Tag: Israel

  • ವಾಟ್ಸಪ್ ಹ್ಯಾಕ್ ಆಗಿದೆ, ಕೂಡಲೇ ಅಪ್‍ಡೇಟ್ ಮಾಡಿ

    ವಾಟ್ಸಪ್ ಹ್ಯಾಕ್ ಆಗಿದೆ, ಕೂಡಲೇ ಅಪ್‍ಡೇಟ್ ಮಾಡಿ

    – ಬಳಕೆದಾರರಿಗೆ ವಾಟ್ಸಪ್ ಕಂಪನಿ ಸೂಚನೆ
    – ಇಸ್ರೇಲ್ ಮೂಲದ ಕಂಪನಿಯಿಂದ ಹ್ಯಾಕ್

    ವಾಷಿಂಗ್ಟನ್: ವಿಶ್ವದ ನಂಬರ್ ಒನ್ ಒನ್ ಮೆಸೇಜಿಂಗ್ ಅಪ್ಲಿಕೇಶನ್ ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಹ್ಯಾಕ್ ಆಗಿದೆ.

    ಹ್ಯಾಕ್ ಆಗಿರುವ ವಿಚಾರವನ್ನು ವಾಟ್ಸಪ್ ಕಂಪನಿ ಅಧಿಕೃತವಾಗಿ ಒಪ್ಪಿಕೊಂಡಿದ್ದು, ಕೂಡಲೇ ಎಲ್ಲ ಬಳಕೆದಾರರು ಅಪ್ಲಿಕೇಶನ್ ಅನ್ನು ಅಪ್‍ಡೇಟ್ ಮಾಡಿಕೊಳ್ಳಿ ಎಂದು ಸೂಚಿಸಿದೆ.

    ಇಸ್ರೇಲ್ ಮೂಲದ ಎನ್‍ಎಸ್ಒ ಗ್ರೂಪ್ ಹೆಸರಿನ ಭದ್ರತಾ ಸಂಸ್ಥೆ ಈ ಹ್ಯಾಕ್ ಮಾಡಿದೆ. ಒಂದು ತಿಂಗಳ ಹಿಂದೆಯೇ ಈ ವಿಚಾರ ಬೆಳಕಿಗೆ ಬಂದಿದ್ದು ಶುಕ್ರವಾರ ವಾಟ್ಸಪ್ ಬಗ್ ಫಿಕ್ಸ್ ಮಾಡಿದ್ದು ಶನಿವಾರ ತನ್ನ ಅಪ್ಲಿಕೇಶನ್ ಅಪ್‍ಡೇಟ್ ಮಾಡಿದೆ.

    ದಾಳಿ ಹೇಗೆ ಆಗುತ್ತೆ?
    ಟಾರ್ಗೆಟ್ ಮಾಡಿದ ವ್ಯಕ್ತಿಗೆ ವಾಟ್ಸಪ್ ಕರೆ ಬರುತ್ತದೆ. ಈ ಕರೆಯನ್ನು ಸ್ವೀಕರಿಸಿದರೂ ಅಥವಾ ಸ್ವೀಕರಿಸದೇ ಇದ್ದರೂ ಒಂದು ಕಣ್ಗಾವಾಲು ತಂತ್ರಾಂಶ (Surveillance Software) ಇನ್‍ಸ್ಟಾಲ್ ಆಗುತ್ತದೆ. ಕೇವಲ ರಿಂಗ್ ಆದರೂ ಈ ಸಾಫ್ಟ್ ವೇರ್ ಇನ್ ಸ್ಟಾಲ್ ಆಗುವಂತೆ ರೂಪಿಸಲಾಗಿದೆ.

    ವಾಟ್ಸಪ್ ಭದ್ರತಾ ತಂಡ ಈ ದಾಳಿಯನ್ನು ಒಂದು ತಿಂಗಳ ಹಿಂದೆ ಪತ್ತೆ ಹಚ್ಚಿತ್ತು. ಪತ್ರಕರ್ತರು, ವಕೀಲರು, ಮಾನವ ಹಕ್ಕು ಹೋರಾಟಗಾರರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.

    ದಾಳಿಯ ಹಿಂದೆ ಯಾರಿದ್ದಾರೆ?
    ಸೈಬರ್ ದಾಳಿಯ ವಿಚಾರದಲ್ಲಿ ಪ್ರಸಿದ್ಧವಾಗಿರುವ ಇಸ್ರೇಲಿನ ಎನ್‍ಎಸ್‍ಒ ಗ್ರೂಪ್ ಈ ವಾಟ್ಸಪ್ ದಾಳಿಯ ಹಿಂದೆ ಇದೆ. ಈ ಕಂಪನಿಯ ಭಾಗಶ: ಪಾಲನ್ನು ಫೆಬ್ರವರಿಯಲ್ಲಿ ಲಂಡನ್ ಮೂಲದ ನೋವಲ್‍ಪಿನಾ ಕ್ಯಾಪಿಟಲ್ ಪಡೆದುಕೊಂಡಿದೆ.

    ಎನ್‍ಎಸ್‍ಒ ಕಂಪನಿ ಸ್ಪೈ ಸಾಫ್ಟ್ ವೇರ್ ಪೆಗಾಸಸ್ ಅಭಿವೃದ್ಧಿ ಪಡಿಸಿದೆ. ಫೋನ್ ಮೂಲಕ ಕ್ಯಾಮೆರಾ, ಮೈಕ್ರೋಫೋನ್, ಲೋಕೇಶನ್ ಡೇಟಾಗಳನ್ನು ಈ ಸಾಫ್ಟ್ ವೇರ್ ಸಂಗ್ರಹಿಸಿ ವ್ಯಕ್ತಿಯ ಮೇಲೆ ಗೂಢಾಚಾರಿಕೆ ಮಾಡುತ್ತದೆ.

    ಅಪರಾಧ ಮತ್ತು ಉಗ್ರಗಾಮಿ ಚಟುವಟಿಕೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದು, ಇದಕ್ಕೆ ಇಸ್ರೇಲ್ ಸರ್ಕಾರದಿಂದಲೇ ಅನುಮತಿ ಪಡೆದಿದ್ದೇವೆ ಎಂದು ಎನ್‍ಎಸ್‍ಒ ಕಂಪನಿ ಸ್ಪಷ್ಟನೆ ನೀಡಿದೆ.

    ಇಲ್ಲಿಯವರೆಗೆ ಎಷ್ಟು ಬಳಕೆದಾರರಿಗೆ ತೊಂದರೆಯಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿಲ್ಲ. ಈ ಹಿಂದೆ ಎನ್‍ಎಸ್‍ಒ ಗ್ರೂಪ್ ನಮ್ಮನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದು ಸರ್ಕಾರೇತರ ಸಂಸ್ಥೆ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಆರೋಪಿಸಿತ್ತು.

    ಈ ಸಂಬಂಧ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಸ್ರೇಲ್ ಕೋರ್ಟ್ ನಲ್ಲಿ ದೂರು ದಾಖಲಿಸಿದೆ. ಎನ್‍ಎಸ್‍ಒ ಗ್ರೂಪಿಗೆ ನೀಡಿದ ಲೈಸೆನ್ಸ್ ರದ್ದು ಮಾಡುವಂತೆ ಇಸ್ರೇಲಿನ ರಕ್ಷಣಾ ಸಚಿವಾಲಯ ಆದೇಶ ನೀಡಬೇಕೆಂದು ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಟೆಲ್ ಅವಿವ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದು ಈ ಅರ್ಜಿಯ ವಿಚಾರಣೆ ಈ ಗುರುವಾರ ನಡೆಯಲಿದೆ.

  • ರೈತರಿಗೆ ಹೇಳುವ ಮುನ್ನ ತಾವೇ ಇಸ್ರೇಲ್ ಮಾದರಿ ಬೇಸಾಯ ಪದ್ಧತಿ ಅಳವಡಿಸಿಕೊಂಡ ಸಚಿವರು

    ರೈತರಿಗೆ ಹೇಳುವ ಮುನ್ನ ತಾವೇ ಇಸ್ರೇಲ್ ಮಾದರಿ ಬೇಸಾಯ ಪದ್ಧತಿ ಅಳವಡಿಸಿಕೊಂಡ ಸಚಿವರು

    ಮಂಡ್ಯ: ಚುನಾವಣಾ ಪ್ರಣಾಳಿಕೆನಲ್ಲಿ ಕುಮಾರಸ್ವಾಮಿಯವರು ನಾನು ಸಿಎಂ ಆದರೆ ರಾಜ್ಯದಲ್ಲಿ ಇಸ್ರೇಲ್ ಮಾದರಿ ಬೇಸಾಯ ಪದ್ಧತಿ ಜಾರಿಗೊಳಿಸೋದಾಗಿ ಘೋಷಿಸಿದ್ದರು. ಹಾಗಾಗಿ ಚುನಾವಣೆಗೂ ಮುನ್ನ ಇಸ್ರೇಲ್ ಪ್ರವಾಸ ಕೈಗೊಂಡಿದ್ದರು. ಆದರೆ ರೈತರಿಗೆ ಹೇಳುವ ಮುನ್ನ ತಾವೇ ಯಾಕೆ ಪ್ರಾಯೋಗಿಕವಾಗಿ ತಮ್ಮ ಜಮೀನಲ್ಲಿ ಅಳವಡಿಸಬಾರದು ಎಂದು ಸಚಿವರೊಬ್ಬರು ತಮ್ಮ ತೋಟದಲ್ಲಿ ಇಸ್ರೇಲ್ ಮಾದರಿಯ ಬೇಸಾಯ ಮಾಡುವ ಮೂಲಕ ಸಕ್ಸಸ್ ಕಾಣುತ್ತಿದ್ದಾರೆ.

    ಇಸ್ರೇಲ್ ಮಾದರಿಯ ವ್ಯವಸಾಯ ಮಾಡಿದರೆ ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ಬೆಳೆಯಬಹುದು. ಆದ್ದರಿಂದ ಇದನ್ನು ರೈತರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ನಾನು ಸಿಎಂ ಜೊತೆ ಇಸ್ರೇಲ್ ಪ್ರವಾಸ ಕೈಗೊಂಡಿದ್ದೆ. ಅಲ್ಲಿಂದ ಬಂದು ತಮ್ಮ 15 ಎಕರೆ ಜಮೀನಿಗೆ ಇಸ್ರೇಲ್ ಮಾದರಿ ಹನಿ ನೀರಾವರಿ ಅಳವಡಿಸಿಕೊಂಡಿದ್ದೇನೆ. ಮಂಡ್ಯ ಜಿಲ್ಲೆಯ ಪಾಂಡವಪುರದ ಚಿನಕುರಳಿ ಗ್ರಾಮದಲ್ಲಿ 15 ಎಕರೆ ಪ್ರದೇಶದಲ್ಲಿ ಇಸ್ರೇಲ್ ಮಾದರಿಯ ಬೇಸಾಯ ಮಾಡುತ್ತಿದ್ದು, ಇದರಲ್ಲಿ ಬಾಳೆ, ಅಡಿಕೆ, ತೊಗರಿ, ರಾಗಿ, ಕಾಫಿ ಸೇರಿದಂತೆ ಹಲವು ಬಗೆಯ ಬೆಳೆಗಳನ್ನ ಬೆಳೆದಿದ್ದು, ಉತ್ತಮ ಲಾಭ ಕಾಣುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.

    ಸಚಿವ ಪುಟ್ಟರಾಜು ಅವರು ಇಸ್ರೇಲ್‍ಗೆ ಹೋಗುವ ಮುನ್ನ ಇದೇ ಭೂಮಿಯಲ್ಲಿ ಎಲ್ಲರಂತೆ ಮಾಮೂಲಾಗಿ ಬೆಳೆ ಬೆಳೆಯುತ್ತಿದ್ದರು. ಆದರೆ ಆಗ ಅವರ ಭೂಮಿಗೆ ಎಷ್ಟು ನೀರು ಪೂರೈಸಿದ್ದರೂ ಸಾಲುತ್ತಿರಲಿಲ್ಲ. ಇದಕ್ಕಾಗಿ ಅವರ ಜಮೀನಿನಲ್ಲಿ 4 ಬೋರ್‍ವೆಲ್ ಗಳಿದ್ದರೂ ಬೆಳೆಗಳಿಗೆ ಬೇಕಾದ ಪ್ರಮಾಣದಲ್ಲಿ ನೀರು ಸಿಗುತ್ತಿರಲಿಲ್ಲ. ಇಸ್ರೇಲ್ ಪ್ರವಾಸ ಮುಗಿಸಿ ಬಂದ ನಂತರ 3 ರಿಂದ 4 ಲಕ್ಷರೂ. ವೆಚ್ಚದಲ್ಲಿ ಹನಿ ನೀರಾವರಿ ವ್ಯವಸ್ಥೆ ಮಾಡಿ ಬೆಳೆ ಬೆಳೆಯುತ್ತಿದ್ದು, ಸಾಕಷ್ಟು ನೀರು ಉಳಿತಾಯವಾಗುತ್ತಿದೆ. ಬೆಳೆಗಳಿಂದ ಒಳ್ಳೆ ಲಾಭವೂ ಸಿಗುತ್ತಿದೆ. ಇದು ಇತರೇ ರೈತರ ಕಣ್ಣು ತೆರೆಸುತ್ತಿದ್ದು, ಸರ್ಕಾರದ ಸಬ್ಸಿಡಿಯಲ್ಲಿ ನಾವೂ ಈ ರೀತಿಯ ಬೇಸಾಯದ ಮಾದರಿಯನ್ನ ಅಳವಡಿಸಿಕೊಳ್ಳಲು ಯೋಚಿಸುತ್ತಿದ್ದೇವೆ ಎಂದು ರೈತ ಶಿವಕುಮಾರ್ ಹೇಳಿದ್ದಾರೆ.

    ಈ ಪದ್ದತಿಯನ್ನ ಅಳವಡಿಸಿಕೊಂಡಿದ್ದೇ ಆದರೆ ಹೆಚ್ಚಿನ ಪ್ರಮಾಣದ ನೀರನ್ನ ಉಳಿಸುವುದರ ಜೊತೆಗೆ ಬೇಸಾಯದಲ್ಲೂ ಹೆಚ್ಚಿನ ಪ್ರಮಾಣದ ಲಾಭ ಕಾಣಬಹುದಾಗಿದೆ ಎಂದು ಸಚಿವ ಪುಟ್ಟರಾಜು ಹೇಳುತ್ತಾರೆ. ಸ್ವತಃ ನೀರಾವರಿ ಸಚಿವರೇ ತಮ್ಮ ಜಮೀನಿನಲ್ಲಿ ಇಸ್ರೇಲ್ ಮಾದರಿ ಬೇಸಾಯ ಮಾಡಿ ಇತರ ರೈತರಿಗೂ ಇದನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರಾಜ್ಯ ಕೃಷಿ ಪದ್ಧತಿಗೆ ತಜ್ಞ ಡಾ.ಸ್ವಾಮಿನಾಥನ್‍ರಿಂದ ಸಲಹೆ ಪಡೆದ ಎಚ್‍ಡಿಕೆ

    ರಾಜ್ಯ ಕೃಷಿ ಪದ್ಧತಿಗೆ ತಜ್ಞ ಡಾ.ಸ್ವಾಮಿನಾಥನ್‍ರಿಂದ ಸಲಹೆ ಪಡೆದ ಎಚ್‍ಡಿಕೆ

    ಬೆಂಗಳೂರು: ಖ್ಯಾತ ಕೃಷಿ ತಜ್ಞ ಡಾ.ಸ್ವಾಮಿನಾಥನ್ ಅವರ ಜೊತೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಭೆ ನಡೆಸಿದ್ದು, ಕೃಷಿ ಪದ್ಧತಿ ಬದಲಾವಣೆ ಕುರಿತು ಸಲಹೆ ಪಡೆದಿದ್ದಾರೆ.

    ಸಭೆ ಬಳಿಕ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಹೊಸ ಕೃಷಿ ಪದ್ಧತಿ ಅಳವಡಿಕೆಗೆ ಸ್ವಾಮಿನಾಥನ್ ಅವರಿಂದ ಸಲಹೆ ಪಡೆದಿರುವೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೊಸ ಪದ್ಧತಿ ಜಾರಿಗೆ ತರಲಾಗುವುದು. ಈ ಕುರಿತು ಇನ್ನು ಎರಡು ವಾರಗಳಲ್ಲಿ ಎಲ್ಲಾ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ, ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದರು.

    ಇಸ್ರೇಲ್ ಕೃಷಿ ಮಾದರಿಗೆ ಸ್ವಾಮಿನಾಥನ್ ಅವರು ಬೆಂಬಲ ಸೂಚಿಸಿದ್ದಾರೆ. ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಹಲವು ಮಾರ್ಪಾಡು ಮಾಡಲಾಗುತ್ತದೆ. ಇಸ್ರೇಲ್ ಮಾತ್ರವಲ್ಲ ಬೇರೆ ರಾಜ್ಯದ ಕೃಷಿ ಪದ್ಧತಿ ಜೊತೆಗೆ ಯಾರಾದರು ಉತ್ತಮ ಸಲಹೆ ಕೊಟ್ಟರೆ ಅದನ್ನು ಕೃಷಿಗೆ ಅಳವಡಿಸಿಕೊಳ್ಳುವುದಾಗಿ ಭರವಸೆ ನೀಡಿದರು.

    ಸಭೆಯಲ್ಲಿ ಕೃಷಿ ಸಚಿವ ಶಿವಶಂಕರ್ ರೆಡ್ಡಿ, ತೋಟಗಾರಿಕೆ ಸಚಿವ ಮನುಗುಳಿ ಭಾಗವಹಿಸಿದ್ದರು.

  • ಮೋಡಗಳನ್ನು ಇಸ್ರೇಲ್ ಕದ್ದಿದ್ದರಿಂದ ಇರಾನ್‍ನಲ್ಲಿ ಬರಗಾಲ!

    ಮೋಡಗಳನ್ನು ಇಸ್ರೇಲ್ ಕದ್ದಿದ್ದರಿಂದ ಇರಾನ್‍ನಲ್ಲಿ ಬರಗಾಲ!

    ಟೆಹರಾನ್: ಇಸ್ರೆಲ್ ತನ್ನ ಮೋಡ ಮತ್ತು ಹಿಮಗಳನ್ನು ಕದ್ದಿದೆ ಎಂದು ಇರಾನ್ ಬ್ರಿಗೇಡಿಯರ್ ಜನರಲ್ ಗೊಲಾಮ್ ರೆಜ್ ಜಲಾಲಿ ಆರೋಪಿಸಿದ್ದಾರೆ.

    ಇರಾನ್ ರಾಜಧಾನಿಯಲ್ಲಿ ನಡೆದ ಕೃಷಿ ಸಮ್ಮೇಳನದಲ್ಲಿ ಈ ಹೇಳಿಕೆಯನ್ನು ನೀಡಿದ್ದು, ಸಭೆಯಲ್ಲಿ ಮಾತನಾಡಿದ ಅವರು, ಇಸ್ರೆಲ್ ಮತ್ತು ನೆರೆಹೊರೆಯ ರಾಷ್ಟ್ರಗಳು ಇರಾನಿಗೆ ಬರುತ್ತಿದ್ದ ಮೋಡಗಳು ಮತ್ತು ಹಿಮವನ್ನು ತಡೆದು, ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಇಸ್ರೇಲ್ ದೇಶದ ಹೆಸರನ್ನು ಪ್ರಸ್ತಾಪಿಸದೆ ಇನ್ನೊದು ದೇಶ ನಮ್ಮ ದೇಶದ ಮೋಡ ಹಾಗೂ ಮಂಜನ್ನು ಕದ್ದಿರಬಹುದೆಂದು ನಾನು ನಂಬಿದ್ದೇನೆ. ಇದರಿಂದಲೇ ನಮ್ಮ ದೇಶದಲ್ಲಿ ತೀವ್ರ ಬರಗಾಲ ಬಂದಿದೆ ಎಂದು ತಿಳಿಸಿದರು.

    ನಮ್ಮನ್ನು ಆರ್ಥಿಕವಾಗಿಯೂ ಸೋಲಿಸಬೇಕೆಂದು ನೆರೆಹೊರೆಯ ದೇಶಗಳು ಮೋಡಗಳನ್ನು ನಾಶಮಾಡಿದ್ದಾರೆ. ಇದರಿಂದಾಗಿ ನಮ್ಮಲ್ಲಿ ಬರಗಾಲ ಸೃಷ್ಟಿಯಾಗಿದೆ ಎಂದು ಆರೋಪಿಸಿದ್ದಾರೆ.

    ತೀವ್ರ ಬರಗಾಲದಿಂದ ಇರಾನ್ ದೇಶವು ತತ್ತರಿಸಿದ್ದು, ಕುಡಿಯುವ ನೀರಿಗೂ ಸಹ ಹಾಹಾಕಾರ ಸೃಷ್ಟಿಯಾಗಿದೆ ಎಂದು ವರದಿಗಳು ತಿಳಿಸಿವೆ.

  • ಇಸ್ರೇಲ್‍ನಲ್ಲಿ ಸಮುದ್ರ ನೀರನ್ನು ಕುಡಿದ ಮೋದಿ!

    ಇಸ್ರೇಲ್‍ನಲ್ಲಿ ಸಮುದ್ರ ನೀರನ್ನು ಕುಡಿದ ಮೋದಿ!

    ಟೆಲ್ ಅವೀವ್: ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉಪ್ಪುನೀರಿನ ಶುದ್ಧೀಕರಣ ಘಟಕವನ್ನು ವೀಕ್ಷಿಸಿದರು.

    ಪ್ರವಾಸದ ಕೊನೆಯ ದಿನ ಮೋದಿ ಅವರು ಡೋರ್ ಬೀಚ್ ಗೆ ಭೇಟಿ ನೀಡಿ ಸಮುದ್ರ ನೀರಿನಿಂದ ಉಪ್ಪಿನಂಶ ತೆಗೆಯುವ ಘಟಕವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಜೊತೆಗಿದ್ದರು.

    ಇಬ್ಬರು ನಾಯಕರು ಸಮುದ್ರ ದಂಡೆಯಲ್ಲಿ ನಿಂತು ಮಾತನಾಡಿದರು. ಇದಾದ ಬಳಿಕ ಎರಡೂ ದೇಶದ ಪ್ರಧಾನಿಗಳು ಶುದ್ಧೀಕರಿಸಿದ ಸಮುದ್ರದ ನೀರನ್ನು ಕುಡಿದರು.

    ಸಮುದ್ರ ನೀರಿನಿಂದ ಉಪ್ಪಿನಂಶ ತೆಗೆದು ಅದನ್ನು ಕುಡಿಯುವ ನೀರಾಗಿ ಪರಿವರ್ತಿಸುವುದಕ್ಕೆ Desalination ಎಂದು ಕರೆಯಲಾಗುತ್ತದೆ. 2005ರಲ್ಲಿ ಇಸ್ರೇಲ್ ಮೊದಲ ಬಾರಿಗೆ ಈ ರೀತಿಯ ಘಟಕವನ್ನು ತೆರೆದಿದೆ. ಇಂದು ಇಸ್ರೇಲ್ ಶೇ.40ರಷ್ಟು ಕುಡಿಯುವ ನೀರಿಗೆ ಸಮುದ್ರವನ್ನೇ ನೆಚ್ಚಿಕೊಂಡಿದೆ.

    ಪ್ರಸ್ತುತ ಅಮೆರಿಕ, ಸಿಂಗಾಪುರ, ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳು ಈ ರೀತಿಯ ಘಟಕಗಳು ಸ್ಥಾಪನೆಯಾಗಿದೆ.

     

  • ದೆಹಲಿ, ಮುಂಬೈನಿಂದ ಟೆಲ್ ಅವೀವ್‍ಗೆ ನೇರವಿಮಾನ- ಇಸ್ರೇಲ್‍ನಲ್ಲಿರೋ ಭಾರತೀಯರಿಗೆ ಮೋದಿ ಭರ್ಜರಿ ಗಿಫ್ಟ್

    ದೆಹಲಿ, ಮುಂಬೈನಿಂದ ಟೆಲ್ ಅವೀವ್‍ಗೆ ನೇರವಿಮಾನ- ಇಸ್ರೇಲ್‍ನಲ್ಲಿರೋ ಭಾರತೀಯರಿಗೆ ಮೋದಿ ಭರ್ಜರಿ ಗಿಫ್ಟ್

    ನವದೆಹಲಿ: ಇಸ್ರೇಲ್ ಪ್ರವಾಸದಲ್ಲಿರೋ ಪ್ರಧಾನಿ ಮೋದಿ ಅಲ್ಲಿನ ಭಾರತೀಯರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಇಸ್ರೇಲ್‍ನಲ್ಲಿರೋ ಭಾರತೀಯರಿಗೆ ಓಐಸಿ ಕಾರ್ಡ್ ಪಡೆಯಲು ನಿಯಮಗಳನ್ನ ಸಡಿಲಿಸಿದ್ದು, ಮುಂಬೈ ಹಾಗೂ ದೆಹಲಿಯಿಂದ ಟೆಲ್ ಅವೀವ್‍ಗೆ ನೇರ ವಿಮಾನ ಸಂಚಾರ ಆರಂಭಿಸೋದಾಗಿ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರವಾಸದಲ್ಲಿ ಬುಧವಾರ ರಾತ್ರಿ ಭಾರತೀಯ ಮೂಲದ ಇಸ್ರೇಲ್ ಪ್ರಜೆಗಳನ್ನು ಭೇಟಿ ಮಾಡಿದ್ರು. ಟೆಲ್ ಅವೀವ್ ಕನ್ವೆನ್ಷನ್ ಹಾಲ್‍ನಲ್ಲಿ ಸೇರಿದ್ದ 5 ಸಾವಿರಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ 2 ಪ್ರಮುಖ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ರು.

    ಇಸ್ರೇಲ್‍ನಲ್ಲಿ ಕಡ್ಡಾಯ ಮಿಲಿಟರಿ ಸೇವೆ ಮಾಡಿರುವ ಭಾರತೀಯ ಮೂಲದ ಜನರು ಓಸಿಐ ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ ಅಂದ್ರು. ಭಾರತೀಯ ಮೂಲದ ಇಸ್ರೇಲ್ ಜನರಿಗೆ ಒಸಿಐ(ಓವರ್‍ಸೀಸ್ ಸಿಟಿಜನ್ ಆಫ್ ಇಂಡಿಯಾ) ಕಾರ್ಡ್ ಕೊಡುವ ನಿಯಮಗಳನ್ನು ಸರಳ ಮಾಡ್ತೇವೆ. ಜೊತೆಗೆ ಮುಂಬೈ ಹಾಗೂ ದೆಹಲಿಯಿಂದ ಟೆಲ್ ಅವೀವ್‍ಗೆ ನೇರ ವಿಮಾನ ಸಂಚಾರ ಆರಂಭಿಸುತ್ತೇವೆ ಎಂದು ಮೋದಿ ಹೇಳಿದ್ರು.

    ಐ ಫಾರ್ ಐ ಅಂದ್ರೆ ಇಂಡಿಯಾ ಫಾರ್ ಇಸ್ರೇಲ್ ಹಾಗೂ ಇಸ್ರೇಲ್ ಫಾರ್ ಇಂಡಿಯಾ ಅಂತ ಪ್ರಧಾನಿ ಮೋದಿ ಹೇಳಿದ್ರು. ಮೋದಿ ಅವರನ್ನ ರಾಷ್ಟ್ರಪತಿ ರಿವ್ಲಿನ್ ಅಪ್ಪುಗೆ ಮೂಲಕ ಸ್ವಾಗತಿಸಿದ್ರು. ಈ ಬಗ್ಗೆ ಟ್ವೀಟ್ ಮಾಡಿರೋ ಮೋದಿ, ಇಸ್ರೇಲ್‍ನ ರಾಷ್ಟ್ರಪತಿ ಪ್ರೊಟೊಕಾಲ್ ಮುರಿದು ನನ್ನನ್ನು ಬಹಳ ಆತ್ಮೀಯವಾಗಿ ಬರಮಾಡಿಕೊಂಡ್ರು. ಇದು ಭಾರತೀಯರಿಗೆ ಸಿಕ್ಕ ಗೌರವದ ಸಂಕೇತ ಎಂದಿದ್ದಾರೆ.

    70 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಇಸ್ರೇಲ್‍ಗೆ ಭೇಟಿ ನೀಡೋ ಅವಕಾಶ ಸಿಕ್ಕಿದೆ. ಇದು ಖುಷಿಯ ವಿಚಾರ ಎಂದು ಮೋದಿ ಹೇಳಿದ್ರು.

  • ಟ್ರಂಪ್, ಪೋಪ್ ಬಳಿಕ ಇಸ್ರೇಲಿನಲ್ಲಿ ಮೋದಿಗೆ ಸಿಕ್ತು ‘ಆ’ ವಿಶೇಷ ಸ್ವಾಗತ: ವಿಡಿಯೋ ನೋಡಿ

    ಟ್ರಂಪ್, ಪೋಪ್ ಬಳಿಕ ಇಸ್ರೇಲಿನಲ್ಲಿ ಮೋದಿಗೆ ಸಿಕ್ತು ‘ಆ’ ವಿಶೇಷ ಸ್ವಾಗತ: ವಿಡಿಯೋ ನೋಡಿ

    ಟೆಲ್ ಅವೀವ್: ವಿಮಾನದಿಂದ ಇಳಿದ ಕೂಡಲೇ ಆತಿಥೇಯ ದೇಶದ ಪ್ರಧಾನಿಯಿಂದ ಆತ್ಮೀಯ ಸ್ವಾಗತ, ಇದಾದ ಬಳಿಕ ಭಾರತ ರಾಷ್ಟ್ರಗೀತೆ ಮೊಳಗಿಸಿ ಗೌರವ, ಸ್ವಾಗತ ಸಿಕ್ಕಿದ ಬಳಿಕ ಅಲ್ಲೇ ವಿಶೇಷ ಭಾಷಣ. ಇದು 70 ವರ್ಷದ ಬಳಿಕ ಇಸ್ರೇಲಿಗೆ ಆಗಮಿಸಿದ ಭಾರತದ ಪ್ರಧಾನಿಗೆ ಆ ದೇಶದ ನೀಡಿದ ವಿಶೇಷ ಸ್ವಾಗತದ ಹೈಲೈಟ್ಸ್.

    ಪ್ರಮುಖ ನಗರವಾಗಿರುವ ಟೆಲ್ ಅವೀವ್‍ಗೆ ಪ್ರಧಾನಿ ಇದ್ದ ಏರ್‍ಇಂಡಿಯಾ ವಿಮಾನ ಭಾರತೀಯ ಕಾಲಮಾನ ಸಂಜೆ 6.30ರ ವೇಳೆಗೆ ಲ್ಯಾಂಡ್ ಆಯ್ತು. ವಿಮಾನ ನಿಲ್ದಾಣದಲ್ಲಿ ನಿಗಧಿತ ಸ್ಥಳದಲ್ಲಿ ಲ್ಯಾಂಡ್ ಆದ ಕೂಡಲೇ ಪ್ರಧಾನಿ ಮೋದಿ ಅವರಿಗೆ ವಿಶೇಷ ಸ್ವಾಗತ ನೀಡುವ ಪ್ರಕ್ರಿಯೆ ಆರಂಭವಾಯಿತು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯುಹು ನಿಲ್ದಾಣಕ್ಕೆ ಆಗಮಿಸಿದರು. ಏರ್‍ಸ್ಟ್ರೇರ್ ಮೂಲಕ ಮೋದಿ ಕೆಳಗಡೆ ಇಳಿಯುತ್ತಿದ್ದಂತೆ ಬೆಂಜಮಿನ್ ಮೋದಿ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡರು. ಮೋದಿ ಅವರು ಈ ಗೌರವಕ್ಕೆ ಥ್ಯಾಂಕ್ಸ್ ಎಂದು ಹೇಳಿದರು. ಇದಾದ ಬಳಿಕ ಮೋದಿ ಅವರಿಗೆ ಬೆಂಜಮಿನ್ ನೆತನ್ಯುಹು ಇಸ್ರೇಲ್ ಅಧಿಕಾರಿಗಳನ್ನು ಮೋದಿಗೆ ಪರಿಚಯಿಸಿದರು.

    ನಂತರ ಕೆಂಪು ಹಾಸಿನ ಮೇಲೆ ನಡೆದ ಇಬ್ಬರು ಪ್ರಧಾನಿಗಳು ಸ್ವಲ್ಪ ದೂರ ನಡೆದು ನಿಂತರು. ಕೂಡಲೇ ಭಾರತದ ರಾಷ್ಟ್ರಗೀತೆ ಮೊಳಗಿತು. ಈ ವಿಶೇಷ ವಂದನೆಯ ಸ್ವೀಕರಿಸಿದ ಬಳಿಕ ಇಬ್ಬರು ನಾಯಕರು ಅಲ್ಲೇ ನಿರ್ಮಾಣವಾಗಿದ್ದ ವೇದಿಕೆಯನ್ನು ಏರಿದರು.

    ಮೇರೆ ದೋಸ್ತೋ.. ಆಪ್ ಕೋ ಸ್ವಾಗತ್ ಎಂದು ಹಿಂದಿಯಲ್ಲೇ ಭಾಷಣ ಆರಂಭಿಸಿದ ಬೆಂಜಮಿನ್. `ಮೋದಿ ನಮ್ಮ ಬೆಸ್ಟ್ ಫ್ರೆಂಡ್, ಭಾರತೀಯರೆಂದರೆ ನಮಗೆ ಇಷ್ಟ. ನಿಮ್ಮ ಭೇಟಿಯಿಂದ ನಮ್ಮೆರೆಡು ರಾಷ್ಟ್ರಗಳ ಬಾಂಧವ್ಯ ವೃದ್ಧಿಯಾಗಲಿದೆ ಎಂದು ಹೇಳಿದರು. ನಂತರ ಮೋದಿ ಅವರು ಮಾತನಾಡಿ ನಮ್ಮ ಮಾತುಕತೆಯಿಂದ ಎರಡೂ ದೇಶಗಳ ಬಾಂಧವ್ಯ ವೃದ್ಧಿಸಲಿದೆ ಎಂದು ತಿಳಿಸಿದರು.

    ಮೂರನೇ ವ್ಯಕ್ತಿ: ಇಸ್ರೇಲ್ ಪ್ರಧಾನಿಯವರೇ ಸ್ವತಃ ವಿಮಾನ ನಿಲ್ದಾಣಕ್ಕೆ ತೆರಳಿ ಈ ರೀತಿಯ ವಿಶೇಷ ಸ್ವಾಗತ ನೀಡುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ ಧರ್ಮಗುರು ಪೋಪ್ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೀಡಿದ್ದರು. ಈಗ ಈ ವಿಶೇಷ ಸ್ವಾಗತವನ್ನು ಪಡೆದ ಮೂರನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.

    ಇಸ್ರೇಲ್ ಪ್ರಧಾನಿಯವರ ಫೇಸ್‍ಬುಕ್ ಪೇಜ್‍ನಲ್ಲಿ ಮೋದಿ ಅವರಿಗೆ ನೀಡಿದ ವಿಶೇಷ ಗೌರವದ ವಿಡಿಯೋ ಅಪ್ಲೋಡ್ ಆಗಿದೆ. ಬೆಂಜಮಿನ್ ನೆತನ್ಯುಹು ಅವರು ಟ್ವಿಟ್ಟರ್ ನಲ್ಲಿ ಹಿಂದಿಯಲ್ಲಿ ಸ್ವಾಗತವನ್ನು ಕೋರಿದ್ದಾರೆ.

    2003ರಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಇಸ್ರೇಲ್ ಪ್ರಧಾನಿ ಏರಿಯಲ್ ಶರೋನ್ ಭಾರತ ಪ್ರವಾಸ ಕೈಗೊಂಡಿದ್ದರು. ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 25 ವರ್ಷಗಳಾಗಿದ್ದರೂ ಉಳಿದ ದೇಶಗಳಿಗೆ ಹೋಲಿಸಿದರೆ ಉಭಯ ದೇಶಗಳ ನಾಯಕರು ಬಂದು ಹೋಗುವ ಪರಿಪಾಠ ಬಹಳ ಕಡಿಮೆ ಇದೆ. 2006ರಲ್ಲಿ ಗುಜರಾತ್ ಸಿಎಂ ಆಗಿದ್ದಾಗ ಇಸ್ರೇಲ್‍ಗೆ ಮೋದಿ ಭೇಟಿ ನೀಡಿದ್ದರು.

     

     

  • ಇಸ್ರೇಲ್‍ಗೆ ಭೇಟಿ ನೀಡ್ತಿರೋ ಮೊದಲ ಭಾರತೀಯ ಪ್ರಧಾನಿ ಮೋದಿಗೆ ಹಿಂದಿಯಲ್ಲಿ ಸ್ವಾಗತ ಕೋರಿದ ಇಸ್ರೇಲಿ ಪ್ರಜೆಗಳು

    ಇಸ್ರೇಲ್‍ಗೆ ಭೇಟಿ ನೀಡ್ತಿರೋ ಮೊದಲ ಭಾರತೀಯ ಪ್ರಧಾನಿ ಮೋದಿಗೆ ಹಿಂದಿಯಲ್ಲಿ ಸ್ವಾಗತ ಕೋರಿದ ಇಸ್ರೇಲಿ ಪ್ರಜೆಗಳು

     

    ನವದೆಹಲಿ: ಪ್ರಧಾನಿ ಮೋದಿಯ ಐತಿಹಾಸಿಕ ಇಸ್ರೇಲ್ ಭೇಟಿಯ ಹಿನ್ನೆಲೆಯಲ್ಲಿ ಇಲ್ಲಿನ ಪ್ರಜೆಗಳು ಮೋದಿಗೆ ಹಿಂದಿಯಲ್ಲಿ ನಮಸ್ತೆ ಮೋದಿಜೀ ಎಂದು ಸ್ವಾಗತ ಕೋರಿದ್ದಾರೆ. ಇದರ ವಿಡಿಯೋವನ್ನ ಭಾರತದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದೆ.

    ಜುಲೈ 4ರಿಂದ ಆರಂಭವಾಗಿ 3 ದಿನಗಳ ಭೇಟಿಗೆ ಮೋದಿ ಇಸ್ರೇಲ್‍ಗೆ ತೆರಳಲಿದ್ದಾರೆ. ಈ ಮೂಲಕ ಮೋದಿ ಇಸ್ರೇಲ್‍ಗೆ ಭೇಟಿ ನೀಡುತ್ತಿರೋ ಮೊದಲ ಭಾರತೀಯ ಪ್ರಧಾನಿ ಎನಿಸಿಕೊಂಡಿದ್ದಾರೆ. ಬುಧವಾರ ಸಂಜೆ ವಿದೇಶಾಂಗ ಸಚಿವಾಲಯ ಮೋದಿ ಭೇಟಿಯನ್ನು ಅಧಿಕೃತವಾಗಿ ಘೊಷಿಸಿದೆ. ಜೆರುಸಲೆಂನಲ್ಲಿನ ಇಸ್ರೇಲ್ ಪ್ರಜೆಗಳು ಮೋದಿ ಅವರಿಗೆ ಸ್ವಾಗತ ಕೋರಿರುವ ವಿಡಿಯೋವನ್ನ ಬುಧವಾರ ರಾತ್ರಿ ಇಸ್ರೇಲ್ ರಾಯಭಾರ ಕಚೇರಿ ಹಂಚಿಕೊಂಡಿದೆ.

    ಮಹಿಳೆಯೊಬ್ಬರು ತಮ್ಮ ಎರಡೂ ಕೈಗಳನ್ನ ಜೋಡಿಸಿ, ನಮಸ್ತೇ ಮೋದಿಜೀ, ಇಸ್ರೇಲ್ ಮೆ ಆಪ್ ಕಾ ಸ್ವಾಗತ್ ಹೈ (ಇಸ್ರೇಲ್‍ಗೆ ನಿಮಗೆ ಸ್ವಾಗತ) ಎಂದು ಹೇಳಿದ್ದಾರೆ.

    ಮತ್ತೊಬ್ಬರು “ಭಾರತ್ ಔರ್ ಇಸ್ರೇಲ್ ಕೆ ಸಂಬಂಧೋ ಮೆ ವೃದ್ಧಿ ಹೋ ಔರ್ ಮಜ್‍ಬೂತ್ ಬನೆ (ಭಾರತ ಹಾಗು ಇಸ್ರೇಲ್ ನಡುವಿನ ಬಾಂಧವ್ಯ ವೃದ್ಧಿಸಲಿ ಹಾಗೂ ಗಟ್ಟಿಯಾಗಲಿ ಎಂದು ಆಶಿಸುತ್ತೇನೆ) ಎಂದಿದ್ದಾರೆ.

    ಇದಲ್ಲದೆ ರಾಯಭಾರ ಕಚೇರಿಯ ನವದೆಹಲಿ ಸಿಬ್ಬಂದಿ ಕೂಡ ಒಟ್ಟಾಗಿ ಹಿಂದಿಯಲ್ಲಿ ಆಪ್ ಕೀ ಯಾತ್ರಾ ಶುಭ್ ಹೋ (ನಿಮ್ಮ ಪ್ರಯಾಣ ಸುಖಕರವಾಗಿರಲಿ) ಎಂದು ಕೋರಿದ್ದಾರೆ. ಭಾರತದ ಇಸ್ರೇಲ್ ರಾಯಭಾರಿ ಡೇನಿಯಲ್ ಕಾರ್ಮನ್ ಕೂಡ ವಿಡಿಯೋದ ಕೊನೆಯಲ್ಲಿ ಹಿಂದಿ ಹಾಗೂ ಹಿಬ್ರೀವ್ ಭಾಷೆಯಲ್ಲಿ ಸ್ವಾಗತ ಕೋರಿದ್ದಾರೆ.

    ಈ ವಿಡಿಯೋವನ್ನ ಈಗಾಗಲೇ 5,700ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದು 3,600ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. ಮೋದಿ ಕೂಡ ಗುರುವಾರ ಬೆಳಿಗ್ಗೆ ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿ ಬಹುತ್ ಬಹುತ್ ಧನ್ಯವಾದ್ ಎಂದಿದ್ದಾರೆ.

    ಇಸ್ರೇಲ್ ಪ್ರಜೆಗಳ ಈ ಕಾರ್ಯವನ್ನು ಭಾರತೀಯರು ಕೂಡ ಶ್ಲಾಘಿಸಿದ್ದಾರೆ.

    https://twitter.com/Dayweekaa/status/880265480291971072?ref_src=twsrc%5Etfw&ref_url=http%3A%2F%2Fwww.ndtv.com%2Foffbeat%2Fnamaste-modi-ji-ahead-of-visit-israelis-welcome-pm-narendra-modi-in-hindi-1718456