Tag: isi

  • ಪಾಕ್ ಐಎಸ್‍ಐಗೆ ಏಜೆಂಟ್‍ಗೆ ಮಾಹಿತಿ ರವಾನೆ: ಬಿಎಸ್‍ಎಫ್ ಯೋಧ ಅರೆಸ್ಟ್

    ಪಾಕ್ ಐಎಸ್‍ಐಗೆ ಏಜೆಂಟ್‍ಗೆ ಮಾಹಿತಿ ರವಾನೆ: ಬಿಎಸ್‍ಎಫ್ ಯೋಧ ಅರೆಸ್ಟ್

    ಚಂಡೀಗಢ: ಪಾಕಿಸ್ತಾನದ ಐಎಸ್‍ಐ ಏಜೆಂಟ್ ನೊಂದಿಗೆ ಮಾಹಿತಿ ರವಾನಿಸದ್ದರ ಆರೋಪದ ಮೇರೆಗೆ ಬಾರ್ಡರ್ ಸೆಕ್ಯೂರಿಟ್ ಫೋರ್ಸ್ (ಬಿಎಸ್‍ಫ್) ಯೋಧನನ್ನು ಗುಪ್ತದಳ ಅಧಿಕಾರಿಗಳು ಪಂಜಾಬಿನ ಫೆರೋಜ್‍ಪುರ್ ನಲ್ಲಿ ಬಂಧಿಸಿದ್ದಾರೆ.

    ಶೇಖ್ ರೈಯಾಜುದ್ದೀನ್ ಬಂಧಿತ ಬಿಎಸ್‍ಎಫ್ ಯೋಧ. ಕಳೆದ ಕೆಲವು ತಿಂಗಳುಗಳಿಂದ ಭದ್ರತಾ ವ್ಯವಸ್ಥೆಗೆ ಸಂಬಂಧಪಟ್ಟ ಮಾಹಿತಿ ಹಾಗೂ ಛಾಯಚಿತ್ರಗಳನ್ನು ಪಾಕಿಸ್ತಾನಿ ಮೂಲದ ಐಎಸ್‍ಐ ಏಜೆಂಟ್‍ಗೆ ರವಾನಿಸಿದ್ದಾರೆ. ಶೇಖ್ ಮೂಲತಃ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ರೆನ್‍ಪುರ್ ಗ್ರಾಮದವರಾಗಿದ್ದು, ಬಿಎಸ್‍ಎಫ್‍ನ 29ನೇ ಬೆಟಾಲಿಯನ್‍ನಲ್ಲಿ ಪಂಜಾಬ್‍ನ ಫೆರೋಜ್‍ಪುರ್ ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಗುಪ್ತದಳ ಅಧಿಕಾರಿಗಳು ಹೇಳಿದ್ದಾರೆ.

    ಮಾಹಿತಿಗಳ ಪ್ರಕಾರ ಯೋಧ ಭಾರತದ ಗಡಿಪ್ರದೇಶಗಳ ಛಾಯಚಿತ್ರ ಹಾಗೂ ಬಿಎಸ್‍ಎಫ್ ನ ಮುಖ್ಯ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಪಾಕಿಸ್ತಾನದ ಗುಪ್ತದಳ ಅಧಿಕಾರಿ ಮಿರ್ಜಾ ಫೈಸಲ್ ನೊಂದಿಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಬಂಧಿತ ಯೋಧನಿಂದ ಎರಡು ಮೊಬೈಲ್, 7 ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ.

    ಬಂಧಿತ ಆರೋಪಿಯ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ 29ನೇ ಹೆಚ್ಚುವರಿ ಕಮಾಡೇಂಟ್ ಮ್ಯಾಮ್ದತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೈನಿಕನನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ತನಿಖಾಧಿಕಾರಿ ರಂಜಿತ್ ಸಿಂಗ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿಷೇಧಗೊಂಡ ನೋಟುಗಳನ್ನು ಖರೀದಿಸುತ್ತಿದೆ ಪಾಕಿಸ್ತಾನ!

    ನಿಷೇಧಗೊಂಡ ನೋಟುಗಳನ್ನು ಖರೀದಿಸುತ್ತಿದೆ ಪಾಕಿಸ್ತಾನ!

    ನವದೆಹಲಿ: ಭಾರತದಲ್ಲಿ ನಿಷೇಧಗೊಂಡ ನೋಟುಗಳನ್ನು ಪಾಕಿಸ್ತಾನ ಸಂಗ್ರಹಿಸುತ್ತಿದ್ದು, ಅವುಗಳನ್ನು ಪುನರ್ಬಳಕೆ ಮಾಡಿ ಹೊಸ ನಕಲಿ ನೋಟುಗಳನ್ನು ಮುದ್ರಿಸುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಪಾಕಿಸ್ತಾನದ ಗೂಢಾಚಾರ ಸಂಸ್ಥೆ ಐಎಸ್‍ಐ ಭಾರತದಲ್ಲಿ ಅಮಾನ್ಯೀಕರಣಗೊಂಡ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಭಾರೀ ಪ್ರಮಾಣದಲ್ಲಿ ಸಂಗ್ರಹಿಸುತ್ತಿದೆ. ತನ್ನ ಏಜೆಂಟರ್ ಮೂಲಕ ಭಾರತದ ವಿವಿಧ ರಾಜ್ಯಗಳಿಂದ ಲಕ್ಷಗಟ್ಟಲೆ ಹಳೆಯ ನೋಟುಗಳನ್ನು ಸಂಗ್ರಹ ಮಾಡುತ್ತಿದೆ ಎಂದು ಗುಪ್ತಚರ ಇಲಾಖೆಗ ಮೂಲಗಳನ್ನು ಆಧಾರಿಸಿ ವಾಹಿನಿಯೊಂದು ವರದಿ ಮಾಡಿದೆ.

    ಹಳೆಯ ನೋಟುಗಳನ್ನು ನೇಪಾಳ ಮೂಲಕ ಪಾಕಿಸ್ತಾನಕ್ಕೆ ಕಳ್ಳಸಾಗಾಣೆ ಮಾಡುತ್ತಿದೆ. ಬಳಿಕ ಅಲ್ಲಿಂದ ಈ ನೋಟುಗಳನ್ನು ಕರಾಚಿ ಮತ್ತು ಪೇಶಾವರದಲ್ಲಿರುವ ಪ್ರಿಂಟಿಂಗ್ ಪ್ರೆಸ್‍ಗಳಿಗೆ ರವಾನಿಸಿ, ನೋಟುಗಳಲ್ಲಿರುವ ಆರ್‍ಬಿಐನ ನೋಟಿನಲ್ಲಿ ಹಾಕಿರುವ ಭದ್ರತಾ ವಿಶೇಷತೆಗಳ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ ಎಂದು ಹೇಳಿದೆ.

    ಹಳೆಯ ನೋಟುಗಳ ಬಳಸಿಕೊಂಡು 500, 2000 ಹಾಗೂ 50 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸುತ್ತಿದೆ. ಭೂಗತಪಾತಕಿ ದಾವೂದ್ ಇಬ್ರಾಹಿಂನ ಸಹಾಯದಿಂದ ಈ ನಕಲಿ ನೋಟುಗಳನ್ನು ಬಾಂಗ್ಲಾ ಮತ್ತು ದುಬೈಗೆ ರಫ್ತು ಮಾಡುತ್ತಿವೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

    ಭಾರತದಲ್ಲಿ ಲಕ್ಷಗಟ್ಟಲೆ ಅಮಾನ್ಯೀಕರಣಗೊಂಡ ನೋಟುಗಳು ದಾಳಿಯಲ್ಲಿ ಸಿಕ್ಕಿದ್ದವು. ಈ ಕುರಿತು ತನಿಖೆ ನಡೆಸಿದಾಗ ಪಾಕಿಸ್ತಾನದ ಐಎಸ್‍ಐ ತನ್ನ ಏಜೆಂಟರುಗಳು ಮೂಲಕ ಅಮಾನ್ಯೀಕರಗೊಂಡ ನೋಟುಗಳನ್ನು ಸಂಗ್ರಹಿಸುತ್ತಿರುವ ಮಾಹಿತಿ ಬಯಲಾಗಿದೆ. ಈ ನೋಟುಗಳು ಭಾರತದ ಗಡಿ ದಾಟಿ, ನೇಪಾಳ ತಲುಪುತ್ತಿದಂತೆಯೇ ಏಜೆಂಟರ ಮೂಲಕ ಹಣ ಪಾವತಿ ಮಾಡುತ್ತಿರುವ ವಿಚಾರ ತನಿಖೆ ವೇಳೆ ತಿಳಿದುಬಂದಿದೆ. ಈಗಾಗಲೇ ಭಾರೀ ಪ್ರಮಾಣದಲ್ಲಿ ನೋಟುಗಳು ಕಳ್ಳಸಾಗಾಣಿಕೆಯ ಮೂಲಕ ಪಾಕಿಸ್ತಾನಕ್ಕೆ ಸರಬರಾಜಾಗಿರುವುದು ತಿಳಿದು ಬಂದಿದೆ ಎಂದು ಗೂಢಾಚಾರ ಸಂಸ್ಥೆ ವರದಿ ಮಾಡಿದೆ.

    ಈ ನಕಲಿ ನೋಟುಗಳನ್ನು ಬಾಂಗ್ಲಾ ಮತ್ತು ದುಬೈ ದೇಶಗಳ ಮೂಲಕ ಭಾರತಕ್ಕೆ ಕಳ್ಳಸಾಗಣಿಕೆ ಮಾಡುತ್ತಿದೆ. ಈ ನೋಟುಗಳನ್ನು ಈಗಾಗಲೇ ಭಾರತದಲ್ಲಿ ಚಲಾವಣೆ ನಡೆಸುತ್ತಿರುವುದು ತಿಳಿದು ಬಂದಿದೆ. ಈ ನಕಲಿ ನೋಟಿನ ಜಾಲದ ಹಿಂದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕೈಜೋಡಿಸಿದ್ದಾನೆ ಎಂದು ಹೇಳಿದೆ.

    ಕೆಲವು ನಕಲಿ ನೋಟುಗಳನ್ನು ವಶಪಡಿಸಿಕೊಂಡು, ಪರೀಕ್ಷೆ ನಡೆಸಿದಾಗ ಮೂಲ ನೋಟಿನಲ್ಲಿರುವ ಎಲ್ಲಾ ಭದ್ರತಾ ಅಂಶಗಳನ್ನು ಇವು ಒಳಗೊಂಡಿವೆ. ಅಲ್ಲದೆ ಯಾವುದು ನಕಲಿ, ಯಾವುದು ಅಸಲಿ ಎಂದು ತಿಳಿಯುವುದು ಕಷ್ಟವಾಗಿದೆ. ಈ ನೋಟುಗಳನ್ನು ಸಾಮಾನ್ಯ ವ್ಯಕ್ತಿ ಪತ್ತೆ ಹಚ್ಚುವುದು ತುಂಬಾ ಕಷ್ಟದ ವಿಷಯವಾಗಿದೆ ಎಂದು ತಿಳಿಸಿದೆ.

  • ಪಾಕ್‍ನಲ್ಲಿ ಅಡುಗೆ ಕೆಲಸ ಮಾಡಿ ಭಾರತದ ರಹಸ್ಯವನ್ನು ಐಎಸ್‍ಐಗೆ ತಿಳಿಸಿದ!

    ಪಾಕ್‍ನಲ್ಲಿ ಅಡುಗೆ ಕೆಲಸ ಮಾಡಿ ಭಾರತದ ರಹಸ್ಯವನ್ನು ಐಎಸ್‍ಐಗೆ ತಿಳಿಸಿದ!

    ಡೆಹ್ರಾಡೂನ್: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಉತ್ತರಪ್ರದೇಶದ ಭಯೋತ್ಪಾದನ ನಿಗ್ರಹ ದಳ(ಎಟಿಎಸ್) ಬಂಧಿಸಿದೆ.

    ಆರೋಪಿಯನ್ನು ಉತ್ತರಾಖಂಡದ ಪಿತ್ತೋರ್‍ಗಢ ಜಿಲ್ಲೆಯ ಕಿರೊಲಾ ಗ್ರಾಮದ ರಮೇಶ್ ಸಿಂಗ್ ಕನ್ಯಾಲ್ (43) ಎಂದು ಗುರುತಿಸಲಾಗಿದೆ. ಅವನು ಪಾಕಿಸ್ತಾನದ ಇಂಟರ್ ಸರ್ವೀಸ್ ಇಂಟೆಲಿಜೆನ್ಸ್‍ಗೆ (ಐಎಸ್‍ಐ)ಗೆ ರಾಷ್ಟ್ರೀಯ ಭದ್ರತಾ ಮಾಹಿತಿಯನ್ನು ನೀಡುತ್ತಿದ್ದ ಎಂದು ವರದಿಯಾಗಿದೆ.

    ಉತ್ತರ ಪ್ರದೇಶದ ಎಟಿಎಸ್‍ನ ಐದು ಜನರ ತಂಡವು ಆರೋಪಿಯನ್ನು ಆತನ ಮನೆಗೆ ತೆರಳಿ ಬಂಧಿಸಿದೆ. ಆತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಕೋರ್ಟ್ ಹೆಚ್ಚಿನ ವಿಚಾರಣೆಗೆ ಎಟಿಎಸ್ ಕಸ್ಟಡಿಗೆ ನೀಡಿದೆ.

    ಬೇಹುಗಾರಿಕೆ ನಡೆಸುತ್ತಿದ್ದ ಅನುಮಾನದ ಮೇಲೆ ಆತನನ್ನು ಬಂಧಿಸಲಾಗಿದೆ ಎಂದು ಎಟಿಎಸ್‍ನ ಜನರಲ್ ಇನ್ಸ್ ಪೆಕ್ಟರ್ ಆಸೀಂ ಅರುಣ್ ತಿಳಿಸಿದ್ದಾರೆ. ಈ ಹಿಂದೆ ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದ ಭಾರತದ ರಾಯಭಾರಿಯ ನಿವಾಸದಲ್ಲಿ ಅಡುಗೆ ಕೆಲಸಕ್ಕಾಗಿ ಆರೋಪಿಯನ್ನು ನಿಯೋಜಿಸಲಾಗಿತ್ತು. 2015 ರಿಂದ 2017ರ ವರೆಗೆ ಅಲ್ಲಿ ಕೆಲಸ ಮಾಡುತ್ತಿದ್ದಾಗ ಐಎಸ್‍ಐ ಈತನನ್ನು ಸಂಪರ್ಕಿಸಿ ಹಣದ ಆಸೆ ತೋರಿಸಿದೆ. ಈ ಆಸೆಗೆ ಬಲಿಯಾದ ಈತ ಭಾರತದ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಐಎಸ್‍ಐಗೆ ನೀಡುತ್ತಿದ್ದಾನೆ ಎನ್ನುವ ಖಚಿತ ಮಾಹಿತಿ ಪಿತ್ತೋರ್‍ಗಢ ಜಿಲ್ಲಾ ಪೊಲೀಸರಿಗೆ ಸಿಕ್ಕಿತ್ತು.

    ಸೇನೆಯ ಗುಪ್ತಚರ ಇಲಾಖೆ ಈತನ ಚಟುವಟಿಕೆಯ ಮೇಲೆ ಕಣ್ಣಿಟ್ಟ ಬಳಿಕ ಎಟಿಎಸ್‍ಗೆ ತಿಳಿಸಿತ್ತು. ಈಗ ಎಟಿಎಸ್ ರಮೇಶ್ ಸಿಂಗ್ ಕನ್ಯಾಲ್ ಬಳಿಯಿದ್ದ ಪಾಕಿಸ್ತಾನದ ಸಿಮ್ ಕಾರ್ಡ್ ಹಾಗೂ ಮೊಬೈಲ್‍ನ್ನು ವಶಪಡಿಸಿಕೊಂಡಿದೆ.

    ಆರೋಪಿ ಸಹೋದರ ಕೂಡ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಕನ್ಯಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಐಎಸ್‍ಐ ಏಜೆಂಟ್‍ಗಳ ಹನಿಟ್ರ್ಯಾಪ್‍ಗೆ ಒಳಗಾಗಿ ದಾಖಲೆಗಳನ್ನು ನೀಡಿದ ಐಎಎಫ್ ಅಧಿಕಾರಿಯ ಬಂಧನ

    ಐಎಸ್‍ಐ ಏಜೆಂಟ್‍ಗಳ ಹನಿಟ್ರ್ಯಾಪ್‍ಗೆ ಒಳಗಾಗಿ ದಾಖಲೆಗಳನ್ನು ನೀಡಿದ ಐಎಎಫ್ ಅಧಿಕಾರಿಯ ಬಂಧನ

    ನವದೆಹಲಿ: ಪಾಕಿಸ್ತಾನದ ಗೂಢಚಾರಿಕಾ ಸಂಸ್ಥೆ ಐಎಸ್‍ಐ ಗೆ ಮಾಹಿತಿ ಸೋರಿಕೆ ಮಾಡಿದ ಆರೋಪದಡಿ ಭಾರತೀಯ ವಾಯುಪಡೆಯ ಅಧಿಕಾರಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ವಾಯುಪಡೆ ವಿಂಗ್ ಕಾಮಾಂಡರ್ ಆರುಣ್ ಮರ್ವಾಹಾ (51) ಬಂಧಿತ ಅಧಿಕಾರಿ. ಪಾಕಿಸ್ತಾನ ಐಎಸ್‍ಐ ನ ಇಬ್ಬರು ಏಜೆಂಟ್‍ಗಳು ತಾವು ಮಹಿಳೆಯರೆಂದು ಬಿಂಬಿಸಿ ಹನಿಟ್ರ್ಯಾಪ್ ಮಾಡಿ ವಾಟ್ಸಪ್ ಮೂಲಕ ವಾಯುಪಡೆಯ ಪ್ರಮುಖ ದಾಖಲೆಗಳನ್ನ ಪಡೆದಿದ್ದಾರೆ ಎಂದು ವರದಿಯಾಗಿದೆ.

    ಕಾಮಾಂಡರ್ ಆರುಣ್ ದೆಹಲಿಯ ಐಎಎಫ್ ಮುಖ್ಯಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಇವರ ವಿರುದ್ಧ ಅಫಿಶಿಯಲ್ ಸೀಕ್ರೆಟ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದೆ. ಆರೋಪ ಸಾಬೀತಾದರೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಗಳಿದೆ. ಆರುಣ್ ಮುಂದಿನ ವರ್ಷ ಕೆಲಸದಿಂದ ನಿವೃತ್ತಿ ಹೊಂದಬೇಕಿತ್ತು ಎಂದು ವರದಿಯಾಗಿದೆ.

    ಮಹಿಳೆಯರ ಹೆಸರಲ್ಲಿ ನಕಲಿ ಖಾತೆ ಹೊಂದಿದ್ದ ಪಾಕಿಸ್ತಾನದ ಐಎಸ್‍ಐ ಏಜೆಂಟ್‍ಗಳ ಜೊತೆ ಅಧಿಕಾರಿ ಫೇಸ್‍ಬುಕ್ ನಲ್ಲಿ ಕೆಲ ತಿಂಗಳ ಹಿಂದೆ ಸ್ನೇಹ ಬೆಳೆಸಿಕೊಂಡಿದ್ದರು. ನಂತರ ವಾಟ್ಸಪ್‍ನಲ್ಲಿ ನಿರಂತರ ಚಾಟ್ ಮಾಡುತ್ತಿದ್ದರು. ಸಲಿಗೆಯ ಸಂದೇಶಗಳನ್ನ ವಿನಿಮಯ ಮಾಡಿಕೊಂಡಿದ್ದರು. ಏಜೆಂಟ್‍ಗಳು ಅಧಿಕಾರಿಯ ವಿಶ್ವಾಸ ಗಳಿಸಿದ ಬಳಿಕ, ಅಶ್ಲೀಲ ಫೋಟೋಗಳಿಗೆ ಬದಲಿಯಾಗಿ ರಹಸ್ಯ ಮಾಹಿತಿಯುಳ್ಳ ದಾಖಲೆಗಳನ್ನ ಅಧಿಕಾರಿಯಿಂದ ಪಡೆದಿದ್ದಾರೆ. ಅಧಿಕಾರಿ ಹಂಚಿಕೊಂಡ ಮಾಹಿತಿ ಸೈಬರ್ ವಾರ್ ಫೇರ್, ಸ್ಪೇಸ್ ಮತ್ತು ವಿಶೇಷ ಕಾರ್ಯಾಚರಣೆಗಳದ್ದಾಗಿದೆ ಎಂದು ವರದಿಯಾಗಿದೆ.

    ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರು ಕೆಲವು ವಾರಗಳ ಹಿಂದೆ ಈ ಬಗ್ಗೆ ಪತ್ತೆ ಮಾಡಿದ ನಂತರ ಆಂತರಿಕ ತನಿಖೆಗೆ ಆದೇಶಿಸಿದ್ದರು. ಇದರಲ್ಲಿ ಆರುಣ್ ಅವರ ಪಾತ್ರವಿರುವುದು ಸಾಬೀತಾದ ಬಳಿಕ ವಾಯುಪಡೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದೆ. 10 ದಿನಗಳ ವಿಚಾರಣೆಯ ಬಳಿಕ ವಾಯುಪಡೆಯ ಕೌಂಟರ್ ಇಂಟೆಲಿಜೆನ್ಸ್ ವಿಭಾಗ ಪ್ರಕರಣವನ್ನ ಪೊಲೀಸರಿಗೆ ಹಸ್ತಾಂತರಿಸಿದೆ.

    ಗುರುವಾರ ಆರುಣ್ ರನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ, ಅರುಣ್ ಅವರನ್ನ 5 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಕಟ್ಟಡದೊಳಗೆ ಮೊಬೈಲ್ ಬಳಕೆ ನಿಷೇಧವಿದ್ದರೂ ಬಂಧನದ ವೇಳೆ ಅರುಣ್ ಮೊಬೈಲ್‍ನೊಂದಿಗೆ ಕಚೇರಿಯತ್ತ ಹೆಜ್ಜೆ ಹಾಕುತ್ತಿದ್ದರು. ಪಾಕಿಸ್ತಾನದ ಇನ್ನೂ ದೊಡ್ಡ ಬೇಹುಗಾರಿಕೆಯಲ್ಲಿ ಅರುಣ್ ಪಾತ್ರವಿದೆಯಾ ಎಂಬ ಬಗ್ಗೆ ವಾಯುಪಡೆಯ ಕೌಂಟರ್ ಇಂಟೆಲಿಜೆನ್ಸ್ ವಿಭಾಗ ಪರಿಶೀಲನೆ ನಡೆಸುತ್ತಿದೆ.

  • ಪೊಲೀಸ್ ಸಿಬ್ಬಂದಿಗೂ ಐಎಸ್‍ಐ ಹೆಲ್ಮೆಟ್ ಕಡ್ಡಾಯ- ಮೈಸೂರು ಪೊಲೀಸ್ ಆಯುಕ್ತರಿಂದ ಸುತ್ತೋಲೆ

    ಪೊಲೀಸ್ ಸಿಬ್ಬಂದಿಗೂ ಐಎಸ್‍ಐ ಹೆಲ್ಮೆಟ್ ಕಡ್ಡಾಯ- ಮೈಸೂರು ಪೊಲೀಸ್ ಆಯುಕ್ತರಿಂದ ಸುತ್ತೋಲೆ

    ಮೈಸೂರು: ಪೊಲೀಸ್ ಸಿಬ್ಬಂದಿಯೂ ದ್ವಿ ಚಕ್ರವಾಹನ ಸವಾರಿ ಮಾಡುವಾಗ ಕಡ್ಡಾಯವಾಗಿ ಐಎಸ್‍ಐ ಗುಣಮಟ್ಟದ ಹೆಲ್ಮೆಟ್ ಧರಿಸಿದುವಂತೆ ನಗರ ಪೊಲೀಸ್ ಆಯುಕ್ತರಾದ ಸುಬ್ರಮಣ್ಯೇಶ್ವರ ರಾವ್ ಸುತ್ತೋಲೆ ಹೊರಡಿಸಿದ್ದಾರೆ.

    ನಗರದಲ್ಲಿ ಕೆಲವು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಬಿಐಎಸ್‍/ ಐಎಸ್‍ಐ ಗುಣಮ್ಟವಲ್ಲದ ಹಾಗೂ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಕರ್ತವ್ಯಕ್ಕಾಗಿ ವಿತರಿಸಲಾಗಿರುವ ಹೆಲ್ಮೆಟ್ ಧರಿಸಿ ದ್ವಿಚಕ್ರವಾಹಗಳಲ್ಲಿ ಸವಾರಿ ಮಾಡುತ್ತಿರುವುದು ಕಂಡು ಬರುತ್ತಿದೆ. ಇದು ಸಾರ್ವಜನಿಕರ ವಲಯದಲ್ಲಿ ಪೊಲೀಸ್ ಇಲಾಖೆಯನ್ನು ಮುಜುಗರಕ್ಕೆ ಎಡೆ ಮಾಡಿಕೊಡುತ್ತಿದೆ. ಹೀಗಾಗಿ ನಗರದ ಎಲ್ಲಾ ಘಟಕಗಳ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಕರ್ತವ್ಯದ ಅವಧಿಯಲ್ಲಿ ಮತ್ತು ರಜೆ/ವಿಶ್ರಾಂತಿಯ ಅವಧಿಯಲ್ಲಿ ದ್ವಿಚಕ್ರವಾಹನ ಸವಾರಿ ಅಥವಾ ಹಿಂಬದಿ ಸವಾರಿ ಮಾಡುವಾಗ ಕಡ್ಡಾಯವಾಗಿ ಬಿಐಎಸ್/ಐಎಸ್‍ಐ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು. ಯಾವುದೇ ಕಾರಣಕ್ಕೂ ಕಳಪೆ ಹೆಲ್ಮೆಟ್ ಹಾಗೂ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಗೆ ವಿತರಿಸಲಾದ ಹೆಲ್ಮೆಟ್‍ಗಳನ್ನು ಧರಿಸಬಾರದು ಎಂದು ಸುತ್ತೋಲೆಯಲ್ಲಿ ಹೇಳಿದ್ದಾರೆ.

    ಈ ಕುರಿತು ಆಯಾ ಠಾಣಾ ಅಧಿಕಾರಿಗಳು ತನ್ನ ಸಿಬ್ಬಂದಿಗೆ ತಿಳುವಳಿಕೆ ನೀಡಬೇಕು. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ ಠಾಣೆ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಐಎಸ್‍ಐ ಮಾರ್ಕ್ ಇಲ್ಲದ ಹಾಗೂ ಅರ್ಧ ಹೆಲ್ಮೆಟ್ ಧರಿಸಿದ್ದ ಬೈಕ್ ಸವಾರರಿಂದ ಪೊಲೀಸರು ಹೆಲ್ಮೆಟ್ ವಶಪಡಿಸಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಈ ನಡುವೆ ಐಎಸ್‍ಐ ಮಾರ್ಕ್ ಇಲ್ಲದ ಅರ್ಧ ಹೆಲ್ಮೆಟ್ ಹೊಂದಿದ್ದ ಪೇದೆಯ ಕಳಪೆ ಹೆಲ್ಮೆಟನ್ನು ಸಾರ್ವಜನಿಕರೇ ಒಡೆದು ಹಾಕಿದ್ದ ಘಟನೆ ಮೈಸೂರಿನಲ್ಲಿ ನಡೆದಿತ್ತು.

    ಮೈಸೂರಿನ ಚೆಲುವಾಂಬ ಪಾರ್ಕ್ ಬಳಿ ನಡೆದಿದ್ದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೆಲ್ಮೆಟ್ ಒಡೆದು ಹಾಕಿದ್ದ ಸಾರ್ವಜನಿಕರು, ನಮಗೊಂದು ನ್ಯಾಯ ಪೊಲೀಸರಿಗೊಂದು ನ್ಯಾಯವಾ ಎಂದು ಪ್ರಶ್ನಿಸಿದ್ದರು.

    ಈ ಹಿನ್ನೆಲೆಯಲ್ಲಿ ಇನ್ಮುಂದೆ ಪೊಲೀಸರೂ ಕೂಡ ದ್ವಿಚಕ್ರ ವಾಹನ ಸವಾರಿ ಮಾಡುವಾಗ ಕಡ್ಡಾಯವಾಗಿ ಬಿಐಎಸ್/ಐಎಸ್‍ಐ ಮಾರ್ಕ್ ಉಳ್ಳ ಹೆಲ್ಮೆಟ್ ಧರಿಸಬೇಕೆಂದು ಸೂಚನೆ ನೀಡಲಾಗಿದೆ.

    https://www.youtube.com/watch?v=Gihb1FMiVtA