Tag: ishwarya rai

  • ಭಾರತೀಯ ನಾರಿ ಡಯಾನಾ ಹೆಡನ್ ಅಲ್ಲ, ಐಶ್ವರ್ಯಾ ರೈ: ಮೋದಿ ಎಚ್ಚರಿಕೆಯ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ಕೊಟ್ಟ ತ್ರಿಪುರಾ ಸಿಎಂ

    ಭಾರತೀಯ ನಾರಿ ಡಯಾನಾ ಹೆಡನ್ ಅಲ್ಲ, ಐಶ್ವರ್ಯಾ ರೈ: ಮೋದಿ ಎಚ್ಚರಿಕೆಯ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ಕೊಟ್ಟ ತ್ರಿಪುರಾ ಸಿಎಂ

    ಅಗರ್ತಲಾ: ಇತ್ತೀಚೆಗಷ್ಟೇ ಇಂಟರ್ ನೆಟ್ ಬಗ್ಗೆ ಹೇಳಿಕೆ ನೀಡಿದ್ದ ತ್ರಿಪುರಾ ಸಿಎಂ ವಿಪ್ಲವ್ ದೇವ್ ಇದೀಗ ಮತ್ತೊಂದು ಹೇಳಿಕೆ ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

    ಅಗರ್ತಲಾದ ಪ್ರಜ್ಞಾ ಭವನ್ ನಲ್ಲಿ ನಡೆದ ಕೈ ಮಗ್ಗಗಳು ಮತ್ತು ಕರಕುಶಲ ವಸ್ತುಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಐಶ್ವರ್ಯಾ ರೈ ನಿಜವಾದ ಭಾರತೀಯ ನಾರಿ. ಆದ್ರೆ ಮಾಜಿ ವಿಶ್ವಸುಂದರಿ ಡಯಾನಾ ಹೆಡನ್ ಅಲ್ಲ. ಭಾರತೀಯ ನಾರಿ ಲಕ್ಷ್ಮಿ, ಸರಸ್ವತಿಯರನ್ನು ಪ್ರತಿನಿಧಿಸುತ್ತಾರೆ. ಐಶ್ವರ್ಯ ರೈ ಸಹ ಭಾರತೀಯ ಮಹಿಳೆಯರನ್ನು ಪ್ರತಿನಿಧಿಸುತ್ತಾರೆ ಅಂತ ಹೇಳಿದ್ದಾರೆ.

    `ಐಶ್ವರ್ಯ ರೈ ಅವರಿಗೆ ಈ ಕಿರೀಟ ತೊಡಿಸಿದ್ದರಲ್ಲಿ ಅರ್ಥವಿದೆ. ಆದರೆ ಡಯಾನಾ ಹೆಡನ್ ಗೆ ಈ ಪ್ರಶಸ್ತಿ ಸಿಕ್ಕಿದ್ದು ಹೇಗೆ?’ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:  ಮಹಾಭಾರತದ ಕಾಲದಲ್ಲೇ ಇಂಟರ್ ನೆಟ್ ಇತ್ತು : ತ್ರಿಪುರಾ ಸಿಎಂ

    `ಹಿಂದೆ ಭಾರತೀಯ ಮಹಿಳೆಯರು ಸೌಂದರ್ಯವರ್ಧಕ, ಶಾಂಪೂ ಮೊದಲಾದವುಗಳನ್ನು ಬಳಸುತ್ತಿರಲಿಲ್ಲ. ಆ ಸಂದರ್ಭದಲ್ಲಿ ಇವುಗಳೆಲ್ಲ ಅಂತಾರಾಷ್ಟ್ರೀಯ ಮಾಫಿಯಾಗಳಾಗಿದ್ದವು. ನಮ್ಮ ದೇಶದಲ್ಲಿ ಸಾಕಷ್ಟು ಮಾರುಕಟ್ಟೆ ಇದೆ. ಇಂದು ದೇಶದ ಮೂಲೆ ಮೂಲೆಯಲ್ಲಿಯೂ ಬ್ಯೂಟಿ ಪಾರ್ಲರ್ ಗಳು ತಲೆಯೆತ್ತಿವೆ. ಆದರೆ ಇವುಗಳಿಂದ ಸಿಗುವ ಸೌಂದರ್ಯ ನಿಜವಾದ ಸೌಂದರ್ಯವಲ್ಲ’ ಎಂದು ಅವರು ತಿಳಿಸಿದ್ದಾರೆ.

    ಒಟ್ಟಿನಲ್ಲಿ  ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಪಕ್ಷದ ಎಲ್ಲಾ ನಾಯಕರಿಗೂ ಸೂಚನೆ ನೀಡಿದ್ದರು. ವಿನಾಕಾರಣ ಯಾರೊಬ್ಬರೂ ಮಾಧ್ಯಮದ ಮುಂದೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದೆಂದು ಎಚ್ಚರಿಕೆ ನೀಡಿದ್ದರು. 1994ರಲ್ಲಿ ಐಶ್ವರ್ಯಾ ರೈ ವಿಶ್ವ ಸುಂದರಿಯಾದ್ರೆ, 1997 ರಲ್ಲಿ ಡಯಾನಾ ಹೆಡನ್ ವಿಶ್ವ ಸುಂದರಿ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡಿದ್ದರು.

  • ತವರೂರು ಮಂಗ್ಳೂರಲ್ಲಿ ಕಾಣಿಸಿಕೊಂಡ ನಟಿ ಐಶ್ವರ್ಯಾ ರೈ!

    ತವರೂರು ಮಂಗ್ಳೂರಲ್ಲಿ ಕಾಣಿಸಿಕೊಂಡ ನಟಿ ಐಶ್ವರ್ಯಾ ರೈ!

    ಮಂಗಳೂರು: ಬಾಲಿವುಡ್ ನಟಿ, ಕರಾವಳಿ ಬೆಡಗಿ ಐಶ್ವರ್ಯಾ ರೈ ಅವರು ತಮ್ಮ ತವರೂರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ.

    ಕೊಡಿಯಾಲ್ ಬೈಲಿನ ಟಿಎಂಎ ಪೈ ಹಾಲ್‍ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಮಗಳು ಆರಾಧ್ಯ, ತಾಯಿ ಬೃಂದಾ ರೈ ಜೊತೆ ಪಾಲ್ಗೊಂಡಿದ್ದರು. ಐಶ್ವರ್ಯಾ ರೈ ತಾಯಿ ಬೃಂದಾ ರೈ ಅವರ ಸೋದರನ ಮಗಳ ಮದುವೆ ಸಮಾರಂಭವಾಗಿತ್ತು.

    ಸಮಾರಂಭದಲ್ಲಿ ತುಳುನಾಡಿನ ಸಂಪ್ರದಾಯದಂತೆ ನಟಿ ಐಶ್ವರ್ಯಾ ಹಿರಿಯರ ಕಾಲಿಗೆರಗಿ ಆಶೀರ್ವಾದ ಪಡೆದ್ರು. ನಟಿ ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ರೆ, ಮಗಳು ಆರಾಧ್ಯ ಕೂಡ ಅದೇ ಬಣ್ಣದ ಡ್ರೆಸ್ ನಲ್ಲಿ ಮಿಂಚುತ್ತಿದ್ದಳು.

    ಒಟ್ಟಿನಲ್ಲಿ ಸದ್ದಿಲ್ಲದೇ ತವರೂರಿಗೆ ಆಗಮಿಸಿದ ನಟಿ ಐಶ್ವರ್ಯಾ ಮದುವೆ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದರು.