Tag: Itolizumab

  • ಸಿಹಿ ಸುದ್ದಿ – ಕೊರೊನಾ ಸೋಂಕಿತರಿಗೆ ಬಯೋಕಾನ್‌ ಔಷಧಿ

    ಸಿಹಿ ಸುದ್ದಿ – ಕೊರೊನಾ ಸೋಂಕಿತರಿಗೆ ಬಯೋಕಾನ್‌ ಔಷಧಿ

    ನವದೆಹಲಿ: ಗಂಭೀರ ಪ್ರಮಾಣದ ಉಸಿರಾಟ ತೊಂದರೆಯಿಂದ ಬಳಲುತ್ತಿರುವ ಕೋವಿಡ್‌ 19 ಸೋಂಕಿತರಿಗೆ ಗುಡ್‌ನ್ಯೂಸ್‌. ಬೆಂಗಳೂರಿನ ಬಯೋಕಾನ್‌ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಚರ್ಮರೋಗ ಔಷಧ ‘ಇಟೋಲಿಝುಮಾಬ್‌’ ಇಂಜೆಕ್ಷನ್‌‌ ನೀಡಲು ಕೇಂದ್ರ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದೆ.

    ತುರ್ತು ಸ್ಥಿತಿಯಲ್ಲಿ ಹಾಗೂ ನಿಯಂತ್ರಿತ ಪ್ರಮಾಣದಲ್ಲಿ ಬಳಕೆ ಮಾಡಬೇಕು ಎಂಬ ಷರತ್ತನ್ನು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ವಿಧಿಸಿದೆ. ಬಯೋಕಾನ್‌ ಕಂಪನಿ ಚರ್ಮರೋಗ ಸೋರಿಯಾಸಿಸ್‌ಗೆ ಬಳಸುವ ಈ ಔಷಧವನ್ನು ಉಸಿರಾಟದ ತೊಂದರೆಗೆ ಬಳಸುವ ರೋಗಿಗಳಿಗೆ ನೀಡುವ ಸಂಬಂಧ 2ನೇ ಹಂತದ ಕ್ಲಿನಿಕಲ್‌ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿ, ತನ್ನ ಪ್ರಯೋಗದ ವರದಿಯನ್ನು ಡಿಸಿಜಿಐಗೆ ಸಲ್ಲಿಸಿತ್ತು.

    ಡಿಸಿಜಿಐ ಈ ವರದಿಯನ್ನು ಶ್ವಾಸಕೋಶ, ಔಷಧ ಶಾಸ್ತ್ರ, ಏಮ್ಸ್‌ ತಜ್ಞರ ಸಮಿತಿಗೆ ಪರಿಶೀಲನೆ ನಡೆಸುವಂತೆ ಸೂಚಿಸಿತ್ತು. ತಜ್ಞರಿಂದ ‌ಒಪ್ಪಿಗೆ ಸಿಕ್ಕಿದ ಬಳಿಕ ಕೊರೊನಾ ಸೋಂಕಿತರ ಸಮ್ಮತಿಯ ಮೇರೆಗೆ ಬಳಸಲು ಶುಕ್ರವಾರ ಅನುಮತಿ ನೀಡಿದೆ.

    ಈ ಔಷಧಿಯನ್ನು ಅತಿ ಹೆಚ್ಚು ಸೋಂಕಿತರು ಇರುವ ಮುಂಬೈ ಮತ್ತು ದೆಹಲಿಯಲ್ಲಿ ಪ್ರಯೋಗ ಮಾಡಲಾಗಿತ್ತು.  ಆಸ್ಪತ್ರೆಯಲ್ಲಿನ ಹಲವು ರೋಗಿಗಳ ಮೇಲೆ ಈ ಔಷಧ ಪ್ರಯೋಗಿಸಲಾಗಿದ್ದು ಗುಣಮುಖರಾಗಿದ್ದಾರೆ ಎಂದು ಮುಂಬೈಯ ಬಿವೈಎಲ್ ನಾಯರ್ ಆಸ್ಪತ್ರೆಯ ಡೀನ್ ಡಾ. ಮೋಹನ್ ಜೋಷಿ ತಿಳಿಸಿದ್ದಾರೆ. ದೆಹಲಿಯ ಲೋಕ ನಾಯಕ ಆಸ್ಪತ್ರೆಯಲ್ಲಿ 8 ರೋಗಿಗಳಿಗೆ ಇಟೋಲಿಝುಮಾಬ್‌ ಔಷಧ ನೀಡಲಾಗಿದ್ದು, ಅವರೆಲ್ಲರೂ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.

    ಈ ಬಗ್ಗೆ  ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಪ್ರತಿಕ್ರಿಯಿಸಿ, ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಪಾರಾಗಲು ದೇಶ, ವಿದೇಶಗಳಲ್ಲಿ ಸಂಶೋಧಕರು ನಿರತಂತರ ಸಂಶೋಧನೆ ನಡೆಸುತ್ತಿದ್ದಾರೆ. ಇಟೋಲಿಝುಮಾಬ್‌ ಔಷಧ ನೀಡಿದ ಎಲ್ಲ ರೋಗಿಗಳು ಗುಣಮುಖರಾಗಿದ್ದಾರೆ. ಸಕಾರಾತ್ಮಕ ಪ್ರತಿಕ್ರಿಯೆ ಕಂಡುಬಂದ ಹಿನ್ನೆಲೆಯಲ್ಲಿ ಗಂಭೀರ ಪ್ರಮಾಣದ ಉಸಿರಾಟ ತೊಂದರೆಯಿಂದ ಬಳಲುತ್ತಿರುವ ಸೋಂಕಿತರಿಗೆ ಈ ಔಷಧ ನೀಡಲು ಡಿಸಿಜಿಐ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.

    ಬಯೋಕಾನ್‌ ಕಂಪನಿಯು 2013ರಿಂದಲೂ ಬಯೋಕಾನ್ ಪಾರ್ಕ್ ನಲ್ಲಿ ಈ ಔಷಧವನ್ನು ತಯಾರಿಸುತ್ತದೆ. ಕೊರೊನಾ ಸೋಂಕಿತರಿಗೆ ನೀಡಲಾಗುವ ಇಟೋಲಿಝುಮಾಬ್ ‌ ಔಷಧದ ಬೆಲೆ ಎಷ್ಟು ಎನ್ನುವುದು ತಿಳಿದು ಬಂದಿಲ್ಲ.

    ಈ ವರ್ಷದಲ್ಲೇ ಮೇಡ್ ಇನ್ ಇಂಡಿಯಾ ಕೋವಿಡ್ -19 ಔಷಧಿ ಲಭ್ಯವಾಗಲಿದೆ ಎಂದು ಬಯೋಕಾನ್ ಕಂಪನಿಯ ಆಡಳಿತ ನಿರ್ದೇಶಕಿ ಕಿರಣ್ ಮಜುಂದಾರ್ ಶಾ ಏಪ್ರಿಲ್‌ನಲ್ಲಿ ತಿಳಿಸಿದ್ದರು.

    ಈಗಾಗಲೇ ಎರಡು, ಮೂರು ಸಣ್ಣ ಕಂಪನಿಗಳು ಔಷಧಿ ಅಭಿವೃದ್ಧಿ ಪಡಿಸುತ್ತಿವೆ. ಈ ಕಂಪನಿಗಳು ದೊಡ್ಡ ಕಂಪನಿಗಳ ಸಹಯೋಗದೊಂದಿಗೆ ಔಷಧಿ ತಯಾರಿಸುವ ಕೆಲಸ ಮಾಡುತ್ತಿವೆ. ನಾವು ಔಷಧಿ ನಿರ್ಮಾಣಕ್ಕೆ ಕೈ ಹಾಕಿದ್ದೇವೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.