Tag: Israel

  • ನೆರವು ಕೇಂದ್ರದ ಬಳಿ ಇಸ್ರೇಲಿ ಪಡೆಗಳಿಂದ ಗುಂಡಿನ ದಾಳಿ – 26 ಮಂದಿ ಪ್ಯಾಲೆಸ್ಟೀನಿಯನ್ನರು ಸಾವು

    ನೆರವು ಕೇಂದ್ರದ ಬಳಿ ಇಸ್ರೇಲಿ ಪಡೆಗಳಿಂದ ಗುಂಡಿನ ದಾಳಿ – 26 ಮಂದಿ ಪ್ಯಾಲೆಸ್ಟೀನಿಯನ್ನರು ಸಾವು

    ಟೆಲ್‌ ಅವೀವ್: ಗಾಜಾದ (Gaza) ನೆರವು ಕೇಂದ್ರದ ಬಳಿ ಇಸ್ರೇಲ್‌ ಪಡೆಗಳು ಗುಂಡಿನ ದಾಳಿ ನಡೆಸಿದ ಪರಿಣಾಮ 26 ಮಂದಿ ಸಾವನ್ನಪ್ಪಿದ್ದು, 80 ಜನರು ಗಾಯಗೊಂಡಿದ್ದಾರೆ.

    ದಕ್ಷಿಣ ಗಾಜಾದ ರಫಾ ಪ್ರದೇಶದಲ್ಲಿ ಅಮೆರಿಕ ಬೆಂಬಲಿತ ನೆರವು ವಿತರಣಾ ಸ್ಥಳದ ಬಳಿ ಇಸ್ರೇಲ್ ಪಡೆಗಳು (Israeli Forces) ಗುಂಡಿನ ದಾಳಿ ನಡೆಸಿದವು. ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್ (GHF) ನಡೆಸುತ್ತಿರುವ ನೆರವು ಕೇಂದ್ರದ ಹತ್ತಿರ ಅಲ್-ಆಲಮ್ ವೃತ್ತದ ಬಳಿ ಭಾನುವಾರ ಸಾವಿರಾರು ಪ್ಯಾಲೆಸ್ಟೀನಿಯನ್ನರು ಜಮಾಯಿಸಿದ್ದರು. ಆಗ ಇಸ್ರೇಲಿ ಟ್ಯಾಂಕ್‌ಗಳು ಸಮೀಪಿಸಿ ಜನಸಮೂಹದ ಮೇಲೆ ಗುಂಡು ಹಾರಿಸಿವೆ. ಇದನ್ನೂ ಓದಿ: 100ಕ್ಕೂ ಹೆಚ್ಚು ಆತ್ಮಾಹುತಿ ಡ್ರೋನ್ ಸಾಗಿಸಬಲ್ಲ `ಬಾಹುಬಲಿ’ ಡ್ರೋನ್ ಸಿದ್ಧಪಡಿಸಿದ ಚೀನಾ!

    ಹಮಾಸ್ ಕದನ ವಿರಾಮ ಪ್ರಸ್ತಾಪ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ವಾಷಿಂಗ್ಟನ್ ತಿರಸ್ಕರಿಸಿದ ಸ್ವಲ್ಪ ಸಮಯದ ನಂತರ ಇದು ಸಂಭವಿಸಿದೆ. ಖಾನ್ ಯೂನಿಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಒಂದಾದ ನಾಸರ್ ಆಸ್ಪತ್ರೆಗೆ ಗಾಯಾಳುಗಳನ್ನು ಕತ್ತೆ ಬಂಡಿಗಳಲ್ಲಿ ಕರೆದೊಯ್ಯಲಾಯಿತು.

    ರಫಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಸ್ರೇಲಿ ಪಡೆಗಳು ಮಾನವೀಯ ನೆರವು ವಿತರಣಾ ಸ್ಥಳಗಳಲ್ಲಿ ಜಮಾಯಿಸಿದ್ದ ಹಸಿದ ನಾಗರಿಕರ ಮೇಲೆ ಹೊಸ ಹತ್ಯಾಕಾಂಡವನ್ನು ಎಸಗಿವೆ ಎಂದು ಹಮಾಸ್ ಆರೋಪಿಸಿತು. ಇದನ್ನೂ ಓದಿ: ಉಕ್ರೇನ್ ಗಡಿಯಲ್ಲಿ ರೈಲ್ವೆ ಬ್ರಿಡ್ಜ್ ಕುಸಿತ – ಹಳಿ ತಪ್ಪಿ 7 ಮಂದಿ ಸಾವು, 30 ಜನಕ್ಕೆ ಗಾಯ

    ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಬೆಂಬಲಿತ ಖಾಸಗಿ ಸಂಸ್ಥೆಯಾದ ಜಿಹೆಚ್‌ಎಫ್, ಇಸ್ರೇಲ್ ಎರಡು ತಿಂಗಳಿಗೂ ಹೆಚ್ಚು ಕಾಲದ ಸಂಪೂರ್ಣ ದಿಗ್ಬಂಧನವನ್ನು ಭಾಗಶಃ ತೆಗೆದುಹಾಕಿದ ನಂತರ ಮೇ 26 ರಿಂದ ಗಾಜಾ ಪಟ್ಟಿಯಲ್ಲಿ ಆಹಾರವನ್ನು ವಿತರಿಸುತ್ತಿದೆ. ಆದಾಗ್ಯೂ, ವಿಶ್ವಸಂಸ್ಥೆಯ ನೆರವು ಸಂಸ್ಥೆಗಳು ಜಿಹೆಚ್‌ಎಫ್‌ನ ನೆರವು ಕಾರ್ಯವಿಧಾನವನ್ನು ಟೀಕಿಸಿವೆ. ಇದು ಮಾನವೀಯ ತತ್ವಗಳನ್ನು ಉಲ್ಲಂಘಿಸುತ್ತದೆ ಮತ್ತು ಪ್ಯಾಲೆಸ್ಟೀನಿಯನ್ನರಿಗೆ ಅಪಾಯಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿವೆ.

    ಗಾಜಾಗೆ ಹೆಚ್ಚಿನ ಪ್ರಮಾಣದ ಆಹಾರ ಸಹಾಯವನ್ನು ತ್ವರಿತವಾಗಿ ತಲುಪಿಸಲು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮವು ಇಸ್ರೇಲ್‌ಗೆ ಕರೆ ನೀಡಿದೆ. ಹತಾಶೆಯು ಹೆಚ್ಚುತ್ತಿರುವ ಅಭದ್ರತೆಗೆ ಕಾರಣವಾಗಿದೆ ಎಂದು ಹೇಳಿದೆ.

  • ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ – ಪತ್ರಕರ್ತ, ರಕ್ಷಣಾ ಅಧಿಕಾರಿ ಸೇರಿದಂತೆ 20 ಮಂದಿ ಸಾವು

    ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ – ಪತ್ರಕರ್ತ, ರಕ್ಷಣಾ ಅಧಿಕಾರಿ ಸೇರಿದಂತೆ 20 ಮಂದಿ ಸಾವು

    ಟೆಲ್‌ಅವೀವ್‌: ಇಸ್ರೇಲ್ ಸೇನೆ (Israel) ಗಾಜಾ (Gaza) ಮೇಲೆ ನಡೆಸಿದ ದಾಳಿಯಲ್ಲಿ ಪತ್ರಕರ್ತ ಮತ್ತು ಹಿರಿಯ ರಕ್ಷಣಾ ಅಧಿಕಾರಿ ಸೇರಿದಂತೆ 20 ಜನ ಸಾವನ್ನಪ್ಪಿದ್ದಾರೆ.

    ಇಸ್ರೇಲ್ ಕಾರ್ಯಾಚರಣೆಯಲ್ಲಿ ಇತ್ತೀಚಿನ ಸಾವುಗಳು ದಕ್ಷಿಣದಲ್ಲಿ ಖಾನ್ ಯೂನಿಸ್, ಉತ್ತರದಲ್ಲಿ ಜಬಾಲಿಯಾ ಮತ್ತು ಮಧ್ಯ ಗಾಜಾ ಪಟ್ಟಿಯ ನುಸೈರತ್‌ನಲ್ಲಿ ಪ್ರತ್ಯೇಕ ಇಸ್ರೇಲಿ ದಾಳಿಗಳಿಂದ ಉಂಟಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಶೂಟೌಟ್‌ – ಇಸ್ರೇಲ್‌ ರಾಯಭಾರ ಕಚೇರಿ ಅಧಿಕಾರಿಗಳ ಹತ್ಯೆ

    ಜಬಾಲಿಯಾದಲ್ಲಿ ವೈಮಾನಿಕ ದಾಳಿಯಿಂದ ಸ್ಥಳೀಯ ಪತ್ರಕರ್ತ ಹಸನ್ ಮಜ್ದಿ ಅಬು ವಾರ್ದಾ ಹಾಗೂ ಅವರ ಕುಟುಂಬಸ್ಥರು ಸಾವಿಗೀಡಾಗಿದ್ದಾರೆ. ನುಸೈರತ್‌ನಲ್ಲಿ ನಡೆದ ಮತ್ತೊಂದು ವೈಮಾನಿಕ ದಾಳಿಯಲ್ಲಿ ಪ್ರದೇಶದ ನಾಗರಿಕ ತುರ್ತು ಸೇವೆಯ ಹಿರಿಯ ಅಧಿಕಾರಿ ಅಶ್ರಫ್ ಅಬು ನಾರ್ ಮತ್ತು ಅವರ ಪತ್ನಿ ಸಾವಪ್ಪಿದ್ದಾರೆ. ಒಟ್ಟು 20 ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಅಬು ವಾರ್ದಾ ಅವರ ಸಾವಿನಿಂದ 2023ರ ಅಕ್ಟೋಬರ್ 7ರಿಂದ ಗಾಜಾದಲ್ಲಿ ಕೊಲ್ಲಲ್ಪಟ್ಟ ಪ್ಯಾಲೆಸ್ತೇನಿಯನ್ (Palestine) ಪತ್ರಕರ್ತರ ಸಂಖ್ಯೆ‌ 220ಕ್ಕೆ ಏರಿಕೆಯಾಗಿದೆ ಎಂದು ಹಮಾಸ್ ನಡೆಸುತ್ತಿರುವ ಸರ್ಕಾರಿ ಮಾಧ್ಯಮ ಕಚೇರಿ ತಿಳಿಸಿದೆ.

    ಶುಕ್ರವಾರ ಇಸ್ರೇಲ್ ಮಿಲಿಟರಿ ಗಾಜಾದಲ್ಲಿ ರಾತ್ರಿಯಿಡೀ ಹೆಚ್ಚಿನ ದಾಳಿಗಳನ್ನು ನಡೆಸಿದೆ. ಶಸ್ತ್ರಾಸ್ತ್ರ ಸಂಗ್ರಹಣಾಲಯ ಮತ್ತು ರಾಕೆಟ್ ಲಾಂಚರ್‌ಗಳು ಸೇರಿದಂತೆ 75 ಸ್ಥಳಗಳ ಮೇಲೆ ಈ ದಾಳಿ ನಡೆದಿದೆ. 2023 ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್‌ ಮೇಲೆ ನಡೆಸಿದ ದಾಳಿಯ ಬಳಿಕ, ಇಸ್ರೇಲ್‌ ಪ್ರತಿ ದಾಳಿ ಆರಂಭಿಸಿತ್ತು. ಇಲ್ಲಿವರೆಗಿನ ಸಂಘರ್ಷದಲ್ಲಿ 53,900 ಜನ ಪ್ಯಾಲೆಸ್ತೇನಿಯನ್ನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಜಪಾನ್‌ ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾದ ಭಾರತ

  • ಅಮೆರಿಕದಲ್ಲಿ ಶೂಟೌಟ್‌ – ಇಸ್ರೇಲ್‌ ರಾಯಭಾರ ಕಚೇರಿ ಅಧಿಕಾರಿಗಳ ಹತ್ಯೆ

    ಅಮೆರಿಕದಲ್ಲಿ ಶೂಟೌಟ್‌ – ಇಸ್ರೇಲ್‌ ರಾಯಭಾರ ಕಚೇರಿ ಅಧಿಕಾರಿಗಳ ಹತ್ಯೆ

    ವಾಷಿಂಗ್ಟನ್: ಇಸ್ರೇಲ್‌ ರಾಯಭಾರ (Israel Embassy) ಕಚೇರಿಯ ಇಬ್ಬರು ಅಧಿಕಾರಿಗಳನ್ನು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಅಮೆರಿಕದ (USA) ರಾಜಧಾನಿ ವಾಷಿಂಗ್ಟನ್ ಡಿ.ಸಿಯಲ್ಲಿ (Washington DC) ನಡೆದಿದೆ.

    ವಾಷಿಂಗ್ಟನ್ ಡಿ.ಸಿಯ ವಾಯವ್ಯ ಭಾಗದಲ್ಲಿರುವ ಜೆವೀಶ್ ಮ್ಯೂಸಿಯಂ ಮುಂದೆ ಬುಧವಾರ ರಾತ್ರಿ ನಡೆದ ದಾಳಿಯಲ್ಲಿ ರಾಯಭಾರ ಕಚೇರಿಯ ಪುರುಷ ಅಧಿಕಾರಿ ಹಾಗೂ ಮಹಿಳಾ ಅಧಿಕಾರಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮನೆಯ ಒಳಗಡೆ ನುಗ್ಗಿ ಅಪರಿಚಿತ ವ್ಯಕ್ತಿಯಿಂದ ಲಷ್ಕರ್‌ ಉಗ್ರನಿಗೆ ಗುಂಡೇಟು!

    ಜೆವೀಶ್ ಮ್ಯೂಸಿಯಂ ಮುಂದೆ ಬುಧವಾರ ರಾತ್ರಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೊರಡುತ್ತಿದ್ದಾಗ ಗುಂಡಿನ ದಾಳಿಯಾಗಿದೆ. ಇದನ್ನೂ ಓದಿ: ಜೈಶಂಕರ್‌ ಕರೆ ಬೆನ್ನಲ್ಲೇ ತಾಲಿಬಾನ್‌ ವಿದೇಶಾಂಗ ಸಚಿವರನ್ನೇ ಬೀಜಿಂಗ್‌ಗೆ ಕರೆಸಿ ಪಾಕ್‌ ಜೊತೆ ಕೈ ಕುಲುಕಿಸಿದ ಚೀನಾ!

    ಚಿಕಾಗೋದ 30 ವರ್ಷದ ಎಲಿಯಾಸ್ ರೊಡ್ರಿಗಸ್ ಎಂಬಾತನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಗುಂಡು ಹಾರಿಸುವ ಮೊದಲು ಆತ ಮ್ಯೂಸಿಯಂ ಬಳಿ ಓಡಾಡುತ್ತಿದ್ದ. ಲಿಯಾಸ್ ರೊಡ್ರಿಗಸ್ ಫ್ರೀ ಪ್ಯಾಲೆಸ್ತೀನ್‌ ಎಂದು ಘೋಷಣೆ ಕೂಗುತ್ತಿರುವ ದೃಶ್ಯ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಇಸ್ರೇಲಿ ರಾಯಭಾರಿ ಯೆಚಿಯಲ್ ಲೀಟರ್ ಅವರು ಪ್ರತಿಕ್ರಿಯಿಸಿ ಹತ್ಯೆಯಾದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಹತ್ಯೆಯಾದ ಪುರುಷ ಅಧಿಕಾರಿ ಮುಂದಿನ ವಾರ ಜೆರುಸಲೆಮ್‌ನಲ್ಲಿ ಪ್ರಪೋಸ್ ಮಾಡುವ ಉದ್ದೇಶದಿಂದ ಉಂಗುರವನ್ನು ಖರೀದಿಸಿದ್ದರು ಎಂದು ಹೇಳಿದರು.

    ಈ ಘಟನೆಯನ್ನು ಖಂಡಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದ್ವೇಷ ಮತ್ತು ಮೂಲಭೂತವಾದಕ್ಕೆ ಅಮೆರಿಕದಲ್ಲಿ ಸ್ಥಾನವಿಲ್ಲ ಎಂದು ಹೇಳಿದ್ದಾರೆ.

  • ಉಗ್ರರು ಅಮಾಯಕರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಆಗಲ್ಲ – ಆಪರೇಷನ್‌ ಸಿಂಧೂರ ಬೆಂಬಲಿಸಿದ ಇಸ್ರೇಲ್‌

    ಉಗ್ರರು ಅಮಾಯಕರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಆಗಲ್ಲ – ಆಪರೇಷನ್‌ ಸಿಂಧೂರ ಬೆಂಬಲಿಸಿದ ಇಸ್ರೇಲ್‌

    ನವದೆಹಲಿ: ಭಾರತದ (India) ತನ್ನ ರಕ್ಷಣೆಯ ಹಕ್ಕನ್ನು ನಾವು ಬೆಂಬಲಿಸುತ್ತೇವೆ. ಉಗ್ರರು ಅಮಾಯಕರ ವಿರುದ್ಧ ನಡೆಸಿದ ಘೋರ ಅಪರಾಧಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಅವರ ಅರಿವಿಗೆ ಬರಬೇಕು ಎಂದು ಇಸ್ರೇಲ್‌ (Israel) ಹೇಳಿದೆ. ಈ ಬಗ್ಗೆ ಭಾರತದಲ್ಲಿರುವ ಇಸ್ರೇಲ್‌ ರಾಯಭಾರ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ʻಆಪರೇಷನ್‌ ಸಿಂಧೂರʼ (Operation Sindoor) ಕಾರ್ಯಾಚರಣೆಯನ್ನು ಬೆಂಬಲಿಸಿದೆ.

    ಭಾರತ – ಪಾಕ್‌ ನಡುವಿನ ಉದ್ವಿಗ್ನತೆಗೆ ಪ್ರತಿಕ್ರಿಯಿಸಿರುವ ಫ್ರಾನ್ಸ್, ಭಯೋತ್ಪಾದನೆಯ ಪಿಡುಗಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಭಾರತದ ಬಯಕೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳು ಸಮಸ್ಯೆ ಉಲ್ಬಣಗೊಳ್ಳುವುದನ್ನು ತಪ್ಪಿಸಲು ಮತ್ತು ನಾಗರಿಕರನ್ನು ರಕ್ಷಿಸಲು ಸಂಯಮದಿಂದ ವರ್ತಿಸುವಂತೆ ಕರೆ ನೀಡುತ್ತೇವೆ ಎಂದು ಫ್ರೆಂಚ್ ವಿದೇಶಾಂಗ ಸಚಿವ ಜೀನ್-ನೋಯೆಲ್ ಬ್ಯಾರಟ್ ತಿಳಿಸಿದ್ದಾರೆ.

    ಭಾರತ – ಪಾಕ್‌ ನಡುವಿನ ಉದ್ವಿಗ್ನತೆ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದು ನಾಚಿಕೆಗೇಡಿನ ಸಂಗತಿ, ಈ ವಿವಾದ ಆದಷ್ಟು ಬೇಗ ಕೊನೆಗೊಳ್ಳಲಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಹಿಂದಿನ ಕೆಲವು ಘಟನೆಗಳ ಆಧಾರದ ಮೇಲೆ ಏನಾದರೂ ಸಂಭವಿಸಲಿದೆ ಎಂದು ತಿಳಿದಿತ್ತು. ಈ ಎರಡೂ ದೇಶಗಳು ಬಹಳ ಸಮಯದಿಂದ ಹೋರಾಡುತ್ತಿವೆ. ಇದು ಬಹಳ ಬೇಗ ಕೊನೆಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

    ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಪ್ರತಿಕ್ರಿಯಿಸಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಮೆರಿಕ ಪರಮಾಣು ಶಸ್ತ್ರಸಜ್ಜಿತ ಏಷ್ಯಾದ ನೆರೆಹೊರೆಯ ದೇಶಗಳೊಂದಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಮುಂದುವರೆಸುತ್ತದೆ ಎಂದದ್ದಾರೆ.

    ಇದರ ಬೆನ್ನಲ್ಲೇ ಪಾಕಿಸ್ತಾನದ ಮೇಲಿನ ಭಾರತದ ದಾಳಿಯ ಬಗ್ಗೆ ಚೀನಾ ಕಳವಳ ವ್ಯಕ್ತಪಡಿಸಿದೆ. ಎರಡೂ ದೇಶಗಳೂ ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ಒತ್ತಾಯಿಸಿದೆ. ಅಲ್ಲದೇ ದಾಳಿಗಳು ಮುಂದುವರೆಯದಂತೆ ಉಭಯ ದೇಶಗಳು ಶಾಂತಿಯಿಂದ ಇರುವಂತೆ ಚೀನಾ ಮನವಿ ಮಾಡಿದೆ.

    ಉದ್ವಿಗ್ನತೆ ವಿಚಾರವಾಗಿ ಪ್ರತಿಕ್ರಿಯಿಸಿರುವ ರಷ್ಯಾ, ನೆರೆಹೊರೆಯವರ ನಡುವಿನ ಅತ್ಯಂತ ಕೆಟ್ಟ ಹಿಂಸಾಚಾರವಾಗಿದೆ. ಮತ್ತಷ್ಟು ಉದ್ವಿಗ್ನತೆ ನಡೆಯದಂತೆ ಸಂಯಮವನ್ನು ಕಾಯ್ದುಕೊಳ್ಳುವಂತೆ ಎರಡೂ ದೇಶಗಳಿಗೂ ಕರೆ ನೀಡಿದೆ.

    ಇಂಗ್ಲೆಂಡ್‌ ಈ ಬಗ್ಗೆ ಪ್ರತಿಕ್ರಿಯಿಸಿ, ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತ ಮತ್ತು ಪಾಕಿಸ್ತಾನ ಎರಡನ್ನೂ ಬೆಂಬಲಿಸಲು ನಾವು ಸಿದ್ಧವಾಗಿದ್ದೇವೆ ಎಂದು ತಿಳಿಸಿದೆ. ನಾವು ಎರಡೂ ದೇಶಗಳಿಗೆ ಸ್ನೇಹಿತರಾಗಿದ್ದೇವೆ. ನಾವು ಎರಡೂ ದೇಶಗಳನ್ನು ಬೆಂಬಲಿಸಲು ಸಿದ್ಧರಿದ್ದೇವೆ. ಶಾಂತಿ ಸ್ಥಾಪನೆಗೆ ಎರಡೂ ದೇಶಗಳನ್ನು ಬೆಂಬಲಿಸುತ್ತೇವೆ ಎಂದಿದೆ.

    ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಬುಧವಾರ ಭಾರತ ಪಾಕ್‌ನ 9 ಜಾಗದಲ್ಲಿದ್ದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪಾಕ್‌ ಘೋಷಿಸಿದೆ. ಅಲ್ಲದೇ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್‌ ಅಪ್ರಚೋದಿತ ದಾಳಿಗೆ 15 ಮಂದಿ ಬಲಿಯಾಗಿದ್ದಾರೆ.

  • ಯೆಮೆನ್‌ ಬಂದರು ಮೇಲೆ ಇಸ್ರೇಲ್‌ ದಾಳಿ- ಉಂಡೆಗಳಂತೆ ಮೇಲಕ್ಕೆ ಚಿಮ್ಮಿದ ಬೆಂಕಿಯ ಜ್ವಾಲೆ

    ಯೆಮೆನ್‌ ಬಂದರು ಮೇಲೆ ಇಸ್ರೇಲ್‌ ದಾಳಿ- ಉಂಡೆಗಳಂತೆ ಮೇಲಕ್ಕೆ ಚಿಮ್ಮಿದ ಬೆಂಕಿಯ ಜ್ವಾಲೆ

    ಟೆಲ್‌ ಅವೀವ್‌: ತನ್ನ ವಿಮಾನ ನಿಲ್ದಾಣದ (Airport) ಮೇಲೆ ಹೌತಿ ಉಗ್ರರು ದಾಳಿ ಮಾಡಿದ್ದಕ್ಕೆ ಪ್ರತೀಯಾಗಿ ಇಸ್ರೇಲ್‌ (Isreal) ಯೆಮೆನ್‌ನ ಹೊಡೈದಾ ಬಂದರು (Yemen’s Hodeidah Port) ಮೇಲೆ ಬಾಂಬ್‌ ದಾಳಿ ನಡೆಸಿದೆ.

    ಇಸ್ರೇಲ್‌ 30 ಯುದ್ಧ ವಿಮಾನಗಳ ಸಹಾಯದಿಂದ ಬಾಂಬ್‌ ದಾಳಿ ನಡೆಸಿದೆ. ಈ ದಾಳಿಗೆ ಹೊಡೈದಾ ಬಂದರು ಧ್ವಂಸಗೊಂಡಿದ್ದು ಭಾರೀ ಪ್ರಮಾಣದಲ್ಲಿ ಬೆಂಕಿಯ ಜ್ವಾಲೆಗಳು ಮೇಲಕ್ಕೆ ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.  ಇದನ್ನೂ ಓದಿ: ಭಾರತ-ಪಾಕ್‌ ಉದ್ವಿಗ್ನತೆ ನಡುವೆಯೂ ಹೆಚ್ಚಿದ ವೈವಾಹಿಕ ಸಂಬಂಧ – ಲವ್‌ಸ್ಟೋರಿಗಳಿಗೆ ಕಾರಣ ಏನು?

    ಇರಾನ್ ಬೆಂಬಲಿತ ಹೌತಿಗಳು ಟೆಲ್ ಅವೀವ್‌ನ ಮುಖ್ಯ ವಿಮಾನ ನಿಲ್ದಾಣದ ಬಳಿ ಕ್ಷಿಪಣಿಯನ್ನು ಹಾರಿಸಿದ ಒಂದು ದಿನದ ನಂತರ ಇಸ್ರೇಲ್‌ ಪ್ರತೀಕಾರ ತೀರಿಸಿದೆ.

    ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ವಿಮಾನ ನಿಲ್ದಾಣದ ಬಳಿ ಹೌತಿಗಳು ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದರು. ಇದನ್ನೂ ಓದಿ: 1971ರ ನಂತರ ನಾಳೆ ದೇಶದಲ್ಲಿ ಯುದ್ಧದ ಡ್ರಿಲ್‌! – ಮಾಕ್‌ ಡ್ರಿಲ್‌ ಹೇಗಿರಲಿದೆ?

    ಯೆಮೆನ್‌ನಿಂದ ಬಂದ ಹೆಚ್ಚಿನ ದಾಳಿಗಳನ್ನು ಇಸ್ರೇಲ್‌ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ತಡೆಹಿಡಿದಿದ್ದವು. ಆದರೆ ಭಾನುವಾರ ರಕ್ಷಣಾ ವ್ಯವಸ್ಥೆಯನ್ನು ಬೇಧಿಸಿ ಕ್ಷಿಪಣಿ ವಿಮಾನ ನಿಲ್ದಾಣದ ಮೇಲೆ ಬಿದ್ದಿತ್ತು.

  • ಹೌತಿ ಬಂಡುಕೋರ ಮೇಲೆ ಸರಣಿ ದಾಳಿ ನಡೆಸಿ ಪೆಟ್ಟು ಕೊಡ್ತೇವೆ: ಬೆಂಜಮಿನ್ ನೆತನ್ಯಾಹು

    ಹೌತಿ ಬಂಡುಕೋರ ಮೇಲೆ ಸರಣಿ ದಾಳಿ ನಡೆಸಿ ಪೆಟ್ಟು ಕೊಡ್ತೇವೆ: ಬೆಂಜಮಿನ್ ನೆತನ್ಯಾಹು

    ಟೆಲ್ ಅವಿವ್: ಯೆಮೆನ್‌ನ (Yemen) ಹೌತಿ ಬಂಡುಕೋರರು (Houthi Rebels) ಇಸ್ರೇಲ್‌ನ (Israel) ಬೆನ್ ಗುರಿಯನ್‌ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಸರಣಿ ದಾಳಿ ನಡೆಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಎಚ್ಚರಿಕೆ ನೀಡಿದ್ದಾರೆ.

    ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡ ಹೌತಿ ಬಂಡುಕೋರರು, ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ನರೊಂದಿಗೆ ಸೇರಿಕೊಂಡಿದ್ದಾರೆ. ಅವರನ್ನು ಹತ್ತಿಕ್ಕಲು ಸರಣಿ ದಾಳಿ ನಡೆಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದಾರೆ. ಹೌತಿ ದಾಳಿಗೆ ಇಸ್ರೇಲ್‌ನ ಪ್ರತೀಕಾರವು ಒಂದು ಬಾರಿ ಮಾತ್ರ ಇರುವುದಿಲ್ಲ. ದಾಳಿಯ ಪೆಟ್ಟುಗಳು ಬೀಳುತ್ತಲೇ ಇರುತ್ತವೆ ಎಂದು ಅವರು ಹೇಳಿಕೊಂಡಿದ್ದಾರೆ.

    ನಾವು ಹಿಂದೆಯೂ ಬಂಡುಕೋರರ ವಿರುದ್ಧ ಕ್ರಮ ಕೈಗೊಂಡಿದ್ದೇವೆ, ಭವಿಷ್ಯದಲ್ಲಿಯೂ ಕ್ರಮಕೈಗೊಳ್ಳುತ್ತೇವೆ. ನಾನು ಎಲ್ಲವನ್ನೂ ವಿವರಿಸಲು ಸಾಧ್ಯವಿಲ್ಲ. ಅಮೆರಿಕ ನಮ್ಮೊಂದಿಗೆ ಕೈಜೋಡಿಸಿದೆ. ನಮ್ಮ ದಾಳಿ ನಿರಂತರವಾಗಿ ಮುಂದುವರೆಯಲಿದೆ ಎಂದು ಕಠಿಣ ಸಂದೇಶ ರವಾನಿಸಿದ್ದಾರೆ.

    ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಪ್ರತಿಕ್ರಿಯಿಸಿ, ನಮಗೆ ಯಾರು ಹಾನಿ ಮಾಡಿದರೂ, ನಾವು ಅವರಿಗೆ ಏಳು ಪಟ್ಟು ಹಾನಿ ಮಾಡುತ್ತೇವೆ ಎಂದಿದ್ದಾರೆ.

    ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ ಹೌತಿ ಬಂಡುಕೋರರು ಕ್ಷಿಪಣಿ ದಾಳಿ (Missile Attack) ನಡೆಸಿತ್ತು. ಇದರ ಬೆನ್ನಲ್ಲೇ ಏರ್ ಇಂಡಿಯಾ (Air India) ಸಂಸ್ಥೆಯು ಮುಂದಿನ 2 ದಿನಗಳ ಕಾಲ ಇಸ್ರೇಲ್ (Israel) ರಾಜಧಾನಿ ಟೆಲ್ ಅವಿವ್‌ಗೆ (Tel Aviv) ವಿಮಾನಯಾನವನ್ನ ಸ್ಥಗಿತಗೊಳಿಸಿದೆ.

  • ಹೌತಿ ಕ್ಷಿಪಣಿ ದಾಳಿ – ಮೇ 6ರ ವರೆಗೆ ಇಸ್ರೇಲ್‌ಗೆ ಏರ್ ಇಂಡಿಯಾ ವಿಮಾನಯಾನ ಬಂದ್

    ಹೌತಿ ಕ್ಷಿಪಣಿ ದಾಳಿ – ಮೇ 6ರ ವರೆಗೆ ಇಸ್ರೇಲ್‌ಗೆ ಏರ್ ಇಂಡಿಯಾ ವಿಮಾನಯಾನ ಬಂದ್

    ನವದೆಹಲಿ: ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿಂದು ಬೆಳಗ್ಗೆ ಹೌತಿ ಬಂಡುಕೋರರು ಕ್ಷಿಪಣಿ ದಾಳಿ (Missile Attack) ನಡೆಸಿದ ಪರಿಣಾಮ ಏರ್ ಇಂಡಿಯಾ (Air India) ಸಂಸ್ಥೆಯು ಮುಂದಿನ 2 ದಿನಗಳ ಕಾಲ ಇಸ್ರೇಲ್ (Israel) ರಾಜಧಾನಿ ಟೆಲ್ ಅವಿವ್‌ಗೆ (Tel Aviv) ವಿಮಾನಯಾನವನ್ನ ಸ್ಥಗಿತಗೊಳಿಸಿದೆ.

    ಕ್ಷಿಪಣಿ ದಾಳಿಯ ಕುರಿತು ಲಭ್ಯವಾಗುತ್ತಿದ್ದಂತೆ ದೆಹಲಿಯಿಂದ ಟೆಲ್ ಅವಿವ್‌ಗೆ ಹೋಗುತ್ತಿದ್ದ ವಿಮಾನವನ್ನು ಅಬುಧಾಬಿಗೆ ತಿರುಗಿಸಲಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿವೆ. ಇಸ್ರೇಲ್‌ಗೆ ಟಿಕೆಟ್ ಹೊಂದಿರುವವರಿಗೆ ವಿನಾಯಿತಿ ಅಥವಾ ವಿಮಾನಯಾನದ ಮರು ವೇಳಾಪಟ್ಟಿಯನ್ನು ನೀಡಲಾಗುವುದು ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ. ಇದನ್ನೂ ಓದಿ: ನನಗೆ ನ್ಯಾಯ ಬೇಕು – ಪಾಕ್‌ ಯುವತಿಯನ್ನು ಮದುವೆಯಾಗಿ ವಜಾಗೊಂಡಿದ್ದ ಯೋಧನಿಂದ ಮೋದಿಗೆ ಮನವಿ

    ಏರ್ ಇಂಡಿಯಾದಲ್ಲಿ, ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

  • Pahalgam Terror Attack – ಅಗತ್ಯ ಬಿದ್ರೆ ಭಾರತದೊಂದಿಗೆ ನಿಲ್ಲುತ್ತೇವೆ: ಇಸ್ರೇಲ್

    Pahalgam Terror Attack – ಅಗತ್ಯ ಬಿದ್ರೆ ಭಾರತದೊಂದಿಗೆ ನಿಲ್ಲುತ್ತೇವೆ: ಇಸ್ರೇಲ್

    ಟೆಲ್ ಅವಿವ್: ಅಗತ್ಯ ಬಿದ್ದರೆ ಭಾರತದೊಂದಿಗೆ (India) ನಾವು ನಿಲ್ಲುತ್ತೇವೆ ಎಂದು ಇಸ್ರೇಲ್ (Israel) ವಿದೇಶಾಂಗ ಸಚಿವಾಲಯದ ವಕ್ತಾರ ಓರೆನ್ ಮಾರ್ಮೊರ್‌ಸ್ಟೈನ್ ಭಾರತಕ್ಕೆ ಬೆಂಬಲ ಸೂಚಿಸಿದ್ದಾರೆ.

    ಪತ್ರಕರ್ತರೊಂದಿಗಿನ ಸಂವಾದದ ವೇಳೆ, ಭಾರತ ಮತ್ತು ಇಸ್ರೇಲ್‌ ನಡುವಿನ ಸಂಬಂಧದ ಬಗ್ಗೆ ಅವರು ಮಾತಾಡಿದರು. ಈ ವೇಳೆ, ಇಸ್ರೇಲ್ ಭಾರತದ ಸ್ನೇಹಿತ, ಸ್ನೇಹಿತರು ಅಗತ್ಯದ ಸಮಯದಲ್ಲಿ ಪರಸ್ಪರ ಜೊತೆಗೆ ನಿಲ್ಲಲಿವೆ ಎಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ (Pahalgam Terror Attack) ಹಿನ್ನೆಲೆಯಲ್ಲಿ ಅವರು ಭಾರತವನ್ನು ಬೆಂಬಲಿಸಿ ಈ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ ಭಾರತ ಪಾಕ್‌ ಮಧ್ಯೆ ಗುಂಡಿನ ಚಕಮಕಿ

    ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್, ಉಗ್ರರ ದಾಳಿಯ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು, ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯಿಂದ ತೀವ್ರ ದುಃಖಿತನಾಗಿದ್ದೇನೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ಭಾರತದೊಂದಿಗೆ ಜೊತೆಗಿರುತ್ತದೆ ಎಂದು ಬರೆದುಕೊಂಡಿದ್ದಾರೆ.

    ಏ. 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ವಿಹಾರಧಾಮದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ 26 ಜನರು ಸಾವಿಗೀಡಾಗಿದ್ದರು. ಉಗ್ರರ ಈ ಕೃತ್ಯಕ್ಕೆ ಭಾರತ ಮಾತ್ರವಲ್ಲ ಅಮೆರಿಕ ಇನ್ನಿತರ ರಾಷ್ಟ್ರಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ, ತಾನು ಮುಂದೆ ಕೈಗೊಳ್ಳಬೇಕಾದ ನಿರ್ಧಾರಗಳ ಕುರಿತಾಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ಏ. 24ರಂದು ಸರ್ವಪಕ್ಷಗಳ ಸಭೆಯನ್ನು ನಡೆಸಿತ್ತು.

    ಪಹಲ್ಗಾಮ್‌ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಇದರ ನಡುವೆ ಇಸ್ರೇಲ್‌ ಬೆಂಬಲದಿಂದ ಭಾರತಕ್ಕೆ ಬಲ ಬಂದಿದೆ. ಇದನ್ನೂ ಓದಿ: ಬಿಡುಗಡೆ ಮಾಡದೇ ಬಿಎಸ್‌ಫ್‌ ಯೋಧನನ್ನು ಪ್ರಚಾರಕ್ಕೆ ಬಳಸಲು ಮುಂದಾದ ಪಾಕ್‌

  • ಏರ್‌ಪೋರ್ಟ್‌ನಲ್ಲೇ ಇಬ್ಬರು ಬ್ರಿಟನ್‌ ಸಂಸದರ ಬಂಧನ – ಇಸ್ರೇಲ್‌ ವಿರುದ್ಧ ಸಿಡಿದ ಯುಕೆ

    ಏರ್‌ಪೋರ್ಟ್‌ನಲ್ಲೇ ಇಬ್ಬರು ಬ್ರಿಟನ್‌ ಸಂಸದರ ಬಂಧನ – ಇಸ್ರೇಲ್‌ ವಿರುದ್ಧ ಸಿಡಿದ ಯುಕೆ

    ಲಂಡನ್: ಇಸ್ರೇಲ್ ಇಬ್ಬರು ಬ್ರಿಟನ್‌ ಸಂಸದರಿಗೆ (British MP’s Arrested) ತನ್ನ ದೇಶಕ್ಕೆ ಪ್ರವೇಶಿಸಲು ನಿರಾಕರಿಸಿದ್ದಲ್ಲದೇ ವಿಮಾನ ನಿಲ್ದಾಣದಲ್ಲಿಯೇ ಅವರನ್ನು ಬಂಧಿಸಿದ ಘಟನೆ ನಡೆದಿದೆ.

    ಬ್ರಿಟನ್‌ನ ಇಬ್ಬರು ಸಂಸದನ್ನು ಇಸ್ರೇಲ್ ಬಂಧಿಸಿ, ಅವರಿಗೆ ಪ್ರವೇಶ ನಿರಾಕರಿಸಿರುವುದು ಸ್ವೀಕಾರಾರ್ಹವಲ್ಲ ಎಂದು ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಶನಿವಾರ ಹೇಳಿದ್ದಾರೆ. ಆಡಳಿತಾರೂಢ ಲೇಬರ್ ಪಾರ್ಟಿಯ ಯುವಾನ್ ಯಾಂಗ್ ಮತ್ತು ಅಬ್ತಿಸಮ್ ಮೊಹಮದ್ ಲಂಡನ್‌ನಿಂದ ಇಸ್ರೇಲ್‌ಗೆ ತೆರಳಿದಾಗ ಅವರಿಗೆ ದೇಶ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ ಮತ್ತು ಗಡೀಪಾರು ಮಾಡಲಾಗಿದೆ ಎಂದು ವರದಿಯಾಗಿದೆ.

    ಇಸ್ರೇಲ್‌ಗೆ ತೆರಳಿದ ಸಂಸದೀಯ ನಿಯೋಗದಲ್ಲಿದ್ದ ಇಬ್ಬರು ಬ್ರಿಟಿಷ್ ಸಂಸದರನ್ನು ಇಸ್ರೇಲಿ ಅಧಿಕಾರಿಗಳು ಬಂಧಿಸಿದ್ದು, ಪ್ರವೇಶ ನಿರಾಕರಿಸಿದ್ದಾರೆ ಎಂಬುದನ್ನು ಒಪ್ಪಲಾಗದು, ಇದು ಪ್ರತಿಕೂಲವಾಗಿದ್ದು, ತೀವ್ರ ಕಳವಳಕಾರಿಯಾಗಿದೆ ಎಂದು ಲ್ಯಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಇದು ಬ್ರಿಟಿಷ್ ಸಂಸದರನ್ನು ಸರಿಯಾಗಿ ನಡೆಸಿಕೊಳ್ಳುವ ಕ್ರಮವಲ್ಲ ಎಂದು ಇಸ್ರೇಲ್ ಸರ್ಕಾರದ ನನ್ನ ಸಹವರ್ತಿಗಳಿಗೆ ಸ್ಪಷ್ಪಪಡಿಸುತ್ತೇನೆ. ನಮ್ಮ ಬೆಂಬಲ ನೀಡಲು ನಾವು ಇಂದು ರಾತ್ರಿ ಇಬ್ಬರೂ ಸಂಸದರನ್ನು ಸಂಪರ್ಕಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

    ಇಸ್ರೇಲ್ ತೆಗೆದುಕೊಂಡು ಕ್ರಮ ಆಶ್ಚರ್ಯ ಮೂಡಿಸಿದೆ ಎಂದು ಇಬ್ಬರು ಸಂಸದರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಅಧಿಕೃತ ಸಂಸದೀಯ ನಿಯೋಗದಲ್ಲಿದ್ದರು ಎಂಬ ಅವರ ಹೇಳಿಕೆ ಸುಳ್ಳು ಎಂದು ಕಂಡುಬಂದಿದೆ. ಅಂತಹ ಯಾವುದೇ ಅಧಿಕೃತ ನಿಯೋಗದ ಭೇಟಿ ಕುರಿತು ಅಧಿಕೃತ ಮಾಹಿತಿ ಬಂದಿರಲಿಲ್ಲ ಎಂದು ಇಸ್ರೇಲ್ ಹೇಳಿದೆ.

  • ಗಾಜಾದಲ್ಲಿ ಇಸ್ರೇಲ್‌ ಮತ್ತೆ ದಾಳಿ – 10 ದಿನಗಳಲ್ಲಿ 300 ಮಕ್ಕಳು ಸಾವು

    ಗಾಜಾದಲ್ಲಿ ಇಸ್ರೇಲ್‌ ಮತ್ತೆ ದಾಳಿ – 10 ದಿನಗಳಲ್ಲಿ 300 ಮಕ್ಕಳು ಸಾವು

    ಗಾಜಾ: ಇಸ್ರೇಲ್‌ ಮತ್ತೆ ದಾಳಿ ಆರಂಭಿಸಿದ್ದು, ಗಾಜಾದ ಪ್ಯಾಲೆಸ್ಟೀನಿಯನ್‌ ಪ್ರದೇಶದಲ್ಲಿ ಕಳೆದ 10 ದಿನಗಳಲ್ಲಿ 322 ಮಕ್ಕಳು ಸಾವನ್ನಪ್ಪಿದ್ದಾರೆ. 609 ಮಕ್ಕಳು ಗಾಯಗೊಂಡಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ.

    ಮಾ.23 ರಂದು ದಕ್ಷಿಣ ಗಾಜಾದಲ್ಲಿರುವ ಅಲ್ ನಾಸರ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ, ಗಾಯಗೊಂಡ ಮಕ್ಕಳೂ ಈ ಅಂಕಿ ಅಂಶಗಳಲ್ಲಿ ಸೇರಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಮಾಹಿತಿ ನೀಡಿದೆ.

    ಈ ಮಕ್ಕಳಲ್ಲಿ ಹೆಚ್ಚಿನವರು ಸ್ಥಳಾಂತರಗೊಂಡು ತಾತ್ಕಾಲಿಕ ಡೇರೆಗಳು, ಹಾನಿಗೊಳಗಾದ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ.

    ಹಮಾಸ್ ಜೊತೆಗಿನ ಸುಮಾರು ಎರಡು ತಿಂಗಳ ಯುದ್ಧ ವಿರಾಮವನ್ನು ಕೊನೆಗೊಳಿಸಿದ ಇಸ್ರೇಲ್, ಮಾ.18 ರಂದು ಗಾಜಾದ ಮೇಲೆ ತೀವ್ರವಾದ ಬಾಂಬ್ ದಾಳಿಯನ್ನು ಪುನರಾರಂಭಿಸಿತು.

    ಸುಮಾರು 18 ತಿಂಗಳ ಯುದ್ಧದ ನಂತರ, 15,000 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. 34,000 ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.