Tag: IT department

  • ಲಕ್ಷ, ಕೋಟಿ ಆದಾಯವಿದ್ದರೂ ಟ್ಯಾಕ್ಸ್ ಕಟ್ಟದ ಯೂಟ್ಯೂಬರ್ಸ್ – ಕೇರಳದ ಹಲವೆಡೆ ಐಟಿ ದಾಳಿ

    ಲಕ್ಷ, ಕೋಟಿ ಆದಾಯವಿದ್ದರೂ ಟ್ಯಾಕ್ಸ್ ಕಟ್ಟದ ಯೂಟ್ಯೂಬರ್ಸ್ – ಕೇರಳದ ಹಲವೆಡೆ ಐಟಿ ದಾಳಿ

    ತಿರುವನಂತಪುರಂ: ಟ್ಯಾಕ್ಸ್ (Tax) ಕಟ್ಟದ ಹಿನ್ನೆಲೆ ಕೇರಳದ ಹಲವು ಯೂಟ್ಯೂಬರ್‌ಗಳ (YouTubers) ನಿವಾಸ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ (IT) ಇಲಾಖೆ ದಾಳಿ ನಡೆಸಿದೆ.

    ಕೇರಳ (Kerala) ರಾಜ್ಯದ ಎರ್ನಾಕುಲಂ, ಪತ್ತನಂತಿಟ್ಟ, ತ್ರಿಶೂರ್, ಅಲಪ್ಪುಳ, ಕೊಟ್ಟಾಯಂ ಹಾಗೂ ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 13 ಪ್ರಮುಖ ಯೂಟ್ಯೂಬರ್‌ಗಳು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಈ ಯೂಟ್ಯೂಬರ್‌ಗಳು ವಾರ್ಷಿಕವಾಗಿ ಅಂದಾಜು 1 ಕೋಟಿ ರೂ. ಹಣ ಗಳಿಸುತ್ತಾರೆ. ಆದರೆ ಅವರ ತೆರಿಗೆ ಕಡತಗಳಲ್ಲಿ ಆದಾಯವನ್ನು ನಿಖರವಾಗಿ ತೋರಿಸಲಾಗಿಲ್ಲ. ತೆರಿಗೆಯನ್ನು ಅವರ ಆದಾಯದ ಮೂಲದಿಂದಲೇ ಕಡಿತಗೊಳಿಸುವುದು ಸೂಕ್ತವಲ್ಲದ ಕಾರಣ ದಾಳಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.

    ಈ ಯೂಟ್ಯೂಬರ್‌ಗಳು ತಮಗೆ ಯಾವುದೇ ಸ್ಥಿರವಾದ ಪಾವತಿಗಳು ಬರುವುದಿಲ್ಲ, ಯೂಟ್ಯೂಬ್ ಹಾಗೂ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ಪಡೆಯುವ ಮಾಸಿಕ ಪಾವತಿಗಳು ಅವರ ಕಂಟೆಂಟ್‌ಗಳ ವೀಕ್ಷಕರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿಕೊಳ್ಳುತ್ತಾರೆ. ಕೆಲ ಯೂಟ್ಯೂಬರ್‌ಗಳು ಕಂಪನಿಗಳಿಂದ ಹಣವನ್ನು ಪಡೆದು ಕಂಟೆಂಟ್ ಸೃಷ್ಟಿಮಾಡಿದ್ದರೂ ಅದನ್ನು ಬಹಿರಂಗಪಡಿಸಿಲ್ಲ. ಇದರಿಂದಾಗಿ ತೆರಿಗೆ ಪಾವತಿ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಈ ಹಿನ್ನೆಲೆ ಕೊಚ್ಚಿ ಮೂಲದ ಐಟಿ ಎನ್‌ಫೋರ್ಸ್ಮೆಂಟ್ ವಿಂಗ್ ಈ ದಾಳಿಯನ್ನು ನಡೆಸಿದೆ. ಇದನ್ನೂ ಓದಿ: ನಟಿಯೂ ಸೇರಿದಂತೆ ಯೂಟ್ಯೂಬರ್ಸ್ ಮನೆ ಮೇಲೆ ಐಟಿ ದಾಳಿ

    ಇದೀಗ ದಾಳಿ ನಡೆಸಿರುವ ಐಟಿ ತಂಡ ಯೂಟ್ಯೂಬರ್‌ಗಳಿಂದ ಹೇಳಿಕೆಗಳನ್ನು ದಾಖಲಿಸುತ್ತಿದೆ. ಯೂಟ್ಯೂಬರ್‌ಗಳು ಗಳಿಸಿರುವ ಆದಾಯಕ್ಕೆ ಸಂಬಂಧಿಸಿದ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಹಾಗೂ ಇತರ ವಹಿವಾಟಿನ ವಿವರಗಳನ್ನೂ ಪರಿಶೀಲಿಸುತ್ತಿದೆ. ಐಟಿ ಇಲಾಖೆ ದಾಳಿ ಪ್ರಾರಂಭಿಸುವುದಕ್ಕೂ ಮುನ್ನ ಪ್ರಾಥಮಿಕ ತನಿಖೆಯನ್ನೂ ನಡೆಸಿದೆ. ರಾಜ್ಯದಲ್ಲಿ ಇನ್ನೂ ಹೆಚ್ಚಿನ ಯೂಟ್ಯೂಬರ್‌ಗಳನ್ನು ಗುರಿಯಾಗಿಸಿಕೊಂಡು ಮುಂದಿನ ದಿನಗಳಲ್ಲಿ ಹೆಚ್ಚುವರಿ ದಾಳಿಗಳು ನಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ 11% ಇಳಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ಯೂಟ್ಯೂಬರ್ಸ್ ಹೆಸರು ಮತ್ತು ಎಷ್ಟು ಸಬ್‌ಸ್ಕ್ರೈಬರ್ಸ್ ಇದ್ದಾರೆ?
    M4Tech: 1.12 ಕೋಟಿ
    Unboxing Dude: 37.5 ಲಕ್ಷ
    Arjyou: 36.1 ಲಕ್ಷ
    Fishing Freaks: 33.5 ಲಕ್ಷ
    Akhil NRD: 28.3 ಲಕ್ಷ
    Pearle Maaney: 26 ಲಕ್ಷ
    Jayaraj G Nath: 17.2 ಲಕ್ಷ

  • ನಾನು ಚೀನಾದ ಪ್ರಜೆ, ಭಯೋತ್ಪಾದಕನಲ್ಲ: ನ್ಯಾಯಾಲಯಕ್ಕೆ ಹುವಾವೇ ಸಿಇಒ

    ನಾನು ಚೀನಾದ ಪ್ರಜೆ, ಭಯೋತ್ಪಾದಕನಲ್ಲ: ನ್ಯಾಯಾಲಯಕ್ಕೆ ಹುವಾವೇ ಸಿಇಒ

    ನವದೆಹಲಿ: ನಾನು ಚೀನಾದ ಪ್ರಜೆ, ನಾನು ಭಯೋತ್ಪಾದಕನಲ್ಲ ಎಂದು ಹುವಾವೇ ಟೆಲಿಕಮ್ಯುನಿಕೇಶನ್ಸ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಲಿ ಕ್ಸಿಯಾಂಗ್‌ವೇ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

    ಹುವಾವೇ ಸಿಇಒ ಆದಾಯ ತೆರಿಗೆ ಇಲಾಖೆಯ ಜಾಮೀನು ಅರ್ಜಿಗೆ ಪ್ರತಿಕ್ರಿಯೆಯಾಗಿ ನಾನು ಚೀನಾದ ಪ್ರಜೆ, ಭಯೋತ್ಪಾದಕನಲ್ಲ ಎಂದು ತಿಳಿಸಿದ್ದಾರೆ ಹಾಗೂ ಚೀನಾಗೆ ಮರಳಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

    ಜಾಮೀನು ಅರ್ಜಿಯನ್ನು ತಿರಸ್ಕರಿಸುವಂತೆ ಆದಾಯ ತೆರಿಗೆ ಇಲಾಖೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಲಿ ಅವರ ವಕೀಲ ವಿಜಯ್ ಅಗರ್ವಾಲ್ ಕಕ್ಷಿದಾರರ ಪರವಾಗಿ ಈ ಹೇಳಿಕೆಯನ್ನು ನೀಡಿದ್ದಾರೆ. ಇದನ್ನೂ ಓದಿ: 75ನೇ ಸ್ವಾತಂತ್ರ್ಯಕ್ಕೆ ಬಾಹ್ಯಾಕಾಶದಿಂದಲೂ ಬಂತು ಶುಭ ಹಾರೈಕೆ

    ಚೀನಾದ ಟೆಲಿಕಾಂ ಕಂಪನಿಯ ಭಾರತೀಯ ಶಾಖೆಗಳ ಮೇಲೆ ಕಳೆದ ಕೆಲವು ತಿಂಗಳುಗಳ ಹಿಂದೆ ಐಟಿ ಇಲಾಖೆ ರೇಡ್ ನಡೆಸಿತ್ತು. ಅದರ ತನಿಖೆ ಇನ್ನೂ ನಡೆಯುತ್ತಿದ್ದು, ಲಿ ಅವರು ತಮ್ಮ ತಾಯ್ನಾಡು ಚೀನಾಗೆ ಮರಳಿದರೆ, ಅವರನ್ನು ವಿಚಾರಣೆಗಾಗಿ ವಾಪಸ್ ಕರೆತರುವುದು ಭಾರತಕ್ಕೆ ಅತ್ಯಂತ ಕಷ್ಟವಾಗಬಹುದು ಎಂದು ಐಟಿ ಇಲಾಖೆ ನ್ಯಾಯಾಲಯಕ್ಕೆ ತಿಳಿಸಿದೆ.

    ಐಟಿ ಇಲಾಖೆ ಲಿ ವಿರುದ್ಧ ಹೊರಡಿಸಿರುವ ಲುಕೌಟ್ ನೋಟಿಸ್ ರದ್ದುಗೊಳಿಸುವಂತೆ ವಕೀಲರು ಮನವಿ ಮಾಡಿದ್ದಾರೆ. ಆದರೆ ಲುಕೌಟ್ ನೋಟಿಸ್ ರದ್ದು ಮಾಡದಂತೆ ಐಟಿ ಆಕ್ಷೇಪಣೆ ಸಲ್ಲಿಕೆ ಮಾಡಿದೆ. ಇದನ್ನೂ ಓದಿ: ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗೆ ಇನ್ಮುಂದೆ ಒಂದೇ ಚಾರ್ಜರ್‌?

    Live Tv
    [brid partner=56869869 player=32851 video=960834 autoplay=true]

  • ಅಕೌಂಟ್‍ನಲ್ಲಿ ಹಣವಿಲ್ಲದಿದ್ರೂ 1.28 ಕೋಟಿ ವರ್ಗಾವಣೆ – ಐಟಿ ನೋಟಿಸಿಗೆ ಅಕ್ಕಿ ವ್ಯಾಪಾರಿ ತಬ್ಬಿಬ್ಬು

    ಅಕೌಂಟ್‍ನಲ್ಲಿ ಹಣವಿಲ್ಲದಿದ್ರೂ 1.28 ಕೋಟಿ ವರ್ಗಾವಣೆ – ಐಟಿ ನೋಟಿಸಿಗೆ ಅಕ್ಕಿ ವ್ಯಾಪಾರಿ ತಬ್ಬಿಬ್ಬು

    ಬೆಂಗಳೂರು: ನೋಟಿಸ್ ನೀಡುವ ಮೂಲಕ ಅಕ್ಕಿ ವ್ಯಾಪರಿಯೊಬ್ಬರನ್ನು ಆದಾಯ ತೆರಿಗೆ ಇಲಾಖೆ(ಐಟಿ)ಯ ಅಧಿಕಾರಿಗಳು ತಬ್ಬಿಬ್ಬಾಗುವಂತೆ ಮಾಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

    ಅಕ್ಕಿ ವ್ಯಾಪಾರದ ವಹಿವಾಟಿಗೆಂದು ಸುರೇಶ್ ಆಕ್ಸಿಸ್ ಬ್ಯಾಂಕಿನಲ್ಲಿ 2013ರಿಂದ ಚಾಲ್ತಿ ಖಾತೆ ಹೊಂದಿದ್ದರು. ಈ ಮಧ್ಯೆ ಲೋನ್‍ಗೆ ಅರ್ಜಿ ಹಾಕಿದ್ದರು. ಈ ಸಂಬಂಧ ಸಹಿ ಮಾಡಿದ್ದ ಎರಡು ಖಾಲಿ ಚೆಕ್ ಬ್ಯಾಂಕ್‍ಗೆ ನೀಡಿದ್ದರು. ಆದರೆ ಸಾಲ ಸಿಗದ ಹಿನ್ನೆಲೆಯಲ್ಲಿ ಚೆಕ್ ವಾಪಸ್ ಪಡೆಯದೆ ಸುರೇಶ್ ಸುಮ್ಮನಾಗಿದ್ದರು.

    ಬಳಿಕ ಅಕ್ಕಿ ವ್ಯಾಪಾರ ನಷ್ಟವಾಗಿ 2016ರಲ್ಲಿ ಉದ್ಯೋಗ ಅರಸಿ ಸುರೇಶ್ ಕೆನಡಾಗೆ ತೆರಳಿದ್ದರು. ಈ ಮಧ್ಯೆ ನೋಟ್ ಬ್ಯಾನ್ ಸಂದರ್ಭದಲ್ಲಿ ಸುರೇಶ್ ಖಾತೆಯಿಂದ ಅಪರಿಚಿತರು ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಸುರೇಶ್ ಖಾತೆಗೆ ದಿಲೀಪ್ ಎಂಬವರ ಹೆಸರಿನಲ್ಲಿ 88 ಲಕ್ಷ ರೂಪಾಯಿ ವರ್ಗಾವಣೆ ಆಗಿದೆ. ಬಳಿಕ ನವೆಂಬರ್ 12ರಂದು 40 ಲಕ್ಷ ರೂ. ಮತ್ತೆ ಸುರೇಶ್ ಖಾತೆಗೆ ಬಿದ್ದಿದೆ.

    ಅದೇ ದಿನ ಇವರ ಖಾತೆಯಿಂದ ಶ್ರಾವಣಿ ಪ್ರಾಜೆಕ್ಟ್ ಎಂಬ ಖಾತೆಗೆ 1.28 ಕೋಟಿ ಹಣ ವರ್ಗಾವಣೆ ಆಗಿದೆ. ಇದನ್ನು ಗಮನಿಸಿದ ಐಟಿ ಇಲಾಖೆ, ಹಣ ವರ್ಗಾವಣೆ ದಾಖಲೆ ಕೇಳಿ ನೊಟೀಸ್ ಜಾರಿ ಮಾಡಿದೆ. ಐಟಿ ಅಧಿಕಾರಿಗಳ ನೋಟಿಸ್ ಕಂಡು ಸುರೇಶ್ ತಬ್ಬಿಬ್ಬಾಗಿದ್ದಾರೆ.

    ನವೆಂಬರ್ 14ರಂದು ದಾಖಲೆ ತರುವಂತೆ ನೋಟೀಸ್ ನೀಡಲಾಗಿದೆ. ಈ ಸಂಬಂಧ ರಾಮಮೂರ್ತಿನಗರ ಠಾಣೆಗೆ ಸುರೇಶ್ ದೂರು ನೀಡಿದ್ದಾರೆ.

  • ಕಲ್ಕಿ ಭಗವಾನ್ ಪುತ್ರನ ಒಡೆತನದ ‘ವೈಟ್ ಲೋಟಸ್’ಗಳಲ್ಲಿ ಸಿಕ್ತು 90 ಕೆಜಿ ಚಿನ್ನ, 64 ಕೋಟಿ ರೂ. ನಗದು

    ಕಲ್ಕಿ ಭಗವಾನ್ ಪುತ್ರನ ಒಡೆತನದ ‘ವೈಟ್ ಲೋಟಸ್’ಗಳಲ್ಲಿ ಸಿಕ್ತು 90 ಕೆಜಿ ಚಿನ್ನ, 64 ಕೋಟಿ ರೂ. ನಗದು

    ಚೆನ್ನೈ: ಸ್ವಯಂ ಘೋಷಿತ ದೇವಮಾನವ ಕಲ್ಕಿ ಆಶ್ರಮ, ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಯು ಈ ಬಾರಿ ಕಲ್ಕಿ ಪುತ್ರ ಕೃಷ್ಣಾನ ಒಡೆತನದ ‘ವೈಟ್ ಲೋಟಸ್’ಗಳ ಮೇಲೆ  ರೇಡ್ ಮಾಡಿದೆ.

    ಕಲ್ಕಿ ಪುತ್ರನ ಕೃಷ್ಣಾಗೆ ಸೇರಿದ ಹೈದರಾಬಾದ್, ಚೆನ್ನೈ, ಬೆಂಗಳೂರು, ಚಿತ್ತೂರು ಹಾಗೂ ಕುಪ್ಪಂನಲ್ಲಿರುವ ‘ವೈಟ್ ಲೋಟಸ್’ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 90 ಕೆಜಿ ಚಿನ್ನ, 44 ಕೋಟಿ ರೂ. ನಗದು ಹಾಗೂ 20 ಕೋಟಿ ರೂ. ಮೌಲ್ಯದ ಅಮೆರಿಕನ್ ಡಾಲರ್ ನೋಟುಗಳು ದೊರೆತಿವೆ. ಜೊತೆಗೆ ಪ್ರಮುಖ ದಾಖಲೆಗಳು ಸಿಕ್ಕಿದ್ದು, ಎಲ್ಲವನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಇದುವರೆಗೆ ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕದಲ್ಲಿರುವ ಕಲ್ಕಿಯ 40ಕ್ಕೂ ಹೆಚ್ಚು ಆಸ್ತಿಗಳ ಮೇಲೆ ದಾಳಿ ನಡೆದಿದೆ. ಒನ್‍ನೆಸ್, ವೆಲ್‍ನೆಸ್ ಸಮೂಹದ ಎಲ್ಲ ಕಂಪನಿಗಳನ್ನು ಜಾಲಾಡಲಾಗುತ್ತಿದೆ. ಇದುವರೆಗೆ ಅಘೋಷಿತ ಆಸ್ತಿ ಪತ್ರಗಳು, ವಜ್ರವೈಢೂರ್ಯ, ಅಪಾರ ಪ್ರಮಾಣದ ನೋಟಿನ ಕಂತೆಗಳು ಸೇರಿ ಬರೋಬ್ಬರಿ 112 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸಿದೆ. ಆಂಧ್ರದ ವರದಯ್ಯಪಾಳ್ಯಂನ ಆಶ್ರಮದಿಂದ ಕದ್ದು ಮುಚ್ಚಿ ಸಾಗಿಸುತ್ತಿದ್ದ 45 ಕೋಟಿ ರೂ. ನಗದನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಕಲ್ಕಿ ಭಗವಾನ್ ಪುತ್ರ ಕೃಷ್ಣಾ ವಿವಿಧ ಉದ್ಯಮಗಳಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು ಲೆಕ್ಕ ಪತ್ರದಲ್ಲಿ ಗೋಲ್‍ಮಾಲ್ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಐಟಿ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಅಲ್ಲದೇ ತೆರಿಗೆ ವಂಚನೆ ಹಾಗೂ ಅಕ್ರಮ ಆಸ್ತಿ ಸಂಪಾದನೆ ಹಾಗೂ ವಿದೇಶಿ ಭಕ್ತರ ಹೆಸರಿನ ಮೇಲೆ ಭಾರೀ ಮೊತ್ತದಲ್ಲಿ ನಗದನ್ನು ವಿದೇಶಕ್ಕೆ ರವಾನೆ ಮಾಡಿದ ಆರೋಪ ಕೂಡ ಕೇಳಿ ಬಂದಿದೆ.

    ಎಲ್‍ಐಸಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ಆಂಧ್ರಪ್ರದೇಶ ಮೂಲದ ವಿಜಯ್‍ಕುಮಾರ್ ನಾಯ್ಡು ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಬೆಂಗಳೂರಿನ ಶಾಲೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ನಂತರ ಅಲ್ಲಿಂದಲೂ ಹೊರಬಿದ್ದು ಚಿತ್ತೂರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದ. 1989ರಲ್ಲಿ ಶಿಕ್ಷಣ ಸಂಸ್ಥೆಗಳು ನಷ್ಟ ಅನುಭವಿಸಿದ ಬಳಿಕ ಕೆಲ ವರ್ಷ ಭೂಗತನಾಗಿದ್ದ ವಿಜಯ್‍ಕುಮಾರ್ ದಿಢೀರ್ ಸ್ವಾಮಿ ವೇಷದಲ್ಲಿ ಪ್ರತ್ಯಕ್ಷನಾಗಿ, ”ನಾನು ವಿಷ್ಣುವಿನ 10ನೇ ಅವತಾರ. ನಾನು ಕಲ್ಕಿ ಭಗವಾನ್” ಎಂದು ಘೋಷಿಸಿಕೊಂಡಿದ್ದ.

    ನನ್ನ ಪತ್ನಿಯೂ ದೇವರ ಅವತಾರ ಎಂದು ಕಲ್ಕಿ ಘೋಷಿಸಿಕೊಂಡಿದ್ದ. ಕೆಲ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ದುಡ್ಡುಕೊಟ್ಟಂತೆ ಇವರ ಸಾಮಾನ್ಯ ದರ್ಶನಕ್ಕೆ ಭಕ್ತರು 5 ಸಾವಿರ ರೂ. ಮತ್ತು ವಿಶೇಷ ದರ್ಶನಕ್ಕೆ 25 ಸಾವಿರ ರೂ. ಪಾವತಿಸಬೇಕಿತ್ತು. ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹಲವು ಕಡೆ ಆಶ್ರಮ ಕಡೆ ಸ್ಥಾಪಿಸಿದ್ದ. ಈತನಿಗೆ ಅನಿವಾಸಿ ಭಾರತೀಯರು ಮತ್ತು ದೊಡ್ಡ ದೊಡ್ಡ ಉದ್ಯಮಿಗಳು ಭಕ್ತರಿದ್ದಾರೆ. ಭಕ್ತರು ಆಶ್ರಮಕ್ಕೆ ನೀಡಿದ ದೇಣಿಗೆ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದೆ. ಭಾರೀ ತೆರಿಗೆ ವಂಚನೆ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.

  • ಪರಮೇಶ್ವರ್ ಪಿಎ ರಮೇಶ್ ವಿಚಾರಣೆ ನಡೆಸಿಲ್ಲ: ಐಟಿ ಸ್ಪಷ್ಟನೆ

    ಪರಮೇಶ್ವರ್ ಪಿಎ ರಮೇಶ್ ವಿಚಾರಣೆ ನಡೆಸಿಲ್ಲ: ಐಟಿ ಸ್ಪಷ್ಟನೆ

    ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಬಗ್ಗೆ ಸ್ಪಷ್ಟನೆ ನೀಡಿರುವ ಐಟಿ ಇಲಾಖೆ, ರಮೇಶ್ ಅವರನ್ನು ಯಾವುದೇ ವಿಚಾರಣೆಗೆ ಒಳಪಡಿಸಿಲ್ಲ ಎಂದು ತಿಳಿಸಿದೆ.

    ಪ್ರಕರಣದ ಸಂಬಂಧ ಐಟಿ ಇಲಾಖೆಯಿಂದ ಮಾಧ್ಯಮಗಳಿಗೆ ಸ್ಪಷ್ಟನೆ ಲಭಿಸಿದ್ದು, ಮೃತ ರಮೇಶ್ ಅವರ ಮನೆಯಲ್ಲಿ ನಮ್ಮ ತಂಡ ಶೋಧ ಕಾರ್ಯ ನಡೆಸಿಲ್ಲ. ಅಲ್ಲದೇ ರಮೇಶನಿಂದ ಯಾವುದೇ ರೀತಿಯ ಹೇಳಿಕೆಯನ್ನು ಸಹ ಪಡೆದಿಲ್ಲ. ಐಟಿ ಆಕ್ಟ್ ಸೆಕ್ಷನ್ 131, 132 ರ ಅಡಿಯಲ್ಲಿ ಯಾವುದೇ ಹೇಳಿಕೆಯನ್ನು ಕೂಡ ಪಡೆದಿಲ್ಲ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಐಟಿಯವ್ರ ಬಳಿಯೇ ಆತ್ಮಹತ್ಯೆ ಮಾಡ್ಕೊಳ್ಳೋದಾಗಿ ಹೇಳಿದ್ದರು: ರಮೇಶ್ ಪತ್ನಿ

    ಅಕ್ಟೋಬರ್ 10ರಂದು ಪರಮೇಶ್ವರ್ ನಿವಾಸಕ್ಕೆ ನಮ್ಮ ಅಧಿಕಾರಿಗಳ ತಂಡ ಪರಿಶೀಲನೆಗೆ ತೆರಳಿತ್ತು. ಈ ವೇಳೆ ಪರಮೇಶ್ವರ್ ಕಾರ್ಯಕ್ರಮದ ನಿಮಿತ್ತ ಕೊರಟಗೆರೆಗೆ ತೆರಳಿದ್ದಾರೆ ಎಂದು ಮಾಜಿ ಡಿಸಿಎಂ ಪತ್ನಿ ತಿಳಿಸಿದರು. ಮಾಹಿತಿ ತಿಳಿದ ಕೂಡಲೇ ನಮ್ಮ ತಂಡ ಕೊರಟಗೆರೆಗೆ ತೆರಳಿ ಭದ್ರತೆಯೊಂದಿಗೆ ಬೆಂಗಳೂರಿನ ನಿವಾಸಕ್ಕೆ ಕರೆತರಲಾಗಿತ್ತು. ಪರಮೇಶ್ವರ್ ಅವರ ನಿವಾಸದಲ್ಲಿ ಶೋಧ ಕಾರ್ಯ ನಡೆಸುತ್ತಿರುವ ವೇಳೆ ಪಿಎ ರಮೇಶ್ ಉಪಸ್ಥಿತರಿದ್ದರು. ಸಂಪೂರ್ಣ ತಪಾಸಣೆಯ ವೇಳೆ ಅವರು ಅಲ್ಲಿಯೇ ಇದ್ದರು. ಆ ವೇಳೆ ಪಂಚನಾಮೆಗೆ ರಮೇಶ್ ಹೇಳಿಕೆಯನಷ್ಟೇ ಪಡೆದುಕೊಂಡಿದ್ದೇವೆ ಎಂದು ಐಟಿ ಹೇಳಿದೆ. ಇದನ್ನು ಓದಿ: ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದೇನೆ, ಪತ್ನಿ-ಮಕ್ಕಳಿಗೆ ಟಾರ್ಚರ್ ಕೊಡ್ಬೇಡಿ: ರಮೇಶ್

    ಪರಮೇಶ್ವರ್ ಮನೆಯಲ್ಲಿ ಅಕ್ಟೋಬರ್ 10 ರಂದು ಆರಂಭವಾದ ತಪಾಸಣೆ ಅ.12 ಬೆಳಗಿನ 2:45 ರ ಜಾವದವರೆಗೆ ನಡೆದಿದೆ. ಅಲ್ಲಿಯವರೆಗೂ ರಮೇಶ್ ಅವರ ಮನೆಯಲ್ಲಿಯೇ ಇದ್ದರು ಎಂದು ವಿವರಗಳನ್ನು ನೀಡಿದೆ.

    ಇತ್ತ ಪರಮೇಶ್ವರ್ ಆಪ್ತ ಆತ್ಮಹತ್ಯೆ ಹಿನ್ನೆಲೆಯಲ್ಲಿ ಐಟಿ ಕೇಂದ್ರ ಕಚೇರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಡಿಸಿಎಂ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕುವ ಮುನ್ನೆಚ್ಚರಿಕೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಬೆಂಗಳೂರಿನ ಕ್ವೀನ್ಸ್ ರೋಡ್ ನಲ್ಲಿರೋ ಐಟಿ ಕಚೇರಿ ಎದುರು ಒಂದು ಸಿಆರ್ ತುಕಡಿ ನಿಯೋಜಿಸಲಾಗಿದ್ದು, ಗೇಟ್ ಗಳಿಗೆ ಬೀಗ ಹಾಕಲಾಗಿದ್ದು, ಇಂದು ಐಟಿ ಕಚೇರಿ ರಜೆ ಎಂಬ ಬೋರ್ಡ್ ಕೂಡ ಗೇಟ್‍ಗೆ ಹಾಕಿದ್ದಾರೆ. ಇದನ್ನು ಓದಿ: ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆಗೆ ಐಟಿ ಅಧಿಕಾರಿಗಳೇ ಹೊಣೆ: ಸಿದ್ದರಾಮಯ್ಯ

    https://www.youtube.com/watch?v=leX5_YpaTpc

  • ಐಟಿ ಇಲಾಖೆ ಎಲ್ಲಾ ಬಿಟ್ಟು ನಿಂತಿದೆ: ದಿನೇಶ್ ಗುಂಡೂರಾವ್

    ಐಟಿ ಇಲಾಖೆ ಎಲ್ಲಾ ಬಿಟ್ಟು ನಿಂತಿದೆ: ದಿನೇಶ್ ಗುಂಡೂರಾವ್

    – ಐಟಿ ಬಿಜೆಪಿ ಡಿಪಾರ್ಟ್ಮೆಂಟ್

    ಬೆಂಗಳೂರು: ಆದಾಯ ತರಿಗೆ (ಐಟಿ) ಇಲಾಖೆ ಎಲ್ಲಾ ಬಿಟ್ಟು ನಿಂತಿದೆ. ಅದು ಬಿಜೆಪಿಯ ಡಿಪಾಟ್ರ್ಮೆಂಟ್ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

    ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಐಟಿ ಅಧಿಕಾರಿಗಳು ಕಾಂಗ್ರೆಸ್-ಜೆಡಿಎಸ್ ಬೆಂಬಲಿಗರು ಹಾಗೂ ನಾಯಕರಲ್ಲಿ ಭಯ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ತೊಂದರೆ ಕೊಟ್ಟು ಪ್ರಚಾರಕ್ಕೆ ಅಸ್ತವ್ಯಸ್ತ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿಲ್ಲ. ಬಿಜೆಪಿಯವರು ನಕಲಿ ಪತ್ರ ಸೃಷ್ಟಿ ಮಾಡಿದ್ದಾರೆ. ಈ ಹಿಂದೆಯೇ ಬಿಜೆಪಿ ತೋರಿಸುತ್ತಿರುವ ಪತ್ರ ನಕಲಿ ಎಂದು ಸಾಬೀತಾಗಿದೆ. ಚುನಾವಣಾ ಹಿನ್ನೆಲೆಯಲ್ಲಿ ಪತ್ರವನ್ನು ಮತ್ತೊಮ್ಮೆ ಬಹಿರಂಗಗೊಳಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

    ಬಿಜೆಪಿ ಆರೋಪಿಸುತ್ತಿರುವ ಪತ್ರದಲ್ಲಿ ಸಂಪೂರ್ಣ ಅಕ್ಷರ ದೋಷಗಳಿವೆ. ಇದೊಂದು ರಾಜಕೀಯ ವ್ಯಭಿಚಾರ. ಮಾನ ಮರ್ಯಾದೆ ನೈತಿಕತೆ ಇದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕ್ಷಮೆ ಕೇಳಬೇಕು. ಅಷ್ಟೇ ಅಲ್ಲದೆ ಪತ್ರದ ಕುರಿತಾಗಿ ನೀಡಿದ ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳಬೇಕು ಎಂದ ಅವರು, ಸುಳ್ಳು ಆರೋಪ ಮಾಡಿದವರ ವಿರುದ್ಧ ಕ್ರಿಮಿನಲ್ ದೂರು ನೀಡಲು ಪಕ್ಷದಲ್ಲಿ ಚಿಂತನೆ ನಡೆದಿದೆ ಎಂದರು.

    ಪ್ರಧಾನಿ ಮೋದಿ ವಿರೋಧಿಗಳಿಗೆ ತಾಯಿ ಗಂಡರು ಎಂಬ ಬಿಜೆಪಿ ಶಾಸಕ ಸಿ.ಟಿ.ರವಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್ ಅವರು, ಇದೇನಾ ಬಿಜೆಪಿ ಪಕ್ಷದ ಸಂಸ್ಕೃತಿ? ಸಂಸ್ಕೃತಿ ಇರುವವರು ಈ ರೀತಿ ಮಾತನಾಡುವುದಿಲ್ಲ. ರಾಜಕೀಯ ಚರ್ಚೆಗಳನ್ನು ಕೆಳಮಟ್ಟಕ್ಕೆ ಇಳಿಸುತ್ತಿದ್ದಾರೆ. ಈ ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುತ್ತದೆ. ಶಾಸಕ ಸಿ.ಟಿ.ರವಿ, ಕೇಂದ್ರ ಸಚಿವ ಅನಂತ್‍ಕುಮಾರ ಹೆಗ್ಡೆ, ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಶೋಭಾ ಕರಂದ್ಲಾಜೆ ಎಲ್ಲಾ ಒಂದೇ ಸಂಸ್ಕೃತಿಯವರು. ಅವರ ಸಾಲಿಗೆ ಈಗ ಹೊಸದಾಗಿ ತೇಜಸ್ವಿ ಸೂರ್ಯ ಸೇರ್ಪಡೆಯಾಗುತ್ತಿದ್ದಾರೆ ಎಂದರು.

    ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಒಳ ಜಗಳದಿಂದ ಡೈರಿ ಹೊರಬಂದಿದೆ. ಇದಕ್ಕೂ ಹಳೆಯ ಡೈರಿಗೆ ಸಂಬಂಧ ಇದೆಯೋ ಇಲ್ವೋ ಗೊತ್ತಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಹೈಕಮಾಂಡ್‍ಗೆ ಕಪ್ಪು ಹಣ ನೀಡಿರುವ ಮಾಹಿತಿ ಇರುವ ಡೈರಿಯನ್ನು ಕೆ.ಎಸ್.ಈಶರಪ್ಪ ಅವರ ಪಿಎ ಪೊಲೀಸರಿಗೆ ಕೊಟ್ಟಿದ್ದಾರೆ. ಅದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಸೂಕ್ತ ತನಿಖೆ ನಡೆಸಬೇಕು. ಈಶ್ವರಪ್ಪ ಅವರ ಪಿಎ ಅನ್ನು ಅಪಹರಣ ಮಾಡಲು ಹೋಗಿದ್ದು ಯಾಕೆ? ಕೊಲೆ ಮಾಡುವ ಸಂಚು ರೂಪಿಸಿದವರು ಯಾರು ಎಂಬ ಬಗ್ಗೆ ಪೊಲೀಸರೇ ಹೇಳಬೇಕಿದೆ ಎಂದರು.

  • ಕಾರವಾರ ಕಾಂಗ್ರೆಸ್, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಆಪ್ತನ ಮನೆ ಮೇಲೆ ಐಟಿ ದಾಳಿ

    ಕಾರವಾರ ಕಾಂಗ್ರೆಸ್, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಆಪ್ತನ ಮನೆ ಮೇಲೆ ಐಟಿ ದಾಳಿ

    ಕಾರವಾರ: ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಬೆಂಬಲಿಗ ಆಪ್ತರ ನಿವಾಸದ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪರಿಶೀಲನೆಯಲ್ಲಿ ನಡೆಸುತ್ತಿದ್ದಾರೆ.

    ಶಿರಸಿಯ ಶಕೀಲ್ ಶೇಖ್ ಅವರ ನಿವಾಸ ಹಾಗೂ ಕಚೇರಿ ಮೇಲೆ ಐಟಿ ಅಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಶಿರಸಿಯ ಆಟೋ ಮಾರ್ಕ್ ಮಾಲೀಕರಾಗಿರುವ ಶಕೀಲ್ ಶೇಖ್ ಅವರು ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್ ಉದ್ಯಮ ನಡೆಸುತ್ತಿದ್ದಾರೆ.

    ಜೆಡಿಎಸ್ ಅಭ್ಯಾರ್ಥಿ ಆನಂದ್ ಆಸ್ನೋಟಿಕರ್ ಬೆಂಬಲಿರಾಗಿರುವ ಶಕೀಲ್ ಶೇಖ್ ಮನೆಯಲ್ಲಿ ಅಕ್ರಮವಾಗಿ ಮತದಾರರಿಗೆ ಹಂಚಲು ಹಣ ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಹಾಗೂ ದೂರಿನ ಆಧಾರದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆದಿದ್ದಾರೆ. 5 ಜನ ಚುನಾವಣಾಧಿಕಾರಿಗಳು ಹಾಗೂ ಐಟಿ ಅಧಿಕಾರಿಗಳು ಮನೆ ಕಚೇರಿಯನ್ನು ಶೋಧ ಕಾರ್ಯ ನಡೆಸುತ್ತಿದ್ದಾರೆ.

  • ಮಂಡ್ಯದಲ್ಲಿ ಮುಂದುವರಿದ ಐಟಿ ರೇಡ್ – ನಿಖಿಲ್ ತಂಗಿದ್ದ ಹೋಟೆಲ್ ಮೇಲೆ ದಾಳಿ

    ಮಂಡ್ಯದಲ್ಲಿ ಮುಂದುವರಿದ ಐಟಿ ರೇಡ್ – ನಿಖಿಲ್ ತಂಗಿದ್ದ ಹೋಟೆಲ್ ಮೇಲೆ ದಾಳಿ

    ಮಂಡ್ಯ: ಮೈತ್ರಿ ಪಕ್ಷಗಳ ನಾಯಕರು ನಿರಂತರವಾಗಿ ಕಿಡಿಕಾರುತ್ತಿದ್ದರೂ ಜಿಲ್ಲೆಯಲ್ಲಿ ಐಟಿ ತನ್ನ ದಾಳಿಯನ್ನು ಮುಂದುವರಿಸಿದೆ. ಇಂದು ಕೂಡ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್‍ನ ಬೃಂದಾವನದಲ್ಲಿರುವ ಖಾಸಗಿ ಹೋಟೆಲ್ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಸಾಮಾನ್ಯವಾಗಿ ಮುಖ್ಯಮತ್ರಿ ಕುಮಾರಸ್ವಾಮಿ ಸೇರಿದಂತೆ ಕ್ಷೇತ್ರಕ್ಕೆ ಆಗಮಿಸುವ ಹಲವು ಗಣ್ಯ ನಾಯಕರು ಇದೇ ಹೋಟೆಲಿನಲ್ಲಿ ವಾಸ್ತವ್ಯ ಹೂಡುತ್ತಾರೆ. ಈ ಹಿನ್ನೆಲೆಯಲ್ಲಿ ಐಟಿ ರೇಡ್ ಆಗಿರುವ ಶಂಕೆ ವ್ಯಕ್ತವಾಗಿದ್ದು, ನಿನ್ನೆ ರಾತ್ರಿ ಕೂಡ ಮೈತ್ರಿ ಅಭ್ಯರ್ಥಿ ನಿಖಿಲ್ ಅವರು ಇದೇ ಹೋಟೆಲಿನಲ್ಲಿ ತಂಗಿದ್ದರು.

    ಇಂದು ಮಧ್ಯಾಹ್ನದ ವೇಳೆ ಆಗಮಿಸಿದ ಐಟಿ ಅಧಿಕಾರಿಗಳ ತಂಡ ಸುಮಾರು ಅರ್ಧ ಗಂಟೆ ಕಾಲ ಹೋಟೆಲ್ ಕೊಠಡಿಯನ್ನು ಪರಿಶೀಲನೆ ನಡೆಸಿತು. 30 ಜನರ ಅಧಿಕಾರಿಗಳ ತಂಡ ದಾಳಿಯ ವೇಳೆ ಆಗಮಿಸಿತ್ತು ಎಂಬ ಮಾಹಿತಿ ಲಭಿಸಿದೆ.

    ಚುನಾವಣೆ ಘೋಷಣೆಯಾದ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಮನೆ ಮೇಲೆ ಐಟಿ ದಾಳಿ ನಡೆಸಿತ್ತು. ಅಲ್ಲದೇ ನಿನ್ನೆಯೂ ಕೂಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ನಾಯಕ ಎಂ.ಎಸ್ ಆತ್ಮಾನಂದ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.

    ಎಂ.ಎಸ್ ಆತ್ಮಾನಂದ ಅವರು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕರಾಗಿದ್ದು, ಸದ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಮಂಡ್ಯದ ಸುಭಾಷ್ ನಗರ 1ನೇ ತಿರುವಿನಲ್ಲಿರುವ ಆತ್ಮಾನಂದ ಮನೆ ನಾಲ್ಕೈದು ಅಧಿಕಾರಿಗಳ ತಂಡ ದಾಳಿ ನಡೆಸಿ ಮನೆಯಲ್ಲಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿತ್ತು.

  • ಲಂಚ ಪಡೆಯೋವಾಗ ಸಿಬಿಐ ಅಧಿಕಾರಿಗಳ ಬಲೆಗೆ ಬಿದ್ದ ಐಟಿ ಅಧಿಕಾರಿ

    ಲಂಚ ಪಡೆಯೋವಾಗ ಸಿಬಿಐ ಅಧಿಕಾರಿಗಳ ಬಲೆಗೆ ಬಿದ್ದ ಐಟಿ ಅಧಿಕಾರಿ

    ಬೆಂಗಳೂರು: ಗುತ್ತಿಗೆದಾರರಿಂದ ಹಣ ಸ್ವೀಕರಿಸುವಾಗ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ಸಿಬಿಐ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ನಗರದ ಜಯನಗರ ಸ್ಟಾರ್ ಬಕ್ಸ್ ಕಾಫಿಯಲ್ಲಿ ನಡೆದಿದೆ.

    ಆದಾಯ ತೆರಿಗೆ ಇಲಾಖೆ ಅಧಿಕಾರಿ ನಾಗೇಶ್ ಸಿಬಿಐ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು, ಗುತ್ತಿಗೆದಾರರಿಂದ 40 ಲಕ್ಷ ರೂ. ಹಣ ಬೇಡಿಕೆ ಇಟ್ಟು 14 ಲಕ್ಷ ರೂ. ಸ್ವೀಕರಿಸುವಾಗ ಬಲೆಗೆ ಬಿದಿದ್ದಾರೆ.

    ಏನಿದು ಪ್ರಕರಣ: ಗುತ್ತಿಗೆದಾರ ಶ್ರೀನಿವಾಸ್ ಎಂಬುವರ ಮನೆ ಮೇಲೆ ಮಾರ್ಚ್ 6 ರಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅವರ ಮನೆಯಲ್ಲಿ ಯಾವುದೇ ದಾಖಲೆ ಸಿಕ್ಕಿರಲಿಲ್ಲ ಎನ್ನಲಾಗಿದೆ. ಆದರೆ ಮನೆಯಲ್ಲಿ ಸಿಕ್ಕ 40 ಲಕ್ಷ ರೂ. ಚೆಕ್ ಒಂದರ ವಿಚಾರಣೆ ನೆಪದಲ್ಲಿ ಅವರನ್ನು ಐಟಿ ಕಚೇರಿ ಆಗಮಿಸಲು ತಿಳಿಸಿದ್ದರು. ಆ ಬಳಿಕ ಕೇಸ್ ಖುಲಾಸೆ ಗೊಳಿಸಲು 40 ಲಕ್ಷಕ್ಕೆ ಬೇಡಿಕೆ ಇಟ್ಟು 14 ಲಕ್ಷ ರೂ. ಪಡೆಯಲು ಕಾಫಿ ಕೆಫೆಗೆ ಆಗಮಿಸಿದ್ದರು.

    ಐಟಿ ಅಧಿಕಾರಿ ಹಣಕ್ಕೆ ಬೇಡಿಕೆ ಇಟ್ಟ ಕುರಿತು ಗುತ್ತಿಗೆ ದಾರ ಶ್ರೀನಿವಾಸ್ ಸ್ನೇಹಿತನ ಸಲಹೆ ಮೇರೆಗೆ ಸಿಬಿಐ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಅನ್ವಯ ಸ್ಥಳಕ್ಕೆ ಬಂದ ಸಿಬಿಐ ಅಧಿಕಾರಿಗಳು ಹಣ ಪಡೆಯುವ ವೇಳೆಯೇ ನಾಗೇಶ್ ರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇಂದು ಸಂಜೆ ಘಟನೆ ನಡೆದಿದ್ದು, ನಾಗೇಶ್‍ರನ್ನ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಸಿಬಿಐ ಪೊಲೀಸರ ಮಾಹಿತಿ ಅನ್ವಯ ಮತ್ತೊಬ್ಬ ಐಟಿ ಅಧಿಕಾರಿ ಕೂಡ ಸ್ಥಳಕ್ಕೆ ಆಗಮಿಸಬೇಕಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಆತ ಬಂದಿಲ್ಲ ಎನ್ನಲಾಗಿದೆ. ಈ ಬಗ್ಗೆಯೂ ಸಿಬಿಐ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

  • ಐಟಿ ರೈಡ್ ಮಾಹಿತಿ ಸುಳಿವು ಬಿಜೆಪಿ ಬೆಂಬಲ ಅಭ್ಯರ್ಥಿಗೆ ಗೊತ್ತಾಗಿದ್ದು ಹೇಗೆ – ಸಿಎಂ ಎಚ್‍ಡಿಕೆ ಗಂಭೀರ ಆರೋಪ

    ಐಟಿ ರೈಡ್ ಮಾಹಿತಿ ಸುಳಿವು ಬಿಜೆಪಿ ಬೆಂಬಲ ಅಭ್ಯರ್ಥಿಗೆ ಗೊತ್ತಾಗಿದ್ದು ಹೇಗೆ – ಸಿಎಂ ಎಚ್‍ಡಿಕೆ ಗಂಭೀರ ಆರೋಪ

    ಬೆಂಗಳೂರು: ರಾಜ್ಯದಲ್ಲಿ ಇಂದು ಹಲವೆಡೆ ನಡೆದಿರುವ ಐಟಿ ಅಧಿಕಾರಿಗಳ ದಾಳಿಯ ಬಗ್ಗೆ ಮಂಡ್ಯ ಬಿಜೆಪಿ ಬೆಂಬಲ ಅಭ್ಯರ್ಥಿಗೆ ಮಾಹಿತಿ ಹೇಗೆ ಲಭಿಸಿತ್ತು ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದು, ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದ ಐಟಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಿನ್ನೆ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲ ಅಭ್ಯರ್ಥಿ ಮಧ್ಯಾಹ್ನ ಐಟಿ ದಾಳಿಯ ಬಗ್ಗೆ ಮಾತನಾಡಿ ಕೆಲವೇ ಕ್ಷಣಗಳಲ್ಲಿ ಐಟಿ ದಾಳಿಯಾಗುತ್ತೆ ಎಂದು ಹೇಳಿದ್ದಾರೆ. ಇತ್ತ ಸಂಜೆಯಾಗುತ್ತಿದಂತೆ ಕೇಂದ್ರದ ಐಟಿ ಅಧಿಕಾರಿಗಳು ದಾಳಿಗೆ ಸಿದ್ಧರಾಗುತ್ತಾರೆ. ಅವರಿಗೆ ಈ ಬಗ್ಗೆ ಮಾಹಿತಿ ಹೇಗೆ ಲಭಿಸಿತ್ತು ಎಂದು ಪ್ರಶ್ನೆ ಮಾಡಿದರು.

    ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಇಂತಹ ದಾಳಿಗೆ ಹೆದುರುವವರು ನಾವಲ್ಲಾ. ಐಟಿ ದಾಳಿಯ ಬಗ್ಗೆ ನಮ್ಮ ವಿರೋಧವಿಲ್ಲ. ಕೆಲವೇ ಕೆಲವು ಪಕ್ಷದ ಮುಖಂಡರು, ಕಾರ್ಯಕರ್ತರ ಮನೆಯ ಮೇಲೆ ದಾಳಿ ಮಾಡುತ್ತಿರುವುದು ಸರಿಯಲ್ಲ. ಆದರೆ ಬಿಜೆಪಿ ನಾಯಕರ ಮನೆ ಮೇಲೆ ಏಕೆ ದಾಳಿ ನಡೆದಿಲ್ಲ. ಅವರೆಲ್ಲಾ ಸಾಚಗಳಾ? ಐಟಿ ಇಲಾಖೆಯ ಅಧಿಕಾರಿಯೊಬ್ಬರು ಮುಂಬೈನಲ್ಲಿ ಅಕ್ರಮ ಆಸ್ತಿ ಹೊಂದಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಸಂಪಾದನೆ ಮಾಡಿರುವ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಐಟಿ ಅಧಿಕಾರಿಗಳು ಬಿಜೆಪಿಯ ಏಜೆಂಟ್ ಆಗಿ ಕೆಲಸ ಮಾಡುವುದನ್ನು ಬಿಡಬೇಕು ಎಂದು ತಮ್ಮ ವಾಗ್ದಾಳಿಯನ್ನು ಮುಂದುವರಿಸಿದರು.

    ಸುಮಲತಾ ಹೇಳಿದ್ದೇನು?
    ಯಾರು ಸಾವಿರ ಕೋಟಿ, ಕೋಟಿ ಹಣ ಮಾಡಿಕೊಂಡಿದ್ದಾರೆ ಎಂಬುವುದರ ಬಗ್ಗೆ ಕೇಂದ್ರಕ್ಕೆ ಗೊತ್ತಿದೆ. ಅವರಿಗೆ ತಕ್ಕ ನ್ಯಾಯ ಸಿಗುತ್ತೆ. ಸ್ವಲ್ಪ ಕಾದು ನೋಡೋಣ ಎಂದು ಮಂಡ್ಯದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಸುಮಲತಾ ಹೇಳಿದ್ದರು.