Tag: Ishaan Kishan

  • ಟೀಂ ಇಂಡಿಯಾದಲ್ಲಿ ಆಡದಿದ್ರೂ ಐಪಿಎಲ್‍ನಲ್ಲಿ ಸಾಧನೆಗೈದ ಆಟಗಾರರು

    ಟೀಂ ಇಂಡಿಯಾದಲ್ಲಿ ಆಡದಿದ್ರೂ ಐಪಿಎಲ್‍ನಲ್ಲಿ ಸಾಧನೆಗೈದ ಆಟಗಾರರು

    ನವದೆಹಲಿ: ಐಪಿಎಲ್‍ನಲ್ಲಿ ಉತ್ತಮ ಸಾಧನೆ ಮಾಡಿದರು ಕೆಲ ಆಟಗಾರರು ಇನ್ನೂ ಟೀಂ ಇಂಡಿಯಾಗೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಾರೆ. ಆದರೆ ಐಪಿಎಲ್‍ನಲ್ಲಿ ಮಾತ್ರ ಉತ್ತಮವಾಗಿ ಆಡಿಕೊಂಡು ಬರುತ್ತಿದ್ದಾರೆ.

    ಈ ಪಟ್ಟಿಯಲ್ಲಿ ನಮಗೆ ಮೊದಲು ಸಿಗುವುದು ಮುಂಬೈ ಇಂಡಿಯನ್ಸ್ ತಂಡ ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್, ಕಿಂಗ್ಸ್ ಇಲೆವೆನ್ ತಂಡದ ಸಂದೀಪ್ ಶರ್ಮಾ, ರಾಜಸ್ಥಾನ್ ರಾಯಲ್ಸ್ ತಂಡದ ರಾಹುಲ್ ತೆವಾಟಿಯಾ ಮತ್ತು ಶ್ರೇಯಸ್ ಗೋಪಾಲ್. ಈ ಎಲ್ಲರೂ ಉತ್ತಮವಾಗಿ ಆಡಿದರೂ ಕೂಡ ಟೀಂ ಇಂಡಿಯಾಗೆ ಸೆಲೆಕ್ಟ್ ಆಗುವಲ್ಲಿ ವಿಫಲರಾಗಿದ್ದಾರೆ.

    ಸೂರ್ಯ ಕುಮಾರ್ ಯಾದವ್: ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುವ ಯಾದವ್ ಓರ್ವ ಉತ್ತಮ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್‍ನಲ್ಲಿ 101 ಪಂದ್ಯಗಳನ್ನು ಆಡಿರುವ ಸೂರ್ಯ 11 ಅರ್ಧಶತಕದ ಸಹಾಯದಿಂದ 2,024 ರನ್ ಸಿಡಿಸಿದ್ದಾರೆ. ಐಪಿಎಲ್-2020ರಲ್ಲಿ ಮುಂಬೈ ಇಂಡಿಯನ್ಸ್ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಸೂರ್ಯ, 16 ಪಂದ್ಯಗಳಲ್ಲಿ 480 ರನ್ ಸಿಡಿಸಿ ಮಿಂಚಿದರು. ಜೊತೆಗೆ ಟೀಂ ಇಂಡಿಯಾಗೆ ಸೆಲೆಕ್ಟ್ ಆಗದ ಕಾರಣಕ್ಕೆ ವಿವಾದವನ್ನು ಮಾಡಿಕೊಂಡಿದ್ದರು.

    ಇಶಾನ್ ಕಿಶನ್: 22 ವರ್ಷದ ಈ ಮುಂಬೈ ಇಂಡಿಯನ್ಸ್ ಆಟಗಾರ ಈ ಬಾರಿಯ ಐಪಿಎಲ್‍ನಲ್ಲಿ ಭರ್ಜರಿ ಫಾರ್ಮ್‍ನಲ್ಲಿದ್ದರು. ತಮಗೆ ನೀಡಿದ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡ ಕಿಶನ್ 14 ಪಂದ್ಯಗಳನ್ನಾಡಿ ನಾಲ್ಕು ಅರ್ಧಶತಕದ ಜೊತೆಗೆ 516 ರನ್‍ಗಳಿಸಿದರು. ಇದರ ಜೊತೆಗೆ ಈ ಬಾರಿಯ ಐಪಿಎಲ್‍ನಲ್ಲಿ 30 ಸಿಕ್ಸ್ ಸಿಡಿಸಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ದಾಖಲೆ ಬರೆದರು. ದೊಡ್ಡ ಹೊಡೆತಗಳನ್ನು ಹೊಡೆಯುವ ಮೂಲಕ ಎಲ್ಲರ ಗಮನ ಸೆಳೆದರು.

    ಸಂದೀಪ್ ಶರ್ಮಾ: ಐಪಿಎಲ್ ಟೂರ್ನಿಯಲ್ಲಿ ಸಂದೀಪ್ ಶರ್ಮಾ ಬುಮ್ರಾ ಅವರಷ್ಟೇ ವಿಕೆಟ್ ಪಡೆದುಕೊಂಡಿದ್ದಾರೆ. ಆದರೆ ಸಂದೀಪ್ ಇನ್ನು ಟೀಂ ಇಂಡಿಯಾಗೆ ಆಯ್ಕೆಯಾಗಿಲ್ಲ. ಪವರ್ ಪ್ಲೇನಲ್ಲಿ ಸೂಪರ್ ಆಗಿ ಬೌಲ್ ಮಾಡುವ ಶರ್ಮಾ ಪವರ್ ಪ್ಲೇನಲ್ಲಿ 53 ವಿಕೆಟ್ ಪಡೆದು ಮೊದಲ ಆರು ಓವರಿನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದಿರುವ ಆಟಗಾರ ಎನಿಸಿಕೊಂಡಿದ್ದಾರೆ. ಜೊತೆಗೆ ಐಪಿಎಲ್-2020ಯಲ್ಲಿ 13 ಪಂದ್ಯಗಳನ್ನಾಡಿ 14 ವಿಕೆಟ್ ಪಡೆದು ಮಿಂಚಿದರು.

    ರಾಹುಲ್ ತೆವಾಟಿಯಾ: ಈ ಬಾರಿಯ ಐಪಿಎಲ್‍ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ರಾಹುಲ್ ತೆವಾಟಿಯಾ ತನ್ನ ಅಬ್ಬರ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಗಮನ ಸೆಳೆದರು. ಜೊತೆಗೆ ಡೆತ್ ಓವರಿನಲ್ಲಿ ಒಳ್ಳೆಯ ಸ್ಟ್ರೈಕ್ ರೇಟ್‍ನಲ್ಲಿ ಬ್ಯಾಟ್ ಬೀಸಿ ಕ್ರೀಡಾಭಿಮಾನಿಗಳನ್ನು ಇಂಪ್ರೆಸ್ ಮಾಡಿದರು. ಈ ಬಾರಿ ರಾಜಸ್ಥಾನ್ ರಾಯಲ್ಸ್ ಪರ 14 ಪಂದ್ಯಗಳನ್ನಾಡಿದ ರಾಹುಲ್ 255 ರನ್ ಸಿಡಿಸಿ 10 ವಿಕೆಟ್ ಪಡೆದು ಮಿಂಚಿದರು. ಇವರ ಜೊತೆಗೆ ರಾಜಸ್ಥಾನ್ ತಂಡ ಶ್ರೇಯಸ್ ಗೋಪಾಲ್ ಸತತ ಎರಡು ಅವೃತ್ತಿಯಲ್ಲೂ 10 ವಿಕೆಟ್ ಪಡೆದರೂ ಟೀಂ ಇಂಡಿಯಾಗೆ ಆಯ್ಕೆಯಾಗಿಲ್ಲ.

  • ಡಿ ಕಾಕ್, ಇಶಾನ್ ಕಿಶನ್ ಸ್ಫೋಟಕ ಆಟಕ್ಕೆ ಮಕಾಡೆ ಮಲಗಿದ ಡೆಲ್ಲಿ

    ಡಿ ಕಾಕ್, ಇಶಾನ್ ಕಿಶನ್ ಸ್ಫೋಟಕ ಆಟಕ್ಕೆ ಮಕಾಡೆ ಮಲಗಿದ ಡೆಲ್ಲಿ

    – ಬೌಲ್ಟ್, ಬುಮ್ರಾ ಬೌಲಿಂಗ್ ದಾಳಿಗೆ ಐಯ್ಯರ್ ಪಡೆ ತತ್ತರ

    ದುಬೈ: ಇಂದು ನಡೆದ ಸಖತ್ ಶನಿವಾರದ ಮೊದಲ ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 9 ವಿಕೆಟ್‍ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಭಧ್ರಪಡಿಸಿಕೊಂಡಿದೆ.

    ಇಂದು ದುಬೈ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್-2020ಯ 51ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಗೆ ನಲುಗಿ ನಿಗದಿತ 20 ಓವರಿಗೆ ಕೇವಲ 110 ರನ್ ಪೇರಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡ ಕ್ವಿಂಟನ್ ಡಿ ಕಾಕ್ ಮತ್ತು ಇಶಾನ್ ಕಿಶನ್ ಸೂಪರ್ ಬ್ಯಾಟಿಂಗ್ ಫಲವಾಗಿ ಇನ್ನೂ 34 ಬಾಲ್ ಉಳಿಸಿಕೊಂಡು ಗುರಿಯನ್ನು ಮುಟ್ಟಿತು.

    ಡೆಲ್ಲಿ ನೀಡಿದ ಸುಲಭ ಗುರಿಯನ್ನು ಬೆನ್ನಟ್ಟಲು ಬಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಓಪನರ್ಸ್ ಆಗಿ ಬಂದ ಕ್ವಿಂಟನ್ ಡಿ ಕಾಕ್ ಮತ್ತು ಇಶಾನ್ ಕಿಶನ್ ಪವರ್ ಪ್ಲೇ ಹಂತದಲ್ಲಿ ತಾಳ್ಮೆಯಿಂದ ಬ್ಯಾಟ್ ಬೀಸಿದರು. ಪರಿಣಾಮ ಆರು ಓವರ್ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ ತಂಡ ಒಂದು ವಿಕೆಟ್ ಕಳದುಕೊಳ್ಳದೇ 38 ರನ್ ಪೇರಿಸಿತು. ಈ ನಡುವೆ ವಿಕೆಟ್ ಪಡೆಯಲು ಡೆಲ್ಲಿ ಬೌಲರ್ ಗಳು ಪರದಾಡಿದರು.

    ಇದರ ಜೊತೆಗೆ ಎಂಟನೇ ಓವರಿನಲ್ಲಿ ಡಿಕಾಕ್ ಮತ್ತು ಇಶಾನ್ ಕಿಶನ್ ಜೋಡಿ ಅರ್ಧಶತಕದ ಜೊತೆಯಾಟವಾಡಿತು. ಆದರೆ 10ನೇ ಓವರ್ 2ನೇ ಬಾಲಿನಲ್ಲಿ 26 ರನ್ ಗಳಿಸಿ ಆಡುತ್ತಿದ್ದ ಕ್ವಿಂಟನ್ ಡಿ ಕಾಕ್ ಅವರು ಅನ್ರಿಚ್ ನಾಟ್ರ್ಜೆ ಅವರಿಗೆ ಬೌಲ್ಡ್ ಆಗಿ ಹೊರನಡೆದರು. ಆ ನಂತರ ಆರಂಭದಿಂದಲೂ ಅದ್ಭುತವಾಗಿ ಆಡಿದ ಇಶಾನ್ ಕಿಶನ್ ಅವರು ಅರ್ಧಶತಕ ಸಿಡಿಸಿ ಮಿಂಚಿದರು. ನಂತರ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಮುಂಬೈ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ವೇಗಿಗಳಾದ ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ದಾಳಿಗೆ ತತ್ತರಿಸಿ ಹೋಗಿತ್ತು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ಯಾವ ಬ್ಯಾಟ್ಸ್ ಮನ್ ಕೂಡ ಉತ್ತಮ ರನ್ ಕಲೆ ಹಾಕಲಿಲ್ಲ. ಮಧ್ಯದಲ್ಲಿ ಶ್ರೇಯಾಸ್ ಐಯ್ಯರ್ ಮತ್ತು ರಿಷಭ್ ಪಂತ್ ಪತ್ರಿರೋಧ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಡೆಲ್ಲಿ 20 ಓವರಿನಲ್ಲಿ 9 ವಿಕೆಟ್ ಕಳೆದುಕೊಂಡು 110 ರನ್ ಪೇರಿಸಿತ್ತು.