Tag: ISP

  • ತುರ್ತು ಸಂದರ್ಭದಲ್ಲಿ ಭಾರತದಲ್ಲಿ ಫೇಸ್‍ಬುಕ್, ವಾಟ್ಸಪ್ ಬ್ಲಾಕ್!

    ತುರ್ತು ಸಂದರ್ಭದಲ್ಲಿ ಭಾರತದಲ್ಲಿ ಫೇಸ್‍ಬುಕ್, ವಾಟ್ಸಪ್ ಬ್ಲಾಕ್!

    – ಟೆಲಿಕಾಂ ಕಂಪೆನಿಗಳ ಸಲಹೆ ಕೇಳಿದ ಸರ್ಕಾರ

    ನವದೆಹಲಿ: ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಇನ್ಸ್ ಸ್ಟಾಗ್ರಾಂ, ಮೆಸೇಜಿಂಗ್ ಅಪ್ಲಿಕೇಶನ್ ಗಳಾದ ವಾಟ್ಸಪ್, ಟೆಲಿಗ್ರಾಂಗಳನ್ನು ತುರ್ತು ಸಂದರ್ಭದಲ್ಲಿ ಬ್ಲಾಕ್ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಸರ್ಕಾರ ಟೆಲಿಕಾಂ ಕಂಪೆನಿಗಳಿಗೆ ಮತ್ತು ಇಂಟರ್‍ನಟ್ ಸರ್ವಿಸ್ ಪ್ರೊವೈಡರ್‍ಗಳಿಗೆ ತಮ್ಮ ಅಭಿಪ್ರಾಯವನ್ನು ತಿಳಿಸುವಂತೆ ಸೂಚಿಸಿದೆ.

    ಸುಳ್ಳು ಸುದ್ದಿಗಳನ್ನು ಕಳುಹಿಸಿ ಜನರಲ್ಲಿ ಭಯದ ವಾತಾವರಣವನ್ನ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತು ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಮತ್ತು ಮೆಸೇಜಿಂಗ್ ಅಪ್ಲಿಕೇಶನ್ ಗಳನ್ನು ಬ್ಲಾಕ್ ಮಾಡಲು ಸರ್ಕಾರ ಮುಂದಾಗಿದೆ.

    ಈ ಸಂಬಂಧ ದೂರಸಂಪರ್ಕ ಸಚಿವಾಲಯ ಎಲ್ಲ ಟೆಲಿಕಾಂ ಕಂಪೆನಿಗಳಿಗೆ ತನ್ನ ಸಲಹೆ ಮತ್ತು ಅಭಿಪ್ರಾಯಗಳನ್ನು ಕೂಡಲೇ ತಿಳಿಸುವಂತೆ ದೀರ್ಘ ಪತ್ರ ಬರೆದಿದೆ. ಪತ್ರದಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ 69(ಎ)ನಲ್ಲಿ ಬದಲಾವಣೆಗಳ ಕುರಿತಾಗಿ ಪರಿಣಿತ ತಂಡಗಳಿಂದ ಸಲಹೆಗಳನ್ನು ಕೇಳಿದೆ.

    ಕಂಪ್ಯೂಟರ್ ಮೂಲಗಳನ್ನು ಬಳಸಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಸಾರ್ವಜನಿಕ ಸೇವೆಯನ್ನು ತಡೆ ಹಿಡಿಯಲು ಈ ಕಾಯ್ದೆಯಲ್ಲಿ ಅವಕಾಶ ಇರುವ ಕಾರಣ ಟೆಲಿಕಾಂ ಸಚಿವಾಲಯ ವೊಡಾಫೋನ್, ಏರ್‍ಟೆಲ್, ರಿಲಾಯನ್ಸ್, ಜಿಯೋ, ಐಡಿಯಾ ಸೇರಿದಂತೆ ಟೆಲಿಕಾಂ ಕಂಪೆನಿಗಳು, ಇಂಟರ್‍ನೆಟ್ ಸರ್ವಿಸ್ ಪ್ರೊವೈಡರ್‍ಗಳಿಗೆ ಬ್ಲಾಕ್ ಮಾಡುವ ಕುರಿತು ದೀರ್ಘಪತ್ರವೊಂದನ್ನು ಬರೆದಿದೆ.

    ಪತ್ರದಲ್ಲಿ ಇನ್ಸ್ ಟಾಗ್ರಾಂ, ವಾಟ್ಸಪ್, ಟೆಲಿಗ್ರಾಂ ಸೇರಿದಂತೆ ಉಳಿದಂತೆ ಮೊಬೈಲ್‍ನಲ್ಲಿ ಬಳಸುವ ಆ್ಯಪ್ ಗಳ ಮೇಲೆ ಹೇಗೆ ನಿರ್ಬಂಧ ಹೇರಬೇಕು ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ಸದ್ಯ ಚಾಲ್ತಿಯಲ್ಲಿರುವ ಕಾನೂನುಗಳಲ್ಲಿ ಬದಲಾವಣೆ ತರಬೇಕೆ ಎಂದು ಪ್ರಶ್ನಿಸಿದೆ.

    ಭಾರತದಲ್ಲಿ ಹೆಚ್ಚುತ್ತಿರುವ ಗುಂಪು ಹತ್ಯೆಗೆ ಸಾಮಾಜಿಕ ಜಾಲತಾಣಗಳು ಮತ್ತು ಮೆಸೇಜಿಂಗ್ ಅಪ್ಲಿಕೇಶನ್ ಗಳಲ್ಲಿ ಹರಿದಾಡುತ್ತಿರುವ ಸಂದೇಶ ಮತ್ತು ವಿಡಿಯೋಗಳೇ ಕಾರಣ. ಹೀಗಾಗಿ ಇವುಗಳ ಮೇಲೆ ನಿರ್ಬಂಧ ಹಾಕಬೇಕು ಎನ್ನುವ ಕೂಗುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತುರ್ತು ಸಂದರ್ಭದಲ್ಲಿ ಈ ಸೇವೆಗಳನ್ನು ಬ್ಲಾಕ್ ಮಾಡಲು ಚಿಂತನೆ ನಡೆಸಿದೆ.

    ಡಿಓಟಿ: Department of Telecommunications
    ಆಯ್‍ಎಸ್‍ಪಿ: Internet service provider
    ಐಟಿ ಕಾಯ್ದೆ: Information Technology Act