Tag: Israel

  • ಕೋವಿಡ್‌ ಲಸಿಕೆಯ 4ನೇ ಬೂಸ್ಟರ್‌ ಡೋಸ್‌ಗೆ ಇಸ್ರೇಲ್‌ ಅನುಮೋದನೆ

    ಇಸ್ರೇಲ್‌: ಕೊರೊನಾ ವೈರಸ್‌ ಹೊಸ ರೂಪಾಂತರಿ ಓಮಿಕ್ರಾನ್‌ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿ ಕೋವಿಡ್-19 ವಿರುದ್ಧದ ಲಸಿಕೆಯ 4ನೇ ಬೂಸ್ಟರ್‌ ನೀಡಲು ಇಸ್ರೇಲ್‌ ಅನುಮೋದನೆ ನೀಡಿದೆ.

    ಕೊರೊನಾ ರೂಪಾಂತರಿ ಸೋಂಕಿನ ಪರಿಣಾಮ ತಡೆಗೆ ಬೂಸ್ಟರ್‌ ಡೋಸ್‌ ಅಗತ್ಯ ಎಂಬುದು ತಜ್ಞರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಜಗತ್ತಿನ ಹಲವು ದೇಶಗಳು ಈಗಾಗಲೇ ಕೋವಿಡ್-19 ಲಸಿಕೆಯ 3ನೇ ಡೋಸ್‌ ಆಗಿ ಬೂಸ್ಟರ್‌ ಡೋಸ್‌ ನೀಡುತ್ತಿವೆ. ಕೆಲವು ದೇಶಗಳಲ್ಲಿ ಬೂಸ್ಟರ್‌ ಡೋಸ್‌ ನೀಡಿಕೆ ಈಗಾಗಲೇ ಚಾಲನೆ ಪಡೆದಿದೆ. ಇನ್ನೂ ಕೆಲವು ದೇಶಗಳಲ್ಲಿ ಶಿಫಾರಸ್ಸು ಮಾಡಲಾಗಿದೆ. ಈ ನಡುವೆಯೇ ಇಸ್ರೇಲ್‌ 4ನೇ ಬೂಸ್ಟರ್‌ ನೀಡಲು ಅನುಮೋದನೆ ನೀಡಿ ವಿಶ್ವದಲ್ಲೇ ಮೊದಲ ರಾಷ್ಟ್ರ ಎನಿಸಿಕೊಂಡಿದೆ. ಇದನ್ನೂ ಓದಿ: ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ

    ರೋಗನಿರೋಧಕ ಶಕ್ತಿ ಇರುವ ಜನರಿಗೆ ನಾವು ಕೋವಿಡ್‌ ಲಸಿಕೆಯ ನಾಲ್ಕನೇ ಬೂಸ್ಟರ್‌ ಡೋಸ್‌ (ಫೈಜರ್‌ ಅಭಿವೃದ್ಧಿಪಡಿಸಿರುವ ʼಪ್ಯಾಕ್ಸ್‌ಲೋವಿಡ್‌ʼ) ನೀಡಲು ಅನುಮೋದಿಸಿದ್ದೇವೆ ಎಂದು ಆರೋಗ್ಯ ಸಚಿವಾಲಯದ ವ್ಯವಸ್ಥಾಪಕ ನಿರ್ದೇಶಕ ನಾಚ್ಮನ್‌ ಆಶ್‌ ತಿಳಿಸಿದ್ದಾರೆ.

    ಜಗತ್ತಿನ ಅನೇಕ ದೇಶಗಳು ಜನಸಾಮಾನ್ಯರಿಗೆ ಕೋವಿಡ್‌ ಲಸಿಕೆಯ ಮೂರನೇ ಡೋಸ್‌ ನೀಡುತ್ತಿವೆ. ಇಂತಹ ಸಂದರ್ಭದಲ್ಲಿ ಇಸ್ರೇಲ್‌ ನಾಲ್ಕನೇ ಬೂಸ್ಟರ್‌ ನೀಡಲು ಅನುಮೋದನೆ ನೀಡಿದೆ ಎಂದು ಪ್ರಧಾನಿ ನಫ್ತಾಲಿ ಬೆನೆಟ್‌ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ವರುಣನ ಆರ್ಭಟಕ್ಕೆ 3 ಬಲಿ – ರಾಜಧಾನಿ ಜಲಾವೃತ

    ಇಸ್ರೇಲ್‌ನ ಒಟ್ಟು ಜನಸಂಖ್ಯೆ 90.4 ಲಕ್ಷ. ಈ ಪೈಕಿ 40.2 ಲಕ್ಷ ಮಂದಿ ಈಗಾಗಲೇ ಕೋವಿಡ್‌ ಲಸಿಕೆಯ ಮೂರನೇ ಬೂಸ್ಟರ್‌ ಡೋಸ್‌ ಪಡೆದುಕೊಂಡಿದ್ದಾರೆ. ಇಸ್ರೋಲ್‌ನ ಶೆಬಾ ಮೆಡಿಕಲ್‌ ಸೆಂಟರ್‌ ಕ್ಲಿನಿಕಲ್‌ ಪ್ರಯೋಗ ನಡೆಸಿದ ನಂತರ ಬೂಸ್ಟರ್‌ಗೆ ಅನುಮೋದನೆ ನೀಡಲಾಗಿದೆ.

    ಯುಎಸ್‌ ಆಹಾರ ಮತ್ತು ಔಷಧ ಆಡಳಿತವು ಕಳೆದ ವಾರ ಫೈಜರ್‌ನ ಪ್ಯಾಕ್ಸ್‌ಲೋವಿಡ್‌ ಅನ್ನು 12 ವರ್ಷ ಮೇಲ್ಪಟ್ಟವರಿಗೆ ನೀಡಬಹುದು ಎಂದು ಘೋಷಿಸಿತ್ತು.

  • ಆಸ್ಟ್ರೇಲಿಯಾ ಪ್ರಜೆ 8 ಸಾವಿರ ವರ್ಷ ಇಸ್ರೇಲ್ ತೊರೆಯುವಂತಿಲ್ಲ!

    ಆಸ್ಟ್ರೇಲಿಯಾ ಪ್ರಜೆ 8 ಸಾವಿರ ವರ್ಷ ಇಸ್ರೇಲ್ ತೊರೆಯುವಂತಿಲ್ಲ!

    ಜೆರುಸಲೇಮ್: ಆಸ್ಟ್ರೇಲಿಯಾದ ಪ್ರಜೆಗೆ 8,000 ವರ್ಷಗಳ ವರೆಗಿನ ಪ್ರಯಾಣದ ಹಕ್ಕನ್ನು ಇಸ್ರೇಲ್ ನ್ಯಾಯಾಲಯ ಕಸಿದುಕೊಂಡಿದೆ. ಇಸ್ರೇಲ್‍ನಲ್ಲಿ ವಾಸಿಸುತ್ತಿದ್ದ ಆಸ್ಟ್ರೇಲಿಯಾದ ಪ್ರಜೆ ನೋಮ್ ಹಪ್ಪರ್ಟ್(44)ಗೆ ಬರೋಬ್ಬರಿ 8,000 ವರ್ಷಗಳ ವರೆಗೆ ಇಸ್ರೇಲ್ ತೊರೆಯುವಂತಿಲ್ಲ ಎಂಬ ಷರತ್ತು ವಿಧಿಸಿದೆ. ಕಾರಣ ಕೇಳಿದರೆ ನೀವೂ ದಂಗಾಗುತ್ತೀರಿ.

    ಹಪ್ಪರ್ಟ್‍ನ ಮಾಜಿ ಪತ್ನಿ ಮಕ್ಕಳನ್ನು ಸಾಕಲು ಮಾಜಿ ಪತಿಯಿಂದ ಹಣವನ್ನು ಕೇಳಲು ಕೌಟುಂಬಿಕ ನ್ಯಾಯಾಲಯಕ್ಕೆ ತೆರಳಿದ್ದಾರೆ. ಆಗ 1.8 ಮಿಲಿಯನ್ ಪೌಂಡ್(ಸುಮಾರು 18 ಕೋಟಿ ರೂ.) ಹಣವನ್ನು ನೀಡುವಂತೆ ಕೋರ್ಟ್ ವ್ಯಕ್ತಿಗೆ ಆದೇಶಿಸಿತ್ತು. ಈ ಮೊತ್ತವನ್ನು ಆತ ಭರಿಸದೇ ಹೋದಲ್ಲಿ ಬರೋಬ್ಬರಿ 8,000 ವರ್ಷಗಳ ವರೆಗೆ ಆತ ದೇಶ ತೊರೆಯದಂತಹ ಕಟ್ಟುಪಾಡು ವಿಧಿಸಿದೆ.

    ಆಸ್ಟ್ರೇಲಿಯಾ ಮೂಲದ ನೋಮ್ ಹಪ್ಪರ್ಟ್ 2012 ರಿಂದ ಇಸ್ರೇಲ್‍ನಲ್ಲಿ ವಾಸಿಸುತ್ತಿದ್ದು, ಆತನ ಮಾಜಿ ಪತ್ನಿ ಇಸ್ರೇಲ್‍ನ ಪ್ರಜೆಯಾಗಿದ್ದಾರೆ. ಹಪ್ಪಟ್ 8 ವರ್ಷಗಳಿಂದ ಇಸ್ರೇಲ್‍ನಲ್ಲಿ ಬಂಧಿಯಾಗಿದ್ದು, ತನ್ನ ಮಕ್ಕಳ ಬೆಂಬಲ ಹಣವನ್ನು ಸಂಪೂರ್ಣವಾಗಿ ಭರಿಸದೇ ಮರಳದಂತಹ ಸ್ಥಿತಿಗೆ ಬಂದಿದ್ದಾನೆ. ಇದನ್ನೂ ಓದಿ: ಹೊಸೂರು ರೋಡ್ ಮರ್ಡರ್‌ಗೆ ಟ್ವಿಸ್ಟ್ – 3 ಮದ್ವೆಯಾಗಿದ್ದ ಅರ್ಚನಾ ಆಸ್ತಿ ಮೇಲೆ ಕಣ್ಣು
    ಹಪ್ಪರ್ಟ್ ತನ್ನ ಇಬ್ಬರು ಮಕ್ಕಳಿಗೆ 18 ವರ್ಷ ತುಂಬುವವರೆಗೆ ತಿಂಗಳಿಗೆ 1,200 ಪೌಂಡ್(1.2ಲಕ್ಷ ರೂ.) ನೀಡಬೆಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಹಪ್ಪರ್ಟ್ ಇಲ್ಲಿಯವರೆಗೆ ನೀಡಿರುವ ಪಾವತಿಯ ದಾಖಲೆ ಹಾಗೂ ಸಂಪೂರ್ಣ ಮೊತ್ತವನ್ನು ಒಮ್ಮೆಲೆ ಭರಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.

    ಅಸಲಿಗೆ ಈ ನೀತಿ ಚಾಲ್ತಿಯಲ್ಲಿರುವುದು ಆನ್‍ಲೈನ್ ವ್ಯವಸ್ಥೆಯಲ್ಲಿ ನೀಡಿರುವ ಗರಿಷ್ಠ ದಿನಾಂಕದಿಂದಾಗಿ. ಈ ನೀತಿಗೆ ಕೊನೆಯ ದಿನಾಂಕವನ್ನು ಆನ್‍ಲೈನ್‍ನಲ್ಲಿ 9999ರ ಡಿಸೆಂಬರ್ 31ಕ್ಕೆ ಕೊನೆಯದಾಗಿಸಿದೆ. ಹೀಗಾಗಿ ಹಪ್ಪರ್ಟ್ ತನ್ನ ತವರಿಗೆ ತೆರಳಲು ಅಥವಾ ಇಸ್ರೇಲ್ ಅನ್ನು ತೊರೆಯಲು 8,000 ವರ್ಷ ಕಾಯಬೇಕಾಗಿದೆ. ಇದನ್ನೂ ಓದಿ: ಅಡಿಕೆ ಕದ್ದು ಸಿಕ್ಕಿಬಿದ್ದ ನಿವೃತ್ತ ASI

  • ಇಸ್ರೇಲ್‍ನಲ್ಲೇ ನನ್ನ ಪ್ರಾಣ ಹೋಗ್ಬೇಕಿತ್ತು: ಹೆಚ್‍ಡಿಕೆ

    ಇಸ್ರೇಲ್‍ನಲ್ಲೇ ನನ್ನ ಪ್ರಾಣ ಹೋಗ್ಬೇಕಿತ್ತು: ಹೆಚ್‍ಡಿಕೆ

    ತುಮಕೂರು: ಇಸ್ರೇಲ್‍ನಲ್ಲೇ ನನ್ನ ಪ್ರಾಣ ಹೋಗಬೇಕಿತ್ತು. ನನ್ನ ತಂದೆ ತಾಯಿಯ ಆರ್ಶಿವಾದದಿಂದ ನಾನು ಉಳಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಗುಬ್ಬಿ ಸಮಾವೇಶದಲ್ಲಿ ಮಾತನಾಡಿದ ಅವರು, ಇವತ್ತಿನ ಈ ಕಾರ್ಯಕ್ರಮ ಬಯಸಿ ಬಂದ ಕಾರ್ಯಕ್ರಮ ಅಲ್ಲ. 2018 ಚುನಾವಣೆ ನಂತರ ಯಾವುದೇ ಬಹುಮತ ಬರಲಿಲ್ಲ. ಜೆಡಿಎಸ್‍ಗೆ ಬಂದಿದ್ದು 37 ಸ್ಥಾನಗಳು. ಕಾಂಗ್ರೆಸ್ ನಾಯಕರೇ ಬಂದು ಸರ್ಕಾರ ಮಾಡಲು ದುಂಬಾಲು ಬಿದ್ದರು. ಖರ್ಗೆ ಅವರನ್ನೇ ಸಿಎಂ ಮಾಡಿ ಎಂದು ದೇವೇಗೌಡರು ಹೇಳಿದರು. ಆದರೆ ದೆಹಲಿಯ ನಾಯಕರು ನೀವೇ ಮುಖ್ಯಮಂತ್ರಿ ಆಗಿ ಎಂದರು. ಲಕ್ಷಾಂತರ ಕಾರ್ಯಕರ್ತರು ಕಟ್ಟಿರುವ ಪಕ್ಷ ಇದು. ಆದರೆ ಬಿಜೆಪಿಯ ಬಿ ಟೀಂ ಆಗಿ ಜೆಡಿಎಸ್ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸಿಗರು ಆರೋಪಿಸಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    HDD

    ಮುಸ್ಲಿಂ ಭಾಂದವರಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. 130 ಸ್ಥಾನ ಇದ್ದ ಕಾಂಗ್ರೆಸ್ ನಮ್ಮನ್ನು ಮುಗಿಸಲು ಬಂದು 78 ಸ್ಥಾನಕ್ಕೆ ಬಂದಿದೆ. ಮುಸ್ಲಿಂ ಭಾಂದವರೇನಾದರೂ ನಮ್ಮ ಜೊತೆ ಇದ್ದಿದ್ದರೇ 70 ಸ್ಥಾನ ಗೆಲ್ಲುತ್ತಿದ್ವಿ. ಈ ಜಿಲ್ಲೆಯಲ್ಲಿ ಏನೋ ಆಗೋಗಿದೆ, ಜೆಡಿಎಸ್ ಮುಗಿದೋಯ್ತು. ಅವರೇ ಆಚೆ ಕಳಿಸ್ತಿದ್ದಾರೆ ಅಂತೆಲ್ಲಾ ಹೇಳುತ್ತಿದ್ದಾರೆ. 23 ಸ್ಥಾನಕ್ಕೆ ಪೈಪೋಟಿ ನೀಡುತ್ತಿದ್ದಾರೆ ಅಂತ ಚರ್ಚೆ ಮಾಡಿದ್ದಾರೆ ಎಂದು ಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೇರೆ ಮನೆ ಮಾಡಲು ಒಪ್ಪದ ಪತಿ -ಕಂದನನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ

    1999ರಲ್ಲಿ ಗುಬ್ಬಿಯಲ್ಲಿ ವೀರಣ್ಣಗೌಡರು ಶಾಸಕರಾಗಿದ್ದರು. 10 ಜನರಲ್ಲಿ 6 ಜನರು ಜನತಾಪಕ್ಷದಿಂದ ಕಾಂಗ್ರೆಸ್ ಸೇರ್ಪಡೆಯಾದರು. 2004ರ ಚುನಾವಣೆ ಚನ್ನಿಗಪ್ಪ ಶಿವನಂಜಪ್ಪ ಅವರ ಮನೆಗೆ ದೇವೇಗೌಡರನ್ನು ಕರೆದುಕೊಂಡು ಹೋಗಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಅಂದೇ ಶಿವನಂಜಪ್ಪ ಅವರಿಗೆ ಟಿಕೆಟ್ ಕೊಡುತ್ತೇನೆ ಅಂತ ಮಾತು ಕೊಟ್ಟಿದ್ದರು. ಬಳಿಕ ಶ್ರೀನಿವಾಸ್ ಅವರು ಬಂದು ಗುಬ್ಬಿಗೆ ಟಿಕೆಟ್ ಕೇಳಿದ್ದರು. ಶಿವನಂಜಪ್ಪ ಅವರಿಗೆ ಮಾತು ಕೊಟ್ಟಿದ್ದರಿಂದ ಪಕ್ಷೇತರ ನಿಲ್ಲಿ ಎಂದು ನಾನೇ ಹೇಳಿದ್ದೆ. ಆ ಚುನಾವಣೆಯಲ್ಲಿ ನಿಮ್ಮೆಲರ ಆಶೀರ್ವಾದದಿಂದ ಗೆದ್ದರು. ಬಹಳ ಅನ್ಯೋನ್ಯವಾಗಿದ್ದರು, ನನ್ನ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಗುಬ್ಬಿ ತಾಲೂಕಿನ ಯಾವುದೇ ಅಭಿವೃದ್ದಿ ಕೆಲಸಗಳಿಗೆ ಅವರೇನು ಕಾಯಬೇಕಿರಲಿಲ್ಲ. ಗುಬ್ಬಿ ತಾಲೂಕಿನ ಎಲ್ಲಾ ಅಭಿವೃದ್ದಿ ಕೆಲಸ ಮಾಡಿಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ನಿಮ್ಮಿಂದ ಬೆಳೆದಿರೋದು ನಾವು – ಕಣ್ಣೀರು ಹಾಕಿದ ಹೆಚ್‍ಡಿಕೆ

    ಬಳಿಕ 2008ರಲ್ಲಿ ನಿಂತು ಗೆದ್ದರು. ನಾನು ಚಿಕ್ಕಬಳ್ಳಾಪುರದಲ್ಲಿ ಲೋಕಸಭೆಯಲ್ಲಿ ಸ್ಪರ್ಧಿಸಿದೆ. ನಾನು ಬೇರೆ ಕಡೆ ಪ್ರಚಾರಕ್ಕೆ ಹೋಗಿ, ಚಿಕ್ಕಬಳ್ಳಾಪುರದಲ್ಲಿ ಸೋತೆ. ಅದೇನೋ ಸೂಟ್ ಕೇಸ್, ನಾನೇ ಬೆಳೆಸ್ದೆ ಅಂತೆಲ್ಲಾ ಭಾಷಣ ಮಾಡಿದ್ರಲ್ಲಾ, 2013 – 14 ರಿಂದಲೇ ನನ್ನ ವಿರುದ್ಧ ಕೆಲವರು ಮಾತನಾಡುವುದಕ್ಕೆ ಶುರುಮಾಡಿದ್ರು. ನಾನು ಇವತ್ತು ದೇವಸ್ಥಾನಕ್ಕೆ ಹೋಗಿ ಬಂದಿದ್ದೇನೆ. ನನ್ನಿಂದ ಯಾವುದೇ ಅಪಚಾರವಾಗಿಲ್ಲ. ನಮ್ಮ ಕುಟುಂಬದಲ್ಲಿ ದುಡ್ಡು ಇಟ್ಟುಕೊಂಡು ನಾವು ರಾಜಕೀಯ ಮಾಡಿಲ್ಲ. ನಿಮ್ಮಂತ ಜನರನ್ನು ವಿಶ್ವಾಸದಲ್ಲಿಟ್ಟುಕೊಂಡು ಚುನಾವಣೆ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ

    ಇದೇ ವೇಳೆ ಇಸ್ರೇಲ್‍ನಲ್ಲೇ ನನ್ನ ಪ್ರಾಣ ಹೋಗಬೇಕಿತ್ತು. ನನ್ನ ತಂದೆ ತಾಯಿಯ ಆಶೀರ್ವಾದದಿಂದ ನಾನು ಉಳಿದೆ. ದೇವೇಗೌಡರು ಈ ವಯಸ್ಸಿನಲ್ಲೂ ಓಡಾಡುತ್ತಾರೆ ಎಂದು ಹೇಳುತ್ತಾ ಭಾಷಣ ಮಾಡುತ್ತಾ ಭಾವುಕರಾದರು.

  • ಭಾರತದ ಐತಿಹಾಸಿಕ ಸಾಧನೆ- ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ವಿತರಿಸಲಾಗಿದೆ?

    ಭಾರತದ ಐತಿಹಾಸಿಕ ಸಾಧನೆ- ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ವಿತರಿಸಲಾಗಿದೆ?

    ನವದೆಹಲಿ: ಕೊರೊನಾ ಲಸಿಕೆ ವಿತರಣೆಯಲ್ಲಿ ಭಾರತ ಐತಿಹಾಸಿಕಾ ಸಾಧನೆ ಮಾಡಿದ್ದು ಒಟ್ಟು 100 ಕೋಟಿ ಲಸಿಕೆಯನ್ನು ವಿತರಿಸಿದೆ.

    ಈ ಪೈಕಿ ಶೇ.22.55 ರಷ್ಟು ಜನ ಪೂರ್ಣ ಪ್ರಮಾಣದಲ್ಲಿ ಲಸಿಕೆ ಅಂದರೆ ಎರಡು ಡೋಸ್ ಪಡೆದುಕೊಂಡಿದ್ದಾರೆ. 138 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಆರಂಭದಲ್ಲಿ ಲಸಿಕೆ ಅಭಾವ ಆದರೂ ಕೇಂದ್ರ ಸರ್ಕಾರದ ಬೇಡಿಕೆಗೆ ತಕ್ಕಂತೆ ಪುಣೆ ಸೀರಂ ಮತ್ತು ಹೈದರಾಬಾದಿನ ಭಾರತ್ ಬಯೋಟೆಕ್ ಕಂಪನಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ವಿತರಿಸಿದ್ದರಿಂದ ಈ ಸಾಧನೆ ನಿರ್ಮಾಣವಾಗಿದೆ.

    ಕೇಂದ್ರ ಸರ್ಕಾರ ಈ ವರ್ಷದ ಅಂತ್ಯದ ಒಳಗಡೆ ದೇಶದ 94 ಕೋಟಿ ವಯಸ್ಕರಿಗೆ ಲಸಿಕೆ ನೀಡಬೇಕೆಂಬ ಗುರಿಯನ್ನು ಹಾಕಿಕೊಂಡಿದೆ. ಇದನ್ನೂ ಓದಿ: ಅಭಿನಂದನೆಗಳು ಇಂಡಿಯಾ – 100 ಕೋಟಿ ಲಸಿಕೆ ವಿತರಿಸಿ ಮೈಲಿಗಲ್ಲು

    ಯಾವ ದೇಶದಲ್ಲಿ ಎಷ್ಟು?
    ವಿಶ್ವದಲ್ಲಿ ಅತೀ ಹೆಚ್ಚು ಜನ ಸಂಖ್ಯೆಯನ್ನು ಹೊಂದಿರುವ ದೇಶ ಚೀನಾ. ಒಟ್ಟು 140 ಕೋಟಿ ಜನಸಂಖ್ಯೆ ಹೊಂದಿರುವ ಚೀನಾ ಈ ವರೆಗೆ 223.2 ಕೋಟಿ ಡೋಸ್ ಲಸಿಕೆ ನೀಡಿದ್ದು ಈ ಮೂಲಕ ಶೇ.74.97 ಜನರಿಗೆ ಎರಡೂ ಲಸಿಕೆಯನ್ನು ವಿತರಣೆ ಮಾಡಿದೆ. ಚೀನಾದ ಬಳಿಕ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಇಂದು 100 ಕೋಟಿ ಡೋಸ್ ಲಸಿಕೆ ವಿತರಿಸುವ ಮೂಲಕ ಮಹತ್ವದ ಮೈಲಿಗಲ್ಲು ಸೃಷ್ಟಿಸಿದೆ.

    ಅಮೆರಿಕದಲ್ಲಿ ಒಟ್ಟು 32.95 ಕೋಟಿ ಜನಸಂಖ್ಯೆ ಇದ್ದು, ಇದರಲ್ಲಿ 40.8 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದ್ದು ಈವರೆಗೆ ಶೇ.57.62 ಜನ ಎರಡು ಡೋಸ್ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್‍ನಲ್ಲಿ 6.7 ಕೋಟಿ ಜನಸಂಖ್ಯೆ ಇದೆ. ಒಟ್ಟು 9.5 ಕೋಟಿ ಲಸಿಕೆ ವಿತರಣೆಯಾಗಿದ್ದು, ಶೇ.67.08 ಜನ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಕೊರೊನಾ ಹೋರಾಟದಲ್ಲಿ ಭಾರತದ ಮೈಲಿಗಲ್ಲು – 100 ಕೋಟಿ ಲಸಿಕೆ ವಿತರಣೆ

    ಜರ್ಮನಿಯಲ್ಲಿ 8.3 ಕೋಟಿ ಜನಸಂಖ್ಯೆ ಇದ್ದು, 10.9 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಿ ಶೇ.65.75 ಜನರಿಗೆ ಲಸಿಕೆ ಕೊಟ್ಟಿದೆ. 6.74 ಕೋಟಿ ಜನಸಂಖ್ಯೆ ಹೊಂದಿರುವ ಫ್ರಾನ್ಸ್‍ನಲ್ಲಿ 10.1 ಕೋಟಿ ಡೋಸ್ ವಿತರಣೆ ಮಾಡಿ ಶೇ.67.56 ಜನ ಲಸಿಕೆ ಸ್ವೀಕರಿಸಿದ್ದಾರೆ.

    ಇಸ್ರೇಲ್‍ನಲ್ಲಿ ಒಟ್ಟು 94 ಲಕ್ಷ ಜನಸಂಖ್ಯೆ ಇದ್ದು ಅದರಲ್ಲಿ 1.5 ಕೋಟಿ ಡೋಸ್ ಲಸಿಕೆ ಪಡೆದರೆ ಶೇ. 62.97 ಜನರು ಪೂರ್ಣವಾಗಿ ಲಸಿಕೆ ಪಡೆದಿದ್ದಾರೆ. ಇಟಲಿಯಲ್ಲಿ 5.96 ಕೋಟಿ ಜನಸಂಖ್ಯೆಗೆ 8.7 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದ್ದು, ಶೇ. 70.08 ಜನ ಎರಡು ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಲಸಿಕೆ ನೀಡಲು ಬಂದ ಸಿಬ್ಬಂದಿಗೆ ಹಾವು ತೋರಿಸಿ ಬೆದರಿಕೆ ಹಾಕಿದ ಮಹಿಳೆ

    8.43 ಕೋಟಿ ಜನಸಂಖ್ಯೆ ಇರುವ ಟರ್ಕಿಯಲ್ಲಿ ಈಗಾಗಲೇ 11.3 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ. ಇದರೊಂದಿಗೆ ಇಲ್ಲಿ ಶೇ. 56.70 ಜನ ಪೂರ್ಣವಾಗಿ ಲಸಿಕೆ ಪಡೆದಿದ್ದಾರೆ.

  • ಇಸ್ರೇಲ್ ನೀಡಿದ ಹೈಟೆಕ್ ಆಕ್ಸಿಜನ್ ಕಂಟೇನರ್ ಯಾದಗಿರಿಯಲ್ಲಿ ಕಾರ್ಯಾರಂಭ

    ಇಸ್ರೇಲ್ ನೀಡಿದ ಹೈಟೆಕ್ ಆಕ್ಸಿಜನ್ ಕಂಟೇನರ್ ಯಾದಗಿರಿಯಲ್ಲಿ ಕಾರ್ಯಾರಂಭ

    ಯಾದಗಿರಿ: ಕೋವಿಡ್ ಸಂಕಷ್ಟಕ್ಕೆ ನೆರವಾಗುವ ದೃಷ್ಟಿಯಿಂದ, ಇಸ್ರೇಲ್ ನೀಡಿದ ಆಕ್ಸಿಜನ್ ಕಂಟೇನರ್ ಯಾದಗಿರಿಯಲ್ಲಿ ಕಾರ್ಯಾರಂಭ ಮಾಡಿದೆ.

    ಭಾರತಕ್ಕೆ ಒಟ್ಟು ಮೂರು ಆಕ್ಸಿಜನ್ ಕಂಟೇನರ್‍ಗಳನ್ನು ಇಸ್ರೇಲ್ ಕೊಡುಗೆ ನೀಡಿದೆ. ಅದರಲ್ಲಿ ಎರಡು ಕಂಟೇನರ್ ಕರ್ನಾಟಕದ ಪಾಲಾಗಿದ್ದು, ಡಿಸಿ ರಾಗ ಪ್ರಿಯರ ಸತತ ಪ್ರಯತ್ನದಿಂದ ಕೇಂದ್ರ ಸರ್ಕಾರದ ಮನವೊಲಿಸಿ ಒಂದು ಕಂಟೇನರ್‍ರನ್ನು ಯಾದಗಿರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದು ಕೋಲಾರದ ಪಾಲಾಗಿದೆ.

    ಕಳೆದ ಒಂದು ವಾರದಿಂದ ವಿಶೇಷ ಎಂಜಿನಿಯರ್ಸ್ ತಂಡ ಕಂಟೇನಿಯರ್ ಜೋಡಣೆ ಮಾಡಿದೆ. ಬಹು ಕೋಟಿ ವೆಚ್ಚದ ಹೈಟೆಕ್ ಆಕ್ಸಿಜನ್ ಕಂಟೇನರ್ ಇದಾಗಿದ್ದು, ನಿಮಿಷಕ್ಕೆ 500 ಲೀಟರ್ ಮತ್ತು ದಿನಕ್ಕೆ 7,20,000 ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡುತ್ತದೆ. ಇದರಿಂದ 70 ಸೋಂಕಿತರಿಗೆ 24 ಗಂಟೆಗಳ ಕಾಲ ಆಕ್ಸಿಜನ್ ನೀಡಬಹುದು.

    ಕಂಟೇನರ್ ಇಂದು ಅಧಿಕೃತವಾಗಿ ಕಾರ್ಯಾರಂಭ ಮಾಡಿದ್ದು, ಈ ಬಗ್ಗೆ ಮಾತನಾಡಿದ ಡಿಸಿ ಡಾ. ರಾಗಪ್ರಿಯರವರು ಭಾರತ ಮತ್ತು ಇಸ್ರೇಲ್ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಈ ವೇಳೆ ಡಿಎಸ್‍ಓ ಸಂಜೀವ್ ರಾಯಚೂರಕರ್, ಕಂಟೇನರ್ ಮೇಲ್ವಿಚಾರಕ ಡಾ. ಶ್ರೀನಿವಾಸ್ ಉಪಸ್ಥಿತರಿದ್ದರು.

  • ದೆಹಲಿಯಲ್ಲಿ ಸ್ಫೋಟ – ಮೂರು ಕಾರುಗಳಿಗೆ ಹಾನಿ

    ದೆಹಲಿಯಲ್ಲಿ ಸ್ಫೋಟ – ಮೂರು ಕಾರುಗಳಿಗೆ ಹಾನಿ

    ನವದೆಹಲಿ: ರಾಜಧಾನಿ ದೆಹಲಿಯ ಇಸ್ರೇಲ್‌ ರಾಯಭಾರ ಕಚೇರಿ ಬಳಿ ಶುಕ್ರವಾರ ಸಂಜೆ  ಬ್ಲಾಸ್ಟ್‌ ಸಂಭವಿಸಿದೆ. ಕಡಿಮೆ ಪ್ರಮಾಣ ಐಇಡಿ ಸ್ಫೋಟಗೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಬಳಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ. ಸ್ಥಳದಲ್ಲಿ ಕನ್ನಡಿಗಳು ಮುರಿ ಬಿದ್ದಿದೆ. ಯಾವುದೇ ಗಾಯಗಳು ವರದಿಯಾಗಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.

    ರಾಷ್ಟ್ರಪತಿ ರಾಮನಾಥ್‌ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿರುವ ಸೇನೆಯ ಬೀಟಿಂಗ್ ರಿಟ್ರೀಟ್ ಸಮಾರಂಭ ನಡೆಯುತ್ತಿರುವ ವಿಜಯ್‌ ಚೌಕ್‌ನಿಂದ 1.8 ಕಿ.ಮೀ ದೂರದಲ್ಲಿ ಈ ಸ್ಫೋಟ ಸಂಭವಿಸಿದೆ.

    ಸ್ಥಳಕ್ಕೆ ರಾಷ್ಟ್ರೀಯ ಭದ್ರತಾ ದಳ(ಎನ್‌ಎಸ್‌ಜಿ) ಆಗಮಿಸಿದೆ. ಸ್ಫೋಟದಿಂದ ಮೂರು ಕಾರುಗಳಿಗೆ ಹಾನಿಯಾಗಿದೆ.

  • ಕೊರೊನಾಗೆ ಆಂಟಿಬಾಡಿ ಸಿದ್ಧ – ಭಾರೀ ಪ್ರಮಾಣದಲ್ಲಿ ಉತ್ಪಾದನೆಗೆ ಮುಂದಾದ ಇಸ್ರೇಲ್

    ಕೊರೊನಾಗೆ ಆಂಟಿಬಾಡಿ ಸಿದ್ಧ – ಭಾರೀ ಪ್ರಮಾಣದಲ್ಲಿ ಉತ್ಪಾದನೆಗೆ ಮುಂದಾದ ಇಸ್ರೇಲ್

    ಟೆಲ್ ಅವೀವ್: ಕೋವಿಡ್-19 ಇನ್ನೂ ಔಷಧಿ ಪತ್ತೆಯಾಗಿಲ್ಲ. ಹಲವು ದೇಶಗಳಲ್ಲಿ ಔಷಧಿ ಕಂಡು ಹಿಡಿಯುವ ಪ್ರಯೋಗ ನಡೆಯುತ್ತಿದೆ. ಈ ನಡುವೆ ಇಸ್ರೇಲ್ ಕೊರೊನಾ ವೈರಸ್‍ಗೆ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿದೆ.

    ಹೌದು. ಇಸ್ರೇಲ್ ಇನ್‍ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್ (ಐಐಬಿಆರ್) ಸಂಸ್ಥೆ ಕೊರೊನಾ ವೈರಸ್‍ಗೆ ಪ್ರತಿಕಾಯಗಳನ್ನು(ಆಂಟಿಬಾಡಿ) ಅಭಿವೃದ್ಧಿಪಡಿಸಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ನಫ್ತಾಲಿ ಬೆನೆಟ್ ಅಧಿಕೃತವಾಗಿ ಪ್ರಕಟಿಸಿದ್ದಾರೆ.

    ಹೇಗೆ ಕೆಲಸ ಮಾಡುತ್ತೆ?
    ಈ ಮೊನೊ ಕ್ಲೋನಲ್ ಆಂಟಿಬಾಡೀಸ್ ಸೋಂಕು ಪೀಡಿತರ ದೇಹದೊಳಗಿರುವ ವೈರಸ್ ನಿರ್ಮೂಲನೆ ಮಾಡುತ್ತದೆ ಅಥವಾ ಕೆಲಸ ಮಾಡದಂತೆ ತಟಸ್ಥಗೊಳಿಸುತ್ತದೆ. ಇದರಿಂದಾಗಿ ಸೋಂಕು ಮತ್ತೊಬ್ಬ ವ್ಯಕ್ತಿಗೆ ಹರಡುವುದಿಲ್ಲ. ವಿಶ್ವಾದ್ಯಂತ ಇರುವ ವಿವಿಧ ಕಂಪನಿಗಳ ಜೊತೆ ಈ ಪ್ರತಿಕಾಯಗಳ ಉತ್ಪಾದನೆ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ನಫ್ತಾಲಿ ಬೆನೆಟ್ ಹೇಳಿದ್ದಾರೆ.

    ಸಿಂಗಲ್ ರಿಕವರಿ ಸೆಲ್ ನಿಂದ ತಯಾರಿಸಿದ ಒಂದು ಮದ್ದಿಗೆ ಇಸ್ರೇಲ್ ಈಗಾಗಲೇ ಪೇಟೆಂಟ್ ಮಾಡಿಸಿದ್ದು, ಭಾರೀ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಚಿಂತನೆ ನಡೆಸಿದೆ.

    ಇಸ್ರೇಲ್‍ನಲ್ಲಿ ಒಟ್ಟು 16,314 ಮಂದಿಗೆ ಸೋಂಕು ಬಂದಿದ್ದು, 238 ಮಂದಿ ಮೃತಪಟ್ಟಿದ್ದಾರೆ. 10,527 ಮಂದಿ ಗುಣಮುಖರಾಗಿದ್ದು, 5,549 ಸಕ್ರಿಯ ಪ್ರಕರಣಗಳಿವೆ.

  • ಸಂಸತ್ತು ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಿದ್ರೆ ಭಾರತ ಇಸ್ರೇಲ್ ಆಗುತ್ತೆ: ಓವೈಸಿ

    ಸಂಸತ್ತು ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಿದ್ರೆ ಭಾರತ ಇಸ್ರೇಲ್ ಆಗುತ್ತೆ: ಓವೈಸಿ

    ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆಗೆ ಎಐಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ಪೌರತ್ವ ತಿದ್ದುಪಡಿ ಮಸೂದೆಯನ್ನು ಸಂಸತ್ತು ಅಂಗೀಕರಿಸಿದರೆ ಭಾರತವು ಇಸ್ರೇಲ್ ಆಗಲಿದೆ. ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

    ಈ ಮಸೂದೆಯ ಮೂಲಕ ಭಾರತವನ್ನು ಧಾರ್ಮಿಕ ದೇಶವನ್ನಾಗಿ ಮಾಡಲು ಸರ್ಕಾರ ಬಯಸಿದೆ. ಈ ಮೂಲಕ ಭಾರತವು ತಾರತಮ್ಯಕ್ಕೆ ಹೆಸರುವಾಸಿಯಾದ ಇಸ್ರೇಲ್‍ನಂತಹ ದೇಶಗಳ ಸಾಲಿಗೆ ಸೇರಲಿದೆ. ಈಶಾನ್ಯ ರಾಜ್ಯಗಳಿಗೆ ವಿನಾಯಿತಿ ನೀಡುವ ವರದಿಗಳು ನಿಜವಾಗಿದ್ದರೆ, ಅದು ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳ 14ನೇ ಪರಿಚ್ಛೇದದ ಉಲ್ಲಂಘನೆಯಾಗಿದೆ. ಏಕೆಂದರೆ ಒಂದು ದೇಶದಲ್ಲಿ ಪೌರತ್ವಕ್ಕೆ ಸಂಬಂಧಿಸಿದ ಎರಡು ಕಾನೂನುಗಳು ಇರಲಾರವು ಎಂದು ಓವೈಸಿ ತಿಳಿಸಿದ್ದಾರೆ.

    ಮತ್ತೊಂದೆಡೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಸನಾ ಇಲ್ತಿಜಾ ಜಾವೇದ್ ಕೂಡ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಮುಸ್ಲಿಮರಿಗೆ ಸ್ಥಾನವಿಲ್ಲ. ಮುಸ್ಲಿಂ ಸಮುದಾಯವನ್ನು ದುರ್ಬಲಗೊಳಿಸಲು ಕೇಂದ್ರ ಸರ್ಕಾರ ಬಯಸಿದೆ ಎಂದು ಆರೋಪಿಸಿದ್ದಾರೆ.

    ಪೌರತ್ವ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ. ಜೊತೆಗೆ ಸರ್ಕಾರವು ಮಸೂದೆಯನ್ನು ಗುರುವಾರ ಅಥವಾ ಶುಕ್ರವಾರ ಮಾತ್ರ ಸಂಸತ್ತಿನಲ್ಲಿ ಮಂಡಿಸಲು ಯೋಚನೆ ನಡೆಸಿದೆ. ಈ ಮಸೂದೆಯು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದ ಮುಸ್ಲಿಮೇತರರಿಗೆ (ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ) ಭಾರತೀಯ ಪೌರತ್ವ ನೀಡಲು ಅನುಕೂಲವಾಗಲಿದೆ.

    ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಟ್ವೀಟ್ ಮಾಡಿರುವ ಸನಾ ಇಲ್ತಿಜಾ ಜಾವೇದ್, ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ. ಭಾರತದಲ್ಲಿ ಹರಡಿರುವ ಮುಸ್ಲಿಂ ಜನಸಂಖ್ಯೆಯ ಸ್ಥಿತಿಯನ್ನು ಬದಲಾಯಿಸಲು ಕೇಂದ್ರ ಸರ್ಕಾರ ಬಯಸುತ್ತಿದೆ. ಮುಸ್ಲಿಮರು ಸಮುದಾಯವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ. ಇದರಿಂದ ಮುಸ್ಲಿಮರು ದೇಶದಲ್ಲಿ ಕೆಳವರ್ಗದ ನಾಗರಿಕರಾಗಿ ಉಳಿಯುತ್ತಾರೆ ಎಂದು ದೂರಿದ್ದಾರೆ.

    ಕಾಂಗ್ರೆಸ್, ಶಿವಸೇನೆ, ತೃಣಮೂಲ ಕಾಂಗ್ರೆಸ್, ಡಿಎಂಕೆ, ಎಸ್‍ಪಿ, ಬಿಎಸ್‍ಪಿ, ಆರ್‌ಜೆಡಿ, ಸಿಪಿಐ (ಎಂ), ಎಐಎಂಐಎಂ, ಬಿಜೆಡಿ ಮತ್ತು ಅಸ್ಸಾಂನ ಬಿಜೆಪಿಯ ಮಿತ್ರ ರಾಷ್ಟ್ರಗಳು ಎಜಿಪಿ ಮಸೂದೆಯನ್ನು ವಿರೋಧಿಸುತ್ತಿವೆ. ಆದರೆ, ಅಕಾಲಿ ದಳ, ಜೆಡಿಯು ಎಐಎಡಿಎಂಕೆ ಸರ್ಕಾರದೊಂದಿಗೆ ಇವೆ. ಅಸ್ಸಾಂ ಹಾಗೂ ಇತರ ಈಶಾನ್ಯ ರಾಜ್ಯಗಳಲ್ಲಿಯೂ ಈ ಮಸೂದೆಯನ್ನು ವಿರೋಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.

    ಪೌರತ್ವ ಕಾನೂನು 1955ರಲ್ಲಿ ಬಂದಿದೆ. ಇದರ ಅಡಿ ಭಾರತ ಸರ್ಕಾರವು 11 ವರ್ಷಗಳ ಕಾಲ ದೇಶದಲ್ಲಿ ಉಳಿದುಕೊಂಡ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮುಸ್ಲಿಮೇತರರಿಗೆ (ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು) ಪೌರತ್ವವನ್ನು ನೀಡುತ್ತದೆ.

    ಸರ್ಕಾರ ಯಾವ ತಿದ್ದುಪಡಿ ಮಾಡಲಿದೆ?
    ತಿದ್ದುಪಡಿ ಮಾಡಿದ ಮಸೂದೆ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಅಲ್ಪಸಂಖ್ಯಾತ ನಿರಾಶ್ರಿತರಿಗೆ ಪೌರತ್ವ ನೀಡುವ ಸಮಯವನ್ನು 1 ರಿಂದ 6 ವರ್ಷಕ್ಕೆ ಇಳಿಸಿದೆ. ಅಲ್ಲದೆ 2014ರ ಡಿಸೆಂಬರ್ 31ರಂದು ಅಥವಾ ಅದಕ್ಕೂ ಮೊದಲು ಬಂದ ಮುಸ್ಲಿಮೇತರರು ಪೌರತ್ವಕ್ಕೆ ಅರ್ಹರಾಗಿರುತ್ತಾರೆ. ಮಾನ್ಯ ದಾಖಲೆಗಳಿಲ್ಲದೆ ಕಂಡುಬಂದರೂ ಅವರನ್ನು ಜೈಲಿಗೆ ಹಾಕಲಾಗುವುದಿಲ್ಲ.

    ಪ್ರತಿಭಟನೆ ಯಾಕೆ?
    ಸಂಸತ್ತಿನಲ್ಲಿ ಪೌರತ್ವ ಮಸೂದೆಯನ್ನು ಅಂಗೀಕರಿಸಿದರೆ, ಬಾಂಗ್ಲಾದೇಶದ ಹೆಚ್ಚಿನ ಸಂಖ್ಯೆಯ ಹಿಂದೂಗಳಿಗೆ ಪೌರತ್ವ ನೀಡುವುದರಿಂದ ಮೂಲ ನಿವಾಸಿಗಳ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತದೆ. ಇದು ರಾಜ್ಯಗಳ ಸಾಂಸ್ಕೃತಿಕ, ಭಾಷಾ ಮತ್ತು ಸಾಂಪ್ರದಾಯಿಕ ಪರಂಪರೆಯ ಮೇಲೆ ಬಿಕ್ಕಟ್ಟನ್ನುಂಟು ಮಾಡುತ್ತದೆ ಎನ್ನುವುದು ಈಶಾನ್ಯ ರಾಜ್ಯಗಳ ದೂರಾಗಿದೆ.

    ಅಸ್ಸಾಂ ಒಪ್ಪಂದ:
    1971ಕ್ಕಿಂತ ಮೊದಲು ಬಂದ ಜನರಿಗೆ ಪೌರತ್ವ ನೀಡುವ ಅವಕಾಶವಿತ್ತು. ಈ ಮಸೂದೆ ಅಸ್ಸಾಂಗೆ ಸೀಮಿತವಾಗಿಲ್ಲ. ಆದರೆ ಇದು ಇಡೀ ದೇಶದಲ್ಲಿ ಪರಿಣಾಮಕಾರಿಯಾಗಲಿದೆ ಎಂದು ಸರ್ಕಾರ ಹೇಳುತ್ತದೆ.

  • ಮೋದಿ ಫೋಟೋ ಹಾಕಿ “ಯೇ ದೋಸ್ತಿ ಹಮ್ ನಹೀ ತೋಡೆಂಗೆ” ಎಂದ ಇಸ್ರೇಲ್

    ಮೋದಿ ಫೋಟೋ ಹಾಕಿ “ಯೇ ದೋಸ್ತಿ ಹಮ್ ನಹೀ ತೋಡೆಂಗೆ” ಎಂದ ಇಸ್ರೇಲ್

    ನವದೆಹಲಿ: ಅಂತಾರಾಷ್ಟ್ರೀಯ ಸ್ನೇಹ ದಿನವಾದ ಇದು ಇಸ್ರೇಲ್ ಭಾರತಕ್ಕೆ ವಿನೂತನ ರೀತಿಯಲ್ಲಿ ವಿಶ್ ಮಾಡಿದ್ದು, ಪ್ರಧಾನಿ ಮೋದಿ ಮತ್ತು ಅ ದೇಶದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಫೋಟೋ ಇರುವ ವಿಡಿಯೋ ಟ್ವೀಟ್ ಮಾಡಿದೆ.

    ಮೋದಿ ಮತ್ತು ಬೆಂಜಮಿನ್ ನೆತನ್ಯಾಹು ಅವರು ಪರಸ್ಪರ ಕೈಕುಲುಕುತ್ತಿರುವ ಫೋಟೋಗಳನ್ನು ಜೋಡಿಸಿ ವಿಡಿಯೋ ಮಾಡಿ, ಅ ವಿಡಿಯೋಗೆ ಬಾಲಿವುಡ್‍ನ ಪ್ರಸಿದ್ಧ ಗೀತೆ ಅಮಿತಾಭ್ ಬಚ್ಚನ್ ಅಭಿನಯದ ಶೋಲೆ ಚಿತ್ರದ,”ಹೇ ದೋಸ್ತಿ ಹಮ್ ನಹೀ ತೋಡೆಂಗೆ” ಹಾಡನ್ನು ಹಿನ್ನೆಲೆಗೆ ಬಳಸಿಕೊಂಡಿದೆ.

    ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಇಸ್ರೇಲ್ ರಾಯಭಾರ ಕಚೇರಿ ಹ್ಯಾಪಿ ಫ್ರೆಂಡ್‍ಶಿಪ್ ಡೇ-2019 ಇಂಡಿಯಾ. ನಮ್ಮದು ಸದಾ ತುಂಬ ಬಲಿಷ್ಠವಾದ ಸ್ನೇಹ ಮತ್ತು ನಮ್ಮ ಸ್ನೇಹ ತುಂಬ ಎತ್ತರಕ್ಕೆ ಬೆಳೆಯಲಿ ಎಂದು ಬರೆದು ಟ್ವೀಟ್ ಮಾಡಿದೆ. ಭಾರತ ಮತ್ತು ಇಸ್ರೇಲ್ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕತೆ ಮತ್ತು ಮಿಲಿಟರಿ ಹಾಗೂ ಕಾರ್ಯತಂತ್ರದಂತಹ ವಿಚಾರಗಳಲ್ಲಿ ತುಂಬ ಒಳ್ಳೆಯ ಸಂಬಂಧ ಹೊಂದಿದೆ.

    ಇದಕ್ಕೆ ಇಸ್ರೇಲ್ ಭಾಷೆಯಲ್ಲೇ ರೀಟ್ವೀಟ್ ಮಾಡಿರುವ ಮೋದಿ ಅವರು ನಮಗೆ ವಿಶ್ ಮಾಡಿದ ಇಸ್ರೇಲ್ ದೇಶದ ನಾಗರಿಕರಿಗೂ ಹಾಗೂ ನನ್ನ ಉತ್ತಮ ಸ್ನೇಹಿತ ಬೆಂಜಮಿನ್ ನೆತನ್ಯಾಹು ಅವರಿಗೆ ಧನ್ಯವಾದಗಳು. ಭಾರತ ಮತ್ತು ಇಸ್ರೇಲ್ ತಮ್ಮ ಸ್ನೇಹವನ್ನು ಸಾಬೀತುಪಡಿಸಿವೆ. ನಮ್ಮ ಸಂಬಂಧ ಬಲವಾದ ಮತ್ತು ಶಾಶ್ವತವಾಗಿದೆ. ನಮ್ಮ ದೇಶಗಳ ನಡುವಿನ ಸ್ನೇಹವು ಭವಿಷ್ಯದಲ್ಲಿ ಇನ್ನಷ್ಟು ಬೆಳೆಯುತ್ತದೆ ಮತ್ತು ಅರಳುತ್ತದೆ ಎಂದು ಹಾರೈಸುತ್ತೇನೆ ಎಂದು ಬರೆದಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಇಸ್ರೇಲ್‍ನ ಚುನಾವಣಾ ಜಾಹೀರಾತುಗಳ ಬ್ಯಾನರ್‍ನಲ್ಲಿ ಮೋದಿ ಮತ್ತು ಬೆಂಜಮಿನ್ ನೆತನ್ಯಾಹು ಅವರ ಫೋಟೋಗಳು ಕೂಡ ಕಂಡುಬಂದಿತ್ತು. ನನ್ನ ಅವಧಿಯಲ್ಲಿ ವಿದೇಶಗಳ ಜೊತೆ ಇಸ್ರೇಲ್ ಸಂಬಂಧ ಹೇಗೆ ಬದಲಾಗಿದೆ ಎನ್ನುವುದನ್ನು ಅಲ್ಲಿನ ಜನತೆಗೆ ತಿಳಿಸಲು ಮೋದಿ ಅವರ ಕಟೌಟ್ ಹಾಕಲಾಗಿತ್ತು.

    2019ರ ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿ ಸತತ ಎರಡನೇ ಬಾರಿಗೆ ಮೋದಿ ಭಾರತದ ಪ್ರಧಾನಿಯದಾಗ ನೆತನ್ಯಾಹು ಅವರು ವಿಶ್ವ ನಾಯಕನಾಗಿ ಮೊದಲು ಮೋದಿ ಅವರಿಗೆ ಅಭಿನಂದನೆ ಹೇಳಿದ್ದರು. ಸತತ ಐದು ಬಾರಿ ಇಸ್ರೇಲಿನ ಪ್ರಧಾನ ಮಂತ್ರಿಯಾಗಿರುವ ಬೆಂಜಮಿನ್ ನೆತನ್ಯಾಹು ಅವರು ಮತ್ತು ಮೋದಿ ಅವರು ಆತ್ಮೀಯ ಗೆಳೆಯರಾಗಿದ್ದಾರೆ.

  • ಬಿಯರ್ ಬಾಟಲಿ ಮೇಲೆ ಗಾಂಧೀಜಿ- ತಪ್ಪಿಗೆ ಕ್ಷಮೆಯಾಚಿಸಿದ ಇಸ್ರೇಲ್ ಕಂಪನಿ

    ಬಿಯರ್ ಬಾಟಲಿ ಮೇಲೆ ಗಾಂಧೀಜಿ- ತಪ್ಪಿಗೆ ಕ್ಷಮೆಯಾಚಿಸಿದ ಇಸ್ರೇಲ್ ಕಂಪನಿ

    ನವದೆಹಲಿ: ಇಸ್ರೇಲ್ ಮೂಲದ ಬಿಯರ್ ತಯಾರಿಕೆ ಕಂಪನಿಯೊಂದು ತನ್ನ ಬಾಟಲಿಗಳ ಮೇಲೆ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಹಾಕಿ ವಿವಾದಕ್ಕೆ ಸಿಲುಕಿತ್ತು. ಆದರೆ ಈಗ ತನ್ನ ತಪ್ಪಿಗೆ ಭಾರತೀಯರಲ್ಲಿ ಕಂಪನಿ ಕ್ಷಮೆಯಾಚಿಸಿದೆ.

    ಇಸ್ರೇಲ್‍ನ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮೇ 8 ಹಾಗೂ 9ರಂದು ಆಚರಿಸಲಾಗಿತ್ತು. ಈ ಸಂಭ್ರಮಾಚರಣೆಗಾಗಿ ವಿಶೇಷ ಚಿತ್ರಗಳಿರುವ ಸ್ಟಿಕ್ಕರ್ ತಯಾರಿಸಿ ಬಿಯರ್ ಬಾಟಲಿ ಮೇಲೆ ಅಂಟಿಸಲಾಗಿತ್ತು. ಇಸ್ರೇಲ್‍ನ ಮಾಲ್ಕಾ ಬಿಯರ್ ಕಂಪನಿ ತಮ್ಮಲ್ಲಿ ತಯಾರಾದ ಬಿಯರ್ ಬಾಟಲಿಗಳ ಮೇಲೆ ವಿಧವಿಧವಾದ ಸ್ಟಿಕ್ಕರ್ ಅಂಟಿಸಿತ್ತು. ಅದರಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಹೋಲುವ ಕಾರ್ಟೂನ್ ಚಿತ್ರ ಕೂಡ ಇತ್ತು.

    ಗಾಂಧೀಜಿ ಚಿತ್ರವಿರುವ ಬಿಯರ್ ಬಾಟಲಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರಪಿತ ಗಾಂಧೀಜಿಗೆ ಇಸ್ರೇಲ್ ಅವಮಾನ ಮಾಡಿದೆ ಎಂದು ರೊಚ್ಚಿಗೆದ್ದ ಭಾರತೀಯರು ಮಾಲ್ಕಾ ಬಿಯರ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಬಗ್ಗೆ ರಾಜ್ಯ ಸಭೆಯಲ್ಲೂ ಕೂಡ ಮಂಗಳವಾರ ಚರ್ಚೆ ನಡೆದಿತ್ತು. ಈ ವೇಳೆ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕೂಡ ವಿರೋಧ ವ್ಯಕ್ತಪಡಿಸಿ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.

    ಭಾರತದಲ್ಲಿ ಅಸಮಾಧಾನ ಭುಗಿಲೆದ್ದ ಹಿನ್ನೆಲೆ ಎಚ್ಚೆತ್ತುಕೊಂಡ ಕಂಪನಿ ಬ್ರಾಂಡ್ ಮ್ಯಾನೇಜರ್ ಭಾರತೀಯರಲ್ಲಿ ಹಾಗೂ ಭಾರತ ಸರ್ಕಾರಕ್ಕೆ ಕ್ಷಮೆಯಾಚಿಸಿದ್ದಾರೆ. ಗಾಂಧೀಜಿ ಅವರ ಚಿತ್ರವನ್ನು ಬಿಯರ್ ಬಾಟಲಿ ಮೇಲೆ ಹಾಕಿದ್ದು ತಪ್ಪಾಯಿತು. ಇದರಿಂದ ಭಾರತೀಯರ ಭಾವನೆಗಳಿಗೆ ದಕ್ಕೆ ಉಂಟಾಗಿದೆ. ಮಹಾತ್ಮ ಗಾಂಧೀಜಿ ಅವರಿಗೆ ಜಾಗತಿಕ ಮಟ್ಟದಲ್ಲಿ ಗೌರವಿಸಲಾಗುತ್ತದೆ. ನಾವು ನಮ್ಮ ಕಂಪನಿ ಬಿಯರ್ ಬಾಟಲಿಗಳ ಮೇಲೆ ಇರುವ ಗಾಂಧೀಜಿ ಅವರ ಚಿತ್ರವನ್ನು ತೆಗೆಯುತ್ತೇವೆ ಕ್ಷಮಿಸಿ ಎಂದಿದ್ದಾರೆ.

    ಅಚಾತುರ್ಯದಿಂದ ಬಾಟಲಿಗಳ ಮೇಲೆ ಅವರ ಚಿತ್ರ ಮುದ್ರಿತಗೊಂಡಿದೆ. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ ಹಿನ್ನೆಲೆ ಗಾಂಧೀಜಿ ಅವರಿಗೆ ಗೌರವ ಸಲ್ಲಿಸಲು ಬಿಯರ್ ಬಾಟಲಿ ಮೇಲೆ ಅವರ ಚಿತ್ರ ಬಳಸಲಾಯಿತು. ಗಾಂಧೀಜಿ ಮಾತ್ರವಲ್ಲ ಬಾಟಲಿಯ ಮೇಲೆ ಇಸ್ರೇಲ್‍ನ ಮೂವರು ಮಾಜಿ ಪ್ರಧಾನಿಗಳ ಜತೆ ಚಿತ್ರವನ್ನೂ ಗೌರವ ಸಲ್ಲಿಸಲು ಬಳಸಲಾಗಿತ್ತು ಎಂದು ತಿಳಿಸಿದ್ದಾರೆ.

    ಇಸ್ರೇಲ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ವಿರೋಧ ವ್ಯಕ್ತವಾದ ಬಳಿಕ ನಾವು ಗಾಂಧೀಜಿ ಚಿತ್ರ ಮುದ್ರಿತ ಬಿಯರ್ ಬಾಟಲಿಗಳ ಉತ್ಪಾದನೆಯನ್ನು ನಿಲ್ಲಿಸಿದ್ದೇವೆ. ಅಲ್ಲದೆ ಇದು ಲಿಮಿಟೆಡ್ ಎಡಿಷನ್ ಆಗಿದೆ. ಜೊತೆಗೆ ನಾವು ಮಾರುಕಟ್ಟೆಯಲ್ಲಿ ಈಗಾಗಲೇ ಹಂಚಿಕೆಯಾಗಿರುವ ಬಾಟಲಿಗಳ ಮಾರಟಕ್ಕೆ ತಡೆಯೊಡ್ಡಲು ಪ್ರಯತ್ನಿಸುತ್ತಿದ್ದೇವೆ ಎಂದು ಕಂಪನಿ ಹೇಳಿದೆ.