Tag: Israel

  • Blood Moon Photo Gallery | ವಿದೇಶಗಳಲ್ಲೂ ರಕ್ತಚಂದ್ರನ ಚಮತ್ಕಾರ – ನೀವೂ ಕಣ್ತುಂಬಿಕೊಳ್ಳಿ

    Blood Moon Photo Gallery | ವಿದೇಶಗಳಲ್ಲೂ ರಕ್ತಚಂದ್ರನ ಚಮತ್ಕಾರ – ನೀವೂ ಕಣ್ತುಂಬಿಕೊಳ್ಳಿ

    ಬೆಂಗಳೂರು: ಭಾರತ ಸೇರಿದಂತೆ ವಿಶ್ವದ ಕೋಟ್ಯಂತರ ಜನ ನಭೋಮಂಡಲದ ಕೌತುಕ ಕಣ್ತುಂಬಿಕೊಂಡಿದ್ದಾರೆ. ಈ ವರ್ಷದ ಕೊನೆಯ ಚಂದ್ರಗ್ರಹಣ ಹಾಗೂ 2ನೇ ರಕ್ತಚಂದ್ರ ಗ್ರಹಣ ಕಣ್ತುಂಬಿಕೊಂಡು ಖುಷಿಪಟ್ಟಿದ್ದಾರೆ. ರಾತ್ರಿ 9:57ರಿಂದ ಗ್ರಹಣ ಪ್ರಕ್ರಿಯೆ ಶುರುವಾಗಿದೆ. ಮೊದಲು ಬಿಳಿ ಬಣ್ಣದಲ್ಲಿ ಪೂರ್ಣಚಂದ್ರ ಗೋಚರವಾದ ಬಳಿಕ ಕಿತ್ತಳೆ, ಬಳಿಕ ಕೆಂಪು ವರ್ಣಕ್ಕೆ ತಿರುಗಿದ್ದಾನೆ. ಇಸ್ರೇಲ್‌, ಜಪಾನ್‌, ಕೀನ್ಯಾ, ನಮೀಬಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ರಕ್ತಚಂದ್ರನ ದರ್ಶನವಾಗಿದೆ. ಈ ಕುರಿತ ಚಿತ್ರಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ…

    ಟೊಕಿಯೊ
    ಜಪಾನ್
    ಇಸ್ರೇಲ್‌
    ಗ್ರೀಸ್‌ನ ಅಥೆನ್ಸ್‌
    ಕೀನ್ಯಾ
    ದಕ್ಷಿಣ ಆಫ್ರಿಕಾ
    ನಮೀಬಿಯಾ
  • ಹೌತಿಗಳ ವಿರುದ್ಧ ಸಿಡಿದೆದ್ದ ಇಸ್ರೇಲ್‌ – ಯೆಮೆನ್ ಮೇಲೆ ವೈಮಾನಿಕ ದಾಳಿ

    ಹೌತಿಗಳ ವಿರುದ್ಧ ಸಿಡಿದೆದ್ದ ಇಸ್ರೇಲ್‌ – ಯೆಮೆನ್ ಮೇಲೆ ವೈಮಾನಿಕ ದಾಳಿ

    ಟೆಲ್ ಅವಿವ್: ಇರಾನ್‌ (Iran) ಬೆಂಬಲಿತ ಹೌತಿ ಬಂಡುಕೋರರನ್ನು (Houthi) ಗುರಿಯಾಗಿಸಿಕೊಂಡು ಯೆಮೆನ್ (Yemen) ರಾಜಧಾನಿ ಸನಾ ಸೇರಿದಂತೆ ಹಲವಾರು ಪ್ರದೇಶಗಳ ಮೇಲೆ ಇಸ್ರೇಲ್‌ (Israel) ವಾಯು ದಾಳಿ ನಡೆಸಿದೆ. ಇತ್ತೀಚೆಗೆ ಹೌತಿ ಬಂಡುಕೋರರು ಇಸ್ರೇಲ್‌ನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಇಸ್ರೇಲ್‌ ಈ ದಾಳಿ ನಡೆಸಿದೆ.

    ವಿದ್ಯುತ್ ಕೇಂದ್ರ, ಅನಿಲ ಕೇಂದ್ರ ಸೇರಿದಂತೆ ಸನಾ ರಾಜಧಾನಿಯಾದ್ಯಂತ ಅನೇಕ ಪ್ರದೇಶಗಳ ಮೇಲೆ ದಾಳಿ ನಡೆದಿದೆ ಎಂದು ಹೌತಿ ಮಾಧ್ಯಮ ಕಚೇರಿ ತಿಳಿಸಿದೆ. ಯೆಮನ್ ಅಧ್ಯಕ್ಷರ ನಿವಾಸದ ಹತ್ತಿರ ಹಲವಾರು ಪ್ರದೇಶಗಳಲ್ಲಿ ಭಾರೀ ಸ್ಫೋಟದ ಶಬ್ಧ ಕೇಳಿಬರುತ್ತಿವೆ ಎಂದು ವರದಿಯಾಗಿದೆ. ಈ ದಾಳಿಯನ್ನು ಇಸ್ರೇಲ್ ದೃಢಪಡಿಸಿಲ್ಲ. ಇದನ್ನೂ ಓದಿ: ಹೌತಿ ಬಂಡುಕೋರ ಮೇಲೆ ಸರಣಿ ದಾಳಿ ನಡೆಸಿ ಪೆಟ್ಟು ಕೊಡ್ತೇವೆ: ಬೆಂಜಮಿನ್ ನೆತನ್ಯಾಹು

    ಹೌತಿಗಳು ಇತ್ತೀಚೆಗೆ ಇಸ್ರೇಲ್ ಕಡೆಗೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸಿದ್ದರು. ಅಲ್ಲದೇ ಕೆಂಪು ಸಮುದ್ರದಲ್ಲಿ ಹಲವಾರು ತಿಂಗಳುಗಳಿಂದ ಹಡಗುಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಗಾಜಾ ಯುದ್ಧದ ಮಧ್ಯೆ ಪ್ಯಾಲೆಸ್ಟೀನಿಯನ್ನರೊಂದಿಗೆ ಸೇರಿ ಅವರು ಈ ದಾಳಿಗಳನ್ನು ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ಇಸ್ರೇಲ್‌ ವೈಮಾನಿಕ ದಾಳಿ ನಡೆಸಿದೆ.

    ಶುಕ್ರವಾರ ಇಸ್ರೇಲ್‌ ಅತಿದೊಡ್ಡ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಹೌತಿಗಳು ದಾಳಿ ನಡೆಸಿದ್ದರು. ಈ ಕ್ಷಿಪಣಿಗಳನ್ನು ಇಸ್ರೇಲ್‌ ಆಕಾಶದಲ್ಲೇ ಹೊಡೆದು ಹಾಕಿತ್ತು. ಇದರಿಂದಾಗಿ ಯಾವುದೇ ಹಾನಿಗಳಾಗಿರಲಿಲ್ಲ.

    ಮೇ ತಿಂಗಳಲ್ಲಿ ಹೌತಿಗಳ ವಿರುದ್ಧ ಗುಡುಗಿದ್ದ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹೌತಿ ಉಗ್ರರನ್ನು ಹತ್ತಿಕ್ಕಲು ಸರಣಿ ದಾಳಿ ನಡೆಸುವುದಾಗಿ ಎಚ್ಚರಿಸಿದ್ದರು. ಹೌತಿ ದಾಳಿಗೆ ಇಸ್ರೇಲ್‌ನ ಪ್ರತೀಕಾರವು ಒಂದು ಬಾರಿ ಮಾತ್ರ ಇರುವುದಿಲ್ಲ. ದಾಳಿಯ ಪೆಟ್ಟುಗಳು ಬೀಳುತ್ತಲೇ ಇರುತ್ತವೆ ಎಂದು ಅವರು ಹೇಳಿಕೊಂಡಿದ್ದರು. ಇದನ್ನೂ ಓದಿ: ಹೌತಿ ಉಗ್ರರ ದಾಳಿಗೆ ನಡೆದಿದ್ದ ಮಹಾ ಪ್ಲ್ಯಾನ್‌ ಲೀಕ್‌ ಆಗಿದ್ದು ಹೇಗೆ? – ಟ್ರಂಪ್‌ ಟೀಂ ಬಳಸಿದ್ದ ʻಸಿಗ್ನಲ್‌ʼ ಎಷ್ಟು ಸೇಫ್‌?

  • ಗಾಝಾ ನಗರವನ್ನು ನಾಶ ಮಾಡ್ತೇವೆ – ಹಮಾಸ್‍ಗೆ ಇಸ್ರೇಲ್ ವಾರ್ನಿಂಗ್

    ಗಾಝಾ ನಗರವನ್ನು ನಾಶ ಮಾಡ್ತೇವೆ – ಹಮಾಸ್‍ಗೆ ಇಸ್ರೇಲ್ ವಾರ್ನಿಂಗ್

    • ಹಮಾಸ್‌ ಕೊಲೆಗಾರರಿಗೆ ನರಕದ ದ್ವಾರ ತೆರೆಯಲಿದೆ ಎಂದ ರಕ್ಷಣಾ ಸಚಿವ

    ಟೆಲ್‌ ಅವೀವ್: ಗಾಜಾ ನಗರದ (Gaza) ವಿನಾಶದ ಬಗ್ಗೆ ಇಸ್ರೇಲ್ (Israel) ಎಚ್ಚರಿಕೆ ನೀಡಿದೆ. ಹಮಾಸ್ (Hamas) ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳದಿದ್ದರೆ ವೈಮಾನಿಕ ದಾಳಿಗಳು ತೀವ್ರಗೊಳ್ಳುತ್ತವೆ ಎಂದು ಇಸ್ರೇಲ್‌ ಎಚ್ಚರಿಕೆ ನೀಡಿದೆ.

    ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ (Israel Katz), ಗಾಜಾದಲ್ಲಿ ಹಮಾಸ್‌ನ ಕೊಲೆಗಾರರು ಮತ್ತು ಅತ್ಯಾಚಾರಿಗಳಿಗೆ ನರಕದ ದ್ವಾರಗಳು ಶೀಘ್ರದಲ್ಲೇ ತೆರೆಯಲಿದೆ. ಅವರು ಯುದ್ಧವನ್ನು ಕೊನೆಗೊಳಿಸಲು ಇಸ್ರೇಲ್‌ನ ಷರತ್ತುಗಳಿಗೆ ಒಪ್ಪುವವರೆಗೆ ದಾಳಿ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಗಾಜಾ ಮೇಲೆ ಇಸ್ರೇಲ್‌ ದಾಳಿ – ನೀರು ತರಲು ತೆರಳಿದ್ದ 8 ಮಕ್ಕಳು ಸೇರಿ 43 ಮಂದಿ ಸಾವು

    ಎಲ್ಲಾ ಒತ್ತೆಯಾಳುಗಳ ಬಿಡುಗಡೆ ಮಾಡಬೇಕು. ಹಮಾಸ್‌ ಸಂಪೂರ್ಣ ನಿಶ್ಯಸ್ತ್ರೀಕರಣವಾಗಬೇಕು ಎಂದು ಇಸ್ರೇಲ್‌ ಹೇಳಿದೆ. ಇದಕ್ಕೆ ಪ್ರತಿಯಾಗಿ ನಿಶ್ಯಸ್ತ್ರೀಕರಣದ ಪ್ರಸ್ತಾಪವನ್ನು ತಿರಸ್ಕರಿಸುತ್ತೇವೆ. ಬಂಧಿತರನ್ನು ಬಿಡುಗಡೆ ಮಾಡುತ್ತೇವೆ. ಯುದ್ಧವನ್ನು ಕೊನೆಗೊಳಿಸುವುದಿಲ್ಲ ಎಂದು ಹಮಾಸ್‌ ಹೇಳಿದೆ.

    ಗುರುವಾರ (ಆ.21) ಮಾತನಾಡಿದ್ದ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಗಾಜಾ ನಗರವನ್ನು ವಶಪಡಿಸಿಕೊಳ್ಳಲು ಸೇನಾ ಕಾರ್ಯಾಚರಣೆಗಾಗಿ ಮಿಲಿಟರಿಗೆ ಅಧಿಕಾರ ನೀಡುವುದಾಗಿ ತಿಳಿಸಿದ್ದರು. ಅಲ್ಲದೇ, ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮತ್ತು ಷರತ್ತಿನ ಮೇಲೆ ಯುದ್ಧವನ್ನು ಕೊನೆಗೊಳಿಸಲು ಮಾತುಕತೆಗಳನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದರು. ಇದು ಇತ್ತೀಚಿನ ಕದನ ವಿರಾಮ ಪ್ರಸ್ತಾವನೆ ಬಗ್ಗೆ ಇಸ್ರೇಲ್‌ನ ಮೊದಲ ಬಹಿರಂಗ ಪ್ರತಿಕ್ರಿಯೆಯಾಗಿದೆ.

    ಇತ್ತೀಚೆಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ನೆತನ್ಯಾಹು, ಹಮಾಸ್ ಉಗ್ರರನ್ನು ಸೋಲಿಸುವುದು ಮತ್ತು ನಮ್ಮ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಯೋಜನೆ ಒಟ್ಟಿಗೆ ಸಾಗುತ್ತವೆ ಎಂದಿದ್ದರು.

    ಇನ್ನೂ ಕಳೆದ ವರ್ಷ (2024) ರಲ್ಲೂ ಇದೇ ವಿಚಾರ ಮಾತಾಡಿದ್ದ ಬೆಂಜಮಿನ್ ನೆತನ್ಯಾಹು ಹಮಾಸ್‌ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಇಚ್ಚಿಸಿದ್ರೆ ಹಾಗೂ ಒತ್ತೆಯಾಳುಗಳನ್ನ ಬಿಡುಗಡೆ ಮಾಡಲು ಒಪ್ಪಿದರೆ ನಾಳೆಯೇ ಯುದ್ಧ ಕೊನೆಗೊಳ್ಳುತ್ತದೆ ಎಂದಿದ್ದರು.

    ಗಾಜಾದಲ್ಲಿನ ಆರೋಗ್ಯ ಸಚಿವಾಲಯ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಇಲ್ಲಿಯವರೆಗೂ ಸುಮಾರು 62,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದೆ.

    ಗಾಜಾದಲ್ಲಿ ಸಂಘರ್ಷ ಆರಂಭವಾಗಿದ್ದೇಕೆ?
    2023ರ ಅಕ್ಟೋಬರ್ 7 ರಂದು ಹಮಾಸ್ (Hamas) ಉಗ್ರರು ಇಸ್ರೇಲ್ ಮೇಲೆ ನಡೆಸಿದ ದಾಳಿ ಬಳಿಕ ಗಾಜಾದಲ್ಲಿ ಯುದ್ಧ ಪ್ರಾರಂಭವಾಯಿತು. ಇದು ಅಪಾರ ಸಾವುಗಳಿಗೆ ಕಾರಣವಾಯಿತು, ಅವರಲ್ಲಿ ಹೆಚ್ಚಿನವರು ನಾಗರಿಕರಾಗಿದ್ದಾರೆ.

    ಆ ದಿನ ಹಮಾಸ್‌ ಉಗ್ರರು ಅಪಹರಿಸಿದ್ದ 251 ಇಸ್ರೇಲಿನ ಜನರಲ್ಲಿ ಹಲವರು ಇನ್ನೂ ಗಾಜಾದಲ್ಲಿ ಬಂಧನದಲ್ಲೇ ಇದ್ದಾರೆ. ಇದರಲ್ಲಿ 27ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಇಸ್ರೇಲಿ ಸೇನೆ ಹೇಳಿಕೊಂಡಿತ್ತು. ಇದನ್ನೂ ಓದಿ: ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ದಾಳಿ; ಹಮಾಸ್‌ ಕಮಾಂಡರ್‌ ಸೇರಿ 60ಕ್ಕೂ ಹೆಚ್ಚು ಮಂದಿ ಬಲಿ

  • ಗಾಜಾ ಮೇಲೆ ಇಸ್ರೇಲ್‌ ದಾಳಿ – ನೀರು ತರಲು ತೆರಳಿದ್ದ 8 ಮಕ್ಕಳು ಸೇರಿ 43 ಮಂದಿ ಸಾವು

    ಗಾಜಾ ಮೇಲೆ ಇಸ್ರೇಲ್‌ ದಾಳಿ – ನೀರು ತರಲು ತೆರಳಿದ್ದ 8 ಮಕ್ಕಳು ಸೇರಿ 43 ಮಂದಿ ಸಾವು

    ಜೆರುಸಲೆಮ್: ಗಾಜಾದ (Gaza) ಮೇಲೆ ಇಸ್ರೇಲ್‌ (Israel) ನಡೆಸಿದ ಕ್ಷಿಪಣಿ ದಾಳಿಯಲ್ಲಿ ನೀರು ತರಲು ತೆರಳಿದ್ದ 8 ಮಕ್ಕಳು ಸೇರಿ, 43 ಮಂದಿ ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ, ಗಾಜಾ ಪಟ್ಟಿಯಾದ್ಯಂತ ನಡೆಸಿದ ವೈಮಾನಿಕ ದಾಳಿಯಲ್ಲಿ 150ಕ್ಕೂ ಹೆಚ್ಚು ಉಗ್ರರ ಅಡಗು ತಾಣಗಳನ್ನು ಹೊಡೆದುರುಳಿಸಿದ್ದೇವೆ ಎಂದು ಇಸ್ರೇಲ್‌ ಹೇಳಿಕೊಂಡಿದೆ.

    ಮಧ್ಯ ಗಾಜಾದಲ್ಲಿ ನೀರು ವಿತರಣಾ ಸ್ಥಳದಲ್ಲಿ ಸರದಿಯಲ್ಲಿ ಕಾಯುತ್ತಿದ್ದಾಗ ಇಸ್ರೇಲ್‌ ನಡೆಸಿದ ಕ್ಷಿಪಣಿ ದಾಳಿಗೆ 8 ಮಕ್ಕಳು ಸೇರಿದಂತೆ ಕನಿಷ್ಠ 10 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ ಅದೇ ಭಾಗದ ಸುತ್ತಮುತ್ತ ನಡೆದ ದಾಳಿಯಲ್ಲಿ 33 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 43 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: 14ಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ಟ್ರಂಪ್‌ ಸುಂಕ; ಭಾರತ ಬಚಾವ್‌ ಆಗಿದ್ದು ಯಾಕೆ?

    ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿಯೊಬ್ಬರು, ಎರಡು ದೊಡ್ಡ ಸ್ಫೋಟದ ಶಬ್ದಕ್ಕೆ ನಮಗೆ ಎಚ್ಚರವಾಯಿತು. ಹೊರಗೆ ಬಂದು ನೋಡಿದಾಗ ನಮ್ಮ ನೆರೆಹೊರೆಯವರು ಮತ್ತು ಅವರ ಮಕ್ಕಳು ಅವಶೇಷಗಳ ಅಡಿಯಲ್ಲಿದ್ದರು ಎಂದು ತಿಳಿಸಿದ್ದಾರೆ.

    ಮತ್ತೊಬ್ಬ ನಿವಾಸಿ ಮಹ್ಮದ್ ಅಲ್-ಶಾಮಿ, ಯುದ್ಧವನ್ನು ಕೊನೆಗೊಳಿಸಬೇಕು. ಇಂತಹ ಸ್ಥಿತಿ ಮಾನವಕುಲದ ಸಂಪೂರ್ಣ ಇತಿಹಾಸದಲ್ಲಿ ಎಂದಿಗೂ ಸಂಭವಿಸಿಲ್ಲ. ಯುದ್ಧ ಸಾಕು ಎಂದು ಅವರು ಹೇಳಿಕೊಂಡಿದ್ದಾರೆ.

    ಗಾಜಾದಲ್ಲಿ ಸಂಘರ್ಷ ಆರಂಭವಾಗಿದ್ದೇಕೆ?
    2023ರ ಅಕ್ಟೋಬರ್ 7 ರಂದು ಹಮಾಸ್ (Hamas) ಉಗ್ರರು ಇಸ್ರೇಲ್ ಮೇಲೆ ನಡೆಸಿದ ದಾಳಿ ಬಳಿಕ ಗಾಜಾದಲ್ಲಿ ಯುದ್ಧ ಪ್ರಾರಂಭವಾಯಿತು. ಇದು ಅಪಾರ ಸಾವುಗಳಿಗೆ ಕಾರಣವಾಯಿತು, ಅವರಲ್ಲಿ ಹೆಚ್ಚಿನವರು ನಾಗರಿಕರಾಗಿದ್ದಾರೆ.

    ಆ ದಿನ ಹಮಾಸ್‌ ಉಗ್ರರು ಅಪಹರಿಸಿದ್ದ 251 ಇಸ್ರೇಲಿನ ಜನರಲ್ಲಿ 49 ಜನ ಇನ್ನೂ ಗಾಜಾದಲ್ಲಿ ಬಂಧನದಲ್ಲೇ ಇದ್ದಾರೆ. ಇದರಲ್ಲಿ 27 ಜನರು ಮೃತಪಟ್ಟಿದ್ದಾರೆ ಎಂದು ಇಸ್ರೇಲಿ ಸೇನೆ ಹೇಳಿಕೊಂಡಿದೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸೋ ದೇಶಗಳ ಮೇಲೆ 500% ಸುಂಕ – ಭಾರತ, ಚೀನಾಗೆ ಟ್ರಂಪ್‌ ಶಾಕ್‌?

  • ನೊಬೆಲ್‌ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಹೆಸರು ನಾಮನಿರ್ದೇಶನ ಮಾಡಿದ ಇಸ್ರೇಲ್‌

    ನೊಬೆಲ್‌ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಹೆಸರು ನಾಮನಿರ್ದೇಶನ ಮಾಡಿದ ಇಸ್ರೇಲ್‌

    ವಾಷಿಂಗ್ಟನ್‌: ಇಸ್ರೇಲ್‌ (Israel) ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ನೊಬೆಲ್ ಶಾಂತಿ (Nobel Peace Prize) ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ.

    ಸೋಮವಾರ ಶ್ವೇತಭವನದಲ್ಲಿ ನಡೆದ ಭೋಜನಕೂಟದ ಸಂದರ್ಭದಲ್ಲಿ, ನೆತನ್ಯಾಹು ಅವರು ನೊಬೆಲ್‌ ಸಮಿತಿಗೆ ಕಳುಹಿಸಿದ ನಾಮನಿರ್ದೇಶನ ಪತ್ರದ ಪ್ರತಿಯನ್ನು ಸಹ ಹಸ್ತಾಂತರಿಸಿದರು.

    ಟ್ರಂಪ್‌ ಅವರು ಜಗತ್ತಿನಲ್ಲಿ ಈಗ ಶಾಂತಿ ಮಂತ್ರವನ್ನು ಜಪಿಸುತ್ತಿದ್ದಾರೆ. ವಿಶೇಷವಾಗಿ ಈಗ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲು ಟ್ರಂಪ್‌ ಬಹಳಷ್ಟು ಶ್ರಮಿಸುತ್ತಿದ್ದಾರೆ. ಟ್ರಂಪ್‌ ಅವರ ಈ ಕೆಲಸಕ್ಕೆ ಎಲ್ಲಾ ಇಸ್ರೇಲಿಗಳು ಮಾತ್ರವಲ್ಲದೆ,ಯಹೂದಿ ಜನರು ಮತ್ತು ಪ್ರಪಂಚದಾದ್ಯಂತದ ಅನೇಕ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಅನಿವಾಸಿ ಭಾರತೀಯರಿಗೆ ಗುಡ್‌ ನ್ಯೂಸ್‌ – 23 ಲಕ್ಷಕ್ಕೆ ಜೀವಿತಾವಧಿ ‘ಗೋಲ್ಡನ್‌ ವೀಸಾ’ ಪರಿಚಯಿಸಿದ ಯುಎಇ

    ನೆತನ್ಯಾಹು ಅವರು ತನ್ನನ್ನು ನೊಬೆಲ್‌ಗೆ ನಾಮನಿರ್ದೇಶನ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್‌, ಇದು ನನಗೆ ತಿಳಿದಿರಲಿಲ್ಲ. ವಿಶೇಷವಾಗಿ ನಿಮ್ಮಿಂದ ಈ ಮಾತು ಬಂದಿರುವುದಕ್ಕೆ ತುಂಬಾ ಧನ್ಯವಾದಗಳು ಎಂದು ಹೇಳಿದರು.

    ಟ್ರಂಪ್ ತಮ್ಮ ಬೆಂಬಲಿಗರು ಮತ್ತು ನಿಷ್ಠಾವಂತ ಅಮೆರಿಕದ ಸಂಸದರಿಂದ ಹಲವು ವರ್ಷಗಳಿಂದ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಭಾರತದ ಜೊತೆಗಿನ ಯುದ್ಧವನ್ನು ನಿಲ್ಲಿಸಿದ್ದಕ್ಕೆ ಪಾಕಿಸ್ತಾನ ಸಹ ಟ್ರಂಪ್‌ ಅವರನ್ನು ನೊಬೆಲ್‌ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು. ಇದನ್ನೂ ಓದಿ: ಬ್ರಿಕ್ಸ್‌ ಅಮೆರಿಕ ವಿರೋಧಿ ಒಕ್ಕೂಟ 10% ಹೆಚ್ಚುವರಿ ತೆರಿಗೆ ಹಾಕ್ತೀನಿ: ಟ್ರಂಪ್‌ ವಾರ್ನಿಂಗ್‌

    ಇಲ್ಲಿಯವರೆಗೆ ಅಮೆರಿಕದ ಮೂವರು ಅಧ್ಯಕ್ಷರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ. 1906 ರಲ್ಲಿ ಥಿಯೋಡರ್ ರೂಸ್‌ವೆಲ್ಟ್‌, 1919 ರಲ್ಲಿ ವುಡ್ರೋ ವಿಲ್ಸನ್ ಮತ್ತು 2009 ರಲ್ಲಿ ಬರಾಕ್ ಒಬಾಮಾ ಅವರಿಗೆ ನೊಬೆಲ್‌ ಸಿಕ್ಕಿದೆ.

  • ಇರಾನ್‌-ಇಸ್ರೇಲ್‌ ಯುದ್ಧದ ಬಳಿಕ ನೆತನ್ಯಾಹು-ಟ್ರಂಪ್‌ ಫಸ್ಟ್‌ ಮೀಟ್‌ – ಜು.7ರಂದು ವೈಟ್‌ಹೌಸ್‌ನಲ್ಲಿ ಮಹತ್ವದ ಭೇಟಿ

    ಇರಾನ್‌-ಇಸ್ರೇಲ್‌ ಯುದ್ಧದ ಬಳಿಕ ನೆತನ್ಯಾಹು-ಟ್ರಂಪ್‌ ಫಸ್ಟ್‌ ಮೀಟ್‌ – ಜು.7ರಂದು ವೈಟ್‌ಹೌಸ್‌ನಲ್ಲಿ ಮಹತ್ವದ ಭೇಟಿ

    ವಾಷಿಂಗ್ಟನ್‌: ಇರಾನ್‌-ಇಸ್ರೇಲ್‌ ಯುದ್ಧದ ಬಳಿಕ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ. ಜು.7ರಂದು (ಸೋಮವಾರ) ಶ್ವೇತಭವನದಲ್ಲಿ ನೆತನ್ಯಾಹು ಟ್ರಂಪ್‌ ಅವರನ್ನು ಭೇಟಿ ಮಾಡಲಿದ್ದಾರೆ.

    ಭೇಟಿ ವೇಳೆ ಗಾಜಾ ಪಟ್ಟಿಯಲ್ಲಿ (Gaza Strip) ಕದನ ವಿರಾಮ, ಇರಾನ್‌ಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಈ ಸಭೆ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ ಎಂದು ತಜ್ಞರು ಅಂದಾಜಿಸಿರುವುದಾಗಿ ವರದಿಗಳು ತಿಳಿಸಿವೆ.

    ಇಸ್ರೇಲ್‌-ಇರಾನ್‌ ನಡುವಿನ ಕದನ ವಿರಾಮದ ಬಳಿಕ ಟ್ರಂಪ್‌ ಗಾಜಾ ಪಟ್ಟಿಯಲ್ಲಿ ಕದನ ವಿರಾಮಕ್ಕೆ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ಶ್ವೇತಭವನದ (White House) ಸಭೆಯಲ್ಲಿ ಉಭಯ ನಾಯಕರ ನಡುವಿನ ಪ್ರಮುಖ ಚರ್ಚಾ ವಿಷಯ ಇದೇ ಆಗಿರಲಿದೆ ಎಂದು ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ನ್ಯಾಷನಲ್ ಸ್ಟಡೀಸ್ (CSIS) ನ ಹಿರಿಯ ಸಲಹೆಗಾರ್ತಿ ಮೋನಾ ಯಾಕೌಬಿಯನ್ ಹೇಳಿದ್ದಾರೆ.

    ಅಲ್ಲದೇ ಅಮೆರಿಕದ ಕದನ ವಿರಾಮ ಪ್ರಸ್ತಾಪಕ್ಕೆ ಹಮಾಸ್‌ ಕೂಡ ಸಹಮತ ಸೂಚಿಸಿದೆ. ಒತ್ತೆಯಾಳುಗಳ ಬಿಡುಗಡೆ ಮತ್ತು ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಮಾತುಕತೆಗೆ ಸಿದ್ಧವಿರುವುದಾಗಿ ಹಮಾಸ್‌ ಹೇಳಿದೆ ಎಂದು ತಿಳಿಸಿದ್ದಾರೆ.

    ಇರಾನ್‌ ಬಗ್ಗೆಯೂ ಮಹತ್ವದ ಚರ್ಚೆ
    ಮುಂದುವರಿದು ಮಾತನಾಡಿರುವ ಯಾಕೌಬಿಯನ್, ಟ್ರಂಪ್‌ ಮತ್ತು ನೆತನ್ಯಾಹು ಇರಾನ್‌ ಬಗೆಗೆ ಒಂದೇ ರೀತಿಯ ಅಭಿಪ್ರಾಯ ಹೊಂದಿದ್ದಾರೆ. ಇತ್ತೀಚೆಗೆ ಇರಾನ್‌ ಮೇಲಿನ ಜಂಟಿ ಮಿಲಿಟರಿ ಕಾರ್ಯಾಚರಣೆ ಇದಕ್ಕೆ ನಿದರ್ಶನವಾಗಿದೆ. ಹೀಗಾಗಿ ಭವಿಷ್ಯದ ಕಾರ್ಯತಂತ್ರಗಳ ಬಗ್ಗೆ ಉಭಯ ನಾಯಕರು ಒಗ್ಗಟಿನ ನಿಲುವು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

  • ಆಹಾರಕ್ಕಾಗಿ ಕಾಯುತ್ತಿದ್ದ ಪ್ಯಾಲೆಸ್ತೀನಿಯನ್ನರು ಇಸ್ರೇಲ್‌ ದಾಳಿಗೆ ಬಲಿ; 94 ಮಂದಿ ಸಾವು

    ಆಹಾರಕ್ಕಾಗಿ ಕಾಯುತ್ತಿದ್ದ ಪ್ಯಾಲೆಸ್ತೀನಿಯನ್ನರು ಇಸ್ರೇಲ್‌ ದಾಳಿಗೆ ಬಲಿ; 94 ಮಂದಿ ಸಾವು

    ಟೆಲ್‌ ಅವೀವ್: ಗಾಜಾದಲ್ಲಿ (Gaza) ಇಸ್ರೇಲಿ ವಾಯುದಾಳಿ (Israeli Strikes) ಮತ್ತು ಗುಂಡಿನ ದಾಳಿಗೆ ಆಹಾರಕ್ಕಾಗಿ ಕಾಯುತ್ತಿದ್ದ‌ 94 ಮಂದಿ ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

    ಅಲ್ಲದೇ, ದಕ್ಷಿಣ ಗಾಜಾದಲ್ಲಿ ಸ್ಥಳಾಂತರಗೊಂಡ ಜನರು ಮಲಗಿದ್ದಾಗ ರಾತ್ರಿಯ ಸಮಯದಲ್ಲಿ ಟೆಂಟ್ ಶಿಬಿರದ ಮೇಲೆ ನಡೆದ ದಾಳಿಗೆ ಮೃತರಾದವರ ಕುಟುಂಬಗಳು ಕಣ್ಣೀರಿಟ್ಟರು. 12 ವರ್ಷದೊಳಗಿನ ಕನಿಷ್ಠ ಆರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 13 ಸದಸ್ಯರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ

    ನಗರದ ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡಿದ್ದ ಶಾಲೆಯ ಮೇಲೆ ನಡೆದ ಪ್ರತ್ಯೇಕ ದಾಳಿಯಲ್ಲಿ 15 ಜನರು ಸಾವನ್ನಪ್ಪಿದರು. ನೆರವು ಪಡೆಯುವ ವೇಳೆ ದಿನನಿತ್ಯದ ಗುಂಡಿನ ದಾಳಿಯಲ್ಲಿ ಹೆಚ್ಚಿನ ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪುತ್ತಿದ್ದಾರೆಂದು ತಿಳಿಸಲಾಗಿದೆ.

    ಗಾಜಾ ಪಟ್ಟಿಯ ಜನರಿಗೆ ಆಹಾರ ಒದಗಿಸಲು ಇಸ್ರೇಲ್ ಬೆಂಬಲದೊಂದಿಗೆ ಹೊಸದಾಗಿ ರಚಿಸಲಾದ ಅಮೆರಿಕನ್ ಸಂಘಟನೆಯಾದ ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್ ಕೆಲಸ ಮಾಡುತ್ತಿದೆ. ಫೌಂಡೇಶನ್‌ನಿಂದ ಆಹಾರ ವಿತರಣಾ ತಾಣಗಳಿಗೆ ಹೋಗುವ ರಸ್ತೆಗಳಲ್ಲಿ ಐದು ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: 9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್‌

    ಗಾಜಾದ ಸುತ್ತಮುತ್ತಲಿನ ಹಲವಾರು ಸ್ಥಳಗಳಲ್ಲಿ ವಿಶ್ವಸಂಸ್ಥೆಯ ನೆರವು ಸಾಗಿಸುವ ಟ್ರಕ್‌ಗಳಿಗಾಗಿ ಕಾಯುತ್ತಿದ್ದಾಗ ಇನ್ನೂ 40 ಜನರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

    GHF ತಾಣಗಳನ್ನು ತಲುಪಲು ಪ್ರಯತ್ನಿಸುತ್ತಿರುವ ಪ್ಯಾಲೆಸ್ತೀನಿಯನ್ನರ ಗುಂಪಿನ ಮೇಲೆ ಇಸ್ರೇಲಿ ಪಡೆಗಳು ನಿಯಮಿತವಾಗಿ ಗುಂಡಿನ ದಾಳಿ ನಡೆಸುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಗಾಜಾದ ಮಿಲಿಟರಿ-ಚಾಲಿತ ವಲಯಗಳ ಬಳಿ ಜನರು ಗುಂಪುಗೂಡಿದ್ದಾಗ, UN ಟ್ರಕ್‌ಗಳು ಪ್ರವೇಶಿಸಲು ಮುಂದಾದಾಗ ಪಡೆಗಳು ಗುಂಡು ಹಾರಿಸುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.

  • ಇಸ್ರೇಲ್ ಜೊತೆ ಸಂಪರ್ಕದಲ್ಲಿದ್ದ 700ಕ್ಕೂ ಅಧಿಕ ಜನರನ್ನು ಬಂಧಿಸಿದ ಇರಾನ್

    ಇಸ್ರೇಲ್ ಜೊತೆ ಸಂಪರ್ಕದಲ್ಲಿದ್ದ 700ಕ್ಕೂ ಅಧಿಕ ಜನರನ್ನು ಬಂಧಿಸಿದ ಇರಾನ್

    ಟೆಹ್ರಾನ್: ಇರಾನ್-ಇಸ್ರೇಲ್ ಮಧ್ಯೆ ಯುದ್ಧವಿರಾಮ ಘೋಷಣೆಯಾದ ಬಳಿಕವೂ ಸೇಡು ಮುಂದುವರಿದಿದೆ. ಮೂವರು ಇಸ್ರೇಲ್ ಗೂಢಚಾರಿಗಳನ್ನು ಇರಾನ್ ಗಲ್ಲಿಗೇರಿಸಿದ್ದು, 700ಕ್ಕೂ ಅಧಿಕ ಜನರನ್ನು ಬಂಧಿಸಿದೆ.

    ಇಸ್ರೇಲ್ ಗೂಢಚಾರಿ ಸಂಸ್ಥೆ ಮೊಸಾದ್‌ಗಾಗಿ ಬೇಹುಗಾರಿಕೆ ಮಾಡುತ್ತಿದ್ದ ಆರೋಪದಲ್ಲಿ ಟರ್ಕಿ ಗಡಿಗೆ ಹೊಂದಿಕೊಂಡ ಉರ್ಮಿಯಾ ಭಾಗದಲ್ಲಿ ಗಲ್ಲಿಗೇರಿಸಿದೆ. ಅಲ್ಲದೆ, ಇಸ್ರೇಲ್ ಜೊತೆ ಸಂಪರ್ಕ ಹೊಂದಿದ್ದ 700ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.ಇದನ್ನೂ ಓದಿ: ಇಸ್ರೇಲ್ ಪರ ಬೇಹುಗಾರಿಕೆ – ಮೂವರನ್ನು ಗಲ್ಲಿಗೇರಿಸಿದ ಇರಾನ್

    ಬಂಧಿಸಿದ ಬೆನ್ನಲ್ಲೇ ಇರಾನ್‌ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತೆ ಎಚ್ಚರಿಕೆ ಕೊಟ್ಟಿದ್ದು, ಇರಾನ್ ತನ್ನ ಪರಮಾಣು ಯೋಜನೆ ಪುನರ್‌ನಿರ್ಮಿಸಲು ಪ್ರಯತ್ನಿಸಿದ್ರೆ, ಅದು ಅವರಿಗೆ ಭಾರಿ ಹೊಡೆತ ನೀಡುತ್ತದೆ ಎಂದಿದ್ದಾರೆ. ಜೊತೆಗೆ ಇರಾನ್ ಮೇಲಿನ ಅಮೆರಿಕ ದಾಳಿಯನ್ನು ಹಿರೋಶೀಮಾಗೆ ಹೋಲಿಸಿದ್ದಾರೆ. ಅಲ್ಲದೇ ಖಮೇನಿ ಬದಲಾವಣೆ ಬಗ್ಗೆ ಟ್ರಂಪ್ ಯೂಟರ್ನ್ ಕೂಡ ಹೊಡೆದಿದ್ದಾರೆ.

    ಇನ್ನೂ ಅಮೆರಿಕ ದಾಳಿಯಿಂದ ಇರಾನ್ ಅಣು ಸ್ಥಾವರಗಳು ನಾಶವಾಗಿದೆ ಅಂತ ಟ್ರಂಪ್ ಹೇಳಿದ್ದರೂ ಅಮೆರಿಕ ಗುಪ್ತಚರ ಇಲಾಖೆ ಮಾತ್ರ ಸಂಪೂರ್ಣ ಯಶಸ್ವಿಯಾಗಿಲ್ಲ ಅಂದಿದೆ. ಆದರೆ, ಇರಾನ್ ವಿದೇಶಾಂಗ ಸಚಿವಾಲಯ ವಕ್ತಾರ ಇಸ್ಮೈಲ್‌ ಬಘಾಯ್ ಮಾತ್ರ ನಮ್ಮ ಅಣುಸ್ಥಾವರಗಳು ತೀವ್ರವಾಗಿ ಹಾನಿಗೊಂಡಿವೆ ಅಂದಿದ್ದಾರೆ.

    ಈ ಮಧ್ಯೆ, ಇರಾನ್ ಪರಮಾಣು ಘಟಕಗಳ ಮೇಲಿನ ದಾಳಿ ಸಂಸತ್ ಅನುಮೋದನೆ ಪಡೆದಿಲ್ಲ ಎಂದು ವಾಗ್ದಂಡನೆಗೆ ಗುರಿಯಾಗಿದ್ದ ಟ್ರಂಪ್ ಪಾರಾಗಿದ್ದಾರೆ. ಅಮೆರಿಕ ಸಂಸತ್‌ನಲ್ಲಿ 344/79 ಮತಗಳಿಂದ ವಾಗ್ದಂಡನೆ ಪ್ರಯತ್ನಕ್ಕೆ ಸೋಲಾಗಿದೆ.ಇದನ್ನೂ ಓದಿ: ಇರಾನ್‌ ಮೇಲೆ ಅಮೆರಿಕ ದಾಳಿ ಸಂಪೂರ್ಣ ಯಶಸ್ವಿಯಾಗಿಲ್ಲ – ಟ್ರಂಪ್ ಮುಜುಗರಕ್ಕೆ ಕಾರಣವಾದ ಗುಪ್ತಚರ ವರದಿ

  • ಇಸ್ರೇಲ್ ಪರ ಬೇಹುಗಾರಿಕೆ – ಮೂವರನ್ನು ಗಲ್ಲಿಗೇರಿಸಿದ ಇರಾನ್

    ಇಸ್ರೇಲ್ ಪರ ಬೇಹುಗಾರಿಕೆ – ಮೂವರನ್ನು ಗಲ್ಲಿಗೇರಿಸಿದ ಇರಾನ್

    – ವ್ಯಾಪಕ ಕಾರ್ಯಾಚರಣೆ – 700 ಜನ ಅರೆಸ್ಟ್

    ಟೆಹ್ರಾನ್‌: ಇಸ್ರೇಲ್ (Israel) ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಮೂವರನ್ನು ಗಲ್ಲಿಗೇರಿಸಲಾಗಿದೆ ಎಂದು ಇರಾನ್‌ (Iran) ಹೇಳಿದೆ.

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಇರಾನ್ ಕದನ ವಿರಾಮಕ್ಕೆ ಒಪ್ಪಿಕೊಂಡ ಒಂದು ದಿನದ ಬಳಿಕ ಈ ಬೆಳವಣಿಗೆಯಾಗಿದೆ. ಗಲ್ಲಿಗೇರಿಸಲಾದ ಮೂವರು ವ್ಯಕ್ತಿಗಳನ್ನು ಇದ್ರಿಸ್ ಅಲಿ, ಆಜಾದ್ ಶೋಜೈ ಮತ್ತು ರಸೂಲ್ ಅಹ್ಮದ್ ರಸೂಲ್ ಎಂದು ಗುರುತಿಸಲಾಗಿದೆ. ಈ ಮೂವರು ಶಸ್ತ್ರಾಸ್ತ್ರಗಳನ್ನು ಇರಾನ್‌ಗೆ ತರಲು ಯತ್ನಿಸಿದ್ದರು. ಈ ಮೂಲಕ ಇಸ್ರೇಲ್‌ಗೆ ಸಹಕಾರ ಒದಗಿಸಿದ್ದರು ಎಂದು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ಮೂವರನ್ನು ಟರ್ಕಿ ಗಡಿಯ ಸಮೀಪದ ಉರ್ಮಿಯಾದಲ್ಲಿ ಇಂದು (ಜೂ.25ರಂದು) ಮರಣದಂಡನೆ ವಿಧಿಸಲಾಗಿದೆ. ಇದನ್ನೂ ಓದಿ: 12 ದಿನಗಳ ಇಸ್ರೇಲ್-ಇರಾನ್ ಸಂಘರ್ಷಕ್ಕೆ ಅಂತ್ಯ – ಮೂರು ದೇಶಗಳಿಗೆ ಸಿಕ್ಕಿದ್ದೇನು?

    ಶಿಕ್ಷೆಗೆ ಗುರಿಯಾದ ಮೂವರು ನೀಲಿ ಜೈಲು ಸಮವಸ್ತ್ರದಲ್ಲಿರುವ ಫೋಟೋಗಳನ್ನು ಇರಾನ್‌ನ ಕೋರ್ಟ್‌ ಹಂಚಿಕೊಂಡಿದೆ. ಇನ್ನೂ ಸಂಘರ್ಷದ (Iran Israel Conflict) ಸಮಯದಲ್ಲಿ, ಇಸ್ರೇಲ್ ಜೊತೆ ಸಂಬಂಧ ಹೊಂದಿರುವ ಆರೋಪದ ಮೇಲೆ ಕನಿಷ್ಠ 700 ಜನರನ್ನು ಬಂಧಿಸಲಾಗಿದೆ.

    ಮೊಸಾದ್ ಜೊತೆ ಸಂಪರ್ಕ – ಗೂಢಚಾರಿಗೆ ಗಲ್ಲು
    ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್ (Mossad) ಜೊತೆ ಸಂಪರ್ಕದಲ್ಲಿದ್ದ ಗೂಢಚಾರಿಯನ್ನು ಸಹ ಗಲ್ಲಿಗೇರಿಸಲಾಗಿದೆ. ಸುಪ್ರೀಂ ಕೋರ್ಟ್ ಸಂಪೂರ್ಣ ವಿಚಾರಣೆ ನಡೆಸಿ ಅಪರಾಧಿಗೆ ಈ ಶಿಕ್ಷೆ ವಿಧಿಸಿದೆ. ಗಲ್ಲಿಗೇರಿಸಲಾದ ಗೂಢಚಾರಿಗೆಯನ್ನು ಮಜೀದ್ ಮೊಸಾಯೆಬಿ ಎಂದು ಗುರುತಿಸಲಾಗಿದೆ ಎಂದು ನ್ಯಾಯಾಂಗದ ಮಿಜಾನ್ ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಈತ ಮೊಸಾದ್‌ಗೆ ಇರಾನ್‌ನ ಸೂಕ್ಷ್ಮ ಮಾಹಿತಿಯನ್ನು ಕಳಿಸುತ್ತಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮಧ್ಯರಾತ್ರಿ 4 ದೇಶಗಳ ಮಾತುಕತೆ – ಇಸ್ರೇಲ್‌, ಇರಾನ್‌ ಮಧ್ಯೆ ಕದನ ವಿರಾಮ ಆಗಿದ್ದು ಹೇಗೆ?

  • ಮಧ್ಯರಾತ್ರಿ 4 ದೇಶಗಳ ಮಾತುಕತೆ – ಇಸ್ರೇಲ್‌, ಇರಾನ್‌ ಮಧ್ಯೆ ಕದನ ವಿರಾಮ ಆಗಿದ್ದು ಹೇಗೆ?

    ಮಧ್ಯರಾತ್ರಿ 4 ದೇಶಗಳ ಮಾತುಕತೆ – ಇಸ್ರೇಲ್‌, ಇರಾನ್‌ ಮಧ್ಯೆ ಕದನ ವಿರಾಮ ಆಗಿದ್ದು ಹೇಗೆ?

    ವಾಷಿಂಗ್ಟನ್‌: ಕಳೆದ 12 ದಿನಗಳಿಂದ ನಡೆಯುತ್ತಿದ್ದ ಇಸ್ರೇಲ್‌ (Israel) ಇರಾನ್‌ (Iran) ನಡುವಿನ ಯುದ್ಧ ಕೊನೆಗೂ ಅಂತ್ಯವಾಗಿದ್ದು ಎರಡು ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಅಮೆರಿಕ (USA) ಮತ್ತು ಕತಾರ್‌ (Qatar) ಪ್ರಯತ್ನದಿಂದ ಈ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ನೀಡಿವೆ.

    ಜೂನ್‌ 23 ರ ರಾತ್ರಿಯಿಡಿ ನಡೆದ ವಿದ್ಯಮಾನದಲ್ಲಿ ಅಮೆರಿಕ ಇಸ್ರೇಲ್‌ ಮನವೊಲಿಸಿದರೆ ಕತಾರ್‌ ಇರಾನ್‌ ಮನವೊಲಿಸಲು ಯಶಸ್ವಿಯಾಯಿತು.

    ಕದನ ವಿರಾಮ ಹೇಗಾಯ್ತು?
    ಆರಂಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಜೊತೆ ಮಾತನಾಡಿದರು. ಆರಂಭದಲ್ಲಿ ಕದನ ವಿರಾಮಕ್ಕೆ ಒಪ್ಪದ ಇಸ್ರೇಲ್‌ ಕೊನೆಗೆ ಇರಾನ್‌ ಮುಂದೆ ಯಾವುದೇ ದಾಳಿ ಮಾಡುವುದಿಲ್ಲ ಎಂದು ಒಪ್ಪಿಕೊಂಡರೆ ಮಾತ್ರ ಕದನ ವಿರಾಮಕ್ಕೆ ಒಪ್ಪುತ್ತೇನೆ ಎಂದು ಷರತ್ತು ವಿಧಿಸಿದರು.

    ಬಾಂಬ್‌ ದಾಳಿ ನಡೆಸಿದ್ದರಿಂದ ಇರಾನ್‌ ತನ್ನ ಮಾತನ್ನು ಕೇಳುವುದಿಲ್ಲ ಎನ್ನುವುದು ಅಮೆರಿಕ್ಕೆ ಗೊತ್ತಿತ್ತು. ಈ ಕಾರಣಕ್ಕೆ ಟ್ರಂಪ್ ಇರಾನ್‌ ಆಪ್ತ ದೇಶವಾಗಿರುವ ಕತಾರ್‌ ಸಂಪರ್ಕಿಸಿದರು. ಕತಾರ್‌ ಎಮಿರ್‌ ಜೊತೆ ಮಾತನಾಡಿ ಕದನ ವಿರಾಮಕ್ಕೆ ಇರಾನ್‌ ಮನವೊಲಿಸುವಂತೆ ಕೇಳಿಕೊಂಡರು ನಂತರ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕತಾರ್‌ ಪ್ರಧಾನಿ ಕಚೇರಿಯೊಂದಿಗೆ ಸಮನ್ವಯ ಸಾಧಿಸಿದರು. ಇದನ್ನೂ ಓದಿ: 12 ದಿನಗಳ ಇಸ್ರೇಲ್-ಇರಾನ್ ಸಂಘರ್ಷಕ್ಕೆ ಅಂತ್ಯ – ಮೂರು ದೇಶಗಳಿಗೆ ಸಿಕ್ಕಿದ್ದೇನು?

     

    ವ್ಯಾನ್ಸ್ ಜೊತೆಗೆ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತು ಯುಎಸ್ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಕೂಡ ಇರಾನ್ ಜೊತೆ ಮಾತುಕತೆಯಲ್ಲಿ ಭಾಗಿಯಾಗಿದ್ದರು. ಕತಾರ್ ಪ್ರಧಾನಿಯೊಂದಿಗೆ ಮಾತನಾಡಿದ ನಂತರ ಇರಾನ್ ಕದನ ವಿರಾಮ ಪ್ರಸ್ತಾಪಕ್ಕೆ ಒಪ್ಪಿಕೊಂಡಿತು.

    ಅಮೆರಿಕ ಮೂರು ಪ್ರಮುಖ ಪರಮಾಣು ಕೇಂದ್ರಗಳಾದ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಮೇಲೆ ಬಾಂಬ್ ದಾಳಿ ಮಾಡಿದ್ದಕ್ಕೆ ಇರಾನ್‌ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಪ್ರತಿದಾಳಿ ನಡೆಸುವ ಎಚ್ಚರಿಕೆ ನೀಡಿತ್ತು. ಅದರಂತೆ ಸೋಮವಾರ ರಾತ್ರಿ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ದೊಡ್ಡ ವಾಯುನೆಲೆಯ ಮೇಲೆ ದಾಳಿ ಮಾಡಿತ್ತು. ಆದರೆ ಈ ದಾಳಿ ನಡೆಸುವ ಮೊದಲೇ ಇರಾನ್‌ ಕತಾರ್‌ಗೆ ತಿಳಿಸಿತ್ತು. ಈ ವಿಚಾರವನ್ನು ಕತಾರ್‌ ಅಮೆರಿಕಗೆ ಹೇಳಿತ್ತು. ಮೊದಲೇ ದಾಳಿ ನಡೆಸುವ ವಿಚಾರ ತಿಳಿದ ಕಾರಣ ಅಮೆರಿಕ ಎಲ್ಲದ್ದಕ್ಕೂ ಸನ್ನದ್ದವಾಗಿತ್ತು ಮತ್ತು ಯಾವುದೇ ಸಾವು ನೋವು ಸಂಭವಿಸಿಲ್ಲ. ಇದನ್ನೂ ಓದಿ: ದೇಶ ತೊರೆಯಿರಿ ಇಲ್ವೋ ಇಂದು ಸಾಯಲು ಸಿದ್ಧವಾಗಿರಿ – ಕರೆ ಮಾಡಿ ಇರಾನ್‌ ಕಮಾಂಡರ್‌ಗಳಿಗೆ ಮೊಸಾದ್‌ ಎಚ್ಚರಿಕೆ

     

    ನಮಗೆ ಮುಂಚಿನ ಸೂಚನೆ ನೀಡಿದ್ದಕ್ಕಾಗಿ ಇರಾನ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದರಿಂದ ಯಾವುದೇ ಜೀವ ಹಾನಿ ಮತ್ತು ಯಾರು  ಗಾಯಗೊಂಡಿಲ್ಲ ಎಂದು ಟ್ರಂಪ್‌ ಹೇಳಿದ್ದರು. ಒಂದು ವೇಳೆ ದಾಳಿಯಿಂದ ವಾಯುನೆಲೆಗೆ ಹಾನಿಯಾಗಿದ್ದರೆ ಅಮೆರಿಕ ಮತ್ತಷ್ಟು ದಾಳಿ ನಡೆಸುವ ಸಾಧ್ಯತೆ ಇತ್ತು. ಆದರೆ ಈ ಬಾರಿ ಶಾಂತಿ ಮಂತ್ರವನ್ನು ಜಪಿಸಿದ ಟ್ರಂಪ್‌ ಪ್ರತಿದಾಳಿ ನಡೆಸಲು ಮುಂದಾಗಲಿಲ್ಲ. ಹೀಗಾಗಿ ಕದನ ವಿರಾಮದ ಮಾತುಕತೆ ಯಶಸ್ವಿಯಾಯಿತು.

    ಇಸ್ರೇಲಿ ದಾಳಿಯಿಂದ ಸುಮಾರು 600 ಜನ ಮೃತಪಟ್ಟಿದ್ದಾರೆ ಎಂದು ಇರಾನ್‌ನ ಆರೋಗ್ಯ ಸಚಿವಾಲಯ ಹೇಳಿದೆ. ಆದರೆ ಮಾನವ ಹಕ್ಕುಗಳ ಗುಂಪು 950ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಇಸ್ರೇಲ್ ನಗರಗಳ ಮೇಲೆ ಇರಾನ್‌ ಕ್ಷಿಪಣಿಗಳು ಬಿದ್ದ ಪರಿಣಾಮ 24 ಮಂದಿ ಮೃತಪಟ್ಟಿದ್ದಾರೆ.