Tag: Jagadguru

  • ಮುಂದಿನ 50 ದಿನ ಭಕ್ತರಿಗೆ ಆಶೀರ್ವಚನ ನೀಡಲಿದ್ದಾರೆ ಶ್ರೀ ವಿಧುಶೇಖರ ಭಾರತಿ ಸ್ವಾಮಿ

    ಮುಂದಿನ 50 ದಿನ ಭಕ್ತರಿಗೆ ಆಶೀರ್ವಚನ ನೀಡಲಿದ್ದಾರೆ ಶ್ರೀ ವಿಧುಶೇಖರ ಭಾರತಿ ಸ್ವಾಮಿ

    ಬೆಂಗಳೂರು: ಶ್ರೀ ಶ್ರೀ ವಿಧುಶೇಖರ ಭಾರತಿ ಸನ್ನಿದಾನಂಗಳವರ ವಿಜಯಯಾತ್ರೆ 2022 ಪ್ರಯುಕ್ತ ನಿನ್ನೆಯಿಂದ ಬೆಂಗಳೂರಿನ ಶೃಂಗೇರಿ ಶಂಕರಮಠ ಶಂಕರಪುರಂನಲ್ಲಿ ಮುಂದಿನ 50 ದಿನಗಳ ಕಾಲ ವಾಸ್ತವ್ಯ ಹೂಡಿ ಭಕ್ತಾದಿಗಳಿಗೆ ಆಶೀರ್ವಚನ ನೀಡಲು ಆರಂಭಿಸಿದ್ದಾರೆ. ಶ್ರೀಗಳ ವಿಜಯಯಾತ್ರೆ ಶುಕ್ರವಾರ ಬೆಂಗಳೂರಿಗೆ ಆಗಮಿಸಿದಾಗ ಭಕ್ತಾದಿಗಳಿಂದ ಅದ್ದೂರಿ ಸ್ವಾಗತ ದೊರೆಯಿತು.

    ಬೆಂಗಳೂರಿನ ಬಸವನಗುಡಿಯ ನಾರ್ಥ್ ರೋಡ್ ವೇದ ಮಾಗಡಿ ಕನಿಕರ ಪಾಠಶಾಲಾ ಮುಂಭಾಗದಿಂದ ಶೃಂಗೇರಿ ಶಂಕರಮಠ ಶಂಕರಪುರಂ ವರೆಗೂ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳ ಅದ್ದೂರಿಯ ಮೆರವಣಿಗೆ, ವೇದ ಮಂತ್ರ ಘೋಷ ಹಾಗೂ ವಿವಿಧ ಜಾನಪದ ಕಲೆಗಳೊಂದಿಗೆ ನಡೆಯಿತು.

    ಇಂದಿನಿಂದ ಐವತ್ತು ದಿನಗಳ ಕಾಲ ಬೆಳಗ್ಗೆ ಮತ್ತು ಸಂಜೆ ಶ್ರೀಗಳು ಬೆಂಗಳೂರಿನ ಶೃಂಗೇರಿ ಶಂಕರಮಠದಲ್ಲಿ ಭಕ್ತಾದಿಗಳಿಗೆ ದರ್ಶನ ಹಾಗೂ ಆಶೀರ್ವಚನ ನೀಡಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

  • ಲಿಂಗಾಯತ ಧರ್ಮದ ಹೋರಾಟಗಾರ್ತಿ ಮಾತೆ ಮಹಾದೇವಿ ಲಿಂಗೈಕ್ಯ

    ಲಿಂಗಾಯತ ಧರ್ಮದ ಹೋರಾಟಗಾರ್ತಿ ಮಾತೆ ಮಹಾದೇವಿ ಲಿಂಗೈಕ್ಯ

    ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಗಾರ್ತಿ, ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ(74) ಇಂದು ಲಿಂಗೈಕ್ಯರಾಗಿದ್ದಾರೆ.

    ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 3.30ಕ್ಕೆ ಲಿಂಗೈಕ್ಯರಾಗಿದ್ದಾರೆ.

    ವಯೋ ಸಹಜ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಮಾತೆ ಮಹಾದೇವಿ ಅವರು ಬಳಲುತ್ತಿದ್ದರು. ಹೀಗಾಗಿ ಬಾಗಲಕೋಟೆಯ ಕೆರೂಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಮಾರ್ಚ್ 10ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಮಾತೆ ಮಹಾದೇವಿ ಗುರು ಲಿಂಗಾನಂದ ಅವರಿಂದ ಪ್ರಭಾವಿತರಾಗಿ ಕಿರಿಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ್ದರು. ಇವರನ್ನು ಪ್ರಥಮ ಮಹಿಳಾ ಜಗದ್ಗುರು ಎಂದು ಭಕ್ತರು ಗುರುತಿಸಿದ್ದಾರೆ.

    ಮಾತೆ ಮಹಾದೇವಿ ಮಾರ್ಚ್ 13, 1946ರಂದು ಚಿತ್ರದುರ್ಗ ಜಿಲ್ಲೆಯ ಸಾಸಲಹಟ್ಟಿಯಲ್ಲಿ ಜನಿಸಿದ್ದರು. ಇವರ ಮೂಲ ಹೆಸರು ರತ್ನ ಆಗಿದ್ದು, ದೀಕ್ಷೆ ಪಡೆದ ಬಳಿಕ ಮಾತೆ ಮಹಾದೇವಿ ಎಂದು ಗುರುತಿಸಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv