Tag: J Manjunath

  • ಬೆಂ.ನ.ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು: ಒತ್ತುವರಿಯಾಗಿದ್ದ ರಾಜಕಾಲುವೆ, ಖಾಸಗಿ ಬಡಾವಣೆ ತೆರವು

    ಬೆಂ.ನ.ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು: ಒತ್ತುವರಿಯಾಗಿದ್ದ ರಾಜಕಾಲುವೆ, ಖಾಸಗಿ ಬಡಾವಣೆ ತೆರವು

    ಬೆಂಗಳೂರು: ಆನೇಕಲ್ ಭಾಗದ ಗಟ್ಟಳ್ಳಿ ಕೆರೆಯಿಂದ ರಾಮಸಾಗರವರೆಗಿನ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ, ಅನಧಿಕೃತ ಖಾಸಗಿ ಬಡಾವಣೆಗಳನ್ನು ಇಂದು ತೆರವುಗೊಳಿಸಲಾಯಿತು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

    ಕೋಲಾರದಲ್ಲಿ ಕೋರಮಂಗಲ-ಚಲ್ಲಘಟ್ಟ(ಕೆಸಿ) ವ್ಯಾಲಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಕೆರೆಗಳಲ್ಲಿ ನೀರು ಮರುಪೂರಣಗೊಳಿಸಿರುವಂತೆ, ಬೆಂಗಳೂರು ನಗರ ಜಿಲ್ಲೆಯಲ್ಲಿಯೂ ಇದೇ ಯೋಜನೆ ಮಾಡಲಾಗಿದೆ. ಅದಕ್ಕೆ ಈ ಯೋಜನೆ ಅಡಿಯಲ್ಲಿ ಆನೇಕಲ್ ಭಾಗದಲ್ಲಿ 69 ಕೆರೆಗಳನ್ನು, ಬೆಂಗಳೂರು ಪೂರ್ವ ತಾಲೂಕಿನಲ್ಲಿ 5 ಕೆರೆಗಳನ್ನು ಹಾಗೂ ಆನೇಕಲ್‍ಗೆ ಹೊಂದಿಕೊಂಡಿರುವ ಕನಕಪುರ ಭಾಗದಲ್ಲಿ 5 ಕೆರೆಗಳನ್ನು ತುಂಬುವ ಕಾರ್ಯ ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಎರಡು ಹಂತದಲ್ಲಿ ಶುದ್ಧೀಕರಿಸಿದ ಒಟ್ಟು 120 ಎಂಎಲ್‍ಡಿ ನೀರನ್ನು ಪೂರೈಸಲಾಗುವುದು ಎಂದರು. ಇದನ್ನೂ ಓದಿ: ತಾಕತ್ತಿದ್ದರೆ ನನ್ನ ವಿರುದ್ಧ ರೇವಣ್ಣ ನಿಲ್ಲಲಿ :ಪ್ರೀತಂ ಸವಾಲು 

    ಪ್ರಸ್ತುತ 40-43 ಎಂಎಲ್‍ಡಿ ನೀರನ್ನು ಪಂಪ್ ಮಾಡಲಾಗುತ್ತಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಪಂಪ್ ಮಾಡಲು ಕೆರೆಯಿಂದ ಕೆರೆಗೆ ನೀರಿನ ಹರಿವನ್ನು ಸುಗಮಗೊಳಿಸಬೇಕಿದೆ. ಈ ಕೆರೆಗಳಿಗೆ ನೀರು ಪೂರೈಸುವ ಮಾರ್ಗದಲ್ಲಿ ಬರುವ ರಾಜಕಾಲುವೆಗಳು ಮತ್ತು ಡ್ರೇನ್ ನೆಟ್‍ವರ್ಕ್ ಪ್ರದೇಶಗಳಲ್ಲಾಗಿರುವ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾಡಳಿತ ಪ್ರಾರಂಭಿಸಿದೆ. ಇದರಿಂದಾಗಿ, ಈ ಯೋಜನೆಗೆ ವೇಗ ನೀಡದಂತಾಗಿದೆ ಎಂದು ತಿಳಿಸಿದರು.

  • ಅಂಬೇಡ್ಕರ್, ವಾಲ್ಮೀಕಿ ಭವನಗಳಲ್ಲಿ ಗ್ರಂಥಾಲಯ ನಿರ್ಮಿಸಲು ಕ್ರಮ: ಜೆ ಮಂಜುನಾಥ್

    ಅಂಬೇಡ್ಕರ್, ವಾಲ್ಮೀಕಿ ಭವನಗಳಲ್ಲಿ ಗ್ರಂಥಾಲಯ ನಿರ್ಮಿಸಲು ಕ್ರಮ: ಜೆ ಮಂಜುನಾಥ್

    ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವತಿಯಿಂದ ನಿರ್ಮಿಸಿರುವ ಅಂಬೇಡ್ಕರ್ ಭವನ ಹಾಗೂ ಮಹರ್ಷಿ ವಾಲ್ಮೀಕಿ ಭವನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಯುವಜನರಿಗೆ ಸುಸಜ್ಜಿತ ಗ್ರಂಥಾಲಯಗಳನ್ನು ನಿರ್ಮಿಸಿ ನಿರ್ವಹಿಸಲು ಬಿಬಿಎಂಪಿ ಆಯವ್ಯಯದಲ್ಲಿ ಸೇರ್ಪಡೆಗೊಳಿಸುವಂತೆ ಜಿಲ್ಲಾಧಿಕಾರಿ ಜೆ ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.

    ಶುಕ್ರವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಂಜುನಾಥ್ ಮಾತನಾಡಿದರು. ನಗರದ ಬಹುಭಾಗಗಳಲ್ಲಿ ನಿರ್ಮಾಣಗೊಂಡಿರುವ ಅಂಬೇಡ್ಕರ್ ಭವನಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ಸಮರ್ಪಕವಾಗಿ ಉಪಯೋಗವಾಗುತ್ತಿಲ್ಲ. ಈ ಬಗ್ಗೆ ಸಮಿತಿಯ ವತಿಯಿಂದ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿ ಮೂಲಭೂತ ಸೌಕರ್ಯಗಳಿಗೆ ಅನುದಾನ ಮೀಸಲಿಡಲು ಕೋರುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

    ದೌರ್ಜನ್ಯ ಪ್ರಕರಣಗಳ ಸಂಬಂಧ ಬಾಧಿತರು ಪೊಲೀಸ್ ಬಳಿ ಮೊರೆ ಹೋದಾಗ ವಿಳಂಬ ಧೋರಣೆ ತೋರದೆ, ದೂರಿಗೆ ಕೂಡಲೇ ಸ್ವೀಕೃತಿಯನ್ನು ನೀಡಬೇಕು. ದೂರು ದಾಖಲಿಸಲು ಬಂದವರೊಡನೆ ಸೌಜನ್ಯದಿಂದ ನಡೆದುಕೊಳ್ಳುವಂತೆ ಸೂಚಿಸಿದರು.  ಇದನ್ನೂ ಓದಿ: ವಿದ್ಯಾರ್ಥಿಗಳ ರಕ್ಷಣೆ ಯಾವಾಗ?: ಸಿಎಂ ಬಸವರಾಜ ಬೊಮ್ಮಾಯಿಗೆ ನಟಿ ರಮ್ಯಾ ಪ್ರಶ್ನೆ

    ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಿಂಗಳಿಗೆ ಒಮ್ಮೆ ಪರಿಶಿಷ್ಠ ಜಾತಿ, ಪಂಗಡದ ಮುಖಂಡರನ್ನು ಆಹ್ವಾನಿಸಿ ಸಭೆ ನಡೆಸಿ ಸಮಸ್ಯೆಗಳ ಸೂಕ್ತ ಚರ್ಚೆಗೆ ಅವಕಾಶ ಕಲ್ಪಿಸಬೇಕು. ನಿರ್ಧಿಷ್ಟವಾಗಿ ಯಾವ ಠಾಣೆಗಳಲ್ಲಿ ಈ ಸಭೆ ನಡೆಸಲಾಗುತ್ತಿಲ್ಲವೋ ಅವರ ಬಗ್ಗೆ ಸಹಾಯಕ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲು ಸಮಿತಿ ಸದಸ್ಯ ಕಾರ್ಯದರ್ಶಿ ಮತ್ತು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಲಕ್ಷ್ಮಣ್ ರೆಡ್ಡಿಗೆ ಸೂಚಿಸಿದರು.

    ಹರೆಬಿನ್ನಮಂಗಲ, ಜಾಲಹೋಬಳಿ ಹಾಗೂ ಜ್ಯೋತಿಪುರ ಗ್ರಾಮಗಳಲ್ಲಿ ಫಾರಂ 53ರ ಅರ್ಜಿಗಳನ್ನು ದಾಖಲಿಸಿ ಭೂಮಿ ಸಕ್ರಮೀಕರಣಗೊಳಿಸಲು ಮಂಜೂರಾತಿ ಈಗಾಗಲೇ ನೀಡಲಾಗಿದ್ದರೂ ಪ. ಜಾ/ ಪ. ಪಂ ಫಲಾನುಭವಿಗಳಿಗೆ ಮಾತ್ರ ಸಾಗವಳಿ ಚೀಟಿ ವಿತರಿಸಿರುವುದಿಲ್ಲ ಎಂದು ಸಮಿತಿ ಸದಸ್ಯ ಹೆಣ್ಣೂರು ಶ್ರೀನಿವಾಸ್ ಸಭೆಯಲ್ಲಿ ಗಮನಕ್ಕೆ ತಂದರು. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸಿವಂತೆ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು.

    ಕೊಳಚೆ ಅಭಿವೃದ್ಧಿ ಮಂಡಳಿಯ ಹೆಸರನ್ನು ಬದಲಾಯಿಸಲು ಸದಸ್ಯರೆಲ್ಲರೂ ಸಭೆಯ ಅಧ್ಯಕ್ಷರಿಗೆ ಆಗ್ರಹಿಸಿದರು. ಈ ಬಗ್ಗೆ ಸೂಕ್ತ ಪ್ರಾಧಿಕಾರಕ್ಕೆ ಮನವಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಇದನ್ನೂ ಓದಿ: ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ: ಗೋವಿಂದ ಕಾರಜೋಳ

    ದೌರ್ಜನ್ಯ ಪ್ರಕರಣಗಳಲ್ಲಿ ಪ್ರಾಣ ಕಳೆದುಕೊಂಡಂತಹ ಪ.ಜಾ/ ಪ.ಪಂ ದವರ ಕುಟುಂಬದವರಿಗೆ ಅನುಕಂಪಾಧಾರಿತ ಸರ್ಕಾರಿ ನೌಕರಿ ನೀಡುವಲ್ಲಿ ಕೆಲವು ಕಡೆ ಲೋಪ ಕಂಡುಬಂದಿವೆ ಎಂಬ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮಣ್ ರೆಡ್ಡಿ, ಪ್ರಸ್ತುತ 32 ನೊಂದ ಕುಟುಂಬಗಳಿಗೆ ಪ್ರತಿ ತಿಂಗಳು 5,000 ರೂ. ಮಾಸಾಶನವನ್ನು ಕಳೆದ ಒಂದು ವರ್ಷದಿಂದ ಒದಗಿಸಲಾಗುತ್ತಿದೆ ಎಂದರು.

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಗಪ್ಪ, ದಕ್ಷಿಣ ಉಪವಿಭಾಗಾಧಿಕಾರಿ ರಘುನಂದನ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕಿ ಪಲ್ಲವಿ ಹೊನ್ನಾಪುರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

  • ಕೆರೆ ಸರ್ವೆ ಕಾರ್ಯ, ಒತ್ತುವರಿ ತೆರವಿಗೆ ವಿಳಂಬ ಮಾಡಬೇಡಿ: ಡಿಸಿ ಜೆ ಮಂಜುನಾಥ್

    ಕೆರೆ ಸರ್ವೆ ಕಾರ್ಯ, ಒತ್ತುವರಿ ತೆರವಿಗೆ ವಿಳಂಬ ಮಾಡಬೇಡಿ: ಡಿಸಿ ಜೆ ಮಂಜುನಾಥ್

    ಬೆಂಗಳೂರು: ನಗರ, ಜಿಲ್ಲೆ ಕೆರೆಗಳನ್ನು ಶಾಶ್ವತ ಆಸ್ತಿಯನ್ನಾಗಿ ಅಭಿವೃದ್ಧಿಪಡಿಸಿ ನಮ್ಮ ಮುಂದಿನ ಪೀಳಿಗೆಗೆ ಸುರಕ್ಷಿತ ಪರಿಸರ ಉಳಿಸುವುದು ನಮ್ಮ ಜವಾಬ್ದಾರಿ. ಹಾಗಾಗಿ ಜಿಲ್ಲೆಯ ಎಲ್ಲ ಕೆರೆಗಳ ಸರ್ವೆ ಕಾರ್ಯ ಕೈಗೊಂಡು ಒತ್ತುವರಿಯನ್ನು ಕೂಡಲೇ ತೆರವುಗೊಳಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

    ಇಂದು ತಮ್ಮ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಕೆರೆಗಳ ಅಭಿವೃದ್ಧಿ ಕುರಿತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆರೆಗಳ ಸುತ್ತ ಗಡಿ ಗುರುತಿಸಿ, ಅದರ ಸುತ್ತ ಇರುವ ಬಫರ್ ಝೋನ್ ಪ್ರದೇಶದಲ್ಲಿ ಯಾವುದೇ ಕಟ್ಟಡ ಅಥವಾ ಇತರೆ ಕಾಮಗಾರಿಗಳಿಗೆ ಅನುಮತಿ ನೀಡುವಂತ್ತಿಲ್ಲ. ಈ ಬಗ್ಗೆ ಕೂಡಲೇ ಸರ್ವೆ ನಡೆಸಿ ಒತ್ತುವರಿ ಮಾಹಿತಿ ನೀಡುವಂತೆ ಅವರು ಸೂಚಿಸಿದರು.

    ಕೆರೆಗಳಿಗೆ ನೀರು ಪೂರೈಸುವ ರಾಜಕಾಲುವೆಗಳ ಒತ್ತುವರಿಯನ್ನೂ ಸಹ ಕೂಡಲೆ ತೆರವುಗೊಳಿಸಬೇಕು ಎಂದ ಜಿಲ್ಲಾಧಿಕಾರಿಗಳು, ನಾಳೆಯೊಳಗೆ ಈ ಸಂಪೂರ್ಣ ಕಾರ್ಯ ನಿರ್ವಹಿಸಲು ವೇಳಾಪಟ್ಟಿ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲೆಯಲ್ಲಿ ಒಟ್ಟು 836 ಕೆರೆಗಳಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ 204 ಕೆರೆಗಳು, ಸಣ್ಣ ನೀರಾವರಿ ಇಲಾಖೆಗೆ 46 ಕೆರೆಗಳು, ಜಿಲ್ಲಾ ಪಂಚಾಯ್ತಿಗೆ 421, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಐದು ಹಾಗೂ ಅರಣ್ಯ ಇಲಾಖೆ ವ್ಯಾಪ್ತಿಗೆ ಒಂದು ಕೆರೆ ಸೇರುತ್ತದೆ. ಉಳಿದ ಕೆರೆಗಳು ಯಾವ ಇಲಾಖೆಗೆ ಸೇರುತ್ತದೆ ಎಂಬ ಬಗ್ಗೆ ನಿರ್ಧರಿಸಲು ಸಮೀಕ್ಷೆ ನಡೆಸಲು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ಪ್ರವಾಸಿ ಮಾರ್ಗದರ್ಶಿಗಳಿಗೆ 5 ಸಾವಿರ ರೂ. ಕೋವಿಡ್ ಪರಿಹಾರ – ಯೋಗೇಶ್ವರ್

    ಬೆಂಗಳೂರು ಕೇವಲ ಸಿಲಿಕಾನ್ ವ್ಯಾಲಿಯಾಗಿ ಜಾಗತಿಕವಾಗಿ ಬ್ರಾಂಡ್ ಆಗುವುದು ಮಾತ್ರವಲ್ಲ, ಆರೋಗ್ಯಕರ ಪರಿಸರವನ್ನು ನಿವಾಸಿಗಳಿಗೆ ಒದಗಿಸಿ ಜೀವನ ಗುಣಮಟ್ಟವನ್ನು ಉತ್ತಮಗೊಳಿಸುವಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಅವರು ಸೂಚಿಸಿದರು.

    ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಳಿಸಿದಲ್ಲಿ ಕೈಗಾರಿಕೆಗಳಿಗೆ ಅವುಗಳನ್ನು ಅಭಿವೃದ್ಧಿ ಪಡಿಸಲು ನೀಡಲಾಗುವುದು ಎಂದ ಅವರು, ಸರ್ಕಾರದ ಮಟ್ಟದಲ್ಲಿ ಪ್ರತಿ 15 ದಿನಗಳಿಗೊಮ್ಮೆ ಕೆರೆ ಅಭಿವೃದ್ಧಿ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಅನುಷ್ಠಾನ ಇಲಾಖೆಗಳು ಕ್ರಿಯಾಶೀಲರಾಗುವುದು ಅತ್ಯಗತ್ಯ ಎಂದು ತಿಳಿಸಿದರು.

    ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಗಪ್ಪ, ಅಪರ ಜಿಲ್ಲಾಧಿಕಾರಿ ಅನಿತಾ ಲಕ್ಷ್ಮೀ, ಉತ್ತರ ವಿಭಾಗಾಧಿಕಾರಿ ರಂಗನಾಥ್, ದಕ್ಷಿಣ ಉಪವಿಭಾಗಾಧಿಕಾರಿ ಡಾ. ಶಿವಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀನಿವಾಸ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

  • 2025ಕ್ಕೆ ಬೆಂಗಳೂರು ಜಿಲ್ಲೆ ಕ್ಷಯರೋಗ ಮುಕ್ತವಾಗಬೇಕು: ಜೆ ಮಂಜುನಾಥ್

    2025ಕ್ಕೆ ಬೆಂಗಳೂರು ಜಿಲ್ಲೆ ಕ್ಷಯರೋಗ ಮುಕ್ತವಾಗಬೇಕು: ಜೆ ಮಂಜುನಾಥ್

    ಬೆಂಗಳೂರು: ಜಿಲ್ಲೆಯನ್ನು 2025ರ ವೇಳೆಗೆ ಕ್ಷಯ ರೋಗ ಮುಕ್ತ ಜಿಲ್ಲೆಯಾಗಿಸುವುದು ನಮ್ಮ, ನಿಮ್ಮೆಲ್ಲರ ಮುಖ್ಯ ಗುರಿಯಾಗಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

    ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಬೆಂಗಳೂರು ಪೂರ್ವ ತಾಲೂಕಿನ ಕಣ್ಣೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೆ.ಮಂಜುನಾಥ್, ವಿಶ್ವ ಕ್ಷಯರೋಗ ದಿನಾಚರಣೆ ಹಮ್ಮಿಕೊಂಡಿದ್ದು ಇದರ ಮೂಲ ಉದ್ದೇಶ ಕ್ಷಯ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಿ ಈ ರೋಗದ ಬಗ್ಗೆ ಜನರಿಗೆ ಮಾಹಿತಿ ಕೊಡುವುದರ ಜೊತೆಗೆ ವಾಸ್ತವದ ಸ್ಥಿತಿಗತಿಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.

    ಪ್ರಪಂಚದ ರೋಗಿಗಳಲ್ಲಿ ಕಾಲು ಭಾಗದಷ್ಟು ರೋಗಿಗಳು ಭಾರತದ ದೇಶದಲ್ಲಿ ಕಂಡುಬರುತ್ತಾರೆ. 2020 ರ ಟಿಬಿ ವರದಿ ಪ್ರಕಾರ ಭಾರತದಲ್ಲಿ 24.04 ಲಕ್ಷ ರೋಗಿಗಳು ನಿಕ್ಷಯ್ ನಲ್ಲಿ ನೋಂದಣಿ ಆಗಿದ್ದಾರೆ. ದೇಶದಲ್ಲಿ ಶೇಕಡಾ 40 ರಷ್ಟು ಜನರಲ್ಲಿ ಈ ರೋಗಾಣುಗಳಿರುತ್ತವೆ ಎಂದು ಅಂದಾಜಿಸಲಾಗಿದ್ದು, ಪ್ರತಿ ಐದು ನಿಮಷಕ್ಕೆ ಇಬ್ಬರು ಕ್ಷಯ ರೋಗದಿಂದ ಮರಣ ಹೊಂದುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಕ್ಷಯರೋಗ ಪತ್ತೆ ಪ್ರಮಾಣವು ನಮ್ಮ ನಗರ ಜಿಲ್ಲೆಯಲ್ಲಿ ಒಂದು ಲಕ್ಷ ಜನ ಸಂಖ್ಯೆಗೆ 136 ಸರಾಸರಿ ಇದೆ. ಕ್ಷಯ ರೋಗ ಗುಣಪಡಿಸುವಲ್ಲಿ ಶೇ.100 ರಷ್ಟು ಸಾಧನೆಯಾಗಬೇಕು, ಒಂದು ಲಕ್ಷ ಜನ ಸಂಖ್ಯೆಗೆ 10 ಕೇಸ್‍ಗಿಂತ ಕಡಿಮೆ ಪ್ರಮಾಣದಲ್ಲಿ ರೋಗ ಪತ್ತೆಯಾಗುವಂತೆ ಕ್ರಮವಹಿಸಲು ಎಲ್ಲರೂ ಶ್ರಮಿಸಬೇಕಿದೆ. ಅಲ್ಲದೇ, ಈ ರೋಗದಿಂದ ಯಾವುದೇ ಸಾವು ನೋವು ಸಂಭವಿಸದಂತೆ ಎಚ್ಚರ ವಹಿಸುವ ಅಗತ್ಯವಿದೆ. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ರಾತ್ರಿ ವೇಳೆಯಲ್ಲಿ ಜ್ವರ, ಬೆವರುವುದು, ಕಫದಲ್ಲಿ ರಕ್ತ, ತೂಕ ಇಳಿಕೆ, ಹಸಿವಾಗದಿರುವುದು ಇಂತಹ ಯಾವುದೇ ಲಕ್ಷಣಗಳು ಕಂಡುಬಂದರೂ, ಸಾರ್ವಜನಿಕರು ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.

    ಜಿಲ್ಲೆಯು 2025 ರೊಳಗೆ ಕ್ಷಯ ರೋಗ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದ್ದು, ನಮ್ಮ ಮುಂದೆ ದೊಡ್ಡ ಸವಾಲು ಇದೆ. ಈಗಾಗಲೇ, ಬೆಂಗಳೂರು ನಗರ ಜಿಲ್ಲೆಯಲ್ಲಿ 343 ಜನರು ಕ್ಷಯರೋಗದಿಂದ ಬಳಲುತ್ತಿದ್ದಾರೆ ಎಂದು ಗುರುತಿಸಲಾಗಿದ್ದು. ಇಂತವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿ ರೋಗವನ್ನು ಗುಣಪಡಿಸುವುದಲ್ಲದೇ ರೋಗ ಬರುವುದನ್ನು ತಡೆಗಟ್ಟಲೂ ಸಹ ಸಾಧ್ಯವಿದೆ. ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆಗೆ ಹಲವಾರು ವ್ಯವಸ್ಥೆ ಇದ್ದು, ಜಿಲ್ಲಾ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ‘ಸಿಬಿನ್ಯಾಟ್’ ಯಂತ್ರಗಳು ಲಭ್ಯವಿದ್ದು, ಈಗಾಗಲೇ ಕ್ಷಯ ರೋಗಕ್ಕೆ ತುತ್ತಾಗಿರುವ ರೋಗಿಗಳಿಗೆ ಚಿಕಿತ್ಸೆ ಉಚಿತವಾಗಿದ್ದು, ಭಾರತ ಸರ್ಕಾರ ನಿಕ್ಷಯ ಪೋಷಣೆ ಯೋಜನೆಯಡಿಯಲ್ಲಿ ಕ್ಷಯ ರೋಗಕ್ಕೆ ತುತ್ತಾದವರಿಗೆ ಪ್ರತಿ ತಿಂಗಳು ರೂ 500 ಪ್ರೋತ್ಸಾಹ ಧನ ಕೂಡ ನೀಡಲಾಗುವುದು. ಅಷ್ಟೇ ಅಲ್ಲದೆ ಖಾಸಗಿ ಆಸ್ಪತ್ರೆ ಅವರು ಇಂತಹ ಪ್ರಕರಣವನ್ನು ಗುರುತಿಸಿ ವರದಿ ನೀಡಿದರೆ ಅವರಿಗೆ ಸಹ ಒಂದು ಸಾವಿರ ಪ್ರೋತ್ಸಾಹ ಧನ ನೀಡಲಾಗುವುದೆಂದು ಅವರು ತಿಳಿಸಿದರು.

    ಜಿಲ್ಲಾ ಮತ್ತು ಪ್ರಾಥಮಿಕ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಆರೋಗ್ಯ ಜಾಗೃತಿ ನೀಡುವ ಮೂಲಕ ಬೆಂಗಳೂರು ನಗರ ಮಾತ್ರವಲ್ಲದೆ ಒಟ್ಟಾರೆ ಕರ್ನಾಟಕವನ್ನು ಕ್ಷಯ ರೋಗ ಮುಕ್ತ ಮಾಡಲು ಕೈಜೋಡಿಸಬೇಕು. ದೇಶದಲ್ಲಿ ಕರೋನಾ ಸೋಂಕಿನ ಎರಡನೇ ಅಲೆ ತಲೆದೋರುತ್ತಿದ್ದು, ಸೋಂಕು ತಡೆಯುವಲ್ಲಿ ಸಾರ್ವಜನಿಕ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ವಿನಂತಿಸಿಕೊಂಡರು.
    ನಂತರ ಮಾತನಾಡಿದ ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ. ಮಹೇಶ್ ಕುಮಾರ್, ಕ್ಷಯ ರೋಗವನ್ನು ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಬಹುದಾದ ರೋಗವಾಗಿದ್ದು, ಕ್ಷಯ ರೋಗ ಹರಡುವುದನ್ನು ತಡೆಗಟ್ಟಲು, ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸುವ ಅಗತ್ಯವಿದೆ ಎಂದರು.

    ಕ್ಷಯ ರೋಗ ಪತ್ತೆ ಕುರಿತು ಆರೋಗ್ಯ ಇಲಾಖೆಯೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಖಾಸಗಿ ವೈದ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕ್ಷಯ ರೋಗದ ಕುರಿತು ಜಾಗೃತಿ ಮೂಡಿಸುವ ಭಿತ್ತಿ ಪತ್ರವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪೂರ್ವ ತಾಲೂಕಿನ ಆರೋಗ್ಯಾಧಿಕಾರಿಗಳಾದ ಡಾ. ಚಂದ್ರಶೇಖರಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಶ್ರೀನಿವಾಸ ಜಿ.ಎ, ಕಣ್ಣೂರಿನ ಪ್ರಾಥಮಿಕ ಆರೋಗ್ಯಾಧಿಕಾರಿಯಾ ಉಮಾ ರಾಕೇಶ್, ಗ್ರಾ ಪಂ. ಅಧ್ಯಕ್ಷರಾದ ಅಕ್ಕಯ್ಯಮ್ಮ, ಮತ್ತು ಉಪಾಧ್ಯಕ್ಷರು, ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಕಣ್ಣೂರಿನ ಪ್ರಾಥಮಿಕ ಆರೋಗ್ಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.