Tag: Israel-Hezbollah conflict

  • ಇಸ್ರೇಲ್‌ ರಾಕೆಟ್‌ ದಾಳಿಗೆ ಲೆಬನಾನ್‌ ಛಿದ್ರ ಛಿದ್ರ – ಸಾವಿನ ಸಂಖ್ಯೆ 492ಕ್ಕೆ ಏರಿಕೆ!

    ಇಸ್ರೇಲ್‌ ರಾಕೆಟ್‌ ದಾಳಿಗೆ ಲೆಬನಾನ್‌ ಛಿದ್ರ ಛಿದ್ರ – ಸಾವಿನ ಸಂಖ್ಯೆ 492ಕ್ಕೆ ಏರಿಕೆ!

    ಬೈರುತ್:‌ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಆವರಿಸಿದ್ದು, ಲೆಬನಾನ್‌ – ಇಸ್ರೇಲ್‌ ನಡುವಿನ ಸಂಘರ್ಷ (Israel-Lebanon conflict) ತೀವ್ರ ಸ್ವರೂಪ ಪಡೆದುಕೊಂಡಿದೆ. ಲೆಬನಾನ್‌ನ ದಕ್ಷಿಣ ಹಾಗೂ ಪೂರ್ವ ಪ್ರಾಂತ್ಯದ ಮೇಲೆ ಇಸ್ರೇಲ್‌ ವಾಯುದಾಳಿಗೆ ಪ್ರತೀಕಾರವಾಗಿ ಉತ್ತರ ಇಸ್ರೇಲಿ ಸೇನಾ ನೆಲೆಗಳ ಮೇಲೆ ಲೆಬನಾನ್‌ ಪ್ರತಿ ದಾಳಿ ನಡೆಸಿದೆ.

    ಇತ್ತೀಚಿಗೆ ದೇಶದಲ್ಲಿ ನಡೆದ ಪೇಜರ್‌, ವಾಕಿಟಾಕಿ ಸ್ಫೋಟಕ್ಕೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದ ಇರಾನ್‌ ಬೆಂಬಲಿತ ಲೆಬನಾನ್‌ ಬಂಡುಕೋರ ಪಡೆಯ ಮೇಲೆ ಸೋಮವಾರ ಇಸ್ರೇಲ್‌ ಮಾರಣಾಂತಿಕ ದಾಳಿ (Israeli strikes) ನಡೆಸಿದೆ. ಹಿಜ್ಜುಲ್ಲಾ ಉಗ್ರರ 800 ಸ್ಥಳಗಳ ಮೇಲೆ ಇಸ್ರೇಲ್ 200 ರಾಕೆಟ್‌ ದಾಳಿ ನಡೆಸಿದೆ. ಸಾವಿನ ಸಂಖ್ಯೆ 492ಕ್ಕೆ ಏರಿಕೆಯಾಗಿದ್ದು, ಗಾಯಗೊಂಡವರ ಸಂಖ್ಯೆ ಸುಮಾರು 1,500ಕ್ಕೆ ತಲುಪಿದೆ ಎಂದು ಲೆಬನಾನ್‌ ಆರೋಗ್ಯ ಸಚಿವಾಲಯ ಹೇಳಿಕೊಂಡಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ – ತುಪ್ಪ ಪೂರೈಸುತ್ತಿದ್ದ ಎಆರ್ ಡೈರಿಗೆ ನೋಟಿಸ್

    ಇದು 2006ರಲ್ಲಿ ಇಸ್ರೇಲ್-ಹಿಜ್ಜುಲ್ಲಾ ಕದನ (Israel Hezbollah conflict) ಆರಂಭವಾದ ಬಳಿಕ 28 ವರ್ಷಗಳಲ್ಲೇ ದೇಶದ ಅತಿದೊಡ್ಡ ಕರಾಳ ದಿನ ಎಂದು ಲೆಬನಾನ್ ಉಲ್ಲೇಖಿಸಿದೆ. ಲೆಬನಾನ್‌ ದಕ್ಷಿಣ, ಪೂರ್ವ ಪ್ರಾಂತ್ಯಗಳ ಮೇಲೆ ದಾಳಿ ನಡೆಸಿದ ಇಸ್ರೇಲ್‌ ಉತ್ತರ ಭಾಗದ ಮೂರು ಸೇನಾ ನೆಲೆಗಳ ಮೇಲೆ ಬಂಡುಕೋರರ ಪ್ರತಿ ದಾಳಿ ನಡೆಸಿದ್ದಾರೆ. ಹೈಫಾದಲ್ಲಿರುವ ಇಸ್ರೇಲ್‌ ರಾಫೆಲ್‌ ಡಿಫೆನ್ಸ್‌ ಇಂಡಸ್ಟ್ರೀಸ್‌ ಸಂಕೀರ್ಣದ ಮೇಲೂ ಬಾಂಬ್‌ ದಾಳಿ ನಡೆಸಲಾಗಿದೆ ಎಂದು ಲೆಬನಾನ್‌ ಹೇಳಿಕೊಂಡಿದೆ.

    ಈ ದಾಳಿಯು ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಗುಡುಗಿರುವ ಇಸ್ರೇಲ್, ಹಿಜ್ಜುಲ್ಲಾ ಉಗ್ರರು ತಮ್ಮ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿರುವ ಮನೆಗಳು ಮತ್ತು ಕಟ್ಟಡಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಲೆಬನಾನ್ ನಾಗರಿಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಇದನ್ನೂ ಓದಿ: 5 ಲಕ್ಷ ಪಾವತಿಸಿ ಇಲ್ಲವೇ ದುರ್ಗಾ ಪೂಜೆ ಆಚರಿಸಬೇಡಿ: ಬಾಂಗ್ಲಾ ಹಿಂದೂ ದೇವಾಲಯಗಳಿಗೆ ಬೆದರಿಕೆ

    ಹಮಾಸ್ ಮೇಲಿನ ಇಸ್ರೇಲ್ ಯುದ್ಧದಲ್ಲಿ ಹಿಜ್ಜುಲ್ಲಾ ಉಗ್ರರು, ಹಮಾಸ್‌ಗೆ ನೇರ ಬೆಂಬಲ ಘೋಷಿಸಿದ್ದಾರೆ. ಅದರ ಭಾಗವಾಗಿ ಆಗಾಗ್ಗೆ ಇಸ್ರೇಲ್ ಸೇನಾ ನೆಲೆಗಳು ಮತ್ತು ನಾಗರಿಕ ಪ್ರದೇಶಗಳ ಮೇಲೆ ರಾಕೆಟ್, ಕ್ಷಿಪಣಿ ಬಳಸಿ ದಾಳಿ ನಡೆಸುತ್ತಿದೆ. ಇದರಿಂದ ಸಿಟ್ಟಿಗೆದ್ದಿರುವ ಇಸ್ರೇಲ್, ಕಳೆದೊಂದು ವಾರದಿಂದ ಲೆಬನಾನ್‌ನಲ್ಲಿರುವ ಹಿಜ್ಜುಲ್ಲಾ ಉಗ್ರರ ಮೇಲೆ ಹಲವು ರೀತಿಯಲ್ಲಿ ದಾಳಿ ನಡೆಸಿದೆ.

    ಇತ್ತೀಚೆಗೆ ಇಸ್ರೇಲ್ ದೇಶವು ಲೆಬನಾನ್‌ನ ಹಿಜ್ಜುಲ್ಲಾ ಉಗ್ರರು ಹೊಂದಿದ್ದ ಪೇಜರ್ ಹಾಗೂ ವಾಕಿಟಾಕಿಗಳನ್ನು ಸ್ಫೋಟಿಸಿದ ನಂತರ ಸಂಘರ್ಷ ತೀವ್ರಗೊಂಡಿದೆ. ಇದು ಅನಿರ್ದಿಷ್ಟ ಯುದ್ಧಕ್ಕೆ ನಾಂದಿ ಹಾಡಿದೆ ಎಂದು ಹಿಜ್ಜುಲ್ಲಾ ಉಗ್ರರು ಘೋಷಿಸಿದ್ದಾರೆ. ಇದನ್ನೂ ಓದಿ: ಪುಣೆ ಏರ್‌ಪೋರ್ಟ್ ಹೆಸರು ಬದಲಾವಣೆ – ಜಗದ್ಗುರು ಸಂತ ತುಕಾರಾಂ ನಿಲ್ದಾಣವಾಗಿ ಮರುನಾಮಕರಣ

    ಕಳೆದ ವರ್ಷ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ 5 ಸಾವಿರ ರಾಕೆಟ್‌ ಉಡಾಯಿಸಿದಾಗಿಂದ ಇಸ್ರೇಲ್‌-ಹಮಾಸ್‌ ಉಗ್ರರ ನಡುವಿನ ಯುದ್ಧ (Gaza war) ಆರಂಭವಾಗಿದೆ.

  • ಇಸ್ರೇಲ್‌ v/s ಹಿಜ್ಬುಲ್ಲಾ; ಇಬ್ಬರ ನಡುವೆ ಕಿತ್ತಾಟ ಯಾಕೆ? – ಭಾರತೀಯರಿಗೆ ಎಚ್ಚರಿಕೆ!

    ಇಸ್ರೇಲ್‌ v/s ಹಿಜ್ಬುಲ್ಲಾ; ಇಬ್ಬರ ನಡುವೆ ಕಿತ್ತಾಟ ಯಾಕೆ? – ಭಾರತೀಯರಿಗೆ ಎಚ್ಚರಿಕೆ!

    ವಿಶ್ವದಲ್ಲಿ ಎತ್ತ ನೋಡಿದರೂ ಯುದ್ಧಗಳದ್ದೇ ಸುದ್ದಿ. ಅತ್ತ ರಷ್ಯಾ-ಉಕ್ರೇನ್ ವಾರ್, ಇತ್ತ ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ. ಮೇಲ್ನೋಟಕ್ಕೆ ಇದು ಎರಡು ದೇಶಗಳ ನಡುವಿನ ಸಂಘರ್ಷವಾದರೂ ಜಗತ್ತಿನ ಇತರೆ ರಾಷ್ಟ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧಕ್ಕೆ ಹಮಾಸ್ ಬಂಡುಕೋರರ ಗುಂಪು ಕಾರಣ. ಸಂದಿಗ್ಧ ಸನ್ನಿವೇಶದ ಹೊತ್ತಿನಲ್ಲೇ ಮತ್ತೊಂದು ಯುದ್ಧದ ಭೀತಿ ಎದುರಾಗಿದೆ. ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಸಂಘರ್ಷ ಶುರುವಾಗಿದೆ. ಈ ಸಂಘರ್ಷ ಮತ್ತಷ್ಟು ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ.

    ಅಷ್ಟಕ್ಕೂ ಏನಿದು ಇಸ್ರೇಲ್-ಹಿಜ್ಬುಲ್ಲಾ (Israel vs Hezbollah Conflict) ಸಂಘರ್ಷ? ಇಬ್ಬರ ನಡುವೆ ತಿಕ್ಕಾಟ ಯಾಕೆ? ಇದರಿಂದ ಆಗಬಹುದಾದ ಪರಿಣಾಮ ಏನು? ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ಸೊಮಾಲಿಯಾದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ – 32 ಮಂದಿ ಸಾವು

    ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್‌ನಲ್ಲಿ ವಾರದ ಹಿಂದೆ ಫೌದ್ ಶೂಕೂರ್ ರಾಕೆಟ್ ದಾಳಿ ನಡೆಸಿ, 12 ಯುವಕರ ಹತ್ಯೆ ಮಾಡಿದ್ದ. ಇದು ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಲೆಬನಾನಿನ ಗುಂಪು ಹಿಜ್ಬುಲ್ಲಾ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಹಿಜ್ಬುಲ್ಲಾ ಮೇಲೆ ತೀವ್ರವಾಗಿ ದಾಳಿ ನಡೆಸುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿದೆ. ಕಳೆದ ವರ್ಷ ಹಮಾಸ್‌ನ ದಾಳಿಯು ಗಾಜಾದಲ್ಲಿ ಯುದ್ಧವನ್ನು ಹುಟ್ಟುಹಾಕಿತ್ತು. ಈಗ ಮತ್ತೊಂದು ಸಂಘರ್ಷದ ಸೂಚನೆ ಗೋಚರಿಸಿದೆ. ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಹಗೆತನ ಇಂದು ನಿನ್ನೆಯದ್ದಲ್ಲ.

    ಸಂಘರ್ಷ ಯಾಕೆ?
    ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್ ದಕ್ಷಿಣ ಇಸ್ರೇಲ್‌ನಲ್ಲಿ ದಾಳಿ ಮಾಡಿ ಗಾಜಾ ಯುದ್ಧಕ್ಕೆ ಕಾರಣವಾಯಿತು. ಅದಾದ ಒಂದು ದಿನದ ನಂತರ (ಅ.8) ಇಸ್ರೇಲ್-ಹಿಜ್ಬುಲ್ಲಾ ಗಡಿಯಲ್ಲಿ ಹಿಂಸಾಚಾರ ನಡೆಯಿತು. ಗಾಜಾದಲ್ಲಿ ಇಸ್ರೇಲಿ ಬಾಂಬ್ ದಾಳಿಗೆ ಒಳಗಾಗಿರುವ ಪ್ಯಾಲೆಸ್ತೀನಿಯನ್ನರನ್ನು ಬೆಂಬಲಿಸುತ್ತೇವೆ ಎಂದು ಆಗ ಹಮಾಸ್‌ನ ಮಿತ್ರ ಹಿಜ್ಬುಲ್ಲಾ ಹೇಳಿಕೊಂಡಿತ್ತು. ಇದನ್ನೂ ಓದಿ: ಇಸ್ರೇಲ್‌ ಮೇಲಿನ ದಾಳಿಯ ಮಾಸ್ಟರ್‌ಮೈಂಡ್‌ ಮೊಹಮ್ಮದ್‌ ಡೀಫ್‌ ಹತ್ಯೆ

    ಹಿಜ್ಬುಲ್ಲಾವನ್ನು ಇರಾನ್ ಬೆಂಬಲಿತ ಅತ್ಯಂತ ಶಕ್ತಿಶಾಲಿ ಸದಸ್ಯ ಎಂದು ಪರಿಗಣಿಸಲಾಗಿದೆ. ಇದನ್ನು ಆಕ್ಸಿಸ್ ಆಫ್ ರೆಸಿಸ್ಟೆನ್ಸ್ ಎಂದು ಕರೆಯಲಾಗುತ್ತದೆ. ಗಾಜಾದಲ್ಲಿ ಕದನ ವಿರಾಮ ಜಾರಿಗೆ ಬರದ ಹೊರತು ಇಸ್ರೇಲ್ ಮೇಲಿನ ತನ್ನ ದಾಳಿಯನ್ನು ನಿಲ್ಲಿಸುವುದಿಲ್ಲ ಎಂದು ಹಿಜ್ಬುಲ್ಲಾ ತಿಳಿಸಿತ್ತು. ಅಷ್ಟೇ ಅಲ್ಲ, ಇಸ್ರೇಲ್ ಮತ್ತು ಹಿಜ್ಬುಲ್ಲಾ ಹಲವಾರು ಯುದ್ಧಗಳಿಗೆ ಸಾಕ್ಷಿಯಾಗಿವೆ. 2006ರಲ್ಲಿ ಕೊನೆ ಸಂಘರ್ಷ ಎದುರಿಸಿದ್ದವು.

    ಹಿಜ್ಬುಲ್ಲಾ ಹುಟ್ಟಿದ್ದು ಹೇಗೆ?
    ತನ್ನ ಗಡಿಗೆ ಹಿಜ್ಬುಲ್ಲಾ ಯಾವಾಗಲೂ ದೊಡ್ಡ ಬೆದರಿಕೆ ಎಂದೇ ಇಸ್ರೇಲ್ ಪರಿಗಣಿಸಿದೆ. ಲೆಬನಾನ್ ಆಕ್ರಮಿಸಿದ ಇಸ್ರೇಲಿ ಪಡೆಗಳ ವಿರುದ್ಧ ಹೋರಾಡಲು 1982 ರಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಗಳು ಇದನ್ನು ಸ್ಥಾಪಿಸಿದರು. 2000 ರಲ್ಲಿ ಇಸ್ರೇಲ್ ದಕ್ಷಿಣ ಲೆಬನಾನ್‌ನಿಂದ ಹಿಂದೆ ಸರಿಯುವಂತೆ ಮಾಡಲು ಗೆರಿಲ್ಲಾ ಯುದ್ಧವನ್ನು ನಡೆಸಿದ್ದರು. ಪ್ಯಾಲೆಸ್ತೀನಿಯನ್ ಭೂಮಿಯಲ್ಲಿ ಸ್ಥಾಪಿಸಿದ ನ್ಯಾಯಸಮ್ಮತವಲ್ಲದ ರಾಜ್ಯ ಇಸ್ರೇಲ್ ಎಂದು ಹಿಜ್ಬುಲ್ಲಾ ಪರಿಗಣಿಸಿದೆ. ಪ್ಯಾಲೆಸ್ತೀನ್ ಭೂಮಿಯಿಂದ ಇಸ್ರೇಲ್ ಹೊರಹೋಗಬೇಕು ಎಂದು ಈ ಗುಂಪು ಕೂಡ ಬಯಸುತ್ತದೆ.

    ಕಿತ್ತಾಟದ ಪರಿಣಾಮ ಏನು?
    ಇಸ್ರೇಲ್-ಹಿಜ್ಬುಲ್ಲಾ ಕಿತ್ತಾಟದಿಂದ ಗಡಿಯ ಎರಡೂ ಬದಿಗಳಲ್ಲಿ ನೂರಾರು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಇಸ್ರೇಲಿ ವೈಮಾನಿಕ ದಾಳಿಗಳು ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಚಟುವಟಿಕೆ ಇರುವ ಪ್ರದೇಶಗಳನ್ನು ಹೊಡೆದಿವೆ. ಸಿರಿಯನ್ ಗಡಿಯ ಸಮೀಪವಿರುವ ಬೆಕಾ ಕಣಿವೆ ಮೇಲೂ ದಾಳಿ ನಡೆದಿದೆ.

    ದಕ್ಷಿಣ ಬೈರೂತ್‌ನಲ್ಲಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾದ ಉನ್ನತ ಮಿಲಿಟರಿ ಕಮಾಂಡರ್ ಫೌದ್ ಶೂಕೂರ್ ಹತನಾಗಿದ್ದಾನೆಂದು ಇಸ್ರೇಲ್ ದೃಢಪಡಿಸಿದೆ. ಇಸ್ರೇಲಿ ದಾಳಿಗಳು ಲೆಬನಾನ್‌ನಲ್ಲಿ ಸುಮಾರು 300ಕ್ಕೂ ಹೆಚ್ಚು ಹಿಜ್ಬುಲ್ಲಾ ಹೋರಾಟಗಾರರು ಹಾಗೂ ವೈದ್ಯಾಧಿಕಾರಿಗಳು, ಮಕ್ಕಳು, ಪತ್ರಕರ್ತರು ಸೇರಿದಂತೆ 100 ಕ್ಕೂ ಹೆಚ್ಚು ನಾಗರಿಕರನ್ನು ಕೊಂದಿವೆ.

    ಕಳೆದ ಶನಿವಾರದಂದು ಹಿಜ್ಬುಲ್ಲಾ ನಡೆಸಿದ ದಾಳಿಯಲ್ಲಿ ಇಸ್ರೇಲ್‌ನ 17 ಸೈನಿಕರು ಸೇರಿ 23 ಮಂದಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಹೇಳಿತ್ತು. ಆದರೆ ಈ ದಾಳಿ ಹೊಣೆ ಹೊತ್ತುಕೊಳ್ಳಲು ಹಿಜ್ಬುಲ್ಲಾ ನಿರಾಕರಿಸಿದೆ.

    2006ರಲ್ಲಿ ಇಸ್ರೇಲ್ ನಡೆಸಿತ್ತು ದಾಳಿ?
    ಇವರಿಬ್ಬರ ನಡುವಿನ ಈ ಹಿಂದೆ ನಡೆದ ಯುದ್ಧಗಳಿಂದ ಭಾರೀ ಹಾನಿಯುಂಟಾಗಿದೆ. 2006ರಲ್ಲಿ ಇಸ್ರೇಲಿ ದಾಳಿಗಳು ಬೈರುತ್‌ನ ಹಿಜ್ಬುಲ್ಲಾ ನಿಯಂತ್ರಿತ ದಕ್ಷಿಣದ ಉಪನಗರಗಳ ದೊಡ್ಡ ಪ್ರದೇಶಗಳನ್ನು ನೆಲಸಮಗೊಳಿಸಿದ್ದವು. ಬೈರುತ್ ವಿಮಾನ ನಿಲ್ದಾಣವನ್ನು ಹೊಡೆದುರುಳಿಸಲಾಗಿತ್ತು. ರಸ್ತೆಗಳು, ಸೇತುವೆಗಳು ಮತ್ತು ಇತರೆ ಮೂಲಸೌಕರ್ಯಗಳಿಗೆ ಹಾನಿಯಾಗಿತ್ತು. ಲೆಬನಾನ್‌ನಲ್ಲಿ ಸುಮಾರು 10 ಲಕ್ಷ ಜನರು ಮನೆಗಳನ್ನು ತೊರೆದಿದ್ದರು. ಇಸ್ರೇಲಿ ಪಡೆಗಳು ಈ ಹಿಂದೆ ಹಲವಾರು ಬಾರಿ ಲೆಬನಾನ್ ಮೇಲೆ ದಾಳಿ ಮಾಡಿದೆ. ಲೆಬನಾನ್ ಮೂಲದ ಪ್ಯಾಲೆಸ್ತೀನಿಯನ್ ಗೆರಿಲ್ಲಾಗಳನ್ನು ಹತ್ತಿಕ್ಕುವ ಗುರಿ ಹೊಂದಿದೆ. 1982ರಲ್ಲಿ ಬೈರುತ್ ವರೆಗೆ ದಾಳಿ ನಡೆಸಿತ್ತು. ಇದನ್ನೂ ಓದಿ: ಬರಿದಾಗ್ತಿದೆ ಆಮ್ಲಜನಕ.. ಜೀವಸಂಕುಲಕ್ಕೆ ಕಂಟಕ – ಭೂಮಿಯಲ್ಲಿ ಏನಾಗ್ತಿದೆ?

    ಹಿಜ್ಬುಲ್ಲಾ ಕೂಡ ಇಸ್ರೇಲ್‌ಗೆ ಸೆಡ್ಡು ಹೊಡೆಯಲು ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಕಳೆದ ಅಕ್ಟೋಬರ್‌ನಿಂದ ಶಸ್ತ್ರಾಸ್ತ್ರಗಳಲ್ಲಿ ಪ್ರಗತಿಯನ್ನು ಸಾಧಿಸಿದೆ. ಇಸ್ರೇಲಿ ಡ್ರೋನ್‌ಗಳನ್ನು ಹಿಜ್ಬುಲ್ಲಾ ಹೊಡೆದುರುಳಿಸಿದೆ. ಸ್ಫೋಟಕ ಡ್ರೋನ್‌ಗಳನ್ನು ಉಡಾಯಿಸಿ ಇಸ್ರೇಲ್ ಮೇಲೆ ದಾಳಿ ನಡೆಸಿದೆ. ಹೆಚ್ಚು ಅತ್ಯಾಧುನಿಕ ಮಾರ್ಗದರ್ಶಿ ಕ್ಷಿಪಣಿಗಳನ್ನು ಹಾರಿಸಿದೆ.

    ಸಂಘರ್ಷಕ್ಕೆ ಕೊನೆ ಇಲ್ಲವೇ?
    ಗಾಜಾದಲ್ಲಿ ಏನಾಗುತ್ತದೆ ಎಂಬುದರ ಮೇಲೆ ಇದು ಅವಲಂಬಿತವಾಗಿದೆ. ಗಾಜಾದಲ್ಲಿ ಕದನ ವಿರಾಮದ ಪ್ರಯತ್ನ ಹಾಗೂ ಇಸ್ರೇಲಿ ಒತ್ತೆಯಾಳುಗಳ ವಾಪಸಾತಿಯು ವಿಫಲವಾಗಿದೆ. ಕದನ ವಿರಾಮವು ದಕ್ಷಿಣ ಲೆಬನಾನ್‌ನಲ್ಲಿ ತಲೆದೋರಿರುವ ಉದ್ವಿಗ್ನತೆಯನ್ನು ತ್ವರಿತವಾಗಿ ತಗ್ಗಿಸಲು ಸಹಾಯ ಮಾಡುತ್ತದೆ. ಹಿಜ್ಬುಲ್ಲಾವನ್ನು ಭಯೋತ್ಪಾದಕ ಗುಂಪು ಎಂದು ಯುನೈಟೆಡ್ ಸ್ಟೇಟ್ಸ್ ಪರಿಗಣಿಸಿದೆ. ಇಸ್ರೇಲ್-ಹಿಜ್ಬುಲ್ಲಾ ಸಂಘರ್ಷ ಕೊನೆಗಾಣಿಸಲು ರಾಜತಾಂತ್ರಿಕ ಪ್ರಯತ್ನ ಮಾಡುತ್ತಿದೆ. ಆದರೆ ಇಸ್ರೇಲ್, ಗಾಜಾದಲ್ಲಿ ಆಕ್ರಮಣ ನಿಲ್ಲಿಸುವವರೆಗೆ ಯಾವುದೇ ಮಾತುಕತೆಗೆ ಸಿದ್ಧವಿಲ್ಲ ಎಂದು ಹಿಜ್ಬುಲ್ಲಾ ಸ್ಪಷ್ಟಪಡಿಸಿದೆ.

    ಭಾರತೀಯರಿಗೆ ಎಚ್ಚರಿಕೆ!
    ಇಸ್ರೇಲ್-ಹಿಜ್ಬುಲ್‌ ನಡುವೆ ಉದ್ವಿಗ್ನತೆ ಪರಿಸ್ಥಿತಿ ಉಂಟಾಗಿರುವ ಕಾರಣ ಲೆಬನಾನ್‌ ತೊರೆಯುವಂತೆ ಭಾರತೀಯರಿಗೆ ರಾಯಭಾರಿ ಕಚೇರಿ ಸೂಚನೆ ನೀಡಿದೆ. ಮುಂದಿನ ಸೂಚನೆ ನೀಡುವವರೆಗೆ ಭಾರತೀಯರು ಲೆಬನಾನ್‌ಗೆ ಹೋಗಬಾರದು ಎಂದು ತಿಳಿಸಿದೆ.