Tag: it

  • ರೋಚಕ ಕಥೆಯೊಂದಿಗೆ ಮೋಹಕ ಅನುಭವ ನೀಡೋ `ವೀಕೆಂಡ್’!

    ರೋಚಕ ಕಥೆಯೊಂದಿಗೆ ಮೋಹಕ ಅನುಭವ ನೀಡೋ `ವೀಕೆಂಡ್’!

    ಬೆಂಗಳೂರು: ಶೃಂಗೇರಿ ಸುರೇಶ್ ನಿರ್ದೇಶನದ ವೀಕೆಂಡ್ ಚಿತ್ರ ತೆರೆ ಕಂಡಿದೆ. ಬಿಡುಗಡೆಯ ಕಡೆಯ ಕ್ಷಣದಲ್ಲಿ ಈ ಸಿನಿಮಾ ಬಗ್ಗೆ ಗಾಢವಾದೊಂದು ಕುತೂಹಲ ಹುಟ್ಟಿಕೊಂಡಿತ್ತಲ್ಲಾ? ಅದನ್ನು ಎಲ್ಲ ದಿಕ್ಕುಗಳಿಂದಲೂ ತಣಿಸುವಂಥಾ ಎಲಿಮೆಂಟುಗಳೊಂದಿಗೆ, ಆರಂಭದಿಂದ ಕ್ಲೈಮ್ಯಾಕ್ಸ್ ವರೆಗೂ ನೋಡುಗರನ್ನು ಸೆಳೆದಿಟ್ಟುಕೊಂಡು ಸಾಗುವ ವೀಕೆಂಡ್ ಒಂದೊಳ್ಳೆ ಚಿತ್ರವಾಗಿ ಎಲ್ಲರನ್ನೂ ತಾಕಿದೆ. ಸಾಮಾನ್ಯವಾಗಿ ಸಾಮಾಜಿಕ ಸಂದೇಶವನ್ನು ಕಮರ್ಶಿಯಲ್ ಜಾಡಿನಲ್ಲಿಯೇ ಹೇಳೋದು ಅಪರೂಪ. ಆದರೆ ಭರ್ಜರಿ ಕಾಮಿಡಿ, ಆಕ್ಷನ್, ಲವ್ ಸೇರಿದಂತೆ ಎಲ್ಲ ಅಂಶಗಳನ್ನೂ ಒಳಗೊಂಡಿರೋ ವೀಕೆಂಡಿನಲ್ಲಿ ನಮ್ಮ ನಡುವಿದ್ದೂ ನಾವ್ಯಾರೂ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದ ವಿಚಾರಗಳನ್ನು ಪರಿಣಾಮಕಾರಿಯಾಗಿಯೇ ದೃಷ್ಯೀಕರಿಸಲಾಗಿದೆ.

    ಹೊರ ಜಗತ್ತಿನಲ್ಲಿ ಇವರಿಗೇನೂ ಕಮ್ಮಿ ಇಲ್ಲ ಎಂಬಂಥಾ ಇಮೇಜು, ಅದಕ್ಕೆ ಸರಿಯಾಗಿ ರೂಢಿಸಿಕೊಂಡ ಥಳುಕು ಬಳುಕಿನ ಲೈಫ್ ಸ್ಟೈಲ್… ಆದರೆ ಬದುಕಿನ ನೆತ್ತಿಯ ಮೇಲೆ ಸದಾ ನೇತಾಡುತ್ತಲೇ ಇರುವ ಅನಿಶ್ಚಿತತೆಯ ತೂಗುಗತ್ತಿ. ಯಾವುದೇ ಕ್ಷಣದಲ್ಲಿಯಾದರೂ ನೆಚ್ಚಿಕೊಂಡ ಕೆಲಸವನ್ನು ಬಿಟ್ಟು ಬೀದಿಯಲ್ಲಿ ನಿಲ್ಲಬಹುದಾದ ಬದುಕು… ಇದು ಐಟಿ ಬಿಟ ವಲಯದಲ್ಲಿ ಕೆಲಸ ಮಾಡೋರ ಸಾಮಾನ್ಯ ಗೋಳು. ಇಂಥಾ ಅಕ್ಷರಸ್ಥರೇ ಬದುಕಿನ ಅನಿವಾರ್ಯತೆಗೆ ಸಿಕ್ಕಿ ಅಡ್ಡ ದಾರಿ ಹಿಡಿದರೆ, ಕ್ರಿಮಿನಲ್ಲುಗಳಾದರೆ ಅದರ ಪರಿಣಾಮ ಘೋರ. ಇಂಥಾ ವಾಸ್ತವವನ್ನು ಸವರಿಕೊಂಡು ಹೋದಂತೆ ಭಾಸವಾಗುವ ರೋಚಕ ಕಥೆಯನ್ನು ವೀಕೆಂಡ್ ಚಿತ್ರ ಹೊಂದಿದೆ.

    ನಾಯಕ ಅಜೆಯ್ ಸಾಫ್ಟ್‍ವೇರ್ ಕ್ಷೇತ್ರದಲ್ಲಿಯೇ ಕಾರ್ಯ ನಿರ್ವಹಿಸುವಾತ. ಈತನ ಮೇಲೆ ಸಹೋದ್ಯೋಗಿಯೊಬ್ಬಳು ಮೋಹಗೊಂಡಿದ್ದರೆ ಈತ ಮಾತ್ರ ನಾಯಕಿಯ ಹಿಂದೆ ಬಿದ್ದಿರುತ್ತಾನೆ. ಈ ಪ್ರೇಮದ ಹಿನ್ನೆಲೆಯಲ್ಲಿಯೇ ನಿರ್ದೇಶಕರು ಐಟಿ ಬಿಟಿ ಕ್ಷೇತ್ರದ ಅಷ್ಟೂ ವಿಚಾರಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುವ ಜಾಣ್ಮೆ ತೋರಿದ್ದಾರೆ. ಅಲ್ಲಿನ ಕೆಲಸದೊತ್ತಡ, ಸಂಬಳ ಪಡೆಯಲು ಮಾಡಬೇಕಾದ ಅನಿವಾರ್ಯ ಸರ್ಕಸ್ಸುಗಳೆಲ್ಲವನ್ನು ಕೂಡಾ ಮನ ಮುಟ್ಟುವಂತೆ ದೃಷ್ಯದ ಚೌಕಟ್ಟಿಗೆ ಒಗ್ಗಿಸಲಾಗಿದೆ.

    ಇಂಥಾ ಎಲ್ಲ ಸರ್ಕಸ್ಸುಗಳಾಚೆಗೂ ಕೆಲಸ ಕಳೆದುಕೊಂಡಾಗ ಈ ಐಟಿ ಉದ್ಯೋಗಿಗಳ ಬದುಕು ಹೇಗಿರುತ್ತೆ? ಎಂಥೆಂಥಾ ಅವಘಡಗಳು ಸಂಭವಿಸಬಹುದೆಂಬುದನ್ನು ನಿರ್ದೇಶಕರು ರುಚಿಕಟ್ಟಾಗಿಯೇ ನಿರೂಪಿಸಿದ್ದಾರೆ. ಹಾಗಂತ ಈ ಸಿನಿಮಾ ಇಂಥಾ ಒಳತೋಟಿ, ತಲ್ಲಣಗಳಲ್ಲಿಯೇ ಕಳೆದು ಹೋಗಿದೆ ಅಂದುಕೊಳ್ಳಬೇಕಿಲ್ಲ. ಕಾಮಿಡಿ, ಪ್ರೀತಿ ಸೇರಿದಂತೆ ಎಲ್ಲೆಲ್ಲಿ ಯಾವುದನ್ನು ಬೆರೆಸಬೇಕೋ ಅದನ್ನು ಅಚ್ಚುಕಟ್ಟಾಗಿಯೇ ಮಾಡಲಾಗಿದೆ. ಆದ್ದರಿಂದಲೇ ವೀಕೆಂಡ್ ಎಂಬುದು ಸಂಪೂರ್ಣ ಎಂಟರ್‍ಟೈನ್ಮೆಂಟ್ ಪ್ಯಾಕೇಜಿನಂತೆ ಮೂಡಿ ಬಂದಿದೆ. ಒಂದಿಡೀ ಚಿತ್ರ ಇಷ್ಟೊಂದು ಪರಿಣಾಮಕಾರಿಯಾಗಿ ಮೂಡಿ ಬರಲು ಬೇರೇನೇ ಕಾರಣಗಳಿದ್ದರೂ ಅನಂತ್ ನಾಗ್ ಎಂಬ ಮೇರು ನಟ ಈ ಚಿತ್ರದ ಪ್ರಧಾನ ಆಕರ್ಷಣೆ. ಅವರಿಲ್ಲಿ ಸಾಫ್ಟ್‍ವೇರ್ ಮೊಮ್ಮಗನ ತಾತನಾಗಿ, ತಪ್ಪಾದಾಗ ತಿದ್ದುವ ಹಿರಿಯನ ಪಾತ್ರವನ್ನು ಎಂದಿನಂತೆಯೇ ಮನಸೂರೆಗೊಳ್ಳುವಂತೆ ನಿರ್ವಹಿಸಿದ್ದಾರೆ.

    ವಿಶೇಷವೆಂದರೆ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಮಂಜುನಾಥ್ ಡಿ ಅವರೇ ಪೊಲೀಸ್ ಅಧಿಕಾರಿಯಾಗಿಯೂ ಅಬ್ಬರಿಸಿದ್ದಾರೆ. ಈ ಪಾತ್ರವೂ ಸೇರಿದಂತೆ ಗೋಪಿನಾಥ್ ಭಟ್, ರಘು ನೀನಾಸಂ ಸೇರಿದಂತೆ ಎಲ್ಲ ಪಾತ್ರಗಳೂ ಮನಮುಟ್ಟುವಂತಿವೆ. ಮಿಲಿಂದ್ ಮತ್ತು ಸಂಜನಾ ಬುರ್ಲಿ ಕೂಡಾ ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಶಶಿಧರ್ ಅವರ ಛಾಯಾಗ್ರಹಣ ಕಥೆಗೆ ಹೊಸಾ ಓಘವನ್ನೇ ನೀಡಿದೆ. ಹೀಗೆ ಕಮರ್ಶಿಯಲ್ ವೇನಲ್ಲಿ ರೋಚಕವಾದ ಕಥೆ ಹೇಳೋ ಈ ಚಿತ್ರ ಮನಮಿಡಿಯುವಂಥಾ ಒಂದು ಸಂದೇಶವನ್ನೂ ರವಾನಿಸುತ್ತದೆ. ಇಡೀ ಸಿನಿಮಾ, ಶ್ರಮ ಸಾರ್ಥಕ ಅನ್ನಿಸೋದು ಈ ಕಾರಣದಿಂದಲೇ. ಒಟ್ಟಾರೆಯಾಗಿ ವೀಕೆಂಡ್ ಒಂದೊಳ್ಳೆ ಚಿತ್ರ ನೋಡಿದ ಖುಷಿಯನ್ನು ನೋಡುಗರೆಲ್ಲರ ಮನಸಿಗಿಳಿಯುವಂತೆ ಮಾಡುತ್ತದೆ.

    ರೇಟಿಂಗ್: 3.5/5 

  • ಟೆಕ್ಕಿಗಳ ಮನೋಲೋಕ ಅನಾವರಣಗೊಳಿಸಲಿರೋ ವೀಕೆಂಡ್!

    ಟೆಕ್ಕಿಗಳ ಮನೋಲೋಕ ಅನಾವರಣಗೊಳಿಸಲಿರೋ ವೀಕೆಂಡ್!

    ಸುರೇಶ್ ಶೃಂಗೇರಿ ನಿರ್ದೇಶನ ಮಾಡಿರುವ ವೀಕೆಂಡ್ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಮಿಲಿಂದ್ ಮತ್ತು ಸಂಜನಾ ಬುರ್ಲಿ ನಾಯಕ ನಾಯಕಿಯರಾಗಿ ನಟಿಸುತ್ತಿರೋ ಈ ಚಿತ್ರದಲ್ಲಿ ಅನಂತ್ ನಾಗ್ ಪ್ರಧಾನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಈ ಸಿನಿಮಾ ಬಗ್ಗೆ ಈ ಪಾಟಿ ಕ್ರೇಜ್ ಹುಟ್ಟಿಕೊಂಡಿರೋದರ ಹಿಂದೆ ಅನಂತ್ ಪಾತ್ರದ ವೈಶಿಷ್ಟ್ಯವೂ ಸೇರಿಕೊಂಡಿದೆ.

    ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ಡಿ ಅವರು ನಿರ್ಮಾಣ ಮಾಡಿರೋ ಚಿತ್ರ ವೀಕೆಂಡ್. ಇದೊಂದು ಯುವ ಆವೇಗವನ್ನು ಒಳಗೊಂಡಿರುವ, ಈ ಮೂಲಕವೇ ಸಾಮಾಜಿಕ ಕಾಳಜಿಯನ್ನೂ ಕೂಡಾ ಪ್ರಚುರಪಡಿಸೋ ಪಕ್ಕಾ ಕಮರ್ಶಿಯಲ್ ಚಿತ್ರ. ಹೊಸ ತಂತ್ರಜ್ಞಾನ, ಹೊಸ ಬಗೆಯ ನಿರೂಪಣೆಯೊಂದಿಗೆ ವೀಕೆಂಡ್ ಬೇರೆಯದ್ದೇ ರೀತಿಯಲ್ಲಿ ಪ್ರೇಕ್ಷಕರಿಗೆಲ್ಲ ಮಜಾ ಕೊಡುವಂತೆ ಮೂಡಿ ಬಂದಿದೆಯಂತೆ.

    ಇಲ್ಲಿ ಸಾಫ್ಟ್‍ವೇರ್ ಉದ್ಯೋಗಿಗಳ ಜಗತ್ತನ್ನು ಕಣ್ಣಿಗೆ ಕಟ್ಟಿದಂತೆ ಅನಾವರಣಗೊಳಿಸಲಾಗಿದೆಯಂತೆ. ಹೇಳಿ ಕೇಳಿ ಐಟಿ ವಲಯದ ಮಂದಿಗೆ ಈ ವೀಕೆಂಡ್ ಮೋಜು ಮಸ್ತಿ ಅನ್ನೋದು ಫೇವರಿಟ್ ಅಂಶ. ಆದರೆ ಅಳತೆ ಮೀರಿದರೆ ವೀಕೆಂಡ್ ಮಸ್ತಿ ಎಂಬುದು ಭೀಕರ ಅನಾಹುತಗಳಿಗೂ ಕಾರಣವಾಗಿ ಬಿಡುತ್ತದೆ. ಅಂಥಾ ಅಂಶಗಳನ್ನು ಫ್ಯಾಮಿಲಿ ಸೆಂಟಿಮೆಂಟಿನ ಸುತ್ತ ಬೆಸೆದು ರೋಚಕವಾದ ಕಥೆಯ ಮೂಲಕ ಈ ಚಿತ್ರವನ್ನು ಅಣಿಗೊಳಿಸಲಾಗಿದೆ.

    ಈ ಚಿತ್ರದಲ್ಲಿ ಅನಂತ್ ನಾಗ್ ನಾಯಕನ ತಾತನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರದ್ದು ಯುವ ಸಮೂಹವನ್ನು ಸರಿ ದಾರಿಗೆ ತರುವ, ತನ್ನ ಮೊಮ್ಮಗನನ್ನು ಎಲ್ಲ ಎಡವಟ್ಟುಗಳಿಂದ ಪಾರುಗಾಣಿಸೋ ಪಾತ್ರ. ಮಿಲಿಂದ್ ಮತ್ತು ಸಂಜನಾ ಬುರ್ಲಿ ಈ ಚಿತ್ರದಲ್ಲಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ.

  • ವೀಕೆಂಡ್ ಹಾಡುಗಳ ಹಂಗಾಮಾ!

    ವೀಕೆಂಡ್ ಹಾಡುಗಳ ಹಂಗಾಮಾ!

    ಬೆಂಗಳೂರು: ಹಾಡುಗಳೇ ಚಿತ್ರವೊಂದರ ಆಹ್ವಾನ ಪತ್ರಿಕೆ ಇದ್ದಂತೆ ಎಂಬ ಮಾತಿದೆ. ಆದ್ದರಿಂದಲೇ ಹಾಡುಗಳು ಗೆದ್ದರೆ ಚಿತ್ರಕ್ಕೂ ಗೆಲುವು ಗ್ಯಾರೆಂಟಿ ಎಂಬ ನಂಬಿಕೆ. ಇದಕ್ಕೆ ತಕ್ಕುದಾಗಿಯೇ ಹಾಡುಗಳು ಹಿಟ್ ಆದರೆ ಆ ಸಿನಿಮಾ ಕೂಡಾ ಹಿಟ್ ಆಗುತ್ತದೆ ಎಂಬ ನಂಬಿಕೆಯೂ ಗಾಂಧಿನಗರದಲ್ಲಿದೆ. ಇದು ಬಹುತೇಕ ಸತ್ಯವೂ ಹೌದು. ಈ ನಿಟ್ಟಿನಲ್ಲಿ ನೋಡ ಹೋದರೆ ಈ ವಾರ ಬಿಡುಗಡೆಗೆ ರೆಡಿಯಾಗಿರೋ ವೀಕೆಂಡ್ ಚಿತ್ರದ ಗೆಲುವು ನಿಚ್ಚಳವಾಗಿದೆ.

    ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ಡಿ ಅವರು ನಿರ್ಮಾಣ ಮಾಡಿರೋ ಈ ಚಿತ್ರವನ್ನು ಶೃಂಗೇರಿ ಸುರೇಶ್ ನಿರ್ದೇಶನ ಮಾಡಿದ್ದಾರೆ. ಈಗ್ಗೆ ಮೂರು ದಶಕಗಳಿಂದೀಚೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿರೋ ಸುರೇಶ್ ಅವರು ಈಗಿನ ಯುವ ಸಮುದಾಯದ ತಲ್ಲಣಗಳನ್ನು ಸಾಮಾಜಿಕ ಕಾಳಜಿಯೊಂದಿಗೆ ಕಮರ್ಷಿಯಲ್ ವೇನಲ್ಲಿ ಈ ಮೂಲಕ ದೃಷ್ಯೀಕರಿಸಿದ್ದಾರೆ.

    ಈ ಚಿತ್ರ ಹಾಡುಗಳು ಮತ್ತು ಟ್ರೈಲರ್ ಮೂಲಕವೇ ಜನಮಾನಸಕ್ಕೆ ಹತ್ತಿರಾಗಿದೆ. ಅದರಲ್ಲಿಯೂ ಹಾಡುಗಳಂತೂ ನವೀನ ರೀತಿಯಲ್ಲಿ ಪ್ರೇಕ್ಷಕರನ್ನು ತಲುಪಿಕೊಂಡಿವೆ. ಶ್ರೀಲಂಕಾ ಮೂಲದ ಮನೋಜ್ ಸಂಗೀತ ನಿರ್ದೇಶನದಲ್ಲಿ ಈ ಸಿನಿಮಾದ ಮೂರು ಹಾಡುಗಳು ಮೂಡಿ ಬಂದಿವೆ. ಅನನ್ಯಾ ಭಟ್ ಹಾಡಿರೋ ಐಲಾ ಐಲಾ ಎಂಬ ಪಾರ್ಟಿ ಸಾಂಗ್ ಅಂತೂ ಹೊಸಾ ಕ್ರೇಜ್ ಸೃಷ್ಟಿಸಿ ಬಿಟ್ಟಿದೆ.

    ಈ ಚಿತ್ರದಲ್ಲಿ ಮಿಲಿಂದ್ ಮತ್ತು ಸಂಜನಾ ಬುರ್ಲಿ ನಾಯಕ ನಾಯಕಿಯರಾಗಿ ಅಭಿನಯಿಸಿದ್ದಾರೆ. ಶಶಿಧರ್ ಛಾಯಾಗ್ರಹಣ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ, ಮನೋಜ್ ಸಂಗೀತ ಹಾಗೂ ಅನಂತ್ ನಾಗ್, ಮಂಜುನಾಥ್, ನೀನಾಸಂ ರಘು, ಬ್ಯಾಂಕ್ ಸತೀಶ್, ನೀತು ಬಾಲಾ, ವೀಣಾ ಜಯಶಂಕರ್, ಸಂಜಯ್ ನಾಗೇಶ್, ಮಂಜುನಾಥ ಶಾಸ್ತ್ರಿ, ಗೋಪಿನಾಥ್ ಭಟ್, ನಾಗಭೂಷಣ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

  • ವೀಕೆಂಡ್ ಬಗ್ಗೆ ಅನಂತ್ ನಾಗ್ ಹೇಳಿದ್ದೇನು?

    ವೀಕೆಂಡ್ ಬಗ್ಗೆ ಅನಂತ್ ನಾಗ್ ಹೇಳಿದ್ದೇನು?

    ಹಿರಿಯ ನಟ ಅನಂತ್ ನಾಗ್ ಒಂದು ಸಿನಿಮಾವನ್ನು ಒಪ್ಪಿಕೊಳ್ಳಲು ಅನುಸರಿಸೋ ರೀತಿ ರಿವಾಜುಗಳ ಬಗ್ಗೆ ಚಿತ್ರರಂಗದ ಮಂದಿಗೆ ಸ್ಪಷ್ಟವಾದ ಅಂದಾಜಿರುತ್ತದೆ. ತಮ್ಮ ಪಾತ್ರ ಮಾತ್ರವಲ್ಲ, ಇಡೀ ಕಥೆಯ ಇಂಚಿಂಚನ್ನೂ ಅಳೆದೂ ತೂಗಿದ ನಂತರವಷ್ಟೇ ಅವರು ಒಪ್ಪಿಗೆ ಸೂಚಿಸುತ್ತಾರೆ. ಆದರೆ ಅದು ತುಂಬಾ ಕಷ್ಟದ ಕೆಲಸ. ಅಂಥಾದ್ದರಲ್ಲಿ ಸ್ಕ್ರಿಪ್ಟ್ ನೋಡಿಯೇ ಅನಂತ್ ನಾಗ್ ಮೆಚ್ಚಿಕೊಳ್ಳುತ್ತಾರೆಂದರೆ ಅದು ಯಾವ ಚಿತ್ರಕ್ಕಾದರೂ ಗೆಲುವಿನ ಸ್ಪಷ್ಟ ಸೂಚನೆ. ಈ ವಾರ ಬಿಡುಗಡೆಗೆ ಅಣಿಯಾಗಿರುವ ವೀಕೆಂಡ್ ಚಿತ್ರ ಖುದ್ದು ಅನಂತ್ ನಾಗ್ ಅವರಿಂದಲೇ ಮೆಚ್ಚಿಗೆ ಗಳಿಸಿಕೊಂಡಿತ್ತೆಂಬುದು ನಿಜವಾದ ವಿಶೇಷ.

    ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ಡಿ ನಿರ್ಮಾಣ ಮಾಡಿರೋ, ಶೃಂಗೇರಿ ಸುರೇಶ್ ನಿರ್ದೇಶನದ ವೀಕೆಂಡ್ ಟೆಕ್ಕಿಗಳ ಜಗತ್ತಿನ ಸುತ್ತ ನಡೆಯೋ ಕಥಾ ಹಂದರ ಹೊಂದಿರೋ ಚಿತ್ರ. ಇದರಲ್ಲಿ ಅನಂತ್ ನಾಗ್ ಟೆಕ್ಕಿಯ ತಾತನಾಗಿ ನಟಿಸಿದ್ದಾರೆ. ಸಾಮಾನ್ಯವಾಗಿ ಎಲ್ಲವನ್ನೂ ನೇರ ನಿಷ್ಠುರವಾಗಿಯೇ ಹೇಳಿ ಬಿಡುವ ಸ್ವಭಾವದ ಅನಂತ್, ವೀಕೆಂಡ್ ಬಗ್ಗೆ ಮಾತ್ರ ಮೆಚ್ಚಿಕೊಂಡು ಭೇಷ್ ಅಂದಿದ್ದಾರೆಂದರೆ ಈ ಚಿತ್ರದ ಬಗ್ಗೆ ಯಾರಿಗಾದರೂ ಒಲವು ಮೂಡದಿರಲು ಸಾಧ್ಯವಿಲ್ಲ.

    ಆರಂಭದಲ್ಲಿ ಈ ಚಿತ್ರದ ಸ್ಕ್ರಿಪ್ಟ್ ಪಡೆದು ಎರಡೆರಡು ಸಲ ಓದಿಕೊಂಡಿದ್ದ ಅನಂತ್ ನಾಗ್ ಖುಷಿಯಿಂದಲೇ ಡೇಟ್ಸ್ ಕೊಟ್ಟಿದ್ದರಂತೆ. ಜೊತೆಗೆ ಕಥೆ ತುಂಬಾ ಚೆನ್ನಾಗಿದೆ ಎಂಬ ಮೆಚ್ಚುಗೆಯ ಮಾತುಗಳನ್ನೂ ಆಡಿದ್ದರಂತೆ. ಬಳಿಕ ಹಿರಿಯರಾಗಿ ಚಿತ್ರತಂಡಕ್ಕೆ ಹುರುಪು ತುಂಬುತ್ತಲೇ ಚಿತ್ರೀಕರಣ ಮುಗಿಸಿಕೊಂಡ ಕ್ಷಣದಲ್ಲಿ ಸ್ಕ್ರಿಪ್ಟ್‍ಗಿಂತಲೂ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಅಂತ ನಿರ್ದೇಶಕರ ಬೆನ್ತಟ್ಟಿದ್ದರಂತೆ. ಅನಂತ್ ನಾಗ್ ಅವರ ಮೆಚ್ಚುಗೆಯ ಮಾತುಗಳೇ ಈ ಚಿತ್ರದ ಗೆಲುವಿನ ಮುನ್ಸೂಚನೆಯಂತೆ ಕಾಣಿಸುತ್ತಿದೆ.

    ಹೀಗೆ ಆರಂಭಿಕವಾಗಿಯೇ ಅನಂತ್ ನಾಗ್ ಅವರಿಂದ ಮೆಚ್ಚಿಗೆ ಗಳಿಸಿಕೊಂಡಿದ್ದ ವೀಕೆಂಡ್ ಈ ವಾರ ಬಿಡುಗಡೆಗೊಳ್ಳುತ್ತಿದೆ. ಯುವ ಮನಸುಗಳ ವೀಕೆಂಡ್ ಎಂಬ ಆವೇಗದ ಸುತ್ತಾ ಹೊಸೆದಿರೋ ಚೆಂದದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಇದುವರೆಗೂ ಈ ಚಿತ್ರದ ಬಗ್ಗೆ ಹಬ್ಬಿಕೊಂಡಿರೋ ಕುತೂಹಲಗಳಿಗೆಲ್ಲ ಈ ವಾರವೇ ಸ್ಪಷ್ಟ ಉತ್ತರ ಸಿಗಲಿದೆ.

  • ಆಟೋ ಕುಬೇರನ ಕೋಟಿ ಆಸ್ತಿಯ ರಹಸ್ಯ ಕೊನೆಗೂ ಬಯಲು!

    ಆಟೋ ಕುಬೇರನ ಕೋಟಿ ಆಸ್ತಿಯ ರಹಸ್ಯ ಕೊನೆಗೂ ಬಯಲು!

    ಬೆಂಗಳೂರು: ನಗರದ ಆಟೋ ಚಾಲಕನ ಮನೆ ಮೇಲಿನ ಐಟಿ ರೇಡ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ವಿಚಾರಣೆ ವೇಳೆ ಸುಬ್ರಮಣಿಯ ಇಂಟ್ರೆಸ್ಟಿಂಗ್ ಕಹಾನಿ ಬಯಲಾಗಿದೆ.

    ಏಪ್ರಿಲ್ 16ರಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಆಟೋ ಡ್ರೈವರ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ರ, ದಾಖಲೆಗಳು ಲಭ್ಯವಾಗಿತ್ತು. ಸದ್ಯ ಈ ಆಸ್ತಿಗಳ ವಿವರ ಒಟ್ಟು 1 ಕೋಟಿ 60 ಲಕ್ಷ ಎಂದು ಅಂದಾಜಿಸಲಾಗಿತ್ತು. ತನಿಖೆಯ ವೇಳೆ ಇಷ್ಟೊಂದು ಸಂಪತ್ತಿಗೆ ಅಮೆರಿಕ ಮಹಿಳೆ ಕಾರಣ ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    ರೋಚಕ ಕಥೆ:
    ಸುಬ್ರಮಣಿ ಕಳೆದ ಎಂಟು ವರ್ಷಗಳ ಹಿಂದೆ ಆಟೋ ಓಡಿಸಿಕೊಂಡಿದ್ದು, ವೈಟ್ ಫೀಲ್ಡ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದನು. ಒಂದು ದಿನ ವಿದೇಶಿ ಮಹಿಳೆ  ವೈಟ್ ಫೀಲ್ಡ್ ಗೆ ಬಂದಿಳಿದಿದ್ದರು. ಈ ವೇಳೆ ಆಟೋ ಓಡಿಸುತ್ತಿದ್ದ ಸುಬ್ರಮಣಿ ಅವರನ್ನು ತನ್ನ ಆಟೋದಲ್ಲಿ ವಿಲ್ಲಾಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಚಾಲಕ ಸುಬ್ರಮಣಿ ತನ್ನ ಮಾತು, ನಡುವಳಿಕೆಯಿಂದ ಮಹಿಳೆಯ ಮನಗೆದ್ದಿದ್ದನು.

    ಇದಾದ ನಂತರ ಮಹಿಳೆಯ ಎಲ್ಲ ಕೆಲಸಗಳಿಗೂ ಇದೇ ಸುಬ್ರಮಣಿಯನ್ನು ಕರೆದುಕೊಂಡು ಹೋಗುತ್ತಿದ್ದರು. ಏಕಾಂಗಿಯಾಗಿದ್ದ ವಿದೇಶಿ ಮಹಿಳೆಗೆ 80 ವರ್ಷ ವಯಸ್ಸಾಗಿರಬಹದು ಎಂದು ಸ್ಥಳೀಯರಿಂದ ಮಾಹಿತಿ ಲಭಿಸಿದೆ. ಈಗಲೂ ಎರಡು ಆಟೋಗಳನ್ನ ಬಾಡಿಗೆಗೆ ನೀಡಿರುವ ಸುಬ್ರಮಣಿ ಎರಡು ಕಾರುಗಳು ಹೊಂದಿದ್ದು, ಒಂದು ಕಾರು ಸ್ವಂತಕ್ಕೆ ಮತ್ತೊಂದು ಕಾರು ಬಾಡಿಗೆಗೆ ಬಿಟ್ಟಿದ್ದಾನೆ.

    ಆಟೋ ಚಾಲಕ ಸುಬ್ರಮಣಿ ಮತ್ತು ವಿದೇಶಿ ಮಹಿಳೆ 2013ರಲ್ಲಿ ವಿಲ್ಲಾ ಬಾಡಿಗೆಗೆ ಎಂದು ಬಂದಿದ್ದರು. ಸುಮಾರು ಎರಡು ವರ್ಷಗಳ ಕಾಲ ತಿಂಗಳಿಗೆ 30 ಸಾವಿರ ಬಾಡಿಗೆ ಕಟ್ಟುತ್ತಿದ್ದರು. ನಂತರ 2015ರಲ್ಲಿ ವಿಲ್ಲಾ ಖರೀದಿಗೆ ಇಬ್ಬರು ಮುಂದಾಗಿದ್ದಾರೆ. ಆ ವೇಳೆ 1 ಕೋಟಿ 60 ಲಕ್ಷಕ್ಕೆ ವಿಲ್ಲಾ ಖರೀದಿ ಮಾಡಿದ್ದಾರೆ. ಪ್ರತಿಹಂತದಲ್ಲೂ ಹತ್ತು ಲಕ್ಷದ ಚೆಕ್‍ಗಳ ಮೂಲಕ ಹಣ ನೀಡಿದ್ದಾರೆ. ಸುಬ್ರಮಣಿ ಮೊದಲಿಗೆ ಆಟೋ ಓಡಿಸುತ್ತಿದ್ದನು. ಈಗ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.

    ವಿದೇಶಿ ಮಹಿಳೆ ಮದುವೆಯಾಗಿಲ್ಲ ಒಂಟಿಯಾಗಿದ್ದಾರೆ. ಅವರೇ ಹಣ ಕೊಟ್ಟು ವಿಲ್ಲಾ ಖರೀದಿ ಮಾಡಿದ್ದರು. ಮೊದಲ ಹಂತದಲ್ಲಿ ಸುಬ್ರಮಣಿ ವಾಸವಾಗಿದ್ದು, ಎರಡನೇ ಹಂತದಲ್ಲಿ ವಿದೇಶಿ ಮಹಿಳೆ ವಾಸವಾಗಿದ್ದಾರೆ. ವಿದೇಶಿ ಮಹಿಳೆ ಹೊರಗಡೆ ಓಡಾಡುವುದು ತುಂಬಾ ಕಡಿಮೆ. ಹೀಗಾಗಿ ಸುಬ್ರಮಣಿ ಎಲ್ಲ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಎನ್ನುವ ಮಾಹಿತಿ ತಿಳಿದು ಬಂದಿದೆ.

    ಏಪ್ರಿಲ್ 16ರಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದು, ಸದ್ಯಕ್ಕೆ ವಿಲ್ಲಾ ಖರೀದಿ ಮಾಡಿದ್ದು ಯಾವಾಗ? ಎಷ್ಟು ಹಣಕ್ಕೆ ಖರೀದಿ ಮಾಡಿದ್ರು, ನಗದು ಅಥವಾ ಚೆಕ್ ಮೂಲಕ ಹಣ ನೀಡಿದ್ರಾ? ಅನ್ನೋದರ ಬಗ್ಗೆ ವಿವರಣೆ ನೀಡುವಂತೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

  • ಆಟೋ ಡ್ರೈವರ್ ಮನೆ ಮೇಲೆ ಐಟಿ ದಾಳಿ – ಬೆಳಕಿಗೆ ಬಂತು ಸ್ಫೋಟಕ ಮಾಹಿತಿ

    ಆಟೋ ಡ್ರೈವರ್ ಮನೆ ಮೇಲೆ ಐಟಿ ದಾಳಿ – ಬೆಳಕಿಗೆ ಬಂತು ಸ್ಫೋಟಕ ಮಾಹಿತಿ

    ಬೆಂಗಳೂರು: ಏಪ್ರಿಲ್ 16ರಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಆಟೋ ಡ್ರೈವರ್ ಮನೆ ಮೇಲೆ ದಾಳಿ ನಡೆಸಿದ್ದರು. ಸುಮಾರು 4 ತಾಸುಗಳ ಕಾಲ ದಾಳಿಯನ್ನ ಮಾಡಿದ್ದ ಬಳಿಕ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

    ವೈಟ್ ಫೀಲ್ಡ್ ನಿವಾಸಿ ಸುಬ್ರಮಣಿ ಮನೆಯ ಮೇಲೆ ಐಟಿ ದಾಳಿ ನಡೆದಿತ್ತು. ಈ ವೇಳೆ ಈತ ವಿದೇಶಿ ಮೂಲದ ಮಹಿಳೆಗೆ ಬೇನಾಮಿಯಾಗಿದ್ದನು ಎಂಬುದು ಸ್ಪಷ್ಟವಾಗಿದೆ. ವಿದೇಶಿ ಮಹಿಳೆಯೊಬ್ಬರಿಗೆ ಸುಬ್ರಮಣಿ ಬೇನಾಮಿಯಾಗಿದ್ದಾರೆ ಎಂದು ಐಟಿ ಇಲಾಖೆಗೆ ದೂರು ಹೋಗಿತ್ತು. ಈ ಹಿನ್ನೆಲೆಯಲ್ಲಿ ಸುಬ್ರಮಣಿ ವಿಲ್ಲಾ ಖರೀದಿ ಕುರಿತು ಅಧಿಕಾರಿಗಳು ಐಟಿ ಕಾಯ್ದೆ 21(1) ಅಡಿ ಮಾಹಿತಿ ಕೇಳಿದ್ದರು. ಅದಕ್ಕೆ ಸುಬ್ರಮಣಿ ಸರಿಯಾದ ದಾಖಲೆ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಐಟಿ ಇಲಾಖೆಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

    ವಿದೇಶಿ ಮಹಿಳೆ:
    ಆಟೋ ಚಾಲಕ ಸುಬ್ರಮಣಿಗೆ ವಿದೇಶಿ ಮೂಲದ ಮಹಿಳೆಯ ಪರಿಚಯವಾಗಿತ್ತು. ಇತ್ತ ವಿದೇಶಿ ಮಹಿಳೆ ಭಾರತದಲ್ಲಿ ಆಸ್ತಿ ಖರೀದಿ ಮಾಡುವ ಉದ್ದೇಶವನ್ನು ಹೊಂದಿದ್ದರು. ಆಗ ಈತ ನನಗೆ ರಾಜಕೀಯ ನಾಯಕರು ಪರಿಚಯ ಇದ್ದಾರೆ. ನನ್ನ ಮೇಲೆ ಐಟಿ ಅಧಿಕಾರಿ ದಾಳಿ ಮಾಡಲ್ಲ ಎಂದು ಮಹಿಳೆಗೆ ನಂಬಿಸಿರಬಹುದು ಎಂದು ಅನುಮಾನು ವ್ಯಕ್ತವಾಗಿದೆ. ನಂತರ ಮಹಿಳೆ ಆಟೋ ಚಾಲಕನ ಹೆಸರಿನಲ್ಲಿ ಆಸ್ತಿ ಖರೀದಿ ಮಾಡಿದ್ದಾಳೆ. ವಿದೇಶದಿಂದ ಆಕೆ ಬ್ಯಾಂಕ್ ಮೂಲಕ ಹಣ ವರ್ಗಾವಣೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಮಹಿಳೆ ಕಳುಹಿಸಿದ ಹಣದಿಂದ ಸುಬ್ರಮಣಿ ವಿಲ್ಲಾ ಖರೀದಿ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

    ಐಟಿ ದಾಳಿ:
    ಸುಬ್ರಮಣಿ ಲಕ್ಸುರಿ ವಿಲ್ಲಾ ಮೇಲೆ ರೇಡ್ ಮಾಡಿರುವ ಅಧಿಕಾರಿಗಳು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ರ, ದಾಖಲೆಗಳು ಲಭ್ಯವಾಗಿವೆ. ಸದ್ಯ ಈ ಆಸ್ತಿಗಳ ವಿವರ ಒಟ್ಟು 1 ಕೋಟಿ 60 ಲಕ್ಷ ಎಂದು ಅಂದಾಜಿಸಲಾಗಿದೆ. ಇನ್ನೂ ಈ ಖತರ್ನಾಕ್ ಸುಬ್ರಮಣಿ ಎಂಎಲ್‍ಎ ಅರವಿಂದ್ ಲಿಂಬಾಳಿಯ ಆಪ್ತ ಎನ್ನಲಾಗಿತ್ತು. ಅದಕ್ಕೆ ಪೂರಕ ಎಂಬಂತೆ ಈತ ಅವರ ಜೊತೆ ಇರುವ ಫೋಟೋಗಳು ಹರಿದಾಡುತ್ತಿವೆ.

    ಆಟೋ ಡ್ರೈವರ್ ಗೂ ನನಗೂ ಸಂಬಂಧವಿಲ್ಲ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನನ್ನ ಜೊತೆ ಫೋಟೋ ತೆಗೆಸಿಕೊಂಡಿರುವುದು ಬಿಟ್ಟರೆ ಅವರು ನಮ್ಮ ಕಾರ್ಯಕರ್ತರಲ್ಲ ಎಂದು ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಸ್ಪಷ್ಟಪಡಿಸಿದ್ದಾರೆ.

    ದಾಳಿ ಬಳಿಕ ಸುಬ್ರಮಣಿಗೆ ಐಟಿ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಸಿಕ್ಕಿರುವ ದಾಖಲೆಗಳಿಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ.

  • ಒಂದೇ ಕಡೆ 20 ಕೋಟಿ ಹಣ ಜಪ್ತಿ – ಸಿಮೆಂಟ್ ಚೀಲ, ಬಾಕ್ಸ್‌ಗಳಲ್ಲಿ ದುಡ್ಡೋ ದುಡ್ಡು

    ಒಂದೇ ಕಡೆ 20 ಕೋಟಿ ಹಣ ಜಪ್ತಿ – ಸಿಮೆಂಟ್ ಚೀಲ, ಬಾಕ್ಸ್‌ಗಳಲ್ಲಿ ದುಡ್ಡೋ ದುಡ್ಡು

    – ಲೋಕ ಕಣದಲ್ಲಿ ಝಣ ಝಣ ಕಾಂಚಾಣ

    ಚೆನ್ನೈ: ಆದಾಯ ತೆರಿಗೆ ಅಧಿಕಾರಿಗಳು ಇಂದು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಡಿಎಂಕೆ ಮುಖಂಡರೊಬ್ಬರಿಗೆ ಸೇರಿದ್ದ ಸಿಮೆಂಟ್ ಗೋಡೌನ್ ಮೇಲೆ ದಾಳಿ ಮಾಡಿದ್ದು, ಬರೋಬ್ಬರಿ 20 ಕೋಟಿಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದ್ದಾರೆ.

    ಲೋಕಸಭಾ ಕ್ಷೇತ್ರದ ಡಿಎಂಕೆ ಅಭ್ಯರ್ಥಿಯಾಗಿ ಕ್ಯಾಥೀರ್ ಆನಂದ್ ಸ್ಪರ್ಧಿಸಿದ್ದಾರೆ. ಅವರ ಗೆಲುವಿಗಾಗಿ ಮತದಾರರಿಗೆ ವಿತರಣೆ ಮಾಡಲು ಹಣವನ್ನು ಸಂಗ್ರಹಿಸಿರಬಹುದು ಎಂದು ಐಟಿ ಅಧಿಕಾರಿಗಳು ಶಂಕಿಸಿದ್ದಾರೆ. ಸದ್ಯಕ್ಕೆ ಗೋಡೌನ್‍ನಲ್ಲಿ ಸಿಕ್ಕ ಹಣವನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಇಂದು ಐಟಿ ಅಧಿಕಾರಿಗಳು ಡಿಎಂಕೆ ಮುಖಂಡರೊಬ್ಬರಿಗೆ ಸೇರಿದ್ದ ಸಿಮೆಂಟ್ ಗೋಡಾನ್ ನಲ್ಲಿ ಶೋಧ ಮಾಡಿದ್ದಾರೆ. ಆಗ ಸಿಮೆಂಟ್ ಗೋಣಿಚೀಲದಲ್ಲಿ, ಬಾಕ್ಸ್ ಒಳಗಡೆ ತುಂಬಿಸಿರುವುದು ಪತ್ತೆಯಾಗಿದೆ. ಒಂದೊಂದು ಬಾಕ್ಸಿನಲ್ಲೂ ಹಣವನ್ನು ಪ್ಯಾಕ್ ಮಾಡಿ ಒಂದೊಂದು ತಾಲೂಕಿಗೆ ಇಷ್ಟಿಷ್ಟು ಎಂದು ಹೆಸರನ್ನು ಕೂಡ ಬರೆದು ಪ್ಯಾಕ್ ಮಾಡಿ ಇಟ್ಟಿರುವುದು ಕಂಡು ಬಂದಿದೆ.

    ಅಭ್ಯರ್ಥಿ ಕ್ಯಾಥೀರ್ ಆನಂದ್ ಡಿಎಂಕೆ ಮುಖಂಡ ಮತ್ತು ಪಕ್ಷದ ಖಜಾಂಚಿ ದುರೈ ಮುರುಗನ್ ಅವರ ಪುತ್ರರಾಗಿದ್ದಾರೆ. ಇವರ ಮನೆಯಲ್ಲಿ ಇತ್ತೀಚೆಷ್ಟೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆಗ ಕ್ಯಾಥೀರ್ ಆನಂದ್ ಸ್ವಾಮ್ಯದ ಕಾಲೇಜು ಸೇರಿದಂತೆ ದುರೈ ಮುರುಗನ್ ಅವರ ಆಸ್ತಿಗೆ ಸಂಬಂಧಪಟ್ಟಂತೆ ಸುಮಾರು 10.50 ಲಕ್ಷ ನಗದು ಹಣವನ್ನು ವಶಪಡಿಸಿಕೊಂಡಿದ್ದರು.

    ಐಟಿ ಅಧಿಕಾರಿಗಳು ಮಾರ್ಚ್ 30 ರಂದು ಆನಂದ್ ಸ್ವಾಮ್ಯದ ಕಾಲೇಜಿನಲ್ಲಿ ಪರಿಶೀಲನೆ ನಡೆಸಿದ್ದರು. ಆದರೆ ಅದಕ್ಕೂ ಮುನ್ನಾ ದಿನ ಅಂದರೆ ಮಾರ್ಚ್ 29 ಮತ್ತು 30ರ ಮಧ್ಯರಾತ್ರಿಯಲ್ಲಿ ಹಣವನ್ನು ಬೇರೆಕಡೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದರು.

    ಐಟಿ ದಾಳಿಯ ಬಗ್ಗೆ ಮಾತನಾಡಿದ ದುರೈಮುರುಗನ್, ಚುನಾವಣಾ ಕಣದಲ್ಲಿ ನಮ್ಮನ್ನು ಎದುರಿಸಲು ಸಾಧ್ಯವಾಗದ ಕೆಲವು ರಾಜಕೀಯ ಮುಖಂಡರು ಈ ದಾಳಿಯ ಪಿತೂರಿ ಮಾಡಿಸಿದ್ದಾರೆ ಎಂದು ಆರೋಪಿಸಿದ್ದರು.

  • ನಾನು ತಪ್ಪು ಮಾಡಿದ್ದೇನೆ – ಐಟಿ ವಿಚಾರಣೆ ಬಳಿಕ ನಗುಮುಖದಿಂದ ಉತ್ತರಿಸಿದ ಸುದೀಪ್

    ನಾನು ತಪ್ಪು ಮಾಡಿದ್ದೇನೆ – ಐಟಿ ವಿಚಾರಣೆ ಬಳಿಕ ನಗುಮುಖದಿಂದ ಉತ್ತರಿಸಿದ ಸುದೀಪ್

    ಬೆಂಗಳೂರು: ನಾನು ಅಳಿಲಿನಷ್ಟು ತಪ್ಪು ಮಾಡಿದ್ದೇನೆ. ನಮ್ಮ ತಪ್ಪುಗಳನ್ನು ಸರಿ ಮಾಡಿಕೊಳ್ಳುವುದಕ್ಕೆ ಇದೊಂದು ಎಚ್ಚರಿಕೆ ಎಂದು ಆದಾಯ ತೆರಿಗೆ ವಿಚಾರಣೆಗೆ ಹಾಜರಾದ ಬಳಿಕ ನಟ ಸುದೀಪ್ ಪ್ರತಿಕ್ರಿಯಿಸಿದ್ದಾರೆ.

    ಕ್ವೀನ್ಸ್ ರಸ್ತೆ ಆದಾಯ ತೆರಿಗೆ ಇಲಾಖೆ ಕಚೇರಿಗೆ ಹಾಜರಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸದ್ಯಕ್ಕೆ ಐಟಿ ವಿಚಾರಣೆ ಮುಗಿಯುದಿಲ್ಲ. ಇನ್ನೂ 5-6 ತಿಂಗಳು ವಿಚಾರಣೆ ನಡೆಯುತ್ತದೆ. ನಾವು ಐಟಿ ದಾಳಿ ನಡೆದಾಗ ಹೇಳಿಕೆ ಕೊಟ್ಟು ಸಹಿ ಮಾಡಿದ್ದೇವೆ. ಅದರ ಬಗ್ಗೆ ಮಾತನಾಡಲು ಅಧಿಕಾರಿಗಳು ಕರೆದಿದ್ದು, ಒಂದು ವೇಳೆ ನೀವೇನಾದರೂ ನೀವು ಕೊಟ್ಟ ಹೇಳಿಕೆಯನ್ನು ಬದಲಾಯಿಸಿಕೊಳ್ಳುತ್ತೀರಾ ಎಂದು ಕೇಳಿ ಮತ್ತೆ ಅದನ್ನು ಮರು ಪರಿಶೀಲನೆ ಮಾಡಿ ಖಚಿತ ಪಡಿಸಿಕೊಂಡಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: 40 ಕೋಟಿ ರೂ. ಸಾಲ : ಪ್ರಶ್ನೆಗೆ ಯಶ್ ಖಡಕ್ ಪ್ರತಿಕ್ರಿಯೆ

    ಐಟಿ ದಾಳಿ ನಡೆದಾಗ ಪೈಲ್ವಾನ್ ಶೂಟಿಂಗ್ ನಡೆಯುತ್ತಿತ್ತು. ಹಾಗಾಗಿ ಅದೇ ವಾರ ಬರಲು ಸಾಧ್ಯವಾಗಲಿಲ್ಲ. ಅಂದು ನಮ್ಮ ತಾಯಿ ಒಬ್ಬರೇ ಇದ್ದರು ಎಂದು ನಾನು ಬಂದಿದ್ದೆ. ಇವತ್ತು ಕೂಡ ಸೈರಾ ಶೂಟಿಂಗ್ ಇತ್ತು. ಆದರೆ ಅವರ ಬಳಿಕ ಅವಕಾಶ ಕೇಳಿಕೊಂಡು ಬಂದಿದ್ದೇನೆ. ಸದ್ಯಕ್ಕೆ ಇವತ್ತಿನ ವಿಚಾರಣೆ ಮುಗಿಯಿತು. ಅಗತ್ಯವಿದ್ದಾಗ ಅಧಿಕಾರಿಗಳು ವಿಚಾರಣೆಗೆ ಮತ್ತೆ ಕರೆಯುತ್ತಾರೆ. ಅವರು ವಿಚಾರಣೆಗೆ ಕರೆದರೆ ನಾನು ಬರುತ್ತೇನೆ. ಇವತ್ತೇ ಮುಗಿಯುವಂತಹ ವಿಚಾರ ಅಲ್ಲ ಎಂದು ಸುದೀಪ್ ಹೇಳಿದರು.

    ಐಟಿ ಅಧಿಕಾರಿಗಳು ನಮ್ಮ ಮನೆಗೆ ರೇಡ್ ಮಾಡಲು ಬಂದಿಲ್ಲ. ಸರ್ಚ್ ಮಾಡಲು ಬಂದಿದ್ದರು. ಅದನ್ನು ನಾನು ರಿ ಕನ್ಪರ್ಮೇಷನ್‍ಗೆ ಬಂದಿದ್ದೆ. ಐಟಿ ಅಧಿಕಾರಿಗಳು ನಾವು ಮಾಡಿದ ತಪ್ಪಿಗೆ ನಮ್ಮ ಮನೆಗೆ ಸರ್ಚ್ ಮಾಡಲು ಬರುತ್ತಾರೆ. ತಪ್ಪೇ ಮಾಡದೇ ಆಮಂತ್ರಣ ಕೊಡೋದಕ್ಕೆ ಅವರು ಬರುವುದಿಲ್ಲ. ನಾನು ಅಳಿಲಿನಷ್ಟು ತಪ್ಪು ಮಾಡಿದ್ದೇನೆ. ನಮ್ಮ ತಪ್ಪುಗಳನ್ನು ಸರಿ ಮಾಡಿಕೊಳ್ಳುವುದಕ್ಕೆ ಇದೊಂದು ಎಚ್ಚರಿಕೆ. ಆದರೆ ಯಾರು ಬೇಕೆಂದು ತಪ್ಪು ಮಾಡುವುದಿಲ್ಲ. ಈ ಎಚ್ಚರಿಕೆಯಿಂದ ನಮ್ಮ ತಪ್ಪುಗಳನ್ನು ಸರಿ ಮಾಡಿಕೊಳ್ಳಬೇಕು ಎಂದು ಸುದೀಪ್ ಹೇಳಿದರು.

    ಬೇರೆ ನಟರು ಹೇಳಿಕೆ ಕೊಡಲು ಹಿಂಜರಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕರ ಜೀವನದಲ್ಲಿ ಇರುವುದಿಂದ ಎಲ್ಲರು ಪ್ರಶ್ನೆ ಮಾಡುತ್ತಾರೆ. ಇದರಿಂದ ಹಿಂಜರಿಯುವುದರಿಂದ ತಪ್ಪು ಸಂದೇಶ ಹೋಗುತ್ತದೆ. ಅವರುಗಳಿಗೆ ಏನು ಸಮಸ್ಯೆ, ಕಿರಿಕಿರಿ ಆಗಿದೆ ಗೊತ್ತಿಲ್ಲ. ಅವರ ಸ್ಥಾನದಲ್ಲಿ ನಾನು ನಿಂತು ಹೇಳಲು ಸಾಧ್ಯವಿಲ್ಲ. ನನ್ನ ಪರ ಅವರು, ಅವರ ಪರ ನಾನು ಮಾತನಾಡಲು ಆಗುವುದಿಲ್ಲ. ಪ್ರತಿಯೊಬ್ಬರು ನಮ್ಮ ಜೀವನದ ಜವಾಬ್ದಾರಿ ತೆಗೆದುಕೊಳ್ಳೋಣ. ಬೇರೆಯವರ ಜೀವನದ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುವುದು ಬೇಡ, ಅವರು ನನ್ನ ಜೀವನದ ಜವಾಬ್ದಾರಿ ತೆಗೆದುಕೊಳ್ಳುವುದು ಬೇಡ ಎಂದರು.

    ನಾನು ಸ್ಪಷ್ಟವಾಗಿ ಇದ್ದೇನೆ ಮಾತನಾಡುತ್ತೇನೆ. ಅವರು ಕೂಡ ಸ್ಪಷ್ಟವಾಗಿದ್ದರೆ ಮಾತನಾಡುತ್ತಾರೆ. ನಾವು ಇನ್ನೊಬ್ಬರ ಪರ ಮಾತನಾಡುವುದು, ಅವರು ಮಾಡಿದ್ದು ತಪ್ಪು ಎಂದು ನಾವು ಹೇಳುವುದು ತಪ್ಪಾಗುತ್ತದೆ. ಆದ್ದರಿಂದ ಬೇರೆಯವರ ಬಗ್ಗೆ ನಾವು ಮಾತನಾಡುವುದು ಸರಿಯಿಲ್ಲ ಎಂದು ನಟ ಸುದೀಪ್ ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಟ, ನಿರ್ಮಾಪಕರ ಮೇಲೆ ಐಟಿ ದಾಳಿ ಪ್ರಕರಣ- ಇಂದು ಸುದೀಪ್ ವಿಚಾರಣೆಗೆ ಹಾಜರು

    ನಟ, ನಿರ್ಮಾಪಕರ ಮೇಲೆ ಐಟಿ ದಾಳಿ ಪ್ರಕರಣ- ಇಂದು ಸುದೀಪ್ ವಿಚಾರಣೆಗೆ ಹಾಜರು

    ಬೆಂಗಳೂರು: ನಟ, ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕಿಚ್ಚ ಸುದೀಪ್ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ.

    ಜನವರಿ 2ರಂದು ಜೆಪಿ ನಗರದ ಸುದೀಪ್ ಮನೆ ಮೇಲೆ ದಾಳಿ ನಡೆಸಿದ್ದ ಐಟಿ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿತ್ತು. ಆದರೆ ಬೇರೆ ಬೇರೆ ಕೆಲಸಗಳ ಒತ್ತಡ, ಶೂಟಿಂಗ್ ಶೆಡ್ಯೂಲ್ ನಿಮಿತ್ತ 10 ದಿನಗಳ ಕಾಲ ಸುದೀಪ್ ಕಾಲಾವಕಾಶ ಕೇಳಿದ್ದರು. ಆದ್ದರಿಂದ ಇಂದು ನಟ ಸುದೀಪ್ ವಿಚಾರಣೆಗೆಂದು ಕ್ವೀನ್ಸ್ ರಸ್ತೆ ಆದಾಯ ತೆರಿಗೆ ಇಲಾಖೆ ಕಚೇರಿಗೆ ಹಾಜರಾಗುತ್ತಿದ್ದಾರೆ. ಇದನ್ನೂ ಓದಿ: ಟಾರ್ಗೆಟ್ ಮಾಡಿಲ್ಲ, ಐಟಿ ದಾಳಿಗೆ ಕಾರಣ ಇರುತ್ತೆ: ನಟ ಸುದೀಪ್

    ಅಷ್ಟೇ ಅಲ್ಲದೇ ಐಟಿ ವೇಳೆ ಸಿಕ್ಕ ಸ್ತಿರಾಸ್ಥಿ, ಚರಾಸ್ಥಿ, ಹೂಡಿಕೆಗಳು, ವ್ಯಾಪಾರ ವಹಿವಾಟು ಮತ್ತು ಚಿನ್ನಾಭರಣಗಳ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ. ದಾಳಿ ಬಳಿಕ ಐಟಿ ಅಧಿಕಾರಿಗಳು 2 ಬ್ಯಾಗ್‍ಗಳಲ್ಲಿ ಕಾಗದಪತ್ರಗಳು, ದಾಖಲೆಗಳು ಹಾಗೂ ಹೂಡಿಕೆ ಪತ್ರಗಳನ್ನ ನಟ ಸುದೀಪ್ ಮನೆಯಿಂದ ತೆಗೆದುಕೊಂಡು ಹೋಗಿದ್ದರು. ಇವುಗಳೆಲ್ಲದಕ್ಕೂ ಸುದೀಪ್ ಬಳಿ ಸ್ಪಷ್ಟನೆ ಪಡೆದು ಅಧಿಕಾರಿಗಳು ಸಹಿ ಹಾಕಿಸಿಕೊಳ್ಳಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಸುದೀಪ್ ಮನೆಯಲ್ಲಿ ಐಟಿ ರೇಡ್ ಅಂತ್ಯ- ಬೆಳಗ್ಗೆ ತೆರಳಿದ ಬಳಿಕ ಮತ್ತೆ ಅಧಿಕಾರಿಗಳು ಆಗಮಿಸಿದ್ದು ಯಾಕೆ?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಶೋಮಾರ್ಗದ ಮೂಲಕ ಜನರ ಸೇವೆ ಮಾಡ್ತಿರೋ ಯಶ್ ಬಳಿ ಆಸ್ತಿ ಎಷ್ಟಿದೆ? – ಇಲ್ಲಿದೆ ವಿವರ

    ಯಶೋಮಾರ್ಗದ ಮೂಲಕ ಜನರ ಸೇವೆ ಮಾಡ್ತಿರೋ ಯಶ್ ಬಳಿ ಆಸ್ತಿ ಎಷ್ಟಿದೆ? – ಇಲ್ಲಿದೆ ವಿವರ

    ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯ ಬಳಿಕ ಇಂದು ಯಶ್ ಹಾಗೂ ಅವರ ತಾಯಿ ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದು, ಈ ವೇಳೆ ಐಟಿ ಅಧಿಕಾರಿಗಳಿಗೆ ತಮ್ಮ ಬಳಿ ಇರುವ ಆಸ್ತಿ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ. ಯಶ್ ಐಟಿ ಅಧಿಕಾರಿಗಳಿಗೆ ನೀಡಿರುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.

    ಸಾಮಾನ್ಯ ವ್ಯಕ್ತಿಯಿಂದ ಸ್ಟಾರ್ ನಟರಾಗಿ ಬೆಳೆದ ಯಶ್, ತಮ್ಮ ಪ್ರತಿ ಸಿನಿಮಾದ ಸಂಭಾವನೆ ಸೇರಿದಂತೆ, ಆದಾಯ ಮೂಲಗಳಿಂದ ಗಳಿಸಿದ ಆಸ್ತಿಯ ಸಂರ್ಪೂಣ ಮಾಹಿತಿಯನ್ನು ಐಟಿ ಅಧಿಕಾರಿಗಳಿಗೆ ನೀಡಿದ್ದಾರೆ. ಇಂದು ಐಟಿ ಅಧಿಕಾರಿಗಳ ಮುಂದೆ ನಡೆದ ಸತತ 3 ಗಂಟೆಗಳ ವಿಚಾರಣೆಯಲ್ಲಿ ಮಾಹಿತಿ ನೀಡಿದ್ದು, ಯಾವುದೇ ಸಮಯದಲ್ಲಿ ಕರೆದರೂ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

    ಆಸ್ತಿ ಎಷ್ಟಿದೆ?
    ನಟ ಯಶ್ ಬೆಂಗಳೂರಿನ ಗಾಲ್ಫ್ ಕ್ಲಬ್ ಬಳಿ 20 ಕೋಟಿ ರೂ. ಮೌಲ್ಯದ ಪ್ರೆಸ್ಟೀಜ್ ಪೆಂಟೌಸ್ ಹೊಂದಿದ್ದಾರೆ. ಇದನ್ನು ಯಶ್ ಖರೀದಿ ಮಾಡಲು ಪ್ರಮುಖ ಕಾರಣ ನಟ ಅಂಬರೀಶ್ ಅವರ ಮೇಲಿನ ಪ್ರೀತಿ. ಅಂಬರೀಶ್ ಅವರು ಇದೇ ಗಾಲ್ಫ್ ಕ್ಲಬ್‍ನ ಆಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದರು. ಅಂಬರೀಶ್ ಅವರೊಂದಿಗೆ ಇರಬೇಕು ಎನ್ನುವ ಕಾರಣದಿಂದ ಯಶ್ ಈ ಪೆಂಟೌಸನ್ನು ಖರೀದಿ ಮಾಡಿದ್ದಾರೆ. ಅಲ್ಲದೇ ಹುಟ್ಟೂರಿನ ಮೇಲೆ ಆಪಾರ ಪ್ರೀತಿಯನ್ನು ಹೊಂದಿರುವ ಯಶ್ ಮೈಸೂರಲ್ಲೂ ಒಂದು ಪೆಂಟೌಸ್ ಖರೀದಿ ಮಾಡಿದ್ದಾರೆ. ಮೈಸೂರಿನ ಬೋಗಾದಿ ಬಳಿ ವಿಲಾಸಿ ಫ್ಲಾಟ್ ಹಾಗೂ ರಿಂಗ್ ರಸ್ತೆಯಲ್ಲಿ 1 ಎಕರೆ ಜಮೀನು ಯಶ್ ಹೆಸರಿನಲ್ಲಿದೆ.

    ಸೂಪರ್ ಸ್ಟಾರ್ ರಜನಿಕಾಂತ್ ಅವರ ಪ್ರೇರಣೆ ಹಾಗೂ ಅಮ್ಮನ ಆಸೆಯಂತೆ ಯಶ್ ಮೈಸೂರಿನಲ್ಲಿ 78 ಎಕ್ರೆ ಜಮೀನು ಖರೀದಿ ಮಾಡಲು ಮುಂದಾಗಿದ್ದು, ಸದ್ಯಕ್ಕೆ ಈ ಜಮೀನು ಖರೀದಿ ಮಾಡಲು ಟೋಕನ್ ಅಡ್ವಾನ್ಸ್ ಮಾತ್ರ ನೀಡಿದ್ದಾರೆ. ಈ ಆಸ್ತಿ ಇನ್ನು ಕೂಡ ನೋಂದಣಿ ಆಗಬೇಕಿದೆ. ಈ ಆಸ್ತಿ ಖರೀದಿ ಮಾಡಲು ಒಂದು ವಿಶೇಷವಾದ ಪ್ರೇರಣೆಯಿದೆ. ಒಬ್ಬ ಮಾದರಿ ರೈತನಾಗಬೇಕು ಎನ್ನುವ ಕನಸನ್ನು ಯಶ್ ಕಾಣುತ್ತಿದ್ದು, ಈ ಕನಸು ನನಸು ಮಾಡಲು ಈ ಜಾಗವನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ಕಷ್ಟ ಕಾಲದಲ್ಲಿ ಸಹಾಯವಾಗಲು ಊರಿನ ಹೊರಭಾಗದಲ್ಲಿ ವ್ಯವಸಾಯದ ಭೂಮಿ ಪಡೆಯುವಂತೆ ರಜಿನಿಕಾಂತ್ ಯಶ್ ಅವರಿಗೆ ಸಲಹೆ ನೀಡಿದ್ದರಂತೆ. ಈ ಕಾರಣಕ್ಕಾಗಿ ತನ್ನೂರಿನ ನೆಲದಲ್ಲಿ ವ್ಯವಸಾಯ ಮಾಡಲು ಯಶ್ ಜಾಗ ಖರೀದಿಗೆ ಮುಂಗಡ ಹಣವನ್ನು ಪಾವತಿಸಿದ್ದಾರೆ.

    ಮೈಸೂರಿನ ಬಳಿಕ ಹಾಸನದ ಮೇಲೆ ಅತಿ ಹೆಚ್ಚು ಪ್ರೀತಿಯನ್ನು ಹೊಂದಿರುವ ಯಶ್ ಅಲ್ಲಿಯೂ ಒಂದು ಮನೆಯನ್ನು ಹೊಂದಿದ್ದಾರೆ. ಅಲ್ಲದೇ ಕೋಲಾರ ಬಳಿ 10 ನಿವೇಶನಗಳನ್ನು ಹೊಂದಿದ್ದು. ಇದರಲ್ಲಿ ಕೆಲವು ಯಶ್ ಅವರ ತಾಯಿಯ ಹೆಸರಿನಲ್ಲಿದೆ. ಈ ಕಾರಣದಿಂದಲೇ ಐಟಿ ಅಧಿಕಾರಿಗಳು ಯಶ್ ತಾಯಿಯನ್ನು ವಿಚಾರಣೆಗೆ ಕರೆದಿದ್ದರು. ಇನ್ನು ಬೆಂಗಳೂರು ಸುತ್ತಮುತ್ತ ಅಂದರೆ ಬನ್ನೇರುಘಟ್ಟ ಸಮೀಪ 3 ಸೈಟ್, ಜೆ.ಪಿ.ನಗರದಲ್ಲಿ 1 ಸೈಟ್, ಹೊಸಕೆರೆ ಹಳ್ಳಿಯಲ್ಲಿ 1 ಮನೆ ಹಾಗೂ ಕತ್ರಿಗುಪ್ಪೆಯಲ್ಲಿ ತಂಗಿಗಾಗಿ ಒಂದು ಮನೆಯನ್ನು ಯಶ್ ಖರೀದಿ ಮಾಡಿದ್ದಾರೆ.

    ಎಷ್ಟು ದಾನ ಮಾಡಿದ್ದಾರೆ?
    ಪತ್ನಿ ರಾಧಿಕಾ ಹೆಸರಿಲ್ಲೂ ಕೆಲ ನಿವೇಶನಗಳನ್ನು ಹೊಂದಿದ್ದು, ಬೆಂಗಳೂರು-ಮೈಸೂರು ರಸ್ತೆಯಲ್ಲಿ ಒಂದು ನಿವೇಶನ ಹಾಗೂ ಬಿಡದಿ ಬಳಿ ಒಂದು ನಿವೇಶನ ಇದೆ. ಐಟಿ ಅಧಿಕಾರಿಗಳು ಇಷ್ಟೆಲ್ಲಾ ಆಸ್ತಿಯನ್ನು ಹೊಂದಿರುವ ಯಶ್ ಧಾನಧರ್ಮ ಮಾಡುವುದರಲ್ಲೂ ಎತ್ತಿದ ಕೈ ಆಗಿದ್ದು `ಯಶೋಮಾರ್ಗ’ ಹೆಸರಿನ ಸ್ವಯಂ ಸೇವಾ ಸಂಸ್ಥೆಯ ಮೂಲಕ ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದಾರೆ. ಇದರಲ್ಲಿ ಕೆರೆ ಹೂಳು ತೆಗೆದಿದ್ದು ಸೇರಿದಂತೆ, ಎಷ್ಟೇ ಮಂದಿಗೆ ದಾನಧರ್ಮ ಮಾಡಿರುವ ಮಾಹಿತಿಯನ್ನು ನೀಡಿದ್ದಾರೆ. ಇದು ಕೂಡ ಐಟಿ ಅಧಿಕಾರಿಗಳಿಗೆ ಪ್ರಮುಖ ಮಾಹಿತಿಯಾಗಿದ್ದು, ಇದುವರೆಗೆ 5 ಕೋಟಿ ರೂ. ಧಾನಧರ್ಮ ಮಾಡಿದ್ದಾರೆ.

    ಕಾರು ಎಷ್ಟಿದೆ?
    ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಯಶ್ ಬಳಿ 3 ಬೆಂಜ್, 1 ಆಡಿ, 1 ಪಜೇರೋ, 1 ಫಾರ್ಚೂನರ್ ಐಷಾರಾಮಿ ಕಾರುಗಳಿವೆ. ಇವುಗಳ ಖರೀದಿ ಮಾಡಿರುವ ಮಾಹಿತಿ ಸೇರಿದಂತೆ ತೆರಿಗೆ ಪಾವತಿಸಿರುವ ದಾಖಲೆಗಳನ್ನು ಯಶ್ ಐಟಿ ಅಧಿಕಾರಿಗಳ ಮುಂದಿಟ್ಟಿದ್ದಾರೆ. ಐಟಿ ವಿಚಾರಣೆ ವೇಳೆ ತಾವು ದುಡಿದ ಪೈಸಾ, ಪೈಸಾ ರೂಪಾಯಿಗೂ ಮಾಹಿತಿ ಕೊಟ್ಟಿರುವ ಯಶ್ ಅವರು 15 ಬ್ಯಾಂಕುಗಳಲ್ಲಿ 16 ಕೋಟಿ ರೂ. ಸಾಲ ಮಾಡಿದ್ದಾರೆ. ಅಲ್ಲದೇ ಯಾವುದೇ ಸಮಯದಲ್ಲಿ ಕರೆದರೂ ನಾನು ವಿಚಾರಣೆಗೆ ಹಾಜರಾಗುವುದಾಗಿ ಐಟಿ ಅಧಿಕಾರಿಗಳಿಗೆ ಹೇಳಿದ್ದಾರೆ.  ಇದನ್ನು ಓದಿ: 40 ಕೋಟಿ ರೂ. ಸಾಲ : ಪ್ರಶ್ನೆಗೆ ಯಶ್ ಖಡಕ್ ಪ್ರತಿಕ್ರಿಯೆ 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv