Tag: Jagannath Temple

  • ಪುರಿ ಜಗನ್ನಾಥ ರಥೋತ್ಸವ ವೇಳೆ ಕಾಲ್ತುಳಿತ – 600ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, 40ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕ

    ಪುರಿ ಜಗನ್ನಾಥ ರಥೋತ್ಸವ ವೇಳೆ ಕಾಲ್ತುಳಿತ – 600ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, 40ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕ

    ಭುವನೇಶ್ವರ: ಒಡಿಶಾದ ಪುರಿಯಲ್ಲಿಂದು ನಡೆಯುತ್ತಿದ್ದ ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆ (Jagannath Rath Yatra) ವೇಳೆ ಕಾಲ್ತುಳಿತ ಸಂಭವಿಸಿದ್ದು, 600ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡಿದ್ದಾರೆ. 40ಕ್ಕೂ ಹೆಚ್ಚು ಭಕ್ತರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

    ಜಗನ್ನಾಥ ದೇವರು ಮತ್ತು ಅವರ ಅಣ್ಣ ಬಲಭದ್ರ ಮತ್ತು ತಂಗಿ ದೇವಿ ಸುಭದ್ರಾ ದೇವಿಯ ರಥಯಾತ್ರೆಯ ಸಂದರ್ಭದಲ್ಲಿ ಜನದಟ್ಟಣೆ ಹೆಚ್ಚಾಗಿದ್ದರಿಂದ ಕಾಲ್ತುಳಿತ ಸಂಭವಿಸಿದ್ದು, 600ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥ ಭಕ್ತರನ್ನ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಅಂಬುಲೆನ್ಸ್‌ಗಳು ರಥಯಾತ್ರೆ ಸ್ಥಳಕ್ಕೆ ತಲುಪಿವೆ. ಸಂತ್ರಸ್ತರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರಿಗೂ ಅಗತ್ಯ ವೈದ್ಯಕೀಯ ನೆರವು ನೀಡಲಾಗಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ ನೌಕಾದಳದಿಂದ ಮಿಸೈಲ್ ದಾಳಿಗೆ ಟಾರ್ಗೆಟ್ ಫಿಕ್ಸ್ ಆಗಿತ್ತು – ಆದ್ರೆ ಅಂತಿಮ ಆದೇಶ ಬರಲಿಲ್ಲ

    ಬಲಭದ್ರನ ತಾಳಧ್ವಜ ರಥ ಎಳೆಯುವ ವೇಳೆ ವಿಳಂಭವಾಗಿತ್ತು. ಇದರಿಂದ ರಥಯಾತ್ರೆ ಮಾರ್ಗದ ತಿರುವಿನಲ್ಲಿ ಬಹಳಷ್ಟು ತೊಂದ್ರೆ ಉಂಟಾಗಿತ್ತು. ಈ ವೇಳೆ ರಥ ನಿಂತಿದ್ದರಿಂದ ರಥ ನಿಂತಿದ್ದರಿಂದ ಕಾಲ್ತುಳಿತ ಸಂಭವಿಸಿತು ಎಂದು ಹೇಳಲಾಗುತ್ತಿದೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಒಡಿಶಾ ಸಚಿವ ಮುಖೇಶ್ ಮಹಾಲಿಂಗ್, ಘಟನೆ ನಿಜಕ್ಕೂ ಆಘಾತಕಾರಿಯಾಗಿದೆ. ರಕ್ಷಣಾ ತಂಡವು ಕೂಡಲೇ ನೆರವಿಗೆ ಧಾವಿಸಿ ಸಂತ್ರಸ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಆರೋಗ್ಯ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ. ನೀರು ಮತ್ತು ಗ್ಲೂಕೋಸ್‌ಗೆ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿ ಭಕ್ತರ ಆರೋಗ್ಯ ವಿಚಾರಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶ ಸಿಎಂ ಬೆಂಗಾವಲು ಪಡೆಯ 19 ವಾಹನಗಳಿಗೆ ನೀರು ಮಿಶ್ರಿತ ಡೀಸೆಲ್ ತುಂಬಿದ ಬಂಕ್ ಸಿಬ್ಬಂದಿ!

    ಜಗನ್ನಾಥ ರಥಯಾತ್ರೆ
    ಅಹಮದಾಬಾದ್‌ನಲ್ಲಿ ನಡೆಯುವ ರಥಯಾತ್ರೆ ಅದೊಂದು ಐತಿಹಾಸಿಕ ಹಿಂದೂ ಹಬ್ಬ. 1878ರಿಂದಲೂ ಪ್ರತಿವರ್ಷ ರಥೋತ್ಸವ ಜರುಗುತ್ತಿದೆ. ಜಗನ್ನಾಥ ದೇವಸ್ಥಾನವು ಆಷಾಢ ಸುಧ್ ಬಿಜ್‌ನಂದು ರಥಯಾತ್ರೆ ಮೆರವಣಿಗೆಯನ್ನು ಆಯೋಜಿಸುತ್ತದೆ. ಈ ಹಬ್ಬದಂದು ಜಗನ್ನಾಥ, ಬಲರಾಮ ಮತ್ತು ಸುಭದ್ರ ದೇವತೆಗಳನ್ನು ಪೂಜಿಸಲಾಗುತ್ತದೆ. ಇದು 148ನೇ ಜಗನ್ನಾಥ ರಥಯಾತ್ರೆ ಆಗಿದೆ.

  • 46 ವರ್ಷದ ನಂತರ ತೆರೆಯಲಿದೆ ಪುರಿ ಜಗನ್ನಾಥ ದೇಗುಲ ರತ್ನ ಭಂಡಾರದ ಬಾಗಿಲು!

    46 ವರ್ಷದ ನಂತರ ತೆರೆಯಲಿದೆ ಪುರಿ ಜಗನ್ನಾಥ ದೇಗುಲ ರತ್ನ ಭಂಡಾರದ ಬಾಗಿಲು!

    – 1985ರ ಜುಲೈ 14ರಂದು ಕೊನೆಯ ಬಾರಿ ಓಪನ್‌
    – ಸುಪ್ರೀಂ ಆದೇಶದಂತೆ ರತ್ನ ಭಂಡಾರ ತೆರೆಯಲು ಮುಂದಾದ ಸರ್ಕಾರ

    ಭುವನೇಶ್ವರ: ತಿರುವಂತನಪುರಂನಲ್ಲಿರುವ ಪದ್ಮನಾಭ ದೇವಸ್ಥಾನ (Padmanabhaswamy Temple Thiruvananthapuram) ತಳ ಮಹಡಿಯಲ್ಲಿ ದೊಡ್ಡ ಪ್ರಮಾಣ ಪುರಾತನ ಕಾಲದ ಚಿನ್ನಾಭರಣ ಪತ್ತೆಯಾಗಿತ್ತು. ಇದು ಇಡೀ ದೇಶದ ಗಮನ ಸೆಳೆದಿತ್ತು. ಅಂತಹದೇ ಮತ್ತೊಂದು ಘಟನೆ ಈಗ ಒಡಿಶಾದ (Odisha) ಪುರಿಯಲ್ಲಿ ನಡೆಯಬಹುದಾ ಎನ್ನುವ ಕುತೂಹಲ ಮನೆ ಮಾಡಿದೆ. 46 ವರ್ಷಗಳ ಬಳಿಕ ಪುರಿಯ ಜಗನ್ನಾಥ ದೇವಾಲಯದ (Puri Jagannath Temple) ರತ್ನ ಭಂಡಾರದ ಬಾಗಿಲನ್ನು ತೆರೆಯಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಅಲ್ಲಿರುವ ಪುರಾತನ ಚಿನ್ನಾಭರಣ, ವಜ್ರ, ವೈಡೂರ್ಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗತೊಡಗಿದೆ.

    1985ರ ಜುಲೈ 14ರಂದು ಬಲಭದ್ರ ದೇವರ ಚಿನ್ನಾಭರಣಗಳ ಪತ್ತೆಗಾಗಿ ರತ್ನ ಭಂಡಾರವನ್ನು ಕೊನೆಯ ಬಾರಿಗೆ ತೆರೆಯಲಾಗಿತ್ತು. ರತ್ನ ಭಂಡಾರದಲ್ಲಿ ಎಷ್ಟು ನಿಧಿಗಳಿವೆ ಎಂಬ ಬಗ್ಗೆ 1978ರ ಮೇ 13ರಿಂದ ಜುಲೈ 13ರವರೆಗೆ ಲೆಕ್ಕಾಚಾರ ಹಾಕಲಾಗಿದ್ದು, ಇದು ಕೊನೆಯದಾಗಿ ನಡೆದ ಲೆಕ್ಕಾಚಾರವಾಗಿತ್ತು. ಆ ಬಳಿಕ ರತ್ನ ಭಂಡಾರದೊಳಗೆ ವಿಷಕಾರಿ ಸರ್ಪಗಳು, ನಾಗರ ಹಾವುಗಳು ಕಾವಲು ಕಾಯುತ್ತಿರುವ ಬಗ್ಗೆ ದಂತಕಥೆಗಳು, ಜಾನಪದ ಕಥೆಗಳು ಹುಟ್ಟಿಕೊಂಡಿದ್ದವು, ಹೀಗಾಗೀ ಬಾಗಿಲು ತೆರೆಯುವ ಸಾಹಸ ಮಾಡಲು ಯಾವ ಸರ್ಕಾರ ಹೋಗಿರಲಿಲ್ಲ.

    ಬರೋಬ್ಬರಿ 45 ವರ್ಷಗಳ ಬಳಿಕ ರತ್ನ ಭಂಡಾರದ ಬಾಗಿಲು ತೆರೆಯಲ್ಲಿದ್ದು, ಅಲ್ಲಿರುವ ಪುರಾತನ ಚಿನ್ನಾಭರಣ, ವಜ್ರ, ವೈಡೂರ್ಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗತೊಡಗಿದೆ. ಅದರ ಜೊತೆಗೆ ಅಲ್ಲಿ ವಾಸವಾಗಿರುವ ಹಾವುಗಳ ಬಗ್ಗೆಯೂ ಅಧಿಕಾರಿಗಳಿಗೆ ಅಷ್ಟೇ ಭಯ ಹುಟ್ಟಿಸಿದೆ. ಹೀಗಾಗೀ ನುರಿತ ಉರಗ ತಜ್ಞರು ವೈದ್ಯರ ತಂಡ, ಅಂಬುಲೆನ್ಸ್‌ ಸನ್ನದ್ಧವಾಗಿಟ್ಟುಕೊಳ್ಳಲಾಗಿದೆ.

    ಸಂಪತ್ತು ಎಷ್ಟಿದೆ?
    ಜಗನ್ನಾಥ ದೇವಸ್ಥಾನದ ರತ್ನ ಭಂಡಾರದಲ್ಲಿ ಇರುವ ಅಮೂಲ್ಯ ವಜ್ರ ವೈಡೂರ್ಯ, ಚಿನ್ನಾಭರಣಗಳನ್ನು ಬಳಸಿಕೊಂಡರೆ ವಿಶ್ವದ ಹಲವು ಬಡ ರಾಷ್ಟ್ರಗಳ ಆರ್ಥಿಕತೆಯನ್ನು ಸುಧಾರಿಸಬಹುದಂತೆ.  2018 ರಲ್ಲಿ, ಆಗಿನ ಕಾನೂನು ಸಚಿವ ಪ್ರತಾಪ್ ಜೆನಾ ಅವರು ‘ರತ್ನ ಭಂಡಾರ್’ 12,831 ಭಾರಿ (ಒಂದು ಭಾರಿ 11.66 ಗ್ರಾಂಗೆ ಸಮ) ಚಿನ್ನಾಭರಣಗಳನ್ನು ಹೊಂದಿದೆ. 22,153 ಭಾರಿ ಬೆಳ್ಳಿ ಪಾತ್ರೆಗಳು ಮತ್ತು ಇತರ ವಸ್ತುಗಳನ್ನು ಅಮೂಲ್ಯವಾದ ಕಲ್ಲುಗಳಿಂದ ಅಳವಡಿಸಲಾಗಿದೆ ಎಂದು ರಾಜ್ಯ ವಿಧಾನಸಭೆಗೆ ತಿಳಿಸಿದ್ದರು.

    ದೇವಾಲಯದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ವ್ಯಕ್ತಿಗಳ ಪ್ರಕಾರ ರತ್ನ ಭಂಡಾರವು ಮೂರು ಭಾಗಗಳನ್ನು ಒಳಗೊಂಡಿದೆ. ಹೊರಗಿನ ಕೋಣೆಯಲ್ಲಿ ದೇವಸ್ಥಾನದ ಆಚರಣೆಗಳಲ್ಲಿ ಬಳಸುವ ಆಭರಣ, ಒಳಗಗಿನ ಕೊಠಡಿಯಲ್ಲಿ ದೇವಸ್ಥಾನ ಬಳಸದ ಆಭರಣ ಮತ್ತು ರಾಜರು ಮತ್ತು ಭಕ್ತರು ದಾನ ಮಾಡಿದ ಇತರ ಅಮೂಲ್ಯ ವಸ್ತುಗಳನ್ನು ಹೊಂದಿದೆ.

     

    ಬಾಗಿಲು ತೆರೆಯಿರಿ ಎಂದಿದ್ದ ಸುಪ್ರೀಂ
    2018ರಲ್ಲಿ ಸುಪ್ರೀಂಕೋರ್ಟ್ ಪುರಾತತ್ವ ಇಲಾಖೆಗೆ ರತ್ನ ಭಂಡಾರದ ಆಭರಣಗಳನ್ನು ಪರಿಶೀಲಿಸುವಂತೆ ಆದೇಶಿಸಿತ್ತು. ಈ ಸಂದರ್ಭದಲ್ಲಿ ದೇವಾಲಯಕ್ಕೆ ಪರಿಶೀಲನೆಗಾಗಿ ಆಗಮಿಸಿದ್ದ ಎಎಸ್ಐ ಅಧಿಕಾರಿಗಳ ತಂಡಕ್ಕೆ ದೇವಾಲಯದ ಕೀಲಿ ಕೈ ನಾಪತ್ತೆಯಾಗಿದೆ ಎಂದು ತಿಳಿಸಿದ್ದರು‌. ಇದೀಗ ಹೆಚ್ಚುವರಿಯಾಗಿ ಇರುವ ಕೀ ಮೂಲಕ ಬೀಗ ತೆರೆಯಲು ಪ್ರಯತ್ನ ನಡೆಯಲಿದೆ. ಒಂದು ವೇಳೆ ಆ ಕೀಯಿಂದಲೂ ಬಾಗಿಲು ತೆರೆಯದಿದ್ದರೆ, ಬಾಗಿಲನ್ನು ಒಡೆದು ರತ್ನ ಭಂಡಾರದಲ್ಲಿರುವ ಚಿನ್ನಾಭರಣಗಳ ಲೆಕ್ಕಾಚಾರ ನಡೆಯಲಿದೆ.

  • ಧರ್ಮಸ್ಥಳವನ್ನು ನೋಡಿ ಕಲಿಯಿರಿ: ಪುರಿ ದೇವಾಲಯಕ್ಕೆ ಸುಪ್ರೀಂ ಸೂಚನೆ

    ಧರ್ಮಸ್ಥಳವನ್ನು ನೋಡಿ ಕಲಿಯಿರಿ: ಪುರಿ ದೇವಾಲಯಕ್ಕೆ ಸುಪ್ರೀಂ ಸೂಚನೆ

    ನವದೆಹಲಿ: ದೇವಸ್ಥಾನ ನಿರ್ವಹಣೆ ವಿಚಾರದಲ್ಲಿ ಕರ್ನಾಟಕದ ಧರ್ಮಸ್ಥಳದ ಆಡಳಿತ ನೋಡಿ ಕಲಿಯಿರಿ ಎಂದು ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

    ದೇವಸ್ಥಾನದಲ್ಲಿ ದೇವಾಳದ ಸಿಬ್ಬಂದಿಯಿಂದ ಭಕ್ತರ ಮೇಲೆ ಆಗುತ್ತಿರುವ ಶೋಷಣೆಯ ವಿರುದ್ಧವಾಗಿ ಮೃಣಾಲಿನಿ ಪಧಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ ಆದರ್ಶ ಗೋಯಲ್ ಮತ್ತು ನ್ಯಾ ಅಶೋಕ್ ಭೂಷಣ್ ಅವರಿದ್ದ ಪೀಠ ದೇವಸ್ಥಾನದ ಆಡಳಿತ ಮಂಡಳಿಗೆ ಹಲವು ನಿರ್ದೇಶನಗಳನ್ನು ನೀಡಿದೆ.

    ಕರ್ನಾಟಕದ ಧರ್ಮಸ್ಥಳ ದೇವಸ್ಥಾನ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ವೈಷ್ಣವ ದೇವಿ, ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದ ನಿರ್ವಹಣೆ ವ್ಯವಸ್ಥೆಯನ್ನು ಅಧ್ಯಯನ ನಡೆಸುವಂತೆ ಒಡಿಶಾ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿದೆ.

    ದೇವಸ್ಥಾನದ ಸುತ್ತಲಿನ ಪರಿಸರ ಹಾಳಾಗಿದ್ದು ದೇವಾಲಯಕ್ಕೆ ಸೇರಿದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ದೇವರ ಸೇವಾ ಕಾರ್ಯಗಳು ಸಂಪೂರ್ಣ ವಾಣಿಜ್ಯೀಕರಣಗೊಂಡಿದೆ ಎಂದು ಅರ್ಜಿಯಲ್ಲಿ ದೂರುದಾರರು ಉಲ್ಲೇಖಿಸಿದ್ದರು.

    ಲಕ್ಷಾಂತರ ಭಕ್ತರು ಪ್ರತಿ ವರ್ಷ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿ ದಾನವನ್ನು ಅರ್ಪಣೆ ಮಾಡುತ್ತಾರೆ. ಹಾಗಾಗಿ ಭಕ್ತರ ಸೇವಾದರ್ಶನಕ್ಕೆ ಮುಕ್ತ ಅವಕಾಶ ಮಾಡಿಕೊಡುವುದು ಹಾಗೂ ದೇವಸ್ಥಾನದ ವಾತಾವರಣವನ್ನು ಸರಿಯಾಗಿ ಇಟ್ಟುಕೊಳ್ಳುವುದು ಆಡಳಿತ ಮಂಡಳಿಯ ಕರ್ತವ್ಯವಾಗಿದೆ ಎಂದು ಪೀಠ ತಿಳಿಸಿದೆ.

    ದೇವಸ್ಥಾನದಲ್ಲಿ ಭಕ್ತರು ಎದುರಿಸುತ್ತಿರುವ ಸಮಸ್ಯೆಗಳು, ಶೋಷಣೆಗಳು ಹಾಗೂ ಆಡಳಿತ ಮಂಡಳಿಯಲ್ಲಿರುವ ನ್ಯೂನತೆಗಳನ್ನು ಜೂನ್ 30 ರೊಳಗೆ ಮಧ್ಯಂತರ ವರದಿ ಮಾಡುವಂತೆ ಪೂರಿ ಜಿಲ್ಲಾ ನ್ಯಾಯಾಧೀಶರಿಗೆ ಪೀಠ ಆದೇಶಿಸಿದೆ.

    1954 ರ ಶ್ರೀ ಜಗನ್ನಾಥ ದೇವಸ್ಥಾನದ ಕಾಯ್ದೆ ಪ್ರಕಾರ ಭಕ್ತರು ನೇರವಾಗಿ ಸಿಬ್ಬಂದಿಗೆ ಹಣವನ್ನು ನೀಡಿ ಸೇವೆ ಮಾಡುವಂತಿಲ್ಲ. ಹಣ ಹಾಕುವುದಿದ್ದರೆ ಹುಂಡಿಯಲ್ಲಿ ಹಾಕಬೇಕು ಅಥವಾ ಸೇವಾ ಕೌಂಟರ್ ನಲ್ಲಿ ಹಣವನ್ನು ಪಾವತಿಸಿ ಸೇವೆ ಮಾಡಬೇಕು.

    ದೇವಸ್ಥಾನದಲ್ಲಿ ನಡೆಯುತ್ತಿರುವ ಆಚರಣೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಮಾರ್ಪಾಡು ಅವಶ್ಯಕತೆ ಇದ್ದಲ್ಲಿ ಸೂಚಿಸುವಂತೆ ಕೇಂದ್ರಕ್ಕೆ ಪೀಠ ತಿಳಿಸಿದೆ. ಹಿರಿಯ ನ್ಯಾಯವಾದಿ ಗೋಪಾಲ ಸುಬ್ರಮಣಿಯಮ್ ಅವರನ್ನು ಅಮಿಕಸ್ ಕ್ಯೂರಿಯಾಗಿ ಪೀಠ ನೇಮಿಸಿದೆ. ಎಲ್ಲಾ ವರದಿಗಳನ್ನು ನೋಡಿ ಅಭಿಪ್ರಾಯವನ್ನು ತಿಳಿಸುವಂತೆ ಸೂಚಿಸಿದೆ.