Tag: Islamabad

  • 14 ವರ್ಷದ ಬಾಲಕಿಯನ್ನು ಮದುವೆಯಾದ ಪಾಕ್ ಮುಖಂಡ

    14 ವರ್ಷದ ಬಾಲಕಿಯನ್ನು ಮದುವೆಯಾದ ಪಾಕ್ ಮುಖಂಡ

    ಇಸ್ಲಾಮಾಬಾದ್: 14 ವರ್ಷದ ಬಾಲಕಿಯನ್ನು ಬಲೂಚಿಸ್ತಾನ್ ನಿಂದ ಚುನಾಯಿತರಾಗಿದ್ದ ನ್ಯಾಷನಲ್ ಆಸೆಂಬ್ಲಿಯ ಸದಸ್ಯ ಮತ್ತು ಉಲೇಮಾ-ಇ- ಇಸ್ಲಾಂ ಮುಖಂಡ ಮೌಲಾನಾ ಸಲಾಹುದ್ದೀನ್ ಅಯುಬಿ ಪೊಲೀಸರು ವಿಚಾರಣೆಗೆ ಒಳಪಟ್ಟಿದ್ದಾರೆ.

    ಬಾಲಕಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು, ಶಾಲಾ ದಾಖಲಾತಿ ಪ್ರಕಾರ ಜನ್ಮ ದಿನ ಅಕ್ಟೋಬರ್ 28, 2006 ಆಗಿದೆ. ಆಕೆಗೆ ಮದುವೆಯ ವಯಸ್ಸಾಗಿಲ್ಲ ಎಂಬುದನ್ನು ಮಾಧ್ಯಮವೊಂದು ವರದಿ ಮಾಡಿದೆ. ಪಾಕ್ ಮಾಧ್ಯಮಗಳ ಪ್ರಕಾರ ನ್ಯಾಷನಲ್ ಆಸೆಂಬ್ಲಿ ಸದಸ್ಯ ಮೌಲಾನಾ ಸಲಾಹುದ್ದೀನ್ ಅಯುಬಿ ಅವರ ವಯಸ್ಸು 50ಕ್ಕೂ ಹೆಚ್ಚಾಗಿದೆ. ಈತ 14 ವರ್ಷದ ಬಾಲಕಿಯನ್ನು ವಿವಾಹವಾಗಿ ವಿಚಾರಣೆಗೆ ಒಳಪಟ್ಟಿದ್ದಾನೆ.

    ಪಾಕಿಸ್ತಾನದ ಕಾನೂನು ಪ್ರಕಾರ 16 ವರ್ಷಕ್ಕಿಂತ ಕೆಳಗಿನ ಬಾಲಕಿಯರ ವಿವಾಹಕ್ಕೆ ಅವಕಾಶ ಇಲ್ಲ. ಬಲವಂತದಿಂದ ಮದುವೆ ಮಾಡುವ ಪೋಷಕರಿಗೆ ಕಾನೂನು ಪ್ರಕಾರ ಶಿಕ್ಷೆ ನೀಡಲಾಗುತ್ತದೆ. ಈ ಮಧ್ಯೆ ಆಕೆಗೆ 16 ವರ್ಷ ವಯಸ್ಸಾಗುವವರೆಗೂ ಮದುವೆ ಮಾಡುವುದಿಲ್ಲ ಎಂದು ಬಾಲಕಿಯ ತಂದೆ ಸಂಬಂಧಿತ ಪ್ರಾಧಿಕಾರಿಗಳಿಗೆ ತಿಳಿಸಿರುವುದಾಗಿ ಚಿತ್ರಾಲ್ ಡಿಪಿಒ ಹೇಳಿದ್ದಾರೆ.

    ಸ್ವಯಂ ಸೇವಾ ಸಂಸ್ಥೆಯೊಂದು ಕೆಲವು ದಿನಗಳ ಹಿಂದೆ ದಾಖಲಿಸಿದ್ದ ದೂರಿನ ಅನ್ವಯ ಪೊಲೀಸರು ಬಾಲಕಿ ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಆದರೆ, ಆಕೆಯ ತಂದೆ ಮದುವೆ ಆಗಿಲ್ಲ ಎಂದಿದ್ದಾರೆ ಎಂದು ಚಿತ್ರಾಲ್ ಪೊಲೀಸ್ ಠಾಣೆ ಎಸ್‍ಹೆಚ್‍ಒ ಇನ್ಸ್‍ಪೆಕ್ಟರ್ ಸಜ್ಜಾದ್ ಅಹ್ಮದ್ ಹೇಳಿದ್ದಾರೆ.

  • ಇಬ್ಬರೂ ಹಿಂದೂ ಹುಡುಗಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರ

    ಇಬ್ಬರೂ ಹಿಂದೂ ಹುಡುಗಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇಬ್ಬರು ಹಿಂದೂ ಹುಡುಗಿಯರನ್ನ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿರುವ ಬಗ್ಗೆ ವರದಿಯಾಗಿದೆ. ಪಾಕಿಸ್ತಾನದ ಅಲ್ಪಸಂಖ್ಯಾತ ಮತ್ತು ಮಾನವ ಹಕ್ಕುಗಳ ಹೋರಾಟ ಸಮಿತಿಯ ಟೀಕೆಯ ನಡುವೆಯೇ ಅಪಹರಿಸಿದ ಎರಡೇ ದಿನದಲ್ಲಿಯೇ ಈ ಮತಾಂತರ ನಡೆದಿದೆ.

    ಹಿಂದೂ ಯುವತಿಯನ್ನು ಏಕ್ತಾ ಕುಮಾರಿ ಎಂದು ಗುರುತಿಸಲಾಗಿದೆ. ಇಸ್ಲಾಂ ಧರ್ಮದ ಧರ್ಮಗುರು ಎಂದು ಗುರುತಿಸಿಕೊಂಡಿರುವ ಮಿಯಾನ್ ಅಬ್ದುಲ್ ಖಲೀಕ್ ಎಂಬಾತ ತನಗೆ ಪಾಕಿಸ್ತಾನದ ಸೇನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇನೆ ಎಂದು ನಂಬಿಸಿ ಬಲವಂತವಾಗಿ ಇಸ್ಲಾಂಗೆ ಮಾತಾಂತರಿಸಿದ್ದಾನೆ.

    ಬಲೂಚಿಸ್ತಾನದ ಸಿಬಿ ನಗರದ ನಿವಾಸಿಯಾಗಿರುವ ಏಕ್ತಾ ಕುಮಾರಿಯು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರು. ಅನಿಲ್ ಕುಮಾರ್ ಎಂಬವರ ಪುತ್ರಿಯಾದ ಏಕ್ತಾಳನ್ನು ಸ್ಥಳೀಯ ಮುಸ್ಲಿಂ ಯಾರ್ ಮೊಹಮ್ಮದ್ ಭೂಟ್ಟೊ ಅಪಹರಿಸಿದ್ದ ಎಂದು ವರದಿಯಾಗಿತ್ತು.

    ಏಕ್ತಾಳನ್ನು ಭೂಟ್ಟೊ ಬಲವಂತವಾಗಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ದಾರಕಿಯಲ್ಲಿರುವ ದರ್ಗಾ ಎ ಆಲಿಯಾ ಭಾರ್ಚುಂಡಿ ಷರೀಪ್‍ಗೆ ಕರೆದುಕೊಂಡು ಹೋಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ್ದಾನೆ. ನಂತರ ಹಿಂದೂ ಯುವತಿಯ ಹೆಸರನ್ನು ಆಯಿಷಾ ಎಂದು ಬದಲಾಯಿಸಿ ಮದುವೆ ಆಗಿದ್ದಾನೆ.

    ಈ ಹಿಂದೆ ಧನಿ ಕೊಹ್ಲಹಿ ಎಂಬ ಹಿಂದೂ ಯುವತಿಯನ್ನು ಮುಸ್ಲಿಂ ಯುವಕನೊಬ್ಬ ಬಲವಂತವಾಗಿ ಜುಮಾ ಬಜಾರ್ ಎಂಬ ಪ್ರದೇಶದಿಂದ ಅಪಹರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ್ದ. ಈ ಪ್ರಕರಣದ ನಂತರ ಧನಿ ಕೊಹ್ಲಹಿ ಪೋಷಕರು ಮಗಳನ್ನು ಹುಡುಕಿದ್ದರು ಆಕೆ ಎಲ್ಲಿದ್ದಾಳೆಂಬ ಸಣ್ಣ ಸುಳಿವು ಸಿಕ್ಕಿರಲಿಲ್ಲ ಮತ್ತು ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಯಾವುದೇ ಪ್ರಕರಣ ಕೂಡ ದಾಖಲಿಸಿಲ್ಲ.

    ಈ ಎಲ್ಲಾ ಪ್ರಕರಣಗಳಿಂದಾಗಿ ಕಂಗಾಲಾಗಿರುವ ಪಾಕಿಸ್ತಾನದಲ್ಲಿರುವ ಹಿಂದೂಗಳು ಮತ್ತೆ ಎರಡು ದಿನಗಳಲ್ಲಿ ಒಟ್ಟೊಟ್ಟಿಗೆ ನಡೆದ ಘಟನೆಯಿಂದ ಗಾಬರಿಗೊಂಡಿದ್ದಾರೆ. ಇದರೊಂದಿಗೆ ಪಾಕಿಸ್ತಾನದ ಇರ್ಮಾನ್ ಖಾನ್ ಸರ್ಕಾರ ಮತ್ತು ಬಹು ಸಂಖ್ಯಾತ ಮುಸ್ಲಿಂರಿಂದ ಕೂಡಿರುವ ಪಾಕಿಸ್ತಾನ್ ದೇಶ, ಅಲ್ಪಸಂಖ್ಯಾತರಿಗೆ ಮತ್ತು ಮಾನವ ಹಕ್ಕುಗಳ ಹೋರಾಟ ಸಮಿತಿಗೆ ಮತ್ತೆ ದ್ರೋಹ ಬಗೆದಂತಾಗಿದೆ ಎಂದು ಪಾಕಿಸ್ತಾನ ಹಿಂದೂಗಳು ಆಕ್ರೋಶ ಹೊರ ಹಾಕಿದ್ದಾರೆ.

    ಈ ಎರಡೂ ಪ್ರಕರಣಗಳನ್ನು ನೋಡಿದ ನಂತರ ಸ್ಥಳೀಯ ಆಡಳಿತವಾಗಲಿ ಅಥವಾ ಪೊಲೀಸ್ ಇಲಾಖೆಯಾಗಲಿ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಮೌನಹರಿಸಿ ಆರೋಪಿಯ ವಿರುದ್ಧ ಕೇಸು ದಾಖಲಿಸಿಕೊಳ್ಳಲು ವಿಫಲವಾಗಿದೆ. ಹಲವು ಪ್ರಕರಣಗಳನ್ನು ಗಮನಿಸಿದಾಗ ಹಿಂದೂ ಯುವತಿಯರನ್ನು ಮದುವೆಯಾದ ನಂತರ ಅವರಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಕೊಳ್ಳಲಾಗುತ್ತದೆ ಅಥವಾ ವೇಶ್ಯಾವಾಟಿಕೆಗೆ ಮಾರಲಾಗುತ್ತದೆ ಎಂದು ವರದಿಯಾಗಿದೆ.

    ಮುಸ್ಲಿಂ ಪಾದ್ರಿಯಾಗಿ ಗುರುತಿಸಿಕೊಂಡಿದ್ದ ಭೂಟ್ಟೊ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ದಾರಕಿಯಲ್ಲಿರುವ ದರ್ಗಾ ಎ ಆಲಿಯಾ ಭಾರ್ಚುಂಡಿ ಷರೀಪ್ ಮಸೀದಿಯಲ್ಲಿರುತ್ತಿದ್ದ. ಐಶಾರಾಮಿ ಜೀವನ ನಡೆಸುತ್ತಿದ್ದ ಭೂಟ್ಟೊ ಪ್ರತಿದಿನ ಬೆಂಗಾವಲುಗಾರರನ್ನು ತನ್ನ ಜೊತೆಯಾಗಿಸಿಕೊಂಡು ಪ್ರಯಾಣಿಸುತ್ತಿದ್ದ. 2008ರಿಂದ 2013ರ ವರೆಗೆ ಪಾಕಿಸ್ತಾನದ ರಾಷ್ಟ್ರೀಯಾ ಅಸೆಂಬ್ಲಿಯಲ್ಲಿ ಸದಸ್ಯನಾಗಿದ್ದ.

    ನಂತರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ ಜೊತೆ ಕೈಜೋಡಿಸಿ 200 ಹಿಂದೂ ಯುವತಿಯರನ್ನು ಮತಾಂತರಗೊಳಿಸಿರುವುದಾಗಿ ಹೇಳಿಕೆ ಕೊಟ್ಟಿದ್ದ. 2012 ರಲ್ಲಿ ಸ್ಥಳೀಯ ಶಿಕ್ಷಕನ ಮಗಳಾದ ಹಿಂದೂ ಯುವತಿ ರಿಂಕಲ್ ಕುಮಾರಿ ಎಂಬ ಯುವತಿಯನ್ನು ಮತಾಂತರಗೊಳಿಸಿ ಮೊದಲ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದ.

  • ಧೋನಿಯನ್ನು ಹೊಗಳಿ ಸಂಕಷ್ಟಕ್ಕೆ ಸಿಲುಕಿದ ಪಾಕ್ ಮಾಜಿ ಕ್ರಿಕೆಟಿಗ

    ಧೋನಿಯನ್ನು ಹೊಗಳಿ ಸಂಕಷ್ಟಕ್ಕೆ ಸಿಲುಕಿದ ಪಾಕ್ ಮಾಜಿ ಕ್ರಿಕೆಟಿಗ

    ಇಸ್ಲಾಮಾಬಾದ್: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯನ್ನು ಹೊಗಳಿ ಪಾಕಿಸ್ತಾನ ಮಾಜಿ ಸ್ಪಿನ್ನರ್ ಸಕ್ಲೈನ್ ಮುಷ್ತಾಕ್ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಆ.15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದ ಧೋನಿ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಮಾತನಾಡಿದ್ದ ಮುಷ್ತಾಕ್, ವಿದಾಯ ಪಂದ್ಯ ಏರ್ಪಡಿಸದ ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಧೋನಿರಂತಹ ದಿಗ್ಗಜ ಕ್ರಿಕೆಟಿಗರನ್ನು ಈ ರೀತಿ ನಡೆಸಿಕೊಳ್ಳುತ್ತೀರಾ? ಹಲವು ಅಭಿಮಾನಿಗಳು ಧೋನಿಗೆ ವಿದಾಯ ಪಂದ್ಯ ಏರ್ಪಡಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ ಎಂದು ಹೇಳಿದ್ದರು.

    ಧೋನಿರನ್ನು ಹೊಗಳಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಮುಷ್ತಾಕ್ ಗದರಿದೆ. ಭಾರತ ಹಾಗೂ ಪಾಕ್ ನಡುವೆ ಎದುರಾಗಿರುವ ಸಂದಿಗ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪಿಸಿಬಿ ಈ ಹಿಂದೆಯೇ ಆಟಗಾರರು, ಕೋಚ್, ಸಹಾಯಕ ಸಿಬ್ಬಂದಿಗೆ ಕೆಲ ಆದೇಶಗಳನ್ನು ಜಾರಿ ನೀಡಿತ್ತು. ಭಾರತ ಕ್ರಿಕೆಟ್ ಆಟಗಾರರು ಮತ್ತು ಬಿಸಿಸಿಐ ಕುರಿತು ಯಾವುದೇ ರೀತಿಯ ವಿಮರ್ಶೆ, ಕಾಮೆಂಟ್ ಮಾಡದಂತೆ ನಿರ್ದೇಶನ ನೀಡಿತ್ತು. ಸದ್ಯ ಪಾಕಿಸ್ತಾನ ಕ್ರಿಕೆಟಿಗರ ಡೆವಲಪ್‍ಮೆಂಟ್ ಹೆಡ್ ಆಗಿ ಪಿಸಿಬಿಯಲ್ಲಿ ಮುಷ್ತಾಕ್ ಕಾರ್ಯನಿರ್ವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪಿಸಿಬಿ ಮುಷ್ತಾಕ್ ಅವರನ್ನು ಪಿಸಿಬಿ ಗದರಿದೆ.

    ಈ ಕುರಿತು ಮಾತನಾಡಿರುವ ಪಿಸಿಬಿ ಅಧಿಕಾರಿಯೊಬ್ಬರು, ಧೋನಿಯನ್ನು ಹೊಗಳಿ ಬಿಸಿಸಿಐ ವಿರುದ್ಧ ವಿಮರ್ಶೆ ಮಾಡಿದ ಮುಷ್ತಾಕ್ ಅವರ ನಡೆ ಸರಿಯಲ್ಲ. ಪಾಕ್ ತಂಡದೊಂದಿಗೆ ಕೆಲಸ ಮಾಡುತ್ತಿರುವ ಕೋಚ್‍ಗಳು ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಆದ್ದರಿಂದ ಪಿಸಿಬಿ ಉದ್ಯೋಗಿಗಳು ಯೂಟ್ಯೂಬ್ ಚಾನೆಲ್ ನಡೆಸದಂತೆ ಹೊಸ ಆದೇಶವನ್ನು ಜಾರಿ ಮಾಡಲಾಗಿದೆ. ಯಾವುದೇ ಚಾನೆಲ್‍ಗೆ ಸಂದರ್ಶನ ನೀಡುವ ಮುನ್ನ ಪಿಸಿಬಿ ಅನುಮತಿ ಪಡೆಯುವುದು ಕಡ್ಡಾಯ ಎಂದು ಹೇಳಿದ್ದಾರೆ.

  • ‘ಕೊರೊನಾ ಕುರಿತು ಹರಟೆ’- ಪಾಕ್ ವಿಮಾನ ದುರಂತಕ್ಕೆ ಪೈಲಟ್‍ಗಳ ನಿರ್ಲಕ್ಷ್ಯವೇ ಕಾರಣ

    ‘ಕೊರೊನಾ ಕುರಿತು ಹರಟೆ’- ಪಾಕ್ ವಿಮಾನ ದುರಂತಕ್ಕೆ ಪೈಲಟ್‍ಗಳ ನಿರ್ಲಕ್ಷ್ಯವೇ ಕಾರಣ

    ಇಸ್ಲಾಮಾಬಾದ್: ಪಾಕಿಸ್ತಾನ ಕರಾಚಿಯಲ್ಲಿ ಸಂಭವಿಸಿದ್ದ ಘೋರ ವಿಮಾನ ದುರಂತಕ್ಕೆ ಪೈಲಟ್‍ಗಳ ನಿರ್ಲಕ್ಷ್ಯವೇ ಕಾರಣ ಎಂದು ತನಿಖೆ ವೇಳೆ ಬಹಿರಂಗಗೊಂಡಿದೆ. 97 ಮಂದಿ ಈ ದುರಂತದಲ್ಲಿ ಸಾವನ್ನಪ್ಪಿದ್ದರು.

    ಲಾಹೋರ್ ನಿಂದ ಹೊರಟ್ಟಿದ್ದ ಏರ್‌ಬಸ್ ಎ320 ವಿಮಾನ ಕರಾಚಿಯಲ್ಲಿ ಲ್ಯಾಂಡಿಂಗ್ ವೇಳೆ ಪೈಲಟ್, ಏರ್ ಟ್ರಾಫಿಕ್ ಕಂಟ್ರೋಲರ್ ನಿರ್ಲಕ್ಷ್ಯದಿಂದ ಕೊರೊನಾ ವೈರಸ್ ಕುರಿತು ಮಾತನಾಡುತ್ತಿದ್ದರು ಎಂದು ಪಾಕ್ ವಿಮಾನಯಾನ ಸಚಿವ ಗುಲಾಮ್ ಸರ್ವಾರ್ ಖಾನ್, ಪಾರ್ಲಿಮೆಂಟ್‍ನಲ್ಲಿ ಜೂನ್ 24 ರಂದು ಮಾಹಿತಿ ನೀಡಿದ್ದಾರೆ.

    ಘಟನೆಯ ಕುರಿತು ತನಿಖೆ ಕೈಗೊಂಡಿದ್ದ ತಂಡ, ಪೈಲಟ್ ಹಾಗೂ ಏರ್ ಟ್ರಾಫಿಕ್ ಕಂಟ್ರೋಲರ್ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯ ವೇಳೆ ದೃಢಪಡಿಸಿದೆ. ಪೈಲಟ್, ಕೋ-ಪೈಲೆಟ್ ಇಬ್ಬರು ವಿಮಾನದ ಲ್ಯಾಂಡಿಂಗ್ ಮೇಲೆ ಗಮನ ನೀಡಿರಲಿಲ್ಲ. ಕೊರೊನಾ ಮಹಾಮಾರಿಯ ಕುರಿತ ಚರ್ಚೆಯ ಮುಳುಗಿದ್ದರು. ವಿಮಾನ ಹಾರಾಟ ನಡೆಸಲು 100 ರಷ್ಟು ಫಿಟ್ ಆಗಿತ್ತು. ಯಾವುದೇ ತಾಂತ್ರಿಕ ಸಮಸ್ಯೆ ಇರಲಿಲ್ಲ ಎಂದು ಸಚಿವರು ವಿವರಿಸಿದ್ದಾರೆ.

    ಪಾಕಿಸ್ತಾನದಲ್ಲಿ ಮೇ 22ರಂದು ನಡೆದ ಈ ದುರ್ಘಟನೆಯಲ್ಲಿ 97 ಮಂದಿ ಸಾವನ್ನಪ್ಪಿದ್ದರು. ಇಬ್ಬರು ಮಾತ್ರ ಜೀವಂತವಾಗಿ ಬದುಕುಳಿದಿದ್ದರು. ಘಟನೆಯ ಕುರಿತು ಪಾಕ್ ಸರ್ಕಾರ ಉನ್ನತ ತನಿಖೆಗೆ ಆದೇಶ ನೀಡಿತ್ತು. ಈ ತನಿಖೆಯಲ್ಲಿ ಪಾಕ್‍ನ ಉನ್ನತ ಅಧಿಕಾರಿಗಳ ಜೊತೆಗೆ ಫ್ರಾನ್ಸ್ ದೇಶದ ತಜ್ಞರು ಕೂಡ ಭಾಗಿಯಾಗಿದ್ದರು. ವಿಮಾನ ಪತನದ ಬಳಿಕ ಲಭಿಸಿದ ವಾಯ್ಸ್ ರೆಕಾರ್ಡ್, ಡೇಟಾ ಪರಿಶೀಲನೆ ನಡೆಸಿದ ಬಳಿಕ ಪ್ರಾಥಮಿಕ ವರದಿಯನ್ನು ಸಲ್ಲಿಸಲಾಗಿತ್ತು.

  • ಪಾಕ್ ಕ್ರಿಕೆಟ್‍ನಲ್ಲಿ ಕೊರೊನಾ ಕೋಲಾಹಲ- ಮತ್ತೆ 7 ಕ್ರಿಕೆಟಿಗರಿಗೆ ಪಾಸಿಟಿವ್

    ಪಾಕ್ ಕ್ರಿಕೆಟ್‍ನಲ್ಲಿ ಕೊರೊನಾ ಕೋಲಾಹಲ- ಮತ್ತೆ 7 ಕ್ರಿಕೆಟಿಗರಿಗೆ ಪಾಸಿಟಿವ್

    ಇಸ್ಲಾಮಾಬಾದ್: ಇಂಗ್ಲೆಂಡ್ ವಿರುದ್ಧ ಸುದೀರ್ಘ ಕ್ರಿಕೆಟ್ ಟೂರ್ನಿಗೆ ಸಿದ್ಧತೆ ನಡೆಸಿದ್ದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಕೊರೊನಾ ವೈರಸ್ ಶಾಕ್ ನೀಡಿದೆ. ಈ ವರ್ಷ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಇಂಗ್ಲೆಂಡ್‍ನಲ್ಲಿ ಮೂರು ಟೆಸ್ಟ್, ಮೂರು ಟಿ20 ಪಂದ್ಯಗಳನ್ನು ಪಾಕಿಸ್ತಾನ ಆಡಬೇಕಿದೆ. ಈಗಾಗಲೇ ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್ 29 ಸದಸ್ಯರ ತಂಡವನ್ನು ಪ್ರಕಟಿಸಿತ್ತು. ಅಲ್ಲದೇ ಕೊರೊನಾ ಕಾರಣದಿಂದ ಒಂದು ತಿಂಗಳ ಮುನ್ನವೇ ಇಂಗ್ಲೆಂಡ್‍ಗೆ ಆಟಗಾರರನ್ನು ಕಳುಹಿಸಿಕೊಡುವ ಚಿಂತನೆಯನ್ನು ನಡೆಸಿತ್ತು.

    ಆಟಗಾರರನ್ನು ಇಂಗ್ಲೆಂಡ್‍ಗೆ ಕಳುಹಿಸುವ ನಿಟ್ಟಿನಲ್ಲಿ ಆಟಗಾರರಿಗೆ ಕೊರೊನಾ ಟೆಸ್ಟ್ ಮಾಡಿತ್ತು. ಈ ಟೆಸ್ಟ್ ನಲ್ಲಿ ಆಟಗಾರರಾದ ಶದಾಬ್ ಖಾನ್, ಹೈದರ್ ಅಲಿ, ಹ್ಯಾರಿಸ್ ರೌಫ್‍ಗೆ ನಿನ್ನೆಯಷ್ಟೇ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಇಂದು ಮತ್ತೆ 7 ಆಟಗಾರರಿಗೆ ಕೊರೊನಾ ಪಾಸಿಟಿವ್ ದೃಢವಾಗಿರುವುದನ್ನು ಪಿಸಿಬಿ ಖಚಿತ ಪಡಿಸಿದೆ.

    ಇಂದಿನ ವರದಿಯ ಅನ್ವಯ ಫಖರ್ ಜಮಾನ್, ಇಮ್ರಾನ್ ಖಾನ್, ಕಾಶಿಫ್ ಭಟ್ಟಿ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್ ಮೊಹಮ್ಮದ್ ರಿಜ್ವಾನ್ ಮತ್ತು ವಹಾಬ್ ರಿಯಾಜ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇದರೊಂದಿಗೆ ಪಾಕಿಸ್ತಾನದ 10 ಕ್ರಿಕೆಟ್ ಆಟಗಾರಿಗೆ ಸೋಂಕು ಹರಡಿದೆ.

    ಪಿಸಿಬಿ ನೀಡಿರುವ ಮಾಹಿತಿಯ ಅನ್ವಯ ಇಂಗ್ಲೆಂಡ್ ಕ್ರಿಕೆಟ್ ಟೂರ್ನಿಗೆ ಆಯ್ಕೆಯಾಗಿದ್ದ 27 ಆಟಗಾರರು ಹಾಗೂ ಸಿಬ್ಬಂದಿಗೆ ಸೇರಿ 35 ಮಂದಿಗೆ ಕೊರೊನಾ ಟೆಸ್ಟ್ ನಡೆಸಿತ್ತು. ಸದ್ಯ 10 ಮಂದಿಗೆ ಕೊರೊನಾ ದೃಢಪಟ್ಟಿರುವುದರಿಂದ ಬಹುನಿರೀಕ್ಷಿತ ಇಂಗ್ಲೆಂಡ್ ಟೂರ್ನಿ ಮೇಲೆ ಕೊರೊನಾ ಕರಿ ನೆರಳು ಆವರಿಸಿದೆ. ಪಾಕ್ ಹಾಗೂ ಇಂಗ್ಲೆಂಡ್ ವಿರುದ್ಧ ಟೂರ್ನಿಯನ್ನು ಸಂಪೂರ್ಣವಾಗಿ ಬಯೋ ಸೆಕ್ಯೂರ್ ವಾತಾವರಣದಲ್ಲಿ ನಿರ್ವಹಿಸುವುದಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಪ್ರಕಟಿಸಿತ್ತು. ಪಾಕಿಸ್ತಾನ ಮಾಜಿ ಕ್ರಿಕೆಟ್ ಆಟಗಾರರಾದ ತೌಫಿಖ್ ಉಮರ್, ಅಫ್ರಿದಿ ಕೊರೊನಾ ಸೋಂಕಿಗೆ ಒಳಗಾಗಿದ್ದರು.

  • ರಾಜಕೀಯ ಪ್ರವೇಶದ ಕುರಿತು ಕೊನೆಗೂ ಮೌನ ಮುರಿದ ಅಫ್ರಿದಿ

    ರಾಜಕೀಯ ಪ್ರವೇಶದ ಕುರಿತು ಕೊನೆಗೂ ಮೌನ ಮುರಿದ ಅಫ್ರಿದಿ

    ಇಸ್ಲಾಮಾಬಾದ್: ಇತ್ತೀಚೆಗೆ ಪಾಕಿಸ್ತಾನ ಮಾಜಿ ಆಟಗಾರ ಅಫ್ರಿದಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಕಾಶ್ಮೀರ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ಹೇಳಿಕೆ ನೀಡಿ ಭಾರೀ ಟೀಕೆಗೆ ಗುರಿಯಾಗಿದ್ದರು. ಕೊರೊನಾ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ತಮ್ಮ ಸಂಸ್ಥೆಯ ಮೂಲಕ ಅಫ್ರಿದಿ ನೆರವು ನೀಡಿ ಇದೇ ಸಂದರ್ಭವನ್ನು ಬಳಸಿಕೊಂಡು ಭಾರತದ ವಿರುದ್ಧ ಟೀಕೆ ಮಾಡಿದ್ದರು. ಇದರೊಂದಿಗೆ ಅಫ್ರಿದಿ ರಾಜಕೀಯ ಪ್ರವೇಶ ಮಾಡುವ ಉದ್ದೇಶದಿಂದ ಭಾರತದ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದರು.

    ರಾಜಕೀಯ ಪ್ರವೇಶದ ಕುರಿತ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿರುವ ಅಫ್ರಿದಿ, ತನಗೆ ರಾಜಕೀಯ ಪ್ರವೇಶ ಮಾಡುವ ಉದ್ದೇಶವಿಲ್ಲ. ಅಂತಹ ಉದ್ದೇಶ ಹೊಂದಿದ್ದರೆ ಯಾವಾಗಲೋ ಹೋಗುತ್ತಿದೆ. ಹಲವು ಪಕ್ಷಗಳು ತಮ್ಮ ಪಕ್ಷಕ್ಕೆ ಆಗಮಿಸುವಂತೆ ಆಹ್ವಾನ ಕೂಡ ನೀಡಿದ್ದವು. ಈಗಾಗಲೇ ನಾನು ರಾಜಕೀಯ ನಾಯಕರು ಮಾಡುವ ಸೇವಾ ಕೆಲಸವನ್ನೇ ಮಾಡುತ್ತಿದ್ದೇನೆ. ನನ್ನ ಕಾರ್ಯಕ್ಕೆ ಎಲ್ಲಾ ಪಕ್ಷದ ನಾಯಕರು ಬೆಂಬಲ ನೀಡುತ್ತಿದ್ದಾರೆ. ಸದ್ಯ ಪ್ರಧಾನಿ ಇರ್ಮಾನ್ ಖಾನ್ ಉತ್ತಮವಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ನಾವು ಅವರಿಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ. ಇದನ್ನು ಓದಿ: ‘ಕಾಶ್ಮೀರ ಎಂದಿಗೂ ನಮ್ಮದೇ’- ಅಫ್ರಿದಿ ಹೇಳಿಕೆಗೆ ಧವನ್ ತಿರುಗೇಟು

    ಕಾಶ್ಮೀರ ಹಾಗೂ ಮೋದಿ ಕುರಿತ ನನ್ನ ಹೇಳಿಕೆ ವೈರಲ್ ಆದ ಬಳಿಕ ಅನಿವಾರ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದಲ್ಲಿ ಪ್ರಜೆಗಳು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಅವರಿಗೂ ತಿಳಿದಿದೆ. ನನಗೆ ಸಹಾಯ ಮಾಡಿದ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಅವರ ಮೇಲೆ ಏರ್ಪಟ್ಟ ಒತ್ತಡವೇ ಬಹುದೊಡ್ಡ ಸಮಸ್ಯೆಯಾಗಿತ್ತು. ಆದ್ದರಿಂದಲೇ ಅವರು ನಿಸ್ಸಾಯಕರಾಗಿದ್ದರು. ಇದಕ್ಕಿಂತ ನಾನು ಹೆಚ್ಚು ಏನನ್ನು ಹೇಳಲು ಬಯಸುವುದಿಲ್ಲ ಎಂದು ಅಫ್ರಿದಿ ಸ್ಪಷ್ಟನೆ ನೀಡಿದ್ದಾರೆ. ಇದನ್ನು ಓದಿ:  ಕಾಶ್ಮೀರ ಎಂದಿಗೂ ನಮ್ಮದೇ ಎಂದ ಅಫ್ರಿದಿಗೆ ಪಾಕ್ ಮಾಜಿ ಕ್ರಿಕೆಟಿಗನಿಂದಲೇ ಛೀಮಾರಿ

    ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೊರೊನಾದಿಂದ ಸಮಸ್ಯೆ ಎದುರಿಸುತ್ತಿದ್ದ ಮಂದಿಗೆ ಸಹಾಯ ನೆರವು ನೀಡಿದ್ದ ಅಫ್ರಿದಿ, ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿ ಮೋದಿ ವಿರುದ್ಧ ಟೀಕೆ ಮಾಡಿದ್ದರು. ಪಾಕಿಸ್ತಾನದ ಸೈನದ ಬಲದಷ್ಟು ಸೈನಿಕರನ್ನು ಪ್ರಧಾನಿ ಮೋದಿ ಕಾಶ್ಮೀರದಲ್ಲಿ ನಿಯೋಜಿಸಿದ್ದಾರೆ. ಆತನ ಮನಸ್ಸಿನಲ್ಲಿ ಕೊರೊನಾಗೂ ಹೆಚ್ಚಿನ ರೋಗ ಇದೇ ಎಂದು ಹೇಳಿದ್ದರು.

  • ಕರಾಚಿ ವಿಮಾನ ದುರಂತಕ್ಕೆ 97 ಮಂದಿ ಬಲಿ

    ಕರಾಚಿ ವಿಮಾನ ದುರಂತಕ್ಕೆ 97 ಮಂದಿ ಬಲಿ

    ಇಸ್ಲಾಮಾಬಾದ್: ಪಾಕಿಸ್ತಾನಾದ ಕರಾಚಿ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ 97 ಮಂದಿ ಮೃತಪಟ್ಟಿದ್ದು, ಇಬ್ಬರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಲ್ಯಾಂಡ್ ಆಗುವ ಒಂದು ನಿಮಿಷ ಮೊದಲೇ ವಿಮಾನ ಪತನ

    ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ (ಪಿಐಎ)ನ ಪ್ರಯಾಣಿಕರ ವಿಮಾನವು ಶುಕ್ರವಾರ ಲಾಹೋರ್‌ನಿಂದ ಕರಾಚಿಗೆ ಪ್ರಯಾಣಿಸುತ್ತಿತ್ತು. ಆದರೆ ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪುವ ಒಂದು ನಿಮಿಷ ಮೊದಲೇ ವಿಮಾನ ದುರ್ಘಟನೆ ನಡೆದಿತ್ತು. ವಿಮಾನವು ಕರಾಚಿಯ ಮಾಡೆಲ್ ಕಾಲೋನಿಯ ಜಿನ್ನಾ ಗಾರ್ಡನ್ ಪ್ರದೇಶದಲ್ಲಿ ಬಿದ್ದಿದೆ. ಇದರಿಂದ ಸುಮಾರು 25ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.

    ವಿಮಾನ ದುರಂತದಲ್ಲಿ 97 ಜನರು ಮೃತಪಟ್ಟಿದ್ದಾರೆ. ಇಬ್ಬರು ಅಪಘಾತದಿಂದ ಬದುಕುಳಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ಪಾಕಿಸ್ತಾನದ ಸಿಂಧ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

    ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ವಿಮಾನದಲ್ಲಿ 91 ಮಂದಿ ಪ್ರಯಾಣಿಕರಿದ್ದರು. ಜೊತೆಗೆ ಎಂಟು ಮಂದಿ ಸಿಬ್ಬಂದಿಯಿದ್ದರು. ವಿಮಾನದಲ್ಲಿ 51 ಪುರುಷರು, 31 ಮಹಿಳೆಯರು, 9 ಮಕ್ಕಳು ಸೇರಿ 91 ಪ್ರಯಾಣಿಕರು ಇದ್ದರು ಎಂದು ಸಿಂಧ್ ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದರು.

    ಶುಕ್ರವಾರ ಮಧ್ಯಾಹ್ನ ವಿಮಾನ ದುರಂತ ಸಂಭವಿಸಿದ್ದು, ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಚರಣೆ ಮುಂದುವರಿದಿದ್ದು, ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ. ಮೃತರಲ್ಲಿ 19 ಮಂದಿಯನ್ನು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ.

    ವಿಮಾನ ದುರಂತ:
    ವಿಮಾನವು ಕರಾಚಿಯ ಮಾಡೆಲ್ ಕಾಲೋನಿಯ ಜಿನ್ನಾ ಗಾರ್ಡನ್ ಪ್ರದೇಶದಲ್ಲಿ ಬಿದ್ದಿದೆ. ಪರಿಣಾಮ ಅಲ್ಲಿನ ಅನೇಕ ಮನೆಗಳಿಗೆ ಬೆಂಕಿ ಹೊತ್ತಿ ಉರಿದಿದೆ. ಪಾಕಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ, ಪೈಲಟ್ ಎಂಜಿನ್ ವೈಫಲ್ಯದ ಬಗ್ಗೆ ವಾಯು ಸಂಚಾರ ನಿಯಂತ್ರಕಕ್ಕೆ ಮಾಹಿತಿ ನೀಡಿದ್ದರು. ಆದರೆ ವಿಮಾನ ಇನ್ನೇನು ಲ್ಯಾಂಡ್ ಆಗುವ ಹಂತದಲ್ಲಿ ಇದ್ದಾಗಲೇ ಸಂಪರ್ಕ ಕಳೆದುಕೊಂಡಿತ್ತು.

    ಅಪಘಾತಕ್ಕೀಡಾದ ವಿಮಾನ ಏರ್‌ಬಸ್-320, 15 ವರ್ಷ ಹಳೆಯದಾಗಿತ್ತು. ಪೈಲಟ್‍ನ ಹೆಸರು ಸಜ್ಜಾದ್ ಗುಲ್ ಎಂದು ವರದಿಯಾಗಿದೆ. ವಿಮಾನವನ್ನು ವಸತಿ ಪ್ರದೇಶವನ್ನು ದಾಟಿಸಲು ಪೈಲಟ್ ಪ್ರಯತ್ನಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದರು.

  • ನಾವು ಒಟ್ಟಿಗೆ ಮೇಲುಗೈ ಸಾಧಿಸುತ್ತೇವೆ- ಹಿಂದೂ ದೇವಾಲಯದಲ್ಲಿ ಅಫ್ರಿದಿ ಕಿಟ್ ಹಂಚಿಕೆ

    ನಾವು ಒಟ್ಟಿಗೆ ಮೇಲುಗೈ ಸಾಧಿಸುತ್ತೇವೆ- ಹಿಂದೂ ದೇವಾಲಯದಲ್ಲಿ ಅಫ್ರಿದಿ ಕಿಟ್ ಹಂಚಿಕೆ

    – ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಮಂದಿರದಲ್ಲಿ ಅಫ್ರಿದಿ

    ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಹಿಂದೂ ದೇವಾಯಗಳಿಗೆ ಭೇಟಿ ನೀಡಿ ಅಲ್ಲಿನ ಬಡವರಿಗೆ ಆಹಾರ ಹಂಚಿಕೆ ಮಾಡಿದ್ದಾರೆ.

    ಕೊರೊನಾದಿಂದ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದೆ. ಜನರು ಊಟವಿಲ್ಲದೇ ಪರಾದಾಡುವಂತೆ ಮಾಡಿದೆ. ಈ ಸಮಯದಲ್ಲಿ ಕೆಲ ಸೆಲೆಬ್ರಿಟಿಗಳು ಹಾಗೂ ಹಣವಂತರು ಬಡ ಜನರಿಗೆ ನೆರವಾಗುವ ಮೂಲಕ ಹೃದಯವಂತಿಕೆ ಮೆರೆಯುತ್ತಿದ್ದಾರೆ. ಈಗ ತನ್ನ ದೇಶ ಸಂಕಷ್ಟಕ್ಕೆ ಸಿಲುಕಿದೆ ಎಂದು ಶಾಹಿದ್ ಅಫ್ರಿದಿ ಅವರು ಕೂಡ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

    ಪಾಕಿಸ್ತಾನದಲ್ಲೂ ಕೊರೊನಾ ಹೆಚ್ಚಿರುವ ಕಾರಣ ಅಲ್ಲಿನ ಸೆಲೆಬ್ರಿಟಿಗಳು, ಕ್ರಿಕೆಟ್ ಆಟಗಾರರು ಅಲ್ಲಿನ ಬಡಜನರ ನೆರವಿಗೆ ಬರುತ್ತಿದ್ದಾರೆ. ಅಂತೆಯೇ ಶಾಹಿದ್ ಅಫ್ರಿದಿ ಅವರು ಕೂಡ ಪಾಕಿಸ್ತಾನ ಗ್ರಾಮೀಣ ಭಾಗಗಳಿಗೆ ತೆರಳಿ ಅಲ್ಲಿನ ಬಡವರಿಗೆ ಮತ್ತು ನಿರ್ಗತಿಕರಿಗೆ ಮೂಲಭೂತವಾಗಿ ಬೇಕಾದ ವಸ್ತುಗಳು, ಆಹಾರ ಕಿಟ್‍ಗಳನ್ನು ಒದಗಿಸುತ್ತಿದ್ದಾರೆ. ಜೊತೆಗೆ ತಮ್ಮ ಶಾಹಿದ್ ಅಫ್ರಿದಿ ಫೌಂಡೇಶನ್ ಕಡೆಯಿಂದ ಪಾಕಿಸ್ತಾನದ ಎಲ್ಲ ಕಡೆಗೂ ತೆರಳಿ ಬಡವರಿಗೆ ಸಹಾಯ ಮಾಡುತ್ತಿದ್ದಾರೆ.

    https://twitter.com/SAfridiOfficial/status/1259461825860702208

    ಈ ವಿಚಾರವಾಗಿ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿರುವ ಅಫ್ರಿದಿ, ನಾವು ಒಟ್ಟಿಗೆ ಇದ್ದೇವೆ ಮತ್ತು ನಾವು ಒಟ್ಟಿಗೆ ಮೇಲುಗೈ ಸಾಧಿಸುತ್ತೇವೆ. ಏಕತೆ ನಮ್ಮ ಶಕ್ತಿ. ಅಗತ್ಯ ಆಹಾರ ಪದಾರ್ಥಗಳನ್ನು ತಲುಪಿಸಲು ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಮಂದಿರ ಮತ್ತು ಭೇಟಿ ನೀಡಿದ್ದೆವು. ಎಂದು ಬರೆದುಕೊಂಡು ತಾವು ಹೋಗಿ ಆಹಾರ ಸಾಮಗ್ರಿ ನೀಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    https://twitter.com/SAfridiOfficial/status/1249680900641771521

    ಜೊತೆಗೆ ಕೊರೊನಾದಿಂದ ಕಷ್ಟಕ್ಕೆ ಒಳಗಾಗಿರುವ ಜನರಿಗೆ ಸಹಾಯ ಮಾಡಲು ಇನ್ನೂ ಒಂದು ಹೆಜ್ಚೆ ಮುಂದೇ ಹೋಗಿರುವ ಅವರು, ಅಫ್ರಿದಿ ನಟಿಸಿರುವ ಜಾಹೀರಾತುಗಳ ಬ್ರಾಂಡ್ ಕಂಪನಿಗಳಿಗೆ ಕೂಡ ಜನರಿಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ನಾನು ಕೆಲಸ ಮಾಡಿದ ಬ್ರಾಂಡ್ ಕಂಪನಿಗಳು ನನಗೆ ಹಣ ನೀಡುವುದು ಬೇಡ. ಅದರ ಬದಲು ಫುಡ್ ಕಿಟ್ ನೀಡಿ ನಾನು ಅದನ್ನು ಬಡವರಿಗೆ ತಲುಪಿಸುತ್ತೇನೆ ಎಂದು ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ.

    ಶಾಹಿದ್ ಅಫ್ರಿದಿ ಎಂಬ ಪೌಂಡೇಶನ್ ಆರಂಭಿಸಿರುವ ಅಫ್ರಿದಿ, ಈ ಪ್ರತಿಸ್ಠಾನದ ಕಡೆಯಿಂದ ಹಲವಾರ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಈ ನಡುವೆ ಕೊರೊನಾ ಸಮಯದಲ್ಲಿ ಅಫ್ರಿದಿ ಫೌಂಡೇಶನ್ ಗೆ ಬೆಂಬಲ ನೀಡಿ ಎಂದು ಭಾರತದ ಕ್ರಿಕೆಟ್ ಆಟಗಾರರಾದ ಯುರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಅವರು ಮನವಿ ಮಾಡಿದ್ದರು. ಈ ವಿಚಾರವಾಗಿ ಯುವ ಭಜ್ಜಿ ಮೇಲೆ ಸಿಡಿದೆದ್ದಿದ್ದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

  • ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗೋ ಆಸೆ ವ್ಯಕ್ತಪಡಿಸಿದ ಅಖ್ತರ್

    ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗೋ ಆಸೆ ವ್ಯಕ್ತಪಡಿಸಿದ ಅಖ್ತರ್

    ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಭಾರತ ಕ್ರಿಕೆಟ್ ತಂಡದ ಕೋಚ್ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

    ಲೈವ್ ಸಂದರ್ಶನವೊಂದರಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿರುವ ಅಖ್ತರ್, ಅವಕಾಶ ಲಭಿಸಿದರೆ ತಾವು ಟೀಂ ಇಂಡಿಯಾ ಬೌಲಿಂಗ್ ಕೋಚ್ ಸಿದ್ಧ. ಹೆಚ್ಚು ಅಕ್ರಮಣಕಾರಿ, ವೇಗದ ಬೌಲಿಂಗ್ ಮಾಡುವ ಆಟಗಾರರನ್ನು ನನ್ನ ಮಾರ್ಗದರ್ಶನದಲ್ಲಿ ರೂಪಿಸುವ ಸಾಮರ್ಥ್ಯವಿದೆ. ಇದುವರೆಗೂ ನಾನು ಅನುಭವದ ಮೂಲಕ ಪಡೆದಿರುವ ಜ್ಞಾನವನ್ನು ಮತ್ತಷ್ಟು ಮಂದಿಗೆ ಹರಡುವುದು ನನ್ನ ಜವಾಬ್ದಾರಿ ಎಂದು ವಿವರಿಸಿದ್ದಾರೆ.

    ಕೇವಲ ಟೀಂ ಇಂಡಿಯಾ ಬೌಲಿಂಗ್ ಕೋಚ್ ಮಾತ್ರವಲ್ಲದೇ, ಐಪಿಎಲ್‍ನಲ್ಲಿ ಕೆಕೆಆರ್ ತಂಡದ ಕೋಚ್ ಆಗುವುದಕ್ಕೂ ಸಿದ್ಧ ಎಂದಿದ್ದಾರೆ. ಅಂದಹಾಗೆ ಅಖ್ತರ್, ಐಪಿಎಲ್ ಮೊದಲ ಆವೃತ್ತಿಯಲ್ಲಿ ಕೆಕೆಆರ್ ತಂಡದ ಪರ ಆಡಿದ್ದರು. ಇದೇ ವೇಳೆ ತಮ್ಮ ಬಯೋಪಿಕ್ ಸಿನಿಮಾ ಕುರಿತು ಮಾತನಾಡಿರುವ ಅಖ್ತರ್, ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಬಯೋಪಿಕ್‍ನಲ್ಲಿ ನಟಿಸಿದರೆ ಇಷ್ಟ. ತಮ್ಮ ಜೀವನದ ಬಹುದೊಡ್ಡ ಆಸೆಯೂ ಕೂಡ ಹೌದು ಎಂದು ಅಖ್ತರ್ ಹೇಳಿದ್ದಾರೆ.

    ಪಾಕಿಸ್ತಾನದ ಪರ 46 ಟೆಸ್ಟ್ ಪಂದ್ಯಗಳಲ್ಲಿ 176 ವಿಕೆಟ್, 163 ಏಕದಿನ ಪಂದ್ಯಗಳಲ್ಲಿ 247 ವಿಕೆಟ್, 15 ಟಿ20 ಪಂದ್ಯಗಳಲ್ಲಿ 19 ವಿಕೆಟ್ ಗಳಿಸಿದ್ದಾರೆ. ಎಲ್ಲಾ ಕ್ರಿಕೆಟ್ ಮಾದರಿಗಳಲ್ಲಿ 224 ಪಂದ್ಯಗಳಿಂದ 444 ವಿಕೆಟ್ ಗಳನ್ನು ಅಖ್ತರ್ ಪಡೆದಿದ್ದಾರೆ. 2003ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಅಖ್ತರ್ ಅತ್ಯಂತ ವೇಗದ ಬೌಲಿಂಗ್ ಮಾಡಿದ ದಾಖಲೆ ನಿರ್ಮಿಸಿದ್ದರು. ಅಭಿಮಾನಿಗಳು ಅಖ್ತರ್ ಅವರನ್ನು ‘ರಾವಲ್ಪಿಂಡಿ ಎಕ್ಸ್ ಪ್ರೆಸ್’ ಎಂದೇ ಕರೆಯುತ್ತಾರೆ.

    ಸಚಿನ್ ಅವರೊಂದಿಗೆ ಇದ್ದ ಸ್ನೇಹದ ಕುರಿತು ಮಾತನಾಡಿರುವ ಅಖ್ತರ್, ನಾನು ಸಚಿನ್ ಅವರನ್ನು ನೋಡಿದ್ದೆ. ಆದರೆ ಅವರಿಗೆ ಇರುವ ಜನಪ್ರಿಯತೆ ಅರಿವು ನನಗಿರಲಿಲ್ಲ. ಅವರು ನನ್ನ ಉತ್ತಮ ಸ್ನೇಹಿತ. 1998ರಲ್ಲಿ ನಾನು ಚೆನ್ನೈನಲ್ಲಿದ್ದ ಸಂದರ್ಭದಲ್ಲಿ ಅವರನ್ನು ಅಭಿಮಾನಿಗಳು ‘ಕ್ರಿಕೆಟ್ ದೇವರು’ ಎಂದು ಕರೆಯುತ್ತಾರೆ ಎಂದು ತಿಳಿಯಿತು. ಆ ಟೂರ್ನಿಯ ಸಂದರ್ಭದಲ್ಲಿ ನಾನು ಸಾಧ್ಯವಾದಷ್ಟು ವೇಗವಾಗಿ ಬೌಲಿಂಗ್ ಮಾಡಿದ್ದೆ. ನನ್ನ ಬೌಲಿಂಗ್ ವೇಗವನ್ನು ಭಾರತೀಯರು ಮೆಚ್ಚಿದ್ದರು. ಆದ್ದರಿಂದಲೇ ನನಗೆ ಅಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ ಎಂದು ಅಖ್ತರ್ ಹೇಳಿದ್ದಾರೆ.

  • ಶೋಯೆಬ್‍ಗೆ ಶಾಕ್ ಕೊಟ್ಟ ಪಿಸಿಬಿ- 10 ಕೋಟಿ ರೂ. ಮಾನನಷ್ಟ ಕೇಸ್

    ಶೋಯೆಬ್‍ಗೆ ಶಾಕ್ ಕೊಟ್ಟ ಪಿಸಿಬಿ- 10 ಕೋಟಿ ರೂ. ಮಾನನಷ್ಟ ಕೇಸ್

    ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಹೆಬ್ ಅಖ್ತರ್‍ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶಾಕ್ ಕೊಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿವಾದತ್ಮಾಕ ಹೇಳಿಕೆ ನೀಡುತ್ತಿರೋ ಅಖ್ತರ್ ವಿರುದ್ಧ ಪಿಸಿಬಿ ಸಲಹೆಗಾರ ತಫಝುಲ್ ರಿಝ್ವಿ ಮಾನನಷ್ಟ ಹಾಗೂ ಕ್ರಿಮಿನಲ್ ವಿಚಾರಣೆಗೆ ಪ್ರಕರಣ ದಾಖಲಿಸಿದ್ದಾರೆ.

    ಈ ಕುರಿತು ಪಿಸಿಬಿ ಅಧಿಕೃತವಾಗಿ ಮಾಹಿತಿ ನೀಡಿದ್ದು, ಪಿಸಿಬಿ ಕಾನೂನು ಸಲಹೆಗಾರ ರಿಝ್ವಿ ತಮ್ಮ ನಿರ್ದೇಶನದಲ್ಲಿ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಿದೆ.

    ಪಾಕಿಸ್ತಾನ ಕ್ರಿಕೆಟ್ ಆಟಗಾರ ಉಮರ್ ಅಕ್ಮಲ್ ವಿರುದ್ಧ 3 ವರ್ಷ ನಿಷೇಧ ವಿಧಿಸಿದ್ದ ವಿಚಾರದ ಕುರಿತು ಅಖ್ತರ್ ಮಾತನಾಡಿದ್ದು, ಈ ವೇಳೆ ತಮ್ಮ ವಿಡಿಯೋದಲ್ಲಿ ಕೆಟ್ಟ ವ್ಯಾಖ್ಯಾಗಳನ್ನು ಬಳಿಸಿ ಪಿಸಿಬಿ ಕಾನೂನು ಸಲಹೆಗಾರರ ವಿರುದ್ಧ ಮಾತನಾಡಿದ್ದರು. ಪರಿಣಾಮ ಅಸಮಾಧಾನ ವ್ಯಕ್ತಪಡಿಸಿರುವ ಪಿಸಿಬಿ 10 ಕೋಟಿ ರೂ. ಮಾನನಷ್ಟ ಪ್ರಕರಣ ದಾಖಲಿಸಿದೆ.

    ಅಖ್ತರ್ ಬಳಕೆ ಮಾಡಿರುವ ಪದಗಳಿಂದ ಪಿಸಿಬಿಗೆ ಬೇಸರವಾಗಿದೆ. ಸಂಸ್ಥೆಯ ಸಲಹೆಗಾರರ ಕುರಿತಾಗಿ ಮಾತನಾಡುವ ವೇಳೆ ಎಚ್ಚರಿಕೆ ವಹಿಸಿಬೇಕಾಗಿತ್ತು. ಅಖ್ತರ್ ಬಳಿಸಿದ ಭಾಷೆ ನಿಜಕ್ಕೂ ಅಸಹನೀಯವಾಗಿದೆ. ಆದ್ದರಿಂದ ರಿಝ್ವಿ ಅವರು ತಮ್ಮದೇ ನಿರ್ದೇಶನದಲ್ಲಿ ಪ್ರಕರಣ ದಾಖಲಿಸಿದ್ದು, ಪಿಸಿಬಿ ಕೂಡ ತನ್ನ ಹಕ್ಕನ್ನು ಕಾಯ್ದುಕೊಳ್ಳಲಿದೆ ಎಂದು ಬೋರ್ಡ್ ಹೇಳಿದೆ.

    ಸಾಮಾಜಿಕ ಜಾಲತಾಣದಲ್ಲಿ ಅಖ್ತರ್ ಸಾಕಷ್ಟು ಸಕ್ರಿಯರಾಗಿದ್ದು, ಸ್ವತಃ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಈ ವಿಡಿಯೋಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ಆಟಗಾರರು ಮಾತ್ರವಲ್ಲದೇ ವಿವಿಧ ದೇಶದ ಆಟಗಾರು ಹಾಗೂ ಭಾರತ-ಪಾಕಿಸ್ತಾನ ಕುರಿತು ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಕಳೆದ ಕೆಲ ದಿನಗಳ ಹಿಂದೆಯೂ ಭಾರತ-ಪಾಕಿಸ್ತಾನ ಕ್ರಿಕೆಟ್ ಟೂರ್ನಿ ಆಯೋಜಿಸುವ ಕುರಿತು ಅಖ್ತರ್ ಮಾತನಾಡಿದ್ದರು.

    ಅಕ್ಮಲ್ ನಿಷೇಧ ವಿಚಾರವಾಗಿ ರಿಝ್ವಿ ವಿರುದ್ಧ ಟೀಕೆ ಮಾಡಿದ್ದ ಅಖ್ತರ್, ಆತನಿಗೆ ತಲೆ ಇಲ್ಲ. ಇಂತಹ ಪ್ರಕರಣದಲ್ಲಿ 3 ವರ್ಷ ನಿಷೇಧ ವಿಧಿಸುವ ಅಗತ್ಯವಿರಲಿಲ್ಲ ಎಂದಿದ್ದರು. ಅಲ್ಲದೇ ನಜೀರ್ ವಿರುದ್ಧವೂ ಟೀಕೆ ಮಾಡಿ, ಸೆಹ್ವಾಗ್ ಇರೋ ತಲೆ ಇಮ್ರಾನ್ ನಜೀರ್ ಗೆ ಇದೆ ಎಂದು ನನಗೆ ಅನಿಸುತ್ತಿಲ್ಲ. ಆತನಿಗೆ ನಾನು ತಾಳ್ಮೆಯಿಂದ ಆಡುವಂತೆ ಹೇಳಿದ್ದೆ. ಭಾರತದ ವಿರುದ್ಧ ಶತಕ ಸಿಡಿಸಿದ ಬಳಿಕ ನಾನು ಈ ಮಾತನ್ನು ಹೇಳಿದ್ದೆ. ಆದರೆ ನನ್ನ ಮಾತನ್ನು ಕೇಳದ ಕಾರಣ ಆತ ತಂಡದಿಂದ ದೂರ ಉಳಿದ ಎಂದು ಅಖ್ತರ್ ಕಿಡಿಕಾಡಿದ್ದರು. ಅಲ್ಲದೇ ವಾಸೀಂ ಅಕ್ರಂ ನನ್ನನ್ನು ಮ್ಯಾಚ್ ಫಿಕ್ಸಿಂಗ್ ಮಾಡಲು ಕೇಳಿದ್ದರೆ ನಾನು ಆತನನ್ನು ಕೊಲೆ ಮಾಡುತ್ತಿದ್ದೆ. ಆದರೆ ವಾಸೀಂ ಅಕ್ರಂ ನನ್ನ ಬಳಿ ಎಂದು ಮ್ಯಾಚ್ ಫ್ರಿಕ್ಸಿಂಗ್ ಕುರಿತು ಮಾತನಾಡಿಲ್ಲ ಎಂದು ಅಖ್ತರ್ ಕಾಮೆಂಟ್ ಮಾಡಿದ್ದರು.