Tag: Jagdish Chandra

  • ಕೊರೊನಾ ವಾರಿಯರ್ಸ್ ಸುರಕ್ಷತೆಗೆ ಮುಂದಾದ ಅಮೂಲ್ಯ-ಜಗದೀಶ್

    ಕೊರೊನಾ ವಾರಿಯರ್ಸ್ ಸುರಕ್ಷತೆಗೆ ಮುಂದಾದ ಅಮೂಲ್ಯ-ಜಗದೀಶ್

    ಬೆಂಗಳೂರು: ಸಾಮಾಜಿಕ ಕಾರ್ಯಗಳ ಮೂಲಕವೇ ಗುರುತಿಸಿಕೊಂಡಿರುವ ನಟಿ ಅಮೂಲ್ಯ- ಜಗದೀಶ ಚಂದ್ರ ದಂಪತಿ ಈ ಹಿಂದೆ ಆರ್‍ಎಸ್‍ಎಸ್ ಮೂಲಕ ಅಸಹಾಯಕರಿಗೆ 1 ಟನ್ ಅಕ್ಕಿ ನೀಡಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಕೊರೊನಾ ವಾರಿಯರ್ಸ್ ಸುರಕ್ಷತೆಗೆ ಮುಂದಾಗಿದ್ದಾರೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಡವರಿಗೆ, ವೈದ್ಯರ ಸುರಕ್ಷತೆಗೆ, ಪೊಲೀಸರಿಗೆ ಕೈಲಾದಷ್ಟು ಸಹಾಯ ಮಾಡಿ, ಅವರನ್ನು ಗೌರವಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಹಿನ್ನೆಲೆ ಅಮೂಲ್ಯಾ-ಜಗದೀಶ್ ದಂಪತಿ ಈ ಕಾರ್ಯ ಮಾಡುತ್ತಿದ್ದಾರೆ.

    ಪ್ರಧಾನಿ ಮೋದಿ ಕರೆಗೆ ಓಗುಟ್ಟು ನಟಿ ಅಮೂಲ್ಯಾ-ಜಗದೀಶ್ ದಂಪತಿ ಮಹತ್ತರ ಕೆಲಸಕ್ಕೆ ಕೈ ಹಾಕಿದ್ದು, ವೈದ್ಯರು, ಪೊಲೀಸರು, ಸ್ವಚ್ಛತಾ ಕೆಲಸಗಳಲ್ಲಿ ತೊಡಗಿರುವವರಿಗಾಗಿ ಒಟ್ಟು 10 ಸಾವಿರ ಮಾಸ್ಕ್‍ಗಳನ್ನು ತಯಾರಿಸುತ್ತಿದ್ದಾರೆ. ಇನ್ನೂ ವಿಶೇಷವೆಂದರೆ ಇವುಗಳನ್ನು ಯಾವುದೇ ಫ್ಯಾಕ್ಟರಿ ಅಥವಾ ಅಂಗಡಿಗಳಿಂದ ತರಿಸದೆ. 25ಕ್ಕೂ ಹೆಚ್ಚು ಜನ ಬಡ ಮಹಿಳಾ ಕಾರ್ಮಿಕರಿಂದ ಹೊಲಿಸುತ್ತಿದ್ದಾರೆ. ಈ ಮೂಲಕ ಮಹಿಳೆಯರಿಗೂ ಕೆಲಸ ನೀಡಿ, ಸಂಬಳ ಕೊಟ್ಟು ನೆರವಾಗುತ್ತಿದ್ದಾರೆ. ಹೀಗೆ ವಿವಿಧ ಸಾಮಾಜಿಕ ಕೆಲಸಗಳಲ್ಲಿ ತೊಡಗಿದ್ದಾರೆ.

    ಈ ಕುರಿತು ನಟಿ ಅಮೂಲ್ಯ ಪತಿ ಜಗದೀಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಮಾತುಗಳಿಂದ ಸ್ಫೂರ್ತಿ ಹೊಂದಿ ಈ ಕೆಲಸ ಮಾಡುತ್ತಿದ್ದೇವೆ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹಗಲಿರುಳು ದುಡಿಯುತ್ತಿರುವ ಕೊರೊನಾ ವಾರಿಯರ್ಸ್ ಗಳಾದ ವೈದ್ಯಕೀಯ, ಪೊಲೀಸ್, ಸ್ವಚ್ಛತಾ ಕೆಲಸ ಮಾಡುವವರು, ಸ್ವಯಂ ಸೇವಕರಿಗೆ ಸಹಾಯ ಮಾಡಲು ಇರುವುದು ಒಂದೇ ದಾರಿ ಅದು ಅವರ ಸುರಕ್ಷತೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಅಗತ್ಯವಾಗಿದೆ.

    ಜಪಾನ್ ಸೇರಿದಂತೆ ಕೆಲವು ದೇಶಗಳು ಈ ಮಹಾಮಾರಿಯಿಂದ ಜಾಸ್ತಿ ತೊಂದರೆ ಅನುಭವಿಸಿಲ್ಲ. ಕಾರಣ ಅಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಾರೆ. ನಮ್ಮ ಸರ್ಕಾರ ಸಹ ಮಾಸ್ಕ್ ಧರಿಸುವಂತೆ ಅರಿವು ಮೂಡಿಸುತ್ತಿದೆ. ಹೀಗಾಗಿ ಕೊರೊನಾ ವಾರಿಯರ್ಸ್ ಸುರಕ್ಷತೆ ದೃಷ್ಟಿಯಿಂದ ನಾವು ಅಳಿಲು ಸೇವೆ ಮಾಡುತ್ತಿದ್ದೇವೆ. ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಸುಮಾರು 25ಕ್ಕೂ ಹೆಚ್ಚು ಮಹಿಳೆಯರನ್ನು ನಾವು ಕೆಲಸಕ್ಕೆ ತೆಗೆದುಕೊಂಡಿದ್ದೇವೆ. ಅವರೆಲ್ಲರೂ ಅವರ ಮನೆಯಿಂದಲೇ ಕೆಲಸ ಮಾಡುತ್ತಾರೆ. ಇದರಿಂದ ಬರುವ ಆದಾಯದಲ್ಲಿ ಅವರೂ ಸಹ ಒಂದೆರಡು ತಿಂಗಳುಗಳ ಕುಟುಂಬ ನಿರ್ವಹಿಸಬಹುದು. ಇವರು ತಯಾರಿಸಿದ ಬಟ್ಟೆ ಮಾಸ್ಕ್‍ಗಳನ್ನು ಕೊರೊನಾ ವಾರಿಯರ್ಸ್‍ಗೆ ಹಾಗೂ ಅಗತ್ಯವಿರುವವರಿಗೆ ನೀಡುತ್ತಿದ್ದೇವೆ. ಈ ಮೂಲಕ ನಮ್ಮ ತಂಡದಿಂದ ಅಳಿಲು ಸೇವೆ ಮಾಡುತ್ತಿದ್ದೇವೆ. ನೀವೂ ಮಾಸ್ಕ್ ಧರಿಸಿ ಸುರಕ್ಷಿತವಾಗಿರಿ ಎಂದು ಅವರು ಮನವಿ ಮಾಡಿದ್ದಾರೆ.

    ಸದಾ ಒಂದಿಲ್ಲೊಂದು ಸಾಮಾಜಿಕ ಕಾರ್ಯಗಳಲ್ಲಿ ತೊಡಗುವ ದಂಪತಿ. ಇದೀಗ ಕೊರೊನಾ ವಾರಿಯರ್ಸ್‍ಗಾಗಿ ಮಾಸ್ಕ್ ತಯಾರಿಸಿ ಹಂಚುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ಪೊಲೀಸರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಕುರಿತು ಬೆಂಗಳೂರು ಸಿಟಿ ಪೊಲೀಸ್ ಖಾತೆಯಿಂದ ಟ್ವೀಟ್ ಮಾಡಿ ಹೀರೋಸ್ ಆಫ್ ದಿ ಡೇ ಎಂದು ಹಾಡಿ ಹೊಗಳಿದ್ದಾರೆ.