Tag: Irrigation Project

  • ನೀರಾವರಿ ಯೋಜನೆಗಳಿಗೆ ಅನುಮತಿ ನೀಡಲು ಸಿಎಂ ಮನವಿ

    ನೀರಾವರಿ ಯೋಜನೆಗಳಿಗೆ ಅನುಮತಿ ನೀಡಲು ಸಿಎಂ ಮನವಿ

    ನವದೆಹಲಿ: ಕೇಂದ್ರ ಸರ್ಕಾರದ ಅನುಮತಿಗಾಗಿ ಬಾಕಿ ಉಳಿದಿರುವ ಮೇಕೆದಾಟು ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳ (Mekedatu and Upper Bhadra projects) ಅನುಷ್ಠಾನದ ಕುರಿತು ಗಮನ ಹರಿಸಬೇಕು ಎಂದು ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್‌ ಅವರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಮನವಿ ಮಾಡಿದ್ದಾರೆ.

    ದೆಹಲಿಯಲ್ಲಿ ಈ ಬಗ್ಗೆ ಮನವಿ ಮಾಡಿದ ಅವರು, ಕರ್ನಾಟಕ ರಾಜ್ಯದ ಬಾಕಿಯಿರುವ ಎಲ್ಲಾ ನೀರಾವರಿ ಯೋಜನೆಗಳಿಗೆ/ಪ್ರಸ್ತಾವನೆಗಳಿಗೆ ಅನುಮತಿ/ಕ್ಲಿಯರೆನ್ಸ್‌ ನೀಡಲು ಜಲಶಕ್ತಿ ಸಚಿವಾಲಯಕ್ಕೆ ತಾವು ನಿರ್ದೇಶನ ನೀಡಬೇಕು. ಈ ಯೋಜನೆಗಳು ರಾಜ್ಯದ ನೀರಾವರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆ ಮೂಲಕ ರೈತರ (Farmers) ಕಲ್ಯಾಣಕ್ಕೆ ನೆರವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ:  ರಾಹುಲ್ ಗಾಂಧಿ ಜೊತೆ ಸಿದ್ದರಾಮಯ್ಯ ಚರ್ಚೆ – ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲು ತೀರ್ಮಾನ

    ದೇಶದಲ್ಲೇ ರಾಜಸ್ಥಾನ ಹೊರತುಪಡಿಸಿದರೆ ಕರ್ನಾಟಕ ಅತಿ ಹೆಚ್ಚು ಒಣ ಭೂಮಿ ಹೊಂದಿರುವ ರಾಜ್ಯವಾಗಿದೆ. ಕರ್ನಾಟಕದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಹಾಗೂ ಅನುಷ್ಠಾನಗೊಳಿಸಲಾಗಿರುವ ನೀರಾವರಿ ಯೋಜನೆಗಳು ರಾಜ್ಯದ ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಿಗೆ ಕಾರಣವಾಗಿವೆ. ಇದನ್ನೂ ಓದಿ: ಬಿಜೆಪಿ ಕಾಲದ ಬೆಲೆ ಏರಿಕೆ ಬಗ್ಗೆ ಏಕೆ ಪ್ರತಿಭಟನೆ ಮಾಡುತ್ತಿಲ್ಲ? – ಡಿಕೆಶಿ

    ಉತ್ಪಾದನೆಯಲ್ಲಿನ ಹೆಚ್ಚಳ, ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ನೀರಿನ ನಿರ್ವಹಣೆಯಲ್ಲಿ ಸುಧಾರಣೆ, ಹವಾಮಾನ ವೈಪರೀತ್ಯದ ನಿರ್ವಹಣೆ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ. ರಾಜ್ಯ ಸರ್ಕಾರ ಕೃಷಿ ಉತ್ಪಾದನೆ ಹೆಚ್ಚಳ, ರೈತರ ಆದಾಯ ಹೆಚ್ಚಳ ಮಾಡಲು ಪೂರಕವಾಗಿ ನಿರಂತರ ಮತ್ತು ಸಮರ್ಪಕ ನೀರಾವರಿ ಪೂರೈಕೆಗೆ ಬದ್ಧವಾಗಿದೆ. ಹೀಗಾಗಿ ಕರ್ನಾಟಕ ರಾಜ್ಯದ ನೀರಾವರಿ ಯೋಜನೆ/ವಿಷಯಗಳಿಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

  • ಸಿದ್ದರಾಮಯ್ಯ ಜೊತೆ ಜಗಳಕ್ಕೆ ಹೋಗಲು ನನಗೆ ಬೇರೆ ಕೆಲಸ ಇಲ್ಲವೇ?: ಹೆಚ್‍ಡಿಕೆ

    ಸಿದ್ದರಾಮಯ್ಯ ಜೊತೆ ಜಗಳಕ್ಕೆ ಹೋಗಲು ನನಗೆ ಬೇರೆ ಕೆಲಸ ಇಲ್ಲವೇ?: ಹೆಚ್‍ಡಿಕೆ

    – ಮುಸ್ಲಿಂ ಅಭ್ಯರ್ಥಿ ವಿವಾದ ಆರಂಭಿಸಿದ್ದೇ ಸಿದ್ದರಾಮಯ್ಯ

    ಕಲಬುರಗಿ: ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗಲು ನನಗೇನು ಬೇರೆ ಕೆಲಸ ಇಲ್ಲವೇ? ಮುಸ್ಲಿಂ ಅಭ್ಯರ್ಥಿಗಳ ರಾಜಕೀಯ ವಿವಾದ ಶುರು ಮಾಡಿದ್ದು ಯಾರು? ಅವರೇ ಅಲ್ಲವೇ ಎಂದು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದರು.

    ಸಿಂಧಗಿ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ತೆರಳಲು ಇಂದು ಬೆಳಗ್ಗೆ ಕಲಬುರಗಿಗೆ ಆಗಮಿಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಹಾನಗಲ್ ಮತ್ತು ಸಿಂಧಗಿಯಲ್ಲಿ ಜೆಡಿಎಸ್ ಪಕ್ಷ ಇಬ್ಬರು ಸುಶಿಕ್ಷಿತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಆದರೆ, ಜೆಡಿಎಸ್ ಸೆಕ್ಯುಲರ್ ಮತಗಳನ್ನು ವಿಭಜಿಸಿ ಬಿಜೆಪಿಗೆ ಗೆಲ್ಲಲು ಅವಕಾಶ ಮಾಡಿಕೊಡಲು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ ಎಂದು ಸಿದ್ದರಾಮಯ್ಯ ಮೊದಲು ಹುಯಿಲೆಬ್ಬಿಸಿದರು. ಅನಗತ್ಯ ವಿವಾದವನ್ನು ಸೃಷ್ಟಿಸಿ ಗೊಂದಲ ಆರಂಭ ಮಾಡಿದ್ದಾರೆ. ಬಹುಶಃ ಅದಕ್ಕೆ ನಾನೇ ಅಂತ್ಯ ಹಾಡಬೇಕಾಗುತ್ತದೆ. ಅಂತಹ ಸ್ಥಿತಿಗೆ ನನ್ನನ್ನು ದೂಡಿದ್ದಾರೆ ಎಂದು ಮಾರ್ಮಿಕವಾಗಿ ತಿಳಿಸಿದರು. ಇದನ್ನೂ ಓದಿ: ಕಾಲಿನಿಂದ ತಲೆವರೆಗೂ ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ರಣದೀಪ್ ಸಿಂಗ್ ಸುರ್ಜೇವಾಲಾ

    ಕಾಂಗ್ರೆಸ್ ಪಕ್ಷವೇ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬಹುದಾಗಿತ್ತಲ್ಲವೇ? ಅದನ್ನು ಮಾಡದೇ ಜೆಡಿಎಸ್ ಟಿಕೆಟ್ ಕೊಟ್ಟಿತು ಅಂತ ಕೊರಗುವುದು ಏಕೆ? ಎಂದು ಪ್ರಶ್ನಿಸಿದ ಅವರು, ಸಿಂಧಗಿಯಲ್ಲಿ ನಮ್ಮ ಪಕ್ಷದ ನಿಷ್ಠಾವಂತ ಕುಟುಂಬಕ್ಕೆ ಟಿಕೆಟ್ ಕೊಟ್ಟಿದ್ದೇವೆ. ಪಕ್ಷದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಮರಣ ಹೊಂದಿದ ನಾಯಕರ ಕುಟುಂಬದ ಹೆಣ್ಣು ಮಗಳು ನಾಜಿಯಾ ಶಕೀಲಾ ಅಂಗಡಿ ಅವರಿಗೆ ಟಿಕೆಟ್ ನೀಡಿದ್ದೇವೆ ಎಂದು ತಿಳಿಸಿದರು

    ಟಿಕೆಟ್ ಬಗ್ಗೆ ಕಾಂಗ್ರೆಸ್‍ಗೆ ಸಂಕಟವೇಕೆ? ಕ್ಷೇತ್ರದಲ್ಲಿ ಪೈಪೋಟಿ ಇರುವುದು ಜೆಡಿಎಸ್-ಬಿಜೆಪಿ ನಡುವೆ ಮಾತ್ರ. ಯಾವ ಚುನಾವಣೆಯ್ಲಲೂ ಕಾಂಗ್ರೆಸ್ ಎರಡನೇ ಸ್ಥಾನಕ್ಕೂ ಬಂದಿರಲಿಲ್ಲ. ಹಾಗಿದ್ದ ಮೇಲೆ ಜೆಡಿಎಸ್ ವಿರುದ್ಧ ಅಪಪ್ರಚಾರ ಮಾಡುವುದೇಕೆ? ಎಂದು ಕಿಡಿಕಾರಿದರು.

    ನಾನು ಯಾವುದೇ ಕಾರಣಕ್ಕೂ ಅವರ ತಂಟೆಗೆ ಹೋಗುವುದಿಲ್ಲ, ಅವರೇ ಪದೇಪದೇ ನಮ್ಮ ಸುದ್ದಿಗೆ ಬರುತ್ತಿದ್ದಾರೆ. ನಮಗೆ ಮಾಡಲು ಸಾಕಷ್ಟು ಕೆಲಸಗಳಿವೆ, ಹೇಳಲು ಅನೇಕ ವಿಚಾರಗಳಿವೆ. ಜನರ ಬಳಿ ಮತ ಕೇಳಲು ನಮ್ಮಲ್ಲಿ ಜನರಿಗಾಗಿ ಮಾಡಿದ ಸೇವೆ ಇದೆ. ಕಾಂಗ್ರೆಸ್ ಪಕ್ಷದ ಹೆಸರೇಳಿಕೊಂಡು ಮತ ಕೇಳಬೇಕಾದ ಕರ್ಮ ನಮಗಿಲ್ಲ. ಆದರೆ ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಹೆಸರೇಳಿಕೊಂಡೇ ಮತಯಾಚನೆ ಮಾಡುತ್ತಿದ್ದಾರೆಂದು ತರಾಟೆಗೆ ತೆಗೆದುಕೊಂಡರು.

    ನೀರಾವರಿ ಯೋಜನೆ

    ನಾಗಠಾಣ ಮತ್ತು ಇಂಡಿ ವಿಧಾನಸಭೆ ಕ್ಷೇತ್ರದ ಸುಮಾರು 28,000 ಹೆಕ್ಟೇರ್ ಭೂಮಿಗೆ ನೀರೊದಗಿಸುವ ಯೋಜನೆಗೆ ನಾನು ಸಿಎಂ ಆಗಿದ್ದಾಗ ರೇವಣಸಿದ್ದೇಶ್ವರ ವೃದ್ಧಿ ಯೋಜನೆ ಅಡಿಯಲ್ಲಿ ಬಜೆಟ್ ಮೂಲಕವೇ 250 ಕೋಟಿ ರೂ.ಗಳನ್ನು ಮೀಸಲಿರಿಸಿದ್ದೆ. ಆದರೆ, ಬಿಜೆಪಿ ಸರ್ಕಾರ ಅದಕ್ಕೆ ತಡೆಯೊಡ್ಡಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ತಿಂಡಿ ಪ್ರಿಯರಿಗೆ ಹೊಸದಾಗಿ ಸೇರ್ಪಡೆಯಾಯಿತು ಬಾಹುಬಲಿ ಗೋಲ್ಡ್ ಮೊಮೊ

    ಯೋಜನೆಗೆ ಬಿಜೆಪಿ ಸರ್ಕಾರ ತಡೆಯೊಡ್ಡಿದ್ದನ್ನು ಪ್ರತಿಭಟಿಸಿ ಆ ಭಾಗದ ರೈತರು ಕಳೆದ 40 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಕೆಲ ದಿನದ ಹಿಂದೆ ಮಾಜಿ ಪ್ರಧಾನಮಂತ್ರಿಗಳಾದ ಹೆಚ್ ಡಿ ದೇವೇಗೌಡರು ಅಲ್ಲಿನ ರೈತರನ್ನು ಭೇಟಿಯಾಗಿ ಅವರ ಬೇಡಿಕೆಗೆ ದನಿಗೂಡಿಸಿದ್ದಾರೆ. ನಿಮ್ಮ ಪ್ರತಿಭಟನೆಯನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಯೋಜನೆ ಕಾರ್ಯಗತ ಮಾಡುವ ನಿಟ್ಟಿನಲ್ಲಿ ನಿಮ್ಮ ಜತೆ ನಿಂತು ಹೋರಾಟ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

    ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಮಾತನಾಡಲು ವಿಷಯವೇ ಇಲ್ಲ. ನಮಗೆ ಆ ರೀತಿಯ ಕೊರತೆ ಇಲ್ಲ. ಸಿಂಧಗಿ ವಿಧಾನಸಭೆ ಕ್ಷೇತ್ರಕ್ಕೆ ನಾನು ಮತ್ತು ನಮ್ಮ ತಂದೆಯವರು ಕೊಟ್ಟ ನೀರಾವರಿ ಯೋಜನೆಗಳು ಇನ್ನಿತರೆ ಕಾರ್ಯಕ್ರಮಗಳ ಮೂಲಕ ಜನರ ಮುಂದೆ ಹೋಗುತ್ತೇವೆ ಎಂದು ಹೇಳಿದರು.

  • ಮುಂದುವರಿದ ಶಶಿಕಲಾ ಜೊಲ್ಲೆಯವರ ಮರಾಠಿ ಭಾಷಾ ಪ್ರೇಮ – ಕನ್ನಡಿಗರು ಆಕ್ರೋಶ

    ಮುಂದುವರಿದ ಶಶಿಕಲಾ ಜೊಲ್ಲೆಯವರ ಮರಾಠಿ ಭಾಷಾ ಪ್ರೇಮ – ಕನ್ನಡಿಗರು ಆಕ್ರೋಶ

    -ಕನ್ನಡ ನಿರ್ಲಕ್ಷ್ಯಸಿದ ಸಚಿವರ ವಿರುದ್ದ ಕನ್ನಡಾಭಿಮಾನಿಗಳ ಆಕ್ರೋಶ

    ಚಿಕ್ಕೋಡಿ: ಕರ್ನಾಟಕದ ಸಚಿವೆಯಾಗಿದ್ದರೂ, ತಮ್ಮ ಕ್ಷೇತ್ರದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅವರು ಮರಾಠಿ ಪ್ರೇಮವನ್ನು ಮತ್ತೆ ಮುಂದುವರೆಸಿದ್ದಾರೆ.

    ನಿಪ್ಪಾಣಿ ಮತಕ್ಷೇತ್ರದ ಸೌಂದಲಗಾ ಗ್ರಾಮದಲ್ಲಿ ಏತ ನೀರಾವರಿ ಉದ್ಘಾಟನೆ ಸಂದರ್ಭದಲ್ಲಿ ಸಂಪೂರ್ಣವಾಗಿ ಮರಾಠಿ ಭಾಷೆಯಲ್ಲಿ ಬ್ಯಾನರ್ ಅಳವಡಿಸಿದ್ದ ಸಮಾರಂಭದಲ್ಲಿ ಶಶಿಕಲಾ ಜೊಲ್ಲೆ ಅವರು ಭಾಗಿಯಾಗುವುದರ ಜೊತೆಗೆ ಮರಾಠಿ ಭಾಷೆಯ ಪ್ರೇಮವನ್ನು ಎತ್ತಿ ತೋರಿಸಿದ್ದಾರೆ.

    ಬೆಳಗಾವಿ ಜಿಲ್ಲೆ ನಿಪ್ಪಾಣಿ ಮತಕ್ಷೇತ್ರದ ಸೌಂದಲಗಾ ಗ್ರಾಮದಲ್ಲಿ ಮಂಜೂರಾದ 1 ಕೋಟಿ 49 ಲಕ್ಷ ರೂ. ಮೊತ್ತದಲ್ಲಿ ದೂಧಗಂಗಾ ನದಿಯಿಂದ ಏತ ನೀರಾವರಿ ಯೋಜನೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆಯವರು ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಸಮಾರಂಭ ಸಂಪೂರ್ಣ ಮರಾಠಿಮಯವಾಗಿತ್ತು. ಅಧಿಕಾರ ಅನುಭವಿಸಲು ಕರ್ನಾಟಕ ಬೇಕು, ಆದರೆ ಮರಾಠಿ ವೋಟ್ ಬ್ಯಾಂಕ್ ಗಾಗಿ ಕನ್ನಡವನ್ನು ನಿರ್ಲಕ್ಷಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಚಿವೆ ಶಶಿಕಲಾ ಜೊಲ್ಲೆ ವಿರುದ್ದ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಮಳೆಯಿಂದ ಮಿನಿ ಮಲೆನಾಡಿನಂತಾದ ಸನ್ ಸಿಟಿ ಕಲಬುರಗಿ

  • ರಾಷ್ಟ್ರೀಯ ಹೆದ್ದಾರಿಯಲ್ಲೇ ಕಾರಂಜಿಯಂತೆ ಚಿಮ್ಮುತ್ತಿರೋ ನೀರು

    ರಾಷ್ಟ್ರೀಯ ಹೆದ್ದಾರಿಯಲ್ಲೇ ಕಾರಂಜಿಯಂತೆ ಚಿಮ್ಮುತ್ತಿರೋ ನೀರು

    ದಾವಣಗೆರೆ: ಹರಿಹರ-ದಾವಣಗೆರೆ ಮಾರ್ಗ ಮಧ್ಯೆ 22 ಕೆರೆ ಏತ ನೀರಾವರಿ ಯೋಜನೆ ಪೈಪ್‍ಲೈನ್ ಒಡೆದು ಲಕ್ಷಾಂತರ ಲೀಟರ್ ನೀರು ವ್ಯರ್ಥವಾಗುತ್ತಿದೆ.

    ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿ ಪೈಪ್‍ಲೈನ್ ಒಡೆದಿದೆ. ನಾಲ್ಕು ದಿನಗಳ ಹಿಂದೆಯಷ್ಟೇ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಈಗಲೇ ಪೈಪ್‍ಲೈನ್ ಒಡೆದು ಕಾರಂಜಿಯಂತೆ ನೀರು ಚಿಮ್ಮುತ್ತಿದೆ.

    ಏತ ನೀರಾವರಿ ಯೋಜನೆ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾಗಿದೆ. ಇದೇ ಜೂನ್ 22 ರಂದು ಈ ಯೋಜನೆ ಆರಂಭವಾಗಿತ್ತು. ಆದರೆ ನಾಲ್ಕು ದಿನಗಳಲ್ಲಿ ಪೈಪ್ ಲೈನ್ ಹಾಳಾಗಿದೆ. ಈ ಮೂಲಕ ಹತ್ತು ವರ್ಷದ ಯೋಜನೆಗೆ ವಿಘ್ನಗಳು ತಪ್ಪದಂತಾಗಿದೆ.

    ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಬಳಿಯ ತುಂಗಭದ್ರಾ ನದಿಯಿಂದ ದಾವಣಗೆರೆ ಮತ್ತು ಜಗಳೂರು ತಾಲೂಕಿನ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಆ ರಸ್ತೆಯಲ್ಲಿ ಹೋಗುತ್ತಿರುವ ಸವಾರರು ನೀರು ಚಿಮ್ಮುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ರಸ್ತೆಯ ಪಕ್ಕದಲ್ಲಿಯೇ ನೀರು ಕಾರಂಜಿಯಂತೆ ಚಿಮ್ಮುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

  • ಶಿಕಾರಿಪುರದಲ್ಲಿ 1,100ಕೋಟಿ ರೂ. ಮೊತ್ತದ ಏತ ನೀರಾವರಿ ಯೋಜನೆಗಳಿಗೆ ಸಿಎಂ ಚಾಲನೆ

    ಶಿಕಾರಿಪುರದಲ್ಲಿ 1,100ಕೋಟಿ ರೂ. ಮೊತ್ತದ ಏತ ನೀರಾವರಿ ಯೋಜನೆಗಳಿಗೆ ಸಿಎಂ ಚಾಲನೆ

    ಶಿವಮೊಗ್ಗ: ರಾಜ್ಯದಲ್ಲಿ ಮುಂದಿನ 3 ವರ್ಷಗಳಲ್ಲಿ ಏತ ನೀರಾವರಿ ಮೂಲಕ ರಾಜ್ಯದ ಎಲ್ಲಾ ಕೆರೆಗಳನ್ನು ತುಂಬಿಸುವ ನೀರಾವರಿ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.

    ಶಿಕಾರಿಪುರದಲ್ಲಿ ಇಂದು 1,100 ಕೋಟಿ ರೂ. ಮೊತ್ತದ ಏತ ನೀರಾವರಿ ಯೋಜನೆ ಸೇರಿದಂತೆ ಒಟ್ಟು 1,277 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ನದಿಯ ನೀರನ್ನು ಏತ ನೀರಾವರಿ ಮೂಲಕ ಮೇಲೆತ್ತಿ, ಕೆರೆಗಳ ಮೂಲಕ ರೈತರ ಹೊಲಗಳನ್ನು ತುಂಬಿಸಲಾಗುವುದು. ಆವರ್ತ ನಿಧಿಯನ್ನು ತೆಗೆದಿರಿಸಿ, ರೈತರ ಉತ್ಪನ್ನಗಳಿಗೆ ಉತ್ತಮ ಬೆಂಬಲ ಬೆಲೆ ಒದಗಿಸಲಾಗುವುದು ಎಂದರು.

    ಪುರದಕೆರೆ ಸಮೀಪ ತುಂಗಭದ್ರಾ ನದಿಯಿಂದ ಏತ ನೀರಾವರಿ ಮೂಲಕ ಶಿಕಾರಿಪುರ ತಾಲೂಕಿನ ಉಡುಗಣಿ, ತಾಳಗುಂದ, ಹೊಸೂರು ಹೋಬಳಿ ಕೆರೆಗಳನ್ನು ತುಂಬಿಸುವ 850 ಕೋಟಿ ರೂ. ಯೋಜನೆಯಿಂದ 110 ಗ್ರಾಮಗಳ 186 ಕೆರೆಗಳನ್ನು ತುಂಬಿಸಲಾಗುತ್ತಿದೆ. ಇದೇ ರೀತಿ ಶಿವಮೊಗ್ಗ ಹೊಸಹಳ್ಳಿ ಸಮೀಪ ತುಂಗಾ ನದಿಯಿಂದ ಏತ ನೀರಾವರಿ ಮೂಲಕ ಶಿವಮೊಗ್ಗ ಗ್ರಾಮಾಂತರ ಕೆರೆಗಳಿಗೆ ಹಾಗೂ ಶಿಕಾರಿಪುರ ಅಂಜನಾಪುರ ಜಲಾಶಯಕ್ಕೆ ನೀರು ಒದಗಿಸುವ 250 ಕೋಟಿ ರೂ. ಮೊತ್ತದ ಏತ ನೀರಾವರಿ ಯೋಜನೆಯಿಂದ 50 ಗ್ರಾಮಗಳ 75 ಕೆರೆಗಳನ್ನು ತುಂಬಿಸಲಾಗುತ್ತಿದೆ. ಮುಂದಿನ ಒಂದು ವರ್ಷದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಿಎಂ ಕಾರ್ಯಕ್ರಮದಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಗತಿಪರ ರೈತರನ್ನು ಮುಖ್ಯಮಂತ್ರಿಗಳು ಸನ್ಮಾನಿಸಿದರು. ರೈತರಿಗೆ ಸ್ಪಿಂಕ್ಲರ್, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಆಯುಷ್ಮಾನ್ ಆರೋಗ್ಯ ಕಾರ್ಡ್ ಸಹ ವಿತರಿಸಿದರು. ಜಿಲ್ಲೆಯ ಆಯ್ದ ಕೆರೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಹೂಳು ತೆಗೆಯುವ ಕರಾರು ಒಪ್ಪಂದಕ್ಕೆ ಈ ಸಂದರ್ಭದಲ್ಲಿ ಸಹಿ ಹಾಕಲಾಯಿತು. ಈ ಹೂಳನ್ನು ರೈತರು ತೆಗೆದುಕೊಂಡು ತಮ್ಮ ಹೊಲಗಳಿಗೆ ಹಾಕುವಂತೆ ಮುಖ್ಯಮಂತ್ರಿ ಕರೆ ನೀಡಿದರು.

    ಸಮಿತಿ ರಚನೆ: ಬೆಂಗಳೂರಿನಲ್ಲಿ ಒತ್ತುವರಿಯಾಗಿರುವ ಭೂಮಿಯನ್ನು ಗುರುತಿಸಲು ಸಮಿತಿ ರಚಿಸಲಾಗಿದೆ. ಒತ್ತುವರಿ ಜಮೀನು ವಶಪಡಿಸಿ ಹರಾಜು ಹಾಕಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಬಿ.ಸಿ.ಪಾಟೀಲ್, ಸಿ.ಟಿ.ರವಿ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಅಶೋಕ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ರುದ್ರೇಗೌಡ, ಆರ್.ಪ್ರಸನ್ನ ಕುಮಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

  • ಎಂಟಿಬಿ ನಾಗರಾಜ್ ನಿಮಗೆ ಏನು ಬೇಕು ಹೇಳಿ ಕೊಡ್ತೀವಿ – ಸಿಎಂ

    ಎಂಟಿಬಿ ನಾಗರಾಜ್ ನಿಮಗೆ ಏನು ಬೇಕು ಹೇಳಿ ಕೊಡ್ತೀವಿ – ಸಿಎಂ

    – ಎಂಟಿಬಿಯಂತಹ ಶಾಸಕರು ಆಯ್ಕೆ ಆಗಬೇಕು
    – ಯಾವುದೇ ಕೆಲಸ ಮಾಡಿಕೊಡಲು ಸಿದ್ಧ

    ಬೆಂಗಳೂರು: ಎಂಟಿಬಿ ನಾಗರಾಜ್ ನಿಮಗೆ ಏನು ಬೇಕು ಹೇಳಿ ಕೊಡ್ತೀವಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ಭರವಸೆ ನೀಡಿದ್ದಾರೆ.

    ಹೊಸಕೋಟೆಯಲ್ಲಿ ಏತ ನೀರಾವರಿ ಸೇರಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ನಂತರ ಮಾತನಾಡಿದರು. ಕೇವಲ ಎಂಟಿಬಿ ಕ್ಷೇತ್ರ ಮಾತ್ರವಲ್ಲ ಆದ್ಯತೆ ಮೇರೆಗೆ ಎಲ್ಲ ಕ್ಷೇತ್ರಕ್ಕೂ ಅನುದಾನ ಬಿಡುಗಡೆ ಮಾಡಲಾಗುವುದು. ಎಂಟಿಬಿಯವರಿಗೆ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿಕೊಟ್ಟಿದ್ದರೆ ಮೈತ್ರಿ ಸರ್ಕಾರದಲ್ಲಿ ಅವರು ರಾಜೀನಾಮೆ ನೀಡುವ ಪ್ರಸಂಗವೇ ಬರುತ್ತಿರಲಿಲ್ಲ. ಎಂಟಿಬಿ ಯಾವುದೇ ಪಕ್ಷದಿಂದ ನಿಲ್ಲಲಿ ಅಥವಾ ಪಕ್ಷೇತರ ಅಭ್ಯರ್ಥಿಯಾದರೂ ಪರವಾಗಿಲ್ಲ. ಅವರಂತಹ ಶಾಸಕರು ಆಯ್ಕೆ ಆಗಬೇಕು ಎಂದು ಜನರಲ್ಲಿ ಮನವಿ ಮಾಡಿದರು.

    ಇಂತಹ ಪ್ರಮಾಣಿಕ ವ್ಯಕ್ತಿ ಶಾಸಕನಾಗಬೇಕು. ಯಡಿಯೂರಪ್ಪ ಮಾತನಾಡಿದರೆ ಹಿಂದೆ ಸರಿಯುವ ವ್ಯಕ್ತಿ ಅಲ್ಲ. ಎಂಟಿಬಿ ಅವರೇ ಇನ್ನು ಹತ್ತು ಕೆಲಸಗಳನ್ನು ಕೇಳಿ ಎಲ್ಲ ಕೆಲಸಗಳನ್ನು ಮಾಡಿಕೊಡುವೆ. ಇದೇ ವೇಳೆ ಮತ್ತೇನು ಬೇಕಣ್ಣ ಎಂದು ಸಿಎಂ ಸಭಿಕರನ್ನು ಪ್ರಶ್ನಿಸಿದರು. ಸಿಎಂ ಮಾತು ಕೇಳಿ ಕೇಕೆ ಹಾಕಿ ಸಭಿಕರು ಸಂತಸಪಟ್ಟರು. ಶಿಕಾರಿಪುರದಂತೆ ಹೊಸಕೋಟೆ ಕ್ಷೇತ್ರ ಮಾದರಿಯಾಗಬೇಕು. ಇದಕ್ಕೆ ನಾನು ಯಾವುದೇ ಕೆಲಸ ಮಾಡಿಕೊಡಲು ಸಿದ್ಧ ಎಂದು ಭರವಸೆ ನೀಡಿದರು.

    ಹೊಸಕೋಟೆ ನಗರಕ್ಕೆ ಮೆಟ್ರೋ ವಿಸ್ತರಣೆ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಮೆಟ್ರೋ ಯೋಜನೆ ವಿಸ್ತರಣೆಗೆ ಅನುಮತಿ ಕೊಡಿಸುತ್ತೇನೆ. ಪುನಃ ಹೊಸಕೋಟೆಗೆ ಬಂದು ಮೆಟ್ರೋ ಯೋಜನೆ ವಿಸ್ತರಣೆಗೆ ಶಂಕುಸ್ಥಾಪನೆ ಮಾಡುತ್ತೇನೆ. ಹೊಸಕೋಟೆಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರಾತಿಗೆ ಅಧಿಕಾರಿಗಳ ಜೊತೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ. ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

    ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ರಾಜೀನಾಮೆ ನೀಡಿದರೂ ಹೊಸಕೋಟೆ ಅಭಿವೃದ್ಧಿ ಬಗ್ಗೆ ಎಂಟಿಬಿ ನಾಗರಾಜ್ ಗೆ ವಿಶೇಷ ಪ್ರೇಮ ಇದೆ. ನಾಗರಾಜ್ ರವರಿಗೆ ಶಾಸಕ ಸ್ಥಾನಕ್ಕಿಂತ ಕ್ಷೇತ್ರದ ಅಭಿವೃದ್ಧಿ ಮುಖ್ಯ ಅಂತಹವರು. ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಎಂಟಿಬಿ ಶ್ರಮಿಸಿದ್ದಾರೆ. ಬಿಎಸ್‌ವೈ ಮೂರೂವರೆ ವರ್ಷ ಆಡಳಿತ ಮಾಡುತ್ತಾರೆ. ನಮ್ಮದು ಅಲ್ಲಾಡಿಸುವ ಸರ್ಕಾರವಲ್ಲ. ನಾವು ಕನಕಪುರ ಬಂಡೆ ಅಲ್ಲ, ನಾವು ಅಲ್ಲಾಡಲ್ಲ, ಮೂರುವರೆ ವರ್ಷ ಪೂರ್ಣಗೊಳಿಸ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಹೊಸಕೋಟೆಯಲ್ಲಿ ಸಿಎಂ ಯಡಿಯೂರಪ್ಪ ಅವರು 150 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದೇ ವೇಳೆ 800 ಕೆ.ಜಿ. ಬೃಹತ್ ಸೇಬಿನ ಹಾರವನ್ನು ಕ್ರೇನ್ ಮುಖಾಂತರ ಸಿಎಂ ಯಡಿಯೂರಪ್ಪನವರಿಗೆ ಹಾಕಲಾಯಿತು.

    ಸಿಎಂ ಕಾರ್ಯಕ್ರಮಕ್ಕೆ ಪ್ರತಿಭಟನೆ ಬಿಸಿ ತಟ್ಟಿತ್ತು. ಹೊಸಕೋಟೆಗೆ ಕಾವೇರಿ ನೀರು, ಮೆಟ್ರೋ ಮಂಜೂರು ಮಾಡುವಂತೆ ಸ್ಥಳೀಯ ನಿವಾಸಿಗಳಿಂದ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

  • ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ಬಂತು ಮೊದಲ ನೀರು- ಕುಣಿದು ಕುಪ್ಪಳಿಸಿದ ಕೋಲಾರದ ಮಕ್ಕಳು

    ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ಬಂತು ಮೊದಲ ನೀರು- ಕುಣಿದು ಕುಪ್ಪಳಿಸಿದ ಕೋಲಾರದ ಮಕ್ಕಳು

    ಕೋಲಾರ: ಕೋರಮಂಗಲ ಚೆಲ್ಲಘಟ್ಟ (ಕೆ.ಸಿ.ವ್ಯಾಲಿ) ಏತ ನೀರಾವರಿ ಯೋಜನೆ ಅಡಿ ಕೋಲಾರ ಜಿಲ್ಲೆಯ ನರಸಾಪುರದ ಗ್ರಾಮಕ್ಕೆ ಮೊದಲ ಬಾರಿಗೆ ನೀರು ಬಂದಿದೆ.

    ತಮ್ಮ ಗ್ರಾಮದ ಕೆರೆಗೆ ಕೊನೆಗೂ ನೀರು ಬಂದ ಹಿನ್ನೆಲೆಯಲ್ಲಿ ನರಸಾಪುರ ಹೋಬಳಿಯ ಲಕ್ಷ್ಮೀಪುರ ಮಕ್ಕಳು ಕುಪ್ಪಳಿಸಿದ್ದಾರೆ. ಜೂನ್ 7 ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೆ.ಸಿ.ವ್ಯಾಲಿ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಲಿದ್ದು, ಈ ಹಿನ್ನೆಯಲ್ಲಿ ಲಕ್ಷ್ಮೀಪುರ ಕೆರೆಗೆ ನೀರು ಹರಿಸಲಾಗುತ್ತಿದೆ. ಮೊದಲ ಬಾರಿ ಕೊಳವೆ ಮೂಲಕ ನೀರು ಬರುತ್ತಿರುವುದನ್ನು ಗ್ರಾಮಸ್ಥರು ಹಾಗೂ ಮಕ್ಕಳು ಕುತೂಹಲದಿಂದ ವಿಕ್ಷೀಸಿದರು.

    2016 ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೆ.ಸಿ.ವ್ಯಾಲಿ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದರು. 12 ಸಾವಿರ ಕೋಟಿ ವೆಚ್ಚದಲ್ಲಿ ಜಿಲ್ಲೆಯ 126 ಕೆರೆಗಳಿಗೆ ನೀರು ಹರಿಸುವ ಯೋಜನೆಯ ಉದ್ದೇಶವಾಗಿದೆ. ಸ್ವಾತಂತ್ರ್ಯ ನಂತರ ಬಯಲು ಸೀಮೆ ಕೋಲಾರಕ್ಕೆ ಸಿಕ್ಕ ಮೊದಲ ನೀರಾವರಿ ಯೋಜನೆ ಇದಾಗಿದೆ.