Tag: Isolation

  • ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಕೇಸ್ ದೃಢ; ಎಲ್ಲ ರಾಜ್ಯಗಳ ಆಸ್ಪತ್ರೆಗಳಲ್ಲಿ ಐಸೋಲೇಷನ್‌ ಸೌಲಭ್ಯ ಸಿದ್ಧತೆಗೆ ಕೇಂದ್ರ ಸೂಚನೆ

    ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಕೇಸ್ ದೃಢ; ಎಲ್ಲ ರಾಜ್ಯಗಳ ಆಸ್ಪತ್ರೆಗಳಲ್ಲಿ ಐಸೋಲೇಷನ್‌ ಸೌಲಭ್ಯ ಸಿದ್ಧತೆಗೆ ಕೇಂದ್ರ ಸೂಚನೆ

    ನವದೆಹಲಿ: ಭಾರತದಲ್ಲಿ ಮೊದಲ ಮಂಕಿಪಾಕ್ಸ್​ ಕೇಸ್​ ಪತ್ತೆಯಾಗಿದೆ. ಇತ್ತೀಚೆಗೆ ಆಫ್ರಿಕನ್ ದೇಶದಿಂದ ಭಾರತಕ್ಕೆ ಬಂದಿದ್ದರು ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್‌ (Monkeypox) ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Health Ministry) ಸೋಮವಾರ ದೃಢಪಡಿಸಿದೆ.

    ಭಾನುವಾರ (ಸೆ.8) ಶಂಕಿತ ವ್ಯಕ್ತಿಯಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಮಾದರಿ ಪರೀಕ್ಷೆ ಬಳಿಕ ಮಂಕಿಪಾಕ್ಸ್‌ ದೃಢಪಟ್ಟಿರುವುದಾಗಿ ಸಚಿವಾಲಯ ತಿಳಿಸಿದೆ. ರೋಗಿಯಲ್ಲಿ ಪಶ್ಚಿಮ ಆಫ್ರಿಕಾದ ಕ್ಲಾಡ್-2ನ Mpox ವೈರಸ್ ಇರುವಿಕೆಯನ್ನು ಪ್ರಯೋಗಾಲಯ ಪರೀಕ್ಷೆ ದೃಢಪಡಿಸಿದೆ. ಈ ಹಿನ್ನೆಲೆ ಅವರನ್ನು ಪ್ರತ್ಯೇಕವಾಗಿ ಇಡಲಾಗಿದೆ. ಸೋಂಕಿತ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸದೆ, ರೋಗಿಯು ಸ್ಥಿರವಾಗಿದ್ದಾರೆ, ಇತರೇ ರೋಗಲಕ್ಷಣಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.

    2022ರ ಜುಲೈ ತಿಂಗಳಲ್ಲಿ ಕೇರಳದಲ್ಲಿ 3 ಮಂಕಿಪಾಕ್ಸ್‌ ಪ್ರಕರಣ ಪತ್ತೆಯಾಗಿತ್ತು. UAE (ಯುನೈಟೆಡ್‌ ಅರಬ್‌ ಎಮಿರೇಟ್ಸ್‌)ಯಿಂದ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡ ನಂತರ ಉಲ್ಬಣಗೊಂಡಿತ್ತು. ಇದನ್ನೂ ಓದಿ: ಮುಡಾ ಕೇಸ್‌ನ್ನು ಬಿತ್ತರಿಸದಿರಲಿ ಅಂತಾ ದರ್ಶನ್ ಕೇಸ್ ಫೋಟೋ ವೈರಲ್ ಮಾಡ್ತಾ ಇದ್ದೀರಾ? – ಛಲವಾದಿ ಆಕ್ಷೇಪ

    ರಾಜ್ಯಗಳಿಗೆ ಸೂಚನೆ:
    ಮೊದಲ ಪ್ರಕರಣದ ವರದಿಯಾದ ಬೆನ್ನಲ್ಲೇ ಎಲ್ಲಾ ರಾಜ್ಯಗಳಿಗೆ ಪತ್ರ ಬರೆದಿರುವ ಕೆಂದ್ರ ಆರೋಗ್ಯ ಸಚಿವಾಲಯ, ಮಂಕಿಪಾಕ್ಸ್‌ ಬಗ್ಗೆ ಜನಸಾಮಾನ್ಯರಿಗಿರುವ ಅನಗತ್ಯ ಭೀತಿಯನ್ನು ನಿವಾರಿಸುವಂತೆ ಸೂಚನೆ ನೀಡಿದೆ. ಭಾರತದಲ್ಲಿ ಹೊಸದಾಗಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಎಲ್ಲಾ ಆಸ್ಪತ್ರೆಗಳಲ್ಲಿನ ಐಸೋಲೇಷನ್‌ ಸೌಲಭ್ಯ, ತರಬೇತಿ ಪಡೆದ ವೈದ್ಯರು ಇರುವಂತೆ ಮತ್ತು ಚಿಕಿತ್ಸೆಗೆ ಅಗತ್ಯವಿರುವ ಉಪಕರಣಗಳು ಇರುವಂತೆ ನೋಡಿಕೊಳ್ಳಬೇಕು. ಶಂಕಿತರು ಮತ್ತು ಸೋಂಕು ದೃಢಪಟ್ಟವರ ಸಂಪರ್ಕಕ್ಕೆ ಬಂದ ಇತರರನ್ನು ಪತ್ತೆ ಮಾಡುವ ಕೆಲಸವನ್ನು ಮಾಡಬೇಕು ಎಂದು ರಾಜ್ಯಗಳಿಗೆ ಸಚಿವಾಲಯ ಸೂಚನೆ ನೀಡಿದೆ.

    ಕರ್ನಾಟಕದಲ್ಲೂ ಹೈ ಅಲರ್ಟ್‌:
    ವಿದೇಶಗಳಲ್ಲಿ ಮಂಕಿ ಪಾಕ್ಸ್‌ ಆತಂಕ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಈಗಾಗಲೇ ನಿಗಾ ವಹಿಸಿದೆ. ಎರಡುವಾರಗಳ ಹಿಂದೆಯೇ ವೈದ್ಯಕೀಯ ಸಚಿವ ಶರಣ ಪ್ರಕಾಶ್ ಪಾಟೀಲ್, ಮಂಕಿಪಾಕ್ಸ್ ಕಾಯಿಲೆಗೆ ಮುಂಜಾಗ್ರತ ಕ್ರಮವಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 50 ಬೆಡ್ ಹಾಸಿಗೆ ಮೀಸಲು ಇಡಲಾಗಿದೆ ಎಂದು ತಿಳಿಸಿದ್ದರು. ಅಲ್ಲದೇ ರಾಜ್ಯದ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ (ICU) ಬೆಡ್ ಸಿದ್ಧತೆಗೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದರು. ಇದನ್ನೂ ಓದಿ: ‌’ವೆಟ್ಟೈಯಾನ್’ ಚಿತ್ರದ ಸಾಂಗ್ ರಿಲೀಸ್- ಮಂಜು ವಾರಿಯರ್ ಜೊತೆ ತಲೈವಾ ಸಖತ್ ಸ್ಟೆಪ್ಸ್

    ಮಂಕಿಪಾಕ್ಸ್ ಎಂದರೇನು?
    ಮಂಕಿಪಾಕ್ಸ್ ಎಂಬ ವೈರಸ್‌ನಿಂದ ಹರಡುವ ರೋಗವೇ ಮಂಕಿಪಾಕ್ಸ್. ಈ ವೈರಸ್ ಸಿಡುಬಿಗೆ ಕಾರಣವಾಗುವ ವೈರಾಣುವಿನ ವರ್ಗಕ್ಕೆ ಸೇರಿದ್ದಾಗಿದೆ. ಕ್ಲಾಡ್ ಐ ಮತ್ತು ಕ್ಲಾಡ್ ಐಐ ಎಂಬ ಎರಡು ವಿಧದ ಮಂಕಿಪಾಕ್ಸ್ ಸೋಂಕುಗಳಿವೆ. ಕ್ಲಾಡ್ ಐ ಮಧ್ಯ ಆಫ್ರಿಕಾದಲ್ಲಿ ಕಂಡುಬಂತು. ಕ್ಲಾಡ್ ಐಐ ಪಶ್ಚಿಮ ಆಫ್ರಿಕಾದಲ್ಲಿ ಪತ್ತೆಯಾಗಿದೆ. ಐಬಿ ಎಂದು ಕರೆಯಲ್ಪಡುವ ಕ್ಲಾಡ್ ಐನ ಹೊಸ ರೂಪಾಂತರ ಬಹುಬೇಗ ಹರಡುತ್ತದೆ.

    ಮೊದಲು ಪತ್ತೆಯಾಗಿದ್ದೆಲ್ಲಿ?
    ಆಫ್ರಿಕಾ ಖಂಡದ ದೇಶಗಳು. (1958ರಲ್ಲಿ ಮಂಕಿಪಾಕ್ಸ್ ಮೊದಲ ಬಾರಿಗೆ ಪತ್ತೆಯಾಯಿತು. ಈ ವೈರಾಣುವಿನ ಮೂಲ ಯಾವುದು ಎಂದು ಈವರೆಗೆ ಪತ್ತೆಯಾಗಿಲ್ಲ). ಇದನ್ನೂ ಓದಿ: ಹರಿಯಾಣದಲ್ಲಿ ಆಪ್‌-ಕಾಂಗ್ರೆಸ್‌ ಮೈತ್ರಿಗೆ ಬ್ರೇಕ್‌? – 20 ಎಎಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್‌

    ಸೋಂಕಿನ ಲಕ್ಷಣಗಳೇನು? 
    ಸೋಂಕು ತಗುಲಿದ ನಂತರ 6ರಿಂದ 13 ದಿನಗಳಲ್ಲಿ ರೋಗ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ 5ರಿಂದ 21 ದಿನಗಳ ಅವಧಿಯಲ್ಲೂ ಕಾಣಿಸಿಕೊಳ್ಳಬಹುದು.
    * ಜ್ವರ
    * ತೀವ್ರವಾದ ತಲೆನೋವು
    * ದುಗ್ಧರಸ ಗ್ರಂಥಿಗಳಲ್ಲಿ ಊತ
    * ಬೆನ್ನು ನೋವು
    * ಸ್ನಾಯು ನೋವು
    * ತೀವ್ರತರ ನಿತ್ರಾಣ
    * ಮುಖ, ಕೈ, ಕಾಲುಗಳು, ಹಸ್ತ, ಪಾದಗಳಲ್ಲಿ ದುದ್ದುಗಳು
    * 95% ಪ್ರಕರಣಗಳಲ್ಲಿ ಮುಖದಲ್ಲಿಯೇ ಹೆಚ್ಚು ದುದ್ದುಗಳು ಕಾಣಿಸಿಕೊಳ್ಳುತ್ತವೆ

    ಹರಡುವುದು ಹೇಗೆ?
    ಸೋಂಕು ಪೀಡಿತ ಪ್ರಾಣಿಯಿಂದ ಮನುಷ್ಯರಿಗೆ, ವ್ಯಕ್ತಿಯಿಂದ ವ್ಯಕ್ತಿಗೆ ಮಂಕಿಪಾಕ್ಸ್ ವೈರಸ್ ಹರಡುತ್ತದೆ.
    * ಸೋಂಕು ತಗುಲಿದ ಪ್ರಾಣಿಗಳ ಜೊತೆ ನೇರ ಸಂಪರ್ಕ ಹೊಂದುವ ಮನುಷ್ಯರಿಗೆ ರೋಗ ಹರಡುತ್ತದೆ.
    * ರೋಗಕಾರಕ ಪ್ರಾಣಿಗಳ ರಕ್ತ, ಚರ್ಮ, ಗಾಯದಿಂದ.
    * ರೋಗ ತಗುಲಿರುವ ಪ್ರಾಣಿಗಳ ಮಾಂಸ ಸೇವನೆ.
    * ಸೋಂಕಿತ ವ್ಯಕ್ತಿಯ ಉಸಿರಾಟದಿಂದ ಹೊರಬೀಳುವ ಕಣಗಳಿಂದ.
    * ಸೋಂಕಿತನ ಚರ್ಮದ ಗಾಯದಲ್ಲಿನ ಕೀವಿನಿಂದ.
    * ಹೊಕ್ಕುಳಬಳ್ಳಿಯ ಮೂಲಕ ತಾಯಿಯಿಂದ ಭ್ರೂಣಕ್ಕೆ ಸೋಂಕು ಪ್ರಸರಣ.
    * ಪ್ರಸವದ ವೇಳೆ ಅಥವಾ ಪ್ರಸವಾನಂತರ ನಿಕಟ ಸಂಪರ್ಕದಿಂದ.

    ತಡೆ ಹೇಗೆ?
    * ಚರ್ಮದಲ್ಲಿ ದುದ್ದು ಕಾಣಿಸಿಕೊಂಡವರಿಂದ ದೂರ ಇರುವುದು, ದುದ್ದು ಮುಟ್ಟದಿರುವುದು.
    * ಸೋಂಕಿತರನ್ನು ಆಲಂಗಿಸಿಕೊಳ್ಳಬೇಡಿ, ಲೈಂಗಿಕ ಸಂಪರ್ಕ ಮಾಡಬೇಡಿ.
    * ಸೋಂಕಿತರೊಂದಿಗೆ ಆಹಾರ ಸೇವನೆ, ಬಟ್ಟಲು, ಲೋಟ ಇತ್ಯಾದಿ ವಸ್ತುಗಳನ್ನು ಹಂಚಿಕೊಳ್ಳದಿರುವುದು.
    * ಸೋಂಕಿತರು ಬಳಿಸಿದ ಬಟ್ಟೆ, ಟವಲ್, ಹೊದಿಕೆ ಮುಟ್ಟದಿರುವುದು.
    * ಸೋಂಕಿತ ಪ್ರಾಣಿಗಳನ್ನು ಮುಟ್ಟದಿರುವುದು.
    * ಸೋಂಕಿತರಿಂದ ಪ್ರತ್ಯೇಕವಾಗಿ ಇರಬೇಕು.

  • 11 ದಿನ ಮರದ ಮೇಲೆ ಕುಳಿತ ಸೋಂಕಿತ ಬಾಲಕ

    11 ದಿನ ಮರದ ಮೇಲೆ ಕುಳಿತ ಸೋಂಕಿತ ಬಾಲಕ

    ಹೈದರಾಬಾದ್: ಕೊರೊನಾ ಸೋಂಕಿತ ವಿದ್ಯಾರ್ಥಿಯೊಬ್ಬ ಮನೆಯಲ್ಲಿ ಜಾಗವಿಲ್ಲದೇ ಮರವನ್ನೇರಿ ಕುಳಿತು 11 ದಿನ ಅಲ್ಲಿಯೇ ಐಸೋಲೇಷನ್ ಅಗಿರುವ ಘಟನೆ ನಡೆದಿದೆ.

    ತೆಲಂಗಾಣ ನಲಗೊಂಡ ಜಿಲ್ಲೆಯ ಕೊತಾನಂದಿಕೊಂಡ ಗ್ರಾಮದಲ್ಲಿ ವಾಸವಾಗಿರುವ ಶಿವ 11 ದಿನಗಳಿಂದ ಮರದ ಮೇಲೆಯೇ ಕುಳಿತ್ತಿದ್ದಾನೆ. ಈತನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಮನೆಯವರಿಗೆ ಹರಡಬಾರದು ಎಂದು ಪ್ರತ್ಯೇಕವಾಗಿ ಹೋಂ ಐಸೋಲೇಷನ್‍ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಆದರೆ ಇರುವ ಚಿಕ್ಕ ಮನೆಯಲ್ಲಿ ಪ್ರತ್ಯೇಕವಾಗಿರುವುದು ಕಷ್ಟ ಎಂದು ಬಾಲಕ ಮರವನ್ನೇರಿ ಕುಳಿತಿದ್ದಾನೆ.

    ಮನೆಯಲ್ಲಿ ಜಾಗವಿಲ್ಲದೇ, ಐಸೋಲೇಷನ್ ಸೆಂಟರ್‌ಗಳೂ ಇಲ್ಲದ ಊರುಗಳ ಜನರ ಸ್ಥಿತಿ ಇದೇ ಆಗಿದೆ. ನಮ್ಮಲ್ಲಿ ಯಾವುದೇ ಐಸೋಲೇಷನ್ ಸೆಂಟರ್‌ಗಳೂ ಇಲ್ಲ. ಇರುವುದಕ್ಕೆ ಚಿಕ್ಕ ಮನೆ. ಅಲ್ಲಿ ಪ್ರತ್ಯೇಕವಾಗಿರಲು ಸಾಧ್ಯವಿಲ್ಲ. ಕುಟುಂಬದ ಸದಸ್ಯರು ಜೊತೆಗೆ ಇದ್ದರೆ ಸೋಂಕು ಹರಡುತ್ತದೆ ಎನ್ನುವ ಭಯವಿತ್ತು. ಆದ್ದರಿಂದ ನಾನು ಮರದ ಮೇಲೆ ಕುಳಿತು 11 ದಿನ ಕಾಲ ಕಳೆದಿದ್ದೇನೆ. ಗ್ರಾಮದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಬೇಕಾದರೆ 5 ಕಿ.ಮೀ ಹೋಗಬೇಕು. ತುರ್ತು ಚಿಕಿತ್ಸೆಗಾಗಿ 30 ಕಿಮೀ ಹೋಗಬೇಕಾಗಿರುವ ಪರಿಸ್ಥಿತಿ ಇದೆ ಎಂದು ಬಾಲಕ ಶಿವ ಹೇಳಿದ್ದಾನೆ.

  • ರಾಯಚೂರಿನ ಕೊರೊನಾ ಹಾಟ್‍ಸ್ಪಾಟ್ ಗ್ರಾಮ ಸಂಪೂರ್ಣ ಸೋಂಕು ಮುಕ್ತ

    ರಾಯಚೂರಿನ ಕೊರೊನಾ ಹಾಟ್‍ಸ್ಪಾಟ್ ಗ್ರಾಮ ಸಂಪೂರ್ಣ ಸೋಂಕು ಮುಕ್ತ

    ರಾಯಚೂರು: ಜಿಲ್ಲೆಯ ತಲಮಾರಿ ಗ್ರಾಮದಲ್ಲಿ ಕಳೆದ ತಿಂಗಳು ಬರೋಬ್ಬರಿ 72 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು. ಇದರಿಂದಾಗಿ ಗ್ರಾಮದಲ್ಲಿ ಆತಂಕ ಸೃಷ್ಠಿಯಾಗಿತ್ತು, ಆದರೆ ಗ್ರಾಮಸ್ಥರು, ಜಿಲ್ಲಾಡಳಿತದ ದಿಟ್ಟ ಕ್ರಮದಿಂದಾಗಿ ಈ ಗ್ರಾಮದಲ್ಲಿ ಈಗ ಕೊರೊನಾ ದೂರವಾಗಿದ್ದು ಸೋಂಕು ಮುಕ್ತ ಗ್ರಾಮವಾಗಿದೆ.

    ಕೊರೊನಾದಿಂದ ಆಸ್ಪತ್ರೆ ಸೇರಿದವರು ಈಗ ಗುಣಮುಖರಾಗಿ ತಮ್ಮ ನಿತ್ಯ ಕೆಲಸದಲ್ಲಿ ತೊಡಗಿದ್ದಾರೆ. ಇಡೀ ಜಿಲ್ಲೆಗೆ ಕೊರೊನಾ ಹಾಟ್‍ಸ್ಪಾಟ್ ಆಗಿದ್ದ ಗ್ರಾಮ ಈಗ ಮಾದರಿಯಾಗಿದೆ. ಗ್ರಾಮದಲ್ಲಿ ನಡೆದ ಐದು ಮದುವೆಗಳಿಂದ ಹದಿನೈದು ದಿನಗಳಲ್ಲಿ ಗ್ರಾಮದಲ್ಲಿ ಬರೋಬ್ಬರಿ 72 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಸುಮಾರು 1,080 ಮನೆಗಳಿರುವ 5,000 ಜನಸಂಖ್ಯೆಯ ತಲಮಾರಿ ಗ್ರಾಮದಲ್ಲಿ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಬಂದಿತ್ತು.

    ಒಂದೇ ದಿನ 30 ಜನರಿಗೆ ಸೋಂಕು ದೃಢಪಟ್ಟ ನಂತರ ಏನಾದರೂ ಮಾಡಿ ನಿಯಂತ್ರಿಸಲೇ ಬೇಕೆಂದು ತೀರ್ಮಾನಿಸಿದ ಜಿಲ್ಲಾಡಳಿತ ಪ್ರತ್ಯೇಕವಾಗಿ ಲಾಕ್‍ಡೌನ್ ಘೋಷಣೆ ಮಾಡಿ ಗ್ರಾಮಕ್ಕೆ ಗ್ರಾಮವನ್ನೇ ಸೀಲ್‍ಡೌನ್ ಮಾಡುವ ಮೂಲಕ, ಹೊರಗಿನವರು ಬಾರದಂತೆ, ಗ್ರಾಮದಿಂದ ಹೊರಗಡೆ ಹೋಗದಂತೆ ಕಠಿಣ ಕ್ರಮಕೈಗೊಂಡಿತು. ಅಲ್ಲದೆ ಸಂಪರ್ಕಿತರು, ಗ್ರಾಮದಲ್ಲಿ ವಯಸ್ಸಾದವರ ಗಂಟಲ ದ್ರವ ಪರೀಕ್ಷೆ ಮಾಡಿ ಸೋಂಕಿತರಿಗೆ ಐಸೊಲೇಷನ್ ಮಾಡಿದ್ದು, ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಗ್ರಾಮದಲ್ಲಿ ಕೊರೊನಾ ನಿಯಂತ್ರಣಕ್ಕೆ ಯತ್ನಿಸಿದ್ದರು. ಇದರಿಂದಾಗಿ ಆಗಸ್ಟ್ ಆರಂಭದಿಂದ ಈ ಗ್ರಾಮದಲ್ಲಿ ಸೋಂಕು ಮತ್ತೆ ಪತ್ತೆಯಾಗಿಲ್ಲ.

    ಗ್ರಾಮದಲ್ಲಿ ಅಧಿಕ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಇಡೀ ಗ್ರಾಮದಲ್ಲಿ ಆತಂಕ ಮನೆ ಮಾಡಿತ್ತು. ನಂತರ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ನಿರ್ಧಾರಕ್ಕೆ ಗ್ರಾಮಸ್ಥರು ಅಗತ್ಯ ಸಹಕಾರ ನೀಡಿದ್ದರು. ಹಾಗಾಗಿ ಇಲ್ಲಿಯ ಸೋಂಕಿತರು ಈಗ ಚಿಕಿತ್ಸೆಯ ನಂತರ ಸಂಪೂರ್ಣವಾಗಿ ಗುಣಮುಖರಾಗಿ ಬಂದಿದ್ದು, ಬಹುತೇಕರು ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. ಕೊರೊನಾದಿಂದ ಆತಂಕಗೊಂಡವರು ಈಗ ನಿರಾತಂಕಗೊಂಡಿದ್ದಾರೆ. ಒಟ್ಟು 72 ಸೋಂಕಿತರು ಈಗ ಗುಣಮುಖರಾಗಿ ಬಂದಿದ್ದಾರೆ. ಅವರೆಲ್ಲರನ್ನೂ ಯರಮರಸ್ ನಲ್ಲಿರುವ ಕೊವಿಡ್ ಕೇರ್ ಸೆಂಟರ್ ನಲ್ಲಿ ಆರೈಕೆಗೆ ಇರಿಸಲಾಗಿತ್ತು. ಈಗ ಎಲ್ಲರೂ ಗುಣಮುಖರಾಗಿದ್ದು, ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ.

  • ಬಿಎಂಟಿಸಿ ಚಾಲಕರನ್ನು ಆಂಬುಲೆನ್ಸ್ ಚಾಲಕರನ್ನಾಗಿ ಬಳಿಸಿಕೊಳ್ಳಲು ಚಿಂತನೆ- ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್

    ಬಿಎಂಟಿಸಿ ಚಾಲಕರನ್ನು ಆಂಬುಲೆನ್ಸ್ ಚಾಲಕರನ್ನಾಗಿ ಬಳಿಸಿಕೊಳ್ಳಲು ಚಿಂತನೆ- ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್

    ಬೆಂಗಳೂರು: ಬಿಬಿಎಂಪಿ ನೂತನ ಆಯುಕ್ತರಾಗಿ ಇಂದು ಮಂಜುನಾಥ್ ಪ್ರಸಾದ್ ಅಧಿಕಾರ ಸ್ವೀಕಾರ ಮಾಡಿದರು.

    ಅಧಿಕಾರ ಸ್ವೀಕಾರದ ಬಳಿಕ ಸುದ್ದಿಗೋಷ್ಠಿ ಉದ್ದೇಶಿ ಮಾತನಾಡಿದ ಅವರು, ಕೋವಿಡ್ ನಿರ್ವಹಣೆ ಮಾಡುವುದು ಚಾಲೆಂಜ್ ಎಂದು ಹೇಳಿದ್ದಾರೆ. ಅಲ್ಲದೇ ಕಂದಾಯ ಇಲಾಖೆ ಹೆಚ್ಚುವರಿ ಜವಾಬ್ದಾರಿಯಿಂದ 2 ದಿನಗಳಲ್ಲಿ ಮುಕ್ತವಾಗಿ ಬಿಬಿಎಂಪಿ ಕಮಿಷನರ್ ಆಗಿ ಫುಲ್ ಟೈಮ್ ಆಗಿ ಕಾರ್ಯನಿರ್ವಹಿಸಲು ಸೂಚನೆ ಲಭಿಸಿದೆ ಎಂದು ಸ್ಪಷ್ಟಪಡಿಸಿದರು.

    ಕೋವಿಡ್ ನಿಯಂತ್ರಣ ಎಂಬುವುದು ಒಬ್ಬ ಕಮಿಷನರ್ ಮಾತ್ರ ಮಾಡುವ ಕೆಲಸವಲ್ಲ. ಹಿರಿಯ ಅಧಿಕಾರಿಗಳು, ಸಚಿವರು, ಮೇಯರ್, ವಲಯವರು ಉಸ್ತುವಾರಿಗಳು ಸೇರಿದಂತೆ ಬೆಂಗಳೂರಿನ ಜನರ ಸಹಕಾರದೊಂದಿಗೆ ಸೋಂಕಿನ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುವುದು. ನಗರದಲ್ಲಿ ಸದ್ಯ ಹೆಚ್ಚಾಗುತ್ತಿರುವ ಕೋವಿನ್ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬೇಕಿದೆ. ಮೊದಲ ಹಂತದಲ್ಲೇ ಸೋಂಕಿತರನ್ನು ಪತ್ತೆ ಮಾಡಿ ಚಿಕಿತ್ಸೆ ನೀಡುವತ್ತ ಹೆಚ್ಚಿನ ನೀಡುತ್ತೇವೆ ಎಂದರು.

    ಮೊದಲ ಹಂತದಲ್ಲೇ ಸೋಂಕಿತರನ್ನು ಗುರುತಿಸಿ ಅಗತ್ಯವಿರುವವರಿಗೆ ಚಿಕಿತ್ಸೆ ನೀಡಲು ಕ್ರಮಕೈಗೊಂಡರೇ ಸಾವಿನ ಸಂಖ್ಯೆ ಕಡಿಮೆ ಮಾಡಬಹುದು. ಹೋಂ ಐಶೋಲೇಶನ್, ಟೆಸ್ಟೆಡ್ ರಿಪೋರ್ಟ್, ಕೋವಿಡ್ ಕೇರ್ ಸೆಂಟರ್ ನಲ್ಲಿ ಸೌಲಭ್ಯಗಳಲ್ಲಿ ಸಮರ್ಪಕವಾಗಿ ವ್ಯವಸ್ಥೆ ಮಾಡಿಲ್ಲ ಎಂಬ ಆರೋಪವಿದ್ದು, ನಾಳೆಯಿಂದಲೇ ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದರು.

    ಮುಂದಿನ ದಿನಗಳಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರತಿಯೊಂದು ಝೋನ್‍ನಲ್ಲೂ ಮಾಡುತ್ತೇವೆ. ಕೋವಿಡ್ ಗೆಲ್ಲಲು ಜನ ಪ್ರತಿನಿಧಿಗಳ ಸಹಕಾರ ಜೊತೆಗೆ ಜನರ ಸಹಕಾರವೂ ಅಗತ್ಯವಿದೆ. ನಗರದದಲ್ಲಿ ಸೋಂಕಿತರಿಗೆ ಅಗತ್ಯ ಬೆಡ್ ನೀಡುವುದು ನಮ್ಮ ಮುಂದಿರುವ ಬಹುದೊಡ್ಡ ಸವಾಲು. ಈ ಕುರಿತು ಹೆಚ್ಚಿನ ಗಮನ ನೀಡಲಾಗುವುದು. ಸದ್ಯ ಕರ್ತವ್ಯಕ್ಕೆ ಹಾಜರಾಜದ ಬಿಬಿಎಂಪಿ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗುವುದು. ಇಲ್ಲವಾದಲ್ಲಿ ಕಾನೂನು ಕ್ರಮಕೈಗೊಳ್ಳುತ್ತೇವೆ. ಆದರೆ ಇದು ನಮಗೆ ಕೊನೆ ಆಯ್ಕೆ ಆಗಿರುತ್ತದೆ. ನಮ್ಮ ಸಿಬ್ಬಂದಿ ಮೇಲೆ ನಾವೇ ಕ್ರಮಕೈಗೊಳ್ಳುವ ಬದಲು ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗುವುದು ಎಂದರು.

    ನಗರದಲ್ಲಿ ಅಗತ್ಯವಿರುವ ಆಂಬುಲೆನ್ಸ್ ತೆಗೆದುಕೊಳ್ಳಲಾಗಿದೆ. 24 ಗಂಟೆ ಆಂಬುಲೆನ್ಸ್ ಸಿಗುವಂತೆ ನೋಡಿಕೊಳ್ಳಲು ಬಿಎಂಟಿಸಿ ಚಾಲಕರನ್ನು ಆಂಬುಲೆನ್ಸ್ ಚಾಲಕರನ್ನಾಗಿ ಬಳಿಸಿಕೊಳ್ಳಲು ಚಿಂತನೆ ಮಾಡಲಾಗಿದೆ. ಅಲ್ಲದೇ ಹೋಂ ಐಸೋಲೇಷನ್ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚು ಒತ್ತು ನೀಡಲಾಗುವುದು. ಈಗಾಗಲೇ ಸೋಂಕಿನಿಂದ ಐಸೋಲೇಷನ್ ಆಗಿರುವ ಸಿಬ್ಬಂದಿಗೆ ಬೆಂಬಲ ನೀಡುತ್ತೇನೆ. ಸಿಬ್ಬಂದಿ ಕೊರತೆಯನ್ನು ನೀಗಿಸಲು ಸ್ವಯಂಸೇವಕರನ್ನು ತೆಗೆದುಕೊಳ್ಳುತ್ತೇವೆ. ಅಲ್ಲದೇ ಪಾಲಿಕೆ ಕೋವಿಡ್-19 ಸಂಬಂಧಿಸಿದಂತೆ ಏನೇ ಖರೀದಿ ಮಾಡಿದ್ದರೂ ಪ್ರತಿ ಪೈಸೆ ಲೆಕ್ಕವನ್ನು ಪಾಲಿಕೆ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುತ್ತದೆ. ತೆರಿಗೆ ಹಣದಲ್ಲಿ ಮಾಡುವ ಕೆಲಸ ಎಲ್ಲವನ್ನು ಜನರ ಮುಂದಿಡುವ ಕೆಲಸ ಮಾಡಲಾಗುತ್ತೆ ಎಂದರು.

  • ಖಾಸಗಿ ಹೋಟೆಲ್‌ನಲ್ಲೂ ಇನ್ನುಮುಂದೆ ಐಸೋಲೇಷನ್‌ – ಒಂದು ದಿನಕ್ಕೆ ಎಷ್ಟು?

    ಖಾಸಗಿ ಹೋಟೆಲ್‌ನಲ್ಲೂ ಇನ್ನುಮುಂದೆ ಐಸೋಲೇಷನ್‌ – ಒಂದು ದಿನಕ್ಕೆ ಎಷ್ಟು?

    ಬೆಂಗಳೂರು: ಖಾಸಗಿ ಹೋಟೆಲ್ ನಲ್ಲಿ ಕೋವಿಡ್ ಕೇರ್ ಕೇಂದ್ರ ತೆರೆಯಲು ಆರೋಗ್ಯ ಇಲಾಖೆ ಸುತ್ತೋಲೆ ಪ್ರಕಟಿಸಿದೆ.

    ಈ ಮೂಲಕ ರೋಗ ಲಕ್ಷಣ ಇಲ್ಲದ ರೋಗಿಗಳು ಮನೆಯಲ್ಲೇ ಐಸೊಲೇಶನ್ ಆಗಬಹುದು. ಇದರ ಜೊತೆ ಸರ್ಕಾರಿ ಕೇಂದ್ರ ಅಲ್ಲದೇ ಖಾಸಗಿ ಹೋಟೆಲ್ ನಲ್ಲೂ ಐಸೊಲೇಶನ್ ಆಗಬಹುದು.

    ಹೋಟೆಲ್ ಐಸೋಲೇಷನ್ ಮೂರು ವಿಭಾಗ ಮಾಡಿರುವ ಸರ್ಕಾರ ದರವನ್ನು ನಿಗದಿ ಮಾಡಿದೆ. ಬಜೆಟ್‌ ಹೋಟೆಲಿಗೆ 8 ಸಾವಿರ ರೂ., 3 ಸ್ಟಾರ್‌ ಹೋಟೆಲಿಗೆ 10 ಸಾವಿರ ರೂ., 5ಸ್ಟಾರ್‌ ಹೋಟೆಲಿಗೆ 12 ಸಾವಿರ ರೂ. ದರವನ್ನು ನಿಗದಿ ಮಾಡಿದೆ.

    ಹೋಟೆಲ್‌ನಲ್ಲಿ‌ ಐಸೊಲೇಶನ್ ಆಗುವ ಸೋಂಕಿತ ವ್ಯಕ್ತಿಯ ಆರೋಗ್ಯ ತಪಾಸಣೆ ಸೇರಿದಂತೆ ಇತರ ಎಲ್ಲ ವ್ಯವಸ್ಥೆ ಬಿಬಿಎಂಪಿ ಮತ್ತು ಆರೋಗ್ಯ ‌ಇಲಾಖೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

  • ಕೋವಿಡ್ ವರದಿ ಬರೋ ಮುನ್ನವೇ ಆತ್ಮಹತ್ಯೆಗೆ ಶರಣು- ನೆಗೆಟಿವ್ ರಿಪೋರ್ಟ್

    ಕೋವಿಡ್ ವರದಿ ಬರೋ ಮುನ್ನವೇ ಆತ್ಮಹತ್ಯೆಗೆ ಶರಣು- ನೆಗೆಟಿವ್ ರಿಪೋರ್ಟ್

    ಉಡುಪಿ: ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    63 ವರ್ಷದ ಪ್ರಭಾಕರ್ ಪುತ್ರನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕೋವಿಡ್-19 ಸೋಂಕಿತನ ಪ್ರಾಥಮಿಕ ಸಂಪರ್ಕದ ಕಾರಣ ಜುಲೈ 5 ರಂದು ಉಡುಪಿ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡಿಗೆ ದಾಖಲಾಗಿದ್ದರು. ಆದರೆ ಆತ್ಮಹತ್ಯೆ ನಂತರ ಕೊರೊನಾ ಪರೀಕ್ಷಾ ವರದಿ ವೈದ್ಯರ ಕೈ ಸೇರಿದೆ.

    ಆತ್ಮಹತ್ಯೆ ಮಾಡಿಕೊಂಡ ಪ್ರಭಾಕರ ಅವರಿಗೆ ಕೊರೊನಾ ನೆಗೆಟಿವ್ ಬಂದಿದೆ. ಕೊರೊನಾ ಆತಂಕದಲ್ಲಿ ಆತ್ಮಹತ್ಯೆ ಸಾಧ್ಯತೆಯಿದೆ. ಜನ ಧೃತಿಗೇಡಬಾರದು, ರೋಗ ಲಕ್ಷಣ ಇದ್ದರೂ ಅದು ಕೋವಿಡ್ ಆಗಬೇಕಾಗಿಲ್ಲ ಎಂದು ಡಿಎಚ್‍ಒ ಡಾ. ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದರು.

    ಐಸೋಲೇಶನ್ ವಾರ್ಡಿನಲ್ಲಿ ಯಾರೂ ಇಲ್ಲದ ಸಂದರ್ಭ ಆತ್ಮಹತ್ಯೆಗೆ ಶರಣಾಗಿರಬಹುದು. ಘಟನೆ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಪರ್ಕಿತರ ಪ್ರಾಥಮಿಕ ಸಂಪರ್ಕಿತರಿಂದ ಎಲ್ಲರಿಗೂ ಸೋಂಕು ಹಬ್ಬುತ್ತದೆ ಎಂಬುದು ಸರಿಯಲ್ಲ.  ಸೋಂಕಿತ ಕೆಮ್ಮಿದರೆ, ಸೀನಿದರೆ ಇತರರಿಗೆ ಹರಡುವ ಸಾಧ್ಯತೆ  ಇರುತ್ತದೆ ಎಂದು ಡಿಎಚ್‍ಒ ತಿಳಿಸಿದರು.

  • ಪಕ್ಕದ ಮನೆಯವರಿಗೆ ಕೊರೊನಾ – ಐಸೊಲೇಷನ್‍ಗೆ ಒಳಗಾದ ಪ್ರಿಯಾಂಕ್ ಖರ್ಗೆ

    ಪಕ್ಕದ ಮನೆಯವರಿಗೆ ಕೊರೊನಾ – ಐಸೊಲೇಷನ್‍ಗೆ ಒಳಗಾದ ಪ್ರಿಯಾಂಕ್ ಖರ್ಗೆ

    ಬೆಂಗಳೂರು: ಪಕ್ಕದ ಮನೆಯವರೆಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಶಾಸಕ ಪ್ರಿಯಾಂಕ್ ಖರ್ಗೆ ಸ್ವತಃ ತಾವೇ ಐಸೊಲೇಷನ್‍ಗೆ ಒಳಗಾಗಿದ್ದಾರೆ.

    ಈ ವಿಚಾರವಾಗಿ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿರುವ ಪ್ರಿಯಾಂಕ್ ಖರ್ಗೆ, ಬೆಂಗಳೂರಿನ ನನ್ನ ನಿವಾಸದ ಪಕ್ಕದ ಮನೆಯವರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ನಾನು ಕೂಡ ಐಸೊಲೇಷನ್‍ಗೆ ಒಳಪಡುವ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದ್ದಾರೆ.

    https://www.facebook.com/priyank.kharge.5/posts/3211694922231464

    ಈ ಸಮಯದಲ್ಲಿ ನಾನು ಯಾರನ್ನೂ ಖುದ್ದಾಗಿ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ತಮ್ಮ ಸುರಕ್ಷತೆಯ ದೃಷ್ಟಿಯಿಂದ ನನ್ನನ್ನು ನಿವಾಸದ ಬಳಿ ಭೇಟಿ ಮಾಡಲು ತಾವು ಮುಂದಾಗಬಾರದೆಂದು ವಿನಂತಿಸಿಕೊಳ್ಳುತ್ತೇನೆ. ಆದ್ದರಿಂದ ಯಾವುದೇ ಸಮಸ್ಯೆ ಅಥವಾ ಸಲಹೆಗಳಿದ್ದರೆ, ನನ್ನನ್ನು ಭೇಟಿ ಮಾಡುವ ಬದಲು ನೇರವಾಗಿ ನನಗೆ ಕರೆ ಮಾಡಿ ಚರ್ಚಿಸಲು ಕೋರಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

  • ಹೆಲ್ತ್ ವಾರಿಯರ್ಸ್‌ಗೆ ಮನೆಯಲ್ಲೇ ಟ್ರೀಟ್‍ಮೆಂಟ್

    ಹೆಲ್ತ್ ವಾರಿಯರ್ಸ್‌ಗೆ ಮನೆಯಲ್ಲೇ ಟ್ರೀಟ್‍ಮೆಂಟ್

    – ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ರ‍್ಯಾಂಡಮ್ ಟೆಸ್ಟ್

    ಬೆಂಗಳೂರು: ಹೆಲ್ತ್ ವಾರಿಯರ್ಸ್‌ಗೆ ಮಹಾಮಾರಿ ಕೊರೊನಾ ವೈರಸ್ ಬಂದರೆ ಹೋಂ ಐಸೋಲೇಷನ್‍ಗೆ ಗ್ರೀನ್‍ಸಿಗ್ನಲ್ ನೀಡಲಾಗಿದೆ.

    ಹೆಲ್ತ್ ವಾರಿಯರ್ಸ್‌ಗೆ ಕೊರೊನಾ ಬಂದರೆ ಮನೆಯಲ್ಲೇ ಟ್ರೀಟ್‍ಮೆಂಟ್ ಸಿಗಲಿದೆ. ವೈದ್ಯರು, ನರ್ಸ್, ಪ್ಯಾರ ಮೆಡಿಕಲ್ ಸಿಬ್ಬಂದಿಗಷ್ಟೇ ಇದು ಅನ್ವಹಿಸಲಿದೆ. ಕೊರೊನಾ ಪಾಸಿಟಿವ್ ಇದ್ದಾಗ ಯಾವುದೇ ಗುಣಲಕ್ಷಣ ಇಲ್ಲದೇ ಇದ್ದರೆ ಹೋಂ ಐಸೋಲೇಷನ್ ಆಗಬಹುದು.

    ಹೆಲ್ತ್ ವಾರಿಯರ್ಸ್‌ಗೆ ಮನೆಯಲ್ಲೇ ಟ್ರೀಟ್ ಮೆಂಟ್ ತೆಗೆದುಕೊಳ್ಳುವ ವಿಧಾನ ಗೊತ್ತಿರುವುದರಿಂದ ಈ ನಿರ್ಧಾರ ಮಾಡಲಾಗಿದೆ. 7 ದಿನಗಳ ಬಳಿಕ ಹೋಂ ಐಸೋಲೇಷನ್‍ನಲ್ಲಿದ್ದು ನಂತರ ಮತ್ತೆ ಸ್ವ್ಯಾಬ್ ಟೆಸ್ಟ್ ಮಾಡಲಾಗುತ್ತೆ.

    ಇನ್ನೂ ಬಿಎಂಟಿಸಿ ಬಳಿಕ ಇದೀಗ ಕೆಎಸ್‌ಆರ್‌ಟಿಸಿ ಸಿಬ್ಬಂದಿ ರ‍್ಯಾಂಡಮ್ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಕೆಎಸ್‌ಆರ್‌ಟಿಸಿ ಎಲ್ಲಾ ಸಿಬ್ಬಂದಿಗೆ ಗಂಟಲು ದ್ರವ ಪರೀಕ್ಷೆಗೆ ನಿರ್ಧಾರ ಮಾಡಲಾಗಿದೆ. ಆಯಾ ಆಯಾ ಜಿಲ್ಲಾ ಘಟಕಗಳಲ್ಲಿ ಗಂಟಲು ದ್ರವ ಪರೀಕ್ಷೆಗೆ ಸೂಚನೆ ನೀಡಲಾಗಿದೆ.

  • ಕೊರೊನಾದಿಂದ ಗುಣಮುಖರಾದ ಹೊಸಪೇಟೆ ಮೂಲದ ಇಬ್ಬರು ಐಸೋಲೇಷನ್‍ನಿಂದ ಡಿಸ್ಚಾರ್ಜ್

    ಕೊರೊನಾದಿಂದ ಗುಣಮುಖರಾದ ಹೊಸಪೇಟೆ ಮೂಲದ ಇಬ್ಬರು ಐಸೋಲೇಷನ್‍ನಿಂದ ಡಿಸ್ಚಾರ್ಜ್

    ಬಳ್ಳಾರಿ: ಕೊರೊನಾ ವೈರಸ್ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಮೂಲದ ಇಬ್ಬರನ್ನು ಐಸೋಲೇಷನ್‍ನಿಂದ ಬಿಡುಗಡೆ ಮಾಡಲಾಯಿತು.

    ಪಿ-333 ಹಾಗೂ ಪಿ-337 ಸಂಖ್ಯೆಯ ಈ ಇಬ್ಬರಲ್ಲಿ ಕೊರೊನಾ ವೈರಸ್ ಪಾಸಿಟಿವ್ ದಾಖಲಾಗಿತ್ತು. ಸತತ 14 ದಿನಗಳ ಕಾಲ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಈ ಇಬ್ಬರನ್ನ ಜಿಲ್ಲಾ ಸರ್ಕಾರಿ ಕೋವಿಡ್-19 ಅಸ್ಪತ್ರೆಯಿಂದ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಡಲಾಯಿತು.

    ಈವರೆಗೂ ಒಟ್ಟಾರೆಯಾಗಿ ಏಳು ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಉಳಿದಂತೆ ಆರು ಮಂದಿ ಮಾತ್ರ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 13 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಈಗ ಒಟ್ಟು 7 ಜನ ಬಿಡುಗಡೆಯಾಗಿದ್ದು ಇನ್ನು ಉಳಿದ 6 ಜನರು ಚಿಕಿತ್ಸೆ ಮುಂದುವರಿದಿದೆ. 6 ಜನರು ಚಿಕಿತ್ಸೆಗೆ ಸ್ಪಂಧಿಸುತ್ತಿದ್ದು, ಸದ್ಯದಲ್ಲೇ ಅವರನ್ನು ಬಿಡುಗಡೆ ಮಾಡವ ವಿಶ್ವಾಸದಲ್ಲಿ ಜಿಲ್ಲಾಡಳಿತವಿದೆ. ಹೀಗಾಗಿ ಕರೋನಾ ಮುಕ್ತ ಜಿಲ್ಲೆಯಾಗಿ ಬಳ್ಳಾರಿ ಹೊರಹೊಮ್ಮುವ ಸಾದ್ಯತೆ ಹೆಚ್ಚಿದೆ.

     

  • ಆನೆಗೂ ಕೊರೊನಾ ವೈರಸ್ ಭೀತಿ – ಮಠದಲ್ಲೇ ಐಸೋಲೇಷನ್

    ಆನೆಗೂ ಕೊರೊನಾ ವೈರಸ್ ಭೀತಿ – ಮಠದಲ್ಲೇ ಐಸೋಲೇಷನ್

    ಗದಗ: ದೈತ್ಯ ಆನೆಗೆ ಇರುವೆಯೊಂದು ಕಾಟ ಕೊಡುವ ಕಥೆ ಕೇಳಿದ್ದೆವು. ಆದರೆ ಈಗ ಕಣ್ಣಿಗೆ ಕಾಣದ ಕೊರೊನಾ ವೈರಸ್ ಆನೆಗಳಲ್ಲೂ ಭೀತಿ ಹುಟ್ಟಿಸಿದ್ದು, ಆನೆಗಳಿಗೆ ಕೊರೊನಾ ಹರಡಬಾರದು ಎಂದು ಜಿಲ್ಲೆಯ ಶಿರಹಟ್ಟಿಯ ಫಕೀರೇಶ್ವರ ಮಠ ಹಾಗೂ ಲಕ್ಷ್ಮೇಶ್ವರ ಸಮೀಪದ ಮುಕ್ತಿ ಮಂದಿರದ ಆನೆಗಳನ್ನು ಮಠದಲ್ಲೇ ಐಸೋಲೇಷನ್‍ನಲ್ಲಿ ಇಡಲಾಗಿದೆ.

    ಪ್ರತಿದಿನ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶುವೈದ್ಯರು ಬಂದು ಎರಡೂ ಆನೆಗಳ ಆರೋಗ್ಯವನ್ನು ಪರೀಕ್ಷೆ ಮಾಡುತ್ತಿದ್ದಾರೆ. ಈ ಮೊದಲು ಎರಡೂ ಆನೆಗಳನ್ನು ಪ್ರತಿದಿನ ನಾಲ್ಕಾರು ಕಿಲೋಮೀಟರ್ ವಾಕಿಂಗ್ ಹಾಗೂ ಆಹಾರಕ್ಕಾಗಿ ಕರೆದುಕೊಂಡು ಹೋಗಲಾಗುತಿತ್ತು. ಆದರೆ ಸರ್ಕಾರದ ಲಾಕ್‍ಡೌನ್ ಆದೇಶದ ನಂತರ ಎರಡು ಆನೆಗಳಿಗೆ ಮಠದಲ್ಲೇ ಆರೈಕೆ ಮಾಡಲಾಗುತ್ತಿದೆ. ಅರಣ್ಯ ಇಲಾಖೆಯವರು ಎರಡು ಆನೆಗಳ ಆರೋಗ್ಯದ ಬಗ್ಗೆ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

    ಪ್ರತಿದಿನ ಮಠಗಳಿಗೆ ಭೇಟಿ ನೀಡಿ ಎರಡು ಆನೆಗಳ ಆರೋಗ್ಯದ ಬಗ್ಗೆ ಪಶುವೈದ್ಯರು ನಿಗಾ ವಹಿಸಿದ್ದಾರೆ. ಅಷ್ಟೇ ಅಲ್ಲದೇ ಆನೆಗಳನ್ನು ನೋಡಿಕೊಳ್ಳುತ್ತಿರುವ ಮಾವುತರಿಗೆ ಮಾಸ್ಕ್ ಧರಿಸಿಯೇ ಆನೆಗಳ ಆರೈಕೆ ಮಾಡಬೇಕು ಹಾಗೂ ಹೊರಗಿನ ಯಾವುದೇ ವ್ಯಕ್ತಿಗಳನ್ನು ಭೇಟಿ ಮಾಡದಂತೆ ಸೂಚನೆ ನೀಡಿದ್ದಾರೆ. ಸದ್ಯ ಎರಡೂ ಆನೆಗಳ ಆರೋಗ್ಯವು ಚೆನ್ನಾಗಿದೆ.

    ಈ ಹಿಂದೆ ನ್ಯೂಯಾರ್ಕ್‍ನಲ್ಲಿನ ಬ್ರಾನ್ಸ್ ಮೃಗಾಲಯದಲ್ಲಿನ ಹುಲಿಗೆ ಕೊರೊನಾ ವೈರಸ್ ತಗುಲಿರುವುದು ವರದಿಯಾಗಿತ್ತು. ಮನುಷ್ಯನಿಂದ ವನ್ಯ ಜೀವಿಗೆ ಕೊರೊನಾ ವೈರಸ್ ತಗುಲಿರುವುದು ಇದೇ ಮೊದಲ ಪ್ರಕರಣವಾಗಿದ್ದು, ಬಹುಶಃ ಝೂನಲ್ಲಿ ಕೆಲಸ ಮಾಡುತ್ತಿದ್ದ ಸೋಂಕಿತ ಸಿಬ್ಬಂದಿಯಿಂದ ಹುಲಿಗೆ ಸೋಂಕು ಹರಡಿದೆ ಎಂದು ಶಂಕಿಸಲಾಗಿತ್ತು. ಅಷ್ಟೇ ಅಲ್ಲದೆ ಕೊರೊನಾ ವೈರಸ್ ಬೆಕ್ಕುಗಳಿಗೂ ಹರಡಿರುವುದು ವರದಿಯಾಗಿತ್ತು. ಬೆಕ್ಕಿನ ಮಾಲೀಕನಿಗೆ ಕೊರೊನಾ ಬಂದಿದ್ದು ಆತ ಹೋಮ್ ಕ್ವಾರಂಟೈನ್‍ನಲ್ಲಿದ್ದ. ಇದರಿಂದಾಗಿ ವೈರಸ್ ಬೆಕ್ಕಿಗೂ ಬಂದಿದೆ. ಬೆಕ್ಕಿನಲ್ಲಿ ಕೊರೊನಾ ಸೋಂಕು ಬಂದಿರುವುದನ್ನು ಬೆಲ್ಜಿಯಂನ ಆರೋಗ್ಯ ಅಧಿಕಾರಿಗಳು ಖಚಿತ ಪಡಿಸಿದ್ದರು.

    ಹಾಗೆಯೇ ಹಾಂಕಾಂಗ್‍ನಲ್ಲಿ ಕೊರೊನಾ ಪೀಡಿತರ ಸಂಪರ್ಕಕ್ಕೆ ಬಂದಿದ್ದ 17 ನಾಯಿ ಮತ್ತು 8 ಬೆಕ್ಕುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ 2 ನಾಯಿಗಳಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ವೈರಸ್ ಮನುಷ್ಯನಿಂದ ಪ್ರಾಣಿಗಳಿಗೆ ಹೋಗಬಹುದು. ಆದರೆ ಪ್ರಾಣಿಗಳಿಂದ ಮನುಷ್ಯನಿಗೆ ಬರಬಹುದು ಎನ್ನುವುದನ್ನು ನಾನು ಒಪ್ಪುವುದಿಲ್ಲ ಎಂದು ಬೆಲ್ಜಿಯಂ ಆರೋಗ್ಯ ಅಧಿಕಾರಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದರು.