ಮುಂಬೈ: ಬಾಲಿವುಡ್ ನಟ ಇರ್ಫಾನ್ ಖಾನ್ ಪುತ್ರ ಬಾಬಿಲ್ ಅವರಿಗೆ ನೆಟ್ಟಿಗರೊಬ್ಬರು ನೀವು ಮುಸ್ಲಿಂ ಧರ್ಮ ಪಾಲನೆ ಮಾಡ್ತೀರಾ ಎಂದು ಪ್ರಶ್ನೆ ಕೇಳಿದ್ದಾರೆ. ನೆಟ್ಟಿಗನ ಪ್ರಶ್ನೆಯ ಸ್ಕ್ರೀನ್ ಶಾಟ್ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಬಾಬಿಲ್ ತಮ್ಮದೇ ಸ್ಟೈಲಿನಲ್ಲಿ ಉತ್ತರ ನೀಡಿದ್ದಾರೆ.
ಇರ್ಫಾನ್ ಖಾನ್ ಪುತ್ರ ಬಾಬಿಲ್ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ಖಾಸಗಿ ಫೋಟೋ, ಭಾವನೆಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆಗಾಗ್ಗೆ ನೆಟ್ಟಿಗರು ಕೇಳುವ ಪ್ರಶ್ನೆಗಳಿಗೆ ಉತ್ತರ ಸಹ ನೀಡಿರುತ್ತಾರೆ. ಇದೀಗ ಧರ್ಮದ ಕುರಿತು ಕೇಳಲಾದ ಪ್ರಶ್ನೆಗೆ ಬಾಬಿಲ್ ನೀಡಿರುವ ಉತ್ತರದ ಸಾಲುಗಳಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಿನ್ನ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ನಾನು ಬೈಬಲ್, ಭಗವದ್ಗೀತೆ ಮತ್ತು ಖುರಾನ್ ಪಠಣ ಮಾಡಿದ್ದೇನೆ. ಸದ್ಯ ಗುರುಗೃಂಥ ಓದುತ್ತಿದ್ದೇನೆ. ನಾನು ಎಲ್ಲರಿಗಾಗಿ ಇದ್ದೇನೆ. ನಾವು ಪರಸ್ಪರ ಒಬ್ಬರು, ಮತ್ತೊಬ್ಬರ ಏಳಿಗೆಗೆ ಸಹಾಯ ಮಾಡುತ್ತೇವೆ. ಇದುವೇ ಪ್ರತಿ ಧರ್ಮದ ಆಧಾರ ಎಂದು ನೆಟ್ಟಿಗನ ಪ್ರಶ್ನೆಗೆ ಬಾಬಿಲ್ ಉತ್ತರಿಸಿದ್ದಾರೆ. ಇನ್ನೂ ತಮಗೆ ಪ್ರಶ್ನೆ ಕೇಳಿದ ನೆಟ್ಟಿಗನ ಹೆಸರನ್ನು ಬಾಬಿಲ್ ಬ್ಲರ್ ಮಾಡಿದ್ದಾರೆ.
ಬಾಲಿವುಡ್ ಲೆಜೆಂಡ್, ಟ್ರ್ಯಾಜಿಡಿ ಕಿಂಗ್ ದಿಲೀಪ್ ಕುಮಾರ್ ನಿಧನವಾದಾಗ ಬಾಬಿಲ್ ಎಮೋಷನಲ್ ಸಾಲುಗಳನ್ನು ಸೋಶಿಯಲ್ ಬರೆದುಕೊಂಡಿದ್ದರು. ಸದ್ಯ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗದಕ್ಕೆ ದುಃಖವಾಗ್ತಿದೆ. ನಾನು ತಂದೆ ಇರ್ಫಾನ್ ಖಾನ್ ಮತ್ತು ದಿಲೀಪ್ ಕುಮಾರ್ ಅವರಿಂದ ಪ್ರೇರಪಿತಗೊಂಡಿದ್ದೇನೆ ಎಂದು ಹೇಳಿದ್ದರು.
ಮುಂಬೈ: 2021ರ ಫಿಲಂಫೇರ್ ಅವಾರ್ಡ್ ವಿಜೇತರ ಪಟ್ಟಿ ಪ್ರಕಟವಾಗಿದ್ದು, ಅಂಗ್ರೆಜಿ ಮೀಡಿಯಂ ಸಿನಿಮಾ ನಟನೆಗಾಗಿ ದಿ.ಇರ್ಫಾನ್ ಖಾನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಅಜಯ್ ದೇವ್‍ಗನ್ ಮತ್ತು ಕಾಜೋಲ್ ನಟನೆಯ ‘ತಾನ್ಹಾಜಿ- ದಿ ಅನ್‍ಸಂಗ್ ವಾರಿಯರ್’ ಚಿತ್ರ ಹಲವು ವಿಭಾಗಗಳಲ್ಲಿ ಪ್ರಶಸ್ತಿಯನ್ನ ಬಾಚಿಕೊಂಡಿದೆ. ಪ್ರಶಸ್ತಿ ವಿಜೇತರ ಪಟ್ಟಿ ಈ ಕೆಳಗಿನಂತಿದೆ.
ಅತ್ಯುತ್ತಮ ಚಿತ್ರ: ಥಪ್ಪಡ್
ಅತ್ಯುತ್ತಮ ನಟ: ಇರ್ಫಾನ್ ಖಾನ್ (ಸಿನಿಮಾ-ಅಂಗ್ರೇಜಿ ಮೀಡಿಯಂ)
ಅತ್ಯುತ್ತಮ ನಟಿ: ತಾಪ್ಸಿ ಪನ್ನು (ಸಿನಿಮಾ-ಥಪ್ಪಡ್)
ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟ: ಅಮಿತಾಬ್ ಬಚ್ಚನ್ (ಸಿನಿಮಾ-ಗುಲಾಬೋ ಸಿತಾಬೋ)
ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟಿ: ತಿಲ್ತೋಮಾ ಶೋಮೆ (ಸಿನಿಮಾ-ಸರ್)
ಅತ್ಯುತ್ತಮ ಸಂಭಾಷಣೆ- ಜೂಹಿ ಚರ್ತುವೇದಿ (ಸಿನಿಮಾ- ಗುಲಾಬೋ ಸಿತಾಬೋ)
ಅತ್ಯುತ್ತಮ ನಿರ್ದೇಶನ: ಓಂ ರಾವತ್ (ಸಿನಿಮಾ-ತಾನ್ಹಾಜಿ; ದಿ ಅನ್‍ಸಂಗ್ ವಾರಿಯರ್)
ಅತ್ಯುತ್ತಮ ಪೋಷಕ ನಟ: ಸೈಫ್ ಅಲಿ ಖಾನ್ (ಸಿನಿಮಾ-ತಾನ್ಹಾಜಿ; ದಿ ಅನ್‍ಸಂಗ್ ವಾರಿಯರ್)
ಅತ್ಯುತ್ತಮ ಪೋಷಕ ನಟಿ: ಫರೂಖ್ ಜಾಫರ್ (ಗುಲಾಬೋ ಸಿತಾಬೋ)
ಅತ್ಯುತ್ತಮ ಸಾಹಿತ್ಯ: ಗುಲ್ಜಾರ್(ಛಪಾಕ್)
ಅತ್ಯುತ್ತಮ ಮ್ಯೂಸಿಕಲ್ ಅಲ್ಬಂ: ಲೂಡೋ (ಪ್ರೀತಮ್)
ಅತ್ಯುತ್ತಮ ಹಿನ್ನೆಲೆ ಗಾಯಕ: ರಾಘವ್ ಚೈತನ್ಯ-ಇಕ್ ಟುಕಡಾ ಚುಪಾ (ಸಿನಿಮಾ-ಥಪ್ಪಡ್)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಆಸೀಸ್ ಕೌರ್- ಮಲಂಗ್ (ಸಿನಿಮಾ-ಮಲಂಗ್)
ಅತ್ಯುತ್ತಮ ಸಾಹಸ: ರಮಜಾನ್ ಬುಲುಟ್, ಆರ್.ಪಿ.ಯಾದವ್ (ಸಿನಿಮಾ-ತಾನ್ಹಾಜಿ; ದಿ ಅನ್‍ಸಂಗ್ ವಾರಿಯರ್)
ಅತ್ಯುತ್ತಮ ವಿಎಫ್‍ಎಕ್ಸ್: ಪ್ರಸಾದ್ ಸುತಾರ್ (ಸಿನಿಮಾ-ತಾನ್ಹಾಜಿ; ದಿ ಅನ್‍ಸಂಗ್ ವಾರಿಯರ್)
ಅತ್ಯುತ್ತಮ ವಸ್ತ್ರ ವಿನ್ಯಾಸ: ವೀರಾ ಕಪೂರ್ ಇಇ (ಸಿನಿಮಾ-ಗುಲಾಬೋ ಸಿತಾಬೋ)
ಅತ್ಯುತ್ತಮ ಧ್ವನಿ ಮುದ್ರಣ: ಕಾಮೆದ್ ಖಾರಡೆ (ಸಿನಿಮಾ-ಥಪ್ಪಡ್)
ಅತ್ಯುತ್ತಮ ಪ್ರೊಡೆಕ್ಷನ್ ಡಿಸೈನ್: ಮಾನಸಿ ಧೃವ್ ಮೆಹ್ತಾ (ಸಿನಿಮಾ-ಗುಲಾಬೋ ಸಿತಾಬೋ)
ಅತ್ಯುತ್ತಮ ಬ್ಯಾಕ್‍ಗ್ರೌಂಡ್ ಸ್ಕೋರ್: ಮಂಗೇಶ್ ಊರ್ಮಿಳಾ ಧಾಕಡೆ (ಸಿನಿಮಾ-ಥಪ್ಪಡ್)
ಅತ್ಯುತ್ತಮ ಸಿನಿಮಾ (ಫಿಕ್ಷನ್): ಅರ್ಜುನ್
ಅತ್ಯುತ್ತಮ ಸಿನಿಮಾ (ಪಾಪೂಲರ್ ಚಾಯ್ಸ್): ದೇವಿ
ಅತ್ಯುತ್ತಮ ಸಿನಿಮಾ (ನಾನ್ ಫಿಕ್ಷನ್): ಬ್ಯಾಕ್‍ಯಾರ್ಡ್ ವೈಡ್‍ಲೈಫ್ ಸೆಂಚೂರಿ
ಅತ್ಯುತ್ತಮ ಕಿರುಚಿತ್ರ (ಪೀಪಲ್ಸ್ ಚಾಯ್ಸ್): ಪೂರ್ತಿ ಸವರಾಡೆಕರ್
ಅತ್ಯುತ್ತಮ ನಟ (ಕಿರುಚಿತ್ರ): ಅರ್ನವ್
ಅತ್ಯುತ್ತಮ ಕೊರಿಯೋಗ್ರಾಫರ್: ಫರ್ಹಾ ಖಾನ್ (ದಿಲ್ ಬೇಚೆರಾ)
ಮುಂಬೈ: ಬಾಲಿವುಡ್‍ನ ಅದ್ಭುತ ನಟ ಇರ್ಫಾನ್ ಖಾನ್ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಸಿನಿಮಾಗಳು, ಜನರಿಂದ ಅವರು ಗಳಿಸಿದ ಪ್ರೀತಿ ಸದಾ ಜೀವಂತ. ಇದಕ್ಕೆ ಉದಾಹರಣೆ ಎಂಬಂತೆ ಮಹಾರಾಷ್ಟ್ರದಲ್ಲಿ ಗ್ರಾಮವೊಂದಕ್ಕೆ `ಹೀರೋ ಚಿ ವಾಡಿ` ಎಂದು ಹೆಸರಿಟ್ಟು ಇರ್ಫಾನ್ ಖಾನ್ ಅವರಿಗೆ ಗೌರವ ಸಲ್ಲಿಸಿ ಪ್ರೀತಿ ಮೆರೆಯಲಾಗಿದೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗತ್ಪುರಿ ಸಮೀಪದಲ್ಲಿ ಪ್ರತಿಯಚಾ ವಾಡಾ ಗ್ರಾಮಸ್ಥರು ಇರ್ಫಾನ್ ಖಾನ್ ಅವರು ಮಾಡಿರುವ ಸಹಾಯಕ್ಕೆ ಗೌರವ ಸಲ್ಲಿಸಿದ್ದಾರೆ. ಇರ್ಫಾನ್ ಖಾನ್ ಬದುಕಿದ್ದಾಗ ಸಾಕಷ್ಟು ಜನರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿ ನೆರವಾಗಿದ್ದರು. ಹಲವು ಹಳ್ಳಿಗಳಿಗೆ, ಬಡ ಜನರಿಗೆ ಸಹಾಯ ಹಸ್ತಚಾಚಿದ್ದರು. ಮರಾಠಿಯಲ್ಲಿ ‘ಹೀರೋ ಚಿ ವಾಡಿ’ ಎಂದರೆ ಹೀರೋನ ನೆರೆಹೊರೆಯವರು ಎಂದರ್ಥ. ಹೀಗಾಗಿ ಅವರು ಮಾಡಿರುವ ಸಹಾಯಕ್ಕೆ ಪ್ರತಿಯಚಾ ವಾಡಾ ಗ್ರಾಮಕ್ಕೆ `ಹೀರೋ ಚಿ ವಾಡಿ` ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: 600 ರೂ. ಇಲ್ಲದ್ದಕ್ಕೆ ಕ್ರಿಕೆಟ್ ಕನಸು ಕೈಚೆಲ್ಲಿಕೊಂಡಿದ್ದ ಇರ್ಫಾನ್ ಖಾನ್
ಇಗತ್ಪುರು ತಾಲೂಕಿನ ತ್ರಿಲಂಗವಾಡಿ ಕೋಟೆಯ ಸಮೀಪ ಇರ್ಫಾನ್ ಫಾರ್ಮ್ ಅವರ ಫಾರ್ಮ್ ಹೌಸ್ ಕೂಡ ಇದೆ. ಆದರೆ ಈ ಪ್ರದೇಶದಲ್ಲಿ ಹಾಗೂ ಸುತ್ತಮುತ್ತಲ ಹಳ್ಳಿಗಳ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿರುವುದನ್ನು ಅರಿತ ಇರ್ಫಾನ್ ಅವರು ಅಲ್ಲಿನ ನೆರೆ ಹೊರೆಯ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದರು. ಪ್ರತಿಯಚಾ ವಾಡ ಗ್ರಾಮದಲ್ಲಿ ತುರ್ತು ಸಂದರ್ಭದಲ್ಲಿ ಬಳಸಲೆಂದು ಅಂಬುಲೆನ್ಸ್, ಮಕ್ಕಳಿಗೆ ಕಂಪ್ಯೂಟರ್, ಪುಸ್ತಕ, ರೇನ್ ಕೋಟ್ ಮತ್ತು ಸ್ವೆಟರ್ ಗಳನ್ನು ನೀಡಿದ್ದರು. ಇರ್ಫಾನ್ ಅವರು ಮಾಡಿರುವ ಸಹಾಯವನ್ನು ಸ್ಮರಿಸಲು, ಅವರ ಮೇಲಿಟ್ಟಿರುವ ಪ್ರೀತಿಯಿಂದ ಗ್ರಾಮಸ್ಥರು ತಮ್ಮ ಹಳ್ಳಿಯ ಹೆಸರನ್ನು ‘ಹೀರೋ ಚಿ ವಾಡಿ` ಎಂದು ಬದಲಾಯಿಸಿದ್ದಾರೆ. ಇದನ್ನೂ ಓದಿ: ಆರೋಗ್ಯ ಸರಿ ಇದ್ದಿದ್ದರೆ ಕನ್ನಡದಲ್ಲೂ ನಟಿಸಲಿದ್ದರು ಇರ್ಫಾನ್
ಬಹಳ ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇರ್ಫಾನ್ ಖಾನ್ ಅವರು ಏಪ್ರಿಲ್ 29ರಂದು ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಬಾಲಿವುಡ್‍ನಲ್ಲಿ ಹೀರೋ ಮತ್ತು ಪೋಷಕ ನಟ ಯಾವುದೇ ರೀತಿಯ ಪಾತ್ರಗಳಿಗೂ ಜೀವ ತುಂಬುತ್ತಿದ್ದ ಇರ್ಫಾನ್ ಅವರು, ಹಾಲಿವುಡ್‍ನಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. 1988ರಲ್ಲಿ ತೆರೆಕಂಡ ಸಲಾಮ್ ಬಾಂಬೆ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಇರ್ಫಾನ್ ನಂತರ ನೂರಾರು ಸಿನಿಮಾದಲ್ಲಿ ನಟಿಸಿ ಅಭಿಮಾನಿಗಳನ್ನು ಗಳಿಸಿದ್ದರು. ಜೊತೆಗೆ ಇವರಿಗೆ 2011ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿತ್ತು.
ಮುಂಬೈ: ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಅತ್ಯುತ್ತಮ ನಟರಲ್ಲಿ ಒಬ್ಬರಾದ ಇರ್ಫಾನ್ ಖಾನ್ ಅವರು ತಮ್ಮ 53ನೇ ವಯಸ್ಸಿನಲ್ಲಿ ಮುಂಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರನ್ನು ನೆನೆದು ಅಭಿಮಾನಿಗಳು ಕಣ್ಣೀರಾಗಿದ್ದಾರೆ.
ಇರ್ಫಾನ್ ಖಾನ್ ಬಾಲಿವುಡ್‍ನಲ್ಲಿ ಮಹತ್ತರ ಕಾರ್ಯ ಮಾಡಿದ್ದರೂ ಅವರೊಳಗೆ ಒಬ್ಬ ಕ್ರಿಕೆಟಿಗನಿದ್ದ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಇರ್ಫಾನ್ ಖಾನ್ 600 ರೂ. ಇಲ್ಲದ್ದಕ್ಕೆ ಕ್ರಿಕೆಟ್ ಜಗತ್ತಿನಿಂದ ಹೊರ ಬಂದಿದ್ದ ಕಥೆ ನಿಮಗೆ ಗೊತ್ತಾ?
ಹೌದು.. ಇರ್ಫಾನ್ 20ನೇ ವಯಸ್ಸಿನಲ್ಲಿ ಕ್ರಿಕೆಟಿಗನಾಗಬೇಕೆಂಬ ಕನಸು ಕಟ್ಟಿಕೊಂಡಿದ್ದರು. ಅದಕ್ಕೆ ತಕ್ಕಂತೆ ಅಭ್ಯಾಸ ನಡೆಸಿದ್ದ ಅವರು ಸಿಕೆ ನಾಯ್ಡು ಟ್ರೋಫಿಯಲ್ಲಿ ಆಡಲು ಆಯ್ಕೆಯಾಗಿದ್ದರು. ಆದರೆ ಹಣದ ಕೊರತೆಯಿಂದಾಗಿ ಕ್ರಿಕೆಟ್ ಕನಸಿನ ಮನೆಯಿಂದ ಹೊರ ನಡೆದು ಬಂದು ಬಿಟ್ಟರು.
ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಇರ್ಫಾನ್ ಖಾನ್, “ನಾನು ಕ್ರಿಕೆಟ್ ಆಡಿದ್ದೇನೆ, ಕ್ರಿಕೆಟಿಗನಾಗಲು ಬಯಸಿದ್ದೆ. ಜೈಪುರ ತಂಡದಲ್ಲಿ ಕಿರಿಯ ಆಟಗಾರನಾಗಿದ್ದ ನಾನು ಆಲ್‍ರೌಂಡರ್ ಜವಾಬ್ದಾರಿ ನಿರ್ವಹಿಸಿದ್ದೆ. ಕ್ರಿಕೆಟ್‍ನಲ್ಲಿಯೇ ವೃತ್ತಿಜೀವನ ಆರಂಭಿಸಲು ಬಯಸಿದ್ದೆ. ಆದರೆ ಸಿ.ಕೆ.ನಾಯ್ಡು ಟೂರ್ನಿಗೆ ಆಯ್ಕೆಯಾದಾಗ 600 ರೂ. ಶುಲ್ಕ ಪಾವತಿಸಲು ನನ್ನ ಬಳಿ ಹಣವಿರಲಿಲ್ಲ. ಆಗ ಯಾರನ್ನ ಕೇಳಬೇಕೆಂದು ತಿಳಿದಿರಲಿಲ್ಲ. ಅಂದಿನಿಂದ ಕ್ರಿಕೆಟ್ ಮನೆಯಿಂದ ಹೊರ ಬಂದುಬಿಟ್ಟೆ” ಎಂದು ಹೇಳಿದ್ದರು.
ನಂತರದ ದಿನಗಳಲ್ಲಿ ಇರ್ಫಾನ್ ಪ್ರತಿಷ್ಠಿತ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‍ಎಸ್‍ಡಿ)ದಲ್ಲಿ ಪ್ರವೇಶ ಪಡೆದರು. ಅದಕ್ಕಾಗಿ ಅವರಿಗೆ 300 ರೂ. ಅಗತ್ಯವಿತ್ತು. ಅವರ ಬಳಿ ಅಷ್ಟು ಹಣವಿಲ್ಲದಿದ್ದಾಗ ಸಹೋದರಿಯೇ ಹಣದ ವ್ಯವಸ್ಥೆ ಮಾಡಿದ್ದರು. 1994-98ರವರೆಗೆ ‘ಚಂದ್ರಕಾಂತ’ ಹಾಗೂ ‘ಬನೇಗಿ ಅಪ್ನಿ ಬಾತ್’ ನಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದ ಇರ್ಫಾನ್ ಖಾನ್, 1988ರಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿ ಆಗಿರುವಾಗಲೇ ‘ಸಲಾಮ್ ಬಾಂಬೆ’ ಚಿತ್ರದಲ್ಲಿ ನಟನೆಯ ಆಹ್ವಾನ ಪಡೆದುಕೊಂಡಿದ್ರು. ಅಂದಿನಿಂದ ಕ್ರಿಕೆಟ್ ವೃತ್ತಿ ಬದುಕಿನ ಕಡೆಗೆ ಅವರು ತಿರುಗಿ ನೋಡಲಿಲ್ಲ.
“ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಕ್ಕೆ ನನಗೆ 300 ರೂ. ಬೇಕಿತ್ತು. ಅಷ್ಟು ಹಣವನ್ನು ಹೊಂದಿಸುವುದು ನನಗೆ ಕಷ್ಟಕರವಾಗಿತ್ತು. ನನ್ನ ತಂಗಿ ಅಂತಿಮವಾಗಿ ಹಣವನ್ನು ಹೊಂದಿಸಿ ಕೊಟ್ಟಿದ್ದಳು” ಎಂದು ಇರ್ಫಾನ್ ಖಾನ್ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.
“ಕ್ರಿಕೆಟ್ ಬಿಟ್ಟುಕೊಡುವುದು ಪ್ರಜ್ಞಾಪೂರ್ವಕ ನಿರ್ಧಾರ. ಇಡೀ ದೇಶದಲ್ಲಿ ಕೇವಲ 11 ಆಟಗಾರರಿದ್ದಾರೆ. ನಟರ ವಿಚಾರಕ್ಕೆ ಬಂದ್ರೆ ಮಿತಿ ಎನ್ನುವುದೇ ಇಲ್ಲ. ನಟನೆಯಲ್ಲಿ ಯಾವುದೇ ವಯಸ್ಸಿನ ಮಿತಿಯಿಲ್ಲ? ಸಿನಿಮಾ ರಂಗದಲ್ಲಿ ನೀವೇ ನಿಮ್ಮ ಸ್ವಂತ ಆಯುಧ” ಎಂದು ತಮ್ಮ ಸಿನಿಮಾ ಬದುಕಿನ ಆಯ್ಕೆಯನ್ನು ಖಾನ್ ಸಮರ್ಥಿಸಿಕೊಂಡಿದ್ದರು.
ಟಿ20 ಕ್ರಿಕೆಟ್‍ನ ಆಗಮನವು ಆಟವನ್ನು ಹಾಳು ಮಾಡಿದೆ ಎಂದು ಇರ್ಫಾನ್ ಖಾನ್ ವಿಮರ್ಶಾತ್ಮಕ ಹೇಳಿಕೆ ನೀಡಿದ್ದರು. ಅವರು ಸಾಂಪ್ರದಾಯಿಕ ಮಾದರಿ ಟೆಸ್ಟ್ ಪಂದ್ಯದ ದೊಡ್ಡ ಅಭಿಮಾನಿಯಾಗಿದ್ದರು.
”ಕ್ರಿಕೆಟ್ ಕಾ ಡೌನ್ ಹೋನಾ ಭೀ ಚಾಹಿಯೆ! ಕ್ರಿಕೆಟ್ ಸಮಯ ವ್ಯರ್ಥದ ಆಟವಾಗಿ ಪರಿಣಮಿಸಿದೆ. ಟೆಸ್ಟ್ ಪಂದ್ಯದ ಮೋಡಿ, ಆಟಕ್ಕೆ ಹೋಲಿಸಿದರೆ ಈ ಟಿ20 ಅಷ್ಟು ಅದ್ಬುತವಾಗಿಲ್ಲ. ಟಿ20 ಕ್ರಿಕೆಟ್ ಅತ್ಯಾಚಾರದಂತೆ ಕಾಣುತ್ತದೆ. ಎಲ್ಲಾ ರೀತಿಯ ಕೃತ್ಯಗಳು ಅಲ್ಲಿ ನಡೆಯುತ್ತಿವೆ” ಎಂದು ಹೇಳಿದ್ದರು.
ಬೆಂಗಳೂರು: ಆರೋಗ್ಯ ಸರಿ ಇದ್ದಿದ್ದರೆ ಇಂದು ಮೃತರಾದ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ಕನ್ನಡದಲ್ಲೂ ನಟಿಸುತ್ತಿದ್ದರು ಎಂಬ ಮಾಹಿತಿಯನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ನೀಡಿದ್ದಾರೆ.
ಬಹಳ ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪ್ರತಿಭಾನ್ವಿತ ನಟ ಇರ್ಫಾನ್ ಖಾನ್ ಅವರು, ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆದರೆ ಅವರು ಆರೋಗ್ಯ ಸರಿ ಇದ್ದಿದ್ದರೆ ಅವರು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದರು ಎಂದು ನಾಗತಿಹಳ್ಳಿ ಚಂದ್ರಶೇಖರ್ ಅವರು ಟ್ವೀಟ್ ಮಾಡಿದ್ದಾರೆ.
5 yrs ago, I atmptd 2 introduce Irrfan to the Kan Indstry through Gandhian Prasanna. He had informed us that he was unable to partake due to his health concerns. After Amitabhji’s cameo, I wanted him 2 b the next stellar actor to star in a Kan film. My condolences to his family. pic.twitter.com/7XkRX65p8X
— Nagathihalli Chandrashekara (@NomadChandru) April 29, 2020
ಇರ್ಫಾನ್ ಸಾವಿನ ಸುದ್ದಿ ಕೇಳಿ ಟ್ವೀಟ್ ಮಾಡಿರುವ ನಾಗತಿಹಳ್ಳಿ ಚಂದ್ರಶೇಖರ್, ಐದು ವರ್ಷದ ಹಿಂದೆಯೇ ನಾನು ಕನ್ನಡ ಸಿನಿಮಾರಂಗಕ್ಕೆ ಇರ್ಫಾನ್ ಅವರನ್ನು ಕರೆತರುವ ಪ್ರಯತ್ನವನ್ನು ಮಾಡಿದ್ದೆ. ಆದರೆ ಅವರು ಅಂದೇ ನನಗೆ ಆರೋಗ್ಯ ಸಮಸ್ಯೆಯಿದೆ ನನಗೆ ಅಭಿನಯಿಸಲು ಆಗುವುದಿಲ್ಲ ಎಂದು ಹೇಳಿದ್ದರು. ಬಿಗ್‍ಬಿ ಅಮಿತಾಬ್ ಬಚ್ಚನ್ ನಂತರ ನಾನು ಇರ್ಫಾನ್ ಅವರನ್ನು ಕನ್ನಡಕ್ಕೆ ತರಬೇಕು ಎಂಬ ಆಸೆ ಹೊಂದಿದ್ದೆ. ಅವರ ಕುಟುಂಬಕ್ಕೆ ದೇವರ ಅವರ ಸಾವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.
ಕನ್ನಡದಲ್ಲಿ ವಿಶಿಷ್ಟವಾದ ಚಿತ್ರಗಳನ್ನು ತಯಾರಿಸುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು, ಈ ಹಿಂದೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರನ್ನು ಕನ್ನಡ ಸಿನಿಮಾದಲ್ಲಿ ನಟಿಸುವಂತೆ ಮಾಡಿದ್ದರು. ಇದಾದ ಬಳಿಕ ಅವರು, ಬಾಹ್ಯಾಕಾಶದ ಕಥೆಯೊಂದಕ್ಕೆ ಇರ್ಫಾನ್ ಅವರನ್ನು ಕನ್ನಡಕ್ಕೆ ಕರೆತರಲು ಯತ್ನಿಸಿದ್ದರು. ಕಥೆ ಕೇಳಿ ಇಷ್ಟಪಟ್ಟಿದ್ದ ಇರ್ಫಾನ್ ನನಗೆ ಆರೋಗ್ಯ ಸಮಸ್ಯೆ ಇದೆ ಮಾಡಲು ಆಗುವುದಿಲ್ಲ ಎಂದು ಹೇಳಿದ್ದರಂತೆ.
ಬಾಲಿವುಡ್‍ನಲ್ಲಿ ಹೀರೋ ಮತ್ತು ಪೋಷಕ ನಟ ಯಾವುದೇ ರೀತಿಯ ಪಾತ್ರಗಳಿಗೂ ಜೀವ ತುಂಬುತ್ತಿದ್ದ ಇರ್ಫಾನ್ ಅವರು, ಹಾಲಿವುಡ್‍ನಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. 1988ರಲ್ಲಿ ತೆರೆಕಂಡ ಸಲಾಮ್ ಬಾಂಬೆ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಇರ್ಫಾನ್ ನಂತರ ನೂರಾರು ಸಿನಿಮಾದಲ್ಲಿ ನಟಿಸಿ ತನ್ನದೇ ಆದ ಅಭಿಮಾನಿಗಳನ್ನು ಗಳಿಸಿದ್ದರು. ಜೊತೆಗೆ ಇವರಿಗೆ 2011ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿತ್ತು.
ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಅಸ್ಪತ್ರೆಯ ಐಸಿಯುನಲ್ಲಿ ಇರ್ಫಾನ್ ಖಾನ್ ಚಿಕಿತ್ಸೆ ಪಡೆಯುತ್ತಿದ್ದರು. ಈ ಕುರಿತು ಮಾಹಿತಿ ನೀಡಿದ್ದ ವೈದ್ಯಾಧಿಕಾರಿಗಳು, ಕೊಲೊನ್ ಇನ್‍ಫೆಕ್ಷನ್‍ನಿಂದಾಗಿ ಇರ್ಫಾನ್ ಅವರನ್ನು ಅಬ್ಸರ್ವೇಶನ್‍ನಲ್ಲಿ ಇಡಲಾಗಿದೆ ಎಂದು ಮಾಹಿತಿ ನೀಡಿದ್ದರು. ಆದರೆ ಇಂದು ಅವರು ಚಿಕಿತ್ಸೆ ಫಲಿಸದೆ ತನ್ನ 53ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ.
ಇರ್ಫಾನ್ ಅವರಿಗೆ ನ್ಯೂರೋಎಂಡೋಕ್ರೈನ್ ಗಡ್ಡೆ ಇರುವುದು 2018ರಲ್ಲೇ ತಿಳಿದಿತ್ತು. ಇದಕ್ಕಾಗಿ ಅವರು ವಿದೇಶದಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದರು. ಶನಿವಾರ ಅವರ ತಾಯಿ ಸಾಯಿಬಾ ಬೇಗಂ ಅವರನ್ನು ಕಳೆದುಕೊಂಡಿದ್ದ ಅವರು ವಿಡಿಯೋ ಕಾಲ್ ಮೂಲಕ ಅವರಿಗೆ ಅಂತಿಮ ನಮನ ಸಲ್ಲಿಸಿದ್ದರು. ಆದರೆ ಇಂದು ಅವರು ಮೃತಪಟ್ಟಿದ್ದಕ್ಕೆ ಇಡೀ ಭಾರತ ಚಿತ್ರರಂಗವೇ ಕಂಬನಿ ಮಿಡಿದಿದೆ.
ಮುಂಬೈ: ತಾಯಿ ಸಾವನ್ನಪ್ಪಿದ ಕೇವಲ 5 ದಿನಗಳಲ್ಲೇ ಬಾಲಿವುಟ್ ನಟ ಇರ್ಫಾನ್ ಖಾನ್ ಕೂಡ ವಿಧಿವಶರಾಗಿದ್ದಾರೆ.
ಕೊಲೊನ್ ಇನ್‍ಫೆಕ್ಷನ್‍ನಿಂದಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇರ್ಫಾನ್ ಖಾನ್ (53) ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಶನಿವಾರವಷ್ಟೇ ಅವರ ತಾಯಿ ತೀರಿಕೊಂಡಿದ್ದರು. ಆದರೆ ಲಾಕ್‍ಡೌನ್ ಹಿನ್ನೆಲೆ ಇರ್ಫಾನ್ ಖಾನ್ ಅವರು ತಾಯಿಯ ಅಂತಿಮ ಸಂಸ್ಕಾರಕ್ಕೆ ಹೋಗಿರಲಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ಅಂತಿಮ ದರ್ಶನ ಪಡೆದಿದ್ದರು.
ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಅಸ್ಪತ್ರೆಯ ಐಸಿಯುನಲ್ಲಿ ಇರ್ಫಾನ್ ಖಾನ್ ಚಿಕಿತ್ಸೆ ಪಡೆಯುತ್ತಿದ್ದರು. ಈ ಕುರಿತು ಮಾಹಿತಿ ನೀಡಿದ್ದ ವೈದ್ಯಾಧಿಕಾರಿಗಳು, ಕೊಲೊನ್ ಇನ್‍ಫೆಕ್ಷನ್‍ನಿಂದಾಗಿ ಇರ್ಫಾನ್ ಅವರನ್ನು ಅಬ್ಸರ್ವೇಶನ್‍ನಲ್ಲಿ ಇಡಲಾಗಿದೆ ಎಂದು ಮಾಹಿತಿ ನೀಡಿದ್ದರು. ಆದರೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ.
ಇರ್ಫಾನ್ ಅವರಿಗೆ ನ್ಯೂರೋಎಂಡೋಕ್ರೈನ್ ಗಡ್ಡೆ ಇರುವುದು 2018ರಲ್ಲೇ ತಿಳಿದಿತ್ತು. ಇದಕ್ಕಾಗಿ ಅವರು ವಿದೇಶದಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದರು. ಶನಿವಾರ ಅವರ ತಾಯಿ ಸಾಯಿಬಾ ಬೇಗಂ ಅವರನ್ನು ಕಳೆದುಕೊಂಡಿದ್ದ ಅವರು ವಿಡಿಯೋ ಕಾಲ್ ಮೂಲಕ ಅವರಿಗೆ ಅಂತಿಮ ನಮನ ಸಲ್ಲಿಸಿದ್ದರು.
ಜೈಪುರ್: ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ತಾಯಿ ಸಯೀದಾ ಬೇಗಂ (95) ಶನಿವಾರ ನಿಧನರಾಗಿದ್ದಾರೆ.
ಇರ್ಫಾನ್ ತಾಯಿ ಸಯೀದಾ ಬೇಗಂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಅವರು ಜೈಪುರದ ಬೆನಿವಾಲ್ ಕಾಂತ ಕೃಷ್ಣ ಕಾಲೋನಿಯಲ್ಲಿ ವಾಸವಾಗಿದ್ದರು.
ಇರ್ಫಾನ್ ವಿದೇಶದಲ್ಲಿದ್ದಾರೆ. ಆದರೆ ಕೊರೊನಾ ಲಾಕ್‍ಡೌನ್ ಪರಿಣಾಮದಿಂದಾಗಿ ವಿಮಾನಯಾನ ಸಂಪೂರ್ಣವಾಗಿ ಸ್ಥಗಿತವಾಗಿದೆ. ಹೀಗಾಗಿ ಅವರು ಭಾರತಕ್ಕೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಕೊನೆಯ ಬಾರಿಗೆ ತಾಯಿ ಅಂತಿಮ ದರ್ಶನವೂ ಸಿಗಲಿಲ್ಲ. ಆದರೆ ಇರ್ಫಾನ್ ವಿಡಿಯೋ ಕಾಲ್ ಮೂಲಕ ತಾಯಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಇರ್ಫಾನ್ ತಾಯಿ ಸಯೀದಾ ಬೇಗಂ ಅಂತ್ಯಕ್ರಿಯೆ ಶನಿವಾರ ಸಂಜೆ ನಡೆದಿದೆ. ಲಾಕ್‍ಡೌನ್‍ನಿಂದಾಗಿ ಕೆಲವರು ಮಾತ್ರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಇರ್ಫಾನ್ ಖಾನ್ ನ್ಯೂರೋಎಂಡೋಕ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ 2019 ರಲ್ಲಿ ವಿದೇಶಕ್ಕೆ ಪ್ರಯಾಣಿಸಿದ್ದರು.
ನವದೆಹಲಿ: ಲಂಡನ್‍ನಲ್ಲಿ ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಇರ್ಫಾನ್ ಖಾನ್ ಭಾನುವಾರ ತಮ್ಮ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಚಿಕಿತ್ಸೆಯಿಂದ ಇರ್ಫಾನ್ ಖಾನ್ ತುಂಬಾ ನಿಶಕ್ತರಂತೆ ಕಾಣುತ್ತಿದ್ದು, ನಗುತ್ತಲೇ ಕಾಯಿಲೆಯನ್ನು ಎದುರಿಸಿ ಮುನ್ನುಗ್ಗುತ್ತಿದ್ದಾರೆ ಎಂಬುದನ್ನು ಅಭಿಮಾನಿಗಳು ಫೋಟೋದಲ್ಲಿ ನೋಡಬಹುದು.
ಮಾರ್ಚ್ ತಿಂಗಳಲ್ಲಿ ಇರ್ಫಾನ್ ಡಯಾಗ್ನೋಸಿಸ್‍ಗೆ ಒಳಪಡುತ್ತಿದ್ದಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ಈ ವಿಚಾರದ ಬೆನ್ನಲ್ಲೇ ಇರ್ಫಾನ್ ಪ್ರತಿಕ್ರಿಯಿಸಿ, ಮಾರ್ಗರೆಟ್ ಮಿಚೆಲ್ ಹೇಳುವ ಪ್ರಕಾರ ಜೀವನದಲ್ಲಿ ನಾವು ಏನನ್ನು ನಿರೀಕ್ಷಿಸುತ್ತೇವೋ ಅದಕ್ಕೆ ಕಟ್ಟುಪಾಡುಗಳಿಲ್ಲ. ನಿರೀಕ್ಷೆಯಿಲ್ಲದಿದ್ದರೆ ನಾವು ಬೆಳೆಯುತ್ತೇವೆ ಎಂಬುದು ನನಗೆ ಕೆಳೆದ ಕೆಲವು ದಿನಗಳಿಂದ ಅರ್ಥವಾಗಿದೆ. ನ್ಯೂರೋಎಂಡೋಕ್ರೈನ್ ಟ್ಯೂಮರ್ ಚಿಕಿತ್ಸೆಗೆ ಒಳಗಾಗಿರುವುದರಿಂದ ಚಿಕಿತ್ಸೆಗೆ ಹೊಂದಿಕೊಳ್ಳುವುದು ನನಗೆ ಕಷ್ಟವಾಗುತ್ತಿದೆ. ಆದರೆ ನನ್ನ ಸುತ್ತಮುತ್ತಲಿನ ಜನರ ಪ್ರೀತಿ ಹಾಗೂ ಪ್ರೋತ್ಸಾಹದಿಂದ ನನಗೆ ಈ ಕಾಯಿಲೆ ಜೊತೆಗೆ ಹೋರಾಡುವ ಶಕ್ತಿ, ವಿಶ್ವಾಸ ಹೆಚ್ಚುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಪ್ರೀತಿ, ವಿಶ್ವಾಸದಿಂದ ನನ್ನ ಪಯಣ ವಿದೇಶದ ಕಡೆಗೆ ಸಾಗಿಸಿದೆ. ನಿಮ್ಮ ಆಶೀರ್ವಾದ ಹಾಗೂ ಪ್ರೀತಿಯನ್ನು ನನಗೆ ಕಳುಹಿಸುವುದನ್ನು ಮುಂದುವರೆಸಿ ಎಂದು ಮನವಿ ಮಾಡುತ್ತಿದ್ದೇನೆ. ಕೆಲವು ವದಂತಿಗಳ ಪ್ರಕಾರ ನ್ಯೂರೋ ಎನ್ನುವುದು ಮೆದುಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇದರ ಬಗ್ಗೆ ಸಂಶೋಧನೆ ನಡೆಸಲು ಹಾಗೂ ತಿಳಿಯಲು ಗೂಗಲ್‍ನಲ್ಲಿ ನೋಡಬಹುದು. ನನ್ನ ಮಾತಿಗಾಗಿ ಯಾರೆಲ್ಲಾ ಕಾಯುತ್ತಿದ್ದಿರೋ, ಅವರಿಗಾಗಿ ಇನ್ನಷ್ಟು ವಿಷಯಗಳನ್ನು ಹೊತ್ತು ಮತ್ತೇ ಬರುತ್ತೇನೆ ಎಂದು ಹೇಳಿದ್ದರು.
ಆಗಸ್ಟ್ ತಿಂಗಳಲ್ಲಿ ಕರ್ವಾನ್ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಅವರ ಕರ್ವಾನ್ ಚಿತ್ರದ ಸಹ ಕಲಾವಿದರಾದ ದುಲ್ಕರ್ ಸಲ್ಮಾನ್ ಹಾಗೂ ಮಿಥಿಲಾ ಪಾಕರ್ ಅವರಿಗೆ ಶುಭ ಹಾರೈಸಲು ಸಾಮಾಜಿಕ ಜಾಲತಾಣಗಳಲ್ಲಿ ಇರ್ಫಾನ್ ಬಹಳ ದಿನಗಳ ನಂತರ ಕಾಣಿಸಿಕೊಂಡಿದ್ದಾರೆ.
ಮುಂಬೈ: ಬಾಲಿವುಡ್ ನಟ ಇರ್ಫಾನ್ ಖಾನ್ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಅದರ ವಿರುದ್ಧ ಹೋರಾಟ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಈ ಕುರಿತು ಸ್ವತಃ ಇರ್ಫಾನ್ ಖಾನ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಹಾಗೂ ಇರ್ಫಾನ್ ನಟನೆಯ ಸಿನಿಮಾ ಚಿತ್ರೀಕರಣವನ್ನು ಮುಂದೂಡಲಾಗಿದೆ ಎಂದು ಕಳೆದ ತಿಂಗಳಷ್ಟೇ ನಿರ್ಮಾಪಕ ವಿಶಾಲ್ ಭಾರದ್ವಾಜ್ ತಿಳಿಸಿದ್ದರು. ಕೆಲ ತಿಂಗಳ ಮಟ್ಟಿಗೆ ಚಿತ್ರದ ಚಿತ್ರೀಕರಣವನ್ನು ಮುಂದೂಡುತ್ತಿದ್ದೇನೆ. ಯಾಕಂದ್ರೆ ಚಿತ್ರದಲ್ಲಿ ನಟಿಸುವ ಪ್ರಮುಖ ನಟರೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜಾಂಡೀಸ್ ಕಾಯಿಲೆಯಿಂದ ನಟ ಇರ್ಫಾನ್ ಖಾನ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಅಂತ ಹೇಳಿದ್ದರು. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಸ್ವತಃ ಇರ್ಫಾನ್ ಖಾನ್ ಟ್ವೀಟ್ ಮಾಡುವ ಮೂಲಕ ತಾವು ಅನಾರೋಗ್ಯಕ್ಕೀಡಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ.
`ಕೆಲವೊಂದು ಬಾರಿ ನಿಮ್ಮ ಜೀವನವನ್ನೇ ಘಾಸಿಗೊಳಿಸುವಂತಹ ಘಟನೆಗಳು ನಡೆಯುತ್ತವೆ. ಕಳೆದ 15 ದಿನಗಳಲ್ಲಿ ನನ್ನ ಜೀವನ ನಿಗೂಢ ಕಥೆಯಂತಾಗಿದೆ ಅಪರೂಪದ ಕಥೆಯನ್ನು ಹುಡುಕಲು ಹೊರಟ ನನಗೆ ಅಪರೂಪದ ರೋಗದ ಬಗ್ಗೆ ತಿಳಿಯುವಂತಾಗುತ್ತದೆ ಎಂದುಕೊಂಡಿರಲಿಲ್ಲ. ನಾನು ನನ್ನ ಜೀವನದಲ್ಲಿ ನನಗೆ ಬೇಕಾದ್ದನ್ನು ಹಠಕ್ಕೆ ಬಿದ್ದು ಪಡೆಯುತ್ತಿದ್ದೆ. ಹೀಗಾಗಿ ಎಂದಿಗೂ ಸೋತಿಲ್ಲ ಮತ್ತು ಹಾಗೆಯೇ ಇರಲು ಬಯಸುತ್ತೇನೆ. ನನ್ನ ಕುಟುಂಬದವರು ಮತ್ತು ಸ್ನೇಹಿತರು ನನ್ನ ಜೊತೆಗಿದ್ದಾರೆ. ಇನ್ನು 8-10 ದಿನಗಳಲ್ಲಿ ನನ್ನ ಆರೋಗ್ಯದ ಬಗ್ಗೆ ನಾನೇ ಇನ್ನಷ್ಟು ಮಾಹಿತಿಗಳನ್ನು ನೀಡುತ್ತೇನೆ. ಅಲ್ಲಿಯವರೆಗೆ ಯಾವುದೇ ರೀತಿಯ ಅನುಮಾನಗಳು ಬೇಡ. ನನಗೆ ಒಳ್ಳೆಯದನ್ನು ಬಯಸಿ ಅಂತ ಬರೆದುಕೊಂಡಿದ್ದಾರೆ.