Tag: ISA

  • ಹವಾಮಾನ ಬದಲಾವಣೆಯ ಜಾಗತಿಕ ಸವಾಲೆದುರಿಸಲು ಭಾರತ ಬದ್ಧ: ದ್ರೌಪದಿ ಮುರ್ಮು

    ಹವಾಮಾನ ಬದಲಾವಣೆಯ ಜಾಗತಿಕ ಸವಾಲೆದುರಿಸಲು ಭಾರತ ಬದ್ಧ: ದ್ರೌಪದಿ ಮುರ್ಮು

    – ಸೌರಶಕ್ತಿ ವಿದ್ಯುತ್ ಉತ್ಪಾದನೆ ಜತೆಗೆ ಸಬಲೀಕರಣ-ಸಮಗ್ರ ಅಭಿವೃದ್ಧಿಗೆ ಪೂರಕ
    – ಅಂತಾರಾಷ್ಟ್ರೀಯ ಸೌರ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ಲಾಘನೆ

    ನವದೆಹಲಿ: ಹವಾಮಾನ ಬದಲಾವಣೆ ಪ್ರಪಂಚದಾದ್ಯಂತ ಪರಿಣಾಮ ಬೀರುತ್ತಿದ್ದು, ಇದನ್ನೆದುರಿಸಲು ಭಾರತ ಬದ್ಧವಾಗಿದೆ. ಈ ನಿಟ್ಟಿನಲ್ಲಿ ನವೀಕರಿಸಬಹುದಾದ ಇಂಧನ ಗುರಿ ಸಾಧನೆ ಮೂಲಕ ದೃಢವಾದ ಹೆಜ್ಜೆಯಿರಿಸಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಶ್ಲಾಘಿಸಿದರು.

    ನವದೆಹಲಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸೌರ ಒಕ್ಕೂಟದ (International Solar Alliance Assembly) 8ನೇ ಅಧಿವೇಶನವನ್ನು ಉದ್ಘಾಟಿಸಿ, ಹವಾಮಾನ ಬದಲಾವಣೆ ಎದುರಿಸಲು ಇಂದು ತುರ್ತು ಮತ್ತು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಸೌರಶಕ್ತಿ ಅಳವಡಿಕೆ ಮತ್ತು ಬಳಕೆ ಮೂಲಕ ಈ ಜಾಗತಿಕ ಸವಾಲೆದುರಿಸುವಲ್ಲಿ ಐಎಸ್‌ಎ ಮಹತ್ವದ ಪಾತ್ರವಹಿಸಿದೆ ಎಂದು ಪ್ರತಿಪಾದಿಸಿದರು.

    ಸೌರಶಕ್ತಿ ವಿದ್ಯುತ್ ಉತ್ಪಾದನೆಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಸಮಾಜ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಬಲೀಕರಣ, ಅಂತರ್ಗತ ಅಭಿವೃದ್ಧಿಗೂ ಪೂರಕವಾಗಿದೆ. ದೊಡ್ಡ ಪ್ರಮಾಣದ ಸೌರ ಸ್ಥಾಪನೆಗಳ ವಿಸ್ತರಣೆ ವೇಳೆ ಆಯಾ ಪ್ರದೇಶದ ಪರಿಸರ ಸಮತೋಲನ ಕಾಯ್ದುಕೊಳ್ಳಬೇಕಿದೆ ಎಂದು ಹೇಳಿದರು.

    ಸೌರಶಕ್ತಿಯನ್ನು ಘನತೆ ಮತ್ತು ಸಾಮೂಹಿಕ ಸಮೃದ್ಧಿಯ ಮೂಲವಾಗಿ ಬಳಸಿಕೊಳ್ಳುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ನಾವು ಜಗತ್ತಿಗೆ ಮತ್ತು ಭವಿಷ್ಯದ ಪೀಳಿಗೆಗೆ ಹೆಚ್ಚಿನ ಸಮರ್ಪಣಾಭಾವದಿಂದ ಕೆಲಸ ಮಾಡಬೇಕು ಎಂದು ರಾಷ್ಟ್ರಪತಿ ಕರೆ ನೀಡಿದರು.

    ಭಾರತ ಮಹತ್ವದ ಮೈಲಿಗಲ್ಲು:
    ಸೌರಶಕ್ತಿ ಉತ್ಪಾದನೆಯಲ್ಲಿ ಭಾರತ ಒಂದು ಮಹತ್ವದ ಮೈಲಿಗಲ್ಲಾಗಿ ಕಾರ್ಯ ನಿರ್ವಹಿಸುತ್ತಿದೆ. ಜಗತ್ತಿಗೆ ವಿಶಿಷ್ಟ ಕೊಡುಗೆ ನೀಡುತ್ತಿದೆ. ಕೈಗೆಟುಕುವ ಮತ್ತು ಶುದ್ಧ ಇಂಧನ ಸಮುದಾಯಗಳನ್ನು ಸಬಲಗೊಳಿಸುತ್ತದೆ ಹಾಗೂ ಸ್ಥಳೀಯ ಆರ್ಥಿಕತೆಯನ್ನು ಮುನ್ನಡೆಸುತ್ತದೆ. ಸೌರಶಕ್ತಿ ವಿದ್ಯುತ್ ಉತ್ಪಾದನೆ ಮಾತ್ರವಲ್ಲ, ಸಬಲೀಕರಣ ಮತ್ತು ಸಮಗ್ರ ಅಭಿವೃದ್ಧಿಗೂ ಪೂರಕವಾಗಿದೆ ಎಂದು ದ್ರೌಪದಿ ಮುರ್ಮು ಪ್ರತಿಪಾದಿಸಿದರು.

    ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷ ಮತ್ತು ಎಲ್ಲಾ ಸದಸ್ಯ ರಾಷ್ಟ್ರಗಳು ಮೂಲಸೌಕರ್ಯ ಮತ್ತು ಜನಜೀವನದ ಮೇಲೆ ಕೇಂದ್ರೀಕರಿಸಬೇಕು. ಉದ್ಯೋಗ ಸೃಷ್ಟಿ, ಮಹಿಳಾ ನಾಯಕತ್ವ, ಗ್ರಾಮೀಣ ಜೀವನೋಪಾಯ ಮತ್ತು ಡಿಜಿಟಲ್ ಸೇರ್ಪಡೆಗೆ ನೆರವಾಗುವಂತೆ ಸೌರಶಕ್ತಿ ಸಾಮೂಹಿಕ ಕ್ರಿಯಾ ಯೋಜನೆ ಅಭಿವೃದ್ಧಿಪಡಿಸಬೇಕೆಂದು ರಾಷ್ಟ್ರಪತಿ ಇದೇ ವೇಳೆ ಸಲಹೆ ನೀಡಿದರು.

    ಸೌರ ಪ್ರಗತಿಯನ್ನು ಮೆಗಾವ್ಯಾಟ್ ಮೂಲಕ ಮಾತ್ರವಲ್ಲದೆ ಸುಧಾರಿತ ಕುಟುಂಬಗಳ ಸಂಖ್ಯೆ ಮತ್ತು ಸಮುದಾಯಗಳ ಸಂಖ್ಯೆ ಮೂಲಕ ಅಳೆಯಬೇಕು. ತಂತ್ರಜ್ಞಾನ ಅಭಿವೃದ್ಧಿಗೆ ಗಮನ ಹರಿಸಬೇಕು. ಸೌರ ಸ್ಥಾಪನೆಗಳ ವೇಳೆ ಪರಿಸರ ಸಂರಕ್ಷಣೆ, ಹಸಿರು ಶಕ್ತಿಯತ್ತ ಗಮನಹರಿಸಿ ಪ್ರದೇಶದ ಪರಿಸರ ಸಮತೋಲನಕ್ಕೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಿಸಿದರು.

    125 ಸದಸ್ಯ ರಾಷ್ಟ್ರಗಳ ಸಹಿ: ಸೌರಶಕ್ತಿಯಲ್ಲಿ ಜಾಗತಿಕ ಸಹಕಾರ ಮತ್ತು ಹೂಡಿಕೆಯನ್ನು ತ್ವರಿತಗೊಳಿಸಲು 125 ಸದಸ್ಯ ರಾಷ್ಟ್ರಗಳು ಮತ್ತು ಪಾಲುದಾರರು, ಸಹಿ ಹಾಕಿದರು. ವಿವಿಧ ದೇಶಗಳ 550ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು 30 ಸಚಿವರು, ಸಹಾಯಕ ಸಚಿವರು ಭಾಗವಹಿಸಿದ್ದರು.

  • ಹಿಂದೂ ಮಹಾಸಾಗರದಲ್ಲಿ ಖನಿಜ ಶೋಧಕ್ಕೆ ಒಪ್ಪಿಗೆ ನೀಡಿದ ISA – ಭಾರತಕ್ಕೆ ಏನು ಲಾಭ? 

    ಹಿಂದೂ ಮಹಾಸಾಗರದಲ್ಲಿ ಖನಿಜ ಶೋಧಕ್ಕೆ ಒಪ್ಪಿಗೆ ನೀಡಿದ ISA – ಭಾರತಕ್ಕೆ ಏನು ಲಾಭ? 

    ಚಂದ್ರಯಾನ, ಮಂಗಳಯಾನ ಮಾಡಿ ಬಾಹ್ಯಾಕಾಶಕ್ಕೆ ಜಿಗಿದಿದ್ದ ಭಾರತ… ಈಗ ಪಾತಾಳದ ಖನಿಜಗಳ ವಿಸ್ಮಯ ಲೋಕಕ್ಕೂ ಕಾಲಿಟ್ಟಿದೆ. ಇತ್ತೀಚೆಗೆ ಹಿಂದೂ ಮಹಾಸಾಗರದ ಕಾರ್ಲ್ಸ್‌ಬರ್ಗ್ ರಿಡ್ಜ್‌ನಲ್ಲಿ ಪಾಲಿಮೆಟಾಲಿಕ್ ಸಲ್ಫೈಡ್‌ಗಳ ನಿಕ್ಷೇಪ (PMS) ಶೋಧಕ್ಕೆ ಅಂತರರಾಷ್ಟ್ರೀಯ ಸಮುದ್ರತಳ ಪ್ರಾಧಿಕಾರದ (ISA) ಜೊತೆ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ. ಇದರಿಂದ PMS ಶೋಧನೆಗಾಗಿ ಎರಡು ಒಪ್ಪಂದಗಳನ್ನು ಮಾಡಿಕೊಂಡ ವಿಶ್ವದ ಮೊದಲ ದೇಶ ಭಾರತವಾಗಿ ಹೊರಹೊಮ್ಮಿದೆ. 

    ಕಾರ್ಲ್ಸ್‌ಬರ್ಗ್ ರಿಡ್ಜ್‌ PMS ಶೋಧಕ್ಕಾಗಿ ಅಂತರರಾಷ್ಟ್ರೀಯ ಸಮುದ್ರತಳದಲ್ಲಿ ಹಂಚಿಕೆಯಾದ ಅತಿದೊಡ್ಡ ಪ್ರದೇಶವಾಗಿದೆ. ಭಾರತ 2024 ರಲ್ಲಿ ISA ಗೆ ಈ ಬಗ್ಗೆ ಅರ್ಜಿಯನ್ನು ಸಲ್ಲಿಸಿತ್ತು. ಪರಿಶೀಲನೆಯ ನಂತರ ISA ಭಾರತಕ್ಕೆ ಕಾರ್ಲ್ಸ್‌ಬರ್ಗ್ ರಿಡ್ಜ್‌ನಲ್ಲಿ 10,000 ಚದರ ಕಿಮೀ ಪ್ರದೇಶವನ್ನು ಮಂಜೂರು ಮಾಡಿದೆ. ಗೋವಾ ಮೂಲದ ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರ (NCPOR)  2026 ರಲ್ಲಿ PMS ಶೋಧಕಾರ್ಯ ಕೈಗೊಳ್ಳಲಿದೆ.

    PMS ಎಂದರೇನು? ಅದು ಭಾರತಕ್ಕೆ ಏಕೆ ಮುಖ್ಯ?
    ಪಾಲಿಮೆಟಾಲಿಕ್ ಸಲ್ಫೈಡ್‌ (PMS) ಇದು ಸಾಗರ ತಳದಲ್ಲಿರುವ ನಿಕ್ಷೇಪಗಳಾಗಿದೆ. ತಾಮ್ರ, ಸತು, ಸೀಸ, ಚಿನ್ನ ಮತ್ತು ಬೆಳ್ಳಿಯಂತಹ  ನಿರ್ಣಾಯಕ ಲೋಹಗಳಿಂದ ಈ ನಿಕ್ಷೇಪಗಳು ತುಂಬಿವೆ. ಈ ಖನಿಜಗಳನ್ನು ಹೊಂದಿರುವ ಭೂ ಪ್ರದೇಶ ಭಾರತಕ್ಕೆ ಬಹಳ ಸೀಮಿತವಾಗಿರುವುದರಿಂದ, ಆಳ ಸಾಗರದಲ್ಲಿ PMSನ್ನು ಅನ್ವೇಷಿಸುವುದು ಬಹಳ ಮುಖ್ಯವಾಗಿದೆ. ಈ ಲೋಹಗಳು ಉನ್ನತ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನಗಳಿಗೆ ಬಹಳ ಮುಖ್ಯವಾಗಿದೆ. 

    PMS ಹುಡುಕಾಟ ಹೇಗೆ?
    2016 ರಲ್ಲಿ ISA ಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ ನೈಋತ್ಯ ಹಿಂದೂ ಮಹಾಸಾಗರದಲ್ಲಿ ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ.  

    ಮೊದಲ ಹಂತದಲ್ಲಿ ನಿಕ್ಷೇಪಗಳ ಹುಡುಕಾಟಕ್ಕಾಗಿ ಹಡಗು‌, ಡಿಟೆಕ್ಟರ್‌ ಉಪಕರಣಗಳನ್ನು ಬಳಸಿಕೊಂಡು ಸಮೀಕ್ಷೆಗಳನ್ನು ನಡೆಸಿ PMS  ಇರುವ ಸಂಭಾವ್ಯ ಸ್ಥಳಗಳನ್ನು ಗುರುತಿಸಲಾಗುತ್ತದೆ. ಎರಡನೇ ಹಂತದಲ್ಲಿ PMS  ಇದರ ಬಗ್ಗೆ ದೃಢಪಡಿಸಿಕೊಳ್ಳಲು AUV ಗಳು ಮತ್ತು ರಿಮೋಟ್ ಆಪರೇಟಿಂಗ್ ವೆಹಿಕಲ್ಸ್ (ROV) ನಂತಹ ಸುಧಾರಿತ ವ್ಯವಸ್ಥೆ ಬಳಸಿಕೊಂಡು ನಿಕ್ಷೇಪಗಳ ಪತ್ತೆ ಮಾಡಲಾಗುತ್ತದೆ. ಮೂರನೇ ಹಂತದಲ್ಲಿ ಗುರುತಿಸಲಾದ PMS ನಿಕ್ಷೇಪಗಳ ಸಂಪನ್ಮೂಲದ ಮೌಲ್ಯಮಾಪನ ಮಾಡಲಾಗುತ್ತದೆ. ‌

    ಮತ್ಸ್ಯ -6000 ಯೋಜನೆ
    ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದ “ಡೀಪ್‌ ಓಷನ್‌ ಮಿಷನ್‌’ನತ್ತ ಭಾರತ ದೊಡ್ಡ ಹೆಜ್ಜೆ ಇಟ್ಟಿದೆ. ಇದಕ್ಕಾಗಿ “ಭಾರತ ಮತ್ಸ್ಯ-6000′ ಯೋಜನೆ ರೂಪಿಸಿದ್ದು ಈ ಯೋಜನೆ ಭಾಗವಾಗಿ ಸಮುದ್ರದಾಳಕ್ಕೆ ಹೋಗುವ ಭಾರತೀಯ ವಿಜ್ಞಾನಿಗಳು ಫ್ರಾನ್ಸ್‌ನಲ್ಲಿ 5000 ಮೀಟರ್‌ ಆಳದವರೆಗೆ ಹೋಗುವ ತರಬೇತಿ ಪೂರ್ಣಗೊಳಿಸಿದ್ದಾರೆ.

    ಕಾರ್ಲ್ಸ್‌ಬರ್ಗ್ ರಿಡ್ಜ್‌ನ ಮಹತ್ವವೇನು?
    ಕಾರ್ಲ್ಸ್‌ಬರ್ಗ್ ರಿಡ್ಜ್ ಪ್ರದೇಶ ಭಾರತಕ್ಕೆ ಹೆಚ್ಚು ಹತ್ತಿರದಲ್ಲಿದೆ. ಇದು PMS ನಿಕ್ಷೇಪಗಳ ಸಂಭಾವ್ಯ ತಾಣವಾಗಿದೆ. ಕಳೆದ ಮೂರು ದಶಕಗಳಲ್ಲಿ ಭಾರತ ಈ ಬಗ್ಗೆ ಸಾಕಷ್ಟು ವೈಜ್ಞಾನಿಕ ಸಂಶೋಧನೆ ನಡೆಸಿದೆ. 

    ಈ ಪ್ರದೇಶದ ಸಮುದ್ರತಳದ 2,000–5,000 ಮೀಟರ್ ಆಳದಲ್ಲಿ ಕಲ್ಲಿನಿಂದ ಕೂಡಿದ ಭೂಪ್ರದೇಶದಿಂದ ಕೂಡಿದ್ದು,  ಅಪಾರ ಪ್ರಮಾಣದ ಖನಿಜಗಳನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಈ ಪ್ರದೇಶ ಇತರ ಆಳ-ಸಮುದ್ರ ಖನಿಜ ಶೋಧಕ್ಕಿಂತ ಹೆಚ್ಚು ಸವಾಲಿನದ್ದಾಗಿದೆ. ಇದಕ್ಕಾಗಿ ಆಧುನಿಕ ತಂತ್ರಜ್ಞಾನ ಹೊಂದಿರುವ ಉಪಕರಣ ಹಾಗೂ ಹಡಗುಗಳ ಅಗತ್ಯವಿದೆ. 

    ISA ಖನಿಜ ಶೋಧಕ್ಕೆ ಹೇಗೆ ಒಪ್ಪಿಗೆ ನೀಡುತ್ತದೆ? 
    ISA ಒಂದು ಸ್ವಾಯತ್ತ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ. ಇದು ವಿಶ್ವಸಂಸ್ಥೆಯ ಸಮುದ್ರ ಕಾನೂನು(UNCLOS) ಚೌಕಟ್ಟಿನ ಅಡಿಯಲ್ಲಿ ಅಂತರರಾಷ್ಟ್ರೀಯ ಸಮುದ್ರ ಖನಿಜ ಪರಿಶೋಧನೆಗಾಗಿ ಸ್ಥಳಗಳನ್ನು ಹಂಚಿಕೆ ಮಾಡುತ್ತದೆ. ಒಂದು ದೇಶವು ಸರ್ಕಾರ, ಸಾರ್ವಜನಿಕ ವಲಯ ಅಥವಾ ಪ್ರಾಯೋಜಿತ ಸಂಸ್ಥೆಯ ಮೂಲಕ ISAಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. 

    ಈ ಅರ್ಜಿಯು ವಿವರವಾದ ಕಾರ್ಯ ಯೋಜನೆ, ಹಣಕಾಸು/ತಾಂತ್ರಿಕ ಸಾಮರ್ಥ್ಯ ದಾಖಲೆಗಳೊಂದಿಗೆ ಪ್ರಸ್ತಾವಿತ ಪ್ರದೇಶದ ಮಾಹಿತಿ ಒದಗಿಸಬೇಕು. ಈ ಅರ್ಜಿಯನ್ನು ISA ಕಾನೂನು ಮತ್ತು ತಾಂತ್ರಿಕ ಆಯೋಗ (LTC) ಪರಿಶೀಲಿಸುತ್ತದೆ. ಎಲ್ಲಾ ಮಾಹಿತಿ ಆಧರಿಸಿ, ಅಂತಿಮ ಅನುಮೋದನೆಗಾಗಿ ISA ಕೌನ್ಸಿಲ್‌ಗೆ ಶಿಫಾರಸು ಮಾಡುತ್ತದೆ. ಬಳಿಕ ಚರ್ಚಿಸಿ ಅನುಮತಿ ನೀಡಬೇಕೇ? ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ. 

    ಭಾರತದಿಂದ ISAಗೆ ಮತ್ತೊಂದು ಅರ್ಜಿ
    ಭಾರತವು ಹಿಂದೂ ಮಹಾಸಾಗರದ ಉದ್ದಕ್ಕೂ ಖನಿಜ ಶೋಧಕ್ಕೆ ತೀರ್ಮಾನಿಸಿದೆ.  ಭಾರತ ಸರ್ಕಾರದ ಬ್ಲೂ ಎಕಾನಮಿ ಉತ್ತೇಜಿಸಲು ಖನಿಜ ಶೋಧನೆಗಾಗಿ ಹಿಂದೂ ಮಹಾಸಾಗರದಲ್ಲಿ ಹೆಚ್ಚುವರಿ ಸ್ಥಳಗಳನ್ನು ಸ್ವಾಧೀನಪಡಿಸಿಕೊಳ್ಳಲು ನೋಡುತ್ತಿದೆ. ಮಧ್ಯ ಹಿಂದೂ ಮಹಾಸಾಗರದ ಅಫನಾಸಿ-ನಿಕಿಟಿನ್ ಸೀಮೌಂಟ್‌ನಲ್ಲಿರುವ ಕೋಬಾಲ್ಟ್ ಭರಿತ ಫೆರೋಮ್ಯಾಂಗನೀಸ್ ಕ್ರಸ್ಟ್‌ಗಳ  ಶೋಧಕ್ಕೆ ಭಾರತ ಮುಂದಾಗಿದೆ. ಈ ಅರ್ಜಿ ISAಯಲ್ಲಿ ಪರಿಶೀಲನೆ ಹಂತದಲ್ಲಿದೆ.

    ಭಾರತಕ್ಕೆ ಈ ಯೋಜನೆಯ ಲಾಭವೇನು? 
    ಭಾರತದ ಆರ್ಥಿಕತೆಯ ಅಭಿವೃದ್ಧಿಗೆ ಕೊಡುಗೆ ನೀಡುವ ಹಲವಾರು ಖನಿಜ ನಿಕ್ಷೇಪಗಳನ್ನು ಹಿಂದೂ ಮಹಾಸಾಗರ ಹೊಂದಿದೆ. ನೀಲಿ ಆರ್ಥಿಕತೆಯಲ್ಲಿ ಲಾಭದಾಯಕವಾದ ಕೈಗಾರಿಕೆಗಳಲ್ಲಿ ಖನಿಜ ಉದ್ಯಮವೂ ಒಂದು. ಹಿಂದೂ ಮಹಾಸಾಗರದ ಸಮುದ್ರತಳದಲ್ಲಿರುವ ಈ ನಿರ್ಣಾಯಕ ಖನಿಜಗಳು ಭವಿಷ್ಯದಲ್ಲಿ ಜಾಗತಿಕ ಇಂಧನ ಪರಿವರ್ತನೆಗೆ ದಾರಿ ಮಾಡಿಕೊಡಬಹುದುಮ ಎಂಬ ನಿರೀಕ್ಷೆ ಇದೆ.  ಈ ಮೂಲಕ ಭಾರತ ನಿರ್ಣಾಯಕ ಖನಿಜಗಳ ಪೂರೈಕೆಯ ವಿಷಯದಲ್ಲಿ ಸ್ವಾವಲಂಬಿಯಾಗುವ ಗುರಿ ತಲುಪುವ ಸಾಧ್ಯತೆ ಇದೆ. ಇದರೊಂದಿಗೆ ಕೈಗಾರಿಗಳಿಗೆ ಖನಿಜ ಬಹಳ ಅಗತ್ಯ. ಇದರಿಂದ ಕೈಗಾರಿಕೆ ಅಭಿವೃದ್ಧಿಯಾಗಿ, ದೇಶದ ಆರ್ಥಿಕತೆ ಪ್ರಗತಿಯಾಗಲಿದೆ. 

    ಇತ್ತೀಚೆಗೆ ಅಮೆರಿಕದ ಟ್ಯಾರಿಫ್‌ ನೀತಿ, ಜೊತೆಗೆ ವಿಶ್ವದ ಬಹುತೇಕ ಭಾಗಗಳಲ್ಲಿ ಯುದ್ಧದಂತಹ ವಾತಾವರಣ ಇರುವುದರಿಂದ ಆಮದಿನ ಮೇಲೆ ಇದು ಭಾರೀ ಪರಿಣಾಮ ಬೀರುತ್ತದೆ. ಇದರಿಂದ ಭಾರತವೇ ಅಗತ್ಯ ಖನಿಜಗಳನ್ನು ಶೋಧಿಸಿ ಬಳಸಿಕೊಂಡರೆ, ಹಾಗೂ ರಫ್ತು ಮಾಡಿದರೆ ಬೇರೆ ದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. 

     ಸಮುದ್ರ ಜೀವಿಗಳ ನಾಶದ ಆತಂಕ
    ಭೂಮಿ ಮೇಲಿನ ಗಣಿಗಾರಿಕೆಯಂತೆಯೇ ಆಳ ಸಮುದ್ರ ಗಣಿಗಾರಿಕೆಗೂ ಪ್ರಪಂಚದಾದ್ಯಂತ ವಿರೋಧವಿದೆ. ಇದು ನಿಸರ್ಗದ ಅಸಮತೋಲನ ಸೃಷ್ಟಿಸಲಿದೆ. ಸಮುದ್ರ ಜೀವಿಗಳ ನಾಶಕ್ಕೆ ಕಾರಣವಾಗಲಿದೆ ಎಂದು ಅನೇಕ ಸಂಘಟನೆಗಳು ಇದರ ವಿರುದ್ಧ ಧ್ವನಿ ಎತ್ತಿವೆ.

  • PublicTV Explainer: ಭೂಮಿ ಆಯ್ತು.. ಇನ್ಮುಂದೆ ಸಮುದ್ರದಾಳದಲ್ಲಿ ಶುರುವಾಗುತ್ತಂತೆ ಗಣಿಗಾರಿಕೆ!

    PublicTV Explainer: ಭೂಮಿ ಆಯ್ತು.. ಇನ್ಮುಂದೆ ಸಮುದ್ರದಾಳದಲ್ಲಿ ಶುರುವಾಗುತ್ತಂತೆ ಗಣಿಗಾರಿಕೆ!

    – ಆಳ ಸಮುದ್ರದಲ್ಲಿದ್ಯಾ ಚಿನ್ನ, ಬೆಳ್ಳಿ, ಕಬ್ಬಿಣ, ಸತು ನಿಕ್ಷೇಪ?
    – ಸಮುದ್ರ ಗಣಿಗಾರಿಕೆಗೆ ಪರಿಸರವಾದಿಗಳ ವಿರೋಧ ಯಾಕೆ?

    ಣಿಗಾರಿಕೆ ಉದ್ಯಮವು ಪ್ರಮುಖ ಆರ್ಥಿಕ ಚಟುವಟಿಕೆಯಾಗಿದೆ. ಉಪಯುಕ್ತ ಖನಿಜಗಳು ಅಥವಾ ಅದಿರುಗಳು, ಲೋಹಗಳು, ಕಲ್ಲಿದ್ದಲ ಭೂಪದರದಿಂದ ಹೊರತೆಗೆದು ಶಕ್ತಿ ಸಾಧನಗಳಾಗಿ ಬಳಸಲಾಗುತ್ತಿದೆ. ಇಂತಹ ಅತ್ಯಮೂಲ್ಯ ಸಂಪನ್ಮೂಲಗಳು ಬರಿದಾಗುತ್ತಿವೆ. ಇದೇ ಹೊತ್ತಿನಲ್ಲಿ ಭೂಮಿ ಆಳದಲ್ಲಿ ಹುದುಗಿರುವ ಸಂಪನ್ಮೂಲಕ್ಕೆ ನೂರಾರು ಪಟ್ಟು ಬೇಡಿಕೆಯೂ ಹೆಚ್ಚುತ್ತಿದೆ. ಅಗತ್ಯ ಬೇಡಿಕೆಯನ್ನು ಪೂರೈಸಲು ಏನು ಮಾಡಬೇಕೆಂಬ ಬಗ್ಗೆ ವೈಜ್ಞಾನಿಕ ವಲಯದಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದಾಗ, ಹೊಸ ಯೋಜನೆಯೊಂದು ರೂಪುಗೊಂಡಿತು. ಅದೇ “ಸಮುದ್ರದಾಳದ ಗಣಿಗಾರಿಕೆ”. ಅರೆ! ಭೂಪ್ರದೇಶದ ಆಳದಲ್ಲಿ ಇರುವ ಕಬ್ಬಿಣ, ಚಿನ್ನ, ಬೆಳ್ಳಿ, ಕಲ್ಲಿದ್ದಲು ಹೊರತೆಗೆಯಲು ಗಣಿಗಾರಿಕೆ ನಡೆಸುತ್ತಿದ್ದ ಬಗ್ಗೆ ಕೇಳಿದ್ದೇವೆ. ಆದ್ರೆ, “ಸಮುದ್ರದಾಳದ ಗಣಿಗಾರಿಕೆ” (Deep Sea Mining) ಅಂದ್ರೇನು ಎಂಬ ಪ್ರಶ್ನೆ ಅನೇಕರಲ್ಲಿ ಮೂಡದೇ ಇರದು.

    ಆಳದ ಪೆಸಿಫಿಕ್ ಮಹಾಸಾಗರದಲ್ಲಿ ಗಣಿಗಾರಿಕೆ ನಡೆಸುವ ಕ್ರಮ ಇದೀಗ ಕೊನೆಯ ನಿರ್ಧಾರದ ಹಂತದಲ್ಲಿದೆ. ಆದರೆ ಈ ಗಣಿಗಾರಿಕೆಯ ನಿಯಮಗಳು ಜಾರಿಯಾಗುವುದಕ್ಕೂ ಮೊದಲೇ ಜಗತ್ತಿನಾದ್ಯಂತ ಇದರ ಬಗ್ಗೆ ಪರ-ವಿರೋಧದ ಧ್ವನಿ ಕೇಳಿಬರುತ್ತಿದೆ. ಆಳ ಸಮುದ್ರದಲ್ಲಿ ಗಣಿಗಾರಿಕೆ ಎಂದರೇನು? ಈ ಪರಿಕಲ್ಪನೆ ಏಕೆ ಮತ್ತು ಹೇಗೆ ಹುಟ್ಟುಕೊಂಡಿತು? ಸಮುದ್ರದಾಳದಲ್ಲಿ ಏನು ಸಿಗುತ್ತೆ? ಅಲ್ಲಿ ಯಾಕೆ ಗಣಿಗಾರಿಕೆ ಮಾಡಬೇಕು? ಇದರಿಂದ ಲಾಭವೇನು? ಈ ಗಣಿಗಾರಿಕೆಯಿಂದ ಸಂಕಷ್ಟ ಎದುರಾಗುತ್ತಾ ಎಂಬ ಅನೇಕ ಪ್ರಶ್ನೆಗಳು ಮೂಡುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

    ಇಂಟರ್ನ್ಯಾಷನಲ್ ಸೀಬೆಡ್ ಅಥಾರಿಟಿ (ISA) ಇದೇ ಜುಲೈನಲ್ಲಿ ಕೈಗಾರಿಕೆಗಾಗಿ ಆಳ ಸಮುದ್ರದಲ್ಲಿ ಗಣಿಗಾರಿಕೆ ನಡೆಸಲು ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಲಿದೆ. ಆದರೆ ಇದು ಪರಿಸರ ವ್ಯವಸ್ಥೆಗೆ ಹಾನಿಯಾಗುತ್ತದೆ, ಸಮುದ್ರ ಜೀವಿಗಳಿಗೆ ಮಾರಕವಾಗಿದೆ ಎಂದು ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ.

    ಸಮುದ್ರದಾಳದಲ್ಲಿ ಗಣಿಗಾರಿಕೆ ಪರಿಕಲ್ಪನೆ ಹುಟ್ಟಿದ್ಹೇಗೆ?
    ಕಾಲ್ಪನಿಕ ವಿಜ್ಞಾನ ಕಥೆಗಾರ ಜೂಲ್ಸ್ ವೆರ್ನ್ ಒಂದು ಪುಸ್ತಕ ಬರೆದಿದ್ದಾನೆ. ‘20,000 ಲೀಗ್ಸ್ ಅಂಡರ್ ದಿ ಸೀ’ ಪುಸ್ತಕದ ಹೆಸರು. ಅದರಲ್ಲಿ ಸಮುದ್ರದಾಳದ ಗಣಿಗಾರಿಕೆ ಬಗ್ಗೆ ಒಂದು ಉಲ್ಲೇಖವಿದೆ. ಸಮುದ್ರದ ಆಳದಲ್ಲಿ, ಸತು, ಕಬ್ಬಿಣ, ಬೆಳ್ಳಿ ಮತ್ತು ಚಿನ್ನದ ಅದಿರು ಎಥೇಚ್ಛವಾಗಿದೆ. ಸಮುದ್ರದಾಳದಲ್ಲಿ ಗಣಿಗಾರಿಕೆ ನಡೆಸುವುದು ತುಂಬಾ ಸುಲಭ ಎಂದು ಪುಸ್ತಕದಲ್ಲಿ ಬರೆದಿದ್ದಾರೆ. ಈ ಪರಿಕಲ್ಪನೆ ಆಧರಿಸಿ ಸಮುದ್ರದಾಳದಲ್ಲಿ ಗಣಿಗಾರಿಕೆ ನಡೆಸುವ ಬಗ್ಗೆ ಚರ್ಚೆಯೊಂದು ಹುಟ್ಟುಕೊಂಡಿದೆ.

    ಮನುಷ್ಯನ ಗಣಿಗಾರಿಕೆ ಸಮುದ್ರದಾಳಕ್ಕೆ ವಿಸ್ತರಿಸಿದ್ದೇಕೆ?
    ಶಕ್ತಿ ಪರಿವರ್ತನೆಯ ಲೋಹಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಬ್ಯಾಟರಿಗಳಲ್ಲಿ ಬಳಸಲಾಗುವ ತಾಮ್ರ ಅಥವಾ ನಿಕ್ಕಲ್, ಎಲೆಕ್ಟ್ರಿಕ್ ಕಾರುಗಳಿಗೆ ಕೋಬಾಲ್ಟ್ ಅಥವಾ ಉಕ್ಕಿನ ಉತ್ಪಾದನೆಗೆ ಮ್ಯಾಂಗನೀಸ್ (Manganese) ಹೀಗೆ ಅಪರೂಪದ ಖನಿಜಗಳು ಮತ್ತು ಲೋಹಗಳಿಗೆ ಭಾರೀ ಬೇಡಿಕೆ ಇದೆ. ಆದರೆ ಈ ಸಂಪನ್ಮೂಲ ಜಾಗತಿಕವಾಗಿ ಕಡಿಮೆಯಾಗುತ್ತಿದೆ. ಮುಂದಿನ 3 ವರ್ಷಗಳಲ್ಲಿ ಪ್ರಪಂಚದಾದ್ಯಂತ 2 ಪಟ್ಟು ಹೆಚ್ಚು ಲೀಥಿಯಂ ಹಾಗೂ ಕೋಬಾಲಲ್ಟ್‌ಗೆ ಶೇ.70 ರಷ್ಟು ಬೇಡಿಕೆ ಹೆಚ್ಚಾಗಲಿದೆ. ಈ ಕಚ್ಚಾ ವಸ್ತುಗಳ ಯೋಜಿತ ಉತ್ಪಾದನೆಯ ಪ್ರಮಾಣ ಅಧಿಕವಾಗಿದ್ದು, ಕೆಲವು ದೇಶಗಳು ಹಾಗೂ ಕಂಪನಿಗಳು ಆಳ ಸಮುದ್ರದಲ್ಲಿ ಈ ಸಂಪನ್ಮೂಲಗಳ ಗಣಿಗಾರಿಕೆ ಮಾಡಲು ಯೋಜಿಸಿವೆ.

    ಸಮುದ್ರದಾಳದಲ್ಲಿದೆ ಬೆಲೆಬಾಳೋ ಮ್ಯಾಂಗನೀಸ್ ಗಡ್ಡೆಗಳು!
    ಮ್ಯಾಂಗನೀಸ್ ಎಂದು ಕರೆಯಲಾಗುವ ದುಬಾರಿ ಪಾಲಿಮೆಟಾಲಿಕ್ ಗಡ್ಡೆಗಳು ಸಮುದ್ರದಾಳದಲ್ಲಿ ಹೇರಳವಾಗಿ ದೊರೆಯುತ್ತದೆ. ಈ ಗಡ್ಡೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಿಕಲ್, ತಾಮ್ರ, ಮ್ಯಾಂಗನೀಸ್ ಸೇರಿದಂತೆ ಇತರ ಬೆಲೆಬಾಳುವ ಲೋಹಗಳು ಇರುತ್ತವೆ. ಮ್ಯಾಂಗನೀಸ್ ಗಡ್ಡೆಗಳನ್ನು ಜಗತ್ತಿನ ಯಾವ ಪ್ರದೇಶದಲ್ಲಿಯೂ ಗಣಿಗಾರಿಕೆ ಮಾಡಲಾಗುತ್ತಿಲ್ಲ. ಇದು ಸಮುದ್ರ ತಳದಲ್ಲಿಯೇ ಹೆಚ್ಚಾಗಿ ಇರುವುದರಿಂದ ಸಮುದ್ರ ಗಣಿಗಾರಿಕೆ ನಡೆಸುವಲ್ಲಿ ಹೆಚ್ಚಿನ ಆಸಕ್ತಿ ತೋರಿಸಲಾಗುತ್ತಿದೆ. ಇವುಗಳನ್ನು ಕಲ್ಲಿನ ಪದರಗಳನ್ನು ಒಡೆಯದೇ ಅಥವಾ ಸಮುದ್ರದ ಪದರಗಳನ್ನು ಸವೆಸದೇ ಸುಲಭವಾಗಿ ಹೊರತೆಗೆಯಬಹುದು ಎನ್ನಲಾಗುತ್ತಿದೆ.

    ಸಮುದ್ರದಾಳದ ಗಣಿಗಾರಿಕೆಯಿಂದ ಎದುರಾಗುತ್ತಾ ಅಪಾಯ?
    ಸಮುದ್ರದಿಂದ ಅಮೂಲ್ಯ ಲೋಹಗಳನ್ನು ಹೀರಿಕೊಳ್ಳುವಂತಹ ಸಾಧನಗಳ ಸಹಾಯದಿಂದ ಗಣಿಗಾರಿಕೆ ಮಾಡಬಹುದು. ಈ ರೀತಿಯ ಕ್ರಮ ಅತ್ಯಂತ ಸರಳವಾಗಿಯೂ ಇದೆ. ಆದರೆ ಇದರಿಂದ ಜಲಚರಗಳಿಗೆ ಅಪಾಯವಾಗುವ ಆತಂಕವನ್ನು ಪರಿಸರವಾದಿಗಳು ವ್ಯಕ್ತಪಡಿಸಿದ್ದಾರೆ. ಸಮುದ್ರದಾಳದಲ್ಲಿ ಕೆಸರು ಹಾಗೂ ಗಡ್ಡೆಗಳಲ್ಲಿ ವಾಸಿಸುವ ಜೀವಿಗಳು ಹಾಗೂ ಬ್ಯಾಕ್ಟೀರಿಯಾಗಳು ಕೂಡಾ ಈ ಸಾಧನಗಳಲ್ಲಿ ಹೀರಲ್ಪಡುತ್ತವೆ ಎಂಬ ಆತಂಕವನ್ನು ಅವರು ಹೊರಹಾಕಿದ್ದಾರೆ.

    ಇಂತಹ ಸೂಕ್ಷ್ಮ ಜೀವಿಗಳಿಗೆ ಬದುಕಲು ಮ್ಯಾಂಗನೀಸ್ ಅಗತ್ಯ. ಇವುಗಳು ಉತ್ಪತ್ತಿಯಾಗಲು ಸಾವಿರಾರು ವರ್ಷಗಳೇ ಬೇಕು. ಈ ಗಡ್ಡೆಗಳ ಪುನರುತ್ಪಾದನೆ ಅಸಾಧ್ಯವಾಗಿದೆ. ಏಕೆಂದರೆ ಇಂತಹ ಗಂಟುಗಳು ಕೆಲವು ಮಿಲಿಮೀಟರ್‌ಗಳಷ್ಟು ಬೆಳೆಯಲು ಲಕ್ಷಾಂತರ ವರ್ಷಗಳನ್ನೇ ತೆಗೆದುಕೊಳ್ಳುತ್ತವೆ ಎಂದು ಅಂದಾಜಿಸಲಾಗಿದೆ.

    ಗಣಿಗಾರಿಕೆಯಿಂದ ಉತ್ತಮ ಪರಿಸರ ಸಮತೋಲನ ಸಾಧ್ಯವೇ?
    ಮೆಟಲ್ಸ್ ಕಂಪನಿ ಸಮುದ್ರದಾಳದಿಂದ ಈ ಗಡ್ಡೆಗಳನ್ನು ಗಣಿಗಾರಿಕೆ ಮಾಡುವ ಗುರಿಯನ್ನು ಹೊಂದಿದೆ. ಆಳದ ಸಮುದ್ರದಲ್ಲಿ ಗಣಿಗಾರಿಕೆ ಮಾಡುವುದರಿಂದ ಪರಿಸರಕ್ಕೆ ಹಾನಿಯಾಗುವ ಸಂಭವ ಕಡಿಮೆ. ಇದು ಶೇ.80 ರಷ್ಟು ಹಸಿರುಮನೆ ಅನಿಲ ಹೊರಸೂಸುತ್ತದೆ ಎಂದು ವಾದಿಸಿದೆ.

    ಆಳ ಸಮುದ್ರದ ಗಣಿಗಾರಿಕೆ ಕಾಡುಗಳು ಮತ್ತು ಮಣ್ಣಿನ ಮೇಲೆ ಪರಿಣಾಮ ಬೀರುವುದಿಲ್ಲ. ಇದರಿಂದ ಜನರು ಸ್ಥಳಾಂತರವಾಗುವ ಸನ್ನಿವೇಶಗಳು ನಿರ್ಮಾಣವಾಗುವುದಿಲ್ಲ. ಇದಕ್ಕೆ ಶುದ್ಧ ನೀರಿನ ಅವಶ್ಯಕತೆಯೂ ಕಡಿಮೆಯಾಗಿದ್ದು, ಕಡಿಮೆ ಪ್ರಮಾಣದಲ್ಲಿ ವಿಷ ಬಿಡುಗಡೆ ಮಾಡುತ್ತದೆ. ಮಾತ್ರವಲ್ಲದೇ ಪ್ರಪಂಚದಲ್ಲೇ ಹೆಚ್ಚು ಕೋಬಾಲ್ಟ್ ಗಣಿಗಾರಿಕೆ ಮಾಡುವ ಕಾಂಗೋದಲ್ಲಿ ಮಕ್ಕಳು ಸೇರಿದಂತೆ ಜನರನ್ನು ಶೋಷಣೆಗೊಳಪಡಿಸುವುದನ್ನು ತಪ್ಪಿಸುತ್ತದೆ ಎಂದು ಮೆಟಲ್ಸ್ ಕಂಪನಿ ತಿಳಿಸಿದೆ. ಇದನ್ನೂ ಓದಿ: PublicTV Explainer: ಲ್ಯಾಬ್‌ನಲ್ಲಿ DNA ಇಟ್ರೆ ಸಾಕು ನಿಮ್ಗೆ ಸಿಗುತ್ತೆ ಚಿಕನ್‌, ಮಟನ್‌, ಬೀಫ್‌, ಫೋರ್ಕ್‌ ಮಾಂಸ!

    ಆಳ ಸಮುದ್ರದಲ್ಲಿ ಯಾವಾಗಿಂದ ಶುರುವಾಗುತ್ತೆ ಗಣಿಗಾರಿಕೆ?
    ಆಳವಾದ ಸಮುದ್ರದಲ್ಲಿ ಗಣಿಗಾರಿಕೆ ನಡೆಸುವಂತಹ ಕ್ರಮವನ್ನು ಇಂಟರ್ನ್ಯಾಷನಲ್ ಸೀಬೆಡ್ ಅಥಾರಿಟಿ ನಿಯಂತ್ರಿಸುತ್ತದೆ. ಇದನ್ನು ಸಮುದ್ರದ ಕಾನೂನು ಭಾಗವಾಗಿ ವಿಶ್ವಸಂಸ್ಥೆ ಸಮಾವೇಶದ ಅಡಿಯಲ್ಲಿ ಸ್ಥಾಪಿಸಲಾಗಿದೆ. ಇದು ವಿಶ್ವಾದ್ಯಂತ ಇದುವರೆಗೆ 31 ಪರಿಶೋಧನಾ ಗುತ್ತಿಗೆಗಳನ್ನು ನೀಡಿದೆ. ಆದರೆ ವಾಣಿಜ್ಯ ಗಣಿಗಾರಿಕೆ ಚಟುವಟಿಕೆಗಳಿಗೆ ಅನುಮತಿ ನೀಡಿಲ್ಲ.

    ಇದೀಗ ಸಮುದ್ರ ಗಣಿಗಾರಿಕೆಯ ಹೊಸ ನಿಯಮಗಳ ಜಾರಿಯಿಂದ ಕೆಲ ಕಂಪನಿಗಳಿಗೆ ಅನ್ವೇಷಣೆಗೆ ಅವಕಾಶ ಒದಗುತ್ತಿದೆ. ಜಮೈಕಾ ಮೂಲದ ಪ್ರಾಧಿಕಾರವು ಆಳ ಸಮುದ್ರದ ಗಣಿಗಾರಿಕೆ ಸಾಧ್ಯವೇ? ಹೇಗೆ ಮತ್ತು ಎಲ್ಲಿ ಸಾಧ್ಯ ಎಂಬ ವಿಷಯಗಳನ್ನು ಕೂಲಂಕಷವಾಗಿ ತಿಳಿದುಕೊಳ್ಳುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಸಮುದ್ರ ತಳ ಪ್ರಾಧಿಕಾರದ 167 ಸದಸ್ಯ ರಾಷ್ಟ್ರಗಳು ಜಾಗತಿಕ ಗಣಿಗಾರಿಕೆ ಸಂಹಿತೆಗಾಗಿ 10 ವರ್ಷಗಳ ಮಾತುಕತೆಗಳನ್ನು ಮುಂದುವರಿಸಿವೆ. ಜುಲೈ ವೇಳೆಗೆ ಕೈಗಾರಿಕೆಗಾಗಿ ಆಳ ಸಮುದ್ರದಲ್ಲಿ ಗಣಿಗಾರಿಕೆ ನಡೆಸಲು ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸುವ ಸಾಧ್ಯತೆಯಿದೆ. ಆದರೆ ಕೆಲ ದ್ವೀಪ ರಾಷ್ಟ್ರಗಳು ಆಳ ಸಮುದ್ರ ಗಣಿಗಾರಿಕೆ ಮೇಲೆ ನಿಷೇಧಕ್ಕೆ ಕರೆ ನೀಡಿವೆ.

    ಪರಿಸರವಾದಿಗಳ ವಿರೋಧವೇಕೆ?
    ಮಾನವನ ಸಂಪತ್ತಿನ ದಾಹಕ್ಕೆ ಮಿತಿಯಿಲ್ಲ. ಭೂಮಿಯನ್ನು ಅಗೆದು ಭೂಗರ್ಭದಲ್ಲಿರುವ ಸಂಪನ್ಮೂಲವನ್ನು ಹೊರತೆಗೆದು ಸ್ವೇಚ್ಛಾಚಾರದ ಜೀವನ ನಡೆಸುತ್ತಿದೆ ಮನುಕುಲ. ಗಣಿಗಾರಿಕೆಯಿಂದ ಭೂಮಿ, ಪರಿಸರ, ಜೀವವೈವಿಧ್ಯ ಅಪಾಯಕ್ಕೆ ಸಿಲುಕಿದೆ. ಭೂಮಿಯಿಂದ ಎಷ್ಟೇ ಅಗೆದು ತೆಗೆದು ಸ್ವಾಹ ಮಾಡಿದರೂ ಮನುಷ್ಯನ ದಾಹ ಮಾತ್ರ ಇನ್ನೂ ನೀಗಿಲ್ಲ. ಭವಿಷ್ಯ ಮತ್ತಷ್ಟು ಭೀಕರತೆಯನ್ನು ಪ್ರತಿಬಿಂಬಿಸುತ್ತಿದೆ. ಪರಿಸರ ಕಾಳಜಿ, ಜೀವವೈವಿಧ್ಯದ ಹಿತದೃಷ್ಟಿಯಿಂದ ಗಣಿಗಾರಿಕೆಗೆ ಸಾಕಷ್ಟು ಕಠಿಣ ನಿಯಮಗಳನ್ನು ರೂಪಿಸಿದ್ದರೂ ಅಕ್ರಮ ಗಣಿಗಾರಿಕೆಗಳಿಗೇನು ಕಮ್ಮಿಯಿಲ್ಲ. ಇದಕ್ಕೆ ಆಡಳಿತ ವ್ಯವಸ್ಥೆಯೇ ಕುಮ್ಮಕ್ಕು ನೀಡುತ್ತಿರುವುದು ಶೋಚನೀಯ ಸಂಗತಿ.

    ಭೂಮಿ ಗಣಿಗಾರಿಕೆ ಬಗ್ಗೆ ಚಿಂತೆಯ ಮಧ್ಯೆಯೇ ಮತ್ತೊಂದು ಗಣಿಗಾರಿಕೆ ಬಗ್ಗೆ ಚರ್ಚೆಯೊಂದು ಹುಟ್ಟುಕೊಂಡಿದ್ದು ಪರಿಸರವಾದಿಗಳಲ್ಲಿ ಆತಂಕ ಮೂಡಿಸಿದೆ. ಇಲ್ಲಿವರೆಗೆ ಭೂಪ್ರದೇಶದ ಮೇಲೆ ಗಣಿಗಾರಿಕೆ, ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಈಗ ಅದನ್ನು ಸಮುದ್ರದಾಳಕ್ಕೆ ವಿಸ್ತರಿಸಲಾಗಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Public TV Explainer: ಭಾರತದಲ್ಲಿ ಲ್ಯಾಬ್‌ನಲ್ಲೇ ತಯಾರಾಗುತ್ತಾ ವಜ್ರ? – ಕೃತಕ ವಜ್ರ ಹೇಗೆ ತಯಾರಿಸ್ತಾರೆ ಗೊತ್ತಾ?