಲ್ಲೂ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಗಳಿಸಿದ್ದೇವೆ. ಕಳೆದ ಬಾರಿಗಿಂತಲೂ ನಮ್ಮ ಪಕ್ಷ ಹೆಚ್ಚು ಪ್ರಗತಿ ಸಾಧಿಸಿದೆ ಎಂದರು. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಕರ್ನಾಟಕ ಸೇರಿ ಎಂಟು ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆಯಿಂದ ಪತ್ರ

    ಬಿಜೆಪಿ ಶಾಸಕರಿದ್ದ ಕಡೆ ನಿರೀಕ್ಷಿತ ಫಲಿತಾಂಶ ಬಾರದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಶಾಸಕರಿದ್ದ ಕಡೆ ಅವರು ಹೆಚ್ಚಿನ ಸ್ಥಾನ ಗೆದ್ದಿದ್ದಾರಾ? ಸ್ಥಳೀಯ ಸಂಸ್ಥೆಗಳಲ್ಲಿ ಈ ರೀತಿಯ ಫಲಿತಾಂಶ ಸಹಜವಾಗಿದ್ದು, ಈ ಕುರಿತು ಪರಾಮರ್ಶೆ ಮಾಡುತ್ತೇವೆ ಎಂದು ನುಡಿದರು.

    ಧಾರವಾಡ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರವಿಂದ್ ಬೆಲ್ಲದ್ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನನ್ನ ಅಸಮಾಧಾನದ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆಂಬುದು ಸುಳ್ಳು ಎಂದು ಜಾರಿಕೊಂಡರು. ಇದನ್ನೂ ಓದಿ:  ಹಿಂದೂಗಳಿಗೆ ಹಿಂದೂಗಳಾಗಿ ಹುಟ್ಟಿದ್ದೇ ತಪ್ಪು ಅನ್ನಿಸಬಾರದು: ಸಿ.ಟಿ.ರವಿ

    ಸಂಪುಟದಲ್ಲಿ ಹಿರಿಯರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕೆಂಬ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಅದು ಅವರ ವೈಯಕ್ತಿಕ ವಿಚಾರ. ಅವರ ವಿಚಾರಗಳನ್ನ ಹೇಳಲು ಮುಕ್ತ ಅವಕಾಶವಿದೆ. ಈ ರೀತಿ ಹೇಳಿಕೆ ನೀಡುವುದು ಪಕ್ಷ ವಿರೋಧಿ ಚಟುವಟಿಕೆ ಎನ್ನಲಾಗಲ್ಲ. ನನ್ನ ವೈಯಕ್ತಿಕ ಅಭಿಪ್ರಾಯವನ್ನ ಪಕ್ಷದ ಆಂತರಿಕ ಸಭೆಯಲ್ಲಿ ವ್ಯಕ್ತಪಡಿಸುತ್ತೇನೆ ಎಂದರು.

    ಹುಬ್ಬಳ್ಳಿಯಲ್ಲಿ ಕೋರ್ ಕಮೀಟಿ ರದ್ದು ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬಿಎಸ್‍ವೈ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಅರುಣ್ ಸಿಂಗ್ ಬೇಗನೇ ದೆಹಲಿಗೆ ಪ್ರಯಾಣ ಬೆಳೆಸಿದರು. ಈ ಕಾರಣದಿಂದಾಗಿಯೇ ಕೋರ್ ಕಮೀಟಿ ಸಭೆ ನಡೆಸಲಾಗಲಿಲ್ಲ. ಮುಂದಿನ ದಿನಗಳಲ್ಲಿ ಕೋರ್ ಕಮಿಟಿ ಸಭೆ ನಡೆಸಲಾಗುವುದು. ಆ ಸಭೆಯಲ್ಲಿ ಬೆಳಗಾವಿ ಸೋಲು ಸೇರಿದಂತೆ ಹಲವಾರು ವಿಚಾರಗಳನ್ನ ಚರ್ಚಿಸಲಾಗುವುದು ಎಂದು ನುಡಿದರು.

     

  • ಎಲ್ಲರಿಗೂ ಲಸಿಕೆ ನೀಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು: ಜೋಶಿ

    ಎಲ್ಲರಿಗೂ ಲಸಿಕೆ ನೀಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು: ಜೋಶಿ

    – 13 ದಿನಗಳಲ್ಲಿ ನಿರ್ಮಾಣವಾದ ಸುಸಜ್ಜಿತ ಆಸ್ಪತ್ರೆ

    ಹುಬ್ಬಳ್ಳಿ: ಎಲ್ಲರಿಗೂ ಲಸಿಕೆ ನೀಡುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ವಹಿಸಿಕೊಂಡಿದೆ. ಇನ್ನು ಮುಂದೆ ಲಸಿಕೆ ಸಮಸ್ಯೆಯಾಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದರು.

    ನಗರದ ಕಿಮ್ಸ್ ಆವರಣದಲ್ಲಿ ವೇದಾಂತ ಆಸ್ಪತ್ರೆ ನಿರ್ಮಿಸಿರುವ 100 ಹಾಸಿಗೆಯ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮೊದಲು ಲಸಿಕೆ ಹಾಕಲು ಕೇಂದ್ರ ಸರ್ಕಾರ ಸಿದ್ಧವಿತ್ತು. ಆದರೆ ಕೆಲ ರಾಜ್ಯಗಳು ತಾವೇ ಲಸಿಕೆ ನೀಡುವುದಾಗಿ ಹೇಳಿದ್ದವು. ಹೀಗಾಗಿ ರಾಜ್ಯಗಳಿಗೆ ಜವಾಬ್ದಾರಿ ನೀಡಲಾಗಿತ್ತು. ಇದೀಗ ಮತ್ತೆ ಲಸಿಕೆ ನೀಡಲು ಕೇಂದ್ರಕ್ಕೆ ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಲಸಿಕೆ ನೀಡುವ ಜವಾಬ್ದಾರಿಯನ್ನು ಕೇಂದ್ರವೇ ಹೊತ್ತುಕೊಂಡಿದೆ. ಜೂ.21ರಿಂದ ಲಸಿಕೆ ನೀಡಲು ಶುರುಮಾಡಲಾಗುವುದು. ನವೆಂಬರ್- ಡಿಸೆಂಬರ್ ನೊಳಗೆ ಎಲ್ಲರಿಗೂ ಲಸಿಕೆ ನೀಡುವುದನ್ನು ಪೂರ್ಣಗೊಳಿಸಲಾಗುವುದು ಎಂದರು.

    ಕೊರೊನಾ 3ನೇ ಅಲೆ ಬರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಎದುರಿಸಲು ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. 2ನೇ ಅಲೆ ಬರುತ್ತದೆ ಎಂದು ತಜ್ಞರ ತಂಡ ತಿಳಿಸಿತ್ತು. ಆದರೆ ಇಷ್ಟೊಂದು ಗಂಭೀರವಾಗಿರುತ್ತದೆ. ಇಷ್ಟೊಂದು ಸಮಸ್ಯೆಯಾಗುತ್ತದೆ ಎಂದು ಯಾವ ತಜ್ಞರೂ ತಿಳಿಸಿರಲಿಲ್ಲ. ಹೀಗಾಗಿ ಪ್ರಾರಂಭದಲ್ಲಿ ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆಯಾಗಿತ್ತು. ಮೊದಲು ಇದ್ದ ಆಕ್ಸಿಜನ್ ಬೇಡಿಕೆಗೂ ಕೊರೊನಾ ತೀವ್ರವಾದಾಗ ಆಕ್ಸಿಜನ್ ಬೇಡಿಕೆ ಅಜಗಜಾಂತರವಾಗಿತ್ತು. ಬರೀ 8-10 ದಿನಗಳಲ್ಲಿ ಆಕ್ಸಿಜನ್ ಸಮಸ್ಯೆ ನಿರ್ವಹಿಸಿದೆವು. ವಿದೇಶಗಳಿಂದಲೂ ತರಿಸಿಕೊಂಡೆವು. ಇಲ್ಲೂ ಉತ್ಪಾದನೆ ಹೆಚ್ಚಿಸಿದೆವು. ಇದೀಗ ಆಕ್ಸಿಜನ್ ಸೇರಿದಂತೆ ಯಾವ ಸಮಸ್ಯೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಎಲ್ಲ ವಿಷಯವನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆಗಳಲ್ಲಿ ಗಾಳಿ ಮೂಲಕ ಆಕ್ಸಿಜನ್ ಉತ್ಪಾದನೆ ಮಾಡಲು ಘಟಕಗಳನ್ನು ನಿರ್ಮಿಸಿಕೊಂಡಿದ್ದೇವೆ. 42 ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್‍ಗಳನ್ನು ಮಾಡಲಾಗಿದೆ. ಮುಂದೆ ಯಾವುದೇ ಕಾರಣಕ್ಕೂ ಆಕ್ಸಿಜನ್ ಕೊರತೆಯಾಗದಂತೆ ನಿರ್ವಹಣೆ ಮಾಡುತ್ತೇವೆ. ವಿರೋಧ ಪಕ್ಷಗಳು ವಿನಾಕಾರಣ ಟೀಕಿಸುತ್ತಿವೆ. ಕೋವಿಡ್ ವಿಷಯದಲ್ಲಿ ರಾಜಕಾರಣ ಸಲ್ಲದು ಎಂದರು.

    ವೇದಾಂತ ಆಸ್ಪತ್ರೆ ಕುರಿತು ಮಾತನಾಡಿದ ಪ್ರಹ್ಲಾದ್ ಜೋಶಿ, ಸದ್ಯ 2ನೇ ಅಲೆ ನಿಯಂತ್ರಣದಲ್ಲಿದೆ. ಈ ವೇಳೆ ಆಸ್ಪತ್ರೆ ಅಗತ್ಯವಿತ್ತಾ ಎಂಬ ಪ್ರಶ್ನೆಯನ್ನೂ ಕೆಲವರು ಕೇಳಿದ್ದಾರೆ. ಆದರೆ ವೇದಾಂತ ಕಂಪನಿಯವರು ನಮ್ಮ ಮನವಿ ಮೇರೆಗೆ ಆಸ್ಪತ್ರೆ ನಿರ್ಮಿಸಿಕೊಟ್ಟಿದ್ದಾರೆ. ಮೊದಲೇ ನಿರ್ಮಿಸಿ ಕೊಡಲು ಸಿದ್ಧವಿದ್ದರು. ಆದರೆ ಎಲ್ಲಿ ನಿರ್ಮಿಸಬೇಕೆಂಬ ಗೊಂದಲದಿಂದಾಗಿ ಕೊಂಚ ತಡವಾಯಿತು. 2ನೇ ಅಲೆಯ ಕೋವಿಡ್ ಸೋಂಕಿತರು ಕಡಿಮೆಯಾಗುತ್ತಿದ್ದಾರೆ. ಅವರನ್ನು ಇಲ್ಲಿಗೆ ಸ್ಥಳಾಂತರಿಸಿ ಅನ್ಯ ರೋಗಿಗಳಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಬಹುದಾಗಿದೆ. ಅಲ್ಲದೆ 3ನೇ ಅಲೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಅದಕ್ಕೂ ಈ ಆಸ್ಪತ್ರೆಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.

    ಮೇಕ್ ಶಿಪ್ಟ್ ನಡಿ ಬರೀ 13 ದಿನದಲ್ಲಿ ವೇದಾಂತ ಕಂಪನಿಯೂ ಈ ಆಸ್ಪತ್ರೆಯನ್ನು ನಿರ್ಮಿಸಿದ್ದು. ಇನ್ನೂ 15-20 ವರ್ಷ ಈ ಆಸ್ಪತ್ರೆ ಬಾಳಿಕೆಗೆ ಬರಲಿದೆ. ಅಲ್ಲಿವರೆಗೂ ಕಿಮ್ಸ್ ಆಡಳಿತ ಈ ಆಸ್ಪತ್ರೆಯನ್ನು ಬಳಸಿಕೊಳ್ಳಬೇಕು. ವೈದ್ಯರು ಸೇರಿದಂತೆ ಸಿಬ್ಬಂದಿ, ಔಷಧಿಯನ್ನು ಕಿಮ್ಸ್ ಕೊಡಲಿದೆ. ಉಳಿದ ನಿರ್ವಹಣೆಯನ್ನೂ ವೇದಾಂತ ಕಂಪನಿಯವರೇ ನಿರ್ವಹಿಸಲಿದ್ದಾರೆ ಎಂದು ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ನಮ್ಮ ಮನವಿಗೆ ಸ್ಪಂದಿಸಿ ಆಸ್ಪತ್ರೆ ನಿರ್ಮಿಸಿಕೊಟ್ಟಿದ್ದಕ್ಕೆ ವೇದಾಂತ ಕಂಪನಿಗೆ ಧನ್ಯವಾದ ಅರ್ಪಿಸಿದ್ದಾರೆ.

    ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಮೊದಲು ಇದ್ದ ಆಕ್ಸಿಜನ್ ಬೇಡಿಕೆ ಈಗಿಲ್ಲ. ಆಸ್ಪತ್ರೆಗೆ ಅಗತ್ಯವಿರುವಷ್ಟು ಬಳಸಿಕೊಂಡು ಉಳಿದ ಆಕ್ಸಿಜನ್‍ನ್ನು ಕೈಗಾರಿಕೆಗಳಿಗೆ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೋವಿಡ್ ವಿಷಯದಲ್ಲಿ ಸಾಕಷ್ಟು ನಿಯಂತ್ರಣ ಸಾಧಿಸಿದ್ದೇವೆ. ಪಾಸಿಟಿವಿಟಿ ದರ ಇಳಿಕೆಯಾಗಿದೆ. 14ರಿಂದ ಅನ್‍ಲಾಕ್ ಮಾಡಲಾಗುತ್ತಿದೆ, ಹಾಗಂತ ಜನತೆ ಮೈಮರೆಯಬಾರದು. ಇನ್ನು ಮುಂದೆಯೂ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮುಂದುವರಿಸಬೇಕು ಎಂದರು.

    ಬ್ಲ್ಯಾಕ್ ಫಂಗಸ್ ನಿಯಂತ್ರಣವಾಗುತ್ತಿದೆ. ಬ್ಲ್ಯಾಕ್ ಫಂಗಸ್ ರೋಗಿಗಳು ಗುಣಮುಖರಾಗುತ್ತಿದ್ದಾರೆ. ಅದಕ್ಕೆ ಬೇಕಾದ ವೈಯಲ್ಸ್ ಗಳು ಲಭ್ಯವಾಗುತ್ತಿವೆ. ಕೋವಿಡ್ ವಿಷಯದಲ್ಲಿ ಕಿಮ್ಸ್ ಕಾರ್ಯ ಶ್ಲಾಘನೀಯ ಎಂದರು.

    ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಕೋವಿಡ್ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು. ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಅದರೊಂದಿಗೆ ಕೈಜೋಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಶಾಸಕರಾದ ಪ್ರದೀಪ್ ಶೆಟ್ಟರ್, ಅಮೃತ್ ದೇಸಾಯಿ, ಪ್ರಸಾದ ಅಬ್ಬಯ್ಯ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೇರಿದಂತೆ ಇತರರು ಇದ್ದರು. ಲಂಡನ್‍ನಲ್ಲಿರುವ ವೇದಾಂತ ಕಂಪನಿಯ ಚೇರಮನ್ ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ವೇದಾಂತ ಕಂಪನಿಯ ಚೇರಮನ್ ಅನಿಲ್ ಅಗ್ರವಾಲ್ ಮಾತನಾಡಿ, ಕೋವಿಡ್ ನಿಯಂತ್ರಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಉತ್ತಮ ಕೆಲಸ ಮಾಡಿದೆ. ಅದರಲ್ಲೂ ಧಾರವಾಡ ಜಿಲ್ಲೆಯಲ್ಲಿ ಯಾವೊಂದು ಸಮಸ್ಯೆಯಾಗದಂತೆ ಕೋವಿಡ್ ನಿರ್ವಹಿಸಿರುವುದು ಶ್ಲಾಘನೀಯ. ಇದಕ್ಕಾಗಿ ಅಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಅಭಿನಂದನೆ ತಿಳಿಸುವುದಾಗಿ ಹೇಳಿದರು.

    ರಾಜ್ಯದಲ್ಲಿ ಎರಡು ಆಸ್ಪತ್ರೆಗಳನ್ನು ನಿರ್ಮಿಸಿಕೊಟ್ಟಿದ್ದೇವೆ. ಕೋವಿಡ್ ಆಸ್ಪತ್ರೆ ನಿರ್ಮಿಸಿಕೊಡಲು ತಮ್ಮ ಕಂಪನಿಗೆ ಅವಕಾಶ ಕೊಟ್ಟಿದ್ದು ನಮಗೆ ಸಂತಸವನ್ನುಂಟು ಮಾಡಿದೆ. ಸಾಮಾಜಿಕ ಕಾರ್ಯದ ವಿಷಯದಲ್ಲಿ ಇನ್ನೂ ಏನಾದರೂ ನೆರವು ಬೇಕಾದರೆ ನಿಸ್ಸಂದೇಹವಾಗಿ ಮಾಡಿಕೊಡಲು ಸಿದ್ಧ ಎಂದರು.

    ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಅಮೃತ ದೇಸಾಯಿ, ಪ್ರಸಾದ ಅಬ್ಬಯ್ಯ, ಪ್ರದೀಪ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಸೇರಿದಂತೆ ಹಲವರಿದ್ದರು.

    13 ದಿನದಲ್ಲಿ ನಿರ್ಮಾಣವಾದ ಸುಸಜ್ಜಿತ ಆಸ್ಪತ್ರೆ
    ಚಿತ್ರದುರ್ಗದ ವೇದಾಂತ ಕಂಪನಿಯ ಅನಿಲ್ ಅಗರವಾಲ್ ಪೌಂಡೇಷನ್ ಕೋವಿಡ್ ನೆರವು ನೀಡುವುದಕ್ಕಾಗಿ ದೇಶದಲ್ಲಿ ಒಟ್ಟು ಹತ್ತು ಆಸ್ಪತ್ರೆಯನ್ನು ನಿರ್ಮಿಸಿಕೊಟ್ಟಿದೆ. ರಾಜ್ಯದ ಚಿತ್ರದುರ್ಗ ಹಾಗೂ ಹುಬ್ಬಳ್ಳಿ ಕಿಮ್ಸ್ ನಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಿಸಿದೆ. ಕಿಮ್ಸ್ ನಲ್ಲಿನ ಆಸ್ಪತ್ರೆ 100 ಹಾಸಿಗೆಯ ಆಸ್ಪತ್ರೆ. ಇದರಲ್ಲಿ 80 ಆಕ್ಸಿಜನ್ ಬೆಡ್‍ಗಳಿದ್ದರೆ, 20 ಐಸಿಯು ಬೆಡ್‍ಗಳಿವೆ. 20 ಐಸಿಯು ಬೆಡ್‍ಗಳ ಪೈಕಿ 10 ವೆಂಟಿಲೇಟರ್ ಬೆಡ್ ಗಳನ್ನು ನಿರ್ಮಾಣ ಮಾಡಲಾಗಿದೆ.

  • ಬಿಜೆಪಿ ಜನರಲ್ಲಿ ಭರವಸೆ ಮೂಡಿಸಿದೆ: ಜಗದೀಶ್ ಶೆಟ್ಟರ್

    ಬಿಜೆಪಿ ಜನರಲ್ಲಿ ಭರವಸೆ ಮೂಡಿಸಿದೆ: ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ವಿಧಾನಸಭೆಯಲ್ಲಿ ಬಹುಮತ ಇದೆ. ಅದೇ ರೀತಿ ವಿಧಾನ ಪರಿಷತ್‍ನಲ್ಲಿಯೂ ಬಹುಮತ ಬೇಕಿದೆ. ಪದವೀಧರ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಬೆಂಬಲಿಸಿ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್ ಅವರು, ಈಗಾಗಲೇ ಜನರು ಬಿಜೆಪಿಯ ಕಾರ್ಯ ವೈಖರಿಯನ್ನು ನೋಡಿದ್ದಾರೆ. ಅಲ್ಲದೇ ಜನರಿಗೆ ಬಿಜೆಪಿಯ ಬಗ್ಗೆ ವಿಶ್ವಾಸವಿದೆ ಎಂದರು. ಕೆಐಎಡಿಬಿ ದರ ಏರಿಕೆ ಕುರಿತು ಮಾತನಾಡಿದ ಅವರು, ನಿರ್ದೇಶನದ ಮೇರೆಗೆ ಪರಿಷ್ಕೃತ ದರವನ್ನು ನಿಗದಿ ಮಾಡಲಾಗಿದೆ. ಈ ಕುರಿತು ಇನ್ನೊಮ್ಮೆ ಪರಿಶೀಲನೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

    ಬೆಳಗಾವಿ ಲೋಕಸಭಾ ಉಪ ಚುನಾವಣೆ ಕುರಿತು ಮಾತನಾಡಿದ ಅವರು, ಚುನಾವಣೆ ಇನ್ನೂ ಘೋಷಣೆಯಾಗಿಲ್ಲ. ಟಿಕೆಟ್ ಯಾರಿಗೆ ನೀಡಬೇಕು ಎಂಬುದರ ಕುರಿತು ಇನ್ನೂ ಚರ್ಚೆಯಾಗಿಲ್ಲ. ಚುನಾವಣೆ ಘೋಷಣೆಯಾದ ಬಳಿಕ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಲಾಗುವುದು ಎಂದ ಅವರು, ನನಗೆ ಟಿಕೆಟ್ ನೀಡಲು ಚರ್ಚೆಯಾಗಿದೆ ಎಂದು ಯಾರೂ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಲೋಕಸಭಾ ಟಿಕೆಟ್ ನನಗೆ ಸಿಕ್ಕರೆ ನನ್ನ ಕುಟುಂಬಸ್ಥರಿಗೆ ವಿಧಾನಸಭೆ ಟಿಕೆಟ್‍ಗಾಗಿ ಬೇಡಿಕೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಆ ರೀತಿ ಯಾವುದೇ ಚರ್ಚೆಯಾಗಿಲ್ಲ. ಕೇವಲ ಊಹಾಪೋಹಗಳಿಗೆ ನಾನು ಉತ್ತರ ನೀಡುವುದಿಲ್ಲ ಎಂದರು.

  • ರಾಜ್ಯಸಭಾ ಟಿಕೆಟ್ ಆಕಾಂಕ್ಷಿಗಳು ಅಸಮಾಧಾನ ಆಗುವ ಪ್ರಶ್ನೆಯೇ ಇಲ್ಲ: ಶೆಟ್ಟರ್

    ರಾಜ್ಯಸಭಾ ಟಿಕೆಟ್ ಆಕಾಂಕ್ಷಿಗಳು ಅಸಮಾಧಾನ ಆಗುವ ಪ್ರಶ್ನೆಯೇ ಇಲ್ಲ: ಶೆಟ್ಟರ್

    ಧಾರವಾಡ: ರಾಜ್ಯಸಭಾ ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ಹೈಕಮಾಂಡ್ ತೀರ್ಮಾನ ಅಂತಿಮ. ಪಕ್ಷ ಸಂಘಟನೆಯಲ್ಲಿ ತೊಡಗಿರುವವರನ್ನು ನೋಡಿ ಟಿಕೆಟ್ ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಭಾಕರ್ ಕೋರೆ, ರಮೇಶ ಕತ್ತಿ ಅಸಮಾಧಾನವಾಗುವ ಪ್ರಶ್ನೆಯೇ ಇಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರಬೇಕು. ಕೋರೆ ಮತ್ತು ರಮೇಶ ಕತ್ತಿ ಜೊತೆ ಮಾತನಾಡುತ್ತೇನೆ ಎಂದರು.

    ರಾಜ್ಯ ಬಿಜೆಪಿಯಿಂದ ಮೂವರ ಹೆಸರನ್ನು ಶಿಫಾರಸು ಮಾಡಿ ಹೈಕಮಾಂಡ್‍ಗೆ ಕಳುಹಿಸಿತ್ತು. ಅಂತಿಮವಾಗಿ ಹೈಕಮಾಂಡ್ ಇಬ್ಬರ ಹೆಸರನ್ನು ಅಂತಿಮಗೊಳಿಸಿದೆ, ಈಗ ಟಿಕೆಟ್ ಸಿಕ್ಕವರು ಪಕ್ಷಕ್ಕಾಗಿ ದುಡಿದಿದ್ದಾರೆ. ಹೀಗಾಗಿ ಇವರನ್ನು ಗುರುತಿಸಿ ಹೈಕಮಾಂಡ್ ಟಿಕೆಟ್ ನೀಡಿದೆ ಎಂದು ಹೇಳಿದರು.

  • ಅವಳಿ ನಗರದ ಎಪಿಎಂಸಿ ದ್ವಾರದಲ್ಲಿ ಸೋಂಕು ಕಳೆಯುವ ಸುರಂಗ ಸ್ಥಾಪನೆ

    ಅವಳಿ ನಗರದ ಎಪಿಎಂಸಿ ದ್ವಾರದಲ್ಲಿ ಸೋಂಕು ಕಳೆಯುವ ಸುರಂಗ ಸ್ಥಾಪನೆ

    ಹುಬ್ಬಳ್ಳಿ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಸರ್ಕಾರ ಹತ್ತು ಹಲವು ಕ್ರಮ ಕೈಗೊಳ್ಳುತ್ತಿದೆ. ಧಾರವಾಡ ಜಿಲ್ಲಾಡಳಿತ, ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯು ಸ್ಥಳೀಯ ಯಂಗ್ ಇಂಡಿಯಾ(ವೈಐ) ಹಾಗೂ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ) ಸಹಯೋಗದಲ್ಲಿ ಅಮರಗೋಳದ ಎಪಿಎಂಸಿ ಮಹಾದ್ವಾರದ ಬಳಿ ಸೋಂಕು ಕಳೆಯುವ ಸುರಂಗ ನಿರ್ಮಿಸಿದೆ.

    ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ಇಂದು ಬೆಳಿಗ್ಗೆ ಈ ಸುರಂಗದ ರಚನೆ ಹಾಗೂ ನಿರ್ಮಾಣ ಪರಿಶೀಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ರೈತರು, ವ್ಯಾಪಾರಸ್ಥರ ಆರೋಗ್ಯ ರಕ್ಷಣೆಗೆ ಇದು ಸಹಕಾರಿಯಾಗಲಿದೆ. ಜಿಲ್ಲಾಡಳಿತ, ಮಹಾನಗರಪಾಲಿಕೆ ಹಾಗೂ ಸ್ಥಳೀಯ ಸಂಘಟನೆಗಳ ಸಹಭಾಗಿತ್ವದಲ್ಲಿ ಈ ಕಾರ್ಯ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ತಮಿಳುನಾಡಿನ ತಿರುಪ್ಪೂರನಲ್ಲಿ ಅಲ್ಲಿನ ಯಂಗ್ ಇಂಡಿಯಾ ಸಂಸ್ಥೆ ಇಂತಹ ಪ್ರಯತ್ನ ಮಾಡಿರುವದನ್ನು ಕಂಡು, ಹುಬ್ಬಳ್ಳಿಯಲ್ಲಿಯೂ ಅದನ್ನು ಅನುಷ್ಠಾನಗೊಳಿಸುವ ಆಸಕ್ತಿ ಉಂಟಾಯಿತು. ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಅಗತ್ಯ ಸಹಕಾರ ನೀಡಲು ಮುಂದಾದಾಗ ನಮ್ಮ ಉತ್ಸಾಹಕ್ಕೆ ಪ್ರೋತ್ಸಾಹ ದೊರೆಯಿತು. ಪಾರಾದಿ ಅವರಿಂದ ಸ್ಟೀಲ್ ಫ್ರೇಮ್ ಸಿದ್ಧಪಡಿಸಿ, ಹೈ ಪ್ರೆಶರ್ ಉಳ್ಳ ಫಾಗರ್ಸ್, 1 ಅಶ್ವಶಕ್ತಿಯ ಪಂಪ್ ಈ ಸೋಂಕು ಕಳೆಯುವ ಸುರಂಗದಲ್ಲಿ ಅಳವಡಿಸಲಾಗಿದೆ. ಸುರಂಗದ 4 ಅಡಿ ಅಂತರದಲ್ಲಿ ವ್ಯಕ್ತಿಗಳು ಬಂದಾಗ ಸೆನ್ಸಾರ್ ಮೂಲಕ ಕಾರ್ಯ ಆರಂಭವಾಗುತ್ತದೆ. ಮನುಷ್ಯ ತೊಯ್ಯದ ಹಾಗೆ ಸೋಂಕು ನಿವಾರಕ ಸಿಂಪಡಣೆಯಾಗುತ್ತದೆ. ಶೇ. 1ರಷ್ಟು ಸೋಡಿಯಂ ಹೈಪೋಕ್ಲೋರೈಡ್ ಮಿಶ್ರಿತ ದ್ರಾವಣವನ್ನು ಮಹಾನಗರಪಾಲಿಕೆ ನಿರಂತರವಾಗಿ ಒದಗಿಸಲಿದೆ. ಯಂಗ್ ಇಂಡಿಯಾ ಮತ್ತು ಸಿಐಐ 1 ಲಕ್ಷ ರೂ. ವೆಚ್ಚದಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯ ಕೈಗೊಂಡಿದೆ ಎಂದು ಯಂಗ್ ಇಂಡಿಯಾ ಸಂಸ್ಥೆ ಅಧ್ಯಕ್ಷ ಡಾ. ಶ್ರೀನಿವಾಸ್ ಜೋಷಿ ವಿವರಿಸಿದರು.

    ಈ ಬಗ್ಗೆ ಮಹಾನಗರಪಾಲಿಕೆ ಆಯುಕ್ತರು ಮಾತನಾಡಿ, ಹುಬ್ಬಳ್ಳಿ ಎಪಿಎಂಸಿಗೆ ಪ್ರತಿನಿತ್ಯ ಸಾವಿರಾರು ರೈತರು, ವ್ಯಾಪಾರಿಗಳು ಬರುತ್ತಾರೆ. ಅವರಲ್ಲಿ ಸೋಂಕು ಹರಡುವಿಕೆ ತಡೆಯಲು ಈ ಪ್ರಯತ್ನ ಮಾಡಲಾಗಿದೆ. ಸಾರ್ವಜನಿಕರು ಸ್ವಲ್ಪ ತಾಳ್ಮೆಯಿಂದ ವಾಹನದಿಂದ ಇಳಿದು, ಸುರಂಗದಲ್ಲಿ ಒಮ್ಮೆ ಹಾಯ್ದು ಬರುವ ಅಭ್ಯಾಸ ರೂಢಿಸಿಕೊಂಡರೆ ಒಳ್ಳೆಯದು ಎಂದರು.

    ಜಿಲ್ಲಾಧಿಕಾರಿ ದೀಪಾ ಚೋಳನ್, ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್, ಮಹಾನಗರಪಾಲಿಕೆ ಪರಿಸರ ಇಂಜಿನಿಯರ್ ನಯನ, ಪೊಲೀಸ್ ಇನ್ಸ್‌ಪೆಕ್ಟರ್ ಪ್ರಭು ಸೂರಿನ್, ಯಂಗ್ ಇಂಡಿಯಾದ ಸಚಿನ್, ಡಾ. ನಾಗರಾಜನಾಯಕ, ಕಿರಣ ಮಾಳವದೆ, ಸಿಐಐ ಅಧ್ಯಕ್ಷ ವಿ.ಎಸ್.ವಿ.ಪ್ರಸಾದ, ಉಪಾಧ್ಯಕ್ಷ ಅನುಪಮ ಬೇತಾಳ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

  • ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ 1 ವರ್ಷದ ವೇತನ ನೀಡಿದ ಜಗದೀಶ್ ಶೆಟ್ಟರ್

    ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ 1 ವರ್ಷದ ವೇತನ ನೀಡಿದ ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ರಾಜ್ಯದಲ್ಲಿ ಕೋವಿಡ್-19 ಹಾವಳಿ ತಡೆಗಟ್ಟಲು ಸ್ಥಾಪಿಸಿರುವ ಪರಿಹಾರ ನಿಧಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ತಮ್ಮ 1 ವರ್ಷದ ವೇತನವನ್ನು ನೀಡಿದ್ದಾರೆ.

    ಈ ಕುರಿತಂತೆ ಸಚಿವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳುತ್ತಿದೆ. ಸೋಂಕು ಲಕ್ಷಣ ಇರುವ ಮಂದಿಗೆ ಮತ್ತು ರೋಗಿಗಳಿಗೆ ಸರ್ಕಾರವೇ ಚಿಕಿತ್ಸೆ ಒದಗಿಸುತ್ತಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕರು ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಉದಾರ ನೆರವು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಈ ಹಿಂದೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಮೂರು ತಿಂಗಳ ಸಂಬಳ ಹಾಗೂ ಸಚಿವ ಈಶ್ವರಪ್ಪ ಅವರು ತಮ್ಮ 4 ತಿಂಗಳ ಸಂಬಳವನ್ನು ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ನೀಡಿದ್ದರು.

    ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ ಕೊರೊನಾ ಹಾಟ್‍ಸ್ಪಾಟ್‍ಗಳಾಗಿವೆ. ದೇಶದಲ್ಲಿ ಕೊರೊನಾ ಹರಡುತ್ತಿರುವ 25 ಪ್ರಮುಖ ನಗರಗಳ ಪಟ್ಟಿಯಲ್ಲಿ ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ ನಗರಗಳು ಗುರುತಿಸಿಕೊಂಡಿವೆ. ಈವರೆಗೆ ರಾಜ್ಯದಲ್ಲಿ 121 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವರದಿಯಾಗಿದೆ. ಹಾಗೆಯೇ ದೇಶದಲ್ಲಿ 2094 ಮಂದಿಗೆ ಸೋಂಕು ತಗುಲಿದೆ.