Tag: Islamabad

  • ಪಾಕ್‌ನಲ್ಲಿದ್ದ ವಿಯೆಟ್ನಾಂ ರಾಯಭಾರಿಯ ಪತ್ನಿ ನಾಪತ್ತೆ

    ಪಾಕ್‌ನಲ್ಲಿದ್ದ ವಿಯೆಟ್ನಾಂ ರಾಯಭಾರಿಯ ಪತ್ನಿ ನಾಪತ್ತೆ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿರುವ (Pakistan) ವಿಯೆಟ್ನಾಂ ರಾಯಭಾರಿ (Vietnamese Ambassador) ನ್ಗುಯೆನ್ ಟಿಯೆನ್ ಫಾಂಗ್ ಅವರ ಪತ್ನಿ ಇಸ್ಲಾಮಾಬಾದ್‌ನಲ್ಲಿ ನಾಪತ್ತೆಯಾಗಿದ್ದಾರೆ. ಬೆಳಿಗ್ಗೆ 11 ಗಂಟೆಗೆ ತಮ್ಮ ನಿವಾಸದಿಂದ ತೆರಳಿದ್ದ ಪತ್ನಿ ಮರಳಿ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಇಸ್ಲಾಮಾಬಾದ್ ಪೊಲೀಸರು ಈಗ ಸಿಸಿಟಿವಿ ದೃಶ್ಯ ಆಧಾರಿಸಿ ಮಹಿಳೆಯ ಪತ್ತೆಗೆ ಬಲೆ ಬೀಸಿದ್ದಾರೆ.  ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆಯಲ್ಲಿ ನಾಗೇಂದ್ರ ಇದ್ದಾರೋ ಇಲ್ವೋ ಗೊತ್ತಿಲ್ಲ: ಸಚಿವ ಮಹದೇವಪ್ಪ

     
    ಕಳೆದ ವಾರ ನಕಲಿ ಪೊಲೀಸರು ಇಸ್ಲಾಮಾಬಾದ್‌ನ (Islamabad) ರಾಜತಾಂತ್ರಿಕ ಎನ್‌ಕ್ಲೇವ್‌ನ ಎಫ್ -6 ಸೂಪರ್‌ಮಾರ್ಕೆಟ್‌ನಲ್ಲಿ ವಿದೇಶಿ ಪ್ರಜೆಯನ್ನು ಲೂಟಿ ಮಾಡಿದ್ದರು.

    ಇಬ್ಬರು ವ್ಯಕ್ತಿಗಳು ಪೊಲೀಸ್ ಅಧಿಕಾರಿಗಳಂತೆ ನಟಿಸಿ ಮಹಿಳೆಯನ್ನು ತಪಾಸಣೆಗೆ ನಿಲ್ಲಿಸಿ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ವಿದೇಶಿ ಪ್ರಜೆ ಮಹಿಳೆಯನ್ನು ತಡೆದಾಗ ನಕಲಿ ಪೊಲೀಸ್ ಸಿಬ್ಬಂದಿ ಸಮವಸ್ತ್ರ ಧರಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

  • ಪಾಕ್‍ನಲ್ಲಿ ಭಾರೀ ಮಳೆ – 37 ಮಂದಿ ಸಾವು

    ಪಾಕ್‍ನಲ್ಲಿ ಭಾರೀ ಮಳೆ – 37 ಮಂದಿ ಸಾವು

    ಇಸ್ಲಾಮಾಬಾದ್: ಕಳೆದ ಎರಡು ದಿನಗಳಿಂದ ಪಾಕಿಸ್ತಾನದಾದ್ಯಂತ (Pakistan) ಸುರಿಯುತ್ತಿರುವ ಭಾರೀ ಮಳೆಯಿಂದ (Rain) ಉಂಟಾದ ಅನಾಹುತಗಳಲ್ಲಿ ಕನಿಷ್ಠ 37 ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಪಾಕ್‍ನಲ್ಲಿ ಭಾರೀ ಮಳೆಯಿಂದಾಗಿ ಕೆಲವೆಡೆ ಮನೆ ಹಾಗೂ ಭೂಕುಸಿತ ಉಂಟಾಗಿದೆ. ಅಲ್ಲದೇ ರಸ್ತೆಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಗುರುವಾರ ರಾತ್ರಿಯಿಂದ ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭಾರೀ ಮಳೆಯಾಗಿದೆ. ಬಜೌರ್, ಸ್ವಾತ್, ಲೋವರ್ ದಿರ್, ಮಲಕಾಂಡ್, ಖೈಬರ್, ಪೇಶಾವರ್, ವಜೀರಿಸ್ತಾನ್ ಮತ್ತು ಲಕ್ಕಿ ಮಾರ್ವತ್ ಸೇರಿದಂತೆ ಹತ್ತು ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಈ ಅನಾಹುತ ಸಂಭವಿಸಿದೆ. ಇದನ್ನೂ ಓದಿ: ಪಾಕ್‌ ಪ್ರಧಾನಿಯಾಗಿ 2 ನೇ ಬಾರಿಗೆ ಆಯ್ಕೆಯಾದ ಶೆಹಬಾಜ್‌ ಷರೀಫ್‌

    ಹಲವಾರು ಜನ ಮಳೆ ಸಂಬಂಧಿತ ಅನಾಹುತಗಳಿಂದ ಗಾಯಗೊಂಡಿದ್ದಾರೆ. ಮೃತರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ. ಸೂಕ್ತ ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಳೆ ಮತ್ತು ಹಿಮದಿಂದ ಉಂಟಾದ ಭೂಕುಸಿತದಿಂದಾಗಿ ಪಾಕಿಸ್ತಾನ ಹಾಗೂ ಚೀನಾದೊಂದಿಗೆ ಸಂಪರ್ಕಿಸುವ ಕಾರಕೋರಂ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ. ಈ ಪ್ರದೇಶಗಳ ಪ್ರವಾಸಿ ತಾಣಗಳಿಗೆ ಭೇಟಿ ನೀಡದಂತೆ ಅಧಿಕಾರಿಗಳು ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

    2022 ರಲ್ಲಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಪಾಕಿಸ್ತಾನದ ಹಲವು ಭಾಗಗಳಲ್ಲಿ 1,800 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು. ಇದನ್ನೂ ಓದಿ: ಸೋಮವಾರ ಕಲಬುರಗಿಗೆ ಅಶೋಕ್ – ಹತ್ಯೆಗೊಳಗಾದ ಬಿಜೆಪಿ ಮುಖಂಡರ ಕುಟುಂಬ ಸದಸ್ಯರ ಭೇಟಿ

  • ಇಮ್ರಾನ್ ಖಾನ್‌ಗೆ ಜಾಮೀನು ಮಂಜೂರು

    ಇಮ್ರಾನ್ ಖಾನ್‌ಗೆ ಜಾಮೀನು ಮಂಜೂರು

    ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನವಾಗಿದ್ದ ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರಿಗೆ ಇಸ್ಲಾಮಾಬಾದ್ ಹೈಕೋರ್ಟ್ ಶುಕ್ರವಾರ 2 ವಾರಗಳ ಜಾಮೀನನ್ನು (Bail) ಮಂಜೂರು ಮಾಡಿದೆ.

    ಇಮ್ರಾನ್ ಖಾನ್ ಅವರನ್ನು ಮಂಗಳವಾರ ಪ್ಯಾರಾ ಮಿಲಿಟರಿ ಪಡೆ ಬಂಧಿಸಿದ್ದು ಬಳಿಕ ಪಾಕಿಸ್ತಾನದಾದ್ಯಂತ ಭಾರೀ ಪ್ರತಿಭಟನೆ ಭುಗಿಲೆದ್ದಿತು. ಗುರುವಾರ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಅವರ ಬಂಧನವನ್ನು ಕಾನೂನು ಬಾಹಿರ ಎಂದು ಘೋಷಿಸಿ ತಕ್ಷಣವೇ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತು. ಇದಾದ ಬೆನ್ನಲೇ ಇಸ್ಲಾಮಾಬಾದ್ ಹೈಕೋರ್ಟ್ ಖಾನ್ ಅವರಿಗೆ ಜಾಮೀನನ್ನು ಮಂಜೂರು ಮಾಡಿದೆ.

    ಇಮ್ರಾನ್ ಖಾನ್ ಮಂಗಳವಾರ ಪ್ರಕರಣವೊಂದರ ವಿಚಾರಣೆಗೆಂದು ಹೈಕೋರ್ಟ್‌ಗೆ ಹಾಜರಾಗಲು ತೆರಳುತ್ತಿದ್ದ ವೇಳೆ ಕೋರ್ಟ್ ಆವರಣದಲ್ಲಿಯೇ ಅವರನ್ನು ಬಂಧಿಸಲಾಗಿತ್ತು. ಇದರಿಂದ ಖಾನ್ ಬೆಂಬಲಿಗರು ಬಂಧನವನ್ನು ವಿರೋಧಿಸಿ ದೇಶಾದ್ಯಂತ ಭಾರೀ ಹಿಂಸಾಚಾರ ನಡೆಸಿದರು. ಇದನ್ನೂ ಓದಿ: ಹಾರ್ಟ್‌ ಅಟ್ಯಾಕ್ ಆಗ್ಲಿ ಅಂತ ನನಗೆ ಇಂಜೆಕ್ಷನ್ ಕೊಟ್ಟಿದ್ರು: ಇಮ್ರಾನ್ ಖಾನ್

    ದೇಶಾದ್ಯಂತ ನಡೆದಿರುವ ಘರ್ಷಣೆಯಲ್ಲಿ ಹತ್ತರು ಜನರು ಬಲಿಯಾಗಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ದೇಶಾದ್ಯಂತ ಸಾವಿರಾರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಹಿಂಡು ಹಿಂಡಾಗಿ ಹಸುಗಳು – ಭಾರತದ ಭೇಟಿ ಮರೆಯಲಾಗದ ನೆನಪು ಎಂದ ಇಸ್ರೇಲ್ ಅಧಿಕಾರಿ

  • ಇಮ್ರಾನ್‌ ಖಾನ್‌ ಬೆನ್ನಲ್ಲೇ ಪಾಕ್‌ ವಿದೇಶಾಂಗ ಮಾಜಿ ಸಚಿವ ಅರೆಸ್ಟ್‌ – ಅಜ್ಞಾತ ಸ್ಥಳಕ್ಕೆ ಶಿಫ್ಟ್‌

    ಇಮ್ರಾನ್‌ ಖಾನ್‌ ಬೆನ್ನಲ್ಲೇ ಪಾಕ್‌ ವಿದೇಶಾಂಗ ಮಾಜಿ ಸಚಿವ ಅರೆಸ್ಟ್‌ – ಅಜ್ಞಾತ ಸ್ಥಳಕ್ಕೆ ಶಿಫ್ಟ್‌

    ಇಸ್ಲಾಮಾಬಾದ್‌: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ಬಂಧನ ಬೆನ್ನಲ್ಲೇ, ಅವರ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿದ್ದ ಮಖ್ದೂಮ್‌ ಶಾ ಮೆಹಮೂದ್‌ ಖುರೇಷಿ (Shah Mehmood Qureshi) ಅವರನ್ನು ಇಸ್ಲಾಮಾಬಾದ್‌ ಪೊಲೀಸರು ಬಂಧಿಸಿದ್ದಾರೆ.

    ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಉಪಾಧ್ಯಕ್ಷರೂ ಆಗಿರುವ ಖುರೇಷಿ ಅವರನ್ನು ಪೊಲೀಸರು ಗುರುವಾರ ಬಂಧಿಸಿ ಅಜ್ಞಾತ ಸ್ಥಳಕ್ಕೆ ವರ್ಗಾಯಿಸಿದ್ದಾರೆ ಎಂದು ಪಕ್ಷವು ಟ್ವೀಟ್‌ ಮಾಡಿ ತಿಳಿಸಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭುಗಿಲೆದ್ದ ಪ್ರತಿಭಟನೆ – ಸಾವಿರ ಮಂದಿ ಬಂಧನ

    ಖುರೇಷಿಯನ್ನು ಇಸ್ಲಾಮಾಬಾದ್‌ನ ಗಿಲ್ಗಿಟ್-ಬಾಲ್ಟಿಸ್ತಾನ್ ಹೌಸ್‌ನಿಂದ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಪಂಜಾಬ್ ಮತ್ತು ಖೈಬರ್ ಪಖ್ತುಂಖ್ವಾದಲ್ಲಿ ನಡೆದ ಗಲಭೆ ಮತ್ತು ಬೆಂಕಿ ಹಚ್ಚಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಖುರೇಷಿ ಅವರನ್ನು ಬಂಧಿಸಲಾಗಿದೆ.

    ಬಂಧನಕ್ಕೂ ಮುನ್ನ ಖುರೇಷಿ ತನ್ನ ಪಕ್ಷದ ಕಾರ್ಯಕರ್ತರಿಗೆ, “ದೇಶದಲ್ಲಿ ನಿಜವಾದ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಮುಂದುವರಿಸುವಂತೆ” ಕರೆ ನೀಡಿದ್ದರು. “ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಪಶ್ಚಾತ್ತಾಪ ಪಡುವ ಅಗತ್ಯವೂ ಇಲ್ಲ” ಎಂಬ ಸಂದೇಶ ರವಾನಿಸಿದ್ದರು. ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಅವರ ಬಂಧನದ ನಂತರ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಅಪಾರ ಸಾವುನೋವುಗಳಾಗಿದ್ದು, ಈ ಬಗ್ಗೆ ಖುರೇಷಿ ಆಘಾತ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್ ಅರೆಸ್ಟ್ – ಸೇನಾ ಕಚೇರಿ ಮೇಲೆ ಬೆಂಕಿ, ದೇಶಾದ್ಯಂತ ಇಂಟರ್‌ನೆಟ್ ಬಂದ್

    ಪಿಟಿಐ ಹಿರಿಯ ನಾಯಕ ಫವಾದ್ ಚೌಧರಿ ಅವರನ್ನು ಬುಧವಾರ ಇಸ್ಲಾಮಾಬಾದ್‌ನ ಸುಪ್ರೀಂ ಕೋರ್ಟ್ (ಎಸ್‌ಸಿ) ಹೊರಗೆ ಬಂಧಿಸಲಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಪಿಟಿಐ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ನಡುವೆಯೇ ಈ ಬೆಳವಣಿಗೆ ನಡೆದಿದೆ. ಫವಾದ್ ಚೌಧರಿ ಅವರು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನಲ್ಲಿ ಬೆಳಗ್ಗೆ 11 ಗಂಟೆಯಿಂದ (ಸ್ಥಳೀಯ ಕಾಲಮಾನ) ಹಾಜರಾಗಿದ್ದರು.

    ಭ್ರಷ್ಟಾಚಾರ ಪ್ರಕರಣಗಳಲ್ಲಿ ಈಚೆಗೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಬಂಧಿಸಲಾಗಿತ್ತು. ಪಾಕಿಸ್ತಾನ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯವು ಖಾನ್‌ ಅವರನ್ನು 8 ದಿನಗಳ ಕಾಲ ಎನ್‌ಎಬಿ ವಶಕ್ಕೆ ನೀಡಿ ಆದೇಶಿಸಿದೆ. ಇದನ್ನೂ ಓದಿ: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅರೆಸ್ಟ್‌

  • ಇಮ್ರಾನ್ ಖಾನ್ ಅರೆಸ್ಟ್ – ಸೇನಾ ಕಚೇರಿ ಮೇಲೆ ಬೆಂಕಿ, ದೇಶಾದ್ಯಂತ ಇಂಟರ್‌ನೆಟ್ ಬಂದ್

    ಇಮ್ರಾನ್ ಖಾನ್ ಅರೆಸ್ಟ್ – ಸೇನಾ ಕಚೇರಿ ಮೇಲೆ ಬೆಂಕಿ, ದೇಶಾದ್ಯಂತ ಇಂಟರ್‌ನೆಟ್ ಬಂದ್

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರನ್ನು ಮಂಗಳವಾರ ಪ್ಯಾರಾ ಮಿಲಿಟರಿ ಪಡೆ ಬಂಧಿಸಿದ್ದು, ಇದರಿಂದ ಸಿಡಿದೆದ್ದಿರುವ ಅವರ ಬೆಂಬಲಿಗರು ಭಾರೀ ಪ್ರತಿಭಟನೆಯಲ್ಲಿ (Protest) ತೊಡಗಿದ್ದಾರೆ.

    ಮಂಗಳವಾರ ಪ್ರಕರಣವೊಂದರ ವಿಚಾರಣೆಗಾಗಿ ಇಸ್ಲಾಮಾಬಾದ್‌ನ ಹೈಕೋರ್ಟ್ ತೆರಳುತ್ತಿದ್ದ ವೇಳೆಯೇ ಇಮ್ರಾನ್‌ಖಾನ್ ಅವರನ್ನು ಬಂಧಿಸಲಾಗಿತ್ತು. ಇಮ್ರಾನ್ ಖಾನ್ ಬಂಧನವನ್ನು ವಿರೋಧಿಸಿ ಬಳಿಕ ಅವರ ಬೆಂಬಲಿಗರು ಲಾಹೋರ್‌ನಲ್ಲಿರುವ ಸೇನಾ ಕಮಾಂಡರ್‌ಗಳ ನಿವಾಸದ ಆವರಣವನ್ನು ಪ್ರವೇಶಿಸಿ ದಾಂಧಲೆ ನಡೆಸಿದ್ದಾರೆ. ಪೇಶಾವರದಲ್ಲಿ ಪಾಕಿಸ್ತಾನದ ರೇಡಿಯೋ ಕಟ್ಟಡಕ್ಕೂ ಬೆಂಕಿ ಹಚ್ಚಲಾಗಿದೆ.

    ಖಾನ್ ಬಂಧನದ ಬಳಿಕ ಪಾಕಿಸ್ತಾನದಾದ್ಯಂತ ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್ (PTI) ಬೆಂಬಲಿಗರಿಂದ ಪ್ರತಿಭಟನೆ ಭುಗಿಲೆದ್ದಿದೆ. ಇಸ್ಲಾಮಾಬಾದ್‌ನಾದ್ಯಂತ ಜನರು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಸೆಕ್ಷನ್ 144 ಜಾರಿಯಲ್ಲಿದ್ದು, ಉಲ್ಲಂಘನೆಯಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಇಸ್ಲಾಮಾಬಾದ್ ಮಾತ್ರವಲ್ಲದೇ ರಾವಲ್ಪಿಂಡಿ, ಲಾಹೋರ್, ಕರಾಚಿ, ಗುಜ್ರಾನ್‌ವಾಲಾ, ಫೈಸಲಾಬಾದ್, ಮುಲ್ತಾನ್, ಪೇಶಾವರ್ ಮತ್ತು ಮರ್ದಾನ್‌ನಲ್ಲಿಯೂ ಪ್ರತಿಭಟನೆಗಳು ಪ್ರಾರಂಭವಾಗಿರುವುದಾಗಿ ವರದಿಗಳು ತಿಳಿಸಿವೆ.

    ರಾವಲ್ಪಿಂಡಿಯಲ್ಲಿ ಸೇನಾ ಪ್ರಧಾನ ಕಚೇರಿಯ ಮುಖ್ಯ ಗೇಟ್ ಅನ್ನು ಪ್ರತಿಭಟನಾಕಾರರು ಒಡೆದು ಹಾಕಿದ್ದಾರೆ. ಲಾಹೋರ್‌ನಲ್ಲಿ ಕಾರ್ಪ್ಸ್ ಕಮಾಂಡರ್ ಅವರ ನಿವಾಸಕ್ಕೆ ನುಗ್ಗಿ ಗೇಟ್ ಹಾಗೂ ಕಿಟಕಿಗಳನ್ನು ಒಡೆದಿದ್ದಾರೆ. ಹಲವೆಡೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅರೆಸ್ಟ್‌

    ಇಮ್ರಾನ್ ಖಾನ್ ಬಂಧನದ ಬಳಿಕ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ ದೇಶಾದ್ಯಂತ ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಮಾತ್ರವಲ್ಲದೇ ಟ್ವಿಟ್ಟರ್, ಫೇಸ್‌ಬುಕ್ ಹಾಗೂ ಯೂಟ್ಯೂಬ್‌ಗೂ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates

  • ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅರೆಸ್ಟ್‌

    ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅರೆಸ್ಟ್‌

    ಇಸ್ಲಾಮಾಬಾದ್‌: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ಅವರನ್ನು ಪ್ಯಾರಾ ಮಿಲಿಟರಿ ಪಡೆ ಬಂಧಿಸಿದೆ.

    ಇಂದು ಇಸ್ಲಾಮಾಬಾದ್‌ ಹೈಕೋರ್ಟ್‌ (Islamabad High Court) ಆವರಣದಲ್ಲೇ ಇಮ್ರಾನ್‌ ಖಾನ್‌ ಅವರನ್ನು ಬಂಧನ ಮಾಡಲಾಗಿದೆ. ಕೋರ್ಟ್‌ ಆವರಣದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದ್ದು ಸೆಕ್ಷನ್‌ 144 ಜಾರಿಗೊಳಿಸಲಾಗಿದೆ.

    ಇಮ್ರಾನ್‌ ಖಾನ್‌ ಮೇಲೆ 143 ಎಫ್‌ಐಆರ್‌ ದಾಖಲಾಗಿದ್ದು ಈಗ ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಮ್ರಾನ್‌ ಖಾನ್‌ ಮತ್ತು ಅವರ ಪತ್ನಿ ಒಡೆತನದ ಅಲ್-ಖಾದಿರ್ ಟ್ರಸ್ಟ್‌ಗೆ ಬಹ್ರಿಯಾ ಟೌನ್ 530 ದಶಲಕ್ಷ ಪಾಕಿಸ್ತಾನ ರೂ. ಮೌಲ್ಯದ ಭೂಮಿಯನ್ನು ಮಂಜೂರು ಮಾಡಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

    ಮಾರ್ಚ್‌ ತಿಂಗಳಿನಲ್ಲಿ ಇಮ್ರಾನ್‌ ಖಾನ್‌ ಅವರನ್ನು ಬಂಧಿಸಲು ಪೊಲೀಸರು ಲಾಹೋರ್‌ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಪಿಟಿಐ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಇದನ್ನೂ ಓದಿ: ಉಗ್ರರ ಜೊತೆ ಸ್ಥಳೀಯರ ಶಾಮೀಲು – ಜಮ್ಮು ಕಾಶ್ಮೀರದಲ್ಲಿ 15 ಕಡೆ ಎನ್‍ಐಎ ಶೋಧ

    ಉಡುಗೊರೆಯಾಗಿ ಪಡೆದ ಕೋಟ್ಯಂತರ ರೂ. ಮೌಲ್ಯದ ನೆಕ್ಲೆಸ್‌ ಅನ್ನು ರಾಜ್ಯದ ಉಡುಗೊರೆ ಭಂಡಾರಕ್ಕೆ ಠೇವಣಿ ಇಡುವ ಬದಲು ಆಭರಣ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿರುವ ಆರೋಪವನ್ನು ಇಮ್ರಾನ್‌ ಎದುರಿಸುತ್ತಿದ್ದಾರೆ.

    ಇಮ್ರಾನ್‌ ಖಾನ್‌ ಅವರ ಅಧಿಕಾರದ ಅವಧಿಯಲ್ಲಿ ದುಬಾರಿ ಮೌಲ್ಯದ ನೆಕ್ಲೆಸ್‌ ಉಡುಗೊರೆಯಾಗಿ ಬಂದಿತ್ತು. ಆದರೆ ಅವರು ಅದನ್ನು ರಾಜ್ಯದ ಉಡುಗೊರೆ ಭಂಡಾರಕ್ಕೆ ಠೇವಣಿ ಇಡದೇ ವ್ಯಾಪಾರಿಯೊಬ್ಬರಿಗೆ 18 ಕೋಟಿ ಪಾಕಿಸ್ತಾನ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ) ತನಿಖೆ ನಡೆಸಿತ್ತು.

    ಕಾನೂನಿನ ಪ್ರಕಾರ, ರಾಜ್ಯದ ಅಧಿಕಾರಿಗಳು ಗಣ್ಯರಿಂದ ಸ್ವೀಕರಿಸುವ ಉಡುಗೊರೆಗಳನ್ನು ತೋಶಾ-ಖಾನಾಗೆ ಸಲ್ಲಿಸಬೇಕಾಗುತ್ತದೆ. ಅವರು ಉಡುಗೊರೆಯನ್ನು ಸಲ್ಲಿಸಲು ವಿಫಲರಾದರೆ ಅಥವಾ ಉಡುಗೊರೆ ಮೌಲ್ಯದ ಅರ್ಧದಷ್ಟು ಮೊತ್ತವನ್ನು ಸಲ್ಲಿಸಿದರೆ ಅದು ಕಾನೂನುಬಾಹಿರ ಕೃತ್ಯ ಎಂದು ಪರಿಗಣಿಸಲಾಗುತ್ತದೆ.

    ವಿಪಕ್ಷಗಳ ಅವಿಶ್ವಾಸ ಮತದಿಂದಾಗಿ ಇಮ್ರಾನ್‌ ಖಾನ್‌ ಅವರು ಪಾಕಿಸ್ತಾನ ಪ್ರಧಾನ ಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಈಗ ಶೆಹಬಾಜ್‌ ಶರೀಫ್‌ ಅವರು ಪ್ರಧಾನಿ ಹುದ್ದೆ ಅಲಂಕರಿಸಿದ್ದಾರೆ. ಖಾನ್‌ ರಾಜೀನಾಮೆ ಬೆನ್ನಲ್ಲೇ ಅವರ ವಿರುದ್ಧ ಹಲವು ಆರೋಪಗಳು ವ್ಯಕ್ತವಾಗುತ್ತಿದ್ದು, ತನಿಖೆ ನಡೆಯುತ್ತಿದೆ.

  • ಕೋರ್ಟ್‌ನತ್ತ ತೆರಳಿದ ಪಾಕ್ ಮಾಜಿ ಪ್ರಧಾನಿ – ಇಮ್ರಾನ್ ಮನೆಗೆ ನುಗ್ಗಿದ ಪೊಲೀಸರು

    ಕೋರ್ಟ್‌ನತ್ತ ತೆರಳಿದ ಪಾಕ್ ಮಾಜಿ ಪ್ರಧಾನಿ – ಇಮ್ರಾನ್ ಮನೆಗೆ ನುಗ್ಗಿದ ಪೊಲೀಸರು

    ಇಸ್ಲಾಮಾಬಾದ್: ತೋಶಾಖಾನ (Toshakhana) ಪ್ರಕರಣದ ಆರೋಪ ಎದುರಿಸುತ್ತಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಕೋರ್ಟ್‌ನತ್ತ ತೆರಳುತ್ತಿದ್ದಂತೆ ಇತ್ತ ಅವರ ಮನೆಗೆ ಪೊಲೀಸರು ನುಗ್ಗಿದ್ದಾರೆ.

    ಮನೆಯಲ್ಲಿ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೇಗಂ (Bushra Begum) ಇದ್ದರು. ಮನೆ ಹೊರಗೆ ಇರಿಸಿದ್ದ ಬ್ಯಾರಿಕೇಡ್‌ಗಳನ್ನು ತೆಗೆದು ಪೊಲೀಸರು ಖಾನ್ ಮನೆಗೆ ನುಗ್ಗಿದ್ದಾರೆ. ಈ ವೇಳೆ ತಡೆಯಲು ಮುಂದಾದ ಇಮ್ರಾನ್ ಖಾನ್ ಬೆಂಬಲಿಗರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಈ ಸಂಬಂಧದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಗಿಫ್ಟ್‌ ಆಗಿ ಬಂದ ನೆಕ್ಲೆಸ್‌ನ್ನು 18 ಕೋಟಿಗೆ ಮಾರಿದ್ದಕ್ಕೆ ಇಮ್ರಾನ್‌ ಖಾನ್‌ ವಿರುದ್ಧ ತನಿಖೆ 

    ಪೊಲೀಸರ ವರ್ತನೆಗೆ ಕಿಡಿಕಾರಿ ಇಮ್ರಾನ್ ಖಾನ್ ಟ್ವೀಟ್ (Tweet) ಮಾಡಿದ್ದಾರೆ. ನನ್ನ ಪತ್ನಿ ಒಬ್ಬಳೇ ಇರುವ ಸಂದರ್ಭದಲ್ಲಿ ಪೊಲೀಸರು ನನ್ನ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಯಾವ ಕಾನೂನಿನ ಅಡಿಯಲ್ಲಿ ಅವರು ಈ ರೀತಿ ಮಾಡುತ್ತಿದ್ದಾರೆ? ಎಂದು ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

    ಚುನಾವಣಾ ಆಯೋಗವು (Election Commission) ಸಲ್ಲಿಸಿದ್ದ ದೂರಿನ ವಿಚಾರಣೆಗೆ ಹಾಜರಾಗಲು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಾಫರ್ ಇಕ್ಬಾಲ್ ಅವರು ನ್ಯಾಯಾಲಯಕ್ಕೆ ಹಾಜರಾಗುವಂತೆ ಪಾಕಿಸ್ತಾನದ ತೇಹ್ರಿಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥರಾಗಿರುವ ಇಮ್ರಾನ್ ಖಾನ್ ಅವರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಅರೆಸ್ಟ್‌ ವಾರೆಂಟ್‌ 

    ಬೆಂಗಾವಲು ಪಡೆಯೊಂದಿಗೆ ಇಮ್ರಾನ್ ಖಾನ್ ಲಾಹೋರ್‌ನ (Lahore) ಜಮಾನ್ ಪಾರ್ಕ್‌ನಲ್ಲಿರುವ ತಮ್ಮ ನಿವಾಸದಿಂದ ಇಸ್ಲಾಮಾಬಾದ್ (Islamabad) ತೆರಳಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಇಸ್ಲಾಮಾಬಾದ್ ಜಿ-11ನಲ್ಲಿರುವ ನ್ಯಾಯಾಲಯ ಸಂಕೀರ್ಣದ ಹೊರಗೆ ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದು, ಮಧ್ಯಾಹ್ನದ ವೇಳೆಗೆ ಇಮ್ರಾನ್ ಖಾನ್ ಆಗಮಿಸುವ ನಿರೀಕ್ಷೆಯಿದೆ. ಇವರಿಗೆ ಭದ್ರತೆಯನ್ನು ಒದಗಿಸಲು ದೊಡ್ಡ ಪ್ರಮಾಣದ ಪೊಲೀಸರನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬಂಧನಕ್ಕೆ ಮನೆಗೆ ಪೊಲೀಸರ ದಂಡು 

    ಇಸ್ಲಾಮಾಬಾದ್ ಆಡಳಿತವು ಶುಕ್ರವಾರ ರಾತ್ರಿ ರಾಜಧಾನಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿತ್ತು. ಅಲ್ಲದೇ ಖಾಸಗಿ ಕಂಪನಿಗಳು, ಭದ್ರತಾ ಸಿಬ್ಬಂದಿಗಳು ಶಸ್ತ್ರಾಸ್ತ್ರ ಸಾಗಿಸುವುದನ್ನು ನಿಷೇಧಿಸಿತ್ತು. ಅದರೊಂದಿಗೆ ಚಾಲಕರು ತಮ್ಮ ನೋಂದಣಿ ದಾಖಲೆಗಳನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಿತ್ತು. ಇದನ್ನೂ ಓದಿ: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಅರೆಸ್ಟ್‌ ವಾರೆಂಟ್‌

  • ಪಾಕಿಸ್ತಾನದಲ್ಲಿ ಅಗ್ನಿ ದುರಂತ – ಮನೆಯಲ್ಲಿ ಮಲಗಿದ್ದ 10 ಮಂದಿ ಸಜೀವ ದಹನ

    ಪಾಕಿಸ್ತಾನದಲ್ಲಿ ಅಗ್ನಿ ದುರಂತ – ಮನೆಯಲ್ಲಿ ಮಲಗಿದ್ದ 10 ಮಂದಿ ಸಜೀವ ದಹನ

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಲೋವರ್ ಕೊಹಿಸ್ತಾನ್‌ನ ಸೆರಿ ಪ್ರದೇಶದಲ್ಲಿ ಶುಕ್ರವಾರ (ಮಾ.17) ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ.

    ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಮನೆಯಲ್ಲಿ ಮಲಗಿದ್ದ ಅನೇಕರು ಸಜೀವ ದಹನರಾಗಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮತ್ತೆ ಇಂಧನ ಬೆಲೆ ಏರಿಕೆ – 1 ಲೀಟರ್ ಪೆಟ್ರೋಲ್‌ಗೆ 272 ರೂ.

    ಬೆಂಕಿ ಹೊತ್ತಿಕೊಂಡು ಉರಿದ ಪರಿಣಾಮ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ 10 ಮಂದಿ ಮೃತಪಟ್ಟಿದ್ದಾರೆ. ಇತರ ಮೂವರು ಗಾಯಗೊಂಡಿದ್ದಾರೆ. ನಿವಾಸಿಗಳು ಎಚ್ಚರಗೊಳ್ಳುವಷ್ಟರಲ್ಲಿ ಇಡೀ ಮನೆ ಬೆಂಕಿಗೆ ಆಹುತಿಯಾಗಿತ್ತು.

    ಮೃತದೇಹಗಳನ್ನು ಹೊರತೆಗೆದು ರವಾನಿಸಲಾಯಿತು. ಗಾಯಗೊಂಡ ಮೂವರನ್ನು ಪಟ್ಟನ್‌ನ ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಸಾಗಿಸಲಾಗಿದೆ. ಬೆಂಕಿ ಅವಘಡದಲ್ಲಿ ಹೆಚ್ಚಿನ ಹಾನಿಯಾಗಿದ್ದು, ಎಂಟು ಎಮ್ಮೆಗಳು ಸಹ ಸಾವನ್ನಪ್ಪಿವೆ. ಇದನ್ನೂ ಓದಿ: ಪತನದ ಭೀತಿಯಲ್ಲಿ ಮತ್ತೊಂದು ಬ್ಯಾಂಕ್ – ಕ್ರೆಡಿಟ್ ಸ್ಯೂಸಿ ಸಹಾಯಕ್ಕೆ ನಿಂತ ಸ್ವಿಸ್ ಬ್ಯಾಂಕ್

    ಕೆಲವು ದಿನಗಳ ಹಿಂದೆ, ಕರಾಚಿಯ ಷೇರಿಯಾ ಫೈಸಲ್ ರಸ್ತೆಯಲ್ಲಿರುವ ವಾಣಿಜ್ಯ ಮಹಡಿಯಲ್ಲೂ ಬೆಂಕಿ ಅವಘಡ ಸಂಭವಿಸಿತ್ತು. ಇದು ಕೂಡ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿ ಆಗಿತ್ತು ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಇಶ್ತಿಯಾಕ್ ಅಹ್ಮದ್ ತಿಳಿಸಿದ್ದರು.

  • ಪಾಕಿಸ್ತಾನದಲ್ಲಿ ಮತ್ತೆ ಇಂಧನ ಬೆಲೆ ಏರಿಕೆ – 1 ಲೀಟರ್ ಪೆಟ್ರೋಲ್‌ಗೆ 272 ರೂ.

    ಪಾಕಿಸ್ತಾನದಲ್ಲಿ ಮತ್ತೆ ಇಂಧನ ಬೆಲೆ ಏರಿಕೆ – 1 ಲೀಟರ್ ಪೆಟ್ರೋಲ್‌ಗೆ 272 ರೂ.

    ಇಸ್ಲಾಮಾಬಾದ್: ಮುಸ್ಲಿಮರ ರಂಜಾನ್  (Ramzan) ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯುಳಿದಿವೆ. ಈ ಸಂದರ್ಭ ಪಾಕಿಸ್ತಾನ ಸರ್ಕಾರವು (Pakistan Government) ಇಂಧನ ಬೆಲೆ ಏರಿಕೆ ಮಾಡಿದ್ದು ಜನರ ಮೇಲೆ ಒತ್ತಡ ಹೆಚ್ಚಾಗಿದೆ.

    ಅಮೆರಿಕ ಡಾಲರ್ (US Dollar) ಎದುರು ಪಾಕಿಸ್ತಾನಿ ರೂಪಾಯಿ (PKR) ದುರ್ಬಲಗೊಂಡ ಹಿನ್ನೆಲೆಯಲ್ಲಿ ತೈಲ ಬೆಲೆ ಏರಿಕೆಯಾಗಿದೆ. ಹೊಸ ಬೆಲೆಗಳು ಗುರುವಾರ ಮಧ್ಯರಾತ್ರಿ 12 ಗಂಟೆಗೆ ಜಾರಿಗೆ ಬಂದಿದ್ದು ಮಾರ್ಚ್ 31ರ ವರೆಗೆ ಜಾರಿಯಲ್ಲಿರುತ್ತದೆ. ಪಾಕಿಸ್ತಾನ ಸರ್ಕಾರವು ಪೆಟ್ರೋಲ್ ಬೆಲೆಯನ್ನು ಲೀಟರಿಗೆ 5ರೂ. ಹೆಚ್ಚಳ ಮಾಡಿದ್ದು ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ (Petrol) ಬೆಲೆಯು 272 ಪಾಕಿಸ್ತಾನ ರೂ.ಗಳಾಗಿದೆ. ಅಲ್ಲದೇ ಡೀಸೆಲ್ (Diesel) ಬೆಲೆಯನ್ನು ಲೀಟರಿಗೆ 13 ರೂ. ಹೆಚ್ಚಳ ಮಾಡಲಾಗಿದ್ದು ಈಗ 280 ರೂ. ಆಗಿದೆ. ಇದನ್ನೂ ಓದಿ: UK ಸಿಲಿಕಾನ್ ವ್ಯಾಲಿ ಬ್ಯಾಂಕ್ ಘಟಕವನ್ನು 99 ರೂ.ಗೆ ಖರೀದಿದ HSBC 

    ಫೆಬ್ರವರಿ 28ರಂದು ಪಾಕಿಸ್ತಾನ ಸರ್ಕಾರವು ಪೆಟ್ರೋಲ್ ಬೆಲೆಯನ್ನು ಪ್ರತೀ ಲೀಟರಿಗೆ 5 ಪಾಕಿಸ್ತಾನಿ ರುಪಾಯಿ ಕಡಿಮೆ ಮಾಡಿತ್ತು. ಹೀಗಾಗಿ ಪೆಟ್ರೋಲ್ ಬೆಲೆಯು ಲೀಟರ್‌ಗೆ 267 ರೂಗೆ ಇಳಿಕೆಯಾಗಿತ್ತು. ಇದೀಗ ಮತ್ತೆ ಪಾಕಿಸ್ತಾನ ಸರ್ಕಾರವು ಬೆಲೆ ಏರಿಕೆ ಮಾಡಿದೆ. ಇದನ್ನೂ ಓದಿ: ಬಂಧನ ಕೈಬಿಟ್ಟ ಪಾಕ್ ಪೊಲೀಸರು – ಗ್ಯಾಸ್ ಮಾಸ್ಕ್ ಧರಿಸಿ ಮನೆಯಿಂದ ಹೊರಬಂದ ಇಮ್ರಾನ್ ಖಾನ್ 

    ಜನರು ತಮ್ಮ ಜೀವನವನ್ನು ಪೂರೈಸಲು ಹೆಣಗಾಡುತ್ತಿರುವ ಸಂದರ್ಭದಲ್ಲಿ ಪೊಟ್ರೋಲ್ ದರ ಏರಿಕೆಯು ಹಣದುಬ್ಬರವನ್ನು ಮತ್ತಷ್ಟು ತಳ್ಳುವ ನಿರೀಕ್ಷೆಯಿದೆ ಮುಂದಿನ ದಿನಗಳಲ್ಲಿ ಈ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. 50 ವರ್ಷದಲ್ಲೇ ಪಾಕಿಸ್ತಾನದಲ್ಲಿ ಪೆಟ್ರೋಲ್, ಡೀಸೆಲ್ ದರ ಭಾರೀ ಏರಿಕೆ ಕಾಣುತ್ತಿದೆ. ಇದನ್ನೂ ಓದಿ: ಪತನದ ಭೀತಿಯಲ್ಲಿ ಮತ್ತೊಂದು ಬ್ಯಾಂಕ್ – ಕ್ರೆಡಿಟ್ ಸ್ಯೂಸಿ ಸಹಾಯಕ್ಕೆ ನಿಂತ ಸ್ವಿಸ್ ಬ್ಯಾಂಕ್ 

    ಇಲ್ಲಿಯವರೆಗೆ ಆಡಳಿತ ನಡೆಸಿದ್ದ ಪಾಕ್‌ ಸರ್ಕಾರಗಳು ಇಂಧನ, ವಿದ್ಯುತ್‌ಗಳನ್ನು ಸಬ್ಸಿಡಿ ದರದಲ್ಲಿ ಜನರಿಗೆ ನೀಡುತ್ತಿತ್ತು. ಸಬ್ಸಿಡಿ ದರವೇ ಹೆಚ್ಚಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಅರ್ಥವ್ಯವಸ್ಥೆ ಕುಸಿದಿದ್ದು ಆರ್ಥಿಕ ಸಹಾಯ ಮಾಡುವಂತೆ ವಿಶ್ವದ ಹಲವು ದೇಶಗಳಲ್ಲಿ ಬೇಡಿಕೊಳ್ಳುತ್ತಿದೆ. ಈ ಹಿಂದೆ ಪಾಕ್‌ಗೆ ಭೇಟಿ ನೀಡಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ನಿಯೋಗ ಕೂಡಲೇ ವಿದ್ಯುತ್‌ ದರ ಏರಿಸಿ, ಎಲ್ಲಾ ಸಬ್ಸಿಡಿಗಳನ್ನು ಕಡಿತಗೊಳಿಸಿ ಎಂದು ಸೂಚಿಸಿತ್ತು. ಈ ಬೆನ್ನಲ್ಲೇ ಪಾಕ್‌ ಸರ್ಕಾರ ಪಾಕ್‌ ಆಕ್ರಮಿತ ಕಾಶ್ಮೀರದ ಜನತೆಗೆ ನೀಡಿದ್ದ ಸಬ್ಸಿಡಿಯನ್ನು ಬಂದ್‌ ಮಾಡಿತ್ತು. ಇದನ್ನೂ ಓದಿ: ಕೂಡಲೇ ವಿದ್ಯುತ್‌ ದರ ಏರಿಸಿ – ಪಾಕ್‌ಗೆ ಐಎಂಎಫ್‌ ಶಾಕ್‌: PoK ಜನತೆಗೆ ನೀಡಿದ್ದ ಸಬ್ಸಿಡಿ ಬಂದ್‌

  • ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬಂಧನಕ್ಕೆ ಮನೆಗೆ ಪೊಲೀಸರ ದಂಡು

    ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬಂಧನಕ್ಕೆ ಮನೆಗೆ ಪೊಲೀಸರ ದಂಡು

    ಇಸ್ಲಾಮಾಬಾದ್: ತೋಶಾ-ಖಾನಾ (Toshakhana Case) ಪ್ರಕರಣದಲ್ಲಿ ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ಅವರನ್ನು ಬಂಧಿಸುವಂತೆ ನ್ಯಾಯಾಲಯ ಆದೇಶಿಸಿದ್ದು, ಬಂಧನಕ್ಕೆ ಅವರ ನಿವಾಸದೆದುರು ಪೊಲೀಸರ ದಂಡೇ ಬೀಡು ಬಿಟ್ಟಿದೆ.

    ಲಾಹೋರ್‌ನಲ್ಲಿರುವ (Lahore) ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (PTI) ಅಧ್ಯಕ್ಷ ಇಮ್ರಾನ್ ಖಾನ್ ಅವರ ನಿವಾಸದ ಹೊರಗೆ ಶಸ್ತ್ರಸಜ್ಜಿತ ಪೊಲೀಸ್ ವಾಹನಗಳು ಬೀಡುಬಿಟ್ಟಿರುವ ದೃಶ್ಯ ಕಂಡುಬಂದಿದೆ. ಇದನ್ನೂ ಓದಿ: ಗಿಫ್ಟ್‌ ಆಗಿ ಬಂದ ನೆಕ್ಲೆಸ್‌ನ್ನು 18 ಕೋಟಿಗೆ ಮಾರಿದ್ದಕ್ಕೆ ಇಮ್ರಾನ್‌ ಖಾನ್‌ ವಿರುದ್ಧ ತನಿಖೆ

    ತಮ್ಮ ನಾಯಕನ ಬಂಧನಕ್ಕೆ ಪಿಟಿಐ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಇಮ್ರಾನ್‌ ಖಾನ್‌ ನಿವಾಸದ ಬಳಿ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಜಮಾಯಿಸಿದ್ದರು. ಜಲಫಿರಂಗಿ ಮತ್ತು ಅಶ್ರುವಾಯು ಬಳಸಿ ಬೆಂಬಲಿಗರನ್ನು ಪೊಲೀಸರು ಚದುರಿಸಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಲಾಯಿತು.

    ಡಿಐಜಿ ಶಹಜಾದ್ ಬುಖಾರಿ ಮಾತನಾಡಿ, ಕಾನೂನುಬದ್ಧ ಪ್ರಕ್ರಿಯೆಯಡಿ ಕ್ರಮಕೈಗೊಳ್ಳಲು ಪೊಲೀಸರು ಆಗಮಿಸಿದ್ದಾರೆ. ಬೆಂಬಲಿಗರು ಅಧಿಕಾರಿಗಳೊಂದಿಗೆ ಸಹಕರಿಸಬೇಕು. ಜನರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವುದಿಲ್ಲ ಎಂದು ಭಾವಿಸಿದ್ದೇವೆ. ಇಮ್ರಾನ್ ಖಾನ್ ಅವರ ನಿವಾಸದ ಹೊರಗೆ ನೆರೆದಿದ್ದ ಸಾರ್ವಜನಿಕರಿಗೂ ಈ ಬಗ್ಗೆ ಮನವರಿಕೆ ಮಾಡಲಾಗುವುದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಅರೆಸ್ಟ್‌ ವಾರೆಂಟ್‌

    ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಅಧಿಕಾರವಧಿಯಲ್ಲಿ ದುಬಾರಿ ನೆಕ್ಲೆಸ್‌ ಉಡುಗೊರೆಯಾಗಿ ಬಂದಿತ್ತು. ಆದರೆ ಅವರು ಅದನ್ನು ರಾಜ್ಯದ ಉಡುಗೊರೆ ಭಂಡಾರಕ್ಕೆ (ತೋಶಾ-ಖಾನಾ) ಠೇವಣಿ ಇಡದೇ ವ್ಯಾಪಾರಿಯೊಬ್ಬರಿಗೆ 18 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆಂಬ ಆರೋಪ ಕೇಳಿಬಂದಿತ್ತು.