Tag: jagadessh shettar

  • ಗುಂಡಿ, ಹಳ್ಳದಂತಾದ ಹುಬ್ಬಳ್ಳಿ ರಸ್ತೆಗಳು- ಉಸ್ತುವಾರಿ ಸಚಿವರ ಮನೆ ಮುಂದೆ ಮಾತ್ರ ಹೈಟೆಕ್ ರೋಡ್

    ಗುಂಡಿ, ಹಳ್ಳದಂತಾದ ಹುಬ್ಬಳ್ಳಿ ರಸ್ತೆಗಳು- ಉಸ್ತುವಾರಿ ಸಚಿವರ ಮನೆ ಮುಂದೆ ಮಾತ್ರ ಹೈಟೆಕ್ ರೋಡ್

    ಹುಬ್ಬಳ್ಳಿ: ಜಿಲ್ಲೆಯ ಸಚಿವರೊಬ್ಬರ ಮನೆ ಮುಂದೆ ಮಾತ್ರ ಹೈಟೆಕ್ ರಸ್ತೆ ನಿರ್ಮಾಣ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಸಾರ್ವಜನಿಕ ರಸ್ತೆಗಳನ್ನ ರಿಪೇರಿ ಮಾಡದ ಅಧಿಕಾರಿಗಳು, ಸಚಿವರ ಮನೆ ಮುಂದೆ ಮಾತ್ರ ಹೈಟೆಕ್ ರಸ್ತೆ ನಿರ್ಮಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಹೌದು. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಎಲ್ಲಿ ನೋಡಿದ್ರೂ ಬರೀ ಹಳ್ಳಬಿದ್ದ ರಸ್ತೆಗಳು, ತಗ್ಗು ಗುಂಡಿ ಕಾಣ ಸಿಗುತ್ತವೆ. ಆದರೆ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರ ಮನೆ ಮುಂದಿನ ರಸ್ತೆಗೆ ಮಾತ್ರ ಹೈಟೆಕ್ ಟಚ್ ನೀಡಲಾಗಿದೆ. ಉಳಿದ ಕಡೆ ರಸ್ತೆಗಳ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ.

    ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನ ಸ್ಮಾರ್ಟ್ ಸಿಟಿ ಮಾಡ್ತೀವಿ ಅನ್ನೋ ಸಚಿವ ಜಗದೀಶ್ ಶೆಟ್ಟರ್, ಮಹಾನಗರದ ರಸ್ತೆಗಳ ರಿಪೇರಿ ಮಾಡಿಸೋದು ಬಿಟ್ಟು ತಮ್ಮ ಮನೆ ಮುಂದೆ ರಸ್ತೆಯನ್ನ ಮಾತ್ರ ಅಭಿವೃದ್ಧಿ ಮಾಡಿಸಿಕೊಂಡಿದ್ದಾರೆ. ಲೋಕೋಪಯೋಗಿ ಇಲಾಖೆಯ ವಿಶೇಷ ಅನುದಾನದಡಿ ಶೆಟ್ಟರ್ ತಮ್ಮ ಮನೆ ಮುಂದೆ 3.20 ಕೋಟಿ ರೂಪಾಯಿ ವೆಚ್ಚದಲ್ಲಿ ಪೇವರ್ಸ್ ಹಾಗೂ ಕಾಂಕ್ರಿಟ್ ರಸ್ತೆ ಮಾಡಿಸಿಕೊಳ್ಳುವ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿನ ಜನ ಆಕ್ರೋಶಗೊಂಡಿದ್ದಾರೆ.

    ಈ ಬಗ್ಗೆ ಅಧಿಕಾರಿಗಳನ್ನ ಪ್ರಶ್ನೆ ಮಾಡಿದ್ರೆ ನಗರದಲ್ಲೂ ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ರಸ್ತೆಗಳ ಕಾಮಗಾರಿ ನಡೆಯುತ್ತಿದೆ. ಶ್ರೀಘ್ರದಲ್ಲಿಯೇ ಎಲ್ಲ ರಸ್ತೆಗಳ ಕಾಮಗಾರಿ ಮುಗಿಯುತ್ತೆ ಎಂದು ಹಾರಿಕೆ ಉತ್ತರ ನೀಡ್ತಾರೆ.

    ಹುಬ್ಬಳ್ಳಿ ಜನರು, ವಾಹನ ಸವಾರರು ತಗ್ಗು ಗುಂಡಿಗಳ ರಸ್ತೆಯಲ್ಲಿ ಓಡಾಟ ಮಾಡ್ತಾ ಇದ್ದರೆ ಉಸ್ತುವಾರಿ ಸಚಿವರ ಮನೆ ಮುಂದೆ ಮಾತ್ರ ಹೈಟೆಕ್ ರಸ್ತೆ ನಿರ್ಮಿಸುವ ಮೂಲಕ ಅಧಿಕಾರಿಗಳು ಸಚಿವರ ಕೃಪೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಸಚಿವರಿಗಾಗಿ ಹೈಟೆಕ್ ರಸ್ತೆ ನಮಗೆ ತಗ್ಗು ಗುಂಡಿ ರಸ್ತೆಯಾ ಎಂದು ಸಾರ್ವಜನಿಕರು ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

  • ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ- ಅಧಿಕಾರಿಗಳಿಗೆ ಶೆಟ್ಟರ್ ಸೂಚನೆ

    ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ- ಅಧಿಕಾರಿಗಳಿಗೆ ಶೆಟ್ಟರ್ ಸೂಚನೆ

    ನೆಲಮಂಗಲ: ಕೈಗಾರಿಕಾ ಪ್ರದೇಶಗಳಲ್ಲಿ ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಿ ಎಂದು ಬೃಹತ್ ಮತ್ತು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ತಿಳಿಸಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಡಾಬಸ್‍ಪೇಟೆಯ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ವತಿಯಿಂದ ಅಭಿವೃದ್ಧಿ ಪಡಿಸಲಾಗಿರುವ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಿಗೆ ಶನಿವಾರ ಭೇಟಿ ನೀಡಿ ಸಚಿವರು ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ನಡೆಸಿದರು.

    ಡಾಬಸ್‍ಪೇಟೆ ಇಂಡಸ್ಟ್ರೀಸ್ ಅಸೋಸಿಯೇಷನ್ ಸದಸ್ಯರು ನೀಡಿದ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಸಚಿವರು, ಕೈಗಾರಿಕೆಗಳಿಗೆ ಭೂಮಿಯನ್ನು ನೀಡುವುದರ ಜೊತೆಯಲ್ಲಿಯೇ ಅಗತ್ಯವಿರುವ ವಿದ್ಯುತ್, ನೀರು, ಸುರಕ್ಷತೆ ಹಾಗೂ ಇನ್ನಿತರೆ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು ಮಂಡಳಿಯ ಕರ್ತವ್ಯವಾಗಿದ್ದು, ಆಗ ಮಾತ್ರ ಕೈಗಾರಿಕೆಗಳು ಸುಲಭವಾಗಿ ತಮ್ಮ ಉತ್ಪಾದನೆಯನ್ನು ಪ್ರಾರಂಭಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಹಾಗೂ ರಾಜ್ಯದ ಆರ್ಥಿಕತೆಗೆ ಕೊಡುಗೆಯನ್ನು ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ಡಾಬಸ್‍ಪೇಟೆಯ ಕೈಗಾರಿಕೋದ್ಯಮಿಗಳು ನೀಡಿರುವ ಬೇಡಿಕೆಗಳನ್ನು ತುರ್ತಾಗಿ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

    ಈ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಭೂಮಿಯ ಬೇಡಿಕೆ ಹೆಚ್ಚಿರುವುದರಿಂದ, ಮಂಡಳಿಯ ವತಿಯಿಂದ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಅಭಿವೃದ್ಧಿಗೊಳಿಸಿ ಹಂಚಿಕೆಯನ್ನು ಮಾಡುವ ಕಾರ್ಯಕ್ಕೂ ವೇಗಗೊಳಿಸಬೇಕಾಗಿದೆ ಎಂದು ಹೇಳಿದರು.

    ತ್ರಿವೇಣಿ ಟ್ರಿಬ್ಯೂನ್ ಮತ್ತು ಕೆಬಿಡಿ ಕಲ್ಪತರು ಕಂಪನಿಗಳಿಗೆ ಭೇಟಿ ನೀಡಿ ಕೋವಿಡ್-19 ಮಹಾಮಾರಿಯನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಸಚಿವರ ಜೊತೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸಿಇಓ ಡಾ.ಶಿವಶಂಕರ್ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇದ್ದರು.